Tag: Central govt

  • ತುರ್ತು ಶಸ್ತ್ರಾಸ್ತ್ರ ಖರೀದಿಗೆ ಸೇನೆಗೆ ಅಧಿಕಾರ – ಮೋದಿ ಸರ್ಕಾರದ ಮಹತ್ವದ ನಿರ್ಧಾರ

    ತುರ್ತು ಶಸ್ತ್ರಾಸ್ತ್ರ ಖರೀದಿಗೆ ಸೇನೆಗೆ ಅಧಿಕಾರ – ಮೋದಿ ಸರ್ಕಾರದ ಮಹತ್ವದ ನಿರ್ಧಾರ

    ನವದೆಹಲಿ: ಒಂದು ಕಡೆ ಚೀನಾ ಯುದ್ಧೋನ್ಮಾದ ಸ್ಥಿತಿಯಲ್ಲಿದೆ. ಮತ್ತೊಂದೆಡೆ ಜಮ್ಮು-ಕಾಶ್ಮೀರದಲ್ಲಿ ಅಮರನಾಥ ಯಾತ್ರಿಗಳ ಹತ್ಯೆ ನಡೆದಿದೆ. ಪಾಕಿಸ್ತಾನ ಗಡಿಯಲ್ಲೂ ವಾತಾವರಣ ಕಾವೇರಿದೆ. ಇಂಥ ಸ್ಥಿತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.

    ತುರ್ತು ಶಸ್ತ್ರಾಸ್ತ್ರಗಳ ಖರೀದಿಗೆ ಕೇಂದ್ರ ಸರ್ಕಾರ ಸೇನೆಗೆ ಅಧಿಕಾರ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ರಾಷ್ಟ್ರೀಯ ಪತ್ರಿಕೆಗಳು ವರದಿ ಮಾಡಿವೆ.

    ಫಿರಂಗಿಗಳು, ಟ್ಯಾಂಕ್ ಶೆಲ್‍ಗಳು, ಫ್ಯೂಸ್‍ಗಳು ಹಾಗೂ ಶಸ್ತ್ರಾಸ್ತ್ರಗಳ ಬಿಡಿ ಭಾಗಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

    ಕಳೆದ ವರ್ಷ ಉರಿಯಲ್ಲಿ ಉಗ್ರರ ವಿರುದ್ಧ ಸೇನೆ ಕಾರ್ಯಾಚರಣೆ ನಡೆಸಿದ ನಂತರ ಶಸ್ತ್ರಾಸ್ತ್ರಗಳ ಕೊರತೆ ಉಂಟಾಗಿತ್ತು. ಸೇನೆಯ ಯುದ್ಧ ಸನ್ನದ್ಧತೆಯ ಬಗ್ಗೆ ಆಂತರಿಕ ಪರಿಶೀಲನೆ ನಡೆದಿತ್ತು. ಇದಾದ 10 ದಿನಗಳ ಬಳಿಕ ಭಾರತೀಯ ಸೇನೆ ಗಡಿ ನಿಯಂತ್ರಣಾ ರೇಖೆಯನ್ನು ದಾಟಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದರೂ, 15 ದಿನಗಳ ಕಿರು ಯುದ್ಧ ನಡೆಸಲು ಸೇನೆ ಸನ್ನದ್ಧವಾಗಿರಲು ಕೊರತೆಯಿರುವುದು ಆಂತರಿಕ ಪರಿಶೀಲನೆಯಿಂದ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಶಸ್ತ್ರಾಸ್ತ್ರಗಳು ಹಾಗೂ ಹಲವು ಶಸ್ತ್ರಾಸ್ತ್ರಗಳ ಬಿಡಿ ಭಾಗಗಳನ್ನ ಖರೀದಿಸಲು ಸರ್ಕಾರ ಸೇನೆಗೆ ಅಧಿಕಾರ ನೀಡಿದೆ. ಈ ಮೂಲಕ ಭಾರತ ಯುದ್ಧ ಸನ್ನದ್ಧವಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

    ಸೇನೆಯು 46 ರೀತಿಯ ಯುದ್ಧಸಾಮಗ್ರಿ, 10 ಶಸ್ತ್ರಾಸ್ತ್ರಗಳ ಬಿಡಿಭಾಗಗಳನ್ನ ಗುರುತಿಸಿದೆ. ಈ ಎಲ್ಲಾ ಯುದ್ಧ ಪರಿಕರಗಳನ್ನ ತುರ್ತು ಖರೀದಿ ಮಾರ್ಗದಲ್ಲಿ ಖರೀದಿಸಬಹುದಾಗಿದೆ. ಉಪ ಸೇನಾ ಮುಖ್ಯಸ್ಥರಿಗೆ ಹಣಕಾಸು ಪರಮಾಧಿಕಾರ ಕೊಟ್ಟು ಮೋದಿ ಸರ್ಕಾರ ಆದೇಶ ನೀಡಿದೆ. ಇದರಿಂದಾಗಿ 40 ಸಾವಿರ ಕೋಟಿ ರೂಪಾಯಿ ಮೊತ್ತದ ಶಸ್ತ್ರಾಸ್ತ್ರ ಖರೀದಿಗೆ ಸ್ವತಃ ಉಪ ಸೇನಾ ಮುಖ್ಯಸ್ಥರೇ ಆದೇಶ ನೀಡಬಹುದಾಗಿದೆ.

    ಈ ಅಧಿಕಸೂಚನೆಯಿಂದಾಗಿ ಸೇನೆಯು ರಕ್ಷಣಾ ಸ್ವಾಧೀನ ಮಂಡಳಿ ಅಥವಾ ಭದ್ರತಾ ಸಂಪುಟ ಸಮಿತಿಯ ಮೂಲಕ ಹೋಗಬೇಕಿಲ್ಲ. ತುರ್ತು ಖರೀದಿ ವರ್ಗದ ಅಡಿಯಲ್ಲಿ ಎಲ್ಲಾ ಖರೀದಿಯು ಉಪ ಸೇನಾ ಮುಖ್ಯಸ್ಥರ ಕಚೇರಿಯಲ್ಲೇ ನಡೆಯಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ವಾಯು ಪಡೆ ಹಾಗೂ ನೌಕಾ ಪಡೆಗೂ ಕೂಡ ಶೀಘ್ರದಲ್ಲೇ ಇದೇ ರೀತಿಯ ಅಧಿಕಾರ ನೀಡಬಹುದು ಎಂದು ಅವರು ಹೇಳಿದ್ದಾರೆ.

    ಈ ಹಿಂದೆ ಇದ್ದಂತೆ ಶಸ್ತ್ರಾಸ್ತ್ರಗಳ ಖರೀದಿಗೆ ಖರ್ಚಿನ ಮಿತಿಯಿಲ್ಲ. ಸದ್ಯಕ್ಕೆ ಸೇನೆಗೆ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನೆಲ್ಲಾ ಖರೀದಿಸಬಹುದು. ಇದೊಂದು ಪ್ರಮುಖ ಬದಲಾವಣೆ ಎಂದು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಮಾರ್ಚ್ 31ರವರೆಗೆ ಸೇನೆಯು ಶಸ್ತ್ರಾಸ್ತ್ರಗಳ ತುರ್ತು ಖರೀದಿ ಮಾಡಲು ಅಧಿಕಾರ ನೀಡಲಾಗಿದೆ.

  • ಕಸಾಯಿಖಾನೆಗಳಿಗೆ ಗೋವುಗಳ ಮಾರಾಟ ನಿಷೇಧಕ್ಕೆ ತಡೆಯಾಜ್ಞೆ ನೀಡಿದ ಮದ್ರಾಸ್ ಹೈಕೋರ್ಟ್

    ಕಸಾಯಿಖಾನೆಗಳಿಗೆ ಗೋವುಗಳ ಮಾರಾಟ ನಿಷೇಧಕ್ಕೆ ತಡೆಯಾಜ್ಞೆ ನೀಡಿದ ಮದ್ರಾಸ್ ಹೈಕೋರ್ಟ್

    ಚೆನ್ನೈ: ಕಸಾಯಿಖಾನೆಗಳಿಗೆ ಗೋವುಗಳ ಮಾರಾಟದ ಮೇಲೆ ಕೇಂದ್ರ ಸರ್ಕಾರ ಹೇರಿದ್ದ ನಿಷೇಧಕ್ಕೆ ಮದ್ರಾಸ್ ಹೈಕೋರ್ಟ್ ನ ಮಧುರೈ ಪೀಠ ನಾಲ್ಕು ವಾರಗಳ ತಡೆಯಾಜ್ಞೆ ನೀಡಿದೆ.

    ಆಹಾರದ ಆಯ್ಕೆ ವ್ಯಕ್ತಿಯ ಮೂಲಭೂತ ಹಕ್ಕು ಎಂದು ವಾದಿಸಿ ಕೋರ್ಟ್‍ನಲ್ಲಿ ಪಿಐಎಲ್ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ನಾಲ್ಕು ವಾರಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹೇಳಿದೆ.

    ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಯು ಕಳೆದ ವಾರ ಪ್ರಾಣಿ ಹಿಂಸೆ ತಡೆ ಕಾಯ್ದೆಯ ಅಡಿ ಹೊಸ ನಿಯಮಗಳನ್ನ ಹೇರಿತ್ತು. ಜಾನುವಾರುಗಳನ್ನು ಕೃಷಿ ಉಪಯೋಗಕ್ಕೆ ಮಾತ್ರ ಮಾರಾಟ ಮಾಡಬೇಕು, ಕೊಲ್ಲುವ ಉದ್ದೇಶದಿಂದ ಜಾನುವಾರಗಳ ಮಾರಾಟ ಅಥವಾ ಖರೀದಿ ಮಾಡುವಂತಿಲ್ಲ ಎಂದು ನಿರ್ಬಂಧ ಹೇರಲಾಗಿತ್ತು.

    ಇದಕ್ಕೆ ದೇಶದ ಹಲವೆಡೆ ವಿರೋಧ ವ್ಯಕ್ತವಾಗಿದೆ. ಕೆರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಇದರ ವಿರುದ್ಧ ಪ್ರತಿಭಟಿಸಿದ್ದಾರೆ.

  • ಕೆಂಪೇಗೌಡ ವಿಮಾನ ನಿಲ್ದಾಣದ ಹೆಸರು ಬದಲಾವಣೆ?

    – ದೇಶದ ಏರ್‍ಪೋರ್ಟ್‍ಗಳಿಗೆ ಇನ್ಮುಂದೆ ವ್ಯಕ್ತಿಗಳ ಹೆಸರಿಲ್ಲ
    – ಹೊಸ ಮಸೂದೆಗೆ ಕೇಂದ್ರ ಸರ್ಕಾರ ಸಿದ್ಧತೆ

    ಬೆಂಗಳೂರು: ಇನ್ಮುಂದೆ ವಿಮಾನ ನಿಲ್ದಾಣಗಳನ್ನ ಆಯಾ ಊರಿನ ಹೆಸರಿನಿಂದಲೇ ಕರೆಯಬೇಕು. ಇಷ್ಟು ದಿನ ಐತಿಹಾಸಿಕ ಪುರುಷರು, ಅಥವಾ ಗಣ್ಯ ವ್ಯಕ್ತಿಗಳ ಹೆಸರನಿಂದ ಕರೆಯುತ್ತಿದ್ದ ವಿಮಾನ ನಿಲ್ದಾಣಗಳ ಹೆಸರುಗಳು ಇತಿಹಾಸದ ಪುಟ ಸೇರಲಿವೆ. ಈ ಮೂಲಕ ಬೆಂಗಳೂರು ವಿಮಾನ ನಿಲ್ದಾಣವನ್ನು ಕೆಂಪೇಗೌಡ ಏರ್‍ಪೋರ್ಟ್ ಮಾಡಿದ್ದ ಮೋದಿ ಸರ್ಕಾರ, ಆ ಹೆಸರನ್ನ ಅಳಿಸೋಕೆ ಮುಂದಾಗಿದೆ.

    ಕೆಂಪೇಗೌಡ ಏರ್‍ಪೋರ್ಟ್, ಇಂದಿರಾಗಾಂಧಿ ಏರ್‍ಪೋರ್ಟ್, ರಾಜೀವ್ ಗಾಂಧಿ ಏರ್‍ಪೋರ್ಟ್, ಅಂಬೇಡ್ಕರ್ ಏರ್‍ಪೋರ್ಟ್ ಅನ್ನೋ ಹೆಸರುಗಳು ಇನ್ಮುಂದೆ ಮೆರಯಾಗಲಿದೆ. ಯಾಕಂದ್ರೆ ಕೇಂದ್ರ ಸರ್ಕಾರ ಹೊಸ ಮಸೂದೆಯೊಂದನ್ನ ಜಾರಿಗೆ ತರುತ್ತಿದೆ. ಯಾವುದೇ ವಿಮಾನ ನಿಲ್ದಾಣಗಳಿಗೆ ವ್ಯಕ್ತಿಗಳ ಹೆಸರನ್ನ ಇಡುವಂತಿಲ್ಲ ಅಂತ ಮಸೂದೆ ಸಿದ್ದಪಡಿಸಿದೆ. ಅಷ್ಟೇ ಅಲ್ಲದೆ ಈ ಮಸೂದೆಯಲ್ಲಿ ಪ್ರಸ್ತುತ ಇರೋ ವಿಮಾನ ನಿಲ್ದಾಣಗಳ ಹೆಸರನ್ನು ಬದಲಾವಣೆ ಮಾಡುವಂತಹ ನಿಯಮವನ್ನು ಅಳವಡಿಸಲಾಗಿದೆ. ಈ ಮಸೂದೆ ಅಂಗೀಕಾರವಾದಲ್ಲಿ ದೇಶದ 24 ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಪೈಕಿ 14 ವಿಮಾನ ನಿಲ್ದಾಣಗಳ ಹೆಸರುಗಳನ್ನ ಬದಲಾಯಿಸಬೇಕಾಗುತ್ತದೆ.

    ಈಗಾಗಲೇ ಮಸೂದೆಯ ಸಿದ್ಧತೆ ಅಂತಿಮ ರೂಪಕ್ಕೆ ಬಂದಿದ್ದು ಇದೇ ಸಂಸತ್ ಅಧಿವೇಶನದಲ್ಲಿ ಅಥವಾ ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಅಂತ ಕೇಂದ್ರ ವಿಮಾನಯಾನ ರಾಜ್ಯ ಸಚಿವ ಜಯಂತ್ ಸಿನ್ಹಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಮೋದಿ ಸರ್ಕಾರವಿದ್ದಾಗಲೇ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಬಂತು. ಈಗ ಅದೇ ಸರ್ಕಾರದ ಅವಧಿಯಲ್ಲಿ ಕೆಂಪೇಗೌಡರ ಹೆಸರು ಕಳೆದುಕೊಳ್ಳುವುದು ಸನ್ನಿಹಿತವಾಗ್ತಿದೆ.

    ಯಾಕೆ ಈ ಬದಲಾವಣೆ?: ಭಾರತದ ಗಣ್ಯರು, ರಾಜ್ಯದ ಪ್ರಸಿದ್ಧ ವ್ಯಕ್ತಿಗಳ ಹೆಸರಿನ ಬಗ್ಗೆ ಮಾಹಿತಿ ಇಲ್ಲದ ವಿದೇಶಿಯರಿಗೆ ನಿಲ್ದಾಣಗಳ ಹೆಸರನ್ನು ಗುರುತಿಸಲು ಕಷ್ಟವಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಪ್ರಸ್ತಾಪವನ್ನು ಸಲ್ಲಿಸಲಾಗಿತ್ತು.

    ಉಗ್ರ ಹೋರಾಟ: ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಉಗ್ರವಾಗಿ ಖಂಡಿಸಿರೋ ರಾಜ್ಯ ಒಕ್ಕಲಿಗರ ಸಂಘ, ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರದ ಈ ಮಸೂದೆಯನ್ನು ಒಪ್ಪಲು ಸಾಧ್ಯವಿಲ್ಲ ಅಂತ ಹೇಳಿದೆ. ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ. ಹಾಗಾಗಿ ಅವರ ಹೆಸರು ಇಡೀ ಪ್ರಪಂಚಕ್ಕೆ ಗೋತ್ತಾಗಬೇಕು ಅನ್ನೋ ದೃಷ್ಠಿಯಿಂದ ಆ ಹೆಸರನ್ನು ಇಡಲಾಗಿದೆ. ಅಕಸ್ಮಾತ್ ಸರ್ಕಾರ ಏನಾದ್ರೂ ಈ ಹೆಸರನ್ನು ಬದಲಾವಣೆ ಮಾಡಿದ್ರೆ ಉಗ್ರ ಹೋರಾಟ ಮಾಡಬೇಕಾಗುತ್ತೆ ಅಂತ ಸಂಘದ ನಿರ್ದೇಶಕ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.