Tag: Central Government

  • 2022ರ ಒಳಗಡೆ 1.95 ಕೋಟಿ ಮನೆ ನಿರ್ಮಾಣ: ಸೀತಾರಾಮನ್

    2022ರ ಒಳಗಡೆ 1.95 ಕೋಟಿ ಮನೆ ನಿರ್ಮಾಣ: ಸೀತಾರಾಮನ್

    ನವದೆಹಲಿ: 2022ರೊಳಗೆ ಎಲ್ಲರಿಗೂ ಮನೆ ನಿರ್ಮಾಣದ ಗುರಿ ಸಾಧಿಸುವ ನಿಟ್ಟಿನಲ್ಲಿ ಮುಂದಿನ 3 ವರ್ಷದಲ್ಲಿ 1.95 ಕೋಟಿ ಮನೆಗಳನ್ನು ನಿರ್ಮಿಸುವ ಗುರಿಯನ್ನು ಹಾಕಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಮುಖ್ಯಾಂಶಗಳು:
    ಗ್ರಾಮೀಣ ಕ್ಷೇತ್ರದ ಪ್ರತಿ ಕುಟುಂಬಕ್ಕೆ ಅಡುಗೆ ಅನಿಲ, ವಿದ್ಯುತ್, ನೀರು ಪೂರೈಕೆ. ಪ್ರತಿ ಮನೆ ನಿರ್ಮಾಣದ ಕೆಲಸದ ಅವಧಿಯನ್ನು 314ರಿಂದ 114 ದಿನಗಳಿಗೆ ಕಡಿತವಾಗಿದೆ.

    ಜಲಶಕ್ತಿ ಸಚಿವಾಲಯ 2024ರೊಳಗೆ ಪ್ರತಿ ಮನೆಗೂ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ನೀರು. ಶೇ.97ರಷ್ಟು ಜನರಿಗೆ ಎಲ್ಲ ಹವಾಮಾನದಲ್ಲಿಯೂ ಸುರಕ್ಷಿತ ರಸ್ತೆಯನ್ನು ನೀಡುವುದು.

    ಮುಂದಿನ ಐದು ವರ್ಷಗಳಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ 1.25 ಲಕ್ಷ ಕಿ.ಮೀ ರಸ್ತೆ ನಿರ್ಮಾಣ. ಈ ಯೋಜನೆಗಾಗಿ 80,250 ಕೋಟಿ ರೂ. ಅನುದಾನ ಮೀಸಲು.

    ಮಾರುಕಟ್ಟೆಗಳಿಗೆ ಮಾರ್ಗ ಕಲ್ಪಿಸುವ ಗ್ರಾಮದ ರಸ್ತೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಸ್ವಚ್ಛತಾ ಅಭಿಯಾನದಡಿಯಲ್ಲಿ ಕಸ ವಿಂಗಡನೆಯ ವ್ಯವಸ್ಥೆ ಕಲ್ಪಿಸಲಾಗುವುದು.

    ಕೃಷಿ ಉತ್ಪನ್ನಗಳ ಉತ್ಪಾದನೆಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ. ಯುವ ಜನತೆಯನ್ನು ಕೃಷಿ ವಲಯದತ್ತ ಆಕರ್ಷಿಸುವುದು ಮತ್ತು ಧಾನ್ಯಗಳು, ಬೇಳೆ ಕಾಳುಗಳು, ಎಣ್ಣೆ ಕಾಳುಗಳು ಮತ್ತು ಹಣ್ಣು, ತರಕಾರಿ ಉತ್ಪಾದನೆಯಲ್ಲಿ ಸ್ವಾಲಂಬನೆ ಹೊಂದಿ ರಫ್ತು ಉತ್ತೇಜನ.

    ಉಜಲಾ ಯೋಜನೆಯಡಿ 35 ಕೋಟಿ ಎಲ್‍ಇಡಿ ವಿದ್ಯುತ್ ದೀಪಗಳನ್ನು ಹಂಚಿಕೆ ಮಾಡಲಾಗುವುದು. ಈ ಯೋಜನೆಗಾಗಿ 18 ಸಾವಿರ 341 ಕೋಟಿ ರೂ. ಮೀಸಲು. ಈ ಯೋಜನೆಯಿಂದಾಗಿ ವಿದ್ಯುತ್ ಬಳಕೆಯನ್ನು ಮಿತಿಗೊಳಿಸುವುದು.

    ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರರಾಗುತ್ತಾರೆ. ಹಾಗಾಗಿ ಗ್ರಾಮೀಣ ಕ್ಷೇತ್ರದ ಮಹಿಳೆಯರ ಆರ್ಥಿಕ ಸುಧಾರಣೆಗಾಗಿ ಸಮಿತಿ ರಚಿಸಲಾಗುವುದು. ಈ ಮೂಲಕ ಗ್ರಾಮೀಣ ವಿಭಾಗದ ಮಹಿಳೆಯರನ್ನು ಅರ್ಥವ್ಯವಸ್ಥೆ ಒಳಗೆ ಕರೆತರುವುದು.

  • ಇಂದು 2ನೇ ಅವಧಿಯ ಮೋದಿ ಸರ್ಕಾರದ ಮೊದಲ ಬಜೆಟ್- ಲೋಕಸಭೆಯಲ್ಲಿ ನಿರ್ಮಲಾ ಲೆಕ್ಕ

    ಇಂದು 2ನೇ ಅವಧಿಯ ಮೋದಿ ಸರ್ಕಾರದ ಮೊದಲ ಬಜೆಟ್- ಲೋಕಸಭೆಯಲ್ಲಿ ನಿರ್ಮಲಾ ಲೆಕ್ಕ

    – ಬಜೆಟ್ ನಿರೀಕ್ಷೆಗಳೇನು..?

    ನವದೆಹಲಿ: ಲೋಕಸಭೆ ಸಮರದ ಬಳಿಕ ದೇಶ ಮತ್ತೊಂದು ಬಜೆಟ್ ಗೆ ಸಾಕ್ಷಿ ಆಗಲಿದೆ. ಇಂದು ಪ್ರಧಾನಿ ನರೇಂದ್ರ ಮೋದಿ 2.0 ಸರ್ಕಾರದ ಮೊದಲ ಬಜೆಟ್ ಮಂಡನೆ ಆಗಲಿದೆ. ಮೊದಲ ಬಾರಿಗೆ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತರಾಮನ್ ಬಜೆಟ್ ಮಂಡಿಸುತ್ತಿದ್ದಾರೆ. ಇಡೀ ದೇಶದ ಜನರು ಆಸೆಗಣ್ಣುಗಳಲ್ಲಿ ಬಜೆಟ್ ನಲ್ಲಿ ಏನಿರಬಹುದು ಎಂದು ನಿರೀಕ್ಷೆ ಮಾಡುತ್ತಿದ್ದಾರೆ.

    ಒಂದು ಕಡೆ ಐತಿಹಾಸಿಕ ಉದ್ಯೋಗ ನಷ್ಟವಾಗಿದೆ, ಕೃಷಿ ವಲಯ ಪಾತಾಳಕ್ಕೆ ಸಿಲುಕಿದೆ. ಬೆಳೆ ಹಾನಿ, ಬೆಂಬಲ ಬೆಲೆ ಇಲ್ಲದೆ ರೈತ ರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದು ಕಡೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲೂ ಆರ್ಥಿಕ ಹಿನ್ನಡೆ ಆಗಿದೆ. ಹೀಗೆ ಸಾಲು ಸಾಲು ಸವಾಲುಗಳ ನಡುವೆ ಇಂದು ನಿರ್ಮಲಾ ಸೀತರಾಮನ್ ಬಜೆಟ್ ಮಂಡಿಸುತ್ತಿದ್ದಾರೆ.

    ಕಳೆದ ಫೆಬ್ರವರಿ 1 ರಂದು ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ರೈಲ್ವೆ ಸಚಿವರಾಗಿದ್ದ ಪಿಯೂಷ್ ಗೊಯೇಲ್ ಬಜೆಟ್ ಮಂಡಿಸಿದ್ದರು. ಚುನಾವಣೆ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದ ಬಜೆಟ್ ಆಗದೆ ಕೇವಲ ಲೇಖಾನುದಾನ ಪಡೆಯಲಾಗಿತ್ತು. ಈಗ ಮೋದಿ ನೇತೃತ್ವದ ಸರ್ಕಾರ ವಾಪಸ್ ಬಂದಿದ್ದ ಇಂದು ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಆಗಲಿದೆ.

    ಚುನಾವಣಾ ಪೂರ್ವ ಬಜೆಟ್ ನಲ್ಲಿ ರೈತರನ್ನು ಟಾರ್ಗೆಟ್ ಮಾಡಲಾಗಿತ್ತು. ರೈತರ ಖಾತೆಗೆ 6 ಸಾವಿರ ಹಣ ಸೇರಿದಂತೆ ನೌಕರರ ವರ್ಗಕ್ಕೆ 5 ಲಕ್ಷಕ್ಕೆ ಆದಾಯ ಮಿತಿ ಹೆಚ್ಚಳ ಮಾಡುವ ಘೋಷಣೆ ಮಾಡಲಾಗಿತ್ತು. ಚುನಾವಣೆಯ ಹೊಸ್ತಿಲಲ್ಲಿ ಈ ಮೂಲಕ ಜನಪ್ರೀಯತೆ ಉಳಿಸಿಕೊಳ್ಳುವ ಪ್ರಯತ್ನ ಮಾಡಲಾಗಿತ್ತು. ಈಗ ಚುನಾವಣೆಯಲ್ಲಿ ಭರ್ಜರಿಯಾಗಿ ಜಯಗಳಿಸಿದ್ದು ರಾಷ್ಟ್ರೀಯತೆ ಸೇನೆ ಭದ್ರತೆ, ಯುವಕರು ಮಹಿಳೆಯರ ಮೇಲೆ ಹೆಚ್ಚು ಕೇಂದ್ರಿಕರಿಸಲಾಗಿತ್ತು. ಹಾಗಾಗಿ ಈ ಬಜೆಟ್ ನಲ್ಲಿ ಏನಿರಬಹುದು ಅನ್ನೊ ನೀರಿಕ್ಷೆ ಹೆಚ್ಚುವಂತೆ ಮಾಡಿದೆ. ಇದನ್ನೂ ಓದಿ: ಕನ್ನಡಿಗರ ಬೇಡಿಕೆಗಳೇನು?

    ಇಂದಿನ ಬಜೆಟ್‍ನಲ್ಲಿ ಏನಿರಬಹುದು..?
    ರಕ್ಷಣೆ
    * ರಕ್ಷಣಾ ಇಲಾಖೆ ಸಚಿವರಾಗಿದ್ದ ಅನುಭವದ ಹಿನ್ನೆಲೆಯಲ್ಲಿ ಸೇನಾ ವಲಯದಲ್ಲಿ ಮಹತ್ವದ ಯೋಜನೆಗಳಿಗೆ ನಿರ್ಮಲಾ ಸೀತಾರಾಮನ್ ಒಪ್ಪಿಗೆ ನೀಡಬಹುದು
    * ಮತ್ತಷ್ಟು ಯುದ್ಧ ವಿಮಾನಗಳು, ಸೇನಾ ಸಾಮಾಗ್ರಿಗಳ ಖರೀದಿಗೆ ಹಣ ಮೀಸಲಿಡಬಹುದು

    ಕಾರ್ಪೊರೇಟ್
    * ಆರ್ಥಿಕ ಕ್ರಾಂತಿ ಭರವಸೆ ನೀಡಿರುವ ಮೋದಿ ಸರ್ಕಾರ ಈ ಬಾರಿ ಉದ್ಯೋಗ ಸೃಷ್ಠಿಗೆ ಹೆಚ್ಚಿನ ಆದ್ಯತೆ ನೀಡಬಹುದು
    * ಕಾರ್ಪೊರೇಟ್ ತೆರಿಗೆ ದರವನ್ನು ಶೇ.30 ರಿಂದ ಶೇ. 25 ಇಳಿಸುವ ಮೂಲಕ ಹೆಚ್ಚು ಕೈಗಾರಿಕೆಗೆ ಪ್ರೋತ್ಸಾಹ ನೀಡುವುದು ಈ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬಹುದು
    * ಪರ್ಯಾಯ ತೆರಿಗೆಯನ್ನು ಕನಿಷ್ಠ ಶೇ.18.5 ರಿಂದ ಶೇ.15 ಕ್ಕೆ ಕಡಿತಗೊಳಿಸುವುದು
    * ತೆರಿಗೆ ವಿನಾಯಿತಿಗಳನ್ನು ಹೆಚ್ಚಿಸಿ, ವ್ಯಕ್ತಿಗಳಿಗೆ ವಿನಾಯಿತಿ ನೀಡುವುದು

    ಕೃಷಿ
    * ಕೃಷಿ ವಲಯದಲ್ಲಿ ಬಂಡವಾಳವನ್ನು ಪ್ರೋತ್ಸಾಹಿಸಲು ಸಾಲವನ್ನು ಖಾತರಿಪಡಿಸಲು ನಿಧಿಯನ್ನು ಸ್ಥಾಪಿಸುವುದು
    * ಬರಗಾಲ ಸೂಕ್ಷ್ಮತೆ ಅರಿತು ಅಣೆಕಟ್ಟುಗಳು ಮತ್ತು ಕಾಲುವೆಗಳು, ಸೂಕ್ಷ್ಮ ನೀರಾವರಿ ವ್ಯವಸ್ಥೆಗಳಿಗೆ ಹೆಚ್ಚಿನ ಅನುದಾನ ನೀಡುವುದು
    * ನದಿ ಜೋಡಣೆ ಯೋಜನೆ ಪ್ರಸ್ತಾಪ ಆಗಬಹುದು
    * ಬೆಳೆಗಳ ಹಾನಿ ತಪ್ಪಿಸಲು ಶೀತಲ ಶೇಖರಣಾ ಘಟಕಗಳ ನಿರ್ಮಾಣಕ್ಕೆ ಸಹಾಯಧನ
    * ಕಿಸಾಮ್ ಸಮ್ಮಾನ್ ಯೋಜನೆ ವಿಸ್ತರಣೆ
    * ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ತುರ್ತು ಸಾಲದ ವ್ಯವಸ್ಥೆ, ಮಧ್ಯವರ್ತಿಗಳ ಹಾವಳಿ ತಪ್ಪಿಸುವುದು
    * ರಸ ಗೊಬ್ಬರ ಹಂಚಿಕೆ ವ್ಯವಸ್ಥೆಯಲ್ಲಿ ಡಿಜಿಟಲೀಕರಣ
    * 60 ವರ್ಷ ಮೆಲ್ಪಟ್ಟ ರೈತರು, ಸಣ್ಣ ವ್ಯಾಪಾರಿಗಳಿಗೆ ಪಿಂಚಣಿ ವ್ಯವಸ್ಥೆ
    * ಶೂನ್ಯ ಬಡ್ಡಿದರದಲ್ಲಿ ರೈತರಿಗೆ ಸಾಲ ಯೋಜನೆ

    ಮೂಲಭೂತ ಸೌಕರ್ಯ ವಲಯ
    * ಬಜೆಟ್ ನಲ್ಲಿ ರಸ್ತೆಗಳ ಅಭಿವೃದ್ಧಿಗೆ ಶೇ.10 ರಿಂದ ಶೇ. 15ರಷ್ಟು ಬಂಡವಾಳ ಹೆಚ್ಚಳ
    * ಪಶ್ಚಿಮ ಮತ್ತು ಪೂರ್ವ ಭಾರತವನ್ನು ಸಂಪರ್ಕಿಸುವ ಭಾರತ್ಮಾಲಾ ಯೋಜನೆ ಸೇರಿದಂತೆ ಪ್ರಮುಖ ರಸ್ತೆ ಯೋಜನೆಗಳಿಗೆ ಹೆಚ್ಚಿನ ಅನುದಾನ
    * ಬಜೆಟ್ ನಲ್ಲಿ ಶೇ.10 ರಷ್ಟು ರೈಲ್ವೇ ಹೂಡಿಕೆಗಳನ್ನು ಹೆಚ್ಚಳ

    ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ
    * ಡಿಜಿಟಲ್ ವ್ಯವಹಾರಗಳಿಗೆ ಹೆಚ್ಚಿನ ಪ್ರೋತ್ಸಾಹವನ್ನು ಒದಗಿಸುವುದು
    * ಡಿಜಿಟಲ್ ಪಾವತಿ ಮೂಲಸೌಕರ್ಯವನ್ನು ಬೆಂಬಲಿಸಿ ಮೊಬೈಲ್ ಫೋನ್, ಎಕ್ಸೈಸ್ ಡ್ಯುಟಿ, ಟ್ಯಾಬ್ಲೆಟ್, ಕಂಪ್ಯೂಟರ್ ಗಳ ಸುಂಕ ಕಡಿಮೆಗೊಳಿಸುವುದು
    * ಟೆಲಿಕಾಂ ಸೇವೆಗಳ ಈಗಿರುವ ಶೇ.18 ಜಿಎಸ್‍ಟಿ ದರವನ್ನು ಶೇ.12ಕ್ಕೆ ಕಡಿತಗೊಳಿಸುವುದು

    ರಿಯಲ್ ಎಸ್ಟೇಟ್
    * ವಸತಿ ಸೇರಿದಂತೆ ಎಲ್ಲಾ ರಿಯಲ್ ಎಸ್ಟೇಟ್ ಯೋಜನೆಗಳ ವಿಳಂಬವನ್ನು ತಪ್ಪಿಸಲು ಏಕಮುಖ ಕ್ಲಿಯರೆನ್ಸ್ ಒದಗಿಸುವುದು
    * ಹಣಕಾಸು, ಯೋಜನಾ ವೆಚ್ಚವನ್ನು ತಗ್ಗಿಸಲು ರಿಯಲ್ ಎಸ್ಟೇಟ್ ಗೆ ಮೂಲ ಸೌಕರ್ಯ ನೀಡಿ, ಕಡಿಮೆ ವೆಚ್ಚಕ್ಕೆ ಮನೆಗಳು ದೊರೆಯುವಂತೆ ಮಾಡುವುದು
    * ಪ್ರಸ್ತುತ 12 ಪ್ರತಿ ಶತದಿಂದ ನಿರ್ಮಾಣ ಹಂತದಲ್ಲಿರುವ ಯೋಜನೆಗಳಿಗೆ ಜಿಎಸ್ ಟಿ ದರವನ್ನು ಕಡಿಮೆ ಮಾಡುವುದು
    * ಮನೆ ಖರೀದಿಗೆ ಶೇ.12 ಜಿಎಸ್ಟಿಗೆ ದರವನ್ನು ಕಡಿಮೆ ಮಾಡಿ; ಸ್ಟಾಂಪ್ ಡ್ಯುಟಿ ಕಡಿತಗೊಳಿಸುವುದು

    ವೈದ್ಯಕೀಯ
    * 75 ನೂತನ ಏಮ್ಸ್ ಆಸ್ಪತ್ರೆಗಳ ನಿರ್ಮಾಣ
    * ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳ ಹೆಚ್ಚಳಕ್ಕೆ ಆದ್ಯತೆ

  • 114 ಯುದ್ಧ ವಿಮಾನಗಳ ಖರೀದಿಗೆ ಸಿದ್ಧತೆ-ವಿಶ್ವದಲ್ಲೇ ಬೃಹತ್ ಡೀಲ್‍ಗೆ ಮುಂದಾದ ಭಾರತ

    114 ಯುದ್ಧ ವಿಮಾನಗಳ ಖರೀದಿಗೆ ಸಿದ್ಧತೆ-ವಿಶ್ವದಲ್ಲೇ ಬೃಹತ್ ಡೀಲ್‍ಗೆ ಮುಂದಾದ ಭಾರತ

    ನವದೆಹಲಿ: ಯುದ್ಧ ವಿಮಾನ ಖರೀದಿಸುವ ನಿಟ್ಟಿನಲ್ಲಿ ಭಾರತ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, 114 ಯುದ್ಧ ವಿಮಾನಗಳ ಖರೀದಿಗೆ ಮುಂದಾಗಿದೆ. ಈ ಮೂಲಕ ವಿಶ್ವದಲ್ಲೇ ಅತಿ ದೊಡ್ಡ ಡೀಲ್‍ಗೆ ಭಾರತ ಮುಂದಾಗಿದೆ.

    114 ವಿಮಾನಗಳನ್ನು ಖರೀದಿಸುವ ಕುರಿತು ಈಗಾಗಲೇ ಬಿಡ್ಡಿಂಗ್ ಆಹ್ವಾನಿಸಲು ಸಿದ್ಧತೆ ಮಾಡಿಕೊಂಡಿದ್ದು, ಇದು ವಿಶ್ವದಲ್ಲೇ ಬೃಹತ್ ಡೀಲ್ ಆಗಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಹಳೆಯ ಯುದ್ಧ ವಿಮಾನಗಳನ್ನು ಬದಲಿಸುವುದು ಹಾಗೂ ಹೊಸದಾಗಿ ಹೆಚ್ಚು ವಿಮಾನಗಳನ್ನು ಖರೀದಿಸುವ ಮೂಲಕ ದೇಶದ ಸಶಸ್ತ್ರ ಪಡೆಗಳ ಸಾಮಥ್ರ್ಯವನ್ನು ಹೆಚ್ಚಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

    ಈ ಬೃಹತ್ ಡೀಲ್‍ನ ಬೆಲೆ ಸುಮಾರು 15 ಬಿಲಿಯನ್ ಯುಎಸ್ ಡಾಲರ್‍ಗಿಂತ ಹೆಚ್ಚಾಗಿದೆ. ಇದಕ್ಕಾಗಿ ಅಧಿಕಾರಿಗಳು ವಿವಿಧ ತಯಾರಿಸಿ ನಡೆಸಿದ್ದಾರೆ. ಬೋಯಿಂಗ್ ಕಂ., ಲಾಕ್‍ಹೀಡ್ ಮಾರ್ಟೀನ್ ಕಾರ್ಪೋರೇಷನ್ ಹಾಗೂ ಸ್ವೀಡನ್‍ನ ಸಾಬ್ ಎಬಿ ಸೇರಿದಂತೆ ವಿವಿಧ ಪ್ರಮುಖ ಯುದ್ಧ ನೌಕೆಗಳ ಉತ್ಪಾದಕರನ್ನು ರಕ್ಷಣಾ ಅಧಿಕಾರಿಗಳು ಸೆಳೆಯುತ್ತಿದ್ದಾರೆ. ಇವುಗಳಲ್ಲಿ ಶೇ.85ರಷ್ಟು ಉತ್ಪಾದನೆ ಭಾರತದಲ್ಲೇ ಆಗಬೇಕು ಎಂದು ಕಳೆದ ವರ್ಷವೇ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

    ದೇಶದ ರಕ್ಷಣಾ ಪಡೆಗಳನ್ನು ಅಧುನಿಕರಣಗೊಳಿಸುವುದು ಪ್ರಧಾನಿ ಮೋದಿ ಅವರಿಗೆ ಸವಾಲಾಗಿ ಪರಿಣಮಿಸಿದ್ದು, ನೆರೆಯ ಚೀನಾ ಹಾಗೂ ಪಾಕಿಸ್ತಾನಗಳಿಂದ ಬೆದರಿಕೆ ಎದುರಾದರೂ ಮೊದಲ ಅವಧಿಯಲ್ಲಿ ಯಾವುದೇ ಹೊಸ ಪ್ರಮುಖ ಶಸ್ತ್ರಾಸ್ತ್ರ ಒಪ್ಪಂದಗಳಿಗೆ ಸಹಿ ಹಾಕಲಿಲ್ಲ. ಇತ್ತೀಚೆಗೆ ಸೋವಿಯತ್ ನಿರ್ಮಿತ ಭಾರತ ಹಳೆಯ ಮಿಗ್-21 ಯುದ್ಧ ವಿಮಾನ ಪಾಕಿಸ್ತಾನದ ಅಧುನಿಕ ಎಫ್-16 ಯುದ್ಧ ವಿಮಾನವನ್ನೇ ಹೊಡೆದುರುಳಿಸಿತ್ತು.

    ಖರೀಸುವ ಪ್ರಕ್ರಿಯೆ ಪ್ರಾರಂಭ
    ವಿವಿಧ ಯುದ್ಧ ವಿಮಾನಗಳ ಉತ್ಪಾದಕರಿಂದ ಬಿಡ್ಡಿಂಗ್ ಆಹ್ವಾನಿಸಲು ಈಗಾಗಲೇ ಭಾರತೀಯ ವಾಯು ಸೇನೆಯ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಕಿರಿಯ ರಕ್ಷಣಾ ಸಚಿವ ಶ್ರೀಪಾದ್ ನಾಯಕ್ ಅವರು ಸಂಸತ್‍ನಲ್ಲಿ ಪ್ರಸ್ತಾಪಿಸಿದ್ದು, ಟ್ಯಾಂಕ್‍ಗಳು, ಶಸ್ತ್ರಸಜ್ಜಿತ ವಾಹನಗಳನ್ನು ಖರೀದಿಸಲು ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದು, ವಿದೇಶಿ ಹಡಗು ನಿರ್ಮಾಣ ಮಾಡುವವರಿಂದ ಭಾರತದಲ್ಲಿ ಜಲಾಂತರ್ಗಾಮಿ ನೌಕೆಗಳನ್ನು ತಯಾರಿಸಲು ಕೇಳಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ ಗಡಿಯ ಭದ್ರತೆ ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಭಾರತ ನೌಕಾಪಡೆ ಹಾಗೂ ಕರಾವಳಿ ಕಾವಲುಗಾರರಿಗೆ ಯುದ್ಧ ನೌಕೆಗಳು ಹಾಗೂ ಹಡಗುಗಳನ್ನು ಖರೀದಿಸಲು ಬಿಡ್ ಕರೆಯಲಾಗಿದೆ. 150(2.2ಬಿಲಿಯನ್ ಡಾಲರ್) ಬಿಲಿಯನ್ ಮೌಲ್ಯದ 6 ಕ್ಷಿಪಣಿ ಯುದ್ಧ ನೌಕೆಗಳು ಹಾಗೂ ಇತರ ಸಣ್ಣ ಹಡಗುಗಳ ನಿರ್ಮಾಣಕ್ಕೆ ಮುಂದಾಗಿದೆ. ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಪ್ರಧಾನಿ ಮೋದಿ ಆಡಳಿತ ಸೋಮವಾರ 7 ಶಿಪ್‍ಯಾರ್ಡ್ ಗಳಿಗೆ ತಿಳಿಸಿದೆ ಎಂದು ನಾಯಕ್ ತಿಳಿದ್ದಾರೆ.

    ಭಾರತೀಯ ವಾಯು ಸೇನೆ ಹಾಗೂ ನೌಕಾಪಡೆಗೆ ಒಟ್ಟು 400 ಸಿಂಗಲ್ ಹಾಗೂ ಡಬಲ್ ಎಂಜಿನ್ ಯುದ್ಧ ವಿಮಾನಗಳ ಅಗತ್ಯವಿದೆ ಎಂದು ಸರ್ಕಾರ ತಿಳಿಸಿದೆ.

    ಬೋಯಿಂಗ್‍ಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಡೆಸುವ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‍ಎಎಲ್) ಹಾಗೂ ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್ ಲಿ., ಫೈಟರ್ ಜೆಟ್‍ಗಳ ಖರೀದಿಗೆ ಎಫ್/ಎ-18, ಲಾಕ್‍ಹೀಡ್ ತನ್ನ ಎಫ್-21 ಜೆಟ್‍ಗಳಿಗಾಗಿ ಟಾಟಾ ಗ್ರೂಪ್‍ನೊಂದಿಗೆ ಜಂಟಿಯಾಗಿ ಬಿಡ್ ಮಾಡಲಿದೆ. ಸಾಬ್ ತನ್ನ ಗ್ರಪೆನ್ ಜೆಟ್‍ಗಳನ್ನು ತಯಾರಿಸಲು ಗೌತಮ್ ಅದಾನಿಯೊಂದಿಗೆ ಕೈ ಜೋಡಿಸಲಿದೆ.

    2015ರಲ್ಲಿ 11 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ 126 ರಫೇಲ್ ಯುದ್ಧ ವಿಮಾನಗಳನ್ನು ಡಸಾಲ್ಟ್ ಏವಿಯೇಷನ್‍ನೊಂದಿಗಿನ ಆದೇಶವನ್ನು ರದ್ದುಗೊಳಿಸಿದ ನಂತರ ಮತ್ತೆ ರಫೇಲ್ ಖರೀದಿಸಲು ಒಂದು ದಶಕವೇ ಬೇಕಾಯಿತು. ಕಳೆದ ಬಾರಿಯ ಮೋದಿ ಸರ್ಕಾರದ ಆಡಳಿತಾವಧಿಯಲ್ಲಿ 36 ಜೆಟ್‍ಗಳನ್ನು ಪ್ರತ್ಯೇಕವಾಗಿ ಖರೀದಿಸಲಾಯಿತು. ಆದರೆ, ಈ ಬಾರಿಯ ಟೆಂಡರ್‍ನಲ್ಲಿ ಆಯ್ಕೆಯಾದವರು ಒಪ್ಪಂದ ಮಾಡಿಕೊಂಡ ಮೂರು ವರ್ಷಗಳಲ್ಲಿ ಮೊದಲ ಜೆಟ್‍ನಲ್ಲಿ ಹಸ್ತಾಂತರಿಸಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ.

  • ಅಧಿಕೃತ ನಿವಾಸವನ್ನು 1 ತಿಂಗಳಲ್ಲಿ ತೆರವುಗೊಳಿಸಿ ಮೆಚ್ಚುಗೆಗೆ ಪಾತ್ರರಾದ ಸುಷ್ಮಾ ಸ್ವರಾಜ್

    ಅಧಿಕೃತ ನಿವಾಸವನ್ನು 1 ತಿಂಗಳಲ್ಲಿ ತೆರವುಗೊಳಿಸಿ ಮೆಚ್ಚುಗೆಗೆ ಪಾತ್ರರಾದ ಸುಷ್ಮಾ ಸ್ವರಾಜ್

    ನವದೆಹಲಿ: ಹೊಸ ಸರ್ಕಾರ ರಚನೆಯಾಗಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಒಂದು ತಿಂಗಳ ಒಳಗಡೆ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸರ್ಕಾರದ ಬಂಗಲೆಯನ್ನು ಖಾಲಿ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಸುಷ್ಮಾ ಸ್ವರಾಜ್ ಅವರು ಅನಾರೋಗ್ಯದ ಕಾರಣದಿಂದ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಅಲ್ಲದೆ, ಪ್ರಸ್ತುತ ಎನ್‍ಡಿಎ 2.0 ಸರ್ಕಾರದಲ್ಲಿ ಅವರು ಯಾವುದೇ ಸ್ಥಾನವನ್ನು ಹೊಂದಿಲ್ಲ. ಹೀಗಾಗಿ ಬಂಗಲೆಯನ್ನು ಖಾಲಿ ಮಾಡಿದ್ದಾರೆ. ಈ ಕುರಿತು ಶನಿವಾರ ಟ್ವೀಟ್ ಮಾಡಿರುವ ಅವರು ಸ್ಪಷ್ಟಪಡಿಸಿದ್ದು, ನಾನೀಗ ನಂ.8 ಸಫ್ದಾರ್‍ಜಂಗ್ ರಸ್ತೆ, ನವದೆಹಲಿಯ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದೇನೆ. ಹೀಗಾಗಿ ನಾನು ಈ ವಿಳಾಸ ಹಾಗೂ ಸಂಪರ್ಕ ಸಂಖ್ಯೆಯಲ್ಲಿ ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದಾರೆ.

    ಇದಕ್ಕೆ ಟ್ವಿಟ್ಟರ್‍ನಲ್ಲಿನ ಸುಷ್ಮಾ ಸ್ವರಾಜ್ ಅವರ ಹಿಂಬಾಲಕರು ಅಭಿನಂದನೆ ಸಲ್ಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವದಿ ಮುಗಿದ ತಕ್ಷಣ ಸರ್ಕಾರಿ ಬಂಗಲೆ ಖಾಲಿ ಮಾಡುವ ಮೂಲಕ ಯುವ ರಾಜಕಾರಣಿಗಳಿಗೆ ಹಾಗೂ ಇತರರಿಗೆ ನೀವು ಮಾದರಿಯಾಗಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇಶದ ಅತ್ಯಂತ ಕ್ರಿಯಾಶೀಲ ಮಹಿಳಾ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಇನ್ನೂ ಕೆಲವರು ಸರ್ಕಾರದಲ್ಲಿ ನಿಮ್ಮ ವರ್ಚಸ್ಸಿನ ಉಪಸ್ಥಿತಿಯನ್ನು ಮಿಸ್ ಮಾಡಿಕೊಳ್ಳುತ್ತೇವೆ. ದೇಶದ ಅತ್ಯಂತ ಕ್ರೀಯಾಶೀಲ ಮಹಿಳಾ ರಾಜಕಾರಣಿಯಾದ ನಿಮಗೆ ಆರೋಗ್ಯ, ಐಶ್ವರ್ಯವನ್ನು ದೇವರು ಕರುಣಿಸಲಿ ಎಂದು ಪ್ರತಿಕ್ರಿಯಿಸಿದ್ದಾರೆ.

    https://twitter.com/JBMIS/status/1144839301156368384?

    ಪ್ರಥಮ ಬಾರಿ ಆಯ್ಕೆಯಾದ 267 ಸಂಸದರಿಗೆ ಮನೆ ಮನೆಗಳನ್ನು ನೀಡಬೇಕಿರುವುದರಿಂದ ಎಲ್ಲ ಮಾಜಿ ಸಂಸದರಿಗೆ ತಮ್ಮ ಅಧಿಕೃತ ನಿವಾಸಗಳನ್ನು ಖಾಲಿ ಮಾಡುವಂತೆ ಮೋದಿ ನೇತೃತ್ವದ ಸರ್ಕಾರ ಕಳೆದ ತಿಂಗಳು ಮನವಿ ಮಾಡಿತ್ತು.

    ಅನಧಿಕೃತವಾಗಿ ಸಾರ್ವಜನಿಕ ನಿವಾಸದಲ್ಲಿ ತಂಗಿರುವ ವ್ಯಕ್ತಿಗಳನ್ನು ಹೊರ ಹಾಕುವ ತಿದ್ದುಪಡಿ ಮಸೂದೆಗೆ ಜೂನ್ 12 ರಂದು ಕ್ಯಾಬಿನೆಟ್ ಒಪ್ಪಿಗೆ ನೀಡಿದ್ದು, ಈ ಬಾರಿಯ ಅಧಿವೇಶನದಲ್ಲಿ ಮಂಡನೆಯಾಗಲಿದೆ.

    ಈ ಮಸೂದೆಯ ಅನ್ವಯ ಆರಂಭದಲ್ಲಿ ನೋಟಿಸ್ ನೀಡಲಾಗುತ್ತದೆ. ಬಳಿಕ ಶೋಕಾಸ್ ನೋಟಿಸ್ ನೀಡಿ ತನಿಖೆ ನಡೆಸಲಾಗುತ್ತದೆ. ಅಷ್ಟೇ ಅಲ್ಲದೇ ಎಸ್ಟೇಟ್ ಅಧಿಕಾರಿಗೆ ತೆರವುಗೊಳಿಸುವಂತೆ ಸೂಚಿಸಲಾಗುತ್ತದೆ. ಬಂಗಲೆಯಲ್ಲಿ 5 ತಿಂಗಳಿಗೂ ಹೆಚ್ಚು ದಿನಗಳ ಕಾಲ ವಾಸವಾಗಿದ್ದಲ್ಲಿ 10 ಲಕ್ಷ ರೂ. ದಂಡ ವಿಧಿಸುವ ಅಂಶ ಈ ಮಸೂದೆಯಲ್ಲಿದೆ.

    ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕಳೆದ ವರ್ಷ ಲಕ್ನೋನಲ್ಲಿರುವ ಸರ್ಕಾರಿ ಬಂಗಲೆ ಖಾಲಿ ಮಾಡಲು 2 ವರ್ಷಗಳ ಕಾಲಾವಕಾಶವನ್ನು ಕೇಳಿ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ, ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಅವರ ಅಧಿಕೃತ ನಿವಾಸವನ್ನು ಬಿಎಸ್‍ಪಿ ಸಂಸ್ಥಾಪಕ ಹಾಗೂ ಮಾರ್ಗದರ್ಶಕ ಕನ್ಶಿ ರಾಮ್ ಅವರ ಸ್ಮಾರಕವನ್ನಾಗಿ ಪರಿವರ್ತಿಸಲು ಯತ್ನಿಸಿ ಟೀಕೆ ಒಳಗಾಗಿದ್ದರು.

  • 2025ಕ್ಕೆ ಮೋದಿ ಸಕ್ರಿಯ ರಾಜಕೀಯದಿಂದ ನಿವೃತ್ತಿ?

    2025ಕ್ಕೆ ಮೋದಿ ಸಕ್ರಿಯ ರಾಜಕೀಯದಿಂದ ನಿವೃತ್ತಿ?

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು 2025ಕ್ಕೆ ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗಲಿದ್ದಾರೆ ಎಂಬ ಚರ್ಚೆ ಇದೀಗ ಎದ್ದಿದೆ.

    2022ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ತುಂಬುತ್ತೆ. 2022ರ ವರ್ಷಾಂತ್ಯದಲ್ಲಿ ‘ಒಂದು ದೇಶ, ಒಂದು ಚುನಾವಣೆ’ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಹೆಚ್ಚಿದೆ. ಎಲ್ಲಾ ಅಂದುಕೊಂಡಂತೆ ಆದರೆ, 2022ರ ಅಂತ್ಯದಲ್ಲಿ, ಇಲ್ಲವೇ 2023ರ ಆರಂಭದಲ್ಲಿ ದೇಶದ ಸಂಸತ್ತು ಮತ್ತು ಎಲ್ಲಾ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದೆ. ಮಾತ್ರವಲ್ಲದೆ, ವಿವಿಧ ಯೋಜನೆಗಳನ್ನು ಪೂರ್ಣಗೊಳಿಸುವ ಮೂಲಕ ಆರ್‍ಎಸ್‍ಎಸ್ ಹಾಗೂ ಬಿಜೆಪಿಗೆ ಕೊಡುಗೆ ನೀಡಿ ನಿವೃತ್ತಿ ಹೊಂದಲಿದ್ದಾರೆ ಎಂದು ಹೇಳಲಾಗುತ್ತಿದೆ.

    2021ಕ್ಕೆ ರಾಜ್ಯಸಭೆಯಲ್ಲಿ ಬಹುಮತ ಸಾಧಿಸಲಿರುವ ಮೋದಿ ಸರ್ಕಾರ, ವಿಪಕ್ಷಗಳ ವಿರೋಧ ಲೆಕ್ಕಿಸದೇ `ಒಂದು ದೇಶ, ಒಂದು ಚುನಾವಣೆ’ ವ್ಯವಸ್ಥೆ ಜಾರಿಗಾಗಿ ಸಂವಿಧಾನ ತಿದ್ದುಪಡಿ ಪ್ರಕ್ರಿಯೆ ಪೂರ್ಣಗೊಳಿಸಲು ಯೋಜನೆ ರೂಪಿಸಿದೆ. ಅಲ್ಲದೆ, 2025ಕ್ಕೆ ಪ್ರಧಾನಿ ಮೋದಿಗೆ 75 ವರ್ಷ ತುಂಬುತ್ತದೆ. ಜೊತೆಗೆ ಆರ್‍ಎಸ್‍ಎಸ್ ಕೂಡ ಶತಮಾನೋತ್ಸವ ಆಚರಿಸಿಕೊಳ್ಳಲಿದೆ. ಇದಕ್ಕಾಗಿ ದೇಶಾದ್ಯಂತ ಬಿಜೆಪಿ ಅಧಿಕಾರವನ್ನು ವಿಸ್ತರಿಸುವ ಮೂಲಕ ಆರ್‍ಎಸ್‍ಎಸ್‍ಗೆ ಕೊಡುಗೆ ನೀಡಿ ನಿವೃತ್ತಿ ಹೊಂದಲಿದ್ದಾರೆ ಎನ್ನಲಾಗಿದೆ.

    ಈ ಮಧ್ಯೆ, ಜನರಿಗೂ ಸಹ ಹಲವು ಜನಪ್ರಿಯ ಯೋಜನೆಗಳನ್ನು ರೂಪಿಸುವ ಮೂಲಕ ಕೊಡುಗೆ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಒನ್ ನೇಷನ್.. ಒನ್ ಎಲೆಕ್ಷನ್ ಮಾದರಿಯಲ್ಲೇ `ಒನ್ ನೇಷನ್ ಒನ್ ರೇಷನ್’ ಎಂದು ಭ್ರಷ್ಟಾಚಾರ ತಡೆಗೆ ಒಂದೇ ರೇಷನ್ ಕಾರ್ಡ್ ಮಾಡಲು ಚಿಂತನೆ ನಡೆದಿದೆ.

  • ರಾಜ್ಯದಲ್ಲಿ ರೇಷ್ಮೆ ಬೆಲೆ ಕುಸಿತಕ್ಕೆ ಕೇಂದ್ರ ಸರ್ಕಾರದ ಆಮದು ಕಾರಣ – ಸಾ.ರಾ.ಮಹೇಶ್

    ರಾಜ್ಯದಲ್ಲಿ ರೇಷ್ಮೆ ಬೆಲೆ ಕುಸಿತಕ್ಕೆ ಕೇಂದ್ರ ಸರ್ಕಾರದ ಆಮದು ಕಾರಣ – ಸಾ.ರಾ.ಮಹೇಶ್

    ರಾಮನಗರ: ರಾಜ್ಯದಲ್ಲಿ ರೇಷ್ಮೆ ಬೆಲೆ ಕುಸಿತಕ್ಕೆ ಕೇಂದ್ರ ಸರ್ಕಾರದ ಆಮದು ಕಾರಣ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ ಆರೋಪ ಮಾಡಿದ್ದಾರೆ.

    ಇಂದು ಚನ್ನಪಟ್ಟಣ ತಾಲೂಕಿನ ಕಣ್ವಾ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ವಿದೇಶಗಳಿಂದ ರೇಷ್ಮೆಯನ್ನು ಆಮದು ಮಾಡಿಕೊಳ್ಳುತ್ತಿದೆ. ಈ ಕಾರಣದಿಂದ ರಾಜ್ಯದಲ್ಲಿ ರೇಷ್ಮೆ ಬೆಲೆ ಕಡಿಮೆಯಾಗಿದೆ ಎಂದು ಆರೋಪ ಮಾಡಿದ್ದಾರೆ.

    ರೇಷ್ಮೆ ಬೆಲೆ ಹೆಚ್ಚಿಸಲು ರೇಷ್ಮೆಯ ಹದಿನೈದು ಉಪ ಉತ್ಪನ್ನಗಳ ತಯಾರಿಗೆ ಸಿದ್ಧತೆ ನಡೆಸಲಾಗುತ್ತಿದೆ. ಮುಂದಿನ ವಾರದಲ್ಲಿ ಈ ಯೋಜನೆಗೆ ಸಿಎಂ ಚಾಲನೆ ನೀಡಲಿದ್ದಾರೆ. ರೇಷ್ಮೆ ಆಯೋಗದ ಕಾರ್ಯದರ್ಶಿಯೊಂದಿಗೆ ಸಂಜೆ ಸಭೆ ನಡೆಸಲಾಗುತ್ತಿದ್ದು, ರೇಷ್ಮೆ ದರ ಸಂಬಂಧ ಚರ್ಚೆ ಮಾಡಲಾಗುವುದು. ಅನ್‍ಲೈನ್ ಮೂಲಕ ರೈತರಿಗೆ ಪೇಮೆಂಟ್ ವ್ಯವಸ್ಥೆ ಮಾಡಲಾಗಿದೆ. ರೇಷ್ಮೆ ಹರಾಜು ಮುನ್ನ ಅಕೌಂಟ್‍ಗಳಲ್ಲಿ ಹಣ ಇಡುವ ವ್ಯವಸ್ಥೆ ಮಾಡಲಾಗುವುದು. ರೇಷ್ಮೆ ಮಾರುಕಟ್ಟೆಯನ್ನು ಅಧುನೀಕರಣ ಮಾಡಲಾಗುವುದು ಎಂದು ರೇಷ್ಮೆ ಬೆಳೆಗಾರರಿಗೆ ತಿಳಿಸಿದ್ದಾರೆ.

    ಇದೇ ವೇಳೆ ಕಣ್ವದ ಬಳಿ 5 ಎಕರೆ ಪ್ರದೇಶವನ್ನು ಪ್ರವಾಸೋದ್ಯಮಕ್ಕೆ ಮೀಸಲಿಡಲಾಗಿದೆ. ಈ ಯೋಜನೆಗೆ 10 ಕೋಟಿ ಪ್ರಸ್ತಾವನೆಯಲ್ಲಿ 8 ಕೋಟಿ ಬಿಡುಗಡೆ ಮಾಡಲಾಗುವುದು. ಕಣ್ವ ಬಳಿ ಮಕ್ಕಳ ಪಾರ್ಕ್‍ಗೆ 2 ಕೋಟಿ ಬಿಡುಗಡೆ ಮಾಡಲಾಗಿದ್ದು, ಆದರೆ ಈ ಹಣ ಸಾಲುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗುವುದು ಎಂದು ತಿಳಿಸಿದರು.

    ಚನ್ನಪಟ್ಟಣದ ಕೆಎಸ್‍ಐಸಿ ಹಳೆ ಕಟ್ಟಡಗಳ ನವೀಕರಣ ಜೊತೆಗೆ ಒಂದು ಲಕ್ಷ ಸೀರೆ ತಯಾರಿಕೆಗೆ ಆದ್ಯತೆ ನೀಡಲಾಗುವುದು. ಮೈಸೂರಿನಲ್ಲಿಯು ಹೊಸ ಕಟ್ಟಡಗಳನ್ನು ಸಿದ್ಧಪಡಿಸಲಾಗುವುದು. ಈ ಯೋಜನೆಗಾಗಿ 100 ಕೋಟಿ ಮೀಸಲಿಡಲಾಗುವುದು ಎಂದು ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.

  • ಕಲಾಂರ ಜನ್ಮದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲು ಬಿಜೆಪಿ ನಾಯಕನ ಮನವಿ

    ಕಲಾಂರ ಜನ್ಮದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲು ಬಿಜೆಪಿ ನಾಯಕನ ಮನವಿ

    ನವದೆಹಲಿ: ಮಾಜಿ ರಾಷ್ಟ್ರಪತಿ, ದಿವಂಗತ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮ ದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನಾಚರಣೆಯಾಗಿ ಆಚರಿಸಲು ಮಾಜಿ ರಾಜ್ಯಸಭಾ ಸಂಸದ ಮತ್ತು ಬಿಜೆಪಿ ಮುಖಂಡ ಆನಂದ್ ಭಾಸ್ಕರ್ ರಾಪೋಲು ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

    ಅಕ್ಟೋಬರ್ 15 ರಂದು ಅಬ್ದುಲ್ ಕಲಾಂ ಅವರ ಹುಟ್ಟುಹಬ್ಬ ಆಚರಿಸಲಾಗುತ್ತದೆ. ಈ ದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನಾಚರಣೆಯಾಗಿ ಆಚರಿಸುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ಡಾ.ರಮೇಶ್ ಪೋಖ್ರಿಯಲ್ ನಿಶಾಂಕ್ ಅವರಿಗೆ ಆನಂದ್ ಭಾಸ್ಕರ್ ರಾಪೋಲು ಪತ್ರ ಬರೆದು ಮನವಿ ಮಾಡಿದ್ದಾರೆ. ಈಗಾಗಲೇ ವಿಶ್ವಸಂಸ್ಥೆ ಕಲಾಂರ ಹುಟ್ಟುಹಬ್ಬದ ದಿನವನ್ನು ವಿಶ್ವ ವಿದ್ಯಾರ್ಥಿ ದಿನವೆಂದು ಘೋಷಿಸಿದೆ. ಹೀಗಾಗಿ ದೇಶಾದ್ಯಂತ ವಿದ್ಯಾರ್ಥಿ ದಿನಾಚರಣೆಯಾಗಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಜನ್ಮ ದಿನಾಚರಣೆಯನ್ನು ಆಚರಿಸಲು ಪ್ರಸ್ತಾಪಿಸಿದ್ದಾರೆ.

    ಜೂನ್ 21ರಂದು ಇದೇ ರಾಷ್ಟ್ರವು ವಿಶ್ವ ಯೋಗ ದಿನಾಚರಣೆ ಮತ್ತು ಆಗಸ್ಟ್ 7 ಅನ್ನು ರಾಷ್ಟ್ರೀಯ ಕೈಮಗ್ಗ ದಿನವೆಂದು ಆಚರಿಸುವಂತೆಯೇ, ಕಲಾಂ ಅವರ ಜನ್ಮದಿನವನ್ನು ಅದೇ ಉತ್ಸಾಹದಿಂದ ವಿಶ್ವ ವಿದ್ಯಾರ್ಥಿ ದಿನವನ್ನಾಗಿ ಆಚರಿಸಬೇಕೆಂದು ಆನಂದ್ ಭಾಸ್ಕರ್ ಒತ್ತಾಯಿಸಿದ್ದಾರೆ.

    ಅಕ್ಟೋಬರ್ 15 ರಂದು ರಾಷ್ಟ್ರೀಯ ವಿದ್ಯಾರ್ಥಿ ದಿನವೆಂದು ಘೋಷಿಸಬೇಕು. ಹಾಗೆಯೇ ಎಲ್ಲಾ ಹಂತದ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಸೂಕ್ತವಾಗಿ ಈ ದಿನವನ್ನು ಆಚರಿಸುವಂತೆ ಸೂಚಿಸಲು ನಾನು ಪ್ರಾರ್ಥಿಸುತ್ತೇನೆ. ಇದರಿಂದಾಗಿ ಕ್ಷಿಪಣಿ ವ್ಯಕ್ತಿ ಕನಸು ಕಂಡಂತೆ, ನೀವು ಈ ದಿನವನ್ನು ನಮ್ಮ ವಿದ್ಯಾರ್ಥಿಗಳ ಮನಸ್ಸನ್ನು ಬೆಳಗಿಸುವ ಕ್ಷಣವನ್ನಾಗಿ ಬಳಸಿಕೊಳ್ಳಬಹುದು ಎಂದು ಆನಂದ್ ಭಾಸ್ಕರ್ ಅವರು ಕೇಂದ್ರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಿ ಮನವಿ ಮಾಡಿಕೊಂಡಿದ್ದಾರೆ.

  • ಮಂಡ್ಯ ಬಸ್ ದುರಂತಕ್ಕೆ ಕೇಂದ್ರದ ಪರಿಹಾರ- ಶಿವರಾಮೇಗೌಡರಿಗೆ ಕ್ರೆಡಿಟ್ ನೀಡಿದ ಸಚಿವ ಪುಟ್ಟರಾಜು

    ಮಂಡ್ಯ ಬಸ್ ದುರಂತಕ್ಕೆ ಕೇಂದ್ರದ ಪರಿಹಾರ- ಶಿವರಾಮೇಗೌಡರಿಗೆ ಕ್ರೆಡಿಟ್ ನೀಡಿದ ಸಚಿವ ಪುಟ್ಟರಾಜು

    ಕೋಲಾರ: ಮಂಡ್ಯ ಬಸ್ ದುರಂತಕ್ಕೆ ಕೇಂದ್ರ ಸರ್ಕಾರದಿಂದ ಪರಿಹಾರ ಹಣ ಬಂದ ಕ್ರೆಡಿಟ್ ಮಾಜಿ ಸಂಸದ ಶಿವರಾಮೇಗೌಡರಿಗೆ ಸಲ್ಲುತ್ತದೆ ಎಂದು ಸಣ್ಣ ನೀರಾವರಿ ಸಚಿವ ಪುಟ್ಟರಾಜು ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮಂಡ್ಯ ಬಸ್ ದುರಂತದ ಬಗ್ಗೆ ಕೇಂದ್ರಕ್ಕೆ ಪರಿಹಾರ ಹಣಕ್ಕಾಗಿ ಒತ್ತಾಯಿಸಿದ್ದು ನಾನು ಎಂದು ಟ್ವೀಟ್ ಮಾಡಿದ್ದ ಶಿವರಾಮೇಗೌಡರನ್ನು ಸಮರ್ಥಿಸಿಕೊಂಡು, ಆ ಕ್ರೆಡಿಟ್ ಅವರಿಗೆ ಸಲ್ಲಬೇಕು. ಈ ದುರಂತದ ಬಗ್ಗೆ ಕೇಂದ್ರ ಸರ್ಕಾರದಿಂದ ಪರಿಹಾರದ ಕುರಿತು ಅಂದಿನ ಜಿಲ್ಲಾಧಿಕಾರಿಗಳು ವಿಸ್ತೃತ ವರದಿ ನೀಡಿದ್ದರು. ಅವರ ವರದಿ ಆಧಾರದ ಮೇಲೆ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿತ್ತು. ಅದರಂತೆ ಕಳೆದ ಫೆಬ್ರವರಿಯಲ್ಲಿಯೇ ಪರಿಹಾರ ಬಂದಿತ್ತು. ಆ ಸಮಯದಲ್ಲಿ ಲೋಕಸಭಾ ಚುನಾವಣೆಯಾದ ಕಾರಣ ಚೆಕ್ ವಿತರಣೆ ಮಾಡಲಾಗಲಿಲ್ಲ. ಈಗ ಆ ಪ್ರಕ್ರಿಯೆ ಡಿಸಿ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಈ ಕ್ರೆಡಿಟ್ ಆಗಿನ ಲೋಕಸಭಾ ಸದಸ್ಯರಿಗೆ ಸಲ್ಲುತ್ತದೆ. ಇನ್ನು ಹೆಚ್ಚಿನ ಪರಿಹಾರ ಕೊಡಿಸಲು ಆಗುವಂತಿದ್ದರೆ ಕೊಡಿಸಲಿ ಎಂದು ಸಂಸದೆ ಸುಮಲತಾರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.

    ಇದೇ ವೇಳೆ ಮೈತ್ರಿ ಸರ್ಕಾರದ ಬಗ್ಗೆ ಮಾತನಾಡಿ, ಬಹುತೇಕ ಸೋತವರು ಸರ್ಕಾರ ಉಳಿಯುವುದಿಲ್ಲ ಎಂದು ಹೇಳುತ್ತಿದ್ದಾರಷ್ಟೆ. ಆದರೆ ಐದು ವರ್ಷ ಸಿಎಂ ನೇತೃತ್ವದಲ್ಲಿ ನೂರಕ್ಕೆ ನೂರರಷ್ಟು ಮೈತ್ರಿ ಸರ್ಕಾರ ನಡೆಯುತ್ತದೆ. ಯಾರು ಯಾವ ಬ್ಲಾಕ್‍ಮೇಲ್‍ಗೂ ನಾವು ಮಣಿದಿಲ್ಲ. ಸರ್ಕಾರಕ್ಕೆ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಪಕ್ಷೇತರರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

    ಜೆಡಿಎಸ್‍ನಲ್ಲಿ ಮತ್ತಷ್ಟು ಜನರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಚಿಂತನೆ ಮಾಡಲಾಗಿದೆ. ಈ ಮೂಲಕ ಜೆಡಿಎಸ್ ಖೋಟಾದ ಖಾಲಿ ಇರೋ ಸಚಿವ ಸ್ಥಾನ ಮುಸ್ಲಿಂ ಸಮುದಾಯದವರಿಗೆ ನೀಡಲಾಗುತ್ತದೆ. ಎಲ್ಲಾ ಸಮುದಾಯಕ್ಕೆ ಒತ್ತುಕೊಡುವ ನಿಟ್ಟಿನಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರು ಮುಸ್ಲಿಂ ಸಮುದಾಯಕ್ಕೆ ಸಚಿವ ಸ್ಥಾನ ನೀಡಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು.

  • ಮಂಡ್ಯ ಬಸ್ ದುರಂತ ಕೇಂದ್ರ ಸರ್ಕಾರದಿಂದ ನೆರವು- ನನಗೆ ಕ್ರೆಡಿಟ್ ಬೇಡ ಎಂದ ಸುಮಲತಾ

    ಮಂಡ್ಯ ಬಸ್ ದುರಂತ ಕೇಂದ್ರ ಸರ್ಕಾರದಿಂದ ನೆರವು- ನನಗೆ ಕ್ರೆಡಿಟ್ ಬೇಡ ಎಂದ ಸುಮಲತಾ

    ಮಂಡ್ಯ: 2018 ನವೆಂಬರ್ 24ರಂದು ಜಿಲ್ಲೆಯ ಪಾಂಡವಪುರದ ಕನಗನಮರಡಿ ಎಂಬ ಗ್ರಾಮದಲ್ಲಿ ಸಂಭವಿಸಿದ ಬಸ್ ದುರಂತದಲ್ಲಿ 30 ಜನರು ಸಾವನ್ನಪಿದ್ದರು. ಈ ಘಟನೆಯಲ್ಲಿ ಮೃತಪಟ್ಟ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ತಲಾ 2 ಲಕ್ಷ ರೂ. ಹಣ ಬಂದಿದೆ. ಆದರೆ ಈ ವಿಚಾರ ಈಗ ರಾಜಕೀಯ ತಿರುವು ಪಡೆದು ಚರ್ಚೆಗೆ ಕಾರಣವಾಗಿದೆ. ಇದೀಗ ಎಲ್ಲ ಗೊಂದಲಗಳಿಗೆ ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ.

    https://www.facebook.com/permalink.php?story_fbid=2502437746650334&id=100006523990844

    ಮಂಡ್ಯದಲ್ಲಿ ಈ ಹಣ ಕೇಂದ್ರ ಸರ್ಕಾರದಿಂದ ಬರಲು ನೂತನ ಸಂಸದೆ ಸುಮಲತಾ ಕಾರಣ ಎಂದು ಸುಮಲತಾ ಬೆಂಬಲಿಗರು ಮತ್ತು ಈ ನೆರವು ಬರಲು ಕಾರಣ ರಾಜ್ಯ ಸರ್ಕಾರದ ಸಿಎಂ ಕಾರಣ ಎಂದು ಜೆಡಿಎಸ್ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ವಾಗ್ವಾದ ಮಾಡುತ್ತಿದ್ದಾರೆ. ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸುಮಲತಾ ಅವರು ನನಗೆ ಆ ಕ್ರೆಡಿಟ್ ಬೇಡ ಎಂದು ಹೇಳಿದ್ದಾರೆ.

    ಇಂದು ಜಿಲ್ಲೆಯ ಮಾಚಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ದುರಂತದ ಸಂಗತಿ. ಆ ಕುಟುಂಬಗಳಿಗೆ ಅನುದಾನ ತಲುಪಿರೋದು ಮುಖ್ಯ. ಯಾರು ಕೊಟ್ಟಿದ್ದಾರೆ, ಕೊಡಿಸಿದ್ದಾರೆ ಅನ್ನೋದು ಮುಖ್ಯವಲ್ಲ. ನಾನು ಕೊಟ್ಟಿದ್ದೀನಿ, ನೀವು ಕೊಟ್ಟಿಲ್ಲ ಅನ್ನೋದು ತುಂಬಾ ತಪ್ಪಾಗುತ್ತೆ. ಆ ರೀತಿ ತಪ್ಪು ಯಾರೂ ಮಾಡಬಾರದು ನಾನಂತೂ ಆ ತಪ್ಪು ಮಾಡೋದಿಲ್ಲ ಎಂದು ಹೇಳಿದ್ದಾರೆ.

    ಬಸ್ ದುರಂತವನ್ನು ಪ್ರಚಾರಕ್ಕೆ ಬಳಸೋದು ನನಗಿಷ್ಟ ಇಲ್ಲ. ಹಿಂದೆಯಿಂದಲೂ ನಾನು ಸಾಕಷ್ಟು ಬಾರಿ ಹೇಳಿದ್ದೀನಿ ಸಾಧನೆಗಳು ನಮ್ಮ ಬಗ್ಗೆ ಮಾತಾಡಬೇಕು. ನಾವು ನಮ್ಮ ಸಾಧನೆಗಳ ಬಗ್ಗೆ ಮಾತಾಡಬಾರದು. ಯಾರೇ ಮಾಡಿರಲಿ ಅದನ್ನು ಹೇಳಿಕೊಳ್ಳಬಾರದು. ಈ ವಿಚಾರದಲ್ಲಿ ಯಾರು ಬೇಕಾದರೂ ಕ್ರೆಡಿಟ್ ತೆಗೆದುಕೊಳ್ಳಲಿ ನನಗೆ ಆ ಬಗ್ಗೆ ಬೇಜಾರ್ ಏನೂ ಇಲ್ಲ. ನನ್ನ ಕೆಲಸ ಈಗಷ್ಟೇ ಆರಂಭವಾಗಿದೆ. ಅದನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುವ ನಂಬಿಕೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಇದೇ ವೇಳೆ ಸಂಸತ್ ಅಧಿವೇಶನದ ಬಳಿಕ ಕ್ಷೇತ್ರ ಪ್ರವಾಸ ಮಾಡುತ್ತೇನೆ. ಬಜೆಟ್‍ನಲ್ಲಿ ಸಾಕಷ್ಟು ನಿರೀಕ್ಷೆ ಇದೆ, ಸಾಕಷ್ಟು ಕೊಡುಗೆ ನೀಡೋ ವಿಶ್ವಾಸ ಇದೆ. ಸಂಬಂಧಪಟ್ಟ ಸಚಿವರ ಜೊತೆ ಚರ್ಚೆ ಮಾಡುತ್ತೇನೆ. ಮಂಡ್ಯದ ಸಮಸ್ಯೆ ಬಗೆಹರಿಸಲು ಮತ್ತು ಮಂಡ್ಯ ರೈತರ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡುತ್ತೇನೆ. ಮಂಡ್ಯದ ಶುಗರ್ ಸಕ್ಕರೆ ಕಾರ್ಖಾನೆ ಖಾಸಗೀಕರಣ ರೈತರಿಗೆ ಒಳ್ಳೆಯದಾಗುವಂತ ನಿರ್ಧಾರ ತೆಗೆದುಕೊಂಡರೆ ಸಹಕಾರ ನೀಡುತ್ತೇನೆ. ಇದರ ಬಗ್ಗೆ ತಜ್ಞರ ಜೊತೆ ಚರ್ಚೆ ಮಾಡಿ ಮಾಹಿತಿ ಪಡೆದು ಯಾವುದು ಸೂಕ್ತ ಅನ್ನೋದನ್ನು ನಂತರ ತೀರ್ಮಾನ ಮಾಡಿ ಮಾತನಾಡುತ್ತೇನೆ ಎಂದು ಹೇಳಿದರು.

    https://www.youtube.com/watch?v=XpZzL4RaCWk

    ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರದಿಂದ ಮಂಡ್ಯ ನಿರ್ಲಕ್ಷ್ಯ ವಿಚಾರದ ಬಗ್ಗೆ ಕೇಳಿದಾಗ, ಈ ವಿಚಾರದ ಬಗ್ಗೆ ಅವರನ್ನೇ ಕೇಳಬೇಕು. ಈಗಷ್ಟೇ ಚುನಾವಣೆ ಮುಗಿದಿದೆ. ಆ ವೇಳೆ ಸಾಕಷ್ಟು ಭರವಸೆ ಕೂಡ ಕೊಟ್ಟಿದ್ದರು. ಎಲ್ಲಾ ಭರವಸೆ ಈಡೇರಿಸೋ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಏನ್ ಮಾಡುತ್ತಾರೆ ಅನ್ನೋದನ್ನು ಕಾದು ನೋಡೋಣ ಎಂದರು. ಮಣಿಗೆರೆಯಲ್ಲಿ ಮೂವರ ದುರ್ಮರಣ ಪ್ರಕರಣದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ. ಯಾರಿಂದ ಪರಿಹಾರ ಕೊಡಿಸಬೇಕೋ ಅವರಿಂದ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

  • ಮಂಡ್ಯ ಬಸ್ ದುರಂತ- ಮೃತರ ಕುಟುಂಬಸ್ಥರಿಗೆ ಕೇಂದ್ರದಿಂದ ತಲಾ 2 ಲಕ್ಷ ರೂ. ಪರಿಹಾರ

    ಮಂಡ್ಯ ಬಸ್ ದುರಂತ- ಮೃತರ ಕುಟುಂಬಸ್ಥರಿಗೆ ಕೇಂದ್ರದಿಂದ ತಲಾ 2 ಲಕ್ಷ ರೂ. ಪರಿಹಾರ

    – ಸಿಎಂ, ಸಂಸದೆಯಿಂದ ಮೋದಿಗೆ ಧನ್ಯವಾದ

    ಮಂಡ್ಯ: ಜಿಲ್ಲೆಯ ಪಾಂಡವಪುರ ಕನಗನಮರಡಿನಲ್ಲಿ ಸಂಭವಿಸಿದ್ದ ಭೀಕರ ಬಸ್ ದುರಂತದಲ್ಲಿ 30 ಜನರು ಮೃತಪಟ್ಟಿದ್ದರು. ಇದೀಗ ಮೃತಪಟ್ಟ 30 ಮಂದಿಯ ಕುಟುಂಬಸ್ಥರಿಗೆ ಕೇಂದ್ರ ಸರ್ಕಾರ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದೆ.

    ಬಸ್ ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ಘೋಷಿಸಿರುವುದಕ್ಕೆ ರಾಜ್ಯದ ಮುಖ್ಯಮಂತ್ರಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮಾಡುವ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.

    “ಕರ್ನಾಟಕ ಸರ್ಕಾರ ಮಂಡ್ಯ ಕನಗನಮರಡಿ ಬಸ್ ಅಪಘಾತದಲ್ಲಿ ಮೃತಪಟ್ಟವರ ಸಂಬಂಧಿಕರಿಗೆ 5 ಲಕ್ಷ ರೂ. ಪರಿಹಾರ ನೀಡಿತ್ತು. ಈಗ ಭಾರತ ಸರ್ಕಾರ ತಲಾ 2 ಲಕ್ಷ ರೂ. ಪರಿಹಾರ ನೀಡಿದೆ. ಹೀಗಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು” ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

    ಸುಮಲತಾ ಅವರು, “ಮೃತ ಕುಟುಂಬಕ್ಕೆ ಕೇಂದ್ರ ಸರ್ಕಾರ ಪರಿಹಾರ ಘೋಷಣೆ ಮಾಡಿರುವುದು ವೈಯಕ್ತಿಕವಾಗಿ ನನಗೆ ಸಂತಸ ತಂದಿದೆ. ಅಂದಿನ ದುರ್ಘಟನೆ ಎಲ್ಲರಿಗೂ ನೋವುಂಟು ಮಾಡಿತ್ತು. ಒಟ್ಟಿನಲ್ಲಿ ಮಂಡ್ಯ ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ನೀಡಿದಕ್ಕಾಗಿ ಮೋದಿಜೀ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

    ಕನಗನಮರಡಿ ಬಳಿ ಖಾಸಗಿ ಬಸ್ ಸುಮಾರು 15 ಅಡಿ ಆಳದ ವಿಸಿ ನಾಲೆಗೆ ಉರುಳಿದ ಪರಿಣಾಮ ಮಕ್ಕಳು ಸೇರಿದಂತೆ 30 ಮಂದಿ ದಾರುಣವಾಗಿ ಮೃತಪಟ್ಟಿದ್ದರು. ಆಗ ಕರ್ನಾಟಕ ರಾಜ್ಯ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿತ್ತು. ಈಗ ಕೇಂದ್ರ ಸರ್ಕಾರ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಇದೀಗ ಸಂತ್ರಸ್ತೆ ಕುಟುಂಬದವರಿಗೆ ಒಟ್ಟು 7 ಲಕ್ಷ ರೂ. ಪರಿಹಾರ ಸಿಕ್ಕಿದಂತಾಗಿದೆ.