ನವದೆಹಲಿ: ಮತ್ತೆ ಕಾವೇರಿ ನದಿ ನೀರಿನ ಹಂಚಿಕೆ ವಿಚಾರ ಕೇಂದ್ರದ ಅಂಗಳಕ್ಕೆ ತಲುಪಿದೆ. ನಾವು ತೀರ್ಪಿನಲ್ಲಿ ಉಲ್ಲೇಖಿಸಿರುವ ಸ್ಕೀಂ ಅನ್ನು ಕೂಡಲೇ ರಚನೆ ಮಾಡಿ ಎಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಸೂಚಿಸಿದೆ.
ನಿರ್ವಹಣಾ ಮಂಡಳಿ ರಚನೆಯ ಕುರಿತು ತಮಿಳುನಾಡು ಸಲ್ಲಿಸಿದ್ದ ನ್ಯಾಯಾಂಗ ನಿಂದನಾ ಅರ್ಜಿ ಜತೆಗೆ ಕೇಂದ್ರದ ಸ್ಪಷ್ಟನಾ ಅರ್ಜಿಯನ್ನು ವಿಚಾರಣೆ ಇಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಯಿತು.
ಈ ವೇಳೆ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಸಲ್ಲಿಸಿದ್ದ ನ್ಯಾಯಂಗ ನಿಂದನೆ ಅರ್ಜಿಯನ್ನು ತಿರಸ್ಕರಿಸಿತು. ಅಲ್ಲದೇ ಸ್ಕೀಂ ರಚನೆ ವಿಚಾರವಾಗಿ ಕೇಂದ್ರ ಈಗಾಗಲೇ ಕಾರ್ಯ ಪ್ರವೃತ್ತವಾಗಿದ್ದು ನ್ಯಾಯಾಂಗ ನಿಂದನೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಕಾವೇರಿ ನೀರಿನ ಹಂಚಿಕೆ ಕುರಿತು ವಿಚಾರದಲ್ಲಿ ಕೇಂದ್ರ ಸರ್ಕಾರ ನ್ಯಾಯಾಂಗ ನಿಂದನೆ ಮಾಡಿಲ್ಲ. ಈಗಾಗಲೇ ಈ ಕುರಿತು ಕ್ರಮಕೈಗೊಳ್ಳಲಾಗಿದೆ ಎಂದು ಅಭಿಪ್ರಾಯಪಟ್ಟಿತು. ಅಲ್ಲದೇ ಮೇ 3 ರ ಒಳಗೆ ಸ್ಕೀಂ ರಚನೆ ಕುರಿತು ಕೇಂದ್ರ ಸರ್ಕಾರ ಕರಡು ಪ್ರತಿಯನ್ನು ಸುಪ್ರಿಂಕೊರ್ಟ್ ಗೆ ಸಲ್ಲಿಸಬೇಕು. ಸುಪ್ರೀಂ ಕೋರ್ಟ್ ಕರಡು ಪ್ರತಿ ಪರಿಶೀಲನೆ ನಡೆಸಿ ಅಂತಿಮಗೊಳಿಸಲಾಗುವುದು ಎಂದು ಹೇಳಿದೆ.
ಇದೇ ವೇಳೆ ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಧಿಕರಣ ತೀರ್ಪು ವಿಲೀನಗೊಳಿಸಿ ಆದೇಶ ನೀಡಿದ್ದು, ಪದೇ ಪದೇ ನ್ಯಾಯಧಿಕರಣ ಆದೇಶ ಉಲ್ಲೇಖಿಸುವಂತಿಲ್ಲ ಎಂದು ಸೂಚನೆ ನೀಡಿದೆ. ನೀರು ಹಂಚಿಕೆ ಮಾಡಿ ನಾವು ಆದೇಶ ನೀಡಿದ್ದೇವೆ. ಹಂಚಿಕೆ ಕಾರ್ಯರೂಪಕ್ಕೆ ಬರಲು ಕೇಂದ್ರ ಸರ್ಕಾರ ಸ್ಕೀಂ ರಚನೆ ಮಾಡಲಿದೆ. ಕೇಂದ್ರ ರಚಿಸುವ ಸ್ಕೀಂಗೆ ಎಲ್ಲ ರಾಜ್ಯಗಳು ಬದ್ಧವಾಗಿರಬೇಕು ಎಂದು ನ್ಯಾ. ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಸೂಚಿಸಿತು.
ಅರ್ಜಿ ವಿಚಾರಣೆ ವೇಳೆ ಕಾವೇರಿ ನಿರ್ವಹಣಾ ಮಂಡಳಿ ವಿಚಾರವನ್ನು ಸುಪ್ರೀಂ ಕೋರ್ಟ್ ಪ್ರಸ್ತಾಪಿಸಲಿಲ್ಲ. ತೀರ್ಪು ಪಾಲನೆಗೆ ಯೋಜನೆ ಅವಶ್ಯಕತೆ ಇದ್ದು ಆ ನಿಟ್ಟಿನಲ್ಲಿ ಸ್ಕೀಂ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ಈ ಮೂಲಕ ತಮಿಳುನಾಡಿನ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಪರೋಕ್ಷ ಚಾಟಿ ಬೀಸಿತು. ಎಲ್ಲ ರಾಜ್ಯಗಳನ್ನು ಸಮಾನವಾಗಿ ಪರಿಗಣಿಸಿಲಾಗಿದೆ. ರಾಜ್ಯಗಳ ಜನರು ಶಾಂತಿ ರೀತಿಯಿಂದ ವರ್ತಿಸುವಂತೆ ಮನವಿ ಮಾಡಲು ಸುಪ್ರೀಂ ಕೋರ್ಟ್ ರಾಜ್ಯಗಳಿಗೂ ಸೂಚಿಸಿತು.
ನವದೆಹಲಿ: ಕೇಂದ್ರದ ವೈಫಲ್ಯವನ್ನು ಖಂಡಿಸಿ ದೇಶದಲ್ಲಿ ಶೀಘ್ರವೇ ಲೋಕಸಭೆ ಚುನಾವಣೆಗೆ ಆಗ್ರಹಿಸಿ 100 ಮಂದಿ ಸಂಸದರು ರಾಜೀನಾಮೆ ನೀಡುವ ಸಾಧ್ಯತೆಯಿದೆ.
ಹೌದು. 2019ರ ಲೋಕಸಭಾ ಚುನಾವಣೆ ಸಂಬಂಧ ಮೋದಿ ಅವರನ್ನು ಮಣಿಸಲು ಪ್ರತಿಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸಿರುವುದು ಹಳೇ ಸುದ್ದಿ. ಆದರೆ ಈಗ ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಲು 100 ಮಂದಿ ಸಂಸದರು ರಾಜೀನಾಮೆ ನೀಡಲಿದ್ದಾರೆ ಎಂದು ರಾಷ್ಟ್ರೀಯ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿದೆ.
ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ, ಸುಪ್ರೀಂ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಮಹಾಭಿಯೋಗ ಸೇರಿದಂತೆ ಇನ್ನಿತರ ಕಾರಣಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳ ಸದಸ್ಯರು ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳನ್ನು ಆಧಾರಿಸಿ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿದೆ.
ಈ ಪ್ರತಿಭಟನೆಯ ಅಂಗವಾಗಿ ಇಂದು ವೈಎಸ್‍ಆರ್ ಕಾಂಗ್ರೆಸ್ 5 ಮಂದಿ ಸಂಸದರು ರಾಜೀನಾಮೆ ನೀಡಿದ್ದು ಮುಂದಿನ ದಿನದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು, ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್ ನೇತೃತ್ವದಲ್ಲಿ ವಿಪಕ್ಷಗಳು ಈ ತಂತ್ರವನ್ನು ಹೆಣೆದಿವೆ ಎನ್ನಲಾಗಿದೆ.
ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗುತ್ತಿರುವ ವಿಚಾರವನ್ನು ಕಾಂಗ್ರೆಸ್ ಮೂಲಗಳು ಖಚಿತ ಪಡಿಸಿದೆ ಎಂದು ವಾಹಿನಿ ಹೇಳಿದೆ. ಎನ್‍ಡಿಎ ಒಕ್ಕೂಟದಿಂದ ಹೊರಬಂದಿರುವ ಚಂದ್ರಬಾಬು ನಾಯ್ಡು ಈ ವಾರ ದೆಹಲಿಯಲ್ಲಿ ಶರದ್ ಪವಾರ್ ಮತ್ತು ಇತರೇ ರಾಜಕೀಯ ನಾಯಕರನ್ನು ಭೇಟಿ ಮಾಡಿದ್ದು ಈ ವೇಳೆ ಸಾಮೂಹಿಕ ರಾಜೀನಾಮೆ ನೀಡುವ ವಿಚಾರವನ್ನು ಚರ್ಚಿಸಿದ್ದಾರೆ ಎನ್ನಲಾಗಿದೆ.
ಪ್ರತಿಪಕ್ಷಗಳ ಪ್ಲಾನ್ ಏನು?
2019ಕ್ಕೂ ಮೊದಲೇ ಚುನಾವಣೆ ನಡೆಸಲು ಪ್ರತಿಪಕ್ಷಗಳು ಮುಂದಾಗಿದ್ದು, ಇದಕ್ಕಾಗಿ ಈಗಿನಿಂದಲೇ ತಯಾರಿ ನಡೆಸಿವೆ. ಈಗ ಈ ತಂತ್ರವನ್ನು ಅನುಸರಿಸಿದರೆ ಜನರನ್ನು ತಲುಪಲು ಸುಲಭವಾಗುತ್ತದೆ. ಅಷ್ಟೇ ಅಲ್ಲದೇ ಮೋದಿ ವಿರೋಧಿ ಅಲೆಯನ್ನು ದೇಶದೆಲ್ಲೆಡೆ ಪಸರಿಸಲು ಈ ನಿರ್ಧಾರ ಸೂಕ್ತ ಎನ್ನುವ ತೀರ್ಮಾನಕ್ಕೆ ಬಂದಿದೆ.
ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಈಗ ಒಂದಾಗಿದ್ದರೂ ಚುನಾವಣೆಯ ಸಂದರ್ಭದಲ್ಲಿ ಆರ್ ಜೆಡಿ, ಕಾಂಗ್ರೆಸ್, ಜೆಡಿಯು ಮಹಾಘಟಬಂಧನ್ ಮೈತ್ರಿಕೂಟ ಬಿಜೆಪಿಯನ್ನು ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಈ ತಂತ್ರದ ಮುಂದುವರಿದ ಭಾಗವಾಗಿ ದೇಶದೆಲ್ಲೆಡೆ ಮೈತ್ರಿ ಮಾಡಿಕೊಂಡರೆ ಹಂಚಿಕೆಯಾಗಲಿರುವ ಮತಗಳು ಓರ್ವ ಅಭ್ಯರ್ಥಿಗೆ ಬೀಳಬಹುದು. ಮೈತ್ರಿಯ ಪೂರ್ವಭಾವಿಯಾಗಿ ಈ ರಾಜೀನಾಮೆ ನೀಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಲು ವಿಪಕ್ಷಗಳು ಸಿದ್ಧತೆ ನಡೆಸಿವೆ ಎಂದು ಹೇಳಲಾಗುತ್ತಿದೆ.
ಈ ಬಾರಿಯ ಕಲಾಪ ಸರಿಯಾಗಿ ನಡೆಯದೇ ಇದ್ದ ಕಾರಣ ಎನ್‍ಡಿಎ ಸಂಸದರು ಸಂಬಳವನ್ನು ಪಡೆಯದೇ ಇರುವ ತೀರ್ಮಾನವನ್ನು ಕೈಗೊಂಡಿದ್ದಾರೆ. ಅಷ್ಟೇ ಅಲ್ಲದೇ ವಿಪಕ್ಷಗಳಿಂದಾಗಿ ಕಲಾಪ ಹಾಳಾಗಿದೆ ಎನ್ನುವುದನ್ನು ತೋರಿಸಲು ಜನರ ತೆರಿಗೆ ಹಣವನ್ನು ಪಡೆಯುವುದು ಸಮಂಜಸ ಅಲ್ಲ ಎನ್ನುವ ನಿರ್ಧಾರಕ್ಕೆ ಎನ್‍ಡಿಎ ಬಂದಿದೆ. ನಮ್ಮ ಮೇಲೆ ಬಂದಿರುವ ಈ ಆರೋಪಕ್ಕೆ ತಿರುಗೇಟು ನೀಡಲು ಸದನ ಸರಿಯಾಗಿ ನಡೆಯದೇ ಇರಲು ನಾವು ಕಾರಣವಲ್ಲ. ಸರ್ಕಾರದ ನೀತಿಯಿಂದಲೇ ಕಲಾಪ ವ್ಯರ್ಥವಾಗಿದೆ ಎನ್ನುವುದನ್ನು ಜನರಿಗೆ ವಿವರಿಸಲು ಸಾಮೂಹಿಕ ರಾಜೀನಾಮೆಯ ನಿರ್ಧಾರಕ್ಕೆ ವಿಪಕ್ಷಗಳು ಬಂದಿವೆ ಎನ್ನಲಾಗಿದೆ.
ಆಂಧ್ರದ ಪ್ರತ್ಯೇಕ ಸ್ಥಾನಮಾನ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಲು ಟಿಡಿಪಿ, ವೈಎಸ್ ಆರ್ ಕಾಂಗ್ರೆಸ್, ಕಾಂಗ್ರೆಸ್ ಪ್ರಯತ್ನ ಮಾಡಿದರೂ ಯಶಸ್ವಿಯಾಗಲಿಲ್ಲ. ಹೀಗಾಗಿ ಕೊನೆಯ ಅಸ್ತ್ರ ಎಂಬಂತೆ ಕೇಂದ್ರ ವಿರುದ್ಧ ಹೋರಾಟ ನಡೆಸಲು ವಿಪಕ್ಷಗಳು ಸಾಮೂಹಿಕ ರಾಜೀನಾಮೆಯ ತಂತ್ರಕ್ಕೆ ಬಂದಿದೆ ಎಂದು ಹೇಳಲಾಗುತ್ತದೆ.
ಸಾಮೂಹಿಕ ರಾಜೀನಾಮೆ ಯಶಸ್ವಿಯಾಗುತ್ತಾ?
ಸಾಮೂಹಿಕ ರಾಜೀನಾಮೆ ನೀಡುವ ನಿರ್ಧಾರವನ್ನು ಚಂದ್ರಬಾಬು ನಾಯ್ಡು, ರಾಹುಲ್ ಗಾಂಧಿ, ಶರದ್ ಪವಾರ್ ತೆಗೆದುಕೊಂಡಿದ್ದರೂ ಉಳಿದ ನಾಯಕರು ಒಪ್ಪಿಗೆ ಸೂಚಿಸುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ. ವಿಶೇಷವಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬಹಿರಂಗವಾಗಿಯೇ ರಾಹುಲ್ ಗಾಂಧಿ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಹೊರತಾಗಿರುವ ಮೂರನೇ ಮೈತ್ರಿಕೂಟ ರಚನೆಯಾಗಬೇಕು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಒಡಿಶಾದಲ್ಲಿ ಬಿಜೆಡಿ ಬೆಂಬಲಿಸುತ್ತಾ ಎನ್ನುವ ಪ್ರಶ್ನೆಯೂ ಎದ್ದಿದೆ.
ದಕ್ಷಿಣ ಭಾರತದಲ್ಲಿ ರಾಷ್ಟ್ರೀಯ ಪಕ್ಷಗಳಿಗಿಂತಲೂ ಪ್ರಾದೇಶಿಕ ಪಕ್ಷಗಳು ನಿರ್ಣಾಯಕ ಪಾತ್ರವಹಿಸುತ್ತದೆ. ಹೀಗಾಗಿ ಶಿವಸೇನೆ, ಡಿಎಂಕೆ, ಎಐಡಿಎಂಕೆ, ಬಿಜೆಡಿ, ಟಿಎಂಸಿ ನಾಯಕರ ನಿರ್ಧಾರದ ಮೇಲೆ ಸಾಮೂಹಿಕ ರಾಜೀನಾಮೆ ತಂತ್ರ ನಿಂತಿದೆ ಎನ್ನುವ ವಿಶ್ಲೇಷಣೆ ಈಗ ಕೇಳಿಬಂದಿದೆ.
We do as we say! YSRCP MPs are submitting their resignations today. I challenge @ncbn to make TDP MPs resign and stand united with the people of AP in their rightful demand of special category status for Andhra Pradesh.
YSRCP MPs will go on an indefinite hunger strike at AP Bhawan, Delhi while we will observe relay hunger strikes across the state. We continue to stand in solidarity with the people of AP in their fight for Special Category Status!
ನವದೆಹಲಿ: ನಿತ್ಯ ತೈಲ ಬೆಲೆ ಪರಿಷ್ಕರಣೆ ನೀತಿ ಜಾರಿಯಾದ ಬಳಿಕ, ಸೋಮವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ನಾಲ್ಕು ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 73.83 ರೂ. ಮತ್ತು ಡೀಸೆಲ್ ಬೆಲೆ 64.69 ರೂ. ತಲುಪಿದೆ
ಗರಿಷ್ಠ ಮಟ್ಟದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಆಗಿರುವುದರಿಂದ ಸರ್ಕಾರ ವಿಧಿಸುವ ಅಬಕಾರಿ ಸುಂಕವನ್ನು ಕಡಿತಗೊಳಿಸುವಂತೆ ಸಾರ್ವಜನಿಕ ವಲಯದಿಂದ ಆಗ್ರಹ ಕೇಳಿ ಬಂದಿದೆ.
ಕಳೆದ ಜುಲೈನಿಂದ ಪ್ರತಿ ನಿತ್ಯ ಪೆಟ್ರೋಲ್ ಬೆಲೆ ಪರಿಷ್ಕರಣೆ ಮಾಡುವ ನೀತಿಯನ್ನು ಜಾರಿ ಮಾಡಲಾಗಿದ್ದು, ಭಾರತದ ತೈಲ ಕಂಪನಿಗಳ ಒಕ್ಕೂಟ ಸೋಮವಾರ ಪೆಟ್ರೋಲ್ ಮೇಲೆ 10 ಪೈಸೆ, ಡೀಸೆಲ್ ಮೇಲೆ 11 ಪೈಸೆ ಹೆಚ್ಚಳ ಮಾಡಿದೆ. ಇದರೊಂದಿಗೆ 2017 ಸೆಪ್ಟೆಂಬರ್ 4 ರಲ್ಲಿ 76.06 ರೂ. ಇದ್ದ ಪೆಟ್ರೋಲ್ ಬೆಲೆ ಗರಿಷ್ಠ ಪ್ರಮಾಣ ತಲುಪಿದೆ. ಡೀಸೆಲ್ ಬೆಲೆಯೂ ಲೀಟರ್ ಗೆ 64.69 ರೂ. ತಲುಪಿದ್ದು ಸಾರ್ವಕಾಲಿಕ ದಾಖಲೆ ಬರೆದಿದೆ. ಅದೇ ರೀತಿ ಡೀಸೆಲ್ ಬೆಲೆ ಲೀಟರ್ ಗೆ 64.22 ರೂ. ಗೆ ತಲುಪಿದ್ದು ಇದುವರೆಗಿನ ದಾಖಲೆಯಾಗಿತ್ತು.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗುತ್ತಿರುವುದು ದೇಶದಲ್ಲಿ ಇಂಧನ ಬೆಲೆ ಗರಿಷ್ಠ ಮಟ್ಟ ತಲುಪಲು ಕಾರಣ ಎಂದು ಕೆಲ ವರದಿಗಳು ಸ್ಪಷ್ಟ ಪಡಿಸಿವೆ. ಕಳೆದ ಜನವರಿಯಿಂದ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಶೇ.4 ರಷ್ಟು ಹೆಚ್ಚಳವಾಗಿದೆ. ವಾಣಿಜ್ಯ ನಗರಿ ಮುಂಬೈ ನಲ್ಲಿ ದೇಶದಲ್ಲೇ ಹೆಚ್ಚು ತೈಲ ಬೆಲೆ ಹೊಂದಿದ್ದು, ಪತ್ರಿ ಲೀಟರ್ ಪೆಟ್ರೋಲ್ ಬೆಲೆ ಗರಿಷ್ಟ 81.69 ರೂ. ತಲುಪಿದೆ. ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 67.43 ರೂ ತಲುಪಿದೆ.
2017 ಅಕ್ಟೋಬರ್ ನಲ್ಲಿ ಕೇಂದ್ರ ಸರ್ಕಾರ ತೈಲಗಳ ಮೇಲೆ 2 ರೂ. ಅಬಕಾರಿ ಸುಂಕ ಕಡಿತಗೊಳಿತ್ತು. ಈ ವೇಳೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 70.88 ರೂ., ಡೀಸೆಲ್ ಲೀಟರ್ 59.1 ರೂ. ಹೊಂದಿತ್ತು. ಅಬಕಾರಿ ಸುಂಕದ ಕಡಿತದಿಂದ ಸರ್ಕಾರ ವಾರ್ಷಿಕ ಆದಾಯದಲ್ಲಿ 26 ಸಾವಿರ ಕೋಟಿ ರೂ. ಹೊರೆಯಾಗಿತ್ತು. ಪ್ರಸ್ತುತ ವರ್ಷದಲ್ಲಿ ಇದುವರೆಗೆ 17 ಸಾವಿರ ಕೋಟಿ ರೂ. ಹೊರೆಯಾಗಿದೆ.
ಬೆಂಗಳೂರಿನಲ್ಲಿ ಎಷ್ಟಿದೆ?
ಬೆಂಗಳೂರಿನಲ್ಲಿ ಏಪ್ರಿಲ್ 2 ರಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 75 ರೂ. ಇದ್ದರೆ, ಡೀಸೆಲ್ ಬೆಲೆ 65.78 ರೂ. ಇದೆ.
ಯಾವ ನಗರದಲ್ಲಿ ಎಷ್ಟಿದೆ?
ಪೆಟ್ರೋಲ್:
ಕೋಲ್ಕತ್ತಾ -76.54 ರೂ.
ಮುಂಬೈ -81.69 ರೂ.
ಚೆನ್ನೈ -76.59 ರೂ.
ಡೀಸೆಲ್:
ಕೋಲ್ಕತ್ತಾ – 67.38 ರೂ.
ಮುಂಬೈ -68.89 ರೂ.
ಚೆನ್ನೈ – 68.24 ರೂ.
ಬೆಂಗಳೂರು: ರಾಜ್ಯದಲ್ಲಿ ಇತಿಹಾಸದಲ್ಲೇ ಅತಿದೊಡ್ಡ, ಐತಿಹಾಸಿಕ ವಿದ್ಯಮಾನವೊಂದು ಜರುಗಿದೆ. ಶತ ಶತಮಾನಗಳಿಂದ ಹಿಂದೂ ಧರ್ಮದ ಭಾಗವಾಗಿ ಇದ್ದ ವೀರಶೈವ-ಲಿಂಗಾಯತರು ಇನ್ನು ಮುಂದೆ ಹಿಂದೂಗಳಲ್ಲ. ಅವರು ಅಲ್ಪಸಂಖ್ಯಾತರು. ಹೀಗೆಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿರ್ಣಯ ತೆಗೆದುಕೊಂಡಿದೆ.
ರಾಜ್ಯ ಸರ್ಕಾರ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದು, ಧರ್ಮ ಇಬ್ಭಾಗದ ತಂತ್ರ ಅನುಕರಿಸಿದೆ. ನ್ಯಾಯಮೂರ್ತಿ ನಾಗಮೋಹನ್‍ದಾಸ್ 2ನೇ ಶಿಫಾರಸ್ಸಿನ ಅನ್ವಯ, ಪ್ರತ್ಯೇಕ ಲಿಂಗಾಯತ ಧರ್ಮದ ಬದಲಿಗೆ, ಲಿಂಗಾಯತ ಮತ್ತು ವೀರಶೈವ, ಬಸವತತ್ವದಡಿ ನಂಬಿಕೆ ಇರುವವರಿಗೆ ಪ್ರತ್ಯೇಕ ಧರ್ಮಕ್ಕೆ ರಾಜ್ಯಸರ್ಕಾರ ಶಿಫಾರಸು ಮಾಡಿದೆ. ನಾಗಮೋಹನ್‍ದಾಸ್ ವರದಿ ಪ್ರಕಾರ ಅಲ್ಪಸಂಖ್ಯಾತ ಕೋಟಾದಡಿ ಮುಸ್ಲಿಮರಿಗೆ ಸಿಗುತ್ತಿರುವ ಸೌಲಭ್ಯಗಳು ಲಿಂಗಾಯತ-ವೀರಶೈವ ಧರ್ಮಕ್ಕೆ ಸಿಗುವುದಿಲ್ಲ.
ಸಿಎಂ ನಿವಾಸ ಕಾವೇರಿಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾರೀ ನಾಟಕೀಯ ಬೆಳವಣಿಗೆಗಳು ನಡೆದಿತ್ತು. ಮಧ್ಯಾಹ್ನ 12 ಗಂಟೆಗೆ ಆರಂಭವಾದ ಈ ಸಭೆಯಲ್ಲಿ ಭಾರೀ ಚರ್ಚೆಗಳು ನಡೆದು ಸಂಜೆ 3.30ರ ವೇಳೆಗೆ ಅಂತಿಮ ನಿರ್ಧಾರಕ್ಕೆ ಬರಲಾಯಿತು. ಹೀಗಾಗಿ ಸಭೆಯಲ್ಲಿ ಏನು ಚರ್ಚೆ ನಡೆಯಿತು, ಯಾರು ಏನು ಹೇಳಿದರು ಎನ್ನುವ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಸಿಕ್ಕಿದೆ.
ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಇಬ್ಬರು ಸಚಿವರು ರಾಜೀನಾಮೆ ನೀಡಿದ್ರೆ ಏನಾಗುತ್ತೆ ಅಂತ ವಿನಯ್ ಕುಲಕರ್ಣಿ ಹೇಳಿದ್ದಾನೆ. ನಾವು ಏಕೆ ರಾಜೀನಾಮೆ ಕೊಡಬೇಕು. ಅವನೇ ರಾಜೀನಾಮೆ ಕೊಟ್ಟು ಹೋಗಲಿ ಎಂದು ಹೇಳಿದ್ದಾರೆ. ಇದಕ್ಕೆ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್, ನಮ್ಮ ಜೊತೆ ನೀವು ಬರುವುದಾದರೆ ಬನ್ನಿ. ಇಲ್ಲಾಂದ್ರೆ ಸುಮ್ಮನಿರಿ. ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಮರು ಉತ್ತರ ನೀಡಿದ್ದಾರೆ.
ಈ ಉತ್ತರಕ್ಕೆ ಗರಂ ಆದ ಎಸ್.ಎಸ್. ಮಲ್ಲಿಕಾರ್ಜುನ್, ಅನಗತ್ಯವಾಗಿ ಸಮುದಾಯವನ್ನು ಹಾಳ್ ಮಾಡ್ತಾ ಇದ್ದೀರಿ. ನಿಮ್ ಇಬ್ರಿಂದಾನೆ (ಎಂ.ಬಿ. ಪಾಟೀಲ್, ಕುಲಕರ್ಣಿ) ಏನೋ ಮಾಡೋಕೆ ಹೋಗಿ ಏನೋ ಆಗಿದೆ. ವೀರಶೈವ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಹಾಸಭಾ ಮನವಿ ಕೊಟ್ಟಿದ್ದು. ಆದ್ರೀಗ, ಲಿಂಗಾಯತ ಸ್ವತಂತ್ರ ಧರ್ಮ ಅಂತ ಗುಲ್ಲೆಬ್ಬಿಸಿ ಹಾಳ್ ಮಾಡಕ ಹತ್ತೀರಿ ಎಂದಿದ್ದಾರೆ.
ಮಲ್ಲಿಕಾರ್ಜುನ್ ಆರೋಪಕ್ಕೆ ವಿನಯ ಕುಲಕರ್ಣಿ, ಹಾಳ್ ಮಾಡ್ತಿರೋದು ನಾವಲ್ಲ, ನೀವು. ನಮ್ಮ ಬಸವಣ್ಣ ಸ್ಥಾಪನೆ ಮಾಡಿದ್ದೇ ನಿಜವಾದ ಧರ್ಮ. ಬಸವ ಧರ್ಮ. ಲಿಂಗಾಯತ ಸ್ವತಂತ್ರ ಧರ್ಮ ಆಗಬೇಕು ಅಂತ ಸ್ವಾಮೀಜಿಗಳೇ ಸಿಎಂ ಹತ್ರ ಬಂದು ಒತ್ತಾಯ ಮಾಡ್ತಿದ್ದಾರೆ. ನೀವು ಅದನ್ನ ದಿಕ್ಕು ತಪ್ಪಿಸ್ತಾ ಇದ್ದೀರಿ ಎಂದು ಸಿಟ್ಟಿನಿಂದ ಹೇಳಿದರು. ಇದಾದ ಬಳಿಕ ಸಂಪುಟ ಸಭೆಯಿಂದ ಸಚಿವ ವಿನಯ ಕುಲಕರ್ಣಿ ಸಿಟ್ಟಿನಿಂದ ಹೊರಬಂದು 10 ನಿಮಿಷಗಳ ಬಳಿಕ ಮತ್ತೆ ವಾಪಸ್ ಹಾಜರಾದರು.
ಈ ವೇಳೆ ಆರೋಗ್ಯ ಸಚಿವ ರಮೇಶ್ ಕುಮಾರ್ ಮಾತನಾಡಿ, ಎಲ್ಲರೂ ನಿಮ್ಮ ಅಭಿಪ್ರಾಯಗಳನ್ನಷ್ಟೇ ತಿಳಿಸಿ. ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ. ಸುಮ್ಮನೆ ಕೂಗಾಟ-ಕಿತ್ತಾಟ ಸರಿಯಲ್ಲ ಎಂದು ಸಲಹೆ ನೀಡಿದರು.
ಈ ಚರ್ಚೆ ವೇಳೆ ಮಧ್ಯಪ್ರವೇಶಿಸಿ ಸಿಎಂ ಸಿದ್ದರಾಮಯ್ಯ, ಲಾಭ ನಷ್ಟದ ಲೆಕ್ಕಚಾರದ ಬಗ್ಗೆ ನನಗೆ ಹೇಳ್ತೀರಾ ನೀವು. ರಾಜಕೀಯ ಲಾಭ-ನಷ್ಟ ನನಗೂ ಗೊತ್ತಿದೆ. ಇದೇನ್ ಕ್ಯಾಬಿನೆಟ್ ಅಂತಾ ತಿಳ್ಕೊಂಡಿದ್ದೀರೋ? ಏನು? ಇಷ್ಟೊಂದು ವೈಯಕ್ತಿಕ ಮಟ್ಟಕ್ಕೆ ಇಳಿದು ಜಗಳ ಮಾಡಿದ್ರೆ ಏನು ಆಗಲ್ಲ. ಸುಮ್ಮನಿರಿ. ಈ ವಿಚಾರದ ಬಗ್ಗೆ ನಿಮ್ಮ ನಿಮ್ಮ ಅಭಿಪ್ರಾಯಗಳನ್ನಷ್ಟೇ ತಿಳಿಸಿ ಎಂದರು. ಈ ಸಂದರ್ಭದಲ್ಲಿ ಪ್ರತ್ಯೇಕ ಧರ್ಮದ ಸಾಧಕ-ಬಾಧಕ ಬಗ್ಗೆ ಅಡ್ವೋಕೇಟ್ ಜನರಲ್ ಮಧುಸೂದನ್ ನಾಯಕ್ ಅವರನ್ನು ಸಂಪುಟ ಸಭೆಗೆ ಕರೆಸಿ ಸಿದ್ದರಾಮಯ್ಯ ಮಾಹಿತಿ ಪಡೆದರು.
ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಬಹುತೇಕ ಸಚಿವರು ಒಪ್ಪಿಗೆ ನೀಡಿದರು. ಆದರೆ ಸಚಿವ ಈಶ್ವರ ಖಂಡ್ರೆ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ವಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಈಶ್ವರ ಖಂಡ್ರೆ ಮಾತನಾಡಿ, ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಸರ್ಕಾರ ಶಿಫಾರಸು ಮಾಡಿದರೆ ಕನಿಷ್ಠ 20 ಸ್ಥಾನಗಳನ್ನು ನಾವು ಕಳೆದುಕೊಳ್ಳಬೇಕಾಗುತ್ತದೆ ಎಂದಾಗ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ನನಗೂ ಕೂಡ ಹೀಗೆ ಅನಿಸುತ್ತಿದೆ. ಈಡಿಗರಿಗೂ ಪ್ರತ್ಯೇಕ ಧರ್ಮದ ಸ್ಥಾನ ನೀಡುತ್ತೀರಾ ಎಂದು ಪ್ರಶ್ನಿಸಿದರು.
ಶಿಕ್ಷಣ ಸಚಿವ ತನ್ವೀರ್ ಸೇಠ್ ಮಾತನಾಡಿ, ನೀವು ಅಲ್ಪಸಂಖ್ಯಾತರ ಸ್ಥಾನಮಾನ ನೀಡಿ. ಆದರೆ, ಅಲ್ಪಸಂಖ್ಯಾತರಿಗೆ ಯಾವುದೇ ದುಷ್ಪರಿಣಾಮ ಆಗದಂತೆ ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದರು. ಎಲ್ಲರ ಮಾತು ಕೇಳಿ ಕೊನೆಗೆ ಪ್ರತ್ಯೇಕ ಲಿಂಗಾಯತ ಧರ್ಮದ ಬದಲಿಗೆ ಲಿಂಗಾಯತ ಮತ್ತು ವೀರಶೈವ ಲಿಂಗಾಯತ, ಬಸವ ತತ್ವ ಪಾಲಕರಿಗೆ ಪ್ರತ್ಯೇಕ ಧರ್ಮ ಎನ್ನುವ ಸಾಲು ಸೇರಿಸಿ. ಮುಂದೆ ಏನಾಗುತ್ತೋ ಅಂತ ನೋಡೋಣ ಎಂದು ಹೇಳಿ ಸಭೆಯನ್ನು ಮುಕ್ತಾಯಗೊಳಿಸಿದರು ಎಂದು ಹೇಳಲಾಗುತ್ತಿದೆ.
ಸಚಿವ ಸಂಪುಟದ ನಿರ್ಣಯಗಳೇನು?
* ಬಸವ ತತ್ವ ಒಪ್ಪಿ ಬರುವವರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ
* ಲಿಂಗಾಯತ ಮತ್ತು ವೀರಶೈವ, ಬಸವತತ್ವದಡಿ ನಂಬಿಕೆ ಇರುವವರಿಗೆ ಅನ್ವಯ
* ಪ್ರತ್ಯೇಕ ಧರ್ಮಕ್ಕೆ ಒಳಗಾಗುವವರಿಗೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನ
* ಕರ್ನಾಟಕ ಅಲ್ಪಸಂಖ್ಯಾತ ಕಾಯ್ದೆಯ ಸೆಕ್ಷನ್ 2ಡಿ ಅಡಿ ಶಿಫಾರಸು
* ಕೇಂದ್ರದ ಅಲ್ಪಸಂಖ್ಯಾತ ಆಯೋಗದ 2 (ಸಿ) ಕಾಯ್ದೆ ಅನ್ವಯ
ಅಲ್ಪಸಂಖ್ಯಾತರ ಸ್ಥಾನಮಾನ ಯಾರಿಗೆ?
* ರಾಜ್ಯ ಸರ್ಕಾರವೇನೋ ಶಿಫಾರಸು ಮಾಡಿದೆ ಆದ್ರೆ ಕೇಂದ್ರ ಸಂಪುಟ ಒಪ್ಪಿಗೆ ನೀಡಬೇಕು
* ಅಲ್ಪಸಂಖ್ಯಾತರ ಸ್ಥಾನಮಾನ ಬೇಕಾದರೆ ವೀರಶೈವರು ಕೂಡ ಬಸವ ತತ್ವ ಪಾಲನೆ ಮಾಡಬೇಕು
* ವೀರಶೈವರು ತಮ್ಮದೇ ಆದ ತತ್ವ ಸಿದ್ಧಾಂತ ಹೊಂದಿರುವುದರಿಂದ ಬಸವ ತತ್ವ ಅನುಕರಣೆ ಅಸಾಧ್ಯ
* ಅಲ್ಪಸಂಖ್ಯಾತರ ಸ್ಥಾನಮಾನ ಸಿಕ್ಕಿದ್ರೆ, ಲಿಂಗಾಯತರು ಮತ್ತು ವೀರಶೈವರು ಹಿಂದುಗಳಲ್ಲ!
ಹುಬ್ಬಳ್ಳಿ: ಪ್ರತ್ಯೇಕ ಲಿಂಗಾಯತ ಧರ್ಮ ಕುರಿತ ನಾಗಮೋಹನ ದಾಸ್ ಸಮಿತಿ ವರದಿಯನ್ನು ಒಪ್ಪಿದ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ನಿರ್ಧಾರವನ್ನು ಕೈಗೊಂಡ ಹಿನ್ನೆಲೆಯಲ್ಲಿ ರಂಭಾಪುರಿ ಶ್ರೀ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ರಂಭಾಪುರಿ ಶ್ರೀಗಳು, ಮುಖ್ಯಮಂತ್ರಿಗಳು ಧರ್ಮ ಒಡೆಯುವ ಕೆಲಸ ಮಾಡಿದ್ದಾರೆ. ಲಿಂಗಾಯತ ವೀರಶೈವ ಧರ್ಮವನ್ನ ಛಿದ್ರ ಮಾಡಿದ್ದಾರೆ. ಇವರಿಗೆ ಜನರು ತಕ್ಕಪಾಠ ಕಲಿಸುತ್ತಾರೆ. ಅತ್ಯಂತ ಅವೈಜ್ಞಾನಿಕ ಹಾಗೂ ರಾಜಕೀಯ ಪ್ರೇರಿತರಾಗಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ ಅವರು ಪ್ರತ್ಯೇಕ ಧರ್ಮ ಸ್ಥಾಪನೆ ಮಾಡುವ ವಿಚಾರದಲ್ಲಿ ಅತುರದ ನಿರ್ಧಾರ ಮಾಡಿದ್ದಾರೆ. ಕ್ಯಾಬಿನೆಟ್ ನಿರ್ಧಾರವನ್ನು ವೀರಶೈವ ಲಿಂಗಾಯತ ಧರ್ಮ ರಾಷ್ಟ್ರೀಯ ಮಠ ಪರಿಷತ್ ಖಂಡಿಸುತ್ತದೆ. ಅಲ್ಲದೇ ವೀರಶೈವ ಮಠಾಧೀಶರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ವೀರಶೈವದಿಂದ ಲಿಂಗಾಯತವನ್ನು ಯಾರು ಬೇರ್ಪಡಿಸಲು ಸಾಧ್ಯವಿಲ್ಲ. ಧರ್ಮವನ್ನು ಒಡೆಯುವ ಕೆಲಸ ಮಾಡಿದ ರಾಜಕಾರಣಿಗಳಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ರಾಜ್ಯದ ಶಿಫಾರಸಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸುವುದಿಲ್ಲ ಎಂದು ಹೇಳಿದರು.
ಸಮಿತಿಯ ಮುಂದೆ ಈಗಾಗಲೇ ನಾವು ಸಾವಿರಾರು ಪುಟಗಳ ಮಾಹಿತಿ ನೀಡಿದ್ದೆವು. ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರು ಸಹ ವೀರಶೈವ ಹಾಗೂ ಲಿಂಗಾಯತ ಧರ್ಮದ ಎಲ್ಲರು ಒಟ್ಟಿಗೆ ಬಂದರೆ ಮಾತ್ರ ಶಿಫಾರಸು ಮಾಡುವ ಕುರಿತು ಹೇಳಿದ್ದರು. ಆದರೆ ಇಂದು ಅವರು ತಮ್ಮ ಮಾತನ್ನು ತಪ್ಪಿದ್ದಾರೆ. ಅವರ ಮಾತಿನ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದು ಆರೋಪಿಸಿದರು.
ಸಮಿತಿಗೆ ಸಾವಿರಾರು ಪುಟ ವೀರಶೈವ ಇತಿಹಾಸದ ಕುರಿತು ಮಾಹಿತಿ ನೀಡಲಾಗಿದೆ. ಆದರೆ ಇಲ್ಲಿ ಏಕಪಕ್ಷೀಯ ನಿರ್ಧಾರ ಮಾಡಿ. ಸ್ವಾತಂತ್ರ್ಯ ಲಿಂಗಾಯತರು ನೀಡಿದ ಮಾಹಿತಿಯನ್ನೇ ಸಮಿತಿ ನೀಡಿದೆ ಎಂದರು.
ನವದೆಹಲಿ: ನಗರ ರಸ್ತೆ ಮತ್ತು ಹೆದ್ದಾರಿಯಲ್ಲಿ ವೇಗದ ಮಿತಿಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಹೊಸ ನಿಯಮದ ಪ್ರಕಾರ ನಗರದಲ್ಲಿ ಕಾರುಗಳು ಗಂಟೆಗೆ 70 ಕಿ.ಮೀ. ವೇಗ ಮತ್ತು ಬೈಕುಗಳಿಗೆ 60 ಕಿ.ಮೀ. ವೇಗದ ಮಿತಿಯನ್ನು ನಿಗದಿ ಪಡಿಸಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಿ ನಿತಿನ್ ಗಡ್ಕರಿ ಬುಧವಾರದಂದು ನಗರದ ರಸ್ತೆಗಳು ಮಾತ್ರವಲ್ಲದೇ ಹೆದ್ದಾರಿಗಳು ಮತ್ತು ಎಕ್ಸ್ ಪ್ರೆಸ್ ವೇಗಳಲ್ಲೂ ವೇಗದ ಮಿತಿಯನ್ನು ಹೆಚ್ಚಿಸಲು ಒಪ್ಪಿಗೆ ನೀಡಿದ್ದಾರೆ. ಅಧಿಸೂಚನೆ ಹೊರಡಿಸಲು ಈ ಪ್ರಸ್ತಾವನೆಯನ್ನು ಕಾನೂನು ಸಚಿವಾಲಯಕ್ಕೆ ಈಗ ಕಳುಹಿಸಲಾಗಿದೆ.
ಹೊಸ ವ್ಯವಸ್ಥೆಯ ಪ್ರಕಾರ ಒಂದು ವೇಳೆ ನಿಗದಿಯಾಗಿರುವ ಮಿತಿಯ 5% ರಷ್ಟು ಜಾಸ್ತಿ ವೇಗದಲ್ಲಿ ಸಂಚರಿಸಿದ್ದಲ್ಲಿ ಎಚ್ಚರಿಕೆ ನೀಡಲಾಗುತ್ತದೆ ಅಷ್ಟೇ ಅಲ್ಲದೇ ದಂಡ ವಿಧಿಸಲಾಗುವುದಿಲ್ಲ. ನಗರದಲ್ಲಿ ಗಂಟೆಗೆ 70 ಕಿ.ಮೀ ವೇಗದಲ್ಲಿ ಸಂಚರಿಸುವುದು ಪ್ರಯೋಗಿಕವಾಗಿ ಸಾಧ್ಯವಾಗದೇ ಇದ್ದರೂ ಹಲವು ನಗರಗಳಲ್ಲಿ ರಿಂಗ್ ರಸ್ತೆಗಳು ಇರುವ ಕಾರಣ ವೇಗದ ಮಿತಿಯನ್ನು ಏರಿಸಲಾಗಿದೆ.
ದೇಶಾದ್ಯಂತ ವೇಗ ಮಿತಿಯನ್ನ ಹೆಚ್ಚಿಸುವ ಅಧಿಕಾರ ಕೇವಲ ಕೇಂದ್ರ ಸರ್ಕಾರಕ್ಕೆ ಮಾತ್ರ ಇದ್ದು, ರಾಜ್ಯ ಸರ್ಕಾರ ಮತ್ತು ಇನ್ನಿತರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ರಸ್ತೆಯ ಮೇಲೆ ವೇಗದ ಮಿತಿಯನ್ನು ಹೇರಲು ಅನುಮತಿ ನೀಡಲಾಗಿದೆ. ಆದರೆ ಕೇಂದ್ರ ಸರ್ಕಾರ ನಿಗದಿ ಪಡಿಸಿದ ಗರಿಷ್ಟ ವೇಗದ ಮಿತಿಯನ್ನು ಮೀರುವಂತಿಲ್ಲ.
ಬದಲಾಗಿರುವ ನಿಯಮಗಳ ಪ್ರಕಾರ ಎಕ್ಸ್ ಪ್ರೆಸ್ ವೇನಲ್ಲಿ ಇಲ್ಲಿಯವರೆಗೆ ಪ್ರತಿ ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸುತ್ತಿದ್ದ ಕಾರು ಇನ್ನು ಮುಂದೆ ಪ್ರತಿ ಗಂಟೆಗೆ 120 ಕಿ.ಮೀ ವೇಗದಲ್ಲಿ ಸಂಚರಿಸಬಹುದು. ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗೆ 80 ಕಿ.ಮೀ ವೇಗದಲ್ಲಿ ಹೋಗುತ್ತಿದ್ದ ಕಾರುಗಳು ಗಂಟೆಗೆ 100 ಕಿ.ಮೀ ವೇಗದಲ್ಲಿ ಸಂಚರಿಸಬಹುದಾಗಿದೆ.
ನವದೆಹಲಿ: ದೇಶದಲ್ಲಿನ ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸುವ ದೃಷ್ಟಿಯಿಂದ ಕಡ್ಡಾಯವಾಗಿ ದಂಪತಿಗೆ ಎರಡು ಮಕ್ಕಳ ನೀತಿಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಕಾಯ್ದೆ ರೂಪಿಸಲು ನಿರ್ದೇಶನ ನೀಡುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಇಬ್ಬರು ಮಕ್ಕಳ ನೀತಿ ಕಡ್ಡಾಯ ವಿಚಾರವನ್ನು ತೀರ್ಮಾನ ಮಾಡುವುದು ಸಂಸತ್ ಕಾರ್ಯವಾಗಿದ್ದು, ನ್ಯಾಯಾಲಯ ಈ ಕುರಿತು ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾಗೊಳಿಸಿದೆ.
ವಕೀಲರಾದ ಅನುಜ್ ಸಕ್ಸೇನಾ, ಪೃಥ್ವಿ ರಾಜ್ ಚೌಹಣ್ ಮತ್ತು ಪ್ರಿಯಾ ಶರ್ಮಾ ಸಾರ್ವಜನಿಕಾ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಸರ್ಕಾರವು ಕಡ್ಡಾಯವಾಗಿ ಕುಟುಂಬ ನಿಯಂತ್ರಣ ಕಾನೂನು ರಚಿಸಿ, ಇಬ್ಬರು ಮಕ್ಕಳ ನೀತಿಯನ್ನು ಜಾರಿ ಮಾಡುವಂತೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದರು.
ಅರ್ಜಿಯಲ್ಲಿ 2022 ರ ವೇಳೆ ಭಾರತದ ಜನಸಂಖ್ಯೆ 1.5 ಶತಕೋಟಿಗಿಂತಲೂ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೇ ಜನಸಂಖ್ಯೆ ಹೆಚ್ಚಳವಾಗುವುದರಿಂದ ನಾಗರೀಕರ ಮಧ್ಯೆ ಯುದ್ಧ ಸಂಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದ್ದರು. ಯಾವ ಕುಟುಂಬಗಳು ಇಬ್ಬರು ಮಕ್ಕಳ ನೀತಿಯನ್ನು ಅನುಸರಿಸುತ್ತದೋ ಆ ಕುಟುಂಬಗಳಿಗೆ ಪ್ರೋತ್ಸಾಹ/ಬಹುಮಾನ ನೀಡಬೇಕು. ನಿಯಮಗಳನ್ನು ಪಾಲಿಸದ ಕುಟುಂಬಗಳಿಗೆ ಶಿಕ್ಷೆ ನೀಡುವ ಕುರಿತು ನಿಯಮಗಳನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದರು.
ಜನಸಂಖ್ಯೆ ಹೆಚ್ಚಳದಿಂದ ದೇಶಾದ್ಯಂತ ನಿರುದ್ಯೋಗ, ಬಡತನ, ಅನಕ್ಷರತೆ, ಅನಾರೋಗ್ಯ ಸಮಸ್ಯೆಗಳು ಹೆಚ್ಚಳವಾಗುತ್ತಿದೆ. ಪ್ರಸ್ತುತ ಪ್ರಪಂಚದಲ್ಲಿ ಭಾರತ ಯುವ ದೇಶವಾಗಿದೆ. ಇದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ನವದೆಹಲಿ: ದಯಾಮರಣ ಆಯ್ಕೆ ಮಾಡುವುದು ಮೂಲಭೂತ ಹಕ್ಕು ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿದೆ.
ಮುಖ್ಯ ನ್ಯಾ. ದೀಪಕ್ ಮಿಶ್ರಾ ಅವರನ್ನು ಒಳಗೊಂಡ ಪಂಚ ಪೀಠದ ನ್ಯಾಯಾಧೀಶರಾದ ಎಕೆ ಸಿಕ್ರಿ, ಎಎಂ ಖಾನ್ವಿಲ್ಕರ್, ಡಿವೈ ಚಂದ್ರಚೂಡ್, ಅಶೋಕ್ ಭೂಷಣ್ ಅವರಿದ್ದ ಪೀಠ ಕೆಲ ಮಾರ್ಗಸೂಚಿಗಳನ್ನು ತಿಳಿಸಿ ದಯಾಮರಣಕ್ಕೆ ಅನುಮತಿ ನೀಡಿದೆ.
ಯಾವುದೇ ಒಬ್ಬ ವ್ಯಕ್ತಿ ವೈದ್ಯಕೀಯ ಮಂಡಳಿ ಮತ್ತು ಹೈಕೋರ್ಟ್ ಅನುಮತಿ ಪಡೆದ ನಂತರ ದಯಾಮರಣ ಪಡೆಯಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ. ಅಲ್ಲದೇ ಆ ವ್ಯಕ್ತಿಗೆ ತನ್ನ ಜೀವ ರಕ್ಷಿಸಲು ಬೇಕಾದ ಮದ್ದು ಮತ್ತು ವೈದ್ಯಕೀಯ ಸವಲತ್ತು ನಿರಾಕರಿಸುವ ಹಕ್ಕಿದೆ ಎಂದು ತಿಳಿಸಿದೆ. ಆದರೆ ಚುಚ್ಚುಮದ್ದು ನೀಡಿ ಸಾಯಿಸಲು ಅನುಮತಿ ನೀಡುವುದಿಲ್ಲ ಎಂದು ನ್ಯಾಯಾಲಯ ತನ್ನ ಐತಿಹಾಸಿಕ ತೀರ್ಪಿನಲ್ಲಿ ಉಲ್ಲೇಖಿಸಿದೆ.
ದಯಾಮರಣ ಎಂದರೇನು?
ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ರೋಗಿಯೊಬ್ಬ ಮುಂದೆ ಈ ಸಮಸ್ಯೆಯನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲದ ಸಂದರ್ಭದಲ್ಲಿ ತನಗೆ ಮರಣದ ದಯೆಯನ್ನು ನೀಡಿ ಎಂದು ಅರ್ಜಿ ಮೂಲಕ ಕೇಳಿಕೊಳ್ಳುವುದೆ ದಯಾಮರಣ. ಹಲವು ರಾಷ್ಟ್ರಗಳಲ್ಲಿ ದಯಾಮರಣಕ್ಕೆ ಅನುಮತಿ ಇದೆ.
ಯುಥೆನೇಸಿಯಾ ಎಂದು ಕರೆಯುವುದು ಯಾಕೆ?
ಯುಥೆನೇಸಿಯಾ ಮತ್ತು ದಯಾಮರಣ ಎರಡೂ ಒಂದೇ. ಗ್ರೀಕ್ ಭಾಷೆಯಲ್ಲಿ ಒಳ್ಳೆಯ ಸಾವು ಎನ್ನುವುದಕ್ಕೆ ಯುಥೆನೇಸಿಯಾ ಎಂದು ಕರೆಯಲಾಗುತ್ತದೆ.
ಸುಪ್ರೀಂ ಹೇಳಿದ್ದು ಏನು?
ವ್ಯಕ್ತಿಯ ಕಾಯಿಲೆ ಗುಣಮುಖವಾಗುವುದೇ ಇಲ್ಲ ಎಂದು ವೈದ್ಯಕೀಯ ಮಂಡಳಿ ದೃಢಪಡಿಸಿದರೆ ಜೀವ ರಕ್ಷಕ ವೈದ್ಯಕೀಯ ಸವಲತ್ತು ನಿರಾಕರಿಸುವ ಮೂಲಕ ನಿಷ್ಕ್ರಿಯ ದಯಾಮರಣ ಮಾತ್ರ ನೀಡಬಹುದು. ಆದರೆ ಚುಚ್ಚುಮದ್ದು ನೀಡಿ ಸಾಯಿಸುವಂತಿಲ್ಲ. ಇದೇ ವೇಳೆ ವೈದ್ಯಕೀಯ ಮಂಡಳಿ ವ್ಯಕ್ತಿಯ ಗುಣಪಡಿಸದ ಕಾಯಿಲೆ ಕುರಿತು ದೃಢಪಡಿಸಿದರೆ ವ್ಯಕ್ತಿಯ ಜೀವ ರಕ್ಷಿಸುವ ವೈದ್ಯಕೀಯ ಸವಲತ್ತು ನಿರಾಕರಿಸಬಹುದು ಎಂದು ಹೇಳಿದೆ.
ಅರ್ಜಿ ಸಲ್ಲಿಸಿದವರು ಯಾರು?
2005 ರಲ್ಲಿ ‘ಕಾಮನ್ ಕಾಸ್’ ಹೆಸರಿನ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದು `ಲಿವಿಂಗ್ ವಿಲ್’ ಮೂಲಕ ದಯಾಮರಣ ನೀಡುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಬಹು ವರ್ಷಗಳಿಂದ ಕಾಯಿಲೆಯಿಂದ ನರಳುತ್ತಿರುವ ರೋಗಿಗಳಿಗೆ ಪರೋಕ್ಷ ದಯಾಮರಣಕ್ಕೆ ಅವಕಾಶ ನೀಡಬೇಕೆಂದು ಮನವಿ ಮಾಡಿತ್ತು. 2011ರಲ್ಲಿ ಭಾರತದ ಸುಪ್ರೀಂಕೋರ್ಟ್ 37 ವರ್ಷಗಳಿಂದ ಕೋಮಾ ಸ್ಥಿತಿಯಲ್ಲಿ ನರಳಿದ್ದ ನರ್ಸ್ ಅರುಣಾ ಶಾನ್‍ಭಾಗ್ ಪ್ರಕರಣಕ್ಕೆ ಸಂಬಂಧಿಸಿದಂತೆ `ಪರೋಕ್ಷ ದಯಾಮರಣ’ಕ್ಕೆ ಅನುಮತಿ ನೀಡಿರಲಿಲ್ಲ. ಈ ತೀರ್ಪು ಪ್ರಕಟವಾದ ಬಳಿಕ ದಯಾಮರಣವನ್ನು ತಪ್ಪಾಗಿ ಅರ್ಥೈಸಿಕೊಂಡಿದೆ ಎನ್ನುವ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಕೋರ್ಟ್ ಐದು ಮಂದಿ ನ್ಯಾಯಧೀಶರ ಪಂಚಪೀಠವನ್ನು ರಚಿಸಿತ್ತು.
ಪ್ರತ್ಯಕ್ಷ ಮತ್ತು ಪರೋಕ್ಷ ದಯಾಮರಣ ಎಂದರೇನು?
ಅಂಗಾಂಗಗಳು ನಿಷ್ಕ್ರೀಯಗೊಂಡಿರುವ ರೋಗಿಗೆ ನೀಡಿರುವ ವೆಂಟಿಲೇಟರ್ ಸಹಿತ ಜೀವಾಧಾರ ವ್ಯವಸ್ಥೆಯನ್ನು ತೆಗೆಯುವುದು ಪರೋಕ್ಷ ದಯಾಮರಣ. ಒಬ್ಬ ವ್ಯಕ್ತಿಗೆ ಮಾರಣಾಂತಿಕ ರಾಸಾಯನಿಕವನ್ನು ನೀಡಿ ಹತ್ಯೆ ಮಾಡುವುದು ಪ್ರತ್ಯಕ್ಷ ದಯಾಮರಣ. ಪ್ರತ್ಯಕ್ಷ ದಯಾಮರಣ ಕಾನೂನುಬಾಹಿರ.
ಏನಿದು ಲಿವಿಂಗ್ ವಿಲ್?
ವ್ಯಕ್ತಿಯೊಬ್ಬ ನಾನು ಮೃತಪಟ್ಟ ನಂತರ ನನ್ನ ಆಸ್ತಿಯನ್ನು ಯಾರಿಗೆ ಹಂಚಬೇಕು ಇತ್ಯಾದಿ ವಿಚಾರಗಳನ್ನು ಲಿಖಿತವಾಗಿ ಬರೆಯುವುದಕ್ಕೆ ವಿಲ್ ಎಂದು ಕರೆಯುತ್ತಾರೆ. ಈ ವಿಲ್ ಎಲ್ಲರಿಗೂ ತಿಳಿದಿದ್ದರೂ ಲಿವಿಂಗ್ ವಿಲ್ ಸ್ವಲ್ಪ ಅದೇ ರೀತಿಯಾಗಿ ಬರುತ್ತದೆ. ಗಂಭೀರ ಚಿಕಿತ್ಸೆಗೆ ದಾಖಲಾಗುವ ಮೊದಲು ಅಥವಾ ಅನುಮತಿಯನ್ನು ನೀಡಲಾಗದ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ ತನಗೆ ಯಾವ ರೀತಿಯ ಚಿಕಿತ್ಸೆಯನ್ನು ನೀಡಬೇಕು ಎನ್ನುವ ನಿರ್ಧಾರಗಳನ್ನು ಮುಂದೆ ಯಾರು ತೆಗೆದುಕೊಳ್ಳಬೇಕು ಎನ್ನುವುದನ್ನು ತಿಳಿಸುವ ಲಿಖಿತ ದಾಖಲೆಯೇ ಲಿವಿಂಗ್ ವಿಲ್. ಶುಕ್ರವಾರ ಕೋರ್ಟ್ ರೋಗಿ ಲಿವಿಂಗ್ ವಿಲ್ ನೀಡಿದ್ದರೆ ದಯಾಮರಣ ಕಲ್ಪಿಸಬಹುದು ಎಂದು ಹೇಳಿದೆ. ಲಿವಿಂಗ್ ವಿಲ್ ಮೂಲಕ ದಯಾಮರಣ ಕಲ್ಪಿಸಿದ್ದರೆ ರೋಗಿ, ವೈದ್ಯರು ಹಾಗೂ ಪರಿಚಾರಕರರಿಗೆ ಕಾನೂನು ರಕ್ಷಣೆ ಇರುತ್ತದೆ.
ದಯಾಮರಣ ವಿರೋಧಿಗಳ ವಾದ ಏನಿತ್ತು?
ಒತ್ತಡ ಹೇರಿ ಲಿವಿಂಗ್ ವಿಲ್ ಬರೆದುಕೊಂಡು ರೋಗಿಯ ದೇಹದ ಅಂಗಾಂಗವನ್ನು ದುರುಪಯೋಗ ಮಾಡಬಹುದು. ಒಂದು ವೇಳೆ ಅವಕಾಶ ನೀಡಿದರೆ ಇದು ಹಣ ಮಾಡುವ ದಂಧೆಯಾಗಬಹುದು. ಹೀಗಾಗಿ ಅವಕಾಶ ನೀಡಬಾರದು ಎಂದು ವಾದಿಸಿದ್ದರು.
ಕೇಂದ್ರದ ತಿದ್ದುಪಡಿ ಮಸೂದೆಯಲ್ಲಿ ಏನಿದೆ?
ದೀರ್ಘ ಕಾಲದ ವಾಸಿಯಾಗದ ಕಾಯಿಲೆಗಳಿಂದ ಮರಣಶಯ್ಯೆಯಲ್ಲಿರುವ ರೋಗಿಗಳಿಗೆ ದಯಾಮರಣ ನೀಡುವ ಸಂಬಂಧ, ಕಳೆದ ವರ್ಷ ಮಸೂದೆಗೆ ಸರ್ಕಾರ ತಿದ್ದುಪಡಿ ತಂದಿತ್ತು. ಈ ಮಸೂದೆಯಲ್ಲಿ ದಯಾಮರಣಕ್ಕೆ ಅನುಮತಿ ನೀಡಲು ಆಸ್ಪತ್ರೆಗಳಲ್ಲಿ ಸಮಿತಿ ರಚಿಸಿ ಗುಣಮುಖವಾಗದ ಕಾಯಿಲೆ ಎಂದು ವೈದ್ಯಕೀಯ ಮಂಡಳಿ ದೃಢಪಡಿಸಬೇಕು. ಜೀವ ರಕ್ಷಕ ವೈದ್ಯಕೀಯ ಸವಲತ್ತು ನಿರಾಕರಿಸಿ ದಯಾಮರಣ ಮಾತ್ರ ನೀಡಬಹುದು. ಆದರೆ ಚುಚ್ಚುಮದ್ದು ನೀಡಿ ಸಾಯಿಸುವಂತಿಲ್ಲ. ದಯಾಮರಣವನ್ನು ಸಹಜ ಮರಣ ಎಂದು ಪರಿಗಣಿಸಲಾಗುವುದು ಎನ್ನುವ ಅಂಶವಿತ್ತು.
ಅಷ್ಟೇ ಅಲ್ಲದೇ ದಯಾಮರಣಕ್ಕೊಳಗಾದ ರೋಗಿ, ವೈದ್ಯರು, ಪರಿಚಾರಕರರಿಗೆ ಕಾನೂನು ರಕ್ಷಣೆ ಇರುತ್ತದೆ. ರೋಗಿಗೆ ಸ್ವಯಂ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ಚಿಕಿತ್ಸೆ ಬೇಡ ಎಂದು ಆಪ್ತ ಸಂಬಂಧಿಕರ ಮನವಿ ಅಗತ್ಯ. ಎಲ್ಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ದಯಾಮರಣ ಮನವಿ ಸ್ವೀಕರಿಸಿ ಅದಕ್ಕೆ ಅನುಮತಿ ನೀಡುವ ಸಮತಿ ರಚಿಸಬೇಕು. ಬದುಕುವ ಸಾಧ್ಯತೆ ಇಲ್ಲ, ಆಯಸ್ಸು ಮುಂದೂಡಲು ಇಷ್ಟವಿಲ್ಲ ಎನ್ನುವ `ಲಿವಿಂಗ್‍ವಿಲ್’ ಅರ್ಜಿಯನ್ನು ಸಮಿತಿ ಪರಿಶೀಲಿಸಬೇಕು. ಸಮಿತಿಗೆ ತಪ್ಪು ಮಾಹಿತಿ ನೀಡಿ ದಯಾ ಮರಣಕ್ಕೆ ಅನುಮತಿ ಪಡೆದಿರುವುದು ಸಾಬೀತಾದರೆ 5-10 ವರ್ಷ ಜೈಲು ಶಿಕ್ಷೆಯ ಜೊತೆ 20 ಲಕ್ಷದಿಂದ 1 ಕೋಟಿ ರೂ. ದಂಡ ವಿಧಿಸಲು ಪರಿಷ್ಕೃತ ಕರಡು ಮಸೂದೆಯಲ್ಲಿ ಅವಕಾಶವಿದೆ.
ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರ `ಹಣಕಾಸು ಪರಿಹಾರ ಮತ್ತು ಠೇವಣಿ ವಿಮೆ ಮಸೂದೆ’ (ಎಫ್‌ಆರ್‌ಡಿಐ) ಜಾರಿಗೆ ತರುವುದಕ್ಕೆ ಮುಂದಾಗಿದ್ದು, ಈ ಮಸೂದೆ ಜಾರಿಯಾದರೆ ಬ್ಯಾಂಕುಗಳ ರಕ್ಷಣೆಯಾಗಲಿದ್ದು, ಜನರ ಹಣಕ್ಕೆ ಮಾತ್ರ ಯಾವುದೇ ರಕ್ಷಣೆ ಇರುವುದಿಲ್ಲ ಎಂದು ಕೆಪಿಸಿಸಿ ಕಾರ್ಯದರ್ಶಿ ಗುಂಡೂರಾವ್ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬ್ಯಾಂಕ್ ದಿವಾಳಿಯಾದಾಗ ಬ್ಯಾಂಕ್ ಗಳನ್ನು ರಕ್ಷಿಸುವ ನಿಯಮಗಳನ್ನು ಎಫ್‌ಆರ್‌ಡಿಐ ಮಸೂದೆಯಲ್ಲಿ ಜಾರಿಗೆ ಮಾಡಲಾಗುತ್ತಿದೆ. ಈ ಬಿಲ್ ಬ್ಯಾಂಕುಗಳ ರಕ್ಷಣೆಗೆ ಅನುಕೂಲವಾಗಿದೆ. ಆದರೆ ಜನರಿಗೆ ಅನುಕೂಲಕರವಾಗಿಲ್ಲ. ಒಂದು ವೇಳೆ ಮಸೂದೆ ಜಾರಿಗೆ ಆದರೆ ಜನರ ಹಣಕ್ಕೆ ರಕ್ಷಣೆಯಿಲ್ಲ. ಬ್ಯಾಂಕ್ ಗಳಲ್ಲಿಟ್ಟಿರುವ ಹಣಕ್ಕೆ ರಕ್ಷಣೆ ಇಲ್ಲವಾಗುತ್ತದೆ. ಇದು ಜನಸಾಮಾನ್ಯರಿಗೆ ಅಸುರಕ್ಷಿತವಾಗಿದೆ. ಕೇವಲ ಬ್ಯಾಂಕ್ ಮತ್ತು ಕಂಪನಿಗಳಿಗೆ ಅನುಕೂಲಕರವಾಗಿರುವ ಈ ಬಿಲ್ ಜಾರಿ ತರುವುದು ಸರಿಯಲ್ಲ ಎಂದು ಆರೋಪಿಸಿದರು.
ಇದೇ ವೇಳೆ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಕಿಡಿಕಾರಿದ ಅವರು, ಬ್ಯಾಂಕ್ ವ್ಯವಸ್ಥೆ ಹದಗೆಟ್ಟಿದೆ. ಬ್ಯಾಂಕ್ ಗಳನ್ನು ಬಚಾವ್ ಮಾಡಲು ಕೇಂದ್ರ ಮುಂದಾಗಿದೆ. ಇದಕ್ಕಾಗಿ 2.5 ಲಕ್ಷ ಕೋಟಿ ಲಿಕ್ವಿಡಿಟಿ ಕೇಂದ್ರ ನೀಡಿದೆ. ಅಲ್ಲದೆ ಬೇಲ್ ಔಟ್ ಅನ್ನು ಬೇಲ್ ಇನ್ ಮಾಡಲು ಹೊರಟಿದೆ. ಈ ಕುರಿತ ನಿಯಮಗಳನ್ನು ಎಫ್‍ಡಿಆರ್ ಐ ಮಸೂದೆಯಲ್ಲಿ ಸೇರಿಸಿದೆ. ಒಂದು ವೇಳೆ ಬ್ಯಾಂಕ್ ದಿವಾಳಿಯಾದರೆ ಬ್ಯಾಂಕ್ ಸುಲಭವಾಗಿ ಜಾಮೀನು ಪಡೆಯಬಹುದು. ಮೊದಲು ಜಾಮೀನು ಪಡೆಯಲು ಅವಕಾಶವಿರಲಿಲ್ಲ. ಇದರಿಂದ ಸಣ್ಣ ಠೇವಣಿದಾರರ ಹಣವೂ ವಾಪಸ್ ಬರಲ್ಲ. ಬ್ಯಾಂಕ್ ದಿವಾಳಿಯಾದರೆ ಠೇವಣಿ ಹಣ ವಾಪಸ್ ನೀಡಲ್ಲ. ದಿವಾಳಿ ಎಂದು ತೋರಿಸಿ ಬ್ಯಾಂಕ್ ತಪ್ಪಿಸಿಕೊಳ್ಳಲು ಅವಕಾಶ ಲಭಿಸಿಸುತ್ತದೆ. ಹೀಗಾಗಿ ಈ ಮಸೂದೆ ಜಾರಿಗೆ ತರುವುದು ಸರಿಯಲ್ಲ ಎಂದರು.
ಹಣಕಾಸು ಸಚಿವಾಲಯ ಹೇಳಿದ್ದೇನು?
ದಿವಾಳಿ ಅಂಚಿಗೆ ತಲುಪುವ ಬ್ಯಾಂಕ್‍ಗಳು ತಮ್ಮ ನಷ್ಟದ ತೀವ್ರತೆ ತಗ್ಗಿಸಲು ಠೇವಣಿದಾರರ ಹಣವನ್ನು ಬಳಸಿಕೊಳ್ಳಲು ಅವಕಾಶ ಇರುವ ಪ್ರಸ್ತಾವವನ್ನು (ಬಿಲ್ ಇನ್) ನಿಯಮವನ್ನು ಎಫ್‌ಆರ್‌ಡಿಐ ಮಸೂದೆ ಒಳಗೊಂಡಿದೆ ಎಂಬ ಮಾಧ್ಯಮ ವರದಿಗಳಿಗೆ ಕೇಂದ್ರ ಹಣಕಾಸು ಸಚಿವಾಲಯ ಈ ಹಿಂದೆ ಸ್ಪಷ್ಟನೆ ನೀಡಿತ್ತು. ಮಸೂದೆಯೂ ಬ್ಯಾಂಕ್ ಠೇವಣಿದಾರರ ಸ್ನೇಹಿಯಾಗಿದ್ದು, ಠೇವಣಿದಾರರ ಹಿತರಕ್ಷಣೆಗೆ ಧಕ್ಕೆಯಾಗುವ ನಿಯಮಗಳನ್ನು ಬದಲಿಸಿಲ್ಲ. ಹೆಚ್ಚು ಪಾರದರ್ಶಕವಾದ ಮತ್ತು ಹೆಚ್ಚುವರಿ ರಕ್ಷಣೆ ನೀಡುವ ಬಗೆಯಲ್ಲಿ ಈ ನಿಯಮಗಳಿವೆ ಎಂಬ ಭರವಸೆ ನೀಡಿತ್ತು.
ಈ ಮಸೂದೆಯನ್ನು ಆಗಸ್ಟ್ ನಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗಿದೆ. ಮಸೂದೆಯಲ್ಲಿನ ವಿವಿಧ ಪ್ರಸ್ತಾವನೆಗಳ ಬಗ್ಗೆ ಸಮಿತಿಯು ಎಲ್ಲ ಭಾಗಿದಾರರ ಜತೆ ಚರ್ಚೆ ನಡೆಸುತ್ತಿದೆ. ದೇಶಿ ಬ್ಯಾಂಕ್‍ಗಳು ಅಗತ್ಯ ಇರುವಷ್ಟು ಬಂಡವಾಳ ಹೊಂದಿವೆ. ಅಲ್ಲದೇ ನಿಯಂತ್ರಣ ಮತ್ತು ಮೇಲ್ವಿಚಾರಣೆಗೂ ಒಳಪಟ್ಟಿವೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸ್ಥಿರತೆಯೂ ಇದೆ ಎಂದು ಸಚಿವಾಲಯ ತಿಳಿಸಿತ್ತು.
ಬಿಲ್ ಇನ್ ನಿಯಮ: ಬ್ಯಾಂಕ್ ನಲ್ಲಿ ಠೇವಣಿ ಇಡುವ ಗ್ರಾಹಕರ 1 ಲಕ್ಷ ರು ವರೆಗಿನ ಠೇವಣಿಗೆ ಸರ್ಕಾರದ ಖಾತರಿ ನೀಡಿತ್ತು. ಅಂದರೆ ಒಂದು ವೇಳೆ ಬ್ಯಾಂಕ್ ದಿವಾಳಿಯಾದರೆ ಸರ್ಕಾರ ಈ ಜವಾಬ್ದಾರಿಯನ್ನು ನಿರ್ವಹಿಸುತಿತ್ತು. ಆದರೆ ಮಸೂದೆಯಲ್ಲಿ ಈ ನಿಯಮ ತೆಗೆದು ಹಾಕಲಾಗಿದೆ ಎನ್ನಲಾಗಿದೆ ವರದಿ ಹಿನ್ನೆಲೆಯಲ್ಲಿ ಈ ಆರೋಪ ಈಗ ಕೇಳಿ ಬರುತ್ತಿದೆ.
ಸರ್ಕಾರದ ಠೇವಣಿ ಹೊಣೆಗಾರಿಕೆ ನೋಡಿಕೊಳ್ಳಲು ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮವನ್ನು 1960ರ ಮುಂಚೆಯೇ ಸ್ಥಾಪಿಸಲಾಗಿದೆ. ಸರ್ಕಾರದ ಖಾತರಿಗೆ ಒಳಪಡುವ ಠೇವಣಿ ಮೊತ್ತ ಹೆಚ್ಚಿಸಲು ಒತ್ತಾಯಿಸಿದ್ದರೂ ಈ ಸಮಿತಿಯನ್ನು 1993 ರಿಂದ ಇದುವರೆಗೂ ಒಮ್ಮೆಯೂ ಪರಿಷ್ಕರಿಸಿಲ್ಲ.
ನವದೆಹಲಿ: ಹಜ್ ಸಬ್ಸಿಡಿ ಕಡಿತ ಗೊಳಿಸದ ಬೆನ್ನಲ್ಲೇ ಕೇಂದ್ರ ಸರ್ಕಾರ ಹಜ್ ಯಾತ್ರೆ ವಿಮಾನ ಪ್ರಯಾಣ ದರವನ್ನು ಕಡಿತಗೊಳಿಸಿದೆ. ಈ ಕುರಿತು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಕೇಂದ್ರ ಅಲ್ಪ ಸಂಖ್ಯಾತ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಈ ಕುರಿತು ಮಾಹಿತಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಆಸಕ್ತಿ ಹೊಂದಿದ್ದಾರೆ. ಯಾವುದೇ ಶಿಫಾರಸ್ಸು ಇಲ್ಲದೇ ಈ ನಿರ್ಧರವನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಭಾರತದ 21 ವಿಮಾನ ನಿಲ್ದಾಣಗಳಿಂದ ಹೊರಡುವ ಏರ್ ಇಂಡಿಯಾ, ಸೌದಿ ಏರ್ ಲೈನ್ಸ್ ಮತ್ತು ಫ್ಲೈನಾಸ್ ವಿಮಾನಯಾನ ಸಂಸ್ಥೆಗಳಲ್ಲಿ ಈ ನಿಯಮಗಳು ಅನ್ವಯಿಸುತ್ತವೆ ಎಂದರು.
ಸರ್ಕಾರದ ಈ ಕ್ರಮದಿಂದ ಹಜ್ ಯಾತ್ರೆ ಕೈಗೊಳ್ಳುವ ಯಾತ್ರಿಕರಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ. ಅಲ್ಲದೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಹಜ್ ಯಾತ್ರೆ ಹೆಸರಿನಲ್ಲಿ ನಡೆಸುತ್ತಿದ್ದ ಆರ್ಥಿಕ ಹಾಗೂ ರಾಜಕೀಯ ಶೋಷಣೆ ಕೊನೆಗೊಳ್ಳುತ್ತದೆ ಎಂದು ಹೇಳಿದರು.
ಪ್ರಯಾಣ ದರ ಎಷ್ಟು? ಅಹಮದಾಬಾದ್ ನಿಂದ 2013-14 ನೇ ಸಾಲಿನಲ್ಲಿದ್ದ 98,750 ರೂ. ದರದಿಂದ 65,015 ರೂ.ಗೆ ಇಳಿಯಲಿದೆ. ಮುಂಬೈ ನಿಂದ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ 98,750 ರೂ. ಗಳಿಂದ ದರ 57,857 ರೂ. ಗೆ ಇಳಿಕೆ ಆಗಲಿದೆ.
ಕಳೆದ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಆದೇಶ ಅನ್ವಯ ಕೇಂದ್ರ ಸರ್ಕಾರ ರಚಿಸಿದ ಸಮಿತಿಯ ಶಿಫಾರಸುಗಳ ವೇಳೆ 2018 ರಿಂದಲೇ ಹಜ್ ಯಾತ್ರೆಗೆ ನೀಡುತ್ತಿದ್ದ ಸಹಾಯಧನವನ್ನು ರದ್ದು ಪಡಿಸಲಾಗಿತ್ತು. ಈ ಹಣವನ್ನು ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ಶಿಕ್ಷಣ ಹಾಗೂ ಮಹಿಳೆಯರ ಅಭಿವೃದ್ಧಿಗೆ ಬಳಸುವುದಾಗಿ ಕೇಂದ್ರ ಸರ್ಕಾರ ತಿಳಿಸಿತ್ತು.
ಸಬ್ಸಿಡಿ ರದ್ದಾಗಿದ್ದು ಯಾಕೆ?
ಹಜ್ ಸಬ್ಸಿಡಿ ಹೆಸರಿನಲ್ಲಿ ಭಾರೀ ಅಕ್ರಮಗಳು ನಡೆಯುತ್ತಿದ್ದು, ತಲುಪುಬೇಕಾದವರಿಗೆ ಸಹಾಯಧನ ತಲುಪದೇ ಬೇರೆ ಯಾರಿಗೋ ತಲುಪುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದಿತ್ತು. 2022ರೊಳಗಾಗಿ ಹಜ್ ಸಬ್ಸಿಡಿಯನ್ನು ಹಂತ ಹಂತವಾಗಿ ಸ್ಥಗಿತಗೊಳ್ಳಿಸಬೇಕೆಂದು 2012ರಲ್ಲಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು. ಖರ್ಚುಗಳನ್ನು ಭರಿಸಲು ಸಾಧ್ಯವಿರುವ ಮಂದಿ ಮಾತ್ರ ಹಜ್ ಯಾತ್ರೆಯನ್ನು ಮಾಡಬೇಕು ಎಂದು ಕುರಾನ್ ಹೇಳುತ್ತದೆ. ಹೀಗಾಗಿ ಸಬ್ಸಿಡಿ ಪಡೆದು ಯಾತ್ರೆ ಮಾಡುವುದು ಕುರಾನ್ ಬೋಧನೆಗೆ ವಿರುದ್ಧವಾಗುತ್ತದೆ ಅಲ್ಲವೇ ಎಂದು ಸುಪ್ರೀಂ ಪ್ರಶ್ನಿಸಿತ್ತು. ಹಜ್ ಯಾತ್ರೆಗೆ ಬಳಸುವ ಹಣವನ್ನು ಅಲ್ಪಸಂಖ್ಯಾತರ ಶಿಕ್ಷಣ, ಅಭಿವೃದ್ಧಿಗೆ ಬಳಸಬೇಕೆಂದು ಸಲಹೆ ನೀಡಿತ್ತು. 2012ರ ತನಕ ಪ್ರತೀ ವರ್ಷ ಹಜ್ ಯಾತ್ರೆಗೆ ಸುಮಾರು 650 ಕೋಟಿ ರೂ. ಮೀಸಲಿಡಲಾಗುತ್ತಿತ್ತು. ಸುಪ್ರೀಂ ಆದೇಶ ಬಳಿಕ ಇದನ್ನು 450 ಕೋಟಿ ರೂ. ಗೆ ಕಡಿತಗೊಳಿಸಲಾಗಿತ್ತು.
ಸೌದಿ ಸರ್ಕಾರದ ಜೊತೆ ರಾಜತಾಂತ್ರಿಕ ಸಂಬಂಧ ಈಗ ಮತ್ತಷ್ಟು ಉತ್ತಮವಾಗಿರುವ ಕಾರಣ 2018ರಲ್ಲಿ ಹೆಚ್ಚುವರಿಯಾಗಿ 5 ಸಾವಿರ ಮಂದಿ ಯಾತ್ರೆಗೆ ಅವಕಾಶ ನೀಡಿದೆ. ಇದರಿಂದಾಗಿ ಈ ವರ್ಷ 1,75,025 ಮಂದಿ ಹಜ್ ಯಾತ್ರೆಯನ್ನು ಕೈಗೊಳ್ಳಲಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಹೆಚ್ಚುವರಿಯಾಗಿ 40 ಸಾವಿರ ಮಂದಿಗೆ ಅವಕಾಶ ಸಿಕ್ಕಿದ್ದು, ಸ್ವಾತಂತ್ರ್ಯ ಸಿಕ್ಕಿದ ಬಳಿಕ ಅತಿ ಹೆಚ್ಚು ಮಂದಿ ಯಾತ್ರೆ ಕೈಗೊಳ್ಳಲಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ 1,36,020 ಮಂದಿ ಹಜ್ ಯಾತ್ರೆಯನ್ನು ಕೈಗೊಂಡಿದ್ದರೆ ನಮ್ಮ ಸರ್ಕಾರದ ಅವಧಿಯಲ್ಲಿ ಈ ಸಂಖ್ಯೆ 1,75,025ಕ್ಕೆ ಏರಿಕೆಯಾಗಿದೆ ಎಂದು ನಖ್ವಿ ಹೇಳಿದ್ದರು.