Tag: Central Government

  • ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ-ಆರ್‍ಬಿಐ ಸ್ಪಷ್ಟನೆ

    ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ-ಆರ್‍ಬಿಐ ಸ್ಪಷ್ಟನೆ

    ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ನಿಯಮಗಳ ಅಡಿಯಲ್ಲಿ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂದು ರಿಸರ್ವ ಬ್ಯಾಂಕ್ ಸ್ಪಷ್ಟಪಡಿಸಿದ್ದು, ಆಧಾರ್ ಲಿಂಕ್ ಕುರಿತು ಜನತೆಯಲ್ಲಿ ಮೂಡಿದ್ದ ಗೊಂದಲಗಳಿಗೆ ಈಗ ಆರ್‍ಬಿಐ ತೆರೆ ಎಳೆದಿದೆ.

    ಈ ಹಿಂದೆ ಕೇಂದ್ರ ಸರ್ಕಾರವು ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ 2017 ಡಿಸೆಂಬರ್ 31 ಅಂತಿಮ ದಿನ ಎಂಬ ಆದೇಶವನ್ನು ಹೊರಡಿಸಿತ್ತು. ಆದರೆ ಬಗ್ಗೆ ರಿಸರ್ವ್ ಬ್ಯಾಂಕ್ ಯಾವುದೇ ಆದೇಶವು ನೀಡಿಲ್ಲ ಎಂದು ತಿಳಿಸಿತ್ತು.

    ಪ್ರಸ್ತುತ ಈ ಎಲ್ಲಾ ಗೊಂದಲಗಳಿಗೂ ತೆರೆ ಎಳೆದಿರುವ ರಿಸರ್ವ್ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡಿಸುವುದು ಕಡ್ಡಾಯ ಎಂದು ತಿಳಿಸಿದೆ. ಈಗಾಗಲೇ ತೆರೆಯಲಾಗಿರುವ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡಬೇಕಾಗಿದ್ದು, ಹೊಸ ಖಾತೆಯನ್ನು ಆಂಭಿಸಬೇಕಾದರೆ 12 ಸಂಖ್ಯೆಗಳ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಅರ್ಜಿಯಲ್ಲಿ ನಮೂದಿಸಬೇಕಿದೆ ಎಂದು ತಿಳಿಸಿದೆ.

    ಆರ್ಥಿಕ ಸಚಿವ ಆರುಣ್ ಜೇಟ್ಲಿ ಆಗಸ್ಟ್ ತಿಂಗಳಿನಲ್ಲಿ ಸುಮಾರು 52.4 ಕೋಟಿ ಬ್ಯಾಂಕ್ ಖಾತೆಗಳಿಗೆ ಆಧಾರ್ ನಂಬರ್ ಜೋಡಣೆ ಮಾಡಲಾಗಿದೆ ಎಂದು ತಿಳಿಸಿದ್ದರು. ಅಲ್ಲದೇ ಹಲವು ಬ್ಯಾಂಕ್ ಗ್ರಾಹಕರು ಟ್ಯಾಕ್ಸ್ ಸಲ್ಲಿಕೆಯ ವೇಳೆ ತಮ್ಮ ಬ್ಯಾಂಕ್ ಖಾತೆಗಳಿಗೆ ಕಡ್ಡಾಯವಾಗಿ ಪ್ಯಾನ್ ನಂಬರ್ ಲಿಂಕ್ ಮಾಡಿದ್ದಾರೆ.

    ಆಧಾರ್ ಲಿಂಕ್ ಮಾಡುವ ಕುರಿತು ಮಾಹಿತಿಯನ್ನು ಕೋರಿ ಆರ್‍ಟಿಐ ಕಾರ್ಯಕರ್ತರೊಬ್ಬರು ಕೋರ್ಟ್ ಗೆ ಅರ್ಜಿಯನ್ನು ಸಲ್ಲಿಸಿದ್ದರು. ಇದಕ್ಕೆ ಉತ್ತರಿಸಿದ್ದ ಆರ್‍ಬಿಐ ತಾನು ಯಾವುದೇ ಬ್ಯಾಂಕ್‍ಗಳಿಗೆ ಈ ಕುರಿತು ಆದೇಶವನ್ನು ನೀಡಿಲ್ಲ ಎಂದು ತಿಳಿಸಿತ್ತು.

  • ಅಂಚೆ ಕಚೇರಿಯ ಠೇವಣಿಗಳಿಗೂ ಆಧಾರ್ ಕಡ್ಡಾಯ

    ಅಂಚೆ ಕಚೇರಿಯ ಠೇವಣಿಗಳಿಗೂ ಆಧಾರ್ ಕಡ್ಡಾಯ

    ನವದೆಹಲಿ: ಈಗಾಗಲೇ ಸರ್ಕಾರ ಪಾನ್, ಮೊಬೈಲ್, ಬ್ಯಾಂಕ್ ಹಾಗೂ ಸರ್ಕಾರಿ ದಾಖಲಾತಿಗಳಿಗೆ ಆಧಾರ್ ಅನ್ನು ಕಡ್ಡಾಯಗೊಳಿಸಿ ಅದಕ್ಕೆ ಸಂಬಂಧಿಸಿದಂತೆ ಗಡುವನ್ನು ನೀಡಿದ್ದು, ಈಗ ಅಂಚೆ ಕಚೇರಿಯಲ್ಲಿರುವ ಉಳಿತಾಯ ಖಾತೆಗಳಿಗೂ ಆಧಾರ್ ಕಡ್ಡಾಯಗೊಳಿಸಿದೆ.

    ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಯೋಜನೆ (ಎನ್‍ಎಸ್‍ಸಿಎಸ್) ಹಾಗೂ ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಮತ್ತು ಅಂಚೆ ಕಚೇರಿ ಯಲ್ಲಿರುವ ಎಲ್ಲಾ ಠೇವಣಿಗಳಿಗೂ ಆಧಾರ್ ಕಡ್ಡಾಯವಾಗಿ ಇರಲೇಬೇಕು ಎಂದು ಆದೇಶ ಹೊರಡಿಸಿದೆ.

    ಅಂಚೆಯಲ್ಲಿರುವ ಉಳಿತಾಯ ಖಾತೆ, ಪಿಪಿಎಫ್, ಎನ್‍ಎಸ್‍ಸಿಎಸ್, ಕೆವಿಪಿಗಳಿಗೆ ಡಿಸೆಂಬರ್ 31 ರ ಒಳಗಡೆ ಆಧಾರ್ ಜೋಡಣೆ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

    ಹಣಕಾಸು ಸಚಿವಾಲಯ ಎಲ್ಲಾ ಅಂಚೆ ಠೇವಣಿ ಖಾತೆಗಳಿಗೆ ಆಧಾರ್ ನಂಬರ್ ನೀಡಬೇಕು ಎಂದು ಸೆ. 29 ಗೆಜೆಟೆಡ್ ನೋಟಿಫಿಕೇಶನ್ ಹೊರಡಿಸಿದ್ದು, ಈ ಯೋಜನೆಗಳಿಗೆ ಹೊಸದಾಗಿ ಸೇರುವವರಿಗೆ ಮಾತ್ರವಲ್ಲದೆ ಈಗಾಗಲೇ ಖಾತೆಗಳನ್ನು ಹೊಂದಿರುವಂತಹ ಗ್ರಾಹಕರೂ ಕೂಡ ಸಮೀಪದ ಅಂಚೆ ಕಚೇರಿಗಳಿಗೆ ಹೋಗಿ ಡಿ. 31 ರೊಳಗೆ ಆಧಾರ್ ನಂಬರ್ ಜೋಡಿಸಬೇಕೆಂದು ತಿಳಿಸಿದೆ.

    ಒಂದು ವೇಳೆ ಆಧಾರ್ ಹೊಂದಿಲ್ಲದವರು ಅಥವಾ ಆಧಾರ್ ಕಾರ್ಡ್‍ಗೆ ಅರ್ಜಿ ಸಲ್ಲಿಸಿರುವವರು ತಮಗೆ ನೀಡಿರುವ ಆಧಾರ್ ಅರ್ಜಿಯ ನಕಲು ಪ್ರತಿಯನ್ನು ಸಲ್ಲಿಸಬೇಕು ಎಂದು ಹೇಳಿದೆ.

  • ಗಲ್ಲುಶಿಕ್ಷೆ ಬದಲು ಬೇರೆ ವಿಧಾನದ ಮೂಲಕ ಶಿಕ್ಷೆ ನೀಡಬಹುದೇ: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

    ಗಲ್ಲುಶಿಕ್ಷೆ ಬದಲು ಬೇರೆ ವಿಧಾನದ ಮೂಲಕ ಶಿಕ್ಷೆ ನೀಡಬಹುದೇ: ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

    ನವದೆಹಲಿ: ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯ ಬದಲು ಬೇರೆ ಯಾವುದಾದರೂ ಮಾರ್ಗದ ಮೂಲಕ ಶಿಕ್ಷೆ ನೀಡಲು ಸಾಧ್ಯವೇ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

    ಮರಣದಂಡನೆಗೆ ಒಳಗಾಗಿರುವ ಅಪರಾಧಿಗಳಿಗೆ ಈಗಿರುವ ಮಾರ್ಗದ ಬದಲು ವೈಜ್ಞಾನಿಕವಾಗಿ ಬೇರೆ ಮಾರ್ಗಗಳನ್ನು ಬಳಸುವ ಸಾಧ್ಯತೆಗಳ ಕುರಿತು ಮೂರು ತಿಂಗಳ ಒಳಗೆ ವಿವರಣೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಶುಕ್ರವಾರ ನೋಟಿಸ್ ನೀಡಿದೆ.

    ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎಎಮ್ ಖನ್ವಿಲ್ಕರ್ ಮತ್ತು ಡಿವೈ ಚಂದ್ರಚೂಡ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ.

    ಭಾರತದ ಸಂವಿಧಾನವು ಪ್ರಜೆಗಳ ಕುರಿತು ಸಹಾನುಭೂತಿಯುಳ್ಳದ್ದಾಗಿದ್ದು, ಪ್ರತಿಯೊಬ್ಬರ ಜೀವನದ ಪವಿತ್ರತೆಯನ್ನು ಗೌರವಿಸುತ್ತದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಗಲ್ಲು ಶಿಕ್ಷೆಗೆ ಗುರಿಯಾದವರಿಗೆ ಬೇರೆ ವಿಧಾನಗಳ ಮೂಲಕ ಶಿಕ್ಷೆ ನೀಡುವ ಸಾಧ್ಯತೆಗಳ ಕುರಿತು ಸಂವಿಧಾನದಲ್ಲಿ ಅವಕಾಶ ಕಲ್ಪಿಸುವ ಬಗ್ಗೆ ಯೋಚಿಸಬಹುದು ಎಂದು ಪೀಠ ಅಭಿಪ್ರಾಯಪಟ್ಟಿದೆ.

    ವಕೀಲ ರಿಷಿ ಮಲ್ಹೋತ್ರಾ ರವರು ಸಾರ್ವಜನಿಕಾ ಹಿತಾಸಕ್ತಿ ಅರ್ಜಿಯ ವಿಚಾರಣೆ(ಪಿಐಎಲ್) ವೇಳೆ ಪೀಠ ಕೇಂದ್ರ ನೋಟಿಸ್ ಜಾರಿ ಮಾಡಿ, ಈಗ ವಿಜ್ಞಾನ ಸಾಕಷ್ಟು ಬದಲಾಗಿದೆ. ಹೀಗಾಗಿ ಕಾನೂನು ಬದಲಾವಣೆ ಮಾಡಲು ಸಾಧ್ಯವಿದೆಯೇ ಎಂದು ಕೇಳಿದೆ.

    ಭಾರತೀಯ ಸಂವಿಧಾನದ 21ನೇ ಪರಿಚ್ಛೇದದ ಪ್ರಕಾರ ಬದುಕುವ ಹಕ್ಕನ್ನು ಕಲ್ಪಿಸಲಾಗಿದೆ. ಈ ಹಕ್ಕಿನ ಪ್ರಕಾರ ನೋವಾಗದಂತೆ ಅಪರಾಧಿ ಸಾಯಬೇಕೆಂದು ಹೇಳುತ್ತದೆ. ಆದರೆ ಭಾರತೀಯ ದಂಡ ಸಂಹಿತೆಯ ಮರಣದಂಡನೆ ಶಿಕ್ಷೆ ಯನ್ನು ಅನುಭವಿಸುವ ವ್ಯಕ್ತಿ ನೋವಿನಿಂದ ಮೃತಪಡುತ್ತಾನೆ. ಹೀಗಾಗಿ ಮರಣ ದಂಡನೆ ಶಿಕ್ಷೆಯ ಸಾವಿಂಧಾನಿಕ ಸಿಂಧುತ್ವವನ್ನು ಅರ್ಜಿದಾರರು ಪ್ರಶ್ನಿಸಿ ಪಿಐಎಲ್‍ನಲ್ಲಿ ಕಾನೂನು ಬದಲಾವಣೆ ಮಾಡುವಂತೆ ಮನವಿ ಮಾಡಿದ್ದರು.

  • ನಾವು ಅಬಕಾರಿ ಸುಂಕ ಇಳಿಸಿದ್ದೇವೆ, ನೀವು ವ್ಯಾಟ್ ಇಳಿಸಿ: ಧರ್ಮೇಂದ್ರ ಪ್ರಧಾನ್

    ನಾವು ಅಬಕಾರಿ ಸುಂಕ ಇಳಿಸಿದ್ದೇವೆ, ನೀವು ವ್ಯಾಟ್ ಇಳಿಸಿ: ಧರ್ಮೇಂದ್ರ ಪ್ರಧಾನ್

    ಬೆಂಗಳೂರು: ಮಂಗಳವಾರವಷ್ಟೇ ಪ್ರತಿ ಲೀಟರ್ ಪೆಟ್ರೋಲ್, ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು 2 ರೂ. ಕಡಿತಗೊಳಿಸಿದ್ದು ಕೇಂದ್ರ ಸರ್ಕಾರ ಇದೀಗ ರಾಜ್ಯ ಸರ್ಕಾರಗಳಿಗೆ ಮೌಲ್ಯವರ್ಧಿತ ತೆರಿಗೆ ಕಡಿತಗೊಳಿಸುವಂತೆ ಹೇಳಿದೆ.

    ಕಳೆದ 3 ತಿಂಗಳಿಂದ ನಾಗಾಲೋಟದಲ್ಲಿ ಸಾಗುತ್ತಿದ್ದ ತೈಲ ಬೆಲೆ ಇಳಿಕೆಗೆ ಅಬಕಾರಿ ಸುಂಕದಲ್ಲಿ 2 ರೂಪಾಯಿ ಕಡಿತ ಮಾಡಿದ್ದ ಕೇಂದ್ರ ಸರ್ಕಾರ ಈಗ ರಾಜ್ಯಗಳೂ ಶೇ.5ರಷ್ಟು ಕಡಿತಗೊಳಿಸಿ ಅಂತ ಹೇಳಿ ಜಾಣತನ ಮೆರೆದಿದೆ.

    ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ರಾಜ್ಯ ಸರ್ಕಾರಗಳು ವ್ಯಾಟ್ ಮೂಲಕ ಹೇರುತ್ತಿರುವ ತೆರಿಗೆಗಳನ್ನು ಇಳಿಕೆ ಮಾಡುವಂತೆ ಸೂಚಿಸಿದೆ. ಈ ಸಂಬಂಧ ಕೇಂದ್ರ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೆಂದ್ರ ಪ್ರಧಾನ್ ಕೂಡ ಪತ್ರ ಬರೆದಿದ್ದಾರೆ. ಅಬಕಾರಿ ಸುಂಕವನ್ನು ನಾವು ಇಳಿಕೆ ಮಾಡಿರೋದ್ರಿಂದ ಪೆಟ್ರೋಲ್ ಬೆಲೆ ಲೀಟರ್‍ಗೆ 2 ರೂಪಾಯಿ 50 ಪೈಸೆ ಹಾಗೂ ಡೀಸೆಲ್ ಬೆಲೆ 2 ರೂಪಾಯಿ 25 ಪೈಸೆ ಇಳಿಕೆಯಾಗಿದೆ. ನೀವು ಕೂಡ ವ್ಯಾಟ್ ರೂಪದಲ್ಲಿ ಹಾಕುತ್ತಿರುವ ತೆರಿಗೆಯನ್ನು ಇಳಿಕೆ ಮಾಡಿದ್ರೆ ಪೆಟ್ರೋಲ್ ಬೆಲೆ ಲೀಟರ್‍ಗೆ 5 ರೂಪಾಯಿ ಇಳಿಕೆಯಾಗಲಿದೆ ಅಂತ ಜಾರಿಕೊಂಡಿದ್ದಾರೆ. ಇಷ್ಟಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಾಕುತ್ತಿರುವ ತೆರಿಗೆಯನ್ನು ಇಳಿಸಿದ್ರೆ ಅರ್ಧಕರ್ಧ ಬೆಲೆ ಇಳಿಕೆಯಾಗುವುದಂತೂ ಸತ್ಯ.

    ಯಾವ ರಾಜ್ಯದಲ್ಲಿ ವ್ಯಾಟ್ ಎಷ್ಟಿದೆ?
    ಕರ್ನಾಟಕ: ಪೆಟ್ರೋಲ್ – ಶೇ.30, ಡೀಸೆಲ್ – ಶೇ.19
    ಮಹಾರಾಷ್ಟ್ರ: ಪೆಟ್ರೋಲ್ – ಶೇ.47.64, ಡೀಸೆಲ್ – ಶೇ.28.39
    ಆಂಧ್ರ ಪ್ರದೇಶ: ಪೆಟ್ರೋಲ್ – ಶೇ. 38.83, ಡೀಸೆಲ್ – ಶೇ. 30.82
    ಮಧ್ಯಪ್ರದೇಶ: ಪೆಟ್ರೋಲ್ – ಶೇ. 38.79, ಡೀಸೆಲ್ – ಶೇ. 30.22
    ತೆಲಂಗಾಣ: ಪೆಟ್ರೋಲ್ – ಶೇ. 35.20, ಡೀಸೆಲ್ – ಶೇ.27.00
    ಕೇರಳ: ಪೆಟ್ರೋಲ್ – ಶೇ. 34.06

    ಪೆಟ್ರೋಲ್ ಹಾಗೂ ಡೀಸೆಲ್ ಮೂಲಕ ಆದಾಯ ಸಂಗ್ರಹ ಮಾಡುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ದೇಶದಲ್ಲೇ ಐದನೇ ಸ್ಥಾನವಿದೆ. ದೇಶದಲ್ಲೇ ಅತಿ ಹೆಚ್ಚು ತೆರಿಗೆ ವಿಧಿಸೋ ಮಹಾರಾಷ್ಟ್ರ ಸರ್ಕಾರ ಆದಾಯ ಸಂಗ್ರಹದಲ್ಲಿ ಮೊದಲ ಸ್ಥಾನವಿದೆ. ಸೇವಾ ತೆರಿಗೆ, ಪ್ರವೇಶ ತೆರಿಗೆಗಳ ಮೂಲಕ ರಾಜ್ಯಗಳು ಸಂಗ್ರಹ ಮಾಡುವ ಹಣ ಈ ಕೆಳಗಿನಂತಿದೆ.

    ತೆರಿಗೆ ಸಂಗ್ರಹದಲ್ಲಿ ಯಾರು ಮೊದಲು:
    ನಂ.1 ಮಹಾರಾಷ್ಟ್ರ: 23,160 ಕೋಟಿ ರೂ.
    ನಂ.2 ಗುಜರಾತ್: 15,958 ಕೋಟಿ ರೂ.
    ನಂ.3 ಉತ್ತರಪ್ರದೇಶ: 15, 850 ಕೋಟಿ ರೂ.
    ನಂ.4 ತಮಿಳುನಾಡು: 12, 563 ಕೋಟಿ ರೂ.
    ನಂ.5 ಕರ್ನಾಟಕ: 11,103 ಕೋಟಿ ರೂ.

    ಯಾರಿಗೆ ಎಷ್ಟು?
    ಪೆಟ್ರೋಲ್ ಮೇಲೆ ಅಬಕಾರಿ ಸುಂಕ: 21.48 ಪೈಸೆ (ಲೀಟರ್‍ಗೆ)
    ಪೆಟ್ರೋಲ್ ಮೇಲೆ ವ್ಯಾಟ್: ಶೇ.27
    ಡೀಲರ್ಸ್‍ಗಳ ಕಮಿಷನ್: 3.23 (ಲೀಟರ್‍ಗೆ)

    ಡೀಸೆಲ್ ಮೇಲೆ ಅಬಕಾರಿ ಸುಂಕ: 17.33 (ಲೀಟರ್‍ಗೆ)
    ಡೀಸೆಲ್ ಮೇಲಿನ ವ್ಯಾಟ್: ಶೇ.27
    ಡೀಲರ್ಸ್‍ಗಳ ಕಮಿಷನ್: 2.17 (ಲೀಟರ್‍ಗೆ)

  • ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆ ಸಂಸತ್ತಿನ ಅಧಿಕಾರಕ್ಕೆ ಬಿಟ್ಟದ್ದು: ಕೇಂದ್ರ ಸರ್ಕಾರ

    ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆ ಸಂಸತ್ತಿನ ಅಧಿಕಾರಕ್ಕೆ ಬಿಟ್ಟದ್ದು: ಕೇಂದ್ರ ಸರ್ಕಾರ

    ನವದೆಹಲಿ: ಕಾವೇರಿ ನಿರ್ವಹಣಾ ಮಂಡಳಿ ರಚಿಸಬೇಕೋ ಬೇಡವೋ ಎನ್ನುವ ನಿರ್ಧಾರ ಸಂಸತ್ತಿನ ಅಧಿಕಾರಕ್ಕೆ ಬಿಟ್ಟದ್ದು. ಸಂಸತ್ತು ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ತಿಳಿಸಿದೆ.

    ಕಾವೇರಿ ಮೇಲ್ಮನವಿ ಅರ್ಜಿಗಳ ವಿಚಾರಣೆ ವೇಳೆ ನಿರ್ವಹಣಾ ಮಂಡಳಿ ರಚನೆ ಬಗ್ಗೆ ಕೇಂದ್ರ ತನ್ನ ನಿಲುವು ಸ್ಪಷ್ಟಪಡಿಸಿದೆ. ನಿರ್ವಹಣಾ ಮಂಡಳಿ ರಚನೆ ನ್ಯಾಯಾಧಿಕರಣದ ವ್ಯಾಪ್ತಿಗೆ ಬರುವುದಿಲ್ಲ. ಸರ್ಕಾರ ಈ ಬಗ್ಗೆ ಕರಡು ಸಿದ್ಧಪಡಿಸಿ ಸಂಸತ್ತಿನ ಮುಂದಿಡಲಿದೆ. ಇದಕ್ಕೆ ತಿದ್ದುಪಡಿ, ಬದಲಾವಣೆ ಮಾಡುವುದಿದ್ದರೆ ಸಂಸತ್ತು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದೆ.

    ಒಂದು ವೇಳೆ ಸುಪ್ರೀಂಕೋರ್ಟ್ ನೀರು ಹಂಚಿಕೆ, ಮಂಡಳಿ ರಚನೆ ಬಗ್ಗೆ ತೀರ್ಪು ನೀಡಿದರೆ ನಾವು ಅದನ್ನ ಪಾಲಿಸುತ್ತೇವೆ ಎಂದು ಕೇಂದ್ರ ಸರ್ಕಾರದ ವಕೀಲ ರಂಜಿತ್ ಕುಮಾರ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನಾವು ತೀರ್ಪು ನೀಡಿದರೆ ನೀವು ಪಾಲಿಸಲೇಬೇಕು ಎಂದು ಸೂಚಿಸಿದ್ದಾರೆ.

  • ಬೆಳಕು ಫಲಶೃತಿ: ಅಂಗವಿಕಲ ಮಹಿಳೆಗೆ ಸಿಕ್ತು ಆಧಾರ್ ಕಾರ್ಡ್

    ಬೆಳಕು ಫಲಶೃತಿ: ಅಂಗವಿಕಲ ಮಹಿಳೆಗೆ ಸಿಕ್ತು ಆಧಾರ್ ಕಾರ್ಡ್

    ಮಂಗಳೂರು: ದೇಶದ ಪ್ರತಿಯೊಬ್ಬ ಪ್ರಜೆಯೂ ಆಧಾರ್ ಕಾರ್ಡ್ ಹೊಂದಲೇ ಬೇಕು ಅನ್ನೋದು ಕೇಂದ್ರ ಸರ್ಕಾರದ ಆದೇಶ. ಆದರೆ ಅದೆಷ್ಟೋ ಮಂದಿ ನಾನಾ ಕಾರಣಗಳಿಂದ ಆಧಾರ್ ಕಾರ್ಡ್ ಪಡೆಯಲಾಗದೆ ಈ ದೇಶದ ಪ್ರಜೆಯೇ ಅಲ್ಲದಂತಾಗಿದ್ದಾರೆ.

    ಮಂಗಳೂರಿನಲ್ಲೂ ಇಂತಹದೊಂದು ಕರುಣಾಜನಕ ಪ್ರಕರಣದಲ್ಲಿ ಆಧಾರ್ ಕಾರ್ಡ್ ಇಲ್ಲದ ಅಂಗವಿಕಲ ಮಹಿಳೆಯೋರ್ವರಿಗೆ ಬೆಳಕು ಕಾರ್ಯಕ್ರಮದ ಮೂಲಕ ಕ್ಷಣ ಮಾತ್ರದಲ್ಲಿ ಆಧಾರ್ ಕಾರ್ಡ್ ದೊರೆತಿದೆ. ಇದು ಬೆಳಕು ಕಾರ್ಯಕ್ರಮದ ಇಂಪ್ಯಾಕ್ಟ್.

    ಕಳೆದ ವಾರದ ಬೆಳಕು ಕಾರ್ಯಕ್ರಮದಲ್ಲಿ ಮಂಗಳೂರಿನ ಕರುಣಾಜನಕ ಕಥೆಯನ್ನು ನಾವು ನಿಮ್ಗೆ ತೋರಿಸಿದ್ದೀವಿ. ಮಂಗಳೂರಿನ ಮಣ್ಣಗುಡ್ಡೆಯಲ್ಲಿ ವಾಸವಾಗಿರುವ ತಾಯಿ ಮಗಳ ಕಥೆ ಅದು. 85 ವರ್ಷದ ಚಂಚಲಾಕ್ಷಿ ಎಂಬ ತಾಯಿ ಆಕೆಯ 58 ವರ್ಷದ ಮಗಳನ್ನು ಪ್ರತಿ ದಿನ ಮನೆಯಲ್ಲಿ ಅತ್ತಿಂದಿತ್ತ ಎಳೆದಾಡಿಕೊಂಡೇ ಹೋಗುತ್ತಿದ್ದಾರೆ.

    ಚಂಚಲಾಕ್ಷಿಯವರ ಮಗಳು ಮಾಲಿನಿ 6 ತಿಂಗಳ ಮಗುವಾಗಿದ್ದಾಗ ಪಿಡ್ಸ್ ಕಾಯಿಲೆಗೆಂದು ವೈದ್ಯರ ಬಳಿಗೆ ಹೋಗಿದ್ದಾಗ ಮಗುವಿನ ಬೆನ್ನು ಮೂಳೆಯ ನೀರು ತೆಗೆದಿದ್ದರಂತೆ. ಅಂದಿನಿಂದ ಇಂದಿನವರೆಗೆ ಅಂದರೆ 58 ವರ್ಷಗಳ ಕಾಲ ಆ ಮಗು ಎದ್ದು ನಿಲ್ಲಲೇ ಇಲ್ಲ. ಹೀಗಾಗಿ ಇಳಿ ವಯಸ್ಸಿನ ತಾಯಿ ಮನೆಯೊಳಗೆ ಎಳೆದಾಡಿಕೊಂಡೇ ಹೋಗುತ್ತಿದ್ದರು. ಮಾಲಿನಿಗೆ ಅಂಗವಿಕಲ ವೇತನ ಬರುತ್ತಿದ್ದರೂ ಇದೀಗ ಆಧಾರ ಕಾರ್ಡ್ ಕಡ್ಡಾಯವಾಗಿದ್ದರಿಂದ ಅದಕ್ಕೂ ಕೊಕ್ಕೆ ಬಿದ್ದಿತ್ತು. ಎದ್ದು ಆಚೀಚೆ ಹೋಗಲು ಅಸಾಧ್ಯವಾಗಿದ್ದ ಮಾಲಿನಿಗೆ ಆಧಾರ ಕಾರ್ಡ್ ಮಾಡಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ.

    ಹೀಗಾಗಿ ಬೆಳಕು ತಂಡ ಈಕೆಯ ಕರುಣಾಜನಕ ಕಥೆಯ ಬಗ್ಗೆ ವರದಿ ಮಾಡಿದ್ದು ಜಿಲ್ಲಾಡಳಿತ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಜಗದೀಶ್‍ರಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ವಿನಂತಿಸಿಕೊಂಡಿದ್ದರು. ಅದರಂತೆ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ ಒಂದೇ ದಿನದಲ್ಲಿ ಮಾಲಿನಿಗೆ ಆಧಾರ್ ಕಾರ್ಡ್ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.

    ಜಿಲ್ಲಾಧಿಕಾರಿ ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ತಕ್ಷಣ ಮಂಗಳೂರು ತಹಶೀಲ್ದಾರ್ ಅವರನ್ನು ಮನೆಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಿದ್ದರು. ಬಳಿಕ ಆಧಾರ್ ಕಾರ್ಡ್‍ನ ಮೊಬೈಲ್ ಸೇವೆ ಸ್ಥಗಿತಗೊಂಡಿದ್ದರೂ, ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲೆಯ ಏಕೈಕ ಆಧಾರ್ ಕೇಂದ್ರದ ಎಲ್ಲಾ ಉಪಕರಣಗಳನ್ನು ಮಾಲಿನಿಯವರ ಮನೆಗೆ ಅಧಿಕಾರಿಗಳ ತಂಡ ತಂದು ಅವರ ಮನೆಯಲ್ಲೇ ಆಧಾರ್ ಕಾರ್ಡ್‍ನ ನೊಂದಾವಣಿಯನ್ನು ಮಾಡಿಕೊಂಡರು.

    ಆಧಾರ್ ಕಾರ್ಡ್‍ನ ದಾಖಲಾತಿಯ ವಿವರವನ್ನು ತಕ್ಷಣದಲ್ಲೇ ನೀಡಿದ್ದು ಇನ್ನು 15 ದಿನದೊಳಗೆ ಮಾಲಿನಿಗೆ ಆಧಾರ್ ಕಾರ್ಡ್ ಲಭ್ಯವಾಗಲಿದೆ. ಮಾತ್ರವಲ್ಲ ಈ ಬಡ ಕುಟುಂಬಕ್ಕೆ ಇರುವ ಎಪಿಎಲ್ ಕಾರ್ಡ್‍ನ್ನು ರದ್ದುಗೊಳಿಸಿ ಬಿಪಿಎಲ್ ಕಾರ್ಡ್ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಮಾಲಿನಿಯ ಹೆಸರನ್ನೂ ಪಡಿತರ ಚೀಟಿಗೆ ಸೇರಿಸಲು ತಹಶೀಲ್ದಾರ್ ಇಲಾಖೆಗೆ ಸೂಚಿಸಿದ್ದಾರೆ. ಜೊತೆಗೆ ಮಾಲಿನಿಗೆ ಬೇಕಾದ ಆರೋಗ್ಯದ ಸೇವೆಯನ್ನೂ, ಸರ್ಕಾರದಿಂದ ಬರುವ ಅಂಗವಿಕಲ ವೇತನವನ್ನೂ ಸರಿಯಾಗಿ ಸಿಗುವಂತೆ ಆಯಾ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

    ಈ ನಡುವೆ ಅಂಗವಿಕಲರ ಪುನರ್ವಸತಿ ಕೇಂದ್ರದ ಅಧಿಕಾರಿಗಳೂ ಭೇಟಿ ನೀಡಿದ್ದು ಮಾಳಿನಿಗೆ ಸಿಗಬೇಕಾದ ಎಲ್ಲಾ ಸೌಲಭ್ಯವನ್ನೂ ನೀಡಲೂ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಈಕೆಯ ಕರುಣಾಜನಕ ಕಥೆಯನ್ನು ತೆರೆದಿಟ್ಟ ಪಬ್ಲಿಕ್ ಟಿವಿಯ ಬೆಳಕು ತಂಡಕ್ಕೆ ಎಲ್ಲರೂ ಅಭಿನಂದನೆ ಸಲ್ಲಿಸಿದ್ದಾರೆ.

    ಬೆಳಕು ತಂಡದ ಪ್ರಯತ್ನಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ತಕ್ಷಣಕ್ಕೆ ಸ್ಪಂದಿಸಿ ಮಾಲಿನಿಯ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಮಾಲಿನಿಗೂ ತಾನೊಬ್ಬ ಭಾರತದ ಪ್ರಜೆ ಅನ್ನೋ ದಕ್ಕೆ ಆಧಾರ ಸಿಕ್ಕಿದೆ. ನಮ್ಮ ಪ್ರಯತ್ನದಿಂದಾಗಿ ಇನ್ನಾದರೂ ಮಾಲಿನಿಯ ಜೀವನದಲ್ಲಿ ಹೊಸ “ಬೆಳಕು” ಮೂಡಲಿ ಅನ್ನೋದು ಪಬ್ಲಿಕ್ ಟಿವಿಯ ಆಶಯ.

    https://youtu.be/qkSZDSLwI6w

  • ದೆಹಲಿ ಬಿಟ್ಟು ಗುಜರಾತ್ ನಲ್ಲಿ ಜಪಾನ್ ಪ್ರಧಾನಿಗೆ ರಾಜಾತಿಥ್ಯ ನೀಡಿದ್ದು ಯಾಕೆ: ಕಾಂಗ್ರೆಸ್ ಪ್ರಶ್ನೆ

    ದೆಹಲಿ ಬಿಟ್ಟು ಗುಜರಾತ್ ನಲ್ಲಿ ಜಪಾನ್ ಪ್ರಧಾನಿಗೆ ರಾಜಾತಿಥ್ಯ ನೀಡಿದ್ದು ಯಾಕೆ: ಕಾಂಗ್ರೆಸ್ ಪ್ರಶ್ನೆ

    ನವದೆಹಲಿ: ಜಪಾನ್ ಪ್ರಧಾನಿ ಅಬೆ ಜೊತೆಗಿನ ಎರಡು ದಿನಗಳ ಭಾರತದ ಭೇಟಿಯನ್ನು ಮೋದಿ ಸರ್ಕಾರವು ತನ್ನ ರಾಜಕೀಯ ಲಾಭವನ್ನು ಹೆಚ್ಚಿಸಿಕೊಳ್ಳಲು ಬಳಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

    ಕಾಂಗ್ರೆಸ್ ಪಕ್ಷದ ಮುಖಂಡ ಮನೀಷ್ ತಿವಾರಿ ಪ್ರತಿಕ್ರಿಯಿಸಿ, ಯಾವುದೇ ಪ್ರತಿಷ್ಟಿತ ದೇಶದ ಪ್ರಧಾನಿಗಳು ದೇಶಕ್ಕೆ ಆಗಮಿಸಿದರೆ ಅವರಿಗೆ ದೆಹಲಿಯಲ್ಲಿ ಅತಿಥ್ಯವನ್ನು ನೀಡಲಾಗುತ್ತದೆ. ಆದರೆ ಈ ಬಾರಿ ಗುಜರಾತ್ ನಲ್ಲಿ ರಾಜಾತಿಥ್ಯ ನೀಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

    ಜಪಾನ್ ಪ್ರಧಾನಿ ಅವರು ಗುಜರಾತ್‍ಗೆ ಭೇಟಿ ನೀಡಿದ ಬಗ್ಗೆ ನಮ್ಮ ಆಕ್ಷೇಪ ಇಲ್ಲ. ಅದರೆ ಮುಂದಿನ ದಿನಗಳಲ್ಲಿ ಗುಜರಾತ್ ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರತಿಷ್ಠಿತ ದೇಶದ ಪ್ರಧಾನಿಗಳ ಜೊತೆ ರೋಡ್ ಶೋ ನಡೆಸುವ ಅಗತ್ಯತೆಯನ್ನು ಪ್ರಶ್ನಿಸುತ್ತಿದ್ದೇವೆ ಎಂದರು.

    ಬಿಜೆಪಿಯ ಈ ನಡೆಯು ಮುಂದಿನ ಚುನಾವಣೆಯಲ್ಲಿ ರಾಜಕೀಯ ಲಾಭವನ್ನು ಪಡೆಯುವ ಉದ್ದೇಶವನ್ನು ಹೊಂದಿರುವುದಿಲ್ಲ ಎಂದು ಆಶಿಸುತ್ತೇವೆ. ಜಪಾನ್ ಹಾಗೂ ಭಾರತದ ನಡುವೆ ಹಲವು ವರ್ಷಗಳಿಂದಲೂ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದು, ಹಲವು ಬಾರಿ ಜಪಾನ್ ನಮಗೇ ಸಹಾಯದ ಹಸ್ತವನ್ನು ಚಾಚಿದೆ. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ವೇಳೆಯಲ್ಲೂ ಉತ್ತಮ ಸಂಬಂಧಗಳನ್ನು ಏರ್ಪಡಿಸಲಾಗಿತ್ತು ಎಂದು ಮನೀಷ್ ತಿವಾರಿ ತಿಳಿಸಿದರು.

    ರೋಹಿಂಗ್ಯಾ ಮುಸ್ಲಿಮ್ ನಿರಾಶ್ರಿತರ ವಿಚಾರದ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಟೀಕೆ ಭಾರತ ಒಳಗಾಗಬೇಕಾಯಿತು. ಸರ್ಕಾರದ ಈ ನಡೆಯು ಭಾರತೀಯ ಸಂಸ್ಕೃತಿಗೆ ಸಂಪೂರ್ಣ ವಿರುದ್ಧವಾಗಿದ್ದು. ನೆರೆಯ ದೇಶಗಳೊಂದಿಗೆ ಉತ್ತಮ ಸಂಬಂಧಗಳನ್ನು ಏರ್ಪಡಿಸಲು ಈ ಕ್ರಮಗಳು ಋಣಾತ್ಮಾಕ ಪರಿಣಾಮಗಳನ್ನು ಬೀರುತ್ತದೆ. ಭಾರತವು ಎಂದು ಈ ರೀತಿಯ ಪರಿಸ್ಥಿತಿಯನ್ನು ಎದುರಿಸಲಿಲ್ಲ ಎಂದರು.

    ಜಪಾನ್ ಪ್ರಧಾನಿ ಶಿಂಜೋ ಅಬೆ ಅವರು ತಮ್ಮ ಎರಡು ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ್ದು, ಭಾರತ-ಜಪಾನ್ ಸಹಕಾರದ ಮೊದಲ ಬುಲೆಟ್ ಟ್ರೈನ್ ಯೋಜನೆಗೆ ಅಹಮದಾಬಾದ್ ನಲ್ಲಿ ಶಂಕುಸ್ಥಾಪನೆ ಮಾಡಿದರು.