Tag: Central Government

  • ದುಬಾರಿ ಟ್ರಾಫಿಕ್ ದಂಡಕ್ಕೆ ಗುಜರಾತ್ ಸರ್ಕಾರದಿಂದ ಬ್ರೇಕ್

    ದುಬಾರಿ ಟ್ರಾಫಿಕ್ ದಂಡಕ್ಕೆ ಗುಜರಾತ್ ಸರ್ಕಾರದಿಂದ ಬ್ರೇಕ್

    ಗಾಂಧಿನಗರ: ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ದುಬಾರಿ ದಂಡ ವಿಧಿಸುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ಭಾರೀ ಆಕ್ಷೇಪ ಕೇಳಿಬರುತ್ತಿದ್ದು, ಇದರ ಬೆನ್ನಲ್ಲೇ ಗುಜರಾತ್ ಸರ್ಕಾರ ದಂಡ ಪ್ರಮಾಣವನ್ನು ಕಡಿತಗೊಳಿಸಿದೆ.

    ಗುಜರಾತ್ ಸಿಎಂ ವಿಜಯ್ ರೂಪಾಣಿ ಅವರು ಇಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಹೊಸ ಕಾಯ್ದೆಯಲ್ಲಿ ವಿಧಿಸುತ್ತಿರುವ ದಂಡದ ಮೊತ್ತ ಗರಿಷ್ಠ ಪ್ರಮಾಣದಲ್ಲಿದ್ದು, ಈ ಬಗ್ಗೆ ಚರ್ಚೆ ನಡೆಸಿ ಕೆಲ ದಂಡದ ಮೊತ್ತಗಳನ್ನು ಕಡಿಮೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಗುಜರಾತ್ ಸರ್ಕಾರದ ಹೊಸ ನಿಯಮಗಳಂತೆ ಹೆಲ್ಮೆಟ್ ಧರಿಸದಿದ್ದರೆ 500 ರೂ. ದಂಡವನ್ನು ನಿಗದಿ ಮಾಡಲಾಗಿದೆ. ಕೇಂದ್ರ ಸರ್ಕಾರ ಸೆ.1ರಿಂದ ಜಾರಿ ಮಾಡಿದ್ದ ಹೊಸ ತಿದ್ದುಪಡಿ ಕಾಯ್ದೆಯ ಅನ್ವಯ ಈ ಮೊತ್ತ 1 ಸಾವಿರ ರೂ. ಇತ್ತು. ಸೀಟ್ ಬೆಲ್ಟ್ ಧರಿಸದಿದ್ದರೆ 1 ಸಾವಿರ ಬದಲಾಗಿ 500 ರೂ., ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೆ ದ್ವಿಚಕ್ರ ವಾಹನ ಸವಾರರಿಗೆ 2 ಸಾವಿರ ರೂ., ಉಳಿದ ವಾಹನಗಳಿಗೆ 3 ಸಾವಿರ ರೂ. ನಿಗದಿ ಮಾಡಲಾಗಿದೆ. ಆದರೆ ಲೈಸನ್ಸ್, ಆರ್ ಸಿ, ವಿಮೆ ಮೊದಲ ಬಾರಿಗೆ ಇಲ್ಲದಿದ್ದರೆ 500 ರೂ. ದಂಡ ವಿಧಿಸಿದರೆ, 2ನೇ ಬಾರಿಗೆ ಈ ಮೊತ್ತ ಕೇಂದ್ರ ಸರ್ಕಾರ ನೀತಿಗೆ ಅಡಿ ಅನ್ವಯವಾಗಲಿದೆ. ಇದನ್ನು ಓದಿ: ಸಿದ್ಧಪಡಿಸಿಕೊಂಡ ನೆಟ್ಟಿಗರು- ವೈರಲಾಯ್ತು ವಿಡಿಯೋ

    ತ್ರಿಬಲ್ ರೈಡಿಂಗ್ ಮಾಡುವವರಿಗೆ ವಿಧಿಸಲಾಗುತ್ತಿದ್ದ 1 ಸಾವಿರ ರೂ. ದಂಡವನ್ನು 100 ರೂ.ಗಳಿಗೆ ಕಡಿಮೆ ಮಾಡಲಾಗಿದೆ. ಮಾಲಿನ್ಯ ಪ್ರಮಾಣ ಪತ್ರ ಪಡೆಯದ ವಾಹನಗಳಿಗೆ ನಿಗದಿ ಮಾಡಿದ್ದ 10 ಸಾವಿರಗಳನ್ನು ಸಣ್ಣ ವಾಹನಗಳಿಗೆ 1 ಸಾವಿರ ರೂ. ಭಾರೀ ವಾಹನಗಳಿಗೆ 3 ಸಾವಿರ ರೂ.ಗೆ ಇಳಿಸಲಾಗಿದೆ.

    ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಯ ತಿದ್ದುಪಡಿಯನ್ನು ಜಾರಿ ಮಾಡಿದ ಸಂದರ್ಭದಿಂದ ಇದುವರೆಗೂ ಭಾರೀ ಮೊತ್ತ ದಂಡ ಪಾವತಿಸಿದ್ದ ಸುದ್ದಿಗಳು ಸಾಕಷ್ಟು ಸದ್ದು ಮಾಡಿದ್ದವು. ಅಲ್ಲದೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ ನಾನು ಕೂಡ ನಿಯಮ ಉಲ್ಲಂಘಿಸಿದ ಪರಿಣಾಮ ದಂಡ ಪಾವತಿ ಮಾಡಿದ್ದೇನೆ. ಕಾನೂನು ಎಲ್ಲರಿಗೂ ಅನ್ವಯಿಸುತ್ತದೆ. ನಿಯಮ ಉಲ್ಲಂಘಿಸಿ ಅಪಘಾತದಿಂದ ಮೃತಪಟ್ಟ ವ್ಯಕ್ತಿ ಕುಟುಂಬದವರನ್ನು ನೀವು ಕೇಳಿ ನೋಡಿ. ಅವರ ನೋವು ಏನು ಎನ್ನುವುದು ಗೊತ್ತಾಗಬೇಕು. ಹೊಸ ನೀತಿಯಿಂದ ಹಿಂದೆ ಸರಿಯುವುದಿಲ್ಲ, ಕಠಿಣ ನಿಯಮಗಳು ಜಾರಿಯಾದರೆ ಮಾತ್ರ ಶಿಸ್ತು ಉಂಟಾಗಲು ಸಾಧ್ಯ ಅಭಿಪ್ರಾಯ ಪಟ್ಟಿದ್ದರು. ಆದರೆ ನಿತಿನ್ ಗಡ್ಕರಿ ಅವರು ಹೇಳಿಕೆ ಬೆನ್ನಲ್ಲೇ ಗುಜರಾತ್ ಸರ್ಕಾರವೇ ದಂಡ ಮೊತ್ತಕ್ಕೆ ಕತ್ತರಿ ಹಾಕಿದೆ. ಇದನ್ನು ಓದಿ: ಟ್ರಾಫಿಕ್ ರೂಲ್ಸ್ ಉಲ್ಲಂಘನೆ- ಬೈಕಿಗೆ 23, 24 ಸಾವಿರ ರೂ, ಆಟೋಗೆ 32 ಸಾವಿರ ರೂ. ದಂಡ

  • ವಾಹನ ಸವಾರರೇ ಎಚ್ಚರ – ನಾಳೆ ಬೆಂಗಳೂರಿನಾದ್ಯಂತ ಟ್ರಾಫಿಕ್ ಜಾಮ್

    ವಾಹನ ಸವಾರರೇ ಎಚ್ಚರ – ನಾಳೆ ಬೆಂಗಳೂರಿನಾದ್ಯಂತ ಟ್ರಾಫಿಕ್ ಜಾಮ್

    ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಬಂಧನವನ್ನು ವಿರೋಧಿಸಿ ಒಕ್ಕಲಿಗ ಸಮುದಾಯದವರು ಪ್ರತಿಭಟನಾ ರ‍್ಯಾಲಿ ಆಯೋಜಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಉದ್ಭವಿಸುವ ಸಾಧ್ಯತೆಯಿದೆ.

    ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನದಿಂದ ಬೆಳಗ್ಗೆ 11 ಗಂಟೆಗೆ ರ‍್ಯಾಲಿ ಆರಂಭವಾಗಲಿದ್ದು, ವಿವಿಧ ಸಂಘಟನೆಗಳು ಸೇರಿದಂತೆ ಒಕ್ಕಲಿಗ ಸಮುದಾಯದ ಜನರು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಡಿಕೆಶಿ ಅಭಿಮಾನಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಸಾಮಾನ್ಯವಾಗಿ ನಗರದಲ್ಲಿ ಯಾವುದೇ ಬೃಹತ್ ಪ್ರತಿಭಟನೆ ನಡೆದರೂ ಕೂಡ ಸಾರ್ವಜನಿಕರು ಟ್ರಾಫಿಕ್ ಸಮಸ್ಯೆ ಎದುರಿಸುತ್ತಾರೆ. ನಾಳೆಯ ಪ್ರತಿಭಟನೆಯಲ್ಲಿ ಸುಮಾರು 50 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.

    ನಾಳೆ ಬೆಳಗ್ಗೆ 11 ಗಂಟೆಗೆ ಆರಂಭವಾಗುವ ಈ ರ‍್ಯಾಲಿ ಸಂಜೆಯವರೆಗೂ ಮುಂದುವರೆಯುವ ಸಾಧ್ಯತೆ ಇದ್ದು, ಪೊಲೀಸರು ಈಗಾಗಲೇ ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಲು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಬಸವನಗುಡಿಯ ನ್ಯಾಷನಲ್ ಕಾಲೇಜಿನಿಂದ ಆರಂಭವಾಗುವ ಈ ರ‍್ಯಾಲಿಯನ್ನು ಫ್ರೀಡಂ ಪಾರ್ಕ್ ವರೆಗೂ ನಡೆಸಲಿದ್ದೇವೆ ಎಂದು ಈಗಾಗಲೇ ಒಕ್ಕಲಿಗ ಸಮುದಾಯದ ಮುಖಂಡರು ಘೋಷಿಸಿದ್ದಾರೆ.

    ಐಟಿ, ಇಡಿ, ಸಿಬಿಐ ಸಂಸ್ಥೆಗಳಿಂದ ಟಾರ್ಗೆಟ್ ಮಾಡಿ ಒಕ್ಕಲಿಗರ ದಮನ ಮಾಡುತ್ತಿದೆ. ದುರುದ್ದೇಶಪೂರ್ವಕವಾಗಿ ಡಿಕೆಶಿ ಬಂಧನ ಮಾಡಲಾಗಿದೆ. ಕಾಫಿ ಕೆಫೆ ಮಾಲೀಕ ಸಿದ್ಧಾರ್ಥ್ ಆತ್ಮಹತ್ಯೆಗೆ ಕೇಂದ್ರ ಸರ್ಕಾರದ ನೀತಿಯೇ ಕಾರಣ ಎಂದು ಆರೋಪಿಸಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಒಕ್ಕಲಿಗ ಸಮುದಾಯ ಸಿಡಿದೆದ್ದಿದೆ. ಹಿನ್ನೆಲೆಯಲ್ಲಿಯೇ ನಾಳೆ ಪ್ರತಿಭಟನೆಯನ್ನು ಬಿಜೆಪಿ ಸರ್ಕಾರದ ವಿರುದ್ಧ ಆಯೋಜಿಸಲಾಗಿದೆ.

    ಎಲ್ಲೆಲ್ಲಿ ಸಮಸ್ಯೆ ಆಗಬಹುದು?
    ಪ್ರತಿಭಟನಾ ಮೆರವಣಿಗೆ 11 ಗಂಟೆಗೆ ಆರಂಭವಾಗಲಿದೆ ಎಂಬ ಮಾಹಿತಿ ಲಭಿಸಿದ್ದು, ಆದರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವುದರಿಂದ ಬೆಳಗ್ಗೆ 8 ಗಂಟೆ ವೇಳೆಗೆ ಟ್ರಾಫಿಕ್ ಜಾಮ್ ಉಂಟಾಗುವ ನಿರೀಕ್ಷೆ ಇದೆ. ಪರಿಣಾಮ ನಗರದ ಜೆ.ಸಿ. ರೋಡ್, ಕೆ.ಆರ್.ಮಾರ್ಕೆಟ್, ಟೌನ್ ಹಾಲ್, ಕಾರ್ಪೋರೇಷನ್ ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್, ಕೆ.ಆರ್.ಸರ್ಕಲ್, ಆನಂದರಾವ್ ವೃತ್ತ, ನೃಪತುಂಗ ರೋಡ್, ವಿಧಾನಸೌಧ ಸುತ್ತಮುತ್ತ ಹಾಗೂ ಮೆಜೆಸ್ಟಿಕ್ ಸುತ್ತಮುತ್ತ ಭಾರೀ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

    ಪ್ರತಿಭಟನೆ ಸಾಗುವ ಹಾದಿಯಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೂ ವಾಹನ ಸಂಚಾರ ನಿಷೇಧ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಅಲ್ಲದೇ ಯಾವುದೇ ಅಶಾಂತಿ ನಡೆಯದಂತೆ 2 ಸಾವಿರ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದೆ. ಆಸ್ಪತ್ರೆಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಸಂಚಾರ ನಿಷೇಧ ಆಗಿರುವುದರಿಂದ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ ಎಂದು ಇದೇ ವೇಳೆ ಪೊಲೀಸ್ ಆಯುಕ್ತರು ಹೆಚ್ಚಿನ ಮಾಹಿತಿ ನೀಡಿದ್ದಾರೆ.

  • ಬಿಎಸ್‍ವೈ ಹಠ ಮಾಡಿ ಸಿಎಂ ಆದ್ರು: ಸಿದ್ದರಾಮಯ್ಯ

    ಬಿಎಸ್‍ವೈ ಹಠ ಮಾಡಿ ಸಿಎಂ ಆದ್ರು: ಸಿದ್ದರಾಮಯ್ಯ

    – ಮೋದಿ ಗೆಲುವಿಗೆ ಇವಿಎಂ ದೋಷ ಕಾರಣ

    ಬೆಂಗಳೂರು: ಸಮ್ಮಿಶ್ರ ಸರ್ಕಾರ ಕೆಡವಿ ಸಿಎಂ ಆದ ಯಡಿಯೂರಪ್ಪ ಒಲ್ಲದ ಶಿಶು ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಹಿಂದುಳಿದ ವರ್ಗಗಳ ವಿಭಾಗದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಒಲ್ಲದ ಶಿಶು. ಬಿಜೆಪಿ ಹೈಕಮಾಂಡ್‍ಗೆ ಯಡಿಯೂರಪ್ಪರನ್ನ ಸಿಎಂ ಮಾಡೋದು ಇಷ್ಟ ಇರಲಿಲ್ಲ. ಆದರೆ ಹಠ ಮಾಡಿ ಯಡಿಯೂರಪ್ಪ ಸಿಎಂ ಆದರು. ಹೀಗಾಗಿ ಅವರಿಗೆ ಬ್ರೇಕ್ ಹಾಕೋದಕ್ಕೆ 3 ಜನ ಡಿಸಿಎಂರನ್ನು ಬಿಜೆಪಿ ಹೈಕಮಾಂಡ್ ಮಾಡಿದೆ ಎಂದು ಹೇಳಿದರು.

    ಈ ಎಲ್ಲಾ ಕಾರಣದಿಂದ ಬಿಜೆಪಿ ಸರ್ಕಾರ ಎಷ್ಟು ದಿನ ಇರುತ್ತೋ, ಯಡಿಯೂರಪ್ಪ ಎಷ್ಟು ದಿನ ಸಿಎಂ ಆಗಿ ಇರುತ್ತಾರೋ ಗೊತ್ತಿಲ್ಲ. ಹಾಲು ಕುಡಿದ ಮಕ್ಕಳು ಬದುಕಲ್ಲ. ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತಾರಾ ಎಂದು ಯಡಿಯೂರಪ್ಪರ ಕಾಲೆಳೆದರು. ಯಡಿಯೂರಪ್ಪರಿಗೆ ಬಹುಮತ ಇರಲಿಲ್ಲ. 17 ಜನರನ್ನ ಆಪರೇಷನ್ ಮಾಡಿ, ಆಮಿಷ ತೋರಿಸಿ, ಕುದುರೆ ವ್ಯಾಪಾರ ಮಾಡಿ ಹಿಂಬಾಗಿಲಿನಿಂದ ಯಡಿಯೂರಪ್ಪ ಸಿಎಂ ಆದರು. ಹೀಗಾಗಿ ಈ ಸರ್ಕಾರ ಎಷ್ಟು ದಿನ ಇರುತ್ತೋ ಗೊತ್ತಿಲ್ಲ ಎಂದರು.

    ಇನ್ನು ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧವೂ ಕಿಡಿಕಾರಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಚಿದಂಬರಂ, ಡಿಕೆ ಶಿವಕುಮಾರ್ ಅವರನ್ನು ಸುಮ್ಮನೆ ಬಂಧನ ಮಾಡಿದೆ. ಕಾಂಗ್ರೆಸ್ ಮುಗಿಸೋದು ಅವರ ಪ್ಲ್ಯಾನ್. ಆದರೆ ಕಾಂಗ್ರೆಸ್ ಮುಗಿಸೋದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಗುಡುಗಿದರು.

    ಮತ್ತೆ ಇವಿಎಂ ಮೇಲೆ ದೋಷ ಹೊರಿಸಿದ ಸಿದ್ದರಾಮಯ್ಯ, ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಇವಿಎಂ ದೋಷ ಆಗಿತ್ತು. ಹೀಗಾಗಿಯೇ ಮೋದಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರು ಎಂದು ಇವಿಎಂ ದೋಷ ಮೋದಿ ಗೆಲುವಿಗೆ ಕಾರಣ ಎಂದು ರಾಜ್ಯ ಮತ್ತು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿ ಮೋದಿ ಸಾಧನೆ ಶೂನ್ಯ ಎಂದು ಕಿಡಿಕಾರಿದರು.

  • ಅಕ್ರಮ ವಲಸಿಗರನ್ನು ದೇಶದಿಂದ ಓಡಿಸುತ್ತೇವೆ: ಅಮಿತ್ ಶಾ

    ಅಕ್ರಮ ವಲಸಿಗರನ್ನು ದೇಶದಿಂದ ಓಡಿಸುತ್ತೇವೆ: ಅಮಿತ್ ಶಾ

    ದಿಸ್ಪುರ್: ದೇಶದಲ್ಲಿ ಒಬ್ಬನೇ ಒಬ್ಬ ಅಕ್ರಮ ವಲಸಿಗನಿಗೆ ಉಳಿದುಕೊಳ್ಳಲು ಅವಕಾಶ ನೀಡುವುದಿಲ್ಲ, ಅಕ್ರಮವಾಗಿ ಬಂದ ಎಲ್ಲರನ್ನೂ ಓಡಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಸ್ಸಾಂನಲ್ಲಿ ಗುಡುಗಿದ್ದಾರೆ.

    ಗೃಹ ಸಚಿವರಾದ ಬಳಿಕ ಅಸ್ಸಾಂಗೆ ಮೊದಲ ಬಾರಿ ಭೇಟಿಕೊಟ್ಟ ಅಮಿತ್ ಶಾ ಅವರು ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಕುರಿತಾಗಿ ಮಾತನಾಡಿದ್ದಾರೆ. ಎನ್‌ಆರ್‌ಸಿ ಕುರಿತಾಗಿ ವಿವಿಧ ರೀತಿಯ ಪ್ರಶ್ನೆಗಳು, ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆದರೆ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಒಬ್ಬನೇ ಒಬ್ಬ ಅಕ್ರಮ ವಲಸಿಗನಿಗೆ ದೇಶದಲ್ಲಿ ಉಳಿದುಕೊಳ್ಳಲು ಅವಕಾಶ ನೀಡುವುದಿಲ್ಲ, ಓಡಿಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಅಸ್ಸಾಂನಲ್ಲಿ NRC ಪಟ್ಟಿ ಅಂತಿಮ- 19 ಲಕ್ಷ ಜನರು ಪಟ್ಟಿಯಿಂದ ಹೊರಗೆ

    ಹಾಗೆಯೇ ಕೇಂದ್ರ ಸರ್ಕಾರ ಈಶಾನ್ಯ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿರುವ 371 ಅನುಚ್ಚೇದವನ್ನು ರದ್ದು ಮಾಡುವ ಯಾವುದೇ ಉದ್ದೇಶವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಗೂ, ಈಶಾನ್ಯ ರಾಜ್ಯಗಳಲ್ಲಿ ಜಾರಿಯಲ್ಲಿರುವ 371 ಪರಿಚ್ಚೇದಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಈ ಸ್ಥಾನಮಾನವನ್ನು ರದ್ದು ಮಾಡುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಕೈ ಹಾಕುವುದಿಲ್ಲ. ಈ ಬಗ್ಗೆ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂದು ಅಮಿತ್ ಶಾ ತಿಳಿಸಿದ್ದಾರೆ.

    ಅಂತಿಮ ಎನ್‌ಆರ್‌ಸಿ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ, ಕೆಲವು ಬಿಜೆಪಿ ನಾಯಕರು ಅಸ್ಸಾಂನ ಜನಸಂಖ್ಯೆಯಲ್ಲಿ 18% ಜನರು ಬಂಗಾಳಿ ಹಿಂದೂಗಳ ಇದ್ದಾರೆ, ಆದರೆ ಅವರನ್ನು ಪಕ್ಷದ ವೋಟ್ ಬ್ಯಾಂಕಿನಿಂದ ಹೊರಗಿಡಲಾಗಿದೆ ಎಂದು ನಿರಾಶೆ ವ್ಯಕ್ತಪಡಿಸಿದ್ದರು. ಅಂತಿಮ ಪಟ್ಟಿಗೆ ಹೊರತಾಗಿ, ವಲಸೆ ಮುಸ್ಲಿಮರ ಪ್ರಾಬಲ್ಯವಿರುವ ರಾಜ್ಯದ ಕೆಲ ಜಿಲ್ಲೆಗಳ ಜನರಲ್ಲಿ ತಮ್ಮನ್ನೂ ವೋಟ್ ಬ್ಯಾಂಕಿನಿಂದ ಹೊರಗಿಡಬಹುದು ಎಂಬ ಆತಂಕ ಮನೆಮಾಡಿದೆ.

    ಈ ಹಿಂದೆ ಅಮಿತ್ ಶಾ ಅವರು ರಾಜಸ್ಥಾನದಲ್ಲಿ ಚುನಾವಣೆ ಪ್ರಚಾರಕ್ಕೆ ತೆರೆಳಿದ್ದ ವೇಳೆ, ಬಾಂಗ್ಲಾದೇಶಿ ವಲಸಿಗರು ಗೆದ್ದಲುಗಳು ಇದ್ದಂತೆ ಅವರನ್ನು ಮತದಾರರ ಪಟ್ಟಿದಿಂದ ಹೊರ ಇಡಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು.

  • ಅಭಿವೃದ್ಧಿ ಇಲ್ಲದ 100 ದಿನ ಪೂರೈಸಿದ ಮೋದಿ ಸರ್ಕಾರಕ್ಕೆ ಅಭಿನಂದನೆ: ರಾಹುಲ್ ಗಾಂಧಿ

    ಅಭಿವೃದ್ಧಿ ಇಲ್ಲದ 100 ದಿನ ಪೂರೈಸಿದ ಮೋದಿ ಸರ್ಕಾರಕ್ಕೆ ಅಭಿನಂದನೆ: ರಾಹುಲ್ ಗಾಂಧಿ

    ನವದೆಹಲಿ: ಅಭಿವೃದ್ಧಿ ಮಾಡದೇ 100 ದಿನವನ್ನು ಯಶಸ್ವಿಯಾಗಿ ಪೂರೈಸಿದ ಮೋದಿ ಸರ್ಕಾರಕ್ಕೆ ಅಭಿನಂದನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 2ನೇ ಬಾರಿ ಆಯ್ಕೆ ಆಗಿ ಅಧಿಕಾರಕ್ಕೆ ಬಂದು 100 ದಿನಗಳನ್ನು ಪೂರೈಸಿದೆ. ಈ ಅವಧಿಯಲ್ಲಿ ಸರ್ಕಾರದ ಬೆಳವಣಿಗೆಗಳ ಕುರಿತು ಕೇಂದ್ರ ಸರ್ಕಾರ ಪ್ರಕಟಣೆ ಬಿಡುಗಡೆ ಮಾಡಿದೆ. ಇದಕ್ಕೆ ಕಾಂಗ್ರೆಸ್ ಬಿಜೆಪಿಯ ಕಾಲೆಳೆದಿದೆ. ಸರ್ಕಾರ ಈ ನೂರು ದಿನಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ನಾಯಕತ್ವದ ಕೊರತೆ ಮತ್ತು ಸರ್ಕಾರವನ್ನು ಟೀಕಿಸುವ ಮಾಧ್ಯಮಗಳ ಕತ್ತು ಹಿಸುಕುವ ಪ್ರಯತ್ನಗಳು ನಡೆಸುತ್ತಿವೆ ಎಂದು ರಾಹುಲ್ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ:ನಮೋ 2.0ಗೆ 100 ದಿನ- ನಮ್ಮ ಸರ್ಕಾರ ಭರವಸೆಯ ಸಂಕೇತ ಎಂದ ಅಮಿತ್ ಶಾ

    ಟ್ವೀಟ್‍ನಲ್ಲಿ ಏನಿದೆ?
    ಅಭಿವೃದ್ಧಿ ಮಾಡದೆ 100 ದಿನ ಪೂರೈಸಿರುವ ಮೋದಿ ಸರ್ಕಾರಕ್ಕೆ ಅಭಿನಂದನೆಗಳು. ಪ್ರಜಾಪ್ರಭುತ್ವ ವಿರೋಧಿ ಧೋರಣೆ ಮುಂದುವರಿದಿದೆ. ಮಾಧ್ಯಮಗಳ ಧ್ವನಿ ದಮನವಾಗಿದೆ. ಯೋಜನೆಗಳ ಕೊರತೆ, ಸೂಕ್ತ ನಾಯಕತ್ವದ ಕೊರತೆ ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿ ಹರಿಹಾಯ್ದಿದ್ದಾರೆ. ಜೊತೆಗೆ ಟ್ವೀಟ್‍ನಲ್ಲಿ #100DaysNoVikas ಎಂಬ ಹ್ಯಾಶ್ ಟ್ಯಾಗ್ ಕೂಡ ಹಾಕಿದ್ದಾರೆ.

  • ‘ನಿಮ್ಮ ಜೊತೆ ನಾವಿದ್ದೇವೆ’- ಡಿಕೆಶಿ ತಾಯಿಗೆ ಧೈರ್ಯ ತುಂಬಿದ ಎಚ್‍ಡಿಕೆ

    ‘ನಿಮ್ಮ ಜೊತೆ ನಾವಿದ್ದೇವೆ’- ಡಿಕೆಶಿ ತಾಯಿಗೆ ಧೈರ್ಯ ತುಂಬಿದ ಎಚ್‍ಡಿಕೆ

    ರಾಮನಗರ: ಜಾರಿ ನಿರ್ದೇಶನಾಲಯದ ಬಂಧನದಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಇಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಭೇಟಿ ನೀಡಿದ್ದರು. ಈ ವೇಳೆ ಮಗನ ಬಂಧನದ ನೋವಿನಲ್ಲಿರುವ ಡಿಕೆಶಿ ಅವರ ತಾಯಿ ಗೌರಮ್ಮ ಅವರಿಗೆ ಸಂತ್ವಾನ ಹೇಳಿದರು.

    ರಾಮನಗರದ ದೊಡ್ಡಲಹಳ್ಳಿ ನಿವಾಸಕ್ಕೆ ಭೇಟಿ ನೀಡಿದ್ದ ಎಚ್‍ಡಿಕೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ಈ ಸಂದರ್ಭದಲ್ಲಿ ಡಿಕೆಶಿ ಅವರ ತಾಯಿಯ ಆರ್ಶೀವಾದವನ್ನು ಪಡೆದರು. ಕುಮಾರಸ್ವಾಮಿ ಅವರ ಎದುರು ತಮ್ಮ ನೋವನ್ನು ಹಂಚಿಕೊಂಡ ಡಿಕೆಶಿ ಅವರ ತಾಯಿ ಅವರು ಕೈ ಮುಗಿದು ಕಣ್ಣೀರಿಟ್ಟರು. ಈ ಸಂದರ್ಭದಲ್ಲಿ ಎಚ್‍ಡಿಕೆ ಅವರು ಧೈರ್ಯ ಹೇಳಿ, ನಿಮ್ಮೊಂದಿಗೆ ನಾವು ಇದ್ದೇವೆ ಎಂದರು.

    ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್‍ಡಿಕೆ ಅವರು, ಪ್ರಸ್ತುತ ಉಂಟಾಗಿರುವ ಸನ್ನಿವೇಶ ನಿನ್ನೆ, ಮೊನ್ನೆಯಿಂದ ಆರಂಭವಾಗಿಲ್ಲ. ಗುಜರಾತ್ ರಾಜ್ಯಸಭಾ ಚುನಾವಣೆಯ ವೇಳೆ ಪಕ್ಷದ ನಿಷ್ಠಾವಂತ ವ್ಯಕ್ತಿಯಾಗಿ ಶಾಸಕರನ್ನು ರಕ್ಷಣೆ ಮಾಡಿದ್ದರು. ಆ ವೇಳೆ ಡಿಕೆ ಶಿವಕುಮಾರ್ ಅವರಿಗೆ ಫೋನ್ ಕರೆ ಮಾಡಿದ್ದ ಸಂಗತಿ ಎಲ್ಲರಿಗೂ ತಿಳಿದಿದೆ. ಆದರೆ ಅವರು ಪಕ್ಷದ ಕಾರ್ಯವನ್ನು ಮಾಡಿದ್ದರಿಂದ ಬಿಜೆಪಿಗೆ ರಾಜ್ಯಸಭೆಯ ಚುನಾವಣೆಯಲ್ಲಿ ಹಿನ್ನಡೆಯಾಗಿತ್ತು. ಅದಕ್ಕಾಗಿಯೇ ಅವರನ್ನು ಟಾರ್ಗೆಟ್ ಮಾಡಿ ಕೇಂದ್ರ ಸರ್ಕಾರದ ಅಡಿ ಇರುವ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಈ ರೀತಿ ಮಾಡಿದ್ದಾರೆ ಎಂದರು.

    ಈಗಾಗಲೇ ಹಿರಿಯ ಐಎಎಸ್ ಅಧಿಕಾರಿ ವಿಠಾಲ್ ಅವರು 2012 ಇಸವಿಯಲ್ಲೇ ಕೇಂದ್ರದಲ್ಲಿ ಇರುವ ಸರ್ಕಾರಗಳು ಯಾವ ರೀತಿ ಇಡಿ, ಸಿಬಿಐ ಸೇರಿದಂತೆ ಇತರೆ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಎಂಬ ಬಗ್ಗೆ ಪುಸ್ತಕವನ್ನೇ ಬರೆದಿದ್ದಾರೆ. ಆದರೆ ಇದನ್ನೇ ಬಿಜೆಪಿ ಮುಂದುವರಿಸಿದರೆ ಅವರಿಗೂ ಇದೇ ಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಕೆ ನೀಡಿದರು.

    ಆಪರೇಷನ್ ಕಮಲ: ಸಮ್ಮಿಶ್ರ ಸರ್ಕಾರದ ಶಾಸಕರನ್ನು ಖರೀದಿ ಮಾಡಲು ಬಿಜೆಪಿ ಅವರು ಏನು ಮಾಡಿದ್ದಾರೆ ಎಂಬುವುದು ಎಲ್ಲರಿಗೂ ತಿಳಿದಿದೆ. ಆದರೆ ಈ ಬಗ್ಗೆ ಯಾವ ಕ್ರಮವನ್ನು ಕೈಗೊಂಡಿಲ್ಲ. ಆದರೆ ವಿಚಾರಣೆಗೆ ಸಹಕಾರ ನೀಡುತ್ತಿದ್ದರು ಕೂಡ, ಹಿರಿಯರಿಗೆ ಪೂಜೆ ಕೂಡ ಮಾಡಲು ಬಿಡದಂತೆ ವಶಕ್ಕೆ ಪಡೆದಿರುವ ಇಡಿ ಅಧಿಕಾರಿಗಳ ಕ್ರಮ ಸರಿಯಲ್ಲ. ಈಗಾಗಲೇ ಎಲ್ಲಾ ಮಾಹಿತಿ ಪಡೆದಿದ್ದರು ಕೂಡ ಅವರನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಬಿಜೆಪಿ ಅವರು ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳ ಶಾಸಕರನ್ನು ಖರೀದಿ ಮಾಡುತ್ತಿದ್ದಾರೆ. ಇದಕ್ಕೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ದೇಶದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭ ಎದುರಾಗಿದೆ. ನಾನು ಅಧಿಕಾರದಲ್ಲಿ ಇದ್ದ ವೇಳೆ ಆಡಿಯೋ ಪ್ರಕರಣದ ಬಗ್ಗೆ ಅಧಿಕಾರ ದುರುಪಯೋಗ ಪಡಿಸಿಕೊಂಡು ಏನಾದರೂ ಮಾಡಬಹುದಿತ್ತು. ಆದರೆ ನಾನು ಆ ರೀತಿ ಮಾಡಿಲ್ಲ ಎಂದರು.

    ನನ್ನ ವಿರುದ್ಧವೂ ಕೂಡ ಹಲವು ಮಾಧ್ಯಮಗಳು ವರದಿ ಮಾಡಿದೆ. ಆದರೆ ಈ ಬಗ್ಗೆ ಅವರಿಗೆ ಮಾಹಿತಿಯೇ ಇಲ್ಲ. ನಾನು ಶುದ್ಧವಾಗಿದ್ದು, ಐಎಂಎ ಪ್ರಕರಣದಲ್ಲಿ ನನ್ನ ಹೆಸರನ್ನು ತರುತ್ತಿದ್ದಾರೆ. ಆದರೆ ಪ್ರಕರಣದ ಮುಖ್ಯ ಆರೋಪಿಯನ್ನು ಬಂಧಿಸಲು ನಮ್ಮ ಸರ್ಕಾರವೇ ಕಾರಣ. ಸದ್ಯ ನಾನು ಡಿಕೆಶಿ ಕುಟುಂಬ ಬೆಂಬಲಕ್ಕೆ ಇದ್ದು, ಕಾನೂನು ಹೋರಾಟಕ್ಕೂ ಬೇಗದ ಬೆಂಬಲ ನೀಡುತ್ತೇವೆ ಎಂದರು.

  • ಟ್ರಾಫಿಕ್ ರೂಲ್ಸ್ ಫಾಲೋ ಮಾಡೋದ್ರಲ್ಲಿ ಮೋದಿಯೇ ಬೆಸ್ಟ್

    ಟ್ರಾಫಿಕ್ ರೂಲ್ಸ್ ಫಾಲೋ ಮಾಡೋದ್ರಲ್ಲಿ ಮೋದಿಯೇ ಬೆಸ್ಟ್

    ಬೆಂಗಳೂರು: ರಾಜ್ಯದ ನಾಯಕರು ಪಾಲಿಸದೇ ಇದ್ದರೆ ಪ್ರಧಾನಿ ಮೋದಿ ಸಂಚಾರಿ ನಿಯಮವನ್ನು ಚಾಚೂ ತಪ್ಪದೇ ಪಾಲಿಸುತ್ತಾರೆ. ಅಪ್ಪಿತಪ್ಪಿಯೂ ಸಹ ಸೀಟ್ ಬೆಲ್ಟ್ ಧರಿಸುವುದನ್ನು ಮರೆಯುವುದಿಲ್ಲ. ಆದರೆ, ರಾಜ್ಯದಲ್ಲಿ ಮುಖ್ಯಮಂತ್ರಿ, ಗೃಹ ಸಚಿವರು ಸೇರಿ ಬಹುತೇಕರು ಸೀಟ್ ಬೆಲ್ಟ್ ಧರಿಸುವುದೇ ಇಲ್ಲ.

    ಜನಸಾಮಾನ್ಯರು ಸಂಚಾರಿ ನಿಯಮ ಪಾಲಿಸುತ್ತಿಲ್ಲ ಎಂದು ಸಾವಿರಾರು ರೂ.ಗೆ ಕೇಂದ್ರ ಸರ್ಕಾರ ದಂಡ ಹೆಚ್ಚಿಸಿದೆ. ಆದರೆ, ಸಂಚಾರಿ ನಿಯಮ ಪಾಲಿಸಿ ಇತರರಿಗೆ ಮಾದರಿಯಾಗಬೇಕಿದ್ದ ಜನಪ್ರತಿನಿಧಿಗಳೇ ನಿರ್ಲಕ್ಷ್ಯ ವಹಿಸಿದ್ದು, ಕನಿಷ್ಟ ಸೀಟ್ ಬೆಲ್ಟ್ ಸಹ ಹಾಕದೆ ವಾಹನದಲ್ಲಿ ಪ್ರಯಾಣಿಸುತ್ತಿದ್ದಾರೆ ಎಂಬುದು ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ವೇಳೆ ಬಹಿರಂಗವಾಗಿದೆ.

    ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರತಿ ದಿನ ಇದೇ ರೀತಿ ರೂಲ್ಸ್ ಬ್ರೇಕ್ ಮಾಡುತ್ತಾರೆ. ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್ ವೇಳೆ ಇದು ಬಹಿರಂಗವಾಗಿದ್ದು, ಸೆಪ್ಟೆಂಬರ್ 4ರಂದು ಸೆರೆ ಹಿಡಿದಿದ್ದ ದೃಶ್ಯದಲ್ಲಿಯೂ ಸಹ ಬಿಎಸ್‍ವೈ ಸೀಟ್ ಬೆಲ್ಟ್ ಧರಿಸಿರಲಿಲ್ಲ. ನಿನ್ನೆಯ ದೃಶ್ಯದಲ್ಲಿಯೂ ಸಹ ಯಡಿಯೂರಪ್ಪ ಸೀಟ್ ಬೆಲ್ಟ್ ಧರಿಸಿರಲಿಲ್ಲ. ಕಾರ್ಯನಿಮಿತ್ತ ತಮ್ಮ ನಿವಾಸ ಧವಳಗಿರಿಯಿಂದ ಕಾರಲ್ಲಿ ಹೊರಟಾಗ ಯಥಾ ಪ್ರಕಾರ ಸೀಟ್ ಬೆಲ್ಟ್ ಹಾಕಿಕೊಳ್ಳದೇ ಪ್ರಯಾಣಿಸಿದರೂ ಪೊಲೀಸರು ಈ ಬಗ್ಗೆ ಗಮನವೇ ಹರಿಸಲಿಲ್ಲ.

    ದೇಶದ ಪ್ರಧಾನಿ ನರೇಂದ್ರ ಮೋದಿ ಅಚ್ಚುಕಟ್ಟಾಗಿ ಸಂಚಾರಿ ನಿಯಮ ಪಾಲಿಸುತ್ತಾರೆ. ಕಾರಿನಲ್ಲಿ ಕುಳಿತ ತಕ್ಷಣ ಮೋದಿ ಸೀಟ್ ಬೆಲ್ಟ್ ಹಾಕಿಕೊಳ್ತಾರೆ. ತಾನು ಪ್ರಧಾನಿ, ದೇಶವನ್ನು ಆಳುವವನು ಅಂತಾ ಮೋದಿ ಎಲ್ಲೂ ರೂಲ್ಸ್ ಬ್ರೇಕ್ ಮಾಡುವುದಿಲ್ಲ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪನವರು ಮಾತ್ರ ನಾನು ರಾಜ್ಯದ ಸಿಎಂ ನಾನೇಕೆ ಸಂಚಾರಿ ನಿಯಮ ಪಾಲಿಸಬೇಕು ಎಂಬ ಧೋರಣೆಯನ್ನು ಅನುಸರಿಸುತ್ತಿದ್ದಾರೆ.

  • ನಾಯಕರ ‘ದಂಡ’ಯಾತ್ರೆ – ಟ್ರಾಫಿಕ್ ನಿಯಮಕ್ಕೆ ಸಿಎಂ ಡೋಂಟ್‍ಕೇರ್

    ನಾಯಕರ ‘ದಂಡ’ಯಾತ್ರೆ – ಟ್ರಾಫಿಕ್ ನಿಯಮಕ್ಕೆ ಸಿಎಂ ಡೋಂಟ್‍ಕೇರ್

    ಬೆಂಗಳೂರು: ಟ್ರಾಫಿಕ್ ನಿಯಮ ಸೆ.1 ರಿಂದ ಜಾರಿಯಾಗಿದ್ದರೂ ರಾಜ್ಯದಲ್ಲಿ ಜನರಿಗೆ ಮಾದರಿಯಾಗಬೇಕಾದ ವ್ಯಕ್ತಿಗಳೇ ಪಾಲನೆ ಮಾಡುವಲ್ಲಿ ವಿಫಲರಾಗಿದ್ದಾರೆ.

    ಹೌದು. ಜನಸಾಮಾನ್ಯರು ಸಂಚಾರಿ ನಿಯಮ ಪಾಲಿಸುತ್ತಿಲ್ಲ ಎಂದು ಸಾವಿರಾರು ರೂ.ಗೆ ಕೇಂದ್ರ ಸರ್ಕಾರ ದಂಡ ಹೆಚ್ಚಿಸಿದೆ. ಆದರೆ, ಸಂಚಾರಿ ನಿಯಮ ಪಾಲಿಸಿ ಇತರರಿಗೆ ಮಾದರಿಯಾಗಬೇಕಿದ್ದ ಜನಪ್ರತಿನಿಧಿಗಳೇ ನಿರ್ಲಕ್ಷ್ಯ ವಹಿಸಿದ್ದು, ಕನಿಷ್ಟ ಸೀಟ್ ಬೆಲ್ಟ್ ಸಹ ಹಾಕದೇ ವಾಹನದಲ್ಲಿ ಪ್ರಯಾಣಿಸುತ್ತಿರುವ ವಿಚಾರ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ವೇಳೆ ಬಹಿರಂಗವಾಗಿದೆ.

    ಸಂಚಾರಿ ನಿಯಮದ ಪ್ರಕಾರ ಕಾರಲ್ಲಿ ಪ್ರಯಾಣಿಸುವಾಗ ಡ್ರೈವರ್ ಜೊತೆ ಸಹ ಪ್ರಯಾಣಿಕರೂ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯವಾಗಿದೆ. ಇಲ್ಲವಾದಲ್ಲಿ ಒಂದು ಸಾವಿರ ರೂಪಾಯಿ ದಂಡ ವಿಧಿಸಬೇಕು. ಆದರೆ, ಕಾರಿನ ಮುಂದಿನ ಸೀಟ್‍ನಲ್ಲಿ ಕೂರುವ ಸಿಎಂ ಯಡಿಯೂರಪ್ಪನವರು ಸೀಟ್ ಬೆಲ್ಟ್ ಧರಿಸುವುದೇ ಇಲ್ಲ. ಇದನ್ನು ನೋಡಿಯೂ ಸಹ ಪೊಲೀಸರು ಸಿಎಂಗೆ ಸೆಲ್ಯೂಟ್ ಮಾಡಿ ಹಾಗೇ ಕಳಿಸಿಕೊಡುತ್ತಾರೆ. ಇದು ಒಂದು ದಿನದ ಕಥೆಯಲ್ಲ ಪ್ರತಿನಿತ್ಯವೂ ಸಿಎಂ ಬಿ.ಎಸ್.ಯಡಿಯೂರಪ್ಪನವರು ಸೀಟ್ ಬೆಲ್ಟ್ ಧರಿಸದೇ ಪ್ರಯಾಣಿಸುತ್ತಾರೆ.

    ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರತಿ ದಿನ ಇದೇ ರೀತಿ ರೂಲ್ಸ್ ಬ್ರೇಕ್ ಮಾಡುತ್ತಾರೆ. ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್ ವೇಳೆ ಇದು ಬಹಿರಂಗವಾಗಿದ್ದು, ಸೆಪ್ಟೆಂಬರ್ 4ರಂದು ಸೆರೆ ಹಿಡಿದಿದ್ದ ದೃಶ್ಯದಲ್ಲಿಯೂ ಸಹ ಬಿಎಸ್‍ವೈ ಸೀಟ್ ಬೆಲ್ಟ್ ಧರಿಸಿರಲಿಲ್ಲ. ನಿನ್ನೆಯ ದೃಶ್ಯದಲ್ಲಿಯೂ ಸಹ ಯಡಿಯೂರಪ್ಪ ಸೀಟ್ ಬೆಲ್ಟ್ ಧರಿಸಿರಲಿಲ್ಲ. ಕಾರ್ಯನಿಮಿತ್ತ ತಮ್ಮ ನಿವಾಸ ಧವಳಗಿರಿಯಿಂದ ಕಾರಲ್ಲಿ ಹೊರಟಾಗ ಯಥಾ ಪ್ರಕಾರ ಸೀಟ್ ಬೆಲ್ಟ್ ಹಾಕಿಕೊಳ್ಳದೇ ಪ್ರಯಾಣಿಸಿದ್ದರೂ ಪೊಲೀಸರೂ ಸಹ ಈ ಕುರಿತು ಗಮನ ಸೆಳೆಯಲಿಲ್ಲ.

    ರಾಜ್ಯದ ಕಾನೂನು ತಮ್ಮ ಕೈಯಲ್ಲಿ ಹೊಂದಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಸೀಟ್ ಬೆಲ್ಟ್ ಹಾಕಿಕೊಳ್ಳುವುದಿರಲಿ, ಅವರ ಡ್ರೈವರ್ ಸಹ ಸೀಟ್ ಬೆಲ್ಟ್ ಧರಿಸುವುದಿಲ್ಲ ಎಂಬುದು ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ವೇಳೆ ಬಹಿರಂಗವಾಗಿದೆ.

    ಟ್ರಾಫಿಕ್ ರೂಲ್ಸ್ ಫಾಲೋ ಮಾಡುವ ವಿಚಾರದಲ್ಲಿ ಕೇವಲ ಇವರಿಗಷ್ಟೇ ಉದಾಸೀನ ಇಲ್ಲ. ಉಳಿದ ರಾಜಕಾರಣಿಗಳು ಸಹ ರೂಲ್ಸ್ ಬ್ರೇಕ್ ಮಾಡುವುದರಲ್ಲಿ ಮುಂದಿದ್ದಾರೆ. ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಸೇರಿದಂತೆ ಬಿಜೆಪಿ ಮುಖಂಡರು ಸೀಟ್ ಬೆಲ್ಟ್ ಧರಿಸುವುದಿಲ್ಲ. ಕ್ಯಾಮರಾ ಕಣ್ಣಿಗೆ ಕಂಡಿದ್ದು ಈ ನಾಯಕರು ಮಾತ್ರ ಆದರೆ, ಪ್ರತಿ ನಿತ್ಯ ಬಹುತೇಕ ರಾಜಕಾರಣಿಗಳು ಸೀಟ್ ಬೆಲ್ಟ್ ಧರಿಸದೆ, ಕಾರಿನಲ್ಲಿ ಪ್ರಯಾಣಿಸುತ್ತಾರೆ.

  • ವೈದ್ಯರ ಮೇಲೆ ಹಲ್ಲೆ ಮಾಡಿದರೆ 10 ವರ್ಷ ಜೈಲು, 10 ಲಕ್ಷ ದಂಡ

    ವೈದ್ಯರ ಮೇಲೆ ಹಲ್ಲೆ ಮಾಡಿದರೆ 10 ವರ್ಷ ಜೈಲು, 10 ಲಕ್ಷ ದಂಡ

    – ಹೊಸ ಕಾನೂನು ತರಲು ಮುಂದಾದ ಕೇಂದ್ರ ಸರ್ಕಾರ

    ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಾದ ಹಲ್ಲೆ ಖಂಡಿಸಿ ದೇಶಾದ್ಯಂತ ಪ್ರತಿಭಟನೆ ಗಲಾಟೆಗಳು ನಡೆದಿತ್ತು. ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆಗಳು ಆಗುತ್ತಿರುವ ಹಿನ್ನೆಲೆಯಲ್ಲಿ ಇವುಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಕಠಿಣ ಕಾನೂನು ತರಲು ಮುಂದಾಗುತ್ತಿದೆ.

    ಕರ್ತವ್ಯ ನಿರತ ವೈದ್ಯರು ಅಥವಾ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ಅಥವಾ ದಾಳಿ ನಡೆಸಿದ ಆರೋಪಿಗಳಿಗೆ 10 ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ವರೆಗೂ ದಂಡ ವಿಧಿಸುವ ಕಾಯ್ದೆ ತರಲು ಮುಂದಾಗುತ್ತಿದೆ. ವೈದ್ಯರ ಮೇಲಿನ ದಾಳಿ, ಹಲ್ಲೆ ರೀತಿಯ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

    ಈ ಸಂಬಂಧ ಸಾರ್ವಜನಿಕ ಅಭಿಪ್ರಾಯಗಳ ಸಂಗ್ರಹಿಸಲು ಸರ್ಕಾರ ನಿರ್ಧರಿಸಿದೆ. ಆದ್ದರಿಂದ ಸೋಮವಾರದಿಂದ ಆರೋಗ್ಯ ಸಚಿವಾಲಯ ಆರೋಗ್ಯಪಾಲನೆ ಸೇವೆಗಳ ಸಿಬ್ಬಂದಿ ಮತ್ತು ಕ್ಲಿನಿಕಲ್ ಎಸ್ಟಾಬ್ಲಿಷ್‍ಮೆಂಟ್ಸ್ (ಹಿಂಸೆ ಮತ್ತು ಆಸ್ತಿ ಹಾನಿ ನಿಷೇಧ) ಕರಡು ಮಸೂದೆ -2019 ನಿಯಮಗಳನ್ನು ರೂಪಿಸಿದೆ. ಅಲ್ಲದೆ ಸಾರ್ವಜನಿಕರು 30 ದಿನಗಳ ಒಳಗೆ ತಮ್ಮ ಅಭಿಪ್ರಾಯಗಳನ್ನು us-ms-mohfw@nic.in ಗೆ ಮೇಲ್ ಮಾಡಿ ತಿಳಿಸಬಹುದಾಗಿದೆ.

    ಭಾರತೀಯ ದಂಡ ಸಂಹಿತೆ(ಐಪಿಸಿ) 320ನೇ ಕಲಂ ಇಟ್ಟುಕೊಂಡು ಈ ಕಾಯ್ದೆಯನ್ನು ರಚಿಸಲು ಸಕಾರ ಮುಂದಾಗಿದೆ. ಕರ್ತವ್ಯ ಸಲ್ಲಿಸುವ ವೇಳೆ ರೋಗಿಗಳ ಕುಟುಂಬ ಅಥವಾ ಅವರ ಕಡೆಯವರು ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರೆ ಕನಿಷ್ಠ ಮೂರು ವರ್ಷ, ಗರಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅದರ ಜೊತೆಗೆ ಕನಿಷ್ಠ 2 ಲಕ್ಷದಿಂದ 10 ಲಕ್ಷ ರೂ. ದಂಡ ವಿಧಿಸುವ ಅಂಶ ಈ ಕರಡು ಮಸೂದೆಯಲ್ಲಿದೆ.

    ಕರಡು ಮಸೂದೆಯಲ್ಲಿರುವ ಸಂಪೂರ್ಣ ವಿವರ ಓದಲು ಕ್ಲಿಕ್ ಮಾಡಿ: www.mohfw.gov.in

  • ಬ್ಯಾಂಕ್ ವಿಲೀನದಿಂದ ಉದ್ಯೋಗದಲ್ಲಿ ಕಡಿತವಾಗುವುದಿಲ್ಲ: ನಿರ್ಮಲಾ ಸೀತಾರಾಮನ್

    ಬ್ಯಾಂಕ್ ವಿಲೀನದಿಂದ ಉದ್ಯೋಗದಲ್ಲಿ ಕಡಿತವಾಗುವುದಿಲ್ಲ: ನಿರ್ಮಲಾ ಸೀತಾರಾಮನ್

    ಚೆನ್ನೈ: ಸಾರ್ವಜನಿಕ ವಲಯದ ಬ್ಯಾಂಕ್‍ಗಳನ್ನು ವಿಲೀನ ಮಾಡುವುದರಿಂದ ಯಾವುದೇ ಉದ್ಯೋಗ ಕಡಿತವಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

    ಚೆನ್ನೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಂಕ್ ವಿಲೀನದಿಂದ ಉದ್ಯೋಗ ಕಡಿತವಾಗತ್ತೆ ಎನ್ನುವುದು ಸಂಪೂರ್ಣ ಸುಳ್ಳು ಮಾಹಿತಿ. ಶುಕ್ರವಾರವೇ ಈ ಕುರಿತು ನಾನು ಸ್ಪಷ್ಟಪಡಿಸಿದ್ದೇನೆ. ಬ್ಯಾಂಕ್‍ಗಳನ್ನು ವಿಲೀನಗೊಳಿಸುವುದರಿಂದ ಉದ್ಯೋಗಿಗಳಿಗೆ ಹಾನಿಯಾಗುವುದಿಲ್ಲ. ಒಬ್ಬ ಉದ್ಯೋಗಿಯನ್ನೂ ಕೆಲಸದಿಂದ ತೆಗೆದು ಹಾಕುವುದಿಲ್ಲ ಎಂಬ ಅಂಶವನ್ನು ಮಾಧ್ಯಮಗಳ ಮೂಲಕ ಸ್ಪಷ್ಟವಾಗಿ ತಿಳಿಸಿದ್ದೇನೆ ಎಂದು ಪುನರುಚ್ಛರಿಸಿದ್ದಾರೆ.

    ನಿರ್ಮಲಾ ಸೀತಾರಾಮನ್ ಅವರು ಆಗಸ್ಟ್ 30ರಂದು 10 ಸಾರ್ವಜನಿಕ ವಲಯದ ಬ್ಯಾಂಕ್‍ಗಳನ್ನು ನಾಲ್ಕು ಬ್ಯಾಂಕ್‍ಗಳಿಗೆ ವಿಲೀನಗೊಳಿಸಿರುವ ಕುರಿತು ಘೋಷಣೆ ಮಾಡಿದ್ದರು. ಐದು ವರ್ಷಗಳ ಆರ್ಥಿಕತೆಯ ಕುಂಟಿತವನ್ನು ಸರಿ ದಾರಿಗೆ ತಂದು, ಬೆಳೆವಣಿಗೆಯತ್ತ ಕೊಂಡೊಯ್ಯಬೇಕು. ಹೀಗಾಗಿ ಸಣ್ಣ ಬ್ಯಾಂಕ್‍ಗಳನ್ನು ವಿಲೀನಗೊಳಿಸಿ ಬೃಹತ್ ಬ್ಯಾಂಕ್‍ಗಳನ್ನಾಗಿ ಮಾಡಿ, ವಿಶ್ವ ದರ್ಜೆಗೆ ಕೊಂಡೊಯ್ಯಬೇಕು ಎನ್ನುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದರು.

    ಇದರ ಭಾಗವಾಗಿ ರಾಜ್ಯದ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್‍ಗಳನ್ನು ಸಹ ವಿಲೀನ ಮಾಡಲಾಗುತ್ತಿದೆ. ಈ ಕುರಿತು ಆಗಸ್ಟ್ 30ರಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ನಿರ್ಮಲಾ ಸೀತಾರಾಮನ್ ಅವರು, 2017ರಲ್ಲಿ 17 ಸಾರ್ವಜನಿಕ ವಲಯದ ಬ್ಯಾಂಕ್‍ಗಳಿದ್ದವು. ಇದನ್ನು 13ಕ್ಕೆ ಇಳಿಸುವ ನಿಟ್ಟಿನಲ್ಲಿ ಈ ವಿಲೀನ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದರು.

    ಪಂಜಾಬ್ ನ್ಯಾಷನಲ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹಾಗೂ ಯುನೈಟೆಡ್ ಬ್ಯಾಂಕ್ ವಿಲೀನವಾದರೆ ಇಂಡಿಯನ್ ಬ್ಯಾಂಕ್ ಜೊತೆ ಅಲಹಾಬಾದ್ ಬ್ಯಾಂಕ್ ವಿಲೀನವಾಗಲಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಆಂಧ್ರ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ವಿಲೀನವಾಗಲಿವೆ.

    ವಸೂಲಾಗದ ಸಾಲ(ಎನ್‍ಪಿಎ)ದ ಪ್ರಮಾಣ 8.65 ಲಕ್ಷ ಕೋಟಿ ರೂ.ನಿಂದ 7.90 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ. ಆರ್ಥಿಕತೆಯನ್ನು 5 ಟ್ರಿಲಿಯನ್ ಡಾಲರ್ ಗುರಿ ತಲುಪಲು ಕೇಂದ್ರ ಸರ್ಕಾರ ಎಲ್ಲ ರೀತಿಯ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ 10 ಬ್ಯಾಂಕ್‍ಗಳ ವಿಲೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದರು.