Tag: Central Government

  • ಹೊಸ ವಾಹನಗಳ ನೋಂದಣಿ ಶುಲ್ಕ ಹೆಚ್ಚಿಸಲು ಕೇಂದ್ರ ಚಿಂತನೆ

    ಹೊಸ ವಾಹನಗಳ ನೋಂದಣಿ ಶುಲ್ಕ ಹೆಚ್ಚಿಸಲು ಕೇಂದ್ರ ಚಿಂತನೆ

    ನವದೆಹಲಿ: ಬೈಕ್, ಕಾರು ಬಳಕೆದಾರರು ಮತ್ತು ಹೊಸ ವಾಹನ ಖರೀದಿ ಮಾಡುವವರಿಗೆ ಶಾಕಿಂಗ್ ನ್ಯೂಸ್ ಲಭಿಸಿದ್ದು, ಹೊಸ ವಾಹನಗಳ ನೋಂದಣಿ ಶುಲ್ಕವನ್ನ ಗಣನೀಯವಾಗಿ ಹೆಚ್ಚಿಸಲು ಪ್ರಧಾನಿ ಮೋದಿ ಸರ್ಕಾರ ಯೋಚಿಸುತ್ತಿದೆ.

    ಪೆಟ್ರೋಲ್, ಡೀಸೆಲ್ ಬಳಕೆಗೆ ಕಡಿವಾಣ ಹಾಕಿ ಎಲೆಕ್ಟ್ರಿಕ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಈ ತಂತ್ರ ರೂಪಿಸಿದೆ ಎನ್ನಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳಿಗೆ ಪ್ರಸ್ತಾವಿತ ನೋಂದಣಿ ಶುಲ್ಕ ಹೆಚ್ಚಳದಿಂದ ವಿನಾಯಿತಿ ನೀಡಲಾಗಿದೆ. ಹೊಸ ವಾಹನಗಳ ಪ್ರಸ್ತಾವಿತ ನೋಂದಣಿ ಶುಲ್ಕ ಈ ರೀತಿ ಇದೆ.

    ಹೊಸ ಕಾರುಗಳ ನೋಂದಣಿ ಶುಲ್ಕ ವನ್ನು 600 ರೂ. ನಿಂದ 5 ಸಾವಿರ ರೂ.ಗೆ ಹೆಚ್ಚಳ ಮಾಡುವ ನಿರೀಕ್ಷೆ ಇದೆ. ಹಳೆ ಕಾರುಗಳ ನೋಂದಣಿ ಮರು ಪರಿಷ್ಕರಣೆಗೆ 600 ರೂ. ನಿಂದ 10 ಸಾವಿರ ರೂ.ಗೆ ಹೆಚ್ಚಳ. ಹೊಸ ದ್ವಿಚಕ್ರ ವಾಹನಗಳ ನೋಂದಣಿ ಶುಲ್ಕ 60 ರೂ. ನಿಂದ 1 ಸಾವಿರ ರೂ.ಗೆ ಏರಿಕೆ ಹಾಗೂ ದ್ವಿಚಕ್ರ ವಾಹನಗಳ ನೋಂದಣಿ ಮರು ಪರಿಷ್ಕರಣೆ 50 ರೂ. ನಿಂದ 2 ಸಾವಿರ ರೂ.ಗೆ ಏರಿಕೆ ಆಗುವ ಸಾಧ್ಯತೆ ಇದೆ.

    ಹೊಸ ಕ್ಯಾಬ್‍ಗಳ ನೋಂದಣಿ ಶುಲ್ಕ 1 ಸಾವಿರ ರೂ. ನಿಂದ 10 ಸಾವಿರ ರೂ. ಮತ್ತು ಹಳೆ ಕ್ಯಾಬ್‍ಗಳ ನೋಂದಣಿ ಮರು ಪರಿಷ್ಕರಣೆಗೆ 1 ಸಾವಿರ ರೂ. ನಿಂದ 20 ಸಾವಿರ ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇದೆ. ವಿದೇಶದಿಂದ ಆಮದು ಮಾಡಿಕೊಳ್ಳುವ ದ್ವಿಚಕ್ರ ವಾಹನಗಳ ನೋಂದಣಿ ಶುಲ್ಕ ಮೊತ್ತ 2,500 ರೂ.ನಿಂದ 20 ಸಾವಿರ ರೂ.ಗೆ ಹೆಚ್ಚಳ ಆಗಲಿದೆ. ಆಮದು ಮಾಡಿಕೊಳ್ಳುವ ಇತರೆ ವಾಹನಗಳ ನೋಂದಣಿ ಶುಲ್ಕ 5 ಸಾವಿರ ರೂ. ನಿಂದ 40 ಸಾವಿರ ರೂ.ಗೆ ಏರಿಕೆ ಆಗುವ ನಿರೀಕ್ಷೆ ಇದೆ.

  • ಸಣ್ಣ ನಗರಗಳಲ್ಲಿ ಬರಲಿದೆ ಮೆಟ್ರೋಲೈಟ್ ವ್ಯವಸ್ಥೆ – ಮೆಟ್ರೋಕ್ಕಿಂತ ಭಿನ್ನ ಹೇಗೆ?

    ಸಣ್ಣ ನಗರಗಳಲ್ಲಿ ಬರಲಿದೆ ಮೆಟ್ರೋಲೈಟ್ ವ್ಯವಸ್ಥೆ – ಮೆಟ್ರೋಕ್ಕಿಂತ ಭಿನ್ನ ಹೇಗೆ?

    ನವದೆಹಲಿ: ಮಹಾನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿರುವುದರಿಂದ ಪ್ರಯಾಣಿಕರ ಸಂಚಾರಕ್ಕೆ ಸುಲಭವಾಗಲು ಮೆಟ್ರೊ ಕಾರ್ಯರೂಪಕ್ಕೆ ಬಂತು. ಆದರೆ ಈಗ ಕೇವಲ ಮಹಾನಗರಗಳಷ್ಟೇ ಅಲ್ಲದೆ ಸಣ್ಣ ನಗರಗಳಲ್ಲೂ ಸಂಚಾರ ದಟ್ಟಣೆ ನಿರ್ವಹಣೆಗಾಗಿ ಮೆಟ್ರೋ ರೈಲು ಸೇವೆ ಆರಂಭಿಸುವ ಪ್ರಸ್ತಾವನೆಯನ್ನು ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯವು ಸರ್ಕಾರದ ಮುಂದಿಟ್ಟಿದೆ.

    ಈ ಯೋಜನೆಗೆ `ಮೆಟ್ರೋಲೈಟ್’ ಎಂದು ಹೆಸರು ನೀಡಲಾಗಿದ್ದು, ಪ್ರಸ್ತುತವಾಗಿ ಮಹಾನಗರಗಳಲ್ಲಿ ಭಾರೀ ವೆಚ್ಚದಲ್ಲಿ ಮೆಟ್ರೋ ರೈಲು ಕಾರ್ಯರೂಪಕ್ಕೆ ಬಂದಿದೆ. ದೊಡ್ಡ ನಗರಗಳಲ್ಲಿ ಇರುವ ಮೆಟ್ರೋ ರೈಲುಗಳ ಸಂಚಾರ ವ್ಯವಸ್ಥೆಗಿಂತ ಕಡಿಮೆ ವೆಚ್ಚದಲ್ಲಿ `ಮೆಟ್ರೋಲೈಟ್’ ಅಭಿವೃದ್ಧಿ ಮಾಡಬಹುದಾಗಿದೆ. ಸುಮಾರು ಮೂರು ಬೋಗಿಗಳ ಮೆಟ್ರೋ ರೈಲು ಸಂಚಾರ ಆರಂಭಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ.

    ಈ ಮೆಟ್ರೋಲೈಟ್ ರೈಲಿನಲ್ಲಿ ಸುಮಾರು 300 ಪ್ರಯಾಣಿಕರು ಪ್ರಯಾಣಿಸಬಹುದು. ಇದು ಗಂಟೆಗೆ 25 ಕಿ.ಮೀ ವೇಗದಲ್ಲಿ ಸಂಚರಿಸುತ್ತದೆ. ಮೆಟ್ರೋಲೈಟ್ ರೈಲುಗಳಿಗೆ ರಸ್ತೆಯ ಪಕ್ಕದಲ್ಲಿ ಮಾರ್ಗ ನಿರ್ಮಿಸಲಾಗುತ್ತದೆ, ಅಗತ್ಯ ಬಿದ್ದರೆ ಮಾತ್ರ ಎತ್ತರದ ಮಾರ್ಗಗಳನ್ನು ನಿರ್ಮಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಸುರಕ್ಷತೆಗಾಗಿ ರೈಲುಗಳ ಸಂಚಾರ ಮಾರ್ಗದ ಎರಡೂ ಕಡೆಯಲ್ಲೂ ತಂತಿಬೇಲಿಗಳನ್ನು ಹಾಕಲಾಗುವುದು ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

    ಎಕ್ಸ್-ರೇ ಲಗೇಜ್ ಸ್ಕ್ಯಾನರ್, ಪ್ಲಾಟ್‍ಫಾರ್ಮ್ ಪರದೆ ಬಾಗಿಲುಗಳು, ಆಟೋಮ್ಯಾಟಿಕ್ ಪ್ರವೇಶ ದ್ವಾರಗಳನ್ನು ಈ ನಿಲ್ದಾಣಗಳು ಹೊಂದಿರುವುದಿಲ್ಲ. ಬದಲಿಗೆ ಟಿಕೆಟ್ ವ್ಯಾಲಿಡೇಟರ್ಸ್ ಮೆಟ್ರೋಲೈಟ್ ರೈಲುಗಳಲ್ಲಿಯೇ ಇರಲಿದ್ದಾರೆ. ಅಲ್ಲದೆ ಪ್ಲಾಟ್‍ಫಾರ್ಮ್ ವ್ಯವಸ್ಥೆ ಇರಲಿದೆ. ಹಾಗೆಯೇ ಪ್ರಯಾಣಿಕರು ಟಿಕೆಟ್ ರಹಿತ ಪ್ರಯಾಣ ನಡೆಸಿದರೆ ಭಾರೀ ಮೊತ್ತದ ದಂಡ ವಿಧಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಎರಡು ಸಮಾನಾಂತರ ರಸ್ತೆಗಳ ಮಧ್ಯೆ ತಡೆಯಿಲ್ಲದೇ ಸಂಚಾರಕ್ಕಾಗಿ ಸಿಂಗಲ್ ಟ್ರ್ಯಾಕ್ ನಿರ್ಮಿಸಲಾಗುವುದು. ಇಂತಹ ರಸ್ತೆಗಳನ್ನು ಗುರುತಿಸುವ ಕೆಲಸವನ್ನು ನಗರದ ಪಾಲಿಕೆಗಳಿಗೆ ನೀಡಲಾಗುತ್ತದೆ. ಮೆಟ್ರೋಲೈಟ್‍ನಲ್ಲಿ 3 ಪ್ರತ್ಯೇಕಿಸಲಾಗದ ಬೋಗಿಗಳು ಇರಲಿದೆ. ನೆಲದಿಂದ ಬೋಗಿಗಳ ಎತ್ತರ 2.2 ಮಿ. ವರೆಗೆ ಇರುತ್ತದೆ. ಈ ರೈಲು ಗಂಟೆಗೆ ಗರಿಷ್ಟ 60 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮಥ್ರ್ಯ ಹೊಂದಿರುತ್ತದೆ.

    ಈ ಹಿಂದೆ ಎಂದು ಲೋಕಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಬಿಜೆಪಿ ಸುಮಾರು 50 ನಗರಗಳಿಗೆ ಮೆಟ್ರೋ ಜಾಲವನ್ನು ವಿಸ್ತರಿಸಲಾಗುವುದು ಎಂದು ಘೋಷಿಸಿತ್ತು.

  • ಕೇಂದ್ರ ಸರ್ಕಾರ ಎರಡು ವರ್ಷಕ್ಕೂ ಹೆಚ್ಚು ದಿನಗಳ ಕಾಲ ಉಳಿಯಲ್ಲ: ಮಮತಾ ಬ್ಯಾನರ್ಜಿ

    ಕೇಂದ್ರ ಸರ್ಕಾರ ಎರಡು ವರ್ಷಕ್ಕೂ ಹೆಚ್ಚು ದಿನಗಳ ಕಾಲ ಉಳಿಯಲ್ಲ: ಮಮತಾ ಬ್ಯಾನರ್ಜಿ

    -ಟಿಎಂಸಿ ಶಾಸಕರಿಗೆ 2 ಕೋಟಿ, ಪೆಟ್ರೋಲ್ ಪಂಪ್ ಆಫರ್

    ಕೋಲ್ಕತ್ತಾ: ಕೇಂದ್ರದ ಬಿಜೆಪಿ ಸರ್ಕಾರ ಕಾರ್ಯ ನಿರ್ವಹಿಸುತ್ತಿರುವ ವಿಧಾನವನ್ನು ನೊಡಿದರೆ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭವಿಷ್ಯ ನುಡಿದಿದ್ದಾರೆ.

    ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿ ಸೇರದಿದ್ದಲ್ಲಿ ಚಿಟ್ ಫಂಡ್ ಹಗರಣ ಪ್ರಕರಣಗಳಲ್ಲಿ ಕೇಂದ್ರದ ಏಜೆನ್ಸಿಗಳ ಮೂಲಕ ದಾಳಿ ನಡೆಸಿ ಜೈಲಿಗೆ ಕಳುಹಿಸುವುದಾಗಿ ಟಿಎಂಸಿ ನಾಯಕರಿಗೆ ಬೆದರಿಕೆ ಹಾಕುತ್ತಿದೆ. ಈ ಮೂಲಕ ನಮ್ಮ ನಾಯಕರು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ. ಬಿಜೆಪಿಗೆ ಸೇರುತ್ತೀರೋ ಇಲ್ಲವೋ ಜೈಲು ಸೇರುತ್ತೀರೋ ಎಂದು ಅವರಿಗೆ ಕೇಳುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.

    ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ಶಾಸಕರನ್ನು ಖರೀದಿಸುವುದರಲ್ಲೇ ಕಾಲ ಕಳೆಯುತ್ತಿದ್ದು, ಸರ್ಕಾರ ನಡೆಯುತ್ತಿರುವ ವಿಧಾನವನ್ನು ನೋಡಿದರೆ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ. ಬಿಜೆಪಿ ಕುದುರೆ ವ್ಯಾಪಾರಕ್ಕೆ ಮುಂದಾಗಿದ್ದು, ತೃಣಮೂಲ ಕಾಂಗ್ರೆಸ್ ಶಾಸಕರಿಗೆ 2 ಕೋಟಿ ರೂ. ಹಾಗೂ ಪೆಟ್ರೋಲ್ ಪಂಪ್ ಆಫರ್ ಮಾಡುತ್ತಿದೆ. ಕರ್ನಾಟಕದಲ್ಲಿ ಮಾಡಿದಂತೆ ಪಶ್ಚಿಮ ಬಂಗಾಳದಲ್ಲಿಯೂ ಸಹ ಬಿಜೆಪಿ ಕುದುರೆ ವ್ಯಾಪಾರಕ್ಕೆ ತೊಡಗಿಕೊಂಡಿದೆ ಎಂದು ದೂರಿದರು.

    ಬಿಜೆಪಿ ಈವರೆಗೆ ವಶಪಡಿಸಿಕೊಂಡಿರುವ ಕಪ್ಪುಹಣದ ಮಾಹಿತಿ ನೀಡುವಂತೆ ಜು.26ರಂದು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಇದೇ ವೇಳೆ ತಿಳಿಸಿದರು. ಸಂಸತ್ ಸುಗಮವಾಗಿ ನಡೆಸುವ ಮನ್ನಣೆ ವಿರೋಧ ಪಕ್ಷಗಳಿಗೆ ಸಲ್ಲುತ್ತದೆ. ಅಧಿಕಾರದಲ್ಲಿರುವವರಿಗೆ ಅಲ್ಲ ಎಂದು ಎಂದು ಮಮತಾ ಬ್ಯಾನರ್ಜಿ ವ್ಯಂಗ್ಯವಾಡಿದರು.

  • ರಾಜ್ಯಪಾಲರು, ಕೇಂದ್ರ ಸರ್ಕಾರ ಮುಂದೇನು ಮಾಡಬಹುದು?

    ರಾಜ್ಯಪಾಲರು, ಕೇಂದ್ರ ಸರ್ಕಾರ ಮುಂದೇನು ಮಾಡಬಹುದು?

    ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕಾನೂನು ಸಂಘರ್ಷ ಉಂಟಾಗುವ ಸಾಧ್ಯತೆ ಇದೆ. ಅಲ್ಪಮತಕ್ಕೆ ಕುಸಿದಿರುವ ದೋಸ್ತಿ ಸರ್ಕಾರದ ವಿರುದ್ಧ ಕ್ರಮಕ್ಕೆ ಖುದ್ದು ರಾಜ್ಯಪಾಲರೇ ಅಖಾಡಕ್ಕಿಳಿಯುವ ಸಾಧ್ಯತೆಗಳಿವೆ.

    ವಿಶ್ವಾಸಮತಕ್ಕೆ 2 ಬಾರಿ ಸೂಚನೆ ರವಾನಿಸಿದ್ದರೂ, ಮುಂದಾಗದಿರುವುದನ್ನು ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ಕೇಂದ್ರಕ್ಕೆ ಒಂದು ವರದಿಯನ್ನೂ ಕೂಡ ರಾಜ್ಯಪಾಲ ವಜೂಭಾಯ್ ವಾಲಾ ರವಾನಿಸಿದ್ದಾರೆ.

    ರಾಜ್ಯಪಾಲರು ಏನ್ ಮಾಡಬಹುದು?
    ಆಯ್ಕೆ 1- ರಾಜಕೀಯ ಬಿಕ್ಕಟ್ಟು ಕೇಂದ್ರಕ್ಕೆ 2ನೇ ವರದಿ ಸಲ್ಲಿಸಬಹುದು
    ಆಯ್ಕೆ 2- ಮತ್ತೆ 3ನೇ ಬಾರಿಗೆ ವಿಶ್ವಾಸಮತಕ್ಕೆ ಸೂಚಿಸಬಹುದು
    ಆಯ್ಕೆ 3- ವಿಧಾನಸಭೆ ಅಮಾನತ್ತಿನಲ್ಲಿಟ್ಟು ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಬಹುದು
    ಆಯ್ಕೆ 4- ಸಂಖ್ಯಾಬಲ ಆಧರಿಸಿ ಅತಿದೊಡ್ಡ ಪಕ್ಷ ಬಿಜೆಪಿಯನ್ನು ಸರ್ಕಾರ ರಚನೆಗೆ ಆಹ್ವಾನಿಸಬಹುದು

    ಕೇಂದ್ರ ಸರ್ಕಾರ ಏನ್ ಮಾಡಬಹುದು?
    ಆಯ್ಕೆ 1- ರಾಜ್ಯಪಾಲರ ಶಿಫಾರಸ್ಸನ್ನು ಗಂಭೀರವಾಗಿ ಪರಿಗಣಿಸುವುದು
    ಆಯ್ಕೆ 2- ಕೇಂದ್ರ ಸಂಪುಟ ವ್ಯವಹಾರಗಳ ಸಭೆಯಲ್ಲಿ ಚರ್ಚಿಸಿ ಸಂಪುಟ ಸಭೆಗೆ ವರ್ಗಾಯಿಸಬಹುದು
    ಆಯ್ಕೆ 3- ಸಂಪುಟ ಸಭೆ ಕರೆದು ರಾಷ್ಟ್ರಪತಿ ಆಳ್ವಿಕೆ ಶಿಫಾರಸ್ಸಿಗೆ ಒಪ್ಪಿಗೆ ಸೂಚಿಸುವುದು
    ಆಯ್ಕೆ 4- ರಾಷ್ಟ್ರಪತಿಗಳಿಂದ ಅಂಕಿತ ಪಡೆದುಕೊಳ್ಳಬಹುದು
    ಆಯ್ಕೆ 5- ಅಲ್ಪಕಾಲ ರಾಷ್ಟ್ರಪತಿ ಆಡಳಿತವನ್ನು ಹೇರಬಹುದು
    ಆಯ್ಕೆ 6- ಎಷ್ಟು ದಿನ ವಿಶ್ವಾಸ ವಿಳಂಬ ಮಾಡಬಹುದು ಅಂತ ಕಾದು ನೋಡಬಹುದು

  • ಎಲ್ಲೆ ಇದ್ದರೂ ಅಕ್ರಮ ವಲಸಿಗರನ್ನು ಹುಡುಕಿ ದೇಶದಿಂದ ಹೊರ ಹಾಕ್ತೀವಿ: ಶಾ ಗುಡುಗು

    ಎಲ್ಲೆ ಇದ್ದರೂ ಅಕ್ರಮ ವಲಸಿಗರನ್ನು ಹುಡುಕಿ ದೇಶದಿಂದ ಹೊರ ಹಾಕ್ತೀವಿ: ಶಾ ಗುಡುಗು

    ನವದೆಹಲಿ: ದೇಶದ ಯಾವುದೇ ಮೂಲೆಯಲ್ಲಿದ್ದರೂ ಅಕ್ರಮ ವಲಸಿಗರನ್ನು ಸರ್ಕಾರ ಗುರುತಿಸಲಿದೆ. ಅಂತರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿ ನೆಲೆಸಿರುವವರನ್ನು ಮುಲಾಜಿಲ್ಲದೆ ದೇಶದಿಂದ ಹೊರ ಹಾಕಲಾಗುವುದು ಎಂದು ಗೃಹ ಸಚಿವ ಅಮಿತ್ ಗುಡುಗಿದ್ದಾರೆ.

    ರಾಜ್ಯಸಭೆಯ ಅಧಿವೇಶನದಲ್ಲಿ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯ ಜವೇದ್ ಅಲಿ ಖಾನ್ ಅವರು ಇತರ ರಾಜ್ಯಗಳಲ್ಲಿಯೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್​ಆರ್​ಸಿ) ಜಾರಿಯಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ತುಂಬಾ ಒಳ್ಳೆಯ ಪ್ರಶ್ನೆ. ಎನ್‍ಆರ್‍ಸಿ ಅಸ್ಸಾಂ ಒಪ್ಪಂದದ ಭಾಗವಾಗಿದೆ ಹಾಗೂ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಇದೂ ಒಂದು ಅಂಶವಾಗಿತ್ತು. ಇದರ ಆಧಾರದ ಮೇಲೆಯೇ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ತಿಳಿಸಿದರು.

    ದೇಶದ ಪ್ರತಿ ಇಂಚೂ ಬಿಡದೇ, ಅನಧಿಕೃತವಾಗಿ ವಾಸವಿರುವ ಪ್ರತಿಯೊಬ್ಬ ವಿದೇಶಿಗರನ್ನು ಸರ್ಕಾರ ಗುರುತಿಸಲಿದೆ. ಅಂತರಾಷ್ಟ್ರೀಯ ಕಾನೂನಿನ ಅನ್ವಯ ಮುಲಾಜಿಲ್ಲದೆ ಪ್ರತಿಯೊಬ್ಬರನ್ನೂ ಹೊರ ಹಾಕಲಾಗುವುದು ಎಂದು ತಿಳಿಸಿದ್ದಾರೆ.

    ಎನ್​ಆರ್​ಸಿ ನೋಂದಣಿ ಗಡುವನ್ನು ವಿಸ್ತರಿಸುವಂತೆ ಅಸ್ಸಾಂನಿಂದ ಹೆಚ್ಚು ಮನವಿಗಳು ಕೇಂದ್ರ ಸರ್ಕಾರಕ್ಕೆ ಬರುತ್ತಿವೆ. ಈಗಾಗಲೇ 25 ಲಕ್ಷ ಅರ್ಜಿದಾರರು ಸಹಿ ಹಾಕಿದ್ದು, ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಎಲ್ಲ ತಪ್ಪುಗಳನ್ನು ಸರಿ ಪಡಿಸುವಂತೆ ರಾಷ್ಟ್ರಪತಿಗಳು ತಿಳಿಸಿದ್ದಾರೆ ಎಂದು ಇದೇ ವೇಳೆ ರಾಜ್ಯ ಗೃಹ ಸಚಿವ ನಿತ್ಯಾನಂದ ರೈ ತಿಳಿಸಿದರು.

    ಅನೇಕ ನೈಜ ಹೆಸರುಗಳನ್ನು ಕೈ ಬಿಡಲಾಗಿದೆ. ಅಲ್ಲದೆ ಅನೇಕ ನಕಲಿ ಹೆಸರುಗಳನ್ನು ನೋಂದಾಯಿಸಲಾಗಿರುವುದರಿಂದ ಕಾಲಾವಕಾಶವನ್ನು ವಿಸ್ತರಿಸುವಂತೆ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಮನವಿ ಮಾಡಿದೆ. ಸ್ವಲ್ಪ ತಡವಾಗಬಹುದು ಆದರೆ, ಎನ್​ಆರ್​ಸಿಯನ್ನು ಯವುದೇ ದೋಶವಿಲ್ಲದೆ ಜಾರಿಗೊಳಿಸಲಾಗುವುದು. ಎನ್​ಆರ್​ಸಿಯಿಂದ ಯಾವುದೇ ನೈಜ ನಾಗರಿಕರು ಹೊರಗುಳಿಯಬಾರದು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

    ದೇಶದಲ್ಲಿರುವ ರೊಹಿಂಗ್ಯಾ ಮುಸ್ಲಿಮರ ಕುರಿತು ಪ್ರತಿಕ್ರಿಯಿಸಿದ ಅವರು, ನಿರ್ಧಿಷ್ಟ ಅಂಕಿ ಅಂಶ ನಮ್ಮ ಬಳಿ ಇಲ್ಲ. ದೇಶಾದ್ಯಂತ ರೊಹಿಂಗ್ಯಾ ಮುಸ್ಲಿಮರು ಚದುರಿದ್ದಾರೆ. ಕೆಲವರು ಮರಳಿ ಬಾಂಗ್ಲಾ ದೇಶಕ್ಕೆ ಹೋಗಿದ್ದಾರೆ. ಶೀಘ್ರವೇ ಈ ಕುರಿತು ಅಂಕಿ ಅಂಶಗಳನ್ನು ಕಲೆ ಹಾಕಲಾಗುವುದು ಎಂದು ಉತ್ತರಿಸಿದರು.

  • ಆಕ್ಸಿಡೆಂಟ್ ಮಾಡಿದವ್ರೇ ಸಂತ್ರಸ್ತರಿಗೆ ಪರಿಹಾರ ಕೊಡ್ಬೇಕು

    ಆಕ್ಸಿಡೆಂಟ್ ಮಾಡಿದವ್ರೇ ಸಂತ್ರಸ್ತರಿಗೆ ಪರಿಹಾರ ಕೊಡ್ಬೇಕು

    – 2019ರ ಮೋಟಾರು ವಾಹನ ತಿದ್ದುಪಡಿ ವಿಧೇಯಕ
    – ವಿಧೇಯಕದಲ್ಲಿ ಏನಿದೆ?
    – ಯಾವ ನಿಯಮ ಉಲ್ಲಂಘಿಸಿದರೆ ಎಷ್ಟು ದಂಡ?

    ನವದೆಹಲಿ: ರಸ್ತೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರತಿಪಕ್ಷಗಳ ವಿರೋಧದ ಮಧ್ಯೆಯೇ ಮೋಟಾರು ವಾಹನ ತಿದ್ದುಪಡಿ ವಿಧೇಯಕ -2019ರಲ್ಲಿ, ಅಪಘಾತ ಎಸೆಗಿದವರೇ ಸಂತ್ರಸ್ತರಿಗೆ ಪರಿಹಾರ ಕೊಡಬೇಕು ಎಂಬ ನಿಯಮದ ಬಗ್ಗೆ ಲೋಕಸಭೆಯಲ್ಲಿ ಸೋಮವಾರದಂದು ಮಂಡಿಸಿದೆ.

    2019ರ ಮೋಟಾರು ವಾಹನ ತಿದ್ದುಪಡಿ ವಿಧೇಯಕದಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಮಾಡಿದವರಿಗೆ ಭಾರಿ ದಂಡ ವಿಧಿಸಲಾಗುತ್ತೆ. ಹಾಗೆಯೇ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದವರಿಗೆ ಹಾಗೂ ಗಾಯಾಳುಗಳಿಗೆ ಹೆಚ್ಚಿನ ಪರಿಹಾರ ನೀಡುವುದು, ಮಾನವೀಯ ದೃಷ್ಟಿಯಲ್ಲಿ ಗಾಯಾಳುಗಳ ಸಹಾಯಕ್ಕೆ ಬರುವ ಸಾರ್ವಜನಿಕರಿಗೆ ಪೊಲೀಸ್ ವಿಚಾರಣೆಯ ಕಿರಿಕಿರಿಯಿಂದ ವಿನಾಯಿತಿ ನೀಡುವುದು, ಹೀಗೆ ಹಲವು ಸುಧಾರಣಾ ಕ್ರಮಗಳ ಬಗ್ಗೆ ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿದೆ.

    ಈ ಹಿಂದಿನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ 1988ರ ಮೋಟಾರು ವಾಹನ ಕಾಯ್ದೆಯನ್ನು ಪರಿಷ್ಕರಿಸುವ `ಮೋಟಾರು ವಾಹನ ತಿದ್ದುಪಡಿ ವಿಧೇಯಕ’ಕ್ಕೆ ಲೋಕಸಭೆ ಅನುಮೋದನೆ ದೊರಕಿತ್ತು. ಆದರೆ ರಾಜ್ಯಸಭೆಯಲ್ಲಿ ಇದಕ್ಕೆ ಅನುಮೋದನೆ ಸಿಕ್ಕಿರಲಿಲ್ಲ. ಹೀಗಾಗಿ ಈ ಭಾರಿಯಾದರೂ ಈ ತಿದ್ದುಪಡಿ ಕಾರ್ಯರೂಪಕ್ಕೆ ಬರಲಿ ಎಂಬ ನಿಟ್ಟಿನಲ್ಲಿ ಸಂಸತ್ತಿನ ಸ್ಥಾಯಿ ಸಮಿತಿಯ ಹಲವು ಶಿಫಾರಸುಗಳನ್ನು ಪರಿಗಣಿಸಿ ರಸ್ತೆ ಸಾರಿಗೆ ಖಾತೆ ಸಹಾಯಕ ಸಚಿವ ವಿ.ಕೆ.ಸಿಂಗ್ ಅವರು ವಿಧೇಯಕವನ್ನು ಮತ್ತೊಮ್ಮೆ ಲೋಕಸಭೆಯಲ್ಲಿ ಮಂಡಿಸಿದರು.

    ವಿಧೇಯಕದಲ್ಲಿ ಏನಿದೆ?
    ರಸ್ತೆ ಅಪಘಾತ ಪ್ರಕರಣಗಳಲ್ಲಿ ಮೃತರಿಗೆ ವಾಹನ ಮಾಲೀಕರು/ವಿಮೆದಾರರಿಂದ ಗರಿಷ್ಠ 5 ಲಕ್ಷ ರೂ. ಪರಿಹಾರ ನೀಡಬೇಕು. ಒಂದು ವೇಳೆ ಗಂಭೀರವಾಗಿ ಗಾಯಗೊಂಡವರಿಗೆ ಅಪಘಾತ ಮಾಡಿದವರೇ 2.5 ಲಕ್ಷ ರೂ. ಕನಿಷ್ಠ ಆರ್ಥಿಕ ನೆರವನ್ನು ನೀಡಬೇಕು. ಹಾಗೆಯೇ ವಾಹನ ಪರವಾನಗಿ ನವೀಕರಣದ ಅವಧಿಯನ್ನು 3 ವರ್ಷದಿಂದ 5 ವರ್ಷಕ್ಕೆ ಏರಿಸಲಾಗಿದೆ. ಜೊತೆಗೆ ವಿಶೇಷ ಚೇತನರಿಗೆ ಲೈಸೆನ್ಸ್ ನೀಡಲು ಸಾರಿಗೆ ಇಲಾಖೆಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ ಎನ್ನುವ ಬಗ್ಗೆ ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.

    ಯಾವ ನಿಯಮ ಉಲ್ಲಂಘಿಸಿದರೆ ಎಷ್ಟು ದಂಡ?
    ಚಾಲನಾ ಪರವಾನಗಿ (ಡಿಎಲ್) ಇಲ್ಲದೆ ವಾಹನ ಚಲಾಯಿಸುವವರಿಗೆ 5,000 ರೂ. ದಂಡ ವಿಧಿಸಲಾಗುವುದು. ಹಾಗೆಯೇ ರಸ್ತೆಯಲ್ಲಿ ಸಾಗುವಾಗ ಆಂಬ್ಯುಲೆನ್ಸ್‍ಗೆ ದಾರಿ ಬಿಡದ ವಾಹನ ಸವಾರರಿಗೆ 10,000 ರೂ. ದಂಡ ಹಾಕಲಾಗುತ್ತದೆ. ಅತಿ ವೇಗದ ಚಾಲನೆಗೆ 2,000 ರೂ. ದಂಡ, ಹೆಲ್ಮೆಟ್ ಹಾಕದೆ ದ್ವಿಚಕ್ರ ಚಲಾಯಿಸಿದರೆ 1,000 ರೂ. ದಂಡದ ಜೊತೆಗೆ 3 ತಿಂಗಳು ಡಿಎಲ್ ರದ್ದುಗೊಳಿಸಲಾಗುತ್ತದೆ. ಜೊತೆಗೆ ವಿಮೆ ಇಲ್ಲದೆ ವಾಹನ ಓಡಿಸಿದರೆ 2,000 ರೂ. ಹಾಗೂ ಕುಡಿದು ವಾಹನ ಚಲಾವಣೆ( ಡ್ರಿಂಕ್ ಆ್ಯಂಡ್ ಡ್ರೈವ್) ಮಾಡಿದರೆ 10,000 ರೂ. ದಂಡ ಕಟ್ಟಬೇಕು ಎಂದು ಮೋಟಾರು ವಾಹನ ತಿದ್ದುಪಡಿ ವಿಧೇಯಕ -2019ದಲ್ಲಿ ತಿಳಿಸಲಾಗಿದೆ.

    ಆದರೆ ಲೋಕಸಭೆಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ, ತೃಣಮೂಲ ಕಾಂಗ್ರೆಸ್ ಸದಸ್ಯ ಸೌಗತ್ ರಾಯ್ ಸೇರಿದಂತೆ ಹಲವರು ಈ ವಿಧೇಯಕದಲ್ಲಿರುವ ಕೆಲವು ಅಂಶಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದರು.

    ಆಗ ವಿರೋಧಗಳಿಗೆ ಪ್ರತಿಕ್ರಿಯಿಸಿದ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ವಿರೋಧಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಯಾಕೆಂದರೆ ಸರ್ಕಾರ ತಿದ್ದುಪಡಿ ವಿಧೇಯಕದ ಕರಡು ಸಿದ್ಧಪಡಿಸುವ ಮುಂಚೆಯೇ 18 ರಾಜ್ಯಗಳ ಸಾರಿಗೆ ಸಚಿವರ ಜೊತೆ ಚರ್ಚೆ ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಅಲ್ಲದೆ ಈ ಬಿಲ್ ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳುವುದಿಲ್ಲ. ಕಾಯ್ದೆಯನ್ನು ಜಾರಿಗೊಳಿಸುವುದು ಆಯಾ ರಾಜ್ಯಗಳಿಗೆ ಬಿಟ್ಟ ವಿಚಾರವಾಗಿದೆ ಎಂದು ಸ್ಪಷ್ಟನೆ ನೀಡಿದರು. ಅಷ್ಟೇ ಅಲ್ಲದೇ ವಿಧೇಯಕ ಜಾರಿಗೆ ತರಲು ಸರ್ಕಾರಕ್ಕೆ ಸಹಕರಿಸಿ ಎಂದು ಪ್ರತಿಪಕ್ಷಗಳ ನಾಯಕರಲ್ಲಿ ಮನವಿ ಮಾಡಿಕೊಂಡರು.

    ಬಳಿಕ ಮಾತನಾಡಿ, ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ ಸುಮಾರು 1.5 ಲಕ್ಷ ಮಂದಿ ಸಾವನ್ನಪ್ಪುತ್ತಾರೆ. 5 ಲಕ್ಷಕ್ಕೂ ಅಧಿಕ ಮಂದಿ ಗಾಯಗೊಳ್ಳುತ್ತಾರೆ. ಹಾಗೆಯೇ ದೇಶದಲ್ಲಿ ಶೇ. 30ರಷ್ಟು ಡ್ರೈವಿಂಗ್ ಲೈಸನ್ಸ್ ಬೋಗಸ್ ಆಗಿದೆ ಎಂದು ಹೇಳಿದರು.

    ಅಲ್ಲದೆ ಕಳೆದ 5 ವರ್ಷಗಳಲ್ಲಿ ಈ ತಿದ್ದುಪಡಿಯನ್ನು ಜಾರಿಗೆ ತರಲು ನಮ್ಮ ಸರ್ಕಾರ ವಿಫಲವಾಗಿದೆ. ಆದರೆ ಕಳೆದ 5 ವರ್ಷಗಳಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ. ಇದೇ ಅವಧಿಯಲ್ಲಿ ತಮಿಳುನಾಡಿನಲ್ಲಿ ಶೇ.15ರಷ್ಟು ಅಪಘಾತಗಳು ಕಡಿಮೆಯಾಗಿದೆ ಎಂದು ತಿಳಿಸಿದರು.

  • ಖಾಸಗೀಕರಣಗೊಳ್ಳಲಿದೆ ದೇಶದ ಮೊದಲ ಐಶಾರಾಮಿ ರೈಲು

    ಖಾಸಗೀಕರಣಗೊಳ್ಳಲಿದೆ ದೇಶದ ಮೊದಲ ಐಶಾರಾಮಿ ರೈಲು

    ನವದೆಹಲಿ: ದೆಹಲಿ-ಲಕ್ನೋ ನಡುವೆ ಸಂಚರಿಸುವ ತೇಜಸ್ ಎಕ್ಸ್‍ಪ್ರೆಸ್ ರೈಲು ನಿರ್ವಹಣೆಯ ಹೊಣೆಯನ್ನು ಖಾಸಗಿಯವರಿಗೆ ವಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೂಲಕ ತೇಜಸ್ ಎಕ್ಸ್‍ಪ್ರೆಸ್ ಖಾಸಗಿಯವರಿಂದ ನಿರ್ವಹಣೆಯಾಗಲಿರುವ ದೇಶದ ಮೊದಲ ರೈಲು ಎನಿಸಿಕೊಳ್ಳಲಿದೆ.

    ತೇಜಸ್ ಮಾತ್ರವಲ್ಲದೆ, 500 ಕಿ.ಮೀ. ಯೊಳಗಿನ ಇನ್ನೊಂದು ರೈಲ್ವೆ ಮಾರ್ಗವನ್ನು ಸಹ ಖಾಸಗಿಯವರಿಗೆ ವಹಿಸಲು ರೈಲ್ವೆ ಇಲಾಖೆ ಉದ್ದೇಶಿಸಿದೆ. ಈ ಎರಡು ರೈಲುಗಳನ್ನು ಖಾಸಗಿ ವಲಯಕ್ಕೆ ಹಸ್ತಾಂತರಿಸುವ 100 ದಿನಗಳ ಕಾರ್ಯಸೂಚಿಯನ್ನು ಸರ್ಕಾರ ಹಾಕಿಕೊಂಡಿದೆ. ರೈಲ್ವೆಯನ್ನು ಕೇಂದ್ರ ಸರ್ಕಾರ ಖಾಸಗೀಕರಣಗೊಳಿಸುತ್ತಿದೆ ಎಂಬ ವಿಪಕ್ಷಗಳ ಆರೋಪಗಳ ನಡುವೆಯೂ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

    ದೆಹಲಿ – ಲಕ್ನೋ ತೇಜಸ್ ಎಕ್ಸ್‍ಪ್ರೆಸ್ ರೈಲನ್ನು 2016ರಲ್ಲಿ ಘೋಷಿಸಲಾಗಿತ್ತು. ಇತ್ತೀಚೆಗಷ್ಟೇ ಹೊಸ ವೇಳಾಪಟ್ಟಿ ಪ್ರಕಟಿಸಲಾಗಿದೆ. ಸದ್ಯ ಆನಂದ್‍ನಗರ್ ರೈಲ್ವೇ ನಿಲ್ದಾಣದಲ್ಲಿ ನಿಲ್ಲಿಸಲಾಗುತ್ತಿದ್ದು, ರೈಲಿನ ಕಾರ್ಯನಿರ್ವಹಣೆಗೆ ಖಾಸಗಿಯವರಿಂದ ಶೀಘ್ರದಲ್ಲೇ ಬಿಡ್ಡಿಂಗ್ ಆಹ್ವಾನಿಸಲಾಗುತ್ತದೆ. ಇದಕ್ಕೂ ಮುನ್ನ ರೈಲಿನ ಸುಪರ್ದಿಯನ್ನು ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೊರೇಷನ್ (ಐಆರ್‍ಸಿಟಿಸಿ) ಗುತ್ತಿಗೆ ಆಧಾರದ ಮೇಲೆ ಪಡೆದುಕೊಳ್ಳಲಿದೆ. ಜು.10ರ ಒಳಗಾಗಿ ಹಣಕಾಸು ಪ್ರಸ್ತಾವನೆ ಸಲ್ಲಿಸುವಂತೆ ಐಆರ್‍ಸಿಟಿಸಿಗೆ ಸೂಚಿಸಲಾಗಿದೆ. ದೆಹಲಿ- ಲಕ್ನೋ ಮಾರ್ಗದಲ್ಲಿ ಸದ್ಯ 53 ರೈಲುಗಳು ಸಂಚರಿಸುತ್ತಿವೆ. ಆದರೆ, ರಾಜಧಾನಿ ಎಕ್ಸ್‍ಪ್ರೆಸ್ ರೈಲು ಸಂಚರಿಸುತ್ತಿಲ್ಲ. ಸ್ವರ್ಣ ಶತಾಬ್ದಿ ಎಕ್ಸ್‍ಪ್ರೆಸ್ ಬಹುಬೇಡಿಕೆಯ ರೈಲಾಗಿದೆ.

    ಈ ಕುರಿತು ರೈಲ್ವೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಈ ಎರಡು ರೈಲುಗಳನ್ನು ಪ್ರಾಯೋಗಿಕವಾಗಿ ಕೇವಲ 100 ದಿನಗಳ ಕಾಲ ಖಾಸಗಿಯವರ ನಿರ್ವಹಣೆಗೆ ವಹಿಸಲಾಗುತ್ತಿದೆ. ಹೆಚ್ಚು ದಟ್ಟಣೆ ಇರುವ ಮಾರ್ಗಗಳು ಹಾಗೂ ಪ್ರವಾಸೋದ್ಯಮ ಸ್ಥಳಗಳನ್ನು ಸಂಪರ್ಕಿಸುವ ಮಾರ್ಗಗಳನ್ನು ಗುರುತಿಸುತ್ತಿದ್ದೇವೆ. ಶೀಘ್ರದಲ್ಲೇ ಎರಡನೇ ಮಾರ್ಗವನ್ನು ಗುರುತಿಸಲಾಗುವುದು ಎಂದು ತಿಳಿಸಿದ್ದಾರೆ.

    ಭೂಮಿಯ ಮೇಲೆ ಚಲಿಸುವ ವಿಮಾನ ಎಂದೇ ಈ ರೈಲನ್ನು ಭಾರತೀಯ ರೈಲ್ವೇ ಬಣ್ಣಿಸಿದೆ. ಜರ್ಮನ್ ಕೋಚ್ ಹೊಂದಿರುವ ತೇಜಸ್ ರೈಲಿನ ಪ್ರತಿ ಸೀಟ್‍ನಲ್ಲಿ ಎಲ್‍ಇಡಿ ಸ್ಕ್ರೀನ್, ಕಾಫಿ ಮತ್ತು ಟೀ ಪೂರೈಕೆ ಯಂತ್ರ, ವೈಫೈ ಸಂಪರ್ಕವಿದೆ.

    ಈ ರೈಲು 13 ಬೋಗಿಗಳನ್ನು ಒಳಗೊಂಡಿದೆ. 56 ಸೀಟಿನ ಸಾಮಥ್ರ್ಯ ಇರುವ ಒಂದು ಎಕ್ಸ್ ಕ್ಯೂಟಿವ್ ಬೋಗಿ, ಮಾತ್ರಲ್ಲದೆ ಎಲ್ಲ ಬೋಗಿಗಳಿಗೆ ಸ್ವಯಂಚಾಲಿತ ಬಾಗಿಲುಗಳು ಇವೆ.

    ಸಿಸಿಟಿವಿ ಕ್ಯಾಮೆರಾ, ಬೆಂಕಿ ನಿರೋಧಕ ಮತ್ತು ಹೊಗೆ ಪತ್ತೆ ಹಚ್ಚುವ ವ್ಯವಸ್ಥೆ, ಅಲ್ಲದೆ, ಕೋಚ್‍ನಲ್ಲಿ ಗ್ರಾಫಿಟಿ ಪೇಂಟ್ ಬಳಸಲಾಗಿದೆ. ಇದರಿಂದಾಗಿ ಕೋಚ್ ಸ್ವಚ್ಛವಾಗಿರಲಿದೆ. ವಿಮಾನದ ಟಿಕೆಟ್ ದರಕ್ಕಿಂತ ತೇಜಸ್ ರೈಲಿನ ದರ ಅಗ್ಗವಾಗಿದ್ದು, ಶತಾಬ್ದಿ ಎಕ್ಸ್‍ಪ್ರೆಸ್ ರೈಲಿಗಿಂತ ಶೇ.20 ರಷ್ಟು ಅಧಿಕವಾಗಿದೆ.

    ಪ್ರತಿ ಗಂಟೆಗೆ 200 ಕಿ.ಮೀ ವೇಗದಲ್ಲಿ ಕ್ರಮಿಸುವ ಸಾಮಥ್ರ್ಯವನ್ನು ರೈಲು ಹೊಂದಿದ್ದು, ಪ್ರತಿಯೊಂದು ಕೋಚ್ ತಯಾರಿಕೆಗೆ 3.25 ಕೋಟಿ ರೂ. ಖರ್ಚಾಗಿದೆ. ಚರ್ಮದ ಸೀಟ್‍ಗಳು, ಎಲ್‍ಸಿಡಿ ಸ್ಕ್ರೀನ್ ಗಳು ಮತ್ತು ಕೂಡಲೇ ಯಾರನ್ನಾದರೂ ಕರೆಯಲು ಕಾಲ್ ಬಟನ್ ವಿಶೇಷ ಸೌಲಭ್ಯವನ್ನು ಹೊಂದಿದೆ.

  • ಕೇಂದ್ರ ಬಜೆಟ್‍ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು?

    ಕೇಂದ್ರ ಬಜೆಟ್‍ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು?

    ಬೆಂಗಳೂರು: ಕೇಂದ್ರದಲ್ಲಿ ಭಾರೀ ಬಹುಮತದಿಂದ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 2ನೇ ಅವಧಿಯ ಮೊದಲ ಬಜೆಟ್ ಮಂಡನೆಯಾಗಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಿದ್ದಾರೆ.

    ಕೇಂದ್ರ ಬಜೆಟ್‍ನಲ್ಲಿ ಈ ಹಿಂದಿನ ಜನಪ್ರಿಯ ಯೋಜನೆಗಳನ್ನು ಮುಂದುವರಿಸಲಾಗಿದ್ದು, ಬಜೆಟ್ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ಪ್ರಮುಖವಾಗಿ ಬೆಂಗಳೂರು ಮೆಟ್ರೋ 2ನೇ ಹಂತದ ಕಾಮಗಾರಿಗೆ ಮೋದಿ ಸರ್ಕಾರ 1,012.50 ಕೋಟಿ ರೂ.ಗಳನ್ನು ನೀಡಿದ್ದು, ರಾಜ್ಯ ಬಹುಬೇಡಿಕೆಯಾದ ನೀರು ನಿರ್ವಹಣಾ ಹೂಡಿಕೆ ಕಾರ್ಯಕ್ರಮಕ್ಕಾಗಿ 217 ಕೋಟಿ ರೂ. ನೀಡಿದೆ. ಅಲ್ಲದೇ 2ನೇ ಹಂತದ ಜಲಾನಯನ ಅಭಿವೃದ್ಧಿ ಯೋಜನೆಗೆ 131.33 ಕೋಟಿ ರೂ. ಹಾಗೂ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಗೆ 300 ಕೋಟಿ. ರೂ ನೀಡಲಾಗಿದೆ.

    ಉಳಿದಂತೆ ಮೈಸೂರಿನಲ್ಲಿರುವ ಅಖಿಲಭಾರತ ವಾಕ್ ಶ್ರವಣ ಸಂಸ್ಥೆಗೆ 25.73 ಕೋಟಿ ರೂ., ಬೆಂಗಳೂರಿನಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಯುನಾನಿ ಮೆಡಿಸಿನ್ ಸಂಸ್ಥೆಗೆ 15 ಕೋಟಿ ರೂ., ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸ್ (ನಿಮ್ಹಾನ್ಸ್) 270.25 ಕೋಟಿ ರೂ. ಅನುದಾನ ನೀಡಲಾಗಿದೆ.

  • ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಕೇಂದ್ರ ಸರ್ಕಾರದ ಬಂಪರ್ ಗಿಫ್ಟ್

    ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಕೇಂದ್ರ ಸರ್ಕಾರದ ಬಂಪರ್ ಗಿಫ್ಟ್

    ನವದೆಹಲಿ: ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಭಾರತವನ್ನು ಗ್ಲೋಬಲ್ ಹಬ್ ಮಾಡುವತ್ತ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಮುಖ್ಯಾಂಶಗಳು:
    – ಕಡಿಮೆ ದರದಲ್ಲಿ ಜನರಿಗೆ ಎಲೆಕ್ಟ್ರಿಕ್ ವಾಹನ ದೊರೆಯುವಂತಾಗಲು ಈಗ ಇರುವ ಶೇ.12 ತೆರಿಗೆ ವ್ಯಾಪ್ತಿಯ ಬದಲು ಶೇ.5ರ ತೆರಿಗೆ ವ್ಯಾಪ್ತಿ ಒಳಗಡೆ ತರಲು ಜಿಎಸ್‍ಟಿ ಕೌನ್ಸಿಲ್ ಬಳಿ ಮನವಿ ಮಾಡಲಾಗಿದೆ.

    – 2023ರ ಮಾರ್ಚ್ 31ರ ಒಳಗಡೆ ಸಾಲ ಮಾಡಿ 1.50 ಲಕ್ಷ ರೂ. ಮೌಲ್ಯದ ವಾಹನದ ಖರೀದಿಸಿದರೆ ಅದಕ್ಕೆ ಯಾವುದೇ ಬಡ್ಡಿ ಇಲ್ಲ.

    – ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಹೆಚ್ಚಿಸುವ ಸಂಬಂಧ 2018ರಲ್ಲಿ ಫೇಮ್ ಯೋಜನೆಯನ್ನು ಪರಿಚಯಿಸಿರುವ ಕೇಂದ್ರ ಸರ್ಕಾರವು 2019-21ರ ಅವಧಿಗೆ 2ನೇ ಹಂತದ ಯೋಜನೆಯನ್ನು ಘೋಷಣೆ ಮಾಡಿದ್ದು, ಇದಕ್ಕೆ 10 ಸಾವಿರ ಕೋಟಿ ಅನುದಾನ ನೀಡಲಾಗಿದೆ.

    – ಹೆಚ್ಚಿನ ಸುಧಾರಿತ ಬ್ಯಾಟರಿ ಮತ್ತು ನೋಂದಾಯಿತ ಇ-ವಾಹನಗಳಿಗೆ ಯೋಜನೆಯಡಿ ಪ್ರೋತ್ಸಾಹ. ಜನ ಸಾಮಾನ್ಯರಿಗೆ ಕೈಗೆಟುಕುವ ಮತ್ತು ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆ ಆಯ್ಕೆ ಮಾಡಲು ಒತ್ತು.

    – ಆರ್ಥಿಕ ಬೆಳವಣಿಗೆ ಮತ್ತು ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ಕ್ಷೇತ್ರದಲ್ಲಿ ಲಿಥಿಯಂ ಬ್ಯಾಟರಿ, ಸೌರ ವಿದ್ಯುತ್ ಚಾರ್ಜಿಂಗ್ ಉತ್ಪಾದನೆ ಕ್ಷೇತ್ರಗಳಲ್ಲಿ ಹೂಡಿಕೆ ಸಂಬಂಧಿತವಾಗಿ ಆದಾಯ ತೆರಿಗೆ ವಿನಾಯಿತಿಗಳನ್ನು ನೀಡುವುದು.

  • ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಶೀಘ್ರದಲ್ಲೇ ಜಾರಿಗೆ

    ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಶೀಘ್ರದಲ್ಲೇ ಜಾರಿಗೆ

    ನವದೆಹಲಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಶೀಘ್ರದಲ್ಲೇ ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಪ್ರಾಥಮಿಕ ಮತ್ತು ಉನ್ನತ ಶಿಕ್ಷಣದಲ್ಲಿ ಬದಲಾವಣೆ ತರಲು ಚಿಂತನೆ ನಡೆದಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

    ಬಜೆಟ್ ಹೈಲೈಟ್ಸ್ ಏನು?
    * ಸಂಶೋಧನೆ ಮತ್ತ ಅವಿಷ್ಕಾರಗಳಿಗೆ ಹೆಚ್ಚಿನ ಪ್ರೋತ್ಸಾಹ.
    * ದೇಶದಲ್ಲಿ ಸಂಶೋಧನೆಗಳನ್ನು ಪ್ರೋತ್ಸಾಹಿಸಲು ನಿಧಿ ಬಿಡುಗಡೆ.
    * ಪ್ರತ್ಯೇಕ ಸಂಶೋಧನೆಗೆ ಸಂಬಂಧಪಟ್ಟ ಸಚಿವಾಲಯದಿಂದ ಪ್ರೋತ್ಸಾಹ ಧನ.

    * 2019-20 ಆರ್ಥಿಕ ವರ್ಷದಲ್ಲಿ ವಿಶ್ವದರ್ಜೆಯ ಸಂಸ್ಥೆಗಳಿಗಾಗಿ 400 ಕೋಟಿ ರೂ. ಅನುದಾನ.
    * ಭಾರತದಲ್ಲಿ ಶಿಕ್ಷಣ (Study in India) ಎನ್ನುವಂತೆ ವಿದೇಶಿ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣಕ್ಕಾಗಿ ದೇಶಕ್ಕೆ ಕರೆತರುವುದು, ಕಾನೂನುಗಳ ಸರಳೀಕರಣ

    * ಖೇಲೋ ಇಂಡಿಯಾ ಸ್ಕೀಮ್ ಗೆ ಆರ್ಥಿಕ ನೆರವು ನೀಡುವುದು.
    * ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿ, ಖೇಲೋ ಇಂಡಿಯಾ ಯೋಜನೆ ಅಡಿಯಲ್ಲಿ ಯುವ ಆಟಗಾರರನ್ನು ಗುರುತಿಸುವುದು ಮತ್ತು ತರಬೇತಿ ನೀಡುವುದು.
    * ಯುವಕರ ವಿದ್ಯಾರ್ಹತೆ, ಕೌಶಲ್ಯ, ಸಾಮಥ್ರ್ಯಕ್ಕನುಗುಣವಾಗಿ ಸಂಬಂಧಿಸಿದ ವಲಯಗಳಲ್ಲಿ ಸೂಕ್ತ ತರಬೇತಿ ನೀಡುವ ಮೂಲಕ ಉದ್ಯೋಗಿಗಳನ್ನಾಗಿ ಬದಲಿಸುವುದು. ಆಯಾ ರಾಜ್ಯಗಳ ಸ್ಥಳೀಯ ಭಾಷೆಯಲ್ಲಿಯೇ ತರಬೇತಿ ಸೌಲಭ್ಯ ಕಲ್ಪಿಸುವುದು. AI, IoT, Big Data, 3D Printing, Virtual Reality and Robotics ಸಂಬಂಧಿಸಿದ ವಿಷಯಗಳಲ್ಲಿ ತರಬೇತಿ ಸಿಗಲಿದೆ.

    * ಕೆಳಮಟ್ಟದಲ್ಲಿರುವ ಕಾರ್ಮಿಕ ವಲಯವನ್ನು ಮೇಲ್ದರ್ಜೆಗೆ ತರುವುದು.
    * ಸ್ಟಾರ್ಟ್‍ಅಪ್ ಯೋಜನೆಗಳ ಮಾಹಿತಿಗಾಗಿ ಡಿಡಿ ವಾಹಿನಿಯಲ್ಲಿ ವಿಶೇಷ ಕಾರ್ಯಕ್ರಮಗಳ ಪ್ರಸಾರ.
    *2020-25ರರೆಗೆ ಸ್ಟ್ಯಾಂಡ್-ಅಪ್ ಇಂಡಿಯಾ ಸ್ಕೀಮ್ ಇರಲಿದೆ. ಈ ಯೋಜನೆಯ ಫಲಾನುಭವಿಗಳಿಗೆ ಬೇಡಿಕೆಗೆ ಅನುಗುಣವಾಗಿ ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ.