Tag: Central Government

  • ಮೋದಿ ಕುರಿತ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ – ಪೇಜಾವರ ಶ್ರೀ

    ಮೋದಿ ಕುರಿತ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ – ಪೇಜಾವರ ಶ್ರೀ

    ಮೈಸೂರು: ಕೇಂದ್ರ ಸರ್ಕಾರದ ನಾಲ್ಕು ವರ್ಷದ ಆಡಳಿತದ ಬಗ್ಗೆ ಅತೃಪ್ತಿ ವ್ಯಕ್ತಪಡಿಸುವಂತಹ ಹೇಳಿಕೆ ನೀಡಿದ್ದ ಪೇಜಾವರ ಶ್ರೀಗಳು ಇಂದು ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ ಆಡಳಿತದ ವಿಚಾರವಾಗಿ ನಾನು ಉಡುಪಿಯಲ್ಲಿ ಮಾತನಾಡಿದ್ದೆ, ಆದರೆ ನನ್ನ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಲಾಗಿದೆ. ಅಂದು ಮಾತನಾಡುವಾಗ ಸರಿಯಾಗಿ ಮೈಕ್ ಇರಲಿಲ್ಲ. ಅದು ಕೆಲವರಿಗೆ ಸರಿಯಾಗಿ ಕೇಳಿಸದೆ ತಪ್ಪಾಗಿ ಅರ್ಥೈಸಲಾಗಿದೆ. ಪತ್ರಕರ್ತರು ಮೋದಿ ಆಡಳಿತದ ಬಗ್ಗೆ ಅಭಿಪ್ರಾಯ ಕೇಳಿದ ವೇಳೆ ನಾನು ಎಲ್ಲಿಯೂ ಅತೃಪ್ತಿ ಆಗಿದೆ ಎಂದು ಎಲ್ಲಿಯೂ ಹೇಳಿಲ್ಲ. ಅವರ ಮೇಲೆ ಅಸಮಾಧಾನವನ್ನು ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಿಕರಣ ನೀಡಿದ್ದಾರೆ.  ಇದನ್ನು ಓದಿ: ಕುಮಾರಸ್ವಾಮಿ ಪೂರ್ಣಾವಧಿ ಸರ್ಕಾರ ಮಾಡಲಿ – ಪೇಜಾವರಶ್ರೀ ಹಾರೈಕೆ

    ಇದೇ ವೇಳೆ ಗಂಗಾ ನದಿ ಹೇಳಿಕೆ ಕುರಿತು ಮಾತನಾಡಿದ ಅವರು, ಗಂಗಾನದಿ ಶುಚಿತ್ವ ಹಾಗೂ ವಿದೇಶದಲ್ಲಿನ ಕಪ್ಪು ಹಣದ ಬಗ್ಗೆ ಉತ್ತಮ ಸಾಧನೆ ಆಗಿಲ್ಲ ಎಂದು ಹೇಳಿದ್ದೇನೆ. ಈ ಬಗ್ಗೆ ಮಾತ್ರ ನಾನು ಅತೃಪ್ತಿಯನ್ನು ವ್ಯಕ್ತಪಡಿಸಿದ್ದೇನೆ. ಆದರೆ ಅವರ ಸರ್ಕಾರದ ಎಲ್ಲ ಕೆಲಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿಲ್ಲ. ನನ್ನ ಹೇಳಿಕೆಯನ್ನ ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟಪಡಿಸಿದರು.

    ನನ್ನ ಹೇಳಿಕೆಯಿಂದ ಹೊಸ ಚರ್ಚೆ ಆರಂಭವಾಗಿತ್ತು. ಆ ಕಾರಣದಿಂದ ತರಾತುರಿಯಲ್ಲಿ ಸ್ಪಷ್ಟೀಕರಣ ನೀಡುತ್ತಿದ್ದೇನೆ. ನಾನು ಒಂದು ಪಕ್ಷ ಅಥವಾ ವ್ಯಕ್ತಿಯ ಪರವಾಗಿ ನಾನು ಇಲ್ಲ. ಪಕ್ಷಾತೀತವಾಗಿ ನಾನು ಸಲಹೆ ಸೂಚನೆಗಳನ್ನ ಕೊಡುತ್ತೇವೆ. ಅದೆ ರೀತಿ ಮೋದಿ ಸರ್ಕಾರಕ್ಕೂ ಸಲಹೆ ಸೂಚನೆ ನೀಡಿದ್ದೇವೆ. ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಎರಡು ಕೆಲಸಗಳು ಇನ್ನು ಉತ್ತಮವಾಗಿ ಆಗಬೇಕಿತ್ತು. ಅದರ ಬಗ್ಗೆ ಸಲಹೆ ನೀಡಿದ್ದೇವೆ ಅಷ್ಟೇ ಎಂದರು. ಇದನ್ನು ಓದಿ: ಪೇಜಾವರ ಶ್ರೀ ಸನ್ಯಾಸಿಗಳು, ಅವರು ಟಿವಿ ನೋಡದ ಕಾರಣ ಕೇಂದ್ರದ ಯೋಜನೆಗಳ ಅರಿವಿಲ್ಲ: ಕರಂದ್ಲಾಜೆ

    ಇದೇ ವೇಳೆ ಸರ್ಕಾರದ ಸಲಹೆ ನೀಡುವ ಕುರಿತು ಮಾತನಾಡಿದ ಅವರು ರಾಜ್ಯದ ಮೈತ್ರಿ ಸರಕಾರಕ್ಕೆ ಇನ್ನೂ ರೆಸಾರ್ಟ್ ರಾಜಕೀಯದ ಭಯವಿದೆ. ಆರು ತಿಂಗಳ ನಂತರ ಅವಿಶ್ವಾಸ ನಿರ್ಣಯ ಮಂಡಿಸಿಬಿಟ್ಟರೆ ಹೇಗೆ ಎಂಬ ಆತಂಕ ಆಡಳಿತ ನಡೆಸುವವರಿಗೆ ಇದೆ. ಇದುವರೆಗೂ ಸಚಿವ ಸಂಪುಟವೇ ರಚನೆ ಆಗಿಲ್ಲ. ಪರಸ್ಪರ ಆರೋಪ ಮಾಡಿಕೊಂಡವರು ಜೊತೆಯಾಗಿ ಸರಕಾರ ಮಾಡಿದ್ದಾರೆ. ಅಪ್ಪನಾಣೆ ಸಿಎಂ ಆಗಲ್ಲ ಎಂದಿದ್ದ ಸಿದ್ದರಾಮಯ್ಯ ಅವರೇ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದಾರೆ. ಹೀಗಾಗಿ, ರಾಜ್ಯದಲ್ಲಿ ಮೂರು ಪಕ್ಷಗಳು ಸೇರಿ ಸರಕಾರ ರಚಿಸಿ ಬಿಡಲಿ. ಆಗ ಯಾವುದೇ ಅಸ್ಥಿರತೆ ಭಯ ಇರುವುದಿಲ್ಲ ಎಂದು ಸಲಹೆ ನೀಡಿದರು.

  • ವಿಶ್ವ ಪರಿಸರ ದಿನಾಚರಣೆಯಂದು ಮಹಿಳೆಯರಿಗೆ ಭರ್ಜರಿ ಗಿಫ್ಟ್- ಕಡಿಮೆ ಬೆಲೆಯ ನ್ಯಾಪ್‍ಕಿನ್ ಬಿಡುಗಡೆ

    ವಿಶ್ವ ಪರಿಸರ ದಿನಾಚರಣೆಯಂದು ಮಹಿಳೆಯರಿಗೆ ಭರ್ಜರಿ ಗಿಫ್ಟ್- ಕಡಿಮೆ ಬೆಲೆಯ ನ್ಯಾಪ್‍ಕಿನ್ ಬಿಡುಗಡೆ

    ಬೆಂಗಳೂರು: ವಿಶ್ವ ಪರಿಸರ ದಿನಾಚರಣೆಯಂದು ಕೇಂದ್ರ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯನ್ನು ಲೋಕಾರ್ಪಣೆ ಮಾಡಿದೆ.

    ಖಾಸಗಿ ಹೋಟೆಲ್ ನಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಸುವಿಧಾ ಸ್ಯಾನಿಟರಿ ನ್ಯಾಪ್ ಕಿನ್ ಲೋಕಾರ್ಪಣೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಕಡಿಮೆ ವೆಚ್ಚದ ಸ್ಯಾನಿಟರಿ ನ್ಯಾಪ್ ಕಿನ್ ನನ್ನ ಲೋಕಾರ್ಪಣೆ ಮಾಡಿದ್ದು, ಮಹಿಳೆಯರಿಗೆ ಭರ್ಜರಿ ಉಡುಗೊರೆ ನೀಡಿದೆ. ಪ್ರಧಾನ ಮಂತ್ರಿ ಭಾರತೀಯ ಜನೌಷಧ ಪರಿಯೋಜನಾ ಅಡಿಯಲ್ಲಿ ಸ್ಯಾನಿಟರಿ ನ್ಯಾಪ್ ಕಿನ್ಸ್ ಯೋಜನೆಯನ್ನು ಲಾಂಚ್ ಮಾಡಿದೆ.

    ಈ ಯೋಜನೆಯಡಿಯಲ್ಲಿ ಕೇವಲ 2.50 ರೂಪಾಯಿಗೆ ಒಂದು ಸ್ಯಾನಿಟರಿ ನ್ಯಾಪ್ ಕಿನ್ ಸಿಗಲಿದೆ. ಹತ್ತು ರೂಪಾಯಿಯ ಪ್ಯಾಕೆಟ್ ನಲ್ಲಿ ನಾಲ್ಕು ಸ್ಯಾನಿಟರಿ ನ್ಯಾಪ್ ಕಿನ್ ಲಭ್ಯವಿರುತ್ತವೆ. ಈ ಬಯೋ ಡೀಗ್ರೇಡಬಲ್ ನ್ಯಾಪ್ ಕಿನ್ ಎಲ್ಲಾ ಜನೌಷಧ ಕೇಂದ್ರಗಳಲ್ಲಿ ಸಿಗಲಿದೆ.

    ಈ ವೇಳೆ ಮಾತನಾಡಿದ ಅನಂತ್ ಕುಮಾರ್, ಮಾರ್ಚ್ 8 ನೇ ದಿನ ವಿಶ್ವ ಮಹಿಳಾ ದಿನದಂದು ನಾವು ಘೋಷಣೆ ಮಾಡಿದ್ದೇವು. ಅದರಂತೆ ಇಂದು ವಿಶ್ವ ಪರಿಸರ ದಿನ ಅಂಗವಾಗಿ ಬಯೋ ಡೀಗ್ರೇಡಬಲ್ ಸ್ಯಾನಿಟರಿ ನ್ಯಾಪ್ ಕಿನ್ ಬಿಡುಗಡೆ ಮಾಡಿರುವುದು ಖುಷಿ ತಂದಿದೆ. ನಮ್ಮ ದೇಶದಲ್ಲಿ ಬಳಕೆ ಮಾಡುತ್ತಿರುವ ಬ್ರಾಂಡೆಡ್ ನ್ಯಾಪ್ ಕಿನ್ ಒಂದಕ್ಕೆ ಎಂಟು ರೂಪಾಯಿ ದರ ನಿಗದಿಯಿದೆ. ಆದರೆ ಅವು ಬಯೋ ಡೀಗ್ರೇಡಬಲ್ ಅಲ್ಲ. ದೇಶದಲ್ಲಿ ಮೊದಲ ಬಯೋ ಡೀಗ್ರೇಡಬಲ್ ನ್ಯಾಪ್ ಕಿನ್ ಇದ್ದರೆ ಅದು ಕೇಂದ್ರ ಸರ್ಕಾರ ತಂದಿರುವ ಸುವಿಧ ನ್ಯಾಪ್ ಕಿನ್ಸ್ ಎಂದು ಹೇಳಿದ್ದಾರೆ.

    ಇಂದು ವಿಶ್ವ ಪರಿಸರ ದಿನ. ಇಂದಿನ ದಿನ ನಮಗೆ ಇರೋ ಏಕೈಕ ಮನೆ ಪೃಥ್ವಿ. ಈ ಪೃಥ್ವಿಯನ್ನು ಉಳಿಸಲು ಇಂದು ಈ ದಿನಾಚರಣೆ ಮಾಡುತ್ತಿದ್ದೇವೆ. ಕೇಂದ್ರದಿಂದ ವಿಶ್ವ ಪರಿಸರ ದಿನದ ಅಂಗವಾಗಿ ಇಡೀ ಭಾರದಾದ್ಯಂತ ಇರುವ ತಾಯಂದಿರಿಗೆ, ಅಕ್ಕತಂಗಿಯರ ಆರೋಗ್ಯ, ಸ್ವಚ್ಚತೆಗೆ ಯೋಗ್ಯವಾದ ಓಕ್ಸೋ ಬಯೋಡಿಗ್ರೇಬಲ್ ಸ್ಯಾನಿಟರಿ ಪ್ಯಾಡ್ ಬಿಡುಗಡೆ ಮಾಡಿದ್ದೇವೆ. ನಮ್ಮ ದೇಶದಲ್ಲಿ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸರ್ವೆ ಪ್ರಕಾರ ದೇಶದಲ್ಲಿ 58% ಮಹಿಳೆಯರು ಆರೋಗ್ಯಯುತ ಸ್ಯಾನಿಟರಿ ನ್ಯಾಪ್ಕಿನ್ ಉಪಯೋಗಿಸಲ್ಲ. ಕೇವಲ 48% ಮಾತ್ರ ಮಹಿಳೆಯರು ಉಪಯೋಗಿಸುತ್ತಾರೆ. ಕೆಳ ವರ್ಗದ, ಆರ್ಥಿಕ ಹಿಂದುಳಿದವರಿಗೆ ಈ ಸೌಲಭ್ಯವೇ ಇಲ್ಲ. ಹೀಗಾಗಿ ತಾಯಂದಿರಿಗೆ ಅನೇಕ ಸಮಸ್ಯೆಗಳಾಗಿವೆ ಎಂದರು.

    ಈಗ ಮಾರ್ಕೆಟ್ ನಲ್ಲಿ ಸಿಗುತ್ತಿರುವ ಬ್ರಾಂಡೆಡ್ ನ್ಯಾಪ್ ಕಿನ್ 500 ವರ್ಷಗಳಾದರೂ ಕೊಳೆಯುವುದಿಲ್ಲ. ಆದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸ್ಯಾನಿಟರಿ ನ್ಯಾಪ್ ಕಿನ್ ಮೂರರಿಂದ ಆರು ತಿಂಗಳಿನಲ್ಲಿ ಕೊಳೆಯುತ್ತದೆ. ಪರಿಸರಕ್ಕೆ ಸಹಕಾರಿಯಾಗಿರುವ ನ್ಯಾಪ್ ಕಿನ್ ನಲ್ಲಿ ಎಲ್ಲಾ ಸುರಕ್ಷತೆ ಕ್ರಮಗಳನ್ನ ತೆಗೆದುಕೊಂಡಿದ್ದೇವೆ. ಎಲ್ಲಾ ರೀತಿಯಲ್ಲೂ ಪರಿಶೀಲನೆ ಒಳಪಡಿಸಿ ಧೃಡೀಕರಣ ಮಾಡಿಸಿದ್ದೇವೆ ಎಂದು ತಿಳಿಸಿದ್ದಾರೆ.

  • ಲಿಂಗಾಯತ ಧರ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಲ್ಲ: ಬಸವರಾಜ್ ಹೊರಟ್ಟಿ

    ಲಿಂಗಾಯತ ಧರ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಲ್ಲ: ಬಸವರಾಜ್ ಹೊರಟ್ಟಿ

    ಧಾರವಾಡ: ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಇನ್ನುಮುಂದೆ ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

    ಕೇಂದ್ರ ಸರ್ಕಾರವು ಮರು ಶಿಫಾರಸ್ಸು ಮಾಡುವಂತೆ ಸೂಚಿಸಿದ್ದು, ಇದರ ಹಿಂದೆ ಏನೋ ಷಡ್ಯಂತ್ರವಿದೆ. ನಮ್ಮಲ್ಲಿಯೇ ಜಗಳ ಹಚ್ಚುವ ಆಲೋಚನೆ ಹೊಂದಿದ್ದು, ನಾವು ಇನ್ನು ಮುಂದೆ ಯಾವುದೇ ರ್ಯಾಲಿ ಮಾಡುವುದಿಲ್ಲ. ಬದಲಿಗೆ ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಅವರು ಹೇಳಿದರು.

    ಸಿ.ಎಂ.ಕುಮಾರಸ್ವಾಮಿ ಅವರು ಸಾಲ ಮನ್ನಾ ಸಭೆ ಆಯೋಜಿಸಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರು ವಿನಾಕಾರಣ ನೆಪ ಹೇಳಿ ಗೈರಾಗಿದ್ದಾರೆ. ರೈತರ ಬಗ್ಗೆ ಕಾಳಜಿ ಇದ್ದವರು ಸಭೆಗೆ ಏಕೆ ಹೋಗಲಿಲ್ಲ ಎಂದು ಬಿಎಸ್‍ವೈ ವಿರುದ್ಧ ವಾಗ್ದಾಳಿ ನಡೆಸಿದರು.

  • ದೇಶದ ಮೊದಲ 14 ಪಥಗಳ ಎಕ್ಸ್ ಪ್ರೆಸ್‍ವೇ ಉದ್ಘಾಟನೆ: ವಿಶೇಷತೆ ಏನು? ಇಲ್ಲಿದೆ ಪೂರ್ಣ ಮಾಹಿತಿ

    ದೇಶದ ಮೊದಲ 14 ಪಥಗಳ ಎಕ್ಸ್ ಪ್ರೆಸ್‍ವೇ ಉದ್ಘಾಟನೆ: ವಿಶೇಷತೆ ಏನು? ಇಲ್ಲಿದೆ ಪೂರ್ಣ ಮಾಹಿತಿ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಿಂದ ಮೀರತ್ ಗೆ ಸಂಪರ್ಕ ಕಲ್ಪಿಸುವ ಎಕ್ಸ್ ಪ್ರೆಸ್ ವೇಯ ಮೊದಲ ಹಂತವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ.

    ದೆಹಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಅವರು ಬಳಿಕ ಸುಮಾರು 6 ಕಿಮೀ ದೂರದವರೆಗೆ ರೋಡ್ ಶೋ ನಡೆಸಿದರು. ಈ ವೇಳೆ ಅಪಾರ ಪ್ರಮಾಣದಲ್ಲಿ ನೆರೆದಿದ್ದ ಅಭಿಮಾನಿಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತು ಮೋದಿ ಅವರನ್ನು ಕಂಡು ಸಂತಸ ಪಟ್ಟರು. ಕಾರ್ಯಕ್ರಮದಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಭಾಗವಹಿಸಿದ್ದರು.

    ಸದ್ಯ ನಿರ್ಮಾಣವಾಗಿರುವ 9 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿಯು ದೇಶದ ಮೊದಲ 14 ಪಥಗಳ ರಸ್ತೆ ಎಂಬ ಹೆಗ್ಗಳಿಕೆ ಪಡೆದಿದ್ದು, ಸಿಗ್ನಲ್ ಫ್ರೀ ಮಾರ್ಗವನ್ನು ಹೊಂದಿದೆ. ಮೊದಲ ಹಂತದ ಮಾರ್ಗಕ್ಕೆ ಸುಮಾರು 842 ಕೋಟಿ ರೂ. ವೆಚ್ಚವಾಗಿದೆ. ಉಳಿದಂತೆ ನಿರ್ಮಾಣವಾಗಿರುವ ಹೆದ್ದಾರಿ 6 ಹಾಗೂ 4 ಪಥವನ್ನು ಹೊಂದಿರಲಿದೆ.

    ಯೋಜನೆಯ ಮೊತ್ತ: ಸದ್ಯ ಎಕ್ಸ್ ಪ್ರೆಸ್ ವೇ ನ ಮೊದಲ ಹಂತ ಮಾತ್ರ ಪೂರ್ಣಗೊಂಡಿದ್ದು, 84 ಕಿಮೀ. ದೂರದ ಪೂರ್ವ ಪೆರಿಫರಲ್ ಎಕ್ಸ್ ಪ್ರೆಸ್ ಮಾರ್ಗವನ್ನು ಸುಮಾರು 11 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ.

    ವಿಶೇಷತೆ ಏನು?
    ದೆಹಲಿ ಹಾಗೂ ಮಿರತ್ ಎಕ್ಸ್ ಪ್ರೆಸ್ ಮಾರ್ಗ ಸ್ಮಾರ್ಟ್ ಅಂಡ್ ಗ್ರೀನ್ ರಾಷ್ಟ್ರೀಯ ಹೆದ್ದಾರಿ ಎಂಬ ಹೆಗ್ಗಳಿಕೆ ಹೊಂದಿದ್ದು, ಈಗಾಗಲೇ ನಿರ್ಮಾಣ ಮಾಡಲಾಗಿರುವ ಯಮುನಾ ನದಿ ಸೇತುವೆಯ ಮಾರ್ಗದಲ್ಲಿ ಸೋಲಾರ್ ವ್ಯವಸ್ಥೆ ಅಳವಡಿಸಲಾಗಿದೆ. ಅಲ್ಲದೇ ಹೆದ್ದಾರಿಯಲ್ಲಿ ಗಾರ್ಡನ್ ಸಹ ನಿರ್ಮಾಣ ಮಾಡಲಾಗಿದೆ. ಈ ಗಾರ್ಡನ್‍ಗೆ ಸೋಲಾರ್ ನಿಂದ ಉತ್ಪಾದನೆಯಾದ ವಿದ್ಯುತ್ ಬಳಕೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೇ ಸಂಪೂರ್ಣ ಗಾರ್ಡನ್ ನಲ್ಲಿ ಹನಿ ನೀರಾವರಿ ಸೌಲಭ್ಯವಿದೆ. ಈ ಮೂಲಕ ಸೋಲಾರ್ ವ್ಯವಸ್ಥೆ ಪಡೆದ ಭಾರತದ ಮೊದಲ ಸೇತುವೆ ಎಂಬ ಹೆಗ್ಗಳಿಕೆಗೆ ಯಮುನಾ ನದಿ ಸೇತುವೆ ಪಾತ್ರವಾಗಿದೆ.

     

    17 ತಿಂಗಳಿನಲ್ಲಿ ನಿರ್ಮಾಣ:
    30 ತಿಂಗಳ ಅವಧಿಯಲ್ಲಿ ನಿರ್ಮಾಣವಾಗಬೇಕಿದ್ದ ಈ ಯೋಜನೆಯನ್ನು ಕೇವಲ 17 ತಿಂಗಳಿನಲ್ಲಿ ನಿರ್ಮಾಣ ಮಾಡಲಾಗಿದೆ. 2015ರ ನವೆಂಬರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು.

    ಈ ಯೋಜನೆಯ ನಿರ್ಮಾಣದಿಂದ ಪ್ರತಿ ದಿನ 2 ಲಕ್ಷ ವಾಹನಗಳು ರಾಜಧಾನಿ ದೆಹಲಿ ನಗರವನ್ನು ಪ್ರವೇಶ ಮಾಡದೇ ಸಾಗಬಹುದಾಗಿದ್ದು, ದೆಹಲಿಯ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ. ಅಲ್ಲದೇ ಹೆದ್ದಾರಿಯಲ್ಲಿ ಪ್ರತಿ ನಿತ್ಯ ಸುಮಾರು 50 ಸಾವಿರ ವಾಹನಗಳನ್ನು ದೆಹಲಿಯ ಪ್ರವೇಶವನ್ನು ತಪ್ಪಿಸಬಹುದಾಗಿದೆ.

    ಎಲೆಕ್ಟ್ರಾನಿಕ್ ಟೋಲ್: ರಾಷ್ಟ್ರೀಯ ಹೆದ್ದಾರಿ ಸುರಕ್ಷತೆ ಹಾಗೂ ಸುಗಮ ಪ್ರಯಾಣಕ್ಕೆ ವೇಗದ ಟೋಲ್ ಸಂಗ್ರಹಣೆ ಕೇಂದ್ರ ಆರಂಭಿಸಲಾಗಿದ್ದು, ಇಲ್ಲಿ ಟೋಲ್ ಸಂಗ್ರಹಿಸಲು ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ವ್ಯವಸ್ಥೆ (ಇಟಿಸಿ) ಅಳವಡಿಸಲಾಗಿದೆ.

    ಸ್ಮಾಟ್ ಟ್ರಾಫಿಕ್ ಕಂಟ್ರೋಲ್: ಹೆದ್ದಾರಿಗಳ ಇಕ್ಕೆಲಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಈ ಮೂಲಕ ವಾಹನಗಳ ವೇಗ ಹಾಗೂ ಅವುಗಳ ಸ್ಥಳವನ್ನು ತಿಳಿಯಬಹುದಾಗಿದೆ. ಹೆದ್ದಾರಿಯಲ್ಲಿ ಸ್ಮಾರ್ಟ್ ವೇ ಟ್ರಾಫಿಕ್ ಮ್ಯಾನೇಜ್‍ಮೆಂಟ್ (ಎಚ್‍ಟಿಎಂಎಸ್) ಮತ್ತು ವಿಡಿಯೋ ಇನ್ಸಿಡೆಂಟ್ ಡಿಟೆಕ್ಷನ್ (ವಿಐಡಿಎಸ್) ವ್ಯವಸ್ಥೆಯನ್ನು ಅಳವಡಿಸಲಾಗಿದೆ.

    ನೈಸರ್ಗಿಕ ರಕ್ಷಣೆಗೆ ಹೆಚ್ಚಿನ ಪ್ರಮುಖ್ಯತೆ ನೀಡಿರುವ ಹೆದ್ದಾರಿಯಲ್ಲಿ ಸುಮಾರು 2.5 ಲಕ್ಷ ಗಿಡಗಳನ್ನು ಬೆಳೆಸಲಾಗಿದೆ. ಅಲ್ಲದೇ ಹೆದ್ದಾರಿ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಹೊಂದಿದೆ. ಒಟ್ಟು 82 ಕಿಮೀ ಉದ್ದದ ದೆಹಲಿ ಎಕ್ಸ್ ಪ್ರೆಸ್‍ವೇ ಮೊದಲ 27.74 ಕಿಮೀ 14 ಪಥ ಹೊಂದಿದ್ದು, ಉಳಿದ ಮಾರ್ಗ 6 ಪಥವನ್ನು ಹೊಂದಿರಲಿದೆ.

    ಅನುಕೂಲವೇನು?
    ಹೆದ್ದಾರಿಯ ನಿರ್ಮಾಣದಿಂದ ದೆಹಲಿ ಹಾಗೂ ನೋಯ್ಡಾ ನಗರಗಳ ನಡುವಿನ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಲಿದೆ. ಅಲ್ಲದೇ ಇರುವರೆಗೂ ಎರಡೂವರೆ ಗಂಟೆ ತೆಗೆದುಕೊಳ್ಳುತ್ತಿದ್ದ ಪ್ರಯಾಣದ ಅವಧಿ 40 ನಿಮಿಷಕ್ಕೆ ಇಳಿಯಲಿದೆ.

    ಸೈಕಲ್ ಟ್ರ್ಯಾಕ್:
    ಹೆದ್ದಾರಿಯ ಪ್ರಮುಖ ಸ್ಥಳಗಳಲ್ಲಿ ವಿಶೇಷ ಬೆಳಕಿನ ವ್ಯವಸ್ಥೆ ಪಡೆದಿರುವ ಈ ಮಾರ್ಗ, ಸೈಕಲ್ ಪಥ ಮತ್ತು ಪದಚಾರಿ ಮಾರ್ಗವನ್ನು ಹೊಂದಿದೆ. ಸೈಕಲ್ ಟ್ರ್ಯಾಕ್ 2.5 ಮೀಟರ್ ಅಗಲ ಹೊಂದಿದ್ದರೆ, ಪಾದಚಾರಿ ಮಾರ್ಗ ಒಂದೂವರೆ ಮೀಟರ್ ಅಗಲ ನಿರ್ಮಾಣ ಮಾಡಲಾಗಿದೆ.

    ಪೂರ್ವ ಪೆರಿಫರಲ್ ಎಕ್ಸ್ ಪ್ರೆಸ್ ಉದ್ಘಾಟನೆ: ಈಗಾಗಲೇ ನಿರ್ಮಾಣ ಮಾಡಲಾಗಿರುವ ದೆಹಲಿ, ಎಕ್ಸ್ ಪ್ರೆಸ್ ವೇ ಮಾರ್ಗ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಪೂರ್ವ ಪೆರಿಫರಲ್ ಎಕ್ಸ್ ಪ್ರೆಸ್ ಮಾರ್ಗವನ್ನು ಕಾಮಗಾರಿಗೆ ಚಾಲನೆ ನೀಡಿದರು. ಪೂರ್ವ ಪೆರಿಫರಲ್ ಎಕ್ಸ್ ಪ್ರೆಸ್ ಮಾರ್ಗ 135 ಕಿಮೀ ದೂರವಿದ್ದು, ಘಜಿಯಾಬಾದ್, ಗ್ರೇಟರ್ ನೋಯ್ಡಾ, ಫರಿದಾಬಾದ್, ಮತ್ತು ಪಾಲ್ವಾಲ್ ನಗರಗಳಿಗೆ ಮುಕ್ತ ಸಂಚಾರವನ್ನು ನೀಡಲಿದೆ. ದೆಹಲಿಯ ಪೂರ್ವ ನಿಜಾಮುದ್ದೀನ್ ಸೇತುವೆಯಿಂದ ಆರಂಭವಾಗುವ ಈ ಎಕ್ಸ್ ಪ್ರೆಸ್ ವೇ 135 ಕಿಮೀ ಉದ್ದವಿದ್ದು, ಉತ್ತರ ಪ್ರದೇಶದ ಗಡಿಯವರೆಗೂ ಸಾಗುತ್ತದೆ.

    ಒಟ್ಟಾರೆ ಹೆದ್ದಾರಿಯಲ್ಲಿ ಒಟ್ಟು 406 ರಸ್ತೆ ತಿರುವುಗಳು, 4 ದೊಡ್ಡ ಸೇತುವೆಗಳು, 46 ಸೇತುವೆಗಳು, 3 ತೂಗು ಸೇತುವೆಗಳು, 221 ಅಂಡರ್ ಪಾಸ್‍ಗಳು ನಿರ್ಮಾಣ ಮಾಡಲಾಗಿದೆ. ಅಲ್ಲದೇ ಹೆದ್ದಾರಿ ಪಕ್ಕದಲ್ಲಿ ಹಲವು ರಾಷ್ಟ್ರೀಯ ಸ್ಮಾರಕ ಮಾದರಿಗಳು, ಹೋಟೆಲ್, ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ.

  • ಕಾವೇರಿ ಸ್ಕೀಂ ಸುಪ್ರೀಂಗೆ ಕರಡು ಅಫಿಡವಿಟ್ ಸಲ್ಲಿಕೆ: ಹೇಗಿರಲಿದೆ ಸ್ಕೀಂ? ಕಾರ್ಯಗಳು ಏನು? ಯಾರೆಲ್ಲ ಇರಲಿದ್ದಾರೆ?

    ಕಾವೇರಿ ಸ್ಕೀಂ ಸುಪ್ರೀಂಗೆ ಕರಡು ಅಫಿಡವಿಟ್ ಸಲ್ಲಿಕೆ: ಹೇಗಿರಲಿದೆ ಸ್ಕೀಂ? ಕಾರ್ಯಗಳು ಏನು? ಯಾರೆಲ್ಲ ಇರಲಿದ್ದಾರೆ?

    ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಮುಕ್ತಾಯವಾದ ಬಳಿಕ ಕೇಂದ್ರ ಸರ್ಕಾರ ಕಾವೇರಿ ಸ್ಕೀಂ ಕುರಿತ ತನ್ನ ಕರಡು ಅಫಿಡವಿಟ್ ಅನ್ನು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿದೆ.

    ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಪೀಠದಲ್ಲಿ ನಡೆದ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಈ ಅಫಿಡವಿಟ್ ಅನ್ನು ಸಲ್ಲಿಸಿದೆ. ಕರಡಿನಲ್ಲಿ ಈ ಸ್ಕೀಂ ಕಾವೇರಿ ಪ್ರಾಧಿಕಾರವೋ, ಕಾವೇರಿ ಸಮಿತಿಯೊ ಅಥವಾ ಮಂಡಳಿಯೋ ಎಂಬುದನ್ನು ನೀವೇ ತೀರ್ಮಾನ ಮಾಡಿ ಎಂದು ಕೇಂದ್ರ ಸರ್ಕಾರ ನ್ಯಾಯಪೀಠದಲ್ಲಿ ಮನವಿ ಮಾಡಿಕೊಂಡಿದೆ.

    ಕಾವೇರಿ ಸ್ಕೀಂ ರಚನೆ ಕುರಿತು ಕೇಂದ್ರ ಸರ್ಕಾರಕ್ಕೆ ಈ ಹಿಂದೆ ಸುಪ್ರೀಂ ತ್ರಿಸದಸ್ಯ ಪೀಠ ಕರಡು ಪ್ರತಿ ಸಲ್ಲಿಕೆ ಮಾಡುವಂತೆ ಗಡುವು ನೀಡಿತ್ತು. ಅಲ್ಲದೇ ಅಫಿಡವಿಟ್ ಸಲ್ಲಿಕೆ ವೇಳೆ ಕೇಂದ್ರ ಸರ್ಕಾರದ ಜಲಸಂಪನ್ಮೂಲ ಕಾರ್ಯದರ್ಶಿ ಸ್ವತಃ ಹಾಜರಾಗುವಂತೆ ಸೂಚಿಸಿತ್ತು. ಸುಪ್ರೀಂ ಸೂಚನೆಯ ಅನ್ವಯ ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿ ಉಪೇಂದ್ರ ಕುಮಾರ್ ಸಿಂಗ್ ಇಂದು ಕರಡು ಅಫಿಡವಿಟ್ ಸಲ್ಲಿಸಿದ್ದಾರೆ. ಸದ್ಯ ಈ ಅಫಿಡವಿಟ್ ವಿಚಾರಣೆಗೆ ಪರಿಗಣಿಸಿ ಅಂತಿಮವಾಗಿ ಸುಪ್ರೀಂ ತನ್ನ ಆದೇಶವನ್ನು ಪ್ರಕಟಿಸಲಿದೆ.

    ಕೇಂದ್ರ ಸರ್ಕಾರ ಕರಡು ಪ್ರತಿ ಸಲ್ಲಿಕೆ ವೇಳೆಯೂ ತಮಿಳುನಾಡು ತನ್ನ ವಾದವನ್ನು ಪುನರ್ ಉಚ್ಚರಿಸಿದ್ದು ಕಾವೇರಿ ಮಂಡಳಿ ರಚಿಸುವಂತೆ ಮನವಿ ಮಾಡಿದೆ. ಆದರೆ ತಮಿಳುನಾಡು ಮನವಿಯನ್ನು ಆಲಿಸಿದ ನ್ಯಾಯಪೀಠ ಕರಡು ಪರಿಶೀಲನೆ ಬಳಿಕ ತನ್ನ ಅಭಿಪ್ರಾಯವನ್ನು ತಿಳಿಸುವುದಾಗಿ ಹೇಳಿದೆ. ಮುಂದಿನ ವಿಚಾರಣೆ ಮೇ 16 ರಂದು ನಡೆಯಲಿದೆ.

    ಹೇಗಿರಲಿದೆ ಸ್ಕೀಂ?
    ಸದ್ಯ 14 ಪುಟಗಳ ಕರಡು ಪ್ರತಿಯನ್ನು ಕೇಂದ್ರ ಸರ್ಕಾರ ಸುಪ್ರೀಂಗೆ ಸಲ್ಲಿಕೆ ಮಾಡಿದ್ದು, ಕೇಂದ್ರ ಸಲ್ಲಿಸಿರುವ ಕರಡು ಪ್ರತಿಯಲ್ಲಿ ಕಾವೇರಿ ಸ್ಕೀಂ ನಲ್ಲಿ ಐವರು ಶಾಶ್ವತ ಸದಸ್ಯರು ಮತ್ತು ನಾಲ್ವರು ತಾತ್ಕಾಲಿಕ ಸದಸ್ಯರನ್ನು ಹೊಂದಿರುತ್ತದೆ.

    ಈ ಸ್ಕೀಂ ನಲ್ಲಿ ನಾಲ್ಕು ರಾಜ್ಯಗಳ ಸದಸ್ಯರು ಇರಲಿದ್ದು, ಇದರಲ್ಲಿ ಕೇಂದ್ರ ಜಲ ಸಂಪನ್ಮೂಲ ಇಲಾಖೆ ಖಾಯಂ ಸದಸ್ಯರು ಅಧ್ಯಕ್ಷ (ಚೇರಮನ್) ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿಯಿಂದ ತಲಾ ಒಬ್ಬ ಚೀಫ್ ಎಂಜಿನಿಯರ್, ಹವಾಮಾನ ಇಲಾಖೆಯ ಜಂಟಿ ಆಯುಕ್ತ, ಕೇಂದ್ರ ಜಲ ಆಯೋಗದ ಮುಖ್ಯ ಎಂಜಿನಿಯರ್, ಕೇಂದ್ರ ಕೃಷಿ ಇಲಾಖೆಯ ಆಯುಕ್ತ, ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು ಸದಸ್ಯರಾಗಿರುತ್ತಾರೆ.

    ಕಾವೇರಿ ಪ್ರಾಧಿಕಾರದ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಇರಲಿದ್ದು, ರಾಜ್ಯದ ಚೀಫ್ ಎಂಜಿನಿಯರ್ ಶ್ರೇಣಿಯ ರಾಜ್ಯದ ಅಧಿಕಾರಿಗಳು ಸ್ಕೀಂನಲ್ಲಿ ಇರುವುದು ಕಡ್ಡಾಯವಾಗಿದೆ. ಕಾವೇರಿ ತೀರ್ಪನ್ನು ಯಾವುದೇ ರಾಜ್ಯ ಪಾಲಿಸದೆ ಇರುವುದು ಕಂಡು ಬಂದಲ್ಲಿ ಕೇಂದ್ರ ಸರ್ಕಾರಕ್ಕೆ ದೂರು ನೀಡಬಹುದಾಗಿದೆ. ನಂತರ ಕೇಂದ್ರ ತೆಗೆದುಕೊಳ್ಳುವ ತೀರ್ಮಾನ ಅಂತಿಮ ಆಗಿರಲಿದೆ.

    ಸ್ಕೀಂ ಕಾರ್ಯಗಳು:
    * ಪ್ರತಿನಿತ್ಯ ನೀರಿನ ಮಟ್ಟ ಹಾಗೂ ಒಳ ಮತ್ತು ಹೊರ ಹರಿವಿನ ಲೆಕ್ಕ ಇಡುವುದು.
    * ಹೇಮಾವತಿ ಹಾರಂಗಿ, ಕೃಷ್ಣ ರಾಜಸಾಗರ, ಕಬಿನಿ, ಮೆಟ್ಟೂರು, ಭವಾನಿ ಸಾಗರ, ಅಮಾರವತಿ, ಭನಸೂರಸಾಗರ್ ಮೂಲಕ ಪ್ರಾಧಿಕಾರ ಸೂಚಿಸುವಷ್ಟು ನೀರು ಬಿಡುವುದು.
    * ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 48 ಗಂಟೆ ಒಳಗೆ ಸಭೆ ಸೇರಿ ಚರ್ಚೆ ನಡೆಸಬೇಕು.
    * ಸಭೆ ವೇಳೆ ಯಾವುದಾದರು ರಾಜ್ಯ ಗೈರು ಹಾಜರಾದರೆ ಮತ್ತೊಂದು ದಿನಾಂಕದಂದು ಸಭೆ ನಡೆಸಬಹುದು.
    * ಮಾತುಕತೆ ತಡ ಆಗುವಂತಹ ಸಂದರ್ಭದಲ್ಲಿ ಬಹಮತ ಆಧರಿಸಿ ಪ್ರಾಧಿಕಾರ ಸ್ವಯಂ ನಿರ್ಧಾರ ತೆಗೆದುಕೊಳ್ಳಬಹುದು.
    * ಸಭೆಯಲ್ಲಿ ಕನಿಷ್ಠ ಆರು ಮಂದಿ ಸದಸ್ಯರು ಕಡ್ಡಾಯವಾಗಿ ಭಾಗವಹಿಸಬೇಕು.

    * ಅಧ್ಯಕ್ಷರು ಸೇರಿದಂತೆ ಕಾರ್ಯದರ್ಶಿ ಹಾಗೂ ಎಲ್ಲ ಸದಸ್ಯರಿಗೂ ವೋಟ್ ಮಾಡುವ ಹಕ್ಕಿದೆ.
    * ಪ್ರಾಧಿಕಾರ ಅಧ್ಯಕ್ಷರಿಗೆ ನಿರ್ಣಾಯಕ ಮತ ಚಲಾಯಿಸುವ ಅಧಿಕಾರ.
    * ನಿಯಮ ಪಾಲನೆ ವೇಳೆ ವ್ಯತಾಸ ಕಂಡು ಬಂದರೆ ಪ್ರಾಧಿಕಾರದ ಸದಸ್ಯರು ಎಲ್ಲ ಜಲಾಶಯಗಳ ನೀರಿನ ಮಟ್ಟ ಪರಿಶೀಲನೆ ನಡೆಸಬಹುದು. ಅಲ್ಲದೇ ವ್ಯತ್ಯಾಸ ಖಾತರಿ ಆದಲ್ಲಿ ಸಮಿತಿ ಎಲ್ಲ ಸದಸ್ಯರ ಗಮನಕ್ಕೆ ತರುವುದು.
    * ಪ್ರತಿನಿತ್ಯ ಬಿಳಿಗುಂಡ್ಲು ಮೂಲಕ ಹರಿಯುವ ನೀರನ್ನು ಮಾಪನ ಮಾಡುವುದು.
    * ಪ್ರತಿ ಜಲಾಶಯಗಳ ನೀರಿನ ಮಟ್ಟ ಪ್ರತಿ ತಿಂಗಳ ಪರಿಶೀಲನೆ ನಡೆಸಿ ನಿಗಾ ವಹಿಸುವುದು.

    * ಪ್ರತಿವಾರ ಹವಾಮಾನ ಇಲಾಖೆ ಮೂಲಕ ಮಳೆ ಪ್ರಮಾಣ ಮಾಹಿತಿ ಪಡೆಯುವುದು ಹಾಗೂ ಪ್ರಾಧಿಕಾರದ ಗಮನಕ್ಕೆ ತರುವುದು.
    * ರಾಜ್ಯದಲ್ಲಿ ನಿರ್ಮಾಣ ಮಾಡುವ ಕಾಮಗಾರಿಗಳ ಬಗ್ಗೆ ರಾಜ್ಯದ ಪ್ರತಿನಿಧಿ ಪ್ರಾಧಿಕಾರದ ಗಮನಕ್ಕೆ ತರುವುದು.
    * ಮುಂಗಾರು, ಹಿಂಗಾರು ಸೇರಿದಂತೆ ವಾರ್ಷಿಕ ಮಳೆ ಪ್ರಮಾಣ ಕುರಿತು ಪ್ರಾಧಿಕಾರ ಅಫಿಡೆವಿಟ್ ಸಲ್ಲಿಸಬೇಕು.
    * ಜೂನ್ ಮತ್ತು ಅಕ್ಟೋಬರ್ ಮಾನ್ಸೂನ್ ತಿಂಗಳಲ್ಲಿ ಪ್ರತಿ ಹತ್ತು ದಿನಕ್ಕೊಮ್ಮೆ ಸಭೆ ಸೇರಿ ಚರ್ಚೆ ನಡೆಸಬೇಕು.
    * ಮಾನ್ಸೂನ್ ಬಳಿಕ ಎರಡು ವಾರಕ್ಕೊಮ್ಮೆ ಪ್ರಾಧಿಕಾರದ ಸಲಹೆ ಮೇರೆಗೆ ಸಭೆ ಏರ್ಪಡಿಸಬಹುದು.

  • ಅಭಿವೃದ್ಧಿ ಎಲ್ಲಿ ಆಗಿದೆ: ಕೇಂದ್ರದ ವಿರುದ್ಧ ಮನಮೋಹನ್ ಸಿಂಗ್ ಗರಂ

    ಅಭಿವೃದ್ಧಿ ಎಲ್ಲಿ ಆಗಿದೆ: ಕೇಂದ್ರದ ವಿರುದ್ಧ ಮನಮೋಹನ್ ಸಿಂಗ್ ಗರಂ

    ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರ ಎಲ್ಲಾ ರಂಗದಲ್ಲು ವಿಫಲವಾಗಿದೆ. ಅಭಿವೃದ್ಧಿ ಅಂತ ಹೇಳುತ್ತೆ ಆದ್ರೆ ಎಲ್ಲಿಯು ಅಭಿವೃದ್ಧಿ ಕಾಣುತ್ತಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಆರ್ಥಿಕ ನೀತಿಗಳು ಸಾಮಾನ್ಯ ಜನರ ಮೇಲೆ ಹೆಚ್ಚು ಪರಿಣಾಮಗಳನ್ನು ಬೀರುತ್ತದೆ. ಕೇಂದ್ರದ ನೋಟು ನಿಷೇಧ ಮತ್ತು ಜಿಎಸ್‍ಟಿ ಅನುಷ್ಠಾನದಲ್ಲಿ ಆಗಿರುವ ನ್ಯೂನತೆಗಳಿಂದ ಜನರು ಹೆಚ್ಚು ಸಮಸ್ಯೆಗೀಡಾಗಿದ್ದಾರೆ. ಸಾವಿರಾರು ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಕೇಂದ್ರ ಸರ್ಕಾರದ ನಿರ್ಧಾರದಿಂದ ಮಧ್ಯಮ ಮತ್ತು ಸಣ್ಣ ಮಧ್ಯಮ ಕೈಗಾರಿಕೆಗಳು ಅವನತಿಯತ್ತ ಹೋಗಿವೆ. ನಮ್ಮ ಸರ್ಕಾರ ಇದ್ದಾಗ ಪೆಟ್ರೋಲ್ ದರ ತುಂಬ ಕಡಿಮೆಯಿತ್ತು. ಇವತ್ತು ಪೆಟ್ರೋಲ್ ಮತ್ತು ಡೀಸೆಲ್ ದರ ಗಗನಕ್ಕೇರಿದೆ. ಹೆಚ್ಚು ತೆರಿಗೆಯನ್ನು ಪಡೆಯುತ್ತಿರುವ ಕೇಂದ್ರ ಸರ್ಕಾರ ದೇಶದ ಜನರಿಗೆ ಉತ್ತರಿಸಬೇಕಾಗಿದೆ ಎಂದು ಕಿಡಿಕಾರಿದರು.

    ಕಳೆದ 4 ವರ್ಷಗಳಿಂದ ಮೋದಿಯವರು ಕಾಂಗ್ರೆಸ್ ಸರ್ಕಾರವನ್ನ ತೆಗಳುವ ಕೆಲಸ ಬಿಟ್ರೆ ಬೇರೆನೂ ಮಾಡಿಲ್ಲ. ದೇಶದ ಕೃಷಿ ಬೆಳವಣಿಗೆಗೆ ಒತ್ತು ನೀಡದೇ ಇರುವುದರಿಂದ ಆ ಕ್ಷೇತ್ರದ ಬೆಳವಣಿಗೆ ಹಿನ್ನೆಡೆ ಕಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಬೆಂಗಳೂರಿನಲ್ಲಿ ಯುವಕರ ಸಂಖ್ಯೆ ಜಾಸ್ತಿ ಇದೆ, ದೇಶದ ಸ್ಟಾರ್ಟ್ ಅಪ್ ಕ್ಯಾಪಿಟಲ್. ಟೆಂಡರ್ ಶ್ಯೂರ್ ರಸ್ತೆಗಳು ಪ್ರಪಂಚದಲ್ಲಿಯೇ ಹೆಸರು ಮಾಡಿದೆ. ಮೆಟ್ರೊಗಾಗಿ ಹೆಚ್ಚಿನ ಅನುದಾನವನ್ನ ರಾಜ್ಯ ಸರ್ಕಾರ ನೀಡಿದೆ. ಸಿದ್ದರಾಮಯ್ಯ ಸರ್ಕಾರ ಸಾಕಷ್ಟು ಕೈಗಾರಿಕೆಗಳು ಬೆಂಗಳೂರಿನಲ್ಲಿ ಸ್ಥಾಪನೆಯಾಗಲು ಒತ್ತು ನೀಡಿದೆ. ಗುಜರಾತ್‍ಗಿಂತ ಕೈಗಾರಿಕೆಗಳ ಸ್ಥಾಪನೆಯಲ್ಲಿ ಕರ್ನಾಟಕ ಮುಂದೆ ಇದೆ. ಉದ್ಯೋಗ ಸೃಷ್ಟಿಯಲ್ಲೂ ಸಹ ದೇಶಕ್ಕೆ ಬೆಂಗಳೂರು ಮಾದರಿಯಾಗಿದೆ. ನಾವು ಮಾಡಿರುವ ಒಳ್ಳೆಯ ಕೆಲಸಗಳು ಬಿಜೆಪಿಯವರ ಕಣ್ಣಿಗೆ ಕಂಡಿಲ್ಲ ಎಂದು ಲೇವಡಿಮಾಡಿದರು.

  • ದಾಲ್ಮಿಯಾ ಗ್ರೂಪ್ ತೆಕ್ಕೆಗೆ ಐತಿಹಾಸಿಕ ಕೆಂಪು ಕೋಟೆ – ಏನಿದು ನೋ ಪ್ರಾಫಿಟ್ ಯೋಜನೆ

    ದಾಲ್ಮಿಯಾ ಗ್ರೂಪ್ ತೆಕ್ಕೆಗೆ ಐತಿಹಾಸಿಕ ಕೆಂಪು ಕೋಟೆ – ಏನಿದು ನೋ ಪ್ರಾಫಿಟ್ ಯೋಜನೆ

    ನವದೆಹಲಿ: ದೆಹಲಿಯ ಐತಿಹಾಸಿಕ ಕೆಂಪು ಕೋಟೆಯನ್ನು ದಾಲ್ಮಿಯಾ ಭಾರತ್ ಗ್ರೂಪ್ 5 ವರ್ಷಗಳ ಕಾಲ ನಿರ್ವಹಣೆಯ ದತ್ತು ಪಡೆದುಕೊಂಡಿದೆ.

    ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಮತ್ತು ಪುರಾತತ್ವ ಇಲಾಖೆಯ ಪ್ರಾಚೀನ ಸ್ಮಾರಕಗಳ ದತ್ತು ಯೋಜನೆಯಡಿ 25 ಕೋಟಿ ರೂ. ನೀಡಿ ದಾಲ್ಮಿಯಾ ಗ್ರೂಪ್ ತನ್ನದಾಗಿಸಿಕೊಂಡಿದೆ.

    ಕಾಂಗ್ರೆಸ್ ಟೀಕೆ: ಸದ್ಯ ಕೇಂದ್ರ ಸರ್ಕಾರದ ಈ ನಡೆಗೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಭಾರತ ಸಾಂಸ್ಕೃತಿಕ ಸ್ಮಾರಕಗಳ ನಿರ್ವಹಣೆಯನ್ನು ಖಾಸಗಿ ಕಂಪೆನಿಗೆ ವಹಿಸಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ ಈ ಕುರಿತು ಟ್ವಿಟ್ಟರ್ ನಲ್ಲಿ ಪ್ರಶ್ನೆಯೊಂದನ್ನು ಜನರ ಮುಂದಿಟ್ಟಿದ್ದು, ಬಿಜೆಪಿ ಎಲ್ಲವನ್ನೂ ಖಾಸಗೀಕರಣಕ್ಕೆ ಒಳಪಡಿಸಲಿದೆ ಎಂದು ಆರೋಪಿಸಿದೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಮಹೇಶ್ ಶರ್ಮಾ, 2017ರ ವಿಶ್ವ ಪ್ರವಾಸೋದ್ಯಮದ ಭಾಗವಾಗಿ ನೋ ಪ್ರಾಫಿಟ್ ಯೋಜನೆ ರೂಪಿಸಿದ್ದು, ಸ್ವಯಂ ಆಗಿ ಐತಿಹಾಸಿಕ ಸ್ಥಳಗನ್ನು ನಿರ್ವಹಣೆ ಮಾಡಲು ಅವಕಾಶ ನೀಡಲಾಗಿದೆ. ಈ ಯೋಜನೆಯ ಅಂಗವಾಗಿ ಕೆಂಪು ಕೋಟೆ ನಿರ್ವಹಣೆ ಮಾಡುವ ಹೊಣೆ ದಾಲ್ಮಿಯಾ ಸಂಸ್ಥೆ ಪಡೆದುಕೊಂಡಿದೆ ಎಂದು ಹೇಳಿದ್ದಾರೆ.

    ನಿರ್ವಹಣೆ ಹೇಗೆ? ಪ್ರಾಚೀನ ಸ್ಮಾರಕ ದತ್ತು ಯೋಜನೆ ಪ್ರಕಾರ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇದರ ಅನ್ವಯ ದಾಲ್ಮಿಯಾ ಸಂಸ್ಥೆ ಕೆಂಪುಕೋಟೆಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಬೇಕಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಿದೆ. ಅಲ್ಲದೇ ಈ ಸೌಲಭ್ಯ ಕಲ್ಪಿಸಲು ಶುಲ್ಕ ಪಡೆಯುವ ಹಕ್ಕನ್ನು ಸಂಸ್ಥೆ ಹೊಂದಿರುತ್ತದೆ. ಅದ್ರೆ ಈ ರೀತಿ ಸಂಗ್ರಹಿಸಿದ ಹಣವನ್ನು ಸ್ಮಾರಕ ನಿರ್ವಹಣೆಗಾಗಿಯೇ ಬಳಸಬೇಕು ಎಂಬ ಷರತ್ತು ಈ ಒಪ್ಪಂದದಲ್ಲಿ ವಿಧಿಸಲಾಗಿದೆ. ಇದರಿಂದ ಸಂಸ್ಥೆಗೆ ಯಾವುದೇ ಆರ್ಥಿಕ ಲಾಭ ಉಂಟಾಗುವುದಿಲ್ಲ. ಇದನ್ನೇ ನೋ ಪ್ರಾಫಿಟ್ ಯೋಜನೆ ಎಂದು ಕರೆಯಲಾಗಿದೆ.

    ಸ್ಮಾರಕಗಳನ್ನು ನೋಡಲು ಭೇಟಿ ನೀಡುವ ಪ್ರವಾಸಿಗರಿಗೆ ಬೇಕಾದ ಕುಡಿಯುವ ನೀರಿನ ಸೌಲಭ್ಯ, ಆಸನ ವ್ಯವಸ್ಥೆ, ಸ್ಮಾರಕ ಜಿರ್ಣೋದ್ಧಾರ, ಶೌಚಾಲಯ ಹಾಗೂ ಅವುಗಳ ನಿರ್ವಹಣೆ, ರಾತ್ರಿ ವೇಳೆ ವೀಕ್ಷಣೆಗಾಗಿ ವರ್ಣ ರಂಜಿತ ವಿದ್ಯುತ್ ಸೌಲಭ್ಯ, ದಾರಿಗಳ ನಿರ್ಮಾಣ, ಹೋಟೆಲ್ ಇತ್ಯಾದಿ ಸೌಲಭ್ಯಗಳನ್ನು ಸಂಸ್ಥೆ ನಿರ್ವಹಿಸುವ ಜವಾಬ್ದಾರಿ ಹೊಂದಿರುತ್ತದೆ.

  • ಹೆಚ್ಚುವರಿ ಸಮಯ ನೀಡಲ್ಲ, ಮೇ 3ರ ಒಳಗೆ ಸ್ಕೀಂ ರಚಿಸಿ: ಕೇಂದ್ರಕ್ಕೆ ಸೂಚನೆ

    ಹೆಚ್ಚುವರಿ ಸಮಯ ನೀಡಲ್ಲ, ಮೇ 3ರ ಒಳಗೆ ಸ್ಕೀಂ ರಚಿಸಿ: ಕೇಂದ್ರಕ್ಕೆ ಸೂಚನೆ

    ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಸ್ಕೀಂ ರಚನೆ ಕುರಿತು ಮೇ 3ರ ಒಳಗೆ ಕರಡು ಪ್ರತಿ ಸಲ್ಲಿಸಬೇಕೆಂದು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಖಡಕ್ ನಿರ್ದೇಶಿಸಿದೆ.

    ಈ ಹಿಂದೆ ನಡೆದ ವಿಚಾರಣೆ ವೇಳೆ ಮುಖ್ಯ ನ್ಯಾ.ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಮೇ 3ರ ಒಳಗಡೆ ಸ್ಕೀಂ ಕರಡು ಪ್ರತಿ ಸಲ್ಲಿಸುವಂತೆ ಕೇಂದ್ರಕ್ಕೆ ಆದೇಶಿಸಿತ್ತು. ಆದರೆ ಕೇಂದ್ರ ಸರ್ಕಾರ ಕರ್ನಾಟಕದಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅಫಿಡವಿಟ್ ಸಲ್ಲಿಸಲು ಎರಡು ವಾರ ಸಮಯ ನೀಡುವಂತೆ ಮನವಿ ಮಾಡಿತ್ತು. ಆದರೆ ಈ ಮನವಿಯನ್ನು ತಳ್ಳಿಹಾಕಿದ ಪೀಠ ಮೇ 3 ರೊಳಗೆ ಸ್ಕೀಂ ರಚನೆ ಕುರಿತು ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

    ಏನಿದು ಪ್ರಕರಣ?
    ನಿರ್ವಹಣಾ ಮಂಡಳಿ ರಚನೆಯ ಕುರಿತು ತಮಿಳುನಾಡು ಸಲ್ಲಿಸಿದ್ದ ನ್ಯಾಯಾಂಗ ನಿಂದನಾ ಅರ್ಜಿ ಜತೆಗೆ ಕೇಂದ್ರದ ಸ್ಪಷ್ಟನಾ ಅರ್ಜಿಯ ವಿಚಾರಣೆ ಏಪ್ರಿಲ್ 9 ರಂದು ನಡೆದಿತ್ತು. ಈ ವೇಳೆ ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ತಮಿಳುನಾಡು ಸಲ್ಲಿಸಿದ್ದ ನ್ಯಾಯಂಗ ನಿಂದನೆ ಅರ್ಜಿಯನ್ನು ತಿರಸ್ಕರಿಸಿತ್ತು. ಅಲ್ಲದೇ ಸ್ಕೀಂ ರಚನೆ ವಿಚಾರವಾಗಿ ಕೇಂದ್ರ ಈಗಾಗಲೇ ಕಾರ್ಯ ಪ್ರವೃತ್ತವಾಗಿದ್ದು ನ್ಯಾಯಾಂಗ ನಿಂದನೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.

    ಕಾವೇರಿ ನೀರಿನ ಹಂಚಿಕೆ ಕುರಿತು ವಿಚಾರದಲ್ಲಿ ಕೇಂದ್ರ ಸರ್ಕಾರ ನ್ಯಾಯಾಂಗ ನಿಂದನೆ ಮಾಡಿಲ್ಲ. ಈಗಾಗಲೇ ಈ ಕುರಿತು ಕ್ರಮಕೈಗೊಳ್ಳಲಾಗಿದೆ ಎಂದು ಅಭಿಪ್ರಾಯಪಟ್ಟಿತು. ಅಲ್ಲದೇ ಮೇ 3ರ ಒಳಗೆ ಸ್ಕೀಂ ರಚನೆ ಕುರಿತು ಕೇಂದ್ರ ಸರ್ಕಾರ ಕರಡು ಪ್ರತಿಯನ್ನು ಸುಪ್ರಿಂಕೋರ್ಟ್ ಗೆ ಸಲ್ಲಿಸಬೇಕು. ಸುಪ್ರೀಂ ಕೋರ್ಟ್ ಕರಡು ಪ್ರತಿ ಪರಿಶೀಲನೆ ನಡೆಸಿ ಅಂತಿಮಗೊಳಿಸಲಾಗುವುದು ಎಂದು ಹೇಳಿತ್ತು,

    ಇದೇ ವೇಳೆ ಕಾವೇರಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಧಿಕರಣ ತೀರ್ಪು ವಿಲೀನಗೊಳಿಸಿ ಆದೇಶ ನೀಡಿದ್ದು, ಪದೇ ಪದೇ ನ್ಯಾಯಧಿಕರಣ ಆದೇಶ ಉಲ್ಲೇಖಿಸುವಂತಿಲ್ಲ ಎಂದು ಸೂಚನೆ ನೀಡಿತ್ತು. ನೀರು ಹಂಚಿಕೆ ಮಾಡಿ ನಾವು ಆದೇಶ ನೀಡಿದ್ದೇವೆ. ಹಂಚಿಕೆ ಕಾರ್ಯರೂಪಕ್ಕೆ ಬರಲು ಕೇಂದ್ರ ಸರ್ಕಾರ ಸ್ಕೀಂ ರಚನೆ ಮಾಡಲಿದೆ. ಕೇಂದ್ರ ರಚಿಸುವ ಸ್ಕೀಂಗೆ ಎಲ್ಲ ರಾಜ್ಯಗಳು ಬದ್ಧವಾಗಿರಬೇಕು ಎಂದು ನ್ಯಾ. ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ಸೂಚಿಸಿತ್ತು.

    ಅರ್ಜಿ ವಿಚಾರಣೆ ವೇಳೆ ಕಾವೇರಿ ನಿರ್ವಹಣಾ ಮಂಡಳಿ ವಿಚಾರವನ್ನು ಸುಪ್ರೀಂ ಕೋರ್ಟ್ ಪ್ರಸ್ತಾಪಿಸಲಿಲ್ಲ. ತೀರ್ಪು ಪಾಲನೆಗೆ ಯೋಜನೆ ಅವಶ್ಯಕತೆ ಇದ್ದು ಆ ನಿಟ್ಟಿನಲ್ಲಿ ಸ್ಕೀಂ ರಚನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ಈ ಮೂಲಕ ತಮಿಳುನಾಡಿನ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆ ಹೋರಾಟಕ್ಕೆ ಸುಪ್ರೀಂ ಕೋರ್ಟ್ ಪರೋಕ್ಷ ಚಾಟಿ ಬೀಸಿತ್ತು ಎಲ್ಲ ರಾಜ್ಯಗಳನ್ನು ಸಮಾನವಾಗಿ ಪರಿಗಣಿಸಿಲಾಗಿದೆ. ರಾಜ್ಯಗಳ ಜನರು ಶಾಂತ ರೀತಿಯಿಂದ ವರ್ತಿಸುವಂತೆ ಮನವಿ ಮಾಡಲು ಸುಪ್ರೀಂ ಕೋರ್ಟ್ ರಾಜ್ಯಗಳಿಗೂ ಸೂಚಿಸಿತ್ತು.

  • ಮಾಹಿತಿ ಹಕ್ಕು ಕಾಯ್ದೆ ಅಡಿ ಬಿಸಿಸಿಐ – ಕೇಂದ್ರ ಕಾನೂನು ಆಯೋಗ ಶಿಫಾರಸು

    ಮಾಹಿತಿ ಹಕ್ಕು ಕಾಯ್ದೆ ಅಡಿ ಬಿಸಿಸಿಐ – ಕೇಂದ್ರ ಕಾನೂನು ಆಯೋಗ ಶಿಫಾರಸು

    ನವದೆಹಲಿ: ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎಂದು ಕರೆಸಿಕೊಂಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ (ಆರ್‌ಟಿಐ) ತರಲು ಭಾರತ ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

    ಈ ಕುರಿತು ಬುಧವಾರ ಕಾನೂನು ಆಯೋಗ ತನ್ನ ವರದಿಯನ್ನು ಕೇಂದ್ರ ಕಾನೂನು ಸಚಿವಾಲಯಕ್ಕೆ ಸಲ್ಲಿಸಿದೆ. ತನ್ನ ವರದಿಯಲ್ಲಿ ದೇಶದ ಎಲ್ಲಾ ಕ್ರೀಡಾ ಸಂಸ್ಥೆಗಳು ಆರ್‌ಟಿಐ ಕಾಯ್ದೆ ಆಡಿ ಬರುತ್ತಿದ್ದು, ಬಿಸಿಸಿಐ ಇದರ ಅಡಿ ಬರಲು ಸಾಧ್ಯವಿಲ್ಲ ಯಾಕೆ ಎಂದು ಪ್ರಶ್ನಿಸಿದೆ? ಅಷ್ಟೇ ಅಲ್ಲದೇ ಕಾಯ್ದೆಯ 12 ವಿಧಿಯ ಪ್ರಕಾರ ಬಿಸಿಸಿಐ ಸಂಸ್ಥೆಯನ್ನು ತರಲು ಶಿಫಾರಸ್ಸು ಮಾಡಿದೆ.

    ಬಿಸಿಸಿಐ ಒಂದು ಸ್ವತಂತ್ರ ಸಂಸ್ಥೆಯಾದರು ಸಹ ಆದರ ಅಡಿ ರಾಜ್ಯ ಸಂಸ್ಥೆಗಳನ್ನು ಒಳಗೊಂಡಂತೆ ಎಲ್ಲಾ ಸಂಸ್ಥೆಗಳು ಸಹ ಆರ್ ಟಿಐ ಕಾಯ್ದೆ ಅಡಿ ಬರಲು ತಿಳಿಸಿದೆ. ಒಂದು ವೇಳೆ ಕೇಂದ್ರ ಸರ್ಕಾರ ಕಾನೂನು ಆಯೋಗದ ಶಿಫಾರಸ್ಸಿಗೆ ಒಪ್ಪಿಗೆ ಸೂಚಿಸಿದರೆ ಸಾಮಾನ್ಯ ವ್ಯಕ್ತಿಯು ಸಹ ಆರ್ ಟಿಐ ಕಾಯ್ದೆ ಅಡಿ ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬಹುದಾಗಿದೆ. ಅಲ್ಲದೇ ಬಿಸಿಸಿಐ ಸಂಸ್ಥೆ ಇತರೇ ಕ್ರಿಕೆಟ್ ಆಡುವ ರಾಷ್ಟ್ರಗಳು ಹಾಗೂ ಐಸಿಸಿ ಸಂಸ್ಥೆ ನಡುವೆ ಮಾಡಿಕೊಂಡಿರುವ ಒಪ್ಪಂದ ಕುರಿತು ಸಹ ಮಾಹಿತಿ ಪಡೆಯಬಹುದು.

    2016ರ ಜುಲೈ ನಲ್ಲಿ ಸುಪ್ರೀಂ ಕೋರ್ಟ್ ಬಿಸಿಸಿಐ ಸಂಸ್ಥೆಯನ್ನು ಆರ್ ಟಿಐ ಕಾಯ್ದೆ ಅಡಿ ತರಲು ಇರುವ ಕಾನೂನು ಅಂಶಗಳ ಕುರಿತು ವರದಿ ಸಲ್ಲಿಸುವಂತೆ ಕಾನೂನು ಆಯೋಗಕ್ಕೆ ಸೂಚಿಸಿತ್ತು. ಇದರ ಹಿನ್ನೆಲೆ ಕಾನೂನು ಆಯೋಗ ವರದಿಯನ್ನು ಸಲ್ಲಿಸಿದೆ. ಮತ್ತೊಂದು ವಿಶ್ಲೇಷಣೆ ಪ್ರಕಾರ ಈ ಶಿಫಾರಸ್ಸಿನ ಅನ್ವಯ ಬಿಸಿಸಿಐ ಮೇಲೆ ಸರ್ಕಾರ ನಿಯಂತ್ರಣ ಸಾಧಿಸಲು ಅವಕಾಶ ಲಭಿಸುತ್ತದೆ ಎನ್ನಲಾಗಿದೆ. ಈಗಾಗಲೇ ಪಾಕಿಸ್ತಾನ ಜೊತೆಗಿನ ಸರಣಿ ಆಯೋಜನೆ ವಿಚಾರದಲ್ಲಿ ಭಾರತ ವಿದೇಶಾಂಗ ನೀತಿಯೊಂದಿಗೆ ಬಿಸಿಸಿಐ ಅನುಮತಿ ಪಡೆಯವುದು ಕಡ್ಡಾಯವಾಗಿದೆ.

    ಕಾನೂನು ಆಯೋಗ ತನ್ನ ಶಿಫಾರಸ್ಸಿಗೆ ಸಾಕಷ್ಟು ಪೂರಕ ಅಂಶಗಳನ್ನು ನೀಡಿದ್ದು. ಬಿಸಿಸಿಐ 1997 ರಿಂದ ತೆರಿಗೆ ಪಾವತಿಸುವಲ್ಲಿ ಸರ್ಕಾರದಿಂದ ರಿಯಾಯಿತಿ ಪಡೆದಿದೆ. ಅಲ್ಲದೇ ಆಟಗಾರರು ಭಾರತ ತ್ರಿವರ್ಣ ಹಾಗೂ ಆಶೋಕ ಚಕ್ರ ಚಿಹ್ನೆಯನ್ನು ಬಳಕೆ ಮಾಡುವುದನ್ನು ಉಲ್ಲೇಖಿಸಿದೆ.

    ಕೇಂದ್ರ ಸರ್ಕಾರ ಈಗಾಗಲೇ ಬಿಸಿಸಿಐ ಸಂಸ್ಥೆಯನ್ನು ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ಅಡಿ ಬರುವ ಕುರಿತು ಲೋಕಸಭೆಯಲ್ಲಿ ಮಾಹಿತಿ ನೀಡಿತ್ತು. ಭಾರತ ಇತರೇ ಎಲ್ಲಾ ಕ್ರೀಡಾ ಸಂಸ್ಥೆಗಳು ರಾಷ್ಟ್ರೀಯ ಕ್ರೀಡಾ ಫೆಡರೇಷನ್(ಎನ್‍ಎಸ್‍ಎಫ್) ಅಡಿ ಕಾರ್ಯನಿರ್ವಹಿಸುತ್ತಿದೆ.

  • ನನ್ನ ಸಾವಿಗೆ ಮೋದಿ ಸರ್ಕಾರ ಹೊಣೆ ಎಂದು ಬರೆದು ರೈತ ಆತ್ಮಹತ್ಯೆ

    ನನ್ನ ಸಾವಿಗೆ ಮೋದಿ ಸರ್ಕಾರ ಹೊಣೆ ಎಂದು ಬರೆದು ರೈತ ಆತ್ಮಹತ್ಯೆ

    ಮುಂಬೈ: ಮಹಾರಾಷ್ಟ್ರದ ಯವತ್ಮಾಳ ಜಿಲ್ಲೆಯ 50 ವರ್ಷ ವಯಸ್ಸಿನ ಓರ್ವ ರೈತ ಸಾಲಭಾದೆಯಿಂದ ವಿಷವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಶಂಕರ್ ಭಾಯ್‍ರಾವ್ ಚೇರೆ ಆತ್ಮಹತ್ಯೆಗೆ ಶರಣಾದ ರೈತ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಆಡಳಿತಾರೂಢ ಎನ್‍ಡಿಎ ಸರ್ಕಾರ ನನ್ನ ಆತ್ಮಹತ್ಯೆಗೆ ಕಾರಣ ಎಂದು ಮರಣ ಪತ್ರದಲ್ಲಿ ಬರೆದಿದ್ದಾರೆ.

    ದೇಶದಲ್ಲಿ ಅನಾವೃಷ್ಟಿಯಿಂದ ಹೆಚ್ಚು ಪರಿಣಾಮ ಎದುರಿಸಿರುವ ಗ್ರಾಮಗಳಲ್ಲಿ ಯವತ್ಮಾಳ ಜಿಲ್ಲೆಯ ರಾಜುರಾವಾಡಿ ಗ್ರಾಮ ಒಂದಾಗಿದೆ. ತನ್ನ ಕುಟುಂಬಕ್ಕೆ ಪರಿಹಾರವನ್ನು ಮರಣ ಪತ್ರದಲ್ಲಿ ಮೃತ ಶಂಕರ್ ಭೌರಾವೊ ಚೇರೆ ಅವರು ಕೇಳಿದ್ದಾರೆ.

    ಘಟನೆ ನಡೆದು 12 ಘಂಟೆಗಳು ಕಳೆದರೂ ಶವವನ್ನು ವಸಂತರಾವ್ ನಾಯ್ಕ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಿಂದ ಅಂತ್ಯಕ್ರಿಯೆಗೆ ತೆಗೆದುಕೊಂಡು ಹೋಗಲು ಕುಟುಂಬದವರು ನಿರಾಕರಿಸಿದ್ದಾರೆ. ಇಲ್ಲಿನ ಸಮಸ್ಯೆಗಳನ್ನು ಆಲಿಸಲು ಪ್ರಧಾನಿ ಮೋದಿಯವರು ಸ್ಥಳಕ್ಕೆ ಆಗಮಿಸಬೇಕು ಇಲ್ಲ ರಾಜ್ಯ ಸರ್ಕಾರ ಪರಿಹಾರವನ್ನು ನೀಡುವ ತನಕ ಶವವನ್ನು ಆಸ್ಪತ್ರೆಯಿಂದ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

    ಚೇರೆ ಕುಟುಂಬಕ್ಕೆ ತಕ್ಷಣವೇ 1 ಲಕ್ಷ ರೂ. ಗಳನ್ನು ನೀಡುತ್ತೇವೆ. ಚೇರೆ ತನ್ನ ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳು (ಒಬ್ಬರಿಗೆ ಮದುವೆ ಆಗಿದೆ) ಹಾಗೂ ಒಬ್ಬ ಮಗನನ್ನು ತೊರೆದಿದ್ದಾರೆ. ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ಈಗಾಗಲೇ ಪದವಿಯನ್ನು ಪಡೆದಿದ್ದಲ್ಲಿ ನೌಕರಿಯನ್ನು ಕೊಡಿಸುತ್ತೇವೆ ಎಂದು ವಸಂತರಾವ್ ನಾಯ್ಕ್ ಶೆಟ್ಟಿ ಸ್ವಾವಲಂಬನ್ ಮಿಷನ್ ಅಧ್ಯಕ್ಷ ಕಿಶೋರ್ ತಿವಾರಿ ಭರವಸೆ ನೀಡಿದ್ದಾರೆ.

    ಬೇಸರಗೊಂಡಿದ್ದ ಚೇರೆ ಮಂಗಳವಾರ ಬೆಳಗ್ಗೆ ತೋಟಕ್ಕೆ ಹೋಗಿದ್ದರು. ಹಗ್ಗ ಬಿಗಿದು ನೇಣು ಹಾಕಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಇದು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿಷವನ್ನು ಸೇವಿಸಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಘಟನೆ ತಿಳಿದ ಕೆಲವರು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ಸ್ಥಿತಿ ಗಂಭೀರವಾಗಿದೆ ಯವತ್ಮಾಳ ಟೌನ್ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಹೇಳದ್ದಾರೆ. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಪ್ರಾಣ ಹೋಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ತನ್ನ 9 ಎಕರೆ ಜಮೀನಿನಲ್ಲಿ ಹತ್ತಿಯನ್ನು ಬೆಳೆದಿದ್ದೆ. ಸ್ಥಳೀಯ ಸರ್ಕಾರಿ ಸೊಸೈಟಿಯಿಂದ 90 ಸಾವಿರ ಹಾಗೂ 3 ಲಕ್ಷ ರೂ. ಗಳನ್ನು ಬೇರೊಬ್ಬರಿಂದ ಸಾಲವನ್ನು ಪಡೆದಿದ್ದೆ. ವಿದರ್ಭ ಭಾಗದ ಬಹಳಷ್ಟು ಕಡೆ ಬೋಲ್ವರ್ಮ್ ಸೋಂಕಿನಿಂದ ಹತ್ತಿ ಬೆಳೆ ಹಾಳಾಯಿತು. ಹಾಗಾಗಿ ಸಾಲ ಮರುಪಾವತಿ ಕಷ್ಟವಾಯಿತು. ಸಹಾಯ ಮಾಡುವಂತೆ ಶಾಸಕರು, ಸಂಸದರು, ಸರ್ಕಾರಿ ಅಧಿಕಾರಿಗಳನ್ನು ಕೇಳಿಕೊಂಡಿದ್ದರೂ ಎಲ್ಲರೂ ನಿರ್ಲಕ್ಷಿಸಿದ್ದರು ಎಂದು ಮರಣ ಪತ್ರದಲ್ಲಿ ಬರೆದುಕೊಂಡಿದ್ದಾರೆ.

    ನನ್ನ ಮೇಲೆ ಸಾಕಷ್ಟು ಸಾಲವಿದೆ ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳತ್ತಿದ್ದೇನೆ. ಇದಕ್ಕೆ ನೇರ ಹೊಣೆ ನರೇಂದ್ರ ಮೋದಿ ಸರ್ಕಾರ ಎಂದು ಮರಣ ಪತ್ರದಲ್ಲಿ ಬರೆದಿದ್ದಾರೆ.

    ಸರ್ಕಾರಿ ಮತ್ತು ಖಾಸಗಿ ಬ್ಯಾಂಕಗಳಲ್ಲಿನ ಸಾಲವನ್ನು 2017 ಜೂನ್ ನಲ್ಲಿ ಸರ್ಕಾರ ಮನ್ನಾ ಮಾಡಿದೆ ಆದರೆ ಫಲಾನುಭವಿಗಳ ಸಂಖ್ಯೆ ಹೆಚ್ಚಿರುವುದರಿಂದ ಹಣ ತಲುಪಲು ಸಮಯ ತೆಗೆದುಕೊಳ್ಳುತ್ತಿದೆ ಎಂದು ವರದಿಯಾಗಿದೆ.

    2017ರ ಜೂನ್ ನಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ 34,000 ಕೋಟಿ ರೂಪಾಯಿಗಳಷ್ಟು ಕೃಷಿ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ರೈತರಿಗೆ 1.5 ಲಕ್ಷದವರೆಗೆ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದು. ಇದರಿಂದ ರಾಜ್ಯದ 89 ಲಕ್ಷ ರೈತರಿಗೆ ಪ್ರಯೋಜನವಾಗಲಿದೆ ಎಂದು ತಿಳಿಸಿದ್ದರು.