Tag: Centre government

  • ಕೇಂದ್ರ ಸರ್ಕಾರದಿಂದಲೇ ಚೀನಾ ವಸ್ತುಗಳ ಬಹಿಷ್ಕಾರ ಶುರು

    ಕೇಂದ್ರ ಸರ್ಕಾರದಿಂದಲೇ ಚೀನಾ ವಸ್ತುಗಳ ಬಹಿಷ್ಕಾರ ಶುರು

    – 4ಜಿ ಸೇವೆಗೆ ಚೀನಾದ ಉಪಕರಣ ಬಳಸದಂತೆ ಸೂಚನೆ

    ನವದೆಹಲಿ: 4ಜಿ ಸೇವೆಯ ನವೀಕರಣದಲ್ಲಿ ಚೀನಾದ ಉಪಕರಣಗಳನ್ನು ಬಳಸದಂತೆ ಕೇಂದ್ರ ಸರ್ಕಾರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‍ಎನ್‍ಎಲ್)ಗೆ ಸೂಚನೆ ನೀಡಿದೆ. ಈ ಹಿನ್ನೆಲೆ ಟೆಲಿಕಾಮ್ ಇಲಾಖೆ “ಚೀನಾ ವಸ್ತು ಬಹಿಷ್ಕಾರ”ದ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ರಾಷ್ಟ್ರೀಯ ಮಾದ್ಯಮಗಳು ವರದಿ ಮಾಡಿವೆ.

    ಟೆಲಿಕಾಂ ಕಂಪೆನಿಗಳಾದ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಪ್ರಸ್ತುತ ಚೀನಾ ಮೂಲದ ಹುವಾವೇ ಕಂಪನಿಯೊಂದಿಗೆ ಕೆಲಸ ಮಾಡುತ್ತಿವೆ. ಇತ್ತ ಬಿಎಸ್‍ಎನ್‍ಎಲ್‍ನೊಂದಿಗೆ ಝಡ್‍ಟಿಇ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಚೀನಾದ ಸಂಸ್ಥೆಗಳು ತಯಾರಿಸುವ ಸಲಕರಣೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡವಂತೆ ಭಾರತದಲ್ಲಿರುವ ಖಾಸಗಿ ಕಂಪನಿಗಳಿಗೆ ಸಲಹೆ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

    ಲಡಾಖ್‍ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷನೆ ಹಿನ್ನೆಲೆಯಲ್ಲಿ ಕೇಂದ್ರ ಮಧ್ಯೆ ಸರ್ಕಾರ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ. ಭಾರತ-ಚೀನಾದ ಸೈನಿಕರ ನಡುವೆ ಸೋಮವಾರ ರಾತ್ರಿ ಲಡಾಖ್‍ನ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ನಮ್ಮ ಸೇನೆಯ 20 ಯೋಧರು ಹುತಾತ್ಮರಾಗಿದ್ದಾರೆ. ಸುಮಾರು ಐದು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಚೀನಾದೊಂದಿಗಿನ ನಿಯಂತ್ರಣ ರೇಖೆಯಲ್ಲಿ ಸಾವುನೋವುಗಳು ವರದಿಯಾಗಿವೆ.

    ಚೀನಾದ ಆಕ್ರಮಣಕಾರಿ ನೀತಿಯ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಜೊತೆಗೆ ಚೀನಾದ ವಸ್ತುಗಳನ್ನು ಬಳಸದಂತೆ ಒತ್ತಾಯಿಸಲಾಗುತ್ತಿದೆ. ಕರ್ನಾಟಕ ಅಷ್ಟೇ ಅಲ್ಲದೆ ದೇಶದ ವಿವಿಧ ಮೂಲೆಯಲ್ಲಿ ಚೀನಾ ವಸ್ತು, ಸೇವೆಗಳ ಬಳಕೆ ನಿಷೇದಕ್ಕೆ ಕೂಗು ಕೇಳಿ ಬಂದಿದೆ.

  • ಚೀನಾದ ಕುತಂತ್ರ ಬುದ್ಧಿಗೆ ಫುಲ್‍ಸ್ಟಾಪ್ ಇಟ್ಟ ಭಾರತ

    ಚೀನಾದ ಕುತಂತ್ರ ಬುದ್ಧಿಗೆ ಫುಲ್‍ಸ್ಟಾಪ್ ಇಟ್ಟ ಭಾರತ

    – ಎಫ್‍ಡಿಐ ನೀತಿ ಪರಿಷ್ಕರಿಸಿದ ಕೇಂದ್ರ ಸರ್ಕಾರ
    – ಭಾರತದಲ್ಲಿ ಚೀನಾ ಹೂಡಿಕೆಯ ಬೆನ್ನಲ್ಲೇ ಪರಿಷ್ಕರಣೆ
    – ಕೇಂದ್ರದ ನಿರ್ಧಾರಕ್ಕೆ ರಾಹುಲ್ ಗಾಂಧಿ ಧನ್ಯವಾದ

    ನವದೆಹಲಿ: ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (ಪಿಬಿಒಸಿ) ಭಾರತದ ಎಚ್‍ಡಿಎಫ್‍ಸಿಯಲ್ಲಿ ತನ್ನ ಪಾಲನ್ನು ಹೆಚ್ಚಿಸಿದ್ದರಿಂದ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಆತಂಕ ಶುರುವಾಗಿತ್ತು. ಈ ಹಿನ್ನೆಲೆಯಲ್ಲಿ ಭಾರತವು ವಿದೇಶಿ ನೇರ ಹೂಡಿಕೆ (ಎಫ್‍ಡಿಐ) ನೀತಿಯನ್ನು ಪರಿಷ್ಕರಿಸಿದೆ. ಈ ಪರಿಷ್ಕೃತ ಎಫ್‍ಡಿಐ ನೀತಿಯ ಪ್ರಕಾರ ಚೀನಾದ ಹೂಡಿಕೆಗೆ ಈಗ ಕೇಂದ್ರ ಸರ್ಕಾರದಿಂದ ಅನುಮತಿ ಅಗತ್ಯವಾಗಿದೆ.

    ಹೆಮ್ಮಾರಿ ಕೊರೊನಾ ವೈರಸ್ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಜೊತೆಗೆ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಇದೇ ಅವಕಾಶವನ್ನು ಪಡೆದುಕೊಂಡು ಚೀನಾ ಭಾರತೀಯ ಕಂಪನಿಗಳಲ್ಲಿ ಹೆಚ್ಚಿನ ಷೇರು ಖರೀದಿಸಲು ಮುಂದಾಗುತ್ತಿದೆ. ಚೀನಾದ ಇಂತಹ ಕುಂತಂತ್ರ ಬುದ್ಧಿಯ ನಡೆಗೆ ಫುಲ್‍ಸ್ಟಾಪ್ ಹಾಕಲು ಕೇಂದ್ರ ಸರ್ಕಾರ ಪ್ರಮುಖ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: ಎಚ್‍ಡಿಎಫ್‍ಸಿ ಷೇರು ಖರೀದಿಸಿದ ಚೀನಾದ ಬ್ಯಾಂಕ್

    ”ನಿಷೇಧಿತ ಕ್ಷೇತ್ರಗಳು, ಚಟುವಟಿಕೆಗಳನ್ನು ಹೊರತುಪಡಿಸಿ ಎಫ್‍ಡಿಐ ನೀತಿಗೆ ಒಳಪಟ್ಟು ಅನಿವಾಸಿ ಕಂಪನಿ ಭಾರತದಲ್ಲಿ ಹೂಡಿಕೆ ಮಾಡಬಹುದು. ಆದರೆ ಭಾರತದ ಭೂ ಗಡಿಯನ್ನು ಹಂಚಿಕೊಳ್ಳುವ ದೇಶದ ಒಂದು ಕಂಪನಿ ಅಥವಾ ಯಾವುದೇ ದೇಶದ ಪ್ರಜೆ ಸರ್ಕಾರದ ಒಪ್ಪಿಗೆ ಪಡೆದೆ ಹೂಡಿಕೆ ಮಾಡಬೇಕು” ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಶನಿವಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ಇನ್ನು ಮುಂದೆ ಚೀನಾ ಹಾಗೂ ನೆರೆಹೊರೆಯ ದೇಶಗಳಿಗೆ ಭಾರತದಲ್ಲಿ ಯಾವುದೇ ರೀತಿಯ ಹೂಡಿಕೆಗೆ ಕೇಂದ್ರ ಸರ್ಕಾರದ ಪೂರ್ವಾನುಮತಿ ಕಡ್ಡಾಯವಾಗಲಿದೆ. ಭಾರತದೊಂದಿಗೆ ಗಡಿಯನ್ನು ಹಂಚಿ­ಕೊಂಡಿರುವ ಎಲ್ಲಾ ದೇಶಗಳು ದೇಶದಲ್ಲಿ ನೇರ ಅಥವಾ ಪರೋಕ್ಷ ಹೂಡಿಕೆಗೆ ಕೇಂದ್ರದ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ.

    ಚೀನಾದ ಕಂಪನಿಗಳು ಭಾರತದಲ್ಲಿ ಅನೇಕ ಸ್ಟಾರ್ಟಪ್‍ಗಳಲ್ಲಿ 400 ಕೋಟಿ ಡಾಲರ್‍ಗೂ ಹೆಚ್ಚು ಬಂಡವಾಳ ಹೂಡಿಕೆ ಮಾಡಿವೆ. ಮುಂಬರುವ ತಿಂಗಳುಗಳಲ್ಲಿ ಚೀನಾ ಹೂಡಿಕೆ ಮೇಲೆ ಪರಿಷ್ಕೃತ ನಿಯಮಗಳು ಪ್ರಭಾವ ಬೀರಲಿವೆ. ಇದರಿಂದಾಗಿ ಸ್ಪೇನ್, ಜರ್ಮನಿ, ಆಸ್ಪ್ರೇಲಿಯಾ, ಇಟಲಿ ಸೇರಿದಂತೆ ಅನೇಕ ದೇಶಗಳು ಎಫ್‍ಡಿಐ ನಿಯಮಗಳನ್ನು ಬಿಗಿಗೊಳಿಸಿವೆ.

    ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸ್ವಾಗತಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಹಿಂದೆ ನಾನು ನೀಡಿದ್ದ ಎಚ್ಚರಿಕೆಯನ್ನು ಕೇಂದ್ರ ಸರ್ಕಾರ ಪರಿಗಣಿಸಿದ್ದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಅಂದ್ರೆ ಏಪ್ರಿಲ್ 12ರಂದು ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ”ಕೊರೊನಾ ವೈರಸ್ ರೋಗ ಹರಡಿದ ನಂತರ ದೇಶದ ಆರ್ಥಿಕತೆ ದುರ್ಬಲವಾಗಿರುವು­ದರಿಂದ ಭಾರತೀಯ ಕಂಪನಿ­ಗಳನ್ನು ಖರೀದಿ­ಸಲು ವಿದೇಶಿ ಕಾರ್ಪೊ­ರೇಟ್ ಕಂಪನಿಗಳು ಯತ್ನಿಸಬಹುದು. ಇದನ್ನು ತಡೆಯಬೇಕು ಎಂದು ತಿಳಿಸಿದ್ದರು.

  • ಯುಎಇ 700 ಕೋಟಿ ರೂ. ನೆರವಿಗೆ ಕೇಂದ್ರ ನೀತಿ ಅಡ್ಡಿ?

    ಯುಎಇ 700 ಕೋಟಿ ರೂ. ನೆರವಿಗೆ ಕೇಂದ್ರ ನೀತಿ ಅಡ್ಡಿ?

    ನವದೆಹಲಿ: ಕೇರಳ ಸಂತ್ರಸ್ತರಿಗೆ ಯುಎಇ ಸರ್ಕಾರ ಘೋಷಿಸಿದ್ದ 700 ಕೋಟಿ ರೂ. ಆರ್ಥಿಕ ನೆರವು ಪಡೆಯಲು ಕೇಂದ್ರ ಸರ್ಕಾರದ ನೀತಿ ಅಡ್ಡಿಯಾಗಲಿದೆ ಎಂದು ವರದಿಯಾಗಿದೆ.

    ವಿದೇಶಗಳಿಂದ ಸಾಲ ರೂಪದಲ್ಲಿ ಮಾತ್ರವೇ ಭಾರತ ಹಣವನ್ನು ಪಡೆಯಲು ಸಾಧ್ಯ. ಹೊರತಾಗಿ ವಿದೇಶಗಳಿಂದ ಯಾವುದೇ ನೆರವು ಸ್ವೀಕರಿಸುವಂತಿಲ್ಲ ಎನ್ನುವ ನೀತಿಯನ್ನು ಭಾರತ ಸರ್ಕಾರ ಅಳವಡಿಸಿಕೊಂಡಿದೆ. ಹೀಗಾಗಿ ಈ ಆರ್ಥಿಕ ನೆರವು ಸಿಗುವುದಿಲ್ಲ ಎಂದು ಉನ್ನತ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಸುನಾಮಿಯ ನಂತರ ಭಾರತವು ವಿದೇಶದಿಂದ ನೆರವು ಸ್ವೀಕರಿಸುವುದನ್ನು ನಿಲ್ಲಿಸಿದೆ. ಉತ್ತರಾಖಂಡ್ ರಾಜ್ಯದಲ್ಲಿ ಜಲಪ್ರಳಯ ಉಂಟಾದಾಗ ವಿದೇಶಗಳಿಂದ ಪರಿಹಾರ ನಿಧಿ ಹರಿದುಬಂದಿತ್ತು. ಆದರೆ ಅಂದಿನ ವಿತ್ತ ಸಚಿವ ಪಿ.ಚಿದಂಬರಂ ವಿಶ್ವ ಬ್ಯಾಂಕಿನಿಂದ ಸಾಲ ಪಡೆದರೂ, ವಿದೇಶಗಳಿಂದ ಪರಿಹಾರ ನಿಧಿ ಪಡೆಯುವುದಿಲ್ಲ ಎಂದು ಹೇಳಿದ್ದರು. ಇದನ್ನು ಓದಿ: ಯುಎಇಯಿಂದ ಕೇರಳ ಸಂತ್ರಸ್ತರಿಗೆ 700 ಕೋಟಿ ರೂ. ಆರ್ಥಿಕ ನೆರವು

    ಯುಪಿಎ ಸರ್ಕಾರದ ಅವಧಿಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ವಿಶ್ವಸಂಸ್ಥೆ, ರಷ್ಯಾ, ಚೀನಾ ಸೇರಿದಂತೆ ಅನೇಕ ದೇಶಗಳಿಂದ ನೆರವು ಹರಿದು ಬಂದಿತ್ತು. ಆದರೆ ಇದ್ಯಾವುದನ್ನೂ ಅಂದಿನ ಸರ್ಕಾರ ಸ್ವೀಕರಿಸಿಲ್ಲ. ಇದು ಈಗ ಕೇರಳ ಸರ್ಕಾರದ ಮೇಲೆ ಪರಿಣಾಮ ಬೀರಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv