Tag: Central Government

  • ಹೆತ್ತವರನ್ನು ನಿರ್ಲಕ್ಷಿಸುವವರ ವಿರುದ್ಧ ಕ್ರಮಕ್ಕೆ ಕೇಂದ್ರ ಚಿಂತನೆ

    ಹೆತ್ತವರನ್ನು ನಿರ್ಲಕ್ಷಿಸುವವರ ವಿರುದ್ಧ ಕ್ರಮಕ್ಕೆ ಕೇಂದ್ರ ಚಿಂತನೆ

    ನವದೆಹಲಿ: ವಯಸ್ಸಾದ ಮೇಲೆ ವೃದ್ಧ ತಂದೆ, ತಾಯಿಯನ್ನು ಮಕ್ಕಳು ಸರಿಯಾಗಿ ನೋಡಿಕೊಳ್ಳದೆ ಬೀದಿಯಲ್ಲಿ ಬಿಟ್ಟು, ನಿರ್ಲಕ್ಷಿಸಿ ಶೋಷಿಸುವ ಮಕ್ಕಳ ಮೇಲೆ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈಗಿರುವ ಕಾನೂನನ್ನು ಬಲಗೊಳಿಸಿ ಹೊಸ ಕರಡನ್ನು ರೂಪಿಸಿದೆ.

    2007ರಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಹೆತ್ತವರು ಮತ್ತು ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯ್ದೆಯನ್ನು ತಿದ್ದುಪಡಿ ಮಾಡಿತ್ತು. ಇದರಲ್ಲಿ ಹಿರಿಯರನ್ನು ಶೋಷಿಸುವವರು, ಉಪೇಕ್ಷಿಸುವವರಿಗೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣವನ್ನು ಮೂರು ತಿಂಗಳಿನಿಂದ ಆರು ತಿಂಗಳಿಗೆ ಹೆಚ್ಚಿಸುವ ಪ್ರಸ್ತಾವನೆ ಒಳಗೊಂಡಿತ್ತು.

    ಹೆತ್ತವರನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳದೆ ನಿರ್ಲಕ್ಷಿಸುವ ಮಕ್ಕಳ ಮೇಲೆ ಕ್ರಮ ತೆಗೆದುಕೊಳ್ಳುವ ಕಾನೂನನ್ನು ಬಲಪಡಿಸಿ, ಹಿರಿಯರಿಗೆ ನೆಮ್ಮದಿಯನ್ನು ನೀಡುವುದು ಮೋದಿ ಸರ್ಕಾರದ ಆದ್ಯತೆಗಳಲ್ಲಿ ಒಂದಾಗಿದೆ. ಆದ್ದರಿಂದ ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರ ಈ ಆದ್ಯತೆಗೆ ಒತ್ತು ನೀಡಲು ನಿರ್ಧರಿಸಿದೆ.

    ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ತಿದ್ದುಪಡಿಗಳನ್ನು ಗಮನಿಸಿದ ಪ್ರಧಾನಿ ಕಚೇರಿ, ಅದರ ಕಾರ್ಯಸಾಧುತ್ವ ಮತ್ತು ಪರಿಣಾಮವನ್ನು ಹೆಚ್ಚಿಸಲು ಮೂರನೇ ಸಂಸ್ಥೆಯೊಂದರ ಸಹಾಯ ಪಡೆಯಲಿದ್ದು, ಆ ಸಂಸ್ಥೆಗೆ ಈ ಬಗ್ಗೆ ಪರಿಶೀಲನೆಗೆ ಒಪ್ಪಿಸಲು ಮುಂದಾಗಿದೆ. ಈ ಮೂಲಕ ಈಗಿರುವ ಕಾನೂನನ್ನು ಇನ್ನಷ್ಟು ಬಲಗೊಳಿಸುವ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಖುದ್ದು ಪ್ರಧಾನಿ ಕಚೇರಿಯೇ ಮಧ್ಯಪ್ರವೇಶಿಸಿದೆ. ಹಿಂದಿನ ಕಾನೂನಿನ ಪರಿಣಾಮ ಹೇಗಿದೆ? ಇದರಿಂದ ವೃದ್ಧ ಪೋಷಕರಿಗೆ ಯಾವ ರೀತಿ ಸಹಾಯವಾಗಿದೆ? ಹೀಗೆ ಹಲವು ವಿಚಾರಗಳ ಬಗ್ಗೆ ಮೂರನೇ ಸಂಸ್ಥೆಯಿಂದ ಪರಿಶೀಲನೆಗೆ ಸೂಚಿಸಲಿದೆ.

    ಇಲ್ಲಿಯವರೆಗೆ ಹೆತ್ತವರನ್ನು ನೋಡಿಕೊಳ್ಳುವ ಮಕ್ಕಳ ವ್ಯಾಖ್ಯಾನದಡಿ ಕೇವಲ ಪುತ್ರರು, ಪುತ್ರಿಯರು ಮತ್ತು ಮೊಮ್ಮಕ್ಕಳು ಬರುತ್ತಿದ್ದರು. ಆದರೆ ಮುಂದೆ ಅದನ್ನು ಮಕ್ಕಳು/ದತ್ತು ಮಕ್ಕಳು, ಅಳಿಯ, ಸೊಸೆ, ಮೊಮ್ಮಕ್ಕಳು ಮತ್ತು ಅಪ್ರಾಪ್ತರಿಗೂ ವಿಸ್ತರಿಸಲಾಗಿದೆ.

    ಅಲ್ಲದೆ ಪೋಷಕರ ಜೀವನ ನಿರ್ವಹಣೆಗೆ ಗರಿಷ್ಠ ಮೊತ್ತವನ್ನು ತಿಂಗಳಿಗೆ 10,000 ರೂ. ಎಂದು ನಿಗದಿಪಡಿಸಲಾದೆ. ಆದರೆ ಈ ಮೊತ್ತ ಪ್ರಕರಣದಿಂದ ಪ್ರಕರಣಕ್ಕೆ ಬದಲಾಗಬಹುದು. ಯಾಕೆಂದರೆ ಒಳ್ಳೆಯ ಕೆಲಸದಲ್ಲಿದ್ದು, ಹೆಚ್ಚು ಸಂಬಳ ಗಳಿಸುವವರು ಹೆಚ್ಚು ಪಾವತಿ ಮಾಡಬೇಕಾಗುತ್ತದೆ.

    ಹಾಗೆಯೇ ಹಿರಿಯ ನಾಗರಿಕರ ಪಾಲನಾ ಕೇಂದ್ರಗಳು, ಡೇ-ಕೇರ್ ಸೆಂಟರ್ ಗಳು, ವೃದ್ಧಾಶ್ರಮಗಳ ಗುಣಮಟ್ಟವನ್ನು ಹೆಚ್ಚಳವನ್ನು ಕಡ್ಡಾಯ ಮಾಡಲಾಗಿದೆ. ಜೊತೆಗೆ ಕ್ಯಾಲಿಟಿ ಕಂಟ್ರೋಲ್ ಆಫ್ ಇಂಡಿಯಾ ರೀತಿಯ ಸಂಸ್ಥೆಗಳು ವೃದ್ಧಾಶ್ರಮಗಳು, ಡೇ-ಕೇರ್ ಸೆಂಟರ್‍ ಗಳ ಪರಿಶೀಲನೆ ನಡೆಸಿ, ಅವುಗಳಿಗೆ ರೇಟಿಂಗ್ ಕೊಟ್ಟು ಗುಣಮಟ್ಟ ತಿಳಿಯಲು ಮುಂದಾಗಿದೆ.

  • ನೆರೆ ಪರಿಹಾರ ಕೊಡದ ಕೇಂದ್ರ ಸರ್ಕಾರ – ಎಲ್ಲಾ ಚೆನ್ನಾಗಿದೆ ಎಂದ ಮೋದಿ ವಿರುದ್ಧ ಕಿಡಿ

    ನೆರೆ ಪರಿಹಾರ ಕೊಡದ ಕೇಂದ್ರ ಸರ್ಕಾರ – ಎಲ್ಲಾ ಚೆನ್ನಾಗಿದೆ ಎಂದ ಮೋದಿ ವಿರುದ್ಧ ಕಿಡಿ

    ಬೆಂಗಳೂರು: ನೆರೆ ಬಂದೂ 2 ತಿಂಗಳಾದರೂ ರಾಜ್ಯದ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ನಾವು ಆಯ್ಕೆ ಮಾಡಿ ಕಳುಹಿಸಿದ 25 ಸಂಸದರು ಸಹ ನಮ್ಮ ಕಷ್ಟ ಕೇಳುತ್ತಿಲ್ಲ. ಪ್ರಧಾನಿ ಮೋದಿ ಪ್ರೀತಿಸುವ ಜನರೇ ಇದೀಗ ಮೋದಿ ವಿರುದ್ಧ ತಿರುಗಿ ಬಿದ್ದಿದ್ದಾರೆ.

    ಎಲ್ಲಾ ಚೆನ್ನಾಗಿದೆ ಎಂದು, ಬಾಗುಂದಿ, ಭಾರತ್ ದೇಶ್‍ಮೇ ಸಬ್ ಕುಚ್ ಅಚ್ಚಾ ಹೇ ಹೀಗಂತ ದೂರದ ಅಮೆರಿಕದಲ್ಲಿ ಪ್ರಧಾನಿ ಮೋದಿ ಘಂಟಾಘೋಷವಾಗಿ ಹೇಳಿದರು. ಇದೇ ಹೊತ್ತಲ್ಲಿ, ರಣಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಉತ್ತರ ಕರ್ನಾಟಕ ನಲುಗಿ ಹೋಗಿತ್ತು. ಇದನ್ನೂ ಓದಿಯಡಿಯೂರಪ್ಪನವರೇ ನೀವಿಲ್ಲಿಗೆ ಬರಬೇಡಿ – ಸಂತ್ರಸ್ತರ ಆಕ್ರೋಶ

    ಪ್ರವಾಹ ಬಂದು ಬದುಕು ಕುಸಿದು ಎರಡು ತಿಂಗಳಾಗುತ್ತಾ ಬಂದರು ಕೇಂದ್ರ ಸರ್ಕಾರ ಪರಿಹಾರ ಹಣ ನೀಡುತ್ತಿಲ್ಲ. ನೆರೆ ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಮಾಡಿಲ್ಲ. ಪರಿಹಾರ ಎಲ್ಲಿ ಎಂದು ಕೇಳಿದರೆ, ಸಚಿವ ಈಶ್ವರಪ್ಪನವರು ಈಗ ಕೊಟ್ಟಿರೋದೇ ಜಾಸ್ತಿ ಎನ್ನುವ ರೀತಿಯಲ್ಲಿ ಮಾತನಾಡುತ್ತಾರೆ. ಇದೇ ಹೊತ್ತಲ್ಲಿ ಪ್ರಧಾನಿ ಮೋದಿ, ರಷ್ಯಾಗೆ ಸಾಲ ಕೊಡುತ್ತಾರೆ. ಅಲ್ಲದೆ ಕೆಲ ಕೆರಿಬಿಯನ್ ದೇಶಗಳಿಗೆ ಸಾಲ, ನೆರವು ಘೋಷಣೆ ಮಾಡುತ್ತಾರೆ.

    ಸಾಲ ಕೊಟ್ಟ ಪರಿಣಾಮ ಬಿಜೆಪಿಗೆ ಅತೀ ಹೆಚ್ಚು ಮತ ಕೊಟ್ಟು ಗೆಲ್ಲಿಸಿದ ಉತ್ತರ ಕರ್ನಾಟಕದ ಮಂದಿ ಇದೀಗ ಪ್ರಧಾನಿ ಮೋದಿ ನೇತೃತ್ವದ ಕೇಂದ್ರದ ವಿರುದ್ಧ ಸಿಡಿದು ನಿಂತಿದ್ದಾರೆ. ಸೇವ್ ಉತ್ತರ ಕರ್ನಾಟಕ ಎಂಬ ಹ್ಯಾಷ್‍ಟ್ಯಾಗ್‍ನಡಿ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಿದ್ದಾರೆ.

    ಮೋದಿ ಮೇನಿಯಾದಲ್ಲಿ ಮತದಾರರು ರಾಜ್ಯದಿಂದ ಬಿಜೆಪಿ 25 ಸಂಸದರನ್ನು ಆರಿಸಿ ಲೋಕಸಭೆಗೆ ಕಳುಹಿಸಿಕೊಟ್ಟರು. ಆದರೆ ನೆರೆ ಬಂದಾಗ ಪ್ರಧಾನಿ ಮೋದಿಗೆ ಕರುನಾಡು ನೆನಪಾಗಲಿಲ್ಲ. ಈಗ ಜನ ಎಚ್ಚೆತ್ತು ಕೇಂದ್ರದ ವಿರುದ್ಧ ವಾಗ್ದಾಳಿಗೆ ಮುಂದಾಗಿದ್ದಾರೆ. ಮೋದಿ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದು ಸಂತ್ರಸ್ತರು ಎಚ್ಚರಿಕೆ ಕೊಡುತ್ತಾರೆ.

    ಇಷ್ಟಕ್ಕೆ ನಿಲ್ಲುತ್ತಿಲ್ಲ ಉತ್ತರ ಕರ್ನಾಟಕ ಮಂದಿಯ ಕೋಪ. ಇದೇ 29ಕ್ಕೆ ರಾಜ್ಯಾದ್ಯಂತ ಸೇವ್ ಉತ್ತರ ಕರ್ನಾಟಕ. ಉತ್ತರ ಕರ್ನಾಟಕ ಬಿಲಾಂಗ್ಸ್ ಇಂಡಿಯಾ ಎನ್ನುತ್ತ ದೊಡ್ಡ ಮಟ್ಟದಲ್ಲಿ ಬಿಜೆಪಿ ಮತ್ತು ಮೋದಿ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದ್ರೂ ನಮ್ಮ ಸಂಸದರು ಮಾತ್ರ ಇದಕ್ಕೂ ನಮಗೂ ಸಂಬಂಧ ಇಲ್ಲ ಎನ್ನುವ ರೀತಿ ಸೈಲೆಂಟಾಗಿ ಕುಳಿತ್ತಿದ್ದಾರೆ.

  • ಸುಪ್ರೀಂ ಕೋರ್ಟ್ ತೀರ್ಪಿಗೆ ಕೇಂದ್ರ ಸರ್ಕಾರ ಕಾರಣ – ಎಚ್‍ಡಿಡಿ

    ಸುಪ್ರೀಂ ಕೋರ್ಟ್ ತೀರ್ಪಿಗೆ ಕೇಂದ್ರ ಸರ್ಕಾರ ಕಾರಣ – ಎಚ್‍ಡಿಡಿ

    ಬೆಂಗಳೂರು: ಸುಪ್ರೀಂ ಕೋರ್ಟಿನಲ್ಲಿ ಚುನಾವಣೆ ಆಯೋಗ ಈ ಚುನಾವಣೆಯನ್ನು ಮುಂದೂಡಬಹುದು ಎಂದು ಹೇಳಿದೆ. ಹೀಗಾಗಿ ಉಪಚುನಾವಣೆ ಮುಂದೂಡಿಕೆಯಾಗಿದೆ. ಆಯೋಗಕ್ಕೆ ಕೇಂದ್ರ ಸರ್ಕಾರ ಸೂಚಿಸಿರಬಹುದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬೆಳವಣಿಗೆಯಿಂದಾಗಿ ಸ್ವಾಯತ್ತ ಸಂಸ್ಥೆಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂಬ ಪ್ರಶ್ನೆ ಮೂಡುತ್ತದೆ. ಯಡಿಯೂರಪ್ಪನವರ ಪ್ರಭಾವ ಕೇಂದ್ರ ಸರ್ಕಾರದ ಮೇಲೆ ಇರಬಹುದು. ಕೇಂದ್ರ ಸರ್ಕಾರವೇ ಚುನಾವಣಾ ಆಯೋಗದ ಮೂಲಕ ಹೀಗೆ ಮಾಡಿಸಿರಬಹುದು. ಹೀಗಾಗಿ ಚುನಾವಣಾ ಆಯೋಗ ಅನರ್ಹ ಶಾಸಕರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‍ನಲ್ಲಿ ಮಧ್ಯಸ್ಥಿಕೆವಹಿಸಿದೆ ಅನ್ನಿಸುತ್ತಿದೆ ಎಂದು ಎಚ್‍ಡಿಡಿ ಕೇಂದ್ರದ ವಿರುದ್ಧ ಹರಿಹಾಯ್ದರು.

    ಮೊನ್ನೆ ಕೂಡ ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ ನೋಟಿಸ್ ನೀಡದಿದ್ದರೂ ಬಂದು ವಾದ ಮಾಡಿತ್ತು. ಈ ವಿಚಾರದಲ್ಲಿ ಚುನಾವಣೆ ಆಯೋಗದ ನಡೆ ಸರಿಯಲ್ಲ. ಆಯೋಗ ಸ್ವತಂತ್ರವಾಗಿ ಕೆಲಸ ನಿರ್ವಹಣೆ ಮಾಡಬೇಕು. ಆದರೆ ಈ ಪ್ರಕರಣದಲ್ಲಿ ಆ ರೀತಿ ನಡೆದುಕೊಂಡಿಲ್ಲ. ಚುನಾವಣಾ ಆಯೋಗದ ಮಧ್ಯಸ್ಥಿಕೆಯಿಂದ ಉಪಚುನಾವಣೆ ಮುಂದೂಡಿಕೆಯಾಗಿದೆ ಎಂದು ದೇವೇಗೌಡರು ಅಭಿಪ್ರಾಯಪಟ್ಟಿದ್ದಾರೆ.

    ಇಂದು ಪಾರ್ಲಿಮೆಂಟರಿ ಬೋರ್ಡ್ ಮೀಟಿಂಗ್‍ನಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ನಡೆದಿತ್ತು. ಅದರ ಮಧ್ಯೆಯೇ ಕೋರ್ಟ್ ತೀರ್ಪು ಬಂತು. ಪ್ರಾದೇಶಿಕ ಪಕ್ಷವಾಗಿ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೆವು. ಐಕ್ಯತೆಯಿಂದ ಚುನಾವಣೆ ಎದುರಿಸಲು ಚರ್ಚೆ ಆಗಿದೆ. ಮಹಾಲಯ ಅಮಾವಾಸ್ಯೆಯಾದ ಮೇಲೆ ಅಭ್ಯರ್ಥಿ ಆಯ್ಕೆ ಮಾಡಬೇಕು ಎಂದುಕೊಂಡಿದ್ದೆವು. ಈ ಕುರಿತು ಕುಮಾರಸ್ವಾಮಿ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.

    ಆರು ತಂಡ ರಚನೆ ಮಾಡುತ್ತೇವೆ. ಒಂದು ತಂಡದಲ್ಲಿ ಹತ್ತು ಜನರ ಇರುತ್ತಾರೆ. ಇದರಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು ಸಹ ಇದರಲ್ಲಿ ಇರುತ್ತಾರೆ. ರಾಜ್ಯದ 30 ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ಮಾಡುತ್ತಾರೆ. ಸಮಸ್ತ ಜಾತಿಗೆ ಸಿಗುವ ರೀತಿ ಜಿಲ್ಲಾ, ತಾಲೂಕು ಪದಾಧಿಕಾರಿಗಳ ಆಯ್ಕೆ ಮಾಡುತ್ತೇವೆ ಎಂದು ಎಚ್‍ಡಿಡಿ ಈ ವೇಳೆ ತಿಳಿಸಿದರು.

  • ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಏರಿಕೆ ಸಾಧ್ಯತೆ

    ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕ ಏರಿಕೆ ಸಾಧ್ಯತೆ

    ಬೆಂಗಳೂರು: ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ತೈಲ ದರ ಮತ್ತಷ್ಟು ದುಬಾರಿಯಾಗಲಿದೆ.

    ಸೌದಿ ಅರೇಬಿಯಾದ ತೈಲಾಗಾರಗಳ ಮೇಲೆ ಇತ್ತೀಚೆಗೆ ನಡೆದ ದ್ರೋಣ್ ದಾಳಿಯ ಪರಿಣಾಮವಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಸುಧಾರಣೆ ಕಂಡು ಬಂದ ಬಳಿಕ ಅಬಕಾರಿ ಸುಂಕ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ.

    ಈ ಮೂಲಕ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ತಲಾ ಎರಡು ರೂ. ಅಬಕಾರಿ ಸುಂಕ ವಿಧಿಸಲು ಗಂಭೀರ ಚಿಂತನೆ ನಡೆದಿದೆ ಎನ್ನಲಾಗಿದೆ.

    ಸರ್ಕಾರದ ತೆರಿಗೆ ಹಾಗೂ ತೆರಿಗೆಯೇತರ ವರಮಾನವು ಸಂಗ್ರಹವು ಕಡಿಮೆಯಾಗಿದೆ. ಈ ಕೊರತೆಯನ್ನು ನೀಗಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ತೈಲ ಉತ್ಪನ್ನಗಳ ಮೇಲೆ ಸುಂಕ ಹೆಚ್ಚಿಸಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

    ದೇಶದ ಹಲವು ನಗರಗಳಲ್ಲಿ ಈಗಾಗಲೇ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಲೀಟರ್ ಗೆ 75 ರೂ. ದಾಟಿದೆ. ಡೀಸೆಲ್ ಸಹ 70 ರ ಗಡಿ ಮುಟ್ಟಿದೆ.

  • ಆಟೋಮೊಬೈಲ್ ಕ್ಷೇತ್ರ ಕುಸಿತ – ಹಳೆ ವಾಹನಗಳ ನೋಂದಣಿ ಶುಲ್ಕ ಭಾರೀ ಪ್ರಮಾಣದಲ್ಲಿ ಏರಿಕೆ?

    ಆಟೋಮೊಬೈಲ್ ಕ್ಷೇತ್ರ ಕುಸಿತ – ಹಳೆ ವಾಹನಗಳ ನೋಂದಣಿ ಶುಲ್ಕ ಭಾರೀ ಪ್ರಮಾಣದಲ್ಲಿ ಏರಿಕೆ?

    ನವದೆಹಲಿ: ಕಳೆದ ಎರಡು ದಶಕಗಳ ಬಳಿಕ ಭಾರೀ ಪ್ರಮಾಣದಲ್ಲಿ ಆಟೋಮೊಬೈಲ್ ಕ್ಷೇತ್ರ ಕುಸಿತ ಕಂಡಿದೆ. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ಹಳೆಯ ವಾಹನ ಹೊಂದಿರುವ ಮಾಲೀಕರಿಗೆ ಶಾಕ್ ನೀಡಲು ಮುಂದಾಗುತ್ತಿದೆ.

    ಕಳೆದ ಸೆಪ್ಟಂಬರ್ ನಲ್ಲಿ ಹೊಸ ಮೋಟಾರು ಕಾಯ್ದೆ ಜಾರಿಗೆ ತಂದು ಜನರಿಗೆ ಶಾಕ್ ನೀಡಿದ್ದ ಸರ್ಕಾರ ಈಗ ಆಟೋಮೊಬೈಲ್ ಕ್ಷೇತ್ರದಲ್ಲಿ ಸುಧಾರಣೆ ತರಲು ಮತ್ತು ಹಳೆಯ ವಾಹನಗಳ ಬಳಕೆಗೆ ಪರೋಕ್ಷವಾಗಿ ಬ್ರೇಕ್ ಹಾಕಲು ಮರು ನೋಂದಣಿ ಶುಲ್ಕವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಲು ಮುಂದಾಗುತ್ತಿದೆ ಎಂದು ವರದಿಯಾಗಿದೆ.

    ಸಾರಿಗೆ ಸಚಿವಾಲಯ ಈ ಸಂಬಂಧ ಹೊಸ ನೀತಿಯನ್ನು ತಯಾರಿಸುತ್ತಿದ್ದು ಇನ್ನೂ ಸಾರ್ವಜನಿಕವಾಗಿ ಲಭ್ಯವಿಲ್ಲ. ಈ ಸಂಬಂಧ ಶೀಘ್ರವೇ ಕ್ಯಾಬಿನೆಟ್ ಸಭೆಯಲ್ಲಿ ಹೊಸ ನೀತಿಗೆ ಒಪ್ಪಿಗೆ ಪಡೆಯಲು ಸಾರಿಗೆ ಸಚಿವಾಲಯ ಮುಂದಾಗುತ್ತಿದೆ.

    ಯಾಕೆ ಹೊಸ ನೀತಿ?
    ಹಳೇ ವಾಹನಗಳ ಬಳಕೆಯಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ. ಇದರಿಂದ ಈ ಹೊಸ ನೀತಿಯನ್ನು ಜಾರಿಗೆ ತಂದರೆ ಹಳೇ ವಾಹನಗಳಿಂದ ಉಂಟಾಗುವ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು ಎಂಬ ಕಾರಣಕ್ಕೆ 15 ವರ್ಷದ ಹಿಂದಿನ ಪೆಟ್ರೋಲ್ ಮತ್ತು 10 ವರ್ಷ ಹಳೆಯ ಡೀಸೆಲ್ ವಾಹನಗಳ ವಾರ್ಷಿಕ ಮರು ನೋಂದಣಿ ಶುಲ್ಕವನ್ನು ಹೆಚ್ಚಳ ಮಾಡಲು ತೀರ್ಮಾನ ಮಾಡಲಾಗಿದೆ.

    ಎಷ್ಟು ಶುಲ್ಕ ಹೆಚ್ಚಳ?
    ಈ ಹಿಂದೆ ಖಾಸಗಿ 4 ಚಕ್ರದ ವಾಹನಗಳ ನೋಂದಣಿ ಮಾಡಲು 600 ರೂ. ವಾರ್ಷಿಕ ಶುಲ್ಕವಿತ್ತು. ಆದರೆ ಹೊಸ ನಿಯಮದ ಪ್ರಕಾರ ಈ ಶುಲ್ಕ 15,000 ರೂ. ಹೆಚ್ಚಳವಾಗುವ ಸಾಧ್ಯತೆ ಇದೆ. ಇದೇ ರೀತಿ ವಾಣಿಜ್ಯ ವ್ಯವಹಾರಕ್ಕೆ ಬಳಸುವ ನಾಲ್ಕು ಚಕ್ರದ ವಾಹನಗಳಿಗೆ ಈ ಹಿಂದೆ ವಾರ್ಷಿಕ ಶುಲ್ಕ 1,000 ರೂ. ಇತ್ತು ಈಗ ಅದು 20,000 ರೂ. ಏರಿಕೆ ಆಗಲಿದೆ. ಭಾರೀ ಗಾತ್ರದ ವಾಣಿಜ್ಯ ವಾಹನಗಳಿಗೆ ನೋಂದಣಿ ಶುಲ್ಕ 1,500 ರೂ. ಇತ್ತು ಈಗ ಅದು 40,000 ರೂ. ಆಗುವ ಸಾಧ್ಯತೆಯಿದೆ.

  • ಇದು ಚರ್ಮಗೇಡಿ ಸರ್ಕಾರ, ಇದಕ್ಕೆ ಪಂಚೇಂದ್ರಿಯಗಳಿಲ್ಲ: ಎಚ್.ಆರ್ ಪಾಟೀಲ್ ಕಿಡಿ

    ಇದು ಚರ್ಮಗೇಡಿ ಸರ್ಕಾರ, ಇದಕ್ಕೆ ಪಂಚೇಂದ್ರಿಯಗಳಿಲ್ಲ: ಎಚ್.ಆರ್ ಪಾಟೀಲ್ ಕಿಡಿ

    ಬೆಳಗಾವಿ: ರಾಜ್ಯ ಸರ್ಕಾರಕ್ಕೆ ಪಂಚೇಂದ್ರಿಯ ಇಲ್ಲ. ಸರ್ಕಾರಕ್ಕೆ ಕಿವಿ, ಕಣ್ಣು ಬಾಯಿ ಎನೂ ಇಲ್ಲ. ಇದು ಚರ್ಮಗೇಡಿ ಸರ್ಕಾರ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶತಮಾನದಲ್ಲಿ ಕಂಡು ಕೇಳರಿಯದ ಪ್ರವಾಹವನ್ನು ರಾಜ್ಯ ಎದುರಿಸಿದೆ. ಆದರೆ ಸರ್ಕಾರ ಈವರೆಗೂ ಪರಿಹಾರ ನೀಡಿಲ್ಲ. ದಾನಿಗಳು 95% ಸಂತ್ರಸ್ತರ ನೆರವಿಗೆ ದಾನ ಮಾಡಿದ್ದರೆ ಸರ್ಕಾರ ಐದು ಪರ್ಸೆಂಟ್ ಕೊಟ್ಟಿದೆ. ರಾಜ್ಯ ಸರ್ಕಾರಕ್ಕೆ ಪಂಚೇಂದ್ರಿಯ ಇಲ್ಲ. ಸರ್ಕಾರಕ್ಕೆ ಕಿವಿ, ಕಣ್ಣು ಬಾಯಿ ಎನೂ ಇಲ್ಲ. ಇದು ಚರ್ಮಗೇಡಿ ಸರ್ಕಾರ ಎಂದು ಹರಿಹಾಯ್ದರು.

    ಸರ್ಕಾರ ಪರಿಹಾರ ನೀಡದ ಹಿನ್ನಲೆಯಲ್ಲಿ ಮೂರು ದಿನಗಳಲ್ಲಿ ಜಮಖಂಡಿಯಿಂದ ಬೆಳಗಾವಿಗೆ ಬಂದಿದ್ದೇವೆ. ನಿತ್ಯವೂ ನಲವತ್ತೈದರಿಂದ ಐವತ್ತು ಕಿ.ಮೀ ನಡೆದಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಇಲ್ಲಿಯವರೆಗೂ ಒಂದು ನಯಾಪೈಸೆ ಬಿಡುಗಡೆ ಮಾಡಿಲ್ಲ. ರಾಜ್ಯದ ಸಿಎಂ ಭೇಟಿಗೆ ಅವಕಾಶ ಕೊಡುತ್ತಿಲ್ಲ. ಚಂದ್ರಯಾನ ವೀಕ್ಷಣೆಗೆ ಮೋದಿ ಬಂದಾಗಲೂ ನೆರೆ ಹಾವಳಿ ಕುರಿತು ಕೇಳುವ ಸೌಜನ್ಯ ತೋರಲಿಲ್ಲ ಎಂದು ಕಿಡಿಕಾರಿದರು.

    25 ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದ ಜನ ಆಯ್ಕೆ ಮಾಡಿದ್ದರೂ ಕೇಂದ್ರ ಸರ್ಕಾರ ರಾಜ್ಯದ ಪ್ರವಾಹಕ್ಕೆ ಒಂದು ಬಿಡಿಗಾಸು ಕೊಟ್ಟಿಲ್ಲ. ಹಿಂದಿನ ಬಾರಿ ಪ್ರವಾಹ ಬಂದಾಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವೈಮಾನಿಕ ಸಮೀಕ್ಷೆ ಮಾಡಿ ಪರಿಹಾರ ಕೊಟ್ಟಿದ್ದರು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಮಾತಿನ ಚಾಟಿ ಬೀಸಿದರು.

  • ನೆರೆ ಸಂತ್ರಸ್ತರನ್ನು ಕಾಪಾಡಿದ್ದು ರಾಜ್ಯದ ಜನ, ನೀವಲ್ಲ: ಸರ್ಕಾರದ ವಿರುದ್ಧ ಉಮಾಶ್ರೀ ಕಿಡಿ

    ನೆರೆ ಸಂತ್ರಸ್ತರನ್ನು ಕಾಪಾಡಿದ್ದು ರಾಜ್ಯದ ಜನ, ನೀವಲ್ಲ: ಸರ್ಕಾರದ ವಿರುದ್ಧ ಉಮಾಶ್ರೀ ಕಿಡಿ

    ಬಾಗಲಕೋಟೆ: ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡದ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಮಾಜಿ ಸಚಿವೆ ಉಮಾಶ್ರೀ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

    ಬನಹಟ್ಟಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೇ ಗಾಂಧಿ ವೃತ್ತದಲ್ಲಿ ಟೈರ್ ದಹಿಸಿ ಆಕ್ರೋಶ ಹೊರ ಹಾಕಿದರು.

    ಈ ವೇಳೆ ಮಾತನಾಡಿದ ಮಾಜಿ ಸಚಿವೆ ಉಮಾಶ್ರೀ, ಸಂತ್ರಸ್ತರಿಗೆ ರಾಜ್ಯದ ಜನ ಅನೇಕ ಅವಶ್ಯಕ ವಸ್ತುಗಳನ್ನು ನೀಡಿದ್ದಾರೆ. ಅದರಲ್ಲಿ ಬಟ್ಟೆ, ಊಟ ಉಪಹಾರ ಹಾಸಿಗೆ ಹೊದಿಕೆ ಕೂಡ ಇವೆ. ಆದರೆ ರಾಜ್ಯ, ಕೇಂದ್ರ ಸರ್ಕಾರ ಏನೂ ಮಾಡಲಿಲ್ಲ. ಸಂತ್ರಸ್ತರನ್ನು ಕಾಪಾಡಿದ್ದು ರಾಜ್ಯದ ಜನ ನೀವಲ್ಲ ಎಂದು ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೂಡಲೇ ನೆರೆ ಸಂತ್ರಸ್ತರಿಗೆ ಪರಿಹಾರ ಘೋಷಣೆ ಮಾಡಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ನೆರೆ ಪೀಡಿತ ಪ್ರದೇಶಗಳಿಗೆ 1,000 ಕೋಟಿ ರೂ. ಬಿಡುಗಡೆ

  • ಕೇಂದ್ರದಿಂದ ಪರಿಹಾರ ಹಣ ಯಾವಾಗ ಬರುತ್ತೆ – ಪ್ರಶ್ನೆಗೆ ಸಿಡಿಮಿಡಿಗೊಂಡ ಸಚಿವ ಸಿ.ಸಿ.ಪಾಟೀಲ್

    ಕೇಂದ್ರದಿಂದ ಪರಿಹಾರ ಹಣ ಯಾವಾಗ ಬರುತ್ತೆ – ಪ್ರಶ್ನೆಗೆ ಸಿಡಿಮಿಡಿಗೊಂಡ ಸಚಿವ ಸಿ.ಸಿ.ಪಾಟೀಲ್

    ಬಳ್ಳಾರಿ: ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರ ಸರ್ಕಾರದ ನೆರವಿನ ವಿಚಾರದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಗಣಿ ಸಚಿವ ಸಿ.ಸಿ.ಪಾಟೀಲ್ ಮಾಧ್ಯಮಗಳ ವಿರುದ್ಧ ಹರಿಹಾಯ್ದಿದ್ದಾರೆ.

    ಬಳ್ಳಾರಿಯಲ್ಲಿ ಈ ಕುರಿತು ಮಾಧ್ಯಮದವರು ಪ್ರಶ್ನಿಸಿದ್ದಾರೆ. ಇದಕ್ಕೆ ಕೆಂಡಾಮಂಡಲವಾಗಿರುವ ಅವರು, ನಾವು ಪರಿಹಾರ ಹಂಚಿಕೆ ಮಾಡುತ್ತಿದ್ದೇವೆ. ಪ್ರವಾಹ ಪೀಡಿತರಿಗೆ ನಮ್ಮ ಸರ್ಕಾರದಿಂದ ಶೀಘ್ರದಲ್ಲೇ ಎಲ್ಲ ಪರಿಹಾರವನ್ನು ಹಂಚಿಕೆ ಮಾಡಲಾಗುವುದು. ಕೇಂದ್ರ ಸರ್ಕಾರದ ನೆರವು ಅಗತ್ಯವಿದೆ. ಆದರೆ ಸದ್ಯಕ್ಕೆ ನಮ್ಮ ಬಳಿ ಇರುವ ಹಣ ವಿತರಣೆ ಮಾಡುತ್ತಿದ್ದೇವೆ ಎಂದರು.

    ಈ ವೇಳೆ ಸಂಸದ ತೇಜಸ್ವಿ ಸೂರ್ಯ ಕೇಂದ್ರದ ನೆರವಿನ ಅಗತ್ಯವಿಲ್ಲ ಎನ್ನುತ್ತಿದ್ದಾರೆ ಎಂದು ಕೇಳಿದ್ದಕ್ಕೆ, ಮಾಧ್ಯಮಗಳಿಗೆ ಕೈಮುಗಿದು, ಲೋಗೋ ತಳ್ಳಿ ಹೊರ ಹೋದರು. ನಂತರ ಮರಳಿ ಹೇಳಿಕೆ ನೀಡಿದ ಸಚಿವ ಸಿಸಿ ಪಾಟೀಲ್, ಪ್ರವಾಹ ಪೀಡಿತ ಸಂತ್ರಸ್ತರು ಯಡಿಯೂರಪ್ಪ ಸರ್ಕಾರ ಇಲ್ಲದಿದ್ದರೆ ನಮ್ಮ ಬಾಳು ನಾಯಿ ಪಾಡು ಆಗುತಿತ್ತು ಎಂದು ಹೊಗಳುತ್ತಿದ್ದಾರೆ. ನಮ್ಮ ಸರ್ಕಾರ ಪ್ರವಾಹ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಬದ್ಧವಾಗಿದೆ ಎಂದರು.

    ಮರಳು ಗಣಿಗಾರಿಕೆ ಇರಬೇಕು. ಅಕ್ರಮ ಮರಳು ಗಣಿಗಾರಿಕೆ ಇರಬಾರದು. ಮರಳು ಜನ ಸಾಮಾನ್ಯರಿಗೆ ಸಿಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ನಿರ್ವಹಿಸುವಂತೆ ಸೂಚಿಸಿದ್ದೇನೆ. ಎನ್ ಎಂಡಿಸಿಗೆ ಗಣಿ ಹಂಚಿಕೆ ಬಗ್ಗೆ ಶೀಘ್ರದಲ್ಲೇ ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ಜೊತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಸಿಸಿ ಪಾಟೀಲ್ ತಿಳಿಸಿದರು.

  • ಕಾರ್ಪೋರೇಟ್ ತೆರಿಗೆ ಇಳಿಸಿದ ಕೇಂದ್ರ ಸರ್ಕಾರ – ದಾಖಲೆ ಬರೆದ ಸೆನ್ಸೆಕ್ಸ್, ನಿಫ್ಟಿ

    ಕಾರ್ಪೋರೇಟ್ ತೆರಿಗೆ ಇಳಿಸಿದ ಕೇಂದ್ರ ಸರ್ಕಾರ – ದಾಖಲೆ ಬರೆದ ಸೆನ್ಸೆಕ್ಸ್, ನಿಫ್ಟಿ

    ಪಣಜಿ: ಕುಸಿಯುತ್ತಿರುವ ದೇಶದ ಆರ್ಥಿಕತೆಗೆ ಚೇತರಿಕೆಗೆ ಕೇಂದ್ರ ಸರ್ಕಾರ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಇಂದು ದೇಶಿಯ ಕಾರ್ಪೊರೇಟ್ ಸಂಸ್ಥೆ ಮೇಲಿನ ತೆರಿಗೆ ಕಡಿತ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದೆ.

    ಗೋವಾದ ಪಣಜಿಯಲ್ಲಿ ಜಿಎಸ್‍ಟಿ ಕೌನ್ಸಿಲ್ ಸಭೆ ನಡೆಯುತ್ತಿದ್ದು ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶಿಯ ಕಂಪೆನಿಗಳಿಗೆ ವಿಧಿಸುತ್ತಿದ್ದ ಕಾರ್ಪೋರೇಟ್ ತೆರಿಗೆಯನ್ನು ಕಡಿತಗೊಳಿಸಲಾಗಿದೆ. ಹೊಸ ಸ್ಥಳೀಯ ಸಂಸ್ಥೆಗಳಿಗೂ ಕಾರ್ಪೋರೇಟ್ ಮಾದರಿಯಲ್ಲಿ ತೆರಿಗೆಯಲ್ಲಿ ವಿನಾಯಿತಿ ನೀಡುವ ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು. ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

    ಶೇ.30 ರಷ್ಟಿದ್ದ ಕಾರ್ಪೊರೇಟ್ ತೆರಿಗೆಯನ್ನು ಶೇ.22.2ಕ್ಕೆ ಇಳಿಸಲಾಗಿದೆ. ಈ ಹಿಂದೆ ಕಾರ್ಪೋರೇಟ್ ತೆರಿಗೆ, ಸೆಸ್, ಸಚಾರ್ಜ್ ಸೇರಿ ಶೇ.35 ಆಗುತಿತ್ತು. ಈಗ ಇದೆಲ್ಲ ಸೇರಿ ಶೇ.25.2ಕ್ಕೆ ಇಳಿಕೆಯಾಗಿದೆ. ಆಕ್ಟೋಬರ್ 1 ರಿಂದ ಆರಂಭವಾದ ಹೊಸ ಸಂಸ್ಥೆಗಳಿಗೆ ವಿಧಿಸಲಾಗುತ್ತಿದ್ದ ತೆರಿಗೆಯನ್ನು ಶೇ.25 ರಿಂದ 15ಕ್ಕೆ ಕಡಿಮೆ ಮಾಡಲಾಗಿದೆ. ಈ ತೆರಿಗೆ ದರ ಈ ವರ್ಷದ ಏಪ್ರಿಲ್ 1 ರಿಂದಲೇ ಜಾರಿಯಾಗಲಿದೆ.

    ತೆರಿಗೆ ಕಡಿತಗೊಳಿಸಿ ಘೋಷಣೆ ಮಾಡಿದ ಬಳಿಕ ಮೇಕ್ ಇನ್ ಇಂಡಿಯಾ ಯೋಜನೆಗೆ ಇದು ನೆರವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಉದ್ಯೋಗಾವಕಾಶ ಹಾಗೂ ಆರ್ಥಿಕ ಚೇತರಿಕೆಗೆ ಸ್ಫೂರ್ತಿ ನೀಡಲಿದೆ ಎಂದಿದ್ದಾರೆ.

    ಸಚಿವರ ಹೇಳಿಕೆ ಬೆನ್ನಲ್ಲೇ ಮುಂಬೈ ಷೇರು ಮಾರುಕಟ್ಟೆಯಲ್ಲಿ ಪ್ರಗತಿ ಕಂಡಿ ಬಂದಿದ್ದು, ಸೆನ್ಸೆಕ್ಸ್ ಸುಮಾರು 1,900 ಅಂಕ ಜಿಗಿತ ಕಡಿದೆ. ನಿಫ್ಟಿ ಇತಿಹಾಸದಲ್ಲಿ ಅತಿ ಹೆಚ್ಚು ಏರಿಕೆ ಕಂಡಿದೆ. ಒಂದೇ ದಿನದಲ್ಲಿ ನಿಫ್ಟಿ 524 ಅಂಕ ಏರಿಕೆಯಾಗಿದೆ.

    ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್ 38,021 ಅಂಶ, ನಿಫ್ಟಿ 11, 273 ಅಂಶ ಏರಿಕೆಯಾಗಿದೆ. 2009ರ ನಂತರ ಒಂದೇ ದಿನದಲ್ಲಿ ಸೆನ್ಸೆಕ್ಸ್ ಅತಿ ಹೆಚ್ಚು ಏರಿಕೆಯಾಗಿದೆ. ಕ್ಷಣ ಕ್ಷಣಕ್ಕೂ ಸೆನ್ಸೆಕ್ಸ್ ಹಾಗೂ ನಿಫ್ಟಿ ಹೆಚ್ಚಳವಾಗುತ್ತಿದ್ದು, ದಾಖಲೆ ಬರೆಯುವ ನಿರೀಕ್ಷೆ ಇದೆ.

  • ವಾಯುಸೇನೆಯ ಮುಖ್ಯಸ್ಥರಾಗಲಿದ್ದಾರೆ ಬೆಂಗ್ಳೂರಿನ ಮಾಜಿ ಮುಖ್ಯ ತರಬೇತಿ ಕಮಾಂಡರ್

    ವಾಯುಸೇನೆಯ ಮುಖ್ಯಸ್ಥರಾಗಲಿದ್ದಾರೆ ಬೆಂಗ್ಳೂರಿನ ಮಾಜಿ ಮುಖ್ಯ ತರಬೇತಿ ಕಮಾಂಡರ್

    ನವದೆಹಲಿ: ಬೆಂಗಳೂರಿನ ಮಾಜಿ ಚೀಫ್ ಟ್ರೇನಿಂಗ್ ಕಮಾಂಡರ್ ಏರ್ ಮಾರ್ಷಲ್ ಆರ್ ಕೆಎಸ್ ಭಡೌರಿಯಾ ಅವರು ಭಾರತೀಯ ವಾಯು ಸೇನೆಯ ಮುಖ್ಯಸ್ಥರಾಗಲಿದ್ದಾರೆ.

    ಪ್ರಸ್ತುತ ವಾಯು ಸೇನೆಯ ಉಪಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಭಡೌರಿಯಾ ಅವರನ್ನು ವಾಯು ಸೇನೆಯ ಮುಖ್ಯಸ್ಥರನ್ನಾಗಿ ನೇಮಿಸಲಾಗುತ್ತಿದೆ. ಭಡೌರಿಯಾ ಅವರು ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ವಾಯು ಸೇನಾ ಮೆಡಲ್ ಪಡೆದಿದ್ದಾರೆ. ಎಡಿಸಿಯ ಸುಪ್ರೀಂ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

    ಏರ್ ಚೀಫ್ ಮಾರ್ಷಲ್ ಬೀರೇಂದ್ರ ಸಿಂಗ್ ಧನೋವಾ ಅವರು 25ನೇ ಭಾರತೀಯ ವಾಯು ಸೇನೆಯ ಮುಖ್ಯಸ್ಥರಾಗಿದ್ದರು. ಸೆಪ್ಟೆಂಬರ್ 30ರಂದು ಧನೋವಾ ಅವರು ನಿವೃತ್ತಿ ಹೊಂದಲಿದ್ದು, ಈ ಹಿನ್ನೆಲೆ ಭಡೌರಿಯಾ ಅವರನ್ನು ಅವರ ಜಾಗಕ್ಕೆ ನೇಮಿಸಲಾಗಿದೆ.

    ಭಡೌರಿಯಾ ಅವರು ಈ ವರೆಗೆ 4,250 ಗಂಟೆಗೂ ಹೆಚ್ಚು ಕಾಲ ವಿಮಾನ ಹಾರಾಟ ನಡೆಸಿದ್ದಾರೆ. ಒಟ್ಟು 26 ವಿವಿಧ ಯುದ್ಧ ವಿಮಾನಗಳು ಹಾಗೂ ಸಾಗಣಿಕಾ ವಿಮಾನಗಳಲ್ಲಿ ಹಾರಾಟ ನಡೆಸಿದ್ದಾರೆ. ಅಲ್ಲದೆ, ಪ್ರಾಯೋಗಿಕ ಪರೀಕ್ಷಾ ಪೈಲೆಟ್, ಕ್ಯಾಟ್ ‘ಎ’ ಅರ್ಹ ಫ್ಲೈಯಿಂಗ್ ಇನ್‍ಸ್ಟ್ರಕ್ಟರ್ ಹಾಗೂ ಪೈಲೆಟ್ ಅಟ್ಯಾಕ್ ಇನ್‍ಸ್ಟ್ರಕ್ಟರ್ ಅನುಭವ ಹೊಂದಿದ್ದಾರೆ. ಈ ಹಿಂದೆ ಫ್ರೆಂಚ್ ವಾಯುಪಡೆಯ ಮಾಂಟ್-ಡಿ-ಮಾರ್ಸನ್ ವಾಯುನೆಲೆಯಲ್ಲಿ ರಫೇಲ್ ವಿಮಾನವನ್ನು ಸಹ ಭಡೌರಿಯಾ ಹಾರಿಸಿದ್ದರು. ಭಡೌರಿಯಾ ಅವರು 1980ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‍ಗೆ ನಿಯೋಜನೆಗೊಂಡಿದ್ದರು.