ಗದಗ: ಜಿಲ್ಲೆಯಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡಲು 3 ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿ ಗದಗ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಆದೇಶ ಹೊರಡಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು 144 ಸೆಕ್ಷನ್ ಜಾರಿ ಹಿನ್ನಲೆ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ತಡೆಯಾಜ್ಞೆ ವಿರೋಧಿಸಿ ಪ್ರತಿಭಟನೆಗೆ ಮುಂದಾದ ಸಂಘಟನೆಗಳ ಪ್ರತಿಭಟನೆಗೂ ಬ್ರೇಕ್ ಬಿದ್ದಿದೆ. ಮದುವೆ, ಧಾರ್ಮಿಕ ಕಾರ್ಯ, ಶವ ಸಂಸ್ಕಾರ ಕಾರ್ಯಗಳನ್ನು ಹೊರತುಪಡಿಸಿ ಈ ಅವಧಿಯಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪಾಗಿ ಓಡಾಡುವಂತಿಲ್ಲ. ಜೊತೆಗೆ ಮಾರಕಾಸ್ತ್ರಗಳನ್ನ ಕೊಂಡೊಯ್ಯುವುದು, ಯಾವುದೇ ಜೀವಂತ ವ್ಯಕ್ತಿಯ ಭಾವಚಿತ್ರ ಮೆರವಣಿಗೆ ಮತ್ತು ಪ್ರತಿಭಟನೆ ಮಾಡುವುದನ್ನು ನಿಷೇಧಿಸಲಾಗಿದೆ. ಹಾಗೆಯೇ ಸಾರ್ವಜನಿಕ ಶಾಂತಿಗೆ ಭಂಗ ತರುವ ಮಾತು, ಹಾಡು, ಅಣಕ, ವಾದ್ಯ ಬಾರಿಸುವುದು ಮುಂತಾದವುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಜಿಲ್ಲೆಯಲ್ಲಿ ಎಲ್ಲೆಡೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಆದರೆ ಬಸ್ ಸಂಚಾರ, ವ್ಯಾಪಾರ-ವಹಿವಾಟು, ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಬುಧವಾರ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ಪರಿಸರ ಮತ್ತು ಅರಣ್ಯ ಇಲಾಖೆ ತಡೆಯಾಜ್ಞೆ ನೀಡಿತ್ತು. ಈ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕೆಲ ಸಂಘಗಳು ಮುಂದಾಗಿದ್ದವು. ಆದರೆ ನಿಷೇಧಾಜ್ಞೆ ಜಾರಿ ಹಿನ್ನೆಲೆ ಆ ಪ್ರತಿಭಟನೆಗೂ ಬ್ರೇಕ್ ಬಿದ್ದಿದೆ, ಸಂಘಟನೆಗಳು ಪ್ರತಿಭಟನೆ ಹಿಂಪಡೆದುಕೊಂಡಿದ್ದಾರೆ.
– ನಿರಾಶ್ರಿತರಿಗೆ ಪೌರತ್ವ ಕೊಡ್ತಿದ್ದೇವೆ, ಖಾದರ್ ಹಕ್ಕು ಕಿತ್ಕೊಂಡಿಲ್ಲ
– ಖಾದರ್ ಪಾಕಿಸ್ತಾನಕ್ಕೆ ಹೋಗಲಿ – ರವಿ ತಿರುಗೇಟು
ಮಂಗಳೂರು: ಹಿಂದೊಮ್ಮೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚುತ್ತೇವೆ ಎಂದು ಹೇಳಿಕೆ ನೀಡಿ ಛೀಮಾರಿಗೆ ಒಳಗಾಗಿದ್ದರು. ಇದೀಗ ಮಾಜಿ ಸಚಿವ ಯು.ಟಿ.ಖಾದರ್ ಕೂಡ ಅದೇ ರೀತಿ ರಾಜ್ಯಕ್ಕೆ ಬೆಂಕಿ ಹಚ್ಚುವುದಾಗಿ ಹೇಳಿಕೆ ನೀಡಿದ್ದು, ವಿವಾದಕ್ಕೆ ಸಿಲುಕಿದ್ದಾರೆ.
ನಗರದಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಪೌರತ್ವ ಮಸೂದೆ ವಿರೋಧಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮಸೂದೆ ವಿರೋಧಿಸಿ ಆಕ್ರೋಶಭರಿತರಾಗಿ ಮಾತನಾಡಿದ್ದಾರೆ. ಮಸೂದೆ ವಿಚಾರದಲ್ಲಿ ಇಡೀ ದೇಶ ಹೊತ್ತಿ ಉರಿಯುತ್ತಿದ್ದರೂ, ಕರ್ನಾಟಕ ಮಾತ್ರ ಶಾಂತಿಯಿಂದಿದೆ. ಆದರೆ ರಾಜ್ಯದಲ್ಲಿ ಈ ಮಸೂದೆಯನ್ನು ಜಾರಿಗೆ ತರಲು ಪ್ರಯತ್ನಿಸಿದಲ್ಲಿ ಇಡೀ ರಾಜ್ಯವೇ ಹೊತ್ತಿ ಉರಿಯಬಹುದು. ಇದು ಮುಖ್ಯಮಂತ್ರಿಗೆ ನೀಡುತ್ತಿರುವ ಎಚ್ಚರಿಕೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾದರ್ ಮಾತು ಕರಾವಳಿಗರ ಆಕ್ರೋಶಕ್ಕೆ ಕಾರಣವಾಗಿದ್ದು. ರಾಜ್ಯಕ್ಕೆ ಬೆಂಕಿ ಹಚ್ಚಲು ಜನರನ್ನು ಪ್ರಚೋದಿಸುತ್ತಿದ್ದಾರೆ ಎಂಬ ನೆಲೆಯಲ್ಲಿ ಟೀಕೆ ಕೇಳಿಬರುತ್ತಿದೆ. ಅಲ್ಲದೆ ಪ್ರಚೋದನಾತ್ಮಕ ಹೇಳಿಕೆ ನೀಡಿದ ಹಿನ್ನೆಲೆ ಶಾಸಕ, ಮಾಜಿ ಸಚಿವ ಯು.ಟಿ.ಖಾದರ್ ವಿರುದ್ಧ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ.
ತಮ್ಮ ಹೇಳಿಕೆ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿ ಸ್ಪಷ್ಟಪಡಿಸಿದ ಖಾದರ್, ನಾನು ಯಾವುದೇ ಪ್ರಚೋದನಕಾರಿ ಹೇಳಿಕೆಯನ್ನು ನೀಡಿಲ್ಲ. ಪೌರತ್ವದ ವಿಚಾರದಲ್ಲಿ ದೇಶದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿಯೂ ನಡೆಯಬಹುದು ಈ ಕುರಿತು ಮುಖ್ಯಮಂತ್ರಿಗಳು ಎಚ್ಚರದಿಂದಿರಬೇಕು ಎಂದು ಹೇಳಿದ್ದೇನೆ. ಅಲ್ಲದೆ ಕಾಯ್ದೆಯನ್ನು ಜಾರಿಗೆ ತರಲು ಸರ್ಕಾರ ಮುಂದಾಗಬಾರದು ಎಂದು ಎಚ್ಚರಿಸಿದ್ದಾಗಿ ಹೇಳಿದ್ದಾರೆ.
Delhi: Police held a flag march in Mustafabad & Ghonda areas today. Jt CP Alok Kumar says,"We want to give a message that strict action will be taken against those who try to disrupt law&order in the area. Sec 144 has been imposed. Situation is completely under control&peaceful". pic.twitter.com/7j8GN827Ix
ಖಾದರ್ ಹೇಳಿಕೆ ಕುರಿತು ಕನ್ನಡ ಮತ್ತು ಸಾಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಪ್ರತಿಕ್ರಿಯಿಸಿ, ಯು.ಟಿ.ಖಾದರ್ ಅವರ ಬೆದರಿಕೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿಯಾಗಿದೆ. ಖಾದರ್ ನಮಗೆ ಬೆದರಿಸಲು ನಾವು ಕಾಂಗ್ರೆಸ್ ಹೈಕಮಾಂಡ್ ಅಲ್ಲ. ಹೊತ್ತಿ ಉರಿಸೋದರಲ್ಲಿ ಖಾದರ್ ನಿಸ್ಸೀಮರು. ಖಾದರ್ ಮನಸ್ಥಿತಿಯಂಥವರೇ ಗೋದ್ರಾಗೆ ಬೆಂಕಿ ಹಾಕಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಬಹುಸಂಖ್ಯಾತರು ತಾಳ್ಮೆ ವಹಿಸಿದ್ದಾರೆ ಅಂತ ಬೆಂಕಿ ಹಾಕುವ ಬಗ್ಗೆ ಮಾತನಾಡುತ್ತೀರಿ. ಬಹುಸಂಖ್ಯಾತರು ರೊಚ್ವಿಗೆದ್ದರೆ ಏನಾಗುತ್ತೆ ಅಂತ ಖಾದರ್ ಅರ್ಥ ಮಾಡಿಕೊಳ್ಳಲಿ. ನಮ್ಮ ಸಹನೆ ನಮ್ಮ ದೌರ್ಬಲ್ಯ ಅಲ್ಲ. ಕಾಂಗ್ರೆಸ್ಸಿನವರು ಪಾಕಿಸ್ತಾನದವರಿಗೂ ಪೌರತ್ವ ಕೊಡಿ ಅಂತಿದಾರೆ. ನಾವು ಪಾಕಿಸ್ತಾನೀಯರಿಗೂ ಪೌರತ್ವ ಕೊಡಲು ಸಿದ್ಧ, ಆದರೆ ಆಗ ಅಖಂಡ ಭಾರತ ಆಗಬೇಕು. ಅಖಂಡ ಭಾರತ ಆದಾಗ ಪಾಕ್ ನ ಮುಸ್ಲಿಮರಿಗೂ ಪೌರತ್ವ ಕೊಡುತ್ತೇವೆ ಎಂದರು.
ಅಖಂಡ ಭಾರತವಾಗುವವರೆಗೆ ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೌರತ್ವ ಕೊಡುತ್ತಿದ್ದೇವೆ. ನಿರಾಶ್ರಿತರು ಬೇರೆ, ನುಸುಳು ಕೋರರು, ಆಕ್ರಮಣಕಾರರು ಬೇರೆ. ನಾವು ನಿರಾಶ್ರಿತರಿಗೆ ಪೌರತ್ವ ಕೊಡುತ್ತಿದ್ದೇವೆಯೇ ಹೊರತು ಖಾದರ್ ಹಕ್ಕನ್ನು ಕಿತ್ತುಕೊಂಡಿಲ್ಲ. ಪಾಕಿಸ್ತಾನದಿಂದ ಬಂದಿರುವ ಖಾದರ್ ನೆಂಟರಿಗೆ ಪೌರತ್ವ ಕೊಡಲ್ಲ. ಭಾರತವನ್ನು ಪಾಕಿಸ್ತಾನ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಪಾಕಿಸ್ತಾನಕ್ಕೇ ಹೋಗಲಿ ಎಂದು ತಿರುಗೇಟು ನೀಡಿದ್ದಾರೆ.
ಉಡುಪಿ: ಸುಪ್ರೀಂಕೋರ್ಟ್ ಜೀವಂತವಿದ್ದರೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಸಮುದ್ರಕ್ಕೆ ಎಸೆಯಲಿ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕೇಂದ್ರ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವಿರೋಧಿ, ದೇಶ ವಿರೋಧಿ, ಸಂವಿಧಾನ ವಿರೋಧಿ, ಎನ್‍ಆರ್‍ಸಿ ಹಾಗೂ ಸಿಎಎ ತರುವ ಮೂಲಕ ಬಿಜೆಪಿ ಭಾರತಕ್ಕೆ ಬೆಂಕಿ ಇಡುತ್ತಿದೆ. ಭಾರತದಲ್ಲಿ 130 ಕೋಟಿ ಜನರೂ ಸಮಾನರು. ದೇಶದ ಧರ್ಮೀಯರಲ್ಲಿ ಬೇಧ ಭಾವ ಮಾಡಕೂಡದು. ಸಂವಿಧಾನದಲ್ಲಿ ಧಾರ್ಮಿಕ ವಿಭಜನೆಗೆ ಅವಕಾಶವಿಲ್ಲ ಎಂದು ಹೇಳಿದರು.
ಈ ಎರಡು ಕಾಯ್ದೆಯ ಮೂಲಕ ಬಿಜೆಪಿ ಈ ದೇಶಕ್ಕೆ ಬೆಂಕಿ ಇಡುತ್ತಿದೆ. ಜನ ಬೀದಿಗಿಳಿದು ಘರ್ಷಣೆಯಲ್ಲಿ ತೊಡಗಿದ್ದಾರೆ. ಬಿಜೆಪಿ ಸರ್ಕಾರ ಆರ್ಥಿಕವಾಗಿ ಭಾರತವನ್ನು ನಿರ್ಣಾಮ ಮಾಡಿಯಾಗಿದೆ. ಇದೀಗ ಬಾಂಗ್ಲಾದೇಶದ ಅರ್ಧದಷ್ಟು ಜಿಡಿಪಿಗೆ ಭಾರತ ಇಳಿದಿದೆ. ಇಂದಿರಾ ಗಾಂಧಿ ಕಟ್ಟಿದ ಬಾಂಗ್ಲಾದೇಶ ಸುಭದ್ರ ಆಗಿದೆ. ಭಾರತದ ಆರ್ಥಿಕ ತಳಹದಿಯೇ ಕುಸಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡುವ ಕಾಲ ಬಂದಿದೆ, ಮಹಾನ್ ನಾಯಕರು ಎಂದು ಕರೆಸಿಕೊಂಡವರು ಭಾರತವನ್ನು ಛಿದ್ರ ಛಿದ್ರ ಮಾಡಲು ಹೊರಟಿದ್ದಾರೆ. ಬಿಜೆಪಿಗೆ ಅಧಿಕಾರ ಮಾಡುವ ಹಕ್ಕಿಲ್ಲ, ಸುಪ್ರೀಂ ಕೋರ್ಟ್ ಪೌರತ್ವ ಕಾಯ್ದೆಯನ್ನು ಬದಿಗೆ ಹಾಕಬೇಕು- ಬಿಜೆಪಿಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು ಎಂದು ಮಧ್ವರಾಜ್ ಒತ್ತಾಯಿಸಿದರು.
ನವದೆಹಲಿ: ಟೋಲ್ ಪಾವತಿಸಲು ಫಾಸ್ಟ್ ಟ್ಯಾಗ್ ಕಡ್ಡಾಯ ಬಳಕೆಯನ್ನು ಕೇಂದ್ರ ಸರ್ಕಾರ ಮುಂದೂಡಿದ್ದರೂ, ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಪ್ರಮಾಣ ಶೇ.15 ರಷ್ಟು ಹೆಚ್ಚಾಗಿದೆ.
ಮೂಲಗಳ ಮಾಹಿತಿಯ ಅನ್ವಯ ಎನ್‍ಎಚ್‍ಎಐ ಟೋಲ್ ಆದಾಯ 80 ಕೋಟಿ ರೂ. ದಾಟಿದ್ದು, ಇದಕ್ಕೂ ಮುನ್ನ ಸರಾಸರಿ 65 ರಿಂದ 68 ಕೋಟಿ ರೂ. ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಸಂಗ್ರಹವಾಗಿತ್ತು. ಫಾಸ್ಟ್ ಟ್ಯಾಗ್ ಅಳವಡಿಕೆಯಿಂದ ಆದಾಯ ಹೆಚ್ಚಳವಾಗಿದ್ದು, ಮುಂದಿನ ದಿನಗಳಲ್ಲಿ ಟೋಲ್‍ಗಳಲ್ಲಿ ಸೋರಿಕೆಯಾಗುತ್ತಿದ್ದ ಆದಾಯಕ್ಕೆ ಪೂರ್ಣವಿರಾಮ ಬೀಳುವ ಸಾಧ್ಯತೆಯಿದೆ.
ಇದುವರೆಗೂ ದೇಶದಲ್ಲಿರುವ 530 ಟೋಲ್ ಪ್ಲಾಜಾಗಳಲ್ಲಿ 40 ರಿಂದ 45 ಪ್ಲಾಜಾಗಳಲ್ಲಿನ ‘ಟೋಲ್ ಟೈಮ್ ಝೀರೋ’ ಟೈಮ್ ದಾಖಲಾಗಿದೆ. ಕಳೆದ ವರ್ಷ 488 ಟೋಲ್ ಪ್ಲಾಜಾ ಗಳಲ್ಲಿ ಸರಾಸರಿ ಕಾಯುವ ಸಮಯ ಭಾನುವಾರ 12 ನಿಮಿಷವಾಗಿತ್ತು. ಉಳಿದಂತೆ ಇತರೇ ದಿನಗಳಲ್ಲಿ ಸರಾಸರಿ 10.04 ನಿಮಿಷ ಬೇಕಾಗಿತ್ತು.
ಈಗಲೂ ಮಾಹಿತಿಯ ಕೊರತೆಯಿಂದಾಗಿ ವಾಹನಗಳು ಮಾಲೀಕರು ಫಾಸ್ಟ್ ಟ್ಯಾಗ್ ಅಳವಡಿಕೆ ಮಾಡದೇ ಇದ್ದರೂ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ಲೇನ್‍ಗಳಿಗೆ ಪ್ರವೇಶ ಮಾಡುತ್ತಿದ್ದರಿಂದ ಕೆಲ ಸಮಸ್ಯೆ ಆಗುತ್ತಿದೆ. ಈ ವೇಳೆ ಡಬಲ್ ಚಾರ್ಜ್ ಪಾವತಿ ಮಾಡಲು ನಿರಾಕರಿಸುತ್ತಿದ್ದಾರೆ. ಅಲ್ಲದೇ ಕೆಲ ಪ್ಲಾಜಾಗಳಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಅಂತಹ ಸ್ಥಳಗಳಲ್ಲಿ ವಾಹನ ಸವಾರರು ಸಾಕಷ್ಟು ಬ್ಯಾಲೆನ್ಸ್ ಇದ್ದರೆ ಉಚಿತ ಪ್ರವೇಶ ನೀಡಲಾಗುತ್ತಿದೆ ಎಂದು ಟೋಲ್ ಸಿಬ್ಬಂದಿ ಹೇಳಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ, ದೇಶದ 245 ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ತೃಪ್ತಿದಾಯಕವಾಗಿದ್ದು, ಎಲ್ಲಾ ಪ್ಲಾಜಾಗಳಲ್ಲಿ ನೇರ ನಗದು ಸ್ವೀಕರಿಸುವ ಒಂದು ಲೇನ್ ಮಾತ್ರ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ. ಉಳಿದ 242 ಪ್ಲಾಜಾಗಳಲ್ಲಿ ಶೇ.25 ರಷ್ಟು ಲೇನ್‍ಗಳಲ್ಲಿ ನಗದು ಸ್ವೀಕರಿಸಲಾಗುತ್ತಿದೆ. ಇನ್ನು 40-42 ಪ್ಲಾಜಾಗಳಲ್ಲಿ ನಿರೀಕ್ಷಿತ 25% ರಷ್ಟು ಪ್ರಮಾಣದಲ್ಲಿ ಫಾಸ್ಟ್ ಟ್ಯಾಗ್ ಬಳಕೆ ಸಾಧ್ಯವಾಗಿಲ್ಲ ಎಂಬ ಮಾಹಿತಿ ಲಭಿಸಿದೆ.
– ಸದ್ಯ ಶೇ.75 ಗೇಟ್‍ಗಳಲ್ಲಿ ಮಾತ್ರ ಫಾಸ್ಟ್ ಟ್ಯಾಗ್
– ಉಳಿದ ಶೇ.25 ಗೇಟ್‍ಗಳಿಗೆ ಹಂತ ಹಂತವಾಗಿ ವಿಸ್ತರಣೆ
ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ಎಲ್ಲ ವಾಹನಗಳಿಗೆ ಡಿ.15ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಇದಕ್ಕೀಗ ಕೊಂಚ ಸಡಿಲಿಕೆ ನೀಡಿದ್ದು, ಸದ್ಯ ಎಲ್ಲ ಟೋಲ್‍ಗಳ ಶೇ.75 ಗೇಟ್‍ಗಳು ಮಾತ್ರ ಫಾಸ್ಟ್ ಟ್ಯಾಗ್ ವ್ಯವಸ್ಥೆ ಹೊಂದಲಿವೆ. ಉಳಿದ ಶೇ.25ರಷ್ಟನ್ನು ಹಂತ ಹಂತವಾಗಿ ವಿಸ್ತರಿಸಲು ತೀರ್ಮಾನಿಸಲಾಗಿದೆ.
ಟೋಲ್‍ನ ಎಲ್ಲ ಗೇಟ್‍ಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಸಲು ಕೇಂದ್ರ ಸರ್ಕಾರ ಸಮಯಾವಕಾಶ ನೀಡಿದ್ದು, ಶೇ.75 ರಷ್ಟು ಗೇಟ್‍ಗಳಿಗೆ ಮಾತ್ರ ಫಾಸ್ಟ್‍ಟ್ಯಾಗ್ ತಂತ್ರಜ್ಞಾನವನ್ನು ಅಳವಡಿಸಲು ನಿರ್ಧರಿಸಲಾಗಿದೆ. ಉಳಿದ ಶೇ.25ರಷ್ಟನ್ನು ಹಂತ ಹಂತವಾಗಿ ವಿಸ್ತರಿಸಲು ತೀರ್ಮಾನಿಸಲಾಗಿದೆ.
ಜುಲೈನಲ್ಲಿ ಹೆದ್ದಾರಿ ಸಚಿವಾಲಯದಿಂದ ಭಾರತ ರಾಷ್ಟ್ರೀಯ ಹೆದ್ದಾರಿ ಪ್ರಧಿಕಾರ(ಎನ್‍ಎಚ್‍ಎಐ)ಕ್ಕೆ ಪತ್ರ ಬರೆದು ಎಲ್ಲ ರಾಷ್ಟ್ರೀಯ ಹೆದ್ದಾರಿಗಳ, ತುರ್ತು ನಿರ್ವಹಣೆಗಾಗಿ ಒಂದು ಗೇಟ್ ಹೊರತುಪಡಿಸಿ, ಉಳಿದೆಲ್ಲ ಟೋಲ್ ಗೇಟ್‍ಗಳಿಗೆ ಡಿಸೆಂಬರ್ 1ರೊಳಗೆ ಫಾಸ್ಟ್ ಟ್ಯಾಗ್ ಅಳವಡಿಸುವಂತೆ ಸೂಚಿಸಿತ್ತು. ಆದರೆ ನಂತರ ನವೆಂಬರ್ 29ರಂದು ಆದೇಶ ಹೊರಡಿಸಿ, ಈ ಗಡುವನ್ನು ಡಿಸೆಂಬರ್ 15ಕ್ಕೆ ವಿಸ್ತರಿಸಿತ್ತು. ಇದನ್ನೂ ಓದಿ: ಡಿಸೆಂಬರಿನಿಂದ ಫಾಸ್ಟ್ ಟ್ಯಾಗ್ ಕಡ್ಡಾಯ – ಎಲ್ಲಿ ಸಿಗುತ್ತೆ? ಶುಲ್ಕ ಎಷ್ಟು? ಈ ವಿಚಾರಗಳನ್ನು ತಿಳಿದಿರಿ
ಇದೀಗ ಮತ್ತೆ ಈ ಕುರಿತು ನಿರ್ಧಾರ ಕೈಗೊಂಡಿದ್ದು, ಮೊದಲ ಹಂತದಲ್ಲಿ ಪ್ರತಿ ಟೋಲ್‍ನ ಶೇ.75ರಷ್ಟು ಗೇಟ್ ಗಳಿಕೆ ಮಾತ್ರ ಫಾಸ್ಟ್ ಟ್ಯಾಗ್ ಅಳವಡಿಸಿ, ಶೇ.25ರಷ್ಟು ಗೇಟ್ ಗಳಲ್ಲಿ ನಗದು ಸ್ವೀಕರಿಸುವಂತೆ ತಿಳಿಸಿದೆ. ಅಲ್ಲದೆ ಈ ಶೇ.25ರಷ್ಟು ಗೇಟ್‍ಗಳನ್ನು ಹಂತ ಹಂತವಾಗಿ ಫಾಸ್ಟ್ ಟ್ಯಾಗ್ ಗೆ ಒಳಪಡಿಸಲಾಗುವುದು ಎಂದು ಹೆದ್ದಾರಿ ಸಚಿವಾಲಯ ತಿಳಿಸಿದೆ.
ನವದೆಹಲಿ: ದೇಶದಲ್ಲೇ ಅತಿ ಹೆಚ್ಚು ಡೆಂಗ್ಯೂ ಪ್ರಕರಣಗಳು ಕರ್ನಾಟಕದಲ್ಲಿ ಪತ್ತೆಯಾಗಿರುವ ಆಘಾತಕಾರಿ ಅಂಶ ಪ್ರಕಟವಾಗಿದೆ.
2019ರಲ್ಲಿ ದಕ್ಷಿಣದ ಆರು ರಾಜ್ಯಗಳಲ್ಲಿ ಒಟ್ಟು 35 ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದ್ದು, 14 ಸಾವಿರ ಕೇಸ್ ದಾಖಲಾಗುವ ಮೂಲಕ ಕರ್ನಾಟಕ ಅಗ್ರ ಸ್ಥಾನದಲ್ಲಿದೆ.
ಲೋಕಸಭೆಯ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಕೇಂದ್ರ ಸರ್ಕಾರ ಉತ್ತರಿಸಿದ್ದು, ಇದರಲ್ಲಿ ಮಾಹಿತಿ ಬಹಿರಂಗವಾಗಿದೆ. ದಕ್ಷಿಣ ಭಾರತ ಆರು ರಾಜ್ಯಗಳಲ್ಲಿ ಶೇ.50ರಷ್ಟು ಪ್ರಕರಣಗಳು ದಾಖಲಾಗಿದ್ದು, ಕರ್ನಾಟಕ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಕೇರಳ ಹಾಗೂ ಆಂಧ್ರ ಪ್ರದೇಶಗಳಲ್ಲಿ ಒಟ್ಟು 36 ಜನ ಈ ಮಹಾಮಾರಿಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ಡೆಂಗ್ಯೂ ಜ್ವರಕ್ಕೆ ಮನೆ ಮದ್ದು
ಅಕ್ಟೋಬರ್ ವರೆಗೆ ದೇಶದಲ್ಲಿ ಒಟ್ಟು 91 ಸಾವಿರ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ನವೆಂಬರ್ ಹಾಗೂ ಡಿಸೆಂಬರ್ ಅಂಕಿ ಅಂಶಗಳನ್ನೂ ಸೇರಿಸಿದರೆ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎಂದು ಹೇಳಿದೆ.
ಮಹಾರಾಷ್ಟ್ರ ಹಾಗೂ ಗೋವಾಗಳಲ್ಲಿ ಅನುಕ್ರಮವಾಗಿ 9,899 ಹಾಗೂ 908 ಕೇಸ್ ದಾಖಲಾಗಿವೆ. ಡೆಂಗ್ಯೂ ಮಹಾಮಾರಿಯನ್ನು ನಿಯಂತ್ರಿಸಲು ಕರ್ನಾಟಕದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯ ಕಲ್ಪಿಸಿದರೂ ಸಹ ಪ್ರಕರಣಗಳ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ.
ಕಳೆದ ವರ್ಷ ರಾಜ್ಯದಲ್ಲಿ 4 ಸಾವಿರ ಪ್ರಕರಣಗಳು ಪತ್ತೆಯಾಗಿದ್ದವು. ಇದರಲ್ಲಿ ಶೇ.70ರಷ್ಟು ಬೆಂಗಳೂರಿನಲ್ಲಿಯೇ ದಾಖಲಾಗಿದ್ದವು. ಅಲ್ಲದೆ ಡೆಂಗ್ಯೂ ಮಹಾಮಾರಿಗೆ ದಕ್ಷಿಣದ ರಾಜ್ಯಗಳಲ್ಲಿ ಹಲವರು ಮೃತಪಟ್ಟಿದ್ದರು. ದೇಶಾದ್ಯಂತ ಒಟ್ಟು 82 ಜನ ಸಾವನ್ನಪ್ಪಿದ್ದರು. ಕರ್ನಾಟಕ, ಕೇರಳಗಳಲ್ಲಿ 13 ಹಾಗೂ 16 ಜನ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ದಕ್ಷಿಣ ರಾಜ್ಯಗಳಲ್ಲೇ ಹೆಚ್ಚೇಕೆ?
ಅಧಿಕಾರಿಗಳ ನಿರಾಸಕ್ತಿ ಹಾಗೂ ಸೊಳ್ಳೆಗಳ ಸಂತಾನೋತ್ಪತ್ತಿ ಸ್ಥಳಗಳನ್ನು ನಿಯಂತ್ರಿಸುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಇಲ್ಲದಿರುವುದೇ ಡೆಂಗ್ಯೂ ಪ್ರಕರಣಗಳು ಹೆಚ್ಚಲು ಕಾರಣ. ಈ ಕುರಿತು ಹೆಚ್ಚು ಜಾಗೃತಿ ಮೂಡಿಸುವ ಅಗತ್ಯವಿದೆ. ಆಶಾ ಕಾರ್ಯಕರ್ತೆಯರ ಮೂಲಕ ರಾಜ್ಯಾದ್ಯಂತ ಬೃಹತ್ ಜಾಗೃತಿ ಅಭಿಯಾನವನ್ನು ನಾವು ಕೈಗೊಂಡಿದ್ದೇವೆ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಿ.ಕೆ.ಪಾಂಡೆ ತಿಳಿಸಿದ್ದಾರೆ.
ನವದೆಹಲಿ: ಬಹು ವರ್ಷಗಳಿಂದ ಚರ್ಚೆಯಾಗುತ್ತಿದ್ದ ಸಂಸದರ ಊಟ, ಉಪಹಾರದ ಸಬ್ಸಿಡಿ ಕುರಿತು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಲೋಕಸಭೆಯ ಆವರಣದಲ್ಲಿರುವ ಯಾವುದೇ ಕ್ಯಾಂಟೀನ್‍ಗಳಲ್ಲಿ ಸಬ್ಸಿಡಿ ನೀಡದಿರಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿದೆ. ಸ್ಪೀಕರ್ ಓಂ ಬಿರ್ಲಾ ಅವರ ಮನವಿಯಂತೆ ಸಂಸದರು ಅವಿರೋಧವಾಗಿ ಈ ನಿರ್ಧಾರವನ್ನು ಬೆಂಬಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಸತ್ತಿನ ಕ್ಯಾಂಟೀನಲ್ಲಿ ಆಹಾರಕ್ಕೆ ನೀಡುವ ಸಬ್ಸಿಡಿಯಿಂದಾಗಿ ಸರ್ಕಾರಕ್ಕೆ ಪ್ರತಿ ವರ್ಷ 17 ಕೋಟಿ ರೂ ನಷ್ಟ ಉಂಟಾಗುತ್ತಿತ್ತು. ಲೋಕಸಭೆಯ ಕ್ಯಾಂಟೀನ್‍ಗಳಲ್ಲಿ ಸಂಸದರಿಗೆ, ಅಧಿಕಾರಿಗಳಿಗೆ ಹಾಗೂ ಲೋಕಸಭೆಗೆ ಭೇಟಿ ನೀಡುವವರಿಗೆ ಕಡಿಮೆ ಬೆಲೆಗೆ ಆಹಾರವನ್ನು ನೀಡಲಾಗುತ್ತದೆ. ಈ ಕುರಿತು ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದ್ದು, ಈ ಸಬ್ಸಿಡಿಯನ್ನು ತೆಗೆಯಬೇಕೆಂಬ ಒತ್ತಾಯ ಕೇಳಿ ಬಂದಿತ್ತು.
ಲೋಕಸಭೆಯಲ್ಲಿನ ನಾಲ್ಕು ಕ್ಯಾಂಟೀನ್‍ಗಳ ನಿರ್ವಹಣೆ ವೆಚ್ಚ 16.43 ಕೋಟಿ ರೂ.ಗಳಾಗಿದ್ದು ಈ ಹಣವನ್ನು ಪಾವತಿಸಬೇಕು ಎಂದು ಉತ್ತರ ರೈಲ್ವೇ ಕಳೆದ ವರ್ಷ ಲೋಕಸಭೆಯ ಕಾರ್ಯಾಲಯಕ್ಕೆ ಮನವಿ ಮಾಡಿತ್ತು. ಇದು ಕೇವಲ 2017-18ನೇ ಸಾಲಿನ ವೆಚ್ಚವಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿತ್ತು.
ಪಾರ್ಲಿಮೆಂಟ್ ಹೌಸ್, ಪಾರ್ಲಿಮೆಂಟ್ ಹೌಸ್ ಅನೆಕ್ಸ್, ಪಾರ್ಲಿಮೆಂಟ್ ಹೌಸ್ ರಿಸೆಪ್ಷನ್ ಹಾಗೂ ಪಾರ್ಲಿಮೆಂಟ್ ಹೌಸ್‍ನ ಗ್ರಂಥಾಲಯಗಳಲ್ಲಿ ಉತ್ತರ ರೈಲ್ವೇ ಕ್ಯಾಂಟೀನ್ ಸ್ಥಾಪಿಸಿದೆ.
ಡಿಸೆಂಬರ್ 2015ರಲ್ಲಿ ಲೋಕಸಭಾ ಕಾರ್ಯಾಲಯವು ಜ.1, 2016ರಿಂದ ಕ್ಯಾಂಟೀನ್‍ಗಳು ಯಾವುದೇ ಲಾಭ, ಯಾವುದೇ ನಷ್ಟ ಇಲ್ಲದೇ ಕಾರ್ಯ ನಿರ್ವಹಿಸಬೇಕು ಎಂದು ಹೇಳಿತ್ತು.
ಡಿಸೆಂಬರ್ 2018ರ ಆರ್‍ಟಿಐ ಮಾಹಿತಿ ಪ್ರಕಾರ, ಲೋಕಸಭೆಯ ಕ್ಯಾಂಟೀನ್‍ಗಳಲ್ಲಿ ರೋಟಿಗೆ 2 ರೂ., ದಾಲ್ 5 ರೂ., ಅನ್ನ 7 ರೂ., ಮಸಾಲ ದೋಸೆ 18 ರೂ. ಹಾಗೂ ಚಿಕ್ಕನ್ ಕರ್ರಿ ಕೇವಲ 50 ರೂ. ದರ ನಿಗದಿಯಾಗಿತ್ತು.
– ದರ ಏರಿಕೆಯ ಮೂಲಕ ದರೋಡೆಗೆ ನಿಂತಿವೆ
– ಮೊದಲು ಡೇಟಾ ದರ ಕಡಿಮೆ ಮಾಡಿದ್ಯಾಕೆ?
ನವದೆಹಲಿ: ಟೆಲಿಕಾಂ ಕಂಪನಿಗಳ ದರ ಏರಿಕೆ ಸಮರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಆರೋಪಿಸಿದೆ.
ಈ ಕುರಿತು ಕಾಂಗ್ರೆಸ್ ಸಂಸದ ಪ್ರತಾಪ್ ಸಿಂಗ್ ಬಜ್ವಾ ಪ್ರತಿಕ್ರಿಯಿಸಿದ್ದು, ಟೆಲಿಕಾಂ ಕಂಪನಿಗಳು ಟಾರಿಫ್ ಪ್ಲಾನ್‍ಗಳ ದರವನ್ನು ಹೆಚ್ಚಿಸುವ ಮೂಲಕ ಗ್ರಾಹಕರನ್ನು ಸುಲಿಗೆ ಮಾಡುತ್ತಿವೆ. ಈ ಮೂಲಕ ಈಸ್ಟ್ ಇಂಡಿಯಾ ಕಂಪನಿ ರೀತಿ ವರ್ತಿಸುತ್ತಿವೆ. ಇದನ್ನು ಕೇಂದ್ರ ಸರ್ಕಾರ ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.
ವೋಡಾಫೋನ್-ಐಡಿಯಾ, ಭಾರ್ತಿ ಏರ್‍ಟೆಲ್ ಡಿಸೆಂಬರ್ 3 ರಿಂದ ಹಾಗೂ ರಿಲಾಯನ್ಸ್ ಜಿಯೋ ಇನ್ಫೋಕಾಮ್ ಡಿಸೆಂಬರ್ 6ರಿಂದ ಕರೆ ಹಾಗೂ ಡೇಟಾ ದರವನ್ನು ಶೇ.15ರಿಂದ 47 ರಷ್ಟು ಹೆಚ್ಚಳ ಮಾಡುವ ಕುರಿತು ತಿಳಿಸಿವೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಇದ್ದಕ್ಕಿದ್ದಂತೆ ಟಾರಿಫ್ ದರ ಹೆಚ್ಚಿಸುವುದು ಸುಲಿಗೆಗಿಂತ ಕಡಿಮೆಯೇನಲ್ಲ. ಮೊದಲು ಕರೆ ಹಾಗೂ ಡೇಟಾ ದರವನ್ನು ಕಡಿಮೆ ಮಾಡಿದ್ದರು. ಇದೀಗ ಅವರ ಜೇಬಿಗೆ ಹಣ ಬರುತ್ತಿದ್ದಂತೆ ದರ ಹೆಚ್ಚಿಸುವ ಮೂಲಕ ಸುಲಿಗೆ ಮಾಡಲು ಮುಂದಾಗಿದ್ದಾರೆ ಎಂದು ಬಿಜ್ವಾ ಆರೋಪಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಸಹ ಆಕ್ರೋಶ ವ್ಯಕ್ತಪಡಿಸಿದ್ದು, ಟೆಲಿಕಾಂ ವಲಯ ಏಕೆ 8 ಲಕ್ಷ ಕೋಟಿ ರೂ. ಸಾಲ ಹೊಂದಿದೆ. ಟೆಲಿಕಾಂ ಕಂಪನಿಗಳ ಈ ನಿರ್ಧಾರಕ್ಕೆ ಸರ್ಕಾರವೇ ಕಾರಣ. ರಿಲಾಯನ್ಸ್‍ನ ಜಿಯೋ ಕಾಲಿಟ್ಟ ನಂತರ ಈ ಬೆಲೆ ವಾರ್ ಶುರುವಾಗಿದೆ ಎಂದರು.
ಐಡಿಯಾ ವೊಡಾಫೋನ್ ಮತ್ತು ಏರ್‍ಟೆಲ್ ಕಂಪನಿಗಳು ಡಿ.3 ರಿಂದ ಹಾಗೂ ರಿಲಾಯನ್ಸ್ ಜಿಯೋ ಡಿಸೆಂಬರ್ 6ರಿಂದ ಮೊಬೈಲ್ ಕರೆ ಮತ್ತು ಡೇಟಾ ದರಗಳನ್ನು ಹೆಚ್ಚಿಸುವುದಾಗಿ ತಿಳಿಸಿವೆ. ಈ ಹಿಂದಿನ ದರಗಳಿಗೆ ಹೋಲಿಸಿದರೆ ಶೇ.42 ರಷ್ಟು ದರ ಹೆಚ್ಚಳವಾಗಲಿದೆ.
ಮಾರುಕಟ್ಟೆಯಲ್ಲಿ ಜಿಯೋಗೆ ಸ್ಪರ್ಧೆ ನೀಡಲು ಮೂರು ವರ್ಷಗಳಿಂದ ದರವನ್ನು ಇಳಿಸಿದ್ದ ಟೆಲಿಕಾಂ ಕಂಪನಿಗಳು ಈಗ ದರ ಏರಿಸುತ್ತಿವೆ. ವೊಡಾಫೋನ್ ಐಡಿಯಾ, ಏರ್‍ಟೆಲ್ ಕಳೆದ ವಾರ ಪ್ರತ್ಯೇಕ ಹೇಳಿಕೆಯನ್ನು ಬಿಡುಗಡೆ ಮಾಡಿ ಕಂಪನಿಗೆ ಆಗುತ್ತಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಬೆಲೆ ಏರಿಕೆ ಮಾಡಲಾಗುವುದು ಎಂದು ಹೇಳಿಕೊಂಡಿತ್ತು.
ಟೆಲಿಕಾಂ ಕ್ಷೇತ್ರದಲ್ಲಿ ತಂತ್ರಜ್ಞಾನ ಬದಲಾವಣೆ ಆಗುತ್ತಲೇ ಇರುತ್ತದೆ. ಹೀಗಾಗಿ ಹೊಸತನಕ್ಕೆ ತೆರೆಯಬೇಕಾದರೆ ಕೋಟ್ಯಂತರ ರೂ. ಹಣ ಹೂಡಬೇಕಾಗುತ್ತದೆ. ನಷ್ಟದಲ್ಲಿದ್ದುಕೊಂಡು ಹೂಡಿಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ದರ ಏರಿಕೆ ಅನಿವಾರ್ಯ ಎಂದು ಕಂಪನಿಗಳು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದ್ದವು.
ಮುಂಬೈ: ಕೇಂದ್ರ ಸರ್ಕಾರದ ಹಣವನ್ನು ವಾಪಸ್ ಕಳುಹಿಸಲು ದೇವೇಂದ್ರ ಫಡ್ನವಿಸ್ ಅವರನ್ನು 80 ಗಂಟೆಗಳ ಕಾಲ ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು ಎಂಬ ಸಂಸದ ಅನಂತ್‍ಕುಮಾರ್ ಹೆಗ್ಡೆ ಹೇಳಿಕೆಯನ್ನು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಿರಸ್ಕರಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 80 ಗಂಟೆಗಳ ಕಾಲ ಮುಖ್ಯಮಂತ್ರಿಯಾಗಿದ್ದಾಗ ನಾನು ಯಾವುದೇ ಹಣಕಾಸು ನಿರ್ಧಾರವನ್ನು ಕೈಗೊಂಡಿಲ್ಲ. ಈ ಕುರಿತು ನಾನು ಗಂಭೀರವಾಗಿ ಹೇಳಲು ಬಯಸುತ್ತೇನೆ ಯಾವುದೇ ಹಣವನ್ನು ಕೇಂದ್ರ ಸರ್ಕಾರಕ್ಕೆ ಮರಳಿ ಕಳುಹಿಸಿಲ್ಲ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಹಣಕಾಸು ವ್ಯವಸ್ಥೆಯನ್ನು ಪರಿಶೀಲಿಸಿದರೆ ಈ ಕುರಿತು ತಿಳಿಯುತ್ತದೆ ಸ್ಪಷ್ಟಪಡಿಸಿದರು.
ಈ ಎಲ್ಲ ಹೇಳಿಕೆಗಳು ಸುಳ್ಳು, ಬುಲೆಟ್ ರೈಲು ಯೋಜನೆಯಲ್ಲಿ ಸಹ ಕೇಂದ್ರ ಸರ್ಕಾರ ನಿಯೋಜಿಸಿದ ಕಂಪನಿ ಕಾಮಗಾರಿ ನಡೆಸುತ್ತಿದೆ. ರಾಜ್ಯ ಸರ್ಕಾರ ಬುಲೆಟ್ ರೈಲಿಗೆ ಕೇವಲ ಭೂಮಿಯನ್ನು ಮಾತ್ರ ನೀಡುತ್ತಿದೆ. ಇದನ್ನು ಹೊರತು ಪಡಿಸಿದರೆ ಯಾವುದೇ ಹಣಕಾಸು ವ್ಯವಹಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ನಡೆದಿಲ್ಲ. ಹೀಗಿರುವಾಗ ಹಣ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಕುರಿತು ಹೇಳಿಕೆಗಳು ಸುಳ್ಳು ಎಂದು ತಿಳಿಸಿದರು.
ನಾನು ಯಾವುದೇ ಪ್ರಮುಖ ನಿರ್ಧಾರವನ್ನು ಕೈಗೊಂಡಿಲ್ಲ, ಸರ್ಕಾರದ ವಿತ್ತ ವಿಭಾಗವನ್ನು ಪರಿಶೀಲಿಸಿದರೆ ಸತ್ಯ ತಿಳಿಯುತ್ತದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚಿಸಿದ್ದು ಡ್ರಾಮಾ, ಕೇಂದ್ರ ಸರ್ಕಾರದ ಹಣವನ್ನು ಸಿಎಂ ಖಾತೆಯಿಂದ ಮರಳಿ ಕೇಂದ್ರಕ್ಕೆ ಕಳುಹಿಸಲು ಫಡ್ನವಿಸ್ 80 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು ಎಂದು ಸಂಸದ ಅನಂತ್‍ಕುಮಾರ್ ಹೆಗ್ಡೆ ಮಾತನಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರೊಂದಿಗಿನ ಸಭೆಯಲ್ಲಿ ಹೆಗ್ಡೆ ಮಾತನಾಡಿದ್ದರು.
ವಿಡಿಯೋದಲ್ಲಿ ಹೇಳಿದ್ದೇನು..?
ನಿಮಗೆಲ್ಲ ಗೊತ್ತಿದೆ. ಮಹರಾಷ್ಟ್ರದಲ್ಲಿ ಕೇವಲ 80 ತಾಸಿಗೆ ನಮ್ಮವರು ಮುಖ್ಯಮಂತ್ರಿಯಾದರು. ನಂತರ ಫಡ್ನವಿಸ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಯಾಕೆ ಈ ನಾಟಕ ಮಾಡಬೇಕಿತ್ತು?. ನಮಗೇನೂ ಗೊತ್ತಿರಲಿಲ್ವ. ಬಹುಮತ ಇಲ್ಲ ಎಂದು ಗೊತ್ತಿದ್ದರೂ ಯಾಕೆ ಸಿಎಂ ಆಗಲು ಹೋದ್ರು? ಇಂದು ಸಾಮಾನ್ಯವಾಗಿ ಎಲ್ಲರನ್ನೂ ಕೇಳಬಹುದಾದ ಪ್ರಶ್ನೆಯಾಗಿದೆ.
ಸುಮಾರು 40 ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ಸಿಎಂ ಅವರ ನಿಯಂತ್ರಣದಲ್ಲಿತ್ತು. ಕಾಂಗ್ರೆಸ್ಸಿನವರು, ಎನ್‍ಸಿಪಿ ಮತ್ತು ಶಿವಸೇನೆಯವರು ಬಂದರೆ ಖಂಡಿತವಾಗಿ ಆ 40 ಸಾವಿರ ಕೋಟಿ ರೂ. ಹಣಕ್ಕೂ ತುಳಸಿ ನೀರು ಬಿಡುತ್ತಿದ್ದರು. ಅದು ಅಭಿವೃದ್ಧಿಗೆ ಹೋಗುತ್ತಿರಲಿಲ್ಲ. ಯಾಕಂದರೆ ಅದಷ್ಟೂ ಕೇಂದ್ರ ಸರ್ಕಾರದ್ದಾಗಿತ್ತು.
ಈ ಎಲ್ಲಾನು ಮುಂಚೆನೇ ಪ್ಲಾನ್ ಮಾಡಿದ್ದರು. ಹೀಗಾಗಿ ಏನಾದ್ರೂ ಆಗಲಿ ಒಂದು ದೊಡ್ಡ ನಾಟಕ ಆದರೂ ಮಾಡಲೇಬೇಕು ಅಂತ ತೀರ್ಮಾನವಾಯಿತು. ಅದಕ್ಕೋಸ್ಕರ ಸ್ವಲ್ಪ ಮಟ್ಟಿಗೆ ಹೊಂದಾಣಿಕೆ ಮಾಡಿಕೊಂಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣವಚನ ಮಾಡಿ 15 ಗಂಟೆಯೊಳಗಡೆ ಅದಷ್ಟೂ ಗಣವನ್ನು ಎಲ್ಲೆಲ್ಲಿ ತಲುಪಿಸಬೇಕಿತ್ತೋ ಅಲ್ಲಲ್ಲಿ ತಪಿಸುವ ಮೂಲಕ ವ್ಯವಸ್ಥಿತವಾಗಿ ಅದನ್ನು ರಕ್ಷಣೆ ಮಾಡುವ ಕೆಲಸವನ್ನು ಫಡ್ನವಿಸ್ ಮಾಡಿದರು.
ಸಂಪೂರ್ಣವಾಗಿ ಹಣವನ್ನು ಕೇಂದ್ರ ಸರ್ಕಾರಕ್ಕೆ ವಾಪಸ್ ನೀಡಿದರು. ಇಲ್ಲೇ ಇದ್ದರೆ ಮುಂದಿನ ಮುಖ್ಯಮಂತ್ರಿ ಮುಂದೇನು ಮಾಡಬಹುದೆಂದು ನಿಮಗೆ ಗೊತ್ತಿದೆ ಅಲ್ವ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಯ ಖಾತೆಯಲ್ಲಿ 40 ಸಾವಿರ ಕೋಟಿ ರೂಪಾಯಿ ಇತ್ತು. ಈ ದುಡ್ಡನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಖಾತೆಗೆ ವರ್ಗಾ ಮಾಡಬೇಕಿತ್ತು. ಅದಕ್ಕಾಗಿ ನಾಟಕ ಮಾಡಿದರು ಎಂದು ಹೇಳಿದ್ದು, ಸದ್ಯ ಸಂಸದರ ಈ ಹೇಳಿಕೆ ರಾಷ್ಟ್ರ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ಫಡ್ನವಿಸ್ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಜೈಪುರ: ಪಾಕಿಸ್ತಾನದಿಂದ ವಲಸೆ ಬಂದು ಸುಮಾರು 19 ವರ್ಷದಿಂದ ಭಾರತದಲ್ಲಿ ವಾಸಿಸುತ್ತಿದ್ದ 21 ಮಂದಿಗೆ ರಾಜಸ್ಥಾನ ಸರ್ಕಾರ ಬುಧವಾರ ಭಾರತೀಯ ಪೌರತ್ವ ನೀಡಿದೆ.
ಈ ಜನರು ಪಾಕಿಸ್ತಾನದಿಂದ ಸ್ಥಳಾಂತರಗೊಂಡ ನಂತರ ಇಲ್ಲಿ ಹಲವಾರು ವರ್ಷದಿಂದ ವಾಸಿಸುತ್ತಿದ್ದಾರೆ. ಆದರೆ ಅವರಿಗೆ ಭಾರತೀಯ ಪೌರತ್ವವಿಲ್ಲದ ಕಾರಣ, ಸರ್ಕಾರಿ ಉದ್ಯೋಗಗಳನ್ನು ಪಡೆಯುವಲ್ಲಿ ಮತ್ತು ವಿವಿಧ ಯೋಜನೆಗಳ ಪ್ರಯೋಜನಗಳನ್ನು ಪಡೆಯುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಜೈಪುರದ ಜಿಲ್ಲಾಧಿಕಾರಿ ಜಗ್ರೂಪ್ ಸಿಂಗ್ ಯಾದವ್ ಹೇಳಿದ್ದಾರೆ.
ಕಳೆದ ಎರಡು ತಿಂಗಳಲ್ಲಿ 35 ಪಾಕ್ ವಲಸಿಗರಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಇನ್ನೂ 28 ಪೌರತ್ವದ ಅರ್ಜಿಗಳು ಪರಿಶೀಲನೆ ನಡೆಯುತ್ತಿದೆ. 68 ಪೌರತ್ವದ ಅರ್ಜಿಗಳು ತನಿಖಾ ಹಂತದಲ್ಲಿ ಇದೆ. ಅವರಿಗೂ ಪೌರತ್ವ ನೀಡಲಾಗುವುದು. ಪಾಕ್ ವಲಸಿಗರ ಎಲ್ಲಾ ಪೌರತ್ವದ ಅರ್ಜಿಗಳನ್ನು ಸರಿಯಾಗಿ ಪರಿಶೀಲಿಸಿ ಆನ್‍ಲೈನ್ ಪ್ರಕ್ರಿಯೆ ಮೂಲಕ ಅವರಿಗೆ ಪೌರತ್ವದ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಸಿಂಗ್ ಹೇಳಿದ್ದಾರೆ.
ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ನಿತ್ಯಾನಂದ್ ರಾಯ್ ಲೋಕಸಭೆಗೆ ನೀಡಿರುವ ಮಾಹಿತಿ ಪ್ರಕಾರ, ಜುಲೈ ತಿಂಗಳಿನಲ್ಲಿ ಒಟ್ಟು 1,310 ವಲಸಿಗರಿಗೆ ರಾಜಸ್ಥಾನ ಸರ್ಕಾರ ಪೌರತ್ವವನ್ನು ನೀಡಿದೆ. ಜೋಧಪುರ್, ಜೈಸಲ್ಮೇರ್ ಮತ್ತು ಜೈಪುರ ಜಿಲ್ಲಾಧಿಕಾರಿಗಳಿಗೆ ಪೌರತ್ವ ಪತ್ರವನ್ನು ನೀಡುವ ಅಧಿಕಾರ ನೀಡಲಾಗಿದೆ ಎಂದು ಹೇಳಿದ್ದಾರೆ.
ಅಲ್ಲದೇ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳ ಹಿಂದೂಗಳು, ಸಿಖ್ಖ, ಬೌದ್ಧರು, ಜೈನರು, ಪಾರ್ಸಿ ಹಾಗೂ ಕ್ರಿಶ್ಚಿಯನ್ ಸೇರಿದಂತೆ ಆರು ಅಲ್ಪಸಂಖ್ಯಾತ ಸಮುದಾಯದ ವಲಸಿಗರಿಗೆ ಸೂಕ್ತ ತನಿಖೆ ನಂತರ ಭಾರತೀಯ ಪೌರತ್ವ ನೀಡಲು ರಾಜಸ್ಥಾನದ ಜೋಧ್ ಪುರ, ಜೈಸಲ್ಮೇರ್ ಮತ್ತು ಜೈಪುರದ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕೇಂದ್ರ ಸರ್ಕಾರ ಅಧಿಕಾರ ನೀಡಿದೆ.