Tag: Central Government

  • ಆಧಾರ್‌ಗೆ ಒತ್ತಾಯಿಸಿದ್ರೆ ಬೀಳುತ್ತೆ, 1 ಕೋಟಿ ರೂ. ದಂಡ, 10 ವರ್ಷ ಜೈಲು!

    ಆಧಾರ್‌ಗೆ ಒತ್ತಾಯಿಸಿದ್ರೆ ಬೀಳುತ್ತೆ, 1 ಕೋಟಿ ರೂ. ದಂಡ, 10 ವರ್ಷ ಜೈಲು!

    ನವದೆಹಲಿ: ಗ್ರಾಹಕರಿಂದ ಒತ್ತಾಯ ಪೂರ್ವಕವಾಗಿ ಆಧಾರ್ ಕಾರ್ಡ್ ಸಲ್ಲಿಸುವಂತೆ ಒತ್ತಡ ಹೇರುವ ಸಂಸ್ಥೆಗಳಿಗೆ ಬರೋಬ್ಬರಿ 1 ಕೋಟಿ ರೂಪಾಯಿ ದಂಡ ಹಾಗೂ 10 ವರ್ಷ ಜೈಲು ಶಿಕ್ಷೆ ವಿಧಿಸಲು ಕೇಂದ್ರ ಸರ್ಕಾರ ಕಾನೂನು ತಿದ್ದುಪಡಿ ಮಾಡಲು ಮುಂದಾಗಿದೆ.

    ಬ್ಯಾಂಕ್ ಖಾತೆ ತೆರೆಯಲು ಮತ್ತು ಸಿಮ್ ಕಾರ್ಡ್ ಸಂಪರ್ಕ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಲ್ಲವೆಂಬ ಸುಪ್ರೀಂ ಕೋರ್ಟ್ ನಿರ್ಧಾರಕ್ಕೆ, ಕೇಂದ್ರ ಸರ್ಕಾರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‍ಎ) ಮತ್ತು ಇಂಡಿಯನ್ ಟೆಲಿಗ್ರಾಮ್ ಕಾಯ್ದೆ ತಿದ್ದುಪಡಿಗಾಗಿ ಸಿದ್ಧಗೊಂಡಿರುವ ಪ್ರಸ್ತಾವಿತ ಮಸೂದೆಗೆ ಸೋಮವಾರ ಕೇಂದ್ರ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ.

    ಇನ್ನು ಮುಂದೆ ಯಾವುದೇ ಬ್ಯಾಂಕ್ ಹಾಗೂ ಟೆಲಿಕಾಂ ಕಂಪನಿಗಳು ಬಲವಂತವಾಗಿ ಗ್ರಾಹಕರಿಂದ ಆಧಾರ್ ಮಾಹಿತಿಯನ್ನು ಪಡೆಯುವಂತಿಲ್ಲ. ಒಂದು ವೇಳೆ ಆಧಾರ್ ಕಾರ್ಡ್ ಬೇಕೇ ಬೇಕೆಂದು ಗ್ರಾಹಕರ ಮೇಲೆ ಒತ್ತಡ ಹೇರಲು ಮುಂದಾದರೆ ಅಂತವರ ವಿರುದ್ಧ ಭಾರೀ ದಂಡವನ್ನೇ ವಸೂಲಿ ಮಾಡುವ ಅಂಶಗಳು ಈ ಮಸೂದೆಯಲ್ಲಿದೆ.

    ಯಾವುದೇ ಬ್ಯಾಂಕಿನ ಖಾತೆ ತೆರೆಯಲು ಅಥವಾ ಹೊಸ ಸಿಮ್ ಕಾರ್ಡ್ ಕನೆಕ್ಷನ್ ಪಡೆಯಲು ಗ್ರಾಹಕರು ಆಧಾರ್ ಕಾರ್ಡ್ ನೀಡಲೇಬೇಕಿಲ್ಲ. ಒಂದು ವೇಳೆ ಬ್ಯಾಂಕ್ ಹಾಗೂ ಟೆಲಿಕಾಂ ಸಂಸ್ಥೆಗಳು ಆಧಾರ್ ಕಾರ್ಡ್ ನೀಡುವಂತೆ ಒತ್ತಾಯಿಸಿದರೆ ಅವರಿಗೆ 1 ಕೋಟಿ ರೂಪಾಯಿ ದಂಡ ಹಾಗೂ ಸಿಬ್ಬಂದಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ನೀಡಲು ಕೇಂದ್ರ ನಿರ್ಧರಿಸಿದೆ. ಇದಲ್ಲದೇ ಆಧಾರ್ ಮಾಹಿತಿಯನ್ನು ಸೋರಿಕೆ ಮಾಡಲು ಯತ್ನಿಸುವವರ ವಿರುದ್ಧ ಇದುವರೆಗೂ ಇದ್ದ 3 ವರ್ಷಗಳ ಜೈಲು ಶಿಕ್ಷೆಯ ಬದಲಾಗಿ, 10 ವರ್ಷಗಳ ಕಾಲ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಆಧಾರ್ ಕಾರ್ಡ್ ಬಗ್ಗೆ ಸುಪ್ರೀಂ ಹೇಳಿದ್ದೇನು?
    ಸರ್ಕಾರಿ ಸೌಲಭ್ಯಗಳ ಪಡೆಯಲು `ಆಧಾರ್’ ಬೇಕೋ ಅಥವಾ ಬೇಡವೋ ಎಂಬ ಗೊಂದಲಗಳಿಗೆ ಸೆಪ್ಟೆಂಬರ್ 26ರಂದು ಸುಪ್ರೀಂಕೋರ್ಟ್ ತೆರೆದಿತ್ತು. ಸಾರ್ವಜನಿಕಾ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎ ಕೆ ಸಿಕ್ರಿ, ಎ.ಎಂ.ಖಾನ್ವಿಲ್ಕರ್, ಅಶೋಕ್‍ಭೂಷಣ್ ಅವರನ್ನು ಒಳಗೊಂಡಿದ್ದ ಪೀಠ ಆಧಾರ್ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿ ಎತ್ತಿ ಹಿಡಿದಿತ್ತು.

    ಆಧಾರ್ ಮೇಲಿನ ದಾಳಿ ಸಂವಿಧಾನದ ಮೇಲೆ ದಾಳಿ ನಡೆಸಿದಂತೆ ಆಗುತ್ತದೆ. ಆಧಾರ್ ವಿಶಿಷ್ಟವಾಗಿರುವುದೇ ಉತ್ತಮವಾಗಿದ್ದು, ಈಗಾಗಲೇ ಆಧಾರ್ ಜನ ಸಾಮನ್ಯ ಬಳಿ ತಲುಪಿದ್ದು, ಅದು ದೇಶದ ಗುರುತಿನ ಪತ್ರವಾಗಿದೆ. ಈಗ ಆಧಾರ್ ವಿರೋಧಿಸಿದರೆ ಕೈಯಲ್ಲಿರುವ ಮಗುವನ್ನ ಎಸೆದಂತೆ. ಆಧಾರ್ ವಿರೋಧಿಸಿದರೆ, ಸಂವಿಧಾನವನ್ನೇ ವಿರೋಧಿಸಿದಂತೆ ಎಂದು ಪೀಠ ತಿಳಿಸಿತ್ತು.

    ಯಾವುದಕ್ಕೆ ಆಧಾರ್ ಬೇಕು..?
    1. ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಡ್ಡಾಯ.
    2. ಪ್ಯಾನ್, ಆದಾಯ ತೆರಿಗೆ (ಐಟಿ ರಿಟರ್ನ್ಸ್), ಆಸ್ತಿ ಖರೀದಿಗೆ ಆಧಾರ್ ಕಡ್ಡಾಯ.
    3. ಪ್ಯಾನ್ ನಂಬರ್ ಗೆ ಅಧಾರ್ ಕಡ್ಡಾಯವಾಗಿ ಲಿಂಕ್ ಮಾಡಲೇಬೇಕು.
    4. ಸರ್ಕಾರಕ್ಕೆ ಸಂಬಂಧಿಸಿದ ಎಲ್ಲ ವ್ಯವಹಾರಗಳಿಗೆ ಆಧಾರ್ ಕಡ್ಡಾಯ ಸಲ್ಲಿಸುವುದು.

    ಯಾವುದಕ್ಕೆ ಬೇಡ..?
    1. ಖಾಸಗಿ ಸಂಸ್ಥೆಗಳು ಆಧಾರ್ ಕೇಳುವಂತಿಲ್ಲ
    2. ಆಧಾರ್ ಮಾಹಿತಿ ಅಥವಾ ದತ್ತಾಂಶವನ್ನು 6 ತಿಂಗಳಕ್ಕೂ ಹೆಚ್ಚಿನ ಕಾಲ ಸಂಗ್ರಹಿಸಿಟ್ಟುಕೊಳ್ಳುವಂತಿಲ್ಲ.
    3. ಎಲ್ಲ ಬ್ಯಾಂಕ್‍ಗಳಿಗೆ ಆಧಾರ್ ಮಾಹಿತಿ ಕೊಡುವಂತಿಲ್ಲ.
    4. ಸೆಕ್ಷನ್ 7ರ ಪ್ರಕಾರ ಶಾಲೆಗಳ ಪ್ರವೇಶಾತಿ ವೇಳೆ ಆಧಾರ್ ಕೊಡುವ ಅಗತ್ಯವಿಲ್ಲ.
    5. ಸಿಬಿಎಸ್‍ಸಿ, ಯುಜಿಸಿ, ನೀಟ್ ಪರೀಕ್ಷೆಗಳಿಗೆ ಆಧಾರ್ ಕಡ್ಡಾಯವಲ್ಲ.
    6. ಸಿಮ್ ಖರೀದಿ, ಪೇಟಿಎಂ, ಫೋನ್ ಪೇ ಸೇರಿದಂತೆ ಡಿಜಿಟಲ್ ಪೇಮೆಂಟ್ ಆ್ಯಪ್ ಗಳಿಗೆ ಕಡ್ಡಾಯವಲ್ಲ.
    7. ಸೆಕ್ಷನ್ 2(ಬಿ) ಅಕ್ರಮ ವಲಸಿಗರಿಗೆ ಆಧಾರ್ ಕೊಡುವಂತಿಲ್ಲ.
    8. ಮೊಬೈಲ್ ಮತ್ತು ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವ ಅವಶ್ಯಕತೆಯಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಈಗ ಲಿಂಗಾಯತ ಧರ್ಮ ಹೋರಾಟ ಮಾಡಿದ್ರೆ ತಪ್ಪಾಗಿ ಅರ್ಥೈಸುತ್ತಾರೆ: ಎಂಬಿ ಪಾಟೀಲ್

    ಈಗ ಲಿಂಗಾಯತ ಧರ್ಮ ಹೋರಾಟ ಮಾಡಿದ್ರೆ ತಪ್ಪಾಗಿ ಅರ್ಥೈಸುತ್ತಾರೆ: ಎಂಬಿ ಪಾಟೀಲ್

    – ಡಿ.22ಕ್ಕೆ ಸಂಪುಟ ವಿಸ್ತರಣೆ ಖಚಿತ
    – ಲೋಕಸಭಾ ಚುನಾವಣೆಯ ನಂತರ ನಿರ್ಣಾಯಕ ಹೋರಾಟ

    ವಿಜಯಪುರ: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ವಿಚಾರವನ್ನು ಲೋಕಸಭೆ ಚುನಾವಣೆವರೆಗೆ ಶಾಂತವಾಗಿರಲು ನಿರ್ಧಾರ ಮಾಡಿದ್ದು, ಈಗ ಹೋರಾಟ ಮಾಡಿದರೆ ತಪ್ಪಾಗಿ ಅರ್ಥೈಸಲಾಗುತ್ತದೆ ಎಂದು ಮಾಜಿ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಬಿ ಪಾಟೀಲ್ ಅವರು, ಕೇಂದ್ರ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮ ಪ್ರಸ್ತಾವವನ್ನು ತಿರಸ್ಕರಿಸಿರುವುದು ಸಮಂಜಸವಲ್ಲ. ಈ ಕುರಿತು ಲೋಕಸಭಾ ಚುನಾವಣೆಯ ಬಳಿಕ ನಿರ್ಣಾಯಕ ಹೋರಾಟ ಮಾಡುತ್ತೇವೆ. ಈಗ ಹೋರಾಟ ಮಾಡಿದರೆ ಅದಕ್ಕೆ ಬೇರೆ ರೀತಿಯ ಅರ್ಥ ಕೊಡುತ್ತಾರೆ. ಈ ಹಿನ್ನೆಲೆ ಲೋಕಸಭೆ ಚುನಾವಣೆ ಬಳಿಕ ನಿರ್ಣಾಯಕ ಹೋರಾಟ ಮಾಡುವ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

    ಇದೇ ವೇಳೆ ಮಾಧ್ಯಮಗಳ ವಿರುದ್ಧ ಹರಿಹಾಯ್ದ ಎಂಬಿ ಪಾಟೀಲ್, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಲಿಂಗಾಯತ ಪ್ರತ್ಯೇಕ ಧರ್ಮದ ಹೇಳಿಕೆಯನ್ನು ತಿರುಚಿವೆ ಎಂದು ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದರು.

    ಡಿ.22 ಸಂಪುಟ: ಸಚಿವ ಸಂಪುಟ ಡಿ.22 ರಂದು ವಿಸ್ತರಣೆಯಾಗಲಿದೆ. ಈಗಾಗಲೇ ಸಮನ್ವಯ ಸಮಿತಿ ಸಭೆಯಲ್ಲಿ ಈ ಕುರಿತು ನಿರ್ಧಾರ ಮಾಡಲಾಗಿದೆ. ಸಂಪುಟ ವಿಸ್ತರಣೆ ವೇಳೆ ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎನ್ನುವ ಬೇಡಿಕೆ ಇಟ್ಟಿದ್ದೇನೆ. ಈ ಕುರಿತು ಅಸಮತೋಲನದ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದ್ದೇವೆ. ಅಲ್ಲದೇ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಗುಂಡೂರಾವ್ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೂ ಕೂಡ ಮನವರಿಕೆಯಾಗಿದೆ. ಸಮ್ಮಿಶ್ರ ಸರ್ಕಾರ ಐದು ವರ್ಷ ಅಧಿಕಾರ ಪೂರೈಸಲಿದ್ದು, ನಾವು ಬಸವ ಧರ್ಮದವರು, ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನೋಡುವವರಲ್ಲ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com

  • ಜಾಹೀರಾತಿಗಾಗಿ ಇಲ್ಲಿಯವರೆಗೆ ಎಷ್ಟು ಖರ್ಚಾಗಿದೆ: ಉತ್ತರ ಕೊಟ್ಟ ಕೇಂದ್ರ

    ಜಾಹೀರಾತಿಗಾಗಿ ಇಲ್ಲಿಯವರೆಗೆ ಎಷ್ಟು ಖರ್ಚಾಗಿದೆ: ಉತ್ತರ ಕೊಟ್ಟ ಕೇಂದ್ರ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಡಿ.7ರವರೆಗೆ ಜಾಹೀರಾತಿಗಾಗಿ ಒಟ್ಟು 5,200 ಕೋಟಿ ರೂಪಾಯಿಯನ್ನು ಖರ್ಚು ಮಾಡಿದೆ.

    ಜಾಹೀರಾತಿಗಾಗಿ ಸರ್ಕಾರ ಎಷ್ಟು ರೂಪಾಯಿ ಖರ್ಚು ಮಾಡಿದೆ ಎಂದು ಕೇಳಿದ ಪ್ರಶ್ನೆಗೆ ಕೇಂದ್ರ ವಾರ್ತಾ ಹಾಗೂ ಪ್ರಸಾರ ಇಲಾಖೆ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಈ ಉತ್ತರವನ್ನು ನೀಡಿದ್ದಾರೆ.

    2014 ರಿಂದ ಎನ್‍ಡಿಎ ಸರ್ಕಾರ ಇಲ್ಲಿಯವರೆಗೂ ಮುದ್ರಣ, ಎಲೆಕ್ಟ್ರಾನಿಕ್ ಹಾಗೂ ಇತರೆ ಮಾಧ್ಯಮಗಳು ಮತ್ತು ಹೊರ ಭಾಗದ ಪ್ರಚಾರಕ್ಕೆಂದು ಒಟ್ಟು 5,200 ಕೋಟಿ ರೂಪಾಯಿ ಖರ್ಚು ಮಾಡಿರುವುದಾಗಿ ತಿಳಿಸಿದ್ದಾರೆ.

    ಪ್ರಮುಖವಾಗಿ ಮುದ್ರಣ ಮಾಧ್ಯಮಕ್ಕೆ 2,282 ಕೋಟಿ ರೂ. ಆಡಿಯೋ ವಿಷ್ಯುಯಲ್ ಮಾಧ್ಯಮಕ್ಕೆ 2,212 ಕೋಟಿ ರೂ. ಹಾಗೂ ಹೊರಭಾಗದ ಪ್ರಚಾರಕ್ಕೆ 651 ಕೋಟಿ ರೂಪಾಯಿ ಖರ್ಚಾಗಿದೆ. 2014-15ರಲ್ಲಿ 978.98 ಕೋಟಿ ರೂ., 2015-16ರಲ್ಲಿ 1160.16 ಕೋಟಿ ರೂ., 2016-17ರಲ್ಲಿ 1,264.26 ಕೋಟಿ ರೂ., 2017-18ನೇ ಸಾಲಿನಲ್ಲಿ 1313.57 ಕೋಟಿ ಹಾಗೂ ಪ್ರಸಕ್ತ ಸಾಲಿನ ಡಿ.7ರವರೆಗೆ 527.96 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಲಮನ್ನಾ ನಿರೀಕ್ಷೆಯಲ್ಲಿದ್ದ ರೈತರಿಗೆ ಕೇಂದ್ರದಿಂದ ಬಿಗ್ ಶಾಕ್

    ಸಾಲಮನ್ನಾ ನಿರೀಕ್ಷೆಯಲ್ಲಿದ್ದ ರೈತರಿಗೆ ಕೇಂದ್ರದಿಂದ ಬಿಗ್ ಶಾಕ್

    ನವದೆಹಲಿ: ಪಂಚರಾಜ್ಯಗಳ ಚುನಾವಣೆಯ ಬಳಿಕ ರೈತರ ಬೇಡಿಕೆಗೆ ಮಣಿದು ಕೇಂದ್ರ ಸರ್ಕಾರ ಸಾಲಮನ್ನಾ ಮಾಡುತ್ತೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಮೋದಿ ಸರ್ಕಾರ ನಿರಾಸೆ ಮಾಡಿದೆ. ಯಾವುದೇ ಕಾರಣಕ್ಕೂ ರೈತ ಸಾಲಮನ್ನಾ ಮಾಡಲ್ಲ ಎಂದು ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವ ಪುರುಷೋತ್ತಮ್ ರೂಪಾಲಾ ಲಿಖಿತ ಹೇಳಿಕೆ ನೀಡಿದ್ದಾರೆ.

    ಲೋಕಸಭಾ ಸದನದಲ್ಲಿ ಲಿಖಿತ ರೂಪದಲ್ಲಿ ಸ್ಪಷ್ಟನೆ ನೀಡಿದ ಕೇಂದ್ರ ಸಚಿವ, ಸರ್ಕಾರ ರೈತರ ಆದಾಯ ಹೆಚ್ಚಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅದ್ದರಿಂದ ರೈತರ ಸಾಲಮನ್ನಾ ಮಾಡುವುದು ದೇಶದ ಆರ್ಥಿಕತೆಗೆ ಒಳ್ಳೆಯದಲ್ಲ. ಇದರಿಂದ ಬ್ಯಾಂಕ್‍ಗಳ ಮೇಲಿನ ಹೊರೆಯೂ ಹೆಚ್ಚಾಗುತ್ತದೆ. ಹೀಗಾಗಿ ರೈತರ ಸಾಲಮನ್ನಾ ಮಾಡುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

    ಶಿವಸೇನೆಯ ಭವನ ಗವಾಲಿ ಪಾಟೀಲ್ ಕೇಳಿದ ಪ್ರಶ್ನೆಗೆ ಕೇಂದ್ರ ಕೃಷಿ ಸಚಿವರು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. ರೈತರ ಸಾಲಮನ್ನಾ ಮಾಡಿದರೆ ಅವರು ಅದನ್ನೇ ಅಭ್ಯಾಸ ಮಾಡಿಕೊಳ್ಳುತ್ತಾರೆ. ಮತ್ತೆ ಮತ್ತೆ ಸಾಲಮನ್ನಾ ಮಾಡಲು ಬೇಡಿಕೆ ಹೆಚ್ಚಾಗುತ್ತದೆ. ಮುಂದಿನ ದಿನಗಳಲ್ಲಿ ಈ ರೀತಿಯ ಬೇಡಿಕೆಯನ್ನು ತಿರಸ್ಕರಿಸುವುದು ಕಷ್ಟವಾಗುತ್ತದೆ. ಅಷ್ಟೇ ಅಲ್ಲದೇ ಇದರಿಂದಾಗಿ ಬ್ಯಾಂಕ್ ಮೇಲಿನ ಒತ್ತಡ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.

    ಪಂಚರಾಜ್ಯ ಚುನಾವಣೆ ಬಳಿಕ ಕೇಂದ್ರ ಸರ್ಕಾರ ಸಾಲಮನ್ನಾ ಮಾಡುತ್ತೆ ಎಂಬ ನಿರೀಕ್ಷೆ ಹೆಚ್ಚಾಗಿತ್ತು, ಆದರೆ ಲೋಕಸಭಾ ಅಧಿವೇಶನದಲ್ಲೇ ಲಿಖಿತ ಹೇಳಿಕೆ ನೀಡಲಾಗಿದೆ. ಸದನದಲ್ಲಿ ಸ್ಪಷ್ಟ ಹೇಳಿಕೆ ನೀಡಿರುವ ಸರ್ಕಾರ ನಡೆ ಇನ್ನು ಮುಂದೆ ಯಾವುದೇ ಕಾರಣಕ್ಕೂ ಕೇಂದ್ರದಿಂದ ಸಾಲಮನ್ನಾ ನಿರೀಕ್ಷೆ ಹೊಂದಿರುವುದು ಬೇಡ ಎಂಬ ಸಂದೇಶವನ್ನು ರೈತರಿಗೆ ರವಾನೆ ಮಾಡಿದೆ.

    ಇತ್ತ ರಾಜ್ಯ ವಿಧಾನಸಭಾ ಚಳಿಗಾಲದ ಅಧಿವೇಶನದಲ್ಲಿ ಸಿಎಂ ಕುಮಾರಸ್ವಾಮಿ ತಮ್ಮ ಸಾಲಮನ್ನಾ ಯೋಜನೆ ಪ್ರಸ್ತಾಪ ಮಾಡಿ, ನಮ್ಮ ದಾರಿಗೆ ಬರಬೇಕು ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಮಿಳುನಾಡಿಗೆ ಕೈಮುಗಿದು ಮನವಿ ಮಾಡ್ತೇವೆ, ಮೇಕೆದಾಟು ಯೋಜನೆಗೆ ಅಡ್ಡಿಯಾಗ್ಬೇಡಿ : ಸಚಿವ ಡಿಕೆಶಿ

    ತಮಿಳುನಾಡಿಗೆ ಕೈಮುಗಿದು ಮನವಿ ಮಾಡ್ತೇವೆ, ಮೇಕೆದಾಟು ಯೋಜನೆಗೆ ಅಡ್ಡಿಯಾಗ್ಬೇಡಿ : ಸಚಿವ ಡಿಕೆಶಿ

    ಬೆಂಗಳೂರು: ಮೇಕೆದಾಟು ಯೋಜನೆ ಸಂಬಂಧ ಕೇಂದ್ರ ಜಲ ಆಯೋಗ ಸಮಗ್ರ ವರದಿ ಕೇಳಿದ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಅಧಿಕಾರಿಗಳ ಜೊತೆ ಮೇಕೆದಾಟು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ಸಂಗಮದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್, ಅಣೆಕಟ್ಟು ನಿರ್ಮಾಣದಿಂದ 4,980 ಹೆಕ್ಟೇರ್ ಪ್ರದೇಶ ಮುಳುಗಡೆಯಾಗಲಿದೆ. ಇದರಲ್ಲಿ 4,700 ಹೆಕ್ಟೇರ್ ಅರಣ್ಯ ಪ್ರದೇಶ ಹಾಗೂ 280 ಹೆಕ್ಟೇರ್ ರೆವೆನ್ಯೂ ಭೂಮಿಯಾಗಿದೆ. ಮೂರ್ನಾಲ್ಕು ಹಳ್ಳಿಗಳು ಮುಳುಗಡೆ ಆಗಲಿದೆ. ಕಾನೂನಿನ ಚೌಕಟ್ಟಿನಲ್ಲಿ ಅಣೆಕಟ್ಟು ನಿರ್ಮಾಣ ಮಾಡುತ್ತೇವೆ ಎಂದರು.

    ಇದೇ ವೇಳೆ ತಮಿಳುನಾಡಿನ ಅಧಿಕಾರಿಗಳೇ ಸ್ಥಳ ವೀಕ್ಷಣೆ ಮಾಡಲಿ ಎಂದ ಸಚಿವರು, ತಮಿಳುನಾಡಿಗೆ ಕೈಮುಗಿದು ಮನವಿ ಮಾಡುತ್ತೇವೆ. ಈ ಯೋಜನೆಗೆ ಅಡ್ಡಿಯಾಗಬೇಡಿ ಎಂದು ಮನವಿ ಮಾಡಿದರು.

    ಇತ್ತ ತಮಿಳುನಾಡು ಬೆನ್ನಲ್ಲೇ ಮೇಕೆದಾಟು ಯೋಜನೆಗೆ ಪುದುಚೇರಿ ಕೂಡ ಕ್ಯಾತೆ ತೆಗೆದಿದ್ದು, ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ ಪುದುಚೇರಿಯಲ್ಲಿರುವ ಕಾಂಗ್ರೆಸ್ ಸರ್ಕಾರವೂ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದೆ. ಅಲ್ಲದೇ ಕೇಂದ್ರ ಜಲ ಆಯೋಗ ನೀಡಿರುವ ಅನುಮತಿ ವಾಪಸ್ ಪಡೆಯುವಂತೆ ಸೂಚಿಸಲು ಮನವಿ ಮಾಡಿದೆ. ಇದರ ನಡುವೆ ಮಹದಾಯಿ ನದಿ ನೀರು ವಿವಾದ ಸಂಬಂಧ ಗೋವಾ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಾಹನ ಕಂಪನಿಯೇ ನೀಡಲಿದೆ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್: ವಿಶೇಷತೆ ಏನು? ಕಡ್ಡಾಯ ಯಾಕೆ?

    ವಾಹನ ಕಂಪನಿಯೇ ನೀಡಲಿದೆ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್: ವಿಶೇಷತೆ ಏನು? ಕಡ್ಡಾಯ ಯಾಕೆ?

    ನವದೆಹಲಿ: 2019ರ ಏಪ್ರಿಲ್ ತಿಂಗಳಿನಿಂದ ರಸ್ತೆಗಿಳಿಯುವ ಎಲ್ಲಾ ವಾಹನಗಳಿಗೆ ಕಡ್ಡಾಯವಾಗಿ ತಯಾರಿಕಾ ಸಂಸ್ಥೆಗಳೇ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್ ಆಳವಡಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

    ಕೇಂದ್ರ ಸರ್ಕಾರ ಬುಧವಾರ ಕೇಂದ್ರೀಯ ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತಂದು, ನೂತನ ಅಧಿಸೂಚನೆಯನ್ನು ಹೊರಡಿಸಿದೆ. ಹೀಗಾಗಿ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್‍ಗಳನ್ನು ವಾಹನ ತಯಾರಿಕಾ ಸಂಸ್ಥೆಗಳೇ ಖುದ್ದು ಅಳವಡಿಸಬೇಕು. ಅಲ್ಲದೇ ವಾಹನದ ಶುಲ್ಕದಲ್ಲಿಯೇ ಇದನ್ನು ತಯಾರಿಕಾ ಸಂಸ್ಥೆಗಳು ಭರಿಸಬೇಕೆಂದು ಸೂಚಿಸಿದೆ.

    ಸದ್ಯ ದೇಶಾದ್ಯಂತ ಏಕರೂಪದ ನಂಬರ್ ಪ್ಲೇಟ್‍ಗಳು ಇಲ್ಲ. ಇದರಿಂದಾಗಿ ವಾಹನಗಳನ್ನು ಕಳ್ಳತನ ಮಾಡಿದ ಕಳ್ಳರು ಸುಲಭವಾಗಿ ನಂಬರ್ ಪ್ಲೇಟ್‍ಗಳನ್ನು ಬದಲಾಯಿಸುತ್ತಾರೆ. ಅಲ್ಲದೇ ಇಂತಹ ವಾಹನಗಳು ಹೆಚ್ಚಾಗಿ ಅಪರಾಧ ಪ್ರಕರಣದಲ್ಲಿ ಬಳಕೆಯಾಗುತ್ತಿವೆ. ಇಂತಹ ಕೃತ್ಯಗಳನ್ನು ತಡೆಯಲು ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್‍ಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಕಟ್ಟು-ನಿಟ್ಟಿನ ಆದೇಶವನ್ನು ಹೊರಡಿಸಿದೆ.

    ಹೈ-ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್(ಹೆಚ್‍ಎಸ್‍ಆರ್‌ಪಿ)ಗಳನ್ನು ಭದ್ರತೆಯ ದೃಷ್ಟಿಯಿಂದ 2005ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಬಳಿಕ 2012ರಿಂದ ಇದನ್ನು ಕಡ್ಡಾಯಗೊಳಿಸಿತ್ತು. ಆದರೂ ದೇಶಾದ್ಯಂತ ಇದು ಕಡ್ಡಾಯವಾಗಿರಲಿಲ್ಲ. ಸದ್ಯದ ನಿಯಮಗಳ ಪ್ರಕಾರ ಈ ನಂಬರ್ ಪ್ಲೇಟ್‍ಗಳನ್ನು ವಾಹನ ಮಾಲೀಕರು ಅಧಿಕೃತ ವ್ಯಾಪಾರಿಗಳು ಅಥವಾ ಡೀಲರ್‍ಗಳಿಂದ ಖರೀದಿಸಬೇಕಾಗಿತ್ತು. ಆದರೆ ಈಗ ಕೇಂದ್ರ ಸರ್ಕಾರ ಉತ್ಪಾದಕ ಸಂಸ್ಥೆಗಳಿಗೆ ಕಡ್ಡಾಯವಾಗಿ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್‍ಗಳನ್ನು ಪೂರೈಸುವಂತೆ ಸೂಚಿಸಿದೆ.

    ಇದಲ್ಲದೇ ರಾಜ್ಯ ಸರ್ಕಾರ ಅನುಮತಿ ನೀಡಿದರೆ ವಾಹನ ಡೀಲ್‍ರಗಳು, ಹಳೆಯ ವಾಹನಗಳಿಗೂ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸಬಹುದೆಂದು ಹೇಳಿದೆ.  ಇದನ್ನೂ ಓದಿ: ದೇಶಾದ್ಯಂತ ಏಕರೂಪದ ಡಿಎಲ್, ಆರ್‌ಸಿ: ಏನೇನು ಮಾಹಿತಿ ಇರುತ್ತೆ? ಯಾವಾಗ ಬರುತ್ತೆ? ದರ ಎಷ್ಟು?

    ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್ ವಿಶೇಷತೆ ಏನು?
    ದೇಶಾದ್ಯಂತ ಒಂದೇ ವಿನ್ಯಾಸ ಹೊಂದಿರುವ ಅಲ್ಯುಮಿನಿಯಂನಿಂದ ತಯಾರಿಸಿದ ಪ್ಲೇಟ್ ಇದಾಗಿದ್ದು, ವಾಹನಗ ನೋಂದಣಿ ಸಂಖ್ಯೆ ಜೊತೆಗೆ ಪ್ರತಿ ಪ್ಲೇಟ್‍ನಲ್ಲಿಯೂ 7 ಅಂಕಿಗಳ ವಿಶಿಷ್ಟ ಲೇಸರ್ ಕೋಡ್ ಇರುತ್ತದೆ. ಈ ಕೋಡ್ ಸಾರಿಗೆ ಇಲಾಖೆಯ ವಾಹನ್ ಡೇಟಾಬೇಸ್‍ನಲ್ಲಿ ದಾಖಲಾಗಿರುತ್ತದೆ.

    ನಂಬರ್ ಪ್ಲೇಟ್‍ನಲ್ಲಿ ಕ್ರೋಮಿಯಂನಿಂದ ಮಾಡಲಾಗಿರುವ ಚಕ್ರದ ಗುರುತು, ಎಂಜಿನ್, ಚಾಸಿ ನಂಬರ್ ಸೇರಿದಂತೆ ಐನ್‍ಡಿ ಎಂಬ ಅಕ್ಷರಗಳನ್ನು ಮುದ್ರಿಸಿರಲಾಗಿರುತ್ತದೆ. ಅಲ್ಲದೇ ವಾಹನ ಸಂಖ್ಯೆಯ ಮೇಲೆ 45 ಡಿಗ್ರಿ ಕೋನದಲ್ಲಿ ಇಂಡಿಯಾ ಎಂದು ಬರೆದಿರಲಾಗಿರುತ್ತದೆ.

    ಈ ನಂಬರ್ ಪ್ಲೇಟ್‍ನಲ್ಲಿ ಸ್ನ್ಯಾಪ್ ಲಾಕ್ ಅಳವಡಿಸಲಾಗಿತ್ತು. ಇದನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲ. ಒಂದುವೇಳೆ ತೆಗೆಯಲು ಹೋಗಿ ಏನಾದರೂ ಆದರೆ, ನೇರವಾಗಿ ಆರ್‍ಟಿಓ ಕಚೇರಿಗೆ ಹೋಗಿ ಹೊಸ ಪ್ಲೇಟ್ ಅನ್ನು ಬದಲಾಯಿಸಬೇಕಾಗುತ್ತದೆ.

    ಇದರಲ್ಲಿರುವ ಲೇಸರ್ ಕೋಡ್‍ಗಳನ್ನು ಪೊಲೀಸರು, ಲೇಸರ್ ಉಪಕರಣದಿಂದ ಸ್ಕ್ಯಾನ್ ಮಾಡಿದಾಗ, ವಾಹನದ ನಂಬರ್ ಪ್ಲೇಟ್ ಆ ವಾಹನದ್ದೋ ಅಥವಾ ಬೇರೆ ವಾಹನದ್ದೋ ಎನ್ನುವುದನ್ನು ಪತ್ತೆಹಚ್ಚಲು ಸುಲಭವಾಗುತ್ತದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೇಕೆದಾಟು ಯೋಜನೆ ಅಸ್ತು- ತಡೆಕೋರುವಂತೆ ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ

    ಮೇಕೆದಾಟು ಯೋಜನೆ ಅಸ್ತು- ತಡೆಕೋರುವಂತೆ ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ

    ಚೆನ್ನೈ: ಮೇಕೆದಾಟು ಯೋಜನೆಗೆ ಕೇಂದ್ರ ಜಲಸಂಪನ್ಮೂಲ ಇಲಾಖೆ ಒಪ್ಪಿಗೆ ಸೂಚಿಸಿದ್ದರ ಬೆನ್ನಲ್ಲೇ ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಯೋಜನೆಯನ್ನು ತಡೆಯುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

    ತಮಿಳುನಾಡು ವಿರೋಧದ ನಡುವೆಯೂ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಗೆ ಕೇಂದ್ರ ಸರ್ಕಾರದಿಂದ ಒಪ್ಪಿಗೆ ಸಿಕ್ಕಿತ್ತು. ಅಲ್ಲದೇ ಕೇಂದ್ರ ಜಲ ಸಂಪನ್ಮೂಲ ಇಲಾಖೆ ಯೋಜನೆಗೆ ಸಂಬಂಧಿಸಿದ ಪ್ರಾಥಮಿಕ ವರದಿಯನ್ನು ಸಿದ್ಧಪಡಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ಮಾಡಿತ್ತು. ಇದರ ಬೆನ್ನಲ್ಲೇ ತಮಿಳುನಾಡು ಮತ್ತೆ ಕ್ಯಾತೆ ಎತ್ತಿದೆ.

    ಕೇಂದ್ರ ಜಲಸಂಪನ್ಮೂಲ ಇಲಾಖೆ ಯೋಜನೆಗೆ ಅಸ್ತು ಎಂದ ಬೆನ್ನಲ್ಲೆ ತಮಿಳುನಾಡು ಸಿಎಂ ಪಳನಿಸ್ವಾಮಿ ಮೇಕೆದಾಟು ಯೋಜನೆಯನ್ನು ತಡೆ ಹಿಡಿಯುವಂತೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಮೇಕೆದಾಟು ಯೋಜನೆಗೆ ಕೇಂದ್ರ ಜಲ ಆಯೋಗ ಒಪ್ಪಿಗೆ ಸೂಚಿಸಿದೆ. ಆದರೆ ಇದು ತಮಿಳುನಾಡು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ಈ ಯೋಜನೆಯನ್ನು ಕರ್ನಾಟಕ ಕುಡಿಯುವ ನೀರಿಗಾಗಿ ಕೈಗೆತ್ತಿಕೊಂಡಿಲ್ಲ. ಇದರಿಂದಾಗಿ ಕಾವೇರಿ ಜಲಾನಯನ ಪ್ರದೇಶಕ್ಕೂ ಹಾನಿಯಾಗುತ್ತದೆ. ಇದಲ್ಲದೇ ಕಾವೇರಿ ನ್ಯಾಯಾಧೀಕರಣ ವಿರುದ್ಧದ ನಿಲುವಾಗಿದೆ. ಹೀಗಾಗಿ ಆದೇಶವನ್ನು ಕೂಡಲೇ ಹಿಂಪಡೆಯುವಂತೆ ಸೂಚಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

    ಏನಿದು ಮೇಕೆದಾಟು ಯೋಜನೆ?
    ಮೇಕೆದಾಟು ಬಳಿ ಕುಡಿಯುವ ನೀರಿನ ಯೋಜನೆಗಾಗಿ ಕಾವೇರಿ ನದಿಗೆ ಅಡ್ಡಲಾಗಿ ಕಿರು ಅಣೆಕಟ್ಟು ಕಟ್ಟಲು ಕರ್ನಾಟಕ ಸರ್ಕಾರ ಮುಂದಾಗಿದೆ. ಕಾವೇರಿ ನದಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿ ಬಾರಿಯೂ ಕ್ಯಾತೆ ತೆಗೆಯುವ ತಮಿಳುನಾಡು ಈಗ ಮತ್ತೆ ಅಣೆಕಟ್ಟು ನಿರ್ಮಾಣ ಮಾಡುವುದನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದೆ. ಅಷ್ಟೇ ಅಲ್ಲದೇ ಸುಪ್ರೀಂ ಕೋರ್ಟ್‍ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿ ಈ ಯೋಜನೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದೆ.

    ಕರ್ನಾಟಕ ಸರ್ಕಾರ ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಿಸಲು ಹೊರಟ್ಟಿದ್ದು ಯಾಕೆ?
    ಕಾವೇರಿ ನ್ಯಾಯಾಧೀಕರಣ ಐತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪ್ರತಿವರ್ಷ ಕರ್ನಾಟಕ 177 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡಬೇಕೆಂದು ಆದೇಶ ನೀಡಿದೆ. ಈ ನೀರಿನ ಜೊತೆಗೆ ಹೆಚ್ಚುವರಿಯಾಗಿ ಒಂದು ಅಂದಾಜಿನ ಪ್ರಕಾರ 80, 90 ಟಿಎಂಸಿ ನೀರು ತಮಿಳುನಾಡಿಗೆ ಸೇರುತ್ತದೆ. ಹೀಗೆ ರಾಜ್ಯದಿಂದ ಹರಿದು ಹೋಗುತ್ತಿರುವ ಈ ನೀರನ್ನು ಸಂಗ್ರಹಿಸಿ ಬೆಂಗಳೂರು ನಗರಕ್ಕೆ ಪೂರೈಕೆ ಮಾಡಲು ಕರ್ನಾಟಕ ಸರ್ಕಾರ ಅಣೆಕಟ್ಟು ನಿರ್ಮಿಸಲು ಹೊರಟಿದೆ. ಇದನ್ನೂ ಓದಿ: ಮೇಕೆದಾಟು ಡ್ಯಾಂ – ಕರ್ನಾಟಕಕ್ಕೆ ಆರಂಭಿಕ ಗೆಲುವು, ತಮಿಳುನಾಡಿಗೆ ಮುಖಭಂಗ

    ತಮಿಳುನಾಡು ವಿರೋಧ ಯಾಕೆ?
    ಮೇಕೆದಾಟುವಿನಲ್ಲಿ ಅಣೆಕಟ್ಟು ಕಟ್ಟಬೇಕೆಂಬ ಪ್ರಸ್ತಾಪ 1952ರಲ್ಲೇ ಚಿಗುರೊಡೆದಿತ್ತು. ಆದರೆ ಕೆಲ ಕಾರಣಗಳಿಂದ ಈ ಯೋಜನೆಯನ್ನು ಸರ್ಕಾರ ಕೈಬಿಟ್ಟಿತ್ತು. 1996ರಲ್ಲಿ ಮೇಕೆದಾಟುವಿನಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿ ಕೇಂದ್ರ ವಿದ್ಯುತ್ ಪ್ರಾಧಿಕಾರಕ್ಕೆ ಅನುಮೋದನೆಗೆ ಕಳುಹಿಸಿಕೊಟ್ಟಿತ್ತು. ಆದರೆ ಇದೇ ಸಮಯದಲ್ಲಿ ಕಾವೇರಿ ವಿವಾದ ನ್ಯಾಯಾಧೀಕರಣ ಮುಂದೆ ಇದ್ದ ಕಾರಣ ಮೊದಲು ಈ ವಿವಾದವನ್ನು ಬಗೆಹರಿಸಿಕೊಳ್ಳಿ, ನಂತರ ಈ ವಿಚಾರವನ್ನು ಪ್ರಸ್ತಾಪ ಮಾಡಿ ಎಂದು ಹೇಳುವ ಮೂಲಕ ವಿದ್ಯುತ್ ಪ್ರಾಧಿಕಾರ ಉಪಾಯದಿಂದ ಜಾರಿಕೊಂಡಿತ್ತು.

    2007ರಲ್ಲಿ ನ್ಯಾಯಾಧೀಕರಣ ಅಂತಿಮ ತೀರ್ಪು ಪ್ರಕಟಿಸಿದ ಬಳಿಕ ಮತ್ತೆ ಮೇಕೆದಾಟು ಯೋಜನೆ ಗರಿಗೆದರತೊಡಗಿತು. ಅಂತಿಮವಾಗಿ 2013ರಲ್ಲಿ ರಾಜ್ಯ ಸರ್ಕಾರ ಮೇಕೆದಾಟು ಯೋಜನೆ ನಿರ್ಮಿಸಲು ಮಹತ್ವದ ಹೆಜ್ಜೆ ಇಟ್ಟಿತು. ರಾಜ್ಯ ಸರ್ಕಾರ ಅಣೆಕಟ್ಟು ನಿರ್ಮಿಸಲು ಮುಂದಾಗುತ್ತಿದ್ದಂತೆ ಆಗಿನ ತಮಿಳುನಾಡು ಸಿಎಂ ಜಯಲಲಿತಾ ಕೇಂದ್ರದ ಮೊರೆ ಹೋಗಿ, ಸುಪ್ರೀಂನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದರು. ಈಗ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧವಾಗುತ್ತಿದ್ದು ತಮಿಳುನಾಡು ಸಿಎಂ ಪಳನಿಸ್ವಾಮಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಯೋಜನೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೇಂದ್ರ ಸರ್ಕಾರ ಬಿದ್ದರೂ ಪರವಾಗಿಲ್ಲ, ಮಂದಿರ ಕಟ್ಟಿ: ಪೇಜಾವರಶ್ರೀ

    ಕೇಂದ್ರ ಸರ್ಕಾರ ಬಿದ್ದರೂ ಪರವಾಗಿಲ್ಲ, ಮಂದಿರ ಕಟ್ಟಿ: ಪೇಜಾವರಶ್ರೀ

    ಉಡುಪಿ: ಸರ್ಕಾರ ಬಿದ್ದರೂ ಪರವಾಗಿಲ್ಲ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಖಡಕ್ ಸಂದೇಶ ರವಾನೆ ಮಾಡಿದ್ದಾರೆ.

    ಉಡುಪಿ ಜಿಲ್ಲೆಯ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಶ್ರೀಗಳು, ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷ ಕಳೆದಿದೆ. ಇನ್ನೂ ರಾಮ ಮಂದಿರ ನಿರ್ಮಾಣ ಆಗಿಲ್ಲ. ನಾವು ಕಾದಿದ್ದೇವೆ, ಈಗ ಮಂದಿರ ನಿರ್ಮಾಣ ಮಾಡುವಂತೆ ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದರು.

    ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ದೃಢ ನಿರ್ಧಾರವು ಕೇಂದ್ರ ಸರ್ಕಾರಕ್ಕೆ ಅನುಕೂಲ ಆಗಲಿದೆ. ನ್ಯಾಯಾಲಯವನ್ನು ಕಾಯುವುದಕ್ಕೆ ಸಾಧ್ಯವಿಲ್ಲ. ಮೋದಿ ಸರ್ಕಾರಕ್ಕೆ ಸಂಪೂರ್ಣ ಬಹುಮತವಿದೆ. ಇದರಿಂದಾಗಿ ಮಾಜಿ ಪ್ರಧಾನಿ ವಾಜಪೇಯಿ ಸರ್ಕಾರಕ್ಕಿಂತ ಹೆಚ್ಚು ಅನುಕೂಲ ಮೋದಿ ಅವರಿಗಿದೆ ಎಂದು ತಿಳಿಸಿದರು.

    ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ಈಗ ವಿರೋಧ ಮಾಡಲಿಕ್ಕಿಲ್ಲ, ಚುನಾವಣೆ ಹತ್ತಿರ ಇರುವುದರಿಂದ ಯಾರೂ ವಿರೋಧ ಮಾಡಲ್ಲ. ವಿರೋಧ ಮಾಡುವ ಧೈರ್ಯ ಯಾರಿಗೂ ಇಲ್ಲ. ರಾಮ ಮಂದಿರ ಸಮಸ್ಯೆ ಬಗೆಹರಿಸಲು ಮೂರು ಮಾರ್ಗಗಳಿವೆ, ಸಂಯುಕ್ತ ಅಧಿವೇಶನದ ಮೂಲಕ ಸಮಸ್ಯೆ ಬಗೆಹರಿಸಬಹುದು. ಲೋಕಸಭೆ- ರಾಜ್ಯಸಭೆ ಅಧಿವೇಶನದಲ್ಲಿ ತೀರ್ಮಾನಿಸಬಹುದು. ಇಲ್ಲವೇ ಮಂದಿರ ವಿಚಾರದಲ್ಲಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯನ್ನು ಹೊರಡಿಸಲಿ ಎಂದು ಸಲಹೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಗಂಟೆಗೆ 120 ಕಿಮೀ ವೇಗದಲ್ಲಿ ಬೀಸುತ್ತಿದೆ ಗಾಳಿ – `ಗಜ’ ರೌದ್ರನರ್ತನಕ್ಕೆ 20ಕ್ಕೂ ಹೆಚ್ಚು ಮಂದಿ ಬಲಿ

    ಗಂಟೆಗೆ 120 ಕಿಮೀ ವೇಗದಲ್ಲಿ ಬೀಸುತ್ತಿದೆ ಗಾಳಿ – `ಗಜ’ ರೌದ್ರನರ್ತನಕ್ಕೆ 20ಕ್ಕೂ ಹೆಚ್ಚು ಮಂದಿ ಬಲಿ

    ಚೆನ್ನೈ: ಗಂಟೆಗೆ 120 ಕಿಮೀ ವೇಗದಲ್ಲಿ ತೀರಕ್ಕೆ ಅಪ್ಪಳಿಸುತ್ತಿರುವ ಗಜ ಚಂಡಮಾರುತಕ್ಕೆ ತಮಿಳುನಾಡು ತತ್ತರಿಸಿದ್ದು, ಇದುವರೆಗೂ 20ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.

    ಗಜ ಚಂಡಮಾರುತದಿಂದ ತಮಿಳುನಾಡಿನ ಸಮುದ್ರ ತೀರ ಪ್ರದೇಶಗಳಲ್ಲದೇ ನಾಗಪಟ್ಟಣಂ, ಕರೈಕಲ್, ಕಡಲೂರು, ಪುದುಚ್ಚೇರಿ, ತಂಜಾವೂರು ಪ್ರದೇಶಗಳನ್ನು ತಲುಪಿದ್ದು, ಚಂಡಮಾರುತದ ದಾಳಿಗೆ ಜನರು ತತ್ತರಿಸಿ ಕಂಗಲಾಗಿದ್ದಾರೆ.

    2004ರ ಭೀಕರ ಸುನಾಮಿ ಸಂಭವಿಸಿದ ದಶಕದ ಬಳಿಕ ನಾಗಪಟ್ಟಣಂನಲ್ಲಿ ಮತ್ತೆ ಅಲ್ಲೋಲ ಕಲ್ಲೋಲ ವಾತಾವರಣ ನಿರ್ಮಾಣವಾಗಿದ್ದು, ತಮಿಳುನಾಡಿನ ಹಲವೆಡೆ ನೂರಾರು ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಅಲ್ಲದೇ ಸಾವಿರಾರು ಮನೆಗಳಿಗೆ ಹಾನಿ ಆಗಿದೆ.

    ಇದುವರೆಗೂ ತಮಿಳುನಾಡಿನ ಒಟ್ಟು 6 ಜಿಲ್ಲೆಗಳಲ್ಲಿ ಸುಮಾರು 80 ಸಾವಿರ ಮಂದಿಯನ್ನು ರಕ್ಷಿಸಲಾಗಿದ್ದು ಅವರಿಗಾಗಿ 300 ಆಶ್ರಯತಾಣಗಳನ್ನು ತೆರೆಯಲಾಗಿದೆ. ನಾಗಪಟ್ಟಣಂನಲ್ಲಿ ಇಂದೂ ಕೂಡಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜೊತೆಗೆ ಅಪಾಯದಲ್ಲಿ ಸಿಲುಕಿರುವವರ ಸಹಾಯಕ್ಕೆ ರಾಜ್ಯ ಮಟ್ಟದಲ್ಲಿ 1070 ಹಾಗೂ ಜಿಲ್ಲೆಗಳಲ್ಲಿ 1077 ಸಹಾಯವಾಣಿಯನ್ನು ನೀಡಲಾಗಿದೆ.

    ಗಜ ಚಂಡಮಾರುತದಿಂದ ತತ್ತರಿಸಿರುವ ತಮಿಳುನಾಡಿಗೆ ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್ ರಕ್ಷಣಾ ಕ್ರಮಕೈಗೊಳ್ಳಲು ಮುಂದಾಗಿದ್ದು, ಗೃಹ ಇಲಾಖೆಯ ನಿರ್ದೇಶಕರಾಗಿರುವ ರಾಜೀವ್ ಅವರಿಗೆ ಸೂಚನೆ ನೀಡಿದ್ದಾರೆ. ಈ ಕುರಿತು ತಮಿಳುನಾಡು ಸಿಎಂ ಪಳನಿಸ್ವಾಮಿ ಅವರಿಂದ ಮಾಹಿತಿ ಪಡೆದಿದ್ದು, ಸನ್ನಿವೇಶದ ಮೇಲ್ವಿಚಾರಣೆ ಹಾಗೂ ಸಹಕಾರ ನೀಡಲಾಗುತ್ತಿದೆ ಎಂದು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಇತ್ತ ಸಿಎಂ ಕೂಡ ರಾಜ್ಯದ ಜನರ ರಕ್ಷಣೆಗೆ ಮುಂದಾಗಿದ್ದು, ಅಪಾಯದಲ್ಲಿ ಸಿಲುಕಿರುವ ರಕ್ಷಣೆ ಹಾಗೂ ಸಂತ್ರಸ್ತರ ನೆರವಿಗೆ ಧಾವಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಎಲ್‍ಪಿಜಿ ದರ ಮತ್ತೆ ಏರಿಕೆ – ಗ್ರಾಹಕರಿಗೆ ಬರೆ ಎಳೆದ ಕೇಂದ್ರ ಸರ್ಕಾರ

    ಎಲ್‍ಪಿಜಿ ದರ ಮತ್ತೆ ಏರಿಕೆ – ಗ್ರಾಹಕರಿಗೆ ಬರೆ ಎಳೆದ ಕೇಂದ್ರ ಸರ್ಕಾರ

    ನವದೆಹಲಿ: ಕೇಂದ್ರ ಸರ್ಕಾರ ಎಲ್‍ಪಿಜಿ ಸಿಲಿಂಡರಿನ ಮೇಲೆ 2 ರೂಪಾಯಿ ಏರಿಸುವ ಮೂಲಕ ಜನಸಾಮಾನ್ಯರಿಗೆ ಮತ್ತೊಮ್ಮೆ ಬರೆ ಹಾಕಿದೆ.

    ಎಲ್‍ಪಿಜಿ ಗೃಹಬಳಕೆ ಸಿಲಿಂಡರ್ ದರ ಏರಿಕೆ ಕುರಿತು ಕೇಂದ್ರ ತೈಲ ಸಚಿವಾಲಯ ಅಧಿಕೃತ ಆದೇಶ ಪ್ರಕಟಿಸಿದೆ. 14.2 ಕೆಜಿ ಹಾಗೂ 5 ಕೆಜಿಗಳ ಮೇಲೆ 2 ರೂಪಾಯಿ ಹೆಚ್ಚಳ ಮಾಡಿದೆ. ಹೀಗಾಗಿ ಸಬ್ಸಿಡಿ ಸಹಿತ 14.2 ಕೆಜಿ ಸಿಲಿಂಡರಿನ ಬೆಲೆ ಈ ಮೊದಲು ದೆಹಲಿಯಲ್ಲಿ 505.34 ಆಗಿದ್ದರೆ, ಈಗ 507.42ಕ್ಕೆ ಏರಿಕೆಯಾಗಿದೆ. ನವೆಂಬರ್ 1ರಂದು ಪ್ರತಿ ಸಿಲಿಂಡರಿನ ಮೇಲೆ 2.94 ರೂಪಾಯಿಯನ್ನು ಏರಿಕೆ ಮಾಡಿತ್ತು.

    ಹೆಚ್ಚಳ ಏಕೆ?
    ಕೇಂದ್ರ ಸರ್ಕಾರ ಎಲ್ಲಾ ಗ್ಯಾಸ್ ಏಜೆನ್ಸಿಗಳಿಗೆ 2017 ರಿಂದಲೂ 14.2 ಕೆಜಿ ಸಿಲಿಂಡರಿಗೆ 48.89 ರೂಪಾಯಿ ಹಾಗೂ 5 ಕೆಜಿ ಸಿಲಿಂಡರಿಗೆ 24.20 ರೂಪಾಯಿ ಕಮಿಷನ್ ನೀಡುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಾರಿಗೆ ಮತ್ತು ಕಾರ್ಮಿಕ ಭತ್ಯೆ ಹೆಚ್ಚಳದಿಂದಾಗಿ ಗ್ಯಾಸ್ ಏಜೆನ್ಸಿಗಳು ಕಮಿಷನ್ ದರವನ್ನು ಹೆಚ್ಚಿಸುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದವು. ಹೀಗಾಗಿ ಕೇಂದ್ರ ಸರ್ಕಾರ 2 ರೂಪಾಯಿಯನ್ನು ಹೆಚ್ಚಳ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/