Tag: Central Government

  • ಕೊಂದ ಸೊಳ್ಳೆಗಳನ್ನು ಎಣಿಸುತ್ತಾ ಕೂರಬೇಕೇ: ಪ್ರತಿಪಕ್ಷಗಳಿಗೆ ವಿ.ಕೆ ಸಿಂಗ್ ಟಾಂಗ್

    ಕೊಂದ ಸೊಳ್ಳೆಗಳನ್ನು ಎಣಿಸುತ್ತಾ ಕೂರಬೇಕೇ: ಪ್ರತಿಪಕ್ಷಗಳಿಗೆ ವಿ.ಕೆ ಸಿಂಗ್ ಟಾಂಗ್

    ನವದೆಹಲಿ: ಸುಮ್ಮನೆ ಕಾಟಕೊಡುವ ಸೊಳ್ಳೆಗಳನ್ನು ಹಿಟ್ ಸ್ಪ್ರೇನಿಂದ ಸಾಯಿಸಿದ ಬಳಿಕ ಅದನ್ನು ಏಣಿಸುತ್ತಾ ಕೂರಬೇಕೇ ಎಂದು ಟ್ವೀಟ್ ಮಾಡುವ ಮೂಲಕ ಏರ್ ಸ್ಟ್ರೈಕ್ ಬಗ್ಗೆ ಪ್ರಶ್ನಿಸಿದ ಪ್ರತಿಪಕ್ಷಗಳಿಗೆ ರಕ್ಷಣಾ ಖಾತೆ ರಾಜ್ಯ ಸಚಿವ ವಿ.ಕೆ ಸಿಂಗ್ ಟಾಂಗ್ ಕೊಟ್ಟಿದ್ದಾರೆ.

    ಫೆಬ್ರವರಿ 26ರಂದು ಭಾರತೀಯ ವಾಯುಸೇನೆ ಪಾಕ್‍ನ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರರ ನೆಲೆಗಳ ಮೇಲೆ ವಾಯುದಾಳಿ ನಡೆಸಿತ್ತು. ಈ ಏರ್ ಸ್ಟ್ರೈಕ್‍ನಲ್ಲಿ ಸುಮಾರು 250 ಮಂದಿ ಉಗ್ರರು ಮೃತಪಟ್ಟಿದ್ದಾರೆ ಎಂದು ವಿ.ಕೆ ಸಿಂಗ್ ಹೇಳಿದ್ದರು.

    ಆದರೆ ಪ್ರತಿಪಕ್ಷಗಳು ಮಾತ್ರ ಇದನ್ನು ನಂಬದೆ ಉಗ್ರರು ಸಾವನ್ನಪ್ಪಿದ್ದಕ್ಕೆ ಸಾಕ್ಷಿ ಕೊಡಿ. ಎಷ್ಟು ಮಂದಿ ಉಗ್ರರು ಮೃತಪಟ್ಟಿದ್ದಾರೆ ಅಂತ ನಿಖರ ಮಾಹಿತಿ ನೀಡಿ ಅಂತ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದೆ. ಅಲ್ಲದೆ ಏರ್ ಸ್ಟ್ರೈಕ್ ಮುಂದಿಟ್ಟುಕೊಂದು ಮೋದಿ ಸರ್ಕಾರ ರಾಜಕೀಯ ಮಾಡುತ್ತಿದೆ ಅಂತ ಪ್ರತಿಪಕ್ಷಗಳು ಆರೋಪಗಳನ್ನು ಕೂಡ ಮಾಡುತ್ತಿವೆ. ಇದನ್ನೂ ಓದಿ:ಏರ್ ಸ್ಟ್ರೈಕ್‍ನಲ್ಲಿ ಸುಮಾರು 250 ಉಗ್ರರು ಬಲಿ: ಕೇಂದ್ರ ಸಚಿವ ವಿಕೆ ಸಿಂಗ್

    ಈ ಆರೋಪಗಳಿಗೆ ವಿಕೆ ಸಿಂಗ್, ಸೊಳ್ಳೆಗಳನ್ನು ಕೊಂದಾಗ ನಾವು ಅದನ್ನು ಲೆಕ್ಕ ಹಾಕಲ್ಲ ಎನ್ನುವ ಮೂಲಕ ಉಗ್ರರನ್ನು ಸೊಳ್ಳೆಗೆ ಹೋಲಿಸಿದ್ದಾರೆ. ಹಿಟ್ ಬಳಸಿ ಸೊಳ್ಳೆಯನ್ನು ಕೊಲ್ಲುವ ಹಾಗೆ ವಾಯುಪಡೆ ಏರ್ ಸ್ಟ್ರೈಕ್ ಮಾಡಿ ಉಗ್ರರನ್ನು ಮಟ್ಟಹಾಕಿದೆ ಎಂದು ಹೇಳಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಬೆಳಗ್ಗೆ 3.30ರ ಹೊತ್ತಿಗೆ ತುಂಬಾ ಸೊಳ್ಳೆಗಳು ಇತ್ತು. ಅದಕ್ಕೆ ನಾನು ಹಿಟ್ ಬಳಸಿ ಅವುಗಳನ್ನು ಕೊಂದೆ. ಈಗ ನಾನು ಎಷ್ಟು ಸೊಳ್ಳೆಗಳು ಸತ್ತಿವೆ ಅಂತ ಲೆಕ್ಕ ಹಾಕುತ್ತಾ ಕೂರಬೇಕಾ? ಅಥವಾ ನೆಮ್ಮದಿಯಿಂದ ನಿದ್ರೆ ಮಾಡಬೇಕಾ? ಅಂತ ಬರೆದು ಟ್ವೀಟ್ ಮಾಡುವ ಮೂಲಕ ತಮ್ಮದೇ ಶೈಲಿಯಲ್ಲಿ ವಿರೋಧ ಪಕ್ಷಗಳಿಗೆ ಉತ್ತರ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏರ್ ಸ್ಟ್ರೈಕ್ ಮಾಡಿದ್ದು ಉಗ್ರರ ಮೇಲೋ? ಮರಗಳ ಮೇಲೋ?: ಸಿಧು ಟಾಂಗ್

    ಏರ್ ಸ್ಟ್ರೈಕ್ ಮಾಡಿದ್ದು ಉಗ್ರರ ಮೇಲೋ? ಮರಗಳ ಮೇಲೋ?: ಸಿಧು ಟಾಂಗ್

    ನವದೆಹಲಿ: ದಿನದಿಂದ ದಿನಕ್ಕೆ ಪಾಕಿಸ್ತಾನದ ಬಾಲಕೋಟ್‍ನಲ್ಲಿ ಉಗ್ರರ ನೆಲೆ ಮೇಲೆ ಭಾರತೀಯ ವಾಯುಪಡೆ ದಾಳಿ ಮಾಡಿರುವ ವಿಚಾರ ರಾಜಕೀಯವಾಗುತ್ತಿದೆ. ಈ ಮಧ್ಯೆ ಏರ್ ಸ್ಟ್ರೈಕ್ ಮಾಡಿರೋದು ಉಗ್ರರ ಮೇಲೋ? ಅಥವಾ ಮರಗಳ ಮೇಲೋ? ಅಂತ ಪಂಜಾಬ್ ಸರ್ಕಾರದ ಮಂತ್ರಿ ನವಜೋತ್ ಸಿಂಗ್ ಸಿಧು ಟ್ವೀಟ್ ಮಾಡಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ನವಜೋತ್ ಸಿಂಗ್ ಸಿಧು, ರಾಜಕೀಯಕ್ಕೆ ಸೇನೆಯನ್ನು ಬಳಸಲಾಗುತ್ತಿದೆ. ಇದನ್ನು ನಿಲ್ಲಿಸಿ, ನೀವು ಚುನಾವಣಾ ತಂತ್ರವಾಗಿ ಏರ್ ಸ್ಟ್ರೈಕ್ ಬಳಸಿಕೊಳ್ಳತ್ತಿದ್ದಿರಾ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ ಸರ್ಜಿಕಲ್ ಸ್ಟ್ರೈಕ್ 2.0 ಅಲ್ಲಿ ನಿಜವಾಗಿಯೂ 300 ಉಗ್ರರು ಮೃತಪಟ್ಟಿದ್ದಾರಾ? ದಾಳಿ ಉಗ್ರ ಮೇಲೆ ನಡೆದಿದೆಯೋ ಅಥವಾ ಮರಗಳ ಮೇಲೋ? ಅಂತ ವ್ಯಂಗ್ಯವಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    300 ಮಂದಿ ಉಗ್ರರು ಮೃತಪಟ್ಟಿದ್ದಾರೆ ಎಂಬುದು ನಿಜಾನಾ ಅಥವಾ ಸುಳ್ಳಾ? ಇದರ ಉದ್ದೇಶವೇನು? ಏರ್ ಸ್ಟ್ರೈಕ್ ಮೂಲಕ ಉಗ್ರರನ್ನು ನೆಲಸಮ ಮಾಡಿದ್ದಿರೋ ಅಥವಾ ಮರಗಳನ್ನು ಉರುಳಿದ್ದಿರೋ? ಇದು ಚುನಾವಣಾ ತಂತ್ರನಾ? ಶತ್ರುಗಳ ವಿರುದ್ಧ ಹೋರಾಡುವಲ್ಲಿ ನಮ್ಮ ದೇಶಕ್ಕೆ ಮೋಸವಾಗಿದೆ. ದಯವಿಟ್ಟು ಸೈನಿಕರನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ. ಸೇನೆಯೂ ಕೂಡ ನಾಡಿನಷ್ಟೇ ಪವಿತ್ರವಾದದ್ದು ಎಂದು ಬರೆದು ಬಿಜೆಪಿ ನಾಯಕರ ಫೋಟೋಗಳನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

    ಒಂದು ಕಡೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ದಾಳಿಯಲ್ಲಿ 250ಕ್ಕೂ ಅಧಿಕ ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ಹೇಳಿದ್ದರು. ಇನ್ನೊಂದೆಡೆ ಕೇಂದ್ರ ಸಚಿವ ದಾಳಿಯಲ್ಲಿ ಯಾವುದೇ ಹಾನಿಯಾಗಿಲ್ಲ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ ಈಗಾಗಲೇ ಪ್ರತಿಪಕ್ಷ ನಾಯಕರು ಏರ್ ಸ್ಟ್ರೈಕ್ ಬಗ್ಗೆ ಮಾಹಿತಿ ನೀಡಿ ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಅಲ್ಲದೆ ಕೆಲವು ವಿರೋಧ ಪಕ್ಷ ನಾಯಕರು ಏರ್ ಸ್ಟ್ರೈಕ್ ಒಂದು ರಾಜಕೀಯ ಗಿಮಿಕ್ ಎಂದು ಮೋದಿ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಾ ಇದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಕೇಂದ್ರ ಸರ್ಕಾರದಿಂದ ಶಾಕ್!

    ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಕೇಂದ್ರ ಸರ್ಕಾರದಿಂದ ಶಾಕ್!

    – ಜಮಾತ್-ಇ-ಇಸ್ಲಾಂನ 70 ಪ್ರತ್ಯೇಕತಾವಾದಿಗಳ ಆಸ್ತಿ ಜಪ್ತಿ

    ನವದೆಹಲಿ: ಪುಲ್ವಾಮ ದಾಳಿ ಮಾಡಿದ ಭಯೋತ್ಪಾದಕರಿಗೆ ಹಣ ನೀಡಿರುವ ಆರೋಪದ ಮೇಲೆ ಕಾಶ್ಮೀರದ 70 ಪ್ರತ್ಯೇಕತಾವಾದಿಗಳ ಆಸ್ತಿಗಳನ್ನು ಕೇಂದ್ರ ಸರ್ಕಾರ ಜಪ್ತಿ ಮಾಡಿದೆ. ಅಲ್ಲದೆ ಉಗ್ರರಿಗೆ ಬೆಂಬಲಿಸುವ ಎಲ್ಲಾ ಪ್ರತ್ಯೇಕವಾದಿಗಳ ಆಸ್ತಿಗಳನ್ನು ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ.

    ಹೌದು, ಫೆ. 14ರಂದು ನಡೆದ ಪುಲ್ವಾಮದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಗೆ ಈ ಪ್ರತ್ಯೇಕತಾವಾದಿಗಳು ಹಣ ನೀಡಿದ್ದರು. ಅಲ್ಲದೆ ಭಾರತದಲ್ಲೇ ಇದ್ದುಕೊಂಡು ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಹಣವನ್ನು ನೀಡಿ ಬೆಂಬಲಿಸುತ್ತಿದ್ದರು ಎಂಬ ಆರೋಪದ ಮೇಲೆ ಕೇಂದ್ರ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ಸೆಕ್ಷನ್ 42 ಸಂಬಂಧಿಸಿದಂತೆ ಕಾನೂನು ಬಾಹಿರ ಚಟುವಟಿಕೆ ತಡೆಗಟ್ಟುವಿಕೆ ಕಾಯ್ದೆ ಅಡಿಯಲ್ಲಿ ಈ ಆದೇಶವನ್ನು ಮಾಡಲಾಗಿದೆ. ದಿನಕ್ಕೊಂದು ಶಾಕ್ ನೀಡುತ್ತಿರುವ ಸರ್ಕಾರದ ನಡೆಗೆ ಪ್ರತ್ಯೇಕತಾವಾದಿಗಳು ಇದೀಗ ಕಂಗಾಲಾಗಿದ್ದಾರೆ.

    ಸೆಕ್ಷನ್ 42 ರ ಪ್ರಕಾರ, ಕೇಂದ್ರವು “ಸೆಕ್ಷನ್ 7, ಸೆಕ್ಷನ್ 8 ಈ ಎರಡು ಸೆಕ್ಷನ್ ಅಡಿಯಲ್ಲಿ ಬಳಸಿಕೊಳ್ಳಬಹುದಾದ ಎಲ್ಲಾ ಅಧಿಕಾರವನ್ನು ಪ್ರತಿನಿಧಿಸಬಹುದು”. ಸೆಕ್ಷನ್ 7ರಲ್ಲಿ ಕಾನೂನು ಬಾಹಿರ ಸಂಘದ ನಿಧಿ ಬಳಸುವುದನ್ನು ನಿಷೇಧಿಸಲು ಸರ್ಕಾರಕ್ಕೆ ಅಧಿಕಾರವನ್ನು ನೀಡಲಾಗಿದೆ. ಹಾಗೆಯೇ ಸೆಕ್ಷನ್ 8ರ ಪ್ರಕಾರ ಕಾನೂನು ಬಾಹಿರ ಉದ್ದೇಶಕ್ಕಾಗಿ ಬಳಸಲಾಗುವ ಸ್ಥಳಗಳ ಮೇಲೆ ಕ್ರಮ ತೆಗೆದುಕೊಳ್ಳಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಂಘಟನೆ ನಿಷೇಧ:
    ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಸಂಘಟನೆಗಳಿಗೆ ನೆರವು ನೀಡಿ ಯುವಕರಲ್ಲಿ ದೇಶ ವಿರೋಧಿ ಭಾವನೆ ಬಿತ್ತುತ್ತಿರುವ ಆರೋಪದ ಮೇರೆಗೆ ಕೇಂದ್ರ ಸರ್ಕಾರ ಜಮಾತ್-ಇ-ಇಸ್ಲಾಮಿ (ಜೆಇಐ) ಸಂಘಟನೆಯನ್ನು ನಿಷೇಧ ಮಾಡಿದೆ. ಕಾನೂನು ಬಾಹಿರ ಚಟುವಟಿಕೆ ಕಾಯ್ದೆ 1967ರ ಸೆಕ್ಷನ್ 3ರ ಅಡಿಯಲ್ಲಿ ಸಂಘಟನೆಯನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿತ್ತು.

    ಮುಂದಿನ ಐದು ವರ್ಷಗಳ ಕಾಲ ಈ ಸಂಘಟನೆಯನ್ನು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶಾದ್ಯಂತ ನಿಷೇಧಿಸಲಾಗಿದ್ದು, ಸಂಘಟನೆಯು ಯಾವುದೇ ರೀತಿಯ ಬಹಿರಂಗ ಸಭೆ ಕಾರ್ಯಕ್ರಮ ನಡೆಸಿದರೂ ಅದು ಕಾನೂನು ಬಾಹಿರ ಎಂದು ಸೂಚಿಸಿದೆ. 1953ರಲ್ಲಿ ಬಂದ ಜೆಇಐ ಸಂಘಟನೆ ಕಾಶ್ಮೀರದಲ್ಲಿ ಪ್ರಮುಖ ಪ್ರತ್ಯೇಕತಾವಾದಿ ಸಂಘಟನೆಯಾಗಿತ್ತು. 1987ರವರೆಗೂ ಈ ಸಂಘಟನೆ ಕಾಶ್ಮೀರದ ಎಲ್ಲ ರೀತಿಯ ಚುನಾವಣೆಗಳಲ್ಲಿ ಸ್ಪರ್ಧೆ ಮಾಡುತ್ತಿತ್ತು. ಅಲ್ಲದೆ ಕಾಶ್ಮೀರದ ಹುರಿಯತ್ ಮುಖಂಡ ಸೈಯ್ಯದ್ ಅಲಿ ಶಾ ಗಿಲಾನಿ ಕೂಡ ಈ ಹಿಂದೆ ಇದೇ ಸಂಘಟನೆ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. 1989ರಲ್ಲಿ ಮೊದಲ ಬಾರಿಗೆ ಉಗ್ರ ಸಂಘಟನೆಗಳೊಂದಿಗೆ ಕೈ ಜೋಡಿಸಿದ್ದ ಈ ಜೆಇಐ ಸಂಘಟನೆ ಚುನಾವಣೆಗಳಿಂದ ದೂರ ಉಳಿದಿತ್ತು. ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರತ್ಯೇಕತಾವಾದಿಗಳ ಪರ ಕಣಿವೆ ರಾಜ್ಯದಲ್ಲಿ ಪ್ರಚಾರ ನಡೆಸುತ್ತಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏರ್‌ಸ್ಟ್ರೈಕ್ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಕೊಡಿ: ಮಮತಾ ಬ್ಯಾನರ್ಜಿ

    ಏರ್‌ಸ್ಟ್ರೈಕ್ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಕೊಡಿ: ಮಮತಾ ಬ್ಯಾನರ್ಜಿ

    ನವದೆಹಲಿ: ಏರ್‌ಸ್ಟ್ರೈಕ್ ನಡೆದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷ ಸಭೆಯನ್ನು ಕರೆದಿಲ್ಲ. ಯಾವ ಪಕ್ಷಕ್ಕೂ ಮಾಹಿತಿ ನೀಡಿಲ್ಲ. ನಮಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

    ಮಂಗಳವಾರದಂದು ಭಾರತೀಯ ವಾಯುಪಡೆ ಪಾಕಿಸ್ತಾನ ಮೂಲದ ಜೈಷ್-ಇ-ಮೊಹಮದ್ ಉಗ್ರ ಸಂಘಟನೆಯ ಉಗ್ರರ ಕ್ಯಾಂಪ್ ಮೇಲೆ ದಾಳಿ ನಡೆಸಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ನಡೆಸಿ ಮಾಹಿತಿ ತಿಳಿಸಿಲ್ಲ. ಏರ್‌ಸ್ಟ್ರೈಕ್ ಬಗ್ಗೆ ನಾವು ಮಾಧ್ಯಮಗಳನ್ನು ನೋಡಿ ಮಾಹಿತಿ ಪಡೆದಿದ್ದೇವೆ. ಯಾವ ಪ್ರದೇಶದ ಮೇಲೆ ದಾಳಿ ನಡೆಸಲಾಗಿದೆ. ಎಷ್ಟು ಬಾಂಬ್‍ಗಳನ್ನು ಉಗ್ರರ ಮೇಲೆ ಹಾಕಲಾಗಿದೆ. ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಕೇಂದ್ರ ಸರ್ಕಾರ ನಮಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    ವಿದೇಶಿ ಮಾಧ್ಯಮಗಳಲ್ಲಿ ಏರ್‌ಸ್ಟ್ರೈಕ್  ನಲ್ಲಿ ಯಾರು ಮೃತಪಟ್ಟಿಲ್ಲ ಎಂದು ವರದಿ ಬರುತ್ತಿದೆ. ಇನ್ನೊಂದೆಡೆ ಕೆಲವು ಮಾಧ್ಯಮಗಳಲ್ಲಿ ಒಬ್ಬ ಮೃತ ಪಟ್ಟಿದ್ದಾನೆ ಎಂದು ಉಲ್ಲೇಖಿಸಲಾಗುತ್ತಿದೆ. ಇದರಲ್ಲಿ ಯಾವುದು ಸತ್ಯವೆಂದು ಕೇಂದ್ರ ಸರ್ಕಾರವೇ ತಿಳಿಸಬೇಕು. ನಮಗೆ ಈಗ ಏರ್‌ಸ್ಟ್ರೈಕ್ ಬಗ್ಗೆ ಮಾಹಿತಿ ಕೊಡಿ ಎಂದು ಮಮತಾ ಬ್ಯಾನರ್ಜಿ ಕೇಳಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏರ್ ಶೋ ಅಗ್ನಿ ಅವಘಡದಲ್ಲಿ ಕಾರು ಕಳೆದುಕೊಂಡವರು ಹೇಗೆ ಇನ್ಸೂರೆನ್ಸ್ ಪಡೆಯಬಹುದು – ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

    ಏರ್ ಶೋ ಅಗ್ನಿ ಅವಘಡದಲ್ಲಿ ಕಾರು ಕಳೆದುಕೊಂಡವರು ಹೇಗೆ ಇನ್ಸೂರೆನ್ಸ್ ಪಡೆಯಬಹುದು – ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

    ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ ಶೋ ವೇಳೆ ಉಂಟಾಗಿದ್ದ ಅಗ್ನಿ ಅವಘಡದಲ್ಲಿ 500ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಸಿಕ್ಕಿ ಸುಟ್ಟು ಕರಕಲಾಗಿದ್ದು, ಹಲವರು ಲಕ್ಷಾಂತರ ರೂ. ಮೌಲ್ಯದ ಕಾರುಗಳನ್ನು ಕಳೆದುಕೊಂಡಿದ್ದಾರೆ. ಆದರೆ ಕಾರು ಕಳೆದುಕೊಂಡ ಸಾರ್ವಜನಿಕರ ನೆರವಿಗೆ ರಾಜ್ಯ ಸಾರಿಗೆ ಆಗಮಿಸಿದ್ದು, ಸಂತ್ರಸ್ತರಿಗೆ ಸಿಗಬೇಕಾದ ಎಲ್ಲಾ ದಾಖಲೆಗಳನ್ನು ನೀಡಲಾಗುತ್ತದೆ. ಕಾನೂನಿ ನಿಯಮಗಳ ಪ್ರಕಾರ ದಾಖಲೆ ಸಲ್ಲಿಸಿ ಪರಿಹಾರ ಪಡೆಯಿರಿ ಎಂದು ಇಲಾಖೆಯ ಜಂಟಿ ನಿರ್ದೇಶಕರಾದ ಜ್ಞಾನೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.

    ಅನಿರೀಕ್ಷಿತವಾಗಿ ಅವಘಡ ನಡೆದಿದ್ದು, ಇಂತಹ ಪರಿಸ್ಥಿತಿಯಲ್ಲಿ ವಿಮೆ ಪಡೆಯಲು ಸಾಧ್ಯವಿದೆ. ಇದಕ್ಕೆ ವಾಹನದ ಮಾಲೀಕರು ಪೊಲೀಸರಿಗೆ ದೂರು ನೀಡಬೇಕು. ದೂರು ನೀಡುವ ಸಂದರ್ಭದಲ್ಲಿ ವಾಹನ ದಾಖಲೆಗಳನ್ನು ನೀಡಬೇಕಾಗುತ್ತದೆ. ಆದರೆ ಅಧಿಕೃತ ದಾಖಲೆ ಇಲ್ಲದಿದ್ದರೆ ಆರ್‍ಟಿಒ ಕಚೇರಿಗೆ ತೆರಳಿ ನಕಲು ದಾಖಲೆಗಳನ್ನು ಪಡೆದು ದೂರು ಸಲ್ಲಿಸಬಹುದಾಗಿದೆ. ಪೊಲೀಸ್ ದೂರನ್ನು ಅಗತ್ಯ ದಾಖಲಾತಿಗಳೊಂದಿಗೆ ವಿಮೆ ಸಂಸ್ಥೆಗೆ ನೀಡಿದರೆ ನಿಯಮಗಳ ಅನುಸಾರ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

    ಸಾಮಾನ್ಯವಾಗಿ ವಾಹನ ಖರೀದಿ ಮಾಡಿ 15 ವರ್ಷ ಆಗಿದ್ದರೆ ರಿನೀವಲ್ (ವಿಮೆ ನವೀಕರಣ) ಮಾಡಿಸಬೇಕು. ಹಳದಿ ಬೋರ್ಡ್ ವಾಹನ ಆದರೆ ವಾಹನದ ಕಂಡಿಷನ್ ಪ್ರಮಾಣ ಪತ್ರ ನೀಡಬೇಕು. ಎಲ್ಲಾ ದಾಖಲೆಗಳು ಅವಧಿಯ ಒಳಗೆ ಇರಬೇಕಾಗುತ್ತದೆ. ವಿಮಾ ಸಂಸ್ಥೆಗಳು ಕೇಳುವ ಎಲ್ಲಾ ದಾಖಲೆಗಳನ್ನು ಸಾರಿಗೆ ಇಲಾಖೆ ನೀಡುತ್ತದೆ. ಒನ್ ಟೈಮ್ ಆಪಿಯರೇನ್ಸ್ ನಲ್ಲೇ ಇದನ್ನು ನೀಡಲು ಸದ್ಯ ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

    ಸಹಾಯ ಕೇಂದ್ರ: ವಾಹನ ಮಾಲೀಕರ ಅನುಕೂಲಕ್ಕಾಗಿ ವಾಹನ ನೊಂದಣಿ ಮತ್ತು ಚಾಲನಾ ಪತ್ರ ವಿವರಗಳನ್ನು ಪಡೆಯಲು ಬೇಕಾದ ವಿಧಾನಗಳನ್ನು ತಿಳಿದುಕೊಳ್ಳಲು ಸಾರಿಗೆ ಇಲಾಖೆ ಸಹಾಯವಾನಿಯನ್ನು ಆರಂಭಿಸಿದೆ. ಯಲಹಂಕದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಹಾಯ ಕೇಂದ್ರ ಆರಂಭಿಸಲಾಗಿದ್ದು, 080-2972 9908 ಹಾಗೂ ಮೊಬೈಲ್ ಸಂಖ್ಯೆ 94498 64050 ನಂಬರ್ ಗಳನ್ನು ಸಂಪರ್ಕಿಸಬಹುದು. ನಾಳೆ ಭಾನುವಾರ ಸರ್ಕಾರಿ ರಜಾ ದಿನವವಾದರೂ ಕೂಡ ಸಹಾಯ ಕೇಂದ್ರ ತೆರೆದಿರುತ್ತದೆ ಎಂಬ ಮಾಹಿತಿ ಲಭಿಸಿದೆ.

    ವಾಹನ ವಿಮೆ ನಿಯಮವೇನು?
    ವಾಹನ ವಿಮೆಯಲ್ಲಿ ಒಟ್ಟು ಮೂರು ವಿಧಗಳಿದ್ದು, ಪ್ರಮುಖ ಕಾರು ತಯಾರಿಕಾ ಕಂಪನಿಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿಮಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ವಿಮಾ ಪಾಲಿಸಿಯನ್ನು ಗ್ರಾಹಕರಿಗೆ ನೀಡುತ್ತಾರೆ. ರಸ್ತೆ ಅಪಘಾತ, ಅಗ್ನಿ ಆಕಸ್ಮಿಕ, ಸಿಡಿಲು, ಗಲಭೆ, ಭೂಕಂಪ, ಚಂಡಮಾರುತ ಸೇರಿದಂತೆ ಕಳ್ಳತನ ಇತ್ಯಾದಿ ಸಂದರ್ಭಗಳನ್ನು ವಿಮೆಯಲ್ಲಿ ಸೇರಿರುತ್ತೆ. ವಿಮೆ ಸಂಪೂರ್ಣವಾಗಿ ವಿಮೆ ಮೊತ್ತ ಮತ್ತು ವಾಹನದ ಬಗೆಯ ಮೇಲೆ ನಿಂತಿರುತ್ತೆ.

    ಎಲ್ಲ ವಾಹನಗಳಿಗೂ ಸಿಗಲ್ಲ ಇನ್ಯೂರೆನ್ಸ್..!
    ಅಪಘಾತದಲ್ಲಿ ಸಂದರ್ಭದಲ್ಲಿ ವಿಮೆ ಮಾಡಿಸಿದ ಎಲ್ಲಾ ವಾಹನಗಳಿಗೂ ಶೇ. 100 ರಷ್ಟು ಹಣ ಹಿಂದಿರುವುದಿಲ್ಲ. ಕಾರು ವಿಮೆಯಲ್ಲಿ ಒಟ್ಟು ಮೂರು ವಿಧಗಳಿದ್ದು, ಕಾಂಪ್ರಹೆನ್ಸೀವ್ ವಿಮೆ (ಸಮಗ್ರ ವಿಮೆ), ಥರ್ಡ್ ಪಾರ್ಟಿ ವಿಮೆ ಹಾಗೂ ಇತ್ತೀಚೆಗೆ ಬಂಪರ್ ಟು ಬಂಪರ್ ವಿಮೆ ಚಾಲ್ತಿಯಲ್ಲಿದೆ.

    ಸಮಗ್ರ ವಿಮೆಯಲ್ಲಿ ಗಾಡಿಯ ಮೌಲ್ಯ ಹಾಗೂ ವಿಮೆಯ ಮೊತ್ತದ ಮೇಲೆ ವಿಮೆ ಮೊತ್ತ ಸಿಗುತ್ತೆ. ಗಾಡಿ ಹೊಸತಾಗಿದ್ದರೆ ಬಹುತೇಕ ವಿಮಾ ಮೊತ್ತ ಹೆಚ್ಚಿರುತ್ತೆ. ಆದರೆ ಕಾಂಪ್ರೋಹೆನ್ಸಿವ್ ಇನ್ಸೂರೆನ್ಸ್ ಪಾಲಿಸಿಯಲ್ಲಿ ದುರಂತ ಸಂಭವಿಸಿದಾಗ ಕಾರಿನ ರಬ್ಬರ್, ನೈಲಾನ್ ಹಾಗೂ ಪ್ಲಾಸ್ಟಿಕ್ ವಸ್ತುಗಳಿಗೆ ಕೇವಲ ಫಿಫ್ಟಿ ಪರ್ಸೆಂಟ್ ವಿಮೆ, ಫೈಬರ್ ಗ್ಲಾಸ್‍ಗಳಿಗೆ ಶೇ. 30ರಷ್ಟು ವಿಮೆ ಹಾಗೂ ಗಾಜಿನಿಂದ ತಯಾರಿಸಲಾದ ಭಾಗಗಳಿಗೆ ಯಾವುದೇ ಇನ್ಸೂರೆನ್ಸ್ ಸಿಗುವುದಿಲ್ಲ. ಈ ಸಂದರ್ಭದಲ್ಲಿ ಅರ್ಧ ಹಣ ಮಾತ್ರ ಗ್ರಾಹಕರಿಗೆ ಲಭ್ಯವಾಗುತ್ತದೆ. ಗಾಡಿ ಒಂದು ವರ್ಷದ ಒಳಗಿದ್ದರೆ ಮಾತ್ರ ಬಹುತೇಕರಿಗೆ ಈ ಪಾಲಿಸಿನಲ್ಲಿ ದುಡ್ಡು ಸಿಗಬಹುದು. ಗಾಡಿ ಹಳೆಯದಾಗಿದ್ರೆ ಅರ್ಧದಷ್ಟೇ ಹಣ ಸಿಗುವ ಸಾಧ್ಯತೆಗಳಿವೆ.

    ಥರ್ಡ್ ಪಾರ್ಟಿ ಇನೂರೆನ್ಸ್:
    ದೊಡ್ಡ ಮೊತ್ತದ ವಿಮೆ ಕಟ್ಟಲಾರದವರು ಸಾಮಾನ್ಯ ಥರ್ಡ್ ಪಾರ್ಟಿ ಇನೂರೆನ್ಸ್ ಹೊಂದಿರುತ್ತಾರೆ. ಹಳೆಯ ಕಾರು ಹೊಂದಿರುವವರು, ಹಳೆಯ ಕಾರು ಖರೀದಿಸುವವರು ಭಾದ್ಯತಾ ವಿಮೆಯನ್ನು ಮಾಡಿಕೊಂಡಿರುತ್ತಾರೆ. ಈ ವಿಮೆ ಮಾಡಿಕೊಂಡರೆ ಬಹುತೇಕ ಅರ್ಧದಷ್ಟು ವಿಮೆ ಮಾತ್ರ ಸಿಗಲಿದೆ. ಅತ್ಯಂತ ಕಡಿಮೆ ವಿಮೆಯ ದುಡ್ಡು ವಾಪಾಸು ಸಿಗುತ್ತೆ.

    ಬಂಪರ್ ಟು ಬಂಪರ್ ಟು ಇನ್ಸೂರೆನ್ಸ್:
    ಬಹುತೇಕ ಲಕ್ಸುರಿ ಗಾಡಿಗಳು ಬಂಪರ್ ಟು ಬಂಪರ್ ಇನ್ಸುರೆನ್ಸ್ ಮಾಡಿಕೊಂಡಿರುತ್ತಾರೆ. ಈ ಇನ್ಸೂರೆನ್ಸ್ ಮಾಡಿಕೊಂಡರೆ ಬಹುತೇಕ 100% ವಿಮೆ ಪಾವತಿಯಾಗುತ್ತೆ. ಆದರೆ ವಾಹನ ತೀರಾ ಹಳೆಯದಾಗಿದರೆ ಈ ಇನ್ಯೂರೆನ್ಸ್ ಕೂಡ ಲಾಭವಿಲ್ಲ. ನೈಸರ್ಗಿಕ ವಿಪತ್ತು ಎಂದು ಎಂದು ಈ ಘಟನೆಯನ್ನು ಘೋಷಣೆ ಮಾಡಿದರೆ ಬಹುತೇಕ ಎಲ್ಲಾ ವಾಹನಗಳಿಗೆ ಶೇ.100 ರಷ್ಟು ವಿಮೆ ಸಿಗಲಿದೆ. ಇಲ್ಲದಿದ್ದರೆ ಆಯಾಯ ವಿಮೆಯ ಮೇಲೆ ಹಾಗೂ ಇನ್ಸೂರೆನ್ಸ್ ಬೆಲೆಯ ಮೇಲೆಯೆ ವಿಮೆ ದೊರೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುತ್ತಲಿನ ಕಾರು ಧಗಧಗ – ನ್ಯಾನೋ ಮಾತ್ರ ಸೇಫ್

    ಸುತ್ತಲಿನ ಕಾರು ಧಗಧಗ – ನ್ಯಾನೋ ಮಾತ್ರ ಸೇಫ್

    ಬೆಂಗಳೂರು: ಏರ್ ಶೋ ಅಗ್ನಿ ಅವಘಡದಲ್ಲಿ ನೂರಾರು ಕಾರುಗಳು ಬೆಂಕಿಯ ನರ್ತನಕ್ಕೆ ಸುಟ್ಟು ಕರಕಲಾಗಿದ್ದಾರೆ, ಅಚ್ಚರಿ ಎಂಬಂತೆ ನ್ಯಾನೋ ಕಾರು ಮಾತ್ರ ಸೇಫ್ ಆಗಿದೆ.

    ಪಾರ್ಕಿಂಗ್ ನಲ್ಲಿದ್ದ ಕಾರು ಬೆಂಕಿಯ ಪ್ರಭಾವಕ್ಕೆ ಮುಂಭಾಗ ಬಂಪರ್ ಮಾತ್ರ ಕರಗಿದ್ದು, ಇಂಜಿನ್ ಸೇರಿದಂತೆ ಬೇರೆ ಯಾವುದೇ ಭಾಗಕ್ಕೆ ಹಾನಿ ಆಗಿಲ್ಲ. ಆದರೆ ನ್ಯಾನೋ ಕಾರಿನ ಸುತ್ತಲು ಇದ್ದ ಐಶಾರಾಮಿಗಳು ಕಾರುಗಳು ಮಾತ್ರ ಮಾಲೀಕರ ಕಣ್ಣ ಮುಂದೆಯೇ ನೋಡ ನೋಡುತ್ತಿದಂತೆ ಬೆಂಕಿಗೆ ಆಹುತಿಯಾಗಿದೆ.

    ಮೂಲತಃ ನಾಗಪುರ ವ್ಯಕ್ತಿಗೆ ಸೇರಿದ ಕಾರು ಇದ್ದಾಗಿದೆ ಎಂಬ ಮಾಹಿತಿ ಲಭಿಸಿದೆ. ಘಟನೆಯಲ್ಲಿ 150 ಕ್ಕೂ ಹೆಚ್ಚು ಬೈಕ್, 300ಕ್ಕೂ ಹೆಚ್ಚು ಕಾರುಗಳು ಸುಟ್ಟು ಕರಕಲಾಗಿದ್ದು, ವಾರಾಂತ್ಯದ ರಜೆಯನ್ನು ಕಳೆಯಲು ಬಂದ ಬೆಂಗಳೂರಿನ ಜನರಿಗೆ ಇದೊಂದು ಶಾಕ್ ಆಗಿತ್ತು ಎಂದೇ ಹೇಳಬಹುದಾಗಿದೆ. ಇದನ್ನೂ ಓದಿ:ಮದ್ವೆಯಾಗಿ ಮೊದ್ಲ ಬಾರಿಗೆ ಪತಿಯ ಮನೆಗೆ ಈ ಕಾರಿನಲ್ಲೇ ಬಂದಿದ್ದೆ: ಕಾರ್ ಮಾಲಕಿ ಕಣ್ಣೀರು

    ರತನ್ ಟಾಟಾ ಅವರ ಕನಸಿನ ಕಾರು ಎಂದೇ ಖ್ಯಾತಿ ಪಡೆದಿದ್ದ ನ್ಯಾನೋ ಕಾರನ್ನು ಭಾರತದಲ್ಲೇ ಕಡಿಮೆ ಬೆಲೆಗೆ ತಯಾರಿಸಲಾಗಿತ್ತು. ಈ ಮಾದರಿಯ ಕಾರು ಪ್ರಪಂಚದಲ್ಲೇ ಅಗ್ಗದ ಕಾರು ಎಂಬ ಖ್ಯಾತಿಯನ್ನು ಪಡೆದಿತ್ತು. ದೇಶದ ಮಧ್ಯಮ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಕಾರನ್ನು ಟಾಟಾ ಮೋಟಾರ್ಸ್ ಸಂಸ್ಥೆ ವಿನ್ಯಾಸ ಮಾಡಿತ್ತು. ಇದನ್ನೂ ಓದಿ:1 ಸಾವಿರ ಕಾರ್ ಪಾರ್ಕ್ ಮಾಡಿದ್ದ ಜಾಗದಲ್ಲಿ ಬೆಂಕಿ ಅವಘಡ: ಅಗ್ನಿಶಾಮಕ ದಳದ ಡಿಜಿಪಿ

    ಸದ್ಯ ದುರಂತದಲ್ಲಿ ಹಾನಿಗೊಂಡಿರುವ ಕಾರುಗಳ ಬಗ್ಗೆ ಸ್ಥಳದಲ್ಲಿ ಪ್ರಾಥಮಿಕ ಮಾಹಿತಿ ನೀಡಲಾಗುತ್ತಿದೆ. ನಾಳೆ ಯಲಹಂಕ ಪೊಲೀಸ್ ಠಾಣೆಯಲ್ಲಿ ಕಾರು ಸುಟ್ಟು ಕರಕಲಾಗಿರುವ ಕಾರುಗಳ ಬಗ್ಗೆ ಅಧಿಕೃತ ಪತ್ರವನ್ನು ಪಡೆಯಬಹುದಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಏರೋ ಅಗ್ನಿ ಅವಘಡಕ್ಕೆ ಕಾರಣ ಏನು ಎಂಬ ಬಗ್ಗೆ ಅನುಮಾನ ಮೂಡಿದ್ದು, ಬೆಂಗಳೂರಿನಿಂದ ಏರ್ ಶೋ ಶಿಫ್ಟ್ ಮಾಡಲು ಇಂತಹ ಪ್ರಯತ್ನ ನಡೆಸಿದ್ದರಾ ಎಂಬ ಪ್ರಶ್ನೆಯನ್ನ ಏರ್ ಶೋದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ. ದುರಂತ ಕಾರಣ ತಿಳಿಯಲು ಇಲಾಖೆ ತನಿಖೆ ನಡೆಸಲು ಆದೇಶ ನೀಡಿದೆ.

    https://www.youtube.com/watch?v=odvGPUDiklw

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಪುಲ್ವಾಮಾ ದಾಳಿ ಬಳಿಕ ಮೋದಿ ಆಹಾರವನ್ನೇ ಸೇವಿಸಿರಲಿಲ್ಲ’

    ‘ಪುಲ್ವಾಮಾ ದಾಳಿ ಬಳಿಕ ಮೋದಿ ಆಹಾರವನ್ನೇ ಸೇವಿಸಿರಲಿಲ್ಲ’

    – ತಡವಾಗಿ ಮಾಹಿತಿ ತಿಳಿಸಿದ್ದಕ್ಕೆ ಕೋಪಗೊಂಡಿದ್ದ ಮೋದಿ
    – ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ಸಿನಿಂದ ಸುಳ್ಳು ಆರೋಪ: ಬಿಜೆಪಿ

    ನವದೆಹಲಿ: ಪುಲ್ವಾಮಾ ದಾಳಿಯ ಬಗ್ಗೆ ಮಾಹಿತಿ ತಿಳಿದ ಬಳಿಕ ಪ್ರಧಾನಿ ಮೋದಿ ಆಹಾರವನ್ನೇ ಸ್ವೀಕರಿಸಲಿಲ್ಲ ಎಂದು ಪ್ರಧಾನಿ ಕಚೇರಿಯ ಮೂಲಗಳನ್ನು ಆಧರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಪುಲ್ವಾಮಾ ದಾಳಿ ನಡೆದ ಬಳಿಕವೂ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ದಾಳಿ ವಿಚಾರವನ್ನು ತಡವಾಗಿ ತಿಳಿಸಿದ್ದಕ್ಕೆ ಮೋದಿ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದರು ಎಂದು ಮೂಲಗಳು ತಿಳಿಸಿವೆ.

    ಫೆ.14 ರಂದು ಪ್ರಧಾನಿ ಮೋದಿ ಪೂರ್ವ ನಿಗದಿಯಾದ ಕಾರ್ಯಕ್ರಮದಂತೆ ಬೆಳಗ್ಗೆ ಪಕ್ಷದ ಸಮಾವೇಶದಲ್ಲಿ ಭಾಗವಹಿಸಲು ಉತ್ತಾರಖಂಡ್‍ಗೆ ಆಗಮಿಸಿದ್ದರು. ಬೆಳಗ್ಗೆ ಡೆಹ್ರಾಡೂನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ 7:05ಕ್ಕೆ ರುದ್ರಪುರಕ್ಕೆ ಹೋಗಬೇಕಿತ್ತು. ಆದರೆ ಹವಾಮಾನ ವೈಪರಿತ್ಯದಿಂದಾಗಿ ಮಿಗ್-17 ಸೇನಾ ಹೆಲಿಕಾಪ್ಟರ್ ಟೇಕಾಫ್ ಆಗಿರಲಿಲ್ಲ. 11 ಗಂಟೆಗೆ ಹೆಲಿಕಾಪ್ಟರ್ ಟೇಕಾಫ್ ಆಗಿ ಮಧ್ಯಾಹ್ನ 12.30ಕ್ಕೆ ಬಿಜ್ನೋರ್ ಜಿಲ್ಲೆಯ ಬಿಕ್ಕವಾಲಾಕ್ಕೆ ಬಂದು ಅಲ್ಲಿಂದ ರಸ್ತೆ ಮೂಲಕ ಪ್ರಯಾಣ ಬೆಳೆಸಿ `ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ’ ಕ್ಕೆ ಆಗಮಿಸಿದ್ದರು.

    ಉತ್ತರಾಖಂಡ್‍ನ ರಾಮಗಂಗಾ ನದಿ ತಟದಲ್ಲಿರುವ ಜಿಮ್ ಕಾರ್ಬೆಟ್ ಪಾರ್ಕ್ ಹುಲಿಗಳಿಗೆ ಪ್ರಸಿದ್ಧವಾಗಿದ್ದು ಇಲ್ಲಿ ಟೈಗರ್ ಸಫಾರಿ, ಇಕೋ ಟೂರಿಸಂ ಹಾಗೂ ರೆಸ್ಕ್ಯೂ ಸೆಂಟರ್ ಉದ್ಘಾಟನೆ ಮಾಡಿದ ಬಳಿಕ ಕಾಲಾಘರ್ ಧಿಕಾಲಾ ಅರಣ್ಯಕ್ಕೆ ಮೊಟಾರ್ ಬೋಟ್ ಮೂಲಕ ತಲುಪಿದ್ದರು.

    ನಿಗದಿಯಾದ ವೇಳಾಪಟ್ಟಿಯ ಪ್ರಕಾರ ಸಂಜೆ ರುದ್ರಾಪೂರದಲ್ಲಿ ಸಾರ್ವಜನಿಕ ಸಮಾರಂಭವನ್ನು ಉದ್ದೇಶಿಸಿ ಮೋದಿ ಮಾತನಾಡಬೇಕಿತ್ತು. ಆದರೆ ಈ ವೇಳೆ ಪುಲ್ವಾಮಾ ದಾಳಿಯ ಬಗ್ಗೆ ಮಾಹಿತಿ ಲಭಿಸುತ್ತದೆ. ಪರಿಣಾಮ ಸಮಾರಂಭವನ್ನು ರದ್ದು ಮಾಡಿ, ರಾಷ್ಟ್ರಿಯ ಭದ್ರತಾ ಸಲಹೆಗಾರ ಹಾಗೂ ಗೃಹ ಸಚಿವ ರಾಜ್‍ನಾಥ್ ಸಿಂಗ್, ಜಮ್ಮು ಕಾಶ್ಮೀರದ ರಾಜ್ಯಪಾಲರೊಂದಿಗೆ ಮಾತನಾಡಿ ಮಾಹಿತಿ ಪಡೆದಿದ್ದರು.

    ದಾಳಿಯ ನಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಡವಾಗಿ ಮಾಹಿತಿ ಲಭಿಸಿತ್ತು. ಇದರಿಂದ ಮೋದಿ ಅಸಮಾಧಾನಗೊಂಡಿದ್ದರು. ದಾಳಿ ಬಗ್ಗೆ ಮಾಹಿತಿ ತಿಳಿದ ಬಳಿಕ ಮೋದಿ ಆಹಾರ ಸೇವಿಸಲಿಲ್ಲ. ದೆಹಲಿಗೆ ಮರಳಲು ಹೆಲಿಕಾಪ್ಟರ್ ಹಾರಾಟ ನಡೆಸಲು ಅನುಕೂಲಕರ ವಾತಾವರಣ ಇಲ್ಲದ ಕಾರಣ ಸಂಜೆ ರಾಮ್‍ನಗರದಿಂದ ಬರೇಲಿಯವರೆಗೆ ರಸ್ತೆ ಮಾರ್ಗದಲ್ಲಿ ಆಗಮಿಸಿ ಬಳಿಕ ರಾತ್ರಿ ದೆಹಲಿಗೆ ಮೋದಿ ಆಗಮಿಸಿದ್ದರು ಮೂಲಗಳು ತಿಳಿಸಿವೆ.

    ಪುಲ್ವಾಮಾ ದಾಳಿ ನಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಶೂಟಿಂಗ್ ನಲ್ಲಿ ತೊಡಗಿದ್ದರು ಎಂದು ಕಾಂಗ್ರೆಸ್ ಆರೋಪ ಮಾಡಿದ್ದು, ಯೋಧರ ಮೇಲೆ ದಾಳಿ ನಡೆದರು ಕೂಡ ಶೂಟಿಂಗ್‍ನಲ್ಲಿ ಮೋದಿ ಬ್ಯುಸಿ ಆಗಿದ್ದರು, ಇಂತಹ ಪ್ರಧಾನಿಯನ್ನು ನೋಡಿದ್ದಿರಾ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಪ್ರಶ್ನಿಸಿದ್ದರು.

    ದಾಳಿ ನಡೆದ ದಿನ ಮೋದಿಅವರು ಸಂಜೆ 7 ಗಂಟೆವರೆಗೂ ಶೂಟಿಂಗ್ ನಡೆಸಿದ್ದರು. ಅಲ್ಲದೇ ದಾಳಿಯ ಬಳಿಕವೂ ರಾಯ್‍ಪುರ ಗೆಸ್ಟ್ ಹೌಸ್‍ನಲ್ಲಿ ಮೋದಿ ಟೀ ಮತ್ತು ಸಮೋಸ ಸೇವಿಸಿದ್ದರು ಎಂದು ಆರೋಪಿಸಿದ್ದರು. ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಅವರು ಕೂಡ ಕಾಂಗ್ರೆಸ್ ಆರೋಪವನ್ನು ತಿರಸ್ಕರಿಸಿದ್ದು ರಾಜಕೀಯ ಲಾಭಕ್ಕಾಗಿ ಸುಳ್ಳು ಆರೋಪ ಮಾಡುತ್ತಿದೆ ಎಂದು ತಿರುಗೇಟು ನೀಡಿದ್ದಾರೆ. ಇದುವರೆಗೂ ಶೂಟಿಂಗ್ ನಲ್ಲಿ ಮೋದಿ ಭಾಗವಹಿಸಿದ್ದ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಹೇಳಿಕೆಯನ್ನ ನೀಡಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಾನ್ವಾಯ್ ರೂಲ್ಸ್ ಚೇಂಜ್ – ಇನ್ನು ಮುಂದೆ ವಾಯುಮಾರ್ಗದಲ್ಲಿ ತೆರಳಲಿದ್ದಾರೆ ಸೈನಿಕರು

    ಕಾನ್ವಾಯ್ ರೂಲ್ಸ್ ಚೇಂಜ್ – ಇನ್ನು ಮುಂದೆ ವಾಯುಮಾರ್ಗದಲ್ಲಿ ತೆರಳಲಿದ್ದಾರೆ ಸೈನಿಕರು

    ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮಾ ಭಯೋತ್ಪಾದಕ ದಾಳಿಯ ಬಳಿಕ ಎಚ್ಚೆತ್ತಿರುವ ಕೇಂದ್ರ ಸರ್ಕಾರ ಕೇಂದ್ರ ಸೇನಾ ಪಡೆಗಳ ಕಾನ್ವಾಯ್ ನಿಯಮವನ್ನು ಬದಲಾವಣೆ ಮಾಡಿ ಆದೇಶ ನೀಡಿದೆ.

    ಕೇಂದ್ರೀಯ ಶಸಸ್ತ್ರ ಪಡೆ(ಸಿಎಪಿಎಫ್), ಕೇಂದ್ರಿಯ ಮೀಸಲು ಪೊಲೀಸ್ ಪಡೆ(ಸಿಆರ್ ಪಿಎಫ್), ರಾಷ್ಟ್ರೀಯ ಭದ್ರತಾ ಪಡೆ(ಎನ್‍ಎಸ್‍ಜಿ) ಯೋಧರ ಕಾನ್ವಾಯ್ ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ದೆಹಲಿಯಿಂದ ಶ್ರೀನಗರ, ಶ್ರೀನಗರದಿಂದ ದೆಹಲಿ, ಜಮ್ಮುವಿನಿಂದ ಶ್ರೀನಗರ, ಶ್ರೀನಗರದಿಂದ ದೆಹಲಿಗೆ ತೆರಳುವ ಮಾರ್ಗದಲ್ಲಿ ಸೈನಿಕರನ್ನು ಕರೆದ್ಯೊಯಲು ರಸ್ತೆ ಮಾರ್ಗದ ಬದಲು ವಾಯುಮಾರ್ಗ ಬಳಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

    ಸರ್ಕಾರ ನಿರ್ಧಾರ ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಈ ತೀರ್ಮಾನದಿಂದ ಸುಮಾರು 7.80 ಲಕ್ಷ ಸಿಬ್ಬಂದಿ ಪ್ರಯೋಜನ ಪಡೆಯಲಿದ್ದಾರೆ. ಈ ಕುರಿತು ಗೃಹ ಸಚಿವಾಲಯದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಮಾಹಿತಿ ನೀಡಿದೆ.

    ಈ ಹಿಂದೆ ವಾಯುಮಾರ್ಗ ಬಳಸಲು ಹಿರಿಯ ಅಧಿಕಾರಿಗಳಿಗೆ ಸಿಮೀತವಾಗಿತ್ತು. ಸದ್ಯ ಹಿರಿಯ ಪೇದೆ, ಪೇದೆ, ಎಎಸ್‍ಐ ಎಲ್ಲಾ ಅಧಿಕಾರಿಗಳು ಕೂಡ ಸೇವೆಯನ್ನು ಪಡೆಯಬಹುದಾಗಿದೆ ಎಂದು ಕೇಂದ್ರ ಸಚಿವ ರಾಜ್‍ನಾಥ್ ಸಿಂಗ್ ಹೇಳಿದ್ದಾರೆ. ಇದು ಸೈನಿಕರ ಪ್ರಯಾಣ, ರಜೆ ಅವಧಿಯ ಪ್ರಯಾಣ ಅವಧಿಯಲ್ಲಿ ಸೈನಿಕರು ಸೇವೆಯಿಂದ ಮನೆಗೆ ತೆರಳುವ ವೇಳೆ ಸೌಲಭ್ಯ ಲಭ್ಯವಾಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇನ್ಮುಂದೆ ಎಲ್ಲಾ ತುರ್ತು ಸೇವೆ ನೆರವಿಗೂ 112 ಡಯಲ್ ಮಾಡಿ!- ಹೇಗೆ ಕೆಲಸ ಮಾಡುತ್ತೆ?

    ಇನ್ಮುಂದೆ ಎಲ್ಲಾ ತುರ್ತು ಸೇವೆ ನೆರವಿಗೂ 112 ಡಯಲ್ ಮಾಡಿ!- ಹೇಗೆ ಕೆಲಸ ಮಾಡುತ್ತೆ?

    ನವದೆಹಲಿ: ಇನ್ನು ಮುಂದೆ ಎಲ್ಲ ತುರ್ತು ಸೇವೆಗೆ ಒಂದೇ ನಂಬರ್ ಗೆ ಕರೆ ಮಾಡಬಹುದು. ಸುರಕ್ಷತೆ ತುರ್ತು ಸ್ಪಂದನ ಬೆಂಬಲ ವ್ಯವಸ್ಥೆ (ಇಆರ್ ಎಸ್‍ಎಸ್)ಗೆ ಏಕೈಕ ತುರ್ತು ಸಹಾಯವಾಣಿ ಸಂಖ್ಯೆ 112ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇಂದು ದೆಹಲಿಯಲ್ಲಿ ಚಾಲನೆ ನೀಡಿದ್ದಾರೆ.

    ಹೌದು. ಮೊದಲೆಲ್ಲ ಪೊಲೀಸ್ ನೆರವು ಬೇಕಾದಲ್ಲಿ 100ಕ್ಕೆ, ಅಗ್ನಿಶಾಮಕ ನೆರವು ಬೇಕಾದಲ್ಲಿ 101ಕ್ಕೆ, ಆರೋಗ್ಯಕ್ಕೆ 108ಗೆ ಹೀಗೆ ಬೇರೆ ಬೇರೆ ಸೇವೆಗಳಿಗೆ ವಿವಿಧ ತುರ್ತು ಸಹಾಯವಾಣಿ ಸಂಖ್ಯೆ ಇತ್ತು. ಆದ್ರೆ ಇನ್ಮುಂದೆ ಎಲ್ಲಾ ವ್ಯವಸ್ಥೆಗೂ 112 ಏಕೈಕ ತುರ್ತು ಸಹಾಯವಾಣಿ ವ್ಯವಸ್ಥೆಯನ್ನು ಆರಂಭಿಸಲಾಗಿದೆ. ಈ ವಿನೂತನ ತುರ್ತು ಸಹಾಯವಾಣಿ ಸಂಖ್ಯೆಗೆ ಸಂಕಷ್ಟದಲ್ಲಿರುವ ಮಹಿಳೆಯರು ಸಹ ಡಯಲ್ ಮಾಡಿ ನೆರವು ಪಡೆಯಬಹುದಾಗಿದೆ.

    ಸದ್ಯ ಒಟ್ಟು ದೇಶದಲ್ಲಿ 16 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಆಂಧ್ರಪ್ರದೇಶ, ಉತ್ತರಾಖಂಡ, ಪಂಜಾಬ್, ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ತಮಿಳುನಾಡು, ಗುಜರಾತ್, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ, ಪುದುಚೇರಿ, ಲಕ್ಷದೀಪ, ಅಂಡಮಾನ್, ದಾದರ್ ನಗರ್ ಹವೇಲಿ, ದಿಯು ಮತ್ತು ದಮನ್‍ನಲ್ಲಿ ಸೇವೆ ಕಾರ್ಯರೂಪಕ್ಕೆ ಬರಲಿದೆ.

    ಹೇಗೆ ಕೆಲಸ ಮಾಡುತ್ತೆ?
    * ಸ್ಮಾರ್ಟ್ ಫೋನ್ ನಲ್ಲಿ 112 ನಂಬರ್ ಡಯಲ್ ಮಾಡಬಹುದು ಅಥವಾ ಪವರ್ ಬಟನ್ ಅನ್ನು ಮೂರು ಬಾರಿ ಒತ್ತಿ ತಕ್ಷಣವೇ ಇ.ಆರ್.ಸಿ. ಕರೆಯನ್ನು ಸಕ್ರಿಯಗೊಳಿಸಬಹುದು. ಹಾಗೆಯೇ ಫೀಚರ್ ಫೋನ್‍ನಲ್ಲಿ ಸಂಖ್ಯೆ 5 ಅಥವಾ 9 ಅನ್ನು ದೀರ್ಘವಾಗಿ ಒತ್ತಿದರೆ ಇ.ಆರ್.ಸಿ. ಕರೆಯನ್ನು ಸಕ್ರಿಯಗೊಳಿಸಬಹುದಾಗಿದೆ.
    * ಸಂಬಂಧ ಪಟ್ಟ ರಾಜ್ಯಗಳ ಇಆರ್ ಎಸ್‍ಎಸ್ ಅಧಿಕೃತ ವೆಬ್‍ಸೈಟ್‍ಗೆ ಭೇಟಿ ನೀಡಿ ಅಲ್ಲಿ ನಿಮ್ಮ ಸಮಸ್ಯೆಯನ್ನು ಇ-ಮೇಲ್ ಹಾಗೂ ಎಸ್‍ಓಎಸ್ ಸಂದೇಶದ ಮೂಲಕ ರಾಜ್ಯ ಎ.ಆರ್‍ಸಿಗೆ ಕಳುಹಿಸಬಹುದು.

    * 112 ಸಹಾಯವಾಣಿಗೆ ಕರೆ ಮಾಡಿದರೆ ನೇರವಾಗಿ ಜಿಲ್ಲಾ ಕಮಾಂಡ್ ಕೇಂದ್ರದೊಂದಿಗೆ ಸಂಪರ್ಕಿಸಲಾಗಿರುತ್ತದೆ. ಹೀಗೆ ಸಂತ್ರಸ್ತರಿಗೆ ಸಂಬಂಧ ಪಟ್ಟ ಪ್ರದೇಶಗಳಿಂದ ತಕ್ಷಣ ನೆರವು ಒದಗಿಸಲಾಗುತ್ತದೆ.
    * ಈ ತುರ್ತುಸೇವೆಗಾಗಿ ನಿರ್ಭಯ ನಿಧಿಯಡಿ 321 ಕೋಟಿ ರೂಪಾಯಿಗಳ ಮೊತ್ತವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
    * 112 ಇಂಡಿಯಾ ಮೊಬೈಲ್ ಆಪ್ ಗೂಗಲ್ ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಸ್ಟೋರ್ ಗಳಲ್ಲಿ ಲಭ್ಯವಿದೆ.

    * ಸದ್ಯ ತುರ್ತು ಸಹಾಯವಾಣಿ ಕರೆಗಳಿಗೆ ಸ್ಪಂದಿಸಿ ನೆರವು ನೀಡಲು ಈಗ 10-12 ನಿಮಿಷಗಳ ಸಮಯ ತೆಗೆದುಕೊಳ್ಳುತ್ತದೆ. ಮುಂದಿನ 6-8 ತಿಂಗಳ ಒಳಗಡೆ 8 ನಿಮಿಷದಲ್ಲಿ ಕರೆಗೆ ಸ್ಪಂದನೆ ನೀಡಲು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
    * ಅಲ್ಲದೆ ಮಹಿಳೆಯರಿಗೆ ಇನ್ನಷ್ಟು ಸುರಕ್ಷತೆ ಒದಗಿಸುವ ಸಲುವಾಗಿ ದೇಶದಲ್ಲಿ ಒಟ್ಟು 8 ದೊಡ್ಡ ನಗರಗಳನ್ನು ಆರಿಸಿಕೊಂಡು ಅಲ್ಲಿ ಸುರಕ್ಷತಾ ನಗರ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸುಮಾರು 2,919 ಕೋಟಿ ರೂ. ಹಣ ಮೀಸಲಿಡಲಾಗಿದೆ. ಅಹಮದಾಬಾದ್, ಚೆನ್ನೈ, ಬೆಂಗಳೂರು, ದೆಹಲಿ, ಕೋಲ್ಕತ್ತಾ, ಹೈದರಾಬಾದ್, ಲಕ್ನೋ, ಮುಂಬೈ ನಗರಗಳನ್ನು ಸುರಕ್ಷತಾ ನಗರ ಯೋಜನೆಗೆ ಆರಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv