Tag: Central Government

  • ಪೆಟ್ರೋಲ್, ಡೀಸೆಲ್ ದರ 2.50 ರೂ. ಇಳಿಕೆ

    ಪೆಟ್ರೋಲ್, ಡೀಸೆಲ್ ದರ 2.50 ರೂ. ಇಳಿಕೆ

    ನವದೆಹಲಿ: ತೈಲ ಬೆಲೆ ಏರಿಕೆ ಆಗುತ್ತಿದ್ದಂತೆ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ಸುಂಕ ಕಡಿತದಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ 2.50 ರೂ. ಇಳಿಕೆಯಾಗಲಿದೆ.

    ಅಬಕಾರಿ ಸುಂಕವನ್ನು 1.50 ರೂಪಾಯಿ ಕಡಿಮೆ ಮಾಡಿದ್ದು, ತೈಲ ಕಂಪನಿಗಳು 1 ರೂಪಾಯಿ ಕಡಿಮೆ ಮಾಡಲು ನಿರ್ಧರಿಸಿದೆ. ಹೀಗಾಗಿ ಒಟ್ಟು 2.50 ರೂ ಕಡಿತವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

    ತೈಲ ಬೆಲೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಹಣಕಾಸು ಇಲಾಖೆಯ ಜೊತೆ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಪರಿಣಾಮ ಸರ್ಕಾರಕ್ಕೆ 10,500 ಕೋಟಿ ರೂ. ಹೊರೆಯಾಗುತ್ತದೆ. ಕೇಂದ್ರ ಸರ್ಕಾರ ಕಡಿಮೆ ಮಾಡಿದಂತೆ ರಾಜ್ಯ ಸರ್ಕಾರಗಳು ವ್ಯಾಟ್ ತೆರಿಗೆಯನ್ನು ಕಡಿತಗೊಳಿಸಲಿ ಎಂದು ಸಲಹೆ ನೀಡಿದರು.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ತೈಲ 76 ಡಾಲರ್ ನಲ್ಲಿ ಮಾರಾಟವಾಗುತ್ತಿದೆ. ಇದರ ಜೊತೆಯಲ್ಲಿ ಅಮೆರಿಕ ಚೀನಾ ವಾಣಿಜ್ಯ ಸಮರ, ಇರಾನ್ ನಿಂದ ತೈಲ ಖರೀದಿಗೆ ನಿರ್ಬಂಧ ಹೇರಿದ ಪರಿಣಾಮ ಡಾಲರ್ ಮುಂದೆ ರೂಪಾಯಿ ದುರ್ಬಲವಾಗುತ್ತಿದ್ದು 73 ರೂ. ಗಡಿ ದಾಟಿದೆ. ಹೀಗಾಗಿ ತೈಲ ಬೆಲೆ ಭಾರತದಲ್ಲಿ ಏರಿಕೆಯಾಗುತ್ತಿದೆ. ಇದನ್ನೂ ಓದಿ: ಭಾರತದಲ್ಲಿ ಪೆಟ್ರೋಲ್ ದರ 82 ರೂ. – ಪಾಕಿಸ್ತಾನ, ಅಮೆರಿಕ, ಶ್ರೀಲಂಕಾದಲ್ಲಿ ಎಷ್ಟು?

    2014 ರಿಂದ 2016 ರ ಅವಧಿಯಲ್ಲಿ ಕೇಂದ್ರ ಸರ್ಕಾರ 9 ಬಾರಿ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಈ ಅವಧಿಯಲ್ಲಿ ಪೆಟ್ರೋಲ್ ಮೇಲೆ 11.77 ರೂ., ಡೀಸೆಲ್ ಮೇಲೆ 13.47 ರೂ. ನಂತೆ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಇದರಿಂದಾಗಿ 2014-15 ರಲ್ಲಿ ಬೊಕ್ಕಸಕ್ಕೆ 99 ಕೋಟಿ ರೂ. ಬಂದಿದ್ದರೆ, 2016-17 ನೇ ಅವಧಿಯಲ್ಲಿ 2.42 ಲಕ್ಷ ಕೋಟಿ ರೂ. ಆದಾಯ ಬಂದಿತ್ತು. ಇದನ್ನೂ ಓದಿ:  ನೂರರ ಗಡಿಯತ್ತ ತೈಲ ಬೆಲೆ: ಪೆಟ್ರೋಲ್‍ನಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಪಾಲು ಎಷ್ಟು? ಕೇಂದ್ರ ಹೇಳೋದು ಏನು?

    ಪ್ರತಿ ಲೀಟರ್ ಪೆಟ್ರೋಲ್ ಮೇಲೆ 9.48 ರೂ. ನಿಂದ 21.48 ರೂ., ಡೀಸೆಲ್ ಮೇಲೆ 3.56 ರೂ.ನಿಂದ 17.33 ರೂ. ಅಬಕಾರಿ ಸುಂಕವನ್ನು ಏರಿಕೆ ಮಾಡಿತ್ತು. 2016 ರ ವರೆಗೆ ಈ ಏರಿಕೆ ಮಾಡಿದ್ದು, 2017 ರ ಅಕ್ಟೋಬರ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 2 ರೂ. ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಅಬಕಾರಿ ಸುಂಕದಿಂದ ಸಂಗ್ರಹವಾದ ಹಣವನ್ನು ಜನರ ಕಲ್ಯಾಣ ಯೋಜನೆಗೆ ಬಳಕೆ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ತಿಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರೈತರ ಬೇಡಿಕೆಗಳಿಗೆ ಕೇಂದ್ರ ಅಸ್ತು: ದೆಹಲಿ ಚಲೋ ಶೀಘ್ರವೇ ಅಂತ್ಯ!

    ರೈತರ ಬೇಡಿಕೆಗಳಿಗೆ ಕೇಂದ್ರ ಅಸ್ತು: ದೆಹಲಿ ಚಲೋ ಶೀಘ್ರವೇ ಅಂತ್ಯ!

    ನವದೆಹಲಿ: ಸಾಲಮನ್ನಾ ಹಾಗೂ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ರೈತರು ನಡೆಸಿದ ಬೃಹತ್ ಪ್ರತಿಭಟನಾ ಮೆರವಣಿಗೆಗೆ ಕೇಂದ್ರ ಬಗ್ಗಿದ್ದು, ರೈತರ ಬೇಡಿಕೆಗಳನ್ನು ಈಡೇರಿಸುವುದಾಗಿ ತಿಳಿಸಿದೆ.

    ಉತ್ತರಪ್ರದೇಶದ ರೈತರು ಹಾಗೂ ಭಾರತೀಯ ಕಿಸಾನ್ ಸಂಘ(ಬಿಕೆಯು)ದ ವತಿಯಿಂದ ಇಂದು ಹಮ್ಮಿಕೊಂಡಿದ್ದ ದೆಹಲಿ ಚಲೋ, ಹಿಂಸಾತ್ಮಕ ರೂಪ ಪಡೆದಕೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರ ರೈತರ ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಸಮ್ಮತಿ ಸೂಚಿಸಿದೆ.

    ಈಗಾಗಲೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಬಿಕೆಯುದ ಉನ್ನತ ನಾಯಕರೊಂದಿಗೆ ಮಾತುಕತೆ ನಡೆಸಿದ್ದು, ರೈತರ ಬೇಡಿಕೆಗಳನ್ನು ಈಡೇರಿಸುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಕೇಂದ್ರ ಸಹಾಯಕ ಕೃಷಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಗೃಹ ಸಚಿವ ರಾಜನಾಥ್ ಸಿಂಗ್ ಬಿಕೆಯುದ ಉನ್ನತ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಮಾತುಕತೆಯ ವೇಳೆ ರೈತರ ಬಹು ಮುಖ್ಯ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಉತ್ತರ ಪ್ರದೇಶ ಸಚಿವರಾದ ಲಕ್ಷ್ಮೀ ನಾರಾಯಣ್, ಸುರೇಶ್ ರಾಣಾರ ಜೊತೆ ನಾನು ರೈತರನ್ನು ಭೇಟಿಯಾಗಲು ಹೋಗುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಏನಿದು ಪ್ರತಿಭಟನೆ?
    ಉತ್ತರ ಪ್ರದೇಶದ ಸುಮಾರು 70 ಸಾವಿರಕ್ಕೂ ಹೆಚ್ಚು ರೈತರು ಸಾಲಮನ್ನಾ ಹಾಗು 15 ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ದೆಹಲಿ ಚಲೋ ಪ್ರತಿಭಟನೆಯನ್ನು ಹರಿದ್ವಾರದಿಂದ ಹಮ್ಮಿಕೊಂಡಿದ್ದರು. ಘಾಜಿಯಾಪುರ ಮಾರ್ಗವಾಗಿ ದೆಹಲಿಗೆ ತೆರಳಿ ಪ್ರತಿಭಟನೆ ನಡೆಸಿದ್ದರು. ಆದರೆ ದೆಹಲಿ ಹಾಗೂ ಉತ್ತರ ಪ್ರದೇಶದ ಗಡಿಭಾಗ ಗಾಜೀಯಾಬಾದ್ ನಲ್ಲಿ ಬೃಹತ್ ಬ್ಯಾರಿಕೇಡ್‍ಗಳನ್ನು ಹಾಕುವ ಮೂಲಕ ಪೊಲೀಸರು ರೈತರ ಪ್ರತಿಭಟನೆಯನ್ನು ನಿಯಂತ್ರಿಸಿಲು ಯತ್ನಿಸಿದ್ದರು. ಆದರೆ ಸಾಗರೋಪಾದಿಯಲ್ಲಿ ಬಂದಿದ್ದ ಪ್ರತಿಭಟನಾಕಾರರು ಪೊಲೀಸರು ಹಾಕಿದ್ದ ಬ್ಯಾರಿಕೇಡ್‍ಗಳನ್ನು ತಮ್ಮ ಟ್ರ್ಯಾಕ್ಟರ್‍ಗಳ ಮೂಲಕ ಕೀಳಲು ಮುಂದಾಗಿದ್ದರು. ಈ ವೇಳೆ ಪೊಲೀಸರು ಪ್ರತಿಭಟನಾ ನಿರತರ ಮೇಲೆ ಜಲಫಿರಂಗಿ ಹಾಗೂ ಅಶ್ರುವಾಯು ಪ್ರಯೋಗವನ್ನು ಮಾಡಿದ್ದಲ್ಲದೇ, ಲಾಠಿ ಚಾರ್ಜ್ ಕೂಡಾ ಮಾಡಿದ್ದರು. ಪ್ರತಿಭಟನೆಯು ಹಿಂಸಾತ್ಮಕ ರೂಪ ಪಡೆಯುವ ಮುನ್ಸೂಚನೆ ಅರಿತ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತುರ್ತು ಸಭೆ ಕರೆದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=d0tIKjItZL0

     

  • ಇ-ಫಾರ್ಮಸಿಗೆ ವಿರೋಧ – ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್!

    ಇ-ಫಾರ್ಮಸಿಗೆ ವಿರೋಧ – ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್!

    ಬೆಂಗಳೂರು: ಕೇಂದ್ರ ಸರ್ಕಾರ ಇ-ಫಾರ್ಮಸಿ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿರುವುದಕ್ಕೆ ವಿರೋಧಿಸಿ ಅಖಿಲ ಭಾರತೀಯ ಔಷಧಿ ಮಾರಾಟ ವ್ಯಾಪಾರಿಗಳ ಸಂಘ ರಾಷ್ಟ್ರವ್ಯಾಪಿ ಬಂದ್ ಗೆ ಕರೆ ನೀಡಿದೆ.

    ಹೌದು, ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತರಲು ಹೊರಟಿರುವ ಇ-ಫಾರ್ಮಸಿ ವ್ಯವಸ್ಥೆಗೆ, ವಿರೋಧ ವ್ಯಕ್ತಪಡಿಸಿರುವ ಔಷಧಿ ಮಾರಾಟ ವ್ಯಾಪಾರಿಗಳು ಇಂದು ದೇಶಾದ್ಯಂತ ಬಂದ್‍ಗೆ ಕರೆ ನೀಡಿದ್ದಾರೆ. ಹೀಗಾಗಿ ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ಮಧ್ಯರಾತ್ರಿಯ ವರೆಗೆ ದೇಶದ ಯಾವುದೇ ಮೆಡಿಕಲ್ ಶಾಪ್‍ಗಳು ಕಾರ್ಯನಿರ್ವಹಿಸುತ್ತಿಲ್ಲ.

    ಈ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗಿನಿಂದಲೇ ರಾಜಧಾನಿ ಬೆಂಗಳೂರಿನಲ್ಲಿಯೂ ಸಹ ಮೆಡಿಕಲ್ ಶಾಪ್ ಬಂದ್ ಬಿಸಿ ತಟ್ಟಿದೆ. ಮೆಡಿಕಲ್ ಶಾಪ್‍ಗಳು ಬಂದ್ ಆಗಿರುವ ಕಾರಣ, ತುರ್ತು ಔಷಧಿಗಾಗಿ ಜನರು ಪರದಾಟ ನಡೆಸುತ್ತಿದ್ದಾರೆ. ಅಲ್ಲದೇ ಕೆಲ ಆಸ್ಪತ್ರೆಗೆ ಹೊಂದಿಕೊಂಡಿರುವ ಮೆಡಿಕಲ್ ಶಾಪ್‍ಗಳು ಸಹ ಸಂಪೂರ್ಣವಾಗಿ ಸ್ಥಗಿತವಾಗಿದೆ.

    ಕರ್ನಾಟಕ ರಾಜ್ಯದಲ್ಲಿ ಒಟ್ಟು 24 ಸಾವಿರ ಮೆಡಿಕಲ್ ಹಾಗೂ ಬೆಂಗಳೂರಿನಲ್ಲಿ ಆರೂವರೆ ಸಾವಿರಕ್ಕೂ ಹೆಚ್ಚು ಮೆಡಿಕಲ್ ಶಾಪ್‍ಗಳು ಬಂದ್ ಆಗಲಿದೆ. ಇನ್ನು ದೇಶಾದ್ಯಂತ ಸುಮಾರು 85 ಲಕ್ಷ ಮೆಡಿಕಲ್ ಶಾಪ್ ಗಳು ಸಹ ಬಂದ್ ಸಂಪೂರ್ಣ ಬೆಂಬಲ ಸೂಚಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಂದು ಮಧ್ಯ ರಾತ್ರಿಯಿಂದಲೇ ಮೆಡಿಕಲ್ ಶಾಪ್ ಬಂದ್- ಕೇಂದ್ರದ ವಿರುದ್ಧ ಪ್ರತಿಭಟನೆ ಯಾಕೆ?

    ಇಂದು ಮಧ್ಯ ರಾತ್ರಿಯಿಂದಲೇ ಮೆಡಿಕಲ್ ಶಾಪ್ ಬಂದ್- ಕೇಂದ್ರದ ವಿರುದ್ಧ ಪ್ರತಿಭಟನೆ ಯಾಕೆ?

    ಬೆಂಗಳೂರು: ಇ-ಫಾರ್ಮಸಿ ವ್ಯವಸ್ಥೆ ಜಾರಿ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಮೆಡಿಕಲ್ ಶಾಪ್ ಸಂಘಟನೆಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ಮಧ್ಯರಾತ್ರಿಯ ವರೆಗೆ 24 ಗಂಟೆಗಳ ಕಾಲ ಕಾರ್ಯನಿರ್ವಹಿಸದಿರಲು ತೀರ್ಮಾನಿಸಿದೆ.

    ದೇಶದ್ಯಾಂತ ಒಂದು ದಿನ ಬಂದ್ ಮಾಡಲು ಅಖಿಲ ಭಾರತ ಔಷಧಿ ಮಾರಾಟ ವ್ಯಾಪಾರಿಗಳ ಸಂಘ (ಎಐಒಸಿಡಿ) ಕರೆ ನೀಡಿದೆ. ರಾಜ್ಯಾದ್ಯಂತ ಒಟ್ಟು 24 ಸಾವಿರ ಮೆಡಿಕಲ್ ಹಾಗೂ ಬೆಂಗಳೂರಿನಲ್ಲಿ ಆರೂವರೆ ಸಾವಿರಕ್ಕೂ ಹೆಚ್ಚು ಮೆಡಿಕಲ್ ಶಾಪ್‍ಗಳು ಬಂದ್ ಆಗಲಿದೆ.

    ಬಂದ್ ನಿಂದ ರೋಗಿಗಳಿಗೆ ಉಂಟಾಗಬಹುದಾದ ಅನಾನುಕೂಲಗಳ ಗಮನಿಸಿ ಆಸ್ಪತ್ರೆಯ ಆವರಣ ಹಾಗೂ ನರ್ಸಿಂಗ್ ಹೋಂಗಳ ಬಳಿ ಇರುವ ಮೆಡಿಕಲ್ ಶಾಪ್ ಗಳಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಕರ್ನಾಟಕದಲ್ಲಿಯೂ ಮೆಡಿಕಲ್ ಸಂಘಟನೆಯ ಬೆಂಬಲ ವ್ಯಕ್ತವಾಗಿದ್ದು, ಕರ್ನಾಟಕ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಅಸೋಸಿಯೇಷನ್ ಬೆಂಬಲ ನೀಡಿದೆ. ಆದರೆ ಬಂದ್ ಗೆ ಸುವರ್ಣ ಕರ್ನಾಟಕ ಕೆಮಿಸ್ಟ್ ಅಸೋಸಿಯೇಷನ್ ಬೆಂಬಲ ಇಲ್ಲ ನೀಡಿಲ್ಲ. ಇದರಿಂದ ಕರ್ನಾಟಕದಲ್ಲಿ ಯಾವ ಮಟ್ಟಿಗೆ ಬಂದ್ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.

    ಈ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಕರ್ನಾಟಕ ಕೆಮಿಸ್ಟ್ ಅಂಡ್ ಡ್ರಗಿಸ್ಟ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ರಘುನಾಥ್ ಸಿಂಗ್ ಅವರು, ಕೇಂದ್ರ ಸರ್ಕಾರ ಇ-ಫಾರ್ಮಸಿ ವ್ಯವಸ್ಥೆ ಜಾರಿ ಮಾಡಲು ಸಿದ್ಧತೆ ನಡೆಸಿದ್ದು, ನಮಗೇ 45 ದಿನಗಳ ಕಾಲ ಸಮಯವಕಾಶ ನೀಡಿದ್ದಾರೆ. ಆದರೆ ಈ ಕರಡಿನಲ್ಲಿ ಸಾಕಷ್ಟು ಲೋಪದೋಷಗಳಿದ್ದು, ಔಷಧಿಗಳ ಕುರಿತು ಸರಿಯಾದ ಮಾಹಿತಿ ಇಲ್ಲದೇ ವಿತರಣೆ ನಡೆಲಿದೆ. ಸಾರ್ವಜನಿಕರು ಆನ್ ಲೈನ್ ಮೂಲಕ ಖರೀದಿ ಮಾಡುವುದರಿಂದ ಅದರ ಪ್ರಮಾಣ, ಮಾಹಿತಿ, ಗುಣಮಟ್ಟ, ಔಷಧಿ ಪೂರೈಸಿದ ಮೂಲ ಯಾವುದರ ಬಗ್ಗೆಯೂ ಮಾಹಿತಿ ಲಭಿಸುವುದಿಲ್ಲ ಎಂದು ತಿಳಿಸಿದರು.

    ದೇಶದಲ್ಲಿ ಯುವ ಜನತೆಯೇ ಹೆಚ್ಚಾಗಿದ್ದು ಔಷಧಿಗಳನ್ನು ಆನ್ ಲೈನ್ ಮೂಲಕ ಪೂರೈಕೆ ಮಾಡುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡಿ ದೂರುಪಯೋಗ ಮಾಡಿಕೊಳ್ಳುವ ಅವಕಾಶ ಹೆಚ್ಚು. ಅಲ್ಲದೇ ವಿಶ್ವದ ಯಾವುದೇ ರಾಷ್ಟ್ರದಲ್ಲಿ ಇಂತಹ ವ್ಯವಸ್ಥೆ ಜಾರಿ ಮಾಡಿಲ್ಲ. ಇ-ಫಾರ್ಮಸಿ ಮಾಡುವವರಿಗೆ ಯಾವುದೇ ಕಾನೂನು ನಿಯಮಗಳು ಇಲ್ಲ. 2 ವರ್ಷಕ್ಕೆ ಒಮ್ಮೆ ಮಾತ್ರ ಸರ್ಕಾರ ಅಧಿಕಾರಿಗಳು ಪರಿಶೀಲನೆ ನಡೆಸಲು ಅವಕಾಶ ನೀಡಿದ್ದಾರೆ. ಇದರಿಂದ ಯಾವುದೇ ಪ್ರಯೊಜನ ಉಂಟಾಗುವುದಿಲ್ಲ. ಅಲ್ಲದೇ ಮೆಡಿಸನ್ ನಲ್ಲಿ ಸ್ಟೋರೆಜ್ ವ್ಯವಸ್ಥೆ ಹಾಗೂ ಶೆಡ್ಯೂಲ್ ಎಚ್, ಎಕ್ಸ್ ಸೇರಿದಂತೆ ಹಲವು ಔಷಧಿಗಳನ್ನು ವೈದ್ಯರ ಸಲಹೆ ಚೀಟಿ ಇದ್ದರೆ ಮಾತ್ರ ನೀಡಬೇಕು. ಆದರೆ ಇ-ಫಾರ್ಮಸಿಯಲ್ಲಿ ಇದಕ್ಕೆ ಅವಕಾಶವಿಲ್ಲ. ಈ ಎಲ್ಲಾ ಕಾರಣಗಳಿಂದ ದೇಶದ್ಯಾಂತ ಬಂದ್ ಮಾಡಲು ತೀರ್ಮಾನಿಸಲಾಗಿದೆ ಎಂದರು.

    ದೇಶದ್ಯಾಂತ ಮೆಡಿಕಲ್ ಶಾಪ್ ಗಳ ವ್ಯವಸ್ಥೆಯಲ್ಲಿ ಸುಮಾರು 1.5 ಕೋಟಿ ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಇ-ಫಾರ್ಮಸಿಗೆ ಅವಕಾಶ ನೀಡುವುದರಿಂದ ಹೆಚ್ಚಿನ ಜನರು ಉದ್ಯೋಗ ಕಳೆದುಕೊಳ್ಳುವ ಅವಕಾಶವಿದೆ. ಕೇಂದ್ರ ಸರ್ಕಾರದ ವಿರುದ್ಧ ನಾಳೆ ಬೆಂಗಳೂರಿನಲ್ಲಿ ಯಾವುದೇ ಪ್ರತಿಭಟನಾ ರ್‍ಯಾಲಿ ಇರುವುದಿಲ್ಲ. ದೆಹಲಿಯ ಜಂತರ್ ಮಂತರ್ ನಲ್ಲಿ ಮಾತ್ರ ಬೃಹತ್ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ ಎಂದರು.

    ಆನ್‍ಲೈನಲ್ಲಿ ಔಷಧಿಗಳ ಮಾರಾಟ ಕಲ್ಪಿಸಲು ಕೇಂದ್ರ ಸರ್ಕಾರ ಇ ಫಾರ್ಮಾಸಿ ಗಳನ್ನು ಕಾನೂನು ಬದ್ಧಗೊಳಿಸಲು ಸಿದ್ಧತೆ ನಡೆಸಿದೆ. ಶೆಡ್ಯೂಲ್ 10ರ ಪಟ್ಟಿಯಲ್ಲಿ ಸೂಚಿಸಲಾಗಿರುವ ನಿದ್ರೆ, ಉದ್ವೇಗ, ಉದ್ರೇಕ, ಖಿನ್ನತೆ ಮತ್ತು ಒತ್ತಡ ನಿವಾರಿಸುವ ಔಚಧಿ ಮಾರಾಟಕ್ಕೆ ಅವಕಾಶವಿಲ್ಲ. ಅಲ್ಲದೇ ವೈದ್ಯರ ಸಲಹೆ ಇಲ್ಲದೆ ಔಷಧ ಮಾರಾಟ ಮಾಡುವಂತಿಲ್ಲ. ಔಷಧಿ ಮಾರಾಟ ಮಾಡುವ ಮುನ್ನ ವೈದ್ಯರ ಸಲಹೆ ಚೀಟಿ ಪಡೆಯವುದು ಕಡ್ಡಾಯ. ಔಷಧ ಮಾರಾಟ ಮಾಡಿದ ಸಮಗ್ರ ಮಾಹಿತಿಯನ್ನು ಇ-ಫಾರ್ಮಸಿ ಪೋರ್ಟಲ್‍ನಲ್ಲಿ ಅಪ್‍ಲೋಡ್ ಮಾಡುವುದು ಕಡ್ಡಾಯವಾಗಿದೆ. ಇ-ಫಾರ್ಮಸಿ ಮಾರಾಟಕ್ಕೆ ಅವಕಾಶ ಕಲ್ಪಿಸಲು 1945ರ ಔಷಧ ಮತ್ತು ಸೌಂದರ್ಯ ವರ್ಧಕ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡಲು ಸಿದ್ಧತೆ ನಡೆದಿದೆ.

    ಕೇಂದ್ರದ ಅಧಿಸೂಚನೆಯಲ್ಲಿ ಏನಿದೆ:
    ಆನ್ ಲೈನ್ ಮಾರಾಟ ವ್ಯವಸ್ಥೆ ಮೂಲಕ ಔಷಧ ಮಾರಾಟ, ವಿತರಣೆ, ಸಂಗ್ರಹ, ಸರಬರಾಜು ವಹಿವಾಟು ನಡೆಸಲು ಇ-ಫಾರ್ಮಸಿ ವ್ಯವಸ್ಥೆಗೆ ಅವಕಾಶ ನೀಡಲಾಗಿದ್ದು, ಕಡಿಮೆ ಗುಣಮಟ್ಟದ ಔಷಧಿ ಪೂರೈಕೆ ಮಾಡಿದರೆ ರಾಜ್ಯ ಔಷಧಿ ನಿಯಂತ್ರಣ ಅಧಿಕಾರಿಗಳಿಗೆ ನೇರವಾಗಿ ದೂರು ಸಲ್ಲಿಸಬಹುದಾಗಿದೆ. ಈ ಮೂಲಕ ಔಷಧಿ ಖರೀದಿ ಮಾಡುವವರು ಪರಿಹಾರ ಪಡೆಯಬಹುದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸರ್ಕಾರಿ ಉದ್ಯೋಗದ ಮುಂಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ: ಸುಪ್ರೀಂ

    ಸರ್ಕಾರಿ ಉದ್ಯೋಗದ ಮುಂಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ: ಸುಪ್ರೀಂ

    ನವದೆಹಲಿ: ಸರ್ಕಾರಿ ಉದ್ಯೋಗದ ಮುಂಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ.

    ಎಸ್‍ಸಿ/ಎಸ್‍ಟಿ ಸಮುದಾಯದ ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ಕೋರಿ ಕೇಂದ್ರ ಸರ್ಕಾರ ಮಾಡಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಬಡ್ತಿ ಮೀಸಲು ಸಂಬಂಧ ಎಂ.ನಾಗರಾಜು ಪ್ರಕರಣದಲ್ಲಿ 2006ರಲ್ಲಿ ಕೋರ್ಟ್ ನೀಡಿದ್ದ ತೀರ್ಪನ್ನು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಎತ್ತಿ ಹಿಡಿದಿದೆ. ಅಷ್ಟೇ ಅಲ್ಲದೇ ಈ ತೀರ್ಪನ್ನು ಏಳು ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠಕ್ಕೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

    ಎಸ್‍ಸಿ, ಎಸ್‍ಟಿ ನೌಕರರ ಮುಂಬಡ್ತಿ ಕುರಿತು ಎಂ ನಾಗರಾಜ್ ಪ್ರಕರಣದ ಮರು ಪರಿಶೀಲನೆ ಅಗತ್ಯವಿಲ್ಲ. ಹಿಂದುಳಿದವರು ಎಂದು ಹೇಳಲು ಮಾಹಿತಿ ಸಂಗ್ರಹ ಅಗತ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಕೋರ್ಟ್ ಆದೇಶದಿಂದ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯುಂಟಾಗಿದೆ.

    2006ರ ತೀರ್ಪು ಮರುಪರಿಶೀಲಿಸುವಂತೆ ಮತ್ತು ಅನಗತ್ಯ ಷರತ್ತುಗಳನ್ನು ರದ್ದುಪಡಿಸುವಂತೆ ಕೆಂದ್ರ ಸರ್ಕಾರ ಮತ್ತು ಇತರೆ ರಾಜ್ಯ ಸರ್ಕಾರಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಆಗಸ್ಟ್ 30ರಂದು ನಡೆಸಿ ತೀರ್ಪನ್ನು ಸೆ.26ಕ್ಕೆ ಕಾಯ್ದಿರಿಸಿತ್ತು.

    ಬಡ್ತಿ ನೌಕರರ ಜೇಷ್ಠ್ಯತೆ ನಿರ್ಣಯ ಕಾಯ್ದೆ -2002 ಪ್ರಶ್ನಿಸಿ ರಾಜ್ಯದ ಎಂ.ನಾಗರಾಜು ಎನ್ನುವವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‍ನ ಏಳು ಸದಸ್ಯರ ಪೀಠ, ಬಡ್ತಿ ಮೀಸಲಾತಿ ನೀಡುವುದೇ ಆದರೆ ನೌಕರರ ದಕ್ಷತೆಯನ್ನು ಪರಿಗಣಿಸಬೇಕು. ಎಸ್‍ಸಿ ಸಮುದಾಯಕ್ಕೆ ಶೇಕಡಾ 18ರಷ್ಟು ಮೀಸಲಾತಿ ನೀಡಬೇಕು ಮತ್ತು ಒಟ್ಟು ಹಿಂದುಳಿದಿರುವಿಕೆ ಮಾಹಿತಿ ಪರಿಗಣಿಸಬೇಕು ಎಂದು 2006ರಲ್ಲಿ ತೀರ್ಪು ನೀಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೋದಿ ಹೆಸರನ್ನು ಎತ್ತಿದ್ದಕ್ಕೆ ಬಿಎಸ್‍ವೈಗೆ ಲೆಹರ್ ಸಿಂಗ್ ಟಾಂಗ್

    ಮೋದಿ ಹೆಸರನ್ನು ಎತ್ತಿದ್ದಕ್ಕೆ ಬಿಎಸ್‍ವೈಗೆ ಲೆಹರ್ ಸಿಂಗ್ ಟಾಂಗ್

    ಬೆಂಗಳೂರು: ಪ್ರತಿಪಕ್ಷಗಳನ್ನು ಹೆದರಿಸಲು ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ಹೆಸರು ಬಳಕೆ ಮಾಡುವಂತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಲೆಹರ್ ಸಿಂಗ್ ಸಿರೋಯಾ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

    ಮಾಧ್ಯಮಗಳಿಗೆ ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು, ಪ್ರತಿ ವಿಷಯಕ್ಕೂ ಪ್ರಧಾನಿ ಮೋದಿ ಅಥವಾ ಕೇಂದ್ರೀಯ ಸಂಸ್ಥೆಗಳ ಹೆಸರನ್ನು ಎಳೆದು ತರುವ ಅಧಿಕಾರ ಪಕ್ಷದ ಯಾರೊಬ್ಬರಿಗೂ ಇಲ್ಲ ಎಂದಿದ್ದಾರೆ.

    ಬಿಎಸ್‍ವೈ ಹೇಳಿದ್ದು ಏನು?
    ಶಿವರಾಮ ಕಾರಂತ ಬಡಾವಣೆ ಬಗ್ಗೆ ತನಿಖೆ ಮಾಡಿ, ಸತ್ಯ ಜನತೆಗೆ ಗೊತ್ತಾಗಲಿ. ಅದನ್ನು ಬಿಟ್ಟು ಧಮಕಿ ಹಾಕಿದರೆ ಏನು ನಡೆಯಲ್ಲ. ದೇವೇಗೌಡರು ಹಾಗೂ ಕುಮಾರಸ್ವಾಮಿ ಕುಟುಂಬ ಮೈಸೂರಿನಲ್ಲಿ ಎಷ್ಟು ಸೈಟ್ ಮಾಡಿಕೊಂಡಿದೆ ಎಂಬುದು ಚೆನ್ನಾಗಿ ಗೊತ್ತಿದೆ. ಎಲ್ಲವನ್ನೂ ದಾಖಲೆ ಸಮೇತ ಹೊರಕ್ಕೆ ಇಡುತ್ತೇನೆ. ಇಲ್ಲಿ ನಿಮ್ಮ ಅಧಿಕಾರವಿರಬಹುದು ಆದರೆ ಕೇಂದ್ರದಲ್ಲಿ ನಮ್ಮ ಅಧಿಕಾರ ಇದೆ. ಯಾವಾಗ ಏನು ಮಾಡುಬೇಕು ಎಂಬುದು ನಿಮಗಿಂತ ಚೆನ್ನಾಗಿ ನಮಗೆ ಗೊತ್ತು ಎಂದು ಕುಮಾರಸ್ವಾಮಿ ವಿರುದ್ಧ ಗುಡುಗಿದ್ದರು. ಇದನ್ನು ಓದಿ: ಸಿಎಂ ಎಚ್‍ಡಿಕೆ ವಿರುದ್ಧ ಬಿಜೆಪಿಯ ತಾಜ್ ಮೇಲಿನ ದಂಗೆಯ ಇನ್ ಸೈಡ್ ಸ್ಟೋರಿ ಇಲ್ಲಿದೆ

    ಲೆಹರ್ ಸಿಂಗ್ ಹೇಳಿಕೆಯಲ್ಲಿ ಏನಿದೆ?
    ನರೇಂದ್ರ ಮೋದಿ ಅವರು ಎರಡನೇ ಬಾರಿ ಮತ್ತೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವುದನ್ನು ನಾವು ಖಚಿತಪಡಿಸಿಕೊಳ್ಳಲೇಬೇಕು. ಇದಕ್ಕಾಗಿ 2014ರ ಲೋಕಸಭಾ ಚುನಾವಣೆಗಿಂತ ಈ ಬಾರಿ ಹೆಚ್ಚು ಸ್ಥಾನಗಳನ್ನು ಗಳಿಸಿ, ಬಹುಮತ ಪಡೆಯಲೇ ಬೇಕು. ದಕ್ಷಿಣ ಭಾರತದಲ್ಲಿ ಬಿಜೆಪಿ ಬಲಿಷ್ಟವಾಗಿರುವುದು ಕರ್ನಾಟಕದಲ್ಲಿ. ಹೀಗಾಗಿ ನನಗೆ ಪ್ರತಿಯೊಂದು ಲೋಕಸಭಾ ಕ್ಷೇತ್ರವೂ ಮಹತ್ವದ್ದಾಗಿದೆ.

    ಲೋಕಸಭಾ ಚುನಾವಣೆ ಸಿದ್ಧತೆಯಲ್ಲಿರುವ ಪಕ್ಷದ ಕೇಂದ್ರಿಯ ನಾಯಕತ್ವದ ಗಮನವೆಲ್ಲವೂ ಚುನಾವಣಾ ಕಾರ್ಯತಂತ್ರ, ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮತ್ತು ಈ ಸಮರಕ್ಕೆ ಕಾರ್ಯಕರ್ತರನ್ನು ಸಿದ್ಧಗೊಳಿಸುವಲ್ಲಿ ನಿರತರಾಗಿದ್ದಾರೆ. ಇತ್ತ ಕರ್ನಾಟಕದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಅವರ ಗಮನ ವಿಚಲಿತಗೊಳ್ಳದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಗೋವಾ ರಾಜ್ಯದಲ್ಲಿ ರಾಜಕೀಯ ಸವಾಲುಗಳನ್ನು ಎದುರಿಸಬೇಕಿದೆ. ಜೊತೆಗೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಗಢ್ ಮತ್ತು ತೆಲಂಗಾಣ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಸಿದ್ಧತೆ ನಾಯಕರು ತೊಡಗಿಕೊಂಡಿದ್ದಾರೆ. ಇದನ್ನು ಓದಿ: `ಆ ದಿನ’ ನೀವು ಬೆಂಗಳೂರಿನಲ್ಲೇ ಇರಿ, ಯಾವುದೇ ಕಾರಣಕ್ಕೂ ಮಿಸ್ ಆಗಬಾರದು- ಬಿಎಸ್‍ವೈ

    ರಾಜ್ಯದಲ್ಲಿ ನಾವು ಪ್ರತಿಪಕ್ಷಗಳನ್ನು ಎದುರಿಸುವಾಗ, ಎಲ್ಲದಕ್ಕೂ ಪ್ರಧಾನ ಮಂತ್ರಿಗಳ ಹಾಗೂ ಕೇಂದ್ರ ಸರ್ಕಾರದ ಹೆಸರನ್ನು ಎಳೆದು ತರಲಾಗದು. ನಮ್ಮ ಸಣ್ಣ ಉದ್ದೇಶಗಳಿಗಾಗಿ ಪ್ರಧಾನಿ ಹೆಸರನ್ನು ಬಳಸಿ, ಅವರ ಘನತೆಯನ್ನು ಕಡಿಮೆ ಮಾಡುವುದಾಗಲಿ, ಕೇಂದ್ರ ಸರ್ಕಾರ ಮುಯ್ಯಿ ತೀರಿಸಲಿದೆ ಎನ್ನುವಂತೆ ಬಿಂಬಿಸುವುದಾಗಲಿ ಮಾಡಬಾರದು. ಅಲ್ಲದೆ ಹೀಗೆ ಮಾಡುವ ಅಧಿಕಾರ ಪಕ್ಷದ ಯಾರಿಗೂ ನೀಡಿಲ್ಲ ಎನ್ನುವುದು ನನ್ನ ಭಾವನೆಯಾಗಿದೆ. ಕಾನೂನನ್ನು ಅತಿಕ್ರಮಿಸಿದರು ಯಾರೇ ಇರಲಿ, ಈ ದೇಶದ ಕಾನೂನಿನ ಅನ್ವಯವೇ ಪರಿಣಾಮವನ್ನೂ ಎದುರಿಸಬೇಕಾಗುತ್ತದೆ. ಹೊರತು ಯಾರೋ ವ್ಯಕ್ತಿಗಳ ಅಭಿಲಾಷೆ ಅಥವಾ ಬಯಕೆಗಳಿಗೆ ತಕ್ಕಂತೆ ಅಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸಿಹಿ ಸುದ್ದಿ ನೀಡಿದ ಕುಮಾರಣ್ಣ-ಲೀಟರ್ ಪೆಟ್ರೋಲ್, ಡೀಸೆಲ್‍ಗೆ 2 ರೂ. ಇಳಿಕೆ

    ಸಿಹಿ ಸುದ್ದಿ ನೀಡಿದ ಕುಮಾರಣ್ಣ-ಲೀಟರ್ ಪೆಟ್ರೋಲ್, ಡೀಸೆಲ್‍ಗೆ 2 ರೂ. ಇಳಿಕೆ

    ಕಲಬುರಗಿ: ದಿನನಿತ್ಯ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ದರ ಏರಿಕೆಯಾಗುತ್ತಿದೆ. ಸಾರ್ವಜನಿಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ರೇಟ್ ಮೇಲಿನ ದರ ಕಡಿತಗೊಳಿಸುತ್ತಿದೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಕಲಬುರಗಿಯಲ್ಲಿ ಹೇಳಿದ್ದಾರೆ.

    ಸಮ್ಮಿಶ್ರ ಸರ್ಕಾರ ರಚನೆ ಬಳಿಕ 40 ಸಾವಿರ ಕೋಟಿ ರೂ. ಮೊತ್ತದಷ್ಟು ರೈತರ ಸಾಲ ಮನ್ನಾ ಘೋಷಿಸಿದ್ದ ಎಚ್‍ಡಿಕೆ, ಅದಕ್ಕಾಗಿ ಹಣ ಹೊಂದಿಸಲು ಸೆಸ್ ಹೆಚ್ಚಿಸಿದ್ದರು. ಬಜೆಟ್ ನಲ್ಲಿ ಕುಮಾರಸ್ವಾಮಿ ಪೆಟ್ರೋಲ್ ಮೇಲಿನ ಸುಂಕವನ್ನು ಶೇ.30 ರಿಂದ ಶೇ.32ಕ್ಕೆ ಹೆಚ್ಚಿಸಿದ್ದರೆ ಡೀಸೆಲ್ ಮೇಲಿನ ಸುಂಕವನ್ನು ಶೇ.19 ರಿಂದ ಶೇ.21ಕ್ಕೆ ಏರಿಸಿದ್ದರು. ಆದರೆ ಬಂದ್ ದಿನವೇ ಸೆಸ್ ಇಳಿಸುವ ಸುಳಿವನ್ನು ನೀಡಿದ್ದರು. ಇದರಂತೆ ಲೀಟರ್ ಪೆಟ್ರೋಲ್, ಡೀಸೆಲ್‍ಗೆ 2 ರೂ ಇಳಿಕೆಯಾಗಲಿದೆ.

    ನೆರೆರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಸರ್ಕಾರ ವಿಧಿಸುವ ಸೆಸ್ ಕಡಿಮೆಯಾದರೂ ತೈಲಬೆಲೆ ಹೆಚ್ಚಳದಿಂದ ಜನಸಾಮಾನ್ಯರಿಗೆ ಹೊರೆಯಾಗಿರುವ ಕಾರಣ ಸೆಸ್ ಕಡಿಮೆ ಮಾಡಲು ಸಿಎಂ ತೀರ್ಮಾನಿಸಿದ್ದಾರೆ. ಇತ್ತ ತೈಲ ಬೆಲೆ ನಿತ್ಯ ಹೆಚ್ಚಾಗುತ್ತಿದ್ದು ಇಂದು ಕೂಡ ಲೀಟರ್ ಪೆಟ್ರೋಲ್‍ಗೆ 15 ಪೈಸೆ, ಡೀಸೆಲ್ 6 ಪೈಸೆಯಷ್ಟು ಹೆಚ್ಚಳವಾಗಿದೆ.

    ರಾಜಸ್ಥಾನ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ ಸರ್ಕಾರದ ನಡೆಯನ್ನು ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಅನುಸರಿಸಿದ್ದು ರಾಜ್ಯದಲ್ಲೂ ಪೆಟ್ರೋಲ್ ಡೀಸೆಲ್ ದರ ಇಳಿಕೆ ಮಾಡಿದೆ. ಅಧಿಕೃತವಾಗಿ ಮಂಗಳವಾರ ಬೆಳಗ್ಗೆಯಿಂದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಇಳಿಕೆಯಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜ್ಯದ ಜನರಿಗೆ ಸೋಮವಾರ ಬಂಪರ್ ಗಿಫ್ಟ್?

    ರಾಜ್ಯದ ಜನರಿಗೆ ಸೋಮವಾರ ಬಂಪರ್ ಗಿಫ್ಟ್?

    ಬೆಂಗಳೂರು: ರಾಜಸ್ಥಾನ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಸರ್ಕಾರದ ನಡೆಯನ್ನು ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರ ಅನುಸರಿಸಿದ್ದು ರಾಜ್ಯದಲ್ಲೂ ಪೆಟ್ರೋಲ್ ಡೀಸೆಲ್ ದರ ಇಳಿಕೆಯಾಗುವ ಸಾಧ್ಯತೆಯಿದೆ.

    ಸಿಎಂ ಕುಮಾರಸ್ವಾಮಿ ಅವರು ಸೋಮವಾರದಿಂದ ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ರೇಟ್ ಮೇಲಿನ ಸೆಸ್ ಕಡಿತಗೊಳಿಸಿ ಬಂಪರ್ ಗಿಫ್ಟ್ ಕೊಡಲು ಮುಂದಾಗಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಸಮ್ಮಿಶ್ರ ರಚನೆ ಬಳಿಕ 40 ಸಾವಿರ ಕೋಟಿ ರೂ. ಮೊತ್ತದಷ್ಟು ರೈತರ ಸಾಲ ಮನ್ನಾ ಘೋಷಿಸಿದ್ದ ಹೆಚ್‍ಡಿಕೆ, ಅದಕ್ಕಾಗಿ ಹಣ ಹೊಂದಿಸಲು ಸೆಸ್ ಹೆಚ್ಚಿಸಿದ್ದರು. ಬಜೆಟ್ ನಲ್ಲಿ ಕುಮಾರಸ್ವಾಮಿ ಪೆಟ್ರೋಲ್ ಮೇಲಿನ ಸುಂಕವನ್ನು ಶೇ.30 ರಿಂದ ಶೇ.32ಕ್ಕೆ ಹೆಚ್ಚಿಸಿದ್ದರೆ ಡೀಸೆಲ್ ಮೇಲಿನ ಸುಂಕವನ್ನು ಶೇ.19 ರಿಂದ ಶೇ.21ಕ್ಕೆ ಏರಿಸಿದ್ದರು. ಆದರೆ ಬಂದ್ ದಿನವೇ ಸೆಸ್ ಇಳಿಸುವ ಸುಳಿವನ್ನು ನೀಡಿದ್ದರು. ಇದರಂತೆ ಲೀಟರ್ ಪೆಟ್ರೋಲ್, ಡೀಸೆಲ್‍ಗೆ 2 ರಿಂದ 3 ರೂ. ಇಳಿಕೆಯಾಗುವ ಸಾಧ್ಯತೆಯಿದೆ.

    ನೆರೆರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಸರ್ಕಾರ ವಿಧಿಸುವ ಸೆಸ್ ಕಡಿಮೆಯಾದರೂ ತೈಲಬೆಲೆ ಹೆಚ್ಚಳದಿಂದ ಜನಸಾಮಾನ್ಯರಿಗೆ ಹೊರೆಯಾಗಿರುವ ಕಾರಣ ಸೆಸ್ ಕಡಿಮೆ ಮಾಡಲು ಸಿಎಂ ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಇತ್ತ ತೈಲ ಬೆಲೆ ನಿತ್ಯ ಹೆಚ್ಚಾಗುತ್ತಿದ್ದು ಇಂದು ಕೂಡ ಲೀಟರ್ ಪೆಟ್ರೋಲ್‍ಗೆ 28 ಪೈಸೆ, ಲೀಟರ್ ಡೀಸೆಲ್‍ಗೆ 18 ಪೈಸೆ ಏರಿಕೆಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • `ಸ್ವಚ್ಛತೆಯೇ ಸೇವೆ’ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

    `ಸ್ವಚ್ಛತೆಯೇ ಸೇವೆ’ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

    ನವದೆಹಲಿ: ಅಕ್ಟೋಬರ್ 2ಕ್ಕೆ ಸ್ವಚ್ಛ ಭಾರತ ಅಭಿಯಾನಕ್ಕೆ 4 ವರ್ಷವಾಗುವ ಹಿನ್ನೆಲೆಯಲ್ಲಿ ಇಂದಿನಿಂದ ಅಕ್ಟೋಬರ್ 2ರವರೆಗೆ ದೇಶಾದ್ಯಂತ ಸ್ವಚ್ಛತಾ ಅಭಿಯಾನ ನಡೆಸಲು ಮೋದಿ ಕರೆಕೊಟ್ಟಿದ್ದು, ಸ್ವಚ್ಛತೆಯೇ ಸೇವೆ ಎಂಬ ಕಾರ್ಯಕ್ರಮಕ್ಕೆ ದೆಹಲಿಯಲ್ಲಿ ಚಾಲನೆ ನೀಡಿದರು.

    ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮೋದಿ, 4 ವರ್ಷದಲ್ಲಿ ದೇಶದ್ಯಾಂತ ಸುಮಾರು 9 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಸ್ವಚ್ಛತೆಯಿಂದ ಆರೋಗ್ಯಯುತ ಭಾರತ ನಿರ್ಮಾಣ ಸಾಧ್ಯ. ಸ್ವಚ್ಛತಾ ಅಭಿಯಾನದಲ್ಲಿ ದೇಶದ ಹೆಣ್ಣುಮಕ್ಕಳ ಕೊಡುಗೆ ಅಪಾರ ಎಂದು ಹೇಳಿದರು.

    ಸ್ವಚ್ಛತಾ ಕಾರ್ಯಕ್ರಮದಲ್ಲಿ ಬಾಲಿವುಡ್ ಬಿಗ್‍ಬಿ ಅಮಿತಾಬ್ ಬಚ್ಚನ್, ಉದ್ಯಮಿ ರತನ್ ಟಾಟಾ ಸೇರಿದಂತೆ ಹಲವರು ಗಣ್ಯರು, ವಿದ್ಯಾರ್ಥಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಸಂವಾದ ನಡೆಸಿದರು.

    ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮೋದಿ, ಗಾಂಧೀಜಿ ಅವರ 152ನೇ ಜನ್ಮ ದಿನಾಚರಣೆಯನ್ನು ಅಕ್ಟೋಬರ್ 2ರಂದು ಆಚರಿಸಲಿದ್ದೇವೆ. ಅಂದೇ ಸ್ವಚ್ಛ ಭಾರತ ಅಭಿಯಾನಕ್ಕೆ 4 ವರ್ಷ ತುಂಬಲಿದ್ದು, ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದ. ಸ್ವಚ್ಛತಾ ಅಭಿಯಾನದ ಜೊತೆಗೆ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸುಧಾರಿಸಬೇಕು ಎಂದು ಮೋದಿ ತಿಳಿಸಿದ್ದಾರೆ.

    ಕೇಂದ್ರ ಸರ್ಕಾರದ ರೈಲ್ವೇ ಇಲಾಖೆಯ ಬಗ್ಗೆಯೂ ಟ್ವೀಟ್ ಮಾಡಿರುವ ಮೋದಿ, ಸ್ವಚ್ಛ ಭಾರತ ಅಭಿಯಾನದಲ್ಲಿ ರೈಲ್ವೇ ಇಲಾಖೆ ಉತ್ತಮ ಕೆಲಸ ಮಾಡಿದೆ ಎಂದು ತಿಳಿಸಿದ್ದು, ಹರ್ಯಾಣದ ರೇವಾರಿ ರೈಲ್ವೆ ನಿಲಾಣದ ಜನರೊಂದಿಗೆ ಮೋದಿ ಸಂವಾದ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಭಾರತ್ ಬಂದ್: ರಾಜ್ಯದಲ್ಲಿ ಎಲ್ಲಿ? ಏನಾಯ್ತು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

    ಭಾರತ್ ಬಂದ್: ರಾಜ್ಯದಲ್ಲಿ ಎಲ್ಲಿ? ಏನಾಯ್ತು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

    ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆಕೊಟ್ಟಿದ್ದ ಭಾರತ್ ಬಂದ್ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಯಶಸ್ವಿಯಾಗಿದ್ದು, ಬೆಳಗ್ಗೆಯಿಂದಲೂ ಸಾರಿಗೆ ಸಂಪರ್ಕ, ವಹಿವಾಟು ಇಲ್ಲದೇ ಅಸ್ತವ್ಯಸ್ತ ಗೊಂಡಿದ್ದ ಸಾರ್ವಜನಿಕ ಜೀವನ ಸಂಜೆ ವೇಳೆಗೆ ಸಹಜ ಸ್ಥಿತಿಯತ್ತ ಮರಳಿತು.

    ಬಂದ್ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳು, ಪಟ್ಟಣ ಹಾಗೂ ನಗರದಗಳಲ್ಲಿ ಪೊಲೀಸರು ಬೀಗಿ ಬಂದೋಬಸ್ತ್ ಅಳವಡಿಸಿದ್ದರು. ಇದರ ಹೊರತಾಗಿಯೂ ಕೆಲವೆಡೆ ಕಲ್ಲು ತೂರಾಟ ಸೇರಿದಂತೆ ಕೆಲ ಅಹಿತರಕರ ಘಟನೆಗಳು ವರದಿಯಾಗಿದೆ.

    ಹಲವು ನಗರಗಳಲ್ಲಿ ಬೆಳಂಬೆಳಗ್ಗೆ ಪ್ರತಿಭಟನೆಗಳು ಶುರುವಾದವು. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದವು. ಬೆಳಗ್ಗೆ 11 ಗಂಟೆಯಾಗುತ್ತಿದ್ದಂತೆ ಪ್ರತಿಭಟನೆಯ ಕಾವು ಏರತೊಡಗಿತು. ರಾಜ್ಯದೆಲ್ಲೆಡೆ ಗಲಾಟೆ, ಪ್ರತಿಭಟನೆಗಳು ನಡೆದವು. ಉಡುಪಿ ಸೇರಿದಂತೆ ಹಲವಡೆ ಗಲಾಟೆ ನಡೆದಿದ್ದು, ಕೆಲವು ಕಡೆ ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚಿಸಲಾಯಿತು. ಉಡುಪಿಯ ಬನ್ನಂಜೆಯಲ್ಲಿ ಅಂಗಡಿ ಬಂದ್ ಮಾಡಿಸುವ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು, ಬಿಜೆಪಿ ಜಿಲ್ಲಾಧ್ಯಕ್ಷ ಪ್ರಭಾಕರ್ ತಲೆಗೆ ಗಾಯವಾಗಿತ್ತು. ಬಳಿಕ ಗುಂಪು ಚದುರಿಸಲು ಎಸ್ಪಿ ಸೇರಿದಂತೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿ ನಿಯಂತ್ರಿಸಿದರು. ಸದ್ಯ ನಾಳೆ ಬೆಳಗ್ಗೆ 6 ಗಂಟೆವರೆಗೆ ಉಡುಪಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ಮೋದಿ ಅಧಿಕಾರಕ್ಕೆ ಬಂದ 4 ವರ್ಷ 5 ತಿಂಗಳಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ತೈಲ ದರ ಏರಿಕೆ ಬಗ್ಗೆ ಒಂದೂ ಮಾತು ಮಾತನಾಡಿಲ್ಲ. ಪೆಟ್ರೋಲ್ ಡೀಸೆಲ್ ಮೇಲೆ ತೆರಿಗೆ ದರ ಏರಿಸಿ 11 ಲಕ್ಷ ಕೋಟಿ ರೂ. ಹಣ ಪಡೆದಿದ್ದೀರಿ ಆ ಹಣ ಎಲ್ಲಿ ಹೋಯಿತು ಎಂದು ಲೋಕಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು. ಈ ಹೋರಾಟಕ್ಕೆ ಪ್ರಧಾನಿ ಮೋದಿ ಸ್ಪಂದಿಸದಿದ್ದರೆ ಮತ್ತೊಂದು ಬ್ರಹ್ಮಾಸ್ತ್ರ ಬಿಡಲಿದ್ದೇವೆ ಎಂದು ಮಾಜಿಸ ಸಚಿವ ಎಚ್.ಕೆ.ಪಾಟೀಲ್ ಎಚ್ಚರಿಸಿದರು. ಇಂದು ಕರೆ ನೀಡಿರುವ ಬಂದ್ ಚುನಾವಣೆ ಪ್ರೇರಿತದ ದುರುದ್ದೇಶದ ಬಂದ್ ಬಿಜೆಪಿ ರಾಜ್ಯಾಧ್ಯಲ್ಷ ಬಿಎಸ್ ಯಡಿಯೂರಪ್ಪ, ಉದಾಸಿ, ಪ್ರತಾಪ್ ಸಿಂಹ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.


    ಬೆಂಗಳೂರು ಸ್ತಬ್ಧ: ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಹೆಚ್ಚಿನ ಜನರು ಮನೆಯಿಂದ ಹೊರಬಾರದೇ ರಸ್ತೆಗಳು ಬಿಕೋ ಎನ್ನುತ್ತಿತ್ತು. ಮೈಸೂರು ಬ್ಯಾಂಕ್ ವೃತ್ತದಲ್ಲಿ ಕಾಂಗ್ರೆಸ್ ನಾಯಕರು ಎತ್ತಿನ ಗಾಡಿ ಏರಿ ಪ್ರತಿಭಟನೆ ನಡೆಸಿ ಬಳಿಕ ಪ್ರಧಾನಿ ಮೋದಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಟೌನ್‍ಹಾಲ್‍ನಿಂದ ರಾಜಭವನದವರೆಗೆ ಜೆಡಿಎಸ್ ಪಾದಯಾತ್ರೆ ನಡೆಸಲು ಯತ್ನಿಸಿತ್ತು. ಆದರೆ ಈ ಪ್ರತಿಭಟನೆಗೆ ರಾಜ್ಯ ಜೆಡಿಎಸ್ ಅಧ್ಯಕ್ಷರೇ ಗೈರಾಗಿದ್ದರು. ಪ್ರತಿ ಪ್ರತಿಭಟನ ಸ್ಥಳಕ್ಕೆ ಎಂಎಲ್‍ಸಿ ಶರವಣ ಕುದುರೆ ಏರಿ ಬಂದು ಗಮನ ಸೆಳೆದರು. ಮತ್ತೊಂದೆಡೆ ಕನ್ನಡ ಪರ ಸಂಘಟನೆಗಳಾದ ಕರವೇ ನಾರಾಯಣ ಗೌಡ ಬಣ ಮೌರ್ಯ ವೃತ್ತದಲ್ಲಿ, ಪ್ರವೀಣ್ ಕುಮಾಣ ಮೇಖ್ರಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಇಲ್ಲಿಯೂ ಪೊಲೀಸರು ಪ್ರತಿಭಟನಾಕಾರನ್ನು ತಡೆದರು. ಪ್ರತಿಭಟನೆ ವೇಳೆ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಎಮ್ಮೆ ಏರಿ ಪ್ರತಿಭಟಿಸಿದರು.

    ದುಪ್ಪಟ್ಟು ವಸೂಲಿ: ಬಂದ್ ಅನ್ನು ಬಂಡವಾಳ ಮಾಡಿಕೊಂಡ ಖಾಸಗಿ ಬಸ್‍ಗಳು ದುಪ್ಪಟ್ಟು ಹಣ ವಸೂಲಿ ಮಾಡಿದರೆ, ಓಲಾ, ಊಬರ್ ಕ್ಯಾಬ್ ಸಂಘದ ಸದಸ್ಯರು ಕಾರಿಗೆ ಹಗ್ಗ ಕಟ್ಟಿ ಎಳೆದು ಪ್ರತಿಭಟನೆ ನಡೆಸಿದರು. ಭಾರತ್ ಬಂದ್ ಕಾರಣ ಬೇರೆ ಊರಿಂದ ಬಂದ ಸಾರ್ವಜನಿಕರು ಬೆಂಗಳೂರು ಸೇರಿದಂತೆ ಹಲವು ಬಸ್ ಇಲ್ಲದೇ ಪರದಾಡಿದರು. ಮಧ್ಯಾಹ್ನ 3 ಗಂಟೆ ಬಳಿ ನಗರಗಳುಸ ಯಥಾ ಸ್ಥಿತಿಗೆ ತಲುಪಿತ್ತು. ಬಂದ್ ನಿಂದ ಬೆಳಗ್ಗೆ ಇಂದ ರಸ್ತೆಗಳಿಯದ ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಸಂಚಾರ ಆರಂಭವಾಯಿತು. ಮಾಲ್‍ಗಳು, ಚಿತ್ರಮಂದಿರಗಳು ಸಂಜೆ ವೇಳೆಗೆ ಪುನರ್ ಆರಂಭವಾದವು.

    https://www.youtube.com/watch?v=iYMBznDqMeQ