ನವದೆಹಲಿ: ಅಸ್ತಿತ್ವವೇ ಇಲ್ಲದ ಜಿಯೋ ಶಿಕ್ಷಣ ಸಂಸ್ಥೆಗೆ ಉತ್ಕೃಷ್ಟ ಸ್ಥಾನಮಾನ ನೀಡಿದ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ಈ ಕುರಿತು ಸ್ಪಷ್ಟನೆ ನೀಡಿದೆ.
ಸೋಮವಾರದಂದು ಕೇಂದ್ರ ಸರ್ಕಾರ ಮೂರು ಖಾಸಗಿ ಮತ್ತು ಮೂರು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳೆಂದು ಪ್ರಕಟಿಸಿತ್ತು. ಈ ಪ್ರಕಟಣೆಯಲ್ಲಿ ದೇಶದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಾದ ಮದ್ರಾಸ್ ಐಐಟಿ ಮತ್ತು ಐಐಟಿ ಖರಗ್‍ಪುರ ಪಟ್ಟಿಯಲ್ಲಿ ಸ್ಥಾನ ನೀಡಿರಲಿಲ್ಲ. ಅಲ್ಲದೇ ಇನ್ನೂ ಅಸ್ತಿತ್ವಕ್ಕೇ ಬಾರದ ಜಿಯೋ ಶಿಕ್ಷಣ ಸಂಸ್ಥೆಯನ್ನು ಪಟ್ಟಿಯಲ್ಲಿ ಸೇರಿಸಲಾಗಿತ್ತು.
ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಆ ಸುಬ್ರಮಣ್ಯಂ ಅವರು, ಗ್ರೀನ್ ಫೀಲ್ಡ್ ಕೆಟಗರಿ ಅಡಿಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ. ತಮ್ಮ ಶಿಕ್ಷಣ ಸಂಸ್ಥೆಗಳನ್ನು ಹೇಗೆ ಶ್ರೇಷ್ಠ ಶಿಕ್ಷಣ ಸಂಸ್ಥೆಗಳನ್ನಾಗಿ ಮಾಡಲಾಗುತ್ತದೆ ಎನ್ನುವ ದೂರದೃಷ್ಟಿ ಯೋಜನೆಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಉತ್ಕೃಷ್ಟ ಸ್ಥಾನಮಾನ ನೀಡಿದೆ. ಈ ಯೋಜನೆಯಲ್ಲಿ ಸ್ಥಾನಮಾನ ಹೊಂದಿದ ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ನೆರವು ಸಿಗುವುದಿಲ್ಲ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಇಂತಹ ಶಿಕ್ಷಣ ಸಂಸ್ಥೆಗಳು ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ಪಡೆಯದೇ ಸ್ವಂತತ್ರವಾಗಿ ಕಾರ್ಯನಿರ್ವಹಿಸುತ್ತವೆ. ಇಂತಹ ಸಂಸ್ಥೆಗಳಿಗೆ ಸರ್ಕಾರದ ನೀತಿಗಳಿಂದ ಕೊಂಚ ರಿಯಾಯಿತಿ ಮಾತ್ರ ದೊರೆಯುತ್ತದೆ. ಆಯಾ ಶಿಕ್ಷಣ ಸಂಸ್ಥೆಗಳು ಇಲಾಖೆಗೆ ನೀಡಿರುವ ವಿಷನ್ ಡಾಕ್ಯುಮೆಂಟ್ ಆಧಾರದ ಮೇರೆಗೆ ಶ್ರೇಷ್ಠ ಸ್ಥಾನಮಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಪ್ರತಿಕ್ರಿಯಿಸಿ, ನಮ್ಮ ದೇಶದಲ್ಲಿ ಒಟ್ಟು 800 ವಿಶ್ವವಿದ್ಯಾಲಯಗಳಿವೆ. ಆದರೆ ವಿಶ್ವದ ಅಗ್ರಗಣ್ಯ ವಿಶ್ವವಿದ್ಯಾನಿಲಯಗಳ ಪೈಕಿ 100 ಹಾಗೂ 200 ರೊಳಗೆ ಒಂದು ಸಹ ಇಲ್ಲ. ಇದು ಅತ್ಯಂತ ಬೇಸರದ ಸಂಗತಿಯಾಗಿದೆ. ಕೇಂದ್ರ ಸರ್ಕಾರ ಪ್ರಕಟಿಸಿದ 6 ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳ ಮೂಲಕ ವಿಶ್ವದ ಅಗ್ರಗಣ್ಯ ವಿಶ್ವವಿದ್ಯಾಲಯಗಳು ಪಟ್ಟಿಯಲ್ಲಿ ಸೇರುವುದಕ್ಕೆ ಈ ಪ್ರಕಟಣೆ ಅತ್ಯಂತ ಮಹತ್ವದಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರ ಪ್ರಕಟಿಸಿದ್ದ ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳ ಪೈಕಿ, ಸರ್ಕಾರಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಐಐಟಿ ಬಾಂಬೆ, ಐಐಟಿ ದೆಹಲಿ ಮತ್ತು ಐಐಎಸ್‍ಸಿ ಬೆಂಗಳೂರು ಶಿಕ್ಷಣ ಸಂಸ್ಥೆಗಳು ಸ್ಥಾನ ಪಡೆದುಕೊಂಡಿದ್ದವು. ಖಾಸಗಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಬಿಟ್ಸ್ ಪಿಲಾನಿ ಮತ್ತು ಮಣಿಪಾಲ ವಿಶ್ವವಿದ್ಯಾಲಯಗಳು ಸ್ಥಾನಪಡೆದುಕೊಂಡಿದ್ದರೆ, ಗ್ರೀನ್ ಫೀಲ್ಡ್ ಕೆಟಗರಿ ವಿಭಾಗದಿಂದ ಜಿಯೋ ಶಿಕ್ಷಣ ಸಂಸ್ಥೆ ಸ್ಥಾನಗಳಿಸಿದೆ.
ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳನ್ನು ಹೆಸರಿಸಲು ಕೇಂದ್ರ ಸರ್ಕಾರ ಈ ನಾಲ್ಕು ಅಂಶಗಳನ್ನು ಮಾನದಂಡವಾಗಿ ಪರಿಗಣಿಸಿತ್ತು.
1. ಶಿಕ್ಷಣ ಸಂಸ್ಥೆಯ ಕಟ್ಟಡಗಳನ್ನು ನಿರ್ಮಿಸುವುದಕ್ಕೆ ಭೂಮಿಯನ್ನು ಹೊಂದಿರುವುದು.
2. ಉನ್ನತ ಮಟ್ಟದ ಅರ್ಹತೆಯುಳ್ಳ ಅನುಭವಿ ಬೋಧಕ ತಂಡವನ್ನು ಹೊಂದಿರುವುದು.
3. ಶಿಕ್ಷಣ ಸಂಸ್ಥೆಗೆ ಬೇಕಾಗುವ ಆರ್ಥಿಕ ಬಂಡವಾಳವನ್ನು ಹೂಡಲು ಶಕ್ತವಾದ ಸಂಸ್ಥೆಗಳು.
4. ಶಿಕ್ಷಣ ಯೋಜನೆಯಲ್ಲಿ ಕಾರ್ಯತಂತ್ರ ರೂಪಿಸಿ ವಾರ್ಷಿಕ ಮೈಲುಗಲ್ಲನ್ನು ಸ್ಥಾಪಿಸುವ ಕಾರ್ಯಕ್ಷಮತೆ ಹೊಂದಿರುವ ಶಿಕ್ಷಣ ಸಂಸ್ಥೆಗಳು.
ಗ್ರೀನ್ ಫೀಲ್ಡ್ ಕೆಟಗರಿ ಸ್ಥಾನ ಪಡೆಯಲು ಒಟ್ಟು 11 ಶಿಕ್ಷಣ ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದು, ಇವುಗಳ ಪೈಕಿ ಜಿಯೋ ಸಂಸ್ಥೆ ಮಾತ್ರ ಆಯ್ಕೆಯಾಗಿದೆ.
ಏನೇನು ವಿಶೇಷ ಸೌಲಭ್ಯ ಸಿಗುತ್ತೆ?
ಈ ಸ್ಥಾನಮಾನದಿಂದ ಶಿಕ್ಷಣ ಸಂಸ್ಥೆಗಳಿಗೆ ಸಂಪೂರ್ಣ ಸ್ವಾಯತ್ತತೆ ದೊರೆಯಲಿದೆ. ಮೂರು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಮುಂದಿನ ಐದು ವರ್ಷಗಳಲ್ಲಿ 1000 ಕೋಟಿ ರೂ. ಅನುದಾನ ದೊರೆಯಲಿದೆ. ಆದರೆ, ಖಾಸಗಿ ಸಂಸ್ಥೆಗಳಿಗೆ ಈ ಅನುದಾನ ಸಿಗುವುದಿಲ್ಲ.
ಏನು ಲಾಭ?
ಆರೂ ಸಂಸ್ಥೆಗಳಿಗೆ ಸಂಪೂರ್ಣ ಸ್ವಾಯತ್ತತೆ ಸಿಗುವ ಕಾರಣ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು. ಯಾವುದೇ ಹೊಸ ಕೋರ್ಸ್ ಆರಂಭಕ್ಕೆ ಅವಕಾಶವಿದೆ. ವಿದೇಶದ ಬೋಧಕರನ್ನು ನೇಮಿಸಲು ಅವಕಾಶದ ಜೊತೆಗೆ ವಿದೇಶಿ ವಿದ್ಯಾರ್ಥಿಗಳ ಸೇರ್ಪಡೆಗೆ ಸ್ವಾತಂತ್ರ್ಯವಿದೆ. ಸರಕಾರದ ಅನುಮತಿ ಇಲ್ಲದೆಯೇ ಯಾವುದೇ ವಿದೇಶಿ ಶಿಕ್ಷಣ ಸಂಸ್ಥೆಗಳ ಜತೆ ಮಾತುಕತೆ ನಡೆಸಬಹುದು.