Tag: Central Government

  • ದೇಶದಲ್ಲಿ ಇ-ಸಿಗರೇಟ್ ನಿಷೇಧ – ಮಾರಾಟ ಮಾಡಿದ್ರೆ ಬೀಳುತ್ತೆ ಭಾರೀ ದಂಡ

    ದೇಶದಲ್ಲಿ ಇ-ಸಿಗರೇಟ್ ನಿಷೇಧ – ಮಾರಾಟ ಮಾಡಿದ್ರೆ ಬೀಳುತ್ತೆ ಭಾರೀ ದಂಡ

    ನವದೆಹಲಿ: ದೇಶದಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟ ಇಂದು ತೆಗೆದುಕೊಂಡಿದೆ.

    ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್ (ಇಎನ್‍ಡಿಎಸ್) ಎಂದು ಕರೆಯಲ್ಪಡುವ ಇ-ಸಿಗರೇಟ್‍ಗಳು ದೇಶದಲ್ಲಿ ವ್ಯಾಪಕ ಜನಪ್ರಿಯತೆಯನ್ನು ಗಳಿಸಿದೆ. ಆದರೆ ಇವುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹೀಗಾಗಿ ಇ-ಸಿಗರೇಟ್ ಮೇಲೆ ನಿಷೇಧ ಹೇರಬೇಕು ಎಂಬ ಕೂಗು ಹಲವು ವರ್ಷಗಳಿಂದ ಕೇಳಿ ಬಂದಿತ್ತು.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆ ಬಳಿಕ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಜೊತೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜಂಟಿ ಸುದ್ದಿಗೋಷ್ಠಿ ನಡೆಸಿ, ಸುಗ್ರೀವಾಜ್ಞೆ ಹೊರಡಿಸಿ ಸಂಪುಟದ ತೀರ್ಮಾನಗಳನ್ನು ಪ್ರಕಟಿಸಿದ್ದಾರೆ.

    ಇ-ಸಿಗರೇಟ್ ಬಳಕೆದಾರರಿಗೆ ಅಷ್ಟೇ ಅಲ್ಲದೆ ಉತ್ಪಾದನೆ, ಸಂಗ್ರಹಣೆ, ಮಾರಾಟ ಮಾಡುವವರಿಗೆ ಭಾರೀ ದಂಡ ವಿಧಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಮೊದಲು ಬಾರಿಗೆ ಈ ಪ್ರಕರಣದಲ್ಲಿ ಸಿಕ್ಕಿಬಿದ್ದರೆ 1 ಲಕ್ಷ ರೂ.ದಂಡ ಇಲ್ಲವೇ ಒಂದು ವರ್ಷ ಜೈಲು ಶಿಕ್ಷೆ ಅಥವಾ ಎರಡಕ್ಕೂ ಗುರಿಯಾಗುತ್ತಾರೆ. ಒಂದು ವೇಳೆ ಎರಡನೇ ಬಾರಿಯೂ ಇದೇ ಅಪರಾಧ ಎಸಗಿದರೆ 5 ಲಕ್ಷ ರೂ. ದಂಡ ಇಲ್ಲವೇ 3 ವರ್ಷ ಜೈಲು ಶಿಕ್ಷೆ ಅಥವಾ ಎರಡನ್ನು ಅನುಭವಿಸಬೇಕಾಗುತ್ತದೆ.

    ಇ-ಸಿಗರೇಟ್‍ನ ಉತ್ಪಾದನೆ, ಆಮದು, ರಫ್ತು, ಸಾಗಾಟ, ಮಾರಾಟ, ವಿತರಣೆ, ಸಂಗ್ರಹಣೆ ಹಾಗೂ ಜಾಹೀರಾತು ಎಲ್ಲವನ್ನೂ ನಿಷೇಧಿಸಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಸಮ್ಮತಿ ಸಿಕ್ಕಿದೆ. ಇ-ಸಿಗರೇಟ್‍ನ ಚಟಕ್ಕೆ ಅಂಟಿಕೊಂಡವರಿಗೆ ಅದು ಆಹ್ಲಾದಕರ ಎನಿಸುತ್ತದೆ. ದೇಶದಲ್ಲಿ 400ಕ್ಕೂ ಅಧಿಕ ಇ-ಸಿಗರೇಟ್ ಬ್ರಾಂಡ್‍ಗಳಿವೆ. ಆದರೆ ಯಾವ ಇ-ಸಿಗರೇಟ್ ಕೂಡ ಭಾರತದಲ್ಲಿ ತಯಾರಾಗುತ್ತಿಲ್ಲ. ಸದ್ಯ 150 ಫ್ಲೇವರ್ ನ ಇ-ಸಿಗರೇಟ್‍ಗಳು ಮಾರುಕಟ್ಟೆಯಲ್ಲಿವೆ ಎಂದು ವರದಿಯಾಗಿದೆ.

    ಸರ್ಕಾರ ಮತ್ತು ಆರೋಗ್ಯ ಸಚಿವಾಲಯದ ಪರವಾಗಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯದರ್ಶಿ ಪ್ರೀತಿ ಸುಡಾನ್, ಇ-ಸಿಗರೇಟ್ ವಿಚಾರವಾಗಿ ಹೊರಹೊಮ್ಮುತ್ತಿರುವ ಅಂತರಾಷ್ಟ್ರೀಯ ಸಾಕ್ಷ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಚಿವಾಲಯಕ್ಕೆ ಅನುಸಾರವಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಮಗ್ರ ದಾಖಲೆಗಳನ್ನು ಸಿದ್ಧ ಪಡಿಸಿದೆ. ಈ ಪ್ರಯತ್ನಗಳ ಫಲವಾಗಿ, ಶ್ವೇತಪತ್ರವನ್ನು ಉಲ್ಲೇಖಿಸಿ ಇ-ಸಿಗರೇಟ್ ಮತ್ತು ಇ-ಹುಕ್ಕಾಗಳನ್ನು ನಿಷೇಧಿಸಲು ಸಚಿವಾಲಯ ಶಿಫಾರಸು ಮಾಡಿದೆ. ನಿರ್ಧಾರವು ತಾಂತ್ರಿಕ ಸಲಹಾ ಸಮಿತಿಗಳ ಮೂಲಕ ಸಾಗಿದೆ ಎಂದು ತಿಳಿಸಿದ್ದಾರೆ.

    ಐಸಿಎಂಆರ್ ಮೇ 2019ರಲ್ಲಿ ಬಿಡುಗಡೆ ಮಾಡಿದ ವರದಿಯಲ್ಲಿ ಕೆಲವು ಪ್ರಮುಖ ಅಂಶಗಳನ್ನು ತಿಳಿಸಲಾಗಿದೆ. ಇಎನ್‍ಡಿಎಸ್ ಹೆಚ್ಚು ವ್ಯಸನಕಾರಿ ನಿಕೋಟಿನ್ ದ್ರಾವಣವನ್ನು ಮಾತ್ರವಲ್ಲದೆ ಸುವಾಸನೆ ನೀಡುವ ಏಜೆಂಟ್ ಮತ್ತು ಆವಿಯಾಗುವಂತಹ ಇತರ ಅಪಾಯಕಾರಿ ವಸ್ತುಗಳನ್ನು ಸಹ ಒಳಗೊಂಡಿದೆ. ಇಎನ್‍ಡಿಎಸ್ ಉತ್ಪನ್ನಗಳ ಹಾನಿಕಾರಕ ಪರಿಣಾಮಗಳನ್ನು ಪಟ್ಟಿ ಮಾಡುವುದರ ಹೊರತಾಗಿ, ಈ ಉತ್ಪನ್ನಗಳು ತಂಬಾಕು ಚಟಕ್ಕೆ ಒಂದು ಗೇಟ್‍ವೇ ಆಗಿ ಕಾರ್ಯನಿರ್ವಹಿಸುತ್ತವೆ ಅಂತ ತಿಳಿದು ಬಂದಿದೆ ಎಂದು ಪ್ರೀತಿ ಸುಡಾನ್ ಮಾಹಿತಿ ನೀಡಿದ್ದಾರೆ.

  • ಕ್ರೂರ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯ – ದಿನೇಶ್ ಗುಂಡೂರಾವ್

    ಕ್ರೂರ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯ – ದಿನೇಶ್ ಗುಂಡೂರಾವ್

    ಬೆಂಗಳೂರು: ಇಂಥಹ ಕ್ರೂರ ಕೇಂದ್ರ ಸರ್ಕಾರವನ್ನು ಎಂದೂ ನೋಡಿಲ್ಲ. ನೆರೆ ಪ್ರವಾಹದಿಂದ ಇಷ್ಟರ ಮಟ್ಟಿಗೆ ಹಾನಿಯಗಿದೆ. ಆದರೂ ಪರಿಹಾರ ಬಿಡುಗಡೆ ಮಾಡಿಲ್ಲ, ಹೀಗಾಗಿ ಹೋರಾಟ ಅನಿವಾರ್ಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಿತ್ ಶಾ, ನಿರ್ಮಲ ಸೀತಾರಾಮ್ ಇಬ್ಬರೂ ಬಂದು ಹೋದರು. ಈವರೆಗೆ ಏನೂ ಮಾತಾಡಿಲ್ಲ. ಯಡಿಯೂರಪ್ಪನವರು ಕೂಡ ಈ ಬಗ್ಗೆ ಬಾಯಿ ಬಿಡುತ್ತಿಲ್ಲ. ಸಂತ್ರಸ್ತರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಸರ್ಕಾರ ಕೊಡುತ್ತಿರುವ 10 ಸಾವಿರ ರೂ. ತುರ್ತು ಪರಿಹಾರ ಶೇ.20 ರಷ್ಟು ಜನರಿಗೆ ಮಾತ್ರ ತಲುಪಿದೆ. ಮುಖ್ಯಮಂತ್ರಿಗಳಿಗೆ ಏನು ಮಾಡಬೇಕೆಂಬುದೇ ತೋಚುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

    ಕೇಂದ್ರ ಸರ್ಕಾರದಿಂದ ಯಾವುದೇ ಸಹಾಯ ಸಿಗುತ್ತಿಲ್ಲ. ಹೀಗಾಗಿ ನಾವು ಬೀದಿಗೆ ಇಳಿದು ಪ್ರತಿಭಟನೆ ಮಾಡುವ ಅನಿವಾರ್ಯತೆ ನಿರ್ಮಾಣ ಆಗಿದೆ. ಇದೇ ತಿಂಗಳ 24ರಂದು ಬೆಳಗಾವಿಯಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಂತರ ಮುಂದಿನ ನೆರೆ ಪೀಡಿತ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡುತ್ತೇವೆ. ಈ ವರೆಗೆ ವಿರೋಧ ಪಕ್ಷದವರನ್ನು ಕರೆದು ಸಿಎಂ ಮಾತು ಕತೆ ನಡೆಸಿಲ್ಲ. ಈ ಕುರಿತು ವಿರೋಧ ಪಕ್ಷದವರನ್ನು ಕರೆದು ಚರ್ಚೆ ಮಾಡಲಿ ನಾವು ಬರುತ್ತೇವೆ. ಜನರ ಸಮಸ್ಯೆ ಪರಿಹಾರ ಆಗಬೇಕಿದೆ ಎಂದು ಒತ್ತಾಯಿಸಿದರು.

    ಕಾಂಗ್ರೆಸ್‍ನವರಿಗೆ ಕೆಲಸ ಇಲ್ಲ ಹೀಗಾಗಿ ವಿರೋಧಿಸುತ್ತಾರೆ ಎಂಬ ಸಿಎಂ ಕುರಿತು ಪ್ರತಿಕ್ರಿಯಿಸಿದ ಅವರು, ಜನರ ಪರವಾಗಿ ಪ್ರತಿಭಟನೆ ಮಾಡುವುದು ತಪ್ಪೇ? ನಾವು ಕೂಡ ಜನ ಪ್ರತಿನಿಧಿಗಳು ಜನರಿಗಾಗಿ ಹೋರಾಟ ಮಾಡೋದು ತಪ್ಪಾ, ಯಾವ ಅರ್ಥದಲ್ಲಿ ನಮಗೆ ಕೆಲಸ ಇಲ್ಲ ಎಂದು ಸಿಎಂ ಹೇಳುತ್ತಾರೆ. ಜನರ ಸಮಸ್ಯೆಗೆ ಪರಿಹಾರ ಸಿಗದೇ ಇದ್ದರೆ ನಾವು ದೆಹಲಿವರೆಗೂ ಹೋಗಿ ಪ್ರತಿಭಟನೆ ಮಾಡುತ್ತೇವೆ ಎಂದು ಕಿಡಿಕಾರಿದರು.

  • ಕಾಂಗ್ರೆಸ್ ಯಾವುದೇ ಕಾರ್ಯಕ್ರಮ ಇಲ್ಲದೇ ಪ್ರತಿಭಟನೆ ಮಾಡ್ತಿದೆ – ಬಿಎಸ್‍ವೈ ಕಿಡಿ

    ಕಾಂಗ್ರೆಸ್ ಯಾವುದೇ ಕಾರ್ಯಕ್ರಮ ಇಲ್ಲದೇ ಪ್ರತಿಭಟನೆ ಮಾಡ್ತಿದೆ – ಬಿಎಸ್‍ವೈ ಕಿಡಿ

    ಬೆಂಗಳೂರು: ನೆರೆ ಪರಿಹಾರ ಕೊಡದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಸಿಎಂ ಯಡಿಯೂರಪ್ಪ ಕಿಡಿಕಾರಿದ್ದಾರೆ.

    ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಅನುದಾನ ಬಿಡುಗಡೆ ಮಾಡಲು ದೇಶದ 5-6 ರಾಜ್ಯಗಳಲ್ಲಿ ಪ್ರವಾಹ ಬಂದು ಇಂತಹ ಸ್ಥಿತಿ ನಿರ್ಮಾಣ ಆಗಿದೆ. ಎಲ್ಲರಿಗೂ ಒಟ್ಟಿಗೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತೆ. ಆದಷ್ಟು ಬೇಗ ಅನುದಾನ ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು.

    ಕಾಂಗ್ರೆಸ್ ಅವರಿಗೆ ಆತುರ ಜಾಸ್ತಿ ಪರಿಹಾರ ಬಿಡುಗಡೆ ಮುಂಚೆ ಇವರು ಆತುರವಾಗಿ ಪ್ರತಿಭಟನೆ ಮಾಡ್ತಿರೋದು ಸರಿಯಲ್ಲ. ಏನು ಬೇರೆ ಕಾರ್ಯಕ್ರಮ ಇಲ್ಲ ಎಂದು ಕಾಂಗ್ರೆಸ್ ಅವರ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಕಾಂಗ್ರೆಸ್‍ನವರು ಗೊಂದಲ ಉಂಟು ಮಾಡೋಕೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ಮನೆ ಕಟ್ಟಲು 1 ಲಕ್ಷ ಬಿಡುಗಡೆ ಮಾಡಿದೆ. 10 ಸಾವಿರ ಹಣ ಕುಟುಂಬಗಳಿಗೆ ಕೊಟ್ಟಿದ್ದೇವೆ. ಅಗತ್ಯ ಕ್ರಮ ನಾವು ತಗೊಂಡಿದ್ದೇವೆ. ಇಷ್ಟೆಲ್ಲ ಮಾಡಿದರು ಅವರಿಗೆ ತೃಪ್ತಿ ಇಲ್ಲ. ಹೀಗಾಗಿ ರಾಜಕೀಯ ಮಾಡುತ್ತಿದ್ದಾರೆ. ಸಂತೋಷದಿಂದ ಪ್ರತಿಭಟನೆ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇದೇ ವೇಳೆ ಪ್ರಧಾನಿ ಮೋದಿ ಬಳಿ ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗಿ ಅನ್ನೋ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದ ಅವರು, ಮೋದಿ ಬಳಿಗೆ ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಹೋಗುವ ಅಗತ್ಯ ಇಲ್ಲ. ಪ್ರಧಾನಿ ಮೋದಿ ಮೇಲೆ ನಮಗೆ ವಿಶ್ವಾಸ ಇದೆ. ಆದಷ್ಟು ಬೇಗ ಅನುದಾನ ಮೋದಿ ಬಿಡುಗಡೆ ಮಾಡುತ್ತಾರೆ ಎಂದು ತಿಳಿಸಿದರು.

  • ಕುವೈತ್‍ನಲ್ಲಿ ಅಪಘಾತಕ್ಕೀಡಾದ ಮಗ – ಮೃತದೇಹ ತರಲು ಹಣವಿಲ್ಲದೆ ಪೋಷಕರು ಪರದಾಟ

    ಕುವೈತ್‍ನಲ್ಲಿ ಅಪಘಾತಕ್ಕೀಡಾದ ಮಗ – ಮೃತದೇಹ ತರಲು ಹಣವಿಲ್ಲದೆ ಪೋಷಕರು ಪರದಾಟ

    ಕಾರವಾರ: ಕುವೈತ್‍ನಲ್ಲಿ ಅಪಘಾತದಲ್ಲಿ ಮೃತಪಟ್ಟ ಮಗನ ಮೃತದೇಹ ತರಲು ಹಣವಿಲ್ಲದೆ ಪೋಷಕರು ಪರದಾಡುತ್ತಿರುವ ಘಟನೆ ಕಾರವಾರದಲ್ಲಿ ನಡೆದಿದೆ.

    ರಾಬಿನ್‍ಸನ್ ರೋಸಿಯೋ ಮೃತಪಟ್ಟ ವ್ಯಕ್ತಿ. ರಾಬಿನ್‍ಸನ್ ಕಡವಾಡದ ಕ್ರಿಶ್ಚಿಯನ್ ವಾಡದ ನಿವಾಸಿಯಾಗಿದ್ದು, ಭಾನುವಾರ ಅಪಘಾತದಲ್ಲಿ ಮೃತಪಟ್ಟಿದ್ದರು. ಆದರೆ ರಾಬಿನ್‍ಸನ್ ಮೃತದೇಹವನ್ನು ಕಾರವಾರಕ್ಕೆ ತರಲು ಹಣವಿಲ್ಲದೆ ತೊಂದರೆ ಅನುಭವಿಸುತ್ತಿದ್ದು, ತಮ್ಮ ಪುತ್ರನ ಶವವನ್ನು ತರಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

    ಭಾನುವಾರ ಕುವೈತ್‍ನ ದಜೀಜ್ ಪ್ರದೇಶದಲ್ಲಿರುವ ಕುವೈತ್ ಫುಡ್ ಕಂಪನಿಗೆ ಕೆಲಸಕ್ಕೆ ತೆರಳುತ್ತಿರುವಾಗ ಕಿಂಗ್ ಅಬ್ದುಲ್ ಅಜೀಜ್ ರಸ್ತೆಯಲ್ಲಿ ಮೂರು ವಾಹನಗಳು ಪರಸ್ಪರ ಡಿಕ್ಕಿಯಾಗಿತ್ತು. ಈ ವೇಳೆ ರಾಬಿನ್‍ಸನ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೃತದೇಹವನ್ನು ಭಾರತಕ್ಕೆ ತರಲು ಕುಟುಂಬದವರಿಗೆ ತೊಂದರೆಯಾಗಿದೆ. ಸದ್ಯ ಈ ಬಗ್ಗೆ ಅವರು ಜಿಲ್ಲಾಡಳಿತ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಅವರು, ಈಗಾಗಲೇ ರಾಬಿನ್‍ಸನ್ ಅವರ ಸಂಬಂಧಿಕರು ಮನವಿ ಮಾಡಿಕೊಂಡಿದ್ದಾರೆ. ಕುವೈತ್‍ನಲ್ಲಿ ನಮ್ಮ ಸಂಬಂಧಿಕರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸರ್ಕಾರದ ವತಿಯಿಂದ ಸಹಕರಿಸಬೇಕು ಎಂದು ಕೇಳಿಕೊಂಡಿದ್ದಾರೆ. ನಾನು ಈಗಾಗಲೇ ಕೇಂದ್ರ ಸರ್ಕಾರದ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಮೃತದೇಹ ಭಾರತಕ್ಕೆ ಹಸ್ತಾಂತರಿಸಲು ಏನು ಕ್ರಮ ಬೇಕು ಅದಕ್ಕೆ ಸಹಕರಿಸಿ ಎಂದು ಪತ್ರ ಬರೆದಿದ್ದೇನೆ ಎಂದರು.

  • ನಾವು ಮನೆ ಖಾಲಿ ಮಾಡಲ್ಲ – ಎಚ್ಚರಿಕೆಗೆ ಡೋಂಟ್‍ಕೇರ್ ಎಂದ 80 ಮಾಜಿ ಸಂಸದರು

    ನಾವು ಮನೆ ಖಾಲಿ ಮಾಡಲ್ಲ – ಎಚ್ಚರಿಕೆಗೆ ಡೋಂಟ್‍ಕೇರ್ ಎಂದ 80 ಮಾಜಿ ಸಂಸದರು

    ನವದೆಹಲಿ: ಲೋಕಸಭಾ ಸಮಿತಿ ಖಡಕ್ ವಾರ್ನಿಂಗ್ ನೀಡಿ, ನೀರು, ವಿದ್ಯುತ್ ಕಡಿತಗೊಳಿಸುವ ಬೆದರಿಕೆ ಒಡ್ಡಿದರೂ ಇನ್ನೂ 80ಕ್ಕೂ ಹೆಚ್ಚು ಮಾಜಿ ಸಂಸದರು ತಮ್ಮ ಅಧಿಕೃತ ಬಂಗಲೆಗಳನ್ನು ಖಾಲಿ ಮಾಡಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.

    ಈಗ ಅನಧಿಕೃತವಾಗಿ ಸಾರ್ವಜನಿಕ ನಿವಾಸದಲ್ಲಿ ತಂಗಿರುವ ವ್ಯಕ್ತಿಗಳನ್ನು ಹೊರ ಹಾಕುವ ಕಾಯ್ದೆಯಡಿ ಬಲವಂತವಾಗಿ ಕ್ರಮ ಕೈಗೊಂಡು ಮಾಜಿ ಸಂಸದರನ್ನು ಬಂಗಲೆಗಳಿಂದ ಹೊರ ಹಾಕುವ ಕುರಿತು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

    ಆಗಸ್ಟ್ 19ರಂದು ಸಿ.ಆರ್.ಪಾಟೀಲ್ ನೇತೃತ್ವದ ಲೋಕಸಭಾ ವಸತಿ ಸಮಿತಿಯು ಬಂಗಲೆಗಳನ್ನು ಖಾಲಿ ಮಾಡದ ಸುಮಾರು 200 ಮಾಜಿ ಸಂಸದರಿಗೆ ಒಂದು ವಾರದೊಳಗೆ ಖಾಲಿ ಮಾಡುವಂತೆ ಸಮಯ ನಿಗದಿಪಡಿಸಿತ್ತು. ಖಾಲಿ ಮಾಡದಿದ್ದಲ್ಲಿ ಮೂರು ದಿನಗಳಲ್ಲಿ ಬಂಗಲೆಯ ವಿದ್ಯುತ್, ನೀರು ಹಾಗೂ ಗ್ಯಾಸ್ ಸಂಪರ್ಕ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಡಿತಗೊಳಿಸುವಂತೆ ಅದೇಶಿಸಿತ್ತು.

    ಸಮಿತಿಯ ಆದೇಶದ ನಂತರ ಬಹುತೆಕ ಮಾಜಿ ಸಂಸದರು ಅದೀಕೃತ ನಿವಾಸಗಳನ್ನು ಖಾಲಿ ಮಾಡಿದ್ದಾರೆ. ಆದರೆ, ಇತ್ತೀಚಿನ ಪಟ್ಟಿಯ ಪ್ರಕಾರ ಇನ್ನೂ 82 ಮಾಜಿ ಸಂಸದರು ಬಂಗಲೆಗಳನ್ನು ಖಾಲಿ ಮಾಡಿಲ್ಲ ಎಂದು ತಿಳಿದು ಬಂದಿದೆ.

    ಮಾಜಿ ಸಂಸದರು ತಮ್ಮ ಅಧಿಕೃತ ನಿವಾಸಗಳನ್ನು ಖಾಲಿ ಮಾಡುವಂತೆ ಕೇಳಿಕೊಳ್ಳುವುದು ಸಮಿತಿಯ ನಿರ್ಧಾರವಾಗಿತ್ತು. ಈಗ ಅದರಲ್ಲಿ ಕೆಲವರು ಸಮಿತಿಯ ಆದೇಶಕ್ಕೂ ಬೆಲೆ ನೀಡಿಲ್ಲ ಎಂದಾದರೆ, ಇದು ಸಹಿಸಿಕೊಳ್ಳುವಂತಹದ್ದಲ್ಲ. ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಲೋಕಸಭಾ ವಸತಿ ಸಮಿತಿಯ ಮೂಲಗಳು ತಿಳಿಸಿವೆ.

    ಮೇ 25ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 16ನೇ ಲೋಕಸಭೆಯನ್ನು ವಿಸರ್ಜನೆ ಮಾಡಿದ್ದರು. ಬಳಿಕ ಎರಡನೇ ಬಾರಿಗೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂತು. ನಿಯಮದ ಪ್ರಕಾರ, ಲೋಕಸಭೆ ವಿಸರ್ಜನೆಗೊಂಡ 1 ತಿಂಗಳೊಳಗೆ ಮಾಜಿ ಸಂಸದರು ಸರ್ಕಾರಿ ನಿವಾಸಗಳನ್ನು ಖಾಲಿ ಮಾಡಬೇಕು. ಆದರೆ ಅವಧಿ ಮೀರಿ 3 ತಿಂಗಳು ಕಳೆಯುತ್ತಾ ಬಂದಿದ್ದರೂ 80 ಮಾಜಿ ಸಂಸದರು ಮಾತ್ರ ನಿವಾಸ ಖಾಲಿ ಮಾಡಿಲ್ಲ.

    ಮಾಜಿ ಸಂಸದರು ಸರ್ಕಾರಿ ನಿವಾಸವನ್ನು ಖಾಲಿ ಮಾಡದ ಕಾರಣ ಹೊಸ ಸಂಸದರಿಗೆ ವಸತಿ ಕಲ್ಪಿಸುವುದು ಕಷ್ಟವಾಗಿದೆ. ಸದ್ಯ ನೂತನ ಸಂಸದರು ಉಳಿದುಕೊಳ್ಳಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.

    ಅನಧಿಕೃತವಾಗಿ ಸಾರ್ವಜನಿಕ ನಿವಾಸದಲ್ಲಿ ತಂಗಿರುವ ವ್ಯಕ್ತಿಗಳನ್ನು ಹೊರ ಹಾಕುವ ತಿದ್ದುಪಡಿ ಮಸೂದೆ ಈ ಬಾರಿಯ ಸಂಸತ್ತಿನಲ್ಲಿ ಮಂಡನೆಯಾಗಿ ಎರಡು ಸದನದಲ್ಲಿ ಪಾಸ್ ಆಗಿತ್ತು.

    ಈ ಕಾಯ್ದೆ ಅನ್ವಯ ಆರಂಭದಲ್ಲಿ ನೋಟಿಸ್ ನೀಡಲಾಗುತ್ತದೆ. ಬಳಿಕ ಶೋಕಾಸ್ ನೋಟಿಸ್ ನೀಡಿ ತನಿಖೆ ನಡೆಸಲಾಗುತ್ತದೆ. ಅಷ್ಟೇ ಅಲ್ಲದೇ ಎಸ್ಟೇಟ್ ಅಧಿಕಾರಿಗೆ ತೆರವುಗೊಳಿಸುವಂತೆ ಸೂಚಿಸಲಾಗುತ್ತದೆ. ಬಂಗಲೆಯಲ್ಲಿ 5 ತಿಂಗಳಿಗೂ ಹೆಚ್ಚು ದಿನಗಳ ಕಾಲ ವಾಸವಾಗಿದ್ದಲ್ಲಿ 10 ಲಕ್ಷ ರೂ. ದಂಡ ವಿಧಿಸುವ ಅಂಶ ಕಾಯ್ದೆಯಲ್ಲಿದೆ.

    ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕಳೆದ ವರ್ಷ ಲಕ್ನೋನಲ್ಲಿರುವ ಸರ್ಕಾರಿ ಬಂಗಲೆ ಖಾಲಿ ಮಾಡಲು 2 ವರ್ಷಗಳ ಕಾಲಾವಕಾಶವನ್ನು ಕೇಳಿ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ, ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಅವರ ಅಧಿಕೃತ ನಿವಾಸವನ್ನು ಬಿಎಸ್‍ಪಿ ಸಂಸ್ಥಾಪಕ ಹಾಗೂ ಮಾರ್ಗದರ್ಶಕ ಕನ್ಶಿ ರಾಮ್ ಅವರ ಸ್ಮಾರಕವನ್ನಾಗಿ ಪರಿವರ್ತಿಸಲು ಯತ್ನಿಸಿ ಟೀಕೆ ಒಳಗಾಗಿದ್ದರು.

    ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಜೂನ್ ತಿಂಗಳಿನಲ್ಲಿ ಟ್ವೀಟ್ ಮಾಡಿ ಸರ್ಕಾರ ನೀಡಿದ ನಿವಾಸವನ್ನು ಖಾಲಿ ಮಾಡುತ್ತೇನೆ ಎಂದು ತಿಳಿಸಿದ್ದರು. ನಾನೀಗ ನಂ.8 ಸಫ್ದಾರ್ಜಂಗ್ ರಸ್ತೆ, ನವದೆಹಲಿಯ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದೇನೆ. ಹೀಗಾಗಿ ನಾನು ಈ ವಿಳಾಸ ಹಾಗೂ ಸಂಪರ್ಕ ಸಂಖ್ಯೆಯಲ್ಲಿ ಲಭ್ಯವಿರುವುದಿಲ್ಲ ಎಂದು ತಿಳಿಸಿದ್ದರು. ಸುಷ್ಮಾ ಸ್ವರಾಜ್ ಅವರ ಈ ನಡೆ ಮೆಚ್ಚುಗೆಗೆ ಪಾತ್ರವಾಗಿತ್ತು.

  • ದಿನಕ್ಕೊಂದು ದೇಶ, ಗಳಿಗೆಗೊಂದು ವೇಷ ಬದಲಿಸುವ ಪ್ರಧಾನಿ ಎಲ್ಲಿದ್ದಾರೆ: ಸಿದ್ದರಾಮಯ್ಯ

    ದಿನಕ್ಕೊಂದು ದೇಶ, ಗಳಿಗೆಗೊಂದು ವೇಷ ಬದಲಿಸುವ ಪ್ರಧಾನಿ ಎಲ್ಲಿದ್ದಾರೆ: ಸಿದ್ದರಾಮಯ್ಯ

    – ಹೇಡಿ ರಾಜ್ಯ ಸರ್ಕಾರಕ್ಕೆ ಕೇಂದ್ರವನ್ನು ಪ್ರಶ್ನಿಸುವ ಧೈರ್ಯ ಇಲ್ಲ

    ಬೆಂಗಳೂರು: ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್ ಮೂಲಕ ಬಿಜೆಪಿ ಪಕ್ಷದ ಮೇಲೆ ಕಿಡಿಕಾರಿದ್ದಾರೆ. ದಿನಕ್ಕೊಂದು ದೇಶ, ಗಳಿಗೆಗೊಂದು ವೇಷ ಬದಲಿಸುವ ಪ್ರಧಾನಿ ಎಲ್ಲಿದ್ದಾರೆ ಎಂದು ಹೇಳುವ ಮೂಲಕ ಮೋದಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

    ಇಂದು ಬೆಳಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ದಿನಕ್ಕೊಂದು ದೇಶ ಸುತ್ತುವ, ಗಳಿಗೆಗೊಂದು ವೇಷ ಬದಲಿಸುವ ಈಗಿನ ಪ್ರಧಾನಿಗಳಿಗೆ ಒಂದು ಘಳಿಗೆ ಬಂದು ಸಂತ್ರಸ್ತರ ಗೋಳು ಕೇಳುವ ಕನಿಷ್ಠ ಮಾನವೀಯತೆ ಇಲ್ಲದಿರುವುದು ದುರಂತ ಎಂದು ಟ್ವೀಟ್ ಮಾಡುವ ಮೂಲಕ ಮೋದಿ ಅವರ ಮೇಲೆ ಗುಡುಗಿದ್ದಾರೆ.

    ನಮ್ಮ ಪ್ರತಿಭಾವಂತ ವಿಜ್ಞಾನಿಗಳು ಹಗಲಿರುಳು ಶ್ರಮಿಸಿ ನಡೆಸಿದ ಚಂದ್ರಯಾನ-2 ಪ್ರಯೋಗ, ನರೇಂದ್ರ ಮೋದಿ ಹಾಜರು ಹಾಕಿದರೂ ವಿಫಲವಾಯಿತು. ಪ್ರಧಾನಿಗಳು ಅಷ್ಟೇ ಸಮಯವನ್ನು ಅತಿವೃಷ್ಟಿ ಪೀಡಿತ ಪ್ರದೇಶದ ಭೇಟಿಗೂ ನೀಡಿದ್ದರೆ ಪ್ರಾಯಶ್ಚಿತ ಮಾಡಿಕೊಂಡಂತಾಗುತಿತ್ತು ಎಂದು ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

    ಅತಿವೃಷ್ಟಿಯಿಂದ ಮನೆ, ತೋಟ, ಗದ್ದೆಯನ್ನು ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹಾವೇರಿ, ಗದಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಐವರು ರೈತರ ಕುಟುಂಬಕ್ಕೆ ನನ್ನ ಸಂತಾಪಗಳು. ಇದೇ ರೀತಿ ನೂರಾರು ರೈತರು ಅಸಹಾಯಕರಾಗಿ ಆತ್ಮಹತ್ಯೆಯ ದಾರಿಯಲ್ಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಇದ್ದೂ ಸತ್ತಂತಿವೆ. ಅತಿವೃಷ್ಟಿ ಪೀಡಿತ ರೈತರ ಬ್ಯಾಂಕುಗಳಲ್ಲಿನ ಸಾಲ ಬಾಕಿಗಾಗಿ ನೋಟಿಸ್ ಜಾರಿ ಮಾಡಿ ಕಿರುಕುಳ ನೀಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ರಾಜ್ಯ ಸರ್ಕಾರಕ್ಕೇನಾದರೂ ಒಂದಿಷ್ಟು ಮಾನವೀಯತೆ ಎನ್ನುವುದಾದರೂ ಇದ್ದರೆ ಇಂತಹ ಕ್ರೌರ್ಯವನ್ನು ತಕ್ಷಣ ನಿಲ್ಲಿಸಬೇಕು ಎಂದು ಟ್ವಿಟ್ಟರ್ ಮೂಲಕ ಹೇಳಿದ್ದಾರೆ.

    ರಾಜ್ಯಕ್ಕೆ ಬಂದೆರಗಿದ ಅತಿವೃಷ್ಟಿಯಿಂದ ರೂ.36 ಸಾವಿರ ಕೋಟಿ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ ಇಲ್ಲಿಯವರೆಗೆ ನಯಾಪೈಸೆ ನೆರವು ಬಂದಿಲ್ಲ. ರಾಜ್ಯದ ಹೇಡಿ ಸರ್ಕಾರಕ್ಕೆ ಕೇಂದ್ರವನ್ನು ಪ್ರಶ್ನಿಸುವ ಧೈರ್ಯ ಇಲ್ಲ. 2009ರಲ್ಲಿ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿದ್ದಾಗ ಸಂಭವಿಸಿದ ಅತಿವೃಷ್ಟಿಯ ಸಂದರ್ಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಧಾವಿಸಿ ಬಂದು ಸಮೀಕ್ಷೆ ನಡೆಸಿ ತಕ್ಷಣ ರೂ.1500 ಕೋಟಿ ರೂ. ಪರಿಹಾರ ಘೋಷಿಸಿದ್ದರು. ಈಗಿನ ಪ್ರಧಾನಿ ಎಲ್ಲಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.

    ಕಾಲ್ಗುಣದಂತಹ ಮೌಢ್ಯದಲ್ಲಿ ನನಗೆ ನಂಬಿಕೆ ಇಲ್ಲ. ಆದರೆ 2009ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗಲೇ ಅತಿವೃಷ್ಟಿ ಬಂದೆರಗಿತು. ನಮ್ಮ ಕಾಲದಲ್ಲಿ ರೈತರು ಆತ್ಮಹತ್ಯೆಯ ದಾರಿ ಹಿಡಿದಾಗ ನಮ್ಮ ಸರ್ಕಾರ ಕೃಷಿಭಾಗ್ಯ, ಅನ್ನಭಾಗ್ಯ, ಕ್ಷೀರಧಾರೆಯಂತ ಯೋಜನೆಗಳ ಮೂಲಕ ನೆರವಾಗಿ ಆತ್ಮಹತ್ಯೆಯ ಸರಣಿಯನ್ನು ತಡೆದಿದ್ದೆವು. ಅತಿವೃಷ್ಠಿ ಪೀಡಿತ ಪ್ರದೇಶಕ್ಕೆ ಪರಿಹಾರಕ್ಕಾಗಿ ಒತ್ತಾಯಿಸಿದಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಕೇಂದ್ರ ಸರ್ಕಾರ ದಿವಾಳಿಯಾಗಿ ಹೋಗಿರುವ ಸೂಚನೆ ಇದು. ಇದು ನಿಜವಲ್ಲದೆ ಇದ್ದರೆ ಮೊದಲು ದೇಶದ ಆರ್ಥಿಕ ಪರಿಸ್ಥಿತಿ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಎಂದು ಒತ್ತಯ ಮಾಡಿದ್ದಾರೆ.

  • ಕನ್ನಡದಲ್ಲಿ ಪರೀಕ್ಷೆ ನಡೆಸದ್ದಕ್ಕೆ ಕೇಂದ್ರದ ವಿರುದ್ಧ ಗುಡುಗಿದ ಹೆಚ್‍ಡಿಕೆ

    ಕನ್ನಡದಲ್ಲಿ ಪರೀಕ್ಷೆ ನಡೆಸದ್ದಕ್ಕೆ ಕೇಂದ್ರದ ವಿರುದ್ಧ ಗುಡುಗಿದ ಹೆಚ್‍ಡಿಕೆ

    ಬೆಂಗಳೂರು: ಬ್ಯಾಂಕಿಂಗ್ ಪರೀಕ್ಷೆ ಕನ್ನಡದಲ್ಲಿ ಬರೆಯಲು ಅವಕಾಶ ಕೊಡದ ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

    ಈ ವಿಚಾರವಾಗಿ ಇಂದು ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಕನ್ನಡದ ಮೇಲೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸುತ್ತೇನೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕನ್ನಡಿಗರ ಹಲವಾರು ಬೇಡಿಕೆಗಳ ನಂತರವೂ ಕೇಂದ್ರ ಸರ್ಕಾರ IBPS ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಿಲ್ಲ. ಜೊತೆಗೆ ಮುಂಚೆ ಇದ್ದ domicile ನಿಯಮವನ್ನು ವಾಪಸ್ ತರಲಾಗಿಲ್ಲ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆಗೆ ಇದು ಸಾಕ್ಷಿ. ಇದನ್ನು ನಾನು ಖಡಾಖಂಡಿತವಾಗಿ ವಿರೋಧಿಸುತ್ತೇನೆ ಎಂದು ತಮ್ಮ ಟ್ವಿಟ್ಟರ್‍ ನಲ್ಲಿ ಬರೆದುಕೊಂಡಿದ್ದಾರೆ.

    ಈ ವಿಚಾರಕ್ಕೆ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯದ ಕೆಲ ಜಿಲ್ಲೆಯಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಬ್ಯಾಂಕಿಂಗ್ ಪರೀಕ್ಷೆಗೆ ಕನ್ನಡದಲ್ಲಿ ಬರೆಯಲು ಅವಕಾಶ ನೀಡುವುದಾಗಿ ಹೇಳಿ ಮಾತಿಗೆ ತಪ್ಪಿದ್ದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಧಾರವಾಡದಲ್ಲಿ ಪ್ರತಿಭಟನೆ ಮಾಡಲಾಯಿತು. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿದ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು, ಕೇಂದ್ರಸಚಿವೆ ನಿರ್ಮಲಾ ಸಿತಾರಾಮನ್ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತ ಪಡಿಸಿದರು. ಇದೇ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

    ಈ ಹಿಂದೆ ಜುಲೈ 7 ರಂದು ಲೋಕಸಭಾ ಅಧಿವೇಶನದಲ್ಲಿ ಮಾತನಾಡಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ದೇಶದಲ್ಲಿ 45 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳಿದ್ದು, 90 ಸಾವಿರ ಜನರು ಉದ್ಯೋಗಿಗಳಿದ್ದಾರೆ. ಇವುಗಳಿಗೆ ಆರ್.ಆರ್.ಬಿ ಪರೀಕ್ಷೆ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಐಬಿಪಿಎಸ್ ಮೂಲಕ ನೇಮಕಾತಿ ನಡೆಯುತ್ತಿದೆ. ಹೀಗಾಗಿ ಸ್ಥಳೀಯ ವಿದ್ಯಾರ್ಥಿಗಳಿಗೆ ಬ್ಯಾಂಕ್‍ನಲ್ಲಿ ಉದ್ಯೋಗ ಪಡೆಯುವ ಅವಕಾಶ ನೀಡುವ ನಿಟ್ಟಿನಲ್ಲಿ ಕನ್ನಡ ಸೇರಿದಂತೆ 13 ಸ್ಥಳಿಯ ಭಾಷೆಯಲ್ಲೂ ಪರೀಕ್ಷೆ ಬರೆಯಬಹುದು ಎಂದು ತಿಳಿಸಿದ್ದರು.

    ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಸ್ಥಳೀಯ ಭಾಷೆಯಲ್ಲಿ ಹೆಚ್ಚು ಜ್ಞಾನ ಪಡೆದುಕೊಂಡಿರುತ್ತಾರೆ. ಹೀಗಾಗಿ ಪ್ರಾದೇಶಿಕ ಭಾಷೆಯಲ್ಲಿಯೇ ಆರ್.ಆರ್.ಬಿ, ಐಬಿಪಿಎಸ್ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಒತ್ತಾಯ ಕೇಳಿ ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು.

    ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಕ್ಲರ್ಕ್ ಹುದ್ದೆಗಳನ್ನು ನೇಮಕಾತಿ ಮಾಡಲು ಇಂದು ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ ಅರ್ಜಿಯನ್ನು ಅಹ್ವಾನ ಮಾಡಿದ್ದು, ಇದರಲ್ಲಿ ಕೇವಲ ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ಪರೀಕ್ಷೆ ಬರೆಯಬಹುದು ಎಂದು ತಿಳಿಸಿದೆ. ಆದರೆ ಕೆಳಗೆ ನೀಡಿರುವ ಅಧಿಸೂಚನೆಯಲ್ಲಿ ಅಭ್ಯರ್ಥಿಗಳಿಗೆ ಸ್ಥಳೀಯ ಭಾಷೆಗಳು ತಿಳಿದಿರಬೇಕು ಎಂದು ಹೇಳಲಾಗಿದೆ. ಆದರೆ ಅದನ್ನು ಖಚಿತ ಪಡಿಸಲು ಯಾವುದೇ ಮಾನದಂಡವನ್ನು ಹೇಳದೇ ಇರುವುದು ಕನ್ನಡಿಗರ ಟೀಕೆಗೆ ಗುರಿಯಾಗಿದೆ.

  • ಸೆ.26, 27 ಎರಡು ದಿನ ಬ್ಯಾಂಕ್ ಮುಷ್ಕರ

    ಸೆ.26, 27 ಎರಡು ದಿನ ಬ್ಯಾಂಕ್ ಮುಷ್ಕರ

    ಬೆಂಗಳೂರು: 10 ರಾಷ್ಟ್ರೀಕೃತ ಬ್ಯಾಂಕ್‍ಗಳ ಮಹಾ ವಿಲೀನವನ್ನು ಖಂಡಿಸಿ ನಾಲ್ಕು ಬ್ಯಾಂಕ್ ನೌಕರರ ಸಂಘಗಳು ಸೆಪ್ಟೆಂಬರ್ 25ರ ಮಧ್ಯರಾತ್ರಿಯಿಂದ ಎರಡು ದಿನಗಳ ಕಾಲ ಮುಷ್ಕರ ಹಮ್ಮಿಕೊಂಡಿವೆ.

    ಈ ಕುರಿತು ಗುರುವಾರ ಸಂಘಟನೆಯ ಮುಖ್ಯಸ್ಥರು ಸ್ಪಷ್ಟಪಡಿಸಿದ್ದು, ಸೆಪ್ಟೆಂಬರ್ 25ರ ಮಧ್ಯರಾತ್ರಿಯಿಂದ ಎರಡು ದಿನಗಳ ಕಾಲ ಮುಷ್ಕರ ನಡೆಸಲಾಗುವುದು. ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದಲ್ಲಿ. ನವೆಂಬರ್ ಎರಡನೇ ವಾರದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.

    10 ರಾಷ್ಟ್ರೀಕೃತ ಬ್ಯಾಂಕ್‍ಗಳ ವಿಲೀನ ತಡೆಯುವುದು ಹಾಗೂ ಸಿಬ್ಬಂದಿಯ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬ್ಯಾಂಕ್ ನೌಕರರ ಒಕ್ಕೂಟಗಳು ಮುಷ್ಕರಕ್ಕೆ ಕರೆ ನೀಡಿವೆ ಎಂದು ಅಖಿಲ ಭಾರತೀಯ ಬ್ಯಾಂಕ್ ಅಧಿಕಾರಿಗಳ ಕಾನ್ಫೆಡರೇಶನ್(ಎಐಬಿಓಸಿ)ನ ಪ್ರಧಾನ ಕಾರ್ಯದರ್ಶಿ ದೀಪಲ್ ಕುಮಾರ್ ಶರ್ಮಾ ತಿಳಿಸಿದ್ದಾರೆ.

    ಕಾಲ ಕಾಲಕ್ಕೆ ವೇತನ ಪರಿಷ್ಕರಣೆ, ವಾರದಲ್ಲಿ 5 ದಿನ ಮಾತ್ರ ಕೆಲಸದ ವ್ಯವಸ್ಥೆ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಮುಷ್ಕರ ನಡೆಸಲಾಗುತ್ತಿದೆ. ಮುಷ್ಕರಕ್ಕೆ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಓಎ), ಭಾರತೀಯ ರಾಷ್ಟ್ರೀಯ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್ (ಐಎನ್‍ಬಿಓಸಿ) ಮತ್ತು ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಸಂಸ್ಥೆ (ಎನ್‍ಓಬಿಓ) ಬೆಂಬಲ ಸೂಚಿಸಿವೆ.

    ದೇಶಾದ್ಯಂತ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‍ಗಳು ಸೆಪ್ಟೆಂಬರ್ 25ರ ಮಧ್ಯರಾತ್ರಿಯಿಂದ 27ರ ವರೆಗೆ ಪ್ರತಿಭಟನೆ ನಡೆಸಲಿವೆ. ಸರ್ಕಾರ ಈ ಕುರಿತು ಎಚ್ಚರಿಕೆ ವಹಿಸದಿದ್ದಲ್ಲಿ ನವೆಂಬರ್ ಎರಡನೇ ವಾರದಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗುವುದು ಎಂದು ಶರ್ಮಾ ತಿಳಿಸಿದ್ದಾರೆ.

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆಗಸ್ಟ್ 30ರಂದು 10 ಸಾರ್ವಜನಿಕ ವಲಯದ ಬ್ಯಾಂಕ್‍ಗಳನ್ನು ನಾಲ್ಕು ಬ್ಯಾಂಕ್‍ಗಳಿಗೆ ವಿಲೀನಗೊಳಿಸಿರುವ ಕುರಿತು ಘೋಷಣೆ ಮಾಡಿದ್ದರು. ಐದು ವರ್ಷಗಳ ಆರ್ಥಿಕತೆಯ ಕುಂಠಿತವನ್ನು ಸರಿ ದಾರಿಗೆ ತಂದು, ಬೆಳೆವಣಿಗೆಯತ್ತ ಕೊಂಡೊಯ್ಯಬೇಕು. ಹೀಗಾಗಿ ಸಣ್ಣ ಬ್ಯಾಂಕ್‍ಗಳನ್ನು ವಿಲೀನಗೊಳಿಸಿ ಬೃಹತ್ ಬ್ಯಾಂಕ್‍ಗಳನ್ನಾಗಿ ಮಾಡಿ, ವಿಶ್ವ ದರ್ಜೆಗೆ ಕೊಂಡೊಯ್ಯಬೇಕು ಎನ್ನುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದರು.

     

    ಇದರ ಭಾಗವಾಗಿ ರಾಜ್ಯದ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್‍ಗಳನ್ನು ಸಹ ವಿಲೀನ ಮಾಡಲಾಗುತ್ತಿದೆ. ಈ ಕುರಿತು ಆಗಸ್ಟ್ 30ರಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ನಿರ್ಮಲಾ ಸೀತಾರಾಮನ್ ಅವರು, 2017ರಲ್ಲಿ 17 ಸಾರ್ವಜನಿಕ ವಲಯದ ಬ್ಯಾಂಕ್‍ಗಳಿದ್ದವು. ಇದನ್ನು 13ಕ್ಕೆ ಇಳಿಸುವ ನಿಟ್ಟಿನಲ್ಲಿ ಈ ವಿಲೀನ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದರು. ಪಂಜಾಬ್ ನ್ಯಾಷನಲ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹಾಗೂ ಯುನೈಟೆಡ್ ಬ್ಯಾಂಕ್ ವಿಲೀನವಾದರೆ ಇಂಡಿಯನ್ ಬ್ಯಾಂಕ್ ಜೊತೆ ಅಲಹಾಬಾದ್ ಬ್ಯಾಂಕ್ ವಿಲೀನವಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಆಂಧ್ರ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ವಿಲೀನವಾಗಿವೆ.

  • ಪಿಕ್ಚರ್ ಅಭಿ ಬಾಕಿ ಹೈ – ಭ್ರಷ್ಟಾಚಾರಿಗಳ ವಿರುದ್ಧ ಮೋದಿ ಗುಡುಗು

    ಪಿಕ್ಚರ್ ಅಭಿ ಬಾಕಿ ಹೈ – ಭ್ರಷ್ಟಾಚಾರಿಗಳ ವಿರುದ್ಧ ಮೋದಿ ಗುಡುಗು

    – ಮೋದಿ ಸರ್ಕಾರಕ್ಕೆ ನೂರರ ಸಂಭ್ರಮ

    ರಾಂಚಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎರಡನೇ ಅವಧಿಯ ಆಡಳಿತ 100 ದಿನಗಳನ್ನು ಪೂರೈಸಿದ್ದು, ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ರಾಂಚಿಯಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.

    ಇದೇ ವೇಳೆ ಭ್ರಷ್ಟಾಚಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಭ್ರಷ್ಟಾಚಾರಿಗಳಿಗೆ ತಕ್ಕ ಶಾಸ್ತಿ ಕಾದಿದೆ. ಅವರಿಗೆ ಸೂಕ್ತ ಸ್ಥಳವನ್ನು ತೋರಿಸಲಾಗುವುದು ಎಂದು ಹೇಳುವ ಮೂಲಕ ಭ್ರಷ್ಟಾಚಾರ ಮುಕ್ತ ಸರ್ಕಾರದ ಭರವಸೆಯನ್ನು ಪುನರುಚ್ಚರಿಸಿದ್ದಾರೆ.

    ಭ್ರಷ್ಟಾಚಾರದ ವಿರುದ್ಧ ಈಗಾಗಲೇ ದಾಳಿಗಳು ನಡೆಯುತ್ತಿದ್ದು, ಸಾರ್ವಜನಿಕರನ್ನು ಲೂಟಿ ಮಾಡುವವರಿಗೆ ಸೂಕ್ತ ಸ್ಥಳವನ್ನು ತೋರಿಸಲಾಗುವುದು. ಮೋದಿಯ 2.0 ಸರ್ಕಾದ ಅವಧಿಯಲ್ಲಿ ಇನ್ನೂ ಹೆಚ್ಚು ಉತ್ತಮ ಕೆಲಸಗಳು ಆಗಬೇಕಿದ್ದು, ಈ 100 ದಿನಗಳು ಕೇವಲ ಟ್ರೈಲರ್ ಮಾತ್ರ, ಪಿಕ್ಚರ್ ಅಭಿ ಬಾಕಿ ಹೈ ಎಂದು ಗುಡುಗಿದ್ದಾರೆ.

    ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ರೈತರ ಪಿಂಚಣಿ ಯೋಜನೆಗೆ ಚಾಲನೆ ನೀಡಿ, ‘ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆ’ ಅಡಿಯಲ್ಲಿ 18ರಿಂದ 40 ವರ್ಷದೊಳಗಿನ ರೈತರು 60 ವರ್ಷಗಳ ನಂತರ ಮಾಸಿಕ 3,000 ರೂ. ಪಿಂಚಣಿ ಪಡೆಯಬಹುದಾಗಿದೆ ಎಂದರು.

    ಮುಂದಿನ ಮೂರು ವರ್ಷಗಳವರೆಗೆ ಈ ಯೋಜನೆಗೆ 10,774 ಕೋಟಿ ರೂ. ಹಣವನ್ನು ಮೀಸಲಿರಿಸಲಾಗಿದೆ. ಪ್ರಸ್ತುತ 18 ರಿಂದ 40 ವರ್ಷದೊಳಗಿನ ಎಲ್ಲ ಸಣ್ಣ ಹಾಗೂ ಮಧ್ಯಮ ವರ್ಗದ ರೈತರು ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮೋದಿ ತಿಳಿಸಿದರು. ಈ ವರ್ಷದ ಕೊನೆಯಲ್ಲಿ ಜಾರ್ಖಂಡ್‍ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ರ್ಯಾಲಿಗಳು ಹಾಗೂ ವಿವಿಧ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ.

  • ಅಶ್ವಥ್ ನಾರಾಯಣ, ಅಶೋಕ್ ವಿರುದ್ಧ ನಾರಾಯಣ ಗೌಡ ವಾಗ್ದಾಳಿ

    ಅಶ್ವಥ್ ನಾರಾಯಣ, ಅಶೋಕ್ ವಿರುದ್ಧ ನಾರಾಯಣ ಗೌಡ ವಾಗ್ದಾಳಿ

    ಬೆಂಗಳೂರು: ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಹಾಗೂ ಕಂದಾಯ ಸಚಿವ ಆರ್ ಅಶೋಕ್ ವಿರುದ್ಧ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ವಾಗ್ದಾಳಿ ನಡೆಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಮುದಾಯವನ್ನು ಬಳಸಿಕೊಂಡು ಎಲ್ಲರೂ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ಅವರು ಕೂಡ ಸಮುದಾಯವನ್ನು ಬಳಸಿಕೊಂಡು ಮಂತ್ರಿ ಹಾಗೂ ಶಾಸಕರು ಆಗಿದ್ದಾರೆ. ಹಾಗಾಗಿ ಉಪಮುಖ್ಯಮಂತ್ರಿ ಅಥವಾ ಮಂತ್ರಿ ಆಗಲಿ ಮುಖ ನೋಡಿ ಈ ಸ್ಥಾನ ಕೊಡಲಿಲ್ಲ. ಬದಲಾಗಿ ಅವರ ಸಮುದಾಯ ನೋಡಿ ಅವರಿಗೆ ಉಪಮುಖ್ಯಮಂತ್ರಿ ಹಾಗೂ ಮಂತ್ರಿ ಸ್ಥಾನವನ್ನು ಕೊಟ್ಟಿದ್ದಾರೆ. ಇಂದು ಬಿಜೆಪಿಯಲ್ಲಿ ಒಬ್ಬ ಅಶ್ವಥ್ ನಾರಾಯಣ್, ಸಿ.ಟಿ ರವಿ, ಅಶೋಕ್ ಅವರನ್ನು ಮಾತನಾಡಿಸುತ್ತಿದ್ದಾರೆ ಹೊರತು ಮಾತನಾಡುತ್ತಿಲ್ಲ ಎಂದು ಕಿಡಿ ಕಾರಿದರು.

    ನಾನು ಯಾವಾಗಲೂ ಕನ್ನಡ, ಕನ್ನಡಿಗರ ಹಾಗೂ ಕರ್ನಾಟಕದ ಪರವಾಗಿ 25 ವರ್ಷದ ಹೋರಾಟದ ಜೀವನದಲ್ಲಿ ತೊಡಗಿಸಿಕೊಂಡಿದ್ದೇನೆ. ಈಗಲೂ ಕರ್ನಾಟಕದ ಧ್ವನಿಯಾಗಿ ಕೆಲಸ ಮಾಡಬೇಕು ಎಂಬುದು ನನ್ನ ಉದ್ದೇಶವಾಗಿದೆ. ರಾಜಕೀಯವಾಗಿ ನಾನು ಯೋಚನೆ ಮಾಡಿಲ್ಲ. ಈ ಹೋರಾಟ ಸಂಪೂರ್ಣವಾಗಿ ಡಿ.ಕೆ ಶಿವಕುಮಾರ್ ಅವರ ಕಾನೂನಿನ ಹೋರಾಟಕ್ಕೆ ನೈತಿಕವಾದಂತಹ ಹಾಗೂ ಮಾನಸಿಕವಾದಂತಹ ರ‍್ಯಾಲಿಯೇ ಹೊರತು ಬೇರೆ ರಾಜಕೀಯ ಉದ್ದೇಶ ಇಲ್ಲ ಎಂದು ಹೇಳಿದ್ದಾರೆ.

    ಎಲ್ಲ ಸಂಸ್ಥೆಗಳಲ್ಲಿ ಸಮಸ್ಯೆ ಇದ್ದೇ ಇರುತ್ತದೆ. ಒಕ್ಕಲಿಗರ ಸಂಘದಲ್ಲಿ ನಿರ್ದೇಶಕರು, ಆಡಳಿತ ಇಲ್ಲ. ಎಲ್ಲ ನಿರ್ದೇಶಕರು ಈ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಸಮಾಜದ ಅನೇಕ ಸಂಘ-ಸಂಸ್ಥೆ ಹಾಗೂ ರಾಜಕೀಯ ಪಕ್ಷಗಳು ಈ ರ‍್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ 40 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಕೂಡ ಭಾಗಿಯಾಗಲಿದ್ದಾರೆ ಎಂದರು.

    ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಪ್ರಕರಣವನ್ನೂ ಸಿಬಿಐಗೆ ಕೊಟ್ಟಿದ್ದಾರೆ. ಹೀಗಾಗಿ ಅವರಿಗೂ ಮುಂದಿನ ದಿನಗಳಲ್ಲಿ ತೊಂದರೆ ಆಗಬಹುದು. ಒಟ್ಟಿನಲ್ಲಿ ಸಮಾಜದ ನಾಯಕರನ್ನು ರಾಜಕೀಯ ಮುಗಿಸಬೇಕು ಎಂಬ ಕೇಂದ್ರದ ವ್ಯವಸ್ಥೆಯ ವಿರುದ್ಧ ಜನ ಸಿಡಿದೆದ್ದು ನಿಲ್ಲಬೇಕಾಗುತ್ತದೆ ಎಂದು ಹೇಳಿದ್ದಾರೆ.