Tag: Central Team

  • ವೀಕ್ಷಣೆಗೆ ಬಂದ ಕೇಂದ್ರ ತಂಡಕ್ಕೆ ನೆರೆ ಬಂದಾಗಿನ ಪರಿಸ್ಥಿತಿಯ ವೀಡಿಯೋ ತೋರಿಸಿದ ರೈತ

    ವೀಕ್ಷಣೆಗೆ ಬಂದ ಕೇಂದ್ರ ತಂಡಕ್ಕೆ ನೆರೆ ಬಂದಾಗಿನ ಪರಿಸ್ಥಿತಿಯ ವೀಡಿಯೋ ತೋರಿಸಿದ ರೈತ

    ಹಾವೇರಿ: ಜಿಲ್ಲೆಯಲ್ಲಿ ನೆರೆಯಿಂದ ಹಾನಿಗೆ ಒಳಗಾದ ಪ್ರದೇಶಗಳಿಗೆ ಕೇಂದ್ರ ನೆರೆ ಅಧ್ಯಯನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು.

    ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ, ಮುನವಳ್ಳಿ ಗ್ರಾಮದ ರೈತರ ಜಮೀನಿಗೆ ಭೇಟಿ ನೀಡಿ ಜಲಾವೃತಗೊಂಡಿದ್ದ ಮೆಕ್ಕೆಜೋಳ, ಕಬ್ಬು ಹಾಗೂ ಹತ್ತಿಯನ್ನ ಪರಿಶೀಲನೆ ನಡೆಸಿದರು. ಕಳೆದ ಮೂರು ವರ್ಷಗಳಿಂದ ಮಳೆ ಬಂದರೆ ಸಾಕು ಕೆರೆ ಹಾಗೂ ಹಳ್ಳದ ನೀರು ಬಂದು ಬೆಳೆ ಸಂಪೂರ್ಣ ಹಾನಿಯಾಗಿತ್ತದೆ ಎಂದು ರೈತರು ಇದೇ ವೇಳೆ ಹೇಳಿದರು. ಇದನ್ನೂ ಓದಿ: ಗಣೇಶೋತ್ಸವಕ್ಕೆ 5 ದಿನ ಅವಕಾಶ ಕೊಟ್ಟ ಸರ್ಕಾರ

    ಅಧಿಕಾರಿಗಳಿಗೆ ನೆರೆ ಬಂದಾಗಿನ ಪರಿಸ್ಥಿತಿಯ ವೀಡಿಯೋವನ್ನು ಸಹ ತೋರಿಸಿದರು. ಕೇಂದ್ರ ನೆರೆ ಅಧ್ಯಯನ ತಂಡದ ಅಧಿಕಾರಿಗಳು, ನಾಗನೂರು, ಕೂಡಲ, ವರದಹಳ್ಳಿ, ಮಂಟಗಣಿ ಸೇರಿದಂತೆ ಹಲವು ರಸ್ತೆ, ಬೆಳೆಯ ಹಾನಿ ಸಮೀಕ್ಷೆ ನೀಡೆಸಿದರು. ಹೆದ್ದಾರಿ ರಸ್ತೆ ಸಾರಿಗೆ ಮಂತ್ರಾಲಯದ ಅಧಿಕಾರಿ ಎಸ್.ಪಿ.ವಿಜಯಕುಮಾರ ಮತ್ತು ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಅಧಿಕಾರಿ ಕೈಲಾಸ ಸಂಕ್ಲಾ ನೇತೃತ್ವದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳು ಸಾಥ್ ನೀಡಿದರು.

  • ಬೆಳಗಾವಿಯಲ್ಲಿ ನೆರೆಪೀಡಿತ ಪ್ರದೇಶ ವೀಕ್ಷಣೆಗೆ ಕೇಂದ್ರ ತಂಡ ಆಗಮನ

    ಬೆಳಗಾವಿಯಲ್ಲಿ ನೆರೆಪೀಡಿತ ಪ್ರದೇಶ ವೀಕ್ಷಣೆಗೆ ಕೇಂದ್ರ ತಂಡ ಆಗಮನ

    ಬೆಳಗಾವಿ: ಈ ಬಾರಿ ಸಹ ಮಳೆ ಮತ್ತು ಪ್ರವಾಹದಿಂದ ಜಿಲ್ಲೆಯಲ್ಲಿ ಅಪಾರ ಹಾನಿ ಸಂಭವಿಸಿದೆ. ಈ ಹಿನ್ನೆಲೆ ಕೇಂದ್ರ ನೆರೆ ಅಧ್ಯಯನ ತಂಡ ಇಂದು ಜಿಲ್ಲೆಗೆ ಆಗಮಿಸಿದ್ದು, ಪ್ರವಾಹದಿಂದ ಹಾನಿಯಾದ ಸ್ಥಳಕ್ಕೆ ಭೇಟಿ ನೀಡಲಿದೆ.

    ಇಂದು ಮತ್ತು ನಾಳೆ ಜಿಲ್ಲೆಯ ನೆರೆಪೀಡಿತ ಪ್ರದೇಶಗಳಿಗೆ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಲಿದೆ. ಇಂದು ಖಾನಾಪುರ, ಬೆಳಗಾವಿ, ಹುಕ್ಕೇರಿ, ಗೋಕಾಕ ತಾಲೂಕಿಗೆ ಭೇಟಿ ನೀಡಲಿದ್ದು, ನಾಳೆ ಅಥಣಿ, ಕಾಗವಾಡ, ಚಿಕ್ಕೋಡಿ, ನಿಪ್ಪಾಣಿ ತಾಲೂಕುಗಳಲ್ಲಿ ಸಂಚರಿಸಲಿದೆ. ಇದನ್ನೂ ಓದಿ: ಸಾರಿಗೆ ಸಚಿವರ ಜಿಲ್ಲೆಯಲ್ಲೇ ಇಲ್ಲ ಸಿಟಿ ಬಸ್- ವಿದ್ಯಾರ್ಥಿಗಳು, ಕಾರ್ಮಿಕರ ಪರದಾಟ

    ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ಕೃಷ್ಣಾ ಸೇರಿ ಸಪ್ತ ನದಿಗಳ ಪ್ರವಾಹದಿಂದ ಆದ ಹಾನಿಯ ಪರಿಶೀಲನೆಯನ್ನು ತಂಡ ನಡೆಸಲಿದೆ. ಸೇತುವೆಗಳು, ಬೆಳೆ, ಶಾಲೆ, ಮನೆಗಳ ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ, ಅಂಕಿಅಂಶಗಳನ್ನು ಕಲೆಹಾಕಲಾಗುತ್ತಿದೆ.

  • ಕೇಂದ್ರ ಅಧ್ಯಯನ ತಂಡ ಭೇಟಿ – ಮಾರ್ಗಸೂಚಿ ಬದಲಿಸಿ ಹೆಚ್ಚುವರಿ ಅನುದಾನಕ್ಕೆ ಸಿಎಂ ಮನವಿ

    ಕೇಂದ್ರ ಅಧ್ಯಯನ ತಂಡ ಭೇಟಿ – ಮಾರ್ಗಸೂಚಿ ಬದಲಿಸಿ ಹೆಚ್ಚುವರಿ ಅನುದಾನಕ್ಕೆ ಸಿಎಂ ಮನವಿ

    ಬೆಂಗಳೂರು: ನಾಲ್ಕು ವರ್ಷದಿಂದ ಪ್ರವಾಹ, ಭೂಕುಸಿತದ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಎನ್.ಡಿ.ಆರ್.ಎಫ್ ಪರಿಹಾರ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿ, ಹೆಚ್ಚುವರಿ ಪರಿಹಾರ ಒದಗಿಸಲು ಶಿಫಾರಸು ಮಾಡುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕೇಂದ್ರ ತಂಡಕ್ಕೆ ಮನವಿ ಮಾಡಿದರು.

    ಕೇಂದ್ರ ಗೃಹ ಸಚಿವಾಲಯದ ಸುಶೀಲ್ ಪಾಲ್ ನೇತೃತ್ವದ ಕೇಂದ್ರ ಅಧ್ಯಯನ ತಂಡ ಇಂದು ಮುಖ್ಯಮಂತ್ರಿಯವರನ್ನು ಭೇಟಿಯಾಗಿ ರಾಜ್ಯದಲ್ಲಿ ಪ್ರವಾಹದಿಂದ ಸಂಭವಿಸಿದ ಹಾನಿಯ ಕುರಿತು ಚರ್ಚೆ ನಡೆಸಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಮಿತ್ ಶಾ ಅವರಿಗೆ ಕೇಂದ್ರ ತಂಡ ಕಳುಹಿಸಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದ ಮುಖ್ಯಮಂತ್ರಿಗಳು, ರಕ್ಷಣೆ ಮತ್ತು ತುರ್ತು ಪರಿಹಾರ ಒದಗಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಆದರೆ ಜನರ ಪುನರ್ವಸತಿಗೆ ಹೆಚ್ಚಿನ ನೆರವಿನ ಅಗತ್ಯವಿದೆ ಎಂದು ನುಡಿದರು.

    ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದ ಕೂಡಲೇ ನೂರು ಕೋಟಿ ರೂ. ಬಿಡುಗಡೆ ಮಾಡಿದ್ದು, ಮೂರು ದಿನಗಳೊಳಗೆ ಬೆಳಗಾವಿ ಉತ್ತರ ಕನ್ನಡ ಜಿಲ್ಲೆಗಳಿಗೆ 500 ಕೋಟಿ ರೂ. ಒದಗಿಸಲಾಗಿದೆ. ರಾಜ್ಯದ ವಾಸ್ತವಾಂಶಗಳನ್ನು ವಸ್ತುನಿಷ್ಠವಾಗಿ ಕೇಂದ್ರ ತಂಡದ ಮುಂದಿಡಲಾಗಿದೆ. ಇಂದು ಕ್ಷಣ ಕ್ಷಣದ ಮಾಹಿತಿ ಲಭ್ಯವಾಗುವ ಕಾರಣ, ಕೇಂದ್ರಕ್ಕೂ ಮಾಹಿತಿ ಲಭ್ಯವಿದೆ. ಕಳೆದ ನಾಲ್ಕು ವರ್ಷಗಳಿಂದ ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಪ್ರತಿವರ್ಷ ಕುಟುಂಬಗಳ ಸ್ಥಳಾಂತರ, ಮನೆ ಕಳೆದುಕೊಳ್ಳುವ ಪರಿಸ್ಥಿತಿ ಹೃದಯ ವಿದ್ರಾವಕವಾಗಿದೆ. ಇದನ್ನೂ ಓದಿ: ವಿದ್ಯುತ್ ಬಿಲ್‍ನಲ್ಲಿ ಅಕ್ರಮ, ಮೂವರ ಅಮಾನತು: ಸುನಿಲ್ ಕುಮಾರ್

    BASAVARAJ BOMMAI

    ರಸ್ತೆ ಮತ್ತಿತರ ಮೂಲಸೌಕರ್ಯಗಳಿಗೆ ಭಾರಿ ಹಾನಿಯಾಗಿದೆ. ಕಳೆದ 15 ವರ್ಷಗಳಲ್ಲಿ ರಸ್ತೆ, ವಿದ್ಯುತ್ ಮತ್ತಿತರ ಸಾರ್ವಜನಿಕ ಸೌಲಭ್ಯಗಳಿಗೆ ಭಾರಿ ಪ್ರಮಾಣದಲ್ಲಿ ಹೂಡಿಕೆ ಮಾಡಿರುವ ಹಿನ್ನೆಲೆಯಲ್ಲಿ ಅವುಗಳನ್ನು ಮರು ಸ್ಥಾಪಿಸುವುದು ಸವಾಲಿನ ಕೆಲಸವಾಗಿದೆ. ರಾಜ್ಯ ಪ್ರಗತಿಪರ ಕೃಷಿ ರಾಜ್ಯವಾಗಿದ್ದು, ಈ ಬಾರಿ ಬಿತ್ತನೆ ಹೆಚ್ಚಾಗಿದ್ದು, ರೈತರು ಕೂಡ ಉತ್ಸಾಹದಿಂದ ಕೃಷಿ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಿದ್ದರು. ಆದರೆ ಪ್ರವಾಹದಿಂದ ಬೆಳೆ ನಷ್ಟವಾಗಿ ತೊಂದರೆ ಅನುಭವಿಸಿದ್ದಾರೆ. ಆದ್ದರಿಂದ ರಾಜ್ಯಕ್ಕೆ ಗರಿಷ್ಠ ಪ್ರಮಾಣದ ನೆರವು ನೀಡುವಂತೆ ಮನವಿ ಮಾಡಿದರು. ಇದನ್ನೂ ಓದಿ: ರಾಜ್ಯದಲ್ಲಿ ಇನ್ನೆರಡು ದಿನ ಮಳೆ- ಹವಾಮಾನ ಇಲಾಖೆ ಮುನ್ಸೂಚನೆ

    ರಾಜ್ಯವು ವಸ್ತುನಿಷ್ಠ ವರದಿ ಸಲ್ಲಿಸಿರುವುದಲ್ಲದೆ, ಅತ್ಯಂತ ಕ್ರಿಯಾಶೀಲವಾಗಿ ನಷ್ಟದ ವಿವರ ನೀಡಿದೆ ಎಂದು ಸುಶೀಲ್ ಪಾಲ್ ಮೆಚ್ಚುಗೆ ವ್ಯಕ್ತ ಪಡಿಸಿದರು. ಇದೇ ವೇಳೆ ಕಂದಾಯ ಸಚಿವ ಆರ್. ಅಶೋಕ, ವಸತಿ ಸಚಿವ ವಿ.ಸೋಮಣ್ಣ, ಕೃಷಿ ಸಚಿವ ಬಿ.ಸಿ.. ಪಾಟೀಲ, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

  • ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರದ ಕ್ರಮಕ್ಕೆ ಕೇಂದ್ರದ ತಂಡದ ಮೆಚ್ಚುಗೆ: ಸಚಿವ ಸುಧಾಕರ್

    ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರದ ಕ್ರಮಕ್ಕೆ ಕೇಂದ್ರದ ತಂಡದ ಮೆಚ್ಚುಗೆ: ಸಚಿವ ಸುಧಾಕರ್

    ಬೆಂಗಳೂರು: ಕೇಂದ್ರ ಆರೋಗ್ಯ ಸಚಿವಾಲಯದ ತಂಡ ಕರ್ನಾಟಕದಲ್ಲಿ ಕೋವಿಡ್-19 ಬಗ್ಗೆ ಮಾಹಿತಿ ಪಡೆಯಲು ಹಾಗೂ ಕೆಲವು ಸಲಹೆಗಳನ್ನು ನೀಡಲು ರಾಜ್ಯಕ್ಕೆ ಆಗಮಿಸಿದ್ದು, ಸಿಎಂ ಬಿಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಸೇರಿದಂತೆ ನಾವೆಲ್ಲರೂ ಕೇಂದ್ರದ ತಂಡಕ್ಕೆ ಮಾಹಿತಿ ನೀಡಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.

    ಕೇಂದ್ರದ ಕೇಂದ್ರ ತಂಡದ ಸಭೆ ಬಳಿಕ ಮಾತನಾಡಿದ ಅವರು, ಕೇಂದ್ರದ ತಂಡದ ಜೊತೆ ಚರ್ಚೆ ಆಗಿದ್ದು, ಅನೇಕ ವಿಚಾರಗಳ ವಿನಿಮಯ ಆಗಿದೆ. ಪ್ರಮುಖವಾಗಿ ಕೊರೊನಾದಿಂದ ಸಾವಿನ ಪ್ರಮಾಣ ಕಡಿಮೆ ಮಾಡಲು ಕೇಂದ್ರ ತಂಡದಿಂದ ಸಲಹೆ ಬಂದಿದೆ. ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ.1.56 ರಷ್ಟಿದ್ದು, ಇದನ್ನು ಶೇ. 1% ಕ್ಕೆ ಇಳಿಸಲು ಕೇಂದ್ರ ತಂಡ ಸೂಚನೆ ನೀಡಿದೆ. ಇದಕ್ಕೆ ಬೇಕಿರುವ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದ್ದಾರೆ ಎಂದರು.

    ರಾಜ್ಯ ಕ್ರಮಕ್ಕೆ ಮೆಚ್ಚುಗೆ!:
    ರಾಜ್ಯ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕೆಲ ಕ್ರಮಗಳ ಬಗ್ಗೆ ಕೇಂದ್ರ ತಂಡದ ಮೆಚ್ಚುಗೆ ಸೂಚಿಸಿದೆ. ಪ್ರಮುಖವಾಗಿ ಮನೆ ಮನೆಗೆ ಭೇಟಿ ನೀಡಿ ಐಎಲ್‍ಐ ಪ್ರಕರಣಗಳ ಟೆಸ್ಟಿಂಗ್ ಸಾಮರ್ಥ್ಯ, ಟೆಲಿ ಐಸಿಯೂ ಹಾಗೂ ರಾಜ್ಯದಲ್ಲಿ ಟೆಸ್ಟಿಂಗ್ ಲ್ಯಾಬ್ ಹೆಚ್ಚಳ, ಕ್ವಾರಂಟೈನ್, ರೋಗಿಗಳ ಸಾವಿನ ವರದಿ ಸಂಗ್ರಹ ಕ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

    ಕೇಂದ್ರ ತಂಡದ ಸಲಹೆಗಳೇನು?:
    ಮುಂದಿನ ಎರಡು ದಿನಗಳ ಕಾಲ ರಾಜ್ಯದಲ್ಲಿ ಕೇಂದ್ರದ ತಂಡ ಇರುತ್ತದೆ. ಇಂದು ಕಂಟೈನ್ಮೆಂಟ್ ವಲಯ, ಕೋವಿಡ್ ಕೇರ್ ಸೆಂಟರ್ ಗಳಿಗೆ ಭೇಟಿ ನೀಡಿಲಿದೆ. ನಾಳೆ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ಕೊಡಲಿದ್ದಾರೆ. ಸಭೆ ವೇಳೆ ಕೇಂದ್ರ ತಂಡದ ಕಂಟೈನ್ಮೆಂಟ್ ವಲಯದಲ್ಲಿ ಹೆಚ್ಚು ಪರೀಕ್ಷೆ ಮಾಡಲು ಸೂಚಿಸಿದ್ದಾರೆ. 60 ವರ್ಷ ಮೇಲ್ಪಟ್ಟ, 10 ವರ್ಷದ ಕೆಳಗಿನ ಮಕ್ಕಳು, ಗರ್ಭಿಣಿಯರ ಬಗ್ಗೆ ಎಚ್ಚರಿಕೆ. ಜನಜಂಗುಳಿ ಪ್ರದೇಶಗಳು, ಮಾರ್ಕೆಟ್ ಪ್ರದೇಶಗಳಲ್ಲೂ ಪರೀಕ್ಷೆ ಹೆಚ್ಚಿಸಲು ಸೂಚಿಸಿದ್ದಾರೆ ಎಂದು ವಿವರಿಸಿದರು.

    ನಾವು ಕೇಂದ್ರದಿಂದ ಕೋವಿಡ್ ಕುರಿತು ವಿಶೇಷ ಅನುದಾನ ಕೇಳಲಿಲ್ಲ. ಆದರೆ ತಾಂತ್ರಿಕ ಸಲಹೆ ಕೇಳಿದ್ದೇವೆ. ಕಳೆದ 8 ದಿನಗಳಿಂದ ಕೋವಿಡ್ ಪ್ರಕರಣ ಜಾಸ್ತಿಯಾಗುತ್ತಿದೆ. ಇದನ್ನು ಕಡಿಮೆ ಮಾಡುವ ಎಲ್ಲಾ ಪ್ರಯತ್ನ ಮಾಡುತ್ತೇವೆ. ಸಭೆ ವೇಳೆ ಲಾಕ್‍ಡೌನ್ ಹಾಗೂ ಸಮುದಾಯಕ್ಕೆ ಸೋಂಕು ಹರಡುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಆದರೆ ಸೀಲ್‍ಡೌನ್ ಕ್ರಮವನ್ನು ಇನ್ನಷ್ಟು ಬಿಗಿ ಮಾಡ್ತೇವೆ ಅಷ್ಟೇ. ಅಂತರಜಿಲ್ಲೆ ಸಂಚಾರ ಬಂದ್ ಮಾಡುವ ಬಗ್ಗೆಯೂ ಚರ್ಚೆ ಆಗಿಲ್ಲ ಎಂದರು.

  • ಕೊರೊನಾ ಹಿಟ್ ಲಿಸ್ಟ್‌ನಲ್ಲಿ 15 ರಾಜ್ಯ, 67 ಜಿಲ್ಲೆ

    ಕೊರೊನಾ ಹಿಟ್ ಲಿಸ್ಟ್‌ನಲ್ಲಿ 15 ರಾಜ್ಯ, 67 ಜಿಲ್ಲೆ

    – ಮಹಾಮಾರಿ ಪೀಡಿತ ಜಿಲ್ಲೆಗಳಿಗೆ ಕೇಂದ್ರ ಟೀಂ

    ನವದೆಹಲಿ: ಭಾರತ ಅನ್‍ಲಾಕ್ ಆಗುತ್ತಿದ್ದಂತೆ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನದಿನಕ್ಕೆ ಹೆಚ್ಚಾಗುತ್ತಿದೆ. ದೇಶದ ಹದಿನೈದು ರಾಜ್ಯಗಳ ಐವತ್ತಕ್ಕೂ ಹೆಚ್ಚು ಜಿಲ್ಲೆಯಲ್ಲಿ ಅಟ್ಟಹಾಸ ಮೇರೆಯುತ್ತಿದೆ. ಹೀಗೆ ತೀವ್ರಗತಿಯಲ್ಲಿ ಏರುತ್ತಿರುವ ಸೋಂಕಿಗೆ ಬ್ರೇಕ್ ಹಾಕಲು ಖುದ್ದು ಈಗ ಕೇಂದ್ರ ಆರೋಗ್ಯ ಇಲಾಖೆ ಅಖಾಡಕ್ಕೆ ಇಳಿದಿದೆ. ರಾಜ್ಯಗಳಿಗೆ ವಿಶೇಷ ಟೀಂಗಳನ್ನು ಕಳುಹಿಸಲು ಮುಂದಾಗಿದೆ.

    ಮೂರನೇ ಅವಧಿಯಲ್ಲಿ ಶುರುವಾದ ಕೊರೊನಾ ಸೋಂಕು ಏರಿಕೆಯ ಪ್ರಮಾಣ ಇನ್ನು ತಗ್ಗಿಲ್ಲ. ಭಾರತ ಅನ್‍ಲಾಕ್ ಆಗುತ್ತಿದ್ದಂತೆ ಕೊರೊನಾ ಸೋಂಕಿನ ಪ್ರಮಾಣ ಕೂಡ ದಿನದಿಂದ ದಿನಕ್ಕೆ ದಾಖಲೆ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಹೀಗೆ ಹೆಚ್ಚಳವಾಗುತ್ತಿರುವ ಸೋಂಕು ದೇಶದಲ್ಲಿ ಸಮುದಾಯಕ್ಕೆ ಹರಡುವ ಭೀತಿ ಸೃಷ್ಟಿಸಿದೆ.

    ಈ ಹಿನ್ನೆಲೆಯಲ್ಲಿ ಐಸಿಎಂಆರ್ ಜೊತೆಗೆ ಅಧ್ಯಯನ ನಡೆಸಿರುವ ಕೇಂದ್ರ ಆರೋಗ್ಯ ಇಲಾಖೆ, ಭಾರತದಲ್ಲಿ ಅತಿ ಹೆಚ್ಚು ಕಾಣಿಸಿಕೊಳ್ಳುತ್ತಿರುವ 15 ರಾಜ್ಯಗಳ 67 ಜಿಲ್ಲೆಗಳಲ್ಲಿ ನಗರ ಸಭೆಗಳ ವ್ಯಾಪ್ತಿಯನ್ನು ಪತ್ತೆ ಮಾಡಿದೆ. ಈ ಜಿಲ್ಲೆಗಳಿಗೆ ಕೇಂದ್ರದ ತಂಡ ಭೇಟಿ ನೀಡಲಿದ್ದು, ಕೊರೊನಾಗೆ ಬ್ರೇಕ್ ಹಾಕುವ ಪ್ರಯತ್ನ ಮಾಡಲಿದೆ. ಈ ಟೀಂನಲ್ಲಿ ತಲಾ ಒಬ್ಬರು ಸಾರ್ವಜನಿಕ ಆರೋಗ್ಯ ಅಧಿಕಾರಿ, ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ಜಂಟಿ ಕಾರ್ಯದರ್ಶಿ ಹುದ್ದೆಯ ನೊಡೇಲ್ ಅಧಿಕಾರಿ ಇರಲಿದ್ದಾರೆ. ಇವರು ಆಯಾ ಜಿಲ್ಲಾಡಳಿತದ ಜೊತೆಗೂಡಿ ಕೊರೊನಾ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಶಕ್ತಿ ತುಂಬಲಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಪ್ರಯತ್ನ ಮಾಡಲಿದ್ದಾರೆ.

    ಅಂದಹಾಗೆ ಕೇಂದ್ರ ಆರೋಗ್ಯ ಇಲಾಖೆ ಕಳೆದ ಬಾರಿ 80ಕ್ಕೂ ಹೆಚ್ಚು ಜಿಲ್ಲೆಗಳನ್ನು ತನ್ನ ಹಿಟ್ ಲಿಸ್ಟ್‌ನಲ್ಲಿ ಗುರುತಿಸಿತ್ತು. ಆದರೆ ಈ ಬಾರಿ ಈ ಪಟ್ಟಿ ಮತ್ತಷ್ಟು ಪರಿಷ್ಕರಿಸಿ 67 ಜಿಲ್ಲೆಗಳ ನಗರಸಭೆ ಪ್ರದೇಶಗಳನ್ನು ಗುರುತಿಸಿದೆ. ಹಿಟ್ ಲಿಸ್ಟ್‌ನಲ್ಲಿರುವ ರಾಜ್ಯಗಳು ಯಾವುದು? ಯಾವ ರಾಜ್ಯದಲ್ಲಿ ಎಷ್ಟು ಜಿಲ್ಲೆ ಹಿಟ್ ಲಿಸ್ಟ್‌ನಲ್ಲಿದೆ ಅನ್ನೊದು ನೋಡುವುದಾದರೆ:

    ಮಹಾರಾಷ್ಟ್ರ 07, ತೆಲಂಗಾಣ 04, ತಮಿಳುನಾಡು 07, ರಾಜಸ್ಥಾನ 05, ಅಸ್ಸಾಂ 06, ಹರಿಯಾಣ 04, ಗುಜರಾತ್ 03, ಕರ್ನಾಟಕ 04, ಉತ್ತರಾಖಂಡ 03, ಮಧ್ಯಪ್ರದೇಶ 05, ಪಶ್ಚಿಮ ಬಂಗಾಳ 03, ದೆಹಲಿ 03, ಬಿಹಾರ 04, ಉತ್ತರ ಪ್ರದೇಶ 04 ಮತ್ತು ಒಡಿಶಾ 05 ಜಿಲ್ಲೆ ಹಿಟ್ ಲಿಸ್ಟ್‌ನಲ್ಲಿದೆ.

    ಕರ್ನಾಟಕಕ್ಕೂ ಕೇಂದ್ರದ ಪವರ್ ಫುಲ್ ತಂಡ
    ಆರೋಗ್ಯ ಇಲಾಖೆಯ ಸೂಚನೆ ಮೇರೆಗೆ ರಾಜ್ಯದ ನಾಲ್ಕು ಜಿಲ್ಲೆಗೆ ಕೇಂದ್ರದ ತಂಡ ಬರಲಿದೆ. 947 ಕೇಸ್ ಗಳಿರುವ ಉಡುಪಿ ಜಿಲ್ಲೆ, 769 ಸೋಂಕು ಪತ್ತೆಯಾಗಿರುವ ಕಲಬುರಗಿ, 642 ಪ್ರಕರಣಗಳಿರುವ ಯಾದಗಿರಿ ಹಾಗೂ 533 ಕೇಸ್‍ಗಳಿರುವ ಬೆಂಗಳೂರು ಗ್ರಾಮೀಣ ಭಾಗಕ್ಕೆ ಈ ತಂಡಗಳ ಬರಲಿದೆ.

    ಕೇಂದ್ರದಿಂದ ಬರುವ ಈ ತಂಡಗಳ ಕೆಲಸ:
    * ರಾಜ್ಯ ಆರೋಗ್ಯ ಇಲಾಖೆ ಜಿಲ್ಲಾಡಳಿತದೊಂದಿಗೆ ಸೇರಿ ಸೋಂಕು ಹಬ್ಬುತ್ತಿರುವ ಬಗ್ಗೆ ಅಧ್ಯಯನ
    * ಮುಂದಿನ ಅಪಾಯಗಳನ್ನು ಗುರುತಿಸುವುದು
    * ಸೋಂಕು ಸಮುದಾಯಕ್ಕೆ ಹಬ್ಬದಂತೆ ನೋಡಿಕೊಳ್ಳುವುದು
    * ಪುರಸಭೆ ಮಟ್ಟದಿಂದ ಕಾರ್ಯಚರಣೆ ಚುರುಕುಗೊಳಿಸುವುದು
    * ಸೋಂಕಿನ ತೀವ್ರತೆ ಆಧರಿಸಿ ಸೂಕ್ತ ಆಸ್ಪತ್ರೆ ಬೆಡ್ ಚಿಕಿತ್ಸೆ ವ್ಯವಸ್ಥೆ ಮಾಡುವುದು
    * ಕೊರೊನಾ ಹರಡುವಿಕೆ ಮತ್ತು ಸಾವಿನ ಪ್ರಮಾಣ ತಗ್ಗಿಸುವುದು ಕಾರ್ಯ ಮಾಡಲಿದೆ

    ಕೇಂದ್ರ ಆರೋಗ್ಯ ಇಲಾಖೆ ಅನ್‍ಲಾಕ್ ಸಂದರ್ಭದಲ್ಲಿ ಕೊರೊನಾ ವಿರುದ್ಧ ಹೋರಾಟಕ್ಕೆ ಟೊಂಕ ಕಟ್ಟಿ ನಿಂತಿದೆ. ಯಾವುದೇ ಕಾರಣಕ್ಕೂ ಸೋಂಕು ಸಮುದಾಯಕ್ಕೆ ಹಬ್ಬದಂತೆ ನೋಡಿಕೊಳ್ಳಲು ಹಿಟ್ ನಗರಗಳ ಮೇಲೆ ಹದ್ದಿನ ಕಣ್ಣಿಟ್ಟು ಕೆಲಸ ಮಾಡುತ್ತಿದೆ.

  • ನಿಮ್ಮನ್ನು ಎಂಪಿ ಮಾಡಿದ್ದು ನಮ್ಮ ದುರಂತ: ಪ್ರತಾಪ್ ಸಿಂಹಗೆ ಫುಲ್ ಕ್ಲಾಸ್

    ನಿಮ್ಮನ್ನು ಎಂಪಿ ಮಾಡಿದ್ದು ನಮ್ಮ ದುರಂತ: ಪ್ರತಾಪ್ ಸಿಂಹಗೆ ಫುಲ್ ಕ್ಲಾಸ್

    ಮಡಿಕೇರಿ: ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಕೇಂದ್ರದಿಂದ ಬಂದಿದ್ದ ತಂಡಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದೀರಿ ಎಂದು ಸಂಸದ ಪ್ರತಾಪ್ ಸಿಂಹ ಅವರನ್ನು ಸ್ಥಳೀಯ ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಗುರುವಾರ ಕೇಂದ್ರದ ಪರಿಶೀಲನೆ ತಂಡದೊಂದಿಗೆ ಸಂಸದ ಪ್ರತಾಪ್ ಸಿಂಹರವರು ಮಡಿಕೇರಿ ತಾಲೂಕಿನ ಹೆಬ್ಬೆಟ್ಟಗೇರಿ ಗ್ರಾಮಕ್ಕೆ ಬಂದಿದ್ದರು. ಈ ವೇಳೆ ಕೇಂದ್ರ ತಂಡಕ್ಕೆ ಭೂ ಪರಿವರ್ತನೆಯ ಬಗ್ಗೆ ಮಾಹಿತಿ ನೀಡುತ್ತಿದ್ದ ಸಂಸದರ ಮೇಲೆ ಸ್ಥಳೀಯ ಬಿಜೆಪಿ ಮುಖಂಡ ಎಂ.ಬಿ.ದೇವಯ್ಯ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. `ನೀವು ಕೇಂದ್ರದ ಪರಿಶೀಲನೆ ತಂಡಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದೀರಿ, ನಿಮ್ಮನ್ನು ಸಂಸದರನ್ನಾಗಿ ಮಾಡಿದ್ದು ನಮ್ಮ ದುರಂತ. ತಪ್ಪು ಮಾಹಿತಿ ನೀಡಿ ಜನರನ್ನು ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದೀರಿ. ಬೆಂದ ಗಾಯಕ್ಕೆ ಉಪ್ಪು ನೀರು ಸುರಿಯುತ್ತಿದ್ದೀರಾ ಎಂದು ತೀವ್ರವಾಗಿ ಹರಿಹಾಯ್ದರು.

    ನಿಮ್ಮಂಥವರಿಂದ ಪಕ್ಷ ಉದ್ಧಾರ ಆಗಲ್ಲ. ನೀವು ಮೊದಲು ನಮ್ಮ ಪಕ್ಷದ ಸಂಸದ ಎಂಬುದನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪಕ್ಷದಲ್ಲಿ ನನ್ನ ವಿರುದ್ಧ ಏನು ಕ್ರಮ ತೆಗೆದುಕೊಳ್ಳುತ್ತೀರೋ ತೆಗೆದುಕೊಳ್ಳಿ ಎಂದು ಖಾರವಾಗಿ ನುಡಿದ್ರು. ಈ ವೇಳೆ ಸ್ಥಳೀಯ ಬಿಜೆಪಿ ಶಾಸಕ ಸಹ ಉಪಸ್ಥಿತರಿದ್ದರು. ಬಿಜೆಪಿಯ ಹಿರಿಯ ಮುಖಂಡರ ಹೇಳಿಕೆಯಿಂದ ಸಂಸದ ಪ್ರತಾಪ್ ಸಿಂಹ ತೀವ್ರ ಮುಜುಗರಕ್ಕೊಳಗಾಗಿ ಸ್ಥಳದಿಂದ ತೆರಳಿದರು ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv