ಬೆಂಗಳೂರು: ನೆರೆಹಾನಿ ಕುರಿತು ಪರಿಷ್ಕರಣೆ ಮಾಡಿದ ಅಂದಾಜು ಮೊತ್ತವನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿದ್ದು, ಪರಿಷ್ಕೃತ ವರದಿಯಲ್ಲಿ 3 ಸಾವಿರ ಕೋಟಿ ರೂ.ಗಳನ್ನು ಕಡಿತಗೊಳಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ರಾಜ್ಯ ಸರ್ಕಾರದ ಸಲ್ಲಿಸಿದ ನಷ್ಟದ ಅಂದಾಜಿಗೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ರಾಜ್ಯದ ವರದಿಗೂ, ಕೇಂದ್ರ ಅಧ್ಯಯನ ತಂಡದ ವರದಿಗೂ ತಾಳೆಯಾಗುತ್ತಿಲ್ಲ ಎಂದು ಪರಿಷ್ಕರಣೆಗೆ ಸೂಚಿಸಿತ್ತು. ಮೊದಲು ಸಲ್ಲಿಸಿದ್ದ ನಷ್ಟದ ಅಂದಾಜು ವರದಿಗೂ ಈಗ ಸಲ್ಲಿಸಿರುವ ನಷ್ಟದ ವರದಿ 3 ಸಾವಿರ ಕೋಟಿ ರೂ. ಕಡಿಮೆಯಾಗಿದೆ. ರಾಜ್ಯ ಸರ್ಕಾರ ಮೊದಲು 38,451 ಕೋಟಿ ರೂ. ಅಂದಾಜು ನಷ್ಟವಾಗಿದೆ ಎಂದು ವರದಿ ಸಲ್ಲಿಸಿತ್ತು. ಇದರನ್ವಯ ಎನ್‍ಡಿಆರ್ ಎಫ್‍ನಿಂದ 3,818 ಕೋಟಿ ಪರಿಹಾರಕ್ಕೆ ಮನವಿ ಮಾಡಲಾಗಿತ್ತು.
ಒಟ್ಟು 2,47,628 ಮನೆಗಳು ಹಾನಿಯಾಗಿವೆ ಈ ಕಟ್ಟಡಗಳಲ್ಲಿ ಖಾಸಗಿ, ಸಂಘ ಸಂಸ್ಥೆಗಳ ಹಾನಿ ಪಟ್ಟಿಯೂ ಸೇರಿತ್ತು. 2,193 ಸೇತುವೆಗಳು, 10,988 ಸರ್ಕಾರಿ ಕಟ್ಟಡಗಳು ಹಾನಿಯಾಗಿವೆ ಎಂದು ರಾಜ್ಯ ಸರ್ಕಾರ ವರದಿ ಸಲ್ಲಿಸಿತ್ತು.
ರಾಜ್ಯ ವರದಿಗೆ ಕೇಂದ್ರ ಸರ್ಕಾರದ ಆಕ್ಷೇಪ ವ್ಯಕ್ತಪಡಿಸಿ, ಒಟ್ಟು ನಷ್ಟದ ಅಂದಾಜು ಲೆಕ್ಕದಲ್ಲಿ ತಪ್ಪಿರುವ ಬಗ್ಗೆ ಅನುಮಾನವಿದೆ. ಸಣ್ಣಪುಟ್ಟ ಮನೆ ಹಾನಿಗಳನ್ನು ಸಂಪೂರ್ಣ ಹಾನಿಗೆ ಸೇರಿಸಿದ್ದೀರಿ. ಆ ಮನೆಗಳ ಹಾನಿ ಸಂಖ್ಯೆ ಲಕ್ಷಕ್ಕಿಂತ ಕಡಿಮೆ ಆಗುತ್ತದೆಯೇ ಎನ್ನುವುದನ್ನು ಪರಿಷ್ಕರಿಸಿ. ಅಲ್ಲದೆ ಖಾಸಗಿ ಸಂಘ ಸಂಸ್ಥೆ ಕಟ್ಟಡಗಳನ್ನು ಸೇರಿಸಿದ್ದು ಸರಿ ಇಲ್ಲ. ಫಲವತ್ತಾದ ಜಮೀನು, ಬೆಳೆ ನಾಶದ ವಿಂಗಡಣೆಯೂ ಸರಿ ಇಲ್ಲ ಎಂದು ಕೇಂದ್ರ ಸರ್ಕಾರ ಪರಿಹಾರ ಮೊತ್ತದ ವರದಿಯನ್ನು ಪರಿಷ್ಕರಿಸುವಂತೆ ಸೂಚಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೇಂದ್ರ ಸರ್ಕಾರ ಸೂಚನೆ ಮೇರೆ ರಾಜ್ಯ ಸರ್ಕಾರ ನಷ್ಟದ ಪರಿಷ್ಕೃತ ಅಂದಾಜನ್ನು 35,168 ಕೋಟಿ ರೂ.ಗೆ ಇಳಿಕೆ ಮಾಡಿದೆ. ಮೊದಲ ವರದಿಗಿಂತ ಎರಡನೇ ವರದಿಯಲ್ಲಿ 3 ಸಾವಿರ ಕೋಟಿ ರೂ. ಕಡಿತಗೊಳಿಸಿದೆ. ಎನ್‍ಡಿಆರ್ ಎಫ್ ನಿಯಾಮಾವಳಿ ಪ್ರಕಾರ 3,200 ಕೋಟಿ ಪರಿಹಾರಕ್ಕೆ ಮನವಿ ಮಾಡಲಾಗಿದೆ. ಒಟ್ಟು 1.16 ಲಕ್ಷ ಮನೆಗಳು ಹಾನಿಯಾಗಿವೆ ಎಂದು ಪರಿಷ್ಕೃತ ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೆ, 2,193 ಸೇತುವೆಗಳು ಹಾನಿಯಾದ ಬಗ್ಗೆ ವರದಿ ನೀಡಲಾಗಿದೆ. ಈ ಪರಿಷ್ಕೃತ ಪ್ರಸ್ತಾವನೆಯಲ್ಲಿ ಖಾಸಗಿ, ಸಂಘ ಸಂಸ್ಥೆಗಳ ಕಟ್ಟಡಗಳನ್ನು ಕೈ ಬಿಡಲಾಗಿದೆ ಎಂದು ತಿಳಿದು ಬಂದಿದೆ.
– ಪ್ರಧಾನಿ ಬಳಿಗೆ ಸಿಎಂ ಸರ್ವಪಕ್ಷ ನಿಯೋಗ ಕರೆದೊಯ್ಯಬೇಕಿತ್ತು
– ನೆರೆ ಪರಿಹಾರ ವಿಚಾರದಲ್ಲಿ ನಾವು ಸಂಪೂರ್ಣ ಸೋತಿದ್ದೇವೆ
ಚಾಮರಾಜನಗರ: ಕೇಂದ್ರದಿಂದ ನೆರೆ ಪರಿಹಾರ ಬಿಡುಗಡೆಯಾಗದಿರುವುದು ಸಿಎಂ ಯಡಿಯೂರಪ್ಪ ಅಸಹಾಯಕತೆ ತೋರಿಸುತ್ತಿದೆ ಎಂದು ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಬಳಿಗೆ ಸಿಎಂ ಸರ್ವಪಕ್ಷ ನಿಯೋಗ ಕರೆದೊಯ್ಯಬೇಕಿತ್ತು. ಸಂಸತ್ ಸದಸ್ಯರನ್ನು ಕರೆದು ಸಭೆ ಮಾಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನೆರೆ ಪರಿಹಾರದ ಬಗ್ಗೆ ಯಾರೂ ಸರಿಯಾದ ಆಸಕ್ತಿ ವಹಿಸುತ್ತಿಲ್ಲ. ಕೇವಲ ಹಾರಿಕೆ ಉತ್ತರ ನೀಡುತ್ತಿದ್ದಾರೆ. ನಾಳೆ, ನಾಡಿದ್ದು ಎಂದು ದಿನಕ್ಕೊಂದು ಸಬೂಬು ಕೊಡುತ್ತಿದ್ದಾರೆ. ಜನರ ತಾಳ್ಮೆ ಪರೀಕ್ಷೆ ಮಾಡುತ್ತಿದ್ದಾರೆ. ಕೇಂದ್ರದ ಮೇಲೆ ಒತ್ತಡ ತಂದು ಪರಿಹಾರ ಬಿಡುಗಡೆ ಮಾಡಿಸಬೇಕಿತ್ತು. ನೆರೆ ಪರಿಹಾರ ವಿಚಾರದಲ್ಲಿ ನಾವು ಸಂಪೂರ್ಣ ಸೋತಿದ್ದೇವೆ. ಎಸ್‍ಡಿಆರ್‍ಎಫ್, ಎನ್‍ಡಿಆರ್‍ಎಫ್ ನಿಂದ ಹಣ ಬಿಡುಗಡೆಗೊಳಿಸಬೇಕಿತ್ತು. ಪಕ್ಷದ ಶಿಸ್ತಿನ ಹೆಸರಿನಲ್ಲಿ ಎಲ್ಲಾ ಮುಚ್ಚಿಡೋದು ಸರಿಯಲ್ಲ. ಎಲ್ಲವನ್ನೂ ನಾವೂ ಸರಿಪಡಿಸಿಕೊಳ್ಳೋಣ ಎಂಬುದು ಸರಿಯಲ್ಲ ಎಂದು ತಮ್ಮ ಪಕ್ಷದ ಮೇಲೆ ಅಸಮಾಧಾನ ವ್ಯಕ್ತ ಪಡಿಸಿದರು.
ಇದೇ ವೇಳೆ ಸಿಎಂ ರಾಜ್ಯದ ಬೊಕ್ಕಸ ಖಾಲಿ ವಿಚಾರವಾಗಿ ಮಾತನಾಡಿದ ಅವರು, ನೆರೆ ಪರಿಹಾರಕ್ಕೆ ರಾಜ್ಯದಲ್ಲಿ 38 ಸಾವಿರ ಕೋಟಿ ಎಲ್ಲಿ ಬರುತ್ತೆ. ಕೇಂದ್ರದ ನೆರವು ಬರಬೇಕು. ಎಸ್‍ಡಿಆರ್‍ಎಫ್, ಎನ್‍ಡಿಆರ್‍ಎಫ್ ನಿಂದ ಮೂರು ಸಾವಿರದ ಐವತ್ತು ಕೋಟಿ ಬರಬೇಕು. ಆದರೆ ಒಂದು ಬಿಡಿಗಾಸು ಬಂದಿಲ್ಲ. ರಾಜ್ಯದ ಕಂದಾಯ ಸಚಿವರು ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರಾ? ಕೃಷಿ ಸಚಿವರು ಯಾರು? ನೀವೆಲ್ಲಾ ಹೋಗಿ ಒತ್ತಾಯ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದರು.
ರಾಜ್ಯ ಹಾಗೂ ಕೇಂದ್ರದ ವರದಿಗಳಲ್ಲಿ ವ್ಯತ್ಯಾಸ ಏನೇ ಇರಲಿ ಮೊದಲು ಹಣ ಬಿಡುಗಡೆ ಮಾಡಲಿ. ಕೇಂದ್ರದ ಗೃಹ ಸಚಿವರು, ಹಣಕಾಸು ಸಚಿವರು ಅಧಿಕಾರಿಗಳನ್ನು ಕರೆದು ಹೇಳೋಕ್ಕಾಗಲ್ಲ. ರಾಜ್ಯದಲ್ಲಿ ಆಡಳಿತವಿದ್ಯಾ? ಏನ್ ಆಗ್ತಿದೆ. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಜನರ ಹಿತದೃಷ್ಟಿಯಿಂದ ನಿರ್ದಾಕ್ಷಿಣ್ಯವಾಗಿ ಹೇಳಲೇ ಬೇಕಾಗತ್ತದೆ. 25 ಜನ ಎಂಪಿಗಳನ್ನು ಯಾರೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಒಂದು ಸಭೆ ಕೂಡ ಕರೆದಿಲ್ಲ. ಮುಖ್ಯಮಂತ್ರಿ ಕರೆದು ಚರ್ಚೆ ಮಾಡಬೇಕಿತ್ತು. ಕೇಂದ್ರದ ಸಚಿವರು, ರಾಜ್ಯ ಸಚಿವರು, ಎಂಪಿಗಳು ಎಲ್ಲರ ಸಭೆ ಚರ್ಚಿಸಬೇಕಿತ್ತು. ಕೇಂದ್ರಕ್ಕೆ ಒಂದು ನಿಯೋಗ ಕರೆದುಕೊಂಡು ಹೋಗಿ ಒತ್ತಾಯ ಮಾಡಬೇಕಿತ್ತು. ನೆರೆಗೆ ತಕ್ಷಣ ಹಣ ಬಿಡುಗಡೆ ಮಾಡಿಸಬೇಕಿತ್ತು ಎಂದು ತಿಳಿಸಿದರು.
ವಿಜಯಪುರ: ವರದಿ ತಿರಸ್ಕಾರ ಹಾಗೂ ಮಿಕ್ಕ ವಿಷಯವನ್ನು ಆಮೇಲೆ ಪರಿಶೀಲಿಸಿ. ಮೊದಲು ರಾಜ್ಯಕ್ಕೆ 5 ಸಾವಿರ ಕೋಟಿ ರೂ. ಪರಿಹಾರ ಹಣ ಬಿಡುಗಡೆ ಮಾಡಿ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರ ಅಧಿಕಾರಿಗಳ ತಂಡದ ವರದಿ ತೆಗೆದುಕೊಂಡು ಏನು ಮಾಡುವುದು? ಖುದ್ದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಗೃಹ ಸಚಿವ ಅಮಿತ್ ಶಾ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಜನರ ಪರದಾಟವನ್ನ, ಕಷ್ಟವನ್ನ ಕಣ್ಣಾರೆ ನೋಡಿದ್ದಾರೆ. ಇಷ್ಟು ಸಾಕು ನಂತರ ರಾಜ್ಯದ ವರದಿ ಹಾಗೂ ಕೇಂದ್ರದ ವರದಿ ತರಿಸಿ ತಾಳೆ ಹಾಕಿ. ಮೊದಲು ಜನರಿಗೆ 5 ಸಾವಿರ ಕೋಟಿ ರೂ. ಪರಿಹಾರ ನೀಡಿ ಎಂದು ಕೇಂದ್ರಕ್ಕೆ ಮನವಿ ಮಾಡಿದರು. ಇದನ್ನೂ ಓದಿ:6 ವರ್ಷ ಕಾಂಗ್ರೆಸ್ ಲೂಟಿ ಮಾಡಿ ಎಲ್ಲ ರೀತಿಯಲ್ಲೂ ರಾಜ್ಯ ದಿವಾಳಿಯಾಗಿತ್ತು – ಸಿದ್ದುಗೆ ರವಿ ತಿರುಗೇಟು
ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ದಿವಾಳಿ ಎದ್ದಿಲ್ಲ. ಸಿಎಂ ಯಡ್ಡಿಯೂರಪ್ಪ ಅವರ ಜೊತೆ ಬೆಳಗ್ಗೆ ಮಾತನಾಡಿದ್ದೇನೆ, ನೆರೆ ಪರಿಹಾರಕ್ಕೆ ಕೊಡುವಷ್ಟು ಹಣ ಇಲ್ಲ. ಕೇಂದ್ರ ಸರ್ಕಾರದ ನೆರವು ಅಗತ್ಯವಿದೆ ಎನ್ನುವ ಅರ್ಥದಲ್ಲಿ ಅವರು ಹೇಳಿಕೆ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ದಿವಾಳಿ ಆಗಿದ್ದರೆ ನಮ್ಮ ಕ್ಷೇತ್ರಕ್ಕೆ 300 ಕೋಟಿ ಅನುದಾನ ಹೇಗೆ ನೀಡುತ್ತಿದ್ದರು ಎಂದು ಪ್ರಶ್ನಿಸಿದರು. ಹಾಗೆಯೇ ಬಿಎಸ್‍ವೈ ಅವರಿಂದ ಸರ್ಕಾರದ ಖಜಾನೆ ಖಾಲಿಯಾಗಿಲ್ಲ. ಹಿಂದಿನವರು ಬೇಕಾಬಿಟ್ಟಿ ಸಾಲ ಮನ್ನಾ ಮಾಡಿ ದಿವಾಳಿ ಮಾಡಿದ್ದಾರೆ. 54 ಸಾವಿರ ಕೋಟಿ ರೂ. ಸಾಲ ಮನ್ನಾ ಎಂದು ಹೇಳಿ ಎಚ್‍ಡಿಕೆ ಓಡಿ ಹೋಗಿದ್ದಾರೆ. ಈಗ ಬಿಜೆಪಿ ಸರ್ಕಾರ ದಿವಾಳಿ ಮಾಡಿದೆ ಎಂದು ಸಿದ್ಧರಾಮಯ್ಯ ಹೇಳ್ತಾರೆ. ಅವರೆಲ್ಲ 6 ವರ್ಷ ಸೇರಿ ದಿವಾಳಿ ಮಾಡಿದ್ದಾರೆ. ಈಗ ಯಡಿಯೂರಪ್ಪ ಅವರು ಜಾದು, ಮಂತ್ರ ಮಾಡಲು ಬರಲ್ಲ ಎಂದು ಎಚ್‍ಡಿಕೆ ಹಾಗೂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ:ಬೇಜವಾಬ್ದಾರಿ ಹೇಳಿಕೆ ನೀಡಿದರೆ ಸುಮ್ಮನಿರಲ್ಲ – ತೇಜಸ್ವಿ ಸೂರ್ಯ ವಿರುದ್ಧ ಯತ್ನಾಳ್ ಕಿಡಿ
ರಾಜ್ಯ ಸರ್ಕಾರಕ್ಕೆ ತನ್ನ ಸೀಮಿತ ಕೆಲಸ ಮಾಡಲು ಹಣ ಇದೆ. ಪ್ರವಾಹದ ಒಟ್ಟು ಪರಿಹಾರ ಹಣ ಭರಿಸಲು ಆಗಲ್ಲ ಎನ್ನುವ ಭಾವನೆಯಿಂದ ಸಿಎಂ ಹೇಳಿಕೆ ಕೊಟ್ಟಿದ್ದಾರೆ. ನೆರೆ ಪೀಡಿತ ಪ್ರದೇಶದ ಶಾಸಕರ ಮೇಲೆ ಜನರ ಒತ್ತಡವಿದೆ. ಶಾಸಕ ಆನಂದ ಮಾಮನಿ ಕೇಳಿದ್ದಕ್ಕೆ ಹಣದ ಕೊರತೆ ಇದೆ, ವ್ಯವಸ್ಥೆ ಮಾಡೋದಾಗಿ ಹೇಳಿದ್ದಾರಷ್ಟೇ ಎಂದು ಸಿಎಂ ಹೇಳಿಕೆಯನ್ನು ಯತ್ನಾಳ್ ಸಮರ್ಥಿಸಿಕೊಂಡರು. ಜೊತೆಗೆ ಕೇಂದ್ರ ಸರ್ಕಾರ ಕರ್ನಾಟಕದ ಜನರ ನೋವಿಗೆ ಸ್ಪಂದಿಸಿ ನೆರವಾಗುತ್ತೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಮೈಸೂರು: ಕೇಂದ್ರದಿಂದ ಪರಿಹಾರ ಹಣ ಬಂದೇ ಬರುತ್ತದೆ ಎಂದು ಹೇಳುವ ಮೂಲಕ ಸಂಸದೆ ಸುಮಲತಾ ಕೇಂದ್ರ ಸರ್ಕಾರದ ಪರ ಬ್ಯಾಟ್ ಬೀಸಿದ್ದಾರೆ.
ಮೈಸೂರಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸುಮಲತಾ ಅವರು, ಪರಿಹಾರ ಹಣ ಬಂದೇ ಬರುತ್ತದೆ. ಏನೋ ತಾಂತ್ರಿಕ ಕಾರಣ ಉಂಟಾಗಿದೆ. ಹೀಗಾಗಿ ಪರಿಹಾರ ಹಣ ಬರುವುದು ತಡವಾಗಿದೆ. ಆದರೆ ಪರಿಹಾರ ಹಣ ಬರುತ್ತೆ ಎಂಬ ವಿಶ್ವಾಸ ನನಗಿದೆ. ಜನರು ಪ್ರಶ್ನೆ ಮಾಡುತ್ತಿರುವುದು ಒಳ್ಳೆಯದು. ನಾವು ಯಾರ ಬಳಿ ಮಾತನಾಡಬೇಕೋ ಅವರ ಬಳಿ ಮಾತನಾಡುತ್ತಿದ್ದೇವೆ. ಅವರು ಏನೋ ತಾಂತ್ರಿಕ ಕಾರಣ ಉಂಟಾಗಿದೆ ಎಂದು ಕಾರಣವನ್ನು ನೀಡುತ್ತಿದ್ದಾರೆ ಎಂದರು.
ಯಶ್ ಹಾಗೂ ದರ್ಶನ್ ಬರಬೇಕು ಎಂಬುದು ತುಂಬಾ ಚಿಕ್ಕ ವಿಷಯ. ಏಕೆಂದರೆ ಎಂಪಿಯಾಗಿ ಆಯ್ಕೆಯಾಗಿರುವುದು ನಾನು. ಯಶ್ ಅಥವಾ ದರ್ಶನ್ ಅಲ್ಲ. ಚುನಾವಣಾ ಪ್ರಚಾರದ ವೇಳೆ ನಮಗೆ ಬೆಂಬಲ ನೀಡಲು ಬರುತ್ತಾರೆ. ಸರ್ಕಾರದಲ್ಲಿ ಅವರಿಗೆ ಯಾವುದೇ ಅಧಿಕಾರ ಇಲ್ಲ. ಅವರು ಬಂದು ಏನೂ ಮಾಡುತ್ತಾರೆ. ನನ್ನ ಕೆಲಸ ನಾನು ಮಾಡಬೇಕು. ಯಶ್ ಹಾಗೂ ದರ್ಶನ್ ಮಂಡ್ಯಕ್ಕೆ ಬರುತ್ತಾರೆ. ಮೊದಲಿನಿಂದಲೂ ಅವರು ಬರುತ್ತಿದ್ದಾರೆ ಎಂದು ಹೇಳಿದ್ದಾರೆ.
ನಾನು ಎಂಪಿ ಆಗಿರುವುದು ಜೆಡಿಎಸ್ ನಾಯಕರಿಗೆ ಉತ್ತರ ಕೊಡುವುದಕ್ಕೆ ಅಲ್ಲ. ನನ್ನ ಉತ್ತರ ಏನಿದ್ದರೂ ನನಗೆ ಮತ ನೀಡಿದ ಮಂಡ್ಯ ಜನತೆಗೆ ಮಾತ್ರ. ನಾನು ರಾಜಕೀಯವಾಗಿ ಮಾತನಾಡುವವರಿಗೆ ಉತ್ತರ ನೀಡಲ್ಲ. ಸುಮಕ್ಕ ಎಲ್ಲಿದ್ದಾರೆ ಎಂದು ಪ್ರಶ್ನೆ ಕೇಳುತ್ತಾರೆ. ನಾನು ಎಲ್ಲಿಯೂ ಹೋಗಿಲ್ಲ. ನಾನು ಇಲ್ಲಿಯೇ ಇದ್ದೀನಿ ಹಾಗೂ ನನ್ನ ಕೆಲಸ ಮಾಡುತ್ತಿದ್ದೇನೆ. ಯಾರಿಗೆ ಒತ್ತಡ ಹೇರಬೇಕೋ, ಯಾರ ಬಳಿ ಮನವಿ ಮಾಡಬೇಕೋ ಎಲ್ಲವನ್ನು ನಾನು ಮಾಡುತ್ತಿದ್ದೇನೆ ಎಂದು ಸುಮಲತಾ ತಿಳಿಸಿದ್ದಾರೆ.
ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಸಂಸದರು ಇನ್ನೆರೆಡು ದಿನಗಳಲ್ಲಿ ಪರಿಹಾರ ಬರುತ್ತಾ ಎಂದು ಹೇಳುತ್ತಾ ಎರಡು ತಿಂಗಳು ಕಳೆದಿದ್ದಾರೆ. ಪ್ರವಾಹ ಪರಿಹಾರದ ದಾರಿ ನೋಡುತ್ತಿರುವ ಸಂತ್ರಸ್ತರಿಗೆ ಮತ್ತೊಂದು ಶಾಕ್ ಎದುರಾಗಿದೆ. ರಾಜ್ಯ ಸರ್ಕಾರ ನೀಡಿದ ನೆರೆ ವರದಿಯನ್ನು ಕೇಂದ್ರ ತಿರಸ್ಕರಿಸಿದೆ.
ಇಷ್ಟು ದಿನ ಸಮಯ ತೆಗೆದುಕೊಂಡ ರಾಜ್ಯ ಸರ್ಕಾರ ನೆರೆ ಸ್ಥಳಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಿ ವರದಿಯನ್ನು ಸಿದ್ಧಪಡಿಸಿತ್ತು. ಇತ್ತ ಕೇಂದ್ರ ನೇಮಕ ಮಾಡಿದ್ದ ಅಧಿಕಾರಿಗಳು ಸಹ ಸಮೀಕ್ಷೆ ನಡೆಸಿ ವರದಿಯನ್ನು ಸಿದ್ಧಪಡಿಸಿಕೊಂಡಿದ್ದರು. ಇದೀಗ ರಾಜ್ಯ ನೀಡಿದ ವರದಿಯಲ್ಲಿ ಅಂಕಿ ಅಂಶಗಳು ತಪ್ಪಾಗಿದೆ. ಪ್ರಮಾಣೀಕರಿಸಿ ಮತ್ತೊಮ್ಮೆ ಹೊಸ ವರದಿ ನೀಡಿ ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಅನಿಲ್ ಕುಮಾರ್‍ಗೆ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಸಂದೇಶ ರವಾನಿಸಿದ್ದಾರೆ.
ಪರಿಹಾರ ಕೋರಿ ರಾಜ್ಯ ಸಲ್ಲಿಸಿರುವ ನೆರೆಯ ನಷ್ಟದ ವರದಿಯನ್ನು ಕೇಂದ್ರವು ತಿರಸ್ಕರಿಸುವುದು ಖಂಡನೀಯ.
ಪರಿಹಾರ ಬಿಡುಗಡೆ ಮಧ್ಯಂತರವೂ ಇಲ್ಲ. ವರದಿ ನಂತರವೂ ಇಲ್ಲ!
ರಾಜ್ಯಕ್ಕೆ ಮಾಡುತ್ತಿರುವ ದ್ರೋಹವನ್ನು ಸಹಿಸುವುದೇಗೆ? 25 ಮಂದಿ ಉತ್ತರ ಕುಮಾರರೇ ನಿಮ್ಮ ಉತ್ತರವೇನು?@BSYBJP ಅವರೇ ಪರಿಹಾರ ಕಾರ್ಯ ಸರಿಯಾಗಿ ನಿರ್ವಹಿಸಿ ಇಲ್ಲ ನಿರ್ಗಮಿಸಿ.
ಈಗ ಮತ್ತೊಮ್ಮೆ ವರದಿ ನೀಡಲು ಇನ್ನೆಷ್ಟು ದಿನ ಬೇಕಾಗುತ್ತದೆ ಎಂಬ ಪ್ರಶ್ನೆಯೊಂದು ಪ್ರವಾಹ ಸಂತ್ರಸ್ತರಲ್ಲಿ ಮೂಡಿದೆ. ತಮ್ಮದೇ ಬಿಜೆಪಿ ಸರ್ಕಾರ ನೀಡಿದ ವರದಿಯನ್ನು ಕೇಂದ್ರ ತಿರಸ್ಕರಿಸಿದ್ದು ಯಾಕೆ? ರಾಜ್ಯ ಸರ್ಕಾರದ ನೀಡಿದ ವರದಿಯ ಮೇಲೆ ಕೇಂದ್ರಕ್ಕೆ ನಂಬಿಕೆ ಇಲ್ವಾ? ರಾಜ್ಯ ಸರ್ಕಾರ ಪರಿಹಾರದ ವರದಿಯನ್ನು ಸಿದ್ಧಪಡಿಸಲು ವಿಫಲವಾಯ್ತಾ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.
ಕಾಂಗ್ರೆಸ್ ಆಕ್ರೋಶ: ರಾಜ್ಯ ನೀಡಿದ ನೆರೆ ವರದಿ ತಿರಸ್ಕರಿಸಿದ ಬೆನ್ನಲ್ಲೇ ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದೆ. ಪರಿಹಾರ ಕೋರಿ ರಾಜ್ಯ ಸಲ್ಲಿಸಿರುವ ನೆರೆಯ ನಷ್ಟದ ವರದಿಯನ್ನು ಕೇಂದ್ರವು ತಿರಸ್ಕರಿಸುವುದು ಖಂಡನೀಯ. ಪರಿಹಾರ ಬಿಡುಗಡೆ ಮಧ್ಯಂತರವೂ ಇಲ್ಲ. ವರದಿ ನಂತರವೂ ಇಲ್ಲ. ರಾಜ್ಯಕ್ಕೆ ಮಾಡುತ್ತಿರುವ ದ್ರೋಹವನ್ನು ಸಹಿಸುವುದೇಗೆ? 25 ಮಂದಿ ಉತ್ತರ ಕುಮಾರರೇ ನಿಮ್ಮ ಉತ್ತರವೇನು? ಸಿಎಂ ಯಡಿಯೂರಪ್ಪನವರೇ ಪರಿಹಾರ ಕಾರ್ಯ ಸರಿಯಾಗಿ ನಿರ್ವಹಿಸಿ ಇಲ್ಲ ನಿರ್ಗಮಿಸಿ ಎಂದು ಟ್ವೀಟ್ ಮಾಡಿದೆ.
ಕೇಂದ್ರಕ್ಕೆ ಹೆಚ್ಚು ತೆರಿಗೆ ನೀಡುತ್ತಿರುವ ದೇಶದ 4ನೇ ಅತಿ ದೊಡ್ಡ ರಾಜ್ಯ ಕರ್ನಾಟಕ. ನಮ್ಮ ತೆರಿಗೆ ಹಣವನ್ನು ನೆರೆ ಪರಿಹಾರಕ್ಕಾಗಿ ಕೇಳುವುದು ನಮ್ಮ ಹಕ್ಕು. ಸಿಎಂ ಯಡಿಯೂರಪ್ಪ ಅವರು ಮಾತು ಕೊಟ್ಟಂತೆ 3 ದಿನಗಳಲ್ಲಿ ಕೇಂದ್ರದಿಂದ ಪರಿಹಾರ ಬರದೇ ಇದ್ದಲ್ಲಿ ರಾಜ್ಯಾದ್ಯಂತ ‘ಕರ ನಿರಾಕರಣೆ’ ಚಳುವಳಿಗೆ ಕರೆ ನೀಡಲಾಗುವುದು ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ.
ಬೆಂಗಳೂರು: ಪ್ರವಾಹ ಸಂತ್ರಸ್ತರ ಕಣ್ಣೀರೋಸುವ ಕೆಲಸವನ್ನು ಸರ್ಕಾರ ಮಾಡಿದೆ. ತಾತ್ಕಾಲಿಕ ಪರಿಹಾರ ಕೊಟ್ಟಿದ್ದೇವೆ, ಕೇಂದ್ರಕ್ಕಾಗಿ ಕಾದಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಮುಖ್ಯಮಂತ್ರಿಯಿಂದ ಎಲ್ಲ ಸಚಿವರು ಕೂಡ ಈ ಬಗ್ಗೆ ಸಮರ್ಥನೆಯ ಹೇಳಿಕೆಗಳನ್ನು ನೀಡಿದ್ದು, 1500 ಕೋಟಿ ರೂ. ಕೊಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ.
ಸಂತ್ರಸ್ತರ ಕುಟುಂಬಗಳಿಗೆ ತಕ್ಷಣಕ್ಕೆ 10 ಸಾವಿರ, ಸಂಪೂರ್ಣ ಮನೆ ಹಾನಿಗೆ 5 ಲಕ್ಷ ರೂ. ಕೊಟ್ಟಿದ್ದೇವೆ ಎಂದು ಸಿಎಂ ಹೇಳಿದ್ದು, ಆದರೆ ಸರ್ಕಾರವೇ ಹೇಳಿರುವ ಅಧಿಕೃತ ದಾಖಲೆ ಪ್ರಕಾರ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಕೊಟ್ಟಿರುವುದು ಕೇವಲ 128.41 ಕೋಟಿ ಮಾತ್ರ. ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ತಾನು ಕೊಟ್ಟಿರುವ ಪರಿಹಾರವನ್ನ ಅಧಿಕೃತವಾಗಿ ತನ್ನ ವೆಬ್‍ಸೈಟ್‍ನಲ್ಲಿ ಹಾಕಿದೆ. ಇದರ ಪ್ರಕಾರ ಅಂಕಿ ಅಂಶಗಳು ಇಂತಿದೆ.
ಇದುವರೆಗೂ 41,459 ಫಲಾನುಭವಿಗಳ ಖಾತೆಗೆ ಪರಿಹಾರ ಹಣ ಜಮೆಯಾಗಿದ್ದು, 128.41 ಕೋಟಿ ರೂ. ಪರಿಹಾರ ಹಣ ಜಮೆಯಾಗಿರುವ ಮಾಹಿತಿ ಲಭಿಸಿದೆ. ಗ್ರಾಮೀಣ ಭಾಗದ 37,132 ಫಲಾನುಭವಿಗಳ ಖಾತೆಗೆ 110.27 ಕೋಟಿ ರೂ. ಪರಿಹಾರ ಹಣ ಜಮೆಯಾಗಿದೆ. ಆದರೆ ಈ ಹಣ ತಾಂತ್ರಿಕ ದೋಷಗಳಿಂದ ಖಾತೆಗಳಿಗೆ ಜಮೆಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಗರ ಪ್ರದೇಶ 4,327 ಫಲಾನುಭವಿಗಳ ಖಾತೆಗೆ 18.14 ಕೋಟಿ ರೂ. ಪರಿಹಾರ ಹಣ ಜಮೆ ಎಂದಿದ್ದು, ಆದರೆ ಈ ಹಣ ತಾಂತ್ರಿಕ ದೋಷಗಳಿಂದ ಜಮೆ ಆಗಿಲ್ಲ ಎಂದ ಅಧಿಕಾರಿಗಳು ತಿಳಿಸಿದ್ದಾರೆ.
ಇದರಲ್ಲಿ ಕೆಲವರ ಖಾತೆಗೆ 10 ಸಾವಿರ, 25 ಸಾವಿರ, ಕೆಲವರಿಗೆ 1 ಲಕ್ಷ ರೂ.ವರೆಗೆ ಪರಿಹಾರ ಹಣವನ್ನು ಜಮೆ ಮಾಡಿದ್ದೇವೆ ಎಂಬ ಮಾಹಿತಿ ಲಭಿಸಿದೆ. ಈ ಅಂಕಿ ಅಂಶಗಳನ್ನೇ ಗಮನಿಸುವುದಾದರೆ, ಸರ್ಕಾರ ಹೇಳಿರುವ 1500 ಕೋಟಿ ರೂ. ಪೈಕಿ ಕೇವಲ 128.41 ಕೋಟಿ ಮಾತ್ರ ಜನರ ಖಾತೆಗೆ ಜಮೆಯಾಗಿದೆ. ಉಳಿದ 1,370 ಕೋಟಿಯನ್ನು ಎಲ್ಲಿ ಖರ್ಚು ಮಾಡಿದೆ? ಯಾರು ಖರ್ಚು ಮಾಡಿದ್ದಾರೆ? ಯಾರಿಗೆ ಪರಿಹಾರ ಕೊಟ್ಟಿದ್ದಾರೆ? ಉಳಿದ 1 ಲಕ್ಷಕ್ಕೂ ಹೆಚ್ಚು ಮನೆ ಕಳೆದುಕೊಂಡ ಸಂತ್ರಸ್ಥರಿಗೆ ಪರಿಹಾರ ಕೊಡುವವರು ಯಾರು ಎಂಬ ಪ್ರಶ್ನೆಗೆ ಉತ್ತರ ಬೇಕಿದೆ.
ಬೆಳಗಾವಿ: ಪ್ರವಾಹದಿಂದ ಉಂಟಾಗಿರುವ ನಷ್ಟದಿಂದ ಜನರು ಎದುರಿಸುತ್ತಿರುವ ಸಂಕಷ್ಟವನ್ನು ನಿಭಾಯಿಸಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂಬ ವಿರೋಧಿ ಪಕ್ಷಗಳ ಆರೋಪಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಅವರು ಉತ್ತರಿಸಿದ್ದು, ಜನರ ಸಂಕಷ್ಟವನ್ನು ನಿವಾರಿಸುವ ಬಗ್ಗೆ ಕ್ರಮಕೈಗೊಂಡಿದ್ದೇವೆ. ಈಗಾಗಲೇ ಮೂರುವರೆ ಸಾವಿರ ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಕೇಂದ್ರ ಸರ್ಕಾರದಿಂದ ಅನುದಾನ ಲಭಿಸಿಲ್ಲ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಎಸ್‍ವೈ ಅವರು, ಇಂದು ನಾನು ಜಿಲ್ಲೆಯಲ್ಲಿ ಮಾಧ್ಯಮಗಳ ಎದುರೇ ಸಭೆ ನಡೆಸಿದ್ದು, ಯಾವ ಕ್ರಮಗಳನ್ನು ಕೈಗೊಂಡಿದ್ದೇವೆ ಎಂಬ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ಇದೆ. ಈಗಾಗಲೇ ರಾಜ್ಯ ಸರ್ಕಾರ ಮೂರುವರೆ ಸಾವಿರ ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಇನ್ನೂ ಹೆಚ್ಚು ಹಣವನ್ನು ನಾವು ಬಿಡುಗಡೆ ಮಾಡುತ್ತೇವೆ, ಇದು ನಮ್ಮ ಕರ್ತವ್ಯವಾಗಿದೆ. ಹೆಚ್ಚಿನ ಹಾನಿಯಾದ ಕುರಿತು ವರದಿಯನ್ನ ಮಾಡುತ್ತಿದ್ದೇವೆ. ಹಂತ ಹಂತವಾಗಿ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡುತ್ತಿದೆ ಎಂದರು.
ಈಗಾಗಲೇ ಕೇಂದ್ರದಲ್ಲಿ ಮನವಿ ಸಲ್ಲಿಕೆ ಮಾಡಿದ್ದು, ಕೇಂದ್ರದಿಂದ ಬರುವ ಹಣವನ್ನು ಬೆಳೆ ನಷ್ಟ ಪರಿಹಾರ ಸೇರಿದಂತೆ, ವಿವಿಧ ಭಾಗಗಳಲ್ಲಿ ಹಾನಿಯಾಗಿರುವ ರಸ್ತೆ ಸೇರಿದಂತೆ ಬೃಹತ್ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತೇವೆ. ಅತಿವೃಷ್ಟಿಗೆ ಸಿಕ್ಕಿರುವ ರೈತರಿಗೆ ನ್ಯಾಯ ನೀಡುವುದು ನಮ್ಮ ಕರ್ತವ್ಯ. ನಾನು ರೈತನ ಮಗನೇ ಎಂದರು.
ಈಗಾಗಲೇ ಮನೆ ನೆರೆಯಿಂದ ಮನೆ ಕಳೆದುಕೊಂಡವರಿಗೆ ಮನೆಯ ಫೌಂಡೇಷನ್ ಹಾಕಿಕೊಳ್ಳುವರಿಗೆ 1 ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ. ಹತ್ತು ಸಾವಿರ ರೂ. ಚೆಕ್‍ಗಳನ್ನು ಬಹುತೇಕರಿಗೆ ನೀಡಿದ್ದೇವೆ. ಪ್ರಧಾನಿ ಮೋದಿ ಹೊರ ದೇಶದಲ್ಲಿರುವುದರಿಂದ ಇದುವರೆಗೂ ಸಭೆ ನಡೆಸಲಾಗಲಿಲ್ಲ. ನೆರೆ ಸಮಸ್ಯೆ ಅನುಭವಿಸಿದ ಯಾವುದೇ ರಾಜ್ಯಕ್ಕೂ ಹಣ ಬಿಡುಗಡೆ ಮಾಡಿಲ್ಲ. ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಅವರೊಂದಿಗೆ ಚರ್ಚೆ ನಡೆಸಿದ್ದು, ಶೀಘ್ರವೇ ಹಣ ಬಿಡುಗಡೆಯಾಗಲಿದೆ ಎಂದರು.
Will be visiting the flood affected districts for the next 3 days, to administer timely functioning of the relief activities, to ensure adequate support to victims and to hold meetings with concerned officials and elected representatives.
ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಬೇಕಿತ್ತು, ಸಿಎಂ ಅವರಿಗೆ ತಾಕತ್ತಿಲ್ಲ ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಇದು ತಾಕತ್ತಿನ ಪ್ರಶ್ನೆ ಅಲ್ಲ, ಶಾಂತ ರೀತಿಯಿಂದ ಕೇಂದ್ರದಿಂದ ಅನುದಾನ ಪಡೆದುಕೊಳ್ಳುವುದಾಗಿದೆ. ಕಾಂಗ್ರೆಸ್ ಪಕ್ಷದವರು ಹೇಗೆ ಡರ್ಟಿ ಪಾಲಿಟಿಕ್ಸ್ ಮಾಡ್ತಿದ್ದಾರಾ ಎಂಬುದನ್ನ ನನ್ನ ಬಾಯಿಂದ ಹೇಳಲು ನಾನು ಸಿದ್ಧವಾಗಿಲ್ಲ. ವಿರೋಧ ಪಕ್ಷದವರು ಅವರ ಕೆಲಸ ಮಾಡುತ್ತಾರೆ ಅದಕ್ಕೆ ನಾನು ವಿರೋಧ ಮಾಡುವುದಿಲ್ಲ. ಮೂರು ದಿನ ಅಧಿವೇಶನ ಕರೆದಿದ್ದೇವೆ ಅಲ್ಲಿ ಈ ಚರ್ಚೆಯಾಗಲಿ. ಕೇಂದ್ರಕ್ಕೆ ಯಾವುದೇ ನಿಯೋಗ ಕರೆದುಕೊಂಡು ಹೋಗುವ ಅಗತ್ಯವಿಲ್ಲ. 2-3 ದಿನಗಳಲ್ಲಿ ಕೇಂದ್ರದಿಂದ ಹಣ ಬಿಡುಗಡೆಯಾಗುತ್ತದೆ ಎಂದರು.
ಸರ್ಕಾರ ಮತ್ತು ಪಕ್ಷದ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂಬ ವಿಚಾರವಾಗಿ ಉತ್ತರಿಸಿದ ಅವರು, ಬೆಳಗ್ಗೆ ರಾಜ್ಯಾಧ್ಯಕ್ಷರು ನಮ್ಮ ಮನೆಗೆ ಬಂದು ಉಪಾಹಾರ ಸೇವಿಸಿ ಹೋಗಿದ್ದಾರೆ. ಮುಸುಕಿನ ಗುದ್ದಾಟ ನಡೆಯುತ್ತಿರುವುದು ಯಾವ ಪಕ್ಷದಲ್ಲಿ ಎಂದು ನಮ್ಮ ಬಾಯಿಂದ ಹೇಳಿಸಬೇಡಿ ಎಂದರು.
ನೆರೆ ಸಮಸ್ಯೆಯನ್ನು ಎದುರಿಸಲು ಸರ್ಕಾರ ಕೈಗೊಂಡಿರುವ ಪ್ರತಿಕ್ರಮವನ್ನು ಜನರ ಕಣ್ಣ ಮುಂದಿಡುತ್ತೇವೆ. ಬೆಳೆ ನಾಶವಾಗಿದ್ದರೆ ಹೆಕ್ಟರ್ ಗೆ ಆರೂವರೆ ಸಾವಿರ, ನೀರಾವರಿ ಜಮೀನಿನಲ್ಲಿ ಬೆಳೆ ಹಾನಿಯಾದರೆ ಹೆಕ್ಟರ್ ಗೆ ಹನ್ನೆರಡು ಸಾವಿರ ನೀಡುತ್ತೇವೆ. ಪ್ರತಿ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಹಣವನ್ನು ನೀಡುತ್ತಿದ್ದು, ಹಂತ ಹಂತವಾಗಿ ಹಣ ಬಿಡುಗಡೆಯಾಗಲಿದೆ. ಅಲ್ಲದೇ ಮಳೆಯಿಂದ ಶಾಲಾ ಕಟ್ಟಡಕ್ಕೆ ಹಾನಿಯಾಗಿದ್ದಾರೆ ಹೊಸ ಕಟ್ಟಡ ನಿರ್ಮಾಣ ಮಾಡಲು 5 ರೂ. ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದು, ಕೆಇಬಿ ಇಲಾಖೆಗೂ ಕೂಡ ಜಿಲ್ಲೆಯಲ್ಲಿ ನಡೆಯಬೇಕಾದ ಕ್ರಮಗಳನ್ನು ಶೀಘ್ರ ಪೂರ್ಣಗೊಳಿಸಲು ಆದೇಶ ನೀಡಿದ್ದೇನೆ ಎಂದು ಸಭೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಉತ್ತರಿಸಿದರು.
ಬೆಂಗಳೂರು: ನಟ ಸತೀಶ್ ನೀನಾಸಂ ನೆರೆ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.
ನೀನಾಸಂ ಸತೀಶ್ ಅವರು ತಮ್ಮ ಟ್ವಿಟ್ಟರಿನಲ್ಲಿ, “ನಾನು ನಿಮ್ಮ ಯಾವ ಪಕ್ಷದವನೂ ಅಲ್ಲ, ನನ್ನದು ಮನುಷ್ಯ ಪಕ್ಷ, ಬಡವರ ಪಕ್ಷ, ಹಸಿದವರ ಪಕ್ಷ. ಯಾವ ಸರ್ಕಾರವಾದರೂ ಕೇಳುವ ಹಕ್ಕು ನನಗಿದೆ. ನೆರೆ ಸಂತ್ರಸ್ತರ ವಿಚಾರದಲ್ಲಿ ನಿಮ್ಮ ಪಕ್ಷಗಳನ್ನು ಬದಿಗಿಟ್ಟು, ಅವರ ಕಷ್ಟಗಳಿಗೆ ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡುವ ಬುದ್ಧಿ ಬರಲಿ. ದಯಮಾಡಿ ನನ್ನನ್ನು ನಿಮ್ಮ ಯಾವ ಪಕ್ಷಕ್ಕೂ ಸೇರಿಸಬೇಡಿ ಪ್ಲೀಸ್” ಎಂದು ಟ್ವೀಟ್ ಮಾಡಿದ್ದಾರೆ.
ನಾನು ನಿಮ್ಮ ಯಾವ ಪಕ್ಷದವನು ಅಲ್ಲ, ನನ್ನದು ಮನುಷ್ಯ ಪಕ್ಷ, ಬಡವರ ಪಕ್ಷ, ಹಸಿದವರ ಪಕ್ಷ. ಯಾವ ಸರ್ಕಾರವಾದರೂ ಕೇಳುವ ಹಕ್ಕು ನನಗಿದೆ, ನೆರೆಸಂತ್ರಸ್ತರ ವಿಚಾರದಲ್ಲಿ ನಿಮ್ಮ ಪಕ್ಷಗಳನ್ನು ಬದಿಗಿಟ್ಟು, ಅವರ ಕಷ್ಟಗಳಿಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಬುದ್ದಿ ಬರಲಿ.
ಇತ್ತೀಚೆಗೆ ಚಿಂತಕ ಸೂಲಿಬೆಲೆ ಅವರು ಕೂಡ ತಮ್ಮ ಯುವಲೈವ್ ವೆಬ್‍ಸೈಟಿನಲ್ಲಿ ಬರಹ ಪ್ರಕಟಿಸಿದ್ದರು. ಅದರಲ್ಲಿ, ನಿಜ ಹೇಳಬೇಕೆಂದರೆ ಪ್ರವಾಹದ ನಂತರವೇ ಬೆಂಗಳೂರಿನ ಸಂಸದ ಅನಂತ್ ಕುಮಾರ್ ಅವರ ಅನುಪಸ್ಥಿತಿ ಎದ್ದು ಕಾಣುತ್ತಿರುವುದು. ಕೇಂದ್ರ ಸರ್ಕಾರದಲ್ಲಿ ಕರ್ನಾಟಕದ ದನಿಯನ್ನು ಪ್ರಭಾವಿಯಾಗಿ ಮಂಡಿಸಬಲ್ಲ ಸಂಸದರೇ ಇಲ್ಲವೇನೋ ಎನಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದರು.
ದಯಮಾಡಿ ನನ್ನನ್ನು ನಿಮ್ಮ ಯಾವ ಪಕ್ಷಕ್ಕೂ ಸೇರಿಸಬೇಡಿ ಪ್ಲೀಸ್ ….
ಕರ್ನಾಟಕದ ಒಳಿತಿಗಾಗಿ ಕೇಂದ್ರದೊಂದಿಗೆ ಗುದ್ದಾಡಿ ಬೇಕಾದ್ದನ್ನು ಪಡೆದುಕೊಂಡು ಬರಬಲ್ಲ ಸಾಮರ್ಥ್ಯ ಯಾವ ಸಂಸದರಿಗೂ ಇಲ್ಲವಲ್ಲ ಎಂಬುದೇ ದುಃಖದ ಸಂಗತಿ. ಮತ್ತು ಇವರು ಒಬ್ಬಿಬ್ಬರಲ್ಲ, ಬರೋಬ್ಬರಿ 25 ಜನ. ಇನ್ನುಳಿದ ಮೂವರಲ್ಲಿ ಒಬ್ಬರು ಈಗ ತಾನೇ ಸಂಸತ್ತು ಪ್ರವೇಶಿಸಿರುವ ಸುಮಲತಾ ಆದರೆ ಪ್ರಜ್ವಲ್ ಅವರದ್ದೂ ಹೆಚ್ಚು ಕಡಿಮೆ ಅದೇ ಸ್ಥಾನ. ಇವರುಗಳಿಗೆ ಸಂಸತ್ತಿನ ಕಾರ್ಯವೈಖರಿಯ ಅರಿವಾಗುವುದರೊಳಗೆ ಅದರ ಕಾರ್ಯ ಅವಧಿ ಮುಗಿದು ಹೋಗಿರುತ್ತದೆ. ಕಾಂಗ್ರೆಸ್ಸಿನ ಒಬ್ಬೇ ಒಬ್ಬ ಸಂಸದ ಅಣ್ಣನನ್ನು ಬಿಡಿಸಿಕೊಂಡು ಬರುವುದರಲ್ಲಿ ತಿಪ್ಪರಲಾಗ ಹಾಕುತ್ತಿದ್ದಾರೆ. ಹೀಗಾಗಿ ಕರ್ನಾಟಕದ ಪರವಾಗಿ, ಕನ್ನಡದ ಪರವಾಗಿ ಸಮರ್ಥವಾಗಿ ದನಿ ಎತ್ತಬಲ್ಲವರೇ ಇಲ್ಲವಾಗಿಬಿಟ್ಟಿದ್ದಾರೆ ಎಂದು ಹೇಳಿದ್ದರು.
ಮೈಸೂರು: ಯಾರೂ ಕಿಸೆಯಿಂದ ಪರಿಹಾರ ಕೊಡಲು ಆಗಲ್ಲ. ಯಾವ ರಾಜ್ಯಕ್ಕೂ ಪ್ರಧಾನಿ ಮೋದಿ ಪರಿಹಾರ ಕೊಟ್ಟಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಲು ಇಷ್ಟಪಡುತ್ತೇನೆ. ಕೇಂದ್ರ ಸರ್ಕಾರ ಪರಿಹಾರ ಕೊಡುವುದಿಲ್ಲ. ಎನ್‍ಡಿಆರ್‍ಎಫ್ ಹಾಗೂ ಎಸ್‍ಡಿಆರ್‍ಎಫ್ ರೈತರಿಗೆ ಕೃಷಿ ಚಟುವಟಿಕೆ ತೊಂದರೆಯಾದರೆ ಮೊದಲಿನಿಂದ ಶುರು ಮಾಡುವುದಕ್ಕೆ ಕೊಡುವ ಸಹಾಯಧನವೇ ಹೊರತು ಪರಿಹಾರ ಅಲ್ಲ. ದೇಶಾದ್ಯಂತ ನೆರೆ ಬಂದಾಗ ಯಾವ ಸರ್ಕಾರ ಕೂಡ ಪರಿಹಾರ ಕೊಡುವುದಿಲ್ಲ. ಅವರು ಕೊಡುವುದು ಸಹಾಯಧನ. ಮೋದಿ ಅವರು ಕರ್ನಾಟಕದ ಮೇಲೆ ಬಹಳ ಪ್ರೀತಿ ಇಟ್ಟುಕೊಂಡು ಏನೇನು ಅನುದಾನ ಕೊಡಬೇಕಿತ್ತೋ ಆ ಅನುದಾನವನ್ನು ಕೊಟ್ಟಿದ್ದಾರೆ. ಎನ್‍ಡಿಆರ್‍ಎಫ್ ತಂಡ ಅನುದಾನವನ್ನು ಬಿಡುಗಡೆ ಮಾಡಬೇಕಿದೆ. ಅದಕ್ಕೆ ತಂಡ ಬಂದು ಪರಿಶೀಲನೆ ಮಾಡಿಕೊಂಡು ಹೋಗಿದೆ. ಪರಿಹಾರ ಎಂದಾಕ್ಷಣ ಯಾರೂ ಕಿಸೆಯಿಂದ ಪರಿಹಾರ ಕೊಡುವುದಲ್ಲ. ಅದಕ್ಕೆ ಅಂತಾನೇ ತುಂಬಾನೇ ಪ್ರಕ್ರಿಯೆಗಳು ಇರುತ್ತದೆ ಎಂದು ಹೇಳಿದರು.
2014ರಲ್ಲಿ ನಾವು 17 ಜನ ಸಂಸದರಾಗಿ ಗದ್ದಿದ್ದೇವೆ. ಆಗ ಕಾವೇರಿ, ಮೇಕೆದಾಟು ಸಮಸ್ಯೆ ಇತ್ತು. ಆ ಸಂದರ್ಭದಲ್ಲಿ 17 ಜನ ಸಂಸದರು ಏನು ಮಾಡುತ್ತಿದ್ದಾರೆ ಎಂದು ಕೇಳುತ್ತಿದ್ದರು. 2019ರಲ್ಲಿ 17 ಸಂಸದರನ್ನು ಪುನಃ ಆಯ್ಕೆ ಮಾಡುವ ಜೊತೆಗೆ 25ಕ್ಕೆ ನಮ್ಮ ಸಂಖ್ಯೆಯನ್ನು ಹೆಚ್ಚಿಸಿದ್ದರು. ಅಂದರೆ ಕರ್ನಾಟಕದ ಬಿಜೆಪಿ ಸಂಸದರು ಕೆಲಸ ಮಾಡುತ್ತಿದ್ದಾರೆ, ಜನರಿಗೆ ಅದರ ಮೆಚ್ಚುಗೆ ಹಾಗೂ ಮನ್ನಣೆ ಸಿಕ್ಕಿದೆ ಎಂದರ್ಥ ಎಂದರು.
ಟೀಕೆ ಮಾಡುವರಿಗೆ ನಾನು ಒಂದು ಪ್ರಶ್ನೆ ಕೇಳುತ್ತೇನೆ. ಮೋದಿ ಬಿಹಾರಕ್ಕೆ ಪರಿಹಾರ ನೀಡಿರುವ ಕುರಿತು ಟ್ವೀಟ್ ಮಾಡಿದ್ದಾರೆ ಎಂದು ಹೇಳುತ್ತೀರಾ, ಆದರೆ ಮೋದಿ ಅವರು ಕರ್ನಾಟಕಕ್ಕೆ ಅಮಿತ್ ಶಾ ಅವರನ್ನು ಕಳುಹಿಸಿಕೊಟ್ಟಿದ್ದರು. ಇದು ನಿಮಗೆ ಕಣ್ಣಿಗೆ ಕಾಣಿಸುವುದಿಲ್ಲವಾ. ಅಮಿತ್ ಶಾ ಅವರು ಸ್ವತಃ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ಮಾಡಿಕೊಂಡು ಹೋಗಿದ್ದಾರೆ. ಎಲ್ಲರು ಕೂಡ ಕೇಂದ್ರ ಸರ್ಕಾರ ಎಂದು ಕೇಳುತ್ತೀರಾ ಅಲ್ಲವಾ, ಈಗ ರಾಜ್ಯಾದ್ಯಂತ 2,35,000 ಮನೆಗಳು ಹಾನಿಯಾಗಿದೆ. ಯಾರ ಮನೆಗೆ ನೀರು ನುಗ್ಗಿದೆಯೋ ಅವರಿಗೆ 10,000 ನೀಡಲಾಗಿದೆ. ಅಂದರೆ ಮೋದಿ ಸರ್ಕಾರದಿಂದ 3,800 ಹಾಗೂ ಯಡಿಯೂರಪ್ಪ ಸರ್ಕಾರದಿಂದ 6,200 ರೂ. ನೀಡಿದ್ದೇವೆ. ಯಾರ ಮನೆಗೆ ಬಂದಿಲ್ಲ ಎಂದರೆ ಹೇಳಿ ನಾವೇ ಖುದ್ದಾಗಿ ಬಂದು ಅವರಿಗೆ ಹಣ ನೀಡುತ್ತೇವೆ. ಇದುವರೆಗೂ ಕರ್ನಾಟಕದಲ್ಲಿ ಯಾವ ಸಿಎಂ ಕೂಡ ಕೇಂದ್ರ ಸರ್ಕಾರ ನೀಡುವ 3,800 ರೂ.ಗೆ 6,200 ರೂ. ಸೇರಿಸಿ ಕೊಡುವ ಕೆಲಸ ಮಾಡಿದ್ದಾರಾ. ಅದು ನಮ್ಮ ಯಡಿಯೂರಪ್ಪ ಅವರು ಮಾಡಿದ್ದಾರೆ ಎಂದರು.
ಮಾಧ್ಯಮಗಳಿಗೆ ಚಾಲೆಂಜ್:
ಇದೇ ವೇಳೆ ಮಾಧ್ಯಮಗಳಿಗೆ ಚಾಲೆಂಜ್ ಹಾಕಿದ ಪ್ರತಾಪ್ ಸಿಂಹ, ಯಾವುದಾದರೂ ಮನೆಗೆ ನೀರು ನುಗ್ಗಿ ಪಾತ್ರೆಗಳು ಹಾಳಾಗಿದ್ದರೆ ಹೇಳಿ ನಾವೇ ಅವರ ಮನೆಗೆ ಹೋಗಿ 10 ಸಾವಿರ ರೂ. ನೀಡುತ್ತೇವೆ. ಯಾರ ಮನೆ ಹಾನಿಯಾಗಿದೆಯೋ ಅವರಿಗೆ ತಕ್ಷಣಕ್ಕೆ ಎನ್‍ಡಿಆರ್‍ಎಫ್ ತಂಡದಿಂದ 95,000 ರೂ. ವರೆಗೂ ಕೊಡುವ ಅನುದಾನ ಇದೆ. ಇದು ರಾಜ್ಯಾದ್ಯಂತ ಅದನ್ನು ಕೊಟ್ಟಿದ್ದೇವೆ. ಅಲ್ಲದೆ ಯಡಿಯೂರಪ್ಪ ಅವರು ಯಾರ ಮನೆ ಸಂಪೂರ್ಣವಾಗಿ ಹಾಳಾಗಿದೆಯೋ ಅವರಿಗೆ ನೀವು ಬಯಸಿದ ಜಾಗದಲ್ಲಿ ಮನೆ ಕಟ್ಟಿಸಿಕೊಳ್ಳುವುದಕ್ಕೆ 5 ಲಕ್ಷ ರೂ. ಕೊಡುತ್ತೇನೆ ಎಂದರು. ಅಂದರೆ ಕೇಂದ್ರ ಸರ್ಕಾರದಿಂದ 95,000 ಹಾಗೂ ಯಡಿಯೂರಪ್ಪ ಸರ್ಕಾರದಿಂದ 4,50,000 ಸೇರಿಸಿ ಕೊಡುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.
2004ರಿಂದ 2014ರವರೆಗೂ ನೆರೆನೂ ಬಂದಿತ್ತು ಹಾಗೂ ಬರನೂ ಬಂದಿತ್ತು. ಆಗ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. 2004ರಿಂದ 2014ರವರೆಗೂ 10 ವರ್ಷಗಳಲ್ಲಿ ಯುಪಿಎ ಸರ್ಕಾರ ಎನ್‍ಡಿಆರ್‍ಎಫ್‍ಗೆ ಎಷ್ಟು ಅನುದಾನ ಕೊಟ್ಟಿದ್ದರೋ ಅದಕ್ಕಿಂತ ಮೂರು ಪಟ್ಟು ಹೆಚ್ಚು ಮೋದಿ ಸರ್ಕಾರ 2014ರಿಂದ 2019ರವರೆಗೆ ಕೊಟ್ಟಿದೆ. ಈಗಲೂ ನಾವು ಕೊಡುತ್ತೇವೆ. ಮೇ, ಜೂನ್, ಜುಲೈನಲ್ಲಿ ಬರ ಬಂದಿದೆ ಎಂದು ಹೇಳುತ್ತಿದ್ದರು. ಬರದ ಬಗ್ಗೆ ಪರಿಶೀಲನೆ ಮಾಡಿ ಹೆಚ್ಚಿನ ತಾಲೂಕುಗಳನ್ನು ಬರ ಪೀಡಿತ ತಾಲೂಕು ಎಂದು ಪೋಷಿಸಿ ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಿದ್ದೆವು. ವರದಿ ಕಳುಹಿಸಿದಾಗ ಇದೇ ಅಗಸ್ಟ್ ತಿಂಗಳಿನಲ್ಲಿ ಸಾವಿರ ಎಂಟು ಕೋಟಿ ರೂ. ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಬೆಂಗಳೂರು: ರಾಜ್ಯದ ನೆರೆಗೆ ಪರಿಹಾರ ಕೊಡದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಸಂಸದರ ವಿರುದ್ಧ ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, 25 ಸಂಸದರು ಆಯ್ಕೆ ಆಗಿದ್ದಾರೆ. ರಾಜ್ಯದ ಪರ ಧ್ವನಿ ಎತ್ತೋದು ಅವರ ಕರ್ತವ್ಯ. ನಾಡಿನ ಹಿತ ಕಾಪಾಡೋದು ಸಂಸದರ ಕೆಲಸ. ನಮ್ಮನ್ನ ಆಯ್ಕೆ ಮಾಡಿದ ಜನ ನಮಗೆ ಮೊದಲು. ಸಂಸದರು ಪ್ರಧಾನಿ ಬಳಿ ನಮ್ಮನ್ನ ಕರೆದುಕೊಂಡು ಹೋಗುವ ಕೆಲಸ ಮಾಡಬೇಕು. ಪ್ರಧಾನಿಗಳು ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.
ಕೇಂದ್ರದ ಈ ವರ್ತನೆಯಿಂದ ರಾಜ್ಯದ ಜನರಿಗೆ ತಪ್ಪು ಸಂದೇಶ ಹೋಗುತ್ತಿದೆ. ಪ್ರಧಾನಿಗಳು ಈ ಬಗ್ಗೆ ಸೂಕ್ತ ನಿರ್ಧಾರ ಮಾಡಬೇಕು ಅಂತ ಮನವಿ ಮಾಡಿದರು. ಯಾವ ಮುಖ ಇಟ್ಟುಕೊಂಡು ಉತ್ತರ ಕರ್ನಾಟಕದ ಜನರಿಗೆ ಉತ್ತರ ಹೇಳಿಬೇಕು ನಾವು. ಉತ್ತರ ಕರ್ನಾಟಕ ಜನ ಈಗ ಬಿಜೆಪಿ ಶಾಸಕರು, ಸಂಸದರು ಅಂದರೆ ಹೊಡೆಯೋಕೆ ಬರುತ್ತಾರೆ ಅಂತ ಅಸಹಾಯಕತೆ ವ್ಯಕ್ತಪಡಿಸಿದರು. ಇದನ್ನು ಓದಿ: ಉತ್ತರ ಕರ್ನಾಟಕದ ಕಣ್ಣೀರು ಕರ್ನಾಟಕದ ಸಂಸದರಿಗೆ ಯಾಕೆ ಕಾಣುತ್ತಿಲ್ಲ: ಸೂಲಿಬೆಲೆ ಪ್ರಶ್ನೆ
ಕರ್ನಾಟಕಜನರ ಭಾವನೆಗೆ ಪ್ರಧಾನಿಗಳು ಸ್ಪಂದಿಸಬೇಕು. ಇಷ್ಟೆಲ್ಲ ಆದರೂ ನಮಗೆ ಟ್ವೀಟ್ ಮಾಡದೇ ಬಿಹಾರದವರಿಗೆ ಟ್ವೀಟ್ ಮಾಡ್ತಾರೆ ಎಂದರೆ ಹೇಗೆ? ಜನಕ್ಕೆ ನಾವ್ ಏನ್ ಉತ್ತರ ಕೊಡೋಣ. ಸಾಮಾಜಿಕ ಜಾಲತಾಣದಲ್ಲಿ ಜನ ಪ್ರಶ್ನೆ ಮಾಡ್ತಿದ್ದಾರೆ. ಕರ್ನಾಟಕದಲ್ಲಿ ಚುನಾವಣೆ ಇಲ್ಲ ಎಂದು ಮೋದಿ ಟ್ವೀಟ್ ಮಾಡಿಲ್ವಾ? ಪಕ್ಷ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕರ್ನಾಟಕವನ್ನು ಹೀಗೆ ನಿರ್ಲಕ್ಷ್ಯ ಮಾಡಿದರೆ ದಕ್ಷಿಣ ಭಾರತದಲ್ಲಿ ಬಿಜೆಪಿ ಅಸ್ಥಿತ್ವ ಕಳೆದುಕೊಳ್ಳುತ್ತೆ ಅಂತ ಎಚ್ಚರಿಕೆ ಕೊಟ್ಟರು.
ನೆರೆಗೆ ರಾಜ್ಯ ಸರ್ಕಾರವೇ ಹಣ ಹೊಂದಿಸಬಹುದು ಅಂದಿದ್ದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಅ ಸಂಸದರಿಗೆ ಕಷ್ಟವೇ ಗೊತ್ತಿಲ್ಲ. ಅವರು ಪಕ್ಷ ಕಟ್ಟಿದವರು ಅಲ್ಲ. ನಮ್ಮಂತವರು ಪಕ್ಷ ಕಟ್ಟಿದವರು. ನಾವು ಹಳ್ಳಿಯಲ್ಲಿ ಓಡಾಡಿ ಪಕ್ಷ ಕಟ್ಟಿದ್ದೇವೆ. ಯಡಿಯೂರಪ್ಪ, ಅನಂತ್ ಕುಮಾರ್ ಅಂತಹವರು ಓಡಾಡಿ ಪಕ್ಷ ಕಟ್ಟಿದರು. ಈಗ ಯಾರ್ಯಾರೋ ಬಂದು ಏನೇನೋ ಹೇಳಿಕೆ ಕೊಟ್ಟು ಮಜಾ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹಳ್ಳಿ ಜನರ ಕಷ್ಟ ಅವರಿಗೆ ಗೊತ್ತಾ? ಸ್ವಲ್ಪ ಇಂಗ್ಲಿಷ್ ಬಂತು ಅಂತ ಅಂತಾರಾಷ್ಟ್ರೀಯ ನಾಯಕರು ಆದರೆ ಸಾಕಾ? ಜನರ ಕಷ್ಟ ಗೊತ್ತಿರಬೇಕು ಅಲ್ವಾ? ಹಳ್ಳಿ ಒಳಗೆ ಕೆಲಸ ಮಾಡೋರು ನಾವು. ಹಿಂದೆ ನಮ್ಮ ರಾಜ್ಯದ ವಿಚಾರಕ್ಕೆ ಧಕ್ಕೆ ಬಂದಾಗ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ. ಅಂದೇ ಇದನ್ನು ಪಕ್ಷದ ವಿರೋಧಿ ಚಟುವಟಿಕೆ ಎಂದರು. ನಾನು ನನ್ನ ಕ್ಷೇತ್ರದ ಜನರ ಪರ ಅಂತ ಅವತ್ತೇ ನಮ್ಮ ನಾಯಕರಿಗೆ ಹೇಳಿದ್ದೆ. ಇಂತಹ ಸ್ವಭಾವ ಸಂಸದರು ಬಳಸಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಕೊಟ್ಟಿರೋದು ಕರ್ನಾಟಕ. ಆಂಧ್ರ, ಕೇರಳ, ಪಾಂಡಿಚೇರಿಯಲ್ಲಿ ಎಷ್ಟು ಸ್ಥಾನ ಬಂದಿದೆ. ಕರ್ನಾಟಕದ ಜನ ಇಷ್ಟು ಸ್ಥಾನ ಕೊಟ್ಟಿದ್ದಕ್ಕೆ ಇದು ಬಳುವಳಿನಾ? ನಿಮ್ಮ ಅವರ ಜಗಳ ಏನಿದೆಯೋ ಗೊತ್ತಿಲ್ಲ. ಇದಕ್ಕೆ ಕರ್ನಾಟಕದ ಜನರನ್ನ ಯಾಕೆ ಬಲಿ ಕೊಡ್ತೀರಾ. ಕರ್ನಾಟಕದ ಜನರ ಮೇಲೆ ನೀವು ದ್ವೇಷ ಸಾಧಿಸುತ್ತಿದ್ದೀರಾ. ಯಾವುದೋ ಮುಖ್ಯಮಂತ್ರಿ ವಿರುದ್ಧ ದ್ವೇಷ ಅಲ್ಲ ಇದು. ರಾಜ್ಯದ ಜನರ ವಿರುದ್ಧ ದ್ವೇಷ ಸಾಧಿಸುತ್ತಿದ್ದೀರಾ. ಇದು ಕರ್ನಾಟಕದ ಜನರ ಮೇಲೆ ದುಷ್ಪರಿಣಾಮ ಬೀರುತ್ತಿದೆ ಅಂತ ಸಂಸದರು ಹಾಗೂ ಮೋದಿ ವಿರುದ್ಧ ಆಕ್ರೋಶ ಹೊರ ಹಾಕಿದರು.
ಬಿಜೆಪಿಯಲ್ಲಿ ಎರಡು ಶಕ್ತಿ ಕೇಂದ್ರ ಇವೆ. ಇದೇ ಯಡಿಯೂರಪ್ಪ ವಿರುದ್ಧ ಟಾರ್ಗೆಟ್ ಮಾಡುತ್ತಿದೆ. ಪಕ್ಷದಲ್ಲಿ ಏನ್ ಆಗುತ್ತಿದೆ ನಮಗೆ ಗೊತ್ತಾಗುತ್ತಿಲ್ಲ. ಇನ್ನು ಸ್ವಲ್ಪ ದಿನ ಕಾದು ನೋಡ್ತೀವಿ. ಸರಿ ಹೋಗಿಲ್ಲ ಎಂದರೆ ಏನ್ ಮಾಡೋದು ಅಂತ ತೀರ್ಮಾನ ಮಾಡುತ್ತೇವೆ. ಬಿಜೆಪಿಯಲ್ಲಿ ಈಗ ಎರಡು ಶಕ್ತಿ ಕೇಂದ್ರಗಳಾಗಿವೆ. ಒಂದು ದೆಹಲಿಯಲ್ಲಿ ಕುಳಿತಿದೆ, ಇನ್ನೊಂದು ಬೆಂಗಳೂರಿನಲ್ಲಿ ಕುಳಿತಿದೆ. ಇವರಿಬ್ಬರ ಜಗಳದಲ್ಲಿ ನಾವು ಸಾಯ್ತಿದ್ದೇವೆ ಅಸಮಾಧಾನ ಹೊರ ಹಾಕಿದರು.
ಸಿಎಂ ಯಡಿಯೂರಪ್ಪ ಸೈಡ್ ಲೈನ್ ಮಾಡೋಕೆ ಅನುದಾನ ನೀಡುತ್ತಿಲ್ಲ ಎನ್ನುವ ಭಾವನೆ ಜನರಲ್ಲಿ ಮೂಡುತ್ತಿದೆ. ಇಡೀ ಕರ್ನಾಟಕ ಹೇಳುತ್ತಿದೆ. ಇದು ಟಾರ್ಗೆಟ್ ಬೇಸ್ ರಾಜಕೀಯ. ಒಬ್ಬ ವ್ಯಕ್ತಿಯನ್ನ ಮುಗಿಸುವ ಸಲುವಾಗಿ ಕರ್ನಾಟಕ ಮುಗಿಸಲು ಸಾಧ್ಯವಿಲ್ಲ. ಕರ್ನಾಟಕದ ಭವಿಷ್ಯ ಒಬ್ಬ ವ್ಯಕ್ತಿ ಕೈಯಲ್ಲಿ ಇಲ್ಲ. ಅವರನ್ನು ಮುಗಿಸೋಕೆ ಅನುದಾನ ಕೊಡೊಲ್ಲ, ಭೇಟಿ ಆಗುವುದಿಲ್ಲ ಎನ್ನುವುದು ಸರಿಯಲ್ಲ. ಜನರು ಹುಚ್ಚರಲ್ಲ. ನಮ್ಮ ಜೀವನದ ಕುಂಡಲಿಯನ್ನ ಸಾಮಾಜಿಕ ಜಾಲತಾಣದಲ್ಲಿ ಬರೆಯುತ್ತಾರೆ ಎಂದು ಕಿಡಿಕಾರಿದರು.
ಯಡಿಯೂರಪ್ಪ ತಂತಿ ಮೇಲೆ ನಡಿಗೆ ಅನ್ನೋ ಹೇಳಿಕೆ ವಿಚಾರ ಮಾತನಾಡಿದ ಅವರು ಅಲ್ಪಮತ ಸರ್ಕಾರ ಬಂದ ಮೇಲೆ ಎಲ್ಲರೂ ತಂತಿ ಮೇಲೆಯೇ ನಡೆಯೋದು. ಗೋಡೆ ಮೇಲೆ ಯಾರು ನಡೆಯೋಕೆ ಆಗುವುದಿಲ್ಲ. ಅದಕ್ಕೆ ಬಹುಮತ ಬೇಕು ಅಂತ ಹೇಳೋದು. ಯಡಿಯೂರಪ್ಪರನ್ನ ಟಾರ್ಗೆಟ್ ಮಾಡ್ತಿದ್ದಾರೆ ಅನ್ನೋ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಇವತ್ತಿನ ವಿದ್ಯಾಮಾನ ನೋಡುತ್ತಿದ್ದರೆ ಇದು ಸತ್ಯ ಅನ್ನಿಸುತ್ತಿದೆ. ಇದು ಯಾವ ದಿಕ್ಕು ಪಡೆಯುತ್ತೋ ಗೊತ್ತಿಲ್ಲ. ಇವತ್ತಿನ ಬೆಳವಣಿಗೆಗಳು ಸಮಾಧಾನವಾಗಿ ಇಲ್ಲ ಅಂತ ತಿಳಿಸಿದರು.
ಅನರ್ಹ ಶಾಸಕರ ವಿರುದ್ಧ ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ, ಮತ್ತು ಸಿಟಿ ರವಿ ಸೇರಿದಂತೆ ಕೆಲ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್, ಸಚಿವರು ಹೀಗೆ ಮಾತುಗಳನ್ನ ಆಡೋದಿದರೆ ಯಾಕೆ ಸಚಿವರಾಗಬೇಕಿತ್ತು 17 ಶಾಸಕರು ರಾಜೀನಾಮೆ ಕೊಟ್ಟಿದ್ದಕ್ಕೆ ಇಂದು ಸರ್ಕಾರ ರಚನೆ ಆಗಿದೆ. ಅವರ ರಾಜೀನಾಮೆ ಕೊಡದೇ ಇದ್ದಿದ್ದರೆ ಬಿಜೆಪಿ ಸರ್ಕಾರ ಬರುತ್ತಿತ್ತಾ? ನಾವು ವಿರೋಧ ಪಕ್ಷದಲ್ಲಿ ಕೂರಬೇಕಿತ್ತು ಅಷ್ಟೇ ಅಂತ ಸಚಿವರಿಗೆ ತಿರುಗೇಟು ಕೊಟ್ಟರು.
ಆ 17 ಶಾಸಕರಿಂದಲೇ ಮಂತ್ರಿಯಾಗಿ ಗೂಟದ ಕಾರಲ್ಲಿ ಓಡಾಡುತ್ತಿದ್ದಾರೆ. ಆದರೆ ಇದನ್ನು ಮರೆತು ಬೇಜವಾಬ್ದಾರಿಯಿಂದ ಕೆಲ ಸಚಿವರು ಮಾತನಾಡುತ್ತಿದ್ದಾರೆ. ಯಾವುದೋ ದೊಡ್ಡ ಶಕ್ತಿ ಅ ಸಚಿವರ ಹಿಂದೆ ಇದೆ. ಹೀಗಾಗಿ ಅವರ ಹೀಗೆಲ್ಲ ಮಾತನಾಡುತ್ತಿದ್ದಾರೆ ಅಂತ ಪರೋಕ್ಷವಾಗಿ ಸಂತೋಷ್ ವಿರುದ್ಧ ಕಿಡಿಕಾರಿದರು.
ಇಂತಹ ಶಕ್ತಿ ಕೇಂದ್ರಗಳನ್ನು ಜನರೇ ಒಡೆಯುತ್ತಾರೆ. ಜನರು ಎಂತೆಂತವರನ್ನೆ ಒಡೆದಿದ್ದಾರೆ. ಇವೆರೆಲ್ಲ ಜನರಿಗೆ ಯಾವ ಲೆಕ್ಕ. ಇವರೆಲ್ಲ ಯಾವ ಗಿಡದ ತಪ್ಪಲು. ಇವರೆಲ್ಲ ಹೋರಾಟ ಮಾಡಿ ಬಂದವರಾ? ಉಪವಾಸ, ಲಾಠಿ ಏಟು ತಿಂದು ನಾವು ಪಕ್ಷ ಕಟ್ಟಿದವರು. ನಮ್ಮನ್ನು ಉರುಳಿಸಲು ಹೋದರೆ ಜನ ಇವರನ್ನೇ ಉರುಳಿಸುತ್ತಾರೆ. ಎಸಿ ಕೊಠಡಿಯಲ್ಲಿ ಕುಳಿತು ಪಕ್ಷ ಕಟ್ಟಿದರೆ ಉಳಿಯುತ್ತಾ? ಯಾವ ಪಕ್ಷವೂ ಉಳಿಯುವುದಿಲ್ಲ. ಏನೋ ಅವಕಾಶ ಸಿಕ್ಕಿದೆ ಅಂತ ಹೊರಟಿದ್ದಾರೆ ಅಷ್ಟೇ ಎಂದು ಪರೋಕ್ಷವಾಗಿ ಸಂತೋಷ್, ಕಟೀಲ್ ವಿರುದ್ಧ ಆಕ್ರೋಶ ಹೊರ ಹಾಕಿದರು.