Tag: Central Government

  • ಕೇಂದ್ರದ ನಿರ್ಧಾರದಿಂದ ಜಮ್ಮು-ಕಾಶ್ಮೀರ ಅಭಿವೃದ್ಧಿ ಹೊಂದಲಿದೆ- ಕೇಜ್ರಿವಾಲ್

    ಕೇಂದ್ರದ ನಿರ್ಧಾರದಿಂದ ಜಮ್ಮು-ಕಾಶ್ಮೀರ ಅಭಿವೃದ್ಧಿ ಹೊಂದಲಿದೆ- ಕೇಜ್ರಿವಾಲ್

    ನವದೆಹಲಿ: ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370 ರದ್ದು ಪಡಿಸಿದ್ದಕ್ಕೆ, ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಆದರೆ, ಅಚ್ಚರಿ ಎಂಬಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.

    ವಿರೋಧ ಪಕ್ಷಗಳಲ್ಲಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿದವರ ಪೈಕಿ ಅರವಿಂದ್ ಕೇಜ್ರಿವಾಲ್ ಏಕೈಕರಾಗಿದ್ದಾರೆ.

    ಈ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಜಮ್ಮು ಮತ್ತು ಕಾಶ್ಮೀರದ ಕುರಿತು ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ. ಈ ನಿರ್ಧಾರದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸಲಿದೆ. ಅಲ್ಲದೆ, ರಾಜ್ಯವು ಅಭಿವೃದ್ಧಿ ಹೊಂದಲಿದೆ ಎಂದು ತಿಳಿಸಿದ್ದಾರೆ.

    ಅರವಿಂದ್ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷದ ರಾಜಕೀಯ ಪಯಣದಲ್ಲಿ ವಿವಿಧ ವಿಷಯಗಳ ಕುರಿತು, ವಿಶೇಷವಾಗಿ ದೆಹಲಿಯ ಸ್ವಾಯತ್ತತೆಗೆ ಸಂಬಂಧಿಸಿದಂತೆ ಈವರೆಗೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಲೇ ಬಂದಿದೆ. ವರ್ಷಗಳಿಂದ ಬಿಜೆಪಿ ವಿರುದ್ಧ ಕಿಡಿಕಾರುತ್ತಿದ್ದ ಅರವಿಂದ್ ಕೇಜ್ರಿವಾಲ್ ಅವರು, ಕೇಂದ್ರದ ಬಿಜೆಪಿ ಸರ್ಕಾರ ಲೆಫ್ಟಿನೆಂಟ್ ಗವರ್ನರ್ ಮೂಲಕ ದೆಹಲಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಈ ಮೂಲಕ ಚುನಾಯಿತ ಸ್ಥಳೀಯ ಸರ್ಕಾರವನ್ನು ಕಡೆಗಣಿಸುತ್ತಿದೆ ಎಂದು ಹಲವು ವರ್ಷಗಳಿಂದ ಆರೋಪಿಸುತ್ತಲೇ ಬಂದಿದ್ದಾರೆ.

    ಜಮ್ಮು ಕಾಶ್ಮೀರಕ್ಕೆ ಆರ್ಟಿಕಲ್ 370 ಹಾಗೂ 35ಎ ಅಡಿ ನೀಡಿರುವ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸುವ ಕುರಿತ ವಿಧೇಯಕಕ್ಕೆ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರು ಸಹಿ ಹಾಕಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಅವರು ಸಂಸತ್‍ನಲ್ಲಿ ಹೇಳಿದ್ದರು.

    370ನೇ ವಿಧಿಯನ್ನು ಸಂವಿಧಾನದಿಂದ ತೆಗೆದು ಹಾಕಲು ಒಂದು ಸೆಕೆಂಡ್ ಕೂಡ ತಡವಾಗಬಾರದು ಎಂದು ಗೃಹ ಸಚಿವ ಅಮಿತ್ ಶಾ ಅವರು ಸಂಸತ್‍ನಲ್ಲಿ ಘೋಷಿಸಿದರು. ಅಮಿತ್ ಶಾ ಘೋಷಿಸುತ್ತಿದ್ದಂತೆ ವಿರೋಧ ಪಕ್ಷಗಳು ಗದ್ದಲ ಎಬ್ಬಿಸಲು ಪ್ರಾರಂಭಿಸಿದವು.

    ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ದೆಹಲಿಯಂತೆ ಶಾಸಕಾಂಗವನ್ನು ಹೊಂದಿರಲಿದೆ. ಲಡಾಕ್ ಶಾಸಕಾಂಗವಿಲ್ಲದೆ, ಕೇವಲ ಕೇಂದ್ರಾಡಳಿತ ಪ್ರದೇಶವಾಗಿರಲಿದೆ ಎಂದು ಸಂಸತ್‍ನಲ್ಲಿ ಅಮಿತ್ ಶಾ ತಿಳಿಸಿದ್ದಾರೆ.

  • ಆರ್ಟಿಕಲ್ 370 ರದ್ದು – ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ ಎಂದ್ರು ನಟ ಜಗ್ಗೇಶ್

    ಆರ್ಟಿಕಲ್ 370 ರದ್ದು – ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ ಎಂದ್ರು ನಟ ಜಗ್ಗೇಶ್

    ಬೆಂಗಳೂರು: ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿರುವ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿರುವ ನಟ ಜಗ್ಗೇಶ್ ಅವರು, ಈ ನಿರ್ಧಾರವನ್ನು ಭಾರತೀಯರ ಪಾಲಿಗೆ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ ಎಂದಿದ್ದಾರೆ.

    ಸಾಮಾಜಿಕ ಜಾಲತಾಣ ಟ್ವಿಟ್ಟರಿನಲ್ಲಿ ಸರಣಿ ಟ್ವೀಟ್ ಮಾಡಿರುವ ಜಗ್ಗೇಶ್ ಅವರು, ‘ಕರ್ಣಾನಂದವಾಯಿತು ಇಂದಿನ ನನ್ನ ಹೆಮ್ಮೆಯ ಭಾರತೀಯ ಜನತಾ ಪಕ್ಷದ ಐತಿಹಾಸಿಕ ನಿರ್ಣಯ. ಭಾರತೀಯರ ಪಾಲಿಗೆ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. 1947 ಅಲ್ಲಾ 2019 ಭಾರತಕ್ಕೆ ನಿಜವಾದ ಸ್ವತಂತ್ರ ಸಿಕ್ಕ ದಿನ. ಒಕ್ಕೊರಲಿನ ಸ್ವಾಭಿಮಾನದ ಘೋಷ ಮೊಳಗಲಿ’ ಎಂದು ಬರೆದುಕೊಂಡಿದ್ದಾರೆ.

    ಮತ್ತೊಂದು ಟ್ವೀಟ್‍ನಲ್ಲಿ, ‘ಕಾಶ್ಮೀರ ಭಾರತಮಾತೆಯ ಮುಕುಟ!.. 70 ವರ್ಷ ಕಳಚಿಟ್ಟು, ಭಾರತಮಾತೆಗೆ ಜೈ ಅಂದರೆ ಕಳೆಕಟ್ಟದು!.. ಇಂದು ಭಾರತಮಾತೆ ಸ್ವಾಭಿಮಾನಿ ಮಕ್ಕಳು ಅವಳ ಮುಕುಟ ತಲೆ ಮೇಲೆ ಇಡಲು ಸನ್ನದ್ಧರಾಗಿದ್ದಾರೆ. ಅವರ ಜೊತೆ ಕೈ ಜೋಡಿಸಿ ಎಲ್ಲರು ಜೈ ಅನ್ನುವ ಕಾಲಬಂದಿದೆ! ಈಗ ಯಾರು ಅವಳ ಮಕ್ಕಳು ಜಗ ಅರಿವುದು ನಿಜ ಮಕ್ಕಳು, ಜಗ ಅರಿವುದು ಜೈಹಿಂದ್’ ಎಂದಿದ್ದಾರೆ.

    ಜಮ್ಮು ಕಾಶ್ಮೀರದ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಐತಿಹಾಸಿಕ ನಿರ್ಣಯವನ್ನು ಸ್ವಾಗತಿಸಿ ದೇಶದ್ಯಾಂತ ಹಲವರು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜಗ್ಗೇಶ್ ಅವರ ಟ್ವೀಟ್‍ಗೂ ಹಲವು ಮಂದಿ ಪ್ರತಿಕ್ರಿಯೆ ನೀಡಿ ಮೆಚ್ಚುಗೆ ಸೂಚಿಸಿದ್ದಾರೆ.

  • ಆರ್ಟಿಕಲ್ 370, 35ಎ ರದ್ದು- ಮತ್ತೆ 8 ಸಾವಿರ ಸೈನಿಕರು ಕಾಶ್ಮೀರಕ್ಕೆ ಸ್ಥಳಾಂತರ

    ಆರ್ಟಿಕಲ್ 370, 35ಎ ರದ್ದು- ಮತ್ತೆ 8 ಸಾವಿರ ಸೈನಿಕರು ಕಾಶ್ಮೀರಕ್ಕೆ ಸ್ಥಳಾಂತರ

    ನವದೆಹಲಿ: ಕೇಂದ್ರ ಸರ್ಕಾರ ಆರ್ಟಿಕಲ್ 370 ಹಾಗೂ 35ಎ ರದ್ದುಪಡಿಸಿದ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಹೆಚ್ಚುವರಿಯಾಗಿ 8 ಸಾವಿರ ಸೈನಿಕರನ್ನು ಸ್ಥಳಾಂತರಿಸಲಾಗಿದೆ.

    ದೇಶದ ವಿವಿಧ ಭಾಗಗಳಲ್ಲಿನ ಸುಮಾರು 8 ಸಾವಿರ ಸೈನಿಕರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಸ್ಥಳಾಂತರಿಸಲಾಗಿದೆ. ಭಾರತೀಯ ವಾಯುಪಡೆಯ ಸಿ-17 ಸಾರಿಗೆ ವಿಮಾನಗಳ ಮೂಲಕ ಸೈನಿಕರನ್ನು ಶ್ರೀನಗರಕ್ಕೆ ಕರೆತರಲಾಗುತ್ತಿದೆ. ಕಳೆದ ವಾರದಲ್ಲಿ ಸುಮಾರು 35 ಸಾವಿರ ಸೈನಿಕರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಸ್ಥಳಾಂತರಿಸಲಾಗಿತ್ತು. ಇದೀಗ ಹೆಚ್ಚುವರಿಯಾಗಿ 8 ಸಾವಿರ ಸೈನಿಕರನ್ನು ಸ್ಥಳಾಂತರಿಸಲಾಗಿದೆ.

    ಅಲ್ಲದೆ, ಸೈನಿಕರನ್ನು ಹಾಗೂ ವಾಯು ಪಡೆಯನ್ನು ಹೈ ಅಲರ್ಟ್ ನಲ್ಲಿ ಇಡಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ವಿಶೇಷ ಸ್ಥಾನಮಾನ ತೆರವುಗೊಳಿಸಿರುವುದು ಭಾವನಾತ್ಮಕ ವಿಚಾರವಾಗಿದ್ದು, ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚು ಸೈನಿಕರನ್ನು ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವಾರ ಸರ್ಕಾರ ಅಮರನಾಥ ಯಾತ್ರೆಯನ್ನು ಹಠಾತ್ ರದ್ದುಗೊಳಿಸಿದ ನಂತರ ಸಾವಿರಾರು ಅಮರನಾಥ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರನ್ನು ರಾಜ್ಯದಿಂದ ಹೊರ ಕಳುಹಿಸಿತ್ತು.

    ಆರ್ಟಿಕಲ್ 370 ಜಮ್ಮು ಮತ್ತು ಕಾಶ್ಮೀರಕ್ಕೆ ತನ್ನದೇ ಆದ ಸಂವಿಧಾನವಿತ್ತು. ಅಂದರೆ ರಕ್ಷಣೆ, ಸಂವಹನ ಮತ್ತು ವಿದೇಶಾಂಗ ವ್ಯವಹಾರಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕು ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಇತ್ತು. ಇದೀಗ ಸಂವಿಧಾನದ ಈ ಭಾಗವನ್ನು ತೆಗೆದು ಹಾಕಲಾಗಿದ್ದು, ಈ ಮೂಲಕ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಅಂತ್ಯವಾಗಿದೆ. 1947ರಲ್ಲಿ ನೆಹರು ಸರ್ಕಾರ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿತ್ತು.

    ಅಲ್ಲದೆ, ಸರ್ಕಾರ ಈ ಕುರಿತು ಸ್ಪಷ್ಟಪಡಿಸಿದ್ದು, ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದ್ದು, ಈ ಮೂಲಕ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಪರಿಣಾಮಕಾರಿಯಾಗಿ ಅರೆ-ರಾಜ್ಯಗಳಾಗಿವೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರವು ತನ್ನದೇ ಆದ ಶಾಸಕಾಂಗವನ್ನು ಹೊಂದಿದ ಕೇಂದ್ರಾಡಳಿತ ಪ್ರದೇಶವಾಗಿದ್ದು, ದಹಲಿ ಮತ್ತು ಲಡಾಕ್ ನಂತೆ ಕಾರ್ಯನಿರ್ವಹಿಸಲಿದೆ. ರಾಜ್ಯದಲ್ಲಿ ಭಯೋತ್ಪಾದಕ ದಾಳಿಯ ಬೆದರಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಸೈನಿಕರನ್ನು ಸ್ಥಳಾಂತರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

    ಕಳೆದ ಮೂರು ದಿನಗಳಿಂದ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರು ದಾಳಿ ನಡೆಸಲು ಅನೇಕ ಬಾರಿ ಪ್ರಯತ್ನ ಮಾಡಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಜು.29 ರಿಂದ ಜು.31ರ ವೆರೆಗೆ ಗಡಿ ನಿಯಂತ್ರಣ ರೇಖೆಯನ್ನು ದಾಟಲು ಉಗ್ರರು ನಾಲ್ಕರಿಂದ ಐದು ಬಾರಿ ಯಶಸ್ವಿಯಾಗಿದ್ದಾರೆ. ಫೆಬ್ರವರಿಯಲ್ಲಿ ಪುಲ್ವಾಮಾದಲ್ಲಿ ನಡೆದ ದಾಳಿ ರೀತಿಯಲ್ಲೇ ಅಮರನಾಥ ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸಲು ಭಯೋತ್ಪಾದಕರು ಯೋಜನೆ ರೂಪಿಸಿದ್ದರು. ಇದರಲ್ಲಿ ನಾಲ್ಕರಿಂದ ಐದು ಜನ ಭಾರತದೊಳಗೆ ನುಸುಳುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಅಮರನಾಥ ಯಾತ್ರಾರ್ಥಿಗಳಿಗೆ ಅವಕಾಶ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ.

  • ಪಾಕ್ ಜೊತೆ ಯುದ್ಧ ಮಾಡಲು ಕೇಂದ್ರ ಸಂಚು ರೂಪಿಸಿದೆ: ಶಿವಶಂಕರ ರೆಡ್ಡಿ

    ಪಾಕ್ ಜೊತೆ ಯುದ್ಧ ಮಾಡಲು ಕೇಂದ್ರ ಸಂಚು ರೂಪಿಸಿದೆ: ಶಿವಶಂಕರ ರೆಡ್ಡಿ

    ಚಿಕ್ಕಬಳ್ಳಾಪುರ: ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿರುವ ಕೇಂದ್ರ ಸರ್ಕಾರದ ನಡೆಯ ವಿರುದ್ಧ ಮಾಜಿ ಸಚಿವ ಎನ್.ಎಚ್ ಶಿವಶಂಕರ ರೆಡ್ಡಿ ಟೀಕೆ ಮಾಡಿದ್ದಾರೆ. ಪಾಕ್ ಜೊತೆ ಯುದ್ಧ ಮಾಡಲು ಕೇಂದ್ರ ಸರ್ಕಾರ ಸಂಚು ರೂಪಿಸಿದೆ ಎಂದು ಕಿಡಿಕಾರಿದ್ದಾರೆ.

    ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮುಸ್ಲಿಂ ವಿರೋಧಿ ನೀತಿ ತಾಳುತ್ತಿದೆ. ದೇಶದಲ್ಲಿ ಯುದ್ಧದ ಭೀತಿ ಸೃಷ್ಟಿ ಮಾಡಿ, ಅಶಾಂತಿಯ ವಾತಾವರಣ ನಿರ್ಮಾಣ ಮಾಡುವ ಯತ್ನ ನಡೆಸಿದೆ. ಪಾಕಿಸ್ತಾನದ ಜೊತೆ ಯುದ್ಧ ಮಾಡುವ ಸಲುವಾಗಿ ಈ ಸಂಚು ರೂಪಿಸಿದೆ. ಕೇಂದ್ರ ಸರ್ಕಾರದ ಈ ನಡೆ ಬಹಳ ಅಪಾಯಕಾರಿ ಎಂದು ಆತಂಕ ವ್ಯಕ್ತಪಡಿಸಿದರು.

    ಕೇಂದ್ರದ ನಿರ್ಧಾರದಿಂದ ಪ್ರತ್ಯೇಕವಾದಿಗಳ ಕೂಗು ಮತ್ತಷ್ಟು ಜೋರಾಗಲಿದೆ. ಉಗ್ರವಾದಿ ಸಂಘಟನೆಗಳ ಕೃತ್ಯಗಳು ಜಾಸ್ತಿ ಆಗಬಹುದು. ವಿಶೇಷ ಸ್ಥಾನಮಾನ ಇದ್ದ ಕಾರಣ ದೇಶದಲ್ಲಿ ರಕ್ಷಣೆ ಇತ್ತು. ಈಗ ವಿಶೇಷ ಸ್ಥಾನಮಾನ ತೆಗೆದಿರುವುದರಿಂದ ಉಳಿದವರು ಕೂಡ ಉಗ್ರರ ಜೊತೆ ಸೇರಿ ಪಾಕಿಸ್ತಾನಕ್ಕೆ ನಾವು ಸೇರಬೇಕೆಂಬ ಕೂಗು ಜೋರಾಗಲಿದೆ. ಇದು ದೇಶ ವಿರೋಧಿ ನೀತಿ ಎಂದು ಶಿವಶಂಕರ ರೆಡ್ಡಿ ಬಣ್ಣಿಸಿದರು.

    ಕೇಂದ್ರ ಸರ್ಕಾರ ಇಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಜಮ್ಮು-ಕಾಶ್ಮೀರ ಕೇಂದ್ರದ ಅಧೀನಕ್ಕೆ ಒಳಪಡಲಿದೆ. ಜಮ್ಮು-ಕಾಶ್ಮೀರ ವಿಧಾನಸಭೆಯನ್ನು ಒಳಗೊಂಡಿದ್ದರೂ ಕೇಂದ್ರದ ಅಧೀನದಲ್ಲಿ ಬರಲಿದೆ. ಲಡಾಕ್ ಕೇಂದ್ರಾಡಳಿತ ಪ್ರದೇಶವಾಗಲಿದೆ. ಜಮ್ಮು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ಮತ್ತು ಅಧಿಕಾರವನ್ನು ರದ್ದುಗೊಳಿಸಲಾಗಿದೆ.

    ರಾಜ್ಯಸಭೆಯಲ್ಲಿ ಕೇಂದ್ರಗೃಹ ಸಚಿವ ಅಮಿತ್ ಶಾ ಪರಿಚ್ಛೇಧ 370 ಮತ್ತು 35(ಎ) ರದ್ದುಗೊಳಿಸಲಾಗುವುದು ಎಂದು ಹೇಳುತ್ತಿದ್ದಂತೆಯೇ ವಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿ ಗಲಾಟೆ ಆರಂಭಿಸಿದರು. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ, ಅಧಿಕಾರ ರದ್ದುಗೊಳಿಸಿದ ಆದೇಶಕ್ಕೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.

  • ಬಿಜೆಪಿ ಏನನ್ನೂ ಕಟ್ಟಲ್ಲ, ದಶಕಗಳಿಂದ ಕಟ್ಟಿದ್ದನ್ನು ಕೆಡವುತ್ತಿದೆ: ರಾಹುಲ್ ಗಾಂಧಿ

    ಬಿಜೆಪಿ ಏನನ್ನೂ ಕಟ್ಟಲ್ಲ, ದಶಕಗಳಿಂದ ಕಟ್ಟಿದ್ದನ್ನು ಕೆಡವುತ್ತಿದೆ: ರಾಹುಲ್ ಗಾಂಧಿ

    ನವದೆಹಲಿ: ಭಾರತದ ಆರ್ಥಿಕತೆ ಬೆಳವಣಿಗೆಯಲ್ಲಿ ಇಳಿಕೆಯಾಗುತ್ತಿರುವ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ.

    ಕೇಂದ್ರ ಸರ್ಕಾರವನ್ನು ಟೀಕಿಸಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ಏನನ್ನೂ ನಿರ್ಮಿಸುವುದಿಲ್ಲ. ಬದಲಿಗೆ ದಶಕಗಳಿಂದ ಉತ್ಸಾಹ ಮತ್ತು ಪರಿಶ್ರಮದಿಂದ ನಿರ್ಮಿಸಿರುವುದನ್ನು ಕೆಡವುತ್ತದೆ ಎಂದು ಟ್ವೀಟ್‍ನಲ್ಲಿ ಕುಟುಕಿದ್ದಾರೆ.

    ಪತ್ರಿಕೆಗಳ ವರದಿಗಳ ಹೆಡ್‍ಲೈನ್ ಹಾಕಿ ಮೇಲಿನ ಸಾಲುಗಳನ್ನು ಬರೆದಿದ್ದಾರೆ. ವಿವಿಧ ಪ್ರಮುಖ ಕ್ಷೇತ್ರಗಳಲ್ಲಿನ ದುರ್ಬಲತೆ ಮತ್ತು ಆರ್ಥಿಕತೆಯ ಪ್ರಸ್ತುತ ಸ್ಥಿತಿಗತಿ ಕುರಿತು ತಜ್ಞರ ವ್ಯಾಖ್ಯಾನಗಳ ಹೆಡ್‍ಲೈನ್ ಹಾಕಿದ್ದಾರೆ. ಭಾರತ ಯಾವಾಗ ಆರ್ಥಿಕತೆ ಬೆಳವಣಿಗೆಯಲ್ಲಿ ಎರಡು ಸ್ಥಾನಗಳನ್ನು ಕಳೆದುಕೊಂಡಿತೋ ಆಗಲೇ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ಎಂಬ ಹೆಗ್ಗಳಿಕೆಯನ್ನೂ ಕಳೆದುಕೊಂಡಿದೆ. ಭಾರತ ಐದನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿದಿದ್ದು, ಈ ಮೂಲಕ ಯುಕೆ ಹಾಗೂ ಫ್ರಾನ್ಸ್ ಆರ್ಥಿಕತೆಯಲ್ಲಿ ನಮಗಿಂತ ಮುಂದೆ ಹೋಗಿವೆ ಎಂದರು.

    ಗ್ರಾಹಕರ ಬೇಡಿಕೆ ಕಡಿಮೆ ಹಾಗೂ ಕಂಪನಿಗಳಿಗೆ ಸಾಲ ನೀಡುವುದರಲ್ಲಿಯೂ ಕೊರತೆ ಉಂಟಾಗಿದ್ದರಿಂದ ಹಲವಾರು ಪ್ರಮುಖ ವಲಯಗಳು ತೀವ್ರ ಕುಸಿತ ಕಂಡಿವೆ. ಬ್ಯಾಂಕೇತರ ಹಣಕಾಸು ಕಂಪನಿಗಳು ಸಣ್ಣ ಸಂಸ್ಥೆಗಳಿಗೆ ಸಾಲ ನೀಡದ್ದರಿಂದ ಆಟೋ, ಬ್ಯಾಂಕಿಂಗ್, ರಿಯಲ್ ಎಸ್ಟೇಟ್ ಹಾಗೂ ಉತ್ಪಾದನೆ ಸೇರಿದಂತೆ ಹಲವು ಕ್ಷೇತ್ರಗಳು ಕುಸಿತ ಕಂಡಿವೆ.

    ಇತ್ತೀಚೆಗೆ ಕಂಪನಿಯ ಉನ್ನತ ಅಧಿಕಾರಿಗಳು ಆರ್ಥಿಕತೆಯ ಮಂದಗತಿಯ ಬಗ್ಗೆ ಸರ್ಕಾರವನ್ನು ಎಚ್ಚರಿಸಿದ್ದಾರೆ. ಅಲ್ಲದೆ, ಬಿಕ್ಕಟ್ಟು ನಿವಾರಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

    ಭಾರತದ ಆರ್ಥಿಕ ಬೆಳವಣಿಗೆಯಲ್ಲಿನ ಕುಸಿತವು ಭಾರತೀಯ ಷೇರು ಮಾರುಕಟ್ಟೆಗಳ ಮೇಲೂ ಪರಿಣಾಮ ಬೀರಿದ್ದು, ವಿದೇಶಿ ಬಂಡವಾಳ ಹೂಡಿಕೆದಾರರಿಂದ ಭಾರಿ ಪ್ರಮಾಣದ ಹೂಡಿಕೆಯನ್ನು ನಮ್ಮವರು ಕಳೆದುಕೊಂಡಿದ್ದಾರೆ. ಚೀನಾ ಮತ್ತು ಅಮೆರಿಕಾ ನಡುವಿನ ವ್ಯಾಪಾರದ ಉದ್ವಿಗ್ನತೆಯಂತಹ ಬಾಹ್ಯ ಅಂಶಗಳು ಭಾರತದ ಆರ್ಥಿಕತೆಯ ಬೆಳವಣಿಗೆಯ ಒತ್ತಡವನ್ನು ಹೆಚ್ಚಿಸಿವೆ.

    ಎಲ್ ಆಂಡ್ ಟಿ ಅಧ್ಯಕ್ಷ ಎ.ಎಂ.ನಾಯಕ್ ಮತ್ತು ಎಚ್‍ಡಿಎಫ್‍ಸಿ ಅಧ್ಯಕ್ಷ ದೀಪಕ್ ಪಾರೇಖ್‍ರಂತಹ ಉನ್ನತ ಅಧಿಕಾರಿಗಳು ಆರ್ಥಿಕತೆಯ ಕುರಿತು ಪ್ರತಿಕ್ರಿಯಿಸಿ, ಇತ್ತೀಚೆಗೆ ಆರ್ಥಿಕತೆಯು ‘ವಿಪರೀತ ಕುಸಿತ’ಕ್ಕೆ ಸಾಕ್ಷಿಯಾಗುತ್ತಿದ್ದು, ಪರಿಸ್ಥಿತಿ ಸವಾಲಿನದಾಗಿದೆ. ಆದರೆ, ನಿಧಾನಗತಿ ತಾತ್ಕಾಲಿಕವಾಗಿದ್ದು, ಆರ್ಥಿಕತೆ ಅಭಿವೃದ್ಧಿಯತ್ತ ನಮ್ಮ ಹೆಜ್ಜೆ ಪರಿಸ್ಥಿತಿಯನ್ನು ಹಿಮ್ಮೆಟ್ಟಿಸಲಿವೆ ಎಂದು ಹೇಳಿದ್ದರು.

  • ಕಾಶ್ಮೀರಕ್ಕೆ ನುಸುಳಿದ್ದಾರೆ ಐವರು ಉಗ್ರರು- ಹೈ ಅಲರ್ಟ್ ಘೋಷಣೆ

    ಕಾಶ್ಮೀರಕ್ಕೆ ನುಸುಳಿದ್ದಾರೆ ಐವರು ಉಗ್ರರು- ಹೈ ಅಲರ್ಟ್ ಘೋಷಣೆ

    ಶ್ರೀನಗರ: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್‍ಗೆ ಸೇರಿದ ಐದು ಉಗ್ರರು ಕಾಶ್ಮೀರಕ್ಕೆ ನುಸುಳಿದ್ದಾರೆ ಎಂಬ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಕಾಶ್ಮೀರದ ಕಣಿವೆ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಭಾರತದ ಕಣಿವೆ ಪ್ರದೇಶಕ್ಕೆ ಐದು ಜನ ಉಗ್ರರು ನುಸುಳಿದ್ದಾರೆ. ಈ ಉಗ್ರರು ಕಣಿವೆಯಲ್ಲಿನ ಭದ್ರತಾ ಪಡೆಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಈ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

    ಭಾರತಕ್ಕೆ ನುಸುಳಿರುವ ಭಯೋತ್ಪಾದಕರು ಹೆಚ್ಚು ತರಬೇತಿ ಪಡೆದವರು ಮತ್ತು ಅವರು ಭದ್ರತಾ ಪಡೆಗಳ ಮೇಲೆ ದಾಳಿ ಮಾಡಬಹುದು ಎಂದು ಮೂಲಗಳು ತಿಳಿಸಿರುವ ಕಾರಣ ಕೇಂದ್ರ ಸರ್ಕಾರ ಕಾಶ್ಮೀರ ಕಣಿವೆ ಪ್ರದೇಶಕ್ಕೆ ಹೆಚ್ಚಿನ ಸೈನಿಕರು ಮತ್ತು ವಾಯು ಪಡೆಯನ್ನು ನಿಯೋಜನೆ ಮಾಡಿ ತೀವ್ರ ಎಚ್ಚರಿಕೆ ವಹಿಸಿದೆ.

    ಈ ವಿಷಯ ತಿಳಿಯುತ್ತಿದ್ದಂತೆ ಭಾರತೀಯ ವಾಯುಪಡೆಯ ಯುದ್ಧ ವಿಮಾನ ಗುರುವಾರ ಸಂಜೆಯಿಂದ ಸೂಕ್ಷ್ಮ ಪ್ರದೇಶದಲ್ಲಿ ಗಸ್ತು ತಿರುಗುತ್ತಿದೆ. ಹೆಚ್ಚಿನ ಭದ್ರತೆಗೆ ಸೇನೆಯನ್ನು ಸಿದ್ಧಗೊಳಿಸಲಾಗಿದೆ. ಕಾಶ್ಮೀರ ಕಣಿವೆಗಳಲ್ಲಿ ಭದ್ರತಾ ಪಡೆಗಳ 280 ಗುಂಪುಗಳನ್ನು ನಿಯೋಜನೆ ಮಾಡಲಾಗಿದೆ. ಕಾಶ್ಮೀರದ ನಗರ ಭಾಗದ ಕೆಲ ದುರ್ಬಲ ಸ್ಥಳಗಳಲ್ಲಿ ಸಿ.ಆರ್‍.ಪಿ.ಎಫ್ ಸಿಬ್ಬಂದಿಯನ್ನು ನೇಮಕ ಮಾಡಿದ್ದೇವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

    ನಗರದ ಎಲ್ಲಾ ಪ್ರಮುಖ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಕೇಂದ್ರ ಸಶಸ್ತ್ರ ಅರೆಸೈನಿಕ ಪಡೆ (ಸಿಎಪಿಎಫ್) ಮತ್ತು ಸ್ಥಳೀಯ ಪೊಲೀಸರನ್ನು ನೇಮಿಸಲಾಗಿದೆ. ಭಯೋತ್ಪಾದಕರು ದೇವಾಲಯದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಿದ್ದಾರೆ ಎಂಬ ಗುಪ್ತಚರ ಇಲಾಖೆ ಮಾಹಿತಿಯಿಂದಾಗಿ ಪ್ರಾರ್ಥನ ಮಂದಿರಕ್ಕೆ ನೀಡಿದ್ದ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿದೆ. ರಾಜ್ಯದ ಶಾಲೆಗಳಿಗೆ 10 ದಿನಗಳವರೆಗೆ ರಜೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಘಟನೆಯಿಂದ ಅಮರನಾಥ ಯಾತ್ರೆಯ ಕೆಲವು ಊಟದ ಗೃಹಗಳನ್ನು ಸಹ ಮುಚ್ಚಲಾಗಿದೆ. ಈ ಕಾರ್ಯಾಚರಣೆ ನಡೆಸಲು ಮತ್ತು ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಕರ್ತವ್ಯಗಳನ್ನು ಬಲಪಡಿಸುವ ಸಲುವಾಗಿ ಸುಮಾರು 10,000 ಕೇಂದ್ರ ಪಡೆಗಳ ಸಿಬ್ಬಂದಿಯನ್ನು ಕಾಶ್ಮೀರಕ್ಕೆ ನಿಯೋಜಿಸಿತ್ತು. ಈ ನಿರ್ಧಾರದ ಬೆನ್ನಲ್ಲೇ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 25,000 ಅರೆಸೈನಿಕ ಸಿಬ್ಬಂದಿಯನ್ನು ಕಾಶ್ಮೀರಕ್ಕೆ ಕಳುಹಿಸಿದೆ.

  • ಸಿದ್ಧಾರ್ಥ್ ಸಾವಿಗೆ ಸಂತಾಪ ಸೂಚಿಸಿ, ಕೇಂದ್ರದ ವಿರುದ್ಧ ಹರಿಹಾಯ್ದ ದೀದಿ

    ಸಿದ್ಧಾರ್ಥ್ ಸಾವಿಗೆ ಸಂತಾಪ ಸೂಚಿಸಿ, ಕೇಂದ್ರದ ವಿರುದ್ಧ ಹರಿಹಾಯ್ದ ದೀದಿ

    ಕೋಲ್ಕತ್ತಾ: ಕಾಫಿ ಡೇ ಮಾಲೀಕ ವಿ.ಜಿ ಸಿದ್ಧಾರ್ಥ್ ಅವರ ಸಾವಿನ ಸುದ್ದಿ ತಿಳಿದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಈ ಬಗ್ಗೆ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ  ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಸಿದ್ಧಾರ್ಥ್ ಅವರಿಗೆ ನೆಮ್ಮದಿಯಿಂದ ಉದ್ಯಮ ನಡೆಸಲು ತೆರಿಗೆ ಇಲಾಖೆ ಹಾಗೂ ಇತರೆ ಸಂಸ್ಥೆಗಳು ಬಿಡುತ್ತಿರಲಿಲ್ಲ. ಮನನೊಂದು ಈ ನಿರ್ಧಾರವನ್ನು ಸಿದ್ಧಾರ್ಥ್ ತೆಗೆದುಕೊಂಡಿದ್ದರು ಎನ್ನಲಾಗುತ್ತಿದೆ. ಕೇಂದ್ರ ಸರ್ಕಾರ ಶಾಂತಿಯುತವಾಗಿ ಆಡಳಿತ ನಡೆಸಿ, ದ್ವೇಷ ರಾಜಕಾರಣವನ್ನು ಬದಿಗಿಟ್ಟು ತನಿಖಾ ಸಂಸ್ಥೆಗಳನ್ನು ದೇಶದ ಭವಿಷ್ಯವನ್ನು ನಾಶಮಾಡದಂತೆ ನೋಡಿಕೊಳ್ಳಬೇಕಿದೆ ಎಂದು ಸರ್ಕಾರದ ವಿರುದ್ಧ ಮಮತಾ ಬ್ಯಾನರ್ಜಿ ಹರಿಹಾಯ್ದಿದ್ದಾರೆ. ಇದನ್ನೂ ಓದಿ:ಸಂಸತ್ತಿನಲ್ಲಿ ಸಿದ್ಧಾರ್ಥ್ ಸಾವು ಪ್ರಸ್ತಾಪ – ತನಿಖೆಗೆ ಮನೀಷ್ ತಿವಾರಿ ಆಗ್ರಹ

    ಪೋಸ್ಟ್ ನಲ್ಲಿ ಏನಿದೆ?
    ಕೆಫೆ ಕಾಫಿ ಡೇ ಸ್ಥಾಪಕ ವಿ.ಜಿ ಸಿದ್ದಾರ್ಥ್ ಅವರ ಅಕಾಲಿಕ ಹಾಗೂ ಅನಿರೀಕ್ಷಿತ ಮರಣದಿಂದ ತೀವ್ರ ಆಘಾತವಾಗಿದೆ. ಇದು ಅತ್ಯಂತ ದುಃಖಕರ ಮತ್ತು ದುರದೃಷ್ಟಕರ ಸಂಗತಿಯಾಗಿದೆ.

    ಸಿದ್ದಾರ್ಥ್ ಅವರಿಗೆ ತಮ್ಮ ಉದ್ಯಮವನ್ನು ನೆಮ್ಮದಿಯಿಂದ ನಡೆಸಲು ತೆರಿಗೆ ಇಲಾಖೆಯೂ ಸೇರಿದಂತೆ ನಾನಾ ಸಂಸ್ಥೆಗಳ ಕಿರುಕುಳದಿಂದ ಸಾಧ್ಯವಾಗಲಿಲ್ಲ ಎಂಬುದು ಅವರು ಬರೆದಿರುವ ಪತ್ರದಿಂದ ತಿಳಿದಿದೆ. ಈ ಬಗ್ಗೆ ಕೇಳಿದಾಗ ತುಂಬ ನೋವಾಯಿತು. ಅಂತಹ ಕಿರುಕುಳವನ್ನು ತಡೆದುಕೊಳ್ಳುವ ಶಕ್ತಿ ಅವರಿಗಿರಲಿಲ್ಲ. ಇದರಿಂದ ಅವರು ಹೆಚ್ಚು ಒತ್ತಡದಲ್ಲಿದ್ದರು ಎನ್ನಲಾಗಿದೆ. ದೇಶದಲ್ಲಿ ಉದ್ಯಮಿಗಳಿಗೆ ಉಂಟಾಗುತ್ತಿರುವ ಕಿರುಕುಳಗಳನ್ನು ತಡೆಯಲು ಏನಾದರೂ ಮಾಡಲೇಬೇಕಿದೆ. ರಾಜಕೀಯ ದ್ವೇಷ ಸಾಧನೆಗಾಗಿ ಕುದುರೆ ವ್ಯಾಪಾರ ಮತ್ತು ಕಿರುಕುಳ ನೀಡಲಾಗುತ್ತಿರುವ ವಿಚಾರ ಪ್ರತಿಪಕ್ಷಗಳಲ್ಲಿ ಆತಂಕ ಸೃಷ್ಟಿಸಿದೆ. ಇದನ್ನೂ ಓದಿ:ಯೋಧನಾಗುವ ಆಸೆ ಕಂಡಿದ್ದ ಸಿದ್ಧಾರ್ಥ್ ಕಾಫಿ ಕಿಂಗ್ ಆದ ಕಹಾನಿ

    ಒಂದೆಡೆ ದೇಶದ ಆರ್ಥಿಕ ಬೆಳವಣಿಗೆ ತೀವ್ರವಾಗಿ ಕುಸಿದಿದೆ. 2018-19ರ ಕೊನೆಯ ತ್ರೈಮಾಸಿಕ ವರದಿಯಲ್ಲಿ ಆರ್ಥಿಕ ಬೆಳವಣಿಗೆ ದರ ಶೇ.5.8ಕ್ಕೆ ಕುಸಿದಿತ್ತು. ಇದು ಕಳೆದ 5 ವರ್ಷಗಳಲ್ಲೇ ಅತಿ ಕಡಿಮೆ. ನಿರುದ್ಯೋಗ ಪ್ರಮಾಣ ಕಳೆದ 45 ವರ್ಷಗಳಲ್ಲೇ ಅತ್ಯಧಿಕ ಎನ್ನುವ ಹಾಗೆ ಹೆಚ್ಚಾಗಿದೆ. ಕೇಂದ್ರ ಸರ್ಕಾರ ಶಸ್ತ್ರಾಸ್ತ್ರ ಕಾರ್ಖಾನೆಯಿಂದ ಹಿಡಿದು ಬಿಎಸ್‍ಎನ್‍ಎಲ್ ವರೆಗೆ, ಏರ್ ಇಂಡಿಯಾದಿಂದ ರೈಲ್ವೇ ಇಲಾಖೆ ತನಕ ಎಲ್ಲಾ ಪ್ರಮುಖ ಸಾರ್ವಜನಿಕ ವಲಯದ ಸಂಸ್ಥೆಗಳಿಂದ ಬಂಡವಾಳವನ್ನು ಹಿಂತೆಗೆದುಕೊಳ್ಳಲು ಮುಂದಾಗಿದೆ.

    ಸರ್ಕಾರದ ಈ ನಿರ್ಧಾರದಿಂದ ಅರ್ಥ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗುತ್ತಿದೆ. ಜನಸಾಮಾನ್ಯರು ತೊಂದರೆಯಲ್ಲಿ ಸಿಲುಕುತ್ತಿದ್ದಾರೆ. ಉದ್ಯಮ, ಕೃಷಿ ಹಾಗೂ ಉದ್ಯೋಗಾವಕಾಶಗಳ ಸೃಷ್ಟಿಸುವಲ್ಲಿಯೇ ದೇಶದ ಭವಿಷ್ಯ ಅಡಕವಾಗಿದೆ. ಉದ್ಯಮ ವಲಯವನ್ನು ನಿರಾಶೆಗೊಳಿಸಿದರೆ ದೇಶದಲ್ಲಿ ಆರ್ಥಿಕತೆ ಮತ್ತು ಉದ್ಯೋಗಾವಕಾಶಗಳ ಬೆಳವಣಿಗೆ ಇರುವುದಿಲ್ಲ. ಹೀಗಾಗಿ ಹೆಚ್ಚು ಹೆಚ್ಚು ಜನ ನಿರುದ್ಯೋಗಿ ಆಗುತ್ತಾರೆ. ಇದನ್ನೂ ಓದಿ:ಬುದ್ಧನಾಗಲು ಹೊರಟ ನನ್ನ ಗೆಳೆಯ ಸಿದ್ಧಾರ್ಥ- ಬಳ್ಳಾರಿ ಐಜಿಯಿಂದ ಭಾವನಾತ್ಮಕ ಪತ್ರ

    ಸರ್ಕಾರವು ಶಾಂತಿಯುತವಾಗಿ ಕೆಲಸ ನಿರ್ವಹಿಕೊಂಡು ಜನರು ನೆಮ್ಮದಿಯಿಂದ ಬದುಕಲು ಅವಕಾಶ ಕಲ್ಪಿಸಿಕೊಡಬೇಕು. ರಾಜಕೀಯ ದ್ವೇಷ ಹಾಗೂ ತನಿಖಾ ಸಂಸ್ಥೆಗಳು ದೇಶದ ಭವಿಷ್ಯವನ್ನು ನಾಶಗೊಳಿಸದಂತೆ ನೋಡಿಕೊಳ್ಳಬೇಕು ಎಂದು ನಾನು ಕೇಂದ್ರ ಸರ್ಕಾರಕ್ಕೆ ಮಾನವಿ ಮಾಡುತ್ತಿದ್ದೇನೆ.

    ಈ ದುರದೃಷ್ಟಕರ ಸುದ್ದಿ ತಿಳಿದು ನನಗೆ ನಿಜಕ್ಕೂ ನೋವಾಗಿದೆ. ಸಿದ್ಧಾರ್ಥ್ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸುತ್ತಿದ್ದೇನೆ. ನಿಮ್ಮೆಲ್ಲರ ಜೊತೆ ನನ್ನ ಭಾವನೆ ಮತ್ತು ಮಾತುಗಳನ್ನು ತಿಳಿಸಬೇಕೆಂದು ಅನಿಸಿಕೆಗಳನ್ನು ಹಂಚಿಕೊಂಡೆ ಎಂದು ಫೇಸ್‍ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

    https://www.facebook.com/MamataBanerjeeOfficial/posts/2603989656335026

  • ಜಮ್ಮು ಕಾಶ್ಮೀರಕ್ಕೆ ದಿಢೀರ್ 10 ಸಾವಿರ ಸೈನಿಕರ ಸ್ಥಳಾಂತರ – ಸ್ಪಷ್ಟನೆ ಕೊಟ್ಟ ಸರ್ಕಾರ

    ಜಮ್ಮು ಕಾಶ್ಮೀರಕ್ಕೆ ದಿಢೀರ್ 10 ಸಾವಿರ ಸೈನಿಕರ ಸ್ಥಳಾಂತರ – ಸ್ಪಷ್ಟನೆ ಕೊಟ್ಟ ಸರ್ಕಾರ

    ನವದೆಹಲಿ: ಭಯೋತ್ಪಾದಕರು ಜಮ್ಮು-ಕಾಶ್ಮೀರದರಲ್ಲಿ ಭಾರೀ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಗುಪ್ತಚರ ದಳದ ಖಚಿತ ಮಾಹಿತಿ ಮೇರೆಗೆ 10 ಸಾವಿರ ಸೈನಿಕರನ್ನು ಕಾಶ್ಮೀರಕ್ಕೆ ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

    ಕೇಂದ್ರ ಸರ್ಕಾರ ರಾತ್ರೋರಾತ್ರಿ ದೇಶದ ವಿವಿಧ ಭಾಗಗಳಲ್ಲಿದ್ದ ಸುಮಾರು 10 ಸಾವಿರ ಸೈನಿಕರನ್ನು ಕಾಶ್ಮೀರಕ್ಕೆ ಸ್ಥಳಾಂತರಿಸಿತ್ತು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿ ಮರಳಿದ ನಂತರ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿತ್ತು. ಅಜಿತ್ ದೋವಲ್ ಅವರು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ನಂತರ ಕೇಂದ್ರ ಗೃಹ ಸಚಿವಾಲಯಕ್ಕೆ ಮಾಹಿತಿ ನೀಡಿ, ಕಾಶ್ಮೀರದ ಪರಿಸ್ಥಿತಿ ನಿಭಾಯಿಸಲು ಹೆಚ್ಚುವರಿ ಸೈನಿಕರ ಅಗತ್ಯವಿದೆ ಎಂದು ತಿಳಿಸಿದ್ದರು.

    ಈ ಹಿನ್ನೆಲೆ ಕೇಂದ್ರ ಸರ್ಕಾರ 10 ಸಾವಿರ ಸೈನಿಕರನ್ನು ರಾತ್ರೋ ರಾತ್ರಿ ಸ್ಥಳಾಂತರಿಸಿ ಆದೇಶ ಹೊರಡಿಸಿತ್ತು. ಇದೀಗ ಕೇಂದ್ರ ಸರ್ಕಾರದ ಈ ನಿರ್ಧಾರದ ಕುರಿತು ವಿವಿಧ ರೀತಿಯ ಚರ್ಚೆ ನಡೆಯುತ್ತಿದ್ದು, ಭಯೋತ್ಪಾದನಾ ದಾಳಿ ನಡೆಯಲಿದೆ ಎಂಬ ಗುಪ್ತಚರ ದಳದ ಖಚಿತ ಮಾಹಿತಿ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಶುಕ್ರವಾರ ತಡರಾತ್ರಿ 10 ಸಾವಿರ ಸೈನಿಕರನ್ನು ಸ್ಥಳಾಂತರಿಸಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡ ನಂತರ ಹಲವು ರೀತಿ ಚರ್ಚೆಗಳು ನಡೆದಿದ್ದವು. ಇದರ ಭಾಗವಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ ಆರ್ಟಿಕಲ್ 35ಎ ಅಡಿ ನೀಡಿರುವ ವಿಶೇಷ ಸ್ಥಾನಮಾನವನ್ನು ತೆರವುಗೋಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 10 ಸಾವಿರ ಸೈನಿಕರನ್ನು ಸ್ಥಳಾಂತರಿಸಿದೆ ಎನ್ನುವ ಚರ್ಚೆ ಕೇಳಿ ಬಂದಿತ್ತು.

    ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಕಾಶ್ಮೀರ ಕಣಿವೆಯಲ್ಲಿನ ಆರ್ಟಿಕಲ್ 35ಎ ತೆರವುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಬೆಂಕಿಯೊಂದಿಗೆ ಸರಸವಾಡುತ್ತಿದೆ. ಒಂದು ವೇಳೆ ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನ ರದ್ದು ಮಾಡಿದರೆ ಈಗಾಗಲೇ ಸುರಿಯುತ್ತಿರುವ ಬೆಂಕಿಗೆ ಪೌಡರ್ ಹಾಕಿದಂತಾಗುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಕಾಶ್ಮೀರದ ಕಣಿವೆಯಲ್ಲಿ ಭಯೋತ್ಪಾದನಾ ದಾಳಿ ನಡೆಸಲು ಭಾರೀ ಸಂಚು ರೂಪಿಸಲಾಗುತ್ತಿದೆ. ಹೀಗಾಗಿ ಭಯೋತ್ಪಾದನಾ ಚಟುವಟಿಕೆಗಳನ್ನು ಹತ್ತಿಕ್ಕಲು ಹೆಚ್ಚುವರಿಯಾಗಿ 10 ಸಾವಿರ ಸೈನಿಕರನ್ನು ಸ್ಥಳಾಂತರಿಸಲಾಗಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮ ಒಂದು ವರದಿ ಮಾಡಿದೆ.

    ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಕಾಶ್ಮೀರ ಕಣಿವೆಯ ಎರಡು ದಿನಗಳ ಭೇಟಿಯಿಂದ ಹಿಂದಿರುಗಿದ ನಂತರ ಈ ನಿರ್ಧಾರ ಕೈಗೊಂಡಿದ್ದು, ಸೈನ್ಯವನ್ನು ಕಳುಹಿಸುವ ಕುರಿತು ನಿರ್ಧರಿಸಲಾಗಿದೆ. ದೋವಲ್ ಅವರು ಕಾಶ್ಮೀರ ಕಣಿವೆಗೆ ಭೇಟಿ ನೀಡಿದ ವೇಳೆ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿದ್ದು, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯ ಸ್ಥಿತಿಗತಿ ಕುರಿತು ವಿವರ ಪಡೆದಿದ್ದರು.

    ಭಯೋತ್ಪಾದಕರ ದಾಳಿಗೆ ಪ್ರತಿದಾಳಿ ನಡೆಸಲು ಹಾಗೂ ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಸೇನಾ ಪಡೆಯನ್ನು ನಿಯೋಜಿಸಲಾಗುತ್ತಿದೆ ಎಂದು ಗೃಹ ಸಚಿವಾಲಯ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿತ್ತು. ಅಲ್ಲದೆ, ದೇಶದ ವಿವಿಧ ಭಾಗಗಳಲ್ಲಿರುವ ಸೈನಿಕರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಲಾಗುತ್ತಿದೆ ಎಂದು ಹೇಳಲಾಗಿತ್ತು.

    ಈ ಕುರಿತು ಜಮ್ಮು ಮತ್ತು ಕಾಶ್ಮೀರದ ಡಿಜಿ ದಿಲ್ಬಾಗ್ ಸಿಂಗ್ ಅವರು ಸ್ಪಷ್ಟಪಡಿಸಿ, 10 ಸಾವಿರ ಅರೆ ಸೇನಾ ಪಡೆಯನ್ನು ಉತ್ತರ ಕಾಶ್ಮೀರ ಭಾಗಕ್ಕೆ ನಿಯೋಜನೆಗೊಳಿಸುವಂತೆ ಈಗಾಗಲೇ ಮನವಿ ಮಾಡಲಾಗಿತ್ತು ಎಂದು ತಿಳಿಸಿದ್ದರು.

    ಉತ್ತರ ಕಾಶ್ಮೀರದಲ್ಲಿ ಸೈನಿಕರ ಕೊರತೆ ಇದ್ದು, ಹೀಗಾಗಿ ನಮಗೆ ಹೆಚ್ಚುವರಿ ಸೈನ್ಯದ ಅಗತ್ಯವಿದೆ. ಈ ಹಿಂದೆ 100 ಕಂಪನಿಗಳನ್ನು ಸಾಗಿಸಲಾಗಿದ್ದು, ಅದನ್ನೇ ನಾವು ಮರಳಿ ಕೇಳಿದ್ದೇವೆ ಎಂದು ದಿಲ್ಬಾಗ್ ಸಿಂಗ್ ತಿಳಿಸಿದ್ದರು. ಒಂದು ಕಂಪನಿ 100 ಸೈನಿಕರನ್ನು ಒಳಗೊಂಡಿರುತ್ತದೆ.

    ಇತ್ತೀಚೆಗೆ ಅಮರನಾಥ ಯಾತ್ರೆಯ ಭದ್ರತೆಗಾಗಿ ಹೆಚ್ಚುವರಿಯಾಗಿ ಸುಮಾರು 40 ಸಾವಿರ ಕೇಂದ್ರ ಅರೆಸೈನಿಕ ಪಡೆಗಳನ್ನು ಕಳುಹಿಸಲಾಗಿದೆ. ಫೆ.24ರಂದು ಕೇಂದ್ರ ಅರೆಸೈನಿಕ ಪಡೆಯ ಸುಮಾರು 100 ಕಂಪನಿಗಳನ್ನು ಕಣಿವೆ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಗೆ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಸರ್ಕಾರ ತಿಳಿಸಿತ್ತು.

    ಇದಾದ ನಂತರ ಜಮಾತ್-ಇ-ಇಸ್ಲಾಮಿ ಮೇಲೆ ನಿಷೇಧ ಹೇರಲಾಯಿತು. ಅಲ್ಲದೆ, ರಾಜ್ಯದ ನಾಯಕರು ಮತ್ತು ಬೆಂಬಲಿಗರ ಮೇಲೆ ಹೆಚ್ಚು ದಬ್ಬಾಳಿಕೆಗಳು ನಡೆದಿದ್ದವು ಎಂದು ದಿಲ್ಬಾಗ್ ಸಿಂಗ್ ಮಾಹಿತಿ ನೀಡಿದ್ದರು.

  • ಕಾಶ್ಮೀರ ಕಣಿವೆಗೆ 10 ಸಾವಿರಕ್ಕೂ ಅಧಿಕ ಸೈನಿಕರ ಸ್ಥಳಾಂತರ

    ಕಾಶ್ಮೀರ ಕಣಿವೆಗೆ 10 ಸಾವಿರಕ್ಕೂ ಅಧಿಕ ಸೈನಿಕರ ಸ್ಥಳಾಂತರ

    – ಭಯೋತ್ಪಾದನೆ ನಿಗ್ರಹಕ್ಕೆ ಕ್ರಮ

    ಶ್ರೀನಗರ: ಭಯೋತ್ಪಾದನಾ ಚಟುವಟಿಕೆಗಳನ್ನು ಹತ್ತಿಕ್ಕಲು ಸೈನ್ಯವನ್ನು ಬಲಪಡಿಸಲಾಗಿದ್ದು, 10 ಸಾವಿರಕ್ಕೂ ಅಧಿಕ ಅರೆಸೇನಾ ಪಡೆಯ ಸೈನಿಕರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಸ್ಥಳಾಂತರಿಸುವ ಮೂಲಕ ಭದ್ರತಾ ಸಿಬ್ಬಂದಿಯನ್ನು ಹೆಚ್ಚಿಸಿದೆ.

    ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಕಾಶ್ಮೀರ ಕಣಿವೆಯ ಎರಡು ದಿನಗಳ ಭೇಟಿಯಿಂದ ಹಿಂದಿರುಗಿದ ನಂತರ ಈ ನಿರ್ಧಾರ ಕೈಗೊಂಡಿದ್ದು, ಸೈನ್ಯವನ್ನು ಕಳುಹಿಸುವ ಕುರಿತು ನಿರ್ಧರಿಸಲಾಗಿದೆ. ದೋವಲ್ ಅವರು ಕಾಶ್ಮೀರ ಕಣಿವೆಗೆ ಭೇಟಿ ನೀಡಿದ ವೇಳೆ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿದ್ದು, ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯ ಸ್ಥಿತಿಗತಿ ಕುರಿತು ವಿವರ ಪಡೆದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಈ ಕುರಿತು ಜಮ್ಮು ಮತ್ತು ಕಾಶ್ಮೀರದ ಡಿಜಿ ದಿಲ್ಬಾಗ್ ಸಿಂಗ್ ಅವರು ಈ ಕುರಿತು ಮಾಹಿತಿ ನೀಡಿ, 10 ಸಾವಿರ ಅರೆ ಸೇನಾ ಪಡೆಯನ್ನು ಉತ್ತರ ಕಾಶ್ಮೀರ ಭಾಗಕ್ಕೆ ನಿಯೋಜನೆಗೊಳಿಸುವಂತೆ ಈಗಾಗಲೇ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಭಯೋತ್ಪಾದಕರ ದಾಳಿಗೆ ಪ್ರತಿದಾಳಿ ನಡೆಸಲು ಹಾಗೂ ಕಾಶ್ಮೀರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಸೇನಾ ಪಡೆಯನ್ನು ನಿಯೋಜಿಸಲಾಗುತ್ತಿದೆ ಎಂದು ಗೃಹ ಸಚಿವಾಲಯ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ. ಅಲ್ಲದೆ, ದೇಶದ ವಿವಿಧ ಭಾಗಗಳಲ್ಲಿರುವ ಸೈನಿಕರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

    ಉತ್ತರ ಕಾಶ್ಮೀರದಲ್ಲಿ ಸೈನಿಕರ ಕೊರತೆ ಇದ್ದು, ಹೀಗಾಗಿ ನಮಗೆ ಹೆಚ್ಚುವರಿ ಸೈನ್ಯದ ಅಗತ್ಯವಿದೆ. ಈ ಹಿಂದೆ 100 ಕಂಪನಿಗಳನ್ನು ಸಾಗಿಸಲಾಗಿದ್ದು, ಅದನ್ನೇ ನಾವು ಮರಳಿ ಕೇಳಿದ್ದೇವೆ ಎಂದು ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ. ಒಂದು ಕಂಪನಿ 100 ಸೈನಿಕರನ್ನು ಒಳಗೊಂಡಿರುತ್ತದೆ.

    ಇತ್ತೀಚೆಗೆ ಅಮರನಾಥ ಯಾತ್ರೆಯ ಭದ್ರತೆಗಾಗಿ ಹೆಚ್ಚುವರಿಯಾಗಿ ಸುಮಾರು 40 ಸಾವಿರ ಕೇಂದ್ರ ಅರೆಸೈನಿಕ ಪಡೆಗಳನ್ನು ಕಳುಹಿಸಲಾಗಿದೆ. ಫೆ.24ರಂದು ಕೇಂದ್ರ ಅರೆಸೈನಿಕ ಪಡೆಯ ಸುಮಾರು 100 ಕಂಪನಿಗಳನ್ನು ಕಣಿವೆ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಗೆ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಸರ್ಕಾರ ತಿಳಿಸಿತ್ತು.

    ಇದಾದ ನಂತರ ಜಮಾತ್-ಇ-ಇಸ್ಲಾಮಿ ಮೇಲೆ ನಿಷೇಧ ಹೇರಲಾಯಿತು. ರಾಜ್ಯದ ನಾಯಕರು ಮತ್ತು ಬೆಂಬಲಿಗರ ಮೇಲೆ ಹೆಚ್ಚು ದಬ್ಬಾಳಿಕೆಗಳು ನಡೆದಿವೆ ಎಂದು ದಿಲ್ಬಾಗ್ ಸಿಂಗ್ ಮಾಹಿತಿ ನೀಡಿದ್ದಾರೆ.

  • ಪ್ರವಾಹದಲ್ಲಿ ಸಿಲುಕಿಕೊಳ್ತು 2 ಸಾವಿರ ಪ್ರಯಾಣಿಕರಿದ್ದ ರೈಲು

    ಪ್ರವಾಹದಲ್ಲಿ ಸಿಲುಕಿಕೊಳ್ತು 2 ಸಾವಿರ ಪ್ರಯಾಣಿಕರಿದ್ದ ರೈಲು

    – ರೈಲ್ವೇ ಇಲಾಖೆ ಮನವಿ
    – ಸ್ಥಳಕ್ಕೆ ದೌಡಾಯಿಸಿದ ಎನ್‍ಡಿಆರ್‍ಎಫ್ ಸಿಬ್ಬಂದಿ

    ಮುಂಬೈ: ಮಹಾರಾಷ್ಟ್ರದ ದಕ್ಷಿಣ ಭಾಗದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದಾಗಿ ಮುಂಬೈ-ಕೊಲ್ಹಾಪುರ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ರೈಲು ಪ್ರವಾಹದ ನೀರಿನಲ್ಲಿ ಸಿಲುಕಿದೆ. ಸುಮಾರು 2 ಸಾವಿರ ಪ್ರಯಾಣಿಕರಿರುವ ಈ ರೈಲು ಬದ್ಲಾಪುರ ಮತ್ತು ವಂಗಣಿ ನಡುವೆ ನಿಲುಗಡೆಯಾಗಿದ್ದು, ನಿನ್ನೆ ರಾತ್ರಿಯಿಂದ ನಿಂತಲ್ಲೇ ನಿಂತಿದೆ.

    ಘಟನೆ ಕುರಿತು ಮಾಹಿತಿ ಪಡೆದ ರೈಲ್ವೇ ಪೊಲೀಸರು ಸ್ಥಳಕ್ಕೆ ತಲುಪಿದ್ದು, ಪ್ರಯಾಣಿಕರಿಗೆ ನೀರು, ಬಿಸ್ಕೆಟ್ ನೀಡಿದ್ದಾರೆ. ಅಲ್ಲದೆ ಎನ್‍ಡಿಆರ್ ಎಫ್ ತಂಡ ಕಾರ್ಯಾಚರಣೆಗೆ ಇಳಿದಿದ್ದು, 8 ಬೋಟ್‍ಗಳೊಂದಿಗೆ ಸ್ಥಳಕ್ಕೆ ಸೇರಿಕೊಳ್ಳಲಿದೆ. ಈ ಕುರಿತು ಟ್ವೀಟ್ ಮಾಡಿರುವ ರೈಲ್ವೇ ಇಲಾಖೆ, ಪ್ರಯಾಣಿಕರನ್ನು ರೈಲಿನಿಂದ ಕೆಳಗೆ ಇಳಿಯದಂತೆ ಮನವಿ ಮಾಡಿದೆ.

    ಘಟನಾ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಪ್ರಯಾಣಿಕರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದ್ದು, ಪ್ರಯಾಣಿಕರು ಭಯ ಪಡುವ ಅಗತ್ಯ ಇಲ್ಲ ಎಂದು ಹೇಳಿ ರಕ್ಷಣೆಗೆ ಮುಂದಾಗಿದ್ದಾರೆ. ರೈಲಿನಲ್ಲಿ ಇರುವ ಜನರಿಗೆ ಅಗತ್ಯವಾದ ಆರೋಗ್ಯ ಸೇವೆಯನ್ನು ನೀಡಲು ಕೂಡ ಸರ್ಕಾರ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೆ ಪ್ರಯಾಣಿಕರನ್ನು ಕೊಲ್ಹಾಪುರಕ್ಕೆ ಕರೆತರಲು ಸಿದ್ಧತೆ ನಡೆಸಲಾಗಿದೆ.

    ಮಹಾರಾಷ್ಟ್ರದ ವಾಲ್ಧುನಿ ನದಿ ಪ್ರದೇಶದಲ್ಲಿ ಹೆಚ್ಚಿನ ಮಳೆಯಾದ ಪರಿಣಾಮ ನದಿ ಉಕ್ಕಿ ಹರಿಯುತ್ತಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಮುಂಬೈ ಸುತ್ತ ಮುತ್ತ ಉತ್ತಮ ಮಳೆಯಾಗುವ ನಿರೀಕ್ಷೆ ಇದ್ದು, ಈಗಾಗಲೇ ಹಲವು ರೈಲು ಹಾಗೂ ವಿಮಾನಗಳ ಸಮಯ ಬದಲಾಗಿದೆ ಎಂಬ ಮಾಹಿತಿ ಲಭಿಸಿದೆ.