Tag: Central Government

  • ಗುಡ್‍ನ್ಯೂಸ್ ಮತ್ತೆ ಇಳಿಕೆ ಆಯ್ತು ಸ್ಟೆಂಟ್ ಬೆಲೆ

    ಗುಡ್‍ನ್ಯೂಸ್ ಮತ್ತೆ ಇಳಿಕೆ ಆಯ್ತು ಸ್ಟೆಂಟ್ ಬೆಲೆ

    ನವದೆಹಲಿ: ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ(ಎನ್‍ಪಿಪಿಎ) ಹೃದಯ ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ಡ್ರಗ್ ಎಲುಟಿಂಗ್ ಸ್ಟೆಂಟ್ ಬೆಲೆ(ಡಿಇಎಸ್) ಬೆಲೆಯನ್ನು ಇಳಿಕೆ ಮಾಡಿದೆ.

    ಇಲ್ಲಿಯವರೆಗೆ ಡಿಇಎಸ್ ಸ್ಟೆಂಟ್ ಬೆಲೆ 30,180 ರೂ. ದರ ನಿಗದಿಯಾಗಿತ್ತು. ಈಗ 2,300 ರೂ. ಇಳಿಕೆಯಾಗಿ 27,880 ರೂ. ಗರಿಷ್ಟ ದರ ನಿಗದಿಯಾಗಿದೆ. ಬಾರ್ ಮೆಟಲ್ ಸ್ಟೆಂಟ್ ಗರಿಷ್ಠ ಬೆಲೆ 7,400 ರೂ. ನಿಂದ 7,660 ರೂಪಾಯಿಗೆ ಏರಿಕೆಯಾಗಿದೆ.

    ಜಿಎಸ್‍ಟಿ ಹೊರತುಪಡಿಸಿದ ದರ ಇದಾಗಿದ್ದು, 5% ಜಿಎಸ್‍ಟಿ ಹೇರಿದರೆ ಡಿಇಎಸ್ ಬೆಲೆ 29,285 ರೂ. ಆದರೆ ಬಾರ್ ಮೆಟಲ್ ಸ್ಟಂಟ್ ಗರಿಷ್ಟ ದರ 8,043 ರೂ. ಆಗಲಿದೆ.

    ದೇಶದಲ್ಲಿ ಹೃದಯದ ರಕ್ತನಾಳಗಳಲ್ಲಿ ರಕ್ತ ಸಂಚಲನದ ಅಡೆತಡೆ ನಿವಾರಿಸುವ ಶಸ್ತ್ರಚಿಕಿತ್ಸೆಗೆ 95% ಡಿಇಎಸ್ ಸ್ಟಂಟ್‍ಗಳನ್ನು ಬಳಸಲಾಗುತ್ತಿದೆ. ನೂತನ ಪರಿಷ್ಕೃತ ದರ ಮಂಗಳವಾರದಿಂದ ಜಾರಿಯಾಗಿದ್ದು 2019ರ ಮಾರ್ಚ್ 31ರವರೆಗೆ ಈ ಬೆಲೆ ಜಾರಿಯಲ್ಲಿರಲಿದೆ.

    ಕಳೆದ ವರ್ಷ ಫಬ್ರವರಿ 14 ರಂದು ಎನ್‍ಪಿಪಿಎ ಬಾರ್ ಮೆಟಲ್ ಗರಿಷ್ಟ ದರ 7,400 ರೂ. ನಿಗದಿ ಪಡಿಸಿದ್ದರೆ, ಡಿಇಎಸ್ ಗರಿಷ್ಟ ದರ 30,180 ರೂ. ನಿಗದಿ ಪಡಿಸಿ ಆದೇಶ ಹೊರಡಿಸಿತ್ತು.

    ಕೇಂದ್ರ ಸರ್ಕಾರ ಸ್ಟೆಂಟ್ ಗಳ ಬೆಲೆಯನ್ನು ಇಳಿಸಿದ್ದಕ್ಕೆ ಖಾಸಗಿ ಆಸ್ಪತ್ರೆಗಳಿಂದ ವಿರೋಧ ವ್ಯಕ್ತವಾಗಿದೆ. ಬಹಳಷ್ಟು ಆಸ್ಪತ್ರೆಗಳು ಸ್ಟೆಂಟ್‍ಗಳಿಗೆ ಭಾರೀ ದರವನ್ನು ವಿಧಿಸಿ ರೋಗಿಗಳಿಂದ ಹಣವನ್ನು ಲೂಟಿ ಮಾಡುತ್ತಿದ್ದವು. ಸರ್ಕಾರ ಸ್ಟೆಂಟ್ ಗಳ ಬೆಲೆಯನ್ನು ಇಳಿಸಿದ ಬಳಿಕ ಶಸ್ತ್ರಚಿಕಿತ್ಸೆಗೆ ಬಳಕೆಯಾಗುತ್ತಿರುವ ಕ್ಯಾಥೆಟ್ರೆಸ್, ಬಲೂನ್ ಗಳು, ಗೈಡ್ ವಯರ್ ಗಳ ಬೆಲೆ ಏರಿಕೆಯಾಗಿದೆ. ಸ್ಟೆಂಟ್ ಗಳಿಗಿಂತಲೂ ಈಗ ಇವುಗಳ ಬೆಲೆ ಜಾಸ್ತಿಯಾಗಿದೆ. ಇವುಗಳ ಬೆಲೆಯನ್ನು ನಿಯಂತ್ರಿಸಲು ಸರ್ಕಾರದ ಬಳಿ ಕಾನೂನು ಇಲ್ಲದ ಕಾರಣ ಆಸ್ಪತ್ರೆಗಳು ರೋಗಿಗಳಿಂದ ಜಾಸ್ತಿ ಹಣವನ್ನು ಪಡೆಯುತ್ತಿದೆ.

    ಆಲ್ ಇಂಡಿಯಾ ಡ್ರಗ್ ಆ್ಯಕ್ಷನ್ ನೆಟ್‍ವರ್ಕ್(ಎಐಡಿಎಎನ್) ತನ್ನ ಹೇಳಿಕೆಯನ್ನು ಪ್ರಕಟಿಸಿ ಎನ್‍ಪಿಪಿಎ ನಿರ್ಧಾರವನ್ನು ಸ್ವಾಗತಿಸಿದೆ. ಅಲ್ಲದೇ ಆಸ್ಪತ್ರೆಗಳು ಆಂಜಿಯೋ ಪ್ಲಾಸ್ಟ್ ಹೆಸರಲ್ಲಿ ಹಣವನ್ನು ರೋಗಿಗಳಿಂದ ಲೂಟಿ ಮಾಡುತ್ತಿರುವ ಬಗ್ಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ(ಸಿಸಿಐ) ತನಿಖೆ ನಡೆಸಬೇಕೆಂದು ಎನ್‍ಪಿಇಎಗೆ ಪತ್ರದ ಮೂಲಕ ಬೇಡಿಕೆ ಇಟ್ಟಿದೆ.

  • 2021ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತದಿಂದ ಕೈತಪ್ಪುತ್ತಾ?

    2021ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತದಿಂದ ಕೈತಪ್ಪುತ್ತಾ?

    ನವದೆಹಲಿ: ಐಸಿಸಿ ಪೂರ್ವ ನಿಗದಿತ ನಿಯಮಗಳಂತೆ 2021 ರ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಭಾರತದಲ್ಲಿ ಆಯೋಜನೆಗೊಳ್ಳಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರ ಟೂರ್ನಿಗೆ ತೆರಿಗೆ ವಿನಾಯಿತಿ ನಿರಾಕರಿಸಿದ ಕಾರಣ ಟೂರ್ನಿಯನ್ನು ಬೇರೆಡೆ ಸ್ಥಳಾಂತರಿಸಲು ಐಸಿಸಿ ಚಿಂತನೆ ನಡೆಸಿದೆ ಎನ್ನಲಾಗಿದೆ.

    ಈ ಕುರಿತು ಐಸಿಸಿ, ಬಿಸಿಸಿಐ ಭಾರತ ಸರ್ಕಾರದ ಜೊತೆ ತೆರಿಗೆ ವಿನಾಯಿತಿ ಪಡೆಯುವ ಕುರಿತು ಮಾತುಕತೆ ನಡೆಸುವಂತೆ ಸೂಚಿಸಿದೆ. ಒಂದು ವೇಳೆ ಸರ್ಕಾರದೊಂದಿಗೆ ಮಾತುಕತೆ ವಿಫಲವಾದರೆ ಅನಿರ್ವಾಯವಾಗಿ ಬೇರೆಡೆ ಟೂರ್ನಿಯನ್ನು ಆಯೋಜನೆ ಮಾಡಬೇಕಾಗುತ್ತದೆ ಎಂದು ತಿಳಿಸಿದೆ.

    ಇದೇ ಮೊದಲಲ್ಲ: 2002 ರಲ್ಲಿ ಭಾರತದಲ್ಲಿ ಆಯೋಜನೆ ಮಾಡಬೇಕಾಗಿದ್ದ ಐಸಿಸಿ ಚಾಂಪಿಯನ್ಸ್ ಟೂರ್ನಿ ವೇಳೆಯೂ ಕೇಂದ್ರ ಸರ್ಕಾರ ತೆರಿಗೆ ವಿನಾಯಿತಿ ನೀಡಲು ನಿರಾಕರಿಸಿತ್ತು. ಈ ವೇಳೆ ಐಸಿಸಿ ಟೂರ್ನಿಯನ್ನು ಶ್ರೀಲಂಕಾ ಕ್ಕೆ ವರ್ಗಾವಣೆ ಮಾಡಿತ್ತು. ಈ ಟೂರ್ನಿಯಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಫೈನಲ್ ಪ್ರವೇಶ ಪಡೆದಿದ್ದವು. ಶ್ರೀಲಂಕಾ 7 ವಿಕೆಟಿಗೆ 222 ರನ್ ಮಾಡಿದರೆ, ಗುರಿ ಬೆನ್ನತ್ತಿದ್ದ ಭಾರತಕ್ಕೆ 9ನೇ ಓವರ್ ವೇಳೆ ಮಳೆ ಅಡ್ಡಿ ಪಡಿಸಿತ್ತು. ಭಾರತ ಈ ವೇಳೆ ಒಂದು ವಿಕೆಟ್ ಗೆ 38 ರನ್ ಗಳಿಸಿತ್ತು. ಕೊನೆಗೆ ಫೈನಲ್ ಪಂದ್ಯ ಸಂಪೂರ್ಣ ಮಳೆಯಿಂದ ರದ್ದಾಗಿ ಇತ್ತಂಡಗಳು ಪ್ರಶಸ್ತಿಯನ್ನು ಹಂಚಿಕೊಂಡಿತ್ತು.

    ಐಸಿಸಿ ತನ್ನ ಪರಿಷ್ಕೃತ ಆರ್ಥಿಕ ವರ್ಷದ ಮೊತ್ತದಲ್ಲಿ ಅಫ್ಘಾನಿಸ್ತಾನ ಮತ್ತು ಐರ್ಲೆಂಡ್ ತಂಡಗಳಿಗೆ ಹೆಚ್ಚಿನ ಅನುದಾನ ನೀಡಿದೆ. 2017 ಜೂನ್ ನಿಂದ ಇತ್ತಂಡಗಳಿಗೂ ಶಾಶ್ವತ ಸದಸ್ಯತ್ವ ನೀಡಿರುವ ಕುರಿತ ಮಾಹಿತಿ ನೀಡಿದೆ. ವಾರ್ಷಿಕವಾಗಿ ಐಸಿಸಿ ಸುಮಾರು 40 ಸಾವಿರ ಅಮೆರಿಕನ್ ಡಾಲರ್( ಅಂದಾಜು 256 ಕೋಟಿ ರೂ.) ಪಡೆಯುವ ಸಾಧ್ಯತೆ ಇದೆ.

  • ಕರ್ನಾಟಕ ಹೈಕೋರ್ಟ್ ಗೆ ಜಡ್ಜ್ ನೇಮಿಸಿ: ಕಾನೂನು ಸಚಿವರಲ್ಲಿ ಡಿವಿಎಸ್ ಮನವಿ

    ಕರ್ನಾಟಕ ಹೈಕೋರ್ಟ್ ಗೆ ಜಡ್ಜ್ ನೇಮಿಸಿ: ಕಾನೂನು ಸಚಿವರಲ್ಲಿ ಡಿವಿಎಸ್ ಮನವಿ

    ನವದೆಹಲಿ: ಕರ್ನಾಟಕ ಹೈ ಕೋರ್ಟ್ ನಲ್ಲಿ ಖಾಲಿ ಇರುವ ನ್ಯಾಯಾಧೀಶ ಹುದ್ದೆಗಳನ್ನು ಭರ್ತಿ ಮಾಡುವಂತೆ ಕೇಂದ್ರದ ಮಾಜಿ ಕಾನೂನು ಸಚಿವ ಹಾಲಿ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಸದಾನಂದ ಗೌಡ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರಲ್ಲಿ ಮನವಿ ಮಾಡಿದ್ದಾರೆ.

    ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆಗಳನ್ನು ಭರ್ತಿಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಹೈಕೋರ್ಟ್ ನಲ್ಲಿ ಹಿರಿಯ ವಕೀಲರು ನಡೆಸುತ್ತಿರುವ ಸರಣಿ ಉಪವಾಸ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಇಂದು ಸದಾನಂದಗೌಡ ಮತ್ತು ರವಿಶಂಕರ್ ಪ್ರಸಾದ್ ಚರ್ಚಿಸಿದರು. ಸದಾನಂದಗೌಡರು ಈ ಕುರಿತು ವಿವರಗಳನ್ನು ಕಾನೂನು ಸಚಿವರಿಗೆ ನೀಡಿ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದರು.

    ಸತ್ಯಾಗ್ರಹಕ್ಕೆ ಸ್ಟೇಜ್ ಹಾಕಿರುವ ಅಡ್ವೋಕೇಟ್ಸ್ ಅಸೋಸಿಯೇಷನ್ ಆಫ್ ಬೆಂಗಳೂರು(ಎಎಬಿ) ಬೆಳಗ್ಗೆ 10:30 ರಿಂದ 5:30 ರ ವರೆಗೆ ಒಂದು ವಾರದ ಕಾಲ ಧರಣಿ ಮಾಡಲಿದ್ದು, ಪ್ರತಿಭಟನೆಗೆ ಸರ್ಕಾರ ಮಣಿಯದೆ ಹೋದರೆ ಇಡೀ ರಾಜ್ಯಾದ್ಯಂತ ಕೋರ್ಟ್ ಕಲಾಪ ಬಹಿಷ್ಕಾರ ಮಾಡುವುದಾಗಿ ಹಿರಿಯ ವಕೀಲರು ಎಚ್ಚರಿಕೆ ನೀಡಿದ್ದಾರೆ.

    ಬೇಡಿಕೆ ಏನು?
    ಹೈಕೋರ್ಟ್ ನ್ಯಾಯಾಧೀಶ ಹುದ್ದೆ ಖಾಲಿ ಇರುವುದರಿಂದ ಸುಮಾರು 3 ಲಕ್ಷ ಪ್ರಕರಣಗಳು ವಿಲೇವಾರಿಯಾಗದೇ ಉಳಿದಿದ್ದು, ವಕೀಲರಿಗೆ ಹಾಗೂ ಕಕ್ಷಿದಾರರಿಗೆ ನ್ಯಾಯದಾನ ವಿಳಂಬವಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಬೆಂಗಳೂರು ವಕೀಲರ ಸಂಘವು ರಾಷ್ಟ್ರಪತಿ, ಪ್ರಧಾನ ಮಂತ್ರಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಕೇಂದ್ರ ಕಾನೂನು ಮಂತ್ರಿ ಮತ್ತು ಅಟಾರ್ನಿ ಜನರಲ್ ಅವರಿಗೆ ಕರ್ನಾಟಕ ಹೈಕೋರ್ಟ್ ಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ಮನವಿ ಸಲ್ಲಿಸಿದ್ದರೂ ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ.

    ಸುಪ್ರೀಂ ಕೋರ್ಟ್ ಕರ್ನಾಟಕದ ಹೈಕೋರ್ಟ್ ಗೆ 62 ನ್ಯಾಯಮೂರ್ತಿಗಳನ್ನು ಅನುಮೋದಿಸಿದೆ. ಪ್ರಸ್ತುತ 24 ನ್ಯಾಯಮೂರ್ತಿಗಳೂ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ 8 ನ್ಯಾಯಮೂರ್ತಿಗಳು ಧಾರವಾಡ ಮತ್ತು ಕಲಬುರುಗಿ ಸಂಚಾರಿ ಪೀಠದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಿನ್ಸಿಪಲ್ ಬೆಂಚ್‍ನಲ್ಲಿ 16 ನ್ಯಾಯಮೂರ್ತಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ 38 ನ್ಯಾಯಮೂರ್ತಿಗಳ ಹುದ್ದೆ ಖಾಲಿ ಇದೆ.

    ನೆರೆಯ ರಾಜ್ಯದ ಹೈಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಗೆ ಹೋಲಿಸಿದರೆ ರಾಜ್ಯದ ಹೈಕೋರ್ಟ್ ನಲ್ಲಿ ಸುಮಾರು ಶೇ.60 ರಷ್ಟು ಹುದ್ದೆಗಳು ಖಾಲಿ ಇವೆ. ಕೇಂದ್ರ ಸರ್ಕಾರ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನ್ಯಾಯಮೂರ್ತಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಿದ್ದು, ಪ್ರಕರಣಗಳು ನಿಗದಿತ ಸಮಯಕ್ಕೆ ನ್ಯಾಯಾಲಯದಲ್ಲಿ ವಿಚಾರಣೆಗೆ ಬರದೆ ಕಕ್ಷಿದಾರರಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಅವರಿಗೆ ನ್ಯಾಯಾಂಗದ ಮೇಲೆ ನಂಬಿಕೆ ಕ್ರಮೇಣ ಕಡಿಮೆಯಾಗುತ್ತಿದೆ.

  • ಉಪವಾಸ ಸತ್ಯಾಗ್ರಹ ಆರಂಭಿಸಿದ ಹೈಕೋರ್ಟ್ ಹಿರಿಯ ವಕೀಲರು

    ಉಪವಾಸ ಸತ್ಯಾಗ್ರಹ ಆರಂಭಿಸಿದ ಹೈಕೋರ್ಟ್ ಹಿರಿಯ ವಕೀಲರು

    ಬೆಂಗಳೂರು: ಹೈಕೋರ್ಟ್ ನ್ಯಾಯಾಧೀಶರ ಶೀಘ್ರ ನೇಮಕಾತಿಗೆ ಆಗ್ರಹಿಸಿ ಹಿರಿಯ ವಕೀಲರು ಹೈಕೋರ್ಟ್ ಬಳಿಯ ಗೋಲ್ಡನ್ ಜ್ಯೂಬ್ಲಿ ಗೇಟ್ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

    ಮಾಜಿ ಅಡ್ವೊಕೇಟ್ ಜನರಲ್ ಬಿವಿ ಆಚಾರ್ಯ ಜೊತೆ ಹಿರಿಯ ವಕೀಲರಾದ ಸಜ್ಜನ್ ಪೂವಯ್ಯ, ನಂಜುಂಡ ರೆಡ್ಡಿ, ಬಿಎಲ್ ಜಗದೀಶ್ ಸೇರಿದಂತೆ ಹಲವು ಮಂದಿ ಭಾಗವಹಿಸಿ ಪ್ರತಿಭಟಿಸಿದ್ದರು.

    ಕೇಂದ್ರ ಸರ್ಕಾರ ಹೈಕೋರ್ಟ್‍ಗೆ ನ್ಯಾಯಮೂರ್ತಿಗಳ ಭರ್ತಿ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ. ಇದರಿಂದ ಕರ್ನಾಟಕದಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡಲು ಮೀನಮೇಷ ಎಣಿಸುತ್ತಿದೆ ಎಂದು ಹಿರಿಯ ವಕೀಲರು ಆರೋಪ ಮಾಡಿದರು. ಧರಣಿ ನಿರತ ಸ್ಥಳಕ್ಕೆ ಮಾಜಿ ಕಾನೂನು ಸಚಿವ, ಹಾಲಿ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಸದಾನಂದಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಕೇಂದ್ರ ಸರ್ಕಾರದ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸೋ ನಿಟ್ಟಿನಲ್ಲಿ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.

    ಸತ್ಯಾಗ್ರಹಕ್ಕೆ ಸ್ಟೇಜ್ ಹಾಕಿರುವ ಅಡ್ವೋಕೇಟ್ಸ್ ಅಸೋಸಿಯೇಷನ್ ಆಫ್ ಬೆಂಗಳೂರು(ಎಎಬಿ) ಬೆಳಗ್ಗೆ 10:30 ರಿಂದ 5:30 ರ ವರೆಗೆ ಒಂದು ವಾರದ ಕಾಲ ಧರಣಿ ಮಾಡಲಿದ್ದು, ಪ್ರತಿಭಟನೆಗೆ ಸರ್ಕಾರ ಮಣಿಯದೆ ಹೋದರೆ ಇಡೀ ರಾಜ್ಯಾದ್ಯಂತ ಕೋರ್ಟ್ ಕಲಾಪ ಬಹಿಷ್ಕಾರ ಮಾಡುವುದಾಗಿ ಹಿರಿಯ ವಕೀಲರು ಎಚ್ಚರಿಕೆ ನೀಡಿದ್ದಾರೆ.

    ಬೇಡಿಕೆ ಏನು? ಹೈಕೋರ್ಟ್ ನ್ಯಾಯಾಧೀಶ ಹುದ್ದೆ ಖಾಲಿ ಇರುವುದರಿಂದ ಸುಮಾರು 3 ಲಕ್ಷ ಪ್ರಕರಣಗಳು ವಿಲೇವಾರಿಯಾಗದೇ ಉಳಿದಿದ್ದು, ವಕೀಲರಿಗೆ ಹಾಗೂ ಕಕ್ಷಿದಾರರಿಗೆ ನ್ಯಾಯದಾನ ವಿಳಂಬವಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಬೆಂಗಳೂರು ವಕೀಲರ ಸಂಘವು ರಾಷ್ಟ್ರಪತಿ, ಪ್ರಧಾನ ಮಂತ್ರಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಕೇಂದ್ರ ಕಾನೂನು ಮಂತ್ರಿ ಮತ್ತು ಅಟಾರ್ನಿ ಜನರಲ್ ಅವರಿಗೆ ಕರ್ನಾಟಕ ಹೈಕೋರ್ಟ್ ಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ಮನವಿ ಸಲ್ಲಿಸಿದ್ದರೂ ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ.

    ಸುಪ್ರೀಂ ಕೋರ್ಟ್ ಕರ್ನಾಟಕದ ಹೈಕೋರ್ಟ್ ಗೆ 62 ನ್ಯಾಯಮೂರ್ತಿಗಳನ್ನು ಅನುಮೋದಿಸಿದೆ. ಪ್ರಸ್ತುತ 24 ನ್ಯಾಯಮೂರ್ತಿಗಳೂ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ 8 ನ್ಯಾಯಮೂರ್ತಿಗಳು ಧಾರವಾಡ ಮತ್ತು ಕಲಬುರುಗಿ ಸಂಚಾರಿ ಪೀಠದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಿನ್ಸಿಪಲ್ ಬೆಂಚ್‍ನಲ್ಲಿ 16 ನ್ಯಾಯಮೂರ್ತಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ 38 ನ್ಯಾಯಮೂರ್ತಿಗಳ ಹುದ್ದೆ ಖಾಲಿ ಇದೆ.

    ನೆರೆಯ ರಾಜ್ಯದ ಹೈಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಗೆ ಹೋಲಿಸಿದರೆ ರಾಜ್ಯದ ಹೈಕೋರ್ಟ್ ನಲ್ಲಿ ಸುಮಾರು ಶೇ.60 ರಷ್ಟು ಹುದ್ದೆಗಳು ಖಾಲಿ ಇವೆ. ಕೇಂದ್ರ ಸರ್ಕಾರ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನ್ಯಾಯಮೂರ್ತಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಿದ್ದು, ಪ್ರಕರಣಗಳು ನಿಗದಿತ ಸಮಯಕ್ಕೆ ನ್ಯಾಯಾಲಯದಲ್ಲಿ ವಿಚಾರಣೆಗೆ ಬರದೆ ಕಕ್ಷಿದಾರರಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಅವರಿಗೆ ನ್ಯಾಯಾಂಗದ ಮೇಲೆ ನಂಬಿಕೆ ಕ್ರಮೇಣ ಕಡಿಮೆಯಾಗುತ್ತಿದೆ.

    ಕಣ್ಣೀರಿಟ್ಟಿದ್ದ ಸಿಜೆ: 2016ರ ನರೇಂದ್ರ ಮೋದಿ ಅವರ ಸ್ವಾತಂತ್ರ್ಯ ಭಾಷಣದಲ್ಲಿ ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರವನ್ನು ಪ್ರಸ್ತಾಪ ಮಾಡದಕ್ಕೆ ಅಂದಿನ ಮುಖ್ಯ ನ್ಯಾಯಾಧೀಶರಾಗಿದ್ದ ಟಿ.ಎಸ್.ಠಾಕೂರ್ ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ನ್ಯಾಯಾಲಯಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸುವಲ್ಲಿ ಕೇಂದ್ರ ಸರ್ಕಾರದ ವಿಳಂಬ ನೀತಿಯಿಂದ ಬೇಸರಗೊಂಡು ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೆದುರೇ ಟಿ.ಎಸ್.ಠಾಕೂರ್ ಗದ್ಗದಿತರಾಗಿ ಕಣ್ಣೀರಿಟ್ಟಿದ್ದರು.

  • ಈ ವರ್ಷದಿಂದಲೇ ಮುಸ್ಲಿಮರಿಗೆ ನೀಡಲಾಗ್ತಿದ್ದ ಹಜ್ ಸಬ್ಸಿಡಿ ರದ್ದು: ಅಬ್ಬಾಸ್ ನಖ್ವಿ

    ಈ ವರ್ಷದಿಂದಲೇ ಮುಸ್ಲಿಮರಿಗೆ ನೀಡಲಾಗ್ತಿದ್ದ ಹಜ್ ಸಬ್ಸಿಡಿ ರದ್ದು: ಅಬ್ಬಾಸ್ ನಖ್ವಿ

    ನವದೆಹಲಿ: ಹಜ್ ಯಾತ್ರೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡುತ್ತಿದ್ದ ಸಹಾಯಧನ ಈ ವರ್ಷದಿಂದ ರದ್ದಾಗಿದೆ ಎಂದು ಮಂಗಳವಾರ ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.

    ಕೇಂದ್ರ ಸರ್ಕಾರ ರಚಿಸಿದ ಸಮಿತಿಯ ಶಿಫಾರಸುಗಳ ಜಾರಿ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿ ಮಾತನಾಡಿದ ಅವರು, 2018 ರಿಂದಲೇ ಹಜ್ ಯಾತ್ರೆಗೆ ನೀಡುತ್ತಿದ್ದ ಸಹಾಯಧನವನ್ನು ರದ್ದು ಪಡಿಸಲಾಗಿದ್ದು, ಈ ಹಣವನ್ನು ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಮಹಿಳೆಯರ ಅಭಿವೃದ್ಧಿಗೆ ಬಳಸುವುದಾಗಿ ತಿಳಿಸಿದರು.

    ಕೇಂದ್ರ ಸರ್ಕಾರ ಈಗಾಗಲೇ ಮುಸ್ಲಿಂ ಮಹಿಳೆಯರ ಹಜ್ ಯಾತ್ರೆಗೆ ಸಂಬಂಧಿಸಿದಂತೆ 45ಕ್ಕಿಂತ ಹೆಚ್ಚು ವರ್ಷ ವಯಸ್ಸಾಗಿರುವ ಮಹಿಳೆಯರು ಪುರುಷರು ಜೊತೆ ಇಲ್ಲದೆ ಕನಿಷ್ಠ ನಾಲ್ಕು ಮಂದಿಯ ಗುಂಪಿನಲ್ಲಿ ಹೋಗುವುದಕ್ಕೆ ಅವಕಾಶ ಕಲ್ಪಿಸಿದ ಮರು ದಿನವೇ ಸಬ್ಸಿಡಿ ರದ್ದು ಮಾಡುವ ನಿರ್ಣಯವನ್ನು ಘೋಷಿಸಿದೆ.

    ಕೇಂದ್ರ ಅಲ್ಪಸಂಖ್ಯಾತ ಅಭಿವೃದ್ಧಿ ಸಚಿವಾಲಯ ಕಳೆದ ವರ್ಷ ಹಜ್ ಯಾತ್ರೆ ಕೈಗೊಳ್ಳುವ 2018-22 ರ ವರ್ಷದ ನಿಯಮಗಳನ್ನು ರೂಪಿಸಲು ಕೇಂದ್ರದ ಮಾಜಿ ಕಾರ್ಯದರ್ಶಿ ಅಫ್ಜಲ್ ಅಮಾನುಲ್ಲಾ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಿತ್ತು. ಈ ಸಮಿತಿ ನೀಡಿದ ಶಿಪಾರಸ್ಸುಗಳ ಆಧಾರದ ಮೇಲೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

    ಅಫ್ಜಲ್ ಅಮಾನುಲ್ಲಾ ಸಮಿತಿಯ ಶಿಫಾರಸ್ಸುಗಳ ಆಧಾರದ ಮೇಲೆ 2018ರ ಹಜ್ ಯಾತ್ರೆಯು ಹೊಸ ನಿಯಮಗಳು ರೂಪುಗೊಳ್ಳುತ್ತವೆ. ಈ ಸಮಿತಿಯ ನಿಯಮಗಳು ಉತ್ತಮವಾಗಿದ್ದು, ಪಾರದರ್ಶಕ ಮತ್ತು ಜನಸ್ನೇಹಿಯಾಗಿವೆ. ಅಲ್ಲದೇ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಿಕರ ಸುರಕ್ಷತೆ ಮತ್ತು ಭದ್ರತೆಯನ್ನು ಖಾತರಿಪಡಿಸುತ್ತದೆ. ಅಲ್ಲದೇ ಈ ನಿಯಮಗಳು ಅಲ್ಪ ಸಂಖ್ಯಾತರ ಘನತೆ ಹಾಗೂ ಮನಃಪೂರ್ವಕವಾಗಿ ಅಧಿಕಾರ ನೀಡುವುದು ಸಮಿತಿ ನೀತಿ ಭಾಗವಾಗಿದೆ ಎಂದು ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಸ್ಪಷ್ಟಪಡಿಸಿದರು.

    ಸೌದಿ ಸರ್ಕಾರದ ಜೊತೆ ರಾಜತಾಂತ್ರಿಕ ಸಂಬಂಧ ಈಗ ಮತ್ತಷ್ಟು ಉತ್ತಮವಾಗಿರುವ ಕಾರಣ 2018ರಲ್ಲಿ ಹೆಚ್ಚುವರಿಯಾಗಿ 5 ಸಾವಿರ ಮಂದಿ ಯಾತ್ರೆಗೆ ಅವಕಾಶ ನೀಡಿದೆ. ಇದರಿಂದಾಗಿ ಈ ವರ್ಷ 1,75,025 ಮಂದಿ ಹಜ್ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹೆಚ್ಚುವರಿಯಾಗಿ 40 ಸಾವಿರ ಮಂದಿಗೆ ಅವಕಾಶ ಸಿಕ್ಕಿದ್ದು, ಸ್ವಾತಂತ್ರ್ಯ ಸಿಕ್ಕಿದ ಬಳಿಕ ಅತಿ ಹೆಚ್ಚು ಮಂದಿ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ನಖ್ವಿ ತಿಳಿಸಿದ್ದಾರೆ.

    ಕಾಂಗ್ರೆಸ್ ಅವಧಿಯಲ್ಲಿ 1,36,020 ಮಂದಿ ಹಜ್ ಯಾತ್ರೆಯನ್ನು ಕೈಗೊಂಡಿದ್ದರೆ ನಮ್ಮ ಸರ್ಕಾರದ ಅವಧಿಯಲ್ಲಿ ಈ ಸಂಖ್ಯೆ 1,75,025ಕ್ಕೆ ಏರಿಕೆಯಾಗಿದೆ ಎಂದು ನಖ್ವಿ ಹೇಳಿದರು.

    ರೋಷನ್ ಬೇಗ್ ಸ್ವಾಗತ: ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ರಾಜ್ಯ ವಕ್ಫ್ ಖಾತೆಯ ಸಚಿವ ರೋಷನ್ ಬೇಗ್ ಹೇಳಿದ್ದಾರೆ. ಹಜ್ ಪವಿತ್ರ ಯಾತ್ರೆಯಾಗಿದ್ದು, ಬೇರೆಯವರಿಂದ ಸಹಾಯ ಪಡೆದು ಯಾತ್ರೆ ಹೋಗಬಾರದು ಎಂದು ಅವರು ಅಭಿಪ್ರಾಯಪಟ್ಟರು.

    ಸುಪ್ರೀಂಕೋರ್ಟ್ ಹೇಳಿದ್ದೇನು?
    ಹಜ್ ಸಬ್ಸಿಡಿ ಹೆಸರಿನಲ್ಲಿ ಭಾರೀ ಅಕ್ರಮಗಳು ನಡೆಯುತ್ತಿದ್ದು, ತಲುಪುಬೇಕಾದವರಿಗೆ ಸಹಾಯಧನ ತಲುಪದೇ ಬೇರೆ ಯಾರಿಗೋ ತಲುಪುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿತ್ತು. 2022ರೊಳಗಾಗಿ ಹಜ್ ಸಬ್ಸಿಡಿಯನ್ನು ಹಂತ ಹಂತವಾಗಿ ಸ್ಥಗಿತಗೊಳ್ಳಿಸಬೇಕೆಂದು 2012ರಲ್ಲಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು. ಖರ್ಚುಗಳನ್ನು ಭರಿಸಲು ಸಾಧ್ಯವಿರುವ ಮಂದಿ ಮಾತ್ರ ಹಜ್ ಯಾತ್ರೆಯನ್ನು ಮಾಡಬೇಕು ಎಂದು ಕುರಾನ್ ಹೇಳುತ್ತದೆ. ಹೀಗಾಗಿ ಸಬ್ಸಿಡಿ ಪಡೆದು ಯಾತ್ರೆ ಮಾಡುವುದು ಕುರಾನ್ ಬೋಧನೆಗೆ ವಿರುದ್ಧವಾಗುತ್ತದೆ ಅಲ್ಲವೇ ಎಂದು ಸುಪ್ರೀಂ ಪ್ರಶ್ನಿಸಿತ್ತು. ಹಜ್ ಯಾತ್ರೆಗೆ ಬಳಸುವ ಹಣವನ್ನು ಅಲ್ಪಸಂಖ್ಯಾತರ ಶಿಕ್ಷಣ, ಅಭಿವೃದ್ಧಿಗೆ ಬಳಸಬೇಕೆಂದು ಸಲಹೆ ನೀಡಿತ್ತು. 2012ರ ತನಕ ಪ್ರತೀ ವರ್ಷ ಹಜ್ ಯಾತ್ರೆಗೆ ಸುಮಾರು 650 ಕೋಟಿ ರೂ. ಮೀಸಲಿಡಲಾಗುತ್ತಿತ್ತು. ಸುಪ್ರೀಂ ಆದೇಶ ಬಳಿಕ ಇದನ್ನು 450 ಕೋಟಿ ರೂ. ಗೆ ಕಡಿತಗೊಳಿಸಲಾಗಿತ್ತು.

    ಅಫ್ಜಲ್ ಅಮಾನುಲ್ಲಾ ಸಮಿತಿಯ ಶಿಫಾರಸ್ಸುಗಳು ಏನಿತ್ತು?
    ಹಜ್ ಯಾತ್ರೆ ಕೈಗೊಳ್ಳಲು ಇದುವರೆಗೂ ವಿಮಾನ ಪ್ರಯಾಣದಲ್ಲಿ ಮಾತ್ರ ಅವಕಾಶ ನೀಡಲಾಗುತ್ತಿದೆ. ಇದರ ಜೊತೆಗೆ ಹಡಗು ಯಾನದ ಮೂಲಕ ಹಜ್ ಯಾತ್ರೆ ಕೈಗೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು.

    ಯಾತ್ರೆಯ ವೇಳೆ ಮಹಿಳೆಯ ಯಾತ್ರಿಕರ ಜೊತೆ ಪುರುಷ ಸಂಬಂಧಿ ಇರಬೇಕು ಎಂಬ ನಿಯಮವನ್ನು ರದ್ದಾಗಬೇಕು. 45ಕ್ಕಿಂತ ಹೆಚ್ಚು ವರ್ಷ ಮೇಲ್ಪಟ್ಟ ಮಹಿಳೆಯರು ಪುರುಷರು ಜೊತೆ ಇಲ್ಲದೆ ಕನಿಷ್ಠ, ನಾಲ್ಕು ಮಂದಿಯ ಗುಂಪಿನಲ್ಲಿ ಹೋಗುವುದಕ್ಕೆ ಅವಕಾಶ ಕಲ್ಪಿಸಿಕೊಡಬೇಕು.

  • ಶೀಘ್ರವೇ ನಿಮ್ಮ ಕೈ ಸೇರಲಿದೆ 10 ರೂ. ಮುಖ ಬೆಲೆ ಹೊಸ ನೋಟು

    ಶೀಘ್ರವೇ ನಿಮ್ಮ ಕೈ ಸೇರಲಿದೆ 10 ರೂ. ಮುಖ ಬೆಲೆ ಹೊಸ ನೋಟು

    ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶೀಘ್ರವೇ 10 ರೂ. ಮುಖ ಬೆಲೆಯ ಹೊಸ ವಿನ್ಯಾಸದ ನೋಟುಗಳನ್ನು ಬಿಡುಗಡೆಗೊಳಿಸಲಿದೆ ಎಂದು ಮಾಧ್ಯವೊಂದು ವರದಿ ಮಾಡಿದೆ.

    ಮಾಧ್ಯಮ ವರದಿಯ ಪ್ರಕಾರ, ಕಳೆದ ವಾರ ಆರ್ ಬಿಐ ಕೇಂದ್ರ ಸರ್ಕಾರದಿಂದ ಹೊಸ 10 ರೂ ಮುಖ ಬೆಲೆಯ ನೋಟು ಮುದ್ರಣದ ವಿನ್ಯಾಸಕ್ಕೆ ಅನುಮತಿ ಪಡೆದಿದ್ದು, ಈಗಾಗಲೇ ಅಂದಾಜು 100 ಕೋಟಿ 10 ರೂ. ನೋಟುಗಳನ್ನು ಮುದ್ರಣ ಮಾಡಿದೆ ಎನ್ನಲಾಗಿದೆ.

    ನೋಟಿನ ವಿಶೇಷತೆ ಏನು?
    ಹತ್ತು ರೂ. ಹೊಸ ನೋಟಿನಲ್ಲಿ ಗಾಂಧಿ ಭಾವ ಚಿತ್ರ ಇರಲಿದ್ದು, ನೋಟಿನ ಹಿಂಭಾಗದಲ್ಲಿ ಒಡಿಶಾದ ಕೊನಾರ್ಕ್ ಸೂರ್ಯ ದೇವಾಲಯದ ಚಿತ್ರವಿರಲಿದೆ. ಅಲ್ಲದೇ ನೋಟು ಚಾಕೊಲೇಟ್ ಹಳದಿ ಬಣ್ಣವನ್ನು ಹೊಂದಿರಲಿದೆ.

    2016ರ ನವೆಂಬರ್ 8 ರಂದು 1 ಸಾವಿರ ರೂ. ಹಾಗೂ 500 ರೂ. ನೋಟು ನಿಷೇಧದ ಬಳಿಕ ಆರ್ ಬಿಐ ಹೊಸ 500 ರೂ. 2 ಸಾವಿರ ಮುಖ ಬೆಲೆಯ ನೋಟುಗಳನ್ನು ಬಿಡುಗಡೆಗೊಳಿಸಿತ್ತು. ನೋಟ್ ಬ್ಯಾನ್ ಬಳಿಕ ಸೃಷ್ಟಿಯಾಗಿದ್ದ ಚಿಲ್ಲರೆ ಸಮಸ್ಯೆಯನ್ನು ಬಗೆ ಹರಿಸಲು ಆಗಸ್ಟ್ ತಿಂಗಳಿನಲ್ಲಿ ಆರ್ ಬಿಐ ಹೊಸ 200 ರೂ. ಹಾಗೂ 50 ರೂ. ಮುಖ ಬೆಲೆಯ ನೋಟುಗಳನ್ನು ಬಿಡುಗಡೆಗೊಳಿಸಿತ್ತು. 200 ರೂ. ಮುಖ ಬೆಲೆ ನೋಟಿನಲ್ಲಿ ಭಾರತದ ಸಂಸ್ಕೃತಿ ಪರಂಪರೆ ತಿಳಿಸುವ ಸಲುವಾಗಿ ಸಾಂಚಿ ಸೂಪ್ತವನ್ನು ಮುದ್ರಿಸಿದ್ದರೆ, 50 ರೂ. ನೋಟಿನಲ್ಲಿ ಹಂಪಿಯ ಕಲ್ಲಿನ ರಥದ ಚಿತ್ರವನ್ನು ಮುದ್ರಿಸಲಾಗಿತ್ತು.

    ಈ ಹಿಂದೆ 2005ರಲ್ಲಿ 10 ರೂ. ಮುಖ ಬೆಲೆಯ ಹೊಸ ನೋಟುಗಳನ್ನು ಆರ್‍ ಬಿಐ ಬಿಡುಗಡೆ ಮಾಡಿತ್ತು.

  • ಕಾರಿನಲ್ಲಿ ಕ್ರಾಶ್ ಗಾರ್ಡ್ ಬ್ಯಾನ್: ಅಳವಡಿಸಿದ್ರೆ ಬೀಳುತ್ತೆ ಭಾರೀ ದಂಡ!

    ಕಾರಿನಲ್ಲಿ ಕ್ರಾಶ್ ಗಾರ್ಡ್ ಬ್ಯಾನ್: ಅಳವಡಿಸಿದ್ರೆ ಬೀಳುತ್ತೆ ಭಾರೀ ದಂಡ!

    ನವದೆಹಲಿ: ಕಾರ್ ಹಾಗೂ ಇತರೇ ವಾಹನಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ಬುಲ್ ಬಾರ್ ಅಥವಾ ಕ್ರಾಶ್ ಗಾರ್ಡ್ ಗಳನ್ನು ತೆಗೆಯಲು ತಕ್ಷಣವೇ ಕ್ರಮಕೈಗೊಳ್ಳಬೇಕೆಂದು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ಹೊರಡಿಸಿದೆ.

    ರಸ್ತೆ ಅಪಘಾತದ ಹೆಚ್ಚಿನ ಸಮಯದಲ್ಲಿ ವಾಹನಗಳಿಗೆ ಅಳವಡಿಸಿರುವ ಬುಲ್ ಬಾರ್‍ ಗಳಿಂದ ಪಾದಚಾರಿಗಳಿಗೆ ಹೆಚ್ಚು ಅಪಾಯವಾಗುತ್ತಿದೆ ಎಂದು ತಿಳಿಸಿರುವ ಸಚಿವಾಲಯ ತಕ್ಷಣವೇ ವಾಹನಗಳಲ್ಲಿ ಅಳವಡಿಸಿರುವ ಕ್ರಾಶ್ ಗಾರ್ಡ್ ಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದೆ. ಅಲ್ಲದೇ ಬುಲ್ ಬಾರ್ ಅಳವಡಿಸಿರುವ ವಾಹನಗಳಿಗೆ ಭಾರೀ ದಂಡವನ್ನು ವಿಧಿಸಲು ಅವಕಾಶವನ್ನು ನೀಡಿದೆ.

     

    ಏನಿದು ಕ್ರಾಶ್ ಗಾರ್ಡ್?
    ವಾಹನಗಳಿಗೆ ಸಣ್ಣ ಅಪಘಾತದ ಸಮಯದಲ್ಲಿ ಹೆಚ್ಚಿನ ಹಾನಿಯಾಗದಿರಲಿ ಎಂಬ ಕಾರಣಕ್ಕೆ ಹಾಗೂ ವಾಹನಗಳ ಅಂದವನ್ನು ಹೆಚ್ಚಿಸಲು ಬುಲ್ ಬಾರ್ ಅಥವಾ ಕ್ರಾಶ್ ಗಾರ್ಡ್ ಗಳನ್ನು ಅಳವಡಿಸಲಾಗುತ್ತದೆ. ಕಾರು, ಎಸ್‍ಯುವಿ, ಪಿಕಪ್, ಬಸ್, ಟ್ರಕ್ ಗಳಲ್ಲಿ ಕ್ರಾಶ್ ಗಾರ್ಡ್ ಗಳನ್ನು ಅಳವಡಿಸಲಾಗುತ್ತದೆ. ಇವುಗಳನ್ನು ಕಬ್ಬಿಣ ಮತು ಫೈಬರ್ ನಿಂದ ತಯಾರಿಸಲಾಗುತ್ತದೆ. ಕೆಲವರು ಹೆಚ್ಚಿನ ಸಂಖ್ಯೆಯ ಲೈಟ್ ಗಳನ್ನು ಹಾಕಿ ವಾಹನದ ಅಂದವನ್ನು ಹೆಚ್ಚಿಸಲು ಈ ಕ್ರಾಶ್ ಗಾರ್ಡ್ ಅಳವಡಿಸುತ್ತಾರೆ.

    ಕಾನೂನು ಏನು ಹೇಳುತ್ತೆ?
    1988ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 52 ರ ಪ್ರಕಾರ ಯಾವುದೇ ರೀತಿಯ ವಾಹನಗಳಿಗೆ ಬುಲ್ ಬಾರ್ ಮತ್ತು ಕ್ರಾಶ್ ಗಾರ್ಡ್ ಅಳವಡಿಸುವುದನ್ನು ನಿಷೇಧಿಸಲಾಗಿದೆ. ಈ ಕಾರಣದಿಂದ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಈ ಕ್ರಮವನ್ನು ಕಟ್ಟುನಿಟ್ಟಾಗಿ ಜಾರಿಗೆ ಮಾಡಲು ರಾಜ್ಯ ಸರ್ಕಾರಿಗಳಿಗೆ ಪತ್ರ ಬರೆದಿದೆ.

    ಕೇಂದ್ರದ ಅದೇಶದ ಅನ್ವಯ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳು, ಆಯಾ ರಾಜ್ಯಗಳ ಸಾರಿಗೆ ಇಲಾಖೆ ಕಾರ್ಯದರ್ಶಿಗಳು ಮತ್ತು ಆಯುಕ್ತರು ಈ ಕುರಿತು ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೇ 1998 ರ ಕಾಯ್ದೆಯ 190, 191 ಸೆಕ್ಷನ್ ಗಳ ಅನ್ವಯ ಬುಲ್ ಬಾರ್ ಅಳವಡಸಿರುವ ವಾಹನ ಚಾಲಕ ಅಥವಾ ಮಾಲೀಕರಿಗೆ ದಂಡ ವಿಧಿಸುವ ಅವಕಾಶವನ್ನು ನೀಡಲಾಗಿದೆ.

    ನಿಷೇಧ ಯಾಕೆ?
    ಅಪಘಾತದ ಸಂದರ್ಭದಲ್ಲಿ ವಾಹನವನ್ನು ರಕ್ಷಿಸಲು ಮತ್ತು ಪಾದಾಚಾರಿಗಳು ವಾಹನ ಸವಾರರಿಗೆ ಗಂಭೀರವಾಗಿ ಏಟು ಬೀಳದೇ ಇರಲಿ ಎನ್ನುವ ಕಾರಣಕ್ಕೆ ಮುಂದುಗಡೆ ಫೈಬರ್ ಬಂಪರ್ ಅಳವಡಿಸಲಾಗುತ್ತದೆ. ಒಂದು ವೇಳೆ ವಾಹನ ಡಿಕ್ಕಿಯಾದಾಗ ಪಾದಾಚಾರಿಗಳು, ಸವಾರರು ಮೇಲಕ್ಕೆ ಚಿಮ್ಮಿ ಬಾನೆಟ್ ಮೇಲೆ ಬೀಳುವಂತೆ ಈ ಕ್ರಾಶ್ ಗಾರ್ಡ್ ವಿನ್ಯಾಸ ಮಾಡಲಾಗುತ್ತದೆ. ಆದರೆ ಅಪಘಾತದ ವೇಳೆ ವಾಹನಕ್ಕೆ ಡಿಕ್ಕಿ ಹೊಡೆಯುವ ಬೈಕ್ ಸವಾರರಿಗೆ, ಪಾದಚಾರಿಗಳಿಗೆ, ಪ್ರಾಣಿಗಳಿಗೆ ಹೆಚ್ಚಿನ ಪೆಟ್ಟು ಬೀಳುತ್ತದೆ. ಈ ಬಂಪರ್ ಬಿದ್ದ ನಂತರ ಪಾದಾಚಾರಿಗಳು ಮೇಲಕ್ಕೆ ಹಾರುವ ಬದಲು ಕೆಳಕ್ಕೆ ಬಿದ್ದು ಮೃತಪಡುವ ಸಾಧ್ಯತೆ ಹೆಚ್ಚಿರುತ್ತದೆ.

    ಎರಡನೇಯದಾಗಿ ಕಾರಿನಲ್ಲಿ ಡ್ರೈವರ್ ಮತ್ತು ಪ್ರಯಾಣಿಕರ ರಕ್ಷಣೆಗೆ ಏರ್ ಬ್ಯಾಗ್ ಇರುತ್ತದೆ. ಈ ಏರ್ ಬ್ಯಾಗ್  ಸೆನ್ಸರ್ ಗಳನ್ನು ಹೆಡ್ ಲ್ಯಾಂಪ್ ಹಿಂಬಂದಿಯಲ್ಲಿ ಅಳವಡಿಸಲಾಗುತ್ತದೆ. ಆದರೆ ಗಂಭೀರ ಅಪಘಾತವಾದಾಗ ಬುಲ್ ಬಾರ್ ನಿಂದಾಗಿ ಅಪಘಾತದ ತೀವ್ರತೆ ಈ ಸೆನ್ಸರ್ ಗೆ ತಟ್ಟುವುದಿಲ್ಲ. ಗಂಭೀರ ಅಪಘಾತ ಸಂಭವಿಸಿದರೂ ಈ ಏರ್ ಬ್ಯಾಗ್ ತೆರೆಯದೇ ಇದ್ದರೆ ಕಾರಿನ ಒಳಗಡೆ ಇರುವ ವ್ಯಕ್ತಿಗಳು ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ.

    ಈ ಕ್ರಾಶ್ ಗಾರ್ಡ್ ಗಳನ್ನು ವಾಹನಗಳ ಚಾಸಿಗಳಿಗೆ ಅಳವಡಿಸಲಾಗುತ್ತದೆ. ಯಾವುದೇ ಅಪಘಾತವಾದರೂ ಚಾಸಿಗೆ ಭಾರೀ ಪೆಟ್ಟು ಬೀಳುತ್ತಿರುತ್ತದೆ. ರಕ್ಷಣೆಗಿಂತಲೂ ಅಪಾಯವೇ ಹೆಚ್ಚಾಗುತ್ತಿರುವ ಕಾರಣ ಈಗ ಸರ್ಕಾರ ಈ ಕ್ರಾಶ್ ಗಾರ್ಡ್ ಗಳನ್ನು ತೆಗೆಯುವಂತೆ ಸೂಚಿಸಿದೆ.

    ದಂಡ ಎಷ್ಟು?
    ಬುಲ್ ಬಾರ್ ತೆರವಿಗೆ ರಾಜ್ಯ ಸರ್ಕಾರದ ಅಧಿಕಾರಿಗಳು ನಿಗಧಿತ ಅವಧಿಯನ್ನು ಕಲ್ಪಿಸಿಕೊಡುತ್ತಾರೆ. ನಂತರದಲ್ಲಿಯೂ ವಾಹನಗಳಿಂದ ಬುಲ್ ಬಾರ್ ಗಳನ್ನು ತೆರವುಗೊಳಿಸದೇ ಇದ್ದರೆ ದಂಡ ವಿಧಿಸಲಾಗುತ್ತದೆ. ಮೊದಲ ಬಾರಿ 1 ಸಾವಿರ ರೂ. ದಂಡ ವಿಧಿಸಬಹುದಾಗಿದ್ದು, ಎರಡನೇ ಬಾರಿ ಈ ಮೊತ್ತವನ್ನು 2 ಸಾವಿರಕ್ಕೆ ಹೆಚ್ಚಿಸಲಾಗುತ್ತದೆ. ಒಂದು ವೇಳೆ ವಾಹನದ ತಯಾರಕರು ಬುಲ್ ಬಾರ್ ಅಳವಡಿಸಿದ್ದರೆ ಹಾಗೂ ಬುಲ್ ಬಾರ್ ಗಳನ್ನು ಮಾರಾಟ ಮಾಡುವವರಿಗೆ 5 ಸಾವಿರ ರೂ ದಂಡ ವಿಧಿಸಬಹುದಾಗಿದೆ.

  • ದಲಿತ ಅಂತರ್ಜಾತಿ ವಿವಾಹವಾದ್ರೆ ಕೇಂದ್ರದಿಂದ ಸಿಗುತ್ತೆ 2.5 ಲಕ್ಷ ರೂ.: ಷರತ್ತು ಏನು ಗೊತ್ತಾ?

    ದಲಿತ ಅಂತರ್ಜಾತಿ ವಿವಾಹವಾದ್ರೆ ಕೇಂದ್ರದಿಂದ ಸಿಗುತ್ತೆ 2.5 ಲಕ್ಷ ರೂ.: ಷರತ್ತು ಏನು ಗೊತ್ತಾ?

    ನವದೆಹಲಿ: ದಲಿತ ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ 2.5 ಲಕ್ಷ ರೂ. ಪ್ರೋತ್ಸಾಹ ಧನ ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

    ಅಂತರ್ಜಾತಿ ವಿವಾಹಕ್ಕೆ ಬೆಂಬಲ ನೀಡಿ ಸಮಾಜದಲ್ಲಿ ಏಕತೆ ಮೂಡಿಸುವ ಸಲುವಾಗಿ ಡಾ. ಬಿಆರ್. ಅಂಬೇಡ್ಕರ್ ಯೋಜನೆಯನ್ನು 2013ರಲ್ಲಿ ಕೇಂದ್ರ ಸರ್ಕಾರ ಆರಂಭಿಸಿತ್ತು. ಈ ವೇಳೆ ಅಂತರ್ಜಾತಿ ವಿವಾಹವಾಗುವ ವಧು ಅಥವಾ ವರ ದಲಿತ ಸಮುದಾಯಕ್ಕೆ ಸೇರಿರಬೇಕು ಹಾಗೂ ಅವರ ಕುಟುಂಬದ ಆದಾಯ 5 ಲಕ್ಷ ರೂ. ಗಿಂತ ಜಾಸ್ತಿ ಇರಬಾರದು ಎನ್ನುವ ನಿಯಮವನ್ನು ವಿಧಿಸಲಾಗಿತ್ತು. ವಾರ್ಷಿಕವಾಗಿ 500 ಮಂದಿಗೆ ಈ ಆರ್ಥಿಕ ಸಹಾಯವನ್ನು ನೀಡುವ ಗುರಿಯನ್ನು ಸರ್ಕಾರ ಹಾಕಿಕೊಂಡಿತ್ತು.

    ಆದರೆ ಈಗ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಎಲ್ಲ ರಾಜ್ಯಗಳಿಗೆ ಆದೇಶ ಹೊರಡಿಸಿದ್ದು, ಈ ಆದೇಶದಲ್ಲಿ 5 ಲಕ್ಷ ರೂ. ಆದಾಯ ಇರಬೇಕೆಂಬ ನಿಯಮವನ್ನು ಕೈ ಬಿಟ್ಟಿದೆ. ಮದುವೆಯಾದ ಎಲ್ಲರಿಗೂ ಪ್ರೋತ್ಸಾಹ ಧನವನ್ನು ನೀಡಲಾಗುವುದು ಎಂದು ತಿಳಿಸಿದೆ.

    ನಿಯಮ ಏನು ಹೇಳುತ್ತೆ?
    ಈ ಯೋಜನೆಯ ಫಲಾನುಭವಿಯಾಗಲು ದಂಪತಿಗೆ ಮೊದಲ ವಿವಾಹವಾಗಿರಬೇಕು. ಹಿಂದೂ ವಿವಾಹ ಕಾಯ್ದೆಯ ಅಡಿಯಲ್ಲಿ ವಿವಾಹ ನೋಂದಣಿಯಾಗಿರಬೇಕು. ಯೋಜನೆಗೆ ಬೇಕಾದ ಪೂರಕ ದಾಖಲೆಗಳನ್ನು ಅರ್ಜಿಯೊಂದಿಗೆ ಸಲ್ಲಿಸಿದರೆ ಸರ್ಕಾರವು 2.5 ಲಕ್ಷ ರೂ. ಹಣವನ್ನು ನೇರವಾಗಿ ನೀಡುತ್ತದೆ. ಈ ಹಣವನ್ನು ಪಡೆಯಲು ದಂಪತಿ ತಮ್ಮ ಆಧಾರ್ ಸಂಖ್ಯೆ ನೊಂದಣಿ ಮಾಡಿಸಿರುವ ಬ್ಯಾಂಕ್ ಖಾತೆಯ ಪೂರಕ ದಾಖಲೆಗಳನ್ನು ನೀಡಬೇಕಾಗುತ್ತದೆ.

    ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡುವ ಹಲವು ಯೋಜನೆಗಳನ್ನು ರಾಜ್ಯ ಸರ್ಕಾರಗಳು ಜಾರಿಗೆ ತಂದಿವೆ. ಅವುಗಳು ಯಾವುದೇ ಆದಾಯ ಮಿತಿ ವಿಧಿಸದ ಕಾರಣ ಸರ್ಕಾರ ಈಗ ಈ ನಿರ್ಧಾರ ಕೈಗೊಂಡಿದೆ ಎಂದು ಸಚಿವಾಲಯ ಅಧಿಕಾರಿಗಳು ತಿಳಿಸಿದ್ದಾರೆ.

    ಯೋಜನೆ ಜಾರಿಗೆಯಾದ ನಂತರ 2014-15 ಸಾಲಿನಲ್ಲಿ 5 ದಂಪತಿಗಳಿಗೆ ಹಣ ಮಂಜೂರು ಆಗಿದ್ದರೆ, 2015-16 ಸಾಲಿನಲ್ಲಿ ಇಲಾಖೆಗೆ 522 ಅರ್ಜಿಗಳು ಸಲ್ಲಿಕೆಯಾಗಿದ್ದು, 72 ಅರ್ಜಿಗಳಿ ಹಣ ಸಿಕ್ಕಿದೆ. 2016-17 ಸಾಲಿನಲ್ಲಿ ಸಲ್ಲಿಕೆಯಾದ 736 ಅರ್ಜಿಗಳಲ್ಲಿ 45 ಅರ್ಜಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರಸ್ತುತ ವರ್ಷದಲ್ಲಿ ಇದುವರೆಗೂ 409 ಅರ್ಜಿಗಳು ಸಲ್ಲಿಕೆಯಾಗಿದ್ದು, 74 ದಂಪತಿಗಳ ಅರ್ಜಿಗಳನ್ನು ಅಂಗೀಕರಿಸಲಾಗಿದೆ.

    ಈ ನೆರವು ಪಡೆಯಲು ವಿಧಿಸಲಾಗಿರುವ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದ ಕಾರಣ ಬಹಳಷ್ಟು ಅರ್ಜಿಗಳು ತಿರಸ್ಕೃತಗೊಂಡಿದೆ. ವಿಶೇಷವಾಗಿ ಹಿಂದೂ ಮದುವೆ ಕಾಯ್ದೆಯಡಿ ಈ ಮದುವೆ ನೊಂದಣಿ ಆಗಬೇಕೆಂಬ ನಿಯಮವಿದ್ದರೂ ಬಹಳಷ್ಟು ಮದುವೆಗಳು ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ನೊಂದಣಿ ಆಗುತ್ತಿರುವ ಕಾರಣ ಅರ್ಜಿ ತಿರಸ್ಕೃತಗೊಳ್ಳುತ್ತಿವೆ. ಈ ಯೋಜನೆ ಬಗ್ಗೆ ಸಾರ್ವಜನಿಕರಲ್ಲಿ ಪೂರಕ ಅರಿವು ಕಡಿಮೆ ಇದ್ದು, ಯೋಜನೆ ಫಲಾನುಭವಿಯಾಗಲು ಸಂಸದ, ಶಾಸಕ ಅಥವಾ ಜಿಲ್ಲಾಧಿಕಾರಿಗಳ ಶಿಫಾರಸ್ಸು ಅಗತ್ಯವಿದೆ. ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಿಂದ ಮಾತ್ರ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಭಾರತದಲ್ಲಿ ಎಷ್ಟು ಮಂದಿ ಅಂತರ್ಜಾತಿ ವಿವಾಹವಾಗಿದ್ದಾರೆ ಎನ್ನುವ ನಿಖರ ಮಾಹಿತಿ ಸಿಗುವುದು ಕಷ್ಟ. ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿಯ ನಂತರ ಸರ್ಕಾರ ಜಾತಿ ಡೇಟಾವನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಿಲ್ಲ. ಆದರೆ ಕೆಲ ಸಂಶೋಧಕರು ಈ ವಿಚಾರದ ಬಗ್ಗೆ ಸಂಶೋಧನೆ ನಡೆಸಿ ವರದಿ ನೀಡಿದ್ದಾರೆ.

    ಜಮ್ಮು ಕಾಶ್ಮೀರ, ರಾಜಸ್ಥಾನ, ಮಧ್ಯಪ್ರದೇಶ, ಮೇಘಾಲಯ, ತಮಿಳುನಾಡು ರಾಜ್ಯಗಳಲ್ಲಿ ಶೇ.95 ರಷ್ಟು ವಿವಾಹಗಳು ತಮ್ಮ ಜಾತಿಯಲ್ಲೇ ನಡೆಯುತ್ತವೆ. ಇನ್ನು ಪಂಜಾಬ್, ಸಿಕ್ಕಿಂ, ಗೋವಾ, ಕೇರಳ ರಾಜ್ಯಗಳಲ್ಲಿ ಶೇ.80 ವಿವಾಹಗಳು ತಮ್ಮ ಜಾತಿ ಮಿತಿಯಲ್ಲೇ ನಡೆಯುತ್ತವೆ ಎಂದು ಕೆಲ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದೆ.

     

  • ಕೇಂದ್ರ ಸರ್ಕಾರದ ಬಳಿ ಒಟ್ಟು ಎಷ್ಟು ಭೂಮಿ ಇದೆ ಗೊತ್ತಾ?

    ಕೇಂದ್ರ ಸರ್ಕಾರದ ಬಳಿ ಒಟ್ಟು ಎಷ್ಟು ಭೂಮಿ ಇದೆ ಗೊತ್ತಾ?

    ನವದೆಹಲಿ: ಕೇಂದ್ರ ಸರ್ಕಾರವು ದೇಶಾದ್ಯಂತ ಹೊಂದಿರುವ ಒಟ್ಟು ಭೂಮಿಯ ವಿಸ್ತೀರ್ಣ ಎಷ್ಟು ಎಂಬ ಕುರಿತು ಸ್ಪಷ್ಟ ಮಾಹಿತಿ ಲಭಿಸಿದ್ದು, ರಾಷ್ಟರ ರಾಜಧಾನಿ ದೆಹಲಿಗಿಂತ ಸುಮಾರು 9 ಪಟ್ಟು ದೊಡ್ಡದಾಗಿದೆ ಎಂಬ ಮಾಹಿತಿಯನ್ನು ಸರ್ಕಾರ ಅಂಕಿ ಅಂಶಗಳು ತಿಳಿಸಿವೆ.

    ಕೇಂದ್ರ ಸರ್ಕಾರ 51 ಸಚಿವಾಲಯಗಳ ಪೈಕಿ 41 ಕೇಂದ್ರ ಸಚಿವಾಲಯಗಳು ಹಾಗೂ 22 ರಾಜ್ಯ ಸಚಿವಾಲಯಗಳು ತಮ್ಮ ಇಲಾಖೆಯ ಅಧೀನದಲ್ಲಿರುವ ಭೂಮಿಯ ಕುರಿತು ಮಾಹಿತಿಯನ್ನು ನೀಡಿವೆ.

    ಸಚಿವಾಲಯಗಳು ನೀಡಿರುವ ಮಾಹಿತಿಯಂತೇ ದೇಶಾದ್ಯಂತ ಒಟ್ಟು 13,505 ಚದರ ಕಿ.ಮೀ ಪ್ರದೇಶದ ಭೂಮಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಅಂದರೆ ರಾಜಧಾನಿ ದೆಹಲಿ (1,483 ಚದರ ಕಿ.ಮೀ) 9 ಪಟ್ಟು ಹೆಚ್ಚಿನ ಭೂಮಿ ಕೇಂದ್ರ ಸರ್ಕಾರದ ಒಡೆತನದಲ್ಲಿದೆ.

    ಕೇಂದ್ರವು ಹೊಂದಿರುವ ಒಟ್ಟು ಭೂ ಪ್ರದೇಶದಲ್ಲಿ ಹೆಚ್ಚಿನ ಪ್ರದೇಶವು ರೈಲ್ವೇ ಇಲಾಖೆ(2,929.6 ಚದರ ಕಿ.ಮೀ)ಗೆ ಸಂಬಂಧಿಸಿದೆ. ಇನ್ನುಳಿದಂತೆ ರಕ್ಷಣಾ ಇಲಾಖೆ ಎರಡನೇ ಸ್ಥಾನದಲ್ಲಿದ್ದು, ದೇಶದ ರಕ್ಷಣಾ ದೃಷ್ಟಿಯಿಂದ ಈ ಮಾಹಿತಿಯನ್ನು ಬಹಿರಂಗೊಳಿಸಿಲ್ಲ. ರಕ್ಷಣಾ ಇಲಾಖೆಯ ಸಂಬಂಧಿಸಿದಂತೆ ಕೇವಲ 383.62 ಚದರ ಕಿ.ಮೀ ಪ್ರದೇಶದ ಮಾಹಿತಿಯನ್ನು ಮಾತ್ರ ನೀಡಿದೆ. ಈ ಹಿಂದೆ 2010-11 ನೇ ಸಾಲಿನಲ್ಲಿ ಸರ್ಕಾರದ ವರದಿ ರಕ್ಷಣಾ ಇಲಾಖೆಯು ಸುಮಾರು 7 ಸಾವಿರ ಚದರ ಕಿ.ಮೀ ಭೂಮಿಯನ್ನು ಹೊಂದಿದೆ ಎಂದು ತಿಳಿಸಿತ್ತು.

    ಕೇಂದ್ರ ತನ್ನ ಇಲಾಖೆಗಳ ಅಧೀನದಲ್ಲಿರುವ ಭೂ ವಿಸ್ತೀರ್ಣದ ಬಗ್ಗೆ ಮಾಹಿತಿಯನ್ನು ಪಡೆಯಲು 2012 ರಲ್ಲಿ ಮಾಜಿ ಹಣಕಾಸು ಕಾರ್ಯದರ್ಶಿ ವಿಜಯ್ ಕೇಲ್ಕರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ನೇಮಕ ಮಾಡಿತ್ತು. ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ದೇಶದ ಹಲವು ರಾಜ್ಯಗಳು ಕೇಂದ್ರ ಭೂಮಿಯನ್ನು ಬಾಡಿಗೆಗೆ ನೀಡುವುದರ ಮೂಲಕ ಆಧಾಯವನ್ನು ಪಡೆಯುತ್ತಿದ್ದವು.

    ಸರ್ಕಾರ ಈ ಪ್ರದೇಶಗಳು ದೇಶದ ಸಾರ್ವಜನಿಕರ ಸೇರಿದ ಅಮೂಲ್ಯ ಪ್ರದೇಶಗಳಾಗಿದ್ದು ಈ ಕುರಿತು ಸ್ಪಷ್ಟ ಮಾಹಿತಿಯನ್ನು ಹೊಂದಿರಬೇಕಿದೆ ಎಂದು ಭಾರತದ ಸ್ವತಂತ್ರ ಸಂಶೋಧನಾ ಸಂಸ್ಥೆಯ ನಿರ್ದೇಶಕರು ಹಾಗೂ ಸ್ಥಾಪಕರದ ಶುಭಾಸಿಸ್ ಗಂಗೋಪಾಧ್ಯಾಯ ತಿಳಿಸಿದ್ದಾರೆ.

    ಸರ್ಕಾರಿ ಪ್ರದೇಶಗಳ ಸೂಕ್ತ ಬಳಕೆಯ ಕುರಿತು ಸಾರ್ವಜನಿಕರಿಂದ ಸಲಹೆಗಳನ್ನು ‘ರೈಟ್ ಟು ಕಾಂಟೆಸ್ಟ್’ ಎಂಬ ಯೋಜನೆಯ ಮೂಲಕ ಮಾಹಿತಿಯನ್ನು ನೀಡುವಂತೆ ಕೇಳಲಾಗಿದೆ ಎಂದು ತಿಳಿಸಿದರು.

    ಇನ್ನುಳಿದಂತೆ ಕಲ್ಲಿದ್ದಲು ಗಣಿ 2,580.92 ಚದರ ಕಿ.ಮೀ., ಇಂಧನ ಇಲಾಖೆಯ 1,806.69 ಚದರ ಕಿ.ಮೀ, ಬೃಹತ್ ಉದ್ಯಮಗಳು ಹಾಗೂ ಸಾರ್ವಜನಿಕ ಉದ್ಯಮ ಇಲಾಖೆ 1,209.49 ಚದರ ಕಿ.ಮೀ ವಿಸ್ತೀರ್ಣದ ಪ್ರದೇಶಗಳನ್ನು ಹೊಂದಿವೆ.

    ಸರ್ಕಾರ ದೊರೆತಿರುವ ಭೂಮಿ ಒಂದು ಭಾಗವನ್ನು ಹಣಗಳಿಕೆ, ವಸತಿ ಮತ್ತು ಇತರ ಮೂಲಸೌಕರ್ಯ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಯಾವ ಸಚಿವಾಲಯದಲ್ಲಿ ಎಷ್ಟು?
    ರೈಲ್ವೇ – 2,929.6 ಚದರ ಕಿ.ಮೀ
    ಕಲ್ಲಿದ್ದಲು ಗಣಿ – 2,580.92 ಚದರ ಕಿ.ಮೀ
    ಇಂಧನ ಇಲಾಖೆ – 1,806.69 ಚದರ ಕಿ.ಮೀ
    ಬೃಹತ್ ಉದ್ಯಮಗಳು ಹಾಗೂ ಸಾರ್ವಜನಿಕ ಉದ್ಯಮ ಇಲಾಖೆ – 1,209.49 ಚದರ ಕಿ.ಮೀ
    ನೌಕ ಇಲಾಖೆ – 1,146 ಚದರ ಕಿ.ಮೀ
    ಸ್ಟಿಲ್ – 608.02 ಚದರ ಕಿ.ಮೀ
    ಕೃಷಿ – 589.07 ಚದರ ಕಿ.ಮೀ
    ಗೃಹ ಸಚಿವಾಲಯ – 443.12 ಚದರ ಕಿ.ಮೀ
    ಮಾನವ ಸಂಪನ್ಮೂಲ ಅಭಿವೃದ್ಧಿ – 409.43 ಚದರ ಕಿ.ಮೀ
    ರಕ್ಷಣೆ – 383.62 ಚದರ ಕಿ.ಮೀ

     

     

  • ಸಂಸತ್ ನಲ್ಲಿ ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ: ಎಚ್.ಡಿ. ದೇವೇಗೌಡ

    ಸಂಸತ್ ನಲ್ಲಿ ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ: ಎಚ್.ಡಿ. ದೇವೇಗೌಡ

    ಬಳ್ಳಾರಿ: ಸಂಸತ್ ನಲ್ಲಿ ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

    ಮಕ್ಕೆಜೋಳ ಹಾನಿ ಪರಿಶೀಲನೆ ಮಾಡಲು ಇಂದು ಜಿಲ್ಲೆಯ ಹೂವಿನ ಹಡಗಲಿಗೆ ದೇವೇಗೌಡರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು, ಸಂಸತ್‍ನಲ್ಲಿ ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಕಳೆದ ವರ್ಷ ಸರ್ಕಾರದ ಬಜೆಟ್ ಮೇಲೆ ನಾನು ಮಾತನಾಡಿದ್ದೇನೆ. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಕಠಿಣವಾಗಿ ಮಾತನಾಡುತ್ತಿದ್ದೆ. ಆದರೆ ಈಗ ಸಂಖ್ಯಾಬಲದ ಆಧಾರವೆಂದು ಹೊಸ ನಿಯಮ ಜಾರಿಗೆ ತಂದು ನನ್ನ ಭಾಷಣವನ್ನು ಹತ್ತಿಕ್ಕಲಾಗುತ್ತಿದೆ ಎಂದು ಕೋಪಗೊಂಡು ಹೇಳಿದ್ದಾರೆ.

    ಮಾತನ್ನು ಮುಂದುವರೆಸಿ, ಸೈನಿಕ ಹುಳಕಾಟದಿಂದ ಮೆಕ್ಕೆಜೋಳ ಎಲ್ಲಾವೂ ಹಾಳಾಗಿದೆ. ಇದರಿಂದ ರೈತರು ಸಂಕಷ್ಟದಲ್ಲಿದ್ದಾರೆ. ಅತಿಯಾದ ಮಳೆಯಿಂದ ಕೂಡಾ ಬೆಳೆಹಾನಿಯಾಗಿದೆ. ಪರಿಹಾರ ನೀಡಬೇಕಾದ ಎರಡು ಸರ್ಕಾರಗಳು ರೈತರ ಬಗ್ಗೆ ತಾತ್ಸಾರ ಮನೋಭಾವನೆ ಹೊಂದಿವೆ. ಅಷ್ಟೇ ಅಲ್ಲದೇ ಟಿಪ್ಪು ಜಯಂತಿ ವಿವಾದದಿಂದ ಕಾಂಗ್ರೆಸ್-ಬಿಜೆಪಿ ಒಬ್ಬರಿಗೊಬ್ಬರು ಪೈಪೋಟಿ ನಡೆಸುತ್ತಿದ್ದಾರೆ. ಈ ರೀತಿಯ ಪರವಿರೋಧ ಚರ್ಚೆಗೆ ಅರ್ಥವಿಲ್ಲ. ಬಿಜೆಪಿ ಅತಿರೇಕಕ್ಕೆ ಹೋಗಬಾರದು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

    ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಟಿಪ್ಪು ಜಯಂತಿಗೆ ಬೆಂಬಲ ನೀಡಿದ್ದರು. ಆದರೆ ಈಗ ವಿರೋದಿಸುತ್ತಿರುವುದು ಸರಿಯಲ್ಲ. ಅನಂತಕುಮಾರ ಹೆಗಡೆ ಮಂತ್ರಿಯಾಗಿ ಈ ರೀತಿ ಮುಸ್ಲಿಮರ ಓಟು ನನಗೆ ಬೇಕಿಲ್ಲ ಎಂದು ಮಾತನಾಡುವುದು ಸರಿಯಲ್ಲ. ಇದು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಯಾಗುತ್ತದೆ. ಮುಸ್ಲಿಂ ಮತ್ತು ಕ್ರೈಸ್ತರನ್ನು ಕಳುಹಿಸಿ 2ನೇ ಪಾಕಿಸ್ತಾನ ಹುಟ್ಟು ಹಾಕೋಕೆ ಆಗುತ್ತಾ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.