Tag: Central Government

  • ಎಷ್ಟಿಂಚು ಎದೆಯಿದ್ದರೇನು ಪ್ರಯೋಜನ, ಮಾತೃ ಹೃದಯವಿರಬೇಕು: ಮೋದಿಗೆ ಸಿದ್ದು ಟಾಂಗ್

    ಎಷ್ಟಿಂಚು ಎದೆಯಿದ್ದರೇನು ಪ್ರಯೋಜನ, ಮಾತೃ ಹೃದಯವಿರಬೇಕು: ಮೋದಿಗೆ ಸಿದ್ದು ಟಾಂಗ್

    – ರಮೇಶ್ ಸಾವು ನಿಗೂಢವಾಗಿ ಕಾಣಿಸ್ತಿದೆ
    – ವಿಧಾನಸಭೆಯಲ್ಲಿ ಮಾಧ್ಯಮ ನಿಷೇಧಕ್ಕೆ ಕಿಡಿ

    ಚಿಕ್ಕಮಗಳೂರು: ಕರ್ನಾಟಕ ಪ್ರವಾಹಕ್ಕೆ ಸರಿಯಾಗಿ ಸ್ಪಂದಿಸದ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಎಷ್ಟಿಂಚು ಎದೆಯಿದ್ದರೇನು ಪ್ರಯೋಜನ, ಮಾತೃ ಹೃದಯವಿರಬೇಕು. ಜನರ ಕಷ್ಟಕ್ಕೆ ಸ್ಪಂದಿಸುವ ಮನಸ್ಸಿರಬೇಕು ಎಂದು ಮೋದಿಗೆ ಟಾಂಗ್ ಕೊಟ್ಟಿದ್ದಾರೆ.

    ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ, ಈ ವರ್ಷ ರಾಜ್ಯದಲ್ಲಿ ಪ್ರವಾಹ ಹಾಗೂ ಬರ ಎರಡೂ ಇದೆ. ಇದನ್ನು ಸಚಿವ ಆರ್. ಅಶೋಕ್ ಅವರೇ ಒಪ್ಪಿಕೊಂಡಿದ್ದಾರೆ. ಪ್ರವಾಹದ ಪರಿಹಾರ ಎಷ್ಟು ದಿನಕ್ಕೆ ಬಂದಿದೆ ಎಂದು ಗೊತ್ತಾ? 60 ದಿನಗಳಾದ ಮೇಲೆ 1,200 ಕೋಟಿ ರೂ. ಕೇಂದ್ರ ಸರ್ಕಾರದಿಂದ ಕೊಟ್ಟಿದ್ದಾರೆ. ಧೂಪ ಹಾಕ್ತಾರಲ್ಲ ಆ ರೀತಿ 1,200 ಕೋಟಿ ಕೊಟ್ಟಿದ್ದಾರೆ. ನೆರೆ ಬಂದು ಜನರು ಸಂಕಷ್ಟಕ್ಕೆ ಸಿಲುಕಿ ಸಾಕಷ್ಟು ಸಾವು-ನೋವುಗಳು ಆದರೂ ಮೋದಿ ಕರ್ನಾಟಕಕ್ಕೆ ಬಂದೇ ಇಲ್ಲ. ಸುಮಾರು 2 ಕೋಟಿ ಜನರು ಕರ್ನಾಟಕದಲ್ಲಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಮೋದಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ಬಿಹಾರದಲ್ಲಿ ನೆರೆ ಬಂದಾಗ ತಕ್ಷಣ ಟ್ವೀಟ್ ಮಾಡುತ್ತಾರೆ ಎಂದು ಹರಿಹಾಯ್ದರು.

    ಎದೆ ಎಷ್ಟು ಇಂಚು ಇದ್ದರೇನು, ಜನರ ಕಷ್ಟಕ್ಕೆ ಸ್ಪಂದಿಸಲು ಮಾತೃ ಹೃದಯ ಇರಬೇಕು. ನೂರು ಇಂಚು ಎದೆ ಬೇಕಾದರೆ ಇಟ್ಟುಕೊಳ್ಳಿ ಆದರೆ ಮಾತೃ ಹೃದಯ ಇರಬೇಕು ಅಷ್ಟೆ ಎಂದು ಮೋದಿಯರನ್ನು ಟೀಕಿಸಿದರು.

    ಇದೇ ವೇಳೆ ವಿಧಾನಸಭೆಯಲ್ಲಿ ಮಾಧ್ಯಮ ನಿಷೇಧ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರನ್ನ ದೂರ ಇಟ್ಟು ಏನು ಮಾಡೋಕೆ ಆಗಲ್ಲ. ವಿಧಾನಸಭೆಯಲ್ಲಿ ನಡೆಯುವ ಕಲಾಪ ಎಲ್ಲರಿಗೂ ಗೊತ್ತಾಗಬೇಕು. ಕಲಾಪ ಗೌಪ್ಯವಾಗಿ ನಡೆಯೋದಿಲ್ಲ, ಎಲ್ಲರಿಗೂ ಗೊತ್ತಾಗಲಿ ಎಂದು ನಾವು ಚರ್ಚೆ ಮಾಡೋದು. ಆದ್ದರಿಂದ ಮಾಧ್ಯಮಕ್ಕೆ ನಿರ್ಬಂಧ ಹೇರಿರುವುದು ಸರಿಯಲ್ಲ. ಈ ನಿರ್ಧಾರ ಸಿಎಂ ಹಾಗೂ ಸ್ಪೀಕರ್ ಇಬ್ಬರೂ ಸೇರಿಯೇ ಮಾಡಿರುವುದು. ಸರ್ಕಾರಕ್ಕೆ ಗೊತ್ತಿಲ್ಲದೆ ಏನು ಮಾಡೋಕೆ ಆಗಲ್ಲ. ಬಿಜೆಪಿಯವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಅಲ್ಲದೆ ಬಿಜೆಪಿ ಸರ್ಕಾರ ಸರ್ವಾಧಿಕಾರ ಧೋರಣೆ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ, ಪ್ರಜಾಪ್ರಭುತ್ವದ ಕೊಲೆ ಎಂದು ಕಿಡಿಕಾರಿದರು.

    ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ನಾಲ್ಕು ಅಂಗಗಳು ಮುಖ್ಯ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾ ರಂಗ ಮುಖ್ಯ ಪಾತ್ರವಹಿಸುತ್ತದೆ. ಪ್ರತಿ ನಿಯಮಾವಳಿಗಳನ್ನ ನಾವೇ ಮಾಡಿಕೊಂಡಿರೋದು. ನಿಯಮಾವಳಿಗಳು ದೇವಲೋಕದಿಂದ ಇಳಿದು ಬಂದಿಲ್ಲ. ನಿಯಮಗಳ ಬಗ್ಗೆ ಬಿಜೆಪಿಯವರಿಗೇ ನಂಬಿಕೆ ಇಲ್ಲ. ಸರ್ಕಾರದ ಹುಳುಕು, ವೈಫಲ್ಯಗಳು ಗೊತ್ತಾಗುತ್ತದೆ ಎಂದು ಮಾಧ್ಯಮದವರನ್ನ ದೂರ ಇಟ್ಟಿದ್ದಾರೆ ಎಂದು ಆರೋಪಿಸಿದರು.

    ವಿರೋಧ ಪಕ್ಷದ ನಾಯಕರು ಮಾತಾನಾಡುವಾಗ ತಡೆಯೋದು ಸರಿಯಲ್ಲ. ನಾನು ಯಾವತ್ತೂ ಈ ರೀತಿಯ ಸ್ಪೀಕರ್ ನೋಡಿಲ್ಲ. ಮುಂದೆ ಇದೇ ರೀತಿ ನಡೆದರೆ ವಿಧಾನಸಭೆ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಜೊತೆಗೆ ಈ ಸಲ ಒಪ್ಪಿಕೊಂಡಿದ್ದೇನೆ. ಆದರೆ ಮೋದಿ, ಅಮಿತ್ ಶಾ ಅವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲ. ಆರ್‍ಎಸ್‍ಎಸ್ ಅವರಿಗೆ ನಂಬಿಕೆ ಬರೋಕೆ ಸಾಧ್ಯವಿಲ್ಲ ಎಂದು ಗುಡುಗಿದರು.

    ಹಾಗೆಯೆ ಪರಮೇಶ್ವರ್ ಪಿ.ಎ. ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾತನಾಡಿ, ರಮೇಶ್ ಸಾವು ನಿಗೂಢವಾಗಿ ಕಾಣಿಸುತ್ತದೆ. ಡೆತ್ ನೋಟ್‍ನಲ್ಲಿ ನನಗೆ ಕಿರುಕುಳ ಕೊಟ್ಟಿದ್ದಾರೆಂದು ಉಲ್ಲೇಖಿಸಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಪ್ರಕರಣದ ಸೂಕ್ತ ತನಿಖೆಯಾಗಬೇಕು. ಈ ಸಂಬಂಧ ಯಾವ ಏಜೆನ್ಸಿ ತನಿಖೆ ಮಾಡಬೇಕು ಅನ್ನೋದು ಸರ್ಕಾರಕ್ಕೆ ಬಿಟ್ಟಿದ್ದು. ರಮೇಶ್ ಸಾವಿಗೆ ಕಾರಣರಾದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

  • ಇಂದಿನಿಂದ ಪ್ರವಾಸಿಗರಿಗೆ ಜಮ್ಮು ಕಾಶ್ಮೀರ ಮುಕ್ತ

    ಇಂದಿನಿಂದ ಪ್ರವಾಸಿಗರಿಗೆ ಜಮ್ಮು ಕಾಶ್ಮೀರ ಮುಕ್ತ

    -2 ತಿಂಗಳ ಬಳಿಕ ನಿಷೇಧ ತೆರವು

    ನವದೆಹಲಿ: ಇಂದಿನಿಂದ ಪ್ರವಾಸಿಗರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಬಹುದು. ಎರಡು ತಿಂಗಳ ಬಳಿಕ ಪ್ರವಾಸಿಗರಿಗೆ ಹೇರಿದ್ದ ನಿರ್ಬಂಧವನ್ನು ಗುರುವಾರ ತೆರವುಗೊಳಿಸಲಾಗಿದೆ.

    370ನೇ ವಿಧಿಯನ್ನು ರದ್ದು ಪಡಿಸಿದ ಬಳಿಕ ಭದ್ರತಾ ದೃಷ್ಟಿಯಿಂದ ಕಣಿವೆ ರಾಜ್ಯದಲ್ಲಿದ್ದ ಪ್ರವಾಸಿಗರನ್ನು ಹೊರ ಕಳಿಸಲಾಗಿತ್ತು. ಹೀಗಾಗಿ ಕಳೆದ ಎರಡು ತಿಂಗಳುಗಳಿಂದ ಜಮ್ಮು ಕಾಶ್ಮೀರದಲ್ಲಿ ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು. ಆದರೆ ಈ ನಿಷೇಧವನ್ನು ಸರ್ಕಾರ ತೆರವುಗೊಳಿಸಿದ್ದು, ಇಂದಿನಿಂದ ಕಾಶ್ಮೀರ ಪ್ರವಾಸಿಗರಿಗೆ ಮುಕ್ತವಾಗಿದೆ.

     

    ನಿಷೇಧಾಜ್ಞೆಯಿಂದ ಕಳೆದ ಎರಡು ತಿಂಗಳಿನಿಂದ ಕಾಶ್ಮೀರ ಪ್ರವಾಸಿಗರಿಲ್ಲದೆ ಬಿಕೋ ಎನಿಸುತ್ತಿತ್ತು. ಮಂಗಳವಾರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಕಣಿವೆ ರಾಜ್ಯದಲ್ಲಿ ಪ್ರವಾಸಿಗರಿಗೆ ಹೇರಿದ್ದ ನಿಷೇಧವನ್ನು ಹಿಂಪಡೆಯುವುದಾಗಿ ತಿಳಿಸಿದ್ದರು. ಸೋಮವಾರ ಸತ್ಯಪಾಲ್ ಮಲಿಕ್ ಅವರು ಜಮ್ಮು ಕಾಶ್ಮೀರ ರಾಜ್ಯದ ಭದ್ರತಾ ಸಲಹೆಗಾರ ಹಾಗೂ ಮುಖ್ಯ ಕಾರ್ಯದರ್ಶಿಗಳ ಜೊತೆ ಕಣಿವೆ ರಾಜ್ಯದಲ್ಲಿ ಪ್ರವಾಸಿಗರ ರಕ್ಷಣೆ ಕುರಿತು ಚರ್ಚೆ ನಡೆಸಿದ್ದರು.

    2019ರ ಮೊದಲ ಏಳು ತಿಂಗಳಲ್ಲಿ 50 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಜುಲೈ ತಿಂಗಳಲ್ಲಿ ಸುಮಾರು 3,40,000 ಯಾತ್ರಿಕರು ಆಗಮಿಸಿದ್ದರು. ಆದರೆ ಆಗಸ್ಟ್ 5ರ ಬಳಿಕ ಕೇವಲ 150 ವಿದೇಶಿ ಪ್ರಯಾಣಿಕರು ಮಾತ್ರ ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ ಎಂದು ಅಂಕಿ ಅಂಶಗಳಿಂದ ತಿಳಿದುಬಂದಿದೆ.

    ಅಮರನಾಥ ಯಾತ್ರೆಗೆ ಬರುವ ಯಾತ್ರಿಕರ ಮೇಳೆ ಉಗ್ರರು ದಾಳಿ ಮಾಡಲು ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಹೀಗಾಗಿ ಯಾತ್ರಿಕರ ಭದ್ರತಾ ದೃಷ್ಟಿಯಿಂದ ಕಳೆದ ಆಗಸ್ಟ್ 2ರಂದು ಅಮರನಾಥ ಯಾತ್ರಿಕರು ಮತ್ತು ಪ್ರವಾಸಿಗರು ಕಾಶ್ಮೀರವನ್ನು ಕೂಡಲೇ ತೊರೆದು ಹೋಗಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಪಡಿಸಿ, ಆಗಸ್ಟ್ 5ರಂದು ಜಮ್ಮುಕಾಶ್ಮೀರವನ್ನು ರಾಜ್ಯವನ್ನಾಗಿ ಘೋಷಿಸಿ ಲಡಾಖ್ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿತ್ತು. ಈ ನಿರ್ಧಾರ ಕೈಗೊಳ್ಳುವ ಮೂರು ದಿನಗಳ ಹಿಂದೆಯೇ ಕಣಿವೆ ರಾಜ್ಯಕ್ಕೆ ಆಗಮಿಸುವ ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು.

  • ಟವೆಲ್ ಆದ್ರೂ ಕೊಡ್ತಾರೆ ಅಂದ್ರೆ ಕರ್ಚೀಫ್ ಕೊಟ್ಟವರೆ: ಕೇಂದ್ರ ನೆರೆ ಪರಿಹಾರಕ್ಕೆ ಶರವಣ ವ್ಯಂಗ್ಯ

    ಟವೆಲ್ ಆದ್ರೂ ಕೊಡ್ತಾರೆ ಅಂದ್ರೆ ಕರ್ಚೀಫ್ ಕೊಟ್ಟವರೆ: ಕೇಂದ್ರ ನೆರೆ ಪರಿಹಾರಕ್ಕೆ ಶರವಣ ವ್ಯಂಗ್ಯ

    ಬೆಂಗಳೂರು: ನಾವು ಟವೆಲ್ ಆದ್ರು ಕೊಡುತ್ತಾರೆ ಎಂದುಕೊಂಡಿದ್ದೆ, ಆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಟ್ಟಿರೋದು ಕರ್ಚೀಫ್ ಮಾತ್ರ ಎಂದು ಕೇಂದ್ರದ ನೆರೆ ಪರಿಹಾರದ ಹಣವನ್ನು ವಿಧಾನ ಪರಿಷತ್ ಸದಸ್ಯ ಟಿಎ ಶರವಣ ವ್ಯಂಗ್ಯವಾಡಿದ್ದಾರೆ.

    ಇಂದು ನಗರದಲ್ಲಿ ಜೆಡಿಎಸ್ ಪಕ್ಷ ಮಾಡುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರು 5000 ಕೋಟಿ ತುರ್ತು ಪರಿಹಾರ ಕೊಡಿ ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದರು. ಆದರೆ ಕೇಂದ್ರ ಸರ್ಕಾರ ಕರ್ಚೀಫ್ ಕೊಟ್ಟ ಹಾಗೆ ರಾಜ್ಯಕ್ಕೆ ಪುಡಿಗಾಸು ಕೊಟ್ಟಿದ್ದಾರೆ. ಅದ್ದರಿಂದ 87 ರ ಇಳಿ ವಯಸ್ಸಿನಲ್ಲೂ ದೇವೇಗೌಡರು ಪ್ರತಿಭಟನೆಗೆ ಇಳಿದಿದ್ದಾರೆ ಎಂದು ಹೇಳಿದರು.

    ಕೇಂದ್ರ ನಮಗೆ ಸುಮ್ಮನೆ ಏನು ಹಣ ಕೊಡುತ್ತಿಲ್ಲ. ರಾಜ್ಯದಿಂದ 1 ಲಕ್ಷ ಕೋಟಿಗೂ ಹೆಚ್ಚು ಹಣ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಹೋಗುತ್ತಿದೆ. ಪ್ರವಾಹದಿಂದ ತತ್ತರಿಸಿದ ಜನರನ್ನು ಬಿಜೆಪಿ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ. ಹೀಗಾಗಿ ಜೆಡಿಎಸ್ ಪಕ್ಷ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಪ್ರತಿಭಟನೆ ಮಾಡುತ್ತಿದೆ ಎಂದು ತಿಳಿಸಿದರು.

    ಇದೇ ವೇಳೆ ಅಧಿವೇಶನಕ್ಕೆ ಮಾಧ್ಯಮಗಳ ತಡೆ ವಿಚಾರವಾಗಿ ಮಾತನಾಡಿದ ಶರವಣ, ಬಿಜೆಪಿ ತಮ್ಮ ಹುಳುಕನ್ನು ಮುಚ್ಚಿಕೊಳ್ಳಲು ಹೀಗೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ಬಂದಾಗಿನಿಂದ ರಾಜ್ಯದಲ್ಲಿ ಸಾಕಷ್ಟು ಅನಾಹುತಗಳಾಗಿವೆ. ಅವರ ಕೈಯಲ್ಲಿ ನಿಭಾಯಿಸೋದಕ್ಕೆ ಆಗಿಲ್ಲ. ಪ್ರವಾಹದ ವಿಚಾರದಲ್ಲಿ ಸರ್ಕಾರ ಸಂಪೂರ್ಣ ಎಡವಿದೆ. ಜನರಿಗೆ ಇವರ ಬಂಡವಾಳ ಎಲ್ಲಿ ಗೊತ್ತಾಗಿಬಿಡುತ್ತೆ ಎಂದು ಮಾಧ್ಯಮಗಳ ನಿಯಂತ್ರಣ ಮಾಡಿದ್ದಾರೆ. ಮಾಧ್ಯಮ ಪ್ರಜಾಪ್ರಭುತ್ವದ ಒಂದ ಅಂಗ, ಅದನ್ನು ದೂರ ಇಡೋದು ಸರಿಯಲ್ಲ. ಕೂಡಲೇ ಮಾಧ್ಯಮಗಳ ನಿಯಂತ್ರಣ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

  • ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬಕ್ಕೆ ಗುಡ್‍ನ್ಯೂಸ್: ತುಟ್ಟಿ ಭತ್ಯೆ ಹೆಚ್ಚಳ

    ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬಕ್ಕೆ ಗುಡ್‍ನ್ಯೂಸ್: ತುಟ್ಟಿ ಭತ್ಯೆ ಹೆಚ್ಚಳ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೀಪಾವಳಿಗೂ ಮುನ್ನವೇ ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ (ಡಿಎ) ಹೆಚ್ಚಿಸಿ ಹಬ್ಬಕ್ಕೆ ಬಂಪರ್ ಗಿಫ್ಟ್ ನೀಡಿದೆ.

    ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಕೇಂದ್ರ ಸರ್ಕಾರಿ ನೌಕರರಿಗೆ ಶೇ.5ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗಿದೆ. ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರವನ್ನ ಕೈಗೊಳ್ಳಲಾಗಿದ್ದು, ಜುಲೈ 1, 2019 ರಿಂದಲೇ ಇದು ಪೂರ್ವನ್ವಯವಾಗಲಿದೆ ಎಂದು ತಿಳಿಸಿದ್ದಾರೆ.

    ಇಷ್ಟು ದಿನಗಳ ಕಾಲ ಇದ್ದ ಶೇ.12ರಷ್ಟು ತುಟ್ಟಿ ಭತ್ಯೆ (ಡಿಎ)ಯನ್ನು ನೀಡಲಾಗುತಿತ್ತು. ಈಗ ಶೇ.17ಕ್ಕೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಈ ತುಟ್ಟಿ ಭತ್ಯೆ ಹೆಚ್ಚಳ ಪಿಂಚಣಿದಾರರಿಗೂ ಅನ್ವಯವಾಗಲಿದೆ. ಒಟ್ಟು 50 ಲಕ್ಷ ಸರ್ಕಾರಿ ನೌಕರರು ಮತ್ತು 65 ಲಕ್ಷ ಜನ ಪಿಂಚಣಿದಾರರು ಇದರ ಸೌಲಭ್ಯ ಪಡೆಯಲಿದ್ದಾರೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದರು.

    ಇದು ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆಯಾಗಿದೆ. ತುಟ್ಟಿ ಭತ್ಯೆ ಹೆಚ್ಚಳದಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕ 16 ಸಾವಿರ ಕೋಟಿ ರೂ. ಹೊರೆಯಾಗಲಿದೆ ಎಂದರು.

    ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಸೌಲಭ್ಯ ಪಡೆಯಲು ರೈತರು ಆಧಾರ್ ಲಿಂಕ್ ಮಾಡಲು ಹೆಚ್ಚಿನ ಕಾಲಾವಕಾಶ ನೀಡಲು ನಿರ್ಧರಿಸಲಾಗಿದೆ. ನವೆಂಬರ್ 30ರ ವರೆಗೂ ಅವಧಿಯನ್ನು ವಿಸ್ತರಿಸಲಾಗಿದೆ. ಈ ಕುರಿತು ಕೇಂದ್ರ ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಿದೆ. ಜೊತೆಗೆ ಆಶಾ ಕಾರ್ಯಕರ್ತೆಯರ ಸಂಭಾವನೆಯನ್ನು ಒಂದು ಸಾವಿರ ರೂ.ದಿಂದ ಎರಡು ಸಾವಿರ ರೂಪಾಯಿಗೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

  • ಕೇಂದ್ರದ ಪರಿಹಾರ ಹೆಚ್‍ಡಿಕೆ ಅವಧಿಯಲ್ಲಾದ ನೆರೆ ನಷ್ಟಕ್ಕೆ ಹೊರತು ಈಗಿನ ನಷ್ಟಕ್ಕಲ್ಲ: ಹೆಚ್‍ಡಿಡಿ ಕಿಡಿ

    ಕೇಂದ್ರದ ಪರಿಹಾರ ಹೆಚ್‍ಡಿಕೆ ಅವಧಿಯಲ್ಲಾದ ನೆರೆ ನಷ್ಟಕ್ಕೆ ಹೊರತು ಈಗಿನ ನಷ್ಟಕ್ಕಲ್ಲ: ಹೆಚ್‍ಡಿಡಿ ಕಿಡಿ

    ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರ ನೆರೆ ಪರಿಹಾರ ಹೆಸರಿನಲ್ಲಿ ಬಿಡುಗಡೆ ಮಾಡಿರೋದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವಧಿಯಲ್ಲಾದ ನೆರಯ ನಷ್ಟದ ಪರಿಹಾರ. ಈಗಿನ ನೆರೆ ನಷ್ಟಕ್ಕೆ ಕೇಂದ್ರ ನಯಾಪೈಸೆ ಕೂಡ ಕೊಟ್ಟಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಕಿಡಿಕಾರಿದ್ದಾರೆ.

    ಜಿಲ್ಲೆಯ ಚಿಂತಾಮಣಿ ತಾಲೂಕು ಶ್ರೀ ಕ್ಷೇತ್ರ ಕೈವಾರದಲ್ಲಿ ಚಿಂತಾಮಣಿ ಜೆಡಿಎಸ್ ಶಾಸಕ ಹಾಗೂ ವಿಧಾನಸಭೆ ಡೆಪ್ಯೂಟಿ ಸ್ಪೀಕರ್ ಜೆ.ಕೆ ಕೃಷ್ಣಾರೆಡ್ಡಿ ಅವರ 25ನೇ ವರ್ಷದ ವಾರ್ಷಿಕ ವಿವಾಹ ಮಹೋತ್ಸವ ಕಾರ್ಯಕ್ರಮದಲ್ಲಿ ದೇವೇಗೌಡರು ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭೀಕರ ಪ್ರವಾಹದಿಂದ ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ತವಾಗಿ ಸುಮಾರು 38,000 ಸಾವಿರ ಕೋಟಿ ನಷ್ಟ ಉಂಟಾಗಿದ್ದದೆ. ಆದರೆ ಕೇಂದ್ರ ಸರ್ಕಾರ ಇದುವರೆಗೂ ನಯಾಪೈಸೆ ಕೂಡ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕೇಂದ್ರ ಸರ್ಕಾರ ಈಗ ನೀಡಿರೋ 1,200 ಕೋಟಿ ರೂಪಾಯಿ ಪರಿಹಾರ ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಕೊಡಗು, ಶಿವಮೊಗ್ಗ ಮತ್ತಿತರ ಕಡೆ ಉಂಟಾಗಿದ್ದ ನೆರೆ ಪರಿಹಾರದ ನಷ್ಟದ ಪರಿಹಾರವೇ ಹೊರತು ಈಗಿನ 38,000 ಸಾವಿರ ಕೋಟಿ ನಷ್ಟದ ಪರಿಹಾರ ಅಲ್ಲ ಎಂದು ಕಿಡಿಕಾರಿದರು. ಹಾಗೆಯೇ ಕೇಂದ್ರದ ಸಮರ್ಪಕ ಅನುದಾನಕ್ಕಾಗಿ ಇದೇ ತಿಂಗಳ 10ರಂದು ಬೆಂಗಳೂರಿನ ಗಾಂಧಿ ಪ್ರತಿಮೆಯಿಂದ ಫ್ರೀಡಂ ಪಾರ್ಕಿನವರೆಗೆ ಸಾಂವಿಧಾನಿಕವಾಗಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

    ಇದೇ ವೇಳೆ ತಮ್ಮ ಗತಕಾಲದ ರಾಜಕೀಯ ಜೀವನವನ್ನ ಮೆಲುಕು ಹಾಕಿದ ದೇವೇಗೌಡರು, ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರು ಪಕ್ಷದಿಂದ ಹೊರಗೆ ಹಾಕಿದಾಗ, ಕೈವಾರ ಪುಣ್ಯಕ್ಷೇತ್ರದ ಅಭಿವೃದ್ಧಿಯ ಹರಿಕಾರ ಎಂ.ಎಸ್.ರಾಮಯ್ಯ ಅವರು ರಾಜಕೀಯ ಅಭಿವೃದ್ಧಿಗೆ ಮಾಡಿದ ಆರ್ಥಿಕ ನೆರವನ್ನು ನೆನಸಿಕೊಂಡರು.

  • ದೀಪಾವಳಿ ಸಂಭ್ರಮಕ್ಕೆ ಜೊತೆಯಾಗಲಿದೆ ಪರಿಸರ ಸ್ನೇಹಿ ಹಸಿರು ಪಟಾಕಿ

    ದೀಪಾವಳಿ ಸಂಭ್ರಮಕ್ಕೆ ಜೊತೆಯಾಗಲಿದೆ ಪರಿಸರ ಸ್ನೇಹಿ ಹಸಿರು ಪಟಾಕಿ

    ನವದೆಹಲಿ: ದೀಪಗಳ ಹಬ್ಬ ದೀಪಾವಳಿ ಸಂಭ್ರಮದಲ್ಲಿ ಪರಿಸರಕ್ಕೆ ಹಾನಿಕಾರಕ ಪಟಾಕಿಗಳನ್ನು ಸಿಡಿಸಿ ಮಾಲಿನ್ಯ ಮಾಡುವುದನ್ನು ತಡೆಯಲು ಪರಿಸರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಆದ್ದರಿಂದ ಶನಿವಾರ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಹಸಿರು ಪಟಾಕಿಗಳನ್ನು ಬಿಡುಗಡೆ ಮಾಡಿದ್ದಾರೆ.

    ಸಾಮಾನ್ಯ ಪಟಾಕಿಗಳಿಗೆ ಹೋಲಿಸಿದರೆ ಈ ಹಸಿರು ಪಟಾಕಿಯಿಂದ ಶೇ.30ರಷ್ಟು ಮಾಲಿನ್ಯ ಕಡಿಮೆಯಾಗಲಿದೆ. ಆದ್ದರಿಂದ ಭಾವನೆ ಹಾಗೂ ಪರಿಸರಕ್ಕೆ ಅಡ್ಡಿಯಾಗದಂತೆ ಪರಿಸರ ಸ್ನೇಹಿ ಪಟಾಕಿಗಳನ್ನು ಪರಿಚಯಿಸಲಾಗುತ್ತಿದೆ ಎಂದು ಹರ್ಷವರ್ಧನ್ ತಿಳಿಸಿದರು.

    ಹಸಿರು ಪಟಾಕಿಗಳನ್ನು ವೈಜ್ಞಾನಿಕ ಹಾಗೂ ಕೈಗಾರಿಕ ಸಂಶೋಧನ ಕೌನ್ಸಿಲ್(ಸಿಎಸ್‍ಐಆರ್) ತಯಾರಿಸಿದೆ. ಸಾಮಾನ್ಯ ಪಟಾಕಿಗಳಿಗಿಂತ ಹಸಿರು ಪಟಾಕಿಗಳಲ್ಲಿ ಕಡಿಮೆ ಕೆಮಿಕಲ್ ಬಳಸಲಾಗುತ್ತದೆ. ಹೀಗಾಗಿ ಇದರಿಂದ ಪರಿಸರಕ್ಕೆ ಹೆಚ್ಚು ಹಾನಿ ಆಗುವುದಿಲ್ಲ. ಜೊತೆಗೆ ಸಾಮಾನ್ಯ ಪಟಾಕಿಗಳಿಂತ ಈ ಹಸಿರು ಪಟಾಕಿಗಳ ಬೆಲೆಯೂ ಕಡಿಮೆ ಇದೆ ಎನ್ನಲಾಗಿದೆ. ಆದರೆ ಈ ಪಟಾಕಿಗಳ ನಿಖರ ಬೆಲೆ ಬಗ್ಗೆ ಸಿಎಸ್‍ಐಆರ್ ಯಾವುದೇ ಮಾಹಿತಿ ನೀಡಿಲ್ಲ.

    ಈ ಹಿಂದೆ 2018ರಲ್ಲಿ ದೀಪಾವಳಿ ಹಬ್ಬಕ್ಕೂ ಮುಂಚೆಯೇ ಸುಪ್ರೀಂ ಕೋರ್ಟ್ ಪರಿಸರ ಮಾಲಿನ್ಯ ಉಂಟುಮಾಡುವ ಪಟಾಕಿಗಳ ತಯಾರಿಕೆ ಹಾಗೂ ಮಾರಾಟಕ್ಕೆ ನಿಷೇಧ ಹೇರಿತ್ತು. ಹಾಗೆಯೇ ಕಡಿಮೆ ಕೆಮಿಕಲ್ ಬಳಸಿ ತಯಾರಿಕೆ ಮಾಡುವ ಹಸಿರು ಪಟಾಕಿಗಳ ತಯಾರಿಕೆ ಹಾಗೂ ಮಾರಟಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ ಎಂದು ಆದೇಶಿಸಿತ್ತು. ಆದರೆ ಆಗ ಈ ಬಗ್ಗೆ ಹಲವು ಪಟಾಕಿ ತಯಾರಕರು ಹಾಗೂ ಮಾರಾಟಗಾರರಿಗೆ ಸರಿಯಾಗಿ ಮಾಹಿತಿ ಇಲ್ಲದ ಕಾರಣಕ್ಕೆ ಆಗ ಹಸಿರು ಪಟಾಕಿ ಮಾರುಕಟ್ಟೆಗೆ ಬಂದಿರಲಿಲ್ಲ. ಆದ್ದರಿಂದ ಈ ಬಾರಿ ಪರಿಸರ ಸ್ನೇಹಿ ಹಸಿರು ಪಟಾಕಿಗಳನ್ನು ತಯಾರಿಸಲಾಗಿದ್ದು, ಕೆಲವೇ ದಿನಗಳಲ್ಲಿ ಈ ಪಟಾಕಿಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ.

    ಈ ಮೂಲಕ ಪರಿಸರ ಕಾಳಜಿ ಮೆರೆದ ಕೇಂದ್ರ ಸರ್ಕಾರದ ನಿಲುವು ಸಾರ್ವಜನಿಕರ ಗಮನ ಸೆಳೆದಿದ್ದು, ಸಿಎಸ್‍ಐಆರ್ ಹಾಗೂ ಕೇಂದ್ರ ಸರ್ಕಾರದ ಹೊಸ ಪ್ರಯತ್ನಕ್ಕೆ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • ಎತ್ತು ಏರಿಗೆ, ಕೋಣ ನೀರಿಗೆ: ಕೇಂದ್ರ, ರಾಜ್ಯ ಸರ್ಕಾರ ವಿರುದ್ಧ ಸಿಎಂ ಇಬ್ರಾಹಿಂ ಕಿಡಿ

    ಎತ್ತು ಏರಿಗೆ, ಕೋಣ ನೀರಿಗೆ: ಕೇಂದ್ರ, ರಾಜ್ಯ ಸರ್ಕಾರ ವಿರುದ್ಧ ಸಿಎಂ ಇಬ್ರಾಹಿಂ ಕಿಡಿ

    – ರೇಣುಕಾಚಾರ್ಯ ನೆಲದ ಮೇಲೆ ಬೋಟ್ ಓಡಿಸ್ತಾರೆ
    – ಅನರ್ಹ ಶಾಸಕರ ಬಗ್ಗೆಯೂ ‘ಕೈ’ ಮುಖಂಡ ವ್ಯಂಗ್ಯ

    ಬೆಂಗಳೂರು: ಎತ್ತು ಏರಿಗೆ ಇಳಿದರೆ ಕೋಣ ನೀರಿಗೆ ಇಳಿಯಿತಂತೆ ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಾ ಹೋದರೆ ರಾಜ್ಯದಲ್ಲಿ ವ್ಯತಿರಿಕ್ತ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಪರಿಹಾರ ಲೆಕ್ಕಾಚಾರ ಸರಿಯಾಗಿ ಕೊಟ್ಟಿಲ್ಲ. ಅದಕ್ಕೆ ಪುನಃ ಸಮೀಕ್ಷೆ ಮಾಡಬೇಕು ಎಂದು ನಳಿನ್ ಕುಮಾರ್ ಕಟೀಲ್ ಹೇಳುತ್ತಾರೆ. ದಯವಿಟ್ಟು ಆ ಭಾಗದ ಜನರ ಕೂಗನ್ನು ಆಲಿಸಿ ಎಂದು ಹೇಳಿದರು.

    ರಾಜ್ಯ ಹಾಗೂ ಕೇಂದ್ರದ ನಡುವೆ ಸಮನ್ವಯತೆ ಭಾರೀ ಚೆನ್ನಾಗಿದೆ. ಸತ್ತರೂ ಮಾತಾಡಬೇಡ ಎಂದು ಹೇಳುತ್ತಾರೆ. ಇದು ಖಾಮೋಷ್.. ಖಾಮೋಷ್ ಸರ್ಕಾರ, ಬೈಠಕ್ ಸರ್ಕಾರ. ಬಿಎಸ್ ಯಡಿಯೂರಪ್ಪ ಸರ್ಕಾರ ಎದ್ದೇಳಲೇ ಇಲ್ಲ ಎಂದು ವ್ಯಂಗ್ಯವಾಡಿದರು.

    ಅನರ್ಹ ಶಾಸಕರ ಬಗ್ಗೆ ವ್ಯಂಗ್ಯವಾಡಿದ ಸಿಎಂ ಇಬ್ರಾಹಿಂ, 17 ಜನ ಪತಿವ್ರತರು ಹೋಗಿಬಿಟ್ಟಿದ್ದಾರೆ. ಅವರ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಬೇಕಿದೆ. ಹೀಗಾಗಿ ಎಲ್ಲರೂ ಚುನಾವಣೆ ಕಡೆಗೆ ಗಮನ ಹರಿಸುತ್ತಾರೆ. ಇದರಿಂದಾಗಿ ಪ್ರವಾಹ ಸಂತ್ರಸ್ತರ ಕಥೆ ಅಷ್ಟೇ. ಪರಿಹಾರ ವಿತರಣೆ ಆಗುವವರೆಗೆ ಉಪ ಚುನಾವಣೆ ಮುಂದೂಡಬೇಕು. ಇದರಿಂದ ಯಾವುದೇ ತೊಂದರೆ ಆಗಲ್ಲ. ಒಂದು ವೇಳೆ ಉಪ ಚುನಾವಣೆ ನಡೆದು, ಅನರ್ಹರು ಗೆದ್ದು ಬಂದರೆ ಸಚಿವ ಸ್ಥಾನಕ್ಕೆ ಕಿತ್ತಾಡುತ್ತಾರೆ ಎಂದು ಹೇಳಿದರು.

    ವಿರೋಧ ಪಕ್ಷದ ನಾಯಕನ ಸ್ಥಾನ ವಿಚಾರವಾಗಿ ಪ್ರತಿಕ್ರಿಯಿಸಿ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕಾಂಗ ನಾಯಕರಿದ್ದಾರೆ. ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಚರ್ಚೆ ನಡೆದಿದ್ದು, ಅಕ್ಟೋಬರ್ 10 ರೊಳಗೆ ಆಯ್ಕೆ ಪ್ರಕಟಿಸಲಾಗುತ್ತದೆ ಎಂದರು.

    ವಿರೋಧ ಪಕ್ಷದ ನಾಯಕನ ಯಾರಾಗಬೇಕು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರ್ಕಾರದ ಹೆಣ ಹೊರುವುದಕ್ಕೆ ಯಾರಾದರೇನು? ಹೆಣ ಹೊರುವುದಕ್ಕೆ ನಾಲ್ಕು ಜನ ಬೇಕು. ದೆಹಲಿಗೆ ಹೋಗುವುದಕ್ಕೆ ರಾಜ್ಯ ಬಿಜೆಪಿ ನಾಯಕರು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಂದ ವೀಸಾ ಪಡೆಯಬೇಕು. ಸಿದ್ದರಾಮಯ್ಯ ಅವರು ಅಂತಹ ಪರಿಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಮುಂದೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾತನಾಡುವುದಕ್ಕೆ ಆಗುವುದಿಲ್ಲ. ಕನಿಷ್ಠ ರಾಜ್ಯಪಾಲರ ಮುಂದೆ ಸಮಸ್ಯೆ ಹೇಳಿಕೊಳ್ಳಬಹುದಿತ್ತು. ಇಲ್ಲವೇ ಕೈಸೇ ಹೇ… ಮನ್ ಕಿ ಬಾತ್… ಮಾಡಬಹುದಿತ್ತು ಎಂದು ಲೇವಡಿ ಮಾಡಿದರು.

    ನೀರಿನಲ್ಲಿ ಬೋಟ್ ಓಡಿಸುವವರನ್ನ ನೋಡಿದ್ದೇನೆ. ಆದರೆ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ನೆಲದ ಮೇಲೆ ಬೋಟ್ ಓಡಿಸುತ್ತಾರೆ ಎಂದು ಕಿಚಾಯಿಸಿದರು.

    ಬಾಯಿ ಬಿಗಿ ಹಿಡಿದು ಮಾತನಾಡಿ ಅಂತ ರೇಣುಕಾಚಾರ್ಯ ಹೇಳುತ್ತಾರೆ. ಬಾಯಿ ಹಿಡಿಬೇಕೋ, ಸೊಂಡಿಲು ಹಿಡಿಬೇಕೋ ಗೊತ್ತಿಲ್ಲ. ಅವರ ಹೆಸರೇ ರೇಣುಕಾಚಾರ್ಯ. ರೇಣುಕಾ ಪ್ರಸಾದದಿಂದ ಹುಟ್ಟಿದವರು. ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಮುಂದೆ ಕರೆದುಕೊಂಡು ಹೋಗುವ ಸಾಹಸ ಮಾಡಲಿ ಎಂದು ಹೇಳಿದರು.

  • ಕೇಂದ್ರದ ಪರಿಹಾರ ಬಕಾಸುರನ ಹೊಟ್ಟೆಗೆ ಮೂರು ಕಾಸಿನ ಮಜ್ಜಿಗೆ: ಸಿದ್ದರಾಮಯ್ಯ

    ಕೇಂದ್ರದ ಪರಿಹಾರ ಬಕಾಸುರನ ಹೊಟ್ಟೆಗೆ ಮೂರು ಕಾಸಿನ ಮಜ್ಜಿಗೆ: ಸಿದ್ದರಾಮಯ್ಯ

    – ಬಿಎಸ್‍ವೈಗೆ ಹಣಕಾಸಿನ ಜ್ಞಾನವಿಲ್ಲ

    ಮಂಗಳೂರು: ಕೇಂದ್ರದ ಪರಿಹಾರ ಬಕಾಸುರನ ಹೊಟ್ಟೆಗೆ ಮೂರು ಕಾಸಿನ ಮಜ್ಜಿಗೆ ಎಂದು ಕೇಂದ್ರ ಸರ್ಕಾರದ ನೆರೆ ಪರಿಹಾರದ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

    ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 1 ಲಕ್ಷ ಕೋಟಿ ರೂ. ನಷ್ಟವಾಗಿದ್ದು 2.5 ಲಕ್ಷ ಮನೆ ನಾಶವಾಗಿದೆ. ಎರಡು ತಿಂಗಳ ನಂತರ 1,200 ಕೋಟಿ ಬಿಡುಗಡೆ ಮಾಡಿದ್ದಾರೆ. ಕನಿಷ್ಠ 5 ಸಾವಿರ ಕೋಟಿ ಬಿಡುಗಡೆ ಮಾಡಬೇಕಾಗಿತ್ತು. ಇವರು ಬಿಡುಗಡೆ ಮಾಡಿದ ಹಣ ಬಕಾಸುರನ ಹೊಟ್ಟೆಗೆ 3 ಕಾಸಿನ ಮಜ್ಜಿಗೆ ರೀತಿಯಲ್ಲಿ ಇದೆ ಎಂದು ಹೇಳಿದರು.

    ಕೇಂದ್ರ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದೆ. ಅದ್ದರಿಂದ ರಾಜ್ಯ ಸರ್ಕಾರದ ಖಜಾನೆಯಿಂದ ಖರ್ಚು ಮಾಡಬೇಕಿದೆ. ಯಡಿಯೂರಪ್ಪ ಪೆದ್ದು ಪೆದ್ದಾಗಿ ಹೇಳಿಕೆ ನೀಡುತ್ತಿದ್ದಾರೆ. ಸರಿಯಾಗಿ ತೆರಿಗೆ ವಸೂಲಿ ಮಾಡಿದರೆ ಹಣಕಾಸಿನ ಸಮಸ್ಯೆ ಆಗುವುದಿಲ್ಲ. ಯಡಿಯೂರಪ್ಪ ತಂತಿ ಮೇಲೆ ನಡಿಯೋದು ಬೇಡ. ವಯಸ್ಸಾಗಿದೆ ಬಿದ್ದರೆ ತುಂಬಾ ಕಷ್ಟ ಆಗುತ್ತೆ. ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. 2020ಕ್ಕೆ ರಾಜ್ಯದಲ್ಲಿ ಚುನಾವಣೆ ನಡೆಯುತ್ತದೆ ಎಂದು ತಿಳಿಸಿದರು.

    ರಾಜ್ಯದಲ್ಲಿ ಪ್ರವಾಹಕ್ಕೆ ತುಂಬಾ ನಷ್ಟವಾಗಿದೆ. ಪ್ರಾರ್ಥಮಿಕ ಹಂತದಲ್ಲಿ 5 ಸಾವಿರ ಕೋಟಿ ಬಿಡುಗಡೆ ಮಾಡಬೇಕಿತ್ತು. ಈಗ ಕೇಂದ್ರ ಸರ್ಕಾರ 1,200 ಕೋಟಿ ಕೊಟ್ಟಿದ್ದು ಎಲ್ಲಿಗೂ ಸಾಕಾಗುವುದಿಲ್ಲ. ಕೇಂದ್ರ ಸರ್ಕಾರ ಇನ್ನೂ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು. ರಾಜ್ಯದಲ್ಲಿ ಬೊಕ್ಕಸ ಖಾಲಿಯಾಗಿದೆ ಎನ್ನುವುದಕ್ಕೆ ಅರ್ಥ ಇಲ್ಲ. ಯಡಿಯೂರಪ್ಪಗೆ ಹಣಕಾಸಿನ ಜ್ಞಾನ ಇಲ್ಲ. ಜನ ತೆರಿಗೆ ಕಟ್ಟೋದಿಲ್ವಾ? ಪ್ರತಿ ತಿಂಗಳು ತೆರಿಗೆ ಸಂಗ್ರಹ ಆಗುತ್ತಿಲ್ಲವೇ? ಬೊಕ್ಕಸ ಖಾಲಿಯಂದ್ರೆ ತೆರಿಗೆ ಸಂಗ್ರಹವಾಗುತ್ತಿಲ್ಲ ಎಂದರ್ಥ ಎಂದು ಬಿಎಸ್‍ವೈ ಅವರನ್ನು ಟೀಕೆ ಮಾಡಿದರು.

    ಇದೇ ವೇಳೆ ಮೋದಿಯನ್ನ ಪ್ರಶ್ನೆ ಮಾಡಿದ್ದಕ್ಕೆ ದೇಶದ್ರೋಹಿ ಎಂಬ ಟೀಕೆ ವಿಚಾರವಾಗಿ ಮಾತನಾಡಿದ ಅವರು, ಇದು ಸರ್ವಾಧಿಕಾರಿ ಸರ್ಕಾರದ ಲಕ್ಷಣ. ಜರ್ಮನಿಯಲ್ಲಿ ಹಿಟ್ಲರ್ ಕೂಡ ಇದೇ ನೀತಿ ಅನುಸರಿಸಿದ್ದ. ಯಾರಾದರೂ ಅವನನ್ನು ಪ್ರಶ್ನೆ ಮಾಡಿದರೆ ಕೇಸು ಹಾಕಿಸಿ ಬಂಧಿಸುತ್ತಿದ್ದ. ಹಿಟ್ಲರ್ ಕಾಲದಲ್ಲೂ ವಿರೋಧಿಗಳಿಗೆ ದೇಶದ್ರೋಹಿ ಪಟ್ಟ ಕಟ್ಟುತ್ತಿದ್ದರು. ಈಗ ಮೋದಿ ಸರ್ಕಾರವೂ ಅದನ್ನೇ ಮಾಡುತ್ತಿದೆ ಎಂದು ಮೋದಿ ವಿರುದ್ಧ ಆಕ್ರೋಶ ಹೊರಹಾಕಿದರು.

  • ನೆರೆ ಪರಿಹಾರ ವಿಳಂಬ – ತಲೆ ಬೋಳಿಸಿಕೊಂಡು 25 ಸಂಸದರ ತಿಥಿ ಕಾರ್ಯಕ್ರಮ

    ನೆರೆ ಪರಿಹಾರ ವಿಳಂಬ – ತಲೆ ಬೋಳಿಸಿಕೊಂಡು 25 ಸಂಸದರ ತಿಥಿ ಕಾರ್ಯಕ್ರಮ

    ಬೆಂಗಳೂರು: ಕೇಂದ್ರದಿಂದ ನೆರೆ ಪರಿಹಾರ ವಿಳಂಬವಾದ ಕಾರಣ ರಾಜ್ಯದ 25 ಬಿಜೆಪಿ ಸಂಸದರಿಗೆ ಇಂದು ಬೆಂಗಳೂರಿನಲ್ಲಿ ಪಿಂಡ ಪ್ರಧಾನ ಕಾರ್ಯ ಮಾಡಲಾಯಿತು.

    ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಉತ್ತರ ಕರ್ನಾಟಕ ನೆರೆ ಪರಿಹಾರ ತರುವಲ್ಲಿ ಆಸಕ್ತಿ ವಹಿಸದ ಸಂಸದರ ವಿರುದ್ಧ ವಿಶಿಷ್ಟವಾಗಿ ಪ್ರತಿಭಟನೆ ಮಾಡಿದ ಕನ್ನಡಪರ ಸಂಘಟನೆಗಳು 25 ಜನ ಸಂಸದರ ಫೋಟೋ ಇಟ್ಟು ಹಾರ ಹಾಕಿ ತಿಥಿ ಕಾರ್ಯ ಮಾಡಿದರು.

    ತಿಥಿ ಕಾರ್ಯವನ್ನು ಶಾಸ್ತ್ರೋಕ್ತವಾಗಿ ಮಾಡಿ ಅರ್ಚಕರಿಂದ ಪೂಜೆ ಮಾಡಿಸಿ ಪಿಂಡ ಇಟ್ಟು ತಮ್ಮ ಆಕ್ರೋಶ ಹೊರಹಾಕಿದರು. ಇದೇ ವೇಳೆ ನೆರೆ ಪೀಡಿತ ಉತ್ತರ ಕರ್ನಾಟಕದ ಇಬ್ಬರು ತಲೆ ಬೋಳಿಕೊಳ್ಳುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದರು.

    ಪ್ರವಾಹದಿಂದ ನಷ್ಟ ಆಗಿರುವ ಹಣ ಬಿಡುಗಡೆ ಮಾಡಿ ಎಂದರೆ ಇಲ್ಲ ಸಲ್ಲದ ಕಾರಣ ಹೇಳುತ್ತಿರುವ ಕೇಂದ್ರದ ವಿರುದ್ಧ ಅಸಮಧಾನ ಹೊರ ಹಾಕಿದ ಹೋರಾಟಗಾರರು, ರಾಜ್ಯದಲ್ಲಿ 38 ಸಾವಿರ ಕೋಟಿಯಷ್ಟು ನಾಶವಾಗಿದೆ ಆದರೆ ಕೇಂದ್ರ ಸರ್ಕಾರ 1,200 ಕೋಟಿ ಬಿಡುಗಡೆ ಮಾಡಿದೆ. ಕೇಂದ್ರದ ಈ ನೀತಿ ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.