Tag: Central Government

  • ನ್ಯೂಕ್ಲಿಯರ್ ಶಕ್ತಿ ‘ನೋ ಫಸ್ಟ್ ಯೂಸ್’ ನೀತಿ ಭವಿಷ್ಯದಲ್ಲಿ ಬದಲಾಗಬಹುದು: ರಾಜನಾಥ್ ಸಿಂಗ್

    ನ್ಯೂಕ್ಲಿಯರ್ ಶಕ್ತಿ ‘ನೋ ಫಸ್ಟ್ ಯೂಸ್’ ನೀತಿ ಭವಿಷ್ಯದಲ್ಲಿ ಬದಲಾಗಬಹುದು: ರಾಜನಾಥ್ ಸಿಂಗ್

    ನವದೆಹಲಿ: ಭಾರತ ಪರಮಾಣು ‘ಮೊದಲ ಬಳಕೆ ಇಲ್ಲ’ ಎಂಬ ಸಿದ್ಧಾಂತವನ್ನು ಪಾಲಿಸುತ್ತದೆ. ಆದರೆ ಇದು ಭವಿಷ್ಯದ ಸನ್ನಿವೇಶಗಳ ಮೇಲೆ ಅವಲಂಬಿಸಿದೆ. ಮುಂದೆ ಈ ಸಿದ್ಧಾಂತ ಬದಲಾಗಬಹುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

    ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರ್ ವಾಜಪೇಯಿ ಅವರ ಪುಣ್ಯ ಸ್ಮರಣೋತ್ಸವದ ದಿನವಾದ ಹಿನ್ನೆಲೆ ರಾಜನಾಥ್ ಸಿಂಗ್ ಪೋಖ್ರಾನ್‍ಗೆ ಭೇಟಿಕೊಟ್ಟಿದ್ದರು. ಈ ವೇಳೆ ಅವರು 1998ರಲ್ಲಿ ಭಾರತ ರಹಸ್ಯವಾಗಿ ಐದು ಪರಮಾಣು ಪರೀಕ್ಷೆಗಳನ್ನು ನಡೆಸಿದೆ ಎಂದು ತಿಳಿಸಿದರು.

    ಅಟಲ್ ಜಿ ಅವರ ಪರಮಾಣು ಶಕ್ತಿಯಿಂದ ವ್ಯವಹಾರ ಪರಿಹರಿಸುವ ನೀತಿಗೆ ಪೋಖ್ರಾನ್ ಸಾಕ್ಷಿಯಾಗಿದೆ. ಇಂದಿಗೂ ನಮ್ಮಲ್ಲಿ ಪರಮಾಣು ‘ನೋ ಫಸ್ಟ್ ಯೂಸ್’ ನೀತಿಯನ್ನು ಪಾಲಿಸಲಾಗುತ್ತಿದೆ. ಆದರೆ ಭವಿಷ್ಯದಲ್ಲಿ ಏನಾಗಬಹುದು ಎಂಬುದು ಮುಂದಿನ ಸನ್ನಿವೇಶದ ಮೇಲೆ ನಿರ್ಧರವಾಗುತ್ತದೆ ಎಂದು ರಾಜನಾಥ ಸಿಂಗ್ ಹೇಳಿದರು.

    ಪೋಖ್ರಾನ್‍ಗೆ ಭೇಟಿ ನೀಡುವ ಮೊದಲು ರಾಜನಾಥ್ ಸಿಂಗ್ ಅವರು ರಾಜಸ್ತಾನದ ಜೈಸಲ್ಮೇರ್ ಗೆ ಭೇಟಿಕೊಟ್ಟಿದ್ದರು. ಅಲ್ಲಿ 5ನೇ ಅಂತರಾಷ್ಟ್ರೀಯ ಆರ್ಮಿ ಸ್ಕೌಟ್ ಮಾಸ್ಟರ್ಸ್ ಸ್ಪರ್ಧೆಯ ಮುಕ್ತಾಯ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಅವರು ಇದು ಕಾಕತಾಳಿಯದಂತೆ ಆಗಿದೆ, ನಾನು ಅಂತರಾಷ್ಟ್ರೀಯ ಆರ್ಮಿ ಸ್ಕೌಟ್ ಮಾಸ್ಟರ್ಸ್ ಸ್ಪರ್ಧೆಗೆ ಬಂದೆ. ಆದರೆ ಇಂದೇ ಅಟಲ್ ಜಿ ಅವರ ಮೊದಲ ಪುಣ್ಯಸ್ಮರಣೆಯ ದಿನವಾಗಿದೆ. ಹೀಗಾಗಿ ಪೋಖ್ರಾನ್ ನಿಂದಲೇ ಅವರಿಗೆ ನಮನ ಸಲ್ಲಿಸಲು ನಿರ್ಧರಿಸಿದೆ ಎಂದರು.

    ಎದುರಾಳಿಗಳು ಪರಮಾಣು ಶಸ್ತ್ರಾಸ್ತ್ರ ದಾಳಿ ಮಾಡುವ ಮೊದಲು ಪರಮಾಣು ಶಸ್ತ್ರಾಸ್ತ್ರವನ್ನು ಬಳಸುವಂತಿಲ್ಲ ಎಂಬದೇ ‘ನೋ ಫಸ್ಟ್ ಯೂಸ್’ ನೀತಿಯಾಗಿದೆ. 1998ರಲ್ಲಿ ಪೋಖ್ರಾನ್-2 ಪರಮಾಣು ಪರೀಕ್ಷೆ ಬಳಿಕ ‘ನೋ ಫಸ್ಟ್ ಯೂಸ್’ ನೀತಿಯನ್ನು ಭಾರತ ಸ್ವೀಕರಿಸಿತ್ತು. ಈವರೆಗೂ ಭಾರತ ಈ ನೀತಿಯನ್ನು ಚಾಚುತಪ್ಪದೆ ಪಾಲಿಸಿಕೊಂಡು ಬಂದಿದೆ. ಇದುವರೆಗೂ ಕೇವಲ ಪ್ರತಿಕಾರಕ್ಕೆ ಮಾತ್ರ ಪರಮಾಣು ಬಳಸುವ ನೀತಿಯನ್ನು ಭಾರತ ಮುಂದುವರಿಸಿಕೊಂಡು ಬಂದಿದೆ.

  • ಕೇಂದ್ರದಿಂದ ಒಂದೇ ಸಲ ಪರಿಹಾರ ಹಣ ಬಿಡುಗಡೆ ಮಾಡ್ತೀವಿ- ಅನಂತಕುಮಾರ್ ಹೆಗಡೆ

    ಕೇಂದ್ರದಿಂದ ಒಂದೇ ಸಲ ಪರಿಹಾರ ಹಣ ಬಿಡುಗಡೆ ಮಾಡ್ತೀವಿ- ಅನಂತಕುಮಾರ್ ಹೆಗಡೆ

    ಕಾರವಾರ: ಕೇಂದ್ರದಿಂದ ಒಂದೇ ಸಲ ಪರಿಹಾರ ಹಣವನ್ನು ಬಿಡುಗಡೆ ಮಾಡುತ್ತೇವೆ. ರಾಜ್ಯ ಸರ್ಕಾರ ಹಾನಿಯ ಸಮೀಕ್ಷೆಯ ಅಂದಾಜನ್ನು ಕಳಿಸಿದ ತಕ್ಷಣ ಕೇಂದ್ರದಿಂದ ಪರಿಹಾರ ಧನ ಬಿಡುಗಡೆಯಾಗುತ್ತೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗೆಡೆ ಭರವಸೆ ನೀಡಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರವಿಲ್ಲ ಅನ್ನೋದು ಸುಳ್ಳು. ಮುಖ್ಯಮಂತ್ರಿಗಳು ಒಬ್ಬರೇ ಇದ್ರೂ ಕೂಡ ತ್ವರಿತವಾಗಿ ಸ್ಪಂದಿಸುತ್ತಿದ್ದಾರೆ. ಇಂತಹ ಪ್ರಕೃತಿ ವಿಕೋಪದ ಸಂದರ್ಭದಲ್ಲೂ ರಾಜಕೀಯ ಮಾಡೋ ಜಾಯಮಾನ ನಮ್ಮದಲ್ಲ ಎಂದರು.

    ರಾಜ್ಯ ಹಿಂದೆಂದೂ ಕಾಣದ ನೆರೆಹಾವಳಿಯನ್ನು ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಮಂತ್ರಿ ಮಂಡಲದ ರಾಜಕೀಯ ಕೆಸರೆರಚಾಟ ಸರಿಯಲ್ಲ. ಸಚಿವರಾರೂ ಇಲ್ಲದಿದ್ದರೂ ಮುಖ್ಯಮಂತ್ರಿ ಒಬ್ಬರೇ ಎಲ್ಲ ಭಾಗಗಳಿಗೂ ಭೇಟಿ ನೀಡಿ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಾರೆ. ಒಬ್ಬರೇ ಇದ್ದರೂ ಸರ್ಕಾರ ತುಂಬಾ ಸಮರ್ಥವಾಗಿದೆ. ಮುಖ್ಯಮಂತ್ರಿಗಳು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಮೊದಲು ಜನರ ಕಷ್ಟ ಪರಿಹಾರವಾಗಬೇಕು. ಬೇರೆ ಬೇರೆ ಕಾರಣಕ್ಕೆ ಸಂಪುಟ ರಚನೆ ಸಾಧ್ಯವಾಗಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ತುಂಬಾ ಲಿಬರಲ್ ಇದೆ ಎಂದು ತಿಳಿಸಿದರು.

    ಸಂಪೂರ್ಣ ಮನೆ ಕಳೆದುಕೊಂಡ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ, ಮನೆ ಅರ್ಧ ಹಾಳಾಗಿದ್ದಲ್ಲಿ ರಿಪೇರಿಗೆ 1 ಲಕ್ಷ ರೂ. ಹಾಗೂ ಮನೆಗೆ ನೀರು ನುಗ್ಗಿದ್ದಲ್ಲಿ 3800 ರೂ. ಪರಿಹಾರ ಧನವನ್ನು ತಕ್ಷಣಕ್ಕೆ ಘೋಷಿಸಿದ್ದು, ಪರಿಹಾರ ಕಾರ್ಯಗಳು ಪ್ರಗತಿಯಲ್ಲಿವೆ. ಮಳೆಯಿಂದಾಗಿ ಇನ್ನು ಮುಂದೆಯೂ ಮನೆಗಳು ಹಾನಿಗೊಳಗಾಗುವ ಸಂದರ್ಭವಿದ್ದು, ಅದನ್ನು ಕೂಡ ಪಟ್ಟಿ ಮಾಡಿ ಅವರಿಗೂ ಪರಿಹಾರ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

    ಅನಂತ ಕುಮಾರ್ ಹೆಗಡೆ ಅವರು ಇಂದು ಮಳೆಯಿಂದ ಹಾನಿಗೊಳಗಾದ ಸಿದ್ದಾಪುರದ ನೆರೆಪೀಡಿತ ಹೆಮ್ಮನಬೈಲ್, ಅಕ್ಕುಂಜಿ, ಕಲ್ಯಾಣಪುರ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

  • ‘ನನ್ ಅವತಾರ ನೋಡಿದ್ರೆ ಗೊತ್ತಾಗಲ್ವಾ ನಿಮ್ಗೆ’ – ‘ಸಾಹುಕಾರ್’ ಸಿಡಿಮಿಡಿ

    ‘ನನ್ ಅವತಾರ ನೋಡಿದ್ರೆ ಗೊತ್ತಾಗಲ್ವಾ ನಿಮ್ಗೆ’ – ‘ಸಾಹುಕಾರ್’ ಸಿಡಿಮಿಡಿ

    ಬೆಳಗಾವಿ: ಜಿಲ್ಲೆಯಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಕಡಿಮೆಯಾದ ಬಳಿಕ ಸಾರ್ವಜನಿಕರವಾಗಿ ಕಾಣಿಸಿಕೊಂಡಿರುವ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಅವರು ಪಬ್ಲಿಕ್ ಟಿವಿ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ.

    ಕೇಂದ್ರದಿಂದ ಪರಿಹಾರ ನೀಡುವುದು ಕಡಿಮೆ ಆಗುತ್ತಿದ್ದೇಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಕೇಂದ್ರದ ಬಗ್ಗೆ ನಂಬಿಕೆ ಇದ್ದು, ಕೆಲ ತಾಂತ್ರಿಕ ಸಮಸ್ಯೆಯಿಂದ ತಡವಾಗಿದೆ ಅಷ್ಟೇ. ಅಮಿತ್ ಶಾ ಕೂಡ ಭೇಟಿ ನೀಡಿದ್ದು, ಬಿಎಸ್‍ವೈ ಅವರಿಗೆ ಅವರು ಭರವಸೆ ನೀಡಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಕ್ಷೇತ್ರ ಜನರಿಗೆ ಶಾಸಕರು ಇಲ್ಲದೇ, ಸಚಿವರು ಇಲ್ಲದೇ ಸಮಸ್ಯೆ ಹೇಳಿಕೊಳ್ಳಲು ಕಷ್ಟವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಕೇವಲ ಮಾಧ್ಯಮಗಳು ಕೇಳುತ್ತಿರುವ ಪ್ರಶ್ನೆ ಅಷ್ಟೇ. ಕ್ಷೇತ್ರದ ಜನರಿಗೆ ನಾನು ಲಭ್ಯವಿದ್ದು, ಪರಿಹಾರ ಕಾರ್ಯದಲ್ಲಿ ತೊಡಗಿದ್ದೇನೆ ಎಂದರು.

    ಕಳೆದ 9 ದಿನಗಳಿಂದ ನಾನು ಕ್ಷೇತ್ರದ ಜನರ ಜೊತೆ ಇದ್ದು, ಹಳ್ಳಿಗಳಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿದ್ದೇನೆ. ಅಲ್ಲದೇ ತೊಂದರೆಯಲ್ಲಿ ಸಿಲುಕಿರುವ ಜನರಿಗೆ ಬೇಕಾದ ಸಹಾಯ ಮಾಡಿದ್ದೇನೆ. ನನ್ನ ಪರಿಸ್ಥಿತಿ ನೋಡಿದರೆ ನಿಮಗೆ ಆರ್ಥವಾಗಬೇಕು. ಆದರೆ ಮಾಧ್ಯಮಗಳು ನನ್ನನ್ನು ತೋರಿಸುತ್ತಿಲ್ಲ ಅಷ್ಟೇ. ನೀವು ಕೇವಲ ಒಳ್ಳೆ ರೋಡ್‍ನಲ್ಲಿ ನಿಂತು ವರದಿ ಮಾಡುತ್ತೀರಿ. ಆದರೆ ನಾವು ಪ್ರವಾಹ ಉಂಟಾಗಿರುವ ಹಳ್ಳಿಗಳಿಗೆ ಭೇಟಿ ನೀಡುತ್ತೇವೆ ಎಂದರು.

    ನಾನು ಏನು ಮಾಡಿದ್ದೇನೆ ಎಂದು ಜನರು ಹೇಳುತ್ತಾರೆ. ಈ ಬಗ್ಗೆ ಕ್ಷೇತ್ರದ ಜನರಿಗೆ ಗೊತ್ತಿದೆ. ಆದ್ದರಿಂದ ನನ್ನ ಬಗ್ಗೆ ನಾನು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಕ್ಷೇತದ ಜನರನ್ನು ಪ್ರಶ್ನೆ ಮಾಡಿ ಈ ಬಗ್ಗೆ ಮಾಹಿತಿ ನೀಡುತ್ತಾರೆ. ನಾವು ಮಾಡುವ ಕೆಲಸ ಕಾಮಾಲೆ ಮಾಧ್ಯಮ ಕಣ್ಣಿಗೆ ಕಾಣುತ್ತಿಲ್ಲ ಎಂದರೆ ಆದು ನನ್ನ ಸಮಸ್ಯೆಯಲ್ಲ ಎಂದು ಸಿಡಿಮಿಡಿಗೊಂಡರು.

  • ಉಳಿದ ತೀರ್ಮಾನಗಳನ್ನು ವೇಗವಾಗಿ ಕೈಗೊಳ್ಳುವ ಸರ್ಕಾರ, ನೆರೆ ಪರಿಹಾರದಲ್ಲಿ ವಿಳಂಬ ಮಾಡೋದು ಯಾಕೆ – ದಿನೇಶ್ ಗುಂಡೂರಾವ್

    ಉಳಿದ ತೀರ್ಮಾನಗಳನ್ನು ವೇಗವಾಗಿ ಕೈಗೊಳ್ಳುವ ಸರ್ಕಾರ, ನೆರೆ ಪರಿಹಾರದಲ್ಲಿ ವಿಳಂಬ ಮಾಡೋದು ಯಾಕೆ – ದಿನೇಶ್ ಗುಂಡೂರಾವ್

    ಬೆಂಗಳೂರು: ಬೇರೆ ಎಲ್ಲ ತೀರ್ಮಾನಗಳನ್ನು ಅತ್ಯಂತ ವೇಗವಾಗಿ ತೆಗೆದುಕೊಳ್ಳುವ ಕೇಂದ್ರ ಸರ್ಕಾರ ರಾಜ್ಯದ ನೆರೆ ಪರಿಹಾರ ಕಾಮಗಾರಿ ಬಗ್ಗೆ ತೀರ್ಮಾನ ಕೈಗೊಳ್ಳಲು ಯಾಕೆ ನಿಧಾನ ಧೋರಣೆ ಅನುಸರಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಂಭವಿಸಿರುವ ಭೀಕರ ಪ್ರವಾಹದ ಕುರಿತು ಕೇಂದ್ರ ಸರ್ಕಾರ ಈ ವರೆಗೆ ಯಾವುದೇ ಘೋಷಣೆಗಳನ್ನು ಮಾಡಿಲ್ಲ. ಇದೇ ರೀತಿ ಮುಂದುವರಿದರೆ ನಾವು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುತ್ತೇವೆ. ಪ್ರವಾಹದಿಂದ ಜನ ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರ ಈ ಕುರಿತು ತಕ್ಷಣ ನಿರ್ಧಾರ ಕೈಗೊಳ್ಳಬೇಕಿತ್ತು. ಆದರೆ, ಈ ವರೆಗೆ ಕ್ರಮ ಕೈಗೊಂಡಿಲ್ಲ. ಯಾಕಿಷ್ಟು ತಾತ್ಸಾರ ಮನೋಭಾವನೆ ಎಂಬುದು ತಿಳಿಯುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.

    ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಬಹುದು ಎಂದು ಭಾವಿಸಿದ್ದೆವು. ಹೀಗಾಗಿ ಯಾವುದೇ ರೀತಿಯ ಒತ್ತಡ ಹಾಕಲು ನಿರ್ಧರಿಸಿರಲಿಲ್ಲ. ಇಂದು ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಅಮಿತ್ ಶಾ ಅವರು ರಾಜ್ಯಕ್ಕಾಗಮಿಸಿ ಪ್ರವಾಹ ಸ್ಥಿತಿಯ ವೈಮಾನಿಕ ಸಮೀಕ್ಷೆ ನಡೆಸಿದ ನಂತರವೂ ಸಹ ಯಾವುದೇ ಘೋಷಣೆ ಮಾಡಲಿಲ್ಲ, ಈ ಕುರಿತು ಹೇಳಿಕೆಯನ್ನೂ ನೀಡಲಿಲ್ಲ. ಹೀಗಿರುವಾಗ ಜನರು ಏನೆಂದು ಪರಿಭಾವಿಸಬೇಕು. ಕೇಂದ್ರ ಸರ್ಕಾರ ಎಲ್ಲವನ್ನೂ ಅರಿತು ಶೀಘ್ರ ಪರಿಹಾರವನ್ನು ಘೋಷಿಸಬೇಕು ಎಂದು ತಿಳಿಸಿದ್ದಾರೆ.

    ರಾಜ್ಯದ ನೆರೆ ಬಗ್ಗೆ ಇಂದು ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಚರ್ಚೆಯೇ ಆಗಿಲ್ಲ. ರಾಜ್ಯದ ಸಚಿವರೂ ಕೂಡ ಕ್ಯಾಬಿನೆಟ್ ಸಭೆಯಲ್ಲಿ ಭಾಗವಹಿಸಿದ್ದರೂ ಯಾವುದೇ ಚಕಾರ ಎತ್ತಿಲ್ಲ. ರಾಜ್ಯಕ್ಕೆ ಪರಿಹಾರ ನೀಡುವ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಂಡಿಲ್ಲ. ಆರಂಭದಲ್ಲಿ 5 ಸಾವಿರ ಕೋಟಿ ಬಿಡುಗಡೆ ಮಾಡುತ್ತಾರೆ ಎಂದು ಭಾವಿಸಿದ್ದೆವು. ಆದರೆ ಇಲ್ಲಿಯವರೆಗೆ ಮೌನವಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಹರಿಹಾಯ್ದಿದ್ದಾರೆ.

    ರಾಜ್ಯಾದ್ಯಂತ ಹೋರಾಟ ಮಾಡಲು ಯೋಜನೆ ರೂಪಿಸಿದ್ದೆವು. ಆದರೆ ಈ ಸಮಯದಲ್ಲಿ ಹೋರಾಟ ಮಾಡುವುದು ಸರಿಯಲ್ಲ ಎಂದು ಸುಮ್ಮನಿದ್ದೇವೆ. ಮುಂದಿನ ದಿನಗಳಲ್ಲಿ ಸರಿ ಹೋಗದಿದ್ದರೆ ಪ್ರತಿಭಟನೆ ಮಾಡಲೇ ಬೇಕಾಗುತ್ತದೆ. ಪರಿಹಾರ ಕೆಲಸಗಳು ಸಮರೋಪಾದಿಯಲ್ಲಿ ಸಾಗುತ್ತಿಲ್ಲ. ಇನ್ನೊಂದೆಡೆ ಚಿಕ್ಕಬಳ್ಳಾಪುರ, ಕೋಲಾರ ಸೇರಿ ಕೆಲವೆಡೆ ಭೀಕರ ಬರ ಇದೆ. ಈ ಜಿಲ್ಲೆಗಳಲ್ಲೂ ಬರ ಪರಿಹಾರ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಇಷ್ಟಾದರೂ ಸಹ ಕೇಂದ್ರ ಸರ್ಕಾರ ತಾತ್ಸಾರ ಧೋರಣೆ ಅನುಸರಿಸುತ್ತಿದೆ ಎಂದು ತಿಳಿಸಿದರು.

    ಬಾಲಚಂದ್ರ ಜಾರಕಿಹೊಳಿ ಸರ್ಕಾರ ಬೀಳಿಸುವ ಕುರಿತ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಹೇಳಿಕೆ ಈ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದರು.

    ನಾಳೆ ಹೊಸಕೋಟೆಯಲ್ಲಿ ಅತೃಪ್ತ ಶಾಸಕರ ರಾಜಕೀಯ ದ್ರೋಹದ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿದ್ದೆವು. ಆದರೆ, ರಾಜ್ಯದಲ್ಲಿ ನೆರೆಯಿಂದಾಗಿ ಜನತೆ ಸಂಕಷ್ಟದಲ್ಲಿದ್ದು, ಅವರ ನೆರವಿಗೆ ಧಾವಿಸಬೇಕಿದೆ. ಹೀಗಾಗಿ ನಾಳೆಯ ಪ್ರತಿಭಟನೆಯನ್ನ ರದ್ದು ಮಾಡಿದ್ದೇವೆ. ನಾಳೆ ನೆರೆ ಪರಿಹಾರ ಕಮಿಟಿ ಮಾಡುತ್ತೇವೆ. ಹೀಗಾಗಿ ಕೆಲ ನಾಯಕರ ಸಭೆ ಕರೆದಿದ್ದು, ಚರ್ಚೆ ನಡೆಸಿ ಕಮಿಟಿ ರಚಿಸಲಾಗುವುದು ಎಂದು ತಿಳಿಸಿದರು.

  • ಈದ್ ಸಂಭ್ರಮ- ಜಮ್ಮು ಕಾಶ್ಮೀರದಲ್ಲಿ ವಿಶೇಷ ಟೆಲಿಫೋನ್ ವ್ಯವಸ್ಥೆ

    ಈದ್ ಸಂಭ್ರಮ- ಜಮ್ಮು ಕಾಶ್ಮೀರದಲ್ಲಿ ವಿಶೇಷ ಟೆಲಿಫೋನ್ ವ್ಯವಸ್ಥೆ

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಸಾರ್ವಜನಿಕರು ತಮ್ಮ ಪ್ರೀತಿ ಪಾತ್ರರೊಂದಿಗೆ ಮಾತನಾಡಲು ಹಾಗೂ ಸಹಾಯ ಮಾಡಲು 300 ವಿಶೇಷ ಟೆಲಿಫೋನ್ ಬೂತ್‍ಗಳನ್ನು ತೆರೆಯಲಾಗಿದೆ.

    ಈ ಕುರಿತು ಜಮ್ಮು ಕಾಶ್ಮೀರದ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಜಮ್ಮು ಕಾಶ್ಮೀರದ ವಿದ್ಯಾರ್ಥಿಗಳು ಅವರ ಕುಟುಂಬಸ್ಥರೊಂದಿಗೆ ಮಾತನಾಡಲು ಅಲಿಘಢ ಹಾಗೂ ನವದೆಹಲಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಂಪರ್ಕಾಧಿಕಾರಿಗಳನ್ನು ಸಹ ಸಕ್ರಿಯಗೊಳಿಸಲಾಗಿದೆ ಎಂದು ತಿಳಿಸಿದೆ.

    ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ನಿರ್ದೇಶನದ ಮೇರೆಗೆ ಸಲಹಾ ಸಮಿತಿಯು ಟೆಲಿಫೋನ್ ಬೂತ್‍ಗಳನ್ನು ಸ್ಥಾಪಿಸಿದೆ. ಈ ಮೂಲಕ ರಾಜ್ಯದ ಹೊರಗಿರುವ ವಿದ್ಯಾರ್ಥಿಗಳು ಈದ್ ಹಬ್ಬದ ಆಚರಣೆಗೆ ತಮ್ಮ ಮನೆಗೆ ತೆರಳಲು ಸಹಾಯ ಮಾಡಲಾಗಿದೆ ಎಂದು ಸತ್ಯಪಾಲ್ ತಿಳಿಸಿದ್ದಾರೆ.

    ಅಲ್ಲದೆ, ಈ ಸಂದರ್ಭದಲ್ಲಿ ಮನೆಗೆ ಹೋಗಲು ಸಾಧ್ಯವಾಗದ ರಾಜ್ಯದ ವಿದ್ಯಾರ್ಥಿಗಳಿಗೆ ಇನ್ನೊಂದು ಕೊಡುಗೆ ನೀಡಿದೆ. ವಿದ್ಯಾರ್ಥಿಗಳೊಂದಿಗೆ ಈದ್ ಹಬ್ಬ ಆಚರಿಸಲು ಸಂಪರ್ಕಾಧಿಕಾರಿಗಳಿಗೆ ತಲಾ 1 ಲಕ್ಷ ರೂ.ಗಳನ್ನು ಶುಕ್ರವಾರವಷ್ಟೇ ರಾಜ್ಯಪಾಲರು ಘೋಷಿಸಿದ್ದರು.

    ಇದೀಗ ವಿದ್ಯಾರ್ಥಿಗಳು ತಮ್ಮ ಕುಟುಂಬಗಳೊಂದಿಗೆ ಮಾತನಾಡಲು ಹಾಗೂ ಮನೆಗೆ ತೆರಳಲು ಪ್ರತಿ ಉಪ ಆಯುಕ್ತರ ಕಚೇರಿಯಲ್ಲಿ ಟೆಲಿಫೋನ್ ಬೂತ್‍ಗಳನ್ನು ಸ್ಥಾಪಿಸುವಂತೆ ನಿರ್ದೇಶನ ನೀಡಿದ್ದಾರೆ. ಹೀಗಾಗಿ ಒಟ್ಟು 300 ವಿಶೇಷ ಟೆಲಿಫೋನ್ ಬೂತ್‍ಗಳನ್ನು ತೆರೆಯಲಾಗಿದೆ. ಈ ಮೂಲಕ ಜನರು ತಮ್ಮ ಪ್ರೀತಿ ಪಾತ್ರರೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • 10 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿ- ಕೇಂದ್ರಕ್ಕೆ ಪರಮೇಶ್ವರ್ ಒತ್ತಾಯ

    10 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿ- ಕೇಂದ್ರಕ್ಕೆ ಪರಮೇಶ್ವರ್ ಒತ್ತಾಯ

    ಬೆಂಗಳೂರು: ರಾಜ್ಯದಲ್ಲಿ ನೆರೆ ಪರಿಸ್ಥಿತಿ ವಿಪರೀತವಾಗಿದ್ದು, ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಪ್ರಧಾನಿ ಅಥವಾ ಕೇಂದ್ರ ಸಚಿವರು ರಾಜ್ಯದಲ್ಲಿ ಉಂಟಾಗಿರುವ ನೆರೆ ಪರಿಸ್ಥಿತಿಯ ವೈಮಾನಿಕ ಸಮೀಕ್ಷೆ ನಡೆಸಿ, 10 ಸಾವಿರ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಒತ್ತಾಯಿಸಿದ್ದಾರೆ.

    ಸದಾಶಿವನಗರದ ಬಿಡಿಎ ಕ್ವಾಟರ್ಸ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಸ್ಥಿತಿ ನಿಭಾಯಿಸಲು ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸರ್ಕಾರವೇ ಇಲ್ಲ. ಸರ್ಕಾರ ಇಲ್ಲದ ಕಾರಣ ಅಧಿಕಾರಿಗಳು ಆರಾಮವಾಗಿ ಕುಳಿತಿದ್ದಾರೆ. ಯಾವ ನೋಡೆಲ್ ಅಧಿಕಾರಿಗಳು ಕ್ಯಾಂಪ್ ಮಾಡಿಲ್ಲ. ಯಡಿಯೂರಪ್ಪ ಅವರು ಸಂಪುಟ ವಿಸ್ತರಣೆ ಯಾಕೆ ಮಾಡಿಲ್ಲ ಎಂಬ ಕಾರಣ ಬಹಿರಂಗ ಪಡಿಸಬೇಕು ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಕೇಂದ್ರದಿಂದ ತಂಡ ಆಗಮಿಸಿ ಸೂಕ್ತ ಸಮೀಕ್ಷೆ ನಡೆಸಬೇಕು. ತಕ್ಷಣವೇ ವಿಶೇಷ ಪ್ಯಾಕೇಜ್ ಘೋಷಿಸಬೇಕು. ರಾಜ್ಯದಲ್ಲಿ ಸಚಿವ ಸಂಪುಟ ಇಲ್ಲದೆ ಬಿಜೆಪಿ ಸರ್ಕಾರ ನಡೆಸುತ್ತಿದೆ. ತುಂಬಾ ಪ್ರಯತ್ನ ಮಾಡಿ ಪ್ರಜಾಪ್ರಭುತ್ವದ ವಿರುದ್ಧವಾಗಿ ಸರ್ಕಾರ ರಚನೆ ಮಾಡಿದ್ದಾರೆ. ಆದರೆ, ಸಂಪುಟ ರಚನೆ ಮಾಡಲು ವಿಳಂಬ ಮಾಡುತ್ತಿದ್ದಾರೆ. ರಾಜ್ಯದ ದೋಸ್ತಿ ಸರ್ಕಾರವನ್ನು ಮೋದಿ ಮತ್ತು ಅಮಿತ್ ಶಾ ಬೀಳಿಸಿದ್ದಾರೆ. ಇದೀಗ ಸಚಿವ ಸಂಪುಟ ರಚನೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಟೀಕಿಸಿದರು.

    ಕೆಲಸ ಆಗುತ್ತಿಲ್ಲ
    ರಾಜ್ಯದಲ್ಲಿ ಲಕ್ಷಾಂತರ ಜಾನುವಾರುಗಳು ಸಾವನ್ನಪ್ಪಿವೆ. ಹಲವು ಜನ ಸಹ ಮೃತಪಟ್ಟಿದ್ದಾರೆ. ಲಕ್ಷಾಂತರ ಜನ ನಿರಾಶ್ರಿತರಾಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಒಬ್ಬರೆ ಇಡೀ ರಾಜ್ಯವನ್ನು ಹೇಗೆ ನಡೆಸುತ್ತಾರೆ. ಸಚಿವರು ಇದ್ದಿದ್ದರೆ ಸಮಾರೋಪಾದಿಯಲ್ಲಿ ಕೆಲಸ ಆಗುತ್ತಿತ್ತು. ಈಗ ಯಾವ ಕೆಲಸವೂ ಅಗುತ್ತಿಲ್ಲ. ರಾಜ್ಯದಲ್ಲಿ ಯಾವ ಸರ್ಕಾರವೂ ಇಲ್ಲ. ಮುಖ್ಯಮಂತ್ರಿಗಳು ಇಳಿ ವಯಸ್ಸಿನಲ್ಲೂ ಕೆಲಸ ಮಾಡುತ್ತಿದ್ದಾರೆ. ಅದರೆ ಅವರಿಗೆ ಯಾವ ಸಹಕಾರ ಸಿಗುತ್ತಿಲ್ಲ. ಲಕ್ಷಾಂತರ ಜನ ನಿರಾಶ್ರಿತರಾದರೂ ಸಹ ಈವರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಥಾವ ಅಮಿತ್ ಶಾ ವೈಮಾನಿಕ ಸಮೀಕ್ಷೆ ಮಾಡಿಲ್ಲ ಎಂದು ಆರೋಪಿಸಿದರು.

    ಈ ಹಿಂದೆ ಮೈತ್ರಿ ಸರ್ಕಾರ ಇದ್ದಾಗ ಕೇಂದ್ರ ಮಲತಾಯಿ ಧೋರಣೆ ತಾಳಿತ್ತು. ಇದೀಗ ಅವರದ್ದೇ ಸರ್ಕಾರ ಇದೆ, ಆದರೂ ಮಲತಾಯಿ ಧೋರಣೆ ತೋರುತ್ತಿದ್ದಾರೆ. ಈವರೆಗೆ ಕೇಂದ್ರದಿಂದ ರಾಜ್ಯಕ್ಕೆ ಯಾವುದೇ ಸಹಕಾರ ಸಿಕ್ಕಿಲ್ಲ. ಇದು ರಾಜ್ಯ ಸರ್ಕಾರಕ್ಕೆ ಆದ ಅವಮಾನ. ತಕ್ಷಣವೇ ಅಧಿಕಾರಿಗಳಿಂದ ಕೇಂದ್ರ ಸರ್ಕಾರ ಸಮೀಕ್ಷೆ ನಡೆಸಿ, ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿದರು.

    ಬಿಜೆಪಿಯವರಿಗೆ ಕಾಂಗ್ರೆಸ್, ಜೆಡಿಎಸ್ ಶಾಸಕರಿಂದ ರಾಜೀನಾಮೆ ಕೊಡಿಸಲು ಹಾಗೂ ಸರ್ಕಾರ ಬೀಳಿಸಲು ಇದ್ದ ಆಸಕ್ತಿ ಸಂಪುಟ ರಚಿಸಲು ಇಲ್ಲ. ಹೀಗಾಗಿ ಸಚಿವ ಸಂಪುಟ ರಚನೆಗೆ ವಿಳಂಬವಾಗುತ್ತಿದೆ. ರಾಜ್ಯಪಾಲರು ಕಣ್ಣು ಮುಚ್ಚಿ ಕುಳಿತಿದ್ದಾರಾ? ಅನರ್ಹ ಶಾಸಕರ ಪ್ರಕರಣ ಸುಪ್ರೀಂ ಕೋರ್ಟ್‍ನಲ್ಲಿ ಇರುವುದರಿಂದ ಕಾಯುತ್ತಿದ್ದರೆ ಅದನ್ನು ಬಹಿರಂಗ ಪಡಿಸಿ. ಅವರನ್ನು ಸಚಿವರನ್ನಾಗಿ ಮಾಡುವ ಭರವಸೆ ನೀಡಿದ್ದೀರಾ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಸಂತ್ರಸ್ತರಿಗೆ ಪರಂ ಸಹಾಯ
    ನನ್ನ ಒಂದು ತಿಂಗಳ ಸಂಬಳ ಹಾಗೂ ಸಂಸ್ಥೆಯಿಂದ 10 ಲಕ್ಷ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತೇನೆ. ನಮ್ಮ ವೈದ್ಯಕೀಯ ಕಾಲೇಜಿನಿಂದ ಚಿಕಿತ್ಸೆಗೆ ತಂಡ ಕಳುಹಿಸಲು ನಾವು ತಯಾರಿದ್ದೇವೆ. ಕಾಂಗ್ರೆಸ್‍ನ ಎಲ್ಲಾ ಶಾಸಕರು ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ನೀಡಬೇಕು ಎಂದು ಈ ಮೂಲಕ ಕೆಪಿಸಿಸಿ ಅಧ್ಯಕ್ಷರು, ಶಾಸಕಾಂಗ ನಾಯಕರಲ್ಲಿ ವಿನಂತಿಸುತ್ತೇನೆ ಎಂದು ಇದೇ ವೇಳೆ ಪರಮೇಶ್ವರ್ ತಿಳಿಸಿದರು.

    ವಿಪಕ್ಷ ಸ್ಥಾನ-ಹೈ ಕಮಾಂಡ್ ನಿರ್ಧಾರ
    ಪ್ರತಿಪಕ್ಷ ಸ್ಥಾನದ ನಾಯಕರ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ಏನು ಹೇಳುತ್ತೊ ಅದನ್ನು ಕೇಳುತ್ತೇವೆ. ಪ್ರತಿಪಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಎಚ್.ಕೆ. ಪಾಟೀಲ್, ನನ್ನ(ಪರಮೇಶ್ವರ್) ಹಾಗೂ ಸಿದ್ದರಾಮಯ್ಯ ಅವರ ಹೆಸರು ಕೇಳಿ ಬರುತ್ತಿದೆ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸ್ಪಷ್ಟಪಡಿಸಿದರು.

  • ಸಹಜ ಸ್ಥಿತಿಯತ್ತ ಕಾಶ್ಮೀರ – ಫೋನ್, ಇಂಟರ್‌ನೆಟ್ ಸೇವೆ ಆರಂಭ

    ಸಹಜ ಸ್ಥಿತಿಯತ್ತ ಕಾಶ್ಮೀರ – ಫೋನ್, ಇಂಟರ್‌ನೆಟ್ ಸೇವೆ ಆರಂಭ

    ಶ್ರೀನಗರ: ಕೇಂದ್ರ ಸರ್ಕಾರ 370ನೇ ವಿಧಿ ರದ್ದುಗೊಳಿಸಿದ ಬಳಿಕ ಕಾಶ್ಮೀರದಲ್ಲಿ ಅಹಿತಕರ ಘಟನೆಗಳು ನಡೆಯಬಾರದೆಂದು ಮುನ್ನೆಚ್ಚರಿಕಾ ಕ್ರಮವಾಗಿ ಫೋನ್ ಹಾಗೂ ಇಂಟರ್‍ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿರುವ ಹಿನ್ನೆಲೆಯಲ್ಲಿ ಈ ಸೇವೆ ಮತ್ತೆ ಆರಂಭವಾಗಿದೆ.

    ಇಂದು ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಹಿನ್ನೆಲೆಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಏನಾದರೂ ಹಿಂಸಾಚಾರ ನಡೆಯಬಹುದೆಂದು ಭದ್ರತಾ ಸಿಬ್ಬಂದಿ ಕಣಿವೆ ರಾಜ್ಯದ ಎಲ್ಲಾ ಕಡೆಗಳಲ್ಲು ಭದ್ರತೆ ಒದಗಿಸುತ್ತಿದ್ದಾರೆ.

    ಶ್ರೀನಗರದಲ್ಲಿರುವ ಮುಖ್ಯ ಜಾಮಾ ಮಸೀದಿಯ ಬಾಗಿಲನ್ನು ಮುಚ್ಚಲಾಗಿದೆ. ಆದರೆ ನಗರದ ಕೆಲ ಸಣ್ಣ ಮಸೀದಿಯಲ್ಲಿ ಮಸ್ಲಿಮರು ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಹಾಗೆಯೇ ಶಾಂತಿಯುತವಾಗಿ ಪ್ರಾರ್ಥನೆ ಸಲ್ಲಿಸಿ, ಯಾವುದೇ ಗಲಾಟೆಗಳು ನಡೆಯದಂತೆ ಜನರು ನೋಡಿಕೊಂಡರೆ ಮಸೀದಿ ಬಾಗಿಲನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ ಸೇರಿದಂತೆ ಸುಮಾರು 400 ರಾಜಕೀಯ ನಾಯಕರು ಗೃಹ ಬಂಧನದಲ್ಲೇ ಇದ್ದಾರೆ.

    ಗುರುವಾರದಂದು ರಾಜ್ಯಪಾಲರಾದ ಸತ್ಯಪಾಲ್ ಮಲಿಕ್ ಅವರು ಪ್ರತಿಕ್ರಿಯಿಸಿ, ನಗರದಲ್ಲಿ ಶಾಂತಿಯನ್ನು ಜನರು ಹೀಗೆ ಕಾಯ್ದುಕೊಂಡು ಬಂದರೆ ಶುಕ್ರವಾರದ ಪ್ರಾರ್ಥನೆ ಹಾಗೂ ಈದ್ ಹಬ್ಬಕ್ಕೆ ಹೇರಿರುವ ನಿರ್ಬಂಧವನ್ನು ಸಡಿಲಿಸಲಾಗುವುದು ಎಂದು ಹೇಳಿದ್ದಾರೆ.

    ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ ನಿರ್ಧಾರದ ಬಗ್ಗೆ ಮಾತನಾಡುವಾಗ, ಸೋಮವಾರ ನಡೆಯುವ ಈದ್ ಹಬ್ಬದ ಸಂಭ್ರಮಕ್ಕೆ ಸರ್ಕಾರ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುತ್ತದೆ ಎಂದು ಭರವಸೆ ನೀಡಿದ್ದಾರೆ. ಹಾಗೆಯೇ 370ನೇ ವಿಧಿಯಿಂದ ಸ್ವಾತಂತ್ರ್ಯ ಸಿಕ್ಕಿರುವುದು ವಾಸ್ತವ್ಯ. ಆದರೆ ಈ ಹಿನ್ನೆಲೆ ತೆಗೆದುಕೊಂಡಿರುವ ಮುನ್ನೆಚ್ಚರಿಕಾ ಕ್ರಮಗಳಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದ್ದರು.

    ಕಾಶ್ಮೀರ ಕಣಿವೆಯಲ್ಲಿ ಕಫ್ರ್ಯೂ ಹಾಕಿದ್ದರೂ ಈದ್ ಹಬ್ಬದ ಹಿನ್ನೆಲೆ ರಾಜ್ಯದಿಂದ ಹೊರಗಿರುವ ಕಾಶ್ಮೀರಿ ನಿವಾಸಿಗಳು ಕುಟುಂಬಸ್ಥರ ಜೊತೆ ಹಬ್ಬ ಆಚರಿಸಲು ವಿಮಾನಗಳ ಮೂಲಕ ಶ್ರೀನಗರಕ್ಕೆ ಬರುತ್ತಿದ್ದಾರೆ.

  • ಗೃಹ ಸಚಿವಾಲಯದಿಂದ ನೆರವು ಕೊಡಿಸಲು ನಾನು ಬದ್ಧ – ಪ್ರಹ್ಲಾದ್ ಜೋಷಿ

    ಗೃಹ ಸಚಿವಾಲಯದಿಂದ ನೆರವು ಕೊಡಿಸಲು ನಾನು ಬದ್ಧ – ಪ್ರಹ್ಲಾದ್ ಜೋಷಿ

    ಬೆಂಗಳೂರು: ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ಕೇಂದ್ರ ಗೃಹ ಸಚಿವಾಲಯದಿಂದ ನೆರವು ಕೊಡಿಸಲು ನಾನು ಬದ್ಧನಾಗಿದ್ದೇನೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಷಿ ಭರವಸೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ ಏನು ನೆರವು ಬೇಕು ಎಂದು ಹೇಳಲು ಸಮಯ ಬೇಕಾಗುತ್ತದೆ. ಪರಿಹಾರದ ಕುರಿತು ಈವರೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಲ್ಲ. ಗೃಹ ಇಲಾಖೆಯೊಂದಿಗೆ ಚರ್ಚಿಸಿ ತಕ್ಷಣ ನೆರವು ಒದಗಿಸಲಾಗುವುದು. ಈವರೆಗೆ ರಾಜ್ಯ ಸರ್ಕಾರ ಏನು ನೆರವು ಬೇಕು ಎಂದು ಕೇಂದ್ರಕ್ಕೆ ತಿಳಿಸಿಲ್ಲ. ರಾಜ್ಯ ಸರ್ಕಾರ ಮನವಿ ಮಾಡಿದಲ್ಲಿ ತುರ್ತಾಗಿ ನೆರವು ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಕೇಂದ್ರ ಸರ್ಕಾರದಿಂದ ಯಾವ ರೀತಿಯ ನೆರವು ಬೇಕೆಂದು ಸರ್ಕಾರ ತಿಳಿಸಿದರೆ ಕೊಡಿಸಲು ನಾನು ಸಿದ್ಧ ಎಂದು ತಿಳಿಸಿದ್ದಾರೆ.

    ಉತ್ತರ ಕರ್ನಾಟಕದ ಪ್ರವಾಹ ನಿಯಂತ್ರಿಸಲು ನೆರವು ನೀಡುವ ಕುರಿತು ಗೃಹ ಇಲಾಖೆ ಜೊತೆ ಚರ್ಚಿಸಿ ತಕ್ಷಣ ಒದಗಿಸಲಾಗುವುದು. ಪ್ರಧಾನಿ ಮೋದಿ ನೃತೃತ್ವದ ಸರ್ಕಾರ ಯಾವುದೇ ರಾಜ್ಯದ ಪ್ರವಾಹ ಪರಿಸ್ಥಿತಿಗೆ ತಕ್ಷಣ ಸ್ಪಂದಿಸಲಿದೆ. ಪ್ರವಾಹದ ಒಟ್ಟು ನಷ್ಟದ ಅಂದಾಜು ನನಗಿದೆ. ಈಗಾಗಲೇ ಕೇಂದ್ರದಿಂದ ಎನ್‍ಡಿಆರ್‍ಎಫ್ ತಂಡದ ಮೂಲಕ ನೆರವು ಕೊಡಲಾಗುತ್ತಿದೆ. ಪ್ರವಾಹದಿಂದ ದೊಡ್ಡ ಪ್ರಮಾಣದ ನಷ್ಟ ಉಂಟಾಗಿದ್ದು, ಗೃಹ ಸಚಿವರಿಂದ ನೆರವು ಕೊಡಿಸಲು ನಾನು ಬದ್ಧನಾಗಿದ್ದೇನೆ ಎಂದು ತಿಳಿಸಿದರು.

    ನಾನೂ ಸಹ ಪ್ರವಾಹ ಪೀಡಿತ ಪ್ರದೇಶಗಳಿಗೆ ಹೊರಟಿದ್ದೇನೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ನೆರವಾಗುತ್ತೇನೆ. ಪರಿಹಾರ ಕಾಮಗಾರಿಗಳಿಗೆ ಚುರುಕು ನೀಡುವ ಕೆಲಸವನ್ನು ಮಾಡುತ್ತೇನೆ ಎಂದು ತಿಳಿಸಿದ್ದಾರೆ.

    ಶೀಘ್ರವೇ ಸಚಿವ ಸಂಪುಟ ರಚಿಸಲಾಗುವುದು. ಸದ್ಯ ಪರಿಹಾರ ಕಾರ್ಯ ಮುಗಿಯಬೇಕಿದೆ. ನಂತರ ಸಚಿವ ಸಂಪುಟದ ಬಗ್ಗೆ ಚರ್ಚೆ ಮಾಡಲಾಗುವುದು. ಚುನಾವಣೆ ಸಂದರ್ಭದಲ್ಲಿ ವಿಪಕ್ಷಗಳು ಟೀಕೆ ಮಾಡುವುದು ಸಹಜ. ಆದರೆ ಇಂತಹ ಸಂದರ್ಭದಲ್ಲಿ ಟೀಕೆ ಸಲ್ಲದು. ಕುಮಾರಸ್ವಾಮಿ ಸರ್ಕಾರ ಇದ್ದಿದ್ದರೂ ಇಂತಹ ಸಂದರ್ಭದಲ್ಲಿ ನಾವು ನೆರವು ಕೊಡುತ್ತಿದ್ದೆವು. ಸಂಪುಟ ರಚನೆಯಾಗಿಲ್ಲ ಎಂಬುದನ್ನು ಹೊರತು ಪಡಿಸಿದರೆ, ಅಭಿವೃದ್ಧಿ ಕೆಲಸಕ್ಕೆ ಅಡ್ಡಿಯಾಗಿಲ್ಲ. ಈ ವಯಸ್ಸಲ್ಲೂ ಯಡಿಯೂರಪ್ಪನವರು ಚಟುವಟಿಕೆಯಿಂದ ಓಡಾಡಿ ಪ್ರವಾಹ ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ. ದೆಹಲಿಯಿಂದ ಬಂದು ನೇರವಾಗಿ ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿಪಕ್ಷಗಳು ಟೀಕೆ ನಿಲ್ಲಿಸಿ, ನೆರೆ ಪೀಡಿತರ ರಕ್ಷಣೆಗೆ ಒಟ್ಟಾಗಿ ಧಾವಿಸೋಣ ಎಂದು ಕರೆ ನೀಡಿದರು.

  • ದೀರ್ಘಕಾಲದ ಬೇಡಿಕೆ ಈಡೇರಿದೆ – ಕೇಂದ್ರವನ್ನು ಹೊಗಳಿದ ಮಾಯಾವತಿ

    ದೀರ್ಘಕಾಲದ ಬೇಡಿಕೆ ಈಡೇರಿದೆ – ಕೇಂದ್ರವನ್ನು ಹೊಗಳಿದ ಮಾಯಾವತಿ

    ಲಕ್ನೋ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮಾಜವಾದಿ ಪಕ್ಷದ ವರಿಷ್ಠೆ ಮಾಯಾವತಿ ಅವರು ಬೆಂಬಲಿಸಿದ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ.

    ಸಂವಿಧಾನದಲ್ಲಿ ರೂಪಿಸಲಾದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ದೇಶಾದ್ಯಂತ ವಿಸ್ತರಿಸಬೇಕು. 370ನೇ ವಿಧಿ ಮತ್ತು 35ಎ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ದೀರ್ಘಕಾಲದ ಬೇಡಿಕೆಯಾಗಿತ್ತು. ಅದು ಈಗ ಈಡೇರಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಉತ್ತಮ ಲಾಭ ಪಡೆಯಲಿದ್ದಾರೆ ಎಂದು ಬಿಎಸ್‍ಪಿ ನಂಬಿದೆ ಎಂದು ಟ್ವೀಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

    ಅಲ್ಲದೆ, ಲಡಾಕ್‍ನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದ್ದ ನಿರ್ಧಾರವನ್ನು ಸಹ ಮಾಯಾವತಿ ಅವರು ಸ್ವಾಗತಿಸಿದ್ದಾರೆ. ಇದರಿಂದ ಬೌದ್ಧ ಜನರ ಹಳೆಯ ಬೇಡಿಕೆಗಳನ್ನು ಈಡೇರಿಸಿದಂತಾಗಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಬೌದ್ಧ ಅನುಯಾಯಿಗಳು ದೇಶಾದ್ಯಂತ ಸಂತಸಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಸೋಮವಾರ ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪರಿಚಯಿಸಿದ 370ನೇ ವಿಧಿ ಹಾಗೂ 35ಎ ರದ್ದತಿ ಕುರಿತ ನಿರ್ಧಾರಕ್ಕೆ ಹಲವು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಆದರೆ, ಕೇಂದ್ರ ಸರ್ಕಾರದ ನಿಲುವಿಗೆ ಬಿಎಸ್‍ಪಿ ಬೆಂಬಲ ವ್ಯಕ್ತಪಡಿಸಿತ್ತು.

  • 370ನೇ ವಿಧಿ ರದ್ದು ಪ್ರಜಾಪ್ರಭುತ್ವದ ಮೇಲೆ ನಡೆಸಲಾದ ದಾಳಿ – ಕಮಲ್ ಹಾಸನ್

    370ನೇ ವಿಧಿ ರದ್ದು ಪ್ರಜಾಪ್ರಭುತ್ವದ ಮೇಲೆ ನಡೆಸಲಾದ ದಾಳಿ – ಕಮಲ್ ಹಾಸನ್

    ಚೆನ್ನೈ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ್ದಕ್ಕೆ ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು ‘ಪ್ರಜಾಪ್ರಭುತ್ವದ ಮೇಲೆ ನಡೆಸಲಾದ ಸ್ಪಷ್ಟ ದಾಳಿ’ ಎಂದು ಕಿಡಿಕಾರಿದ್ದಾರೆ.

    ಜಮ್ಮು ಕಾಶ್ಮೀರವನ್ನು ಎರಡು ಭಾಗಗಳನ್ನಾಗಿ ವಿಂಗಡಿಸಿ, ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಿಸಿರುವುದು ಪ್ರಜಾಪ್ರಭುತ್ವದ ಮೇಲೆ ನಡೆದ ಸ್ಪಷ್ಟ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದು ಅತ್ಯಂತ ಆಘಾತಕಾರಿ ಹಾಗೂ ನಿರಂಕುಶಾಧಿಕಾರತ್ವ. 370ನೇ ವಿಧಿ ಮತ್ತು 35ಎ ತನ್ನದೇ ಆದ ಮೂಲ ಹೊಂದಿವೆ. ಹೀಗಾಗಿ ಈ ಕುರಿತು ಯಾವುದೇ ಬದಲಾವಣೆ ತರಬೇಕಾದಲ್ಲಿ ಸಮಾಲೋಚನೆ ನಡೆಸಿ ನಂತರ ತೀರ್ಮಾನ ಕೈಗೊಳ್ಳಬೇಕಿತ್ತು ಎಂದು ಕಳೆದ ವರ್ಷ ಮಕ್ಕಳ್ ನಿಧಿ ಮೈಯಂ ಪಕ್ಷ (ಎಂಎನ್‍ಎಂ) ಸ್ಥಾಪಿಸಿದ್ದ ನಟ ಕಮಲ್ ಹಾಸನ್ ಅಭಿಪ್ರಾಯಪಟ್ಟಿದ್ದಾರೆ.

    ಪ್ರತಿಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೆ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಮತಕ್ಕೆ ಹಾಕುವ ಮುನ್ನ ವಿರೋಧ ಪಕ್ಷಗಳೊಂದಿಗೆ ಚರ್ಚೆ ನಡೆಸಬೇಕಿತ್ತು. ಈ ಮೂಲಕ ಬಿಲ್ ಕುರಿತು ಪರಿಶೀಲನೆ ನಡೆಸಬೇಕಿತ್ತು. ಆದರೆ, ಬಲವಂತವಾಗಿ ವಿರೋಧ ಪಕ್ಷಗಳ ಬಾಯನ್ನು ಮುಚ್ಚಿಸಿ ಬಿಲ್ ಪಾಸ್ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.

    ಕೇಂದ್ರ ಸರ್ಕಾರ ಸೋಮವಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸಂವಿಧಾನಿಕ ಸವಲತ್ತುನ್ನು ಹಿಂಪಡೆದಿದ್ದು, ಈ ಮೂಲಕ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ಸ್ವಾಯತ್ತತೆಯನ್ನು ರದ್ದುಗೊಳಿಸಿದೆ. ಅಲ್ಲದೆ, ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿ, ಆದೇಶ ಹೊರಡಿಸಿದೆ.

    ಜಮ್ಮು ಕಾಶ್ಮೀರವನ್ನು ದೇಶದ ಉಳಿದ ಭಾಗಗಳೊಂದಿಗೆ ಒಟ್ಟು ಗೂಡಿಸುವುದು ಹಾಗೂ ಭಯೋತ್ಪಾದನೆಯನ್ನು ಎದುರಿಸುವುದು ನಮ್ಮ ಗುರಿಯಾಗಿದೆ ಎಂದು ಕೇಂದ್ರ ಸರ್ಕಾರ ನಿನ್ನೆಯಷ್ಟೇ ತಿಳಿಸಿತ್ತು. ಆದರೆ, ಕಾಂಗ್ರೆಸ್ ಸೇರಿದಂತೆ ವಿವಿಧ ವಿರೋಧ ಪಕ್ಷಗಳು ಈ ನಿರ್ಧಾರ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಬಹುದೊಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ. ಅಲ್ಲದೆ, ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತದೆ. ಕೇಂದ್ರ ಸರ್ಕಾರದ ಈ ನಿರ್ಧಾರ ‘ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಆಕ್ರೋಶ ವ್ಯಕ್ತಪಡಿಸಿವೆ.

    370ನೇ ವಿಧಿಯನ್ನು ರದ್ದುಗೊಳಿಸುವುದಕ್ಕೂ ಮುನ್ನ ಜಮ್ಮು ಕಾಶ್ಮೀರದಲ್ಲಿ ಅಶಾಂತಿ, ಸಾರ್ವಜನಿಕರಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ಹೆಚ್ಚು ಸೈನಿಕರನ್ನು ಸ್ಥಳಾಂತರಿಸಿ ಸಂಪೂರ್ಣ ಭದ್ರತೆಯನ್ನು ಒದಗಿಸಲಾಗಿತ್ತು. ಇದೇ ಧೈರ್ಯದಿಂದಲೇ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವ ಕುರಿತು ಘೋಷಿಸಿದರು.

    ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆ ನಂತರ ಅಮಿತ್ ಶಾ ಅವರು ರಾಜ್ಯಸಭೆಯಲ್ಲಿ ‘ಭಾರತದ ಸಂಪೂರ್ಣ ಸಂವಿಧಾನ’ ಜಮ್ಮು ಕಾಶ್ಮೀರಕ್ಕೂ ಅನ್ವಯವಾಗಲಿದೆ ಎಂದು ತಿಳಿಸಿದರು.