Tag: Central Government

  • ಭತ್ತ, ಬೇಳೆ ಕಾಳು, ರಾಗಿಗಳ ಎಂಎಸ್‍ಪಿ ಹೆಚ್ಚಳ – ಹಿಂದೆ ಎಷ್ಟಿತ್ತು? ಎಷ್ಟು ಏರಿಕೆಯಾಗಿದೆ?

    ಭತ್ತ, ಬೇಳೆ ಕಾಳು, ರಾಗಿಗಳ ಎಂಎಸ್‍ಪಿ ಹೆಚ್ಚಳ – ಹಿಂದೆ ಎಷ್ಟಿತ್ತು? ಎಷ್ಟು ಏರಿಕೆಯಾಗಿದೆ?

    ನವದೆಹಲಿ: ಗ್ರಾಮೀಣ ಪ್ರದೇಶದ ರೈತರ (Farmers) ಆದಾಯವನ್ನು ಹೆಚ್ಚಿಸುವ ಹಾಗೂ ಬೆಳೆ ವೈವಿಧ್ಯತೆಯನ್ನು ಉತ್ತೇಜಿಸುವ ಉದ್ದೇಶದಿಂದ ಖಾರಿಫ್ ಕಾಲದ ಬೆಳೆಗಳಿಗೆ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ (Minimum Support Prices) ಹೆಚ್ಚಳ ಮಾಡಿದೆ.

    ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. 2023-24ರ ಮಾರುಕಟ್ಟೆಯ ಎಲ್ಲಾ ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವುದಾಗಿ ಕೇಂದ್ರ ಘೋಷಿಸಿದೆ. ಇದನ್ನೂ ಓದಿ: ಯುಪಿ ಕೋರ್ಟ್‍ನಲ್ಲೇ ಗ್ಯಾಂಗ್‍ಸ್ಟರ್ ಹತ್ಯೆ

    ಭಾರತದ ಅತ್ಯಂತ ವ್ಯಾಪಕವಾಗಿ ಬೆಳೆಯುವ ಬೆಳೆಯಾದ ಭತ್ತವು ಅದರ ಕನಿಷ್ಠ ಬೆಂಬಲ ಬೆಲೆಯಲ್ಲಿ 100 ಕೆಜಿಗೆ (ಕ್ವಿಂಟಲ್) 2040 ರೂ. ರಿಂದ ಸಾಮಾನ್ಯ ತಳಿಗೆ 2183 ರೂ., ಗ್ರೇಡ್ ಎ ತಳಿಗೆ 2060 ರೂ. ನಿಂದ 2203 ರೂ. ಏರಿಕೆ ಮಾಡಲಾಗಿದೆ.

    ಬೇಳೆಕಾಳುಗಳು, ಎಣ್ಣೆಕಾಳುಗಳು, ಹತ್ತಿ ಮತ್ತು ರಾಗಿಯಂತಹ ಇತರ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯಲ್ಲಿ 4% ರಿಂದ 12% ವರೆಗೆ ಹೆಚ್ಚಳ ಆಗಿದೆ. ಈ ಹೆಚ್ಚಳವು ರೈತರಿಗೆ ಅವರ ಉತ್ಪಾದನಾ ವೆಚ್ಚಕ್ಕಿಂತ ಕನಿಷ್ಠ 50% ಲಾಭಾಂಶವನ್ನು ಖಾತರಿಪಡಿಸುವ ನೀತಿ ಇದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

    ಸರ್ಕಾರ ಕೈಗೊಂಡಿರುವ ಈ ಕ್ರಮವು ರೈತರನ್ನು ತಮ್ಮ ಬೆಳೆಗಳನ್ನು ವೈವಿಧ್ಯಗೊಳಿಸಲು ಮತ್ತು ಹೆಚ್ಚಿನ ಇಳುವರಿ ನೀಡುವ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವ ಪ್ರಯತ್ನವಾಗಿದೆ. ಇದು ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು ಮತ್ತು ಪೌಷ್ಠಿಕ-ಧಾನ್ಯಗಳಿಗೆ ಉತ್ತೇಜಕವಾಗಿದೆ ಎಂದು ಸಚಿವಾಲಯ ತಿಳಿಸಿದೆ.

    2022-23 ರ ಒಟ್ಟು ಆಹಾರ ಧಾನ್ಯ ಉತ್ಪಾದನೆಯನ್ನು 330.5 ಮಿಲಿಯನ್ ಟನ್‍ಗಳಿಗೆ ನಿರೀಕ್ಷಿಸಲಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ 14.9 ಮಿಲಿಯನ್ ಟನ್‍ಗಳ ಹೆಚ್ಚಳವಾಗಿದೆ. ಇದು ಕಳೆದ ಐದು ವರ್ಷಗಳಲ್ಲೇ ಗರಿಷ್ಠ ಏರಿಕೆಯಾಗಿದೆ ಎಂದು ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

    ಕನಿಷ್ಠ ಬೆಂಬಲ ಬೆಲೆ ಎನ್ನುವುದು ರೈತರಿಂದ ಬೆಳೆಗಳನ್ನು ಖರೀದಿಸಲು ಸರ್ಕಾರ ನಿಗದಿಪಡಿಸಿದ ದರವಾಗಿದೆ. ಇದು ಮಾರುಕಟ್ಟೆಯ ಬೆಲೆ ಏರಿಳಿತಗಳ ವಿರುದ್ಧ ಸುರಕ್ಷತಾ ಬೆಲೆಯಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನೂ ಓದಿ: ಆಸ್ಪತ್ರೆಗೆ ತೆರಳುತ್ತಿದ್ದ ಅಂಬುಲೆನ್ಸ್‌ಗೆ ಬೆಂಕಿಯಿಟ್ಟ ಜನರ ಗುಂಪು – 8ರ ಬಾಲಕ, ತಾಯಿ ದುರ್ಮರಣ

  • ಗಡಿಪಾರು ಭೀತಿಯಿಂದ ಮತ್ತೆ ನಟ ಚೇತನ್ ಗೆ ರಿಲೀಫ್

    ಗಡಿಪಾರು ಭೀತಿಯಿಂದ ಮತ್ತೆ ನಟ ಚೇತನ್ ಗೆ ರಿಲೀಫ್

    ಸಿಐ ಮಾನ್ಯತೆ ರದ್ದು ಹಿನ್ನೆಲೆಯಲ್ಲಿ ಗಡಿಪಾರು ಭೀತಿಯಲ್ಲಿದ್ದ ನಟ ಚೇತನ್‍ಗೆ (Chetan) ಹೈಕೋರ್ಟ್‍ನಿಂದ (High Court) ಈ ಹಿಂದೆ ಷರತ್ತುಬದ್ಧ ರಿಲೀಫ್ (Relief) ದೊರೆತಿತ್ತು. ಸಾಗರೋತ್ತರ ಭಾರತೀಯ ಪ್ರಜೆ ಕಾರ್ಡ್ ರದ್ದುಗೊಳಿಸಿದ್ದ ಆದೇಶದ ತಡೆಯಾಜ್ಞೆಯನ್ನು ಹೈಕೋರ್ಟ್ ಮತ್ತೆ ಶುಕ್ರವಾರ ವಿಸ್ತರಿಸಿದೆ. ಹಾಗಾಗಿ ಗಡಿಪಾರು ಭೀತಿಯಲ್ಲಿದ್ದ ಚೇತನ್ ಗೆ ಹೈಕೋರ್ಟ್ ನಿಂದ ಮತ್ತೆ ರಿಲೀಫ್ ಸಿಕ್ಕಂತಾಗಿದೆ.

    ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ಚೇತನ್ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಬಂದಿತ್ತು. ವಾದ ಆಲಿಸಿದ ನ್ಯಾಯಪೀಠ ಕೇಂದ್ರ ಸರಕಾರ ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ವಿಸ್ತರಿಸಿದ್ದಲ್ಲದೇ, ಚೇತನ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರಕಾರಕ್ಕೆ ಸೂಚಿಸಿದೆ.  ಇದನ್ನೂ ಓದಿ:‘ಘೋಸ್ಟ್’ ಚಿತ್ರದ ಸೆಟ್ ಗೆ ಭೇಟಿ ನೀಡಿದ ಸಚಿವ ಮಧು ಬಂಗಾರಪ್ಪ

    ಚೇತನ್‍ಗೆ 2018ರಲ್ಲಿ ಓವರ್ ಸೀಸ್ ಸಿಟಿಜನ್ ಆಫ್ ಇಂಡಿಯಾ ಕಾರ್ಡ್ ನೀಡಲಾಗಿತ್ತು. ಆದರೆ ಚೇತನ್ ಮೇಲೆ ಸಮುದಾಯಗಳ ನಡುವೆ ದ್ವೇಷ ಮೂಡಿಸುವ ಯತ್ನ ಹಾಗೂ ಭಾರತ ವಿರೋಧಿ ಚಟುವಟಿಕೆ ಆರೋಪಗಳಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ (Central Government) ನೋಟಿಸ್ ನೀಡಿ ಉತ್ತರ ಪಡೆದಿತ್ತು. ಚೇತನ್ ನೀಡಿದ್ದ ಉತ್ತರ ಸಮಾಧಾನಕರವಾಗಿಲ್ಲದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಒಸಿಐ ಕಾರ್ಡ್ ರದ್ದುಪಡಿಸಿತ್ತು.

     

    ಆದರೆ ಚೇತನ್ ಪರ ವಕೀಲರು, ಚೇತನ್ ವಾದ ಆಲಿಸದೇ ಕ್ರಮ ಕೈಗೊಂಡಿರುವುದು ಸರಿಯಲ್ಲವೆಂದು ವಾದಿಸಿದ್ದರು. ಈ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಚೇತನ್ ನ್ಯಾಯಾಂಗದ ವಿರುದ್ಧವೂ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ತಡೆ ನೀಡದಂತೆ ಕೇಂದ್ರ, ರಾಜ್ಯ ಸರ್ಕಾರದ ವಕೀಲರಾದ ಎಜಿ ಅರುಣ್ ಶ್ಯಾಮ್, ಎಎಸ್ ಜಿ ಶಾಂತಿಭೂಷಣ್ ವಾದಿಸಿದ್ದರು.

  • ಕೃಷಿ, ಜಲ ಸಂಪನ್ಮೂಲ ಅಭಿವೃದ್ಧಿಯಲ್ಲಿ ದೇಶದಲ್ಲೇ ರಾಯಚೂರಿಗೆ ಫಸ್ಟ್ ರ‍್ಯಾಂಕ್

    ಕೃಷಿ, ಜಲ ಸಂಪನ್ಮೂಲ ಅಭಿವೃದ್ಧಿಯಲ್ಲಿ ದೇಶದಲ್ಲೇ ರಾಯಚೂರಿಗೆ ಫಸ್ಟ್ ರ‍್ಯಾಂಕ್

    – ಕೇಂದ್ರದಿಂದ ವಿಶೇಷ ಅನುದಾನ ಘೋಷಣೆ

    ರಾಯಚೂರು: ಕೃಷಿ (Agricultural development) ಮತ್ತು ಜಲ ಸಂಪನ್ಮೂಲ ಅಭಿವೃದ್ಧಿಯಲ್ಲಿ (Water Resources Development) ರಾಯಚೂರು (Raichur) ಜಿಲ್ಲೆ ದೇಶದಲ್ಲೇ ಮೊದಲನೇ ರ‍್ಯಾಂಕ್ ಪಡೆದಿದೆ. ಮಹಾತ್ಮಾಕಾಂಕ್ಷೆ ಜಿಲ್ಲೆಗಳ ಕಾರ್ಯಕ್ರಮದಡಿ ಕೇಂದ್ರ ಸರ್ಕಾರದ ನೀತಿ ಆಯೋಗದಿಂದ (NITI Aayog) ಜಿಲ್ಲೆ ಫಸ್ಟ್ ರ‍್ಯಾಂಕ್ ಪಡೆದುಕೊಂಡಿದೆ.

    2023ರ ಮಾರ್ಚ್‍ನಲ್ಲಿ ಜಿಲ್ಲಾಡಳಿತದ ಕಾರ್ಯವೈಖರಿ ಆಧಾರದ ಮೇಲೆ ಜಿಲ್ಲೆಗೆ ಈ ರ‍್ಯಾಂಕ್ ನೀಡಲಾಗಿದೆ. ರಾಜ್ಯದಲ್ಲಿ ರಾಯಚೂರು ಹಾಗೂ ಯಾದಗಿರಿ ಮಹತ್ವಾಕಾಂಕ್ಷೆ ಜಿಲ್ಲೆಗಳಾಗಿದ್ದು, ದೇಶದ ಒಟ್ಟು 115 ಮಹತ್ವಾಕಾಂಕ್ಷೆ ಜಿಲ್ಲೆಗಳಲ್ಲಿ ರಾಯಚೂರಿಗೆ ಮೊದಲ ಸ್ಥಾನ ದೊರೆತಿದೆ. ಕಾರ್ಯಕ್ಷಮತೆ ಮೇರೆಗೆ, ಮೊದಲ ಸ್ಥಾನ ಪಡೆದ ಹಿನ್ನೆಲೆ ಹೆಚ್ಚುವರಿ 3 ಕೋಟಿ ರೂ. ಅನುದಾನ ಪಡೆಯಲು ಜಿಲ್ಲೆ ಅರ್ಹತೆ ಪಡೆದಿದೆ. ಇದನ್ನೂ ಓದಿ: ಹೊಸ ಸಂಸತ್ ಭವನ ಉದ್ಘಾಟನೆ ಸ್ಮರಣಾರ್ಥ 75 ರೂ. ವಿಶೇಷ ನಾಣ್ಯ ಬಿಡುಗಡೆ

    ಕೃಷಿ ಕ್ಷೇತ್ರ ವಿಸ್ತರಣೆ, ಜಲ ಸಂರಕ್ಷಣೆ ವಿಧಾನಗಳು ಹಾಗೂ ನೀತಿ ಆಯೋಗದ ಮಾನದಂಡಗಳ ಅಡಿ ಮಂಡಿಸಿರುವ ಜಿಲ್ಲೆಯ ಸ್ಥಿತಿಗತಿಗಳ ವರದಿ ಆಧಾರದ ಮೇಲೆ ಜಿಲ್ಲೆಗೆ ಈ ಸ್ಥಾನ ದೊರಕಿದೆ. ಈ ವಿಚಾರವಾಗಿ ಕೇಂದ್ರ ನೀತಿ ಆಯೋಗದ ಹೆಚ್ಚುವರಿ ಕಾರ್ಯದರ್ಶಿ ವಿ.ರಾಧಾ ಅವರು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ವಂದಿತಾ ಶರ್ಮಾರಿಗೆ ಪತ್ರ ಬರೆದು ಅಭಿನಂದಿಸಿದ್ದಾರೆ. ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ್ ಹಾಗೂ ಕೇಂದ್ರ ಪ್ರಭಾರಿ ಅಧಿಕಾರಿಗಳನ್ನು ನೀತಿ ಆಯೋಗ ಶ್ಲಾಘಿಸಿದೆ. ಹಂಚಿಕೆಯಾದ ಹೆಚ್ಚುವರಿ ಅನುದಾನಕ್ಕೆ (Central Government Grant) ಕ್ರಿಯಾ ಯೋಜನಾ ವರದಿಯನ್ನ ನೀಡಲು ಆಯೋಗ ಸೂಚಿಸಿದೆ.

    ಕೃಷಿ, ಶಿಕ್ಷಣ, ಸಮಾಜ ಕಲ್ಯಾಣ ಮತ್ತು ಆರೋಗ್ಯ ಇಲಾಖೆ ಸೇರಿ ಜಿಲ್ಲೆಯ ಸ್ಥಿತಿಗತಿಗಳ ವಾಸ್ತವ ವರದಿಗಳ ಪರಿಶೀಲನೆ ನಡೆಸಿ ನೀತಿ ಆಯೋಗ ಮಹತ್ವಾಕಾಂಕ್ಷೆ ಜಿಲ್ಲೆಗಳ ಮೇಲೆ ನಿಗಾ ಇರಿಸುತ್ತದೆ. ಅದರ ಆಧಾರದ ಮೇಲೆ ಸ್ಥಾನಗಳನ್ನು ನಿರ್ಧರಿಸುತ್ತದೆ. ಇದನ್ನೂ ಓದಿ: ಜೂನ್ ಯಾಕೆ? ನಾಳೆಯೇ ನಮ್ಮ ಮನೆ ಹತ್ರ ಬಂದು ಮಲ್ಕೊಳ್ಳಲಿ: ಪ್ರತಾಪ್ ಆರೋಪಕ್ಕೆ ಡಿಕೆಶಿ ವ್ಯಂಗ್ಯ

  • ಜಲ್ಲಿಕಟ್ಟುಗೆ ಸುಪ್ರೀಂ ಅನುಮತಿ – ಕಂಬಳಕ್ಕೂ ಗ್ರೀನ್ ಸಿಗ್ನಲ್

    ನವದೆಹಲಿ: ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ (PCA Act) ತಮಿಳುನಾಡು ಸರ್ಕಾರ ಮಾಡಿರುವ ತಿದ್ದುಪಡಿಯ ಸಂವಿಧಾನಿಕ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ (Supreme Court) ಎತ್ತಿ ಹಿಡಿದಿದೆ. ಈ ಮೂಲಕ ಎತ್ತುಗಳನ್ನು ಬಳಸಿ ನಡೆಸಲಾಗುವ ಜಲ್ಲಿಕಟ್ಟು (Jallikattu) ಕ್ರೀಡೆಯ ಜೊತೆಗೆ ಕಂಬಳಕ್ಕೂ (Kambala) ಇದ್ದ ಕಂಟಕ ನಿವಾರಣೆಯಾಗಿದೆ.

    ನ್ಯಾಯಮೂರ್ತಿ ಕೆ.ಎಂ.ಜೋಸೆಫ್, ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ.ರವಿಕುಮಾರ್ ಅವರನ್ನೊಳಗೊಂಡ ಸಂವಿಧಾನ ಪೀಠವು (Constitution Bench) ಎತ್ತುಗಳ ನೋವು ಮತ್ತು ಸಂಕಟವನ್ನು ಕಡಿಮೆ ಮಾಡಲು ಕಾಯ್ದೆಯ ತಿದ್ದುಪಡಿ ಮಾಡಲಾಗಿದೆ. ನಿಯಮದ ಅನುಸಾರ ಜಲ್ಲಿಕಟ್ಟು ಮುಂದುವರೆಸಬಹುದು ಎಂದು ಅಭಿಪ್ರಾಯಪಟ್ಟಿದೆ. ಇದನ್ನೂ ಓದಿ: ಮಾಡೆಲ್ ಹೇರ್‌ಸ್ಟೈಲ್‌ ಹಾಳು ಮಾಡಿದ್ದಕ್ಕೆ 2 ಕೋಟಿ ಪರಿಹಾರ – ಆದೇಶಕ್ಕೆ ಸುಪ್ರೀಂ ತಡೆ

     

    ರಾಜ್ಯದ ಕಾಯ್ದೆಯಲ್ಲಿ ಯಾವುದೇ ಲೋಪವಿಲ್ಲ. ನಿಯಮಗಳ ಪ್ರಕಾರ ಭಾಗವಹಿಸುವಿಕೆಯನ್ನು ಅನುಮತಿಸಲಾಗುವುದು. ಕಾಯ್ದೆಯೂ ಸಂವಿಧಾನದ 48 ನೇ ವಿಧಿ ಗೋಹತ್ಯೆ ವಿಚಾರಕ್ಕೆ ಇದು ಸಂಬಂಧಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ ಕರ್ನಾಟಕ (Karnataka) ಮತ್ತು ಮಹಾರಾಷ್ಟ್ರದಲ್ಲಿ (Maharashtra) ನಡೆಸಲಾಗುವ ಕಂಬಳ ಮತ್ತು ಎತ್ತಿನ ಬಂಡಿ (Bull cart racing) ಓಟಕ್ಕೂ ಅನುಮತಿಸುವ ಕಾನೂನನ್ನು ನ್ಯಾಯಾಲಯ ಎತ್ತಿಹಿಡಿದಿದೆ.

    ಈ ಮೇಲೆ ಉಲ್ಲೇಖಿಸಲಾದ ಕ್ರೀಡೆಗಳು, ಆರ್ಟಿಕಲ್ 51ಎ(ಜಿ) ಎಲ್ಲಾ ಜೀವಿಗಳ ಮೇಲೆ ಸಹಾನೂಭೂತಿ ಹೊಂದಿರುವುದು ಮತ್ತು 51ಎ(ಹೆಚ್) ಹಿಂಸೆಯನ್ನು ನಡೆಸದೇ ಇರುವುದನ್ನು ಉಲ್ಲಂಘಿಸುವುದಿಲ್ಲ. ಹೀಗಾಗಿ ಭಾರತದ ಸಂವಿಧಾನದ 14 ಮತ್ತು 21 ನೇ ವಿಧಿಗಳಲ್ಲಿನ ಮೂಲಭೂತ ಹಕ್ಕುಗಳನ್ನು ಇದು ಉಲ್ಲಂಘಿಸುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ ತಿದ್ದುಪಡಿ ಮಾಡಲಾದ ಕಾಯಿದೆಗಳು ಹಾಗೂ ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ಈ ಅನುಷ್ಠಾನ ಜಿಲ್ಲಾಧಿಕಾರಿಗಳ ಜವಬ್ದಾರಿಯಾಗಿದೆ ಎಂದು ನ್ಯಾಯಾಲಯ ಎಚ್ಚರಿಸಿದೆ.

    ತಮಿಳುನಾಡಿನಲ್ಲಿ (Tamil Nadu) ಜನಪ್ರಿಯವಾಗಿರುವ ಜಲ್ಲಿಕಟ್ಟು ಪ್ರಾಣಿಗಳ ಹಕ್ಕುಗಳು ಹಾಗೂ ಕ್ರೌರ್ಯ ತಡೆ (ಪಿಸಿಎ) ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು 2014ರ ಮೇ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ನಿರ್ದಿಷ್ಟವಾಗಿ ಕ್ರೀಡೆಯ ಸಾಂಸ್ಕøತಿಕ ಅಂಶಕ್ಕೆ ಸಂಬಂಧಿಸಿದ ಆಚರಣೆಯಲ್ಲಿರುವಂತೆ ಜಲ್ಲಿಕಟ್ಟು ತಮಿಳುನಾಡಿನ ಸಂಸ್ಕೃತಿ ಅಥವಾ ಸಂಪ್ರದಾಯವಾಗಿರಲಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು. ಆದ್ದರಿಂದ ಆಚರಣೆಯನ್ನು ನಿಯಂತ್ರಿಸುವ ತಮಿಳುನಾಡು ಜಲ್ಲಿಕಟ್ಟು ನಿಯಂತ್ರಣ ಕಾಯಿದೆ 2009ನ್ನು ರದ್ದುಪಡಿಸಿತ್ತು.

    ಜನವರಿ 2016 ರಲ್ಲಿ, ಕೇಂದ್ರ ಸರ್ಕಾರವು (Central government) ಪಿಸಿಎ ಕಾಯ್ದೆಯ ವ್ಯಾಪ್ತಿಯಿಂದ ಜಲ್ಲಿಕಟ್ಟು ಮತ್ತು ಎತ್ತಿನ ಬಂಡಿ ಓಟಗಳಿಗೆ ವಿನಾಯಿತಿ ನೀಡುವ ಹೊಸ ಅಧಿಸೂಚನೆಯನ್ನು ಹೊರಡಿಸಿತು. ನಂತರ ರಾಜ್ಯ ಸರ್ಕಾರವು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ (ತಿದ್ದುಪಡಿ) ಕಾಯಿದೆ 2017 ಅನ್ನು ಜಾರಿಗೊಳಿಸಿತು. ಈ ಕಾಯ್ದೆಯ ಸಿಂಧುತ್ವವನ್ನು ಸುಪ್ರೀಂನಲ್ಲಿ ಪ್ರಶ್ನಿಸಲಾಗಿತ್ತು. ಇದನ್ನೂ ಓದಿ: ಧರ್ಮಗುರು ಹೆಂಡತಿಯನ್ನು ಹೇಗೆ ಕೊಂದ? – ಗೂಗಲ್ ಸರ್ಚ್‍ನಿಂದ ಸಿಕ್ಕಿಬಿದ್ದ ಅಪರಾಧಿಗೆ ಜೀವಾವಧಿ ಶಿಕ್ಷೆ

  • ಕಣಿವೆಯಲ್ಲಿ ಹೆಚ್ಚುತ್ತಿರುವ ಉಗ್ರರ ಹಾವಳಿ – ಕೇಂದ್ರದ ದಿಟ್ಟ ನಿರ್ಧಾರ

    ಕಣಿವೆಯಲ್ಲಿ ಹೆಚ್ಚುತ್ತಿರುವ ಉಗ್ರರ ಹಾವಳಿ – ಕೇಂದ್ರದ ದಿಟ್ಟ ನಿರ್ಧಾರ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಹೆಚ್ಚುತ್ತಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ (Central Government) ಮುಂದಾಗಿದೆ.

    ಭಯೋತ್ಪಾದಕ ನಿಗ್ರಹದಳವನ್ನು ಬಲಪಡಿಸಲು ಅಲ್ಲಿನ ಪೊಲೀಸ್ ಪಡೆಗೆ (ಜೆಕೆಪಿ) 600 ಕ್ಕೂ ಹೆಚ್ಚು ಪೊಲೀಸರನ್ನು ನೇಮಕ ಮಾಡಿಕೊಳ್ಳಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅಲ್ಲದೆ 42 ಹೊಸ ಗಡಿ ಭದ್ರತಾ ಪೊಲೀಸರನ್ನು ನಿಯೋಜನೆಗೆ ಮುಂದಾಗಿದೆ. ಇದನ್ನೂ ಓದಿ: ಸೇನಾ ವಾಹನದ ಮೇಲೆ ದಾಳಿ – ಓರ್ವ ಉಗ್ರನ ಹತ್ಯೆ

    ಇತ್ತೀಚೆಗೆ ಪೂಂಚ್ (Poonch) ಹಾಗೂ ರಜೌರಿಯಲ್ಲಿ (Rajouri) ಸೇನಾ ವಾಹನದ ಮೇಲೆ ಉಗ್ರರು ದಾಳಿನಡೆಸಿ ಐವರು ಯೋಧರನ್ನು ಕೊಂದಿದ್ದರು. ಈ ಪ್ರಕರಣದ ಬೆನ್ನು ಹತ್ತಿರುವ ಸೇನೆ (Indian Army) ಸ್ಥಳೀಯರು ಉಗ್ರರಿಗೆ ಸಹಕರಿಸಿರುವ ಆರೋಪ ಮಾಡಿದೆ. ಅಲ್ಲದೆ ದಾಳಿ ನಡೆಸಿರುವ ಭಯೋತ್ಪಾದಕರು ಅಡಗಿದ್ದ ಸ್ಥಳದಲ್ಲಿ ಕಾರ್ಯಾಚರಣೆ ವೇಳೆ ಉಗ್ರರು ನಡೆಸಿದ ಸ್ಫೋಟಕ್ಕೆ ಐವರು ಯೋಧರು ಬಲಿಯಾಗಿದ್ದರು. ಈ ವೇಳೆ ಸೇನೆ ಓರ್ವ ಉಗ್ರನನ್ನು ಹತ್ಯೆ ಮಾಡಿತ್ತು. ಇದನ್ನೂ ಓದಿ: ಸೇನೆಯಿಂದ ಇಬ್ಬರು ಉಗ್ರರ ಅರೆಸ್ಟ್ – ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಜಪ್ತಿ

  • ಕೇಂದ್ರ VS ದೆಹಲಿ ಸರ್ಕಾರ – ಸುಪ್ರೀಂ ಆದೇಶದಿಂದ ಆಪ್‌ಗೆ ಬಿಗ್‌ ವಿಕ್ಟರಿ

    ಕೇಂದ್ರ VS ದೆಹಲಿ ಸರ್ಕಾರ – ಸುಪ್ರೀಂ ಆದೇಶದಿಂದ ಆಪ್‌ಗೆ ಬಿಗ್‌ ವಿಕ್ಟರಿ

    ನವದೆಹಲಿ: ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್ ಹೊರತುಪಡಿಸಿ ಭಾರತೀಯ ಆಡಳಿತಾತ್ಮಕ ಸೇವೆಗಳು ಮತ್ತು ರಾಜಧಾನಿಯಲ್ಲಿನ ಎಲ್ಲಾ ಸೇವೆಗಳ ಮೇಲೆ ದೆಹಲಿ ಸರ್ಕಾರ ತನ್ನ ನಿಯಂತ್ರಣವನ್ನು ಹೊಂದಿರುತ್ತದೆ ಎಂದು ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ.

    ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿ ಸರ್ಕಾರದ ನಡುವೆ ನಡೆಯುತ್ತಿದ್ದ ಆಡಳಿತಾತ್ಮಕ ಸಂಘರ್ಷಕ್ಕೆ ಸಂಬಂಧಿಸಿದಂತೆ ಆಮ್ ಅದ್ಮಿ ಪಕ್ಷ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠ ಇಂದು ಪೂರ್ಣ ಪ್ರಮಾಣ ನಿಯಂತ್ರಣ ಕೇಂದ್ರ ಸರ್ಕಾರಕ್ಕೆ ನೀಡಲು ನಿರಾಕರಿಸಿದೆ.

    ಚುನಾಯಿತ ಸರ್ಕಾರವು ತನ್ನ ಅಧಿಕಾರಿಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವು ತನ್ನ ಅಧಿಕಾರಿಗಳನ್ನು ನಿಯಂತ್ರಿಸಲು ಅನುಮತಿಸದಿದ್ದರೆ ಶಾಸಕಾಂಗ ಮತ್ತು ಸಾರ್ವಜನಿಕರ ಕಡೆಗೆ ಅದರ ಜವಾಬ್ದಾರಿಯನ್ನು ದುರ್ಬಲಗೊಳಿಸಿದಂತಾಗುತ್ತದೆ ಎಂದು ಕೋರ್ಟ್‌ ತಿಳಿಸಿದೆ.

    ಆದರೆ ದೆಹಲಿ ಇತರೆ ಕೇಂದ್ರಾಡಳಿತ ಪ್ರದೇಶಗಳಂತಲ್ಲ, ಇಲ್ಲಿ ರಾಜಕೀಯ ದ್ವಂದ್ವಗಳಿದೆ. ಭಾರತದ ಒಕ್ಕೂಟ ವ್ಯವಸ್ಥೆ ವೈವಿಧ್ಯಮಯ ಹಿತಾಸಕ್ತಿಗಳ ಉಳಿವು ಮತ್ತು ವೈವಿಧ್ಯಮಯ ಅಗತ್ಯಗಳಿಗೆ ಅವಕಾಶ ಕಲ್ಪಿಸುತ್ತದೆ. ಒಂದು ರಾಷ್ಟ್ರೀಯ ಸರ್ಕಾರ ಮತ್ತೊಂದು ಪ್ರಾದೇಶಿಕ ಸರ್ಕಾರ ದೆಹಲಿಯಲ್ಲಿದೆ. ಉಭಯ ಸರ್ಕಾರಗಳು ಸಾರ್ವಜನಿಕ ಅಭಿವ್ಯಕ್ತಿಯಿಂದ ಬಂದಿದೆ ಎಂದು ಸುಪ್ರೀಂ ಹೇಳಿದೆ.

    ದೆಹಲಿ ಪೂರ್ಣ ಪ್ರಮಾಣದ ರಾಜ್ಯವಲ್ಲದಿದ್ದರೂ ಶಾಸನ ಮಾಡಲು ಅಧಿಕಾರವನ್ನು ಹೊಂದಿದೆ. 239AA ಸಂವಿಧಾನದೊಂದಿಗೆ ಒಕ್ಕೂಟ ಸರ್ಕಾರವನ್ನು ರಚಿಸಲಾಗಿದೆ. ಕೇಂದ್ರಾಡಳಿತ ಪ್ರದೇಶ ಅದರ ಒಂದು ಘಟಕವಾಗಿದೆ. ಕೇಂದ್ರಾಡಳಿತ ಶಾಸನ ಸಭೆಗೂ ಅಧಿಕಾರವಿದೆ. ಆದರೆ ರಾಜ್ಯದ ಕಾರ್ಯಕಾರಿ ಅಧಿಕಾರವು ಒಕ್ಕೂಟದ ಅಸ್ತಿತ್ವದಲ್ಲಿರುವ ಕಾನೂನಿಗೆ ಒಳಪಟ್ಟಿರುತ್ತದೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರವು ವಿಧಿ 41 ಅಡಿಯಲ್ಲಿ ಸಾರ್ವಜನಿಕ ಸೇವೆಗಳ ಮೇಲೆ ಶಾಸಕಾಂಗ ನಿಯಂತ್ರಣವನ್ನು ಹೊಂದಿದೆ. ಅದಾಗ್ಯೂ ಅದು ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್ ವಿಚಾರಗಳಲ್ಲ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ಆಮ್ ಅದ್ಮಿ ಪಕ್ಷಕ್ಕೆ ದೊಡ್ಡ ಗೆಲುವು ಸಿಕ್ಕಂತಾಗಿದ್ದು, ಆಡಳಿತದಲ್ಲಿ ಲೆಫ್ಟಿನೆಂಟ್ ಗವರ್ನರ್ ಹಸ್ತಕ್ಷೇಪಕ್ಕೆ ಬ್ರೇಕ್ ಬಿದ್ದಿದೆ.

  • ಸಲಿಂಗ ವಿವಾಹ ಕೇಸ್ – ಸಲಹಾ ಸಮಿತಿ ರಚಿಸುತ್ತೇವೆ ಎಂದ ಕೇಂದ್ರ ಸರ್ಕಾರ

    ಸಲಿಂಗ ವಿವಾಹ ಕೇಸ್ – ಸಲಹಾ ಸಮಿತಿ ರಚಿಸುತ್ತೇವೆ ಎಂದ ಕೇಂದ್ರ ಸರ್ಕಾರ

    ನವದೆಹಲಿ: ಸಲಿಂಗ ವಿವಾಹ (Same sex marriage) ಕುರಿತಾಗಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ (LGBTQIA) ಸಲಹೆಗಳನ್ನು ಪರಿಗಣಿಸಲು ಸಮಿತಿಯನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್‍ಗೆ (Supreme Court) ಕೇಂದ್ರ ಸರ್ಕಾರ (Central Government) ಬುಧವಾರ ತಿಳಿಸಿದೆ.

    ಲೈಂಗಿಕ ಅಲ್ಪಸಂಖ್ಯಾತ ಸಮುದಾಯ ಒಂದೇ ಲಿಂಗದ ವ್ಯಕ್ತಿಗಳೊಂದಿಗಿನ ಸಂಬಂಧದಲ್ಲಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಲಹೆಗಳನ್ನು ಪಡೆಯಲಾಗುವುದು. ಇದಕ್ಕಾಗಿ ಸಂಪುಟ ಕಾರ್ಯದರ್ಶಿ ನೇತೃತ್ವದ ಸಮಿತಿಯನ್ನು ರಚಿಸಲಾಗುತ್ತದೆ. ಇದರಿಂದ ಸಮುದಾಯದ ಎದುರಿಸುತ್ತಿರುವ ಸಮಸ್ಯೆಗಳನ್ನು ಕಲೆಹಾಕಲು ಅನುಕೂಲವಾಗುತ್ತದೆ ಎಂದು ಕೇಂದ್ರ ಹೇಳಿಕೊಂಡಿದೆ. ಇದನ್ನೂ ಓದಿ: ಪರಸ್ಪರ ಒಪ್ಪಿಗೆ ಇದ್ದಲ್ಲಿ ವಿಚ್ಛೇದನಕ್ಕೆ ಆರು ತಿಂಗಳ ಅಗತ್ಯವಿಲ್ಲ – ಸುಪ್ರೀಂ ತೀರ್ಪು

    ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಲಿಂಗ ವಿವಾಹಗಳನ್ನು ಕಾನೂನುಬದ್ಧಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಕೇಂದ್ರದ ನಿರ್ಧಾರವನ್ನು ಪ್ರಕಟಿಸಿದರು.

    ಅರ್ಜಿದಾರರು ಸಲಿಂಗ ವಿವಾಹಗಳನ್ನು ಕಾನೂನಿನಡಿಯಲ್ಲಿ ತರುವಂತೆ ವಾದಿಸಿತ್ತು. ಆದರೆ ಈ ಅರ್ಜಿಗಳಿಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿತ್ತು. ಸುಪ್ರೀಂಗೆ ಸಲ್ಲಿಸಿದ ಅಫಿಡವಿಟ್‍ನಲ್ಲಿ ಕೇಂದ್ರವು, ಒಂದೇ ಲಿಂಗದ ವ್ಯಕ್ತಿಗಳು ಲೈಂಗಿಕ ಸಂಬಂಧ ಹೊಂದುವುದನ್ನು ಭಾರತೀಯ ಕುಟುಂಬದ ಪರಿಕಲ್ಪನೆಗೆ ಹೋಲಿಸಲಾಗುವುದಿಲ್ಲ ಎಂದು ಹೇಳಿತ್ತು.

    ಏ.27 ರಂದು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ನೀಡುವುದು ಶಾಸಕಾಂಗದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಸುಪ್ರೀಂ ಹೇಳಿತ್ತು. ಸಲಿಂಗ ಸಂಬಂಧದಲ್ಲಿರುವ ಜನರು ಬಹಿಷ್ಕಾರಕ್ಕೊಳಗಾಗದಂತೆ ನೋಡಿಕೊಳ್ಳುವ ಪ್ರಾಮುಖ್ಯತೆಯನ್ನು ಸಿಜೆಐ ಮತ್ತಷ್ಟು ಒತ್ತಿ ಹೇಳಿದ್ದಾರೆ.

    ಮುಖ್ಯ ನ್ಯಾಯಮೂರ್ತಿ (Chief Justice of India) ಡಿವೈ ಚಂದ್ರಚೂಡ್ (DY Chandrachud), ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಪಿಎಸ್ ನರಸಿಂಹ ಮತ್ತು ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಸಂವಿಧಾನಿಕ ಪೀಠ ದೇಶದಲ್ಲಿ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ಕ್ರಿಶ್ಚಿಯನ್ ಮಿಷನರಿಗಳ ಧರ್ಮ ಪ್ರಚಾರ ಕಾನೂನುಬಾಹಿರವಲ್ಲ – ಸುಪ್ರೀಂಗೆ ತಮಿಳುನಾಡು ಸರ್ಕಾರ ಅಫಿಡವಿಟ್

  • ಸಲಿಂಗ ವಿವಾಹಕ್ಕೆ ನಟ ಚೇತನ್‌ ಬೆಂಬಲ

    ಸಲಿಂಗ ವಿವಾಹಕ್ಕೆ ನಟ ಚೇತನ್‌ ಬೆಂಬಲ

    ಪ್ರಚಲಿತ ವಿದ್ಯಮಾನಗಳಿಗೆ ತನ್ನದೇ ಧಾಟಿಯಲ್ಲಿ ಪ್ರತಿಕ್ರಿಯಿಸಿ ವಿವಾದಕ್ಕೆ ಸಿಲುಕಿರುವ ನಟ ಚೇತನ್‌ (Chetan Ahimsa), ಈಗ ಸಲಿಂಗ ವಿವಾಹ ಕುರಿತು ಮಾತನಾಡಿ ಸುದ್ದಿಯಲ್ಲಿದ್ದಾರೆ. ಸಲಿಂಗ ವಿವಾಹ (Same-Sex Marriage) ಕುರಿತು ಕೇಂದ್ರ ಸರ್ಕಾರದ ಅಭಿಪ್ರಾಯವನ್ನು ದೋಷಪೂರಿತ ಎಂದಿದ್ದಾರೆ. ಆ ಮೂಲಕ ಸಲಿಂಗ ವಿವಾಹಕ್ಕೆ ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಪೋಸ್ಟ್‌ನಲ್ಲೇನಿದೆ?
    ಸಲಿಂಗ ವಿವಾಹ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಸಲಿಂಗ ವಿವಾಹದ ಬೇಡಿಕೆಯು ‘ನಗರದ ಗಣ್ಯರ ದೃಷ್ಟಿಕೋನ’ ಎಂದು ಕೇಂದ್ರವು ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಇದು ದೋಷಪೂರಿತ ತಿಳುವಳಿಕೆಯಾಗಿದೆ. ಇದನ್ನೂ ಓದಿ: ಸಲಿಂಗ ವಿವಾಹ ವಿಚಾರದಲ್ಲಿ ಸುಪ್ರೀಂ ಮಧ್ಯಪ್ರವೇಶ ಮಾಡಬಾರದು – ಕೇಂದ್ರದ ಪರ ವಾದ

    ಹೆಟೆರೊ-ನಿಯಮಿತ (Herero-normative) ಸಮಾಜವು ಅದರ ಅಂತರ್ಗತ ಸವಲತ್ತುಗಳೊಂದಿಗೆ ಮದುವೆಯನ್ನು ಪುರುಷ ಮತ್ತು ಮಹಿಳೆಯ ನಡುವೆ ಎಂದು ವ್ಯಾಖ್ಯಾನಿಸಿದೆ. ಬದಲಾಗಿ ಇದು, ಮದುವೆಯು 2 ಒಪ್ಪಿಗೆಯ ವಯಸ್ಕರ ನಡುವೆ ಇರಬೇಕು.

    ನಮ್ಮ LGBTQ+ ಭಾರತೀಯರಿಗೆ ಸುಪ್ರೀಂ ಕೋರ್ಟ್ ನ್ಯಾಯ ನೀಡುತ್ತದೆ ಎಂದು ನಾವು ನಂಬುತ್ತೇವೆ ಎಂದು ಚೇತನ್‌ ಪೋಸ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ಸಲಿಂಗ ವಿವಾಹ ಭಾರತದ ಸಾಮಾಜಿಕ ನೀತಿಗೆ ವಿರುದ್ಧ, ಎಲ್ಲಾ ಅರ್ಜಿ ವಜಾಗೊಳಿಸಿ – ಕೇಂದ್ರ ಸರ್ಕಾರ

    ಏನಿದು ಪ್ರಕರಣ?
    ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಇಬ್ಬರು ಸಲಿಂಗಿ ದಂಪತಿಗಳು ತಮ್ಮ ವಿವಾಹದ ಹಕ್ಕನ್ನು ಜಾರಿಗೊಳಿಸಲು ಮತ್ತು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ತಮ್ಮ ವಿವಾಹಗಳನ್ನು ನೋಂದಾಯಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಪ್ರತ್ಯೇಕ ಮನವಿಗಳಿಗೆ ಸುಪ್ರೀಂ ಕೋರ್ಟ್, ಕೇಂದ್ರದಿಂದ ಪ್ರತಿಕ್ರಿಯೆ ಕೋರಿತ್ತು.

    ಸಲಿಂಗ ವಿವಾಹವು ‘ನಗರ ಗಣ್ಯರ ಸಂಸ್ಕೃತಿ‘ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ (Supreme Court) ಹೇಳಿದೆ. ಅಲ್ಲದೇ ಮದುವೆಗೆ ಅಂಗೀಕಾರ ನೀಡುವುದು ಶಾಸಕಾಂಗದ ಕೆಲಸವಾಗಿದ್ದು, ಕೋರ್ಟ್‌ ಇದರಿಂದ ಹಿಂದೆ ಸರಿಯಬೇಕು ಎಂದು ಹೇಳಿದೆ. ಸಿಜೆಐ ಡಿ.ವೈ ಚಂದ್ರಚೂಡ್‌ ಅವರ ನೇತೃತ್ವದಲ್ಲಿ ನ್ಯಾಯಮೂರ್ತಿ ಎಸ್‌.ಕೆ ಕೌಲ್‌, ನ್ಯಾ. ಎಸ್‌. ರವೀಂದ್ರ ಭಟ್‌, ನ್ಯಾ. ಪಿ.ಎಸ್‌ ನರಸಿಂಹ ಹಾಗೂ ನ್ಯಾ. ಹಿಮಾ ಕೊಹ್ಲಿ ಅವರಿರುವ ಪೀಠ ಈ ಅರ್ಜಿಯ ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ಸಲಿಂಗ ವಿವಾಹಕ್ಕೆ ಕೇಂದ್ರ ಸರ್ಕಾರದ ವಿರೋಧ

  • ಕ್ರೈಸ್ತ, ಇಸ್ಲಾಂ ಧರ್ಮಕ್ಕೆ ಮತಾಂತರವಾದ ದಲಿತರಿಗೆ ಮೀಸಲಾತಿ ರದ್ದು ವಿಚಾರ: ಸಮಿತಿ ವರದಿಗಾಗಿ ಕಾಯಲ್ಲ – ಸುಪ್ರೀಂ

    ಕ್ರೈಸ್ತ, ಇಸ್ಲಾಂ ಧರ್ಮಕ್ಕೆ ಮತಾಂತರವಾದ ದಲಿತರಿಗೆ ಮೀಸಲಾತಿ ರದ್ದು ವಿಚಾರ: ಸಮಿತಿ ವರದಿಗಾಗಿ ಕಾಯಲ್ಲ – ಸುಪ್ರೀಂ

    ನವದೆಹಲಿ: ಎಸ್‌ಸಿ (SC) ಸಮುದಾಯಕ್ಕೆ ಸೇರಿದ ಹಾಗೂ ಕ್ರೈಸ್ತ (Christians), ಇಸ್ಲಾಂ (Muslims) ಧರ್ಮಕ್ಕೆ ಮತಾಂತರಗೊಂಡವರಿಗೆ ಮೀಸಲಾತಿ (Reservation) ಸೌಲಭ್ಯ ನೀಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಸಮೀಕ್ಷೆ ನಡೆಸಿ ಸಮಿತಿ ವರದಿ ಕೊಡುವವರೆಗೂ ಕಾಯಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ (Central Government) ಸುಪ್ರೀಂ ಕೋರ್ಟ್‌ (Supreme Court) ತಿಳಿಸಿದೆ.

    ಮತಾಂತರಗೊಂಡ (Conversion) ಪರಿಶಿಷ್ಟ ಜಾತಿಗೆ ಸೇರಿದವರಿಗೆ ಮೀಸಲಾತಿ ಕಲ್ಪಿಸಬೇಕೇ ಅಥವಾ ಬೇಡವೇ ಎಂಬ ಕುರಿತು ತ್ರಿಸದಸ್ಯ ಆಯೋಗದ ವರದಿಗಾಗಿ ಕಾಯಬೇಕು ಎಂದು ಸುಪ್ರೀಂಗೆ ಕೇಂದ್ರ ಮನವಿ ಮಾಡಿತ್ತು. ಆದರೆ ಈ ಮನವಿಯನ್ನು ಸುಪ್ರೀಂ ಕೋರ್ಟ್‌ ತಳ್ಳಿಹಾಕಿದೆ. ಸುಮಾರು 20 ವರ್ಷಗಳಿಂದ ಈ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇದೆ. ಈ ವಿವಾದವನ್ನು ಶೀಘ್ರವೇ ನಿರ್ಣಯಿಸಲು ನಿರ್ಧರಿಸಲಾಗಿದೆ ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ. ಇದನ್ನೂ ಓದಿ: DMK ಸರ್ಕಾರಕ್ಕೆ ಹಿನ್ನಡೆ – ತಮಿಳುನಾಡಿನಲ್ಲಿ RSSಗೆ ರ‍್ಯಾಲಿ ಅನುಮತಿ

    ಇತರ ಧರ್ಮಗಳಿಗೆ ಮತಾಂತರಗೊಂಡಿದ್ದರೂ ಕೆಲವರು ಎಸ್‌ಸಿ ಮೀಸಲಾತಿ ಸೌಲಭ್ಯವನ್ನೇ ಪಡೆಯುತ್ತಿದ್ದಾರೆ. ಅಂತಹವರಿಗೆ ಮೀಸಲಾತಿ ಸೌಲಭ್ಯ ನೀಡಬಹುದೇ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸಲು ನಿವೃತ್ತ ಸಿಜೆಐ ಕೆ.ಜಿ.ಬಾಲಕೃಷ್ಣನ್‌ ನೇತೃತ್ವದ ಸಮಿತಿಯನ್ನು ಕೇಂದ್ರ ಸರ್ಕಾರ ನೇಮಿಸಿತ್ತು.

    ಸಮಿತಿ ಸಂಗ್ರಹಿಸಿದ ಪ್ರಾಯೋಗಿಕ ದತ್ತಾಂಶಕ್ಕಾಗಿ ನ್ಯಾಯಾಲಯವು ಕಾಯಬೇಕು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆಎಂ ನಟರಾಜ್ ಮನವಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪೀಠವು, ನಾಳೆ ಬೇರೆ ರಾಜಕೀಯ ಪಕ್ಷ ಅಧಿಕಾರಕ್ಕೆ ಬರಬಹುದು. ಅವರು ಹೊಸ ವರದಿಯನ್ನು ಹೇಳಬಹುದು. ಹೀಗಾಗಿ ನಿಮ್ಮ ಮನವಿಯನ್ನು ಪುರಸ್ಕರಿಸಲಾಗುವುದಿಲ್ಲ. ಎಷ್ಟು ಸಮಿತಿಗಳನ್ನು ನೇಮಿಸುತ್ತೀರಿ? ಕಾಲಮಿತಿಯೊಳಗೆ ವಿಚಾರಣೆಯನ್ನು ಮುಕ್ತಾಯಗೊಳಿಸಲಾಗುವುದು ಎಂದು ಕೋರ್ಟ್‌ ತಿಳಿಸಿದೆ. ಇದನ್ನೂ ಓದಿ: ರೋಹಿಣಿ ಜೊತೆ ಕಿತ್ತಾಟ – ಮಾತನಾಡದಂತೆ ರೂಪಾಗೆ ನೀಡಿದ್ದ ತಡೆ ತೆರವು

    ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಎಸ್‌ಸಿ ಸ್ಥಾನಮಾನ ನೀಡಲಾಗುವುದಿಲ್ಲ ಎಂದು ಕೇಂದ್ರವು ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿತ್ತು.

  • ಮಹಾರಾಷ್ಟ್ರ ಸರ್ಕಾರದ ನಡೆ ಒಕ್ಕೂಟ ವ್ಯವಸ್ಥೆ ಅವಸಾನಕ್ಕೆ ಕಾರಣವಾದೀತು – ಹೆಚ್‌ಡಿಕೆ ಎಚ್ಚರಿಕೆ

    ಮಹಾರಾಷ್ಟ್ರ ಸರ್ಕಾರದ ನಡೆ ಒಕ್ಕೂಟ ವ್ಯವಸ್ಥೆ ಅವಸಾನಕ್ಕೆ ಕಾರಣವಾದೀತು – ಹೆಚ್‌ಡಿಕೆ ಎಚ್ಚರಿಕೆ

    ಬೆಂಗಳೂರು: ಮಹಾರಾಷ್ಟ್ರದಲ್ಲಿರುವ (Maharashtra) ಬಿಜೆಪಿ (BJP) ಡಬಲ್ ಎಂಜಿನ್ ಸರ್ಕಾರ ಪದೇ ಪದೆ ಕಾಲುಕೆರೆದು ಕಿತಾಪತಿ ಮಾಡುತ್ತಿದೆ. ಚೀನಾ ಮನಸ್ಥಿತಿಯ ಆ ರಾಜ್ಯವು ಕರ್ನಾಟಕವನ್ನು ಶತ್ರು ದೇಶದಂತೆ ನೋಡುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರ ಇದನ್ನೆಲ್ಲಾ ನೋಡಿಕೊಂಡು ಮೌನವಾಗಿದೆ. ಇದು ಒಕ್ಕೂಟ ವ್ಯವಸ್ಥೆಯ ಅವಸಾನಕ್ಕೆ ಕಾರಣವಾಗಬಹುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ (H.D.Kumaraswamy) ಎಚ್ಚರಿಕೆ ನೀಡಿದ್ದಾರೆ.

    ಗಡಿ ಹಳ್ಳಿಗಳ ಜನರಿಗೆ ವಿಮಾ (Insurance) ಯೋಜನೆ ಜಾರಿ ಮಾಡುವ ಮಹಾರಾಷ್ಟ್ರ ಸರ್ಕಾರದ ವಿವಾದಾಸ್ಪದ ಕ್ರಮಕ್ಕೆ ಸರಣಿ ಟ್ವೀಟ್ (Tweet) ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಅವರು, ಮಹಾರಾಷ್ಟ್ರದ ನಡೆ ಹಾಗೂ ಕೇಂದ್ರ ಸರ್ಕಾರದ ಮೌನ ಒಕ್ಕೂಟ ವ್ಯವಸ್ಥೆಯ ಒಡಕಿಗೆ ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ನಟ ಸುದೀಪ್ ಪ್ರಚಾರಕ್ಕೆ ಮಹತ್ವ ಕೊಡಬೇಕಿಲ್ಲ, ನಟರನ್ನ ನಾನು ದುರುಪಯೋಗಪಡಿಸಿಕೊಳ್ಳಲ್ಲ: ಹೆಚ್‌ಡಿಕೆ  

    ಒಂದೆರಡಲ್ಲ, ಪ್ರತಿಯೊಂದು ವಿಷಯದಲ್ಲೂ ಮಹಾರಾಷ್ಟ್ರ ಕರ್ನಾಟಕವನ್ನು ಕೆರಳಿಸುತ್ತದೆ. ರಾಜ್ಯದ ಗಡಿಯೊಳಗಿರುವ 865 ಗ್ರಾಮಗಳ ಜನರಿಗೆ ಆರೋಗ್ಯ ವಿಮೆ ಜಾರಿ ಮಾಡಿದ ರಾಜ್ಯ ಸರ್ಕಾರದ ನಡೆ ಒಕ್ಕೂಟ ವ್ಯವಸ್ಥೆಯನ್ನು ಒಡೆಯುವ ನೇರ, ಧೂರ್ತ ಪ್ರಯತ್ನ ಎಂದು ಹರಿಹಾಯ್ದರು.

    ಒಕ್ಕೂಟ ವ್ಯವಸ್ಥೆಯ ಎಲ್ಲೆಗಳನ್ನು ಮೀರಿ ಮಹಾರಾಷ್ಟ್ರ ಅಹಂಕಾರದಿಂದ ವರ್ತಿಸುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಶಿಂಧೆ ಸೂತ್ರದ ರಾಜಕಾರಣಕ್ಕೆ ಕರ್ನಾಟಕವನ್ನು ಬಲಿ ಕೊಡಲು ಹೊರಟಿದೆಯಾ ಎನ್ನುವ ಅನುಮಾನ ನನ್ನದು. ಇಲ್ಲವಾದರೆ, ಮಹಾರಾಷ್ಟ್ರ ಈ ಪರಿಯ ಉದ್ಧಟತನ ತೋರುತ್ತಿದ್ದರೂ ಮೋದಿ (Narendra Modi) ಸರ್ಕಾರದ ಮೌನವೇಕೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬಿಜೆಪಿಯದ್ದು ಹಳಿ ತಪ್ಪಿದ ಡಬ್ಬಾ ಇಂಜಿನ್ ಸರ್ಕಾರ: ಸಲೀಂ ಅಹ್ಮದ್ 

    ಕರ್ನಾಟಕದಲ್ಲಿ (Karnataka) ಇಡೀ ಭಾರತವೇ ಅಡಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ, ಗುಜರಾತಿನಿಂದ ಒಡಿಶಾವರೆಗೆ ಎಲ್ಲ ಕಡೆಯಿಂದಲೂ ಅನ್ನ ಅರಸಿಕೊಂಡು ಬಂದವರಿಗೆ ಕರ್ನಾಟಕ ಆಶ್ರಯ ನೀಡಿದೆ. ಆ ಅನ್ನಕ್ಕೆ ಮಣ್ಣು ಹಾಕುವ ಹೀನ ಕೆಲಸವನ್ನು ಮಹಾರಾಷ್ಟ್ರ ಎಗ್ಗಿಲ್ಲದೆ ಮಾಡುತ್ತಿದೆ. ಕನ್ನಡಿಗರು ಸುಮ್ಮನಿರುವ ಕಾಲ ಮುಗಿದಿದೆ ಎಂದು ಸ್ಪಷ್ಟವಾಗಿ ಹೇಳಿದರು.

    ಭಾರತ ಸ್ವತಂತ್ರಗೊಂಡಾಗ ಎಲ್ಲರಿಗಿಂತ ಮೊದಲೇ ಒಕ್ಕೂಟ ವ್ಯವಸ್ಥೆಗೆ ಒಳಪಟ್ಟವರು ನಾವು. ನಮ್ಮ ಉದಾರತೆಯೇ ನಮಗೆ ಇಂದು ಮುಳುವಾಗಿದೆಯೇ? ನೆಲ, ಜಲ, ಭಾಷೆ, ಅನುದಾನ ಸೇರಿ ಪ್ರತಿ ವಿಷಯದಲ್ಲೂ ಕನ್ನಡಿಗರು ಮಲತಾಯಿ ಮಕ್ಕಳಾಗಿದ್ದಾರೆ. ಇನ್ನೆಷ್ಟು ದಿನ ಈ ಅನ್ಯಾಯ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಸರ್ಕಾರವನ್ನು ಟೀಕಿಸಿದ ಮಾತ್ರಕ್ಕೆ ಮಾಧ್ಯಮ ನಿಯಂತ್ರಿಸಲು ಸಾಧ್ಯವಿಲ್ಲ: ಕೇಂದ್ರಕ್ಕೆ ಸುಪ್ರೀಂ ತರಾಟೆ