Tag: Central govt

  • ಪೆಗಾಸಸ್ ಸ್ಪೈವೇರ್ ಬಗ್ಗೆ ವಿಸ್ತೃತವಾದ  ಅಫಿಡವಿಟ್ ಸಲ್ಲಿಸಲು ಸಾಧ್ಯವಿಲ್ಲ: ಕೇಂದ್ರ

    ಪೆಗಾಸಸ್ ಸ್ಪೈವೇರ್ ಬಗ್ಗೆ ವಿಸ್ತೃತವಾದ ಅಫಿಡವಿಟ್ ಸಲ್ಲಿಸಲು ಸಾಧ್ಯವಿಲ್ಲ: ಕೇಂದ್ರ

    ನವದೆಹಲಿ: ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಪೆಗಾಸಸ್ ಸ್ಪೈವೇರ್ ಬಗ್ಗೆ ವಿಸ್ತೃತವಾದ ಅಫಿಡವಿಟ್ ಸಲ್ಲಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಗೆ ಕೇಂದ್ರ ಸರ್ಕಾರ ಹೇಳಿದೆ. ಇಂದು ನಡೆದ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಈ ಮಹತ್ವದ ಹೇಳಿಕೆಯನ್ನು ನ್ಯಾಯಪೀಠದ ಮುಂದೆ ಹೇಳಿದ್ದಾರೆ.

    ಭಾರತದ ಹಲವು ಗಣ್ಯರ ಮೇಲೆ ಪೆಗಾಸಸ್ ಸ್ಪೈವೇರ್ ಮೂಲಕ ಗೂಢಚರ್ಯೆ ನಡೆಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟಿಗೆ ಹಲವು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿ-ಸದಸ್ಯ ಪೀಠ ವಿಸ್ತೃತ ವರದಿ ಸಲ್ಲಿಕೆಗೆ ಸೂಚನೆ ನೀಡಿತ್ತು. ಇದನ್ನೂ ಓದಿ: ಪೆಗಾಸಸ್ ಬಳಸಿ ಯಾರ ಮೇಲೂ ಗೂಢಾಚಾರಿಕೆ ಮಾಡಿಲ್ಲ- ಸುಪ್ರೀಂಗೆ ಅಫಿಡವಿಟ್ ಸಲ್ಲಿಕೆ

    ಇಂದು ನಡೆದ ವಿಚಾರಣೆ ವೇಳೆ ವಾದ ಮಂಡಿಸಿದ ತುಷಾರ್ ಮೆಹ್ತಾ, ಭಯೋತ್ಪಾದನೆ ವಿರುದ್ಧ ಯಾವ ಸಾಫ್ಟ್ ವೇರ್ ಬಳಸಲಾಗುತ್ತಿದೆ ಎಂದು ಉಗ್ರ ಸಂಘಟನೆಗಳಿಗೆ ಗೊತ್ತಿಲ್ಲ. ಭದ್ರತೆಯ ದೃಷ್ಟಿಯಿಂದ ಸರ್ಕಾರ ಆ ಮಾಹಿತಿಯನ್ನು ನೀಡಲು ಇಚ್ಛಿಸುವುದಿಲ್ಲ. ರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ ಕೇಂದ್ರವು ಪೆಗಾಸಸ್ ಸ್ಪೈವೇರ್ ಅನ್ನು ಬಳಸುತ್ತಿದೆಯೇ ಎಂಬ ವಿವರಗಳನ್ನು ಡೊಮೇನ್ ತಜ್ಞರ ಸಮಿತಿಯ ಮುಂದೆ ಚರ್ಚಿಸಬಹುದು. ಆದರೆ ಅಫಿಡವಿಟ್ ನಲ್ಲಿ ಉಲ್ಲೇಖಿಸಲು ಸಾಧ್ಯವಿಲ್ಲ ಎಂದು ಅವರು ಸುಪ್ರೀಂಕೋರ್ಟಿಗೆ ತಿಳಿಸಿದರು.

    ಪೆಗಾಸಸ್ ಅನ್ನು ಎ ಸಾಫ್ಟ್ ವೇರ್ ಅಥವಾ ಬಿ ಸಾಫ್ಟ್ ವೇರ್ ನಿಂದ ಮಾಡಲಾಗಿದೆಯೇ ಎಂಬುದನ್ನು ಅಫಿಡವಿಟ್‍ನಲ್ಲಿ ಹೇಳಲಾಗುವುದಿಲ್ಲ. ಸರ್ಕಾರದೊಂದಿಗೆ ಸಂಪರ್ಕವಿಲ್ಲದ ಡೊಮೇನ್ ತಜ್ಞರು ಇದನ್ನು ನೋಡುತ್ತಾರೆ. ನಾವು ಎಲ್ಲವನ್ನು ಅವರ ಮುಂದೆ ಇಡುತ್ತೇವೆ ಎಂದು ಸಾಲಿಸಿಟರ್ ಜನರಲ್ ಹೇಳಿದರು. ರಾಷ್ಟ್ರದ ಹಿತಾಸಕ್ತಿ ಮತ್ತು ಭದ್ರತಾ ವಿಚಾರಗಳು ಸಾರ್ವಜನಿಕ ಭಾಷಣ ಆಗಬಾರದು ಎಂದು ಅವರು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಸಮ್ಮಿಶ್ರ ಸರ್ಕಾರ ಪತನಕ್ಕೆ ಪೆಗಾಸಸ್ ಕಾರಣ: ಪರಮೇಶ್ವರ್

    ಈ ಹಿಂದಿನ ವಿಚಾರಣೆಯಲ್ಲಿ ಪೆಗಾಸಸ್ ಮೂಲಕ ಗೂಢಚರ್ಯೆ ನಡೆಸಿದ ಎಲ್ಲ ಆರೋಪಗಳನ್ನು ಕೇಂದ್ರ ಸರ್ಕಾರ ನಿರಾಕರಿಸಿತ್ತು. ಗೊಂದಲಗಳನ್ನು ಬಗೆಹರಿಸಲು ವಿಶೇಷ ತಜ್ಞರ ಸಮಿತಿಯನ್ನು ರಚಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ರಾಷ್ಟ್ರೀಯ ಭದ್ರತಾ ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಉದ್ದೇಶವಿಲ್ಲ. ಆದರೆ ಕೆಲವು ವಿವಾದಿತ ಸಾಫ್ಟ್ ವೇರ್ ಗಳ ಬಗ್ಗೆ ಪರಿಶೀಲನೆ ನಡೆಸಬೇಕಿದೆ ಎಂದು ನ್ಯಾ.ಎನ್ ವಿ ರಮಣ ಅಭಿಪ್ರಾಯಪಟ್ಟಿದ್ದರು. ಪ್ರಕರಣ ಸದ್ಯ ವಿಚಾರಣೆ ಹಂತದಲ್ಲಿದೆ.

  • ಮಕ್ಕಳ ಮೊದಲ ಲಸಿಕೆಗೆ ಕೇಂದ್ರ ಗ್ರೀನ್ ಸಿಗ್ನಲ್?

    ಮಕ್ಕಳ ಮೊದಲ ಲಸಿಕೆಗೆ ಕೇಂದ್ರ ಗ್ರೀನ್ ಸಿಗ್ನಲ್?

    ಬೆಂಗಳೂರು: 12 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಈ ವಾರ ಸಮ್ಮತಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

    ಅಹಮದಾಬಾದ್ ನ ಜೈಡಸ್ ಕ್ಯಾಡಿಲಾ ಕಂಪನಿಯ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇದೆ. 12 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಅನುಮತಿ ದೊರೆತರೆ ದೇಶದಲ್ಲಿ ಮಕ್ಕಳಿಗೆ ಮೊದಲ ಸಲ ಲಸಿಕೆ ನೀಡಿಕೆ ಅಭಿಯಾನ ಆರಂಭವಾಗಲಿದೆ.

    ಜೈಡಸ್ ಕ್ಯಾಡಿಲಾ ಕಂಪನಿಯು ಜೈಕೋವ್ ಡಿ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡುವಂತೆ ಕೋರಿ ಜುಲೈ 1 ರಂದು ಅರ್ಜಿ ಸಲ್ಲಿಸಲಾಗಿದೆ. ಇಂಜೆಕ್ಷನ್ ಬಳಕೆ ಮಾಡದೆ ಚರ್ಮದ ಮೂಲಕ ದೇಹದ ಒಳಗೆ ಲಸಿಕೆ ಸೇರಿಸುವುದು ಈ ಲಸಿಕೆಯ ವಿಶೇಷತೆಯಾಗಿದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಭಾರತದಲ್ಲಿ ಜಾನ್ಸನ್ ಆ್ಯಂಡ್ ಜಾನ್ಸನ್ ಕೋವಿಡ್ ಲಸಿಕೆ ತುರ್ತು ಬಳಕೆಗೆ ಅನುಮತಿ

  • ಮೇಕೆದಾಟು ಯೋಜನೆಗೆ ಕಣಿವೆ ರಾಜ್ಯಗಳ ಅನುಮತಿ ಅಗತ್ಯ – ಕೇಂದ್ರದ ಉತ್ತರಕ್ಕೆ ಪ್ರಜ್ವಲ್ ಕೆಂಡಾಮಂಡಲ

    ಮೇಕೆದಾಟು ಯೋಜನೆಗೆ ಕಣಿವೆ ರಾಜ್ಯಗಳ ಅನುಮತಿ ಅಗತ್ಯ – ಕೇಂದ್ರದ ಉತ್ತರಕ್ಕೆ ಪ್ರಜ್ವಲ್ ಕೆಂಡಾಮಂಡಲ

    ನವದೆಹಲಿ: ಮೇಕೆದಾಟು ಆಣೆಕಟ್ಟು ನಿರ್ಮಾಣಕ್ಕೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಜೊತೆಗೆ ಕಣಿವೆ ರಾಜ್ಯಗಳಾದ ಕೇರಳ, ತಮಿಳುನಾಡು, ಪುದುಚೇರಿ ಅನುಮತಿ ಅಗತ್ಯ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಹೇಳಿದ್ದಾರೆ.

    ಮೇಕೆದಾಟು ಯೋಜನೆ ಈಗಿನ ಸ್ಥಿತಿಗತಿ ಬಗ್ಗೆ ಸಂಸದ ಪ್ರಜ್ವಲ್ ರೇವಣ್ಣ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಕರ್ನಾಟಕ ಸಲ್ಲಿಸಿದ್ದ ಮೇಕೆದಾಟು ಸಮಗ್ರ ಯೋಜನಾ ವರದಿಗೆ ಷರತ್ತು ಬದ್ಧ ಅನುಮತಿ ನೀಡಿದ್ದೇವೆ. ಆದರೆ ಇದು ಅಂತರರಾಜ್ಯ ಯೋಜನೆ ಆಗಿರೋದರಿಂದ ಕಣಿವೆ ರಾಜ್ಯಗಳ ಅನುಮತಿ ಬೇಕೆಂದು ಸಂಸತ್ತಿಗೆ ತಿಳಿಸಿದರು.

    ಕರ್ನಾಟಕ ಡಿಪಿಆರ್ ಕೊಟ್ಟಾಗಲೇ ಇದನ್ನ ಸ್ಪಷ್ಟವಾಗಿ ತಿಳಿಸಿದ್ದೆವು. ಕಾವೇರಿ ನೀರು ನಿರ್ವಹಣಾ ಮಂಡಳಿಯ ಅನುಮತಿ ಕೂಡ ಕಡ್ಡಾಯ ಇದರ ಜೊತೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಸಮ್ಮತಿ ಇನ್ನೂ ಯೋಜನೆಗೆ ಸಿಕ್ಕಿಲ್ಲ ಎಂದ ಕೇಂದ್ರ ಸಚಿವರು ಹೇಳಿದರು.

    ಕೇಂದ್ರ ಸಚಿವರ ಉತ್ತರಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮ್ಮ ನೆಲದಲ್ಲಿ ನಡೆಸುವ ಯೋಜನೆಗಳಿಗೆ ಕಣಿವೆ ರಾಜ್ಯಗಳ ಅನುಮತಿ ಯಾಕೆ ಬೇಕು? ಈ ರೀತಿಯ ಕಾನೂನು ಸುಪ್ರೀಂಕೋರ್ಟ್ ಅಥವಾ ನ್ಯಾಯಧಿಕರಣ ಆದೇಶದಲ್ಲಿ ಇಲ್ಲ. ಅನಾವಶ್ಯಕ ಗೊಂದಲ ಸೃಷಿಯಾಗುತ್ತಿದೆ ಎಂದು ಆರೋಪಿಸಿದರು.

    ಮೇಕೆದಾಟು ಯೋಜನೆ ಕುಡಿಯುವ ನೀರಿನ ಯೋಜನೆ, ಇಲ್ಲಿ ವಿದ್ಯುತ್ ಕೂಡ ಉತ್ಪಾದನೆ ಮಾಡಲಿದೆ. ಕಾವೇರಿ ನದಿಯಲ್ಲಿರುವ ಹೆಚ್ಚುವರಿ ನೀರು ಬಳಸಿಕೊಳ್ಳುವ ಉದ್ದೇಶ ಹೊಂದಿದ್ದು ಕರ್ನಾಟಕ ವಿದ್ಯುತ್ ಉತ್ಪಾದನೆ ಮಾಡಿದ ಬಳಿಕ ತಮಿಳುನಾಡಿಗೆ ನೀರು ಬಿಡಲಿದೆ. ಇದರಿಂದ ಯಾವುದೇ ನೀರಿನ ಕೊರತೆಯಾಗುವುದಿಲ್ಲ, ಆದರೆ ನೀರಿನ ಕೊರತೆ ಎಂದು ಸುಳ್ಳು ಹೇಳಲಾಗುತ್ತಿದೆ ಎಂದರು.

    ಒಂದು ವೇಳೆ ನೀರಿಕ ಕೊರತೆಯಾದರೆ ಕೋರ್ಟ್ ಮೊರೆ ಹೋಗಲಿ ಆದರೆ ಯೋಜನೆ ವಿರೋಧಿಸುವುದು ಸರಿಯಲ್ಲ, ರಾಜ್ಯ ಸರ್ಕಾರ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಬೇಕು. ಮಗು ಚೂಟಿ ತೊಟ್ಟಿಲು ತೂಗುವ ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕಿದ್ದು ಸರ್ವ ಪಕ್ಷದ ಸದಸ್ಯರ ನಿಯೋಗದ ಮೂಲಕ ಕೇಂದ್ರಕ್ಕೆ ಮನವಿ ನೀಡಬೇಕು ಎಂದು ಆಗ್ರಹಿಸಿದರು.

    ಇದೇ ವೇಳೆ ಯೋಜನೆ ವಿರೋಧಿಸಿ ಅಣ್ಣಾಮಲೈ ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ತಿರುಗೇಟು ನೀಡಿದ ಪ್ರಜ್ವಲ್ ರೇವಣ್ಣ, ಅಣ್ಣಾಮಲೈ ಏನಾದರೂ ಮಾಡಿಕೊಳ್ಳಲಿ, ನಾವು ರಾಜ್ಯದಲ್ಲಿ ಕೈ ಕೊಟ್ಟಿ ಕೂತಿಲ್ಲ. ನಾವು ಬಲಿಷ್ಠವಾಗಿದ್ದೇವೆ. ಕೇಂದ್ರ ನ್ಯಾಯದ ಪರವಾಗಿ ನಿಲ್ಲಬೇಕು ಎಂದರು.

    ನಮ್ಮ ಹಕ್ಕಿನ ನೀರನ್ನು ನಾವು ಸಂಗ್ರಹ ಮಾಡಿತ್ತಿದ್ದೇವೆ. ನೀರು ತಮಿಳುನಾಡಿನಿಂದ ತಂದು ಯೋಜನೆ ಮಾಡ್ತಿಲ್ಲ. ಅಣ್ಣಾಮಲೈ ಇದನ್ನು ಮೊದಲು ತಿಳಿದುಕೊಳ್ಳಬೇಕು. ಅಭಿಮಾನ ಇಟ್ಟುಕೊಂಡಿದ್ದ ರಾಜ್ಯದ ಜನರು ಅಣ್ಣಾಮಲೈ ಹೇಗೆ ಎನ್ನುವುದು ಅರ್ಥ ಮಾಡಿಕೊಳ್ಳಬೇಕು. ಅಣ್ಣಾಮಲೈಗೆ ಹೈಕಮಾಂಡ್ ಬುದ್ಧಿ ಹೇಳಬೇಕು. ಯಾರು ಏನೇ ಮಾಡಿದರೂ ಯೋಜನೆ ಕೈಬಿಡಲ್ಲ. ನಮ್ಮ ಪಕ್ಷದ ನಿಲುವು ಡ್ಯಾಂ ಪರವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೋರಾಟ ಮಾಡುತ್ತೇವೆ ಎಂದು ಅವರು ಹೇಳಿದರು.

  • ಕೇಂದ್ರದ ವಿವಿಧ ಯೋಜನೆಗಳ ಅನುದಾನವನ್ನು ಅಧಿಕಾರಿಗಳು ಎಚ್ಚರಿಕೆಯಿಂದ ವಿನಿಯೋಗಿಸ್ಬೇಕು: ಅನಂತ್‍ಕುಮಾರ್ ಹೆಗ್ಡೆ

    ಕೇಂದ್ರದ ವಿವಿಧ ಯೋಜನೆಗಳ ಅನುದಾನವನ್ನು ಅಧಿಕಾರಿಗಳು ಎಚ್ಚರಿಕೆಯಿಂದ ವಿನಿಯೋಗಿಸ್ಬೇಕು: ಅನಂತ್‍ಕುಮಾರ್ ಹೆಗ್ಡೆ

    ಕಾರವಾರ: ಜಲ ಜೀವನ ಮಿಷನ್, ನರೇಗಾ, ವಸತಿ, ಆರೋಗ್ಯ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ನೇರವಾಗಿ ನೀಡುತ್ತಿರುವ ವಿಶೇಷ ಅನುದಾನದ ಬಳಕೆ ಬಗ್ಗೆ ಕೇಂದ್ರ ಸರ್ಕಾರ ಹದ್ದಿನ ಕಣ್ಣಿಟ್ಟಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅತ್ಯಂತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಂಸದ ಅನಂತ್ ಕುಮಾರ್ ಹೆಗ್ಡೆ ಹೇಳಿದರು.

    ಜಿಲ್ಲಾ ಪಂಚಾಯತ್‍ನ ಸಭಾಭವನದಲ್ಲಿ ಇಂದು ನಡೆದ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಅಂತಹ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಕೋಟ್ಯಂತರ ರೂಪಾಯಿ ವಿಶೇಷ ಅನುದಾನ ನೀಡುತ್ತಿದೆ. ಆದರೆ ಜಲ ಜೀವನ ಮಿಷನ್‍ನಡಿ ಜಿಲ್ಲೆಯಾದ್ಯಂತ ಕೈಗೊಂಡಿರುವ ಕಾಮಗಾರಿಯ ಬಗ್ಗೆ ಶಾಸಕರು ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಗಳಿಗೂ ಮಾಹಿತಿಯೇ ಇಲ್ಲ. ಜನಪ್ರತಿನಿಧಿಗಳಿಗೆ ತಿಳಿಸದನೇ ಅಧಿಕಾರಿಗಳು ನೇರವಾಗಿ ತಮಗೆ ತಿಳಿದಂತೆ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದಿರಿ. ಅಧಿಕಾರಿಗಳ ಈ ನಡವಳಿಕೆಯಿಂದ ಮುಂಬರುವ ದಿನಗಳಲ್ಲಿ ಯೋಜನೆ ವಿಫಲವಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರದ ಯೋಜನೆ ಜನರಿಗೆ ತಲುಪದ ಬಗ್ಗೆ ಶಾಸಕಿ ರೂಪಾಲಿ ನಾಯ್ಕ್ ಮಾತನಾಡಿದರು.

    ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಹೆಗ್ಡೆ, ಶಾಸಕರು ಹೆಳಿರುವುದು ಸತ್ಯವಾಗಿದೆ. ಮನೆ ಮನೆಗೆ ನೀರನ್ನು ಒದಗಿಸಬೇಕು. ಜನರ ದಾಹವನ್ನು ತಣಿಸಬೇಕು ಎಂಬು ಉದ್ದೇಶದಿಂದ ಕೇಂದ್ರ ಸರ್ಕಾರ ಜಲ ಜೀವನ ಮಿಷನ್ ಜಾರಿಗೆ ತಂದಿದೆ. ಇಂತಹ ಮಹತ್ವಾಕಾಂಕ್ಷೆ ಯೋಜನೆಯನ್ನು ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಅನುಷ್ಠಾನಕ್ಕೆ ತರಬೇಕು. ಆಗ ಯೋಜನೆಯ ಬಗ್ಗೆ ಜನರಿಗೆ ತಿಳಿಯುವುದರ ಜೊತೆಗೆ ಹೆಚ್ಚಿನ ಪ್ರಚಾರವೂ ಸಿಗುತ್ತದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿದ್ದು, ಸರ್ಕಾರಿ ಅಧಿಕಾರಿಗಳು ಜನಪ್ರತಿನಿಧಿಗಳ ಗಮನಕ್ಕೆ ತರದೇ ನೇರವಾಗಿ ಅಧಿಕಾರ ಚಲಾಯಿಸಲು ಯಾವುದೇ ಅವಕಾಶವಿಲ್ಲ. ಅಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳಬಾರದು. ಇಂತಹ ಘಟನೆಗೆಳು ಮರುಕಳಿಸಿದರೆ ಸಂಬಂಧಪಟ್ಟ ಅಧಿಕಾರಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಪ್ರಳಯವಾದರೂ ಆ 14 ಮಂದಿಯನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದಿದ್ದು ನಿಜ: ಸಿದ್ದರಾಮಯ್ಯ

    ಜನರ ಒಳಿತಿಗಾಗಿ ತಂದಿರುವ ಯೋಜನೆಯ ಬಗ್ಗೆ ಶಾಸಕರು ಸೇರಿದಂತೆ ಸಂಬಂಧಿಸಿದ ಎಲ್ಲ ಜನಪ್ರತಿನಿಧಿಗಳಿಗೆ ತಿಳಿಸಬೇಕು. ನಂತರ ಅವರ ಸಹಭಾಗಿತ್ವದಲ್ಲಿ ಕಾಮಗಾರಿ ಕೈಗೊಂಡು ಜನಪ್ರತಿನಿಧಿಗಳಿಂದ ಉದ್ಘಾಟನೆ ಮಾಡಿಸಬೇಕು. ಜನಪರ ಯೋಜನೆಗಳಿಗೆ ವಿಶೇಷ ಅನುದಾನ ನೀಡುತ್ತಿರುವ ಕೇಂದ್ರ ಸರ್ಕಾರ ಆ ಅನುದಾನದ ಬಳಕೆ ಹೇಗೆಲ್ಲ ಆಗುತ್ತಿದೆ ಎಂಬುವುದನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಇದು ಅಧಿಕಾರಿಗಳ ವರ್ಗದ ಗಮನಕ್ಕಿರಬೇಕು. ಒಂದುವೇಳೆ ಅನುದಾನ ಬಳಕೆಯಲ್ಲಿ ಅಕ್ರಮವೇನಾದರೂ ನಡೆದರೆ ಅದನ್ನು ಸೂಕ್ತ ರೀತಿಯಲ್ಲಿ ತನಿಖೆಗೆ ಒಳಪಡಿಸಿ ಸಂಬಂಧಿಸಿದ ಅಧಿಕಾರಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮುಂದೆ ಅಂತವರಿಗೆ ನಿವೃತ್ತಿ ವೇತನವೂ ಸಿಗದಂತ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿ ಅಧಿಕಾರಿ ವರ್ಗದವರು ತುಂಬಾ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕಿದೆ ಎಂದರು.

    ಜಿಲ್ಲೆಯಲ್ಲಿ ಜೇನು ಕೃಷಿಗೆ ಉತ್ತಮ ಅವಕಾಶಗಳಿದ್ದು, ಜೇನು ಅತೀ ಹೆಚ್ಚು ಗೂಡು ಕಟ್ಟುವಂತ ಮರಗಳನ್ನು ಪಟ್ಟಿ ಮಾಡಿ ವರದಿ ನೀಡುವಂತೆ ತೋಟಗಾರಿಕೆ ಇಲಾಖೆಗೆ ಈ ಹಿಂದಿನ ಸಭೆಯಲ್ಲಿ ಸೂಚಿಸಲಾಗಿತ್ತು. ಅದರಂತೆ ಇಲಾಖೆ ಅಧಿಕಾರಿಗಳು ಜೇನು ಕೃಷಿಗೆ ಪೂರಕವಾಗುವಂತ ಸುಮಾರು 10 ತಳಿಯ ಮರಗಳ ಪಟ್ಟಿಯನ್ನು ಮಾಡಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಮರಗಳ ಸಸಿಗಳನ್ನು ಬೆಳಸಿ ಅರಣ್ಯ ಪ್ರದೇಶದಲ್ಲಿ ಅವಗಳನ್ನು ನೆಡುವಂತ ಕಾರ್ಯವಾಗಬೇಕು. ಇದರಿಂದ ಪರಿಸರ ವೃದ್ಧಿ ಜೊತೆಗೆ ಜೇನು ಕೃಷಿಕರಿಗೆ ಸಹಕಾರಿಯಾಗಲಿದೆ ಎಂದರು.

    ಮುಂಬರುವ 2023-24ರ ಸಮಯಕ್ಕೆ ಜಿಲ್ಲೆಯಲ್ಲಿ ವಿಮಾನ, ಹಡಗು ನಿಲ್ದಾಣ ಸೇರಿದಂತೆ ವಿವಿಧ ಕೈಗಾರಿಕಾ ಉದ್ಯಮಗಳು ಕಾಲಿಡಲಿವೆ. ಹೀಗಾಗಿ ಜಿಲ್ಲೆಯಲ್ಲಿ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕಿದ್ದು, ಸ್ಥಳೀಯ ಪ್ರತಿಭೆಗಳಿಗೆ ಮುಂದುವರಿದ ತಂತ್ರಜ್ಞಾನಕ್ಕೆ ಪೂರಕವಾದ ವಿವಿಧ ಕೌಶಲ್ಯಗಳ ಕುರಿತು ತರಬೇತಿ ನೀಡಬೇಕಿದೆ. ಇದರಿಂದ ಜಿಲ್ಲೆಯಲ್ಲಿ ನಿರುದ್ಯೋಗದ ಸಮಸ್ಯೆ ನಿವಾರಣೆ ಸಾಧ್ಯವಿದೆ ಎಂದು ತಿಳಿಸಿದರು.

    ಕೃಷಿ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸ್ವಚ್ಛ ಭಾರತ್ ಅಭಿಯಾನ್, ನರೇಗಾ, ಕುಡಿಯುವ ನೀರು, ಅಕ್ಷರದಾಸೋಹ ಸೇರಿದಂತೆ ವಿವಿಧ 21ಕ್ಕೂ ಅಧಿಕ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಸಂಸದರು ಈ ಸಂದರ್ಭದಲ್ಲಿ ನಡೆಸಿದರು.

    ಇದೇ ಸಂದರ್ಭದಲ್ಲಿ ಪ್ಲಾಸ್ಟಿಕ್ ಬ್ಯಾಗ್ ಬಳಕೆ ನಿಷೇಧ ದಿನಾಚರಣೆ ನಿಮಿತ್ತ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹೊರತಂದ ಸ್ವಚ್ಛ ಸಂಕೀರ್ಣ ಕೈಪಿಡಿ, ಕರ್ನಾಟಕ ಗ್ರಾಮೀಣ ಘನ ಮತ್ತು ದ್ರವ ತ್ಯಾಜ್ಯ ಉಪ ವಿಧಿಯ ಪರಿಹಾರ ಹೆಲ್ಪ್‍ಲೈನ್ ನಂಬರ್, ವಿಶ್ವ ಜನಸಂಖ್ಯಾ ದಿನಾಚರಣೆ ನಿಮಿತ್ತ ‘ಜನಸಂಖ್ಯಾ ಸ್ಥಿರತೆ ನಿಮಿಂದ ಮಾತ್ರ ಸಾಧ್ಯ’ ಎಂಬ ಕರಪತ್ರವನ್ನು ಸಂಸದರು ಬಿಡುಗಡೆ ಮಾಡಿದರು.

    ಸಭೆಯಲ್ಲಿ ಶಾಸಕರಾದ ದಿನಕರ್ ಶೆಟ್ಟಿ, ಸುನಿಲ್ ನಾಯ್ಕ್, ರೂಪಾಲಿ ನಾಯ್ಕ್, ವಿದಾನ ಪರಿಷತ್ ಸದಸ್ಯ ಶಾಂತರಾಮ ಸಿದ್ಧಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತ್‍ನ ಸಿಇಒ ಪ್ರಿಂಯಾಂಗಾ ಮುಂತಾದವರು ಉಪಸ್ಥಿತರಿದ್ದರು.

  • ಜನರ ಪಾಲಿಗೆ ಶಾಪಗ್ರಸ್ತವಾದ ಬಿಜೆಪಿ ನೇತೃತ್ವದ ಕೇಂದ್ರ, ರಾಜ್ಯ ಸರ್ಕಾರಗಳು: ದಿನೇಶ್ ಗುಂಡೂರಾವ್

    ಜನರ ಪಾಲಿಗೆ ಶಾಪಗ್ರಸ್ತವಾದ ಬಿಜೆಪಿ ನೇತೃತ್ವದ ಕೇಂದ್ರ, ರಾಜ್ಯ ಸರ್ಕಾರಗಳು: ದಿನೇಶ್ ಗುಂಡೂರಾವ್

    ಬೆಂಗಳೂರು: ದೇಶವೇ ಕೋವಿಡ್ ಎರಡನೇ ಅಲೆಯ ಬೇಗುದಿಯಲ್ಲಿದೆ. ಲಾಕ್‍ಡೌನ್‍ನಿಂದಾಗಿ ಸೇವಾ ವಲಯ ಮತ್ತು ಉತ್ಪಾದನಾ ವಲಯ ನೆಲಕಚ್ಚಿದೆ ಎಂದು ಶಾಸಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    ಲಾಕ್‍ಡೌನ್ ಪರಿಣಾಮ ಲಕ್ಷಾಂತರ ಜನರಿಗೆ ಉದ್ಯೋಗ ನಷ್ಟವಾಗಿದೆ. ಈ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ನೆರವಾಗಬೇಕಾದ ಬಿಜೆಪಿಯ ‘ಡಬಲ್ ಇಂಜಿನ್’ ಸರ್ಕಾರಗಳು ಬೆಲೆಯೇರಿಸಿ ಜನರ ಹಸಿ ಗಾಯದ ಮೇಲೆ ಬರೆ ಎಳೆದಿವೆ ಎಂದು ಕಿಡಿಕಾರಿದರು.

    ಮೋದಿಯವರ ಸರ್ಕಾರ ಜನಹಿತ ಮರೆತಿದೆ. ಕೋವಿಡ್ ಸಂಕಷ್ಟದ ಮಧ್ಯೆ ನಿರಂತರವಾಗಿ ತೈಲ ಬೆಲೆ ಏರಿಸುತ್ತಿದೆ. ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ 1 ಲೀಟರ್ ಪೆಟ್ರೋಲ್ 30 ರೂಪಾಯಿ ಹೆಚ್ಚಳವಾಗಿದೆ. ಸದ್ಯ ಪೆಟ್ರೋಲ್ ಸಾರ್ವಕಾಲಿಕ ಹೆಚ್ಚಳ ಕಂಡು ಸೆಂಚುರಿ ಬಾರಿಸಿದೆ. ಡಿಸೇಲ್ ಕೂಡ ಶತಕದ ಗಡಿ ಸಮೀಪಿಸಿದೆ. ಮನ್‍ಮೋಹನ್ ಸಿಂಗ್ ಅವಧಿಯಲ್ಲಿ ಕಚ್ಛಾ ತೈಲದ ಬೆಲೆ 125 ಡಾಲರ್ ಇತ್ತು. ಆಗ ಪೆಟ್ರೋಲ್ ಬೆಲೆ 70 ರೂಪಾಯಿಯಷ್ಟಿತ್ತು. ಈಗ ಕಚ್ಛಾತೈಲದ ಬೆಲೆ 70 ಡಾಲರ್ ಇದ್ದರೂ ಪೆಟ್ರೋಲ್ ಬೆಲೆ 100 ದಾಟಿದೆ. ಜೊತೆಗೆ ಈಗಿನ ಕೇಂದ್ರ ಸರ್ಕಾರ ಲೀಟರ್ ಪೆಟ್ರೋಲ್ ಮೇಲೆ 31.84 ಹಾಗೂ ಡಿಸೇಲ್ ಮೇಲೆ 32.84 ಅಬಕಾರಿ ಸುಂಕ ವಿಧಿಸಿ ಜನರ ಸುಲಿಗೆ ಮಾಡುತ್ತಿದೆ. 1 ಲೀಟರ್ ಪೆಟ್ರೋಲ್ ಮೂಲಬೆಲೆ 35 ರೂಪಾಯಿ ಇದ್ದರೂ ಜನರು 65 ರೂಪಾಯಿ ತೆರಬೇಕು. ಪ್ರಪಂಚದಲ್ಲಿ ಒಂದು ಲೀಟರ್ ಪೆಟ್ರೋಲ್‍ಗೆ ಶೇ.65 ರಷ್ಟು ತೆರಿಗೆ ಪಾವತಿಸುತ್ತಿರುವುದು ಭಾರತದಲ್ಲಿ ಮಾತ್ರ ಎಂದರು.

    ತೈಲಬೆಲೆ ಏರಿಕೆಯ ನೇರ ಪರಿಣಾಮ ಅಗತ್ಯ ವಸ್ತುಗಳ ಮೇಲೆ ಬಿದ್ದಿದೆ. ಸಾಗಾಣಿಕೆ ವೆಚ್ಚ ಹೆಚ್ಚಾಗಿದೆ. ವರ್ಷದ ಹಿಂದೆ ಸಾಮಾನ್ಯ ಕುಟುಂಬ ಮಾಸಿಕ 4 ಸಾವಿರದಲ್ಲಿ ಮನೆ ಖರ್ಚು ನಿಭಾಯಿಸುತಿತ್ತು. ಈಗ ಅದೇ ಕುಟುಂಬಕ್ಕೆ ತಿಂಗಳಿಗೆ ಹತ್ತು ಸಾವಿರ ಬೇಕು. 80 ರೂಪಾಯಿ ಇದ್ದ ತೊಗರಿಬೇಳೆಗೆ ಇಂದು 160 ರೂಪಾಯಿ. ಅಡುಗೆ ಎಣ್ಣೆಯ ಬೆಲೆ 90 ರಿಂದ 200 ರೂಪಾಯಿಗೆ ಏರಿಕೆಯಾಗಿದೆ. ಈ ಮಧ್ಯೆ 2013-14 ರಲ್ಲಿ 400 ರೂಪಾಯಿ ಇದ್ದ ಒಂದು ಗ್ಯಾಸ್ ಸಿಲಿಂಡೆರ್‍ನ ಬೆಲೆ 850 ಕ್ಕೆ ತಲುಪಿದೆ. ಹೀಗಿರುವಾಗಲೇ ರಾಜ್ಯ ಸರ್ಕಾರ ಪ್ರತಿ ಯೂನಿಟ್ ವಿದ್ಯತ್‍ಗೆ 30 ಪೈಸೆ ಏರಿಸಿದೆ. ಈ ಸಂದರ್ಭದಲ್ಲಿ ವಿದ್ಯುತ್ ದರ ಏರಿಸುವ ಸರ್ಕಾರದ ನಿರ್ಧಾರ ಸಂವೇದನಾರಹಿತಾ ನಡೆ. ವಿದ್ಯುತ್ ದರ ಏರಿಕೆಯಿಂದ ಜನಸಾಮಾನ್ಯರ ಜೊತೆ ಕೈಗಾರಿಕಾ ಕ್ಷೇತ್ರಕ್ಕೂ ದೊಡ್ಡ ಹೊಡೆತ ನೀಡಲಿದೆ. ಈಗಾಗಲೇ ಕೈಗಾರಿಕೆಗಳು ಲಾಕ್‍ಡೌನ್‍ನಿಂದಾಗಿ ಉತ್ಪಾದನೆ ನಿಲ್ಲಿಸಿವೆ. ವಿದ್ಯುತ್ ದರ ಏರಿಕೆಯಿಂದ ಕೈಗಾರಿಕೆಗಳು ಬಾಗಿಲು ಮುಚ್ಚಿದರೆ ಆಗುವ ಉದ್ಯೋಗ ನಷ್ಟಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.

    ರಾಜ್ಯ ಸರ್ಕಾರದ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯಕ್ಕೆ ರಾಜ್ಯದ ಜನ ಕೊರೊನಾ 2ನೇ ಅಲೆಯ ಭೀಕರ ಪರಿಣಾಮ ಎದುರಿಸುವಂತಾಯಿತು. ಚಾಮರಾಜನಗರದ ದುರಂತ ರಾಜ್ಯ ಸರ್ಕಾರದ ಪಾಪದ ಫಲ. ರಾಜ್ಯ ಸರ್ಕಾರದ ನಿಷ್ಕ್ರಿಯತೆಯಿಂದಾಗಿ ರಾಜ್ಯದಲ್ಲಿ ಲಾಕ್‍ಡೌನ್ ಜಾರಿ ಮಾಡುವ ಅನಿವಾರ್ಯತೆ ಸೃಷ್ಟಿಯಾಯಿತು. ಲಾಕ್‍ಡೌನ್ ನಂತರ ಜನರ ಜೀವನದ ಮೇಲಾಗುವ ಪರಿಣಾಮದ ಬಗ್ಗೆ ಸರ್ಕಾರ ಯೋಚಿಸಲೇ ಇಲ್ಲ. ಲಾಕ್‍ಡೌನ್‍ನಿಂದ ಲಕ್ಷಾಂತರ ಜನರ ಬದುಕು ಮೂರಾಬಟ್ಟೆಯಾಯಿತು. ನಮ್ಮ ಪಕ್ಷ ನಿರಂತರವಾಗಿ ಒತ್ತಡ ಹೇರಿದ ಮೇಲೆ ಮುಖ್ಯಮಂತ್ರಿಯವರು ಕಾಟಾಚಾರಕ್ಕೆ ಆರ್ಥಿಕ ಪ್ಯಾಕೇಜ್ ಘೋಷಿಸಿದರು. ಆದರೆ ಅದೊಂದು ಎಲ್ಲರನ್ನೂ ಒಳಗೊಳ್ಳದ ಕಣ್ಣೊರೆಸುವ ಪ್ಯಾಕೇಜ್ ಎಂದರು.

    ಲಾಕ್‍ಡೌನ್ ಪರಿಣಾಮ ರಾಜ್ಯದ ರೈತರ ಬದುಕು ಬೀದಿಗೆ ಬಂದಿದೆ. ಲಾಕ್‍ಡೌನ್‍ನಿಂದಾಗಿ ಬೆಳೆದ ಬೆಳೆಗೆ ಸರಿಯಾದ ಮಾರುಕಟ್ಟೆ ಸಿಗದೆ ನಷ್ಟ ಅನುಭವಿಸಿದ್ದಾರೆ. ಈ ಬಾರಿ ಮುಂಗಾರು ಪೂರ್ವ ಮಳೆ ಉತ್ತಮವಾಗಿದ್ದರೂ ಬಿತ್ತನೆ ಬೀಜ ಸಿಗದೆ, ಸಕಾಲಕ್ಕೆ ರಸಗೊಬ್ಬರ ಸಿಗದೆ ಹೈರಾಣಾಗಿದ್ದಾರೆ. ಸರ್ಕಾರ ಘೋಷಿಸಿದ ಆರ್ಥಿಕ ಪ್ಯಾಕೇಜ್‍ನಲ್ಲಿ ರೈತರಿಗೆ ನಯಾಪೈಸೆಯ ನೆರವು ಸಿಗಲಿಲ್ಲ. ಕೇವಲ ಹೂವು ಬೆಳೆಗಾರರಿಗೆ ಹತ್ತು ಸಾವಿರ ಘೋಷಣೆ ಮಾಡಿ ಸರ್ಕಾರ ಕೈ ತೊಳೆದುಕೊಂಡಿದೆ ಎಂದು ಗರಂ ಆದರು.

    ಸರ್ಕಾರ ಸುಳ್ಳು ಭರವಸೆಗಳ ಮೂಲಕ ಜನರನ್ನು ವಂಚಿಸುವ ಕೆಲಸ ಬಿಡಬೇಕು. ಕೋವಿಡ್ ವಿಷಮ ಗಳಿಗೆಯಲ್ಲಿ ಬೆಲೆ ಏರಿಸುವ ನಿರ್ದಯತೆ ಸರ್ಕಾರಕ್ಕಿರಬಾರದು. ಕೇಂದ್ರ ಸರ್ಕಾರ ತೈಲಬೆಲೆ ಇಳಿಸಿ, ಅಗತ್ಯ ವಸ್ತುಗಳ ಬೆಲೆ ಇಳಿಸಲಿ ಇನ್ನು ಸರ್ಕಾರಕ್ಕೆ ನನ್ನ ಆಗ್ರಹವೇನೆಂದರೆ, ಸರ್ಕಾರ ಪ್ರತಿ ಬಿಪಿಎಲ್ ಕುಟುಂಬಕ್ಕೆ ಹತ್ತು ಸಾವಿರ ರೂಪಾಯಿಗಳ ಸಹಾಯಧನ ನೀಡಬೇಕು. ಆಸ್ತಿ ತೆರಿಗೆಯಲ್ಲಿ ಶೇ. 50 ರಷ್ಟು ವಿನಾಯಿತಿ ನೀಡಬೇಕು. ಜೊತೆಗೆ ಈ ಕೂಡಲೆ ವಿದ್ಯುತ್ ದರ ಇಳಿಸಿ ಯಥಾಸ್ಥಿತಿ ಕಾಪಾಡಬೇಕೆಂದು ಆಗ್ರಹಿಸುವುದಾಗಿ ಗುಂಡೂರಾವ್ ಹೇಳಿದ್ದಾರೆ.

  • ಕನ್ನಡಿಗರೇನು ತಬ್ಬಲಿ ಮಕ್ಕಳೇ..?- ಕೇಂದ್ರದ ವಿರುದ್ಧ ಮತ್ತೆ ಸಿಡಿದೆದ್ರು ಹೆಚ್‍ಡಿಕೆ

    ಕನ್ನಡಿಗರೇನು ತಬ್ಬಲಿ ಮಕ್ಕಳೇ..?- ಕೇಂದ್ರದ ವಿರುದ್ಧ ಮತ್ತೆ ಸಿಡಿದೆದ್ರು ಹೆಚ್‍ಡಿಕೆ

    ಬೆಂಗಳೂರು: ರಾಜ್ಯದಲ್ಲಿ ಇದುವರೆಗೆ ಬೆಡ್, ವೆಂಟಿಲೇಟರ್ ಅಂತ ಜನ ಪರದಾಡುತ್ತಿದ್ದರೆ ಸದ್ಯ ಆಕ್ಸಿಜನ್ ಗಾಗಿ ಜನ ನರಳಾಡುತ್ತಿದ್ದಾರೆ. ಈ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.

    ಸರಣಿ ಟ್ವೀಟ್ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಹೆಚ್‍ಡಿಕಡ ಕನ್ನಡಿಗರೇನು ತಬ್ಬಲಿ ಮಕ್ಕಳೇ ಎಂದು ಪ್ರಶ್ನಿಸಿದ್ದಾರೆ.

    ಟ್ವೀಟ್‍ನಲ್ಲೇನಿದೆ..?
    ಕರ್ನಾಟಕಕ್ಕೆ ನಿತ್ಯ 1200 ಮೆಟ್ರಿಕ್ ಟನ್(MT) ಆಮ್ಲಜನಕ ಪೂರೈಸಬೇಕು ಎಂಬ ಕೋರ್ಟ್ ಆದೇಶದ ನಂತರವೂ ಕೇಂದ್ರ ರಾಜ್ಯಕ್ಕೆ ಪೂರೈಸಿದ್ದು 120ಒಖಿ ಮಾತ್ರ. ಅತ್ತ, ನಮಗಿಂತ ಕಡಿಮೆ ಪ್ರಕರಣಗಳಿರುವ ಉತ್ತರ ಪ್ರದೇಶಕ್ಕೆ 1680MT ಪೂರೈಸಿರುವ ಕೇಂದ್ರ ಸರ್ಕಾರ ತಾರತಮ್ಯದಲ್ಲಿ ಪಾರಮ್ಯ ಮೆರೆದಿದೆ. ಈ ಒಕ್ಕೂಟದಲ್ಲಿ ಕನ್ನಡಿಗರೇನು ತಬ್ಬಲಿ ಮಕ್ಕಳೇ?

    ಕರ್ನಾಟಕದ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿರುವುದು ಸರ್ಕಾರವೇ ನೀಡಿರುವ ಅಂಕಿ-ಅಂಶಗಳಿಂದ ಬಯಲಾಗಿದೆ. ಕರ್ನಾಟಕ, ಕನ್ನಡಿಗರ ವಿಚಾರದಲ್ಲಿ ಕೇಂದ್ರಕ್ಕೆ ಈ ಮಟ್ಟಿಗಿನ ತಾತ್ಸಾರ ಏಕೆ? ಇಲ್ಲಿ ಬಿಜೆಪಿಯದ್ದೇ ಸರ್ಕಾರ ಇರುವುದಕ್ಕೋ? ಅತಿ ಹೆಚ್ಚು ಸಂಸದರು ಆಯ್ಕೆಯಾಗಿರುವುದಕ್ಕೋ? ಅಥವಾ ಯಡಿಯೂರಪ್ಪರನ್ನು ಖಳನಾಯಕರಾಗಿಸಲೋ?

    ಕರ್ನಾಟಕದ ವಿಚಾರದಲ್ಲಿ ಹೇಳತೀರದ ತಾರತಮ್ಯ ಮಾಡುತ್ತಿರುವ ಕೇಂದ್ರ ಸರ್ಕಾರ ಒಂದು ವಿಷಯ ಸ್ಪಷ್ಟವಾಗಿ ಅರಿಯಬೇಕು. ಇದು ಒಕ್ಕೂಟ ವ್ಯವಸ್ಥೆ. ಒಕ್ಕೂಟ ಸರ್ಕಾರ ನಡೆಸುತ್ತಿರುವವರು ಎಲ್ಲ ರಾಜ್ಯಗಳಿಗೂ ಸಮಾನ ಆದ್ಯತೆ ನೀಡಬೇಕು. ಅನಿವಾರ್ಯದಲ್ಲಿರುವವರ ಅಗತ್ಯಗಳನ್ನು ಮೊದಲು ಪೂರೈಸಬೇಕು. ಅದನ್ನು ಬಿಟ್ಟು ತಾತ್ಸಾರ ಮಾಡಿದರೆ ಜನ ದಂಗೆ ಎದ್ದಾರು.

    ಲಸಿಕೆ ವಿಚಾರದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರೇ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ‘3ಕೋಟಿ ಲಸಿಕೆಗೆ ಕೇಳಿದ್ದೇವೆ. 7 ಲಕ್ಷ ಡೋಸ್ ಸಿಕ್ಕಿದೆ. ಎರಡನೇ ಡೋಸ್ ಪಡೆಯುವವರಿಗೆ ಮಾತ್ರ ಆದ್ಯತೆ. ಮೊದಲ ಡೋಸ್ ಪಡೆಯುವವರು ಕಾಯಬೇಕು’ ಎಂದಿದ್ದಾರೆ. ಲಸಿಕೆಯ ವಿಚಾರದಲ್ಲಿಯೂ ಕೇಂದ್ರ ತಾರತಮ್ಯ ಮಾಡುತ್ತಿರುವುದು ಇದರಿಂದ ಸ್ಪಷ್ಟವಾಗಿದೆ.

    ಬಿಜೆಪಿಯ ಪ್ರತಿಯೊಂದು ಧೋರಣೆಯನ್ನೂ ಬೆಂಬಲಿಸುವವರು, ಸಮರ್ಥಿಸಿಕೊಳ್ಳುತ್ತಿರುವವರು, ವಿರೋಧ ಪಕ್ಷಗಳ ನ್ಯಾಯಯುತ ಸಲಹೆ, ಬೇಡಿಕೆಗಳನ್ನು ಅಡಿಗಡಿಗೂ ಟೀಕಿಸುವವರು ಕರ್ನಾಟಕಕ್ಕೆ, ಕನ್ನಡಿಗರಿಗೆ ಆಗುತ್ತಿರುವ ಈ ಅನ್ಯಾಯವನ್ನು ಸಮರ್ಥಿಸಿಕೊಳ್ಳುವರೇ? ಆಮ್ಲಜನಕವಿಲ್ಲದೇ ಪ್ರಾಣ ಕಳೆದುಕೊಳ್ಳುತ್ತಿರುವ ಕನ್ನಡಿಗರ ಸಾವಿನ ಹೊಣೆಯನ್ನು ಹೊರುವರೇ?

    ನ್ಯಾಯಾಲಯ ಹೇಳಿದ್ದ 1200MT ಬದಲಿಗೆ 120MT ಆಮ್ಲಜನಕ ಪೂರೈಸಿದ್ದಕ್ಕೆ ಮುಖ್ಯಮಂತ್ರಿ, ಕೇಂದ್ರದ ಸಚಿವರು, ಬಿಜೆಪಿ ಸಂಸದರು ಮುಗಿಬಿದ್ದು ಕೇಂದ್ರ, ನರೇಂದ್ರ ಮೋದಿ ಅವರನ್ನು ಅಭಿನಂದಿಸಿದ್ದಾರೆ. ನಮಗೆ ಸಿಗಬೇಕಾಗಿದ್ದರಲ್ಲಿ ಮುರಿದುಕೊಂಡು ಕೊಟ್ಟದ್ದಕ್ಕೆ ಧನ್ಯವಾದ ಏಕೆ? ಬಿಜೆಪಿ ನಾಯಕರು, ಬಿಜೆಪಿ ಬೆಂಬಲಿಗರು ಈ ಗುಲಾಮಗಿರಿ ಬಿಡಬೇಕು.

    ಕೇಂದ್ರ ಸರ್ಕಾರ ತಾರತಮ್ಯ ಬಿಟ್ಟು ಕರ್ನಾಟಕದ ಅಗತ್ಯವನ್ನು ಪೂರೈಸಬೇಕು. ತಾನು ಸರ್ವಶಕ್ತ ಆಡಳಿತ ನಡೆಸುತ್ತಿರುವ ದಿಮಾಕನ್ನು ಕೇಂದ್ರ ಬಿಡಬೇಕು. ಒಕ್ಕೂಟ ಸರ್ಕಾರ ನಡೆಸುತ್ತಿರುವ ವಾಸ್ತವ ಅರಿಯಬೇಕು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ತಪ್ಪನ್ನು ಇಲ್ಲಿ ಸಮರ್ಥಿಸಿಕೊಳ್ಳುತ್ತಿರುವವರು ಮೊದಲು ತಾವು ಕನ್ನಡಿಗರು ಎಂಬುದು ಅರಿಯಬೇಕು.

    ಆಮ್ಲಜನಕ ಕರ್ನಾಟಕದ ಈ ಹೊತ್ತಿನ ಅಗತ್ಯ. ಈ ವಿಚಾರದಲ್ಲಿ ಆಗುತ್ತಿರುವ ತಾರತಮ್ಯವನ್ನೇ ಕನ್ನಡಿಗರಾಗಿ ನಾವು ಪ್ರಶ್ನೆ ಮಾಡದೇ ಹೋದರೆ ಇನ್ನ್ಯಾವ ವಿಚಾರದಲ್ಲಿ ನಾವು ನ್ಯಾಯ ಪಡೆಯಲು ಸಾಧ್ಯ. ಪರಿಹಾರ, ಅನುದಾನಗಳಲ್ಲಿ ಕರ್ನಾಟಕಕ್ಕೆ ಈಗ ಆಗಿರುವ ಅನ್ಯಾಯ ಸಹಿಸಿದ್ದಾಗಿದೆ. ಜೀವದ ವಿಚಾರದಲ್ಲಿ ನಡೆಯುತ್ತಿರುವ ಈ ತಾರತಮ್ಯ ಸಹಿಸುವುದು ಬೇಡ ಎಂದು ಹೆಚ್‍ಡಿಕೆ ತಿಳಿಸಿದ್ದಾರೆ.

  • ಕೇಂದ್ರ ಸರ್ಕಾರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ತೀವ್ರ ಅಸಮಾಧಾನ

    ಕೇಂದ್ರ ಸರ್ಕಾರದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ತೀವ್ರ ಅಸಮಾಧಾನ

    ಬೆಂಗಳೂರು: ಕೊರೊನಾ ಕೇಸ್ ಕಡಿಮೆ ಇದ್ದಾಗ ಲಾಕ್ ಡೌನ್. ಕೊರೊನಾ ಜಾಸ್ತಿ ಆದ ಬಳಿಕ ಲಾಕ್ ಡೌನ್ ಫ್ರೀ ಬಿಟ್ಟಿದ್ದಾರೆ. ದೇಶದ ಎಲ್ಲ ವರ್ಗದ ಜನರಿಗೆ ತೊಂದರೆ ಮಾಡುವ ಕೆಲಸ ಕೇಂದ್ರ ಮಾಡಿದೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ಹೊರಹಾಕಿದ್ದಾರೆ.

    ನಗರದಲ್ಲಿಮದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಎಐಸಿಸಿಯಿಂದ ಕೆಲ ವಿಚಾರಗಳ ಪ್ರಸ್ತಾಪ ಮಾಡಲು ಆದೇಶ ಇದೆ. ಕೋವಿಡ್ 19 ಹಿನ್ನೆಲೆ ಮಾಧ್ಯಮಗಳ ಮುಂದೆ ಮಾತನಾಡುವುದು ಬೇಡ ಅಂದುಕೊಂಡಿದ್ದೆ. ಆದರೆ ಹೈಕಮಾಂಡ್ ಸೂಚನೆ ಮೇರೆಗೆ ಇಂದು ನಿಮ್ಮ ದರ್ಶನ ಮಾಡಿದ್ದೇನೆ. ಕೋವಿಡ್ 19 ನಿಂದ ಇಡೀ ದೇಶ ಅಲ್ಲೋಲ ಕಲ್ಲೋಲವಾಗಿದೆ. ಕೂಲಿ ಕಾರ್ಮಿಕರು ತಮ್ಮ ಸಮುದಾಯ ವೃತ್ತಿ ಆದರಿಸಿದವರು ಬಹಳ ತೊಂದರೆಯಲ್ಲಿ ಇದ್ದಾರೆ. ಸಣ್ಣ ಕೈಗಾರಿಕೆಗಳು ಮತ್ತು ಅಸಂಘಟಿತ ಕಾರ್ಮಿಕರಿಗೆ ಭಾರೀ ತೊಂದರೆ ಆಗಿದೆ ಎಂದರು.

    ವಲಸಿಗ ಕಾರ್ಮಿಕರು ದೇಶದಲ್ಲಿ 11 ಕೋಟಿ ಜನ ಸಮಸ್ಯೆಯಲ್ಲಿ ಸಿಕ್ಕಿದ್ದಾರೆ. ಅವರ ಜೀವನ ಅಸ್ತವ್ಯಸ್ತ ಆಗಿದೆ. ರೈತರು ಮತ್ತು ರೈತ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಹಕನ ಬಳಿ ಹಣ ಇದ್ದರೆ ಖರೀದಿ ಮಾಡುವ ಶಕ್ತಿ ಬರುತ್ತೆ. ಮಾರುಕಟ್ಟೆಯಲ್ಲಿ ಬೇಡಿಕೆ ಬರುತ್ತೆ. ಆದರೆ ಜನರ ಬಳಿ ಹಣ ಇಲ್ಲದೇ ಬೇಡಿಕೆ ಕುಸಿತ ಕಂಡಿದೆ ಎಂದು ತಿಳಿಸಿದರು.

    13 ಸಾವಿರ ಪ್ಯಾಸೆಂಜರ್ ರೈಲು ದೇಶದಲ್ಲಿ ಓಡಾಟ ಮಾಡ್ತಿದ್ದವು. 2.30 ಕೋಟಿ ಜನ ದಿನನಿತ್ಯ ಓಡಾಟ ಮಾಡ್ತಿದ್ರು. 5-6 ಕೋಟಿ ಜನ ವಲಸಿಗ ಕಾರ್ಮಿಕರು ಇದ್ದರು. ಪ್ಯಾಸೆಂಜರ್ ರೈಲಿನಲ್ಲಿ ನಾಲ್ಕು ದಿನದಲ್ಲಿ ಕಳುಹಿಸಿ ಕೊಡಬಹುದಿತ್ತು. ಲಾಕ್ ಡೌನ್ ಗೂ ಮೊದಲು ಅವರನ್ನ ಅವರ ಸ್ಥಳಗಳಿಗೆ ತಲುಪಿಸಬಹುದಿತ್ತು. ಹಾಗೇ ಮಾಡಿದರೆ ಬೀದಿಯಲ್ಲಿ ಸಾವು, ರಸ್ತೆಯಲ್ಲಿ ಹೆರಿಗೆ ಆಗುವುದು ಕಾಣುತ್ತಿರಲಿಲ್ಲ. ರೈಲ್ವೆ ಹಳಿಗಳ ಮೇಲೆ ಮಲಗಿ ಸಾವು ಆಗುತ್ತಿರಲಿಲ್ಲ. ಅನ್ನ ಮತ್ತು ನೀರಿಲ್ಲದೇ ಸಾಯುತ್ತಿರಲಿಲ್ಲ ಎಂದು ಕೇಂದ್ರ ಸರ್ಕಾರದ ನಡೆ ವಿರುದ್ಧ ಖರ್ಗೆ ಅಸಮಾಧಾನ ಹೊರಹಾಕಿದರು.

    ಮಹಾರಾಷ್ಟ್ರದ್ದು ಮುಖ್ಯವಾಗಿ ಬಾಂಬೆ ನಗರ ವ್ಯವಸ್ಥೆ ಬೇರೆ ಇದೆ. ದೇಶದ ಎಲ್ಲಾ ಜನ ಬರುತ್ತಾರೆ. ಕರ್ನಾಟಕ ಜನ ಅಲ್ಲಿ ಶಾಸಕರಾಗಿದ್ದರು. ಅಲ್ಲಿ ಅಧಿಕ ಜನ ಇದ್ದಾರೆ. ಅಲ್ಲಿ ಶಿಫ್ಟ್ ನಲ್ಲಿ ಕೆಲಸ ಮಾಡುವವರು ಹೆಚ್ಚು. ಹಾಗೆ ನಾವು ಅದಕ್ಕೆ 150 ಟ್ರೈನ್ ಕೇಳಿದ್ವಿ. ಬರೀ 50 ಟ್ರೈನ್ ಕೊಟ್ಟರು. ಅಲ್ಲಿ ಕರ್ನಾಟಕದವರು ಹೆಚ್ಚು ಇದ್ದಾರೆ. ಅಲ್ಲಿ ಎಲ್ಲಾ ಪಕ್ಷದವರು, ಎನ್‍ಜಿಓ ಗಳು ಕೆಲಸ ಮಾಡುತ್ತಿವೆ. ಇವರುಗಳ ಕಿವಿ, ಕಣ್ಣು ಮುಚ್ಚಿವೆ. ಆದರೆ ಬಾಯಿ ಮಾತ್ರ ಓಪನ್ ಇದೆ ಎಂದು ಗರಂ ಆದರು.

    ಗುಜರಾತಿನಲ್ಲಿ ಅಮೆರಿಕದ ಅಧ್ಯಕ್ಷರನ್ನು ಕರೆಸಿ ಶೋ ಮಾಡಿದ್ರು. ಆಮೇಲೆ ಲಾಕ್ ಡೌನ್ ಮಾಡಿದರು. ಸರ್ಕಾರದವರು ಶೋ ಮಾಡುತ್ತಾರೆ ಆದರೆ ಕೆಲಸ ಮಾಡುವುದಿಲ್ಲ. ಇಂದು ರಾಜಕೀಯ ಮಾಡಬಾರದು ಅಂತ ಸುಮ್ಮನೆ ಇದ್ದೇವೆ. 3 ಸಾವಿರ ಟ್ರೈನ್ ಇವೆ. ಅವನ್ನು ಸಮರ್ಥವಾಗಿ ಬಳಸುತ್ತಿಲ್ಲ. ವಲಸೆ ಕಾರ್ಮಿಕರ ಹಿತವನ್ನು ಕಾಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದರು.

  • ಕೊರೊನಾ ನಿಯಂತ್ರಣದಲ್ಲಿ ಬೆಂಗ್ಳೂರು ರೋಲ್ ಮಾಡೆಲ್- ಕೇಂದ್ರ ಸರ್ಕಾರ

    ಕೊರೊನಾ ನಿಯಂತ್ರಣದಲ್ಲಿ ಬೆಂಗ್ಳೂರು ರೋಲ್ ಮಾಡೆಲ್- ಕೇಂದ್ರ ಸರ್ಕಾರ

    – ಚೆನ್ನೈ, ಜೈಪುರ, ಇಂದೋರ್ ಬಗ್ಗೆಯೂ ಮೆಚ್ಚುಗೆ

    ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ನಿಯಂತ್ರಣದಲ್ಲಿ ಬೆಂಗಳೂರು (ಆದರ್ಶಪ್ರಾಯ) ರೋಲ್ ಮಾಡೆಲ್ ಎಂದು ಕೇಂದ್ರ ಸರ್ಕಾರವು ಹೊಗಳಿದೆ. ಜೊತೆಗೆ ಚೆನ್ನೈ, ಜೈಪುರ, ಇಂದೋರ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದೆ.

    ಆರ್ಥಿಕತೆಯನ್ನು ಪುನರಾರಂಭಿಸುವ ಹಂತದಲ್ಲಿ ಜೈಪುರ, ಇಂದೋರ್, ಚೆನ್ನೈ ಮತ್ತು ಬೆಂಗಳೂರು ನಾಲ್ಕು ನಗರಗಳು ಕೋವಿಡ್-19 ನಿಯಂತ್ರಿಸುವಲ್ಲಿ ಇತರ ನಗರಗಳಿಗೆ ಆದರ್ಶಪ್ರಾಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜೊತೆಗೆ ಕಳೆದ ಕೆಲವು ದಿನಗಳಿಂದ ಸಭೆ ನಡೆಸಿ ಸೋಂಕಿತರ ಸಂಖ್ಯೆ ಹೆಚ್ಚಾಗದಂತೆ ತಡೆಯುವುದು ಮತ್ತು ಮರಣ ಪ್ರಮಾಣವನ್ನು ಕಡಿಮೆಗೊಳಿಸುತ್ತಿರುವ ಪುರಸಭೆಗಳ ಮಾಹಿತಿಯನ್ನು ಕಲೆ ಹಾಕಲಾಗಿದೆ. ಈ ಎರಡು ಪ್ರಮುಖ ವಿಚಾರದಲ್ಲಿ ಶ್ರಮಿಸುತ್ತಿರುವ ಪುರಸಭೆಗಳ ಬಗ್ಗೆ ಕೇಂದ್ರವು ಮೆಚ್ಚುಗೆ ವ್ಯಕ್ತಪಡಿಸಿದೆ.  ಇದನ್ನೂ ಓದಿ: ವಿಶ್ವದಲ್ಲೇ ಹೆಚ್ಚು ಪಿಪಿಇ ಉತ್ಪಾದಿಸುತ್ತಿರುವ ಎರಡನೇ ರಾಷ್ಟ್ರ ಭಾರತ- ಬೆಂಗಳೂರು ಈಗ ಪಿಪಿಇ ಹಬ್

    ಜೈಪುರ ಮತ್ತು ಇಂದೋರ್ ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿ ಸೊಂಕಿತರ ಸಂಖ್ಯೆಯನ್ನು ನಿಯಂತ್ರಣಕ್ಕೆ ತರಲಾಗಿದೆ. ಇತ್ತ ಚೆನ್ನೈ ಮತ್ತು ಬೆಂಗಳೂರು ಮಹಾ ನಗರಗಳಲ್ಲಿ ಮರಣ ಪ್ರಮಾಣ ಕಡಿಮೆಯಾಗಿದೆ. ಆದರೆ ಭಾರತದ ಅನೇಕ ಪುರಸಭೆಗಳಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಅಷ್ಟೇ ಅಲ್ಲದೆ ಹೆಚ್ಚಿನ ಮರಣ ಪ್ರಮಾಣಗಳಂತಹ ಸವಾಲುಗಳನ್ನು ಎದುರಿಸುತ್ತಿವೆ. ಕೊಳಗೇರಿಗಳು, ಕಂಟೈನ್‍ಮೆಂಟ್ ಝೋನ್‍ಗಳು ಮಹಾನಗರಗಳಲ್ಲಿ ಆತಂಕವನ್ನು ಹೆಚ್ಚಿಸುತ್ತಿವೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಯಪಟ್ಟಿದೆ.

    ಇಂದೋರ್ ಮತ್ತು ಜೈಪುರ ಎರಡೂ ಪುರಸಭೆಗಳು ಮನೆ-ಮನೆಗೆ ಸಮೀಕ್ಷೆ ಮತ್ತು ಸೋಂಕಿತರ ಸಂಪರ್ಕ ಪತ್ತೆಹಚ್ಚುವಿಕೆಯನ್ನು ವೇಗವಾಗಿ ನಡೆಸುತ್ತಿವೆ. ಈ ನಿಟ್ಟಿನಲ್ಲಿ ಇಂದೋರ್ ಪುರಸಭೆ ವಿಶೇಷ ತಂಡಗಳನ್ನು ರಚಿಸಿದರೆ, ಜೈಪುರವು ವಿವಿಧ ಪ್ರದೇಶಗಳಲ್ಲಿ ಸೀಮಿತ ದಿನಸಿ ಅಥವಾ ತರಕಾರಿ ಮಾರಾಟಗಾರಕ್ಕೆ ಅನುಮತಿ ನೀಡಿದೆ. ಈ ಮೂಲಕ ವೇಗವಾಗಿ ಕೊರೊನಾ ಹರಡದಂತೆ ತಡೆಗಟ್ಟಲಾಗಿದೆ.

    ಚೆನ್ನೈ ಮತ್ತು ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಆದರೆ ಮರಣ ಪ್ರಮಾಣವು ಕೇವಲ ಶೇ.1ರಷ್ಟ ಮಾತ್ರವೇ ಇದೆ. ಈ ಪ್ರಮಾಣವು ಭಾರತದಲ್ಲಿ ಕೊರೊನಾ ಸೋಂಕಿತರ ಸಾವಿನ ಸರಾಸರಿ ಶೇ.3ಕ್ಕಿಂತ ಕಡಿಮೆಯಾಗಿದೆ. ಕೋವಿಡ್-19 ರೋಗಿಗಳ ಚಿಕಿತ್ಸೆಯಲ್ಲಿ ದಕ್ಷಿಣ ಭಾರತದ ಈ ಎರಡು ನಗರಗಳು ಆದರ್ಶವಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    “ಚೆನ್ನೈ ಮತ್ತು ಬೆಂಗಳೂರು ಎರಡೂ ನಗರದಲ್ಲಿ ವೆಂಟಿಲೇಟರ್ ಗಳ ಬಳಕೆಯನ್ನು ಉತ್ತಮಗೊಳಿಸಲಾಗಿದೆ. ವೆಂಟಿಲೇಟರ್ ಗಳನ್ನು ಹೆಚ್ಚಾಗಿ ಬಳಸಿದ ಕೆಲವು ನಗರಗಳನ್ನು ನಾವು ನೋಡಿದ್ದೇವೆ. ಆದರೆ ದಕ್ಷಿಣ ರಾಜ್ಯಗಳಲ್ಲಿ ವಿಶೇಷವಾಗಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ ರೋಗಿಗಳ ನಿರ್ವಹಣೆ ಹೆಚ್ಚು ಉತ್ತಮವಾಗಿದೆ” ಎಂದು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

    ಬೃಹತ್ ಮುಂಬೈ ಮಹಾನಗರ ಪಾಲಿಕೆ ಅಳವಡಿಸಿಕೊಂಡ ಕಾರ್ಯತಂತ್ರವನ್ನು ಇತ್ತೀಚಿನ ಸಭೆಗಳಲ್ಲಿ ಶ್ಲಾಘಿಸಲಾಯಿತು. ಆರೋಗ್ಯ ಮೂಲಸೌಕರ್ಯಗಳನ್ನು ಸಂಗ್ರಹಿಸಲು ನಗರವು ಖಾಸಗಿ ಆಸ್ಪತ್ರೆಗಳು ಮತ್ತು ಪುರಸಭೆ ಅಧಿಕಾರಿಗಳ ಜಾಲವನ್ನು ಸ್ಥಾಪಿಸಿದೆ.

  • ಕೇಂದ್ರ ಸರ್ಕಾರದಿಂದ ರೈತರ 4.5 ಲಕ್ಷ ಕೋಟಿ ರೂ. ಸಾಲಮನ್ನಾ?

    ಕೇಂದ್ರ ಸರ್ಕಾರದಿಂದ ರೈತರ 4.5 ಲಕ್ಷ ಕೋಟಿ ರೂ. ಸಾಲಮನ್ನಾ?

    ನವದೆಹಲಿ: ಪಂಚರಾಜ್ಯಗಳ ಸೋಲಿನ ಬಳಿಕ ಎಚ್ಚೆತ್ತಿರುವ ಕೇಂದ್ರ ಸರ್ಕಾರ 2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ರೈತರ ಸಂಪೂರ್ಣ ಸಾಲಮನ್ನಾ ಮಾಡಲು ಚಿಂತಿಸಿದೆ.

    ರೈತರ ಸಾಲದ ವಿಚಾರವನ್ನು ಕಡೆಗಣಿಸಿದರೆ ನಮಗೂ ಸಮಸ್ಯೆಯಾಗಬಹುದು ಎನ್ನುವುದನ್ನು ಅರಿತ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭಾ ಚುನಾವಣೆಗೂ ಮುನ್ನ ಸಾಲಮನ್ನಾ ಘೋಷಣೆಯನ್ನು ಮಾಡುವ ಸಾಧ್ಯತೆಯಿದೆ.

    ಒಂದೊಮ್ಮೆ ಸರ್ಕಾರದಿಂದ ಈ ನಿರ್ಧಾರ ಹೊರ ಬಿದ್ದರೆ 26 ಕೋಟಿ ರೈತರ ಸುಮಾರು 4.5 ಲಕ್ಷ ಕೋಟಿ ರೂಪಾಯಿ ಸಾಲಮನ್ನಾವಾಗುವ ಸಾಧ್ಯತೆಯಿದೆ. ಈ ಹಿಂದೆ 2008ರಲ್ಲಿ ಯುಪಿಎ ಸರ್ಕಾರ ರೈತರ 72 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿ ಮತ್ತೊಮ್ಮೆ ಅಧಿಕಾರಕ್ಕೆ ಏರಿತ್ತು. ಈಗ ಅದೇ ತಂತ್ರವನ್ನು ಬಳಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಲಿದೆ ಎನ್ನಲಾಗಿದೆ.

    ಬಿಜೆಪಿ ಸೋತ ಪ್ರಮುಖ ಮೂರು ರಾಜ್ಯಗಳು ಕೂಡ ರೈತರ ಹೋರಾಟಗಳು ಹೆಚ್ಚು ನಡೆದ ರಾಜ್ಯಗಳಾಗಿವೆ. ನಗರದ ಜನತೆ ಕೈ ಹಿಡಿದರೂ ಗ್ರಾಮೀಣ ಭಾಗದಲ್ಲಿ ಬಿಜೆಪಿಗೆ ಹಿನ್ನಡೆ ಆಗುತ್ತಿರುವುದು ಪ್ರತಿ ಚುನಾವಣೆಯಲ್ಲಿ ಸಾಬೀತಾಗುತ್ತಲೇ ಇದೆ. ಹೀಗಾಗಿ ಗ್ರಾಮೀಣ ಜನರನ್ನು ಸೆಳೆಯಲು ಸಾಲಮನ್ನಾ ನಿರ್ಧಾರ ಪ್ರಕಟವಾಗುವ ಸಾಧ್ಯತೆಯಿದೆ.

    ಶೀಘ್ರವೇ ಈ ಕುರಿತು ಮಾಹಿತಿ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದ್ದು, ಮಾರ್ಚ್ ಮೊದಲೇ ಈ ತೀರ್ಮಾನ ಹೊರ ಬೀಳುವ ಸಾಧ್ಯತೆ ಇದೆ. ಸಾಲ ಮನ್ನಾವನ್ನು ಹೇಗೆ ಜಾರಿ ಮಾಡಬೇಕು ಎಂಬುವುದರ ಕುರಿತು ಆರ್ಥಿಕ ತಜ್ಞರಿಂದ ಕೇಂದ್ರ ಸರ್ಕಾರ ಮಾಹಿತಿ ಪಡೆಯಲಿದೆ.

    ಈಗಾಗಲೇ ಕಾಂಗ್ರೆಸ್ 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡಲಾಗುವುದು ಎನ್ನುವ ಆಶ್ವಾಸನೆ ನೀಡಿದೆ. ರೈತರ ಸಾಲಮನ್ನಾ ಮಾಡಿದರೆ ಸಾಲಮನ್ನಾ ಹೆಸರಿನಲ್ಲಿ ಅಜೆಂಡಾ ರೂಪಿಸಿ ಅಧಿಕಾರಕ್ಕೆ ಬರುವ ಪ್ರಯತ್ನ ನಡೆಸುತ್ತಿರುವ ಯುಪಿಎ ಮೈತ್ರಿಕೂಟಕ್ಕೆ ಮೋದಿ ಶಾಕ್ ನೀಡಿದಂತಾಗುತ್ತದೆ. ಅಷ್ಟೇ ಅಲ್ಲದೇ ಸಾಲಮನ್ನಾ ಮತ್ತು ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದ ರೈತರ ಮನವೊಲಿಕೆಯ ಕೆಲಸವೂ ಸುಲಭವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೇರೆ ರಾಜ್ಯದಲ್ಲಿ ಖಾಲಿ ಇದ್ದರೂ ನಮ್ಮಲ್ಲಿ ಮಾತ್ರ ಯಾಕೆ ಲೋಕಸಭಾ ಉಪಚುನಾವಣೆ: ರಾಷ್ಟ್ರಪತಿಗೆ ಕಿಮ್ಮನೆ ದೂರು

    ಬೇರೆ ರಾಜ್ಯದಲ್ಲಿ ಖಾಲಿ ಇದ್ದರೂ ನಮ್ಮಲ್ಲಿ ಮಾತ್ರ ಯಾಕೆ ಲೋಕಸಭಾ ಉಪಚುನಾವಣೆ: ರಾಷ್ಟ್ರಪತಿಗೆ ಕಿಮ್ಮನೆ ದೂರು

    ಶಿವಮೊಗ್ಗ: ಆಂಧ್ರ ಹಾಗೂ ಒಡಿಶಾದಲ್ಲಿ ಲೋಕಸಭಾ ಸ್ಥಾನಗಳು ಖಾಲಿ ಇದ್ದರೂ ಕರ್ನಾಟಕದಲ್ಲಿ ಮಾತ್ರ ಉಪಚುನಾವಣೆ ಮಾಡುತ್ತಿರುವುದಕ್ಕೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಕಿಮ್ಮನೆ ರತ್ನಾಕರ್ ಆಕ್ಷೇಪ ವ್ಯಕ್ತಪಡಿಸಿ, ರಾಷ್ಟ್ರಪತಿಗೆ ದೂರು ನೀಡಿದ್ದಾರೆ.

    ಕರ್ನಾಟಕದ ಮೂರು ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ಹೊರಡಿಸಿರುವ ಅಧಿಸೂಚನೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ. ರಾಷ್ಟ್ರಪತಿಗಳು ಈ ಬಗ್ಗೆ ಗಮನ ಹರಿಸದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಕಿಮ್ಮನೆ ಹೇಳಿದ್ದಾರೆ.

     

    ಬೇರೆ ರಾಜ್ಯಗಳನ್ನು ಬಿಟ್ಟು ರಾಜ್ಯದಲ್ಲಿ ಮಾತ್ರ ಚುನಾವಣೆ ಏಕೆ ಎಂದು ಪ್ರಶ್ನಿಸಿದ್ದಾರೆ. ಆಯೋಗದ ಈ ನಡೆ ಅನುಮಾನಾಸ್ಪದವಾಗಿದೆ. ಕರ್ನಾಟಕದ ನಾಡಿ ಮಿಡಿತ ಅರಿಯಲು ಕೇಂದ್ರ ಸರ್ಕಾರ ಈ ಚುನಾವಣೆ ನಡೆಸುತ್ತಿದೆ ಎಂದು ಆರೋಪ ಮಾಡಿದ್ದಾರೆ. ಕೇವಲ ನಾಲ್ಕು ತಿಂಗಳಿಗಾಗಿ ನಡೆಯುತ್ತಿರುವ ಈ ಚುನಾವಣೆಯಿಂದ ಹಣ, ಮಾನವಸಂಪನ್ಮೂಲ, ಸರ್ಕಾರಿ ಆಡಳಿತ ವ್ಯವಸ್ಥೆ ಎಲ್ಲವೂ ವ್ಯರ್ಥವಾಗುತ್ತದೆ. ಆದ್ದರಿಂದ ತಕ್ಷಣ ಈ ಅಧಿಸೂಚನೆ ಹಿಂಪಡೆದು, ಚುನಾವಣೆ ನಿಲ್ಲಿಸಿ ಎಂದು ಕಿಮ್ಮನೆ ಆಗ್ರಹಿಸಿದ್ದಾರೆ.

    ಯಡಿಯೂರಪ್ಪ, ಶ್ರೀರಾಮುಲು, ಪುಟ್ಟರಾಜು ಅವರಿಂದ ತೆರವಾಗಿರುವ ಶಿವಮೊಗ್ಗ, ಬಳ್ಳಾರಿ, ಮಂಡ್ಯ ಕ್ಷೇತ್ರದ ಉಪಚುನಾವಣೆ ನವೆಂಬರ್ 3 ರಂದು ನಡೆಯಲಿದ್ದು, ನವೆಂಬರ್ 6 ರಂದು ಫಲಿತಾಂಶ ಪ್ರಕಟವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv