Tag: Central vista

  • ಸೆಂಟ್ರಲ್ ವಿಸ್ತಾ ಉದ್ಘಾಟನೆಯ ಸವಿನೆನಪಿಗೆ ವಿಶೇಷ ಅಂಚೆ ಚೀಟಿ, 75 ರೂ. ನಾಣ್ಯ ಬಿಡುಗಡೆ

    ಸೆಂಟ್ರಲ್ ವಿಸ್ತಾ ಉದ್ಘಾಟನೆಯ ಸವಿನೆನಪಿಗೆ ವಿಶೇಷ ಅಂಚೆ ಚೀಟಿ, 75 ರೂ. ನಾಣ್ಯ ಬಿಡುಗಡೆ

    ನವದೆಹಲಿ: ನೂತನ ಸಂಸತ್ (New Parliament) ಭವನದ ಉದ್ಘಾಟನೆಯ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಭಾನುವಾರ ವಿಶೇಷ ಅಂಚೆ ಚೀಟಿ (Postage Stamp) ಮತ್ತು 75 ರೂ. ನಾಣ್ಯವನ್ನು (Rs 75 Coin) ಬಿಡುಗಡೆ ಮಾಡಿದ್ದಾರೆ.

    ನಾಣ್ಯವು ವೃತ್ತಾಕಾರದಲ್ಲಿದ್ದು, 44 ಮಿ.ಮೀ. ವ್ಯಾಸವನ್ನು ಹೊಂದಿದೆ. 50% ಬೆಳ್ಳಿ, 40% ತಾಮ್ರ, 5% ನಿಕಲ್ ಮತ್ತು 5% ಸತುವನ್ನು ಬಳಸಿ ನಾಣ್ಯ ತಯಾರಿಸಲಾಗಿದೆ. ಅಲ್ಲದೆ ಇದು 35 ಗ್ರಾಂ. ತೂಕ ಹೊಂದಿದೆ. ಇದನ್ನೂ ಓದಿ: ಹೊಸ ಸಂಸತ್ ಭವನ ಉದ್ಘಾಟನೆ ಸ್ಮರಣಾರ್ಥ 75 ರೂ. ವಿಶೇಷ ನಾಣ್ಯ ಬಿಡುಗಡೆ

    ನಾಣ್ಯದ ಒಂದು ಬದಿಯಲ್ಲಿ ಅಶೋಕ ಸ್ತಂಭದ ಸಿಂಹದ ಮುದ್ರೆಯ ಚಿತ್ರವನ್ನು ಹೊಂದಿದೆ. ಅದರ ಸುತ್ತಲೂ ದೇವನಾಗರಿ ಲಿಪಿಯಲ್ಲಿ `ಭಾರತ್’ ಮತ್ತು ಇಂಗ್ಲಿಷ್‍ನಲ್ಲಿ `ಇಂಡಿಯಾ’ ಎಂದು ಬರೆಯಲಾಗಿದೆ. ಸಿಂಹದ ಮುದ್ರೆಯ ಕೆಳಗೆ ಅಂತಾರಾಷ್ಟ್ರೀಯ ಅಂಕಿಗಳಲ್ಲಿ 75 ಎಂದು ಮುದ್ರಿಸಲಾಗಿದೆ. ಅಲ್ಲದೆ ರೂ. ಚಿಹ್ನೆಯನ್ನು ಸಹ ಇರಿಸಲಾಗಿದೆ.

    ನಾಣ್ಯದ ಇನ್ನೊಂದು ಬದಿಯಲ್ಲಿ ಪಾರ್ಲಿಮೆಂಟ್‍ನ ಚಿತ್ರ ಮತ್ತು 2023ರ ಇಸವಿಯ ಉಲ್ಲೇಖ ಮಾಡಲಾಗಿದೆ. ಈ ವಿಶೇಷ ನಾಣ್ಯವನ್ನು ಸಂಸತ್ ಭವನದ ಉದ್ಘಾಟನೆಯ ಸ್ಮರಣಾರ್ಥವಾಗಿ ಬಿಡುಗಡೆಗೊಳಿಸುತ್ತಿರುವುದು ಮಾತ್ರವಲ್ಲದೇ, ಇದು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವ ಭಾರತಕ್ಕೆ ಗೌರವದ ಸಂಕೇತವೂ ಆಗಿರಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಇದನ್ನೂ ಓದಿ: ನೂತನ ಸಂಸತ್ ಭವನವನ್ನು ಶವಪೆಟ್ಟಿಗೆಗೆ ಹೋಲಿಸಿದ ಆರ್‌ಜೆಡಿ – ಕಾನೂನು ಸಮರಕ್ಕೆ ಮುಂದಾದ ಬಿಜೆಪಿ

  • ಮೋದಿ ಕನಸಿನ ಸೆಂಟ್ರಲ್ ವಿಸ್ಟಾ ಯೋಜನೆಯಿಂದ ಉಳಿತಾಯವಾಗಲಿದೆ 1,000 ಕೋಟಿ ವಾರ್ಷಿಕ ಬಾಡಿಗೆ

    ಮೋದಿ ಕನಸಿನ ಸೆಂಟ್ರಲ್ ವಿಸ್ಟಾ ಯೋಜನೆಯಿಂದ ಉಳಿತಾಯವಾಗಲಿದೆ 1,000 ಕೋಟಿ ವಾರ್ಷಿಕ ಬಾಡಿಗೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದ ನೂತನ ಸಂಸತ್ ಭವನ (New Parliament Building) ಭಾನುವಾರ ಉದ್ಘಾಟನೆಗೊಳ್ಳಲು ಸಜ್ಜಾಗಿದೆ. ಮೋದಿ ಅವರ ಮಹಾತ್ವಾಕಾಂಕ್ಷೆಯ 20,000 ಕೋಟಿ ರೂ. ವೆಚ್ಚದ ಸೆಂಟ್ರಲ್ ವಿಸ್ಟಾ (Central Vista) ಯೋಜನೆಯ ಭಾಗವಾಗಿ ನೂತನ ಸಂಸತ್ ನಿರ್ಮಾಣಗೊಂಡಿದೆ.

    ಪರಿಸರವಾದಿಗಳು, ಪ್ರತಿ ಪಕ್ಷಗಳು ಸೇರಿದಂತೆ ಅನೇಕ ಕಡೆಗಳಿಂದ ಸೆಂಟ್ರಲ್ ವಿಸ್ಟಾದ ಯೋಜನೆಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಆದರೆ ಈ ಸೆಂಟ್ರಲ್ ವಿಸ್ಟಾ ಯೋಜನೆ ವಾರ್ಷಿಕವಾಗಿ ಸರ್ಕಾರದ 1,000 ಕೋಟಿ ರೂ.ಯಷ್ಟು ಬಾಡಿಗೆಯನ್ನು ಉಳಿಸುತ್ತದೆ ಎಂದು ಈ ಹಿಂದೆಯೇ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದರು.

    ಏನಿದು ಸೆಂಟ್ರಲ್ ವಿಸ್ಟಾ ಯೋಜನೆ?
    ಕೇಂದ್ರ ದೆಹಲಿಯಲ್ಲಿನ ವಿವಿಧ ಕಟ್ಟಡಗಳಲ್ಲಿ ನೆಲೆಸಿರುವ ಅನೇಕ ಕಚೇರಿಗಳನ್ನು ಸೆಂಟ್ರಲ್ ವಿಸ್ಟಾದಲ್ಲಿ ಹೊಸದಾಗಿ ನಿರ್ಮಾಣವಾಗಲಿರುವ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಕೈಗೆತ್ತಿಕೊಂಡ ಯೋಜನೆ ಇದಾಗಿದೆ.

    ಕೇಂದ್ರ ಸರ್ಕಾರದ ಹಲವಾರು ಕಚೇರಿಗಳು ವಿವಿಧ ಸ್ಥಳಗಳಲ್ಲಿ ಚದುರಿ ಹೋಗಿವೆ. ಈ ಕಚೇರಿಗಳಲ್ಲಿ ಹಲವು ಹೆಚ್ಚಿನ ಮೊತ್ತದ ಬಾಡಿಗೆ ಕಟ್ಟಡಗಳಲ್ಲಿವೆ. ಸೆಂಟ್ರಲ್ ವಿಸ್ಟಾ ಯೋಜನೆ ಸಂಪೂರ್ಣಗೊಂಡ ಬಳಿಕ ಈ ಎಲ್ಲಾ ಕಚೇರಿಗಳನ್ನು ಒಂದೇ ಸ್ಥಳಕ್ಕೆ ವರ್ಗಾಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂಲಕ ಸರ್ಕಾರದಿಂದ ವಾರ್ಷಿಕವಾಗಿ ಖರ್ಚಾಗುವ ಬರೋಬ್ಬರಿ 1,000 ಕೋಟಿ ರೂ. ಮೊತ್ತದ ಬಾಡಿಗೆಯನ್ನು ಉಳಿಸಬಹುದು ಎಂದು ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: 2 ವರ್ಷ ಕಾಲ ಹುಡುಕಾಟ – ಇತಿಹಾಸದಿಂದ ಮರೆಮಾಚಲಾಗಿದ್ದ ಸೆಂಗೋಲ್ ಬೆಳಕಿಗೆ ಬಂದಿದ್ದು ಹೇಗೆ?

    ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯಲ್ಲಿ ಹೊಸ ಸಂಸತ್ ಭವನ ನಿರ್ಮಾಣ, ಸಂಸತ್ತಿನ ಸದಸ್ಯರ ಕಚೇರಿಗಳು, ಸೆಂಟ್ರಲ್ ವಿಸ್ಟಾ ಅವೆನ್ಯೂವಿನ (ರಾಜಪಥ) ಹೊಸ ಮಾದರಿ, ಉಪರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳಿಗೆ ಹೊಸ ನಿವಾಸಗಳ ನಿರ್ಮಾಣಗಳು ಒಳಗೊಂಡಿವೆ. ಇದಕ್ಕಾಗಿ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್‌ವರೆಗಿನ ರಾಜಪಥದಲ್ಲಿರುವ ಎಲ್ಲಾ 3.5 ಕಿ.ಮೀ ವರೆಗಿನ ಕಟ್ಟಡಗಳನ್ನು ನೆಲಸಮಗೊಳಿಸಲು ನಿರ್ಧರಿಸಲಾಗಿತ್ತು.

    ಸೆಂಟ್ರಲ್ ವಿಸ್ಟಾ ಯೋಜನೆಯ ಒಟ್ಟಾರೆ ವೆಚ್ಚ 20,000 ಕೋಟಿ ರೂ. ಆಗಿದೆ. ಈ ಯೋಜನೆ 2026ರ ವೇಳೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದನ್ನೂ ಓದಿ: ಹೊಸ ಸಂಸತ್‌ನಲ್ಲಿ `ಸೆಂಗೋಲ್’ ಸಮರ – ಅಧಿಕಾರ ಹಸ್ತಾಂತರದ ರಾಜದಂಡಕ್ಕೆ ಸಾಕ್ಷ್ಯವೇ ಇಲ್ಲ ಅಂತಿದೆ ಕಾಂಗ್ರೆಸ್

  • ಸೆಂಟ್ರಲ್ ವಿಸ್ತಾಗೆ ಹೈಕೋರ್ಟ್ ಅನುಮತಿ – ಅರ್ಜಿದಾರರಿಗೆ 1 ಲಕ್ಷ ದಂಡ

    ಸೆಂಟ್ರಲ್ ವಿಸ್ತಾಗೆ ಹೈಕೋರ್ಟ್ ಅನುಮತಿ – ಅರ್ಜಿದಾರರಿಗೆ 1 ಲಕ್ಷ ದಂಡ

    ನವದೆಹಲಿ: ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ನೂತನ ಸಂಸತ್ ಭವನ ಸೆಂಟ್ರಲ್ ವಿಸ್ತಾ ನಿರ್ಮಾಣ ಕಾಮಗಾರಿ ಮುಂದುವರಿಸಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ.

    ಕೋವಿಡ್ 19 ಸಾಂಕ್ರಾಮಿಕ ರೋಗ ಇರುವ ಕಾರಣ ಸೆಂಟ್ರಲ್ ವಿಸ್ತಾ ಯೋಜನೆಯನ್ನು ಕೈಬಿಡಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್ ಅರ್ಜಿದಾರರಿಗೆ 1 ಲಕ್ಷ ರೂ. ದಂಡ ವಿಧಿಸಿತು.

    ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರನ್ನೊಳಗೊಂಡ ಪೀಠ, ಇದು ಪ್ರಮುಖ ಮತ್ತು ಅಗತ್ಯ ರಾಷ್ಟ್ರೀಯ ಯೋಜನೆಯಾಗಿದೆ. ಇದರಲ್ಲಿ ನಿಜವಾದ ಸಾರ್ವಜನಿಕ ಹಿತಾಸಕ್ತಿಯಿಲ್ಲ. ಇದೊಂದು ಪ್ರಚೋದಿತ ಅರ್ಜಿಯಾಗಿದೆ ಎಂದು ಅಭಿಪ್ರಾಯಪಟ್ಟಿದೆ.

    ಈಗಾಗಲೇ ಸುಪ್ರೀಂಕೋರ್ಟ್ ಯೋಜನೆಗೆ ಅನುಮತಿ ನೀಡಿದೆ. ಶಪೂರ್ಜಿ ಪಲ್ಲೊಂಜಿ ಗ್ರೂಪ್‍ಗೆ ನೀಡಲಾದ ಒಪ್ಪಂದದ ಪ್ರಕಾರ ಕಾಮಗಾರಿ ಪೂರ್ಣಗೊಳ್ಳಬೇಕಿದೆ ಮತ್ತು ಅದನ್ನು ಮುಂದುವರಿಸಲು ಅವಕಾಶ ನೀಡಬೇಕು ಎಂದು ಕೋರ್ಟ್ ಹೇಳಿದೆ.

    ಈ ಯೋಜನೆಗೆ ನೀಡಿರುವ ಅನುಮತಿಗಳಲ್ಲಿ ಯಾವುದೇ ದೋಷವಿಲ್ಲ. ಹಾಗಾಗಿ ಸರ್ಕಾರ ಸೆಂಟ್ರಲ್ ವಿಸ್ತಾ ಕಾಮಗಾರಿಯನ್ನ ಮುಂದುವರಿಸಬಹುದು ಎಂದು ಸುಪ್ರೀಂ ಕೋರ್ಟ್ ಈ ವರ್ಷದ ಜನವರಿಯಲ್ಲಿ 2:1 ಬಹುಮತದ ತೀರ್ಪು ಪ್ರಕಟಿಸಿತ್ತು. ಇದನ್ನೂ ಓದಿ: ನರೇಂದ್ರ ಮೋದಿ ಸ್ಟೇಡಿಯಂ ಪಿಚ್ ತುದಿಗೆ ಅದಾನಿ, ರಿಲಯನ್ಸ್ ಎಂಡ್ ಹೆಸರು ಬಂದಿದ್ದು ಹೇಗೆ?

    ಡಿಸೆಂಬರ್ 10ರಂದು ಸೆಂಟ್ರಲ್ ವಿಸ್ತಾ ಭೂಮಿ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿ  ನೆರವೇರಿಸಿದ್ದರು. ಈಗಿರುವ ಸಂಸತ್ ಭವನವನ್ನು ನಿರ್ಮಿಸಿದ್ದು ಬ್ರಿಟೀಷರು. 1921ರಲ್ಲಿ ಭೂಮಿಪೂಜೆ ನೆರವೇರಿಸಿ, 1927ಕ್ಕೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗಿತ್ತು. ಆಗ ಇದಕ್ಕೆ 83 ಲಕ್ಷ ರೂಪಾಯಿ ವೆಚ್ಚ ಆಗಿತ್ತು. ಇನ್ನು ಹೊಸ ಸಂಸತ್ ಭವನ ಸುಮಾರು 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ವೇಳಗೆ ಕಾಮಗಾರಿ ಅಂತ್ಯಗೊಳಿಸುವ ಗುರಿಯನ್ನ ಹೊಂದಲಾಗಿದೆ.

     

    ಸೆಂಟ್ರಲ್ ವಿಸ್ತಾ ವಿಶೇಷತೆ?
    64,500 ಚದರ ಮೀಟರ್ ವಿಸ್ತೀರ್ಣದಲ್ಲಿ ತ್ರಿಭುಜಾಕೃತಿಯ ಸಂಸತ್ ಭವನ ಇರಲಿದ್ದು, 50 ಅಡಿ ಎತ್ತರ, ನಾಲ್ಕು ಅಂತಸ್ತು, ಆರು ಪ್ರವೇಶ ದ್ವಾರ ಹೊಂದಿರಲಿದೆ. ಸೆಂಟ್ರಲ್ ವಿಸ್ತಾದಲ್ಲಿ 1224 ಆಸನ ವ್ಯವಸ್ಥೆ ಇರಲಿದೆ. ಇದರಲ್ಲಿ ಲೋಕಸಭೆಯಲ್ಲಿ 888 ಮತ್ತು ರಾಜ್ಯಸಭೆಯಲ್ಲಿ 384 ಆಸನಗಳಿರಲಿವೆ. ಲೋಕಸಭೆ ಮೇಲ್ಭಾಗ ಗರಿಬಿಚ್ಚಿದ ನವಿಲಿನ ಆಕೃತಿ ಮತ್ತು ರಾಜ್ಯಸಭೆಯ ಮೇಲ್ಭಾಗದಲ್ಲಿ ಅರಳಿದ ಕಮಲ ಆಕೃತಿ ಇರಲಿದೆ.

  • ನೂತನ ಸಂಸತ್ ಭವನ ನಿರ್ಮಾಣಕ್ಕೆ ಸುಪ್ರೀಂ ಹಸಿರು ನಿಶಾನೆ

    ನೂತನ ಸಂಸತ್ ಭವನ ನಿರ್ಮಾಣಕ್ಕೆ ಸುಪ್ರೀಂ ಹಸಿರು ನಿಶಾನೆ

    ನವದೆಹಲಿ: ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ನೂತನ ಸಂಸತ್ ಭವನ ಸೆಂಟ್ರಲ್ ವಿಸ್ತಾ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಮಂಗಳವಾರ ಸುಪ್ರೀಂಕೋರ್ಟ್‍ನ ತ್ರಿಸದಸ್ಯ ಪೀಠ ತನ್ನ ಆದೇಶವನ್ನ ನೀಡಿದ್ದು, ಈ ಯೋಜನೆಗೆ ನೀಡಿರುವ ಅನುಮತಿಗಳಲ್ಲಿ ಯಾವುದೇ ದೋಷವಿಲ್ಲ. ಹಾಗಾಗಿ ಸರ್ಕಾರ ಸೆಂಟ್ರಲ್ ವಿಸ್ತಾ ಕಾಮಗಾರಿಯನ್ನ ಮುಂದುವರಿಸಬಹುದು ಎಂದು ನ್ಯಾಯಾಲಯ 2:1 ಬಹುಮತದ ತೀರ್ಪು ಪ್ರಕಟಿಸಿದೆ.

    ಸೆಂಟ್ರಲ್ ವಿಸ್ತಾ ನಿರ್ಮಾಣಕ್ಕೆ ತಡೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಯೋಜನೆಗೆ ನೀಡಲಾಗಿರುವ ಎನ್‍ಓಸಿಗಳು ದೋಷಪೂರಿತವಾಗಿದೆ. ಪರಿಸರ ಸಚಿವಾಲಯದ ಅನುಮತಿ ದೋಷಪೂರಿತವಾಗಿದೆ ಸರಿಯಾಗಿಲ್ಲ. ಕಟ್ಟಡ ನಿರ್ಮಿಸಲು ಬಳಸಲಾಗುವ ಜಮೀನು ಮತ್ತು ಅಂದಾಜು ಮೌಲ್ಯದ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ. ಸಲಹೆಗಾರರನ್ನ ಆಯ್ಕೆ ಮಾಡುವಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು.

    ನ್ಯಾಯಾಧೀಶರಾದ ಎಎಂ ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಮತ್ತು ಸಂಜೀವ್ ಖನ್ನಾ ಅವರ ತ್ರಿಸದಸ್ಯ ಪೀಠ ಈ ಅರ್ಜಿಯ ವಿಚಾರಣೆ ನಡೆಸಿ ತೀರ್ಪನ್ನ ಕಾಯ್ದಿರಿಸಿತ್ತು.  ಡಿಸೆಂಬರ್ 10ರಂದು ಸೆಂಟ್ರಲ್ ವಿಸ್ತಾ ಭೂಮಿ ಪೂಜೆಯನ್ನು ಪ್ರಧಾನಿ  ನರೇಂದ್ರ ಮೋದಿ  ನೆರವೇರಿಸಿದ್ದರು.

    ಈಗಿರುವ ಸಂಸತ್ ಭವನವನ್ನು ನಿರ್ಮಿಸಿದ್ದು ಬ್ರಿಟೀಷರು. 1921ರಲ್ಲಿ ಭೂಮಿಪೂಜೆ ನೆರವೇರಿಸಿ, 1927ಕ್ಕೆ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗಿತ್ತು. ಆಗ ಇದಕ್ಕೆ 83 ಲಕ್ಷ ರೂಪಾಯಿ ವೆಚ್ಚ ಆಗಿತ್ತು. ಇನ್ನು ಹೊಸ ಸಂಸತ್ ಭವನ ಸುಮಾರು 20 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ವೇಳಗೆ ಕಾಮಗಾರಿ ಅಂತ್ಯಗೊಳಿಸುವ ಗುರಿಯನ್ನ ಹೊಂದಲಾಗಿದೆ.

    ಸೆಂಟ್ರಲ್ ವಿಸ್ತಾ ವಿಶೇಷತೆ?: 64,500 ಚದರ ಮೀಟರ್ ವಿಸ್ತೀರ್ಣದಲ್ಲಿ ತ್ರಿಭುಜಾಕೃತಿಯ ಸಂಸತ್ ಭವನ ಇರಲಿದ್ದು, 50 ಅಡಿ ಎತ್ತರ, ನಾಲ್ಕು ಅಂತಸ್ತು, ಆರು ಪ್ರವೇಶ ದ್ವಾರ ಹೊಂದಿರಲಿದೆ. ಸೆಂಟ್ರಲ್ ವಿಸ್ತಾದಲ್ಲಿ 1224 ಆಸನ ವ್ಯವಸ್ಥೆ ಇರಲಿದೆ. ಇದರಲ್ಲಿ ಲೋಕಸಭೆಯಲ್ಲಿ 888 ಮತ್ತು ರಾಜ್ಯಸಭೆಯಲ್ಲಿ 384 ಆಸನಗಳಿರಲಿವೆ. ಲೋಕಸಭೆ ಮೇಲ್ಭಾಗ ಗರಿಬಿಚ್ಚಿದ ನವಿಲಿನ ಆಕೃತಿ ಮತ್ತು ರಾಜ್ಯಸಭೆಯ ಮೇಲ್ಭಾಗದಲ್ಲಿ ಅರಳಿದ ಕಮಲ ಆಕೃತಿ ಇರಲಿದೆ.