Tag: Central Government

  • ತ್ರಿವಳಿ ತಲಾಖ್ ಬಳಿಕ ನಿಖಾ ಹಲಾಲ, ಬಹುಪತ್ನಿತ್ವ ರದ್ದತಿಗೆ ಕೇಂದ್ರ ಚಿಂತನೆ!

    ತ್ರಿವಳಿ ತಲಾಖ್ ಬಳಿಕ ನಿಖಾ ಹಲಾಲ, ಬಹುಪತ್ನಿತ್ವ ರದ್ದತಿಗೆ ಕೇಂದ್ರ ಚಿಂತನೆ!

    ನವದೆಹಲಿ: ತ್ರಿವಳಿ ತಲಾಖ್ ನಿಷೇಧದ ಪರ ನಿಂತಿದ್ದ ಕೇಂದ್ರ ಸರ್ಕಾರ ಈಗ ಸದ್ಯ ಚಾಲ್ತಿಯಲ್ಲಿರುವ ನಿಖಾ ಹಲಾಲ ಹಾಗೂ ಬಹು ಪತ್ನಿತ್ವವನ್ನು ನಿಷೇಧ ಮಾಡಲು ಕೋರ್ಟ್ ಗೆ ಅರ್ಜಿ ಸಲ್ಲಿಸಿದ ಮಹಿಳೆಯರ ಪರ ನಿಲ್ಲಲು ಚಿಂತನೆ ನಡೆಸಿದೆ.

    ಈ ಕುರಿತು ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ವಿಚಾರಣೆ ನಡೆಯುವ ವೇಳೆ ತೊಂದರೆ ಅನುಭವಿಸಿದ ಮಹಿಳೆಯರ ಪರ ನಿಲ್ಲುವ ಕುರಿತು ಕೇಂದ್ರ ಚಿಂತನೆ ನಡೆಸಿದೆ. ಈ ಎರಡು ಪದ್ಧತಿಗಳು ಮಹಿಳಾ ವಿರೋಧಿಯಾಗಿದ್ದು ಎಂದು ನಿಷೇಧ ಮಾಡಬೇಕೆಂದು ಕೆಲ ಮಹಿಳೆಯರು ಸುಪ್ರೀಂ ಕೋರ್ಟ್ ನಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಕೆಲ ದಿನಗಳಲ್ಲಿ ಈ ಅರ್ಜಿ ವಿಚಾರಣೆಗೆ ಬರಲಿದ್ದು ಈ ವೇಳೆ ಸಂತ್ರಸ್ತ ಮಹಿಳೆಯರ ಪರ ನಿಲ್ಲಲು ಕೇಂದ್ರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

    ಈ ಹಿಂದೆ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಕೇಂದ್ರ ಕಾನೂನು ಸಚಿವಾಲಯಕ್ಕೆ ಅಭಿಪ್ರಾಯ ತಿಳಿಸುವಂತೆ ನೋಟಿಸ್ ಜಾರಿ ಮಾಡಿತ್ತು. ಅಲ್ಲದೇ ಕೋರ್ಟ್ ಗೆ ಸಲ್ಲಿಕೆಯಾಗಿರುವ ಅರ್ಜಿಗಳ ಅನ್ವಯ ಮುಸ್ಲಿಂ ವೈಯಕ್ತಿಕ ಕಾನೂನು(ಷರಿಯಾತ್) ನಿರ್ಬಂಧಗಳನ್ನು ಅಸಂವಿಧಾನಿಕ ಎಂದು ಘೋಷಿಸಲು ಸಾಧ್ಯವೇ ಎಂದು ತನ್ನ ಅಭಿಪ್ರಾಯವನ್ನು ತಿಳಿಸುವಂತೆ ಸೂಚಿಸಿತ್ತು.

    ಏನಿದು ನಿಖಾ ಹಲಾಲ?
    ಒಮ್ಮೆ ವಿಚ್ಛೇದನ ಪಡೆದ ನಂತರ ದಂಪತಿ ಮತ್ತೊಮ್ಮೆ ಮದುವೆಯಾಗಬೇಕಾದರೆ, ಪತ್ನಿ ಬೇರೊಬ್ಬನನ್ನು ಮದುವೆಯಾಗಿ ನಂತರ ಅವನಿಂದ ವಿಚ್ಛೇದನ ಪಡೆದು ಮೊದಲಿನ ಸತಿಯನ್ನು ಮದುವೆಯಾಗುವುದಕ್ಕೆ ನಿಖಾ ಹಲಾಲ ಎಂದು ಕರೆಯಲಾಗುತ್ತದೆ.

    ಬಹುಪತ್ನಿತ್ವ ಪದ್ಧತಿ ಒಬ್ಬ ಪುರುಷ ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗಲು ಅವಕಾಶ ನೀಡುತ್ತದೆ. ಈ ಎರಡು ಪದ್ಧತಿಗಳನ್ನು ಅಸಂವಿಧಾನಿಕ ಎಂದು ಘೋಷಿಸಿ ನಿಷೇಧಿಸಬೇಕೆಂದು ಮನವಿ ಮಾಡಿ ಕೆಲ ಮಹಿಳೆಯರು ಸುಪ್ರೀಂ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ ತ್ರಿವಳಿ ತಲಾಖ್ ನಿಷೇಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ ಸಂಘಟನೆ (ಬಿಎಂಎಂಎ) ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಬೆಂಬಲ ನೀಡುವುದಾಗಿ ತಿಳಿಸಿದೆ.

  • ಆನ್‍ಲೈನ್ ನಲ್ಲಿ ನಿಮಗೆ ಬೇಕಾದ ತಳಿಯ ಹಸುಗಳನ್ನು ಖರೀದಿಸಿ!- ಏನಿದರ ವಿಶೇಷತೆ?

    ಆನ್‍ಲೈನ್ ನಲ್ಲಿ ನಿಮಗೆ ಬೇಕಾದ ತಳಿಯ ಹಸುಗಳನ್ನು ಖರೀದಿಸಿ!- ಏನಿದರ ವಿಶೇಷತೆ?

    ನವದೆಹಲಿ: ರಾಸುಗಳ ವ್ಯಾಪಾರಕ್ಕೆ ಡಿಜಿಟಲ್ ಸ್ಪರ್ಷ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ “ಇ-ಪಶುಹಾತ್” ವೆಬ್‍ಸೈಟ್‍ವೊಂದನ್ನು ಅಭಿವೃದ್ಧಿ ಪಡಿಸಿದೆ. ಮಧ್ಯವರ್ತಿಗಳ ಹಾವಳಿ ತಡೆದು, ರೈತರ ಹಿತ ಕಾಯಲು ನಿಟ್ಟಿನಲ್ಲಿ ಇ-ಪಶುಹಾತ್ ವೆಬ್‍ಸೈಟ್ ಕೆಲಸ ಮಾಡಲಿದೆ.

    ಫ್ಲಿಪ್‍ಕಾರ್ಟ್, ಅಮೆಜಾನ್, ಓಎಲ್‍ಎಕ್ಸ್ ನಂತಯೇ ಇ-ಪಶುಹಾತ್ ವೆಬ್ ಸೈಟ್ ಕಾರ್ಯನಿರ್ವಹಿಸಲಿದೆ. ಇಲ್ಲಿ ರಾಸುಗಳನ್ನು ಮಾರುವವರು ಹಾಗೂ ಖರೀದಿಸುವವರು ನೇರವಾಗಿ ಸಂಪರ್ಕ ಸಾಧಿಸುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರೊಂದಿಗೆ ಪಶುಸಂಗೋಪನೆಗೆ ನೆರವಾಗುವ ಮಾಹಿತಿ, ವೈದ್ಯಕೀಯ ಸೇವೆ ಸೇರಿದಂತೆ ಅನೇಕ ಸೌಲಭ್ಯಗಳು ಇಲ್ಲಿ ದೊರೆಯಲಿದೆ.

    ಏನೇನು ಅಭ್ಯವಿದೆ?
    ಜಾನುವಾರು, ಹೋರಿ, ಎಮ್ಮೆ, ಒಂಟೆ, ಕುರಿ, ಆಡು, ಹಂದಿ, ಕುದುರೆ, ಕೋಳಿ, ಕೋನ, ಇತರೆ ಪ್ರಾಣಿಗಳು ಪಟ್ಟಿಯಿದ್ದು, ರಾಜ್ಯವಾರು ಪ್ರತಿಯೊಂದು ಪ್ರಾಣಿಯ ಸಂಖ್ಯೆಯನ್ನು ದಾಖಲಿಸಲಾಗಿದೆ. ಅಷ್ಟೇ ಅಲ್ಲದೇ ಜಾನುವಾರುಗಳ ಪ್ರಾಮಾಣಿಕರಣ ಪರಿಶೀಲನೆ ಸೇವೆ, ಪೌಷ್ಟಿಕತೆ ಸಲಹಾ ಸೇವೆ, ಸ್ವಚ್ಚ ಹಾಲು ಉತ್ಪಾದನೆ, ಆರೋಗ್ಯ ಕಾರ್ಡ್, ವೆಟರ್ ನರಿ ಸೇವೆ, ಕೃತಕ ಗರ್ಭಧಾರಣೆ, ಸಾರಿಗೆ ಸೌಲಭ್ಯಕ್ಕೆ ಸಂಪರ್ಕ ಕಲ್ಪಿಸುವುದು ರೋಗ ಪತ್ತೆ ಮತ್ತು ಪರೀಕ್ಷೆ, ಎಸ್‍ಎಂಎಸ್, ವಾಯ್ಸ್ ಕಾಲ್ ಹಾಗೂ ಇಮೇಲ್ ರಿಮೈಂಡರ್ ಸೌಲಭ್ಯ ಕಲ್ಪಿಸಲಾಗಿದೆ. ಅಲ್ಲದೇ ಸಲಹೆ, ದೂರು ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ಮೇಲ್ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ.

    ವೆಬ್‍ಸೈಟ್ ನಲ್ಲಿ ಸ್ಥಳೀಯವಾಗಿ ನಡೆಯುವ ಕಾರ್ಯಕ್ರಮ, ವಿಚಾರ ಸಂಕಿರಣಗಳ ಬಗ್ಗೆಯೂ ನೋಂದಣಿ ಮಾಡಿಸಿಕೊಂಡಿರುವ ರೈತರಿಗೆ ಮಾಹಿತಿ ನೀಡಲಾಗುತ್ತದೆ. ಮಧ್ಯವರ್ತಿಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಇ-ಪಶುಹಾತ್ ಸಹಾಯಕವಾಗಲಿದ್ದು, ರಾಸುಗಳ ಮಾಲೀಕರಿಗೆ ಹಾಗೂ ಖರೀದಿ ಮಾಡುವವರಿಗೆ ಸೂಕ್ತ ಬೆಲೆ ದೊರೆಯಲಿದೆ. ಅಲ್ಲದೇ ರಾಜ್ಯದ ವಿವಿಧ ತಳಿಗಳ ಬಗ್ಗೆ ಮಾಹಿತಿ, ನೀಡುವ ಜೊತೆಗೆ ಅವುಗಳ ಕುರಿತು ರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಒಂದು ಹೆಜ್ಜೆ ಮುಂದುವರೆದು ಹಸುಗಳಿಗೆ ಆನ್‍ಲೈನ್ ಟ್ರೇಡಿಂಗ್ ಒದಗಿಸುವ ಮಹತ್ವದ ಯೋಜನೆಯನ್ನು ಈ ವೆಬ್‍ಸೈಟ್ ಕಲ್ಪಿಸಲಿದೆ.

    ಸದ್ಯ ಇ-ಪಶುಹಾತ್ ವೆಬ್‍ಸೈಟ್ ನಲ್ಲಿ ದೇಶದ 56 ವೀರ್ಯ ಸ್ಟೇಷನ್‍ಗಳೊಂದಿಗೆ ಸಂಪರ್ಕ ಸಾಧಿಸಲಾಗಿದೆ. ಹೀಗಾಗಿ ರೈತರು ಯಾವುದೇ ಅಧಿಕಾರಿಗಳ ಸಹಾಯ ಪಡೆಯದೇ ನೇರವಾಗಿ ರಾಜ್ಯದಲ್ಲಿರುವ ಖಾಸಗಿ ಸಂಸ್ಥೆ, ಕೃಷಿ ವಿಶ್ವವಿದ್ಯಾಲಯಗಳ ವಿಳಾಸ, ದೂರವಾಣಿ ಸಂಖ್ಯೆ, ಮಾಹಿತಿ ಪಡೆಯಬಹುದಾಗಿದೆ. ಕೇಂದ್ರ ಸರ್ಕಾರದ ಅಧಿಕೃತ ಜಾಲತಾಣದಲ್ಲಿ ಪ್ರಮುಖವಾಗಿ ರಾಸುಗಳ ಮಾರಾಟ, ಹೆಪ್ಪುಗಟ್ಟಿದ ದನಗಳ ವೀರ್ಯ (ಎಫ್‍ಎಸ್) ವ್ಯಹಾರಕ್ಕೆ ಅವಕಾಶವಿದೆ. ಇದಕ್ಕಾಗಿ ಅಧಿಕೃತ ಪೂರೈಕೆದಾರರ ಪಟ್ಟಿ ಕೂಡ ಲಭ್ಯವಿದೆ. ವೆಬ್‍ಸೈಟಿಗೆ ಭೇಟಿ ನೀಡಲು ಕ್ಲಿಕ್ ಮಾಡಿ: https://epashuhaat.gov.in/

    ಇ-ಪಶುಹಾತ್ ವೆಬ್‍ಸೈಟ್‍ನಲ್ಲಿ ರೈತರು ಅಥವಾ ಪಶುಗಳ ಮಾಲೀಕರು ನೋಂದಣಿ ಮಾಡಿಕೊಂಡಲ್ಲಿ, ನೇರವಾಗಿ ಮಾರುವವರು ಹಾಗೂ ಖರೀದಿಗಾರರು ಸಂಪರ್ಕ ಸಾಧಿಸಬಹುದು. ದೇಶದಲ್ಲಿ ವಿವಿಧ ತಳಿಗಳನ್ನು ಅಭಿವೃದ್ಧಿಗೆ ಸಂಶೋಧನೆ ನಡೆಯುತತ್ತಿದ್ದು, ಈ ಕುರಿತು ಮಾಹಿತಿ ಕೂಡಾ ಕೇಂದ್ರ ಸರ್ಕಾರದ ಅಧಿಕೃತ ಜಾಲತಾಣದಲ್ಲಿ ಲಭ್ಯವಾಗಲಿದೆ.

    ಕೇಂದ್ರ, ರಾಜ್ಯ ಸಹಕಾರಿ ಮತ್ತು ಖಾಸಗಿ ಸಂಸ್ಥೆಗಳ ಮಧ್ಯೆ ಕೊಂಡಿಯ ರೂಪದಲ್ಲಿ ಇದು ಕಾರ್ಯನಿರ್ವಹಿಸಲಿದೆ. ಇದರಿಂದ ರೈತರು, ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಫಾರ್ಮ್ ಸೇರಿದಂತೆ ಪಶುಸಂಗೋಪನೆ ಮಾಡುವವರಿಗೆ ಹೆಚ್ಚು ಅನುಕೂಲವಾಗಲಿದೆ.

  • ನಮ್ಮ ಸಹನೆಯನ್ನು ದೌರ್ಬಲ್ಯವೆಂದು ಪರಿಗಣಿಸಬೇಡಿ – ಕೇಂದ್ರದ ವಿರುದ್ಧ ಗುಡುಗಿದ ಸಿಎಂ

    ನಮ್ಮ ಸಹನೆಯನ್ನು ದೌರ್ಬಲ್ಯವೆಂದು ಪರಿಗಣಿಸಬೇಡಿ – ಕೇಂದ್ರದ ವಿರುದ್ಧ ಗುಡುಗಿದ ಸಿಎಂ

    ಬೆಂಗಳೂರು: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ರಾಜ್ಯದ ಪ್ರತಿನಿಧಿ ನೇಮಕ ವಿಷಯದಲ್ಲಿ ಕೇಂದ್ರ ಸರ್ಕಾರ ಏಕ ಪಕ್ಷೀಯ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಕೋರ್ಟ್ ನಿಯಮ ಜಾರಿ ವೇಳೆ ಕೆಲ ನಿರ್ಣಯಗಳನ್ನು ತಿರುಚಲಾಗಿದೆ. ಅದನ್ನು ಸರಿಪಡಿಸಲು ಈಗಾಗಲೇ ಕೇಂದ್ರಕ್ಕಾಗಿ ಈ ಕುರಿತು ಮನವಿ ಮಾಡಿದ್ದಾಗಿ ಹೇಳಿದ್ದಾರೆ.

    ಕಾವೇರಿ ಸ್ಕೀಂ ರಚನೆ ಎಂಬುವುದು ನ್ಯಾಯಾಲಯದ ತೀರ್ಮಾನವಾಗಿದ್ದು ಇದಕ್ಕೆ ಕರ್ನಾಟಕ ಸಂಪೂರ್ಣ ಬೆಂಬಲ ನೀಡಿದೆ. ಆದರೆ ನ್ಯಾಯಾಲಯದ ನಿಯಮಗಳನ್ನು ಜಾರಿಗೆ ತರುವ ವೇಳೆ ಸ್ಕೀಂ ಕರಡು ಪ್ರತಿಯಲ್ಲಿ ಕೆಲ ಲೋಪದೋಷಗಳು ಉಂಟಾಗಿದೆ. ಈ ಕುರಿತು ಲೋಕಸಭೆಯಲ್ಲಿ ಚರ್ಚೆ ನಡೆಸುವಂತೆ ಮನವಿ ಮಾಡಿದ್ದೇನೆ. ಆದರೆ ಕೇಂದ್ರ ಸರ್ಕಾರ ಇದನ್ನು ಪರಿಗಣಿಸಿಲ್ಲ. ನಮ್ಮ ಸಹನೆಯನ್ನು ದೌರ್ಬಲ್ಯವೆಂದು ಪರಿಗಣಿಸಬೇಡಿ. ಈಗ ಕೈಗೊಂಡಿರುವ ನಿರ್ಧಾರವನ್ನು ಮರು ಪರಿಶೀಲನೆ ಮಾಡುವಂತೆ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.

    ಕೇಂದ್ರದ ಪ್ರಾಧಿಕಾರ ರಚನೆ ನಿರ್ಧಾರ ಮರುಪರಿಶೀಲಿಸುವಂತೆ ಕೇಂದ್ರಕ್ಕೆ ಮತ್ತೊಮ್ಮೆ ಪತ್ರ ಬರೆಯತ್ತೇವೆ. ಈ ಕುರಿತು ಸಲಹೆ ನೀಡಲು ತಜ್ಞರನ್ನು ನೇಮಕ ಮಾಡಿಕೊಂಡಿದ್ದೇವೆ. ಆದರೆ ಕಾನೂನಾತ್ಮಾಕವಾಗಿ ಇದು ಮುಗಿದ ಅಧ್ಯಯವಾದರೂ ಸ್ಕೀಂ ರಚನೆಯಲ್ಲಿ ಈ ಸಂಬಂಧ ಅಡ್ವೊಕೇಟ್ ಜನರಲ್ ಅವರ ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ. ಕೇಂದ್ರ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಿ ನಮ್ಮ ರಾಜ್ಯದ ಅಹವಾಲು ತಲುಪಿಸುತ್ತೇನೆ. ಪ್ರಾಧಿಕಾರ ರಚನೆ ವಿಚಾರದಲ್ಲಿ ನಾವು ಕೆಲವು ಸಲಹೆ ಕೊಟ್ಟಿದ್ದೆವು ಆದರೆ ಕೇಂದ್ರ ಸರ್ಕಾರ ಏಕಪಕ್ಷೀಯ ತೀರ್ಮಾನ ಕೈಗೊಂಡಿದೆ ಎಂದು ಗುಡುಗಿದರು.

    https://www.youtube.com/watch?v=L1fxbS09L8Y

  • ಸಭೆ ವೇಳೆ ಫೇಸ್ ಬುಕ್ ನಲ್ಲಿ ಯುವತಿಯರ ಚಿತ್ರ ವೀಕ್ಷಿಸುವಲ್ಲಿ ಬ್ಯುಸಿಯಾದ ಅಧಿಕಾರಿ

    ಸಭೆ ವೇಳೆ ಫೇಸ್ ಬುಕ್ ನಲ್ಲಿ ಯುವತಿಯರ ಚಿತ್ರ ವೀಕ್ಷಿಸುವಲ್ಲಿ ಬ್ಯುಸಿಯಾದ ಅಧಿಕಾರಿ

    ಚಿತ್ರದುರ್ಗ: ಅಭಿವೃದ್ಧಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಯು ದುರ್ವತನೆ ತೋರಿದ್ದು, ಫೇಸ್ ಬುಕ್ ನಲ್ಲಿ ಯುವತಿಯರ ಚಿತ್ರ ವೀಕ್ಷಿಸುವಲ್ಲಿ ಅಧಿಕಾರಿ ಬ್ಯುಸಿಯಾಗಿದ್ದ ಘಟನೆ ಚಿತ್ರದುರ್ಗ ಜಿಲ್ಲಾ ಪಂಚಾಯತ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆದಿದೆ.

    ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಿಗಧಿ ಮಾಡಲಾಗಿತ್ತು. ಆದರೆ ಈ ವೇಳೆ ಚಿತ್ರದುರ್ಗ ಜಿಲ್ಲಾ ಪಶು ಸಂಗೋಪನಾ ಇಲಾಖೆ ಅಧಿಕಾರಿ ರಾಜಪ್ಪ ಈ ರೀತಿ ದುರ್ವತನೆ ತೋರಿದ್ದಾರೆ. ಸಭೆಯಲ್ಲಿ ಅಧಿಕಾರಿಗಳು ಅಭಿವೃದ್ಧಿ ಪರಿಶೀಲನೆಯಲ್ಲಿ ತೊಡಗಿದ್ದರೆ ರಾಜಪ್ಪ ಅವರು ಫೇಸ್ ಬುಕ್ ನಲ್ಲಿ ಯುವತಿಯರ ಚಿತ್ರ ವೀಕ್ಷಿಸುವಲ್ಲಿ ಬ್ಯುಸಿಯಾಗಿದ್ದರು.

    ಶಾಸಕ ಗೈರು: ಪ್ರಮುಖವಾಗಿ ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನ ಪರಿಶೀಲನೆ ಸಭೆಯನ್ನು ಸಂಸದ ಬಿ.ಎನ್.ಚಂದ್ರಪ್ಪ ನೇತೃತ್ವದಲ್ಲಿ ಕರೆಯಲಾಗಿತ್ತು. ಈ ಸಭೆ ಜಿಲ್ಲೆಯ ಎಲ್ಲಾ ಶಾಸಕರು ಆಗಮಿಸುವುದು ಕಡ್ಡಾಯವಾಗಿದ್ದರು. ಈ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಮೊಳಕಲ್ಮೂರು ಶಾಸಕ ಶ್ರೀರಾಮುಲು, ಹೊಸದುರ್ಗ ಶಾಸಕ ಶೇಖರ್ ಸಭೆಗೆ ಗೈರು ಹಾಜರಾಗಿದ್ದರು. ಅಲ್ಲದೇ ಎಂಎಲ್‍ಸಿ ಗಳಾದ ರಘು ಆಚಾರ್, ವೈ ಎ ನಾರಾಯಣ ಸ್ವಾಮಿ ಸಭೆ ಹಾಜರಾಗದೇ ನಿರ್ಲಕ್ಷ್ಯ ಮೆರೆದಿದ್ದಾರೆ.

    https://www.youtube.com/watch?v=vZX67yMNpv4

  • ನಾವು ಪಾರದರ್ಶಕವಾಗಿದ್ದೇವೆ, ಹವಾಲಾ ಕೊಟ್ಟವರು ಯಾರು? ಕೊಟ್ಟಿದ್ದು ಯಾರಿಗೆ?: ಡಿಕೆ ಸುರೇಶ್ ಪ್ರಶ್ನೆ

    ನಾವು ಪಾರದರ್ಶಕವಾಗಿದ್ದೇವೆ, ಹವಾಲಾ ಕೊಟ್ಟವರು ಯಾರು? ಕೊಟ್ಟಿದ್ದು ಯಾರಿಗೆ?: ಡಿಕೆ ಸುರೇಶ್ ಪ್ರಶ್ನೆ

    ರಾಮನಗರ: ರಾಜಕೀಯದ ಉದ್ದೇಶದಿಂದ ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಹವಾಲಾ ಹಣ ಎಂದು ಅಪಪ್ರಚಾರ ಮಾಡುತ್ತಿದೆ ಎಂದು ಸಂಸದ ಡಿಕೆ ಸುರೇಶ್ ಆರೋಪಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರ ಕಾಂಗ್ರೆಸ್ ಪಕ್ಷದಲ್ಲಿರುವ ಬಲಿಷ್ಠರನ್ನು ಟಾರ್ಗೆಟ್ ಮಾಡುತ್ತಿದೆ. ಆದರೆ ನಾವು ಅದನ್ನೆಲ್ಲ ಸಮರ್ಪಕವಾಗಿ ಎದುರಿಸುತ್ತೇವೆ ಎಂದರು.

    ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಹವಾಲಾ ಹಣದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಈ ಬಗ್ಗೆ ಸಾಕ್ಷಿ ಬೇಕು. ಹವಾಲಾ ಕೊಟ್ಟವರು ಯಾರು? ಯಾರಿಗೆ ಕೊಟ್ಟರು? ಎಂಬ ಮಾಹಿತಿಯೇ ಇಲ್ಲ. ಕೇವಲ ಡಿ.ಕೆ.ಶಿವಕುಮಾರ್ ಅವರ ಹೆಸರನ್ನ ಕೆಡಿಸಬೇಕೆಂದು ಈ ಹವಾಲಾ ಹೆಸರನ್ನ ಹಾಕುತ್ತಿದ್ದಾರೆ ಎಂದು ದೂರಿದರು.

    ಈ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಅವರ ಕುಟುಂಬದವರು ಭಾಗಿಯಾಗಿಲ್ಲ. ಇದು ಕೇವಲ ರಾಜಕೀಯ ಷಡ್ಯಂತ್ರ. ರಾಜಕೀಯ ಉದ್ದೇಶಕ್ಕಾಗಿ ಊಹಾಪೋಹ ಸುದ್ದಿ ಹಬ್ಬಿಸಲಾಗುತ್ತಿದೆ. ಈ ಕುರಿತಂತೆ ಯಾವುದೇ ಆತಂಕ ಬೇಡ. ನಾವು ಪಾರದರ್ಶಕವಾಗಿದ್ದೇವೆ. ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನ ದುರ್ಬಳಕೆ ಮಾಡಿಕೊಂಡು ಡಿಕೆಶಿ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದೆ ಎಂದರು.

    ಈ ಸಂದರ್ಭದಲ್ಲಿ ರಾಮನಗರ ಉಪ ಚುನಾವಣೆ ಕುರಿತು ಹೊಂದಾಣಿಕೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ನೇರವಾಗಿಯೇ ಚುನಾವಣೆ ಎದುರಿಸಲಾಗುವುದು ಎಂದು ತಿಳಿಸಿದರು.

  • ಸಿಎಂ ಕುಮಾರಸ್ವಾಮಿ ಪ್ರಧಾನಿ ಮೋದಿ ಭೇಟಿ – ಸಾಲಮನ್ನಾ, ಕಾವೇರಿ ಪ್ರಾಧಿಕಾರ ರಚನೆ ಬಗ್ಗೆ ಚರ್ಚೆ

    ಸಿಎಂ ಕುಮಾರಸ್ವಾಮಿ ಪ್ರಧಾನಿ ಮೋದಿ ಭೇಟಿ – ಸಾಲಮನ್ನಾ, ಕಾವೇರಿ ಪ್ರಾಧಿಕಾರ ರಚನೆ ಬಗ್ಗೆ ಚರ್ಚೆ

    ನವದೆಹಲಿ: ಬ್ಯಾಂಕ್ ಪರಿಸ್ಥಿತಿ ಉತ್ತಮ ಪಡಿಸಲು ಕೇಂದ್ರ ಸರ್ಕಾರ 2 ಲಕ್ಷ ಕೋಟಿ ರೂ. ಹಣವನ್ನು ಬಾಂಡ್ ಮೂಲಕ ಪಡೆಯುವ ನಿರ್ಧಾರ ಮಾಡಿದೆ. ಈ ಹಣದಲ್ಲಿ ರೈತರ ಸಾಲಮನ್ನಾ ಮಾಡಲು ನೆರವು ನೀಡಲು ಕೇಂದ್ರಕ್ಕೆ ಮನವಿ ಮಾಡಿದ್ದಾಗಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮ್ಮ ಭೇಟಿ ವೇಳೆ ಚರ್ಚೆ ನಡೆಸಿದ ಅಂಶಗಳ ಕುರಿತು ವಿವರವಾಗಿ ಮಾಹಿತಿ ನೀಡಿದರು. ಪ್ರಮುಖವಾಗಿ ಕರ್ನಾಟಕದ ಜನರ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರದ ಸಚಿವರ ಗಮನ ಸೆಳೆಯಲು ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.

    ಗೃಹ ಸಚಿವರ ಭೇಟಿ ವೇಳೆ ರಾಜ್ಯಕ್ಕೆ ಪೊಲೀಸ್ ಇಲಾಖೆ ಭದ್ರತೆಯ ಕೆಲವು ಹೆಚ್ಚುವರಿ ಯೋಜನೆ ಜಾರಿ ತರಲು ಆರ್ಥಿಕ ನೆರವು ಕೇಳಲಾಗಿದೆ. ಪ್ರಕೃತಿ ವಿಕೋಪಕ್ಕೆ ಎನ್‍ಡಿಆರ್ ಎಫ್ ಮೂಲಕ ರಾಜ್ಯಕ್ಕೆ ಕಡಿಮೆ ಹಣ ಬಿಡುಗಡೆ ಆಗಿರುವ ಕುರಿತು ಗಮನ ಸೆಳೆದಿದ್ದು, ಇತರೆ ರಾಜ್ಯಗಳಿಗೆ ನೀಡಿರುವ ಅನುದಾನದ ಪ್ರಮಾಣವನ್ನು ತಿಳಿಸಿ ಚರ್ಚೆ ನಡೆಸಿದ್ದೇವೆ. ಈ ಕುರಿತು ಸಚಿವರು ಆಗಿರುವ ವ್ಯತ್ಯಾಸವನ್ನು ಕಂಡು ಅಚ್ಚರಿ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಅಶ್ವಾಸನೆ ನೀಡಿದ್ದಾಗಿ ಸ್ಪಷ್ಟಪಡಿಸಿದರು.

    ಬಳಿಕ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ಭೇಟಿ ಮಾಡಿ ರಾಜ್ಯದ ರಸ್ತೆಗಳ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಸಿದ್ದಾಗಿ ಹಾಗೂ ರಾಜ್ಯಕ್ಕೆ 34 ಸಾವಿರ ಕೋಟಿ ರೂ. ಯೋಜನೆಗೆ ಒಪ್ಪಿಗೆ ಸಿಕ್ಕಿರುವುದಾಗಿ ತಿಳಿಸಿದರು. ಅಲ್ಲದೇ ಚರ್ಚೆ ವೇಳೆ ಸಾಗರ, ಸಿಗಂಧೂರು, ಹಾಸನ, ತುಮಕೂರು ಹೆದ್ದಾರಿ ಸೇರಿದಂತೆ ಹಲವು ಹೊಸ ಯೋಜನೆಗಳಿಗೆ ಅನುದಾನಕ್ಕೆ ಮನವಿ ಮಾಡಿದ್ದಾಗಿ ತಿಳಿಸಿದರು.

    ಕಾವೇರಿ ಪ್ರಾಧಿಕಾರ ರಚನೆ ಗೊಂದಲ: ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಕೇದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿರುವ ಲೋಪದೋಷಗಳನ್ನು ಹೆಸರಿಸಿ ಗಮನ ಸೆಳೆದಿರುವುದಾಗಿ ತಿಳಿಸಿದರು. ಪ್ರಮುಖವಾಗಿ ಪ್ರತಿ ಹತ್ತು ದಿನಕ್ಕೆ ಡ್ಯಾಂ ನೀರು ಅಳತೆ ಮಾಡುವುದು, ನಮ್ಮ ರೈತರು ಯಾವ ಬೆಳೆ ಬೆಳೆಯಬೇಕು ಎಂಬುದು ಪ್ರಾಧಿಕಾರ ನಿರ್ಧಾರ ಮಾಡಲಿರುವ ಅವೈಜ್ಞಾನಿಕ ಅಂಶ ಹಾಗೂ ಮಳೆ ಕೊರತೆ ಆಧರಿಸಿ ನೀರು ಬಿಡುವ ವ್ಯವಸ್ಥೆ, ಬೆಳೆ ಬೆಳೆಯುವ ವಿಚಾರಕ್ಕೆ ಸಂಬಂಧಿಸಿದಂತೆ ರೈತರ ಮನವೊಲಿಸುವುದು ಕಷ್ಟ ಎಂಬುವುದನ್ನು ಮನವರಿಕೆ ಮಾಡಿದ್ದಾಗಿ ತಿಳಿಸಿದರು. ಈ ಕುರಿತು ಇನ್ನೊಂದು ಸಭೆ ಸೇರಿ ಮಾತುಕತೆ ನಡೆಸುವ ಭರವಸೆ ನೀಡಿದ್ದಾರೆ. ಅಧಿಸೂಚನೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಚರ್ಚೆ ಆಗಬೇಕಿತ್ತು. ಕೆಲ ಬದಲಾವಣೆ ಇದ್ದಲ್ಲಿ ಅಲ್ಲಿ ಚರ್ಚೆ ಬಳಿಕ ಬದಲಾಗಲಿಸಲಾಗುವುದು ಎಂದು ತಿಳಿಸಿದ್ದಾಗಿ ವಿವರಿಸಿದರು.

  • ರೈತರ ಸಾಲ ಮನ್ನಾ: ಕೇಂದ್ರದ ಸಹಕಾರ ಕೇಳಿದ ಸಿಎಂ ಕುಮಾರಸ್ವಾಮಿ

    ರೈತರ ಸಾಲ ಮನ್ನಾ: ಕೇಂದ್ರದ ಸಹಕಾರ ಕೇಳಿದ ಸಿಎಂ ಕುಮಾರಸ್ವಾಮಿ

    ನವದೆಹಲಿ: ಕರ್ನಾಟಕದಲ್ಲಿ 85 ಲಕ್ಷ ಜನ ರೈತರು ಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆ. ರೈತರ ಹಿತಾಸಕ್ತಿ ಕಾಪಾಡಲು ರಾಜ್ಯ ಸರ್ಕಾರ ಸಿದ್ಧವಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಬೆಂಬಲ ನೀಡಬೇಕು ಎಂದು ಸಿಎಂ ಎಚ್‍ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

    ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ನೀತಿ ಆಯೋಗದ ಸಭೆಯ ಮಾತನಾಡಿದ ಅವರು, ಕರ್ನಾಟಕದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೊದಲ ಬಾರಿಗೆ ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಿದ್ದೇನೆ. ಹೊಸ ಸರ್ಕಾರ ಜನರ ನಿರೀಕ್ಷೆಗಳನ್ನು ಈಡೇರಿಸಲಿದೆ. ಈ ಬಗ್ಗೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲಿದ್ದೇವೆ. ಕೇಂದ್ರ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಸಂಸ್ಥೆಗಳ ಬೆಂಬಲ ರಾಜ್ಯಕ್ಕೆ ಬೇಕು. ರಾಜ್ಯದಲ್ಲಿ 85 ಲಕ್ಷ ಮಂದಿ ರೈತರು ಬ್ಯಾಂಕುಗಳಿಂದ ಸಾಲ ಪಡೆದಿದ್ದಾರೆ. ಬರಗಾಲದ ಕಾರಣದಿಂದ ರೈತರು ಮತ್ತಷ್ಟು ತೊಂದರೆ ಅನುಭವಿಸಿದ್ದಾರೆ. ಹೀಗಾಗಿ ರಾಜ್ಯಗಳಿಗೆ ಕೇಂದ್ರ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

    ಇದೇ ವೇಳೆ ನಾವು ಹಲವು ರಾಜಕೀಯ ಸಿದ್ಧಾಂತಗಳನ್ನು ಗೌರವಿಸುತ್ತೇವೆ ಎಂದು ಹೇಳಿದ ಎಚ್‍ಡಿಕೆ, ಅಭಿವೃದ್ಧಿ ವಿಚಾರದಲ್ಲಿ ಕೇಂದ್ರ ಸರಕಾರದ ಜೊತೆ ಕೈ ಜೋಡಿಸುತ್ತೇವೆ. ಕೇಂದ್ರ ಸರ್ಕಾರಕ್ಕೆ ಅಭಿವೃದ್ಧಿ ವಿಚಾರದಲ್ಲಿ ಸಂಪೂರ್ಣ ಸಹಕಾರ ನೀಡುತ್ತೇವೆ. ಕೃಷಿ ವಲಯದಲ್ಲಿ ದೇಶ ಸಮಸ್ಯೆ ಎದುರಿಸುತ್ತಿದ್ದು, ಹಳ್ಳಿಗಾಡಿನಲ್ಲಿ 70% ರಷ್ಟು ಕೃಷಿ ಮೇಲೆ ಅವಲಂಬಿತರಾಗಿದ್ದಾರೆ. ಕೃಷಿ ಕ್ಷೇತ್ರದ ಬೆಳವಣಿಗೆ ರೈತರಿಗೆ ಲಾಭದಾಯಕ ಆದಾಯ ಸಿಗುತ್ತಿಲ್ಲ. ಗ್ರಾಮೀಣ ಭಾಗದ ಋಣಭಾರ ಸರ್ಕಾರದ ಮೇಲಿದೆ. ಈ ಬಿಕ್ಕಟ್ಟು ನಿಭಾಯಿಸಲು ಒಟ್ಟಾಗಿ ಕೆಲಸ ಮಾಡಬೇಕಿದೆ. ರೈತರ ಋಣಭಾರ ತಗ್ಗಿಸಲು ಗಣನೀಯ ಕ್ರಮ ಕೈಗೊಳ್ಳಲು ನಮ್ಮ ಸರ್ಕಾರ ಸಿದ್ಧವಿದೆ. ರಾಜ್ಯ ಸರ್ಕಾರಕ್ಕೆ ಪ್ರಯತ್ನಕ್ಕೆ ಕೇಂದ್ರ ಸಹಕಾರ ನೀಡಬೇಕು ಎಂದರು.

    ಕಳೆದ 16 ವರ್ಷಗಳಲ್ಲಿ 13 ವರ್ಷ ಬರಗಾಲ ಎದುರಿಸಿದ್ದೇವೆ. ಪ್ರಾಕೃತಿಕ ವಿಕೋಪಗಳನ್ನು ಗಮನದಲ್ಲಿರಿಸಿ ನೀತಿ ರಚಿಸಬೇಕಿದೆ. ಜಲ ಸಂರಕ್ಷರಣೆ ಉತ್ತೇಜಿಸುವ ಕೆಲಸ ನೀತಿ ಆಯೋಗ ಮಾಡಬೇಕಿದೆ. ರಾಜ್ಯದಲ್ಲಿ ನೀರಿನ ಸಮಸ್ಯೆ ನೀಗಿಸಲು ಕೆರೆ ಸಂಜೀವಿನಿ ಯೋಜನೆ ಹಮ್ಮಿಕೊಂಡಿದ್ದೇವೆ. ಜಲ ದಶಕ ಎಂದು ಪರಿಗಣಿಸಿ ಸಂರಕ್ಷಣೆಗೆ ಪಣತೊಡಬೇಕಿದೆ. ಕೇಂದ್ರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದ್ದೇವೆ. ಹಿಂದುಳಿದ ಜಿಲ್ಲೆಗಳಿಗೆ ನೂರು ಕೋಟಿ ಕೇಂದ್ರದ ಅನುದಾನ ಅಗತ್ಯವಿದ್ದು, ಎನ್‍ಡಿಆರ್ ಎಫ್ ಅನುದಾನದಲ್ಲಿ ರಾಜ್ಯಕ್ಕೆ ಹೆಚ್ಚಿನ ಪರಿಹಾರ ಬೇಕಿದೆ. ಪ್ರಾಕೃತಿಕ ವಿಕೋಪದಿಂದ ನಾಲ್ಕು ವರ್ಷದಲ್ಲಿ ರಾಜ್ಯಕ್ಕೆ 70 ಸಾವಿರಕೋಟಿ ನಷ್ಟ ಉಂಟಾಗಿದ್ದು, ಇಪ್ಪತ್ತು ಸಾವಿರ ಕೋಟಿ ಪರಿಹಾರ ನೀಡುವ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಕೇವಲ 5 ಸಾವಿರ ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ ಎಂದು ವಿವರಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಾಲ್ಕನೇ ಬಾರಿಗೆ ನಡೆಯುತ್ತಿರುವ ಸಭೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್ ಹಾಗೂ ಕೇಂದ್ರ ಸಚಿವರು ಮತ್ತು ತಜ್ಞರು ನೀತಿ ಆಯೋಗದ ಸಭೆಯಲ್ಲಿ ಭಾಗಿಯಾಗಿದ್ದಾರೆ. ಈ ಬಾರಿಯ ಸಭೆಯಲ್ಲಿ ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾದ ಕ್ರಮಗಳ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯಿತು. ಅಲ್ಲದೇ ಕೇಂದ್ರ ಸರ್ಕಾರದ ಪ್ರಮುಖ ಮಹಾತ್ವಾಕಾಂಕ್ಷೆಯ ಯೋಜನೆಗಳಾದ ಆಯುಷ್ಮಾನ್ ಭಾರತ, ರಾಷ್ಟ್ರೀಯ ಪೋಷಕಾಂಶ ಅಭಿಯಾನ, ಇಂದ್ರಧನುಷ್‍ನಂತಹ ಯೋಜನೆಗಳ ಅನುಷ್ಠಾನದ ಬಗ್ಗೆ ಚರ್ಚೆ ನಡೆಯಿತು. ಕರ್ನಾಟಕದಿಂದ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಹಾಗೂ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಭಾಗಿದ್ದಾರೆ.

    ಅರುಣ್ ಜೇಟ್ಲಿ ಹಿಂದೆ ಹೇಳಿದ್ದೇನು?
    ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಸಹಕಾರಿ ಬ್ಯಾಂಕಗಳಲ್ಲಿನ ಸಾಲಮನ್ನಾ ಮಾಡಿ ರಾಷ್ಟ್ರೀಕೃತ ಬ್ಯಾಂಕಗಳ ಸಾಲಮನ್ನಾ ಮಾಡಲು ಕೇಂದ್ರಕ್ಕೆ ಕೋರಿದ್ದರು. ಆದರೆ ಈ ವೇಳೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ರಾಜ್ಯ ಸರ್ಕಾರಗಳ ಬೇಡಿಕೆಗೆ ಕುರಿತು ಪ್ರತಿಕ್ರಿಯೆ ನೀಡಿ, ಸಾಲಮನ್ನಾ ಮಾಡಬೇಕೋ? ಬೇಡವೋ ಎನ್ನುವುದು ರಾಜ್ಯ ಸರ್ಕಾರದ ತೀರ್ಮಾನಕ್ಕೆ ಬಿಟ್ಟ ವಿಚಾರ. ಕೇಂದ್ರ ಸರ್ಕಾರ ಸಾಲಮನ್ನಾಕ್ಕೆ ಸಂಬಂಧಿಸಿದಂತೆ ರಾಜ್ಯಗಳಿಗೆ ಹಣಕಾಸಿನ ನೆರವು ನೀಡುವುದಿಲ್ಲ. ಈ ವಿಚಾರವನ್ನು ಈ ಹಿಂದೆಯೇ ಸ್ಪಷ್ಟಪಡಿಸಿದ್ದೇವೆ, ಇದನ್ನು ಬಿಟ್ಟು ಹೊಸದಾಗಿ ಏನು ಹೇಳುವುದಿಲ್ಲ ಎಂದು 2017 ಜೂನ್ ಮೂರನೇ ವಾರದಲ್ಲಿ ತಿಳಿಸಿದ್ದರು.

    ಆರ್ ಬಿಐ ಏನು ಹೇಳುತ್ತೆ?
    ರೈತರ ಸಾಲಮನ್ನಾ ಮಾಡಿದರೆ ಹಣಕಾಸು ಸ್ಥಿತಿ ಬಿಗಡಾಯಿಸಬಹುದು. ದೇಶದ ಆರ್ಥಿಕ ಸ್ಥಿತಿ ಕೈ ತಪ್ಪಿ ಹೋಗಬಹುದು. ಈ ಯೋಜನೆಗಳನ್ನು ಪ್ರಕಟಿಸುವ ಮೊದಲು 100 ಬಾರಿ ಯೋಚಿಸಬೇಕು ಎಂದು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಆರ್ ಬಿಐ ಗವರ್ನರ್ ಉರ್ಜಿತ್ ಪಟೇಲ್ ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು.

    https://www.facebook.com/CMofKarnataka/photos/pcb.1711066348941822/1711061452275645/?type=3&theater

  • ಇನ್ನು ಮುಂದೆ UPSC ಪರೀಕ್ಷೆ ಪಾಸ್ ಆಗದೇ ಜಂಟಿ ಕಾರ್ಯದರ್ಶಿಯಾಗಬಹುದು! ಷರತ್ತು ಏನು?

    ಇನ್ನು ಮುಂದೆ UPSC ಪರೀಕ್ಷೆ ಪಾಸ್ ಆಗದೇ ಜಂಟಿ ಕಾರ್ಯದರ್ಶಿಯಾಗಬಹುದು! ಷರತ್ತು ಏನು?

    – ಖಾಸಗಿ ವಲಯದ ಪ್ರತಿಭಾವಂತರಿಗೆ ಸರ್ಕಾರ ಮಣೆ
    – ಕೇಂದ್ರದ ಹೊಸ ನಿಯಮದ ವಿರುದ್ಧ ವಿಪಕ್ಷಗಳಿಂದ ಟೀಕೆ

    ನವದೆಹಲಿ: ಖಾಸಗಿ ವಲಯದ ಪ್ರತಿಭಾನ್ವಿತರನ್ನು ಸೆಳೆಯುವ ಉದ್ದೇಶದಿಂದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 10 ಹಿರಿಯ ಮಟ್ಟದ ಅಧಿಕಾರಿಗಳ ಹುದ್ದೆಗೆ ನೇರ ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಿದೆ.ಇದುವರೆಗೂ ಸರ್ಕಾರದ ಯೋಜನೆಗಳನ್ನು ಜಾರಿಗೆ ತರುವ ಜಂಟಿ ಕಾರ್ಯದರ್ಶಿಗಳ ಹುದ್ದೆಯನ್ನು ಕೇಂದ್ರ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ನೀಡಲಾಗುತ್ತಿತ್ತು. ಆದರೆ ಸದ್ಯ ಕೇಂದ್ರ ಸರ್ಕಾರದ ನಿರ್ದಿಷ್ಟ ಅವಧಿಗೆ ನೇರ ನೇಮಕಾತಿ ಮಾಡಲು ಅವಕಾಶ ನೀಡಿದೆ. ಈ ಕಾರ್ಯವನ್ನು ಬಿಜೆಪಿ ಸಮರ್ಥಿಸಿಕೊಂಡಿದ್ದರೆ, ವಿಪಕ್ಷಗಳು ಟೀಕಿಸಿವೆ.

    ಉದ್ದೇಶ ಏನು?
    ಖಾಸಗಿ ಕ್ಷೇತ್ರದ ಪ್ರತಿಭಾವಂತರಿಗೆ ಉತ್ತಮ ಅವಕಾಶ ನೀಡುವ ಉದ್ದೇಶದಿಂದ ಸರ್ಕಾರದ ಲ್ಯಾಟರಲ್ ಎಂಟ್ರಿ ಯೋಜನೆಗೆ ಆರಂಭಿಸಿದೆ. ಸರ್ಕಾರ ಯೋಜನೆಗಳು ಹಾಗೂ ಆಡಳಿತಕ್ಕೆ ಹೊಸ ದೃಷ್ಟಿಕೋನ ನೀಡುವುದು ಇದರ ಮಹತ್ವದ ಉದ್ದೇಶವಾಗಿದೆ. ಈ ಹಿಂದೆಯೇ ಇಂತಹ ನಿಯಮ ಜಾರಿಗೆ ತರುವ ಕುರಿತು ಚರ್ಚೆ ನಡೆಸಿದ್ದರೂ ಇದೇ ಮೊದಲ ಬಾರಿಗೆ ನೀತಿ ಆಯೋಗದ ಶಿಫಾರಸಿನಂತೆ ಕೇಂದ್ರ ಸರ್ಕಾರ ಈ ನಿಯಮಗಳನ್ನು ಜಾರಿಗೆ ಮಾಡುತ್ತಿದೆ.

    ಎಷ್ಟು ಮಂದಿಗೆ ಅವಕಾಶ? ನೇಮಕಾತಿ ಹೇಗೆ?
    ಸರ್ಕಾರದ ಪ್ರಕಟನೆ ಅನ್ವಯ ಪ್ರತಿಭಾವಂತ 10 ಹುದ್ದೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ಇಲಾಖೆಗಳ ಜಂಟಿ ಕಾರ್ಯದರ್ಶಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತಿದೆ. ಖಾಸಗಿ ವಲಯದಲ್ಲಿ ಕಾರ್ಯನಿರ್ವಹಿಸಿದ 40 ವರ್ಷದೊಳಗಿನ ಮತ್ತು ಕನಿಷ್ಠ 15 ವರ್ಷಗಳ ಕೆಲಸದ ಅನುಭವ ಹೊಂದಿರುವ ವ್ಯಕ್ತಿಗಳಿಗೆ ಅವಕಾಶ ನೀಡಲಾಗಿದೆ. ಸರ್ಕಾರದ ಮಟ್ಟದಲ್ಲಿ ನೇರ ನೇಮಕಾತಿ ನಡೆಯಲಿದ್ದು, ನಿಗದಿತ ಅವಧಿಗೆ ಮಾತ್ರ ಹುದ್ದೆ ಗುತ್ತಿಗೆ ಆಧಾರಿತವಾಗಿ 3ರಿಂದ 5 ವರ್ಷಗಳವರೆಗೆ ಇರಲಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜುಲೈ 1ರ ವೇಳೆಗೆ 40 ವರ್ಷ ಪೂರ್ಣಗೊಂಡಿರಬೇಕು ಮತ್ತು ಆಯ್ದ ವಿಷಯದಲ್ಲಿ ಉನ್ನತ ವ್ಯಾಸಂಗ ಮಾಡಿರಬೇಕು ಎನ್ನುವ ಷರತ್ತನ್ನು ವಿಧಿಸಲಾಗಿದೆ. ಜುಲೈ 15 ಬೆಳಗ್ಗೆ 10 ಗಂಟೆಯಿಂದ ಜುಲೈ 30 ಸಂಜೆ 5 ಗಂಟೆಯವರಗೆ ಅರ್ಜಿಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.

    ಯಾವ ಇಲಾಖೆಯಲ್ಲಿ ಹುದ್ದೆ ಸಿಗುತ್ತೆ?
    1)ಕಂದಾಯ 2)ಹಣಕಾಸಿನ ಸೇವೆಗಳು 3)ಆರ್ಥಿಕ ವ್ಯವಹಾರಗಳು 4)ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ 5)ಸಾರಿಗೆ ಮತ್ತು ಹೆದ್ದಾರಿ 5)ಹಡಗು 6)ಪರಿಸರ, ಅರಣ್ಯ 7) ಹವಮಾನ ಬದಲಾವಣೆ 8)ವಾಣಿಜ್ಯ 9)ನಾಗರಿಕ ವಿಮಾನಯಾನ 10)ಹೊಸ ಮತ್ತು ನವೀಕರಿಸಬಹುದಾದ ಶಕ್ತಿ ಇಲಾಖೆಗಳಿಗೆ ನೇಮಕಾತಿ ನಡೆಯಲಿದೆ. ನೇಮಕಗೊಂಡ ಅಭ್ಯರ್ಥಿಗಳು ತಮ್ಮ ಅವಧಿಯಲ್ಲಿ ತಿಂಗಳಿಗೆ 1,44,200 ರೂ. ನಿಂದ 2,18,200 ರೂ ವರೆಗೆ ವೇತನ ಪಡೆಯಲಿದ್ದಾರೆ.

    ಸರ್ಕಾರದ ಈ ಹೊಸ ನೀತಿಯ ಕುರಿತು ಕಿಡಿಕಾರಿರುವ ವಿಪಕ್ಷಗಳು ಆರ್‍ಎಸ್‍ಎಸ್ ಸೇವಕರನ್ನು ನೇರವಾಗಿ ಸರ್ಕಾರದ ಉನ್ನತ ಹುದ್ದೆಗಳಿಗೆ ಆಯ್ಕೆ ಮಾಡಲು ಪ್ರಧಾನಿಗಳು ಈ ಪ್ಲಾನ್ ರೂಪಿಸಿದ್ದಾರೆ. ವಿದ್ಯಾರ್ಥಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು, ನಿಮ್ಮ ಭವಿಷ್ಯ ಅತಂಕದಲ್ಲಿದೆ ಎಂದು ಹೇಳಿ ಟೀಕಿಸಿವೆ.

    ಖಾಸಗಿ ವಲಯದಲ್ಲಿ ಎಷ್ಟೋ ಪ್ರತಿಭಾನ್ವಿತ ವ್ಯಕ್ತಿಗಳಿದ್ದಾರೆ. ಅವರಲ್ಲಿನ ಪ್ರತಿಭೆಯನ್ನು ದೇಶಕ್ಕೆ ಬಳಸಲು ಇದೊಂದು ಉತ್ತಮ ನಿರ್ಧಾರವಾಗಿದೆ ಎಂದು ಬರೆದು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

  • ರೈಲ್ವೇ ಇಲಾಖೆಯಿಂದ ಹೈದರಾಬಾದ್  ಕರ್ನಾಟಕ ಭಾಗದ ಜನರಿಗೆ ಸಿಹಿ ಸುದ್ದಿ

    ರೈಲ್ವೇ ಇಲಾಖೆಯಿಂದ ಹೈದರಾಬಾದ್ ಕರ್ನಾಟಕ ಭಾಗದ ಜನರಿಗೆ ಸಿಹಿ ಸುದ್ದಿ

    ಕಲಬುರುಗಿ: ಬಿಸಿಲ ನಾಡು ಕಲಬುರಗಿ ಸೇರಿದಂತೆ ಹೈದರಬಾದ್ ಕರ್ನಾಟಕ ಪ್ರದೇಶದ ಜನರಿಗೆ ಪ್ರಕೃತಿ ಸೌಂದರ್ಯದ ತಾಣಗಳಿಗೆ ಹೋಗಲು ಸೂಕ್ತ ರೈಲು ಸಂಪರ್ಕವಿಲ್ಲದೇ ಸಮಸ್ಯೆ ಎದುರಿಸಿದ್ದ ಜನರಿಗೆ ಕೇಂದ್ರ ರೈಲ್ವೇ ಇಲಾಖೆ ಸಿಹಿ ಸುದ್ದಿ ನೀಡಿದೆ.

    ಕೇಂದ್ರ ಸರ್ಕಾರ ಸದ್ಯ ಕಲಬುರಗಿಯಿಂದ ಹಾಸನ ಮಾರ್ಗದ  ರೈಲಿಗೆ ಹಸಿರು ನಿಶಾನೆ ತೋರಿಸಿದೆ. ಈ ಮೂಲಕ ಕಲಬುರಗಿಯ ಪ್ರವಾಸಿಗರಿಗೆ ಸಖತ್ ಖುಷಿ ತಂದಿದೆ. ಸಾಮಾನ್ಯವಾಗಿ ಹೈದ್ರಾಬಾದ್ ಕರ್ನಾಟಕದ ಜನ ಹಾಸನ-ಚಿಕ್ಕಮಂಗಳೂರು ಜಿಲ್ಲೆಗಳ ಪ್ರವಾಸಿ ತಾಣ ಹೋಗಲು ಕನಿಷ್ಠ ಎರಡು ದಿನ ಬೇಕಾಗುತ್ತಿತ್ತು. ಹೀಗಾಗಿ ವಾರಗಟ್ಟಲೆ ಪ್ರವಾಸ ಪ್ಲಾನ್ ಮಾಡಿದವರು ಮಾತ್ರ ಆ ಭಾಗಕ್ಕೆ ಹೋಗುತ್ತಿದ್ದರು. ಆದರೆ ಇದೀಗ ಬೆಂಗಳೂರವರೆಗೆ ಸೀಮಿತವಾಗಿದ್ದ (ನಿತ್ಯ ಸಂಚರಿಸುವ) ಸೋಲಾಪುರ-ಯಶವಂತಪುರ ರೈಲನ್ನು ಹಾಸನದವರಗೆ ವಿಸ್ತರಿಸಿದ್ದಾರೆ.

    ಕಲಬುರಗಿಯಿಂದ ಪ್ರತಿನಿತ್ಯ ರಾತ್ರಿ 9 ಗಂಟೆಗೆ ಹೊರಡುವ ಸೋಲಾಪುರ-ಯಶವಂತಪುರ ರೈಲು ಬೆಳಗ್ಗೆ 10.30ಕ್ಕೆ ಹಾಸನಕ್ಕೆ ತಲುಪುತ್ತದೆ. ಅಲ್ಲಿಂದ 2 ದಿನ ಪ್ರವಾಸಕ್ಕೆ ಹೋಗುವವರು 1 ದಿನ ಹಾಸನ ಮತ್ತೊಂದು ದಿನ ಚಿಕ್ಕಮಗಳೂರು ಜಿಲ್ಲೆಯ ಪ್ರಕೃತಿ ಸೌಂದರ್ಯ ಸವಿಯಬಹುದಾಗಿದೆ. ಈ ಮೂಲಕ ವಾರಂತ್ಯದ ಪ್ರವಾಸಕ್ಕೆ ಹೋಗುವ ಕಲಬುರಗಿಯ ಜನರಿಗೆ ಸುವರ್ಣಾವಕಾಶವನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ ನಮ್ಮ ಜಿಲ್ಲೆಯ ರೈಲ್ವೆ ಟಿಕೆಟ್ ಖೋಟಾಕ್ಕೆ ಮಾತ್ರ ಕಡಿತ ಮಾಡಬಾರದು ಎಂಬುದು ಪ್ರಜ್ಞಾವಂತರ ಆತಂಕವಾಗಿದೆ.

  • ಇನ್ಮುಂದೆ ವಿದೇಶಕ್ಕೆ ಹಣ ರವಾನೆಗೆ ಪಾನ್ ಕಾರ್ಡ್ ಕಡ್ಡಾಯ

    ಇನ್ಮುಂದೆ ವಿದೇಶಕ್ಕೆ ಹಣ ರವಾನೆಗೆ ಪಾನ್ ಕಾರ್ಡ್ ಕಡ್ಡಾಯ

    ನವದೆಹಲಿ: ಇನ್ನು ಮುಂದೆ ವಿದೇಶಗಳಿಗೆ ಹಣ ಕಳುಹಿಸಬೇಕಾದರೆ ಪಾನ್ ಕಾರ್ಡ್ ನಂಬರನ್ನು ಕಡ್ಡಾಯವಾಗಿ ನಮೂದಿಸಬೇಕು.

    ಮಕ್ಕಳ ಶಿಕ್ಷಣ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇರು ಕೊಳ್ಳಲು ಹೊರ ದೇಶಗಳಿಗೆ ಹಣ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಪಾನ್ ಕಾರ್ಡ್ ನಂಬರನ್ನು ಕಡ್ಡಾಯವಾಗಿ ನಮೂದಿಸಬೇಕೆಂದು ಆರ್ ಬಿ ಐ  ಹೇಳಿದೆ.

    ರಿಸರ್ವ್ ಬ್ಯಾಂಕ್ ಉದಾರ ಪಾವತಿ ಯೋಜನೆ(ಎಲ್‍ಆರ್‍ಎಸ್) ನಿಯಮದ ಅಡಿ ಇಲ್ಲಿಯವರೆಗೆ 25 ಸಾವಿರ ಡಾಲರ್(ಅಂದಾಜು 16.75 ಲಕ್ಷ ರೂ.) ವರೆಗಿನ ಹಂಣವನ್ನು ಕಳುಹಿಸಲು ಯಾವುದೇ ದಾಖಲೆಗಳ ಅಗತ್ಯವಿರಲ್ಲ. ಆದರೆ ಈ ಹಣವನ್ನು ಕಳುಹಿಸುವ ಮೂಲಕ ಅಕ್ರಮಗಳು ನಡೆಯುತ್ತಿದೆ ಎನ್ನುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಆರ್ ಬಿ ಐ ಈಗ ನಿಯಮವನ್ನು ಬಿಗಿಗೊಳಿಸಿದೆ.

    ಈ ಹೊಸ ನಿಯಮದಿಂದಾಗಿ ದೇಶದಿಂದ ಹೊರ ಹೋಗುತ್ತಿದ್ದ ಅನಧಿಕೃತ ಹಣಕ್ಕೆ ಬ್ರೇಕ್ ಬೀಳಲಿದೆ. ಅಲ್ಲದೇ ತೆರಿಗೆ ರೂಪದಲ್ಲಿ ಸರಕಾರದ ಬೊಕ್ಕಸ ತುಂಬಲಿದೆ. ವ್ಯವಸ್ಥೆಯಲ್ಲಿ ಪಾನ್ ಕಾರ್ಡ್ ಕಡ್ಡಾಯವಾದ್ದರಿಂದ ಹಣ ಸಂದಾಯ ಮಾಡುವವರ ಖಾತೆಗಳ ಮೇಲೆ ನಿಗಾವಹಿಸಲು ಸಾಧ್ಯವಾಗುತ್ತದೆ ಎಂದು ಆರ್ ಬಿ ಐ ತಿಳಿಸಿದೆ.

    ಹೊರದೇಶಗಳಿಗೆ ತಮ್ಮ ಮಕ್ಕಳ ಶಿಕ್ಷಣ, ವಿದೇಶಿ ಸ್ಟಾಕ್ ಮಾರುಕಟ್ಟೆಗಳಲ್ಲಿ ಹಣ ಹೂಡಬಯಸುವ ಹಾಗೂ ವಿದೇಶಗಳಲ್ಲಿ ಆಸ್ತಿ ಖರೀದಿಸಬಯಸುವ ಭಾರತೀಯರಿಗೆ ಈ ನಿಯಮ ಅನ್ವಯವಾಗಲಿದೆ.