Tag: Central Government

  • “ಬಾಲಕೋಟ್‍ನಲ್ಲಿ ಉಗ್ರರ ನೆಲೆ ಪುನಾರಂಭಿಸಲು ಪಾಕ್ ಯತ್ನ”

    “ಬಾಲಕೋಟ್‍ನಲ್ಲಿ ಉಗ್ರರ ನೆಲೆ ಪುನಾರಂಭಿಸಲು ಪಾಕ್ ಯತ್ನ”

    ನವದೆಹಲಿ: ಪಾಕಿಸ್ತಾನ ಮತ್ತೆ ನನ್ನ ಕುತಂತ್ರ ಬುದ್ಧಿ ಪ್ರದರ್ಶಿಸುತ್ತಿದ್ದು, ಭಾರತೀಯ ವಾಯು ಪಡೆ ಏರ್‌ಸ್ಟ್ರೈಕ್ ಮಾಡಿ ನೆಲಸಮ ಮಾಡಿದ್ದ ಬಾಲಕೋಟ್ ಉಗ್ರರ ನೆಲೆಗಳನ್ನು ಮತ್ತೆ ಪುನಾರಂಭಿಸಲು ಯತ್ನಿಸುತ್ತಿದೆ ಎಂದು ವರದಿಯಾಗಿದೆ.

    ಬುಧವಾರ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ರಾಜ್ಯಸಭೆಯಲ್ಲಿ ಈ ಬಗ್ಗೆ ತಿಳಿಸಿದ್ದಾರೆ. ಭಾರತವು ಏರ್‌ಸ್ಟ್ರೈಕ್ ನಡೆಸಿ ಉಗ್ರರ ತಾಣಗಳನ್ನು ನಾಶಗೊಳಿಸಿತ್ತು. ಆದರೆ ಈ ಶಿಬಿರಗಳನ್ನು ಮತ್ತೆ ಮರುಸ್ಥಾಪಿಸಲು ಪಾಕಿಸ್ತಾನ ಯತ್ನಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ದೇಶದ ಗಡಿ ರಕ್ಷಿಸಿ, ಸಾರ್ವಭೌಮತೆ ಹಾಗೂ ಏಕತೆ ಕಾಯ್ದುಕೊಳ್ಳುವ ಸಕಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದರು.

    ಪಾಕಿಸ್ತಾನದ ಜೈಷ್-ಇ-ಮೊಹ್ಮಮದ್ ಉಗ್ರ ಸಂಘಟನೆಯ ತರಬೇತಿ ನೆಲೆಗಳನ್ನು ಭಾರತ ನಾಶಗೊಳಿಸಿತ್ತು. ಆದರೆ ಬಾಲಕೋಟ್‍ನಲ್ಲಿ ಉಗ್ರ ನೆಲೆ ಮರುಸ್ಥಾಪಿಸುವ ಯತ್ನ ನಡೆಯುತ್ತಿದೆ ಎಂಬ ಮಾಹಿತಿ ದೊರಕಿದೆ. ಅಲ್ಲದೆ ಅಲ್ಲಿ ಭಾರತದ ವಿರುದ್ಧ ಪಿತೂರಿ ಮಾಡಲಾಗುತ್ತಿದೆ. ಹೀಗಾಗಿ ಭಾರತದ ವಿರುದ್ಧ ಯುವಕರ ಮನ ಪರಿವರ್ತಿಸಲು ಜಿಹಾದಿ ಹಾಗೂ ಧಾರ್ಮಿಕ ಕೋರ್ಸುಗಳನ್ನು ಆರಂಭಿಸುತ್ತಿರುವ ಬಗ್ಗೆಯೂ ತಿಳಿದು ಬಂದಿದೆ ಎಂದು ಹೇಳಿದರು.

    ಭಾರತ ಉಗ್ರರು ಹಾಗೂ ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆ ಅನುಸರಿಸುತ್ತಿದೆ. ಕಾಶ್ಮೀರದಲ್ಲಿ ನಿರಂತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದರ ಪರಿಣಾಮ ಭಾರೀ ಸಂಖ್ಯೆಯ ಉಗ್ರರು ಭದ್ರತಾ ಪಡೆಯಿಂದ ಹತರಾಗಿದ್ದಾರೆ. ಭಾರತ ಗಡಿಯಲ್ಲಿ ಶಾಂತಿ, ಸೌಹಾರ್ದತೆ ಕಾಪಾಡಿಕೊಳ್ಳಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

    ಫೆ. 14ರಂದು ಭಾರತೀಯ ಯೋಧರು ತೆರಳುತ್ತಿದ್ದ ವಾಹನದ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದರ ಪರಿಣಾಮ 40ಕ್ಕೂ ಹೆಚ್ಚು ಯೋಧರು ವೀರಮರಣ ಅಪ್ಪಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಫೆ. 26ರಂದು ಭಾರತೀಯ ವಾಯು ಪಡೆ ಏರ್‌ಸ್ಟ್ರೈಕ್ ನಡೆಸಿ ಬಾಲಕೋಟ್‍ನಲ್ಲಿದ್ದ ಜೈಶ್ ಉಗ್ರ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿ ನೆಲೆಗಳನ್ನು ನೆಲಸಮ ಮಾಡಿತ್ತು.

  • ಕೇಂದ್ರ ಶಿಕ್ಷಣ ನೀತಿ ಸರಿಯಿಲ್ಲ- ಮಾಜಿ ನಕ್ಸಲನ ಭೇಟಿಗೆ ಬಂದ ಸಸಿಕಾಂತ್ ಸೆಂಥಿಲ್

    ಕೇಂದ್ರ ಶಿಕ್ಷಣ ನೀತಿ ಸರಿಯಿಲ್ಲ- ಮಾಜಿ ನಕ್ಸಲನ ಭೇಟಿಗೆ ಬಂದ ಸಸಿಕಾಂತ್ ಸೆಂಥಿಲ್

    ರಾಯಚೂರು: ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ನೂತನ ಶಿಕ್ಷಣ ನೀತಿ ಕೇಂದ್ರೀಕೃತ ಯೋಜನೆಯಾಗಿದೆ ಎಂದು ಐಎಎಸ್ ವೃತ್ತಿಗೆ ರಾಜೀನಾಮೆ ನೀಡಿರುವ ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.

    ರಾಯಚೂರಿನಲ್ಲಿ ಬಂಧನಕ್ಕೊಳಗಾಗಿರುವ ಮಾಜಿ ನಕ್ಸಲ್ ದೊಡ್ಡಿಪಾಳ್ಯ ನರಸಿಂಹ ಮೂರ್ತಿಯನ್ನು ಸಸಿಕಾಂತ್ ಸೆಂಥಿಲ್ ಭೇಟಿ ಮಾಡಲು ಬಂದಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಪ್ಪು ಮಾಹಿತಿಯಿಂದ ನರಸಿಂಹ ಮೂರ್ತಿ ಬಂಧನವಾಗಿದೆ. ಹೀಗಾಗಿ ಅವರನ್ನು ನೋಡಲು ರಾಯಚೂರಿಗೆ ಬಂದಿದ್ದೇನೆ. ನಾನು ಜನರ ಜೊತೆಗೆ ಇರುತ್ತೇನೆ, ಸರ್ಕಾರದ ಹಿಡನ್ ಅಜೆಂಡಾಗಳ ಕುರಿತು ಜನರಿಗೆ ಮಾಹಿತಿ ನೀಡುತ್ತೇನೆ. ನಾನು ಅಧಿಕಾರದಲ್ಲಿ ಇದ್ದಾಗ ಹಲವು ನಕ್ಸಲ್‍ರನ್ನು ಹೊರಗೆ ತರಲು ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.

    ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ ಯೋಜನೆ ಪ್ರಧಾನ ಮಂತ್ರಿಗಳ ಕೈಯಲ್ಲಿ ಇರುವುದರಿಂದ ಹೆಚ್ಚಿನ ಅನುದಾನಕ್ಕೆ ಒತ್ತು ನೀಡಲ್ಲ. ಈ ನೀತಿಯು ಪ್ರಾಥಮಿಕ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕನ್ನು ಕಸಿದು ಕೊಂಡಂತಾಗುತ್ತದೆ. ಇದರಿಂದ ರಾಷ್ಟ್ರೀಯ ಶಿಕ್ಷಣ ನೀತಿ ಒಕ್ಕೂಟಕ್ಕೆ ಧಕ್ಕೆಯಾಗುತ್ತದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

    ಕೇಂದ್ರ ಸರ್ಕಾರದ ಈ ನಡೆಯ ಕುರಿತು ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದ್ದರೂ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ನಾನು ದೇಶದಲ್ಲಿ ಪರಿಸ್ಥಿತಿ ಸರಿ ಇಲ್ಲವೆಂದು ರಾಜೀನಾಮೆ ನೀಡಿದ್ದೇನೆ. ಯಾವುದೇ ಕಾರಣಕ್ಕೂ ಮತ್ತೆ ಕೆಲಸಕ್ಕೆ ಮರಳುವುದಿಲ್ಲ. ಈ ವಿಚಾರ ಈಗಾಗಲೇ ಸರ್ಕಾರದ ಗಮನಕ್ಕೂ ತಂದಿದ್ದೇನೆ ಎಂದು ಸಸಿಕಾಂತ್ ಸೆಂಥಿಲ್ ಸ್ಪಷ್ಟಪಡಿಸಿದರು.

  • ಬಂಡೀಪುರ ರಾತ್ರಿ ಸಂಚಾರ ನಿಷೇಧ- ಸುಪ್ರೀಂಗೆ ಕೇಂದ್ರದ ಅಫಿಡೆವಿಟ್

    ಬಂಡೀಪುರ ರಾತ್ರಿ ಸಂಚಾರ ನಿಷೇಧ- ಸುಪ್ರೀಂಗೆ ಕೇಂದ್ರದ ಅಫಿಡೆವಿಟ್

    ನವದೆಹಲಿ: ಬಂಡೀಪುರ ಹುಲಿ ರಕ್ಷಿತಾರಣ್ಯವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ ಸಂಚಾರ ನಿಷೇಧ ಕುರಿತಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಅಫಿಡೆವಿಟ್ ಸಲ್ಲಿಕೆ ಮಾಡಿದೆ.

    ಕೇರಳ ಮತ್ತು ಕರ್ನಾಟಕ ನಡುವಿನ ಸಂಚಾರಕ್ಕೆ ಕೇಂದ್ರ ಸರ್ಕಾರ ಅಫಿಡೆಟಿವ್‍ನಲ್ಲಿ ಪರ್ಯಾಯ ರಸ್ತೆ ಮಾರ್ಗ ರಚನೆಯ ಪ್ರಸ್ತಾಪವನ್ನು ಮುಂದಿಟ್ಟಿದೆ. ಕರ್ನಾಟಕ ರಾಜ್ಯ ಹೆದ್ದಾರಿ 89 ಮತ್ತು 90ರ ಮೂಲಕ ಕೇರಳ ತಲುಪಬಹುದಾಗಿದ್ದು, ಎಸ್‍ಎಚ್ 89 ಮಡಿಕೇರಿ, ಗೋಣಿಕೊಪ್ಪ, ಕುಟ್ಟಾ ಮೂಲಕ ಕೇರಳ ತಲುಪಬಹುದಾಗಿದೆ. ಅಲ್ಲದೇ ಎಸ್‍ಎಚ್ 90 ಹುಣಸೂರು ನಿಂದ ತಲಕಾವೇರಿ ಮಾರ್ಗ ಸೇರಿದಂತೆ ಕರ್ನಾಟಕದಲ್ಲಿ ಒಟ್ಟು 211 ಕಿಲೋ ಮೀಟರ್ ಪರ್ಯಾಯ ಮಾರ್ಗ ಸೂಚಿಸಿದೆ. ಇತ್ತ ಕೇರಳ ಭಾಗ ಪ್ರವೇಶಕ್ಕೆ ಜಿಲ್ಲಾ ಹೆದ್ದಾರಿ ಬಳಸಿ ವೈಯನಾಡು ತಲುಪಬಹುದಾಗಿದೆ.

    ಬಂಡೀಪುರ ಹುಲಿ ರಕ್ಷಿತಾರಣ್ಯವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ರಾತ್ರಿ ಸಂಚಾರ ನಿಷೇಧ ಮಾಡಲಾಗಿದ್ದು, ಈ ಕ್ರಮವನ್ನು ರದ್ದುಪಡಿಸಬೇಕು ಎಂದು ತಮಿಳುನಾಡು ಸರ್ಕಾರ ಒತ್ತಾಯ ಮಾಡಿತ್ತು. ಅಲ್ಲದೇ ವಯನಾಡು ಸಂಸದ ರಾಹುಲ್ ಗಾಂಧಿ ಅವರು ಕೂಡ ವಯನಾಡಿನಲ್ಲಿ ನಡೆದ ಅನಿರ್ಧಿಷ್ಟಾವಧಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.

    ದೇಶದ 50ಕ್ಕೂ ಹೆಚ್ಚು ಹುಲಿ ರಕ್ಷಿತಾರಣ್ಯ ಪ್ರದೇಶಗಳಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶವಿದೆ. ಆದರೆ ಬಂಡೀಪುರದಲ್ಲಿ ಮಾತ್ರ ರಾತ್ರಿ ಸಂಚಾರ ನಿಷೇಧ ಮಾಡಲಾಗಿದೆ ಎಂದು ಕೇರಳ ಸರ್ಕಾರ ವಾದ ಮುಂದಿಟ್ಟಿತ್ತು. 2009ರಲ್ಲಿ ರಾಜ್ಯ ಸರ್ಕಾರ ಬಂಡೀಪುರ ಅಭಯಾರಣ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6ರ ವರೆಗೂ ಸಂಚಾರ ನಿಷೇಧ ಮಾಡಿ ಆದೇಶ ನೀಡಿತ್ತು. ಹುಲಿ, ಕಾಡೆಮ್ಮೆ, ಆನೆ ಸೇರಿದಂತೆ ಆನೇಕ ಕಾಡು ಪ್ರಾಣಿಗಳು ರಾತ್ರಿ ವೇಳೆ ಅಪಘಾತಕ್ಕೀಡಾಗಿ ಸಾವನ್ನಪ್ಪುತ್ತಿದ್ದರಿಂದ ಸರ್ಕಾರ ನಿಷೇಧವನ್ನು ಜಾರಿ ಮಾಡಿತ್ತು. ಬಂಡೀಪುರವನ್ನು ಹಾದುಹೋಗುವ ಹೆದ್ದಾರಿಗೆ ಪರ್ಯಾಯವಾಗಿ ರಾಷ್ಟ್ರೀಯ ಹೆದ್ದಾರಿ 275 ಮತ್ತು ರಾಜ್ಯ ಹೆದ್ದಾರಿ 90 ಅನ್ನು ಸೂಚಿಸಲಾಗಿತ್ತು.

  • ನಮ್ಮ ಕುಟುಂಬವನ್ನು 28 ವರ್ಷ ರಕ್ಷಿಸಿದ್ದಕ್ಕೆ ಧನ್ಯವಾದ – ಎಸ್‍ಪಿಜಿಗೆ ಸೋನಿಯಾ ಭಾವನಾತ್ಮಕ ಪತ್ರ

    ನಮ್ಮ ಕುಟುಂಬವನ್ನು 28 ವರ್ಷ ರಕ್ಷಿಸಿದ್ದಕ್ಕೆ ಧನ್ಯವಾದ – ಎಸ್‍ಪಿಜಿಗೆ ಸೋನಿಯಾ ಭಾವನಾತ್ಮಕ ಪತ್ರ

    ನವದೆಹಲಿ: ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್‍ಪಿಜಿ ಭದ್ರತೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದ ನಂತರ ನಮ್ಮ ಕುಟುಂಬವನ್ನು 28 ವರ್ಷ ರಕ್ಷಿಸಿದ್ದಕ್ಕೆ ಧನ್ಯವಾದಗಳು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಎಸ್‍ಪಿಜಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ.

    ಎಸ್‍ಪಿಜಿ ನಿರ್ದೇಶಕ ಅರುಣ್ ಕುಮಾರ್ ಸಿನ್ಹಾ ಅವರಿಗೆ ಈ ವಿಚಾರವಾಗಿ ಪತ್ರ ಬರೆದಿರುವ ಸೋನಿಯಾ ಗಾಂಧಿ ಅವರು, ಬಹಳ ಕಾಳಜಿ, ವಿವೇಚನೆಯಿಂದ ನಮ್ಮ ಕುಟುಂಬವನ್ನು 28 ವರ್ಷಗಳ ಕಾಲ ರಕ್ಷಿಸಿದ ಅತ್ಯುತ್ತಮ ಶಕ್ತಿ ಎಸ್‍ಪಿಜಿ ನನ್ನ ಮೆಚ್ಚುಗೆ ಮತ್ತು ಕೃತಜ್ಞತೆಗಳು ಎಂದು ಸೋನಿಯಾ ಪತ್ರದಲ್ಲಿ ತಿಳಿಸಿದ್ದಾರೆ.

    ಕಳೆದ 28 ವರ್ಷಗಳಿಂದ ಸೋನಿಯಾ ಗಾಂಧಿ ಮತ್ತು ಅವರ ಪುತ್ರ ರಾಹುಲ್ ಗಾಂಧಿ ಹಾಗೂ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಅವರಿಗೆ ನೀಡಿದ್ದ ವಿಶೇಷ ಭದ್ರತಾ ಪಡೆ ಎಸ್‍ಪಿಜಿಯನ್ನು ಶುಕ್ರವಾರ ಹಿಂಪಡೆದಿದೆ. ಅವರಿಗೆ ಸಿಆರ್‍ಪಿಎಫ್ ಝಡ್ ಪ್ಲಸ್ ಭದ್ರತೆಯನ್ನು ನೀಡಲಾದೆ. ಹೀಗಾಗಿ ಸೋನಿಯಾ ಅವರು ಎಸ್‍ಪಿಜಿ ಮಹೋನ್ನತ ಶಕ್ತಿಯಾಗಿದ್ದು, ಅದರ ಸದಸ್ಯರು ಅವರಿಗೆ ನಿಯೋಜಿಸಲಾದ ಪ್ರತಿಯೊಂದು ಕಾರ್ಯದಲ್ಲೂ ಧೈರ್ಯ ಮತ್ತು ದೇಶಪ್ರೇಮವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

    ಕಳೆದ 28 ವರ್ಷಗಳಿಂದ ಎಸ್‍ಪಿಜಿ ಭದ್ರತೆಯಲ್ಲಿ ನಾನು ಮತ್ತು ನನ್ನ ಕುಟುಂಬ ಉತ್ತಮ ಭದ್ರತೆಯಲ್ಲಿ ಇದ್ದೇವೆ ಎಂದು ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಅನುಭವಿಸಿದ್ದೇವೆ. ಎಸ್‍ಪಿಜಿಯ ವೃತ್ತಿಪರತೆ, ಕಾರ್ಯಧಕ್ಷತೆ, ಅವರ ಪ್ರಮಾಣಿಕತೆಯನ್ನು ನಾನು ಶ್ಲಾಘಿಸುತ್ತೇನೆ. ಇಷ್ಟು ದಿನ ನನ್ನ ಇಡೀ ಕುಟುಂಬದ ರಕ್ಷಣೆ ಮತ್ತು ಯೋಗಕ್ಷೇಮವನ್ನು ನೋಡಿಕೊಂಡ ಎಸ್‍ಪಿಜಿಗೆ ನನ್ನ ಧನ್ಯವಾದಗಳು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಇದಕ್ಕೂ ಮುನ್ನಾ ಈ ವಿಚಾರವಾಗಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ಎಸ್‍ಪಿಜಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನನ್ನ ಎಲ್ಲಾ ಸಹೋದರ, ಸಹೋದರಿಯರಿಗೆ ನನ್ನ ಕಡೆಯಿಂದ ಧನ್ಯವಾದಗಳು. ಕಳೆದ 28 ವರ್ಷಗಳಿಂದ ನನ್ನ ಹಾಗೂ ನನ್ನ ಕುಟುಂಬವನ್ನು ರಕ್ಷಿಸಲು ದಣಿವರಿಯದೇ ಕೆಲಸ ಮಾಡಿದ್ದೀರಿ. ನಿಮ್ಮ ಈ ನಿಸ್ವಾರ್ಥ ಸೇವೆಗೆ ಚಿರಋಣಿ. ಅಲ್ಲದೆ ನಿಮ್ಮ ನಿರಂತರ ಬೆಂಬಲ ಹಾಗೂ ವಾತ್ಸಲ್ಯದಿಂದ ತುಂಬಿದ್ದ ಪ್ರಯಾಣಕ್ಕೆ ಧನ್ಯವಾದಗಳು. ನಿಮ್ಮ ಮುಂದಿನ ಭವಿಷ್ಯಕ್ಕೆ ಶುಭವಾಗಲಿ ಎಂದು ಬರೆದುಕೊಂಡಿದ್ದರು.

    ಗಾಂಧಿ ಕುಟುಂಬಕ್ಕೆ ಭದ್ರತೆಯನ್ನು ವಾಪಸ್ ಪಡೆದಿದ್ದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದ ರಾಜ್ಯದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಧಾನಿಗಳದ್ದೂ ಜೀವವೇ, ಸೋನಿಯಾ ಗಾಂಧಿ ಕುಟುಂಬದವರದ್ದು ಜೀವವೇ. ಕೇಂದ್ರ ಸರ್ಕಾರ ಬೇರೆಯವರಿಗೆ ನೀಡಿದ್ದ ಭದ್ರತೆ ಹಿಂಪಡೆಯಲು ಕಾರಣವೇನು? ಈ ಕೂಡಲೇ ಅವರಿಗೆ ಎಸ್‍ಪಿಜಿ ಭದ್ರತೆ ನೀಡಬೇಕೆಂದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಲ್ಲಿ ಒತ್ತಾಯಿಸುತ್ತೇನೆ. ಇಲ್ಲದಿದ್ದರೆ ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ ಎಂದು ಟ್ವೀಟ್ ಮಾಡಿದ್ದರು.

    ಪ್ರಸ್ತುತ ಎಸ್‍ಪಿಜಿಯಲ್ಲಿ 3 ಸಾವಿರಕ್ಕೂ ಅಧಿಕ ಸಿಬ್ಬಂದಿ ಇದ್ದಾರೆ. ಬೆದರಿಕೆ ಕರೆಗಳನ್ನು ಆಧರಿಸಿ ಪ್ರಧಾನಿ, ಮಾಜಿ ಪ್ರಧಾನಿ ಹಾಗೂ ಅವರ ಕುಟುಂಬದವರಿಗೆ ಈ ಭದ್ರತೆಯನ್ನು ನೀಡಲಾಗುತ್ತದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ ನಂತರ ಎಸ್‍ಪಿಜಿಯನ್ನು 1985ರಲ್ಲಿ ಸ್ಥಾಪಿಸಲಾಗಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ನಂತರ 1991ರಲ್ಲಿ ಎಸ್‍ಪಿಜಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಮಾಜಿ ಪ್ರಧಾನಿಗಳು ಹಾಗೂ ಅವರ ಕುಟುಂಬಕ್ಕೆ 10 ವರ್ಷಗಳ ಕಾಲ ಭದ್ರತೆ ನೀಡುವಂತೆ ನಿಯಮ ರೂಪಿಸಲಾಗಿದೆ.

  • ಸುಪ್ರೀಂ ತೀರ್ಪಿನ ಲಾಭವನ್ನು ಕೇಂದ್ರ ಪಡೆದುಕೊಳ್ಳಬಾರದು: ಉದ್ಧವ್ ಠಾಕ್ರೆ

    ಸುಪ್ರೀಂ ತೀರ್ಪಿನ ಲಾಭವನ್ನು ಕೇಂದ್ರ ಪಡೆದುಕೊಳ್ಳಬಾರದು: ಉದ್ಧವ್ ಠಾಕ್ರೆ

    ಮುಂಬೈ: ರಾಮಮಂದಿರ ಸುಪ್ರೀಂ ಕೋರ್ಟ್ ಬಹುನಿರೀಕ್ಷಿತ ತೀರ್ಪು ನೀಡಿದ್ದು, ಇದರ ಲಾಭವನ್ನು ಕೇಂದ್ರ ಸರ್ಕಾರ ಪಡೆಯಲು ಸಾಧ್ಯವಿಲ್ಲ ಎಂದು ಶಿವ ಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಇದೀಗ ರಾಮಮಂದಿರದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೇ ಉದ್ಧವ್ ಠಾಕ್ರೆ ಅವರ ಈ ಹೇಳಿಕೆ ಮಹತ್ವ ಪಡೆದಿದ್ದು, ಈ ಕುರಿತು ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಇದರ ಕ್ರೆಡಿಟ್ ಪಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.

    ಇಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದ್ದು, ರಾಮಜನ್ಮ ಭೂಮಿಯಲ್ಲೇ ದೇವಸ್ಥಾನ ನಿರ್ಮಿಸಬೇಕು ಎಂದು ಆದೇಶ ಪ್ರಕಟಿಸಿದೆ.

    ಅಯೋಧ್ಯೆಯಲ್ಲಿ ರಾಮನ ದೇವಸ್ಥಾನ ನಿರ್ಮಿಸಲು ಕಾನೂನು ರೂಪಿಸುವಂತೆ ನಾವು ಸರ್ಕಾರವನ್ನು ಮನವಿ ಮಾಡಿದ್ದೆವು. ಆದರೆ ಸರ್ಕಾರ ಅದನ್ನು ಮಾಡಿರಲಿಲ್ಲ. ಹೀಗಾಗಿ ಈಗ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಕಟಿಸಿದ್ದಕ್ಕೆ ಕೇಂದ್ರ ಸರ್ಕಾರ ಕ್ರೆಡಿಟ್ ಪಡೆಯಲು ಸಾಧ್ಯವಿಲ್ಲ ಎಂದು ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.

    ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯ ಬಗ್ಗೆ ಶಿವಸೇನೆ ಹಾಗೂ ಬಿಜೆಪಿ ಮಧ್ಯೆ ಭಿನ್ನಾಭಿಪ್ರಾಯಗಳಿವೆ. ಮುಖ್ಯಮಂತ್ರಿ ಹುದ್ದೆಯನ್ನು ಸಮಾನವಾಗಿ ಹಂಚಿಕೊಳ್ಳುವಲ್ಲಿನ ಅಡಚಣೆಯು ಬಿಕ್ಕಟ್ಟಿಗೆ ಕಾರಣವಾಗಿದೆ. ಇದರ ಪರಿಣಾಮವಾಗಿ 13ನೇ ರಾಜ್ಯ ವಿಧಾನಸಭೆಯ ಅವಧಿ ಮುಗಿಯುವುದಕ್ಕೆ ಒಂದು ದಿನ ಮುಂಚಿತವಾಗಿ ಸಿಎಂ ದೇವೇಂಧ್ರ ಫಡ್ನವಿಸ್ ಅವರ ರಾಜೀನಾಮೆ ನೀಡಿದ್ದಾರೆ.

  • ಕೇಂದ್ರಾಡಳಿತ ಪ್ರದೇಶಗಳ ಹೊಸ ಭೂಪಟ ಪ್ರಕಟಿಸಿದ ಕೇಂದ್ರ ಸರ್ಕಾರ

    ಕೇಂದ್ರಾಡಳಿತ ಪ್ರದೇಶಗಳ ಹೊಸ ಭೂಪಟ ಪ್ರಕಟಿಸಿದ ಕೇಂದ್ರ ಸರ್ಕಾರ

    ನವದೆಹಲಿ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ೩೭೦ನೇ ವಿಧಿಯನ್ನು ರದ್ದು ಪಡಿಸಿ, ೨ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದ್ದ ಕೇಂದ್ರ ಸರ್ಕಾರ ಸದ್ಯ ಭಾರತದ ಹೊಸ ಭೂಪಟವನ್ನು ಬಿಡುಗಡೆ ಮಾಡಿದೆ.

    ೨೦೧೯ರ ಅ.೩೧ ರಂದು ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರವನ್ನು ೨ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿ ಅಧಿಕೃತವಾಗಿ ಘೋಷಣೆ ಮಾಡಿತ್ತು. ಇದಾದ ಬಳಿಕ ಸದ್ಯ ಭಾರತೀಯ ಸರ್ವೆ ಜನರಲ್ ಹೊಸ ಭೂಪಟ ಸಿದ್ಧ ಪಡಿಸಿದ್ದು, ಕಾರ್ಗಿಲ್, ಲೇಹ್ ಸೇರಿದಂತೆ ೮ ಜಿಲ್ಲೆಗಳನ್ನು ಲಡಾಖ್ ಹಾಗೂ ೨೦ ಜಿಲ್ಲೆಗಳನ್ನು ಒಳಗೊಂಡ ಜಮ್ಮು ಕಾಶ್ಮೀರವಾಗಿ ಗುರಿತಿಸಲಾಗಿದೆ.

    ಕಳೆದ ೨ ದಿನಗಳ ಹಿಂದೆಯಷ್ಟೇ ಲಡಾಖ್ ಹಾಗೂ ಜಮ್ಮು ಕಾಶ್ಮೀರ ಅಧಿಕೃತವಾಗಿ ವಿಭಜನೆಯಾಗಿತ್ತು. ಸದ್ಯ ಜಮ್ಮು ಕಾಶ್ಮೀರದಲ್ಲಿ ಕಥುವಾ, ಜಮ್ಮು, ಸಾಂಬಾ, ಪೂಂಚ್, ಕುಲ್ಗಾಂ, ಶೋಫಿಯಾನ್, ಶ್ರೀನಗರ, ಅನಂತ್ ನಾಗ್, ಬಂಡಿಪೋರ, ಮೀರ್‌ಪುರ್, ಮುಜಫರಾಬಾದ್ ಸೇರಿದಂತೆ ೨೦ ಜಿಲ್ಲೆಗಳನ್ನು ಒಳಗೊಂಡಿದೆ. ಲಡಾಖ್ ನಲ್ಲಿ ಗಿಲ್ಗಿಟ್, ಗಿಲ್ಗಿಟ್ ವಜಾರತ್, ಕಾರ್ಗಿಲ್, ಲೇಹ್ ಬುಡಕಟ್ಟು ಪ್ರದೇಶ, ಲಡಾಕ್, ಚಿಲ್ಹಾಸ್ ಜಿಲ್ಲೆಗಳಿವೆ. ವಿಶೇಷ ಎಂದರೆ ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರ್ ಬಾದ್, ಮೀರ್ ಪುರ್ ಗಳನ್ನು ಭಾರತದ ಭಾಗವಾಗಿ ಗುರುತಿಸಲಾಗಿದೆ.

    1947 ರಲ್ಲಿ ಜಮ್ಮು ಕಾಶ್ಮೀರ 14 ಜಿಲ್ಲೆಗಳನ್ನು ಒಳಗೊಂಡಿತ್ತು. 2019 ರಲ್ಲಿ ರಾಜ್ಯ ಸರ್ಕಾರ ಜಮ್ಮು ಕಾಶ್ಮೀರದ ಜಿಲ್ಲೆಗಳನ್ನು ಮರುವಿಂಗಡನೆ ಮಾಡಿ 28ಕ್ಕೆ ಹೆಚ್ಚಿಸಿತ್ತು.

  • ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಂದೋಲನ, ರಾಹುಲ್ ವಿದೇಶಕ್ಕೆ ಪ್ರಯಾಣ

    ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಂದೋಲನ, ರಾಹುಲ್ ವಿದೇಶಕ್ಕೆ ಪ್ರಯಾಣ

    ನವದೆಹಲಿ: ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಿದೆ. ಆದರೆ ಇನ್ನೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶಕ್ಕೆ ಹಾರಲಿದ್ದಾರೆ ಎಂದು ವರದಿಯಾಗಿದೆ.

    ನವೆಂಬರ್ 1ರಿಂದ 8ರ ವರೆಗೆ ದೇಶಾದ್ಯಂತ ಸುಮಾರು 35 ಸುದ್ದಿಗೋಷ್ಠಿಗಳನ್ನು ನಡೆಸಲು ಕಾಂಗ್ರೆಸ್ ಯೋಜನೆ ರೂಪಿಸಿದೆ. ಎನ್‍ಡಿಎ ಅಧಿಕಾರಾವಧಿಯಲ್ಲಿ ಆರ್ಥಿಕತೆಯ ಕಳಪೆ ಸ್ಥಿತಿಯ ಕುರಿತು ರಾಷ್ಟ್ರವ್ಯಾಪಿ ಆಂದೋಲನ ನಡೆಸಲಾಗುತ್ತಿದೆ. ಇದರ ಭಾಗವಾಗಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ನವೆಂಬರ್ 5ರಿಂದ 15ರ ವರೆಗೆ ಬೀದಿಗಿಳಿದು ಹೋರಾಟ ನಡೆಸಲು ಮುಂದಾಗಿದ್ದಾರೆ.

    ಇದೇ ಸಂದರ್ಭದಲ್ಲಿ ಆದರೆ ಕೋರ್ಸ್‍ಗೆ ಹಾಜರಾಗಲು ರಾಹುಲ್ ಗಾಂಧಿ ವಿದೇಶಕ್ಕೆ ಹಾರುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ನಡೆಸುತ್ತಿರುವ ರಾಷ್ಟ್ರವ್ಯಾಪಿ ಅಂದೋಲನದ ಸಮಯಕ್ಕೆ ಹಾಜರಾಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ. ರಾಹುಲ್ ಗಾಂಧಿಯವರು ಇಂಡೋನೇಷ್ಯಾಕ್ಕೆ ತೆರಳಬಹುದು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ ಈ ಕುರಿತು ಖಚಿತಪಡಿಸಲು ಕಾಂಗ್ರೆಸ್ ಮುಖಂಡರು ಹಾಗೂ ಸಿಬ್ಬಂದಿ ನಿರಾಕರಿಸಿದ್ದಾರೆ.

    ಅಕ್ಟೋಬರ್ 21ರಂದು ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಗೂ ಮುನ್ನ ರಾಹುಲ್ ಗಾಂಧಿಯವರು ಕಾಂಬೋಡಿಯಾಕ್ಕೆ ಭೇಟಿ ನೀಡಿದ್ದರು. ಅದಾಗ್ಯೂ ಕೊನೆಯ ಹಂತದ ಪ್ರಚಾರದ ಸಂದರ್ಭದಲ್ಲಿ ಮರಳಿದ್ದರು.

    2014ರ ಚುನಾವಣೆಗೆ ಹೋಲಿಸಿದರೆ ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿದೆ. ಆದರೆ ಈ ಕುರಿತು ರಾಹುಲ್ ಗಾಂಧಿ ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೆ ಹೆಚ್ಚು ಬಲದಿಂದ ರಾಹುಲ್ ಗಾಂಧಿ ಅವರು ಮತ್ತೆ ರಾಜಕೀಯಕ್ಕೆ ಮರಳಲಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಎ.ಕೆ.ಆ್ಯಂಟನಿ ಇತ್ತೀಚೆಗೆ ತಿಳಿಸಿದ್ದರು.

  • ಕೇಂದ್ರ ಸರ್ಕಾರ ಹೈನುಗಾರಿಕೆಯ ಮೇಲೆ ಬರೆ ಎಳೆಯುತ್ತಿದೆ: ರೈತರ ಆರೋಪ

    ಕೇಂದ್ರ ಸರ್ಕಾರ ಹೈನುಗಾರಿಕೆಯ ಮೇಲೆ ಬರೆ ಎಳೆಯುತ್ತಿದೆ: ರೈತರ ಆರೋಪ

    ಕೋಲಾರ: ಕೇಂದ್ರ ಸರ್ಕಾರ ಆರ್‌ಸಿಇಪಿ (Regional Comprehensive Economic Partnership) ಒಪ್ಪಂದಕ್ಕೆ ಸಹಿ ಮಾಡುವ ಮೂಲಕ ದೇಶದ ಲಕ್ಷಾಂತರ ಅನ್ನದಾತರ ಜೀವನಾಡಿಯಾಗಿರುವ ಹೈನುಗಾರಿಕೆಯ ಮೇಲೆ ಬರೆ ಎಳೆಯುತ್ತಿದೆ ಎಂದು ಆರೋಪಿಸಿ ಕೋಲಾರದಲ್ಲಿ ರೈತರು ವಿನೂನತ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

    ನಗರದ ಶ್ರೀನಿವಾಸಪುರ ವೃತ್ತದಲ್ಲಿ ಎತ್ತಿನಗಾಡಿ, ಹಸುಗಳು ಹಾಗೂ ಕೈನಲ್ಲಿ ಪೊರಕೆ ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ರೈತರು ದಿಕ್ಕಾರಗಳನ್ನ ಕೂಗುತ್ತಾ, ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ವಿದೇಶಿ ಕಂಪನಿಗಳೊಂದಿಗೆ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕುವ ನಿರ್ಧಾರವನ್ನ ಖಂಡಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು 1 ಗಂಟೆ ಕಾಲ ಪ್ರತಿಭಟನೆ ಮಾಡಿದರು.

    3 ಕೋಟಿ ಅನ್ನದಾತರು ಜೀವನಾಧಾರವಾಗಿರುವ ಹೈನೋದ್ಯಮವನ್ನ ನಂಬಿ ಇಲ್ಲಿನ ರೈತರು ಜೀವನ ನಡೆಸುತ್ತಿದ್ದು, ವಿದೇಶಿ ಹಾಲಿನ ಆಮದಿನಿಂದಾಗಿ ಸ್ವದೇಶಿ ಹಾಲಿನ ಬೆಲೆ ದಿಢೀರ್ ಕುಸಿಯುತ್ತೆ. ಇದರಿಂದ ಕೃಷಿ, ಹೈನೋದ್ಯಮವನ್ನೇ ನಂಬಿರುವ ರೈತರು ಆತಂಕಕ್ಕೊಳಗಾಗಿದ್ದಾರೆ. ಈ ಒಪ್ಪಂದದಿಂದಾಗಿ ಕೃಷಿ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರುವುದರೊಂದಿಗೆ ರೈತರ ಆತ್ಮಹತ್ಯೆಗಳು ಮತ್ತಷ್ಟು ಹೆಚ್ಚಾಗಲಿವೆ ಎಂದು ಆರೋಪಿಸಿದರು.

    ಹೀಗಾಗಿ ಹೈನೋದ್ಯಮಕ್ಕೆ ಮಾರಕವಾಗುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವಕ್ಕೆ ಸಹಿ ಹಾಕಬಾರದು ಎಂದು ಒತ್ತಾಯ ಮಾಡಿದರು. ಒಂದು ವೇಳೆ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದ್ದೆ ಆದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನ ತಡೆದು ಪ್ರತಿಭಟನೆ ಮಾಡುವುದರ ಜೊತೆಗೆ, ಸಭೆಗಳಲ್ಲಿ ಆಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮಸಿ ಬಳಿಯುವ ಎಚ್ಚರಿಕೆಯನ್ನ ನೀಡಿದರು.

  • ಚುನಾವಣಾ ಆಯೋಗ ದುರುಪಯೋಗ, ಬಿಜೆಪಿ ಪರ ಫಲಿತಾಂಶ- ಸಿದ್ದರಾಮಯ್ಯ

    ಚುನಾವಣಾ ಆಯೋಗ ದುರುಪಯೋಗ, ಬಿಜೆಪಿ ಪರ ಫಲಿತಾಂಶ- ಸಿದ್ದರಾಮಯ್ಯ

    ಹುಬ್ಬಳ್ಳಿ: ಮಹಾರಾಷ್ಟ್ರ, ಹರ್ಯಾಣ ಚುನಾವಣೆಯಲ್ಲಿ ಮತದಾನೋತ್ತರ ಸಮೀಕ್ಷೆಗಳು ಬಿಜೆಪಿ ಪರವಾಗಿ ಬಂದಿವೆ. ಫಲಿತಾಂಶ ಬರಲಿ ಜನರ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಕೇಂದ್ರ ಸರ್ಕಾರ ಇವಿಎಂ ದುರ್ಬಳಕೆ ಮಾಡಿಕೊಳ್ಳುತ್ತಿರುವ ಅನುಮಾನವಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.

    ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲವೂ ಬಿಜೆಪಿ ಕೈಯಲ್ಲಿದೆ. ಚುನಾವಣಾ ಆಯೋಗ, ಇಡಿ, ಐಟಿ, ಸಿಬಿಐಯನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇವುಗಳ ಜೊತೆಗೆ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹೀಗಾಗಿ ಬಿಜೆಪಿ ಪರ ಫಲಿತಾಂಶ ಬರುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

    ಮಹಾರಾಷ್ಟ್ರದಲ್ಲಿ ರಸ್ತೆಗಳು ಕೆಟ್ಟದಾಗಿವೆ. ವ್ಯವಸ್ಥೆ ಸರಿಯಿಲ್ಲ, ಹೀಗಿದ್ದರೂ ಜನ ಬಿಜೆಪಿಗೆ ಹೇಗೆ ಮತ ಹಾಕುತ್ತಾರೆ ಎನ್ನುವುದೇ ತಿಳಿಯುವುದಿಲ್ಲ. ನನಗೆ ಇವಿಎಂ ದುರ್ಬಳಕೆ ಮಾಡಿಕೊಳ್ಳುತ್ತಿರುವ ಅನುಮಾನ ಇದೆ. ರಾಜ್ಯದ ಅನರ್ಹರ ಕ್ಷೇತ್ರಗಳಿಗೂ 70 ದಿನಗಳ ಮುಂಚಿತವಾಗಿಯೇ ಚುನಾವಣೆ ಘೋಷಣೆ ಮಾಡಿದ್ದಾರೆ. ಚುನಾವಣಾ ಆಯೋಗವನ್ನು ಸಹ ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಕುರಿತು ಜನರು ಸಂಶಯ ಪಡುತ್ತಿದ್ದಾರೆ, ಹೀಗಾಗಿ ಚುನಾವಣಾ ಆಯೋಗ ಇವಿಎಂ ಬಗ್ಗೆ ಮರುಚಿಂತನೆ ಮಾಡಬೇಕು ಎಂದು ಒತ್ತಾಯಿಸಿದರು.

    ಪ್ರವಾಹ ಪರಿಸ್ಥಿತಿ ನಿರ್ವಹಣೆಯಲ್ಲೂ ರಾಜ್ಯ ಸರ್ಕಾರ ವಿಫಲವಾಗಿದೆ. ಸಂತ್ರಸ್ತರಿಗೆ ಶೆಡ್ ಹಾಕಿಕೊಡುವ ಬಗ್ಗೆ, ಪರಿಹಾರ ನೀಡುವ ಬಗ್ಗೆ ಚಿಂತನೆ ಮಾಡುತ್ತಿಲ್ಲ. ಸದನದಲ್ಲಿ ಪರಿಹಾರ ಕೊಡುತ್ತೇವೆ ಎಂದಿದ್ದಾರೆ, ಕೊಡದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

    ಸಾವರ್ಕರ್ ಹಿಂದುತ್ವದ ವಿಚಾರದಲ್ಲಿ ಬೆಂಕಿ ಹಚ್ಚಿ ಹೋರಾಟ ಮಾಡಿದವರು. ಸಮಾಜ ಒಡೆಯುವ ಕೆಲಸ ಮಾಡಿದವರು, ಮಹಾತ್ಮ ಗಾಂಧಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದವರು. ಅವರಿಗೆ ಭಾರತ ರತ್ನ ಬೇಡ ಅಂದೆ, ಸಾವರ್ಕರ್ ಗಾಂಧಿ ಕೊಲೆ ಪ್ರಕರಣದ ಆರೋಪಿ, ನಾನು ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

  • ಕೇಂದ್ರ ಸರ್ಕಾರ ಕೆಲಸ ಕೇಳಿದ ಯುವಕರಿಗೆ ಚಂದ್ರನನ್ನು ತೋರಿಸುತ್ತಿದೆ: ರಾಹುಲ್ ಗಾಂಧಿ

    ಕೇಂದ್ರ ಸರ್ಕಾರ ಕೆಲಸ ಕೇಳಿದ ಯುವಕರಿಗೆ ಚಂದ್ರನನ್ನು ತೋರಿಸುತ್ತಿದೆ: ರಾಹುಲ್ ಗಾಂಧಿ

    – ಇಂದಿನ ದೇಶದ ಈ ಪರಿಸ್ಥಿತಿಗೆ ಮಾಧ್ಯಮಗಳೇ ಕಾರಣ

    ಮುಂಬೈ: ಕೇಂದ್ರ ಸರ್ಕಾರ ಕೆಲಸ ಕೇಳಿದ ಯುವಕರಿಗೆ ಚಂದ್ರನನ್ನು ತೋರಿಸುತ್ತಿದೆ ಎಂದು ಹೇಳುವ ಮೂಲಕ ಬಿಜೆಪಿ ನಾಯಕರ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ಮಾಡಿದ್ದಾರೆ.

    ಇಂದು ಮಹಾರಾಷ್ಟ್ರದ ಲಾತೂರ್ ನಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ, ಯುವಕರು ಕೇಂದ್ರ ಸರ್ಕಾರವನ್ನು ಕೆಲಸದ ಬಗ್ಗೆ ಕೇಳಿದಾಗ, ಬಿಜೆಪಿ ಸರ್ಕಾರ ಚಂದ್ರನ ಕಡೆ ತೋರಿಸುತ್ತಾರೆ. ದೇಶದ ಜನರನ್ನು ಬೇರೆ ಕಡೆ ಸೆಳೆಯುತ್ತಾರೆ ಎಂದು ಬಿಜೆಪಿ ಮೇಲೆ ಕಿಡಿಕಾರಿದರು.

    ಇತ್ತೀಚಿಗೆ ಪ್ರಧಾನಿ ಮೊದಿ ಅವರು, ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರನ್ನು ಭೇಟಿ ಮಾಡಿದರು, ಈ ಭೇಟಿಯಲ್ಲಿ ಅವರು 2017 ಚೀನಾದ ಸೈನ್ಯ ಭಾರತೀಯ ಭೂಪ್ರದೇಶದ ಮೇಲೆ ಅಕ್ರಮಣ ಮಾಡಿದರ ಬಗ್ಗೆ ಕೇಳಿಲ್ಲ. ಮೋದಿ ಅವರು ಮೇಕ್ ಇನ್ ಇಂಡಿಯಾ ಮಾಡುತ್ತಿಲ್ಲ. ಬದಲಾಗಿ ಮೇಕ್ ಇನ್ ಚೀನಾ ಮಾಡುತ್ತಿದ್ದಾರೆ ಎಂದು ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು.

    ದೇಶದ ಜನ ಉದ್ಯೋಗ ಮತ್ತು ಸಮಸ್ಯೆಗಳ ಬಗ್ಗೆ ಕೇಳಿದಾಗ, ಚಂದ್ರಯಾನ, 370ನೇ ವಿಧಿ ರದ್ದು ಈ ರೀತಿಯ ವಿಚಾರಗಳನ್ನು ತೋರಿಸಿ ಜನರ ಗಮನವನ್ನು ಬೇರೆ ಕಡೆ ಸಳೆಯುವುದು ಮಾಧ್ಯಮ, ಮೋದಿ ಮತ್ತು ಅಮಿತ್ ಶಾ ಅವರ ಕೆಲಸವಾಗಿದೆ. 370ನೇ ವಿಧಿ ಮತ್ತು ಚಂದ್ರಯಾನದ ಬಗ್ಗೆ ಸದಾ ಮಾತನಾಡುವ ಕೇಂದ್ರ ಸರ್ಕಾರ ದೇಶದ ಸಮಸ್ಯೆ ಬಗ್ಗೆ ಮೌನ ವಹಿಸಿದೆ ಎಂದು ಕಿಡಿಕಾರಿದರು.

    ಈ ವೇಳೆ ಮಾಧ್ಯಮಗಳ ಮೇಲೆ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಮೋದಿ ಅವರು 15 ಜನ ಶ್ರೀಮಂತರ 5.5 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದರು. ಆಗ ಈ ಮಾಧ್ಯಮಗಳು ಮೋದಿಯನ್ನು ಪ್ರಶ್ನೆ ಮಾಡಲಿಲ್ಲ. ಇಂದಿನ ರೈತರ ಸಂಕಟ ದೇಶದಲ್ಲಿನ ಉದ್ಯೋಗದ ಕೊರತೆಗೆ ಮಾಧ್ಯಮಗಳು ಕೂಡ ಕಾರಣ ಎಂದು ಗುಡುಗಿದರು.

    ಮೋದಿ ಅವರ ಅಮಾನೀಕರಣದಿಂದ (ನೋಟ್ ಬ್ಯಾನ್) ಯಾರಿಗೆ ಲಾಭ ಸಿಕ್ಕಿತು. ಉದ್ಯಮಿ ನೀರವ್ ಮೋದಿ ದೇಶ ಬಿಟ್ಟು ಓಡಿ ಹೋದರು. ಪ್ರಧಾನಿ ಅವರ ನೋಟ್ ಬ್ಯಾನ್ ನಿಂದ ಬಡವರಿಗೆ ಪ್ರಯೋಜನವಾಗಿದ್ದರೆ ನನ್ನನ್ನು ಗಲ್ಲಿಗೇರಿಸಲಿ. ಚಂದ್ರನ ಬಳಿ ರಾಕೆಟ್ ಕಳುಹಿಸುವುದರಿಂದ ಮಹಾರಾಷ್ಟ್ರದ ಜನರ ಹೊಟ್ಟೆ ತುಂಬುವುದಿಲ್ಲ ಎಂದು ಮೋದಿ ಅವರ ಯೋಜನೆಗಳ ಮೇಲೆ ವಾಗ್ದಾಳಿ ಮಾಡಿದರು.

    ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಮತ್ತು ನೋಟ್ ಬ್ಯಾನ್ ಉದ್ದೇಶ ಬಡವರ ಜೇಬಿನಲ್ಲಿರುವ ಹಣವನ್ನು ತೆಗೆದುಕೊಂಡು ಹೋಗಿ ಶ್ರೀಮಂತರಿಗೆ ನೀಡುವುದು ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.