Tag: CEO

  • ನಾನು ರಾಜಕೀಯ ಸೇರಿದ್ರೆ ಮೂರನೇ ಮಹಾಯುದ್ಧ ಆಗುತ್ತೆ: ಇಂದ್ರಾ ನೂಯಿ

    ನಾನು ರಾಜಕೀಯ ಸೇರಿದ್ರೆ ಮೂರನೇ ಮಹಾಯುದ್ಧ ಆಗುತ್ತೆ: ಇಂದ್ರಾ ನೂಯಿ

    ನವದೆಹಲಿ: ನಾನು ಏನಾದರೂ ರಾಜಕೀಯ ಪ್ರವೇಶ ಮಾಡಿದರೆ, ನನ್ನ ನೇರ ಮಾತುಗಳಿಂದಲೇ ಮೂರನೇ ಮಹಾಯುದ್ಧ ನಡೆಯೋದು ಗ್ಯಾರೆಂಟಿ ಎಂದು ಪೆಪ್ಸಿಕೋ ಕಂಪನಿಯ ಮಾಜಿ ಸಿಇಒ ಇಂದ್ರಾ ನೂಯಿ ಹೇಳಿದ್ದಾರೆ.

    ಮಾನವೀಯತೆ, ಉದ್ಯಮದಲ್ಲಿ ಸಾಧನೆ ಮತ್ತು ಮಹಿಳಾ ಪರ ನಿಲುವಿಗಾಗಿ ಏಷ್ಯಾ ಸೊಸೈಟಿ ಸಂಸ್ಥೆ 62 ವರ್ಷದ ಇಂದ್ರಾ ನೂಯಿ ಅವರಿಗೆ “ಗೇಮ್ ಚೇಂಜರ್ ಅವಾರ್ಡ್ ಆಫ್ ದಿ ಇಯರ್” ಪ್ರಶಸ್ತಿಯನ್ನು ನೀಡಿ ಗೌರವಿಸಿತು.

    ಈ ಸಮಾರಂಭದಲ್ಲಿ ನಡೆದ ಮಾತುಕತೆಯಲ್ಲಿ, ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಂತ್ರಿಮಂಡಲವನ್ನ ಸೇರಲು ಇಚ್ಛಿಸುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ನೂಯಿ, “ನನಗೂ ಮತ್ತು ರಾಜಕೀಯಕ್ಕೂ ಹೊಂದಿಕೊಳ್ಳಲು ಅಸಾಧ್ಯ. ಏಕೆಂದರೆ ನಾನು ಎಲ್ಲವನ್ನ ನೇರವಾಗಿ ಹೇಳಿಕೊಳ್ಳುತ್ತೇನೆ. ನಾನು ರಾಜತಾಂತ್ರಿಕಳಲ್ಲ. ಯಾವ ರಾಜತಾಂತ್ರಿಕತೆಯ ಬಗ್ಗೆಯೂ ನನಗೆ ಗೊತ್ತಿಲ್ಲ. ನಾನೇನಾದರೂ ರಾಜಕೀಯ ಪ್ರವೇಶ ಮಾಡಿದರೆ ನನ್ನಿಂದಲೇ ಮೂರನೇ ಮಹಾಯುದ್ಧ ಉಂಟಾಗುವುದು ಖಚಿತ. ರಾಜಕೀಯಕ್ಕೆ ನನ್ನನ್ನು ದೂಡುವ ಕೆಲಸವನ್ನ ಮಾಡಬೇಡಿ” ಎಂದರು.

    ನೂಯಿಯವರ 40 ವರ್ಷದ ಉದ್ಯಮದ ಕಾರ್ಯ ವೈಖರಿಯ ಬಗ್ಗೆ ಕೇಳಿದಾಗ,”ನಾನು ದಿನದಲ್ಲಿ ಸುಮಾರು 18-20 ತಾಸಿನವರೆಗೆ ಕೆಲಸ ಮಾಡುತ್ತಿದ್ದೆ. ಇಡೀ ದಿನ ಆಫೀಸಿನಲ್ಲಿ ಕೆಲಸ ಮಾಡುವ ನನಗೆ ಈಗ ಹುದ್ದೆಯಿಂದ ಕೆಳಗಿಳಿದ ನಂತರ ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಬೆಳಗ್ಗೆ 4 ಘಂಟೆಗೆ ಶುರುವಾಗುತ್ತಿದ್ದ ನನ್ನ ದಿನಚರಿಯಿಂದ ಈಗ ನನಗೆ ಮುಕ್ತಿ ದೊರೆತಿದೆ ಎಂದು ಹೇಳಿದರು.

    ವಿಶ್ವದ ಎರಡನೇ ತಂಪು ಪಾನೀಯದ ಪೆಪ್ಸಿಕೋ ಕಂಪೆನಿಯಲ್ಲಿ ಸಿಇಒ ಆಗಿ ಕಾರ್ಯನಿರ್ವಹಿಸಿದ್ದ ನೂಯಿ 12 ವರ್ಷಗಳ ನಂತರ ಕಂಪೆನಿಯಿಂದ ಹೊರಬರುತ್ತಿದ್ದಾರೆ. ಅಕ್ಟೋಬರ್ 3ಕ್ಕೆ ಅವರ ಅವಧಿ ಮುಕ್ತಾಯವಾಗಿದ್ದು, 2019 ರವರೆಗೂ ಕಾರ್ಯನಿರ್ವಹಿಸುವುದಾಗಿ ಹೇಳಿದ್ದಾರೆ. ಇಂದ್ರಾ ನೂಯಿರವರು 1980 ರಲ್ಲಿ ರಾಜ್ ನೂಯಿ ಎಂಬವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 12 ವರ್ಷಗಳ ಬಳಿಕ ಪೆಪ್ಸಿ ಸಿಇಒ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಇಂದಿರಾ ನೂಯಿ

    12 ವರ್ಷಗಳ ಬಳಿಕ ಪೆಪ್ಸಿ ಸಿಇಒ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಇಂದಿರಾ ನೂಯಿ

    ನವದೆಹಲಿ: ವಿಶ್ವದ ಪ್ರಶಿದ್ಧ ತಂಪುಪಾನೀಯ ಪೆಪ್ಸಿ ಕಂಪೆನಿಯ ಸಿಇಒ ಆಗಿ 12 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ ಇಂದಿರಾ ನೂಯಿ ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

    ಇಂದಿರಾ ಅವರ ಅಧಿಕಾರದ ಅವಧಿ ಅಕ್ಟೋಬರ್ 3 ರಂದು ಪೂರ್ಣಗೊಳ್ಳಲಿದ್ದು, ಈ ಸ್ಥಾನಕ್ಕೆ ರಾಮನ್ ಲಗುವರ್ಟಾ ಅವರನ್ನು ನೇಮಕ ಮಾಡಲಾಗಿದೆ ಎಂದು ಕಂಪೆನಿ ತನ್ನ ಟ್ವಿಟ್ಟರ್ ನಲ್ಲಿ ತಿಳಿಸಿದೆ.

    https://twitter.com/IndraNooyi/status/1026431769300672514

    ಅಂದಹಾಗೇ ತಮಿಳುನಾಡು ಮೂಲದ 62 ವರ್ಷದ ಇಂದಿರಾ ನೂಯಿ ಅವರು 1994 ರಲ್ಲಿ ಪೆಪ್ಸಿ ಕಂಪೆನಿಗೆ ಹಿರಿಯ ಉಪಾಧ್ಯಕ್ಷರಾಗಿ ಸೇರಿದ್ದರು. ಬಳಿಕ 2006 ರಲ್ಲಿ ಕಂಪೆನಿಯ ಸಿಒಇ ಹುದ್ದೆಗೆ ನೇಮಕಗೊಂಡಿದ್ದರು. ಸತತ 24 ವರ್ಷಗಳ ಕಾಲ ಕಂಪೆನಿಯಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಂಪೆನಿಯಲ್ಲಿ ಇಷ್ಟು ವರ್ಷ ಕಾರ್ಯನಿರ್ವಹಿಸುವುದು ನನ್ನ ಜೀವಿತಾವಧಿಯ ಗೌರವ ಹಾಗೂ ಹೆಮ್ಮೆ ತಂದಿದೆ. ಸಂಸ್ಥೆಯ ಷೇರುದಾರರು ಮಾತ್ರವಲ್ಲದೇ ನಾವು ಕಾರ್ಯನಿರ್ವಹಿಸಿದ ಸಮುದಾಯಗಳಲ್ಲಿಯೂ ಉತ್ತಮವಾಗಿ ಸಾಧನೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಕೇವಲ ಇಂದಿರಾ ಅವರು ಪೆಪ್ಸಿ ಕಂಪೆನಿಯಲ್ಲಿ ಮಾತ್ರ ಸಾಧನೆಯನ್ನು ಮಾಡದೆ ಇತರೇ ಸಮುದಾಯದ ಕಾರ್ಯಗಳಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. ಇದರ ಭಾಗವಾಗಿ ನೂಯಿ ಅವರು 2018 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಕಮಿಟಿ (ಐಸಿಸಿ)ಗೆ ಮೊದಲ ಮಹಿಳಾ ಸ್ವತಂತ್ರ್ಯ ಅಭ್ಯರ್ಥಿಯಾಗಿ ಆಯ್ಕೆ ಆಗಿದ್ದರು. ಅಲ್ಲದೇ ಭಾರತದಲ್ಲಿ ಸ್ಯಾನಿಟರಿ ನ್ಯಾಪ್‍ಕಿನ್ ಪರಿಚಯಿಸಿದ ಹೆಗ್ಗಳಿಕೆಯನ್ನು ನೂಯಿ ಹೊಂದಿದ್ದಾರೆ.

    ನೂಯಿ ಅವರ ಸೇವೆಯನ್ನು ಗುರುತಿಸಿದ ಸರ್ಕಾರ ಕೇಂದ್ರ ಸರ್ಕಾರ 2017 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಕಲಬುರಗಿ ಸಿಇಓ ವಿರುದ್ಧ ಗುಡುಗಿದ ಜಿಲ್ಲಾ ಪಂಚಾಯತ್ ಸದಸ್ಯರು

    ಕಲಬುರಗಿ ಸಿಇಓ ವಿರುದ್ಧ ಗುಡುಗಿದ ಜಿಲ್ಲಾ ಪಂಚಾಯತ್ ಸದಸ್ಯರು

    ಕಲಬುರಗಿ: ಜಿಲ್ಲೆಯ ಜಿಲ್ಲಾ ಪಂಚಾಯತ್ ನಲ್ಲಿ ಪಕ್ಷಭೇದ ಮರೆತು ಎಲ್ಲಾ ಸದಸ್ಯರು ಸಿಇಓ ವಿರುದ್ಧ ಒಟ್ಟಾಗಿ ಆಕ್ರೊಶ ವ್ಯಕ್ತಪಡಿಸಿದ್ದಾರೆ.

    ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ಸಿಇಓ ಹೆಬ್ಸಿಬಾರಾಣಿ ಕೋರ್ಲಪಾಟಿ ಮಧ್ಯೆ ಮುಸುಕಿನ ಗುದ್ದಾಟ ಮುಗಿಯೋ ಲಕ್ಷಣ ಗೋಚರಿಸುತ್ತಿಲ್ಲ. ಕಳೆದ ಬಾರಿ 11 ನೇ ಜಿಲ್ಲಾ ಪಂಚಾಯತ್ ಸಭೆಯನ್ನ ಖುದ್ದು ಸಿಇಓ ಅವರೇ ಕರೆದು, ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತಾರದೇ ಸಭೆಗೆ ಗೈರಾಗಿ ವಿದೇಶ ಪ್ರವಾಸ ಕೈಗೊಂಡಿದ್ದರು. ಆದರೆ ಇಂದು 12 ನೇ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಪಕ್ಷಬೇಧ ಮರೆತು ಸದಸ್ಯರೆಲ್ಲರು ಸಿಇಓ ವಿರುದ್ಧ ಮುಗಿಬಿದ್ದಿದ್ದಾರೆ.

    ಅರಳಗುಂಡಗಿ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ರೇವಣಸಿದ್ದಪ್ಪ ಸಂಕಾಲೆ ತಾಳ್ಮೆ ಕಳೆದುಕೊಂಡು ಸಿಇಓ ಹೆಬ್ಸಿಬಾರಾಣಿ ಕೋರ್ಲಪಾಟಿರನ್ನ ಏಕವಚನದಲ್ಲಿ ಕ್ಲಾಸ್ ತೆಗೆದುಕೊಂಡರು. ಸದಸ್ಯರಿಗೆ ಹಾಗೂ ಸಭೆಗೆ ಗೌರವ ಕೊಡಬೇಕು ಅನ್ನೊದು ನಿನಗೆ ಗೊತ್ತಿಲ್ವ, ಇಷ್ಟು ದಿನ ಏನಾಗಿತ್ತು, ಭ್ರಷ್ಟ ಅಧಿಕಾರಿಗಳ ವಿರುದ್ಧ ಯಾಕೆ ನೀನು ಕ್ರಮ ತೆಗೆದುಕೊಳ್ಳುತ್ತಿಲ್ಲ, ಮಾನ್ಯ ಅಧ್ಯಕ್ಷರೆ ನೀವು ಸಿಇಓ ಮಾತಿಗೆ ಮರಳಾಗಬೇಡಿ ಎಂದು ಗುಡುಗಿದರು.

    ಅಲ್ಲದೇ ಇತರ ಸದಸ್ಯರು ಕೂಡ ಸಿಇಓ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ನಿಮ್ಮ ಸೇವೆ ನಮಗೆ ಅವಶ್ಯಕತೆಯಿಲ್ಲ, ನೀವು ಇಲ್ಲಿಂದ ಹೊರಟುಹೋಗಿ ಅಂತಾ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

    ಸಭೆಗೂ ಮುನ್ನ ಆಡಳಿತ ಮತ್ತು ವಿಪಕ್ಷಗಳ ಸದಸ್ಯರು ಒಟ್ಟಿಗೆ ಸಭೆ ನಡೆಸಿದ್ದರು. ಸಭೆಯ ಬಗ್ಗೆ ಹಾಗೂ ಸಿಇಓ ವಿರುದ್ಧ ಕೈಗೊಳ್ಳಬೇಕಾದ ನಿರ್ಣಯಗಳ ಬಗ್ಗೆ ಚರ್ಚಿಸಿದ್ದರು ಎನ್ನಲಾಗಿದೆ. ಒಟ್ಟಾರೆಯಾಗಿ ಕಲಬುರಗಿ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಅಭಿವೃದ್ದಿ ವಿಷಯಗಳ ಬಗ್ಗೆ ಚರ್ಚಿಸದೇ, ಕೇವಲ ಸಿಇಓ ವಿರುದ್ದ ತಮ್ಮ ಆಕ್ರೋಶವನ್ನ ಹೊರಹಾಕಿದ್ದು, ಅಂತಿಮವಾಗಿ ಯಾರ ಕೈ ಮೇಲಾಗುತ್ತೆ ಅನ್ನೊದು ತೀವ್ರ ಕೂತುಹಲಕ್ಕೆ ಎಡೆ ಮಾಡಿಕೊಟ್ಟಿದೆ.

  • ಮೊಬೈಲ್ ಸ್ಫೋಟಗೊಂಡು ಸಿಇಒ ಸ್ಥಳದಲ್ಲೇ ಸಾವು!

    ಮೊಬೈಲ್ ಸ್ಫೋಟಗೊಂಡು ಸಿಇಒ ಸ್ಥಳದಲ್ಲೇ ಸಾವು!

    ಕೌಲಾಲಾಂಪುರ: ಚಾರ್ಜ್ ಇಟ್ಟಿದ್ದ ವೇಳೆ ಮೊಬೈಲ್ ಸ್ಫೋಟಗೊಂಡು ಮಲೇಷಿಯಾದ ಕ್ರಾಡಲ್ ಫಂಡ್ ಕಂಪೆನಿಯ ಕಾರ್ಯನಿರ್ವಹಣಾಧಿಕಾರಿ(ಸಿಇಒ) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ನಜೀರ್ ಹಸನ್(45) ಮೃತಪಟ್ಟ ಸಿಇಒ. ಎಂದಿನಂತೆ ಮನೆಯಲ್ಲಿ ಚಾರ್ಜ್ ಗೆ ಇಟ್ಟು ಮಲಗಿದ್ದಾಗ ಮೊಬೈಲ್ ಸ್ಫೋಟಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ವರದಿಗಳ ಪ್ರಕಾರ ನಜೀರ್ ಹಸನ್‍ರವರು ತಮ್ಮ ಎರಡು ಸ್ಮಾರ್ಟ್‍ಫೋನ್‍ಗಳನ್ನು ರಾತ್ರಿ ಮಲಗುವ ವೇಳೆ ತಮ್ಮ ಹಾಸಿಗೆಯ ಪಕ್ಕದಲ್ಲೇ ಚಾರ್ಜ್‍ಗೆ ಇಟ್ಟಿದ್ದಾರೆ. ಈ ವೇಳೆ ಇದರಲ್ಲಿ ಒಂದು ಫೋನ್ ಸ್ಫೋಟಗೊಂಡು ಕೊಠಡಿ ತುಂಬಾ ಬೆಂಕಿ ಆವರಿಸಿಕೊಂಡು ಉಸಿರಾಡಲು ಸಾಧ್ಯವಾಗದೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

    ಘಟನೆ ಕುರಿತು ಪ್ರತಿಕ್ರಿಯಿಸಿದ ಸಂಬಂಧಿಗಳು, ಹಸನ್‍ರವರು ಬ್ಲಾಕ್ ಬೆರ್ರಿ ಮತ್ತು ಹುವಾವೇ ಕಂಪನಿಯ ಎರಡು ಫೋನ್‍ಗಳನ್ನು ಬಳಸುತ್ತಿದ್ದರು. ಮೊಬೈಲ್ ಸ್ಫೋಟಗೊಂಡು ತಲೆಗೆ ಗಂಭೀರಗಾಯವಾಗಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಸ್ಫೋಟಗೊಂಡಿರುವ ಮೊಬೈಲ್‍ನಲ್ಲಿ ಯಾವ ಫೋನ್ ಸ್ಫೋಟಗೊಂಡಿದೆ ಎಂಬುದು ತಿಳಿದು ಬಂದಿಲ್ಲ, ಹಸನ್‍ರವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಹೊಂದಿದ್ದು, ಕೆಲಸದ ನಿಮಿತ್ತ ಅವರಿಂದ ದೂರವಾಗಿದ್ದರು ಎಂದು ತಿಳಿಸಿದ್ದಾರೆ.

    ಪ್ರಕರಣ ಕುರಿತು ಹೇಳಿಕೆ ನೀಡಿದ ಮಲೇಷಿಯಾ ಪೊಲೀಸರು, ವ್ಯಕ್ತಿ ಮೊಬೈಲ್ ಚಾರ್ಜಿಂಗ್ ಇಟ್ಟಿದ್ದ ವೇಳೆ ಸ್ಫೋಟಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಮೊಬೈಲ್ ಸ್ಫೋಟದಿಂದ ಉಂಟಾದ ಹೊಗೆಯಿಂದಾಗಿ ಉಸಿರಾಡಲು ಸಾಧ್ಯವಾಗದೇ ಮೃತಪಟ್ಟಿದ್ದಾರೆ ಎಂದು ವರದಿ ಬಂದಿದೆ ಎಂದು ಹೇಳಿದ್ದಾರೆ.

  • ಪಾಳುಬಿದ್ದ ಪುಷ್ಕರಣಿಯನ್ನು ಸಾರ್ವಜನಿಕರ ಜೊತೆ ಸೇರಿ ಸ್ವಚ್ಛಗೊಳಿಸಿದ್ರು ದಾವಣಗೆರೆ ಸಿಇಒ ಅಶ್ವತಿ

    ಪಾಳುಬಿದ್ದ ಪುಷ್ಕರಣಿಯನ್ನು ಸಾರ್ವಜನಿಕರ ಜೊತೆ ಸೇರಿ ಸ್ವಚ್ಛಗೊಳಿಸಿದ್ರು ದಾವಣಗೆರೆ ಸಿಇಒ ಅಶ್ವತಿ

    ದಾವಣಗೆರೆ: ಪಾಳು ಬಿದ್ದ ಪುಷ್ಕರಣಿಯನ್ನು ಅಧಿಕಾರಿಗಳೊಂದಿಗೆ ಸೇರಿ ಸ್ವಚ್ಛತೆ ಮಾಡಿ ನಾವು ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಒ ಅಶ್ವತಿ ತೋರಿಸಿಕೊಟ್ಟಿದ್ದಾರೆ.

    ದಾವಣಗೆರೆ ಜಿಲ್ಲೆ, ಜಗಳೂರು ತಾಲೂಕಿನ ಕೊಣಚಗಲ್ಲು ಗ್ರಾಮದ ಐತಿಹಾಸಿಕ ಪುಷ್ಕರಣಿಯು ಹಲವು ವರ್ಷಗಳಿಂದ ಪಾಳು ಬಿದ್ದು, ಯಾವುದಕ್ಕೂ ಉಪಯೋಗವಾಗುವುದಿಲ್ಲ ಎನ್ನುವಂತಿತ್ತು. ಇದನ್ನ ಅರಿತ ಸಿಇಒ ಅಶ್ವತಿ ಮಂಗಳವಾರ ಬೆಳ್ಳಂಬೆಳಗ್ಗೆ ಸ್ವತಃ ಅವರೇ ಕೈಯಲ್ಲಿ ಪೆÇರಕೆ, ಕುಡಗೋಲು ಹಿಡಿದುಕೊಂಡು ತನ್ನ ಸಿಬ್ಬಂದಿ ಹಾಗೂ ಗ್ರಾಮಸ್ಥರನ್ನು ಜೊತೆಗೂಡಿಸಿಕೊಂಡು ಪುಷ್ಕರಣಿ ಸ್ವಚ್ಛ ಮಾಡಿದ್ದಾರೆ.

    ಸ್ವಚ್ಛಗೊಳಿಸಿದ ನಂತರ ಸ್ವಚ್ಛತೆಯ ಬಗ್ಗೆ ಜನರಿಗೆ ತಿಳುವಳಿಕೆಯನ್ನು ಸಹ ನೀಡಿ, ಸ್ವಚ್ಛತೆಯನ್ನು ಕಾಪಾಡುವಂತೆ ಮನವಿಯನ್ನು ಮಾಡಿಕೊಂಡರು. ಇದೇ ವೇಳೆಯಲ್ಲಿ ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಸದಸ್ಯರು ಇನ್ನು ಮುಂದೆ ಪುಷ್ಕರಣಿಯನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುತ್ತೇವೆ ಎಂದು ಭರವಸೆಯನ್ನು ಸಹ ನೀಡಿದರು.

    ಅಶ್ವತಿ ಅವರು ಈ ರೀತಿಯ ಹಲವು ಜನಪ್ರಿಯ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದರಿಂದ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದಾರೆ.

    ಇದನ್ನೂ ಓದಿ: ಶೌಚಾಲಯಕ್ಕಾಗಿ ಗುದ್ದಲಿ ಹಿಡಿದಿದ್ರು ಜಿ.ಪಂ. CEO- ಗ್ರಾ.ಪಂ. ಸಿಬ್ಬಂದಿಯಿಂದಲೇ ಗೋಲ್ಮಾಲ್ !

  • ಜಿ.ಪಂ ಸಿಇಓ ಮಾಡಿದ ಈ 1 ಯೋಜನೆಯಿಂದ ಬಯಲು ಶೌಚಮುಕ್ತ ಜಿಲ್ಲೆಗಳಲ್ಲಿ 18ನೇ ಸ್ಥಾನದಲ್ಲಿದ್ದ ದಾವಣಗೆರೆ ಈಗ 3 ಸ್ಥಾನಕ್ಕೆ

    ಜಿ.ಪಂ ಸಿಇಓ ಮಾಡಿದ ಈ 1 ಯೋಜನೆಯಿಂದ ಬಯಲು ಶೌಚಮುಕ್ತ ಜಿಲ್ಲೆಗಳಲ್ಲಿ 18ನೇ ಸ್ಥಾನದಲ್ಲಿದ್ದ ದಾವಣಗೆರೆ ಈಗ 3 ಸ್ಥಾನಕ್ಕೆ

    ದಾವಣಗೆರೆ: ಒಬ್ಬ ಅಧಿಕಾರಿ ಮನಸ್ಸು ಮಾಡಿದ್ರೆ ಸಮಾಜದಲ್ಲಿ ಎಂಥಾ ಬದಲಾವಣೆ ತರಬಹುದು ಅನ್ನೋದಕ್ಕೆ ಈ ಸ್ಟೋರಿನೇ ಸಾಕ್ಷಿ. ದಾವಣಗೆರೆ ಜಿಲ್ಲಾ ಪಂಚಾಯತ್ ಸಿಇಓ ಇಂಥಾ ಜನಮೆಚ್ಚುಗೆಯ ಕೆಲಸಕ್ಕೆ ಪಾತ್ರರಾಗಿದ್ದಾರೆ.

    ದಾವಣಗೆರೆ ಜಿಲ್ಲೆಯ ಅದೆಷ್ಟೋ ಗ್ರಾಮಗಳ ಮನೆಗಳಲ್ಲಿ ಶೌಚಾಲಯಗಳೇ ಇರಲಿಲ್ಲ. ಇದನ್ನು ಮನಗಂಡ ದಾವಣಗೆರೆ ಜಿಲ್ಲಾ ಪಂಚಾಯ್ತಿ ಸಿಇಒ ಅಶ್ವತಿ, ಜಿಲ್ಲೆಯನ್ನು ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿಸೋ ಸಲುವಾಗಿ ಒಂದು ವಿಶಿಷ್ಟ ಯೋಜನೆ ರೂಪಿಸಿದ್ರು. ಮೌಢ್ಯತೆ ಮೆಟ್ಟಿನಿಂತು ಶೌಚಾಲಯ ನಿರ್ಮಿಸಿಕೊಂಡ ಗರ್ಭಿಣಿಯರಿಗೆ ಸೀಮಂತ, ಬಾಣಂತಿಯರಿಗೆ ಮಡಿಲು ತುಂಬುವ ಜೊತೆಗೆ ಶೌಚಾಲಯ ನಿರ್ಮಿಸಿಕೊಂಡ ಮಕ್ಕಳಿಗೆ ಪ್ರಶಂಸಾ ಪತ್ರ ನೀಡುವ ಯೋಜನೆಗೆ ಕೈ ಹಾಕಿದ್ರು. ಸಿಇಓ ಅವರ ಈ ಕಳಕಳಿಗೆ ಗ್ರಾಮದ ಜನರೂ ಸಾಥ್ ನೀಡಿದ್ರು. ಪರಿಣಾಮ ಎಲ್ಲವೂ ಅವರಂದುಕೊಂಡತೆಯೇ ಆಗ್ತಿದೆ. ಬಯಲು ಶೌಚಮುಕ್ತ ಜಿಲ್ಲೆಯಲ್ಲಿ 18ನೇ ಸ್ಥಾನದಲ್ಲಿದ್ದ ದಾವಣಗೆರೆ ಈಗ 3 ಸ್ಥಾನಕ್ಕೆ ಬಂದಿದೆ.

    ಸಿಇಒ ಅಶ್ವಥಿ ಕಳೆದ 3 ತಿಂಗಳಿನಿಂದ ಅಧಿಕಾರಿಗಳೊಂದಿಗೆ ಪ್ರತಿ ಹಳ್ಳಿ ಹಳ್ಳಿಗೂ ತೆರಳಿ ಶೌಚಾಲಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ರು. ಜನರಲ್ಲಿರುವ ಮೂಢನಂಬಿಕೆಯನ್ನ ದೂರವಾಗಿಸಿದ್ರು. ಜಿಲ್ಲೆಯಲ್ಲಿ 300 ಗರ್ಭಿಣಿಯರು ಹಾಗೂ 35 ಬಾಣಂತಿಯರ ಮನೆಗಳಲ್ಲಿ ಶೌಚಾಲಯ ನಿರ್ಮಿಸಿ ಸೈ ಎನಿಸಿಕೊಂಡ್ರು.

    ಬೆಣ್ಣೆನಗರಿಯನ್ನು ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸಿಇಓ ಪಣ ತೊಟ್ಟು ಯಶಸ್ವಿ ಹಾದಿಯಲ್ಲಿದ್ದಾರೆ. ಇನ್ನು ಅಕ್ಟೋಬರ್ 2ರಂದು ಬಯಲು ಮುಕ್ತ ಜಿಲ್ಲೆ ಎಂದು ಘೋಷಣೆ ಮಾಡುವುದೊಂದೇ ಬಾಕಿ ಇದೆ.

  • ಸಿಇಓ ಎದುರಲ್ಲೇ ಗ್ರಾ.ಪಂ ಅಧ್ಯಕ್ಷರಿಗೆ ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿದ ಜಿ.ಪಂ ಸದಸ್ಯ!

    ಸಿಇಓ ಎದುರಲ್ಲೇ ಗ್ರಾ.ಪಂ ಅಧ್ಯಕ್ಷರಿಗೆ ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿದ ಜಿ.ಪಂ ಸದಸ್ಯ!

    ಬೀದರ್: ಜಿಲ್ಲಾ ಪಂಚಾಯತಿ ಸದಸ್ಯರೊಬ್ಬರು ಸಿಇಓ ಎದುರಲ್ಲೇ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಚಪ್ಪಲಿಯಿಂದ ಹಲ್ಲೆಗೆ ಯತ್ನಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಬಸವಕಲ್ಯಾಣ ತಾಲೂಕಿನ ಹುಲಸೂರ ಜಿಪಂ ಸದಸ್ಯ ಸುಧೀರ್ ಕಾಡಾದಿ ರೋಷಾವೇಶದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ಚಂದ್ರಕಾಂತ ದೆಟನೆ ಎಂಬವರ ಮುಖಕ್ಕೆ ಚಪ್ಪಲಿಯಿಂದ ಹೊಡೆಯಲು ಯತ್ನಿಸಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.

    ಶನಿವಾರ ಪಂಚಾಯತಿಗೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಸಿಇಓ ಡಾ. ಆರ್ ಸೇಲ್ವಮಣಿ ಎದುರಲ್ಲೇ ಈ ಘಟನೆ ನಡೆದಿದ್ದು, ಸಿಇಓ ಸಾಹೇಬ್ರು ಜನ ಪ್ರತಿನಿಧಿಗಳ ರಂಪಾಟ ನೋಡಿ ದಂಗಾಗಿ ಹೊಗಿದ್ದರು.

    ಕುಡಿಯುವ ನೀರಿನ ಯೋಜನೆಯಡಿಯಲ್ಲಿ 32 ಲಕ್ಷದ ಕಾಮಗಾರಿ ಪೂರ್ಣಗೊಂಡಿದ್ದು ಅದರ ಅನುದಾನ ಬಿಡುಗಡೆ ಮಾಡುವಂತೆ ಮಾಜಿ ಗ್ರಾಪಂ ಅಧ್ಯಕ್ಷರು ಮನವಿ ಮಾಡಿದ್ದರು. ಆದ್ರೆ ಇದಕ್ಕೆ ವಿರೋಧಿಸಿದ ಜಿ.ಪಂ ಸದಸ್ಯ ಸುಧೀರ್ ಕಾಡಾದಿ ಮತ್ತು ಅವರ ಟೀಂ ಅಶ್ಲೀಲವಾಗಿ ಮಾತನಾಡುತ್ತಾ ಗ್ರಾಪಂ ಅಧ್ಯಕ್ಷರ ಮತ್ತು ಮುಖಂಡರ ಮೇಲೆ ಹಲ್ಲೆಗೆ ಮುಂದಾದರು ಎನ್ನಲಾಗಿದೆ.

    ಈ ಕುರಿತು ಹುಲಸೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://youtu.be/jPubjLqjr0A

  • ಅಮೆರಿಕದ ಟಾಪ್ ಕಂಪೆನಿಗಳ ಸಿಇಒಗಳ ಜೊತೆ ಮೋದಿ ಚರ್ಚೆ: ಸಭೆ ಬಳಿಕ ಸಿಇಒಗಳು ಹೇಳಿದ್ದು ಹೀಗೆ

    ಅಮೆರಿಕದ ಟಾಪ್ ಕಂಪೆನಿಗಳ ಸಿಇಒಗಳ ಜೊತೆ ಮೋದಿ ಚರ್ಚೆ: ಸಭೆ ಬಳಿಕ ಸಿಇಒಗಳು ಹೇಳಿದ್ದು ಹೀಗೆ

    ವಾಷಿಂಗ್ಟನ್: ಉದ್ಯಮ ಸ್ನೇಹಿ ರಾಷ್ಟ್ರವಾಗಿ ಭಾರತ ಬದಲಾಗುತ್ತಿದ್ದು, ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ)ಯಿಂದಾಗಿ ಮತ್ತಷ್ಟು ಉದ್ಯಮ ಸ್ನೇಹಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಟಾಪ್ ಕಂಪೆನಿಗಳ ಸಿಇಒಗಳ ಜೊತೆ ಸಂವಹನ ನಡೆಸಿದರು. ಜಿಎಸ್‍ಟಿ ಗೇಮ್ ಚೇಂಜರ್ ಆಗಿದ್ದು ದೇಶದಲ್ಲಿ ಮತ್ತಷ್ಟು ಬಂಡವಾಳವನ್ನು ಹೂಡುವಂತೆ ಕೇಳಿಕೊಂಡಿದ್ದಾರೆ.

    ಆಪಲ್ ನ ಟಿಮ್ ಕುಕ್, ಗೂಗಲ್ ನ ಸುಂದರ್ ಪಿಚ್ಚೈ, ಅಮೇಜಾನ್ ಸ್ಥಾಪಕ ಜೆಫ್ ಬಿಜೋಸ್, ಅಡೋಬ್ ಶಂತನು ನಾರಾಯಣ ಸೇರಿದಂತೆ 21 ಕಂಪೆನಿಗಳ ಸಿಇಒಗಳ ಜೊತೆ ಮಾತನಾಡಿದ್ದಾರೆ.

    ಗೂಗಲ್ ಸಿಇಒ ಸುಂದರ್ ಪಿಚೈ ಪ್ರತಿಕ್ರಿಯಿಸಿ, ಬಹಳ ಚೆನ್ನಾಗಿ ಚರ್ಚೆ ನಡೆಯಿತು. ಈ ರೀತಿಯ ಚರ್ಚೆಗಳು ಹಲವು ದೇಶಗಳ ನಡುವೆ ನಡೆಯಬೇಕು. ಪ್ರಧಾನಿ ಮೋದಿ ಅವರ ಮಾತುಗಳನ್ನು ಕೇಳಿ ನಾವು ಸೇರಿದಂತೆ ಹಲವು ಮಂದಿ ಭಾರತದಲ್ಲಿ ಬಂಡವಾಳ ಹೂಡಲು ಉತ್ಸುಕರಾಗಿದ್ದೇವೆ ಎಂದು ತಿಳಿಸಿದರು.

     

  • ಕಲಬುರಗಿ: ಗರ್ಭಿಣಿಯರಲ್ಲಿ ಅಪೌಷ್ಟಿಕತೆಗೆ ಕಾರಣ ಪತ್ತೆ ಹಚ್ಚಿ ಜಿಲ್ಲಾ ಸಿಇಓ ಜಾರಿಗೆ ತಂದ್ರು ಈ ಮಾಸ್ಟರ್ ಪ್ಲಾನ್

    ಕಲಬುರಗಿ: ಗರ್ಭಿಣಿಯರಲ್ಲಿ ಅಪೌಷ್ಟಿಕತೆಗೆ ಕಾರಣ ಪತ್ತೆ ಹಚ್ಚಿ ಜಿಲ್ಲಾ ಸಿಇಓ ಜಾರಿಗೆ ತಂದ್ರು ಈ ಮಾಸ್ಟರ್ ಪ್ಲಾನ್

    ಕಲಬುರಗಿ: ಜಿಲ್ಲೆಯಲ್ಲಿ ಗರ್ಭಿಯರು ಅಪೌಷ್ಟಿಕತೆಯಿಂದ ಬಳಲ್ತಿದ್ದಾರೆ. ಇದಕ್ಕೆ ಕಾರಣ ಅವರು ಅನ್ನಾಹಾರ ಸೇವಿಸದೇ ಇರೋದು. ಅನ್ನಾಹಾರ ಸೇವಿಸದೆ ಇರೋದಕ್ಕೆ ಕಾರಣ ಟಾಯ್ಲೆಟ್ ಸಮಸ್ಯೆ.

    ಗರ್ಭಿಣಿಯರ ಅಪೌಷ್ಟಿಕತೆಗೆ ಶೌಚಾಲಯ ಇಲ್ಲದೇ ಇರೋದೇ ಕಾರಣ ಎಂಬ ವಿಚಿತ್ರ ಅಂಶವನ್ನ ಜಿಲ್ಲಾ ಪಂಚಾಯತ್ ಸಿಇಒ ಪತ್ತೆ ಹಚ್ಚಿದ್ದಾರೆ. ಹೆಚ್ಚಿಗೆ ನೀರು, ಅನ್ನ ತಿಂದ್ರೆ ಪದೇ ಪದೇ ಟಾಯ್ಲೆಟ್‍ಗೆ ಹೋಗಬೇಕೆಲ್ಲಾ ಅನ್ನೋ ಭೀತಿಯಿಂದ ಗರ್ಭಿಣಿಯರು ಊಟ ಸೇವಿಸ್ತಿಲ್ವಂತೆ. ಇದನ್ನ ಗಮನಿಸಿದ ಸಿಇಒ ಹೆಪ್ಸಿಬಾ ಈಗ ಟಾಯ್ಲೆಟ್ ವ್ಯವಸ್ಥೆ ಕಲ್ಪಿಸ್ತಿದ್ದಾರೆ. ಸ್ವಚ್ಛ ಭಾರತ ಮಿಷನ್ ಅಡಿ ಶೌಚಾಲಯ ನಿರ್ಮಿಸಲು ಮುಂದಾಗಿದ್ದಾರೆ. ಜೊತೆಗೆ ಉಚಿತ ಸೀಮಂತ ಮಾಡುವ ವಿನೂತನ ಯೋಜನೆ ಜಾರಿಗೆ ತಂದಿದ್ದಾರೆ.

    ಸರ್ಕಾರದ ವತಿಯಿಂದ ಸ್ವಚ್ಛ್ ಭಾರತ್ ಮಿಷನ್ ಕೆಳಗೆ ಏನೆಲ್ಲಾ ಮಾಡೋಕೆ ಅವಕಾಶವಿದ್ಯೋ ಅವುಗಳನ್ನು ಕಲ್ಪಿಸಿ, ಗ್ರಾಮಪಂಚಾಯ್ತಿ ಮುಖಾಂತರ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡಿ ಸತ್ಕಾರ ಮಾಡುವ ಕುರಿತು ನಿರ್ಧರಿಸಿರುವುದಾಗಿ ಕಲಬುರಗಿ ಜಿಲ್ಲಾ ಪಂಚಾಯತ್ ಸಿಇಓ ಹೆಪ್ಸಿಬಾ ರಾಣಿ ಹೇಳಿದ್ದಾರೆ.

    ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಗ್ರಾಮದಲ್ಲಿ ಕಳೆದ ತಿಂಗಳು ಈ ಯೋಜನೆಗೆ ಚಾಲನೆ ನೀಡಲಾಗಿದೆ. ಮೊದಲ ಹಂತವಾಗಿ ಅರ್ಜಿ ಸಲ್ಲಿಸಿರುವ 120ಕ್ಕು ಹೆಚ್ಚು ಗರ್ಭಿಣಿಯರ ಪೈಕಿ 80 ಶೌಚಾಲಯಗಳನ್ನ ನಿರ್ಮಿಸಿದ್ದಾರೆ. ಉಳಿದ ಟಾಯ್ಲೆಟ್‍ಗಳ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ.

    ಒಟ್ಟಿನಲ್ಲಿ ಗರ್ಭಿಣಿಯರ ಸಮಸ್ಯೆಯನ್ನ ಸೂಕ್ಷ್ಮವಾಗಿ ಅರಿತ ಹೆಪ್ಸಿಬಾ ಅವರ ಈ ಕಾರ್ಯ ಶ್ಲಾಘನಾರ್ಹವಾಗಿದೆ.

  • ಉದ್ಯಮಿಗೆ ಹಣಕ್ಕಾಗಿ ಬೇಡಿಕೆ ಇಟ್ಟ ಖಾಸಗಿ ವಾಹಿನಿಯ ಸಿಇಒ ಬಂಧನ

    ಉದ್ಯಮಿಗೆ ಹಣಕ್ಕಾಗಿ ಬೇಡಿಕೆ ಇಟ್ಟ ಖಾಸಗಿ ವಾಹಿನಿಯ ಸಿಇಒ ಬಂಧನ

    ಬೆಂಗಳೂರು: ಉದ್ಯಮಿಯೊಬ್ಬರಿಂದ ಹಣಕ್ಕಾಗಿ ಬೇಡಿಕೆಯಿಟ್ಟ ಖಾಸಗಿ ವಾಹಿನಿಯ ಸಿಇಒ ಲಕ್ಷ್ಮಿ ಪ್ರಸಾದ್ ವಾಜಪೇಯಿ ಎಂಬವರನ್ನು ಕೋರಮಂಗಲ ಪೊಲೀಸರು ಇಂದು ಬಂಧಿಸಿದ್ದಾರೆ. ಲಕ್ಷ್ಮಿ ಪ್ರಸಾದ್ ವಾಜಪೇಯಿಗೆ ಸಹಕಾರ ನೀಡಿದ ಮಿಥುನ್ ಎಂಬಾತನನ್ನೂ ಕೂಡ ಕಮರ್ಷಿಯಲ್ ಸ್ಟ್ರೀಟ್, ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

    ಸಿಕ್ಕಿಬಿದ್ದಿದ್ದು ಹೇಗೆ?: ಖಾಸಗಿ ವಾಹಿನಿಯಿಂದ ಬೆದರಿಕೆ ಇರುವ ಬಗ್ಗೆ ಉದ್ಯಮಿಯೊಬ್ಬರು ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನಲ್ಲಿ ಚಾನೆಲ್ ಸಿಇಒ ಲಕ್ಷ್ಮಿ ಪ್ರಸಾದ್ ವಾಜಪೇಯಿ 10 ಕೋಟಿ ರೂ. ಹಣಕ್ಕೆ ಬೇಡಿ ಇಟ್ಟಿದ್ದಾರೆ. ಹಣವನ್ನು ನೀಡದಿದ್ದರೆ ಚಾನೆಲ್‍ನಲ್ಲಿ ವರದಿ ಪ್ರಕಟ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೇ, ಕೆಲ ನಿಮಿಷಗಳ ಕಾಲ ಸುದ್ದಿ ಪ್ರಸಾರ ಮಾಡಿದ್ದರು. ಇದಾದ ಬಳಿಕ ಚಾನೆಲ್‍ನಿಂದ ಹಣಕ್ಕೆ ಡಿಮ್ಯಾಂಡ್ ಬಂದಿತ್ತು. ದೂರು ಸ್ವೀಕರಿಸಿದ ಪೊಲೀಸರು ವಾಹಿನಿ ಕಚೇರಿಯಲ್ಲೇ ಹಣ ಪಡೆಯುತ್ತಿದ್ದ ವೇಳೆ ದಾಳಿ ಮಾಡಿ ಲಕ್ಷ್ಮಿಪ್ರಸಾದ್ ಹಾಗೂ ಮಿಥುನ್ ಎಂಬವರನ್ನು ಬಂಧಿಸಿದ್ದಾರೆ.

    ಸಿಇಓ ವಿರುದ್ಧ ಮತ್ತಷ್ಟು ಪ್ರಕರಣ: ಇದೇ ಸಿಇಒ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. ಈ ಪ್ರಕರಣದಲ್ಲಿ ಉದ್ಯಮಿಯೊಬ್ಬರಿಂದ ಲಕ್ಷ್ಮಿಪ್ರಸಾದ್ ಅವರು 10 ಕೋಟಿ ನಗದು ಹಾಗೂ 30 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ನೀಡುವಂತೆ ಬೇಡಿಕೆಯಿಟ್ಟಿದ್ದರು. ಇದರಲ್ಲಿ ವಾಜಪೇಯಿ ಅವರು ನೀಡಿದ ವಿವಿಧ ಖಾತೆಗಳಿಗೆ ಒಟ್ಟಾರೆ 10 ಕೋಟಿ ರೂಪಾಯಿಯನ್ನು ಜಮೆ ಮಾಡಿದ್ದರು. ಒಟ್ಟಾರೆಯಾಗಿ ಈ ಉದ್ಯಮಿಗೆ 15 ಕೋಟಿ ನೀಡುವಂತೆ ಬೆದರಿಕೆ ಹಾಕಿದ್ದರು ಎಂದು ದೂರು ದಾಖಲಾಗಿತ್ತು. ಮಹಾಲಕ್ಷ್ಮಿಪುರಂ ಠಾಣೆಯಲ್ಲಿ ಇಂಥದ್ದೇ ಮತ್ತೊಂದು ದೂರು ದಾಖಲಾಗಿದ್ದು ಈ ಪ್ರಕರಣದಲ್ಲೂ ಲಕ್ಷ್ಮಿಪ್ರಸಾದ್ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು.

    ಬ್ಲ್ಯಾಕ್‍ಮೇಲ್ ಹೇಗೆ?: ಉದ್ಯಮಿಗಳನ್ನು ಕೇಂದ್ರವಾಗಿಟ್ಟುಕೊಂಡೇ ನಡೆಸುತ್ತಿದ್ದ ಕಾರ್ಯಾಚರಣೆಯಲ್ಲಿ ಆರಂಭದಲ್ಲಿ ಉದ್ಯಮಿಯ ಬಗ್ಗೆ ನೆಗೆಟಿವ್ ಸುದ್ದಿಗಳನ್ನು ಚಾನೆಲ್‍ನಲ್ಲಿ ಪ್ರಸಾರ ಮಾಡುತ್ತಿದ್ದರು. ಇದಾದ ಬಳಿಕ ಅದೇ ಉದ್ಯಮಿಗೆ ಕಾಲ್ ಮಾಡಿ ನಿಮ್ಮ ವಿರುದ್ಧ ನಮ್ಮ ಬಳಿ ಇನ್ನಷ್ಟು ಸಾಕ್ಷ್ಯಗಳಿವೆ. ನೀವು ನಮಗೆ ಹಣ ಕೊಡಿ ಇಲ್ಲದಿದ್ದರೆ ನಿಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು. ಸದ್ಯ ಡಿಸಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ ಬಂಧಿತರ ತನಿಖೆ ಮುಂದುವರೆದಿದೆ.

    ಇದೇ ಸಿಇಒ ಬಳಿ ಉತ್ತರಪ್ರದೇಶ ಮೂಲದ ನಾಲ್ವರು ಗನ್ ಮ್ಯಾನ್‍ಗಳಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಹೀಗಾಗಿ ಗನ್ ಮ್ಯಾನ್ ಸೆಕ್ಯೂರಿಟಿ ಪಡೆಯುವ ಲೈಸೆನ್ಸ್ ಇದೆಯಾ ಎಂದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಆಂಧ್ರ ಪ್ರದೇಶ ಮೂಲದ ಚಾನೆಲ್ ಮೂಲಕ ಬಂದಿರುವ ಸಿಇಒ ಲಕ್ಷ್ಮಿಪ್ರಸಾದ್ ಅಲ್ಲೂ ಇದೇ ರೀತಿ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಹೇಳಿದ್ದಾರೆ.