Tag: Central Government

  • ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿಯಿಂದ ವಾಮಮಾರ್ಗ: ಪುಟ್ಟರಂಗಶೆಟ್ಟಿ

    ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿಯಿಂದ ವಾಮಮಾರ್ಗ: ಪುಟ್ಟರಂಗಶೆಟ್ಟಿ

    ಚಾಮರಾಜನಗರ: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಬಿಜೆಪಿಯು ವಾಮಮಾರ್ಗ ಅನುಸರಿಸುತ್ತಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಆರೋಪಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಬಿಜೆಪಿ ಐಟಿ ಇಲಾಖೆ ದುರ್ಬಳಕೆ ಮಾಡಿಕೊಂಡು ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಹೆದರಿಸುವ ಕೆಲಸ ಮಾಡುತ್ತಿದೆ. ಬಿಜೆಪಿಯವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರ ಮೇಲೆ ದಾಳಿ ನಡೆಸುತ್ತಿದೆ. ಇದು ಬಿಜೆಪಿಯವರ ಸೇಡಿನ ರಾಜಕಾರಣವೇ ಹೊರತು ಬೇರೇನೂ ಅಲ್ಲ. ಎಲ್ಲದರ ಬಗ್ಗೆ ನಾಡಿನ ಜನತೆಗೆ ಗೊತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಏನೇ ಮಾಡಿದರೂ, ಅದನ್ನು ಎದುರಿಸುವ ಶಕ್ತಿ ಡಿಕೆಶಿ ಅವರಿಗಿದೆ ಎಂದು ಹೇಳಿದರು.

    ಡಿಕೆಶಿಯವರು ತೆರಿಗೆಯನ್ನು ಕಟ್ಟಿ ಕಾನೂನು ಮೂಲಕವೇ ಆಸ್ತಿ ಸಂಪಾದನೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದವರಿಗಿಂತಲೂ ಬಿಜೆಪಿಯವರು ಹೆಚ್ಚಿನ ಭ್ರಷ್ಟಾಚಾರ ಮಾಡಿದ್ದಾರೆ. ಆದರೆ ಅವರ ಮನೆಯ ಮೇಲೆ ದಾಳಿ ಮಾಡುವ ಕೆಲಸವನ್ನು ಜಾರಿ ನಿರ್ದೇಶನಾಲಯ (ಇಡಿ), ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಮಾಡುತ್ತಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಸಂಸದೆ ಶೋಭಾ ಕರಂದ್ಲಾಜೆಯವರ ತಾಕತ್ತಿದ್ದರೆ ಶಾಸಕರು ಹಾಗೂ ಸಚಿವರನ್ನು ಉಳಿಸಿಕೊಳ್ಳಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಹಿಂದೆ ಬಿಜೆಪಿಯವರು ಮಾಡಿದ ಆಪರೇಷನ್ ಕಮಲಕ್ಕೆ ತುತ್ತಾಗಿದ್ದ ಶಾಸಕರ ಪರಿಸ್ಥಿತಿ ಇವತ್ತು ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಯಾರಾದರೂ ರಾತ್ರಿ ಕಂಡ ಬಾವಿಗೆ ಹಗಲು ಬೀಳಲು ಸಾಧ್ಯವೇ. ಯಾರು ಕೂಡ ಬಿಜೆಪಿ ಪಕ್ಷ ಸೇರುವುದಿಲ್ಲ ಮತ್ತು ಕ್ಷೇತ್ರದ ಮತದಾರರಿಗೆ ಅನ್ಯಾಯ ಮಾಡುವುದಿಲ್ಲ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ:ಕಾಂಗ್ರೆಸ್ಸಿಗೆ ತಾಕತ್ತಿದ್ರೆ ಅವ್ರ ಶಾಸಕರು, ಸಚಿವರನ್ನ ಹಿಡಿದಿಟ್ಟುಕೊಳ್ಳಲಿ: ಶೋಭಾ ಕರಂದ್ಲಾಜೆ

    ಸೋಮವಾರದ ಭಾರತ್ ಬಂದ್ ಕುರಿತು ಮಾತನಾಡಿ, ಚಾಮರಾಜನಗರ ಜಿಲ್ಲೆಯಲ್ಲಿ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿದ್ದು, ಈಗಾಗಲೇ ಬಂದ್ ಆಚರಿಸಲು ನಿರ್ಧರಿಸಲಾಗಿದೆ. ನಮಗೆ ಖಾಸಗಿ ಬಸ್ ಮಾಲೀಕರು, ಆಟೋ ಮಾಲೀಕರ ಸಂಘ, ಥಿಯೇಟರ್ ಮಾಲೀಕರ ಸಂಘ, ಪೆಟ್ರೋಲ್ ಬಂಕ್ ಮಾಲೀಕರ ಸಂಘ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಬೆಂಬಲ ನೀಡಿವೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಪೆಟ್ರೋಲಿಯಂ ಉತ್ಪನ್ನಗಳು ಏರಿಕೆಯಾಗುತ್ತಲೇ ಇದೆ. ತರಕಾರಿ, ಹಾಲು ಎಲ್ಲದರ ಬೆಲೆಗಳು ಗಗನಕ್ಕೇರಿದೆ. ಹೀಗಾಗಿ ಬಂದ್‍ಗೆ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಕರ್ನಾಟಕದಲ್ಲಿ ಬಹುತೇಕ ಬಂದ್ ಖಚಿತ – ಬೆಳಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆವರೆಗೆ ಸಾರಿಗೆ ಸ್ತಬ್ಧ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಆರೋಗ್ಯ ಕರ್ನಾಟಕ ವಿಲೀನ!

    ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಆರೋಗ್ಯ ಕರ್ನಾಟಕ ವಿಲೀನ!

    ಬೆಂಗಳೂರು: ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಆಯುಷ್ಮಾನ್ ಭಾರತ್ ಯೋಜನೆಯನ್ನು ರಾಜ್ಯ ಸರ್ಕಾರ ಒಪ್ಪಿಕೊಳ್ಳುವತ್ತ ಹೆಜ್ಜೆ ಹಾಕಿದ್ದು, ರಾಜ್ಯದ ಆರೋಗ್ಯ ಕರ್ನಾಟಕ ಯೋಜನೆಯನ್ನ ಆಯುಷ್ಮಾನ್ ಭಾರತ್ ಯೋಜನೆ ಜೊತೆ ವಿಲೀನ ಮಾಡಲು ನಿರ್ಧರಿಸಲಾಗಿದೆ.

    ನಗರದ ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಇಂದು ನಡೆದ ಆರೋಗ್ಯ ಇಲಾಖೆ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಸರ್ಕಾರ ತೆಗೆದುಕೊಂಡಿದೆ. ಸಿಎಂರೊಂದಿಗೆ ನಡೆದ ಸಭೆಯಲ್ಲಿ ಆರೋಗ್ಯ ಕರ್ನಾಟಕ ಯೋಜನೆಯನ್ನ ಆಯುಷ್ಮಾನ್ ಭಾರತ್ ಯೋಜನೆ ಜೊತೆ ವಿಲೀನ ಮಾಡುವ ನಿರ್ಧಾರ ಮಾಡಲಾಗಿದ್ದು, ಇದಕ್ಕೂ ಮುನ್ನ ವೈದ್ಯರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಮಾಡಲು ಸಿಎಂ ಸೂಚನೆ ನೀಡಿದ್ದಾರೆ.

    ರಾಜ್ಯ ಹಾಗೂ ಕೇಂದ್ರ ಸರ್ಕಾರದ ಎರಡು ಮಹತ್ವದ ಯೋಜನೆಗಳ ವಿಲೀನದಿಂದ ಉಂಟಾಗಬಹುದಾದ ಸಾಧಕ ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಿಲು ಸೂಚನೆ ಸಿಎಂ ಸೂಚನೆ ನೀಡಿದ್ದಾರೆ. ಬಡ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗುವಂತೆ ಕಾರ್ಯಕ್ರಮ ರೂಪಿಸಲು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಬಹುತೇಕ ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ರಾಜ್ಯ ಸರ್ಕಾರ ಯೋಜನೆ ವಿಲೀನಗೊಳ್ಳುವುದು ಖಚಿತವಾಗಿದೆ. ಇಂದು ನಡೆದ ಸಭೆಯಲ್ಲಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹಾಗೂ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು. ಇದನ್ನೂ ಓದಿ: ಏನಿದು ಆಯುಷ್ಮಾನ್ ಭಾರತ್ ಯೋಜನೆ? ಯಾರಿಗೆ ವಿಮೆ ಸಿಗುತ್ತೆ? ಯಾವೆಲ್ಲಾ ರೋಗಗಳಿಗೆ ಚಿಕಿತ್ಸೆ?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=H6_XYSZLZu8

  • ಏನಿದು ಇಂಡಿಯಾ ಪೋಸ್ಟ್ ಪೇಮೆಟ್ಸ್ ಬ್ಯಾಂಕ್? ಯಾವೆಲ್ಲಾ ಸೇವೆ ಲಭ್ಯ? ಇಲ್ಲಿದೆ ಪೂರ್ಣ ಮಾಹಿತಿ

    ಏನಿದು ಇಂಡಿಯಾ ಪೋಸ್ಟ್ ಪೇಮೆಟ್ಸ್ ಬ್ಯಾಂಕ್? ಯಾವೆಲ್ಲಾ ಸೇವೆ ಲಭ್ಯ? ಇಲ್ಲಿದೆ ಪೂರ್ಣ ಮಾಹಿತಿ

    ನವದೆಹಲಿ: ಪೋಸ್ಟ್ ಆಫೀಸ್ ಇನ್ನು ಮುಂದೆ ಜನರಿಗೆ ಮತ್ತಷ್ಟು ಹತ್ತಿರವಾಗಲಿದೆ. ಇನ್ನು ಮುಂದೆ ಮನೆಯಲ್ಲೇ ಕುಳಿತು ಪೋಸ್ಟ್ ಆಫೀಸ್ ಖಾತೆಯನ್ನು ನಿರ್ವಹಿಸಬಹುದು.

    ಭಾರತದ ಕೋಟ್ಯಂತರ ಜನರಿಗೆ ಆರ್ಥಿಕ ಸೇವೆಯನ್ನು ನೀಡುವ ಉದ್ದೇಶದಿಂದ `ಇಂಡಿಯಾ ಪೋಸ್ಟ್ ಪೇಮೆಟ್ಸ್ ಬ್ಯಾಂಕ್'(ಐಪಿಪಿಬಿ) ಚಾಲನೆ ಸಿಕ್ಕಿದೆ. ಐಪಿಪಿಬಿ ಯೋಜನೆ ಸಾಮಾನ್ಯ ವ್ಯಕ್ತಿಯೂ ಕೂಡ ಆರ್ಥಿಕ ಸೇವೆ ಪಡೆಯುವ ಉದ್ದೇಶ ಹೊಂದಿದೆ. ಅಲ್ಲದೇ ಕೇಂದ್ರ ಸರ್ಕಾರದ ಆರ್ಥಿಕ ಉದ್ದೇಶಗಳ ಯೋಜನೆಗಳ ಪ್ರಗತಿಯಲ್ಲಿ ವೇಗ ಪಡೆಯಲು ಸಹಕಾರಿಯಾಗಲಿದೆ.

    ಏನಿದು ಐಪಿಪಿಬಿ ಯೋಜನೆ?
    ಈಗಾಗಲೇ ಕೇಂದ್ರ ಸರ್ಕಾರ ದೇಶದ ಎಲ್ಲರೂ ಬ್ಯಾಂಕ್ ಖಾತೆ ಹೊಂದುವಂತೆ ಮಾಡಲು ಜನ್ ಧನ್ ಯೋಜನೆಗಳು ಆರಂಭಿಸಿದೆ. ಆದರೂ ಬಹಳಷ್ಟು ಜನ ಇನ್ನು ಬ್ಯಾಂಕಿಂಗ್ ವಲಯಕ್ಕೆ ಸೇರ್ಪಡೆಯಾಗಿಲ್ಲ. ಹೀಗಾಗಿ ಈ ವ್ಯಕ್ತಿಗಳನ್ನು ಬ್ಯಾಕಿಂಗ್ ವಲಯಕ್ಕೆ ಸೇರ್ಪಡೆಗೊಳಿಸುವುದು ಮತ್ತು ಅಂಚೆ ಇಲಾಖೆಯನ್ನು ಆರ್ಥಿಕವಾಗಿ ಸದೃಢಗೊಳಿಸಲು ಐಪಿಪಿಬಿ ಯೋಜನೆ ಆರಂಭಿಸಲಾಗಿದೆ.

    ದೇಶಾದ್ಯಂತ ಆರಂಭದಲ್ಲಿ 650 ಐಪಿಪಿಬಿ ಬ್ರಾಚ್‍ಗಳು ಮತ್ತು 3,250 ಕೇಂದ್ರಗಳನ್ನು ತೆರೆಯಲಾಗಿದೆ. ಕೇಂದ್ರ ಸರ್ಕಾರದ ಅಂಚೆ ಇಲಾಖೆ ಯೋಜನೆಯ ಸಂಪೂರ್ಣ ಜವಾಬ್ದಾರಿ ವಹಿಸಲಿದ್ದು, 3 ಲಕ್ಷ ಅಂಚೆ ಸೇವಕರು ಹಾಗೂ ಗ್ರಾಮೀಣ ಪೋಸ್ಟ್ ಮ್ಯಾನ್ ಗಳು ಈ ಯೋಜನೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಅಲ್ಲದೇ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ನೀಡಲಿದ್ದಾರೆ. 2018 ಡಿಸೆಂಬರ್ 31ರ ವೇಳೆಗೆ 1.55 ಲಕ್ಷ ಅಂಚೆ ಕೇಂದ್ರಗಳು ಐಪಿಪಿಬಿ ಸೇವೆಗೆ ಸೇರ್ಪಡೆಯಾಗಲಿದೆ. ಹೀಗಾಗಿ ಭಾರತದಲ್ಲಿ ಬ್ಯಾಂಕಿಂಗ್ ಕ್ಷೇತ್ರದ ವ್ಯಾಪ್ತಿ ಗಮನಾರ್ಹವಾಗಿ ಹೆಚ್ಚಳವಾಗಲಿದೆ. ಕೇಂದ್ರ ಸರ್ಕಾರವು ಐಪಿಪಿಬಿ ಸೇವೆಗೆ 1,435 ಕೋಟಿ ರೂ. ಹಣಕಾಸಿನ ನೆರವು ನೀಡುವುದಾಗಿ ಸದನದಲ್ಲಿ ತಿಳಿಸಿದೆ.

    ಖಾತೆ ಆರಂಭಿಸುವುದು ಹೇಗೆ?
    ಪಿಐಐಬಿ ಕೇಂದ್ರದಲ್ಲಿ ಖಾತೆ ತೆರೆಯಲು ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಹೊಂದಿದ್ದರೆ ಸಾಕು. ಯಾವುದೇ ಅರ್ಜಿ ತುಂಬುವ ಅಗತ್ಯವಿಲ್ಲ. ರಾಷ್ಟ್ರಕೃತ ಬ್ಯಾಂಕ್ ಗಳಲ್ಲಿ ಖಾತೆ ತೆರೆದ ನಂತರ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಖಾತೆಯಲ್ಲಿ ಕನಿಷ್ಠ ಹಣವನ್ನು ಇಡಲೇಬೇಕೆಂಬ ನಿಯಮವಿದೆ. ಆದರೆ ಪಿಐಐಪಿ ನಲ್ಲಿ ಆರಂಭಿಸುವ ಖಾತೆಗೆ ಯಾವುದೇ ಕನಿಷ್ಠ ಠೇವಣಿ ಇಡುವ ಅಗತ್ಯವಿಲ್ಲ.

    ಐಪಿಪಿಬಿ ಕೇಂದ್ರಗಳಲ್ಲಿ ಉಳಿತಾಯ ಖಾತೆ ಹಾಗೂ ಚಾಲ್ತಿ ಖಾತೆ ಆರಂಭಿಸಲು ಅವಕಾಶವಿದ್ದು, ಈ ಖಾತೆಗಳಿಂದ ಹಣದ ವರ್ಗಾವಣೆ, ನೇರ ಹಣದ ವರ್ಗಾವಣೆ, ಬಿಲ್ ಪಾವತಿ ಮತ್ತು ವ್ಯಾಪಾರದ ಎಲ್ಲಾ ಸೇವೆಗಳ ಬಿಲ್ ಪಾವತಿ ಮಾಡಬಹುದಾಗಿದೆ. ಅಲ್ಲದೇ ತ್ರೈಮಾಸಿಕವಾಗಿ ಯೋಗ್ಯ ಬಡ್ಡಿ ದರದಲ್ಲಿ 1 ಲಕ್ಷ ರೂ. ವರೆಗೂ ಠೇವಣಿ ಇಡುವ ಸೇವೆಯೂ ಲಭ್ಯವಿದೆ.

    ಇಂಟರ್ ನೆಟ್ ಬ್ಯಾಂಕಿಂಗ್: ಪಿಐಐಬಿ ಸೇವೆಯಲ್ಲಿ ಇಂಟರ್‍ನೆಟ್ ಬ್ಯಾಂಕಿಂಗ್ ಸೇವೆಯೂ ಲಭ್ಯವಿದ್ದು, ಮೈಕ್ರೋ ಎಟಿಎಂ, ಮೊಬೈಲ್ ಬ್ಯಾಂಕಿಂಗ್ ಆ್ಯಪ್, ಎಸ್‍ಎಂಎಸ್ ಮತ್ತು ಧ್ವನಿ (ಐವಿಆರ್) ಸೇವೆಗಳು ಲಭ್ಯವಿದೆ.

    ಸುರಕ್ಷತೆ ಗುರಿ: ಪಿಐಐಬಿ ನಲ್ಲಿ ನಡೆಯುವ ಪ್ರತಿ ಸೇವೆಗೂ ಒನ್ ಟೈಮ್ ಪಾಸ್‍ವರ್ಡ್ (ಒಟಿಪಿ) ಬರುತ್ತದೆ. ಬ್ಯಾಂಕ್ ಗ್ರಾಹಕರಿಗೆ ಬೇಡಿಕೆ ಅನುಗುಣವಾಗಿ `ಕ್ಯೂಆರ್’ ಕಾರ್ಡ್ ಸೇವೆಯನ್ನು ನೀಡಲಿದೆ. ಈ ಕಾರ್ಡ್‍ನಲ್ಲಿ ನಮೂದಿಸಿರುವ ಸ್ಕ್ಯಾನ್ ಕೋಡ್ ಮೂಲಕ ಸುಲಭವಾಗಿ ವ್ಯವಹರಿಸಬಹುದು.

    31 ಕೇಂದ್ರ: ಪಿಐಐಬಿ ಯೋಜನೆ ಅಡಿ ಕರ್ನಾಟಕದಲ್ಲಿ 31 ಜಿಲ್ಲಾ ಶಾಖೆಗಳು ಹಾಗೂ 155 ಸೇವಾ ಕೇಂದ್ರಗಳು ಕಾರ್ಯಾರಂಭವಾಗಲಿದ್ದು, ಕೇಂದ್ರ ಸಚಿವ ಅನಂತ್‍ಕುಮಾರ್ ಬೆಂಗಳೂರಿನ ಟೌನ್ ಹಾಲ್ ಬಳಿಯ ಅಂಚೆಕಚೇರಿಯಲ್ಲಿ ಐಪಿಪಿಬಿ ಕೇಂದ್ರಕ್ಕೆ ಚಾಲನೆ ನೀಡಿದ್ದಾರೆ. ಡಿಸೆಂಬರ್ ವೇಳೆಗೆ ರಾಜ್ಯದಲ್ಲಿ 9 ಸಾವಿರ ಸೇವಾಕೇಂದ್ರಗಳು ಆರಂಭವಾಗಲಿದೆ.

    ಉಪಯೋಗವೇನು?
    ಮನೆ ಮನೆಗೂ ಬ್ಯಾಂಕಿಂಗ್ ಸೇವೆ ಲಭ್ಯವಾಗುವುದರಿಂದ ವಿಮಾನಯಾನ, ರೈಲ್ವೇ, ಬಸ್ ಟಿಕೆಟ್ ಹಾಗೂ ಸರ್ಕಾರದ ಸೇರಿದಂತೆ ಖಾಸಗಿ ಎಲ್ಲಾ ಸೇವಾ ಬಿಲ್ ಗಳನ್ನು ಐಪಿಪಿಬಿ ಅಪ್ಲಿಕೇಶ್ ಮೂಲಕ ಪಾವತಿಗೆ ಅವಕಾಶವಿದೆ. ಅಲ್ಲದೇ ಸರ್ಕಾರಗಳ ಯೋಜನೆಗಳಾದ ಉದ್ಯೋಗ ಖಾತರಿ, ಮಾಸಾಶನ, ಸಹಾಯಧನ, ಪಿಂಚಣಿ, ವಿದ್ಯಾರ್ಥಿ ವೇತನ, ಸಬ್ಸಿಡಿ ಹಣವನ್ನು ನೇರವಾಗಿ ಐಪಿಪಿಬಿ ಖಾತೆಗೆ ವರ್ಗಾವಣೆ ಮಾಡಬಹುದಾಗಿದೆ. ಈಗಾಗಲೇ ಅಂಚೆ ಕಚೇರಿಗಳಲ್ಲಿ ಆರಂಭಿಸಿರುವ ಎಲ್ಲಾ ಖಾತೆಗಳು ಐಪಿಪಿಬಿ ಸೇವೆ ಲಭ್ಯವಾಗಲಿದ್ದು, 100% ಬ್ಯಾಂಕಿಂಗ್ ಸೇವೆ ಪಡೆಯಬಹುದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೇಂದ್ರದ ತಪ್ಪು ನಿರ್ಧಾರಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ- ಖರ್ಗೆ

    ಕೇಂದ್ರದ ತಪ್ಪು ನಿರ್ಧಾರಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ- ಖರ್ಗೆ

    ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ತಪ್ಪು ನಿರ್ಧಾರಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಅಂತ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದ್ದಕ್ಕೆ ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಯೇ ಕಾರಣ. ಜಿಡಿಪಿ ದರ 8.2 ಇದೆ ಅಂತ ಕೇಂದ್ರ ಕೊಚ್ಚಿಕೊಳ್ಳುತ್ತಿದೆ. ಆದ್ರೆ, ಅವರದ್ದೇ ಸಮೀಕ್ಷೆಯಲ್ಲಿ ಅದು ಶೇ. 7.2 ಅಂತ ದಾಖಲಾಗಿದೆ ಅಂತ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಎರಡು ವರ್ಷದ ಬಳಿಕ ಅತಿ ಹೆಚ್ಚು ಜಿಡಿಪಿ ಪ್ರಗತಿ ದಾಖಲು

    ನಮ್ಮ ಅಧಿಕಾರಾವಧಿಯಲ್ಲಿ ಕಚ್ಚಾ ತೈಲದ ಬೆಲೆ ಜಾಸ್ತಿ ಇದ್ರೂ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿರಲಿಲ್ಲ. ಆದ್ರೆ, ಸದ್ಯ ಡೀಸೆಲ್ ಬೆಲೆಯೇ 70ರ ಗಡಿ ದಾಟಿದೆ. ತೈಲ ಬೆಲೆ ಏರಿಕೆಯಿಂದ ರೈತ ಸಂಕಷ್ಟಕ್ಕೀಡಾಗಿದ್ದಾನೆ ಅಂದ್ರು. ಇದನ್ನೂ ಓದಿ: ಶನಿವಾರದಿಂದ ಬೈಕು-ಕಾರುಗಳ ವಿಮೆ ದುಬಾರಿ: ಎಷ್ಟು ಸಿಸಿಗೆ ಎಷ್ಟು ಹಣ ಪಾವತಿಸಬೇಕು?

    ರೈತರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಆರೋಪಿಸಿದರಲ್ಲದೇ, ತಪ್ಪು ಆರ್ಥಿಕ ನೀತಿಯಿಂದ ಕೇಂದ್ರ ಮನ ಬಂದಂತೆ ಹಣ ವ್ಯಯಿಸುತ್ತಿದ್ದು, ಯುವಕರಿಗೆ ಉದ್ಯೋಗ ಕೊಡಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. 2ಕೋಟಿ ನಿರುದ್ಯೋಗಿಗಳಿಗೆ ನೌಕರಿ ಕೊಡುವ ಭರವಸೆ ಹುಸಿಯಾಗಿದೆ. ಅಲ್ಲದೇ ಆರ್ಥಿಕವಾಗಿ, ಸಾಮಾಜಿಕವಾಗಿ ಮೋದಿ ಸರ್ಕಾರ ದೇಶವನ್ನ ಹಾಳು ಮಾಡುತ್ತಿದ್ದು, ಸಂವಿಧಾನ, ಪ್ರಜಾ ಪ್ರಭುತ್ವಕ್ಕೆ ಕೇಂದ್ರ ಬೆಲೆಯೇ ಕೊಡುತ್ತಿಲ್ಲ ಅಂತ ಗಂಭೀರವಾಗಿ ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎರಡು ವರ್ಷದ ಬಳಿಕ ಅತಿ ಹೆಚ್ಚು ಜಿಡಿಪಿ ಪ್ರಗತಿ ದಾಖಲು

    ಎರಡು ವರ್ಷದ ಬಳಿಕ ಅತಿ ಹೆಚ್ಚು ಜಿಡಿಪಿ ಪ್ರಗತಿ ದಾಖಲು

    ನವದೆಹಲಿ: ಕೇಂದ್ರ ಎನ್‍ಡಿಎ ಸರ್ಕಾರ ಕೈಗೊಂಡಿರುವ ಆರ್ಥಿಕ ಸುಧಾರಣೆಗಳ ಪರಿಣಾಮವಾಗಿ ದೇಶದ ಆಂತರಿಕ ಉತ್ಪನ್ನ ದರ (ಜಿಡಿಪಿ) ಜೂನ್ ಅಂತ್ಯಕ್ಕೆ ಮುಕ್ತಾಯವಾದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) ಶೇ. 8.2 ಪ್ರಗತಿ ದಾಖಲಿಸಿದೆ.

    ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ 5.59 ರಷ್ಟಿದ್ದ ಜಿಡಿಪಿ ಬೆಳವಣಿಗೆ ದರ ಅಂತಿಮ ತ್ರೈಮಾಸಿಕದ ವೇಳೆಗೆ ಶೇ.7.7 ಕ್ಕೆ ಏರಿಕೆ ಆಗಿತ್ತು. ಎನ್‍ಡಿಎ ಸರ್ಕಾರ ಕೈಗೊಂಡ ಆರ್ಥಿಕ ಕ್ರಮಗಳ ಬಳಿಕ ಕುಸಿತಗೊಂಡಿದ್ದ ದೇಶದ ಜಿಡಿಪಿ ದರ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಮೊದಲ ಬಾರಿಗೆ ಭಾರೀ ಏರಿಕೆ ಆಗಿದ್ದು, ಕೇಂದ್ರ ಸಾಂಖ್ಯಿಕ ಕಚೇರಿ ಮಾಹಿತಿ ನೀಡಿದೆ.

    ದೇಶದ ಉತ್ಪಾದನಾ ಕ್ಷೇತ್ರ ಹಾಗೂ ಸೇವಾ ಕ್ಷೇತ್ರಗಳಲ್ಲಿ ಉಂಟಾಗಿರುವ ಪ್ರಗತಿಯ ಕಾರಣ ಜಿಡಿಪಿ ದರ ಏರಿಕೆ ಆಗಿದ್ದು, ಪ್ರಮುಖವಾಗಿ ಉತ್ಪಾದನಾ ಕ್ಷೇತ್ರದಲ್ಲಿ 13.5% ಬೆಳವಣಿಗೆ ದಾಖಲಾಗಿದೆ. ಈ ಹಿಂದಿನ ವರ್ಷದ ಈ ತ್ರೈಮಾಸಿಕದ ಅವಧಿ ವೇಳೆ ಈ ಕ್ಷೇತ್ರದಲ್ಲಿ ಶೇ.1.8 ರಷ್ಟು ನಕಾರಾತ್ಮಕ ಬೆಳವಣಿಗೆ ದಾಖಲಾಗಿತ್ತು.

    ಯಾವ ಅವಧಿಯಲ್ಲಿ ಎಷ್ಟಿತ್ತು?
    ಮಾರ್ಚ್ 2016 – 9.2%
    ಜೂನ್ 2016 – 7.9%
    ಸೆಪ್ಟೆಂಬರ್ 2016 – 7.5%
    ಡಿಸೆಂಬರ್ 2016 – 7%
    ಮಾರ್ಚ್ 2017 – 6.1%
    ಜೂನ್ 2017 – 5.6%
    ಸೆಪ್ಟೆಂಬರ್ 2017 – 6.3%
    ಡಿಸೆಂಬರ್ 2017 – 7.0%
    ಮಾರ್ಚ್ 2018 – 7.7%
    ಜೂನ್ 2018 – 8.2%

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 15.3 ಲಕ್ಷ  ಕೋಟಿ ರೂ. ಮೌಲ್ಯದ 99.3% ನಿಷೇಧಗೊಂಡಿದ್ದ ನೋಟುಗಳು ವಾಪಸ್: ಆರ್‌ಬಿಐ

    15.3 ಲಕ್ಷ ಕೋಟಿ ರೂ. ಮೌಲ್ಯದ 99.3% ನಿಷೇಧಗೊಂಡಿದ್ದ ನೋಟುಗಳು ವಾಪಸ್: ಆರ್‌ಬಿಐ

    ಮುಂಬೈ: 2016ರಲ್ಲಿ ಕೇಂದ್ರ ಸರ್ಕಾರ ನಿಷೇಧ ಮಾಡಿದ್ದ 500 ರೂ. ಹಾಗೂ 1 ಸಾವಿರ ರೂ. ಮುಖಬೆಲೆಯ ನೋಟುಗಳಲ್ಲಿ 99.3% ನೋಟುಗಳು ಬ್ಯಾಂಕ್‍ಗೆ ವಾಪಸ್ ಆಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತಿಳಿಸಿದೆ.

    2017-18 ವಾರ್ಷಿಕ ವರದಿಯಲ್ಲಿ ಈ ಅಂಶವನ್ನು ಆರ್‌ಬಿಐ ಬಹಿರಂಗಪಡಿಸಿದ್ದು, 2016ರ ನವೆಂಬರ್ 8 ನೋಟು ನಿಷೇಧಕ್ಕೂ ಮುನ್ನ ದೇಶದಲ್ಲಿ 500 ರೂ. ಹಾಗೂ 1 ಸಾವಿರ ಮುಖಬೆಲೆಯ 15.41 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳು ಚಲಾವಣೆಯಲ್ಲಿ ಇದ್ದು, ಬಳಿಕ ನಡೆದ ಪ್ರಕ್ರಿಯೆಯಲ್ಲಿ 15.31 ಲಕ್ಷ ಕೋಟಿ  ರೂ. ಮೌಲ್ಯದ ನೋಟುಗಳು ವಾಪಸ್ ಆಗಿದೆ. ನೋಟುಗಳ ಪರಿಶೀಲನೆ ಪ್ರಕ್ರಿಯೆ ಯಶ್ವಸಿಯಾಗಿ ಮುಕ್ತಾಯವಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

    ನೋಟು ನಿಷೇಧದ ಬಳಿಕ 2016-17 ರ ಅವಧಿಯಲ್ಲಿ ಆರ್‌ಬಿಐ 7,965 ಕೋಟಿ ರೂ. ಗಳನ್ನು ಹೊಸ 500 ಹಾಗೂ 2 ಸಾವಿರ ರೂ. ಮುಖಬೆಲೆಯ ನೋಟು ಮುದ್ರಣಕ್ಕಾಗಿ ವೆಚ್ಚ ಮಾಡಿದೆ. ಈ ಅವಧಿಯಲ್ಲಿ ನೋಟು ಮುದ್ರಣದ ವೆಚ್ಚ ಕಳೆದ ವರ್ಷದಲ್ಲಿ ಮಾಡಿದ್ದ ವೆಚ್ಚಕ್ಕಿಂತಲೂ ಎರಡರಷ್ಟು ಹೆಚ್ಚಾಗಿದೆ. ಇನ್ನು 2017-18 (ಜುಲೈ 2017 ರಿಂದ ಜೂನ್ 2018) ಅವಧಿಯಲ್ಲಿ 4,912 ಕೋಟಿ ರೂ. ಗಳನ್ನು ನೋಟು ಮುದ್ರಣಕ್ಕಾಗಿ ಆರ್‌ಬಿಐ ವೆಚ್ಚಮಾಡಿದೆ.

    ನೋಟು ನಿಷೇಧ ವೇಳೆ ಈ ಕ್ರಮ ಕಪ್ಪು ಹಣದ ಪತ್ತೆ, ಭ್ರಷ್ಟಚಾರ ನಿಯಂತ್ರಣ ಮತ್ತು ಖೋಟಾ ನೋಟು ಪರಿಶೀಲನೆಗೆ ಸಹಾಯವಾಗುತ್ತದೆ ಎಂಬ ವಾದ ಕೇಳಿ ಬಂದಿತ್ತು. ಆದರೆ ಈ ವೇಳೆ 500 ರೂ. ಹಾಗೂ 1 ಸಾವಿರ ರೂ ಮುಖಬೆಲೆ ನಕಲಿ ನೋಟುಗಳ ಪತ್ತೆ ಪ್ರಮಾಣ ಕ್ರಮವಾಗಿ 59.7% ಮತ್ತು 59.6% ಕಡಿಮೆ ಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ 100 ರೂ. ಹಾಗೂ 50 ರೂ ಮುಖಬೆಲೆಯ ನಕಲಿ ನೋಟುಗಳ ಪತ್ತೆ ಪ್ರಮಾಣ ಕ್ರಮವಾಗಿ 35%, 154.3% ರಷ್ಟು ಪತ್ತೆಯಾಗಿದೆ. ನೋಟು ನಿಷೇಧ ಕ್ರಮದಿಂದಾಗಿ 2017-18 ಆರ್ಥಿಕ ವರ್ಷದ ಮೇಲೆ ಪ್ರಭಾವ ಬೀರಿತ್ತು ಎಂದು ಆರ್‌ಬಿಐ ಹೇಳಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಾ.ರಾ ಮಹೇಶ್ ವಿರುದ್ಧ ನಿರ್ಮಲಾ ಸೀತಾರಾಮನ್ ಕಿಡಿ- ಗೊಂದಲ ಕುರಿತು ರಕ್ಷಣಾ ಸಚಿವರ ಸ್ಪಷ್ಟನೆ

    ಸಾ.ರಾ ಮಹೇಶ್ ವಿರುದ್ಧ ನಿರ್ಮಲಾ ಸೀತಾರಾಮನ್ ಕಿಡಿ- ಗೊಂದಲ ಕುರಿತು ರಕ್ಷಣಾ ಸಚಿವರ ಸ್ಪಷ್ಟನೆ

    ಬೆಂಗಳೂರು: ಕೊಡಗು ಪ್ರವಾಹ ಪೀಡಿತ ಪ್ರದೇಶ ಭೇಟಿ ಬಳಿಕ ಸುದ್ದಿಗೋಷ್ಠಿಯಲ್ಲಿ ಉಂಟಾದ ಗೊಂದಲದ ಬಗ್ಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ ನೀಡಿದ್ದು ಕೊಡಗು ಉಸ್ತುವಾರಿ ಸಚಿವ ಸಾರಾ ಮಹೇಶ್ ಅವರಿಗೆ ದೇಶದ ರಾಜಕೀಯ ವ್ಯವಸ್ಥೆ ಬಗ್ಗೆ ಪರಿಜ್ಞಾನ ಇಲ್ಲ ಎಂದು ಕಿಡಿಕಾರಿದ್ದಾರೆ.

    ಇಡೀ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆ ಸ್ಪಷ್ಟನೆ ನೀಡಿ ಪತ್ರಿಕಾ ಬಿಡುಗಡೆ ಮಾಡಿದ್ದು, ಈ ಹೇಳಿಕೆಯನ್ನು ಸಚಿವೆ ನಿರ್ಮಲಾ ಸೀತಾರಾಮನ್ ಟ್ವೀಟ್ ಮಾಡಿದ್ದಾರೆ. ಅದರ ಪೂರ್ಣ ರೂಪ ಇಂತಿದೆ.

    ರಕ್ಷಣಾ ಸಚಿವರ ಕೊಡಗು ಭೇಟಿ ವೇಳೆ ಜಿಲ್ಲಾಡಳಿತದೊಂದಿಗೆ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತವಾರಿ ಮಂತ್ರಿಗಳಾದ ಶ್ರೀ ಸಾ.ರಾ.ಮಹೇಶ್ ಅವರ ಮೇಲೆ ರಕ್ಷಣಾ ಸಚಿವರು ಕೋಪಗೊಂಡಿದ್ದರು ಎಂದು ಕೆಲವು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿದೆ.

    ಜಿಲ್ಲಾ ಉಸ್ತುವಾರಿ ಮಂತ್ರಿಗಳು ರಕ್ಷಣಾ ಮಂತ್ರಿಗಳ ಬಗ್ಗೆ ವೈಯಕ್ತಿಕ ಟೀಕೆ ಮಾಡಿರುವ ಬಗ್ಗೆಯೂ ವರದಿಯಾಗಿದೆ. ಅವರ ಈ ಟೀಕೆಯು ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯ ಘನತೆಗೆ ಚ್ಯುತಿಯುಂಟು ಮಾಡುವಂತಹದಾಗಿದೆ ಹಾಗೂ ಭಾರತ ರಾಜಕೀಯ ವ್ಯವಸ್ಥೆಯ ಬಗ್ಗೆ ಯಾವುದೇ ಗೌರವ ಮತ್ತು ತಿಳುವಳಿಕೆ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಇಲ್ಲ ಎನ್ನುವುದನ್ನು ತೋರಿಸಿದೆ.

    ಈ ಕುರಿತ ಸ್ಪಷ್ಟನೆ ನೀಡಲು ಅಂದಿನ ಪ್ರವಾಸ ಕಾರ್ಯಕ್ರಮದ ಪೂರ್ಣ ಮಾಹಿತಿಯ ವಿವರಗಳನ್ನು ಇಲ್ಲಿ ನೀಡಲಾಗಿದೆ: ರಕ್ಷಣಾ ಮಂತ್ರಿಗಳ ಪ್ರವಾಸ ಕಾರ್ಯಕ್ರಮದ ಕುರಿತು ಜಿಲ್ಲಾಡಳಿತವೇ 2 ದಿನಗಳ ಮುಂಚೆಯೇ ವೇಳಾಪಟ್ಟಿ ಅಂತಿಮಗೊಳಿಸಿತ್ತು. ಬಳಿಕ ಜಿಲ್ಲಾಡಳಿತ ಮನವಿ ಮೇರೆಗೆ ಸ್ಥಳೀಯ ಗಣ್ಯರೊಂದಿಗೆ ಸಂವಾದ ಕಾರ್ಯಕ್ರಮವನ್ನು ಪಟ್ಟಿಗೆ ಸೇರಿಸಲಾಯಿತು.

    ಹಾನಿಗೀಗಾಡ ಪ್ರದೇಶಗಳ ಭೇಟಿಯ ನಂತರ ನೆರೆಯಿಂದ ತೀವ್ರ ತೊಂದರೆಗೊಳಗಾದ ನಿವೃತ್ತ ಸೈನಿಕರೊಂದಿಗೆ ರಕ್ಷಣಾ ಮಂತ್ರಿಗಳು ಸಂವಾದ ನಡೆಸುವಾಗ ಅದಕ್ಕೆ ಉಸ್ತವಾರಿ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರಿಗಳೊಂದಿಗೆ ಸಭೆಯನ್ನು ಮೊದಲು ನಡೆಸಬೇಕು ಎನ್ನುವುದು ಅವರ ವಾದವಾಗಿತ್ತು. ಆದರೆ ನಿವೃತ್ತ ಸೈನಿಕರ ಯೋಗಕ್ಷೇಮವೂ ರಕ್ಷಣಾ ಇಲಾಖೆಯ ಆದ್ಯತೆಗಳಲ್ಲಿ ಒಂದಾದ ಕಾರಣ ರಕ್ಷಣಾ ಮಂತ್ರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದರು. ಅದರೂ ಉಸ್ತುವಾರಿ ಸಚಿವರು ತಕ್ಷಣ ಆ ಸಭೆ ನಿಲ್ಲಿಸಿ, ಅಧಿಕಾರಿಗಳ ಸಭೆಗೆ ಹೋಗಬೇಕೆಂದು ಒತ್ತಾಯಿಸಿದರು.

    ಆಗ ಪರಿಸ್ಥಿತಿಯನ್ನು ಅರಿತ ರಕ್ಷಣಾ ಸಚಿವರು ಮತ್ತಷ್ಟು ಗೊಂದಲ ಉಂಟಾಗುವುದನ್ನು ತಪ್ಪಿಸಲು ಆ ಸಭೆಯನ್ನು ಸ್ಥಗಿತಗೊಳಿಸಿ ಅಧಿಕಾರಿಗಳ ಸಭೆಗೆ ತೆರಳಿದರು. ಅಲ್ಲಿ ಆಗಲೇ ಪತ್ರಿಕಾಗೋಷ್ಟಿಗೆ ವ್ಯವಸ್ಥೆ ಮಾಡಲಾಗಿತ್ತು. ಅದೇ ಸ್ಥಳಕ್ಕೆ ಅಧಿಕಾರಿಗಳನ್ನು ತರಾತುರಿಯಲ್ಲಿ ಕರೆದು ಮಾಧ್ಯಮ ಪ್ರತಿನಿಧಿಗಳ ಉಪಸ್ಥಿತಿಯಲ್ಲೇ ಅಧಿಕಾರಿಗಳ ಸಭೆ ಆರಂಭಿಸಲಾಯಿತು. ಎಲ್ಲಾ ಮಾಧ್ಯಮ ಪ್ರತಿನಿಧಿಗಳ ಎದುರಿನಲ್ಲೇ ಪರಿಶೀಲನಾ ಸಭೆ ನಡೆಸುವ ನಿದರ್ಶನ ಇಲ್ಲವಾದರೂ, ಪರಿಸ್ಥಿಯನ್ನು ತಿಳಿಯಾಗಿಸಲು ಸಭೆಯನ್ನು ನಡೆಸಲಾಯಿತು.

    ರಕ್ಷಣಾ ಸಚಿವರು ನಂತರ ತಮಗಾಗಿ ಕಾದಿದ್ದ ಮಾಜಿ ಸೈನಿಕರೊಂದಿಗೆ ಸಂವಾದ ನಡೆಸಿ ಅವರ ಅಹವಾಲು ಆಲಿಸಿದರು. ಜಿಲ್ಲಾಡಳಿತವೇ ಅಂತಿಮಗೊಳಿಸಿದ ಕಾರ್ಯಕ್ರಮದ ಪ್ರಕಾರವೇ ರಕ್ಷಣಾ ಸಚಿವರು ಸಭೆ ನಡೆಸಿದರೂ, ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ ಪ್ರತಿಕ್ರಿಯೆ ಮತ್ತು ಟೀಕೆ ದುರದೃಷ್ಟಕರ. ಇನ್ನು ರಕ್ಷಣಾ ಸಚಿವರ ಬಗ್ಗೆ ಮಾಡಿರುವ ವೈಯಕ್ತಿಕ ಕೀಳು ಅಭಿರುಚಿಯಿಂದ ಕೂಡಿದ್ದಾಗಿದೆ. ಅವರ ಈ ನಡವಳಿಕೆ ಪ್ರತಿಕ್ರಿಯೆಗೂ ಯೋಗ್ಯವಲ್ಲ.

    ರಕ್ಷಣಾ ಸಚಿವರು ಪತ್ರಿಕಾಗೋಷ್ಟಿಯಲ್ಲಿ ಪರಿವಾರ ಎಂದು ಉಲ್ಲೇಖಿಸಿದ್ದನ್ನು ತಪ್ಪಾಗಿ ವ್ಯಾಖ್ಯಾನಿಸಿರುವುದು ಗಮನಕ್ಕೆ ಬಂದಿದೆ. ರಕ್ಷಣಾ ಇಲಾಖೆಯ 4 ವಿಭಾಗಗಳಲ್ಲಿ ನಿವೃತ್ತ ಸೈನಿಕರ ಕಲ್ಯಾಣವೂ ಒಂದು. ರಕ್ಷಣಾ ಇಲಾಖೆಯ ಪರಿವಾರದಲ್ಲಿ ನಿವೃತ್ತ ಸೈನಿಕರು ಸೇರಿರುತ್ತಾರೆ ಎಂಬುವುದು ಇಲ್ಲಿ ಗಮನಿಸಬೇಕಾದ ಅಂಶ. ಈ ಅರ್ಥದಲ್ಲಿ ಪರಿವಾರ ಎನ್ನುವ ಪದ ಬಳಕೆ ಮಾಡಲಾಗಿದೆ. ಉಳಿದಂತೆ ಬೇರೆಲ್ಲಾ ಅಭಿಪ್ರಾಯಗಳೂ ಅಪಾರ್ಥದಿಂದ ಕೂಡಿದ್ದು ಹಾಗೂ ಖಂಡನೀಯ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಡ್ವಾಣಿ ಎದುರಿಗೆ ಬಂದ್ರೂ ನಮಸ್ಕರಿಸಲ್ಲ, ಮೋದಿಗೆ ಯಾರ ಬಗ್ಗೆ ಗೌರವವಿದೆ: ಖರ್ಗೆ ಕಿಡಿ

    ಅಡ್ವಾಣಿ ಎದುರಿಗೆ ಬಂದ್ರೂ ನಮಸ್ಕರಿಸಲ್ಲ, ಮೋದಿಗೆ ಯಾರ ಬಗ್ಗೆ ಗೌರವವಿದೆ: ಖರ್ಗೆ ಕಿಡಿ

    ಕಲಬುರಗಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದಿಂದ ದೇಶಕ್ಕೆ ಆಘಾತವಾಗಿದೆ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್‍ಕೆ ಅಡ್ವಾಣಿ ಅವರು ಎದುರಿಗೆ ಬಂದರು ನಮಸ್ಕಾರ ಮಾಡಲ್ಲ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆರ್‍ಎಸ್‍ಎಸ್, ಸಂಘ ಪರಿವಾರ ಜೊತೆ ಒಡನಾಟವಿದ್ದರು ಸಹ ಸಹಿಷ್ಣುತೆಯಿಂದ ಬದುಕಿದ್ದಾರೆ. ಅವರ ನಿಧನದಿಂದ ದೇಶಕ್ಕೆ ಆಘಾತವಾಗಿದೆ. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು. ಆದರೆ ಅಟಲ್ ಬದುಕಿದ್ದಾಗ ಪ್ರಧಾನಿ ಮೋದಿ ಎಷ್ಟು ಸಲ ಭೇಟಿಯಾಗಿದ್ದಾರೆ? ಬಿಜೆಪಿ ಹಿರಿಯ ನಾಯಕ ಎಲ್‍ಕೆ ಅಡ್ವಾಣಿ ಎದುರಿಗೆ ಬಂದರು ಸಹ ಪ್ರಧಾನಿ ಮೋದಿ ನಮಸ್ಕರಿಸಲ್ಲ. ಮೋದಿ ಅವರನ್ನು ಉಳಿಸಿ ಬೆಳೆಸಿದ್ದು ಅಟಲ್ ಬಿಹಾರಿ ವಾಜಪೇಯಿ. ಆದರೆ ಮೋದಿಗೆ ಯಾರ ಬಗ್ಗೆ ಗೌರವವಿದೆ ಹೇಳಿ ಎಂದು ಪ್ರಶ್ನೆ ಮಾಡಿದ್ದಾರೆ.

    ಇದೇ ವೇಳೆ ಯುಎಇ ಯಿಂದ ಕೇರಳ ಪ್ರವಾಹ ಸಂತ್ರಸ್ತರಿಗೆ ನೀಡುತ್ತಿರುವ ಪರಿಹಾರ ಹಣವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆ ನಾವು ಸಹ ಬೇಡ ಎಂದು ತಿರಸ್ಕಾರ ಮಾಡಿದ್ದೇವೆ. ಅದು ಅಂದಿನ ಸರ್ಕಾರದ ನಿಲುವಾಗಿತ್ತು. ಆದರೆ ಈಗಾಗಾಗಲೇ ನಿಧಿಯನ್ನು ಪರಿಹಾರ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುವುದಾಗಿ ಕೇರಳ ಸಿಎಂ ಹೇಳಿದ್ದಾರೆ. ಅಲ್ಲದೇ ಕೇರಳ ಸಿಎಂ ಕೇಂದ್ರ ಸರ್ಕಾರಕ್ಕೆ 2 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅನುದಾನಕ್ಕೆ ಮನವಿ ಮಾಡಿದ್ದಾರೆ. ಇಷ್ಟು ಹಣ ಕೇಂದ್ರವೇ ನೀಡಿದರೆ, ಬೇರೆ ಕಡೆಯಿಂದ ಪಡೆಯುವ ಪ್ರಶ್ನೆ ಬರಲ್ಲ. ಕೇರಳದ ಹಾಗೇ ಕೊಡಗಿಗೆ ಸರ್ಕಾರ ಪರಿಹಾರ ಧನ ಬಿಡುಗಡೆ ಮಾಡಬೇಕು ಎಂದು ಹೇಳಿದರು.

    ವಿಮಾನ ಹಾರಾಟ: ಆಗಸ್ಟ್ 26 ರಂದು ಕಲಬುರಗಿ ವಿಮಾನನಿಲ್ದಾಣದಲ್ಲಿ ಪ್ರಾಯೋಗಿಕ ವಿಮಾನ ಹಾರಾಟ ಮಾಡಲಾಗುವುದು ಎಂದು ತಿಳಿಸಿದ ಅವರು, ಸೇಡಂ ರಸ್ತೆಯ ಶ್ರೀನಿವಾಸ ಸರಡಗಿ ಬಳಿಯಿರುವ ವಿಮಾನ ನಿಲ್ದಾಣದ ಪ್ರಯೋಗಿಕ ಸಂಚಾರಕ್ಕಾಗಿ ಎಲ್ಲಾ ಹಂತದ ಸಿದ್ಧತೆಗಳು ಮುಗಿದಿದೆ. ಪ್ರಯೋಗಿಕ ಸಂಚಾರ ಮಾಡಲು ಭಾರತದ ವಿಮಾನ ಪ್ರಾಧಿಕಾರ ಅನುಮತಿ ನೀಡಬೇಕು ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹಣಕಾಸು ಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರ ಸ್ವೀಕರಿಸಿಕೊಂಡ ಅರುಣ್ ಜೇಟ್ಲಿ

    ಹಣಕಾಸು ಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರ ಸ್ವೀಕರಿಸಿಕೊಂಡ ಅರುಣ್ ಜೇಟ್ಲಿ

    ನವದೆಹಲಿ: ಮೂತ್ರಪಿಂಡ ಸಮಸ್ಯೆಯಿಂದಾಗಿ ಕಳೆದ ಮೂರು ತಿಂಗಳುಗಳ ಕಾಲ ಸುದೀರ್ಘ ರಜೆಯಲ್ಲಿದ್ದ ಕೇಂದ್ರದ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ತಮ್ಮ ಅಧಿಕಾರವನ್ನು ಮತ್ತೊಮ್ಮೆ ಸ್ವೀಕರಿಸಿಕೊಂಡಿದ್ದಾರೆ.

    ಕಳೆದ ಮೇ 14 ರಂದು ಏಮ್ಸ್ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ವೈದ್ಯರುಗಳ ಸಲಹೆ ಮೇರೆಗೆ ಸುದೀರ್ಘ ವಿಶ್ರಾಂತಿಯಲ್ಲಿದ್ದರು. ವೈದ್ಯರು ಆರೋಗ್ಯ ಸ್ಥಿರವಾಗಿದೆ ಎಂದು ದೃಢಪಡಿಸಿದ ಬಳಿಕ ಪುನಃ ತಮ್ಮ ಅಧಿಕಾರಕ್ಕೆ ಮರಳಿದ್ದಾರೆ.

    ಅರುಣ್ ಜೇಟ್ಲಿಯವರ ದೀರ್ಘ ರಜೆಯಿಂದಾಗಿ ಹಣಕಾಸು ಇಲಾಖೆಯನ್ನು ಕೇಂದ್ರ ರೈಲ್ವೇ ಹಾಗೂ ಕಲ್ಲಿದ್ದಲು ಸಚಿವ ಪಿಯೂಶ್ ಗೋಯಲ್ ಉಸ್ತುವಾರಿ ವಹಿಸಿಕೊಂಡಿದ್ದರು. ಈಗ ಅಧಿಕಾರಕ್ಕೆ ಮರಳಿರುವ ಅರುಣ್ ಜೇಟ್ಲಿಯವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‍ರವರ ನಿರ್ದೇಶನದಂತೆ ಹಣಕಾಸು ಖಾತೆ ಹಾಗೂ ಕಾರ್ಪೋರೇಟ್ ವ್ಯವಹಾರಗಳ ಖಾತೆಯ ಉಸ್ತುವಾರಿಯನ್ನು ನೀಡಲಾಗಿದೆ.

    ರಾಷ್ಟ್ರಪತಿಯ ನಿರ್ದೇಶನದ ಮೇರೆಗೆ ಅರುಣ್ ಜೇಟ್ಲಿಯವರು ಗುರುವಾರ ಹಣಕಾಸು ಹಾಗೂ ಕಾರ್ಪೋರೇಟ್ ವ್ಯವಹಾರ ಇಲಾಖೆಯ ಸಚಿವರಾಗಿ ಅಧಿಕಾರವಹಿಸಿಕೊಂಡಿದ್ದಾರೆ.

    ಅರುಣ್ ಜೇಟ್ಲಿಯವರು ತಮ್ಮ ದೀರ್ಘ ರಜೆಯ ನಡುವೆಯೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿದ್ದರು. ಅಲ್ಲದೇ ಪ್ರಮುಖ ವಿಷಯಗಳಾದ ಅಸ್ಸಾಂನ ಎನ್‍ಸಿಆರ್(ರಾಷ್ಟ್ರೀಯ ನಾಗರೀಕ ನೋಂದಣಿ), ತುರ್ತು ಪರಿಸ್ಥಿತಿಗೆ 40 ವರ್ಷಗಳು, ಅವಿಶ್ವಾಸ ನಿರ್ಣಯ, ರಫೇಲ್ ಫೈಟರ್, ಜಿಎಸ್‍ಟಿ ಸೇರಿದಂತೆ ಇನ್ನು ಅನೇಕ ವಿಚಾರಗಳ ಬಗ್ಗೆ ಬರೆದುಕೊಂಡಿದ್ದರು.

    ಕಳೆದ ನಾಲ್ಕು ತಿಂಗಳಲ್ಲಿ ಮೊದಲನೇ ಬಾರಿಗೆ ಆಗಸ್ಟ್ 6 ರಂದು ನಡೆದ ರಾಜ್ಯಸಭೆ ಉಪಸಭಾಪತಿ ಹುದ್ದೆಗೆ ನಡೆದ ಚುನಾವಣೆಗೆ ಭಾಗವಹಿಸುವ ಮೂಲಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಫೇಲ್ ಡೀಲ್ ಬಗ್ಗೆ ಸುಮ್ನೆ ಮಾತಾಡ್ಬೇಡಿ- ಕಾಂಗ್ರೆಸ್ ನಾಯಕರಿಗೆ ರಿಲಯನ್ಸ್ ನೋಟಿಸ್

    ರಫೇಲ್ ಡೀಲ್ ಬಗ್ಗೆ ಸುಮ್ನೆ ಮಾತಾಡ್ಬೇಡಿ- ಕಾಂಗ್ರೆಸ್ ನಾಯಕರಿಗೆ ರಿಲಯನ್ಸ್ ನೋಟಿಸ್

    ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಬಹುದೊಡ್ಡ ಹಗರಣ ನಡೆದಿದ್ದು, ಹಗರಣದಲ್ಲಿ ಸಂಸ್ಥೆ ಭಾಗಿಯಾಗಿದೆ ಎಂದು ಆರೋಪ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ವಿರುದ್ಧ ರಿಲಯನ್ಸ್ ನೋಟಿಸ್ ಜಾರಿ ಮಾಡಿದೆ.

    ರಫೇಲ್ ಯುದ್ಧ ವಿಮಾನ ಖರೀದಿ ಸಂಬಂಧಿಸಿದಂತೆ ಸಂಸ್ಥೆಯ ಕುರಿತು ಆರೋಪ ಮಾಡುವ ವೇಳೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಲು ತಿಳಿಸಿರುವ ಸಂಸ್ಥೆ, ಈ ಕುರಿತು ಕಾನೂನು ಕ್ರಮ ಜರುಗಿಸುವ ಕುರಿತು ಎಚ್ಚರಿಕೆ ನೀಡಿದೆ.

    ರಫೇಲ್ ಯುದ್ಧ ವಿಮಾನ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ತಪ್ಪು ಮಾಹಿತಿ ನೀಡಿದ್ದಾರೆ. ಅವರು ಮಾಡುತ್ತಿರುವ ಆರೋಪ ನಿರಾಧಾರವಾಗಿದೆ ಎಂದು ರಿಲಯನ್ಸ್ ಸಂಸ್ಥೆ ಈ ನೋಟಿಸ್ ಜಾರಿ ಮಾಡಿದೆ. ಕಾಂಗ್ರೆಸ್ ಆರೋಪದ ಕುರಿತು ರಿಲಯನ್ಸ್ ಸಂಸ್ಥೆಯ ಅಧ್ಯಕ್ಷ ಅನಿಲ್ ಅಂಬಾನಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದ ಬಳಿಕ ಕಾನೂನು ಕ್ರಮಕ್ಕೆ ಸಂಸ್ಥೆ ಮುಂದಾಗಿದೆ.

    ಈ ಸಂಬಂಧ ಟ್ವೀಟ್ ಮೂಲಕ ಉತ್ತರಿಸಿರುವ ಕಾಂಗ್ರೆಸ್ ನಾಯಕ ಜೈವೀರ್ ಶೇರ್‍ಗಿಲ್, ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದು, ಇಂತಹ ಬೆದರಿಕೆಗಳಿಗೆಲ್ಲ ಮಣಿಯುವುದಿಲ್ಲ. ದೇಶದ ತೆರಿಗೆದಾರನಾದ ನಾನು ಸರ್ಕಾರ ಯಾಕೆ 42 ಸಾವಿರ ಕೋಟಿ ರೂ. ಹೆಚ್ಚು ಹಣ ನೀಡಿತು ಎಂಬುದನ್ನು ತಿಳಿಯುವ ಅಧಿಕಾರ ನನಗಿದೆ ಎಂದು ಬರೆದುಕೊಂಡಿದ್ದಾರೆ.

    ಕಾಂಗ್ರೆಸ್ ಆರೋಪ:
    ಎನ್‍ಡಿಎ ಅಧಿಕಾರ ಅವಧಿಯಲ್ಲಿ ಮಾಡಲಾದ ರಫೇಲ್ ಒಪ್ಪಂದದಿಂದ ದೇಶದ 41 ಸಾವಿರ ಕೋಟಿ ರೂ. ನಷ್ಟವಾಗಿದ್ದು, ಸರ್ಕಾರಿ ಸ್ವಾಮ್ಯದ ಹಿಂದುಸ್ಥಾನ್ ಏರೊನಾಟಿಕಲ್ಸ್ ಕಂಪೆನಿಗೆ ನೀಡಿದ್ದ ಒಪ್ಪಂದವನ್ನು ಯಾವುದೇ ಕಾರಣ ನೀಡದೆ ಖಾಸಗಿ ಕಂಪೆನಿಗೆ ನೀಡಿ ಕೇಂದ್ರ ಸರ್ಕಾರ ಅಕ್ರಮ ಎಸಗಿದೆ ಎಂದು ಆರೋಪಿಸಿದೆ. ಈ ಕುರಿತು ಕಳೆದ ಬಾರಿ ಸಂಸತ್ ನಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿ ಆರೋಪಗಳ ಸುರಿಮಳೆಗೈದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv