Tag: central minister

  • ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಎಂಜೆ ಅಕ್ಬರ್

    ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಎಂಜೆ ಅಕ್ಬರ್

    ನವದೆಹಲಿ: ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಕೇಂದ್ರ ವಿದೇಶಾಂಗ ವ್ಯವಹಾರ ರಾಜ್ಯ ಸಚಿವ ಎಂ.ಜೆ.ಅಕ್ಬರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

    #MeToo ಅಭಿಯಾನದ ಮೂಲಕ ಕೇಂದ್ರ ಸಚಿವ ಎಂ.ಜೆ.ಅಕ್ಬರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ಪತ್ರಕರ್ತೆ ಪ್ರಿಯಾ ರಮಣಿಯವರು ವಿರುದ್ಧ ಸಚಿವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಭಾನುವಾರ ನೈಜೀರಿಯಾದಿಂದ ವಾಪಾಸ್ಸಾದ ಅವರು ಇಂದು ತಮ್ಮ ವಕೀಲ ಕರಣ್ ಜವಾಲ್ ರ ಮೂಲಕ ಪತ್ರಕರ್ತೆ ಪ್ರಿಯಾ ರಮಣಿ ಸೇರಿದಂತೆ ಒಟ್ಟು 11 ಜನರ ಮೇಲೆ ಪಟಿಯಾಲಾ ಹೌಸ್ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

    ಘಟನೆ ಕುರಿತು ಭಾನುವಾರ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಇದಕ್ಕೆ ತಕ್ಕ ಉತ್ತರವನ್ನೇ ಹೇಳುತ್ತೇನೆ ಎಂದು ಹೇಳಿದ್ದರು. ಪತ್ರಕರ್ತೆ ಪ್ರಿಯಾ ರಮಣಿ ಮೇಲೆ ಐಪಿಸಿ ಸೆಕ್ಷನ್ 499 (ಮಾನಹಾನಿ) ಹಾಗೂ 500 (ಮಾನಹಾನಿ ದಂಡನೆ)ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಒಂದು ವೇಳೆ ಆರೋಪ ಸಾಬೀತಾದರೆ ಕನಿಷ್ಠ 2 ವರ್ಷಗಳ ಜೈಲು ಶಿಕ್ಷೆಯಾಗುತ್ತದೆ.

    ಏನಿದು ಪ್ರಕರಣ?:
    ಸಚಿವ ಅಕ್ಬರ್ ವಿರುದ್ಧ ಪತ್ರಕರ್ತೆ ಪ್ರಿಯಾ ರಮಣಿ ಅವರು ಮೊದಲು ಆರೋಪ ಮಾಡಿದ್ದರು. ಎಂಜಿ ಅಕ್ಬರ್ ಕತೆಯೊಂದಿಗೆ ಇದನ್ನು ಆರಂಭಿಸುತ್ತೇನೆ. ಆದರೆ ಅವರ ಹೆಸರನ್ನು ಉಲ್ಲೇಖಿಸಿಲ್ಲ, ಏಕೆಂದರೆ ಅವರೇನೂ ಮಾಡಿಲ್ಲ. ಈ ಬೇಟೆಗಾರನಿಂದ ಅನೇಕ ಮಹಿಳೆಯರಿಗೆ ಕೆಟ್ಟ ಅನುಭವ ಆಗಿರಬಹುದು. ಬಹುಶಃ ಅವರು ಅ ಹಂಚಿಕೊಳ್ಳಬಹುದು ಎಂದು ಬರೆದು ಅಕ್ಟೋಬರ್ 8 ರಂದು ಟ್ವೀಟ್ ಮಾಡಿದ್ದರು. ಇದನ್ನೂ ಓದಿ: #MeToo ಅಭಿಯಾನಕ್ಕೆ ಜಯ – ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್ ರಾಜೀನಾಮೆ?

    https://twitter.com/priyaramani/status/1049279608263245824

    ಅಷ್ಟೇ ಅಲ್ಲದೆ ತಮ್ಮ ಮೇಲಾದ ಲೈಂಗಿಕ ಕಿರುಕುಳ ಕುರಿತು 2017 ರ ಅಕ್ಟೋಬರ್ ನಲ್ಲಿ ಲೇಖನವೊಂದನ್ನು ಪ್ರಿಯಾ ರಮಣಿ ಬರೆದಿದ್ದರು. ಪ್ರಿಯಾ ರಮಣಿ ಆರೋಪದ ಬೆನ್ನಲ್ಲೇ ಪ್ರೇರಣಾ ಸಿಂಗ್ ಬಿಂದ್ರಾ, ಘಜಾಲಾ ವಹಾಬ್, ಶುತಾಪಾ ಪಾಲ್, ಅಂಜು ಭಾರ್ತಿ, ಸುಪರ್ಣಾ ಶರ್ಮಾ, ಶುಮಾ ರಾಹಾ, ಮಾಲಿನಿ ಭೂಪ್ತಾ, ಕನಿಕಾ ಗೆಹ್ಲೋಟ್, ಕಾದಂಬರಿ ಎಂ.ವಾಡೆ, ಮಜಿಲಿ ಡೆ ಪ್ಯೂ ಕಾಂಪ್ ಮತ್ತು ರೂಥ್ ಡೇವಿಡ್ ರವರು ಸಹ ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮುಸ್ಲಿಮರಿಗೆ ಮೆಕ್ಕಾ ಹೇಗೋ, ಹಿಂದೂಗಳಿಗೂ ಅಯೋಧ್ಯೆ ಪವಿತ್ರ ಕ್ಷೇತ್ರ: ಉಮಾ ಭಾರತಿ

    ಮುಸ್ಲಿಮರಿಗೆ ಮೆಕ್ಕಾ ಹೇಗೋ, ಹಿಂದೂಗಳಿಗೂ ಅಯೋಧ್ಯೆ ಪವಿತ್ರ ಕ್ಷೇತ್ರ: ಉಮಾ ಭಾರತಿ

    ನವದೆಹಲಿ: ಮುಸ್ಲಿಂ ಬಾಂಧವರಿಗೆ ಮೆಕ್ಕಾ ಹೇಗೆ ಪವಿತ್ರ ಕ್ಷೇತ್ರವೋ, ಹಾಗೆಯೇ ಹಿಂದೂಗಳಿಗೂ ಸಹ ಅಯೋಧ್ಯೆ ಪವಿತ್ರ ಕ್ಷೇತ್ರವೆಂದು ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಚಿವೆ ಉಮಾ ಭಾರತಿ ಹೇಳಿದ್ದಾರೆ.

    ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವೆ, ತೀರ್ಪು ಯಾವುದೇ ಧರ್ಮಕ್ಕೆ ಸಂಬಂಧಪಟ್ಟ ವಿಷಯವಲ್ಲ. ಆಯೋಧ್ಯೆಯು ಹಿಂದೂಗಳ ಪವಿತ್ರ ಪುಣ್ಯ ಕ್ಷೇತ್ರವಾಗಿದೆ. ಏಕೆಂದರೆ ಅಯೋಧ್ಯೆಯು ಶ್ರೀರಾಮನ ಜನ್ಮಭೂಮಿಯಾಗಿದೆ. ಅದು ಮುಸ್ಲಿಮರ ಪವಿತ್ರ ಪುಣ್ಯಕ್ಷೇತ್ರವಾಗಲು ಸಾಧ್ಯವಿಲ್ಲ. ಮುಸ್ಲಿಮರ ಪವಿತ್ರ ಕ್ಷೇತ್ರ ಮೆಕ್ಕಾ ಆಗಿದೆ ಎಂದು ಹೇಳಿದರು.

    ಕೇವಲ ಈ ಒಂದು ಸಣ್ಣ ವಿಚಾರವನ್ನು ಭೂ ವಿವಾದವನ್ನಾಗಿ ಮಾಡಿದ್ದರು. ಆದರೆ ಇಂದು ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಉಂಟಾಗಿದ್ದ ಭೂ ವಿವಾದ ಸಮಸ್ಯೆ ಇತ್ಯರ್ಥವಾಗಿದೆ ಎಂದು ಉಮಾ ಭಾರತಿ ಸಂತೋಷ ವ್ಯಕ್ತಪಡಿಸಿದರು.

    ರಾಮ ಜನ್ಮಭೂಮಿ ವಿವಾದದ ಅಂತಿಮ ವಿಚಾರಣೆ ಅಕ್ಟೋಬರ್ 29ರಿಂದ ಆರಂಭವಾಗಲಿದ್ದು, ತ್ವರಿತಗತಿಯಲ್ಲಿ ವಿಚಾರಣೆ ನಡೆಯಲಿದೆ.

    ಸುಪ್ರೀಂ ಹೇಳಿದ್ದು ಏನು?
    ಮಸೀದಿ ಇಸ್ಲಾಮ್‍ನ ಅವಿಭಾಜ್ಯ ಅಂಗವಲ್ಲ ಅಂತ 1994 ರ ಡಾ. ಇಸ್ಮಾಯಿಲ್ ಫಾರೂಖಿ ಪ್ರಕರಣದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಅಶೋಕ್ ಭೂಷಣ್ ಏಕ ತೀರ್ಪು ನೀಡಿದ್ದರೆ, ನ್ಯಾ. ನಜೀರ್ ಭಿನ್ನ ತೀರ್ಪು ನೀಡಿದ್ದಾರೆ. 1994ರ ತೀರ್ಪಿನ ಅಂಶಗಳನ್ನು ಪರಿಶೀಲಿಸಲು ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಇದೇ ವೇಳೆ, ಮಂದಿರ, ಚರ್ಚ್ ಅಥವಾ ಮಸೀದಿಯಾಗಲಿ ಯಾವುದೇ ಧಾರ್ಮಿಕ ಸ್ಥಳಗಳನ್ನು ಸರ್ಕಾರ ವಶಕ್ಕೆ ಪಡೆಯಬಹುದು ಅಂತ ಸುಪ್ರೀಂಕೋರ್ಟ್ ಹೇಳಿದೆ.

    ತೀರ್ಪಿನಲ್ಲಿರುವ ಪ್ರಮುಖ ಅಂಶ ಏನು?
    * ಮಸೀದಿಯಲ್ಲೇ ನಮಾಜ್ ಮಾಡಬೇಕು ಅಂತ ಏನಿಲ್ಲ
    * ಮುಸ್ಲಿಮರು ಎಲ್ಲಿ ಬೇಕಾದ್ರೂ ನಮಾಜ್ ಮಾಡಬಹುದು
    * ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವೇನಲ್ಲ
    * ಯಾವ ಸನ್ನಿವೇಶದಲ್ಲಿ ಫಾರೂಖಿ ತೀರ್ಪು ಬಂದಿದೆ ಅನ್ನೋದು ಮುಖ್ಯ
    * ದೇವಸ್ಥಾನ, ಮಸೀದಿ, ಚರ್ಚ್‍ಗಳನ್ನು ಸರ್ಕಾರ ವಶಪಡಿಸಿಕೊಳ್ಳಬಹುದು
    * ಫಾರೂಖಿ ತೀರ್ಪಿನಲ್ಲಿ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಮಾತ್ರ ಅಭಿಪ್ರಾಯ ಕೇಳಲಾಗಿದೆ
    * ಭೂಸ್ವಾಧೀನದಿಂದ ರಕ್ಷಣೆ ನೀಡುವ ಸನ್ನಿವೇಶದಲ್ಲಷ್ಟೇ ಫಾರೂಖಿ ತೀರ್ಪು ನೀಡಲಾಗಿದೆ
    * 7 ಸದಸ್ಯರ ಸಂವಿಧಾನಿಕ ಪೀಠಕ್ಕೆ ಪ್ರಕರಣವನ್ನು ವರ್ಗಾವಣೆ ಮಾಡುವ ಅಗತ್ಯತೆ ಇಲ್ಲ

    ನ್ಯಾ. ನಜೀರ್ ನೀಡಿದ ಭಿನ್ನ ತೀರ್ಪೇನು?
    * ಇನ್ನಿತ್ತರ ಇಬ್ಬರು ಸಹೋದ್ಯೋಗಿ ನ್ಯಾಯಮೂರ್ತಿಗಳು ನೀಡಿರೋ ತೀರ್ಪಿಗೆ ಸಹಮತವಿಲ್ಲ
    * ಮಸೀದಿ ಇಸ್ಲಾಂನ ಅವಿಭಾಜ್ಯ ಅಂಗವೇ ಅನ್ನೋದರ ಬಗ್ಗೆ ಚರ್ಚೆಯಾಗಬೇಕು
    * ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು

    ಏನಿದು ಪ್ರಕರಣ?
    ಇಸ್ಮಾಯಿಲ್ ಫರೂಕಿ ವರ್ಸಸ್ ಭಾರತ ಸರಕಾರದ ನಡುವಿನ ಪ್ರಕರಣದ ವಿಚಾರಣೆ ವೇಳೆ 1994ರಲ್ಲಿ ಸುಪ್ರೀಂ ಕೋರ್ಟ್, ನಮಾಜ್ ಎಲ್ಲಿ ಬೇಕಾದರೂ ಸಲ್ಲಿಸಬಹುದು. ಮಸೀದಿಯೇ ಆಗಬೇಕೆಂದಿಲ್ಲ. ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗವಲ್ಲ. ಈ ಕಾರಣಕ್ಕೆ ಮಸೀದಿ ನಿರ್ಮಿಸಿರುವ ಜಾಗವನ್ನು ಸರ್ಕಾರ ವಶಪಡಿಸಿಕೊಳ್ಳಬಹುದು ಎಂದು ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಮುಸ್ಲಿಂ ಸಂಘಟನೆಗಳು ಮೇಲ್ಮನವಿ ಸಲ್ಲಿಸಿದ್ದವು. ಅಷ್ಟೇ ಅಲ್ಲದೇ ಮಸೀದಿಯು ಇಸ್ಲಾಮ್ ನ ಅವಿಭಾಜ್ಯ ಅಂಗವಾಗಿಲ್ಲ ಎಂದಿದ್ದ ಇಸ್ಮಾಯಿಲ್ ಫಾರೂಕಿ ತೀರ್ಪನ್ನು ಪರಿಶೀಲನೆಗಾಗಿ ದೊಡ್ಡ ಸಂವಿಧಾನಿಕ ಪೀಠಕ್ಕೆ ಹಸ್ತಾಂತರಿಸಬೇಕು ಎಂದು ಅರ್ಜಿ ಸಲ್ಲಿಕೆಯಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿನ್ನ ಕಾಲು ಮುರಿತೀನಿ ನೋಡು: ಕೇಂದ್ರ ಸಚಿವನ ಧಮ್ಕಿ ವಿಡಿಯೋ ವೈರಲ್!

    ನಿನ್ನ ಕಾಲು ಮುರಿತೀನಿ ನೋಡು: ಕೇಂದ್ರ ಸಚಿವನ ಧಮ್ಕಿ ವಿಡಿಯೋ ವೈರಲ್!

    ಕೋಲ್ಕತ್ತ: ಪಶ್ಚಿಮ ಬಂಗಾಳದ ಅಸನ್ಸೋಲ್ ಪ್ರದೇಶದಲ್ಲಿ ನಡೆದ ಅಂಗವಿಕಲರ ಸಮಾವೇಶದಲ್ಲಿ ಕೇಂದ್ರ ಸಚಿವ ಬಬುಲ್ ಸುಪ್ರಿಯೊ ವ್ಯಕ್ತಿಯೊಬ್ಬರಿಗೆ ನಿನ್ನ ಕಾಲನ್ನು ಮುರಿಯುತ್ತೇನೆ ಎಂದು ಧಮ್ಕಿ ಹಾಕಿರುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

    ಅಸನ್ಸೋಲ್ ಜಿಲ್ಲೆಯಲ್ಲಿ ಅಂಗವಿಕಲರಿಗಾಗಿ ಗಾಲಿಕುರ್ಚಿ ಮತ್ತು ಪರಿಕರಗಳನ್ನು ವಿತರಿಸುವ ‘ಸಾಮಾಜಿಕ ಅಧಿಕಾರಿತಾ ಶಿವಾರ್’ ಸಮಾರಂಭಕ್ಕೆ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಇಲಾಖೆ ರಾಜ್ಯ ಸಚಿವ ಬಬುಲ್ ಸುಪ್ರಿಯೋರನ್ನು ಆಹ್ವಾನಿಸಲಾಗಿತ್ತು. ಸಭೆಯಲ್ಲಿ ಸಚಿವರು ಭಾಷಣ ಮಾಡುತ್ತಿರುವಾಗ ಓರ್ವ ವ್ಯಕ್ತಿ ಅಡ್ಡಾ-ದಿಡ್ಡಿಯಾಗಿ ಓಡಾಡುತ್ತಿದ್ದನು. ಇದನ್ನು ಪ್ರಶ್ನಿಸಿದ ಅವರು ಏಕೆ ಓಡಾಡುತ್ತಿದ್ದೀಯಾ? ಸುಮ್ಮನೇ ಕುಳಿತುಕೋ ಎಂದು ಹೇಳಿದರು.

    ಸಚಿವರ ಮಾತಿಗೂ ಬೆಲೆಕೊಡದ ಆತ ಪುನಃ ಅದೇ ರೀತಿ ಮಾಡುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಸಚಿವರು ನಿನಗೇನಾಗಿದೆ? ಏನಾದರೂ ಸಮಸ್ಯೆ ಇದೆಯಾ? ನೀನು ಸುಮ್ಮನೆ ಕುಳಿತುಕೊಳ್ಳದಿದ್ದರೆ, ನಿನ್ನ ಕಾಲನ್ನು ಮುರಿಯುತ್ತೇನೆ ನೋಡು ಎಂದು ಹೇಳಿದ್ದಲ್ಲದೇ, ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಗಳಿಗೆ ಆ ವ್ಯಕ್ತಿ ಪುನಃ ಸಭೆಯಲ್ಲಿ ಓಡಾಡಿದರೆ ಅವನ ಕಾಲನ್ನು ಮುರಿದು ಊರುಗೋಲು ಕೊಡಿ ಎಂದು ಸೂಚಿಸಿದ್ದಾರೆ.

    ಬಹಿರಂಗ ಸಭೆಯಲ್ಲಿ ವ್ಯಕ್ತಿಯೊಬ್ಬರಿಗೆ ಕಾಲು ಮುರಿಯುತ್ತೇನೆ ನೋಡು ಎಂದ ಸಚಿವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಜನ ವಿರೋಧ ವ್ಯಕ್ತಪಡಿಸಿ ಕೇಂದ್ರ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಯಾವಾಗಲೂ ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುವ ಸಚಿವರು ಮತ್ತೊಮ್ಮೆ ತಮ್ಮ ನಾಲಿಗೆ ಹರಿಬಿಟ್ಟು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಮೊದಲು ಬಹಿರಂಗ ಸಭೆಯಲ್ಲಿ ವ್ಯಕ್ತಿಯೊಬ್ಬರ ಚರ್ಮ ಸುಲಿಯುತ್ತೇನೆ ನೋಡಿ ಎನ್ನುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಂಗ್ರೆಸ್-ಜೆಡಿಎಸ್ ಕಳ್ಳರ ಪಕ್ಷ, ದರಿದ್ರ ಪಾರ್ಟಿ: ಡಿ.ವಿ.ಸದಾನಂದ ಗೌಡ

    ಕಾಂಗ್ರೆಸ್-ಜೆಡಿಎಸ್ ಕಳ್ಳರ ಪಕ್ಷ, ದರಿದ್ರ ಪಾರ್ಟಿ: ಡಿ.ವಿ.ಸದಾನಂದ ಗೌಡ

    ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಕಳ್ಳರ ಪಕ್ಷಗಳಾಗಿದ್ದು, ಇವುಗಳು ದರಿದ್ರ ಪಕ್ಷಗಳಾಗಿವೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆಯ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಸ್ವಚ್ಛ ಭಾರತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಡಾ.ರಾಜ್‍ಕುಮಾರ್ ಸಮಾಧಿ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಖುದ್ದು ಪೌರಕಾರ್ಮಿಕರ ಜೊತೆಗೂಡಿ ಕಸಗುಡಿಸಿದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯು ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಹೋಗಿಲ್ಲ. ಅವರ ಆಂತರಿಕ ಕಚ್ಚಾಟದಿಂದಲೇ ಅವರಿಗೆ ಅಂತಹ ಪರಿಸ್ಥಿತಿ ಎದುರಾಗಿದೆ. ಶಾಸಕರಾದ ಶಿವರಾಮ್ ಹೆಬ್ಬಾರ್‍ರವರನ್ನು ಕೈಕಾಲು ಕಟ್ಟಿ ಕಿಡ್ನಾಪ್ ಮಾಡಿ ನಾವೇನು ಪಕ್ಷಕ್ಕೆ ಎಳೆದು ತಂದಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ದರಿದ್ರ ಪಕ್ಷಗಳು ಹಾಗೂ ಕಳ್ಳರ ಪಾರ್ಟಿಗಳು ಎಂದು ತಿಳಿದು ಅವರೇ ಹೊರ ಬಂದಿರಬಹುದು ಎಂದು ವ್ಯಂಗ್ಯವಾಡಿದರು.

    ಯಾವುದೇ ಶಾಸಕರು ಬಿಜೆಪಿ ಬಂದರೆ ನಾವು ಅವರನ್ನು ಸ್ವಾಗತಿಸುತ್ತೇವೆಯೋ ಹೊರತು, ಆಪರೇಷನ್ ಕಮಲ ಮಾಡುತ್ತಿಲ್ಲ. ನಮ್ಮದು ಏನೇ ಇದ್ದರೂ ಆಪರೇಷನ್ ಸ್ವಚ್ಛ್ ಭಾರತ್ ಅಷ್ಟೇ. ಅವರ ಸರ್ಕಾರ ಬಿದ್ದರೆ ಅತಿ ದೊಡ್ಡ ಪಕ್ಷವಾಗಿರುವ ನಾವು ಸರ್ಕಾರ ರಚಿಸುವುದು ಖಚಿತ. ನಾವು ಆಪರೇಷನ್ ಕಮಲ ಮಾಡುತ್ತಿದ್ದೇವೆ ಎಂದು ಆರೋಪ ಮಾಡುತ್ತಿರುವ ಅವರು ಸುಮ್ಮನೆ ಕುಳಿತಿಲ್ಲ. ನಮ್ಮ ಬಿಜೆಪಿ ಶಾಸಕರಿಗೂ ಸಹ ಆಮೀಷವೊಡ್ಡುತ್ತಿದ್ದಾರೆ. ಕಾಂಗ್ರೆಸ್ ಆಮೀಷವೊಡ್ಡಿರುವ ಶಾಸಕರನ್ನು ನಾನು ಕರೆದುಕೊಂಡು ಬಂದು ನಿಲ್ಲಿಸುತ್ತೇನೆ ಎಂದು ಹೇಳಿದರು.

    ಕಾಂಗ್ರೆಸ್ ಹಾಗೂ ಜೆಡಿಎಸ್‍ನವರು ಏಕೆ ಬಿಜೆಪಿ ಶಾಸಕರ ಹಿಂದೆ ಬೀಳಬೇಕು? ಅವರಿಗೇನಾದರೂ ಭಯ ಇದೆಯೇ? ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ ಅನ್ನುವ ರೀತಿ ದೊಡ್ಡ ದೊಡ್ಡ ಕಳ್ಳರು ಬೇರೆಯವರನ್ನು ಕಳ್ಳ ಅಂತಾ ತೋರಿಸ್ತಾ ಇದ್ದಾರೆ ಎಂದು ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಪರೇಷನ್ ಕಮಲಕ್ಕೆ ಕೈ ಹಾಕಿಲ್ಲ, ಅವರಾಗಿಯೇ ಬಂದರೆ ಬೇಡ ಅನ್ನಲ್ಲ: ರಮೇಶ್ ಜಿಗಜಿಣಗಿ

    ಆಪರೇಷನ್ ಕಮಲಕ್ಕೆ ಕೈ ಹಾಕಿಲ್ಲ, ಅವರಾಗಿಯೇ ಬಂದರೆ ಬೇಡ ಅನ್ನಲ್ಲ: ರಮೇಶ್ ಜಿಗಜಿಣಗಿ

    ಕಲಬುರಗಿ: ಬಿಜೆಪಿಯು ಆಪರೇಷನ್ ಕಮಲಕ್ಕೆ ಕೈ ಹಾಕಿಲ್ಲ, ಅವರಾಗಿಯೇ ಪಕ್ಷಕ್ಕೆ ಬರುವವರನ್ನು ಬೇಡ ಅನ್ನಲು ಸಾಧ್ಯವಿಲ್ಲವೆಂದು ಕೇಂದ್ರ ಸರ್ಕಾರದ ಕುಡಿಯುವ ನೀರು ಹಾಗೂ ಸ್ವಚ್ಛತಾ ಖಾತೆ ರಾಜ್ಯ ಸಚಿವ ರಮೇಶ್ ಜಿಗಜಿಣಗಿ ಹೇಳಿದ್ದಾರೆ.

    ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನ ಬೀಳಿಸಿ, ಆಪರೇಶನ್ ಕಮಲ ಮಾಡುವ ಮೂಲಕ ಅಧಿಕಾರಕ್ಕೆ ಬರಬೇಕು ಎನ್ನುವ ಇರಾದೆ ಇಲ್ಲ. ಅವರ ಪಕ್ಷದಿಂದ ಬೇಸತ್ತು, ನಮ್ಮ ಪಕ್ಷ ಸೇರಿದರೆ ನಾವು ಅಷ್ಟೇ ಸ್ವಾಗತ ಮಾಡುತ್ತೇವೆ. ರಾಜ್ಯ ಸಮ್ಮಿಶ್ರ ಸರ್ಕಾರ ಅನೈತಿಕ ಸರ್ಕಾರವಾಗಿದ್ದು, ಇಂಥಹ ಸರ್ಕಾರ ಬಹಳಷ್ಟು ದಿನ ನಡೆಯಲ್ಲ ಎಂದು ಹೇಳಿದರು.

    ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಗಳು ಸ್ಥಗಿತಗೊಂಡಿದ್ದು, ಸಿಎಂ ಕುಮಾರಸ್ವಾಮಿ ಕೇವಲ ದಕ್ಷಿಣ ಕರ್ನಾಟಕ ಅಂತಾ ತಿರುಗಾಡುತ್ತಾ, ಉತ್ತರ ಕರ್ನಾಟಕವನ್ನ ಮರೆತಿದ್ದಾರೆ. ಇಲ್ಲಿನ ಜನ ಹಾಗೂ ಜಾನುವಾರುಗಳು ಮಳೆಯಿಲ್ಲದೇ ತತ್ತರಿಸಿಹೋಗಿವೆ. ಇಂತಹ ಭಾಗಗಳಲ್ಲಿ ಅವರಿಗೆ ಮಾಡಲು ಏನು ದಾಡಿ ಎಂದು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು. ಸಿಎಂ ಕೇವಲ ದಕ್ಷಿಣ ಕರ್ನಾಟಕ ಅಂತಾ ಸುತ್ತುತ್ತಾ ಇದ್ದರೆ, ಇತ್ತ ಯಾವೊಬ್ಬ ಉಸ್ತುವಾರಿ ಸಚಿವರು ತಮಗೆ ಜಿಲ್ಲೆಗಳ ಸಮಸ್ಯೆಗಳ ಉಸಾಬರಿನೇ ಬೇಡ ಅನ್ನುವ ಮಟ್ಟಕ್ಕೆ ಇಳಿದಿದ್ದಾರೆ. ಯಾರು ಸಹ ಜನರ ಸಮಸ್ಯೆಗಳನ್ನ ಆಲಿಸುತ್ತಿಲ್ಲ ಎಂದು ಆರೋಪಿಸಿದರು.

    ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹಳೆಯ ಕೆಲವೊಬ್ಬರಿಗೆ ಟಿಕೆಟ್ ನೀಡುತ್ತಿಲ್ಲ ಎಂಬ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಟಿಕೆಟ್ ಕೊಟ್ಟರೇ ಸ್ಪರ್ಧೆ ಮಾಡುತ್ತೇನೆ. ಟಿಕೆಟ್ ಸಿಕ್ಕಿಲ್ಲ ಅಂದರೆ ನಮಸ್ಕಾರ ಮಾಡಿ ಹತ್ತು ರೂಪಾಯಿ ದಾನ ಮಾಡಿ, ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಿವೃತ್ತ ಐಎಎಸ್ ಅಧಿಕಾರಿ ರತ್ನಾಪ್ರಭಾರಿಗೆ ಪಕ್ಷಕ್ಕೆ ಆಹ್ವಾನಿಸಿದ ಅನಂತಕುಮಾರ್ ಹೆಗಡೆ

    ನಿವೃತ್ತ ಐಎಎಸ್ ಅಧಿಕಾರಿ ರತ್ನಾಪ್ರಭಾರಿಗೆ ಪಕ್ಷಕ್ಕೆ ಆಹ್ವಾನಿಸಿದ ಅನಂತಕುಮಾರ್ ಹೆಗಡೆ

    ಬೆಂಗಳೂರು: ನಿವೃತ್ತ ಐಎಎಸ್ ಅಧಿಕಾರಿ ರತ್ನಪ್ರಭಾರವರಿಗೆ ಬಿಜೆಪಿಗೆ ಸೇರುವಂತೆ ಟ್ವಿಟ್ಟರ್ ಮೂಲಕ ಕೇಂದ್ರ ಕೌಶಾಲ್ಯಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಆಹ್ವಾನ ನೀಡಿದ್ದಾರೆ.

    ಈ ಕುರಿತು ತಮ್ಮ ಟ್ವಿಟ್ಟರಿನಲ್ಲಿ, ನಿವೃತ್ತ ಐಎಎಸ್ ಅಧಿಕಾರಿಯಾದ ರತ್ನಪ್ರಭಾವರವರು ಬಿಜೆಪಿಗೆ ಸೇರ್ಪಡೆಗೊಳ್ಳುವುದುನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಅಲ್ಲದೇ ಅವರು ಐಎಎಸ್ ಅಧಿಕಾರಿಯಾಗಿದ್ದಾಗ ಮಾಡಿದ ಹಲವು ಕಾರ್ಯಗಳ ಅನುಭವವನ್ನು ರಾಜಕೀಯದಲ್ಲಿ ಮುಂದುವರಿಸಿ, ಜನರ ಏಳಿಗೆಗೆ ದುಡಿಯುವಂತಾಗಬೇಕು ಎಂದು ಬರೆದುಕೊಂಡಿದ್ದಾರೆ.

    ಕಳೆದ ಎರಡು-ಮೂರು ದಿನಗಳಿಂದ ಬಿಜೆಪಿ ವಲಯದಲ್ಲಿ ರತ್ನಪ್ರಭಾ ಹೆಸರು ಭಾರೀ ಕೇಳಿಬರುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಅವರನ್ನು ಕಾಂಗ್ರೆಸ್ಸಿನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸುವ ಕುರಿತು ಊಹಾಪೋಹಗಳು ಕೇಳಿಬರುತ್ತಿವೆ. ಅಲ್ಲದೇ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ರತ್ನಪ್ರಭಾರವರನ್ನು ಅಭ್ಯರ್ಥಿಯನ್ನಾಗಿ ಮಾಡಿದರೇ, ಎಡ ಸಮುದಾಯದ ಮತಗಳ ಜೊತೆಗೆ ಪ್ರಜ್ಞಾವಂತ ಮತದಾರರನ್ನು ಸೆಳೆಯಬಹುದು ಎಂಬುದು ಬಿಜೆಪಿಯ ಲೆಕ್ಕಚಾರವಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಖರ್ಗೆ ವಿರುದ್ಧ ನಿವೃತ್ತ ಐಎಎಸ್ ಅಧಿಕಾರಿ ರತ್ನಪ್ರಭಾ ಸ್ಪರ್ಧೆ?

    ಕೇಂದ್ರ ಸಚಿವರ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ಜಾಲತಾಣಿಗರು, ನೀವೊಬ್ಬ ಕೇಂದ್ರ ಸಚಿವರು, ಪಕ್ಷದೊಳಗೆ ಏನು ನಡೆಯುತ್ತಿದೆ ಎಂಬುದು ನಿಮಗಲ್ಲದೇ ಬೇರೆ ಇನ್ನಾರಿಗೆ ತಿಳಿಯುತ್ತದೆ ಎಂದು ಕಿಚಾಯಿಸಿದ್ದಾರೆ. ಅಲ್ಲದೇ ರತ್ನಾಪ್ರಭಾರವರನ್ನು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸುವ ಕುರಿತು ಹಲವರು ತಮ್ಮ ಅಭಿಪ್ರಾಯಗಳನ್ನು ಸಚಿವರಿಗೆ ರೀ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಕಲಬುರಗಿ ಲೋಕಸಭಾ ಕ್ಷೇತ್ರದ ಟಿಕೆಟ್‍ಗಾಗಿ ಬಿಎಸ್‍ವೈ ಎದುರೇ ಕಿತ್ತಾಡಿಕೊಂಡ ಸ್ಥಳೀಯ ನಾಯಕರು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಚಿವ ಅನಂತ್‍ಕುಮಾರ್ ಹೆಗಡೆ ಮುಂದೆಯೇ ಟಿಕೆಟ್ ವಂಚನೆಗೊಳಗಾದವರಿಂದ ಕಿತ್ತಾಟ!

    ಸಚಿವ ಅನಂತ್‍ಕುಮಾರ್ ಹೆಗಡೆ ಮುಂದೆಯೇ ಟಿಕೆಟ್ ವಂಚನೆಗೊಳಗಾದವರಿಂದ ಕಿತ್ತಾಟ!

    ಕಾರವಾರ: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮುಂದೆಯೇ ಟಿಕೆಟ್ ವಂಚನೆಗೊಳಗಾದವರು ಒಬ್ಬರಿಗೊಬ್ಬರು ಕಿತ್ತಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದಿದೆ.

    ಬಿಜೆಪಿ ಮಹಿಳಾ ಮೋರ್ಚಾ ಮುಖಂಡೆ ಸುಮನಾ ಕುಲಕರ್ಣಿ ಹಾಗೂ ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷ ಫಣಿರಾಜ್ ನಡುವೆ ಕಿತ್ತಾಟ ನಡೆದಿದೆ. ಮುಂಡಗೋಡಿನ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಫಣಿರಾಜ್ ಹಾಗೂ ಆತನ ಪತ್ನಿಗೆ ಬಿಜೆಪಿಯಿಂದ ಟಿಕೆಟ್ ನೀಡಲಾಗಿತ್ತು. ಇಂದು ಕೇಂದ್ರ ಸಚಿವ ಅನಂತ್ ಕುಮಾರ್ ನೇತೃತ್ವದಲ್ಲಿ ಪಟ್ಟಣದಲ್ಲಿ ಚುನಾವಣೆ ಸಂಬಂಧ ಅಭ್ಯರ್ಥಿಗಳ ಹಾಗೂ ಮುಖಂಡರ ಸಭೆ ಕರೆಯಲಾಗಿತ್ತು.

    ಸಭೆಯಲ್ಲಿ ಸಚಿವರ ಮುಂದೆ ತನಗೆ ಟಿಕೆಟ್ ನೀಡದೆ ಗಂಡ-ಹೆಂಡತಿಗೆ ಟಿಕೆಟ್ ನೀಡಿರುವುದಾಗಿ ಸುಮನಾ ಅಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸುಮನಾ ವಿರುದ್ಧ ಸಿಟ್ಟಾಗಿ ಕಿಡಿಕಾರಿದ ಫಣಿರಾಜ್, ಇಬ್ಬರೂ ಸಚಿವರ ಮುಂದೆಯೇ ಕಿತ್ತಾಡಿಕೊಂಡರು. ಕಿತ್ತಾಟ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಸಚಿವ ಅನಂತ್ ಕುಮಾರ್ ಹೆಗಡೆ ಘಟನೆಯ ವಿಡಿಯೋ ಚಿತ್ರಕರಣ ಮಾಡದಂತೆ ತಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಡಬಿಡಂಗಿ ಸರ್ಕಾರ ಬೀಳುತ್ತೆ, ಜನಾದೇಶ ಪಡೆದ ಬಿಜೆಪಿ ಅಧಿಕಾರಕ್ಕೆ ಬರುತ್ತೆ: ಅನಂತ್ ಕುಮಾರ್

    ಎಡಬಿಡಂಗಿ ಸರ್ಕಾರ ಬೀಳುತ್ತೆ, ಜನಾದೇಶ ಪಡೆದ ಬಿಜೆಪಿ ಅಧಿಕಾರಕ್ಕೆ ಬರುತ್ತೆ: ಅನಂತ್ ಕುಮಾರ್

    ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರವು ಶುದ್ಧ ಎಡಬಿಡಂಗಿ ಸರ್ಕಾರವಾಗಿದ್ದು, ಇನ್ನೂ ಸ್ವಲ್ಪ ದಿನಗಳಲ್ಲೇ ಅಧಿಕಾರಕಳೆದುಕೊಂಡು ಜನಾದೇಶ ಪಡೆದಿರುವ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆಂದು ಕೇಂದ್ರ ರಾಸಾಯನಿಕ ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ತಿಳಿಸಿದ್ದಾರೆ.

    ನಗರದ ಬಸವನಗುಡಿಯ ನಿವಾಸದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮೈತ್ರಿ ಒಂದು ಅಪವಿತ್ರ ಮೈತ್ರಿಯಾಗಿದೆ. ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದಗಿನಿಂದಲೂ ಶೀತಲ ಸಮರ ನಡೆಯುತ್ತಲೇ ಇದೇ. ಈ ಎಡಬಿಡಂಗಿ ಸರ್ಕಾರದ ನಾಯಕರುಗಳು ಚುನಾವಣಾ ಪೂರ್ವದಲ್ಲಿ ಒಬ್ಬರಿಗೊಬ್ಬರು ಪರಸ್ಪರ ಕೆಸರೆರಚಾಟ ನಡೆಸಿದ್ದರು. ಇದರಿಂದಾಗಿ ಇಬ್ಬರೂ ಒಟ್ಟಿಗೆ ಉಳಿಯಲು ಸಾಧ್ಯವಿಲ್ಲ. ಕುಮಾರಸ್ವಾಮಿಯವರ ಸರ್ಕಾರ ಬಾಲಗ್ರಹಪೀಡಿತ ಸರ್ಕಾರವಾಗಿದೆ. ಹೀಗಾಗಿ ಈ ಸರ್ಕಾರ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ. ಸರ್ಕಾರ ಬಿದ್ದ ಕೂಡಲೇ ಹೊಸ ಸಮೀಕರಣ ಆಗುತ್ತದೆ. ಆಗ ಜನಾದೇಶ ಪಡೆದ ಬಿಜೆಪಿಯು ಮತ್ತೊಮ್ಮೆ ಅಧಿಕಾರದ ಗದ್ದುಗೆಯನ್ನು ಹಿಡಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಈ ವೇಳೆ ಬಿಬಿಎಂಪಿ ಹೊಸ ತೆರಿಗೆ ಕುರಿತು ಮಾತನಾಡಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಹೇರಲು ಹೊರಟಿರುವ ಹೊಸ ತೆರಿಗೆ ಸರಿಯಲ್ಲ. ಮೊದಲು ತಮ್ಮ ಸಂಸ್ಥೆಯಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಗಟ್ಟಲಿ. ಇದರಿಂದಾಗಿ ಸರ್ಕಾರಕ್ಕೆ ಸುಮಾರು 3 ಸಾವಿರ ಕೋಟಿ ರೂಪಾಯಿ ಉಳಿಕೆಯಾಗುತ್ತದೆ. ಕೇವಲ 40 ಕೋಟಿ ರೂಪಾಯಿ ತೆರಿಗೆ ಸಂಗ್ರಹಕ್ಕೆ ಜನಸಾಮಾನ್ಯರಿಗೆ ಹೊರೆ ಹಾಕುವುದು ಸರಿಯಲ್ಲ ಎಂದು ಹೇಳಿದರು.

    ತೆಲಂಗಾಣದಿಂದ ಕರ್ನಾಟಕದ ಶಿವರಾಮಪುರದಲ್ಲಿ ಅತಿಕ್ರಮಣ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರತಿರಾಜ್ಯವು ತನ್ನದೆಯಾದ ಗಡಿಯನ್ನು ಹೊಂದಿದ್ದು, ಅದರ ನೆಲ, ಜಲ ಹಾಗೂ ನಾಡುನುಡಿಯನ್ನು ಕಾಯ್ದುಕೊಳ್ಳುವುದು ರಾಜ್ಯ ಸರ್ಕಾರದ ಕರ್ತವ್ಯವಾಗಿದೆ. ತೆಲಂಗಾಣದ ಕ್ರಮ ಸರಿಯಲ್ಲ. ಕೂಡಲೇ ಸಿಎಂ ಕುಮಾರಸ್ವಾಮಿಯವರು ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ಜೊತೆ ಈ ಬಗ್ಗೆ ಮಾತುಕತೆ ನಡೆಸಬೇಕೆಂದು ಆಗ್ರಹಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡುವ ಮೊದಲು ಅನಂತ್ ಕುಮಾರ್ ಮನೆಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧ ಹಾಗೂ ಇನ್ನೂ ಅನೇಕ ಬಿಬಿಎಂಪಿ ಸದಸ್ಯರು ಪಾಲ್ಗೊಂಡಿದ್ದರು. ಈ ವೇಳೇ ತಾರಾರವರು ಅನಂತ್ ಕುಮಾರ್ ರವರಿಗೆ ರಾಖಿ ಕಟ್ಟುವ ಮೂಲಕ ಶುಭ ಹಾರೈಸಿದರು. ಅಲ್ಲದೇ ಅಣ್ಣ-ತಂಗಿಯ ವಿಶೇಷವಾದ ದಿನದಂದು ಎಲ್ಲರೂ ಪರಸ್ಪರ ರಕ್ಷಿಸಿಕೊಂಡು, ಭಾರತ ಮಾತೆ ಹಾಗೂ ಪ್ರಕೃತಿ ಮಾತೆಯನ್ನು ರಕ್ಷಣೆ ಮಾಡಬೇಕೆಂದು ಸಚಿವರು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಂದು ಮಡಿಕೇರಿಗೆ ನಿರ್ಮಲಾ ಸೀತಾರಾಮನ್- ಪ್ರವಾಹ ಪೀಡಿತ ಪ್ರದೇಶಕ್ಕೆ ಪರಿಹಾರ ಘೋಷಣೆ?

    ಇಂದು ಮಡಿಕೇರಿಗೆ ನಿರ್ಮಲಾ ಸೀತಾರಾಮನ್- ಪ್ರವಾಹ ಪೀಡಿತ ಪ್ರದೇಶಕ್ಕೆ ಪರಿಹಾರ ಘೋಷಣೆ?

    ಮಡಿಕೇರಿ: ಪ್ರವಾಸಿಗರ ತಾಣವಾದ ಮಂಜಿನನಗರಿಯಲ್ಲಿ ಅವರಿಸಿದ ಜಲಪ್ರಳಯದಿಂದಾಗಿ ಅಕ್ಷರಶಃ ಬದುಕು ನರಕ ಸದೃಶ್ಯವಾಗಿದೆ. ಕೊಡಗಿನಲ್ಲಿ ಮಳೆ ಅಲ್ಪವಿರಾಮ ನೀಡಿದ್ದರೂ, ಯಾತನೆಗೆ ಮಾತ್ರ ವಿರಾಮವಿಲ್ಲದಂತಾಗಿದೆ. ಈ ಮಧ್ಯೆ ಇಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರವಾಹ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಲು ಕೊಡಗಿಗೆ ಆಗಮಿಸುತ್ತಿದ್ದಾರೆ.

    ಮೈಸೂರಿನಿಂದ ಕುಶಾಲನಗರಕ್ಕೆ ತೆರಳಿ ಅಲ್ಲಿ ಕುವೆಂಪು ಬಡಾವಣೆ, ಸಾಯಿ ಬಡಾವಣೆಗೆ ಭೇಟಿ ನೀಡಲಿದ್ದಾರೆ. ನಂತರ ಭೂಕುಸಿತವಾಗಿರುವ ಮಾದಾಪುರ ಪ್ರದೇಶಕ್ಕೆ ಭೇಟಿ ನೀಡಲಿದ್ದು, ಮಡಿಕೇರಿಯ ಮೈತ್ರಿ ಹಾಲ್ ನಲ್ಲಿರುವ ಸಂತ್ರಸ್ತರನ್ನ ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ.

    ಇದೇ ವೇಳೆ ನಿರ್ಮಲಾ ಸೀತಾರಾಮನ್, ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ಘೋಷಣೆ ಮಾಡುವ ಸಾಧ್ಯತೆಯಿದೆ.

    ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಮಂಜಿನ ನಗರಿ ಮಡಿಕೇರಿಯಲ್ಲೀಗ ಹಸಿರು ಕಳೆಗುಂದಿದೆ. ಮಳೆ ಅಲ್ಪ ವಿರಾಮ ನೀಡಿದ್ದರಿಂದ ಕೊಡಗು ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಲ್ಲಿಎಲ್ಲಿ ನೋಡಿದ್ರೂ ಅವಶೇಷಗಳೇ ಕಂಡುಬರುತ್ತಿವೆ. ಹಲವೆಡೆ ಊರಿಗೆ ಊರುಗಳೇ ಕೊಚ್ಚಿ ಹೋಗಿವೆ. ಅಲ್ಲೊಂದು ಊರು ಇತ್ತಾ ಅಂತ ಕೇಳೋ ಪರಿಸ್ಥಿತಿ ಬಂದಿದೆ. ಹಟ್ಟಿಹೊಳೆಯ 20ಕ್ಕೂ ಹೆಚ್ಚು ಮನೆಗಳು ಕೊಚ್ಚಿ ಹೋಗಿವೆ. ಊರಿನಲ್ಲಿ ಪುಟ್ಟದಾದ ಹೊಳೆ ಹರಿದು ಹೋಗ್ತಿದೆ. ಮಳೆ ನಿಂತರೂ ಕೊಚ್ಚಿಹೋದ ಊರಿನೊಳಗೆ ಈಗ ತೊರೆಯದ್ದೇ ಸದ್ದಾಗಿದೆ.

    ಇತ್ತ ಜೋಡುಪಾಲ ದುರಂತದ ಪ್ರದೇಶದಲ್ಲೀಗ ನೀರವ ಮೌನ ಆವರಿಸಿದೆ. ಭೂಕುಸಿತದಿಂದ ಕೊಚ್ಚಿಹೋದ ರಸ್ತೆಗಳು, ಮಣ್ಣಿನಡಿಗೆ ಬಿದ್ದ ಮನೆಗಳು ಅಲ್ಲಿನ ಕರುಣಾಜನಕ ಸ್ಥಿತಿಗೆ ಕನ್ನಡಿ ಹಿಡಿಯುತ್ತೆ. ಜೋಡುಪಾಲದಲ್ಲಿ ಸಂತ್ರಸ್ತ ಜನರ ಸ್ಥಿತಿ ಒಂದ್ಕಡೆಯಾದರೆ, ಮೂಕಪ್ರಾಣಿಗಳ ಸ್ಥಿತಿ ಶೋಚನೀಯವಾದೆ. ಇನ್ನು ಆಗಸ್ಟ್ 17ರಂದು ಕಣ್ಮರೆಯಾಗಿದ್ದ ಹೆಬ್ಬಟ್ಟಗೇರಿ ಗ್ರಾಮದ ವೃದ್ದೆ ಉಮ್ಮವ್ವರ ಮೃತದೇಹ ಮಣ್ಣಿನಡಿಯಲ್ಲಿ ಪತ್ತೆಯಾಗಿದೆ. ಇತ್ತ ಸಾಕುನಾಯಿ, ಬೆಕ್ಕು, ಜಾನುವಾರುಗಳಿಗೆ ಆಹಾರ ಇಲ್ಲದೆ ಸಂಕಷ್ಟ ಎದುರಾಗಿದೆ.

    ನಿರಾಶ್ರಿತರಿಗೆ ಮನೆ ನಿರ್ಮಾಣ ಮಾಡುವುದು ಸರ್ಕಾರದ ಕರ್ತವ್ಯ. 76 ಶಾಲೆಗಳು ರಿಪೇರಿಯಾಗಬೇಕಿದೆ. ಮಕ್ಕಳನ್ನು ಪಕ್ಕದೂರಿನ ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು. ನಿರಾಶ್ರಿತ ವಿದ್ಯಾರ್ಥಿಗಳಿಗೆ ಕೇಂದ್ರದಲ್ಲೇ ಶಿಕ್ಷಣ ನೀಡಲಾಗುವುದು. ಇನ್ನೆರಡು ದಿನದಲ್ಲಿ ಪುಸ್ತಕ, ಸಮವಸ್ತ್ರ ವಿತರಣೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದ್ದಾರೆ.

    ಸುಳ್ಯಕ್ಕೆ ಮಡಿಕೇರಿ, ಭಾಗಮಂಡಲ, ಕರಿಕೆ, ಪಾಣತ್ತೂರು, ಆಲೆಟ್ಟಿ ಮಾರ್ಗವಾಗಿ ಏಳು ಬಸ್‍ಗಳನ್ನು ಮಡಿಕೇರಿ ಡಿಪೋದಿಂದ ಹಾಕಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನಾಳೆ ದಕ್ಷಿಣ ಕನ್ನಡ, ಕೊಡಗಿಗೆ ಸಚಿವ ಡಿವಿಎಸ್ ಭೇಟಿ

    ನಾಳೆ ದಕ್ಷಿಣ ಕನ್ನಡ, ಕೊಡಗಿಗೆ ಸಚಿವ ಡಿವಿಎಸ್ ಭೇಟಿ

    ಬೆಂಗಳೂರು: ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿವಿ ಸದಾನಂದ ಗೌಡ ಅವರು ಶನಿವಾರ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

    ಈ ಕುರಿತು ಸಚಿವರು ಟ್ವೀಟ್ ಮಾಡಿದ್ದು, ನಾನು ನಾಳೆ ಮತ್ತು ನಾಡಿದ್ದು ಕೇಂದ್ರ ಸರಕಾರದ ಪರವಾಗಿ ಮಳೆ ಹಾನಿಗೆ ತತ್ತರಿಸಿರುವ ಕೊಡಗು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಲಿದ್ದು ದಿನ ಪೂರ್ತಿ ಅಲ್ಲೇ ಇರಲಿದ್ದೇನೆ. ಅದೇ ರೀತಿ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಮಳೆ ಹಾನಿಗೊಳಗಾದ ಜನರೊಂದಿಗೆ ಇದ್ದು ಜಿಲ್ಲಾಡಳಿತದ ಸಭೆ ನಡೆಸಲಿದ್ದೇವೆ ಅಂತ ಬರೆದುಕೊಂಡಿದ್ದಾರೆ. ಅಲ್ಲದೇ ಈ ಟ್ವೀಟನ್ನು ಸಂಸದರಾದ ನಳಿನ್ ಕುಮಾರ್ ಕಟೀಲ್ ಹಾಗೂ ಪ್ರತಾಪ್ ಸಿಂಹ ಅವರಿಗೆ ಟ್ಯಾಗ್ ಮಾಡಿದ್ದಾರೆ.

    ಕಳೆದ ಹಲವು ದಿನಗಳಿಂದ ದಕ್ಷಿಣ ಕನ್ನಡ ಹಾಗೂ ಕೊಡಗಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ನದಿಗಳು ತುಂಬಿ ಹರಿಯುತ್ತಿರೋ ಪರಿಣಾಮ ಜನಜೀವನ ಅಸ್ತವ್ಯಸ್ತ ಆಗಿದೆ. ಹಲವು ಮನೆಗಳು, ಧಾರ್ಮಿಕ ಸ್ಥಳಗಳು ಜಲಾವೃತವಾಗಿದ್ದು, ಕಂಡು ಕೇಳರಿಯದ ಮಳೆಗೆ ಜನಸಾಮಾನ್ಯರು ನಲುಗಿ ಹೋಗಿದ್ದಾರೆ.

    ಕೊಡಗಿನಲ್ಲಿ ಈಗಾಗಲೇ ಮಳೆಯಲ್ಲಿ ನಿರಾಶ್ರಿತರಾದವರಿಗೆ 10 ಗಂಜಿಕೇಂದ್ರಗಳನ್ನು ತೆರೆಯಲಾಗಿದ್ದು, ಹೆಲಿಕಾಪ್ಟರ್ ಮೂಲಕ ಕಾರ್ಯಾಚರಣೆ ನಡೆಸಿ ಗುಡ್ಡದಲ್ಲಿ ಸಿಲುಕಿಕೊಂಡವರ ರಕ್ಷಣೆ ನಡೆಯುತ್ತಿದೆ. ಕೊಡಗಿನಲ್ಲಿ ಕುಸಿದು ಬಿದ್ದು ರಸ್ತೆ ಸಂಪರ್ಕ ಕಡಿತಕ್ಕೆ ಕಾರಣವಾಗಿರುವ ರಸ್ತೆಗಳ ದುರಸ್ತಿಗಾಗಿ ಲೋಕೋಪಯೋಗಿ ಇಲಾಖೆಯ ಉಪವಿಭಾಗೀಯ ಕಚೇರಿಯನ್ನೇ ಮಡಿಕೇರಿಯಲ್ಲಿ ಇಂದಿನಿಂದ ತೆರೆಯಲಾಗುತ್ತಿದೆ.

    ಈಗಾಗಲೇ ಸ್ಥಳೀಯರ ನೆರವಿನಿಂದ ಸಂತ್ರಸ್ತರನ್ನು ಮಡಿಕೇರಿಗೆ ಸ್ಥಳಾಂತರಿಸಲಾಗಿದೆ. ನೀರು ಹರಿವು ಹೆಚ್ಚಾಗಿರುವ ಕಡೆಗಳಿಗೆ ತೆರಳಲು ಅಸಾಧ್ಯವಾಗಿರುವ ಸ್ಥಳಗಳಿಗೆ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಬೇಕಿದೆ ಅದರೆ ಹವಾಮಾನ ವೈಪರೀತ್ಯದಿಂದ ಹೆಲಿಕಾಪ್ಟರ್ ಅ ಸ್ಥಳಗಳಿಗೆ ತಲುಪಲು ಕಷ್ಟಕರವಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv