– ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
– ಮದ್ವೆಗೆ ಒಂದು ಬಾಕಿ ಇರುವಾಗ ಕೊರೊನಾ ಪಾಸಿಟಿವ್
ತಿರುವನಂತಪುರಂ: ಕೇರಳದ ಕೊಚ್ಚಿಯಲ್ಲಿರುವ ಕೋವಿಡ್ ಕೇರ್ ಸೆಂಟರಿನಲ್ಲಿ ಮದುವೆಯ ಸಮಾರಂಭವೊಂದು ನಡೆದಿದ್ದು, ಇದೀಗ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

19 ವರ್ಷದ ಫಾಜಿಯಾಗೆ ನಿಯಾಜ್ ಜೊತೆ ಮದುವೆ ನಿಗದಿಯಾಗಿತ್ತು. ಆದರೆ ಮದುವೆಗೆ ಒಂದು ದಿನ ಬಾಕಿ ಇರುವಾಗ ಫಾಜಿಯಾ ಕೋವಿಡ್ ಟೆಸ್ಟ್ ಮಾಡಿಸಿದ್ದು, ವರದಿಯಲ್ಲಿ ಪಾಸಿಟಿವ್ ಬಂದಿದೆ. ಹೀಗಾಗಿ ಫಾಜಿಯಾಳನ್ನು ಮಟ್ಟಂಚೇರಿಯ ಟೌನ್ ಹಾಲ್‍ನಲ್ಲಿ ಸ್ಥಾಪಿಸಲಾದ ಕೋವಿಡ್ ಕೇರ್ ಕೇಂದ್ರಕ್ಕೆ ಸೇರಿಸಲಾಗಿತ್ತು. ಇದರಿಂದ ಫಾಜಿಯಾ ಬೇಸರಗೊಂಡಿದ್ದಳು. ಆಕೆಯನ್ನು ಹುರಿದುಂಬಿಸಲು ಕೋವಿಡ್ ಆರೈಕೆ ಕೇಂದ್ರದ ಇತರೆ ಸಹವಾಸಿಗಳು ಮದುವೆ ಸಮಾರಂಭವನ್ನು ಏರ್ಪಡಿಸಿದ್ದರು.

ಜ್ವರದಿಂದ ಬಳಲುತ್ತಿದ್ದ ಕಾರಣ ವಧು ಫಾಜಿಯಾ ಕೋವಿಡ್ ಟೆಸ್ಟ್ ಮಾಡಿಸಿದ್ದಳು. ಆದರೆ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ನಾನು ಮದುವೆಗೆ ಉಡುಪುಗಳನ್ನು ಖರೀದಿಸಲು ಮನೆಯಿಂದ ಹೊರ ಹೋಗಿದ್ದೆ. ಆದರೆ ನನಗೆ ಕೊರೊನಾ ಪಾಸಿಟಿವ್ ಬಂದಿರುವುದು ತಿಳಿಯಿತು ಎಂದು ಫಾಜಿಯಾ ಹೇಳಿದ್ದಾಳೆ. ನಂತರ ಫಾಜಿಯಾಳನ್ನು ಕೋವಿಡ್ ಕೇರ್ ಸೆಂಟರ್‌ಗೆ ಸೇರಿಸಲಾಗಿತ್ತು. ಅವಳ ಮದುವೆಯನ್ನು ಮಸೀದಿಯಲ್ಲಿ ನಿರ್ಧರಿಸಲಾಗಿದ್ದರಿಂದ ವಧುವಿನ ಉಪಸ್ಥಿತಿಯು ಕಡ್ಡಾಯವಲ್ಲದ ಕಾರಣ ಅವರ ಕುಟುಂಬವು ಯೋಜಿಸಿದಂತೆ ಮದುವೆ ಸಮಾರಂಭವನ್ನು ಮುಂದುವರಿಸಲು ನಿರ್ಧರಿಸಿತ್ತು.

ಇತ್ತ ಘಾಜಿಯಾ ಬೇಸರಗೊಂಡಿದ್ದಳು. ಈ ಬಗ್ಗೆ ಕೋವಿಡ್ ಸೆಂಟರಿನಲ್ಲಿದ್ದ ಸಹವಾಸಿಗಳು ತಿಳಿದುಕೊಂಡು ಆಕೆಯನ್ನು ಹುರಿದುಂಬಿಸುವ ಸಲುವಾಗಿ ಸರ್ಪ್ರೈಸ್ ಆಗಿ ಮದುವೆ ಸಮಾರಂಭವನ್ನು ಏರ್ಪಡಿಸಿದ್ದರು. ಅದರಂತೆಯೇ ಘಾಜಿಯಾ ತನ್ನ ವಿವಾಹದ ಉಡುಪನ್ನು ಧರಿಸಿ ಕೋವಿಡ್ ಆರೈಕೆ ಕೇಂದ್ರದ ಮಧ್ಯದಲ್ಲಿ ಕುಳಿತಿದ್ದಳು. ಇತರೆ ಸಹವಾಸಿಗಳು ಆಕೆಯ ಸುತ್ತಲೂ ಹಾಡಿ, ನಲಿಯುತ್ತ ಅವಳನ್ನು ಹುರಿದುಂಬಿಸಿದ್ದಾರೆ. ಇದೀಗ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಮ್ಮ ಆರೈಕೆ ಕೇಂದ್ರಕ್ಕೆ ಹಸ್ತಾಂತರಿಸುವಾಗ ಮರುದಿನ ಆಕೆಯ ಮದುವೆ ಇರುವ ನಗ್ಗೆ ಗೊತ್ತಾಯಿತು. ಈ ವಿಷಯವನ್ನು ಇತರ ರೋಗಿಗಳೊಂದಿಗೆ ಹಂಚಿಕೊಂಡಾಗ ಆಕೆಗೆ ಸಮಾರಂಭ ಏರ್ಪಡಿಸುವ ಬಗ್ಗೆ ಎಲ್ಲರೂ ಸಮ್ಮತಿಸಿದರು. ವಾರ್ಡ್ ಗಳಲ್ಲಿ ರೋಗಿಗಳ ಆತ್ಮಸ್ಥೈರ್ಯ ಹೆಚ್ಚಿಸುವ ಸಲುವಾಗಿ ಮನೋರಂಜನಾ ಕಾರ್ಯಕ್ರಮಗಳಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಎಲ್ಲ ರೋಗಿಗಳು ಸಮಾರಂಭದಲ್ಲಿ ಭಾಗವಹಿಸಿ ಸಂಭ್ರಮಿಸಿದ್ದಾರೆ ಎಂದು ಹೆಲ್ತ್ ಇನ್‍ಸ್ಪೆಕ್ಟರ್ ಕೆ. ಸುಧೀರ್ ತಿಳಿಸಿದ್ದಾರೆ.

ಅವಳ ಮದುವೆಯನ್ನು ಮಸೀದಿಯಲ್ಲಿ ನಿರ್ಧರಿಸಲಾಗಿದ್ದರಿಂದ ವಧುವಿನ ಉಪಸ್ಥಿತಿ ಕಡ್ಡಾಯವಲ್ಲವೆಂದು ಆಕೆಯ ಸಂಬಂಧಿಕರು ತಿಳಿಸಿದ್ದರು. ಹೀಗಾಗಿ ಕೋವಿಡ್ ಸೆಂಟರಿನಲ್ಲಿ ಮದುವೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಸಮಾರಂಭದ ಕೊನೆಯಲ್ಲಿ ಎಲ್ಲರೂ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಎಲ್ಲರಿಗೂ ಬಿರಿಯಾನಿ ಮತ್ತು ಸಿಹಿತಿಂಡಿಯ ವ್ಯವಸ್ಥೆಯನ್ನು ಆರೈಕೆ ಕೇಂದ್ರದ ರೋಗಿಗಳು ಏರ್ಪಡಿಸಿದ್ದರು.
ಈ ದಿನವನ್ನು ನಾನು ನನ್ನ ಜೀವನದಲ್ಲಿ ಎಂದಿಗೂ ಮರೆಯುವುದಿಲ್ಲ. ನಾನು ದುಖಃದಲ್ಲಿದ್ದೆ. ನನ್ನನ್ನು ಖುಷಿಪಡಿಸಲು ಇವರು ಏರ್ಪಡಿಸಿದ ಸಮಾರಂಭವನ್ನು ನಾನೆಂದು ಮರೆಯಲಾರೆ ಎಂದು ಫಾಜಿಯಾ ಹೇಳಿದ್ದಾಳೆ.