Tag: Central Government

  • ರಾಣಿ ಚೆನ್ನಮ್ಮ ವಿಜಯೋತ್ಸವಕ್ಕೆ 200 ವರ್ಷ – ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೆಸರಿಡುವಂತೆ ಮನವಿ

    ರಾಣಿ ಚೆನ್ನಮ್ಮ ವಿಜಯೋತ್ಸವಕ್ಕೆ 200 ವರ್ಷ – ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೆಸರಿಡುವಂತೆ ಮನವಿ

    – ಜೊತೆಗೆ ಅಂಚೆ ಚೀಟಿ ಬಿಡುಗಡೆಗೆ ಮನವಿ

    ನವದೆಹಲಿ: ಬ್ರಿಟಿಷರ ವಿರುದ್ಧ ಹೋರಾಡಿ ಜಯ ಸಾಧಿಸಿದ ಕಿತ್ತೂರು ರಾಣಿ ಚೆನ್ನಮ್ಮ (Kitturu Rani Chennamma) ವಿಜಯೋತ್ಸವಕ್ಕೆ 200 ವರ್ಷ ಪೂರ್ಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ (Belagavi Airport) ರಾಣಿ ಚೆನ್ನಮ್ಮ ಹೆಸರಿಡಬೇಕು ಹಾಗೂ ಅಂಚೆ ಚೀಟಿ ಬಿಡುಗಡೆ ಮಾಡಬೇಕು ಎಂದು ಕಿತ್ತೂರು ಕರ್ನಾಟಕದ ನಾಯಕರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ದೆಹಲಿಯಲ್ಲಿ (Delhi) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ, ಕಿತ್ತೂರು ರಾಣಿ ಚೆನ್ನಮ್ಮ ಅವರ ವಿಜಯೋತ್ಸವಕ್ಕೆ 200 ವರ್ಷ ಪೂರ್ಣವಾಗಲಿದೆ. ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ವೀರ ಮಹಿಳೆಯಾಗಿ ಬ್ರಿಟಿಷರ ವಿರುದ್ಧ ಯುದ್ಧ ಸಾರಿ ಗೆಲುವು ಸಾಧಿಸಿದರು. ಅವರ ತ್ಯಾಗ, ಬಲಿದಾನವನ್ನು ನಾವು ಮರೆಯಬಾರದು. ಇದಕ್ಕಾಗಿ ಅ.23ರಂದು ವಿಜಯೋತ್ಸವದ ದಿನವಾಗಿ ಆಚರಿಸಿಕೊಂಡು ಬರುತ್ತಿದ್ದೇವೆ.ಇದನ್ನೂ ಓದಿ: ಹಾಸನ | ಆಹಾರ ಅರಸಿ ಬಂದಿದ್ದ ಕಾಡಾನೆ ವಿದ್ಯುತ್ ಸ್ಪರ್ಶದಿಂದ ಸಾವು

    ಈ ಬಾರಿ ಅ.23ಕ್ಕೆ 200 ವರ್ಷ ಪೂರ್ಣವಾಗುತ್ತಿರುವ ಹಿನ್ನೆಲೆ ವಿಶೇಷವಾಗಿ ಆಚರಿಸಲು ಚಿಂತನೆ ನಡೆಸಿದ್ದೇವೆ. ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚೆನ್ನಮ್ಮನ ಹೆಸರಿಡಬೇಕು ಹಾಗೂ ವಿಮಾನ ನಿಲ್ದಾಣದ ಆವರಣದಲ್ಲಿ ಅವರ ಮೂರ್ತಿ ಸ್ಥಾಪಿಸಬೇಕು. ಜೊತೆಗೆ ರಾಣಿ ಚೆನ್ನಮ್ಮನ ಒಂದು ಅಂಚೆ ಚೀಟಿ ಬಿಡುಗಡೆ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನೇತೃತ್ವದಲ್ಲಿ ಕಿತ್ತೂರು ಕರ್ನಾಟಕದ ಜನಪ್ರತಿನಿಧಿಗಳು, ಮುಖಂಡರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದರು.

    ರಾಣಿ ಚೆನ್ನಮ್ಮನ ಬಲಗೈ ಬಂಟ ಸಂಗೊಳ್ಳಿ ರಾಯಣ್ಣನ (Sangolli Rayanna) ಹೆಸರನ್ನು ಹುಬ್ಬಳ್ಳಿ (Hubballi) ವಿಮಾನ ನಿಲ್ದಾಣಕ್ಕೆ, ಜಗಜ್ಯೋತಿ ಬಸವಣ್ಣನ ಹೆಸರನ್ನು ವಿಜಯಪುರಕ್ಕೆ (Vijayapura), ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಶಿವಮೊಗ್ಗ (Shivamogga) ವಿಮಾನ ನಿಲ್ದಾಣಕ್ಕೆ ಇಡಲು ಮನವಿ ಮಾಡಿದ್ದೇವೆ ಎಂದು ಹೇಳಿದರು.

    ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಕೈಗಾರಿಕೆ, ಶಿಕ್ಷಣ ಸಂಸ್ಥೆಗಳು, ಕೇಂದ್ರ ಸರ್ಕಾರದ ವಿವಿಧ ತರಬೇತಿ ಕೇಂದ್ರಗಳಿದ್ದು, ಆರ್ಥಿಕ ನಗರವಾಗಿ ಬೆಳೆಯುತ್ತಿದೆ. ಬೆಳಗಾವಿ ವಿಮಾನ ನಿಲ್ದಾಣದಿಂದ ಇನ್ನಷ್ಟು ಸಂಪರ್ಕ ಹೆಚ್ಚಿಸಬೇಕಿದೆ. ಹೀಗಾಗಿ ಇನ್ನು ಅನೇಕ ನಗರಗಳಿಗೆ ವಿಮಾನ ಸಂಪರ್ಕ ಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಮನವಿ ಮಾಡಿದ್ದೇವೆ. ಕೇಂದ್ರ ಸರ್ಕಾರ ಶೀಘ್ರದಲ್ಲಿ ನಮ್ಮ ಮನವಿಗೆ ಸ್ಪಂದಿಸುವ ಭರವಸೆ ನೀಡಿದೆ ಎಂದು ತಿಳಿಸಿದರು.ಇದನ್ನೂ ಓದಿ: ಶಿಗ್ಗಾಂವಿ ಕ್ಷೇತ್ರಕ್ಕೆ ನಾನು ಆಕಾಂಕ್ಷಿಯಲ್ಲ – ಮುರುಗೇಶ್ ನಿರಾಣಿ

  • ಮಹದಾಯಿ ಯೋಜನೆಗೆ ಅನುಮತಿ ವಿಳಂಬ – ಕೇಂದ್ರದ ಸಭೆಯಲ್ಲಿ ಕರ್ನಾಟಕ ತೀವ್ರ ಆಕ್ಷೇಪ

    ಮಹದಾಯಿ ಯೋಜನೆಗೆ ಅನುಮತಿ ವಿಳಂಬ – ಕೇಂದ್ರದ ಸಭೆಯಲ್ಲಿ ಕರ್ನಾಟಕ ತೀವ್ರ ಆಕ್ಷೇಪ

    ನವದೆಹಲಿ: ಮಹದಾಯಿ ಕುಡಿಯುವ ನೀರಿನ ಯೋಜನೆಗೆ (Mahadayi Project) ಅನುಮತಿ ನೀಡುವ ಸಂಬಂಧ ಕೇಂದ್ರ ಸರ್ಕಾರದ (Central Government) ಮುಂದೆ ಕರ್ನಾಟಕ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

    ಕುಡಿಯುವ ನೀರಿನ ಯೋಜನೆಗೆ ಗೋವಾ (Goa) ಅನಗತ್ಯ ಖ್ಯಾತೆ ತೆಗೆದಿದೆ. ಯೋಜನೆ ಜಾರಿಗೆ ನ್ಯಾಯಾಲಯವೇ ತಡೆಯಾಜ್ಞೆ ನೀಡಿಲ್ಲ. ಕೇಂದ್ರ ಸರ್ಕಾರ ಅನುಮತಿ ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದೆ.

    ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರದ ಪರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್‌.ಮಂಜುನಾಥ್ ಪ್ರಸಾದ್, ಸುಪ್ರೀಂ ಕೋರ್ಟ್ ಹಾಗೂ ಜಲ ಆಯೋಗದ ಅನುಮತಿ ನಡುವೆಯೂ ಪರಿಸರ ಇಲಾಖೆ ಅನುಮತಿ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಭೆಯಲ್ಲಿ ಮಾತನಾಡಿದ ಅವರು, ಮಹದಾಯಿ ಉತ್ತರ ಕರ್ನಾಟಕದ ಜನರಿಗೆ ಕುಡಿಯುವ ನೀರಿನ ಯೋಜನೆಯಾಗಿದೆ. ಯೋಜನೆಗೆ ಅನುಮತಿ ನೀಡಬಹುದು ಎಂದು ಹುಲಿ ಸಂರಕ್ಷಣಾ ಪ್ರಾಧಿಕಾರ ಹೇಳಿ 9 ತಿಂಗಳು ಕಳೆದಿದೆ. 2018 ರಲ್ಲೆ ಮಹದಾಯಿ ನ್ಯಾಯಮಂಡಳಿ ನೀರು ಹಂಚಿಕೆ ಮಾಡಿದೆ. ಯೋಜನೆಗೆ ಒಪ್ಪಿಗೆ ನೀಡಬಹುದು ಎಂದು 2020ರಲ್ಲೇ ಸುಪ್ರೀಂ ಕೋರ್ಟ್ ಹೇಳಿದೆ. 2022 ರಲ್ಲಿ ಜಲ ಆಯೋಗ ಯೋಜನೆಯ ಡಿಪಿಆರ್‌ಗೆ ಅನುಮತಿ ನೀಡಿದೆ ಎಂದಿದ್ದಾರೆ.

    ಯೋಜನೆಗೆ ಅನುಮೋದನೆ ನೀಡಲು ಯಾವುದೇ ಸಮಸ್ಯೆಗಳಿಲ್ಲ, ಗೋವಾ ಆಕ್ಷೇಪ ಕಂಡು ಯೋಜನೆಗೆ ಅರಣ್ಯ ಪರಿಸರ ಇಲಾಖೆ ಅಧಿಕಾರಿಗಳು ಅನುಮತಿ ನೀಡುತ್ತಿಲ್ಲ. ಮತ್ತೊಂದು ಕಡೆ ಗೋವಾ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಅಡಿಯಲ್ಲಿ ನಮ್ಮ ಅನುಮತಿ ಇಲ್ಲದೇ ಯೋಜನೆ ಆರಂಭಿಸುವಂತ್ತಿಲ್ಲ ಎಂದು ಷೋಕಾಸ್ ನೋಟಿಸ್ ನೀಡಿದ್ದಾರೆ. ಹಾಗೇ ನೋಟಿಸ್ ನೀಡಲು ಗೋವಾಕ್ಕೆ ಅಧಿಕಾರವೇ ಇಲ್ಲ. ಗೋವಾ ಆಕ್ಷೇಪ ಬದಿಗಿಟ್ಟು ಕುಡಿಯುವ ನೀರಿನ ಯೋಜನೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.

    ಕೇಂದ್ರದ ಮುಂದೆ ಪ್ರಬಲ ಆಕ್ಷೇಪ ಮಂಡಿಸಿದ ಬಳಿಕ ಕರ್ನಾಟಕದಿಂದ ಅಗತ್ಯ ದಾಖಲೆಗಳನ್ನು ಪಡೆದುಕೊಂಡಿರುವ ಸಚಿವ ಭೂಪೇಂದ್ರ ಯಾದವ್ (Bhupender Yadav), ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

  • ಮೈಥಿಲಿ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ಜೆಡಿಯು ಬೇಡಿಕೆ

    ಮೈಥಿಲಿ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ ಜೆಡಿಯು ಬೇಡಿಕೆ

    ಪಾಟ್ನಾ: ಎನ್‌ಡಿಎ (NDA) ಮೈತ್ರಿಕೂಟದ ಜನತಾ ದಳ (Janata Dal)  (ಯುನೈಟೆಡ್) ಪಕ್ಷವು ಮೈಥಿಲಿ ಭಾಷೆಗೆ (Maithali Lnaguage) ಶಾಸ್ತ್ರೀಯ ಭಾಷಾ ಸ್ಥಾನಮಾನ (Classical Language Status) ನೀಡಬೇಕು ಎಂದು ಸೋಮವಾರ ಒತ್ತಾಯಿಸಿದೆ.

    ಇತ್ತೀಚಿಗಷ್ಟೇ ಕೇಂದ್ರ ಸರ್ಕಾರವು ಮರಾಠಿ, ಬಂಗಾಳಿ, ಪಾಲಿ, ಪ್ರಾಕೃತ ಮತ್ತು ಅಸ್ಸಾಮಿ ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವಂತೆ ನಿರ್ಧರಿಸಿದ ಬೆನ್ನಲ್ಲೇ ಮರಾಠಿ, ಬಂಗಾಳಿ, ಪಾಲಿ, ಪ್ರಾಕೃತ ಮತ್ತು ಅಸ್ಸಾಮಿಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ ಜೆಡಿಯು ಈ ಬೇಡಿಕೆಯಿಟ್ಟಿದೆ.ಇದನ್ನೂ ಓದಿ: ‌’ಸಿಂಗಂ ಅಗೇನ್’ ಟ್ರೈಲರ್ ಔಟ್- ಸೀತೆ ಪಾತ್ರದಲ್ಲಿ ಕರೀನಾ ಕಪೂರ್

    ಜನತಾ ದಳ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ (Sanjay Kumar Jha) ಮಾತನಾಡಿ, ಶೀಘ್ರದಲ್ಲೇ ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ (Dharmendra Pradhan) ಅವರನ್ನು ಭೇಟಿಯಾಗಿ ಈ ಬೇಡಿಕೆಗೆ ಒತ್ತಾಯಿಸುವುದಾಗಿ ಹೇಳಿದರು.

    ಇದಕ್ಕೆ ಸಂಬಂಧಿಸಿದಂತೆ ಸಂಜಯ್ ಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಾನು ಶೀಘ್ರದಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡುತ್ತೇನೆ. ಭೇಟಿ ಮಾಡಿ ಮೈಥಿಲಿ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಬೇಕಾಗಿ ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು. ಮೈಥಿಲಿ ಭಾಷೆಯ ಸಂರಕ್ಷಣೆ ಮತ್ತು ಪ್ರಚಾರವು ಮೊದಲಿನಿಂದಲೂ ನನ್ನ ಮೊದಲ ಆದ್ಯತೆಯಾಗಿದೆ.

    ಮೈಥಿಲಿ ಭಾಷೆ ಸುಮಾರು 1,300 ವರ್ಷಗಳಷ್ಟು ಹಳೆಯದು. ಅದರ ಸಾಹಿತ್ಯವು ಸ್ವಾತಂತ್ರ್ಯವಾಗಿ ಮತ್ತು ನಿರಂತರವಾಗಿ ಅಭಿವೃದ್ಧಿಯಾಗುತ್ತಾ ಬಂದಿದೆ. ಜೊತೆಗೆ ಮೈಥಿಲಿ ಭಾಷೆ ಸುಮಾರು 1300 ವರ್ಷಗಳಷ್ಟು ಹಳೆಯದು. ಆದ್ದರಿಂದ, ಇದನ್ನು ಶಾಸ್ತ್ರೀಯ ಭಾಷೆಯ ವರ್ಗಕ್ಕೆ ಸೇರಿಸಬೇಕು ಎಂದರು.

    ಕೇಂದ್ರದ ಎನ್‌ಡಿಎ ಸರ್ಕಾರ ಹಾಗೂ ಬಿಹಾರ ರಾಜ್ಯ ಮೈಥಿಲಿ ಭಾಷೆಯ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಎಲ್ಲಾ ಕೆಲಸಗಳನ್ನು ಮಾಡಿದೆ ಎಂಬುದರಲ್ಲಿ ಸಂದೇಹವಿಲ್ಲ. ಮೈಥಿಲಿ ಲಿಪಿಯ ಸಂರಕ್ಷಣೆ, ಪ್ರಚಾರ ಮತ್ತು ಅಭಿವೃದ್ಧಿಗಾಗಿ ಮೈಥಿಲ್ ವಿದ್ವಾಂಸರನ್ನು ಆಹ್ವಾನಿಸುವ ಮೂಲಕ ಜಾವಡೇಕರ್ ಅವರು ನನ್ನ ಜ್ಞಾಪಕ ಪತ್ರವನ್ನು ಸ್ವೀಕರಿಸಿದರು. ಪರಿಣಿತ ಸಮಿತಿಯ ರಚನೆಗೆ ಸೂಚನೆಗಳನ್ನು ನೀಡಿದರು ಮತ್ತು ಅದಕ್ಕೆ ಹೆಸರುಗಳನ್ನು ಸೂಚಿಸುವ ಜವಾಬ್ದಾರಿಯನ್ನು ನನಗೆ ವಹಿಸಿದ್ದಾರೆ ಎಂದು ಬರೆದಿದ್ದಾರೆ.ಇದನ್ನೂ ಓದಿ: ‌’ಸಿಂಗಂ ಅಗೇನ್’ ಟ್ರೈಲರ್ ಔಟ್- ಸೀತೆ ಪಾತ್ರದಲ್ಲಿ ಕರೀನಾ ಕಪೂರ್

    ಕೂಲಂಕಷವಾಗಿ ಚರ್ಚಿಸಿದ ನಂತರ ಸಮಿತಿಯು ತನ್ನ ವರದಿಯನ್ನು ಅಂತಿಮಗೊಳಿಸಿ ಸಚಿವರಿಗೆ ಸಲ್ಲಿಸಿದೆ ಎಂದು ತಿಳಿಸಿದ್ದಾರೆ.

  • ಇಂಟರ್ನ್‌ಶಿಪ್‌ ಯೋಜನೆಗೆ ಚಾಲನೆ, ಸಿಗಲಿದೆ ತಿಂಗಳಿಗೆ 5 ಸಾವಿರ ಭತ್ಯೆ – ಅರ್ಜಿ ಸಲ್ಲಿಸೋದು ಹೇಗೆ? ಮಾನದಂಡ ಏನು?

    ಇಂಟರ್ನ್‌ಶಿಪ್‌ ಯೋಜನೆಗೆ ಚಾಲನೆ, ಸಿಗಲಿದೆ ತಿಂಗಳಿಗೆ 5 ಸಾವಿರ ಭತ್ಯೆ – ಅರ್ಜಿ ಸಲ್ಲಿಸೋದು ಹೇಗೆ? ಮಾನದಂಡ ಏನು?

    ನವದೆಹಲಿ: ಕೇಂದ್ರದಿಂದ ಪಿಎಂ ಇಂಟರ್ನ್‌ಶಿಪ್‌ ಯೋಜನೆಗೆ ಚಾಲನೆ (PM Internship Scheme) ನೀಡಲಾಗಿದೆ. ಉನ್ನತ ಕಂಪನಿಗಳಲ್ಲಿ ಇಂಟರ್ನ್‌ಶಿಪ್‌ (Internship) ಪಡೆಯುವ ಯುವಕ – ಯುವತಿಯರಿಗೆ ಮಾಸಿಕ 5 ಸಾವಿರ ರೂ. ಆರ್ಥಿಕ ನೆರವು ನೀಡುವ ಉದ್ದೇಶದೊಂದಿಗೆ ಈ ಯೋಜನೆಗೆ ಗುರುವಾರ ಚಾಲನೆ ನೀಡಲಾಯಿತು.

    ಕಂಪನಿಗಳಲ್ಲಿ ಇಂಟರ್ನ್‌ಶಿಪ್‌ ಮಾಡುವ ಯುವಕ – ಯುವತಿಯರಿಗೆ ಮಾಸಿಕ 5 ಸಾವಿರ ರೂ. ವರ್ಷಕ್ಕೆ 66 ಸಾವಿರ ರೂ.ನಂತೆ ಆರ್ಥಿಕ ನೆರವನ್ನು ಈ ಯೋಜನೆ ನೀಡಲಿದೆ. ಇದರಿಂದ 1.25 ಲಕ್ಷ ಯುವಕ – ಯುವತಿಯರು ಫಲಾನುಭವಿಗಳಾಗಲಿದ್ದಾರೆ.ಇದನ್ನೂ ಓದಿ: ದಸರಾ ವಿಶೇಷ; ಉತ್ತರ ಕರ್ನಾಟಕ ಶೈಲಿಯ ತಾಲಿಪಟ್ಟು ರೆಸಿಪಿ ನಿಮಗಾಗಿ

    21 ರಿಂದ 24 ವರ್ಷದ ಯುವಕ-ಯುವತಿಯರಿಗೆ 1 ವರ್ಷಗಳ ಕಾಲ ಇಂಟರ್ನ್‌ಶಿಪ್‌ನ್ನು ಅವಕಾಶ ಕಲ್ಪಿಸಿಕೊಡುತ್ತದೆ. ಇಂಟರ್ನ್‌ಶಿಪ್‌ ಮಾಡುವವರಿಗೆ ಮಾಸಿಕ 5 ಸಾವಿರ ರೂ. ಭತ್ಯೆ ಮತ್ತು ಒಂದು ಬಾರಿ 6 ಸಾವಿರ ರೂ. ಸಹಾಯ ಭತ್ಯೆಯನ್ನು ಸರ್ಕಾರ ಭರಿಸುತ್ತದೆ.

    ಪ್ರಧಾನ ಮಂತ್ರಿ ಇಂಟರ್ನ್‌ಶಿಪ್‌ ಯೋಜನೆಯು ಮುಂದಿನ ಐದು ವರ್ಷಗಳಲ್ಲಿ 1 ಕೋಟಿ ಯುವಕರಿಗೆ ಇಂಟರ್ನ್‌ಶಿಪ್‌ ನೀಡುತ್ತದೆ. ಇದು ಭಾರತಕ್ಕೆ ಉದ್ಯೋಗಿಗಳನ್ನು ಪರಿವರ್ತಿಸುವ ನಿಟ್ಟಿನಲ್ಲಿ ವಿನ್ಯಾಸಗೊಳಿಸಲಾದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಜೊತೆಗೆ ಕೆಲಸದ ನೈಜ್ಯ ವಾತಾವರಣದ ಮನೋಭಾವವನ್ನು ಈ ಮೂಲಕ ಸೃಷ್ಟಿಸುವ ಯೋಜನೆಯನ್ನು ಹೊಂದಿದೆ. ಈಗಾಗಲೇ ಈ ಯೋಜನೆಯಡಿಯಲ್ಲಿ 500 ಕಂಪನಿಗಳು ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿವೆ.

    ಯೋಜನೆಯನ್ನು ಎರಡು ಹಂತಗಳಲ್ಲಿ ಜಾರಿಗೊಳಿಸಲಾಗುವುದು. ಈ ವರ್ಷ ಪ್ರಾರಂಭವಾಗುವ ಮೊದಲ ಹಂತದಲ್ಲಿ, ಮೂರು ವರ್ಷಗಳ ಅವಧಿಯಲ್ಲಿ 50 ಲಕ್ಷ ಯುವಕರನ್ನು ಇಂಟರ್ನ್‌ಶಿಪ್‌ನಲ್ಲಿ ಇರಿಸಲಾಗುತ್ತದೆ. ಎರಡನೇ ಹಂತವು ಮುಂದಿನ ಎರಡು ವರ್ಷಗಳಲ್ಲಿ ಇನ್ನೂ 50 ಲಕ್ಷ ಯುವಕರಿಗೆ ತರಬೇತಿ ನೀಡಲು ಗಮನಹರಿಸುತ್ತದೆ. ಪ್ರತಿ ಇಂಟರ್ನ್‌ಶಿಪ್‌ ಆರು ತಿಂಗಳವರೆಗೆ ಇರುತ್ತದೆ. ಈ ಸಮಯದಲ್ಲಿ ಭಾಗವಹಿಸುವವರು ತಾವು ಇಂಟರ್ನ್‌ಶಿಪ್‌ಗೆ ಅವಕಾಶ ಪಡೆದಿರುವ ಕಂಪನಿಗಳಿಂದ ಸಮಗ್ರ ತರಬೇತಿ ಮತ್ತು ಮಾರ್ಗದರ್ಶನವನ್ನು ಪಡೆಯುತ್ತಾರೆ.

    ಅರ್ಹತೆ ಮತ್ತು ಅರ್ಜಿ ಪ್ರಕ್ರಿಯೆ:
    ಈ ಯೋಜನೆಯು ಪ್ರಾಥಮಿಕವಾಗಿ ಆರ್ಥಿಕವಾಗಿ ಹಿಂದುಳಿದ ಯುವಜನರನ್ನು ಗುರಿಯಾಗಿರಿಸಿಕೊಂಡಿದೆ. 21 ರಿಂದ 24 ವರ್ಷದವರು ಮುಕ್ತ ಅವಕಾಶವನ್ನು ಹೊಂದಿರುತ್ತಾರೆ. ಕನಿಷ್ಠ 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು ಅಥವಾ  ITI, ಡಿಪ್ಲೋಮಾ, BA, B.Sc, B.Com, BCA ಯಾವುದೇ ಪದವಿ ಪಡೆದಿರುವವರು ಅರ್ಹರು. ಸರ್ಕಾರಿ ಉದ್ಯೋಗಿಗಳನ್ನು ಹೊಂದಿರುವ ಕುಟುಂಬಗಳು ಅಥವಾ ಆದಾಯ ತೆರಿಗೆ ಮೌಲ್ಯಮಾಪನ ಮಾಡುವವರು ಈ ಯೋಜನೆಗೆ ಅರ್ಹರಲ್ಲ. ಅರ್ಜಿಗಳು ಆನ್‌ಲೈನ್ ಪೋರ್ಟಲ್ ಮೂಲಕ ಆರಂಭಗೊಳ್ಳಲಿದ್ದು, ಅ.12 ರಿಂದ ಪ್ರಕ್ರಿಯೆ ಪ್ರಾರಂಭಗೊಳ್ಳುತ್ತದೆ.ಇದನ್ನೂ ಓದಿ: ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಅಧಿಕ ಮಾಲಿನ್ಯ – ರಾಜ್ಯಕ್ಕೆ ಹಸಿರು ನ್ಯಾಯಮಂಡಳಿಯಿಂದ ನೋಟಿಸ್‌

    ಅರ್ಜಿ ಪ್ರಕ್ರಿಯೆ:
    www.pminternship.mca.gov.in ನಲ್ಲಿ ಯುವಕ-ಯುವತಿಯರು ಅ.12ರಿಂದ 25ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ತಮ್ಮ ಹೆಸರು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಯ ಬಳಿಕ ಅ.26ರಂದು ಅರ್ಹ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಲಾಗುವುದು. ಕಂಪನಿಗಳು ಅ.27ರಿಂದ ನ.7ರವರೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿವೆ. ನ.8ರಿಂದ ನ.15ರವರೆಗೆ ಆಯ್ಕೆಯಾದ ಅಭ್ಯರ್ಥಿಗಳು ತಾವು ಆಯ್ಕೆಯಾದ ಕಂಪನಿಯಿಂದ ಆಫರ್ ಲೆಟರ್‌ನ್ನು ಪಡೆದುಕೊಳ್ಳಲಿದ್ದಾರೆ ಎಂದು ಸರ್ಕಾರ ತಿಳಿಸಿದೆ.

    ಇದರ ಜೊತೆಗೆ ಇದು ಉದ್ಯೋಗ ಅಲ್ಲ. ಇದು ತರಬೇತಿ ಕಾರ್ಯಾಗಾರ (ಇಂಟರ್ನ್‌ಶಿಪ್‌) ಎಂದು ಸರ್ಕಾರ ಸ್ಪಷ್ಟಪಡಿಸಿದೆ.

    ಪ್ರಧಾನ ಮಂತ್ರಿ ಇಂಟರ್ನ್‌ಶಿಪ್‌ ಯೋಜನೆಯ ಪ್ರಮುಖ ಮಾಹಿತಿ
    ಉದ್ದೇಶ: ಐದು ವರ್ಷಗಳಲ್ಲಿ 1 ಕೋಟಿ ಯುವಕರಿಗೆ ಇಂಟರ್ನ್‌ಶಿಪ್‌ ಒದಗಿಸುವುದು, ಭಾರತದ ಅಗ್ರ 500 ಕಂಪನಿಗಳಲ್ಲಿ ಉದ್ಯೋಗಾವಕಾಶಗಳು
    ಅರ್ಹತೆ: 21-24 ವಯಸ್ಸಿನ ಅಭ್ಯರ್ಥಿಗಳು, 10ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು ಅಥವಾ ITI, ಡಿಪ್ಲೋಮಾ, BA, B.Sc, B.Com, BCA ಯಾವುದೇ ಪದವಿ ಪಡೆದಿರಬೇಕು. ಸರ್ಕಾರಿ ನೌಕರರು ಅಥವಾ ಆದಾಯ ತೆರಿಗೆ ಮೌಲ್ಯಮಾಪಕರು ಇಲ್ಲದ ಕುಟುಂಬದ ಯುವಕ – ಯುವತಿಯರಿಗೆ ಅವಕಾಶ
    ವೇತನ: ಕೇಂದ್ರ ಸರ್ಕಾರದಿಂದ 4,500ರೂ. , ಜೊತೆಗೆ ಕಂಪನಿಗಳಿಂದ 500ರೂ.
    ಅಪ್ಲಿಕೇಶನ್ ಪೋರ್ಟಲ್: 12 ಅಕ್ಟೋಬರ್ 2024 ಆರಂಭಗೊಳ್ಳುತ್ತದೆ.ಇದನ್ನೂ ಓದಿ: ನವರಾತ್ರಿ ವಿಶೇಷ-2 | ವಿವಾಹಿತ ಮಹಿಳೆಯರು ದೇವಿಗೆ ಸಿಂಧೂರ ಹಚ್ಚುವ ಸಂಭ್ರಮ!

  • ಶೀಘ್ರದಲ್ಲೇ ಬರಲಿದೆ ಸ್ಯಾಟಲೈಟ್ ಆಧಾರಿತ ಟೋಲ್ ವ್ಯವಸ್ಥೆ; ಮೊದಲ 20 ಕಿಮೀವರೆಗೆ ಫ್ರೀ

    ಶೀಘ್ರದಲ್ಲೇ ಬರಲಿದೆ ಸ್ಯಾಟಲೈಟ್ ಆಧಾರಿತ ಟೋಲ್ ವ್ಯವಸ್ಥೆ; ಮೊದಲ 20 ಕಿಮೀವರೆಗೆ ಫ್ರೀ

    ಬೆಂಗಳೂರು: ಸ್ಯಾಟಲೈಟ್ (ಉಪಗ್ರಹ) ಆಧಾರಿತ ಎಲೆಕ್ಟ್ರಿಕ್‌ ಟೋಲ್ ವಸೂಲಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ, ರಾಷ್ಟ್ರೀಯ ಹೆದ್ದಾರಿಗಳ ಶುಲ್ಕ ನಿಬಂಧನೆ-2008ಕ್ಕೆ ತಿದ್ದುಪಡಿ ಮಾಡಿ ನೋಟಿಫಿಕೇಷನ್ ಜಾರಿ ಮಾಡಿದೆ. ಇದರ ಪ್ರಕಾರ, ಈಗಿರುವ ಟೋಲ್‌ಗಳಲ್ಲಿ ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ (GNSS) ಆಧಾರಿತ ಟೋಲ್ ಪದ್ದತಿ ಜಾರಿಗೆ ಬರಲಿದೆ.

    ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂನ ಆನ್ ಬೋರ್ಡ್ ಯೂನಿಟ್ (OBUs) ಹೊಂದಿರುವ ವಾಹನಗಳು ಟೋಲ್ ಪ್ಲಾಜಾವನ್ನು ಕ್ರಾಸ್ ಮಾಡಿದಾಗ, ಪಯಣಿಸಿದ ದೂರಕ್ಕೆ ಅನುಗುಣವಾಗಿ ಆಟೋಮೆಟಿಕ್ ಆಗಿ ಟೋಲ್ ಶುಲ್ಕ ಪಾವತಿ ಆಗಲಿದೆ. ಒಬಿಯು ಅಳವಡಿಸಿಕೊಂಡ ವಾಹನಗಳಿಗೆ ಪ್ರತ್ಯೇಕ ಲೇನ್ ತೆರೆಯಲಾಗುತ್ತದೆ. ಮೊದಲ 20 ಕಿಮೀ ವರೆಗೂ ಜೀರೋ ಟೋಲ್ ಕಾರಿಡಾರ್ ಜಾರಿಗೆ ತರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

    ಅಂದ್ರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮೊದಲ 20 ಕಿಲೋಮೀಟರ್‌ಗೆ ಟೋಲ್ ಪಾವತಿಸುವ ಅಗತ್ಯ ಇರುವುದಿಲ್ಲ. ನಂತರದ ಪಯಣಕ್ಕೆ ಅನುಗುಣವಾಗಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಮೊದಲಿಗೆ ರಾಷ್ಟ್ರೀಯ ಹೆದ್ದಾರಿಗಳು, ಎಕ್ಸ್‌ಪ್ರೆಸ್‌ವೇಗಳಲ್ಲಿ ಈ ವಿಧಾನ ಜಾರಿಗೆ ತಂದು, ನಂತರ ದೇಶಾದ್ಯಂತ ಇದನ್ನು ವಿಸ್ತರಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

    ಅಂದ ಹಾಗೇ, ನ್ಯಾಷನಲ್ ಪರ್ಮಿಟ್ ಹೊಂದಿರುವ ವಾಹನಗಳನ್ನು ಈ ಪದ್ದತಿಯಿಂದ ಹೊರಗಿಡಲಾಗಿದೆ. ನ್ಯಾವಿಗೇಷನ್ ಡಿವೈಸ್ ಇಲ್ಲದ ವಾಹನಗಳಿಗೆ ಸಾಮಾನ್ಯ ಟೋಲ್ ಶುಲ್ಕ ವಿಧಿಸಲಾಗುತ್ತದೆ. ಜಿಎನ್‌ಎನ್‌ಎಸ್ ಜಾರಿ ಬಗ್ಗೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇನಲ್ಲಿ ಪ್ರಾಯೋಗಿಕ ಅಧ್ಯಯನವನ್ನು ಕೇಂದ್ರ ಸರ್ಕಾರ ನಡೆಸಿತ್ತು.

  • ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಪುನರ್‌ ವಿಮರ್ಶೆ ನಡೆಸಬೇಕು – ಎಂ.ಸಿ.ಸುಧಾಕರ್

    ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಪುನರ್‌ ವಿಮರ್ಶೆ ನಡೆಸಬೇಕು – ಎಂ.ಸಿ.ಸುಧಾಕರ್

    – ಸೂಕ್ತ ಶಿಕ್ಷಣ ನೀಡುವ ಅಧ್ಯಾಪಕರ ಕೊರತೆ ಬಗ್ಗೆ ಚಿಂತಿಸಿಲ್ಲ ಎಂದ ಸಚಿವ

    ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ (National Education Policy) ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಹೇಳಿಮಾಡಿಸಿದಂತಿದ್ದು, ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಸರಿಯಾದುದ್ದಲ್ಲ, ಶಿಕ್ಷಣಕ್ಕಿಂತ ಸಮಸ್ಯೆಗಳಿಗೆ ಹೆಚ್ಚು ದಾರಿ ಮಾಡಿಕೊಡಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ (Dr. M.C.Sudhakar) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 59ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯಡಿ ಬಹುಶಿಸ್ತೀಯ, ಬಹು ಆಯ್ಕೆಯ, ಮುಕ್ತ ಶಿಕ್ಷಣಕ್ಕೆ ಆದ್ಯತೆ ನೀಡಲಾಗಿದೆ. ಈ ಶಿಕ್ಷಣ ನೀತಿ ಒಂದೇ ಸೂರಿನಡಿ ಎಲ್ಲಾ ವಿಭಾಗಗಳನ್ನು ಹೊಂದಿರುವ ಖಾಸಗಿ ವಿಶ್ವವಿದ್ಯಾಲಯ ಅಥವಾ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಿಯಾಗಿರಬಹುದು. ಆದರೆ ಕೃಷಿ, ಕಾನೂನು, ಇಂಜಿನಿಯರಿಂಗ್, ವೈದ್ಯಕೀಯ ಎಂದೂ ಹಂಚಿಹೋಗಿರುವ ಸರ್ಕಾರಿ ವಿಶ್ವವಿದ್ಯಾಲಯದಲ್ಲಿ ಅಸಾಧ್ಯವಾಗಿದೆ ಎಂದರು.ಇದನ್ನೂ ಓದಿ: ಕೇಂದ್ರ ಗೃಹ ಸಚಿವನಾಗಿ ಜಮ್ಮು-ಕಾಶ್ಮೀರ ಭೇಟಿ ಸಮಯದಲ್ಲಿ ಭಯವಾಗುತ್ತಿತ್ತು: ಸುಶೀಲ್ ಕುಮಾರ್ ಶಿಂಧೆ

    ಕಲಾ ವಿಭಾಗದಲ್ಲಿ ಓದುವ ವಿದ್ಯಾರ್ಥಿ ವಿಜ್ಞಾನ ಓದಲು ಬಯಸಿದರೆ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅವಕಾಶ ನೀಡಲಾಗಿದೆ. ಆದರೆ ಸೂಕ್ತ ಶಿಕ್ಷಣ ನೀಡುವ ಅಧ್ಯಾಪಕರ ಕೊರತೆಯ ಬಗ್ಗೆ ಚಿಂತನೆ ನಡೆಸಿಲ್ಲ. ಕರ್ನಾಟಕದ ಅನೇಕ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಕರ ಕೊರತೆಯಿದೆ. 14 ಸಾವಿರ ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದರೂ ಕೊರತೆ ಮಾತ್ರ ನೀಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಕರ್ನಾಟಕ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿದ್ದು, ಪರ್ಯಾಯವಾಗಿ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ. ಕ್ರೆಡಿಟ್ ಸ್ಕೋರ್ ಮತ್ತು ಮುಕ್ತ ಆಯ್ಕೆಗಳನ್ನು ಒಳಗೊಂಡಂತೆ ಸೂಕ್ತ ಮಾರ್ಪಾಡುಗಳನ್ನು ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ. ರಾಜ್ಯ ಶಿಕ್ಷಣ ನೀತಿಗಾಗಿ ಆಯೋಗ ರಚಿಸಿ ಮಧ್ಯಂತರ ವರದಿ ಆಧಾರ ರಾಜ್ಯ ಶಿಕ್ಷಣ ನೀತಿ ಅನುಷ್ಠಾನಗೊಳಿಸಲಾಗಿದೆ. ಅತಿಶೀಘ್ರದಲ್ಲಿ ಅಂತಿಮ ವರದಿಯನ್ನು ಕೂಡ ಸ್ವೀಕರಿಸಲಾಗುವುದು ಎಂದು ಭರವಸೆ ನೀಡಿದರು.

    ಸರ್ಕಾರಿ ಶಿಕ್ಷಣ ಸಂಸ್ಥೆಗಳು ಈಗಾಗಲೇ ಅನೇಕ ಸಮಸ್ಯೆ ಎದುರಿಸುತ್ತಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಮತ್ತಷ್ಟು ಸಮಸ್ಯೆಗೆ ಒಳಗಾಗಿತ್ತು. ಆ ಆತಂಕವನ್ನು ರಾಜ್ಯ ಸರ್ಕಾರ ದೂರಗೊಳಿಸಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ, ಬೆಳಸಬೇಕಾಗಿದೆ. ಭವಿಷ್ಯದಲ್ಲಿ ಶಿಕ್ಷಣ ಕ್ಷೇತ್ರದ ದೃಷ್ಟಿಯಿಂದ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಆದ್ಯತೆ ನೀಡಬೇಕು. ಶಿಕ್ಷಣ ಕ್ಷೇತ್ರ ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಕೂಡದು ಎಂದು ಎಚ್ಚರಿಕೆ ಗಂಟೆಯನ್ನು ಬಾರಿಸಿದ್ದಾರೆ.ಇದನ್ನೂಓದಿ: ಸಂಗೀತ ನಿರ್ದೇಶಕ ಗುರುಕಿರಣ್, ಸಮಾಜ ಸೇವಕ ರಾಜಣ್ಣಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್

    ಶಿಕ್ಷಣ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದ್ದರೂ ಅನೇಕ ಕೊರತೆಗಳನ್ನು ಎದುರಿಸುತ್ತಿದೆ. ಇನ್ನೂ ಹಿಂದುಳಿದ ರಾಜ್ಯಗಳ ಪರಿಸ್ಥಿತಿ ಏನಾಗಿರಬಹುದು? ಈ ವ್ಯವಸ್ಥೆಯಲ್ಲಿ ರಾಷ್ಟ್ರದೂದ್ದಕ್ಕೂ ಒಂದೇ ಶಿಕ್ಷಣ ವ್ಯವಸ್ಥೆ ಜಾರಿ ಹೇಗೆ ಸಾಧ್ಯ? ಪರ್ಯಾಯ ವ್ಯವಸ್ಥೆಗಳನ್ನು ರೂಪಿಸದೆ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದ ಕ್ರಮ ಸರಿಯಾದುದಲ್ಲ. ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಪುನರ್ ವಿಮರ್ಶಿಸುವ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.

  • ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ ಅನುದಾನವನ್ನು ಕೇಂದ್ರ ತಕ್ಷಣವೇ ಬಿಡುಗಡೆಗೊಳಿಸಲಿ : ಎಚ್.ಕೆ ಪಾಟೀಲ್

    ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ ಅನುದಾನವನ್ನು ಕೇಂದ್ರ ತಕ್ಷಣವೇ ಬಿಡುಗಡೆಗೊಳಿಸಲಿ : ಎಚ್.ಕೆ ಪಾಟೀಲ್

    ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಗೆ (Bhadra Meldande Project) 5,300 ಕೋಟಿ ರೂ. ಅನುದಾನವನ್ನು ತಕ್ಷಣವೇ ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ (H K Patil) ಒತ್ತಾಯಿಸಿದ್ದಾರೆ.

    2023-24ನೇ ಸಾಲಿನ ಮುಂಗಡ ಪತ್ರದಲ್ಲಿ ಕೇಂದ್ರ ಸರ್ಕಾರವು ಘೋಷಿಸಿರುವಂತೆ ಬರ ಸಂಭವನೀಯ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದಿದ್ದಾರೆ.ಇದನ್ನೂ ಓದಿ: ಕಾಶಿನಾಥ್ ಪುತ್ರನ ಸಿನಿಮಾದ ಟೀಸರ್ ರಿಲೀಸ್: ಕುತೂಹಲ ಮೂಡಿಸಿದ ಸ್ಟೋರಿ

    ಕಳೆದ ವರ್ಷ ಫೆ.01 ರಂದು ಕೇಂದ್ರ ಸರ್ಕಾರದ 2023-24ನೇ ಮುಂಗಡ ಪತ್ರದ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ರವರು ಘೋಷಣೆ ಮಾಡಿದ್ದರು. ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಯೋಜನೆ ಘೋಷಣೆಗೆ ಎಲ್ಲಾ ಅರ್ಹತೆಗಳನ್ನು ಪಡೆದು, ಎಲ್ಲಾ ಷರತ್ತುಗಳನ್ನು ಪೂರೈಸಿ, ಅನುಮೋದನೆಗೊಂಡಿರುತ್ತವೆ ಎಂದು ತಿಳಿಸಿದ್ದರು.

    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮುಂಗಡ ಪತ್ರದ ಭಾಷಣದಲ್ಲಿ ತಾನೇ ಘೋಷಿಸಿದ ಘೋಷಣೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಕಿಡಿಕಾರಿದರು.ಇದನ್ನೂ ಓದಿ: ವೃಷಭಾವತಿ ಏತ ನೀರಾವರಿ ಯೋಜನೆ ಕಾಮಗಾರಿ ಚುರುಕುಗೊಳಿಸಲು ಸಚಿವ ಎನ್.ಎಸ್ ಬೋಸರಾಜು ಸೂಚನೆ

    ಕರ್ನಾಟಕ ಸರ್ಕಾರ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರು 2024ರ ಜು.19, ಆ.03 ಹಾಗೂ ಆ.06 ರಂದು ಬರೆದ ಪತ್ರಕ್ಕೆ ಉತ್ತರ ಬರೆದ ಕೇಂದ್ರ ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ, ನದಿ ಅಭಿವೃದ್ಧಿ ಹಾಗೂ ಗಂಗಾ ಪುನರುಜ್ಜೀವನ ಇಲಾಖೆಯ ಕಾರ್ಯದರ್ಶಿ ದೇಬಶ್ರೀ ಮುಖರ್ಜಿಯವರು ಹಾರಿಕೆಯ ಉತ್ತರ ನೀಡಿದ್ದಾರೆ.

    ಕೇಂದ್ರದ ನಿಯಮಗಳು ಮತ್ತು ಷರತ್ತುಗಳಂತೆ ಎಲ್ಲಾ ಹಂತಗಳಲ್ಲೂ ಅನುಮೋದನೆಗೊಂಡು ಮುಂಗಡ ಪತ್ರದಲ್ಲಿ ಘೋಷಣೆಯಾಗಿದೆ. ಆದರೆ ಈ ಯೋಜನೆಗೆ ಈಗ ನಿರಾಕರಿಸುತ್ತಿರುವುದು ಒಕ್ಕೂಟ ವ್ಯವಸ್ಥೆಯ ಉನ್ನತ ಸಂಪ್ರದಾಯಗಳಿಗೆ ಮತ್ತು ನಿಯಮಗಳಿಗೆ ತದ್ವಿರುದ್ಧವಾಗಿದೆ.

    ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸರ್ಕಾರಗಳು ಯಾವ ಪಕ್ಷದ್ದೇ ಆಗಿರಲಿ ಪಕ್ಷಪಾತ ರಹಿತವಾಗಿರಬೇಕು. ಜನಹಿತ ಕಾಪಾಡುವ ಮೌಲ್ಯಗಳಿಗೆ ಕೇಂದ್ರದ ಬಿ.ಜೆ.ಪಿ ಸರ್ಕಾರ ತಿಲಾಂಜಲಿ ಇಡುತ್ತಿದೆ. ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಗೆ 5,300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

    ಘೋಷಿತ ಅನುದಾನ ಬಿಡುಗಡೆ ಮಾಡದಿದ್ದರೆ ಕೇಂದದ ಕ್ರಮ ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿ ನ್ಯಾಯ ಪಡೆಯಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಹಾಗೂ ಈ ಕುರಿತು ಮುಂದಿನ ಸಚಿವ ಸಂಪುಟ ಸಭೆಯ ಗಮನಕ್ಕೆ ತಂದು ಚರ್ಚಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

  • ದರ ಏರಿಕೆ ನಿಯಂತ್ರಿಸಲು ಕಡಿಮೆ ಬೆಲೆಗೆ ಈರುಳ್ಳಿ ಮಾರಾಟಕ್ಕೆ ಮುಂದಾದ ಕೇಂದ್ರ ಸರ್ಕಾರ

    ದರ ಏರಿಕೆ ನಿಯಂತ್ರಿಸಲು ಕಡಿಮೆ ಬೆಲೆಗೆ ಈರುಳ್ಳಿ ಮಾರಾಟಕ್ಕೆ ಮುಂದಾದ ಕೇಂದ್ರ ಸರ್ಕಾರ

    ನವದೆಹಲಿ: ಮಾರುಕಟ್ಟೆಯಲ್ಲಿ ಈರುಳ್ಳಿ ದರ ಏರಿಕೆ ಹಿನ್ನೆಲೆ ಇದೀಗ ಕೇಂದ್ರ ಸರ್ಕಾರ ಕಡಿಮೆ ದರದಲ್ಲಿ ಮಾರಾಟಕ್ಕೆ ಮುಂದಾಗಿದೆ.

    ಗ್ರಾಹಕರ ಮೇಲಿನ ಹೊರೆ ಕಡಿಮೆ ಮಾಡಲು ಈರುಳ್ಳಿಯನ್ನು ವಾಹನಗಳ ಮೂಲಕ ಮಾರಾಟ ಮಾಡಲಾಗುವುದು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಹೇಳಿದ್ದಾರೆ.ಇದನ್ನೂ ಓದಿ: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ – ಡಿಕೆಶಿ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಯತ್ನಾಳ್

    ದೆಹಲಿಯ ಕೃಷಿ ಭವನದಲ್ಲಿ ಈರುಳ್ಳಿ ಚಿಲ್ಲರೆ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF) ಚಿಲ್ಲರೆ ಅಂಗಡಿಗಳ ಮೂಲಕ ಈರುಳ್ಳಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಪ್ರತಿ ಕಿಲೋಗ್ರಾಂಗೆ 35 ರೂ. ಸಬ್ಸಿಡಿ ದರದಲ್ಲಿ ಈರುಳ್ಳಿಯನ್ನು ಮಾರಾಟ ಮಾಡಲಾಗುತ್ತದೆ ಎಂದು ತಿಳಿಸಿದರು.

    ಬೆಲೆ ಏರಿಕೆ ನಿಯಂತ್ರಣಕ್ಕಾಗಿ ಈ ಕಾರ್ಯಕ್ರಮವನ್ನು ನಿಯೋಜಿಸಲಾಗಿದೆ. ಈರುಳ್ಳಿ ಖರೀದಿ ಮಾಡಿ ಸಂಗ್ರಹಿಸಿ, ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಗ್ರಾಹಕರಿಗೆ ಹೊರ ಕಡಿಮೆ ಮಾಡಲು ಕೆ.ಜಿಗೆ 35 ರೂ.ಯಂತೆ ದರ ಇಳಿಸಲಾಗಿದೆ ಎಂದು ಹೇಳಿದರು.ಇದನ್ನೂ ಓದಿ: FIRE ಮನವಿಯನ್ನು ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇನೆ : ಸಿಎಂ

    ಕೃಷಿ ಭವನ, ಎನ್‌ಸಿಯುಐ ಸಂಕೀರ್ಣ, ರಾಜೀವ್ ಚೌಕ್ ಮೆಟ್ರೋ ನಿಲ್ದಾಣ, ಪಟೇಲ್ ಚೌಕ್ ಮೆಟ್ರೋ ನಿಲ್ದಾಣ, ಸಿಜಿಒ ಮತ್ತು ನೋಯ್ಡಾ ಮತ್ತು ಗಾಜಿಯಾಬಾದ್‌ನ ಕೆಲವು ಭಾಗಗಳು ಸೇರಿದಂತೆ 38 ಸ್ಥಳಗಳಲ್ಲಿ ಈರುಳ್ಳಿ ಮಾರಾಟ ವಾಹನಗಳ ಮೂಲಕ ಮಾರಾಟವನ್ನು ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.

  • ದಕ್ಷಿಣದ ರಾಜ್ಯಗಳ ಪೈಕಿ ಕರ್ನಾಟಕದಲ್ಲೇ ದರ ಕಡಿಮೆ – ತೈಲ ದರ ಏರಿಕೆಗೆ ಸಿಎಂ ಸಮರ್ಥನೆ!

    ದಕ್ಷಿಣದ ರಾಜ್ಯಗಳ ಪೈಕಿ ಕರ್ನಾಟಕದಲ್ಲೇ ದರ ಕಡಿಮೆ – ತೈಲ ದರ ಏರಿಕೆಗೆ ಸಿಎಂ ಸಮರ್ಥನೆ!

    – ಪೆಟ್ರೋಲ್ ಮೇಲೆ ಕೇಂದ್ರದ ತೆರಿಗೆ ಕಡಿಮೆ ಮಾಡ್ಬೇಕು: ಸಿದ್ದರಾಮಯ್ಯ ಆಗ್ರಹ

    ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಗೆ (Petrol, Diesel Price Hike) ಜನಸಾಮಾನ್ಯರಿಂದ ತೀವ್ರ ಆಕ್ರೋಶ ಕಂಡುಬರುತ್ತಿದೆ. ಇತ್ತ ಪೆಟ್ರೋಲ್, ಡಿಸೇಲ್ ಮೇಲಿನ ವ್ಯಾಟ್ ಹೆಚ್ಚಳವನ್ನ ಸಿಎಂ ಸಿದ್ದರಾಮಯ್ಯ (Siddaramaiah) ಸಮರ್ಥಿಸಿಕೊಂಡಿದ್ದಾರೆ.

    ಸಿಎಂ ಪ್ರಕಟಣೆಯಲ್ಲಿ ಏನಿದೆ?
    ವ್ಯಾಟ್ ಹೆಚ್ಚಳದ ನಂತರವೂ ಬಹುತೇಕ ದಕ್ಷಿಣ ಭಾರತದ (South India) ರಾಜ್ಯಗಳಲ್ಲಿ ಕರ್ನಾಟಕದಲ್ಲೇ ಪೆಟ್ರೋಲ್, ಡೀಸೆಲ್‌ ಬೆಲೆ ಕಡಿಮೆ ಇರೋದು. ಆರ್ಥಿಕವಾಗಿ ಬಲಿಷ್ಠವಾಗಿರುವ ಮಹಾರಾಷ್ಟ್ರದಲ್ಲಿ ಇಂಧನಗಳ ಮೇಲಿನ ಮಾರಾಟ ಸುಂಕ ಪೆಟ್ರೋಲ್‌ಗೆ 25% ಇದ್ದು, ಹೆಚ್ಚುವರಿಯಾಗಿ 5.12 ರೂ. ತೆರಿಗೆ ಸಹ ಇದೆ. ಇನ್ನು ಮಹಾರಾಷ್ಟ್ರದಲ್ಲಿ ಡಿಸೇಲ್ ಮೇಲೆ 21% ತೆರಿಗೆ ಇದೆ. ಕರ್ನಾಟಕದಲ್ಲಿ ಪರಿಷ್ಕೃತಗೊಂಡ ನಂತರವೂ ಈ ಸುಂಕದ ಪ್ರಮಾಣ ಮಹಾರಾಷ್ಟ್ರಕ್ಕಿಂತ ಕಡಿಮೆ ಇದೆ. ಇದರ ಹೊರತಾಗಿ ಡಿಸೇಲ್ ದರ ಕರ್ನಾಟಕದಲ್ಲಿ, ಗುಜರಾತ್ ಮತ್ತು ಮಧ್ಯಪ್ರದೇಶಗಳಿಗಿಂತಲೂ ಕಡಿಮೆ ಇದೆ. ನಮ್ಮ ರಾಜ್ಯದಲ್ಲಿ ಇಂಧನಗಳ ದರ ಜನತೆಗೆ ಕೈಗೆಟುಕುವ ದರಗಳಲ್ಲಿ ಸಿಗುತ್ತಿದೆ.

    ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಡಬಲ್ ಇಂಜಿನ್ ಸರ್ಕಾರವು ಕರ್ನಾಟಕದ ಆದಾಯ ಬೇರೆ ರಾಜ್ಯಗಳತ್ತ ಹರಿದುಹೋಗಲು ಕಾರಣವಾಗಿತ್ತು. ಆಗ ಕೇಂದ್ರ ಸರ್ಕಾರ ನಿರಂತರವಾಗಿ ಇಂಧನಗಳ ಮೇಲೆ ತೆರಿಗೆ ಹೆಚ್ಚಳ ಮಾಡ್ತಿದ್ರೆ, ರಾಜ್ಯ ಸರ್ಕಾರವು ರಾಜ್ಯದಲ್ಲಿ ಇಂಧನಗಳ ಮೇಲಿನ ತನ್ನ ಮಾರಾಟ ಸುಂಕ ಕಡಿಮೆ ಮಾಡ್ತಿತ್ತು. ಈ ಕಾರಣದಿಂದ ರಾಜ್ಯದ ಆದಾಯ ಕಡಿಮೆ ಆಯ್ತು. ಆದೇ ಹೊತ್ತಿನಲ್ಲಿ ರಾಜ್ಯದಿಂದ ಕೇಂದ್ರಕ್ಕೆ ಹೆಚ್ಚಿನ ಆದಾಯ ಹೋಗುತ್ತಿತ್ತು. ಪರೋಕ್ಷವಾಗಿ ರಾಜ್ಯದ ಆದಾಯಕ್ಕೆ ಹಿಂದಿನ ಬಿಜೆಪಿ ಸರ್ಕಾರವೇ ಕೊಕ್ಕೆ ಹಾಕಿತ್ತು.

    ಇನ್ನು 2021-22 ರಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ತೆರಿಗೆಯನ್ನ ಪೆಟ್ರೋಲ್ 13 ರೂಪಾಯಿ ಮತ್ತು ಡಿಸೇಲ್ 16 ರೂ. ಕಡಿಮೆ ಮಾಡಿತ್ತು.‌ ಸದ್ಯ ಪೆಟ್ರೋಲ್ ಮೇಲಿನ ಕೇಂದ್ರದ ತೆರಿಗೆ 19.9 ರೂಪಾಯಿ ಹಾಗೂ ಡಿಸೇಲ್ ಮೇಲೆ 18.8 ರೂ. ಇದೆ. ಇದನ್ನ ಕೇಂದ್ರ ಸರ್ಕಾರ ಜನರ ಒಳಿತಿಗೊಸ್ಕರ ಕಡಿಮೆ ಮಾಡಬೇಕು. ರಾಜ್ಯದ ವ್ಯಾಟ್ ಹೆಚ್ಚಳ ದಿಂದ ಜನರ ಸೇವೆಗಳು ಅಭಿವೃದ್ಧಿ ಕೆಲಸಗಳು ಹೆಚ್ಚು ಹಣ ನೀಡಲಿದ್ದೇವೆ. ನಾವು ಸಮತೋಲಿತ ಮತ್ತು ಜವಾಬ್ದಾರಿಯುತ ಆಡಳಿತ ನೀಡಲು ಬದ್ಧರಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

  • ಕೇಂದ್ರ, ರಾಜ್ಯದ ನಡುವೆ ಸ್ಪರ್ಧೆ ಬೇಡ – ಬರ ಪರಿಹಾರ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಸಲಹೆ

    ಕೇಂದ್ರ, ರಾಜ್ಯದ ನಡುವೆ ಸ್ಪರ್ಧೆ ಬೇಡ – ಬರ ಪರಿಹಾರ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಸಲಹೆ

    – ಎರಡು ವಾರದಲ್ಲಿ ಕೇಂದ್ರಕ್ಕೆ ಪ್ರತಿಕ್ರಿಯಿಸಲು ಸೂಚನೆ

    ನವದೆಹಲಿ: ವಿವಿಧ ರಾಜ್ಯಗಳು ನ್ಯಾಯಾಲಯವನ್ನು ಸಂಪರ್ಕಿಸುವ ಬೆಳವಣಿಗೆ ಹೆಚ್ಚುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಈ ರೀತಿಯ ಯಾವುದೇ ಪೈಪೋಟಿ ಬೇಡ ಎಂದು ಸುಪ್ರೀಂಕೋರ್ಟ್ (Supreme Court) ಸಲಹೆ ನೀಡಿದೆ. ಬರ ಪರಿಹಾರ ನಿಧಿ (Drought Relief Funds) ಬಿಡುಗಡೆಗೆ ನಿರ್ದೇಶನ ಕೋರಿ ಕರ್ನಾಟಕ ಸರ್ಕಾರ (Government of Karnataka) ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ (Central Government) ಸೂಚಿಸಿದೆ.

    ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಬಿ.ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ನೇತೃತ್ವದ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಸ್ಪರ್ಧೆ ಬೇಡ ಎಂದು ಪೀಠ ಕಿವಿಮಾತು ಹೇಳಿದೆ. ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಕಪಿಲ್ ಸಿಬಲ್ ಇನ್ನೊಂದು ತಿಂಗಳಲ್ಲಿ ಬರ ಪರಿಹಾರ ಬಿಡುಗಡೆ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಬೇಕು ಎಂದರು. ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೆ.ಕವಿತಾ ಬಂಧನ – ಜಾಮೀನು ನೀಡಲು ದೆಹಲಿ ಕೋರ್ಟ್ ನಿರಾಕರಣೆ

    ಕೇಂದ್ರ ಸರ್ಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್ (ಎಸ್‍ಜಿ) ತುಷಾರ್ ಮೆಹ್ತಾ, ಆರ್ಟಿಕಲ್ 32ರ ಅಡಿಯಲ್ಲಿ ಅರ್ಜಿ ಸಲ್ಲಿಸುವ ಬದಲು ರಾಜ್ಯ ಸರ್ಕಾರ ಕೇಂದ್ರದೊಂದಿಗೆ ಸಂವಹನ ನಡೆಸಬಹುದಿತ್ತು ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಪಿಲ್ ಸಿಬಲ್ ನೋಟಿಸ್ ನೀಡುವಂತೆ ಮನವಿ ಮಾಡಿದರು. ಮೆಹ್ತಾ ಮಧ್ಯಪ್ರವೇಶಿಸಿ ನೋಟಿಸ್ ನೀಡಬೇಡಿ, ಅನಗತ್ಯ ಸುದ್ದಿಯಾಗುತ್ತದೆ ಎಂದು ಮನವಿ ಮಾಡಿಕೊಂಡರು.

    ಬಳಿಕ ಪ್ರತಿಕ್ರಿಯಿಸಿದ ನ್ಯಾಯಾಲಯ, ಎರಡು ವಾರದಲ್ಲಿ ಸರ್ಕಾರದೊಂದಿಗೆ ಚರ್ಚಿಸಿ ಪ್ರತಿಕ್ರಿಯೆ ನೀಡಿ ಎಂದು ಸಾಲಿಸಿಟಿರ್ ಜನರಲ್ ತುಷಾರ್ ಮೆಹ್ತಾ ಮತ್ತು ಈ ವಿಷಯದಲ್ಲಿ ಹಾಜರಾಗಿದ್ದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರಿಗೆ ಸೂಚಿಸಿತು.

    ವಿಚಾರಣೆಯಲ್ಲಿ ಭಾಗಿಯಾದ ಬಳಿಕ ದೆಹಲಿಯಲ್ಲಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda), ಸಮಸ್ಯೆ ಬಗೆಹರಿಸುತ್ತೇವೆ ಎಂದು ಸುಪ್ರೀಂಕೋರ್ಟ್‍ನಲ್ಲಿ ಕೇಂದ್ರ ಸರ್ಕಾರ ಹೇಳಿದೆ. ಇಂದಿನ ವಿಚಾರಣೆಯಲ್ಲಿ ಅಟಾರ್ನಿ ಜನರಲ್ ಹಾಗೂ ಸಾಲಿಸಿಟರ್ ಜನರಲ್ ಇಬ್ಬರೂ ಹಾಜರಾಗಿದ್ದರು. ಎರಡು ವಾರದಲ್ಲಿ ಪ್ರತಿಕ್ರಿಯೆ ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದರು.

    ರಾಜ್ಯಗಳು ಸುಪ್ರೀಂಕೋರ್ಟ್‍ಗೆ ಬರುತ್ತಿರುವ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದೆ. ನೊಟೀಸ್ ಕೊಡಬೇಡಿ ಎಂದು ಕೂಡ ಸುಪ್ರೀಂಕೋರ್ಟ್ ನಲ್ಲಿ ಕೇಳಿಕೊಂಡಿದ್ದಾರೆ. ಎಲ್ಲಿ ಕೇಂದ್ರ ಸರ್ಕಾರಕ್ಕೆ ಮುಜುಗರ ಆಗುತ್ತೋ ಎನ್ನುವ ಆತಂಕವಿದೆ ಹಾಗಾಗೀ ನೊಟೀಸ್ ಕೊಡಬೇಡಿ ಎಂದು ಹೇಳಿದ್ದಾರೆ.

    ಕಳೆದ ಸೆಪ್ಟೆಂಬರ್‌ನಲ್ಲಿ ನಾವು ಬರ ಪರಿಹಾರಕ್ಕೆ ಮನವಿ ಮಾಡಿದ್ದೇವೆ. ಅಕ್ಟೋಬರ್‍ನಲ್ಲಿ ಕೇಂದ್ರದ ಅಧ್ಯಯನ ತಂಡ ಬಂದು ಹೋಗಿದೆ. ನವೆಂಬರ್‌ನಲ್ಲಿ ಪರಿಹಾರ ಬಿಡುಗಡೆಯಾಗಬೇಕಿತ್ತು. ಪರಿಹಾರ ಕೋರಿ ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಎಲ್ಲರನ್ನೂ ಭೇಟಿಯಾದರೂ ಪರಿಹಾರ ಬಿಡುಗಡೆ ಮಾಡಿಲ್ಲ. ಮನವಿ ಮಾಡಿದ ಒಂದು ತಿಂಗಳಲ್ಲಿ ಪರಿಹಾರ ನೀಡಬೇಕು. ಮಾರ್ಚ್ ಬಂದರೂ ಇನ್ನೂ ಬಿಡುಗಡೆ ಮಾಡಿಲ್ಲ ಎಂದ ಆರೋಪಿಸಿದರು.

    ಮಾರ್ಚ್ 23 ರಂದು ನಾವು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದೇವೆ ಎಂದು ಗೊತ್ತಾದ ಮೇಲೆ ಮಾರ್ಚ್ 28 ರಂದು ಅರ್ಜಿ ಸಲ್ಲಿಸಿದೆ. ಪ್ರಕೃತಿ ವಿಕೋಪಗಳಿಗೆ ಪರಿಹಾರ ನೀಡಲು ಯಾವುದೇ ನಿಯಮ ಅಡ್ಡಿ ಬರಲ್ಲ. ಪರಿಹಾರ ನೀಡದೆ ಕೇಂದ್ರ ನುಣಿಕೊಳ್ಳುತ್ತಿದೆ. ಕೇಂದ್ರ ಪರಿಹಾರ ನೀಡಿದರೆ ಸುಮಾರು 14 ಸಾವಿರ ಕೊಡಬಹುದು. ಹೀಗಾಗಿ ನಾವು ಬಾಯಿ ಮುಚ್ಚಿ ಕೂರಲ್ಲ, ಹೋರಾಟ ಮಾಡುತ್ತೇವೆ ಎಂದರು. ಇದನ್ನೂ ಓದಿ: 5,8,9ನೇ ತರಗತಿ ಪಬ್ಲಿಕ್ ಪರೀಕ್ಷೆ ಫಲಿತಾಂಶ ಪ್ರಕಟಿಸದಂತೆ ಸುಪ್ರೀಂ ತಡೆ