Tag: Central Health Department

  • 1-10 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು

    1-10 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು

    ನವದೆಹಲಿ: ಕೊರೊನಾ ಮೂರನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಾರದು ಎನ್ನುವ ಮಾತುಗಳ ನಡುವೆ ಈಗ 1-10 ವರ್ಷದೊಳಗಿನ ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿರುವ ಬಗ್ಗೆ ವರದಿಗಳು ಲಭ್ಯವಾಗಿದ್ದು, ಈ ಅಂಕಿ ಅಂಶಗಳು ಆತಂಕವನ್ನು ಹೆಚ್ಚು ಮಾಡಿದೆ.

    ಮೂರನೇ ಅಲೆಗೂ ಮುನ್ನ ಮಕ್ಕಳಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಪ್ರತಿ ನೂರು ಮಂದಿ ಸೋಂಕಿತರ ಪೈಕಿ ಏಳು ಮಕ್ಕಳಿಗೆ ಕೊರೊನಾ ತಗುಲುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಅಂಕಿ ಅಂಶಗಳು ಹೇಳುತ್ತಿವೆ.

    ಕಳೆದ ಮಾರ್ಚ್ ನಲ್ಲಿ 1-10 ವರ್ಷದ ಮಕ್ಕಳಲ್ಲಿ ಶೇ.2.80ರಷ್ಟು ಸೋಂಕು ಕಂಡು ಬಂದಿತ್ತು. ಅಗಸ್ಟ್ ನಲ್ಲಿ ಇದು ಶೇ.7.04ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆಗೆ ತಜ್ಞರು ವರದಿ ನೀಡಿದ್ದಾರೆ. 1-10 ವರ್ಷದ ಮಕ್ಕಳಲ್ಲಿ ಸ್ಥಿರವಾಗಿ ಸೋಂಕು ಏರುತ್ತಿದ್ದು, ಮೂರನೇ ಅಲೆ ಹೆಚ್ಚಾದಲ್ಲಿ ಮಕ್ಕಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 13 ಸಾವಿರ ಶಿಕ್ಷಕರ ಕೊರತೆ ಇದೆ: ಸಚಿವ ನಾಗೇಶ್

    2020 ಜೂನ್ ನಿಂದ 2021 ಪೆಬ್ರವರಿವರೆಗೂ ಅಂದರೆ ಒಂಭತ್ತು ತಿಂಗಳ ಅವಧಿಯಲ್ಲಿ ಶೇ.2.72 ರಿಂದ ಶೇ.3.59ರಷ್ಟು ವ್ಯಾಪ್ತಿಯಲ್ಲಿ ಮಕ್ಕಳಲ್ಲಿ ಸೋಂಕು ಕಂಡು ಬಂದಿತ್ತು. ಆದರೆ ಈ ವರ್ಷ ಐದು ತಿಂಗಳ ಅವಧಿಯಲ್ಲಿ ಶೇ.4, 5ರಷ್ಟು ಮಕ್ಕಳಲ್ಲಿ ಸೋಂಕು ಕಾಣಿಸಿಕೊಳ್ಳುವುದು ಹೆಚ್ಚಾಗಿದ್ದು, ಕೇಂದ್ರ ಆರೋಗ್ಯ ಇಲಾಖೆ ಮಟ್ಟದಲ್ಲೂ ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿರುವ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಸೆ.17 ರಿಂದ ಕೊಡಗಿನಲ್ಲಿ ಶಾಲಾ-ಕಾಲೇಜು ಆರಂಭ

    ಲಭ್ಯವಿರುವ ಮಾಹಿತಿಗಳ ಪ್ರಕಾರ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ, ಆಗಸ್ಟ್ ತಿಂಗಳಲ್ಲಿ ಮಕ್ಕಳಲ್ಲಿ ಕೊರೊನಾ ಪ್ರಕರಣಗಳು ಮಿಜೋರಾಂನಲ್ಲಿ ಅತಿ ಹೆಚ್ಚು ಅಂದರೆ ಶೇ.16.48ರಷ್ಟು ದಾಖಲಾಗಿವೆ. ದೆಹಲಿಯಲ್ಲಿ ಅತಿ ಕಡಿಮೆ ಅಂದರೆ ಶೇ.2.25ರಷ್ಟು ಪ್ರಕರಣ ದಾಖಲಾಗಿವೆ. ಮೇಘಾಲಯ ಶೇ.9.35, ಮಣಿಪುರ ಶೇ.8.74, ಕೇರಳ ಶೇ.8.62, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಶೇ.8.2, ಸಿಕ್ಕಿಂ ಶೇ.8.02, ದಾದ್ರಾ ಮತ್ತು ನಗರ ಹವೇಲಿ ಶೇ.7.69 ಹಾಗೂ ಅರುಣಾಚಲ ಪ್ರದೇಶದಲ್ಲಿ ಶೇ.7.38ರಷ್ಟು ಮಕ್ಕಳಲ್ಲಿ ಸೋಂಕು ಕಂಡು ಬಂದಿದೆ.

    ರಾಷ್ಟ್ರೀಯ ಸರಾಸರಿ ಪ್ರಮಾಣ ಶೇ.7.04ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿವೆ. ಆಗಸ್ಟ್ ನಲ್ಲಿ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಪ್ರಕರಣಗಳು ಪುದುಚೇರಿ ಶೇ.6.95, ಗೋವಾ ಶೇ.6.86, ನಾಗಾಲ್ಯಾಂಡ್ ಶೇ.5.48, ಅಸ್ಸಾಂ ಶೇ.5.04, ಕರ್ನಾಟಕ ಶೇ.4.59, ಆಂಧ್ರ ಪ್ರದೇಶ ಶೇ.4.53, ಒಡಿಶಾ ಶೇ.4.18, ಮಹಾರಾಷ್ಟ್ರ ಶೇ.4.08, ತ್ರಿಪುರ ಶೇ.3.54, ದೆಹಲಿ ಶೇ.2.25ರಷ್ಟು ದಾಖಲಾಗಿವೆ.

  • 24 ಗಂಟೆಯಲ್ಲಿ 81,533 ಮಂದಿ ಕೊರೊನಾ ಮುಕ್ತ – ಭಾರತದಲ್ಲಿ ಚೇತರಿಕೆ ಪ್ರಮಾಣ ಏರಿಕೆ

    24 ಗಂಟೆಯಲ್ಲಿ 81,533 ಮಂದಿ ಕೊರೊನಾ ಮುಕ್ತ – ಭಾರತದಲ್ಲಿ ಚೇತರಿಕೆ ಪ್ರಮಾಣ ಏರಿಕೆ

    ನವದೆಹಲಿ: ದೇಶದಲ್ಲಿ ಕೊರೊನಾದಿಂದ ಗುಣಮುಖಗೊಳ್ಳುವವರ ಪ್ರಮಾಣ 77.77% ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 81,533 ಮಂದಿ ಚೇತರಿಕೆ ಕಂಡಿದ್ದು, ಇದು ಒಂದೇ ದಿನದಲ್ಲಿ ಗುಣಮುಖಗೊಂಡವರ ಗರಿಷ್ಠ ಸಂಖ್ಯೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

    ಒಂದು ಕಡೆ ದಾಖಲೆ ಪ್ರಮಾಣದಲ್ಲಿ ಸೋಂಕು ಏರಿಕೆಯಾಗುತ್ತಿದ್ದು ಸಾವು ಸಂಭವಿಸುತ್ತಿವೆ. ಮತ್ತೊಂದು ಕಡೆ ಚೇತರಿಕೆ ಪ್ರಮಾಣವೂ ಕೂಡಾ ಹೆಚ್ಚಾಗಿದೆ. ಈ ಮೂರು ವಲಯಗಳಲ್ಲಿ ಐದು ರಾಜ್ಯಗಳು ಪ್ರಮುಖ ಪಾತ್ರ ನಿರ್ವಹಿಸಿವೆ. ಈವರೆಗೂ ದೇಶದಲ್ಲಿ 36,24,196 ಮಂದಿ ಗುಣಮುಖವಾಗಿದ್ದು, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ಉತ್ತರ ಪ್ರದೇಶದಲ್ಲಿ 60% ಮಂದಿ ಚೇತರಿಕೆ ಕಂಡಿದ್ದಾರೆ.

    ಕಳೆದ 24 ಗಂಟೆಯಲ್ಲಿ ದೇಶದಲ್ಲಿ 97,570 ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ ಈ ಐದು ರಾಜ್ಯದ 60% ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ, ದೆಹಲಿಯಲ್ಲಿ 69% ಸಾವುಗಳು ವರದಿಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

  • ಒಂದೇ ದಿನದಲ್ಲಿ 50 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು – 10 ಲಕ್ಷ ಮಂದಿ ಕೊರೊನಾದಿಂದ ಗುಣಮುಖ

    ಒಂದೇ ದಿನದಲ್ಲಿ 50 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು – 10 ಲಕ್ಷ ಮಂದಿ ಕೊರೊನಾದಿಂದ ಗುಣಮುಖ

    ನವದೆಹಲಿ: ಕಳೆದ 24 ಗಂಟೆಯಲ್ಲಿ ದೇಶದ 52,123 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಈವರೆಗಿನ ಎಲ್ಲ ದಾಖಲೆಗಳನ್ನು ಪುಡಿಗಟ್ಟಿದೆ.

    ಇದೇ ಮೊದಲು ಬಾರಿಗೆ ಒಂದೇ ದಿನಕ್ಕೆ ಐವತ್ತು ಸಾವಿರ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ನಿನ್ನೆ 775 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 15,83,792ಕ್ಕೆ ಏರಿಕೆಯಾಗಿದ್ದು, ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 34,968ಕ್ಕೆ ಏರಿದೆ. ಸದ್ಯ 5,28,242 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ದಾಖಲೆಯ ಸೋಂಕಿತರ ಏರಿಕೆಯ ನಡುವೆ ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 10,20,582ಕ್ಕೆ ಏರಿದ್ದು, 64-65% ಮಂದಿ ಕೊರೊನಾದಿಂದ ಗುಣಮುಖವಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದೆ. ಬುಧವಾರ ಒಂದೇ ದಿನ 4,46,642 ಮಂದಿಗೆ ಕೊರೊನಾ ಟೆಸ್ಟ್ ಮಾಡಿದ್ದು, ಈವರೆಗೂ ದೇಶದಲ್ಲಿ 1,81,90,382 ಪರೀಕ್ಷೆಗಳನ್ನು ನಡೆಸಿದೆ ಎಂದು ಐಸಿಎಂಆರ್ ಹೇಳಿಕೊಂಡಿದೆ.

  • ಸಾರ್ವಜನಿಕರೇ, ಕೊರೊನಾ ಕುರಿತ ಪ್ರಶ್ನೆ ಕೇಳಿ – ಉತ್ತರ ನೀಡುತ್ತೆ ಕೇಂದ್ರ ಸರ್ಕಾರ

    ಸಾರ್ವಜನಿಕರೇ, ಕೊರೊನಾ ಕುರಿತ ಪ್ರಶ್ನೆ ಕೇಳಿ – ಉತ್ತರ ನೀಡುತ್ತೆ ಕೇಂದ್ರ ಸರ್ಕಾರ

    ನವದೆಹಲಿ: ಬೆನ್ನು ಬಿಡದೆ ಕಾಡುತ್ತಿರುವ ಕೊರೊನಾ ವೈರಸ್ ಸಂಬಂಧ ಸಾರ್ವಜನಿಕರಲ್ಲಿ ನೂರಾರು ಪ್ರಶ್ನೆಗಳಿವೆ. ಈ ಗೊಂದಲಗಳನ್ನು ಬಗೆಹರಿಸಲು ಈಗ ಕೇಂದ್ರ ಆರೋಗ್ಯ ಇಲಾಖೆ ಮುಂದಾಗಿದ್ದು, ವಿನೂತನ ಪ್ರಯೋಗವೊಂದನ್ನು ಆರಂಭಿಸಿದೆ.

    ಟ್ವಿಟರ್‌ನಲ್ಲಿ @CovidIndiaSeva ಗೆ ಸಾರ್ವಜನಿಕರು ನೇರವಾಗಿ ತಮ್ಮ ಪ್ರಶ್ನೆಗಳನ್ನು ಟ್ವೀಟ್ ಮಾಡಬಹುದಾಗಿದೆ. ಜನರ ಪ್ರಶ್ನೆಗಳಿಗೆ ಇನ್ಮುಂದೆ ಕೇಂದ್ರ ಆರೋಗ್ಯ ಇಲಾಖೆ ಉತ್ತರಿಸಲಿದೆ.

    ಕೊರೊನಾ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡ ಕ್ರಮಗಳ ಇತ್ತೀಚಿನ ಹೊಸ ಮಾಹಿತಿಗಳು, ಸಾರ್ವಜನಿಕರ ಪ್ರಶ್ನೆಗಳು, ಆರೋಗ್ಯ ಸೇವೆಗಳು, ರೋಗಲಕ್ಷಣಗಳನ್ನು ಹೊಂದಿರುವವರ ಸಹಾಯಕ್ಕಾಗಿ ಇಲ್ಲಿ ಮಾರ್ಗದರ್ಶನ ನೀಡಲಾಗುತ್ತದೆ.

    ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಪ್ರತಿಕ್ರಿಯಿಸಿದ್ದು, ಆನ್‍ಲೈನ್ ಮೂಲಕ ಜನರಿಗೆ ಪರಿಹಾರ ಕಂಡುಕೊಂಡುವ ಪ್ರಯತ್ನ ಮಾಡುತ್ತಿರುವುದು ಸಂತಸವಾಗಿದೆ. ಇದು ಕೊರೊನಾ ವಿರುದ್ಧದ ಹೋರಾಟದ ಒಂದು ಭಾಗ ಎಂದಿದ್ದಾರೆ.

    ಇದು ಕೇವಲ ಕೇಂದ್ರ ಆರೋಗ್ಯ ಇಲಾಖೆ ಮಾತ್ರ ಒಳಗೊಂಡಿರದೇ ರಾಜ್ಯವಾರು ಪೊಲಿಸ್ ಮಹಾನಿರ್ದೇಶಕರು, ಸರ್ಕಾರ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿ ಕಾರ್ಯಾಲಯ, ಕೇಂದ್ರ ಹಣಕಾಸು, ಕೈಗಾರಿಕೆ, ವಿದೇಶಾಂಗ ಸಚಿವಾಲಗಳಿಗೂ ಟ್ಯಾಗ್ ಮಾಡಲಿದೆ. ಜನರ ಹಲವು ಪ್ರಶ್ನೆಗಳಿಗೆ ಎಲ್ಲ ಆಯಾಮಗಳಲ್ಲೂ ಉತ್ತರಿಸುವ ಪ್ರಯತ್ನ ಮಾಡಲಾಗುತ್ತಿದೆ.

    ಇದಕ್ಕಾಗಿ ತಜ್ಞರ ತಂಡವೊಂದನ್ನು ರಚಿಸಲಾಗಿದ್ದು, ಸಂಪೂರ್ಣ ಪಾರದರ್ಶಕವಾಗಿರಲಿದೆ. ಅಲ್ಲದೇ ಪ್ರಶ್ನೆಯೊಂದು ಹೆಚ್ಚು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡಿಕೊಂಡಿದೆ. ಕಡಿಮೆ ಸಮಯದಲ್ಲಿ ಹೆಚ್ಚು ಪರಿಣಾತ್ಮಕವಾಗಿ ಕಾರ್ಯ ನಿರ್ವಹಿಸುವ ಪ್ರಯತ್ನವೂ ಆಗಿದೆ.

  • ನಿಪಾ ವೈರಸ್‍ಗಿಂತಲೂ ಡೇಂಜರ್ ಅಂತೆ ನಿಪಾ ತಡೆಗಟ್ಟೋ ಟ್ಯಾಬ್ಲೆಟ್!

    ನಿಪಾ ವೈರಸ್‍ಗಿಂತಲೂ ಡೇಂಜರ್ ಅಂತೆ ನಿಪಾ ತಡೆಗಟ್ಟೋ ಟ್ಯಾಬ್ಲೆಟ್!

    ಬೆಂಗಳೂರು: ಕೇರಳದಲ್ಲಿ 12 ಜನರ ಸಾವಿಗೆ ಕಾರಣವಾದ ನಿಪಾ ವೈರಾಣು ತಡೆಗಟ್ಟುವ ಮಾತ್ರೆಗಳು ಕೊನೆಗೂ ಮಲೇಷ್ಯಾದಿಂದ ಕೇರಳವನ್ನು ತಲುಪಿದೆ. ರಿಬಾ ವೈರಿನ್ ಎಂಬ ಈ ಟ್ಯಾಬ್ಲೆಟ್ ಓವರ್ ಡೋಸ್ ಆದರೆ ರೋಗಿಗೆ ತೀರಾ ಅಪಾಯಕಾರಿ ಎಂದು ವೈದ್ಯರು ಮುನ್ನೆಚ್ಚರಿಕೆ ನೀಡಿದ್ದಾರೆ. ಟ್ಯಾಬ್ಲೆಟ್ ಕೈಗೆ ಸಿಕ್ತು ಅಂತಾ ಈ ಟ್ಯಾಬ್ಲೆಟನ್ನು ಬೇಕಾಬಿಟ್ಟಿ ಸೇವಿಸುವಂತಿಲ್ಲ. ಕಾರಣ ಇದು ಓವರ್ ಡೋಸ್ ಆದ್ರೆ ಕಿಡ್ನಿಗಳು ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ತಜ್ಞ ವೈದ್ಯರು ಮುನ್ನೆಚ್ಚರಿಕೆ ನೀಡಿದ್ದಾರೆ.

    ಮೊದಲ ಹಂತದಲ್ಲಿ ಬುಧವಾರ 2 ಸಾವಿರ ಟ್ಯಾಬ್ಲೆಟ್ ಕೇರಳದ ಕೋಯಿಕ್ಕೋಡ್ ಮೆಡಿಕಲ್ ಕಾಲೇಜಿಗೆ ತಲುಪಿದೆ. ಇಂದು ಮತ್ತೆ 8 ಸಾವಿರ ಟ್ಯಾಬ್ಲೆಟ್ ತಲುಪಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಬಂದಿರುವ ಟ್ಯಾಬ್ಲೆಟ್ ಗಳ ಪ್ರಾಯೋಗಿಕ ಪರೀಕ್ಷೆ ಮಾಡಿದ ಬಳಿಕವಷ್ಟೇ ರೋಗಿಗಳಿಗೆ ನೀಡಲು ನಿರ್ಧರಿಸಲಾಗಿದೆ. ದೆಹಲಿಯ ಏಮ್ಸ್ ವೈದ್ಯರ ನಿರ್ದೇಶನದಂತೆ ಟ್ಯಾಬ್ಲೆಟ್ ವಿತರಣೆ ಆರಂಭವಾಗಲಿದೆ. ನಿಪಾ ವೈರಾಣುವನ್ನು ಹತೋಟಿಗೆ ತರಲು ರಿಬಾವೈರಿನ್ ಗೆ ಮಾತ್ರ ಸಾಧ್ಯ. ಹೀಗಾಗಿ ನಾವು ಮಲೇಷ್ಯಾದಿಂದ ಟ್ಯಾಬ್ಲೆಟ್ ತರಿಸಿದ್ದೇವೆ ಎಂದು ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದ್ದಾರೆ. ಇದನ್ನೂ ಓದಿ: ಬಾವಲಿ ಜ್ವರಕ್ಕೆ ಕರ್ನಾಟಕದಲ್ಲೂ ಹೈಅಲರ್ಟ್ – ಈ ಮಾಹಿತಿ ನಿಮಗೆ ಗೊತ್ತಿರಲಿ..!

    ಈ ನಡುವೆ ಕೇರಳದಲ್ಲಿ ನಿಪಾ ವೈರಾಣು ನಿಯಂತ್ರಣದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಕೇರಳದಲ್ಲಿ ನಿಪಾ ವೈರಾಣು ಒಂದೇ ಕಡೆ ಕಾಣಿಸಿದೆ. ಇಲ್ಲಿ ವೈರಾಣು ನಿಯಂತ್ರಣದಲ್ಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ನಿರ್ದೇಶಕರಾದ ಪ್ರೀತಿ ಸುಧನ್ ಹೇಳಿದ್ದಾರೆ. ನಿಪಾ ವೈರಸ್ ಕಾಣಿಸಿದ ಪ್ರದೇಶದಲ್ಲಿದ್ದ 60 ಜನರಿಂದ ಸ್ಯಾಂಪಲ್ ಸಂಗ್ರಹಿಸಿ ಪುಣೆಯ ವೈರಾಲಜಿ ಸಂಶೋಧನಾ ಸಂಸ್ಥೆಗೆ ಕಳಿಸಿದ್ದೇವೆ ಎಂದು ಹೇಳಿದ್ದಾರೆ. ಈಗಾಗಲೇ ಆಸ್ಪತ್ರೆಗೆ ದಾಖಲಾಗಿದ್ದವರಲ್ಲಿ 9 ಜನರನ್ನು ಡಿಸ್ಚಾರ್ಜ್ ಮಾಡಲಾಗಿದೆ. ರೋಗ ಹರಡದಂತೆ ಹಾಗೂ ರೋಗಿಗಳ ಚಿಕಿತ್ಸೆಗಾಗಿ ಕೇರಳ ಸರ್ಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾಧ್ಯವಾದಷ್ಟು ಕೇರಳದ ಕೋಯಿಕ್ಕೋಡ್, ಮಲಪ್ಪುರಂ, ವಯನಾಡ್, ಕಣ್ಣೂರು ಜಿಲ್ಲೆಗಳಿಗೆ ಸಂಚರಿಸುವಾಗ ಎಚ್ಚರಿಕೆಯಿಂದಿರಿ ಎಂದು ಸರ್ಕಾರ ನಿರ್ಬಂಧ ವಿಧಿಸಿದೆ. ಇದನ್ನೂ ಓದಿ: ನಿಪಾ ವೈರಸ್ ಗೆ ಬಲಿಯಾದ ನರ್ಸ್ ಕುಟುಂಬಕ್ಕೆ 20 ಲಕ್ಷ ರೂ.: ಪತಿಗೆ ಸರ್ಕಾರಿ ಉದ್ಯೋಗ ಘೋಷಿಸಿದ ಕೇರಳ

    ಇದನ್ನೂ ಓದಿ: ‘ಬಾವಲಿ ಜ್ವರ’ಕ್ಕೆ ಕೇರಳದಲ್ಲಿ 10 ಸಾವು – ರೋಗ ಲಕ್ಷಣ ಏನು, ತಡೆಗಟ್ಟೋದು ಹೇಗೆ?

  • ಕಳೆದ 7 ತಿಂಗಳಲ್ಲಿ ಕರ್ನಾಟಕದಲ್ಲಿ 7,619 ಜನರಿಗೆ ಹಾವು ಕಡಿತ

    ಕಳೆದ 7 ತಿಂಗಳಲ್ಲಿ ಕರ್ನಾಟಕದಲ್ಲಿ 7,619 ಜನರಿಗೆ ಹಾವು ಕಡಿತ

    – ಭಾರತದಲ್ಲಿ 1.14 ಲಕ್ಷ ಜನರಿಗೆ ಕಚ್ಚಿದ ಹಾವು
    – ಅಗ್ರಸ್ಥಾನದಲ್ಲಿ ಮಹಾರಾಷ್ಟ್ರ-24437 ಜನರಿಗೆ ಹಾವು ಕಡಿತ

    ನವದೆಹಲಿ: ಕಳೆದ 7 ತಿಂಗಳಲ್ಲಿ ಭಾರತದಲ್ಲಿ 1.14 ಲಕ್ಷ ಜನರಿಗೆ ಹಾವು ಕಚ್ಚಿದೆ. ಇದರಲ್ಲಿ 49 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆ ಹಾವು ಕಡಿತಕ್ಕೆ ಸಂಬಂಧಿಸಿದ ವರದಿಯನ್ನು ಬಿಡುಗಡೆ ಮಾಡಿದ್ದು ಈ ವರದಿಯ ಅಂಶ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. ಒಟ್ಟು 1.14 ಲಕ್ಷ ಜನರಲ್ಲಿ 94,874 ಮಂದಿ ಗ್ರಾಮೀಣ ಭಾಗದವರು ಎನ್ನುವುದು ವಿಶೇಷ. ಈ ವರ್ಷ ಏಪ್ರಿಲ್ 1ರಿಂದ ಅಕ್ಟೋಬರ್ 31ರವರೆಗಿನ ಅವಧಿಯ ಲೆಕ್ಕಾಚಾರದಂತೆ ಕರ್ನಾಟಕದಲ್ಲಿ ಒಟ್ಟು 7,619 ಮಂದಿಗೆ ಹಾವು ಕಚ್ಚಿದೆ.

    ಹಾವು ಕಡಿತಕ್ಕೊಳಗಾದವರ ಪಟ್ಟಿಯಲ್ಲಿ ಮಹಾರಾಷ್ಟ್ರ ಅಗ್ರ ಸ್ಥಾನದಲ್ಲಿದೆ. ಕರ್ನಾಟಕ 5ನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ ಒಟ್ಟು 24,437, ಪಶ್ಚಿಮ ಬಂಗಾಳ 23,666, ಆಂಧ್ರಪ್ರದೇಶ 10,735, ಒಡಿಶಾ 7,657, ಕರ್ನಾಟಕ 7,619, ಉತ್ತರ ಪ್ರದೇಶ 6,976, ತಮಿಳುನಾಡು 4,567, ತೆಲಂಗಾಣದಲ್ಲಿ 4,079 ಮಂದಿಗೆ ಹಾವು ಕಚ್ಚಿದೆ.

    ಮಹಾರಾಷ್ಟ್ರದಲ್ಲಿ 19,012 ಪ್ರಕರಣ ಗ್ರಾಮೀಣ ಪ್ರದೇಶ ಹಾಗೂ 5,425 ಪ್ರಕರಣ ನಗರ ಪ್ರದೇಶದಲ್ಲಿ ವರದಿಯಾಗಿವೆ. ನಾಸಿಕ್ ನಲ್ಲಿ 2,696 ಜನರಿಗೆ ಕಚ್ಚಿದರೆ, ಮುಂಬೈನಲ್ಲಿ 133 ಪ್ರಕರಣಗಳು ಮಾತ್ರ ದಾಖಲಾಗಿವೆ.

    ಬಯಲಲ್ಲೇ ಮಲಮೂತ್ರ ವಿಸರ್ಜನೆ, ರಾತ್ರಿ ವೇಳೆಯಲ್ಲಿ ಮನೆಯ ಹೊರಗಡೆ ನಿದ್ದೆ, ಶುಚಿತ್ವದ ಕೊರತೆ, ಹಾವು ಕಚ್ಚಿದರೆ ಏನು ಮಾಡಬೇಕು ಎಂಬ ಮಾಹಿತಿಯ ಕೊರತೆಗಳೇ ಸಾವಿನ ಸಂಖ್ಯೆ ಹಾಗೂ ಹಾವು ಕಡಿತ ಹೆಚ್ಚಲು ಪ್ರಮುಖ ಕಾರಣ ಎನ್ನಲಾಗಿದೆ. ಹಿಂದೆ ಪೋಲಿಯೋ, ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿದಂತೆಯೇ ಹಾವು ಕಡಿತದ ಬಗ್ಗೆಯೂ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ತಜ್ಞ ವೈದ್ಯರು ಹೇಳುತ್ತಾರೆ.

    ಹಾವು ಕಡಿತದ ಬಗ್ಗೆ ಹೆಚ್ಚಿನ ಸಂದರ್ಭಗಳಲ್ಲಿ ವರದಿಯಾಗದೇ ಇರುವುದರಿಂದ ಹಾವು ಕಡಿತದ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ವಿಶ್ವಾದ್ಯಂತ ಒಂದು ವರ್ಷದಲ್ಲಿ 81,000ದಿಂದ 1.38 ಲಕ್ಷ ಜನರು ಹಾವು ಕಚ್ಚಿ ಸಾವನ್ನಪ್ಪುತ್ತಿದ್ದಾರೆ. ಆಫ್ರಿಕಾ, ಏಷ್ಯಾ ಹಾಗೂ ಲ್ಯಾಟಿನ್ ಅಮೆರಿಕದಲ್ಲಿ ಹಾವು ಕಡಿತ ಪ್ರಕರಣಗಳು ಹೆಚ್ಚಾಗಿ ನಡೆಯುತ್ತವೆ.