Tag: Central Government

  • ಸಬ್ ಅರ್ಬನ್ ರೈಲ್ವೇ ಯೋಜನೆಯ ಚೆಂಡು ಕೇಂದ್ರದ ಅಂಗಳದಲ್ಲಿದೆ – ಡಿವಿಎಸ್‍ಗೆ ಸಿಎಂ ಟಾಂಗ್

    ಸಬ್ ಅರ್ಬನ್ ರೈಲ್ವೇ ಯೋಜನೆಯ ಚೆಂಡು ಕೇಂದ್ರದ ಅಂಗಳದಲ್ಲಿದೆ – ಡಿವಿಎಸ್‍ಗೆ ಸಿಎಂ ಟಾಂಗ್

    ಬೆಂಗಳೂರು: ಸಬ್ ಅರ್ಬನ್ ರೈಲು ಯೋಜನೆಗೆ ರಾಜ್ಯ ಸರ್ಕಾರದಿಂದ ವಿಳಂಬವಾಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಸಚಿವ ಡಿ.ವಿ ಸದಾನಂದಗೌಡ ಅವರು ಆರೋಪಿಸಿದ್ದರು. ಈ ಆರೋಪವನ್ನು ತಳ್ಳಿಹಾಕಿರುವ ಸಿಎಂ ಕುಮಾರಸ್ವಾಮಿ ಅವರು ಚೆಂಡು ಈಗ ಕೇಂದ್ರದ ಅಂಗಳದಲ್ಲಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಸಬ್ ಅರ್ಬನ್ ಯೋಜನೆಗೆ ಕೇಂದ್ರದಿಂದ ಆಗಬೇಕಾದ ಎಲ್ಲಾ ಕೆಲಸಗಳನ್ನು ಮಾಡಿಕೊಡಲಾಗಿದೆ. ಆದರೆ ಯೋಜನೆ ಮುಂದಕ್ಕೆ ಹೋಗುತ್ತಿಲ್ಲ. ಇದಕ್ಕೆ ರಾಜ್ಯ ಸರ್ಕಾರ ಕಾರಣ ಎಂದು ಡಿ.ವಿ ಸದಾನಂದಗೌಡ ಆರೋಪ ಮಾಡಿದ್ದರು. ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು, ರಾಜ್ಯದ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲದೆ ಕೇಂದ್ರ ಸಚಿವರು ಮಾತನಾಡುವುದು ಶೋಭೆಯಲ್ಲ ಎಂದು ತಿರುಗೇಟು ನೀಡಿದ್ದಾರೆ.

    “ರಾಜ್ಯ ಸರ್ಕಾರದಿಂದ ಮೇಕೆದಾಟು ಯೋಜನೆ ಸಮಗ್ರ ಯೋಜನಾ ವರದಿ(ಡಿಪಿಆರ್) ಈಗಾಗಲೇ ಕೇಂದ್ರಕ್ಕೆ ಸಲ್ಲಿಸಿದ್ದೇವೆ. ಸಬ್ ಅರ್ಬನ್ ರೈಲು ಯೋಜನೆಯ ಕುರಿತು ಚರ್ಚೆಯಾಗಿದೆ. ಫೆಬ್ರವರಿ ಕೊನೆಯ ವಾರದಲ್ಲಿ ಸ್ವತಃ ರೈಲ್ವೆ ಸಚಿವ ಪಿಯೂಷ್ ಗೋಯಲ್ ಜೊತೆ ಸಭೆ ನಡೆದಿದೆ. ಎಲ್ಲ ತೊಡಕುಗಳನ್ನು ನಿವಾರಿಸುವ ಕುರಿತು ಚರ್ಚೆ ನಡೆಸಿದ್ದರು. ಅದರಂತೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಂದದ ಷರತ್ತುಗಳನ್ನು ಅನುಮೋದಿಸಿ ಕಳುಹಿಸಲಾಗಿತ್ತು. ಚೆಂಡು ಈಗ ಕೇಂದ್ರದ ಅಂಗಳದಲ್ಲಿದೆ. ನಿಜವಾಗಿಯೂ ಕಾಳಜಿ ಇದ್ದರೆ ‘ರಾಜಕೀಯ ಬೇಡ’ ಎನ್ನುವವವರು ರಾಜಕೀಯ ಬಿಟ್ಟು ರಾಜ್ಯದ ಯೋಜನೆಗಳಿಗೆ ನೆರವು ಒದಗಿಸುವುದು ಉತ್ತಮ” ಎಂದು ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದಾರೆ.

    ಡಿವಿಎಸ್ ಆರೋಪವೇನು?
    ಸೋಮವಾರ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಸದಾನಂದಗೌಡರು, ನಾನು ಕೇಂದ್ರ ರೈಲ್ವೆ ಮಂತ್ರಿಯಾಗಿದ್ದಾಗ ಐದು ವರ್ಷದಿಂದ ನಿರಂತರ ಚರ್ಚೆ ಮಾಡಿ ಕೇಂದ್ರ ಬಜೆಟ್‍ನಲ್ಲಿಲ್ಲಿ 17 ಸಾವಿರ ಕೋಟಿ ರೂ ಬಿಡುಗಡೆ ಮಾಡಿಸಿದ್ದೆ. ಆದರಂತೆ ಸಬ್ ಅರ್ಬನ್ ರೈಲು ಯೋಜನೆಯ ವೆಚ್ಚದಲ್ಲಿ ಕೇಂದ್ರ ರಾಜ್ಯಕ್ಕೆ 50:50 ವೆಚ್ಚಕ್ಕೆ ಇಳಿಸಿ ಆರು ಪ್ರಾಥಮಿಕ ರೈಲು ಕೊಟ್ಟು ಯೋಜನೆಯನ್ನು ಆರಂಭ ಮಾಡಿದ್ದೆವು. ಆದರೆ ಈ ಯೋಜನೆ ಇನ್ನೂ ಮುಂದಕ್ಕೆ ಹೋಗಿಲ್ಲ ಇದಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪ ಮಾಡಿದ್ದರು.

    ಸಬ್ ಅರ್ಬನ್ ಯೋಜನೆಗೆ ಕೇಂದ್ರ ಸರ್ಕಾದಿಂದ ಆಗಬೇಕಾದ ಎಲ್ಲ ಕೆಲಸಗಳನ್ನು ಮಾಡಿಕೊಡಲಾಗಿದೆ. ಆದರೆ ಯೋಜನೆ ಮುಂದಕ್ಕೆ ಹೋಗುತ್ತಿಲ್ಲ. ಈ ಸಂಬಂಧ ನಾನು ಸದ್ಯದಲ್ಲೇ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆಯುತ್ತೇನೆ ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಜೊತೆ ಸೇರಿ ಯೋಜನೆ ಸಂಬಂಧ ಮಾತನಾಡುತ್ತೇನೆ ಎಂದು ಹೇಳಿದ್ದರು.

  • ಬಸವರಾಜು ಎಂಪಿ ಆಗಲು ಅನ್ ಫಿಟ್, ಅವನಿಗೆ ಪ್ರಾಕ್ಟಿಕಲ್ ಆಗಿ ಏನೂ ಗೊತ್ತಿಲ್ಲ – ರೇವಣ್ಣ

    ಬಸವರಾಜು ಎಂಪಿ ಆಗಲು ಅನ್ ಫಿಟ್, ಅವನಿಗೆ ಪ್ರಾಕ್ಟಿಕಲ್ ಆಗಿ ಏನೂ ಗೊತ್ತಿಲ್ಲ – ರೇವಣ್ಣ

    ಹಾಸನ: ತುಮಕೂರು ಸಂಸದ ಬಸವರಾಜು ಎಂಪಿ ಆಗೋಕೆ ಅನ್ ಫಿಟ್, ಅವನಿಗೆ ಪ್ರಾಕ್ಟಿಕಲ್ ಆಗಿ ಏನೂ ಗೊತ್ತಿಲ್ಲ ಎಂದು ಲೋಕೋಪಯೋಗಿ ಸಚಿವರು ರೇವಣ್ಣ ಅವರು ಏಕವಚನದಲ್ಲಿ ವಾಗ್ದಾಳಿ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೇಮಾವತಿ ನದಿಯಿಂದ ತುಮಕೂರಿಗೆ ನೀರು ಬಿಡುವುದಿಲ್ಲ ಎಂದು ಆರೋಪ ಮಾಡಿದ್ದ ಬಸವರಾಜು ಅವರನ್ನು ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡರು.

    ಕಳೆದ ಬಾರಿಯೂ ಬಿಜೆಪಿಯವರೇ ಮಂತ್ರಿಯಾಗಿದ್ದರು ಆಗ ನೀರು ಬಿಡಿಸಬೇಕಿತ್ತು. ಈಗ ಅವರೇ ಸಂಸದರಾಗಿದ್ದಾರೆ ಚಾನೆಲ್ ಬೀಗ ಕೊಡುತ್ತೇನೆ ಬಿಟ್ಟುಕೊಳ್ಳಲಿ. 2006ರಲ್ಲಿ ಕುಮಾರಸ್ವಾಮಿ ಅವರ 20-20 ಸರ್ಕಾರದಲ್ಲಿಯೇ ನಾವು ತುಮಕೂರು ಜಿಲ್ಲೆಗೆ ನೀರಾವರಿ ಕಲ್ಪಿಸಿದ್ದೆವು. ಕೆಳಮಟ್ಟದ ರಾಜಕೀಯ ಮಾಡಬಾರದು ಎಂದು ಹೇಳಿ ಈಗ ಅವರೇ ಮಾಡುತ್ತಿದ್ದಾರೆ ಅವರಿಗೆ ನಾಚಿಕೆಯಾಗಬೇಕು. ಮೊದಲು ಚಾನೆಲ್‍ಗಳಲ್ಲಿ ದೊಡ್ಡ ಗಾತ್ರದ ಮರಗಳು ಬೆಳೆದಿದೆ ಅದನ್ನು ಕ್ಲೀನ್ ಮಾಡಿಸಲಿ ಎಂದು ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡರು.

    ಇದೇ ವೇಳೆ ಸಿಎಂ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ವಿಚಾರ ಬಗ್ಗೆ ಮಾತನಾಡಿ, ಕಳೆದ ಬಾರಿಯೂ ಸಿಎಂ ಗ್ರಾಮ ವಾಸ್ತವ್ಯ ಮಾಡಿದ್ದರು. ಅದರಂತೆ ಈ ಬಾರಿಯು ಪ್ರತಿ ಜಿಲ್ಲೆಯ ಒಂದು ಗ್ರಾಮದಲ್ಲಿ ಸಿಎಂ ವಾಸ್ತವ್ಯ ಮಾಡಲಿದ್ದಾರೆ. 48 ಸಾವಿರ ಕೋಟಿ ಸಾಲಮನ್ನಾ ಮಾಡಿರುವ ಸಿಎಂ ರೈತರ ಸಮಸ್ಯೆ ಬಗೆಹರಿಸಲು ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಕೇಂದ್ರ ಸರ್ಕಾರದಿಂದ ಎಲ್ಲಾ ರಾಜ್ಯಗಳಿಗೆ ತ್ರಿಭಾಷಾ ಸೂತ್ರ ಹೇರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕನ್ನಡ ಉಳಿಯಬೇಕು ಅದರ ಬಗ್ಗೆ ಪ್ರಶ್ನೆಯೇ ಇಲ್ಲ. ಒಂದು ವೇಳೆ ತ್ರಿಭಾಷಾ ಸೂತ್ರ ಅನುಸರಿಸಬೇಕು ಎಂದು ಕೇಂದ್ರ ಸರ್ಕಾರ ಒತ್ತಡ ಹಾಕಿದರೆ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

  • ಬಿಎಸ್‍ವೈಯನ್ನು ಸಿಎಂ ಮಾಡಲು ‘ಕೈ’ಗೆ ರಾಜೀನಾಮೆ ನೀಡಿ- ಎಂಬಿಪಿಗೆ ರವಿ ಟಾಂಗ್

    ಬಿಎಸ್‍ವೈಯನ್ನು ಸಿಎಂ ಮಾಡಲು ‘ಕೈ’ಗೆ ರಾಜೀನಾಮೆ ನೀಡಿ- ಎಂಬಿಪಿಗೆ ರವಿ ಟಾಂಗ್

    ಬೆಂಗಳೂರು: ಲಿಂಗಾಯತರ ಮೇಲೆ ಕಾಳಜಿ ಇದ್ದರೆ ಮಾನ್ಯ ಗೃಹ ಮಂತ್ರಿ ಎಂ.ಬಿ ಪಾಟೀಲ್ ಅವರು ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದು ಬಹುಕಾಲದಿಂದಲೂ ಲಿಂಗಾಯತರ ನಾಯಕರಾದ ಬಿ.ಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲಿ ಎಂದು ಶಾಸಕ ಸಿ.ಟಿ ರವಿ ಅವರು ಹೇಳಿದ್ದಾರೆ.

    ಬಿಜೆಪಿ ಪಕ್ಷದಲ್ಲಿ ಲಿಂಗಾಯತ ಸಮುದಾಯದ ನಾಯಕರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪ ಮಾಡಿದ್ದ ಎಂ.ಬಿ ಪಾಟೀಲ್ ವಿರುದ್ಧ ಟ್ವೀಟ್ ಮಾಡಿ ಸಿ.ಟಿ ರವಿ ಟಾಂಗ್ ಕೊಟ್ಟಿದ್ದಾರೆ.

    ಲಿಂಗಾಯುತ ಸಮುದಾಯಕ್ಕೆ ಸೇರಿದ ಸಂಸದ ಸುರೇಶ್ ಅಂಗಡಿ ಅವರಿಗೆ ಕೇಂದ್ರ ಸರ್ಕಾರದಿಂದ ರಾಜ್ಯ ಸಚಿವ ಸ್ಥಾನ ನೀಡಿರುವುದಕ್ಕೆ ಪಾಟೀಲ್ ಅವರು ಕೇಂದ್ರ ಸರ್ಕಾರ ಲಿಂಗಾಯತರಿಗೆ ಮೋಸ ಮಾಡುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದರು.

    ಈ ಟ್ವೀಟ್ ಗೆ ಸಿಟಿ ರವಿ, ಬಿಜೆಪಿ ಪಕ್ಷ ಲಿಂಗಾಯುತ ಸಮುದಾಯದ ನಾಯಕರರಾದ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಸಿದ್ಧವಿದೆ. ಲಿಂಗಾಯುತ ಸಮುದಾಯದ ಮೇಲೆ ಕಾಳಜಿ ಇರುವ ನೀವು ಏಕೆ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಬಿಜೆಪಿಗೆ ಬಂದು ಲಿಂಗಾಯುತ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಬಾರದು ಎಂದು ಪ್ರಶ್ನೆ ಕೇಳುವ ಮೂಲಕ ಕಲೆಳೆದಿದ್ದಾರೆ.

    ಪಾಟೀಲ್ ಹೇಳಿದ್ದೇನು?
    ಮಾಧ್ಯಮಗಳ ಜೊತೆ ವಿಜಯಪುರದಲ್ಲಿ ಮಾತನಾಡಿದ ಪಾಟೀಲ್ ಅವರು, ಸುರೇಶ್ ಅಂಗಡಿ ಹಾಗೂ ಪ್ರಹ್ಲಾದ್ ಜೋಶಿಗೆ ಮಾನದಂಡ ಬೇರೆ-ಬೇರೆಯಾಗಿದೆ. ಇಬ್ಬರು ನಾಲ್ಕು ಬಾರಿ ಗೆದ್ದು ಬಂದಿದ್ದು, ಅನುಭವ ಹೊಂದಿದ್ದಾರೆ. ಆದರೆ ಪ್ರಹ್ಲಾದ್ ಜೋಶಿಗೆ ಕ್ಯಾಬಿನೆಟ್ ಸ್ಥಾನ ಸಿಕ್ಕಿದರೆ ಸುರೇಶ್ ಅಂಗಡಿಯವರು ರಾಜ್ಯ ಸಚಿವರು. ಇಬ್ಬರು ಒಂದೇ ಸಮಾನವಾಗಿದ್ದರೂ ವ್ಯತ್ಯಾಸ ಮಾಡಿದ್ದಾರೆ. ಈ ವಿಚಾರವನ್ನು ಲಿಂಗಾಯತರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದರು.

    ಸುರೇಶ್ ಅಂಗಡಿಯವರಿಗೂ ಕ್ಯಾಬಿನೆಟ್ ದರ್ಜೆ ನೀಡಬೇಕಿತ್ತು. ಇದಕ್ಕೆ ಬಿಜೆಪಿ ನಾಯಕರು ಉತ್ತರ ನೀಡಬೇಕು. ಇದು ಒಂದು ದೊಡ್ಡ ಅನ್ಯಾಯ. ಈ ಮೂಲಕ ಲಿಂಗಾಯತರಿಗೆ ಅಗೌರವ ತೋರಿಸಿದ್ದಾರೆ. ಪಾಪ ಸುರೇಶ್ ಅಂಗಡಿಯವರು ಕೇಂದ್ರದ ರಾಜ್ಯ ಸಚಿವರು. ಅದಕ್ಕಾಗಿ ಪ್ರಹ್ಲಾದ್ ಜೋಶಿ ಕಡೆಗೆ ಅಂಗಡಿ ನೋಡಬೇಕು. ಸ್ವಾಭಿಮಾನವಿದ್ದರೆ ಸುರೇಶ್ ಅಂಗಡಿ ಜಾಗದಲ್ಲಿ ನಾನು ಇದ್ದಿದ್ದರೆ ಸಚಿವ ಸ್ಥಾನ ತಿರಸ್ಕಾರ ಮಾಡುತ್ತಿದ್ದೆ ಎಂದು ಹೇಳಿಕೆ ನೀಡಿದ್ದರು.

  • ಶಿಕ್ಷಣದಲ್ಲಿ ಹಿಂದಿ ಹೇರಿಕೆ ಮಾಡಲ್ಲ – ಕೇಂದ್ರ ಸರ್ಕಾರ ಸ್ಪಷ್ಟನೆ: ಏನಿದು ವಿವಾದ?

    ಶಿಕ್ಷಣದಲ್ಲಿ ಹಿಂದಿ ಹೇರಿಕೆ ಮಾಡಲ್ಲ – ಕೇಂದ್ರ ಸರ್ಕಾರ ಸ್ಪಷ್ಟನೆ: ಏನಿದು ವಿವಾದ?

    ನವದೆಹಲಿ: ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಕೇಂದ್ರ ಸರ್ಕಾರ ಹಿಂದಿಯನ್ನು ಹೇರಿಕೆ ಮಾಡುವುದಿಲ್ಲ ಎಂದು ತಿಳಿಸಿದೆ.

    ಈ ಸಂಬಂಧ ಪ್ರತಿಕ್ರಿಯಿಸಿದ ಪರಿಸರ ಸಚಿವ ಪ್ರಕಾಶ್ ಜಾವಡೇಕರ್, ಯಾವುದೇ ರಾಜ್ಯದ ಮೇಲೆ ಭಾಷೆಯನ್ನು ಹೇರಿಕೆ ಮಾಡುವುದಿಲ್ಲ. ಎಲ್ಲ ಭಾಷೆಗಳನ್ನು ನಾವು ಪ್ರೋತ್ಸಾಹಿಸುತ್ತೇವೆ. ಸಾರ್ವಜನಿಕರ ಅಭಿಪ್ರಾಯವನ್ನು ಸಿದ್ಧಪಡಿಸಿ ನೀತಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.

    ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ಮಾಜಿ ಇಸ್ರೋ ಮುಖ್ಯಸ್ಥ ಡಾ. ಕಸ್ತೂರಿ ರಂಗನ್ ಅವರು ಸಮಿತಿ ತನ್ನ ವರದಿಯ ಡ್ರಾಫ್ಟ್ ಅನ್ನು ಮೇ 31 ರಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಕೆ ಮಾಡಿತ್ತು.

    ದೇಶದ ಶಿಕ್ಷಣ ವ್ಯವಸ್ಥೆ ಅಗತ್ಯವಿರುವ ಬದಲಾವಣೆಗಳನ್ನು ಕೈಗೊಳ್ಳಲು ಸಮಿತಿ ತನ್ನ ವರದಿಯಲ್ಲಿ ಪ್ರಸ್ತಾಪ ಮಾಡಿದೆ. ವರದಿ ಸಲ್ಲಿಕೆಯಾದ ಬೆನ್ನಲ್ಲೇ ವಿವಾದವೂ ಹುಟ್ಟಿಕೊಂಡಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2019ರ ಕರಡನ್ನು ಅನ್ನು ಸಚಿವಾಲಯ ತನ್ನ ಅಧಿಕೃತ ವೆಬ್‍ಸೈಟ್ ಪ್ರಕಟ ಮಾಡಿತ್ತು. ಸದ್ಯ ಪ್ರಾದೇಶಿಕ ಭಾಷಾ ಪ್ರಾಬಲ್ಯವಿರುವ ರಾಜ್ಯಗಳಲ್ಲಿ ವರದಿಯ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

    ಶಿಫಾರಸ್ಸು ಏನು?
    ಕಸ್ತೂರಿ ರಂಗನ್ ಅವರ ರಾಷ್ಟ್ರೀಯ ಶಿಕ್ಷಣ ನೀತಿ ವರದಿಯಲ್ಲಿ ದೇಶದಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ವೇಳೆ ಮಕ್ಕಳಿಗೆ ಕಡ್ಡಾಯವಾಗಿ 2 ಭಾಷೆ ಕಲಿಯಬೇಕು ಎಂಬ ನಿಯಮವನ್ನು ವಿಧಿಸಲಾಗಿದೆ. ಇದು ತ್ರಿಭಾಷಾ ಸೂತ್ರದಡಿ ಈ ನಿಯಮವನ್ನು ರಚಿಸಲಾಗಿದ್ದು, ಇಂಗ್ಲಿಷ್, ಹಿಂದಿ ಭಾಷೆಗಳನ್ನು ಕಡ್ಡಾಯಗೊಳಿಸಲಾಗಿದೆ. ಹಿಂದಿಯೇತರ ರಾಜ್ಯಗಳಲ್ಲಿ ಪ್ರಮುಖವಾಗಿ ಪ್ರಾದೇಶಿಕ ಭಾಷೆಯಾಗಿ ಐಚ್ಛಿಕವಾಗಿ ಕಲಿಯಬಹುದು ಎಂದು ಶಿಫಾರಸು ಮಾಡಿದೆ.

    ಏನಿದು ತ್ರಿಭಾಷಾ ಸೂತ್ರ?
    1968 ರಲ್ಲಿ ಜಾರಿಗೆ ಮಾಡಲಾಗಿದ್ದ ತ್ರಿಭಾಷಾ ಸೂತ್ರದ ಅನ್ವಯ ಹಿಂದಿ ಭಾಷೆ ಮಾತನಾಡುವ ರಾಜ್ಯಗಳಲ್ಲಿ ಹಿಂದಿ, ಇಂಗ್ಲಿಷ್ ಮತ್ತು ಒಂದು ಭಾರತೀಯ ಭಾಷೆ (ದಕ್ಷಿಣ ಭಾಷೆಗಳಲ್ಲಿ) ಕಲಿಕೆ. ಹಿಂದಿ ಮಾತನಾಡದ ರಾಜ್ಯಗಳಲ್ಲಿ ಹಿಂದಿ, ಇಂಗ್ಲಿಷ್ ಮತ್ತು ಆಯಾ ಪ್ರಾದೇಶಿಕ ಭಾಷೆ ಕಲಿಸಬೇಕಿತ್ತು.

    ಈ ನೀತಿ ಜಾರಿಗೆ ಆಗಿದ್ದರೂ ಕೂಡ ತ್ರಿಭಾಷಾ ನೀತಿ ಯಶಸ್ವಿಯಾಗಿಲ್ಲ. ಏಕೆಂದರೆ ಭಾಷಾ ಶಿಕ್ಷಕರ ಕೊರತೆ ಹಾಗೂ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿ ಕಲಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಂದಿನ ತಮಿಳು ನಾಡು ಸರ್ಕಾರ ತ್ರಿಭಾಷಾ ನೀತಿಯನ್ನ ತಿರಸ್ಕರಿಸಿ ದ್ವಿಭಾಷಾ ನೀತಿಯನ್ನೇ ಅಳವಡಿಸಿಕೊಂಡಿತ್ತು.

    ಕೇಂದ್ರದ ಸ್ಪಷ್ಟನೆ: ಹಿಂದಿ ಭಾಷೆಯ ಕಲಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರದ ಅನ್ವಯ ಹಿಂದಿ ಭಾಷೆ ಆಯಾ ವಿದ್ಯಾರ್ಥಿಯ ಆಯ್ಕೆಯಾಗಿದೆ ಎಂದು ತಿಳಿಸಿದೆ. ಅಲ್ಲದೇ ಕರಡನ್ನು ಬದಲಾಯಿಸಿರುವ ಕೇಂದ್ರ ಸರ್ಕಾರ ಹಿಂದಿ ಐಚ್ಛಿಕ ಭಾಷೆಯಾಗಿ ಕಲಿಸಿದರೆ ಸಾಕು ಎಂದು ತಿಳಿಸಿದೆ.

    ವಿರೋಧ ಏಕೆ?
    ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಹಿಂದಿ ಕಲಿಕೆ ಕಡ್ಡಾಯ ಎಂಬ ವರದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದಂತೆ ಈ ಬಗ್ಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಿಂದಿಯನ್ನು ಬಲವಂತವಾಗಿ ಹಿಂದಿಯೇತರ ರಾಜ್ಯಗಳ ಮೇಲೆ ಹಾಕಲಾಗುತ್ತಿದೆ ಎಂದು ಆರೋಪಿಸಿ ವಿರೋಧಿಸಿ ಅಭಿಯಾನವನ್ನು ನಡೆಸಲಾಗಿತ್ತು. ಸದ್ಯ ಕೇಂದ್ರ ವಿವಾದ ಅಂಶವುಳ್ಳ ಸಂಗತಿಯನ್ನ ಡ್ರಾಫ್ಟ್‍ನಿಂದ ತೆಗೆದು ಹಾಕಿ ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದೆ. ಈ ಬಗ್ಗೆ ಕೇಂದ್ರ ಸಚಿವ ಸದಾನಂದ ಗೌಡ ಅವರು ಸ್ಪಷ್ಟನೆ ನೀಡಿ, ಯಾವುದೇ ಕಾರಣಕ್ಕೂ ಸ್ಥಳೀಯ ಭಾಷೆಗಳನ್ನು ಕಡೆಗಣಿಸುವಂತಿಲ್ಲ. ಭಾರತದ ಅಖಂಡತೆ, ವೈವಿಧ್ಯತೆ ಕಾಪಾಡಲು ಕೇಂದ್ರ ಸರ್ಕಾರ ಬದ್ಧ ಎಂದಿದ್ದಾರೆ.

  • ಸಬ್ ಅರ್ಬನ್ ರೈಲು ಯೋಜನೆಗೆ ರಾಜ್ಯ ಸರ್ಕಾರದಿಂದ ವಿಳಂಬ – ಡಿವಿಎಸ್ ಆರೋಪ

    ಸಬ್ ಅರ್ಬನ್ ರೈಲು ಯೋಜನೆಗೆ ರಾಜ್ಯ ಸರ್ಕಾರದಿಂದ ವಿಳಂಬ – ಡಿವಿಎಸ್ ಆರೋಪ

    ಬೆಂಗಳೂರು: ಸಬ್ ಅರ್ಬನ್ ರೈಲು ಯೋಜನೆಗೆ ಕೇಂದ್ರ ಸರ್ಕಾದಿಂದ ಹಣ ಬಿಡುಗಡೆಯಾಗಿದ್ದರೂ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಸಚಿವ ಡಿ.ವಿ ಸದಾನಂದಗೌಡ ಆರೋಪ ಮಾಡಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಕೇಂದ್ರ ರೈಲ್ವೆ ಮಂತ್ರಿಯಾಗಿದ್ದಾಗ ಐದು ವರ್ಷದಿಂದ ನಿರಂತರ ಚರ್ಚೆ ಮಾಡಿ ಕೇಂದ್ರ ಬಜೆಟ್‍ನಲ್ಲಿಲ್ಲಿ 17 ಸಾವಿರ ಕೋಟಿ ರೂ ಬಿಡುಗಡೆ ಮಾಡಿಸಿದ್ದೆ. ಆದರಂತೆ ಸಬ್ ಅರ್ಬನ್ ರೈಲು ಯೋಜನೆಯ ವೆಚ್ಚದಲ್ಲಿ ಕೇಂದ್ರ – ರಾಜ್ಯಕ್ಕೆ 50:50 ವೆಚ್ಚಕ್ಕೆ ಇಳಿಸಿ ಆರು ಪ್ರಾಥಮಿಕ ರೈಲು ಕೊಟ್ಟು ಯೋಜನೆಯನ್ನು ಆರಂಭ ಮಾಡಿದ್ದೆವು. ಆದರೆ ಈ ಯೋಜನೆ ಇನ್ನೂ ಮುಂದಕ್ಕೆ ಹೋಗಿಲ್ಲ ಇದಕ್ಕೆ ರಾಜ್ಯ ಸರ್ಕಾರವೇ ಕಾರಣ ಎಂದು ಆರೋಪ ಮಾಡಿದರು.

    ಸಬ್ ಅರ್ಬನ್ ಯೋಜನೆಗೆ ಕೇಂದ್ರ ಸರ್ಕಾದಿಂದ ಆಗಬೇಕಾದ ಎಲ್ಲ ಕೆಲಸಗಳನ್ನು ಮಾಡಿಕೊಡಲಾಗಿದೆ. ಆದರೆ ಯೋಜನೆ ಮುಂದಕ್ಕೆ ಹೋಗುತ್ತಿಲ್ಲ. ಈ ಸಂಬಂಧ ನಾನು ಸದ್ಯದಲ್ಲೇ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆಯುತ್ತೇನೆ ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಜೊತೆ ಸೇರಿ ಯೋಜನೆ ಸಂಬಂಧ ಮಾತನಾಡುತ್ತೇನೆ ಎಂದರು.

    ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್ ಅವರು ಈಗಾಗಲೇ ನನ್ನ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆಯಲ್ಲಿ ಹಲವು ಮಹತ್ತರ ಕೆಲಸ ಮಾಡಿದ್ದಾರೆ. ನಾನು ಇಲಾಖೆಯ ಕೆಲಸಗಳಿಗೆ ಇನ್ನಷ್ಟು ವೇಗ ಒದಗಿಸುತ್ತೇನೆ. ಜನೌಷಧಿ ಕೇಂದ್ರಗಳು ಜನರ ನಡುವೆ ಮೆಚ್ಚುಗೆ ಗಳಿಸಿವೆ. ಕೆಲವು ಕಡೆ ಜನೌಷಧಿ ಕೇಂದ್ರಗಳಿಗೆ ಔಷಧಿಗಳ ಕೊರತೆ ಆಗಿದ್ದು ಔಷಧಿಗಳ ಕೊರತೆ ನಿವಾರಿಸಲು ಕ್ರಮಕೈಗೊಳ್ಳುತ್ತೇನೆ. ಕ್ಯಾನ್ಸರ್ ಸಂಬಂಧಿ ಔಷಧಿಗಳನ್ನೂ ಜನೌಷಧಿಗೆ ತರುತ್ತೇವೆ ಎಂದು ಭರವಸೆ ನೀಡಿದರು.

    ಇದೇ ವೇಳೆ ಪ್ರಥಮ ಕೇಂದ್ರ ಕ್ಯಾಬಿನೆಟ್ ಸಭೆಯ ಬಗ್ಗೆ ಮಾತನಾಡಿ, ಈ ಸಭೆಯಲ್ಲಿ ಪ್ರಧಾನಿ ಮೋದಿ ಅವರು ರೈತಪರ ನಿಲುವುಗಳನ್ನು ಕೈಗೊಂಡಿದ್ದಾರೆ. ಇದು ಕೇಂದ್ರ ಸರ್ಕಾರದ ಮುಂದಿನ ನಡೆಗೆ ದಿಕ್ಸೂಚಿಯಾಗಿದೆ. ಮುಂದಿನ 15 ದಿನಗಳಲ್ಲಿ ನನ್ನ ಗೃಹ ಕಚೇರಿಯಲ್ಲಿ ಸಣ್ಣ ಕಾರ್ಯಾಲಯ ಸ್ಥಾಪನೆ ಮಾಡುತ್ತೇವೆ. ನಾವು ನಾಲ್ವರು ಕೇಂದ್ರ ಮಂತ್ರಿಗಳು ರಾಜ್ಯದ ಜನರಿಗೆ ಸದಾ ಲಭ್ಯ. ಮುಂದಿನ ನೂರು ದಿನಗಳಲ್ಲಿ ಏನಾಗಬೇಕು ಎನ್ನುವ ರೂಪುರೇಷೆ ಸಿದ್ಧಪಡಿಸಲು ಪ್ರಧಾನಿಯವರು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

    ಸಿಎಂ ಕುಮಾರಸ್ವಾಮಿ ಅವರು ಗ್ರಾಮವಾಸ್ತವ್ಯದ ಬಗ್ಗೆ ಕೇಳಿದ ಪ್ರಶ್ನೆಗೆ, ಈ ಹಿಂದೆ ಕುಮಾರಸ್ವಾಮಿ ಮಾಡಿದ ಗ್ರಾಮವಾಸ್ತವ್ಯ ಅವರಿಗೆ ಸರಿಯಾದ ಫಲಕೊಟ್ಟಿಲ್ಲ. ಅವರು ವಾಸ್ತವ್ಯ ಮಾಡಿದ್ದ ಹಳ್ಳಿಗಳಲ್ಲೇ ಅವರಿಗೆ ತಿರುಗು ಬಾಣವಾಗಿತ್ತು. ಹಾಗಾಗಿ ಈಗ ಶಾಲೆಯಲ್ಲಿ ವಾಸ್ತವ್ಯ ಮಾಡಲು ಹೊರಟಿದ್ದಾರೆ. ಹುಡುಗರು ಶಾಲೆಗಳಿಗೆ ಕಲಿಯಲು ಹೋಗುತ್ತಾರೆ. ಈಗ ಕುಮಾರಸ್ವಾಮಿಯವರೂ ಸಹ ಶಾಲಾ ವಾಸ್ತವ್ಯವದ ಮೂಲಕ ಕಲಿಯಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.

    ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಸಿಎಂ ಅವರ ಕಾಲೆಳೆದ ಡಿವಿಎಸ್, ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ 24 ಗಂಟೆಗಳಲ್ಲಿ ಕುಮಾರಸ್ವಾಮಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎಂದು ನಾನು ಭವಿಷ್ಯ ಹೇಳಿದ್ದು ನಿಜ. ಅದರಂತೆ ಕುಮಾರಸ್ವಾಮಿ ರಾಜೀನಾಮೆಗೆ ಮುಂದಾಗಿದ್ದು ನಿಜ. ಆದರೆ ಬೇರೆಯವರು ಬಾಗಿಲು ಬಂದ್ ಮಾಡಿ ಅವರನ್ನು ಒಳಗೆ ಕೂರುವಂತೆ ಮಾಡಿದರು. ನಾನೇನು ಮಾಡಲಿ? ಭವಿಷ್ಯ ಕೇಳಿಕೊಂಡು ಬಂದು ಗೆಲ್ಲುತ್ತೇನೆ ಎಂದ ದೇವೇಗೌಡರೇ ಸೋತುಹೋದರು. ಇನ್ನು ನಮ್ಮ ಭವಿಷ್ಯ ಹೇಗೆ ಸತ್ಯವಾಗುತ್ತದೆ ಎಂದು ವ್ಯಂಗ್ಯವಾಡಿದರು.

    ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಸುಳಿವು ನೀಡಿದ ಸದಾನಂದಗೌಡರು, ನಾವು ಮೈತ್ರಿ ಸರ್ಕಾರ ಬೀಳಿಸಲು ಹೋಗಲ್ಲ. ಅವರಾಗಿಯೇ ಬೀಳಿಸಿದರೆ ನಾವು ಹೊಣೆಯಲ್ಲ. ಹಾಗೇನಾದರೂ ಆದರೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿದೆ. ರಾಜ್ಯದಲ್ಲಿ ನಾವು ಮತ್ತೆ ಬಹುದೊಡ್ಡ ಪಕ್ಷವಾಗಿ ಅಧಿಕಾರ ಹಿಡಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ನರ್ಸರಿ ಕವಿತೆ ಮೂಲಕ ಮೋದಿಯನ್ನು ಟೀಕಿಸಿದ ಆರ್‌ಜೆಡಿ!

    ನರ್ಸರಿ ಕವಿತೆ ಮೂಲಕ ಮೋದಿಯನ್ನು ಟೀಕಿಸಿದ ಆರ್‌ಜೆಡಿ!

    ನವದೆಹಲಿ: ಬಿಹಾರದ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅಧ್ಯಕ್ಷತೆ ವಹಿಸಿರುವ ಆರ್‌ಜೆಡಿ(ರಾಷ್ಟ್ರೀಯಾ ಜನತಾ ದಳ) ಪಕ್ಷವು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಮಕ್ಕಳ ನರ್ಸರಿ ಕವಿತೆ ಮೂಲಕ ವ್ಯಂಗ್ಯವಾಡಿದ್ದಾರೆ.

    ಭವಿಷ್ಯದಲ್ಲಿ, ಮೋದಿ ಭಕ್ತರ ಮಕ್ಕಳು ಈ ಕವಿತೆಯನ್ನು ಕಲಿಯುವರು ಎಂದು ನರ್ಸರಿ ಕವಿತೆಯೊಂದನ್ನು ಮೋದಿ ಹಾಗೂ ಬಿಜೆಪಿ ಸರ್ಕಾರದ ಬಗ್ಗೆ ವ್ಯಂಗ್ಯವಾಗಿ ಬದಲಿಸಿ ಆರ್‌ಜೆಡಿ ಟ್ವೀಟ್ ಮಾಡಿದೆ.

    ಟ್ವೀಟ್‍ನಲ್ಲಿ ಮೋದಿ ಸರ್ಕಾರ ದೇಶದಲ್ಲಿ ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ. ಈ ಸರ್ಕಾರ ರೈತರನ್ನು ಸಂತೋಷವಾಗಿಟ್ಟಿಲ್ಲ. ಮಹಿಳೆಯರಿಗೆ ರಕ್ಷಣೆಯನ್ನೂ ನೀಡಿಲ್ಲ, ಯುವಕರಿಗೆ 10 ಲಕ್ಷ ಉದ್ಯೋಗವನ್ನೂ ಸೃಷ್ಟಿಸಿಲ್ಲ. 15 ಲಕ್ಷ ರೂ. ಜನರ ಖಾತೆಗೂ ಹಾಕಿಲ್ಲ. 2014ರ ಚುನಾವಣೆ ಮೊದಲು ನೀಡಿದ್ದ ಯಾವುದೇ ಮಾತನ್ನು ಕಾರ್ಯರೂಪಕ್ಕೆ ತಂದಿಲ್ಲ ಎಂದು ಕವಿತೆ ರಚಿಸಿ ಟಾಂಗ್ ನೀಡಿದೆ.

    ತೇಜಸ್ವಿ ಯಾದವ್ ದೇಶದಲ್ಲಿ ನಿರುದ್ಯೋಗಕ್ಕೆ ಪ್ರಮುಖ ಕಾರಣ ಪ್ರಧಾನಿ ಮೋದಿ, ಅವರ ಒಡೆದು ಆಳುವ ನೀತಿಗೆ ಬಿಹಾರದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಕಳೆದ ಐದು ವರ್ಷಗಳಲ್ಲಿ ನೀವು ಏನು ಕೆಲಸ ಮಾಡಿದ್ದೀರಿ? ಬಿಹಾರಕ್ಕೆ ಭರವಸೆ ನೀಡಿದ ವಿಶೇಷ ಪ್ಯಾಕೇಜ್ ಸಿಕ್ಕಿದೆಯೇ? ರೈತರ ಆದಾಯವನ್ನು ದ್ವಿಗುಣಗೊಳಿಸಿದ್ದಿರಾ? ಯುವಜನರಿಗೆ ಉದ್ಯೋಗ ದೊರೆತಿದೆಯೇ? ಹಣದುಬ್ಬರ ದರ ಕಡಿಮೆಯಾಗಿದೆಯೇ? ಇದು ಮೋದಿ ಒಡೆದು ಆಳುವ ರಾಜಕಾರಣವನ್ನು ಮಾಡುತ್ತಿದ್ದಾರೆ. ಇದಕ್ಕೆ ಬಿಹಾರದವರು ಸರಿಯಾದ ಉತ್ತರ ನೀಡುತ್ತಾರೆ ಎಂದು ಹರಿಹಾಯ್ದರು.

    40 ಲೋಕಸಭಾ ಸ್ಥಾನಗಳನ್ನು ಹೊಂದಿರುವ ಬಿಹಾರದಲ್ಲಿ ಎಲ್ಲಾ ಏಳು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಅಂತಿಮ ಫಲಿತಾಂಶಗಳು ಮೇ 23 ರಂದು ಪ್ರಕಟವಾಗಲಿದೆ. ಬಿಹಾರದಲ್ಲಿ ಆರ್‌ಜೆಡಿ ಕಾಂಗ್ರೆಸ್, ರಾಷ್ಟ್ರೀಯ ಲೋಕಸಮಾತಾ ಪಕ್ಷ (ಆರ್‍ಎಲ್‍ಎಸ್‍ಪಿ), ಹಿಂದೂಸ್ಥಾನಿ ಆವಾಮ್ ಮೋರ್ಚಾ (ಎಚ್‍ಎಎಂ), ಲೋಕ ಜನತಾಂತ್ರಿಕ ದಳ (ಎಲ್‍ಜೆಡಿ) ಮತ್ತು ವಿಕಾಸ್ ಶೀಲ್ ಇನ್ಸಾನ್ ಪಾರ್ಟಿ (ವಿಐಪಿ) ಮೈತ್ರಿಕೂಟ ರಚಿಸಿಕೊಂಡಿದೆ.

  • ರಾಹುಲ್ ತಲೆಯ ಮೇಲೆ ಬಿದ್ದಿದ್ದು ಛಾಯಾಗ್ರಾಹಕ ಬಳಕೆ ಮಾಡಿದ್ದ ಮೊಬೈಲ್ ಲೈಟ್!

    ರಾಹುಲ್ ತಲೆಯ ಮೇಲೆ ಬಿದ್ದಿದ್ದು ಛಾಯಾಗ್ರಾಹಕ ಬಳಕೆ ಮಾಡಿದ್ದ ಮೊಬೈಲ್ ಲೈಟ್!

    – ಅಮೇಥಿ ರ್ಯಾಲಿ ಮೇಲೆ ಭದ್ರತಾ ಲೋಪ – ಕಾಂಗ್ರೆಸ್ ಆರೋಪ
    – ಕಾಂಗ್ರೆಸ್ಸಿನಿಂದ ಯಾವುದೇ ಪತ್ರ ಬಂದಿಲ್ಲ
    – ಮಾಧ್ಯಮಗಳ ವರದಿ ಆಧಾರಿಸಿ ಗೃಹ ಸಚಿವಾಲಯದಿಂದ ಸ್ಪಷ್ಟನೆ

    ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶದ ಅಮೇಥಿಯಲ್ಲಿ ಅಪಾಯವಿದ್ದು, ರ್ಯಾಲಿ ವೇಳೆ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಕಾಂಗ್ರೆಸ್ ಬರೆದ ಪತ್ರಕ್ಕೆ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ.

    ರಾಹುಲ್ ಗಾಂಧಿಗೆ ನೀಡಲಾದ ಭದ್ರತೆಯಲ್ಲಿ ಲೋಪವಾಗಿದೆ ಎಂದು ಆರೋಪಿಸಿ ನಮಗೆ ಕಾಂಗ್ರೆಸ್ಸಿನಿಂದ ಯಾವುದೇ ಪತ್ರ ಬಂದಿಲ್ಲ. ಆದರೂ ಮಾಧ್ಯಮಗಳಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ಮಾಡಿ ಬಳಿಕ ಮಾತನಾಡುತ್ತಿದ್ದ ಸಂದರ್ಭದಲ್ಲಿ 7 ಬಾರಿ ಅವರ ಮೇಲೆ ಲೇಸರ್ ಗ್ರೀನ್ ಲೈಟ್ ಬಿದ್ದಿದೆ ಎಂದು ವರದಿಯಾಗಿದೆ. ಆದರೆ ಈ ಲೇಸರ್ ಲೈಟ್ ಎಐಸಿಸಿಯ ಛಾಯಾಗ್ರಾಹಕ ಬಳಕೆ ಮಾಡಿದ್ದ ಮೊಬೈಲ್ ಕ್ಯಾಮೆರಾದ ಬೆಳಕು ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

    ಕಾಂಗ್ರೆಸ್ ಮಾಡಿದ ಆರೋಪದಂತೆ ರಕ್ಷಣೆ ನೀಡುವಲ್ಲಿ ಯಾವುದೇ ರೀತಿಯ ಲೋಪ ಆಗಿಲ್ಲ. ಸೂಕ್ತ ವ್ಯವಸ್ಥೆಗಳನ್ನೇ ಸಿದ್ಧಪಡಿಸಿಕೊಂಡೇ ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗಿತ್ತು. ವಿಡಿಯೋವನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ ವೇಳೆ ಅದು ಮೊಬೈಲ್ ಕ್ಯಾಮೆರಾ ಬೆಳಕು ಎಂಬುವುದು ತಿಳಿದು ಬಂದಿದೆ. ಎಐಸಿಸಿ ಛಾಯಾಗ್ರಾಹಕ ಮೊಬೈಲ್ ಫೋನ್ ಬಳಿಸಿ ಶೂಟ್ ನಡೆಸುತ್ತಿದ್ದದ್ದು ಖಚಿತವಾಗಿದ್ದು ವಿಶೇಷ ರಕ್ಷಣಾ ಪಡೆಯ ನಿರ್ದೇಶಕರು ಕೂಡ ಈ ವಿಚಾರವನ್ನು ತಿಳಿಸಿದ್ದಾರೆ ಸಚಿವಾಲಯ ಸ್ಪಷ್ಟನೆ ನೀಡಿದೆ.

    ಕಾಂಗ್ರೆಸ್ ಪತ್ರದಲ್ಲಿ ಏನಿತ್ತು?
    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಉತ್ತರ ಪ್ರದೇಶದ ಅಮೇಥಿಯಲ್ಲಿ ಅಪಾಯವಿದ್ದು, ರ್ಯಾಲಿ ವೇಳೆ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಕಾಂಗ್ರೆಸ್ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ ಎಂದು ವರದಿಯಾಗಿತ್ತು.

    ಕಾಂಗ್ರೆಸ್ ಬರೆದಿರುವ ಪತ್ರದಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ಮಾಡಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ 7 ಬಾರಿ ಅವರ ಮೇಲೆ ಲೇಸರ್ ಗ್ರೀನ್ ಲೈಟ್ ಬಿದ್ದಿದೆ ಎಂದು ಉಲ್ಲೇಖಿಸಿತ್ತು. ಈ ಬಗ್ಗೆ ತನಿಖೆ ನಡೆಸಬೇಕು ಹಾಗೂ ರಾಹುಲ್ ಅವರಿಗೆ ಸೂಕ್ತ ಭದ್ರತೆ ನೀಡಬೇಕು ಎಂದು ತಿಳಿಸಿತ್ತು.

    ಲೇಸರ್ ಗ್ರೀನ್ ಲೈಟ್ ರಾಹುಲ್ ಗಾಂಧಿ ಅವರ ತಲೆ ಮೇಲೆ ಸುಮಾರು 7 ಬಾರಿ ಅತಿ ಕಡಿಮೆ ಅವಧಿಯಲ್ಲಿ ಬಿದ್ದಿರುವುದು ದೃಢವಾಗಿದೆ. ಅಲ್ಲದೇ ದೇವಾಲಯದ ಭೇಟಿ ಸಂದರ್ಭದಲ್ಲಿ ಅವರ ಎಡಭಾಗದ ತಲೆ ಮೇಲೆ 2 ಬಾರಿ ಲೇಸರ್ ಬೆಳಕು ಕಾಣಿಸಿತ್ತು ಎಂದು ವಿವರಿಸಲಾಗಿದೆ. ಈ ಪತ್ರದಲ್ಲಿ ಅಹ್ಮದ್ ಪಟೇಲ್, ಜೈರಾಮ್ ರಮೇಶ್, ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಹಿ ಇತ್ತು.

  • ವಾಹನ ಕಳ್ಳರಿಗೆ ಬ್ರೇಕ್: ಇಂದಿನಿಂದ ಬರಲಿದೆ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್!

    ವಾಹನ ಕಳ್ಳರಿಗೆ ಬ್ರೇಕ್: ಇಂದಿನಿಂದ ಬರಲಿದೆ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್!

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಾಹನ ಕಳ್ಳರ ಸಂಖ್ಯೆ ಹೆಚ್ಚಾಗಿದ್ದು, ತುಂಬಾ ಆಸೆ ಪಟ್ಟು ತೆಗೆದುಕೊಂಡ ಕಾರು, ಬೈಕ್‍ಗಳು ಖದೀಮರ ಪಾಲಾಗುತ್ತಿವೆ. ಹೀಗಾಗಿ ಈ ವಾಹನ ಕಳ್ಳರಿಗೆ ಕಡಿವಾಣ ಹಾಕಲು, ಸುಪ್ರೀಂಕೋರ್ಟ್ ನ ಆದೇಶದಂತೆ ಕೇಂದ್ರ ಸರ್ಕಾರ ಮುಂದಾಗಿದೆ.

    ಹೌದು. ಸುಪ್ರೀಂಕೋರ್ಟ್ ನ ಆದೇಶದಂತೆ ಇಂದಿನಿಂದ ಮಾರಾಟವಾಗುವ ಹೊಸ ವಾಹನಗಳಿಗೆ ಈ ಹೈ-ಸೆಕ್ಯೂರಿಟಿ ನಂಬರ್ಸ್ ರಿಜಿಸ್ಟ್ರೇಷನ್ ಪ್ಲೇಟ್ಸ್ ಸಿಗಲಿದೆ. ಇದು ಹಲವು ವೈಶಿಷ್ಟ್ಯಗಳನ್ನ ಹೊಂದಿದ್ದು, ವಾಹನ ಮಾಲೀಕರಿಗೆ ಉಪಯೋಗಲಿದೆ ಎಂದು ಸಾರಿಗೆ ಇಲಾಖೆಯ ಆಯುಕ್ತ ಇಕ್ಕೇರಿ ತಿಳಿಸಿದ್ದಾರೆ.

    ಹೊಸ ವಾಹನ ತಯಾರಕರು ಅಥವಾ ವಿತರಕರು ಈ ನಂಬರ್ ಪ್ಲೇಟ್‍ಗೆ ನೋಂದಣಿಯನ್ನು ಕಡ್ಡಾಯವಾಗಿ ಮಾಡಿಸಬೇಕಿದೆ. ಈ ನಂಬರ್ ಪ್ಲೇಟ್‍ಗಳಿಂದ ಕಳೆದು ಹೋದ ವಾಹನಗಳನ್ನು ಸುಲಭವಾಗಿ ಪತ್ತೆ ಹಚ್ಚ ಬಹುದಾಗಿದೆ. ಈಗ ಚುನಾವಣೆ ಸಮಯವಾಗಿರುವುದರಿಂದ ನಗರದ ಎಲ್ಲೆಡೆಯೂ ಚೆಕ್ ಪೋಸ್ಟ್ ಗಳನ್ನು ಹಾಕಲಾಗಿದೆ. ಆದರೂ ಹಣ ಸೇರಿದಂತೆ ಅನೇಕ ಬೆಲೆ ಬಾಳುವ ವಸ್ತುಗಳನ್ನು ನಂಬರ್ ಪ್ಲೇಟ್ ಬದಲಿಸಿ ಸಾಗಿಸುವ ಸಾಧ್ಯತೆ ಇರುತ್ತದೆ. ಈ ಅಕ್ರಮಗಳಿಗೆ ಈ ಹೈ-ಸೆಕ್ಯೂರಿಟಿ ನಂಬರ್ ಪ್ಲೇಟ್‍ಗಳು ಬ್ರೇಕ್ ಹಾಕುತ್ತವೆ ಎಂದು ಚೆಕ್‍ಪೋಸ್ಟ್ ತಪಾಸಣಾ ಅಧಿಕಾರಿ ಚಂದ್ರಶೇಖರ್ ಹೇಳಿದ್ದಾರೆ.

    ಈ ಸೌಲಭ್ಯವನ್ನು ಹಳೆಯ ವಾಹನಗಳಿಗೂ ಅಳವಡಿಸಬೇಕೆಂದು ವಾಹನ ಸವಾರರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

  • ಜರ್ಮನಿಯಲ್ಲಿ ಉಡುಪಿ ಎಂಜಿನಿಯರ್ ಹತ್ಯೆ – ಕುಂದಾಪುರದಲ್ಲೇ ಅಂತ್ಯ ಸಂಸ್ಕಾರಕ್ಕೆ ಆಗ್ರಹ

    ಜರ್ಮನಿಯಲ್ಲಿ ಉಡುಪಿ ಎಂಜಿನಿಯರ್ ಹತ್ಯೆ – ಕುಂದಾಪುರದಲ್ಲೇ ಅಂತ್ಯ ಸಂಸ್ಕಾರಕ್ಕೆ ಆಗ್ರಹ

    ಉಡುಪಿ: ಜರ್ಮನಿಯಲ್ಲಿ ನಡೆದ ಪ್ರಶಾಂತ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿಯಾದ ತನಿಖೆಯಾಗಬೇಕು ಹಾಗೆಯೇ ಪ್ರಶಾಂತ್ ಮೃತದೇಹದ ಅಂತ್ಯ ಸಂಸ್ಕಾರ ಕುಂದಾಪುರದಲ್ಲೇ ನಡೆಯಬೇಕು, ಇದಕ್ಕೆ ಸಹಕರಿಸಿ ಎಂದು ಮೃತರ ಕುಟುಂಬಸ್ಥರು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಜರ್ಮನಿಯಲ್ಲಿ ಪ್ರಶಾಂತ್ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದರು. ಜರ್ಮನಿಯ ಮ್ಯೂನಿಚ್‍ನಲ್ಲಿ ಶುಕ್ರವಾರ ಸಂಜೆ ಪ್ರಶಾಂತ್ ದಂಪತಿ ಅಪಾರ್ಟ್ ಮೆಂಟ್‍ಗೆ ಬರುವ ಸಂದರ್ಭದಲ್ಲಿ ಘಾನಾ ದೇಶದ ಪ್ರಜೆ ಏಕಾಏಕಿ ಚೂರಿಯಿಂದ ಇರಿದಿದ್ದು, ಪ್ರಶಾಂತ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಸಹೋದರಿ ಸಾಧನಾ ಮಾಧ್ಯಮಗಳ ಮುಂದೆ ಬಂದು, ಮೃತದೇಹವನ್ನು ತವರಿಗೆ ತರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ:ಜರ್ಮನಿಯಲ್ಲಿ ಚಾಕು ಇರಿತಕ್ಕೊಳಗಾದ ಉಡುಪಿ ಮೂಲದ ದಂಪತಿ, ಪತಿ ಸಾವು

    ಸದ್ಯ ಪತ್ನಿ ಸ್ಮಿತಾ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದು ಜರ್ಮನಿಯಲ್ಲೇ ನೆಲೆಸಿದ್ದಾರೆ. ಮೃತ ಪ್ರಶಾಂತ್ ತಾಯಿಗೆ ಶವ ನೋಡಲು ಅವಕಾಶ ಕೊಡಬೇಕು. ಮೃತದೇಹವನ್ನು ತವರಿಗೆ ತರಬೇಕು ಎಂದು ಕೇಂದ್ರ ಸರ್ಕಾರವನ್ನು ಉಡುಪಿಯಲ್ಲಿರುವ ಕುಟುಂಬ ಒತ್ತಾಯಿಸಿದೆ. ತಾಯಿ ವಿನಯಾ ಪಾಸ್‍ಪೋರ್ಟ್ ರಿನೀವಲ್ ಗೆ ಬೆಂಗಳೂರಿಗೆ ತೆರಳಿದ್ದು, ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಸಹಕರಿಸಬೇಕು ಎಂದು ನಿವೇದಿಸಿದ್ದಾರೆ.

    ಸಹೋದರನ ಕೊಲೆಗೆ ಕಾರಣವೇನು ತಿಳಿಯಬೇಕು. ಪ್ರಶಾಂತ್ ಬಹಳ ಸೌಮ್ಯ ಸ್ವಭಾವದ ವ್ಯಕ್ತಿ. ಯಾರೊಂದಿಗೂ ಜಗಳ ಮಾಡುವ ವ್ಯಕ್ತಿತ್ವ ಅವನದಲ್ಲ. ಪ್ರಕರಣ ಕುರಿತು ಸರಿಯಾದ ರೀತಿಯಲ್ಲಿ ತನಿಖೆ ನಡೆಯಬೇಕು ಎಂದಿದ್ದಾರೆ.

    ಪ್ರಶಾಂತ್ ಸಹೋದರಿ ಸಾಧನಾ ಮಾತನಾಡಿ, ಅಪಘಾತವಾಗಿದೆ ಅಂತ ಮೊದಲು ಸಂದೇಶ ಬಂತು. ನಿನ್ನೆ ಸಾಯಂಕಾಲ ಘಟನೆ ಬಗ್ಗೆ ಮಾಹಿತಿ ಸಿಕ್ಕಿದೆ. ಕೊಲೆಯಾಗಿದ್ದಾನೆ ಅಂದಾಗ ಶಾಕ್ ಆಯ್ತು. ಜರ್ಮನಿಯಿಂದ ಯಾವುದೇ ಮಾಹಿತಿ ಸಿಗುತ್ತಿಲ್ಲ.

    ಬಳಿಕ ಪ್ರಶಾಂತ್ ಬಾವ ಶ್ರೀನಿವಾಸ್ ಮಾತನಾಡಿ, ಸಣ್ಣ ಪುಟ್ಟ ಗಲಾಟೆಗೂ ಹೋಗದ ಅವರು ಕೊಲೆಯಾಗಲು ಕಾರಣವೇನು ಅಂತ ಗೊತ್ತಾಗುತ್ತಿಲ್ಲ. ನಮಗೆ ಕೇಂದ್ರ ಸರ್ಕಾರ ಬೆಂಬಲ ಕೊಟ್ಟಿದೆ. ಆದ್ರೆ ಘಟನೆ ನಡೆಯಲು ಕಾರಣವೇನು ಎಂಬ ಬಗ್ಗೆ ಸಮಗ್ರ ತನಿಖೆ ಆಗಬೇಕು. ಅಮ್ಮನ ಪಾಸ್ ಪೋರ್ಟ್ ರಿನಿವಲ್ ಮಾಡಿಸಿಲ್ಲ. ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಸಹಾಯ ಮಾಡುತ್ತಿದ್ದಾರೆ. ಮಾಧ್ಯಮಗಳ ಸಹಾಯ ಇದ್ದರೆ ಮೃತದೇಹ ಊರಿಗೆ ತೆಗೆದುಕೊಂಡು ಬರಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿಕೊಂಡಿದ್ದಾರೆ.

  • ಅನಂತ್‌ಕುಮಾರ್‌ ಹೆಗ್ಡೆ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ

    ಅನಂತ್‌ಕುಮಾರ್‌ ಹೆಗ್ಡೆ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ

    ಕಾರವಾರ: ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ಜಾಲತಾಣಿಗರು ಹೆಗ್ಡೆ ವಿರುದ್ಧ ಕಿಡಿಕಾರುತ್ತಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತಂದೆ ಮುಸಲ್ಮಾನ ತಾಯಿ ಕ್ರಿಶ್ಚಿಯನ್ ರಾಹುಲ್ ಗಾಂಧಿ ಬ್ರಾಹ್ಮಣ ಹೇಗಾದ ಎಂದು ಹೆಗ್ಡೆ ಪ್ರಶ್ನೆ ಮಾಡಿದ್ದರು. ಅಲ್ಲದೆ ರಾಜೀವ್ ಗಾಂಧಿ ಹತ್ಯೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಡಿಎನ್‍ಎ ಪರೀಕ್ಷೆ ಮಾಡಿಸಿರಲಿಲ್ಲ. ಬದಲಾಗಿ ಪ್ರಿಯಾಂಕ ಗಾಂಧಿ ಡಿಎನ್‍ಎ ಪರೀಕ್ಷೆಯನ್ನು ಸೋನಿಯಾ ಗಾಂಧಿ ಮಾಡಿಸಿದ್ದರು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ವಿಷಯವನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅನಂತ್ ಕುಮಾರ್ ಡಿಎನ್‍ಎ ಪರೀಕ್ಷೆ ಮಾಡಿಕೊಳ್ಳಲಿ ಎಂದು ಕಿಡಿಕಾರಿ ಪೋಸ್ಟ್ ಗಳನ್ನು ಮಾಡಿದ್ದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: ಮುಸಲ್ಮಾನನ ಮಗ ಗಾಂಧಿ ಹೇಗಾದ ಎನ್ನುವ ಪ್ರಶ್ನೆಗೆ ಕಾಂಗ್ರೆಸ್ ಉತ್ತರ ಕೊಡಲಿ: ಅನಂತಕುಮಾರ್ ಹೆಗ್ಡೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv