Tag: Central Government

  • ನಿತ್ಯಾನಂದನ ಬಂಧನಕ್ಕೆ ಕೇಂದ್ರ ಸರ್ಕಾರ ಅಸ್ತು

    ನಿತ್ಯಾನಂದನ ಬಂಧನಕ್ಕೆ ಕೇಂದ್ರ ಸರ್ಕಾರ ಅಸ್ತು

    ಬೆಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿ, ಸ್ವಯಂ ಘೋಷಿತ ದೇವಮಾನವ ನಿತ್ಯಾನಂದನ ಬಂಧನಕ್ಕೆ ಕೇಂದ್ರ ಸರ್ಕಾರ ಅಸ್ತು ಅಂದಿದೆ.

    ನಿತ್ಯಾನಂದನ ಬಂಧನಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಕೇಂದ್ರ ಗೃಹ ಇಲಾಖೆಯು ರಾಜ್ಯ ಸರ್ಕಾರ ಅಗತ್ಯ ಪ್ರಕ್ರಿಯೆ ಆರಂಭಿಸುವಂತೆ ತುರ್ತು ಪತ್ರ ರವಾನೆ ಮಾಡಿದೆ. ಸದ್ಯ ವಿದೇಶದಲ್ಲಿ ತಲೆಮರೆಸಿಕೊಂಡಿರುವ ನಿತ್ಯಾನಂದನ ಬಂಧನಕ್ಕೆ ನೊಂದವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು.

    ನಿತ್ಯಾನಂದನ ವಿರುದ್ಧ ದೂರು ನೀಡಿದ್ದ ಮಹಿಳೆಯಿಂದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆಯಲಾಗಿತ್ತು. ನೆರೆರಾಜ್ಯ ತಮಿಳುನಾಡಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಸಂಗೀತಾ ತಾಯಿಯಿಂದಲೂ ಪತ್ರ ರವಾನೆಯಾಗಿತ್ತು. ಅಷ್ಟೇ ಅಲ್ಲದೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಸಂಗೀತಾ ತಾಯಿ ಜಾನ್ಸಿ ಅವರು ಪತ್ರ ಬರೆದಿದ್ದರು. ಕಳೆದ ತಿಂಗಳು ಈ ಎರಡೂ ಪತ್ರಗಳು ಕೇಂದ್ರ ಗೃಹ ಸಚಿವರ ಕೈಸೇರಿದ್ದವು.

    ಪತ್ರಗಳು ಕೈ ಸೇರಿದ ಬಳಿಕ ಪ್ರಕ್ರಿಯೆ ಪ್ರಾರಂಭಿಸಿದ ಕೇಂದ್ರ ಗೃಹ ಇಲಾಖೆ ನಿತ್ಯಾನಂದನ ಬಂಧನಕ್ಕೆ ಅಗತ್ಯ ಪ್ರಕ್ರಿಯೆ ಆರಂಭಿಸಲು ಸೂಚಿಸಿದೆ. ರಾಜ್ಯ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಕೇಂದ್ರ ಸರ್ಕಾರದಿಂದ ಪತ್ರ ಬರೆದಿದ್ದು, ತನಿಖಾ ಎಜೆನ್ಸಿ ಹಾಗೂ ಸರ್ಕಾರದಿಂದ ಅಗತ್ಯ ದಾಖಲೆ ಸಲ್ಲಿಸಲು ಪತ್ರದಲ್ಲಿ ಸೂಚಸಿದ್ದಾರೆ.

    ತಮಿಳುನಾಡಿನ ಸಂಗೀತಾ ಅನುಮಾಸ್ಪದ ಸಾವು ಪ್ರಕರಣದಲ್ಲೂ ನಿತ್ಯಾ ಆರೋಪಿಯಾಗಿದ್ದಾನೆ. ಈ ಪ್ರಕರಣವನ್ನ ಸಿಬಿಐ ವಹಿಸುವಂತೆ ಸಂಗೀತಾ ತಾಯಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈಗಾಗಲೇ ನಿತ್ಯಾ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ನಿತ್ಯಾನಂದನಿಗೆ ಶಾಕ್ ಕೊಡಲು ಕೇಂದ್ರ ಸರ್ಕಾರ ಕೂಡ ಸಿದ್ಧತೆ ನಡೆಸಿದೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಬ್ಲೂ ಕಾರ್ನರ್ ನೋಟಿಸ್ ಅಂದ್ರೆ ಏನು?
    ಮತ್ತೊಂದು ದೇಶದಲ್ಲಿರುವ ಅಪರಾಧಿ ಅಥವಾ ಆರೋಪಿಯ ಪತ್ತೆಗಾಗಿ ಮತ್ತು ಕುಟುಂಬದ, ವ್ಯವಹಾರ ವಿವಿರಣೆ ಪಡೆಯುದಕ್ಕಾಗಿ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗುತ್ತದೆ. ಈ ನೋಟಿಸ್ ಹೊರಡಿಸಿದಾಗ ಆರೋಪಿಗೆ ಆಶ್ರಯ ನೀಡಿದ ದೇಶ ಆತನನ್ನು ಬಂಧಿಸಲ್ಲ. ಆದರೆ ಆರೋಪಿ ಅಥವಾ ಅಪರಾಧಿಯ ಕುರಿತು ವಿವರಣೆ ನೀಡುತ್ತದೆ.

  • ದೀಪ ಆರುವ ಮುನ್ನ ಪ್ರಖರವಾಗಿ ಉರಿಯುತ್ತೆ, ಶೀಘ್ರ ಬಿಜೆಪಿ ದೀಪ ಆರುತ್ತೆ: ಎಸ್.ಆರ್.ಪಾಟೀಲ್

    ದೀಪ ಆರುವ ಮುನ್ನ ಪ್ರಖರವಾಗಿ ಉರಿಯುತ್ತೆ, ಶೀಘ್ರ ಬಿಜೆಪಿ ದೀಪ ಆರುತ್ತೆ: ಎಸ್.ಆರ್.ಪಾಟೀಲ್

    – ಚಾಣಕ್ಯನ ಸ್ಥಿತಿ ನೋಡಿ ಮರುಕ ಬರ್ತಿದೆ

    ಬಾಗಲಕೋಟೆ: ದೀಪ ಆರುವ ಮುನ್ನ ಜಾಸ್ತಿ ಉರಿಯುತ್ತೆ. ಜಾಸ್ತಿ ಉರಿದ ಬಿಜೆಪಿಯ ದೀಪ ಶೀಘ್ರ ಆರುತ್ತದೆ ಎಂದು ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಭವಿಷ್ಯ ನುಡಿದಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ದಾಟ್ ಗವರ್ನಮೆಂಟ್ ಡೇಸ್ ಆರ್ ನಂಬರ್’ ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ  ವ್ಯಂಗ್ಯವಾಡಿದರು. ಪೌರತ್ವ ತಿದ್ದುಪಡಿ ಮಸೂದೆ ಜಾರಿ ಬಂದ ಮೇಲೆ ಜಾರ್ಖಂಡ್ ಚುನಾವಣೆ ಮೊದಲ ಪರೀಕ್ಷೆ. ಅವರದ್ದೇ ಸರ್ಕಾರ ಇದ್ದರೂ ಬಿಜೆಪಿ ಸೋಲು ಅನುಭವಿಸಿದೆ. ದೇಶದಲ್ಲಿ ಮುಂಬರುವ ಎಲ್ಲಾ ರಾಜ್ಯ ಚುನಾವಣೆಗಳಲ್ಲಿ ಬಿಜೆಪಿ ಸೋಲು ಖಚಿತ ಎಂದರು.

    ಬಿಜೆಪಿ ಚಾಣಕ್ಯ ಅಮಿತ್ ಶಾ 12 ತಿಂಗಳಲ್ಲಿ ಐದು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ. ಚಾಣುಕ್ಯನ ಸ್ಥಿತಿ ನೋಡಿ ಮರುಕ ಬರುತ್ತಿದೆ. ಒಬ್ಬ ಮನುಷ್ಯ ಎಲ್ಲ ವ್ಯಕ್ತಿಗಳನ್ನು ಸ್ವಲ್ಪ ಸಮಯದವರೆಗೂ ಮೋಸ ಮಾಡಬಹುದು. ಕೆಲವು ಜನರನ್ನು ಕೊನೆವರೆಗೂ ಮೋಸ ಮಾಡಬಹುದು. ಆದರೆ ಎಲ್ಲ ಜನರನ್ನು ಎಲ್ಲ ಸಮಯದವರೆಗೂ ಮೋಸ ಮಾಡಲು ಆಗಲ್ಲ. ಇದು ಪ್ರಧಾನಿ ಮೋದಿ ಅವರಿಗೆ ಅನ್ವಯಿಸುತ್ತದೆ ಎಂದರು.

    ಪೌರತ್ವ ಕಾಯ್ದೆ ವಿರೋಧದ ವಿಚಾರ ಕಾಂಗ್ರೆಸ್ಸಿಗರು ದೇಶದ್ರೋಹಿಗಳು ಎಂದಿದ್ದ ಡಿಸಿಎಂ ಗೋವಿಂದ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಮಾತು ಕಾರಜೋಳ ವ್ಯಕ್ತಿತ್ವಕ್ಕೆ ಶೋಭೆ ತರುವ ಹೇಳಿಕೆಯಲ್ಲ. ದೇಶದ ಸ್ವಾತಂತ್ರ್ಯಕ್ಕೆ ಕಾಂಗ್ರೆಸ್ ಪಕ್ಷದ ಆರುವರೆ ಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಪಕ್ಷ ಹುಟ್ಟಿದ್ದೆ 1950ರಲ್ಲಿ. ಕಾರಜೋಳ ತಮ್ಮ ಪಕ್ಷದ ಇತಿಹಾಸ ನೋಡಿಕೊಂಡು ಮಾತನಾಡಲಿ. ಅವರು ಕೂಡಲೇ ಕಾಂಗ್ರೆಸ್ ಪಕ್ಷದ ಕ್ಷಮೆ ಕೋರಬೇಕೆಂದು ಆಗ್ರಹಿಸಿದರು.

    ಮಹದಾಯಿ ವಿಚಾರವಾಗಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಕುಡಿಯುವ ನೀರಿನ ಯೋಜನೆಗೆ ಗೋವಾದ ಮಾತು ಕೇಳಿ ಕೇಂದ್ರ ತಡೆಯಾಜ್ಞೆ ನೀಡಿದೆ. ಕೇಂದ್ರದ ನೀತಿ ಮತ್ತಷ್ಟು ನಿರಾಸೆ ಮೂಡಿಸಿದ್ದು, ತಮ್ಮದೇ ಕೇಂದ್ರ ಸರ್ಕಾರದ ಎದುರು ಮಾತನಾಡಲು ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಗಟ್ಸ್ ಇಲ್ಲ. ಬಿಎಸ್‍ವೈ 24 ಗಂಟೆ ಅನ್ನೋದು ಬಾಯಿಪಾಠ ಮಾಡಿದ್ದಾರೆ. ಅವರನ್ನು ಯಾವುದೇ ವಿಚಾರ ಕೇಳಿದರು, 24 ಗಂಟೆಯಲ್ಲಿ ಮಾಡುತ್ತೇನೆ ಎನ್ನುತ್ತಾರೆ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮಹದಾಯಿ ವಿಚಾರದಲ್ಲಿ ರಾಜ್ಯಕ್ಕೆ ನ್ಯಾಯ ತಂದುಕೊಡುವುದಾಗಿ ಹೇಳಿದ್ದರು. ಆದರೆ ಅವರು ಅದನ್ನು 24 ವರ್ಷ ಅಥವಾ ಶತಮಾನ ಎಂದು ತಿಳಿದುಕೊಂಡಿದ್ದಾರೇನೋ? ಎಂದು ವ್ಯಂಕ್ಯವಾಡಿದರು. ಸಚಿವ ಬೊಮ್ಮಾಯಿ ಅವರು ರಕ್ತದಲ್ಲಿ ಬರೆದು ಕೊಟ್ಟಿದ್ದರು. ರಾಜ್ಯ ಬಿಜೆಪಿ ನಾಯಕರಿಗೆ ಕೊನೆ ಪಕ್ಷ ತಡೆಯಾಜ್ಞೆಯನ್ನು ತೆರವು ಮಾಡಲು ಕೂಡ ಆಗಲಿಲ್ಲ ಎಂದು ಟೀಕಿಸಿದರು.

  • ಕಳಸಾ ಬಂಡೂರಿ ಯೋಜನೆ ಮತ್ತು ಗಡಿ ವಿಚಾರಕ್ಕೆ ಮತ್ತೆ ಪ್ರತಿಭಟನೆ ಶುರು

    ಕಳಸಾ ಬಂಡೂರಿ ಯೋಜನೆ ಮತ್ತು ಗಡಿ ವಿಚಾರಕ್ಕೆ ಮತ್ತೆ ಪ್ರತಿಭಟನೆ ಶುರು

    ಗದಗ: ಕಳಸಾ ಬಂಡೂರಿ ನಾಲಾ ಯೋಜನೆಗೆ ಕೇಂದ್ರ ಸರ್ಕಾರ ತಡೆಯಾಜ್ಞೆ ನೀಡಿರುವುದು ಹಾಗೂ ಕರ್ನಾಟಕದ ಬೆಳಗಾವಿ, ಕಾರವಾರ ಜಿಲ್ಲೆಗಳು ತನ್ನ ಭಾಗ ಎಂದು ಮಹಾರಾಷ್ಟ್ರ ಕ್ಯಾತೆ ತೆಗೆದಿರುವುದನ್ನು ವಿರೋಧಿಸಿ ಗದಗನಲ್ಲಿ ಕನ್ನಡ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

    ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ನಗರದ ಮಹಾತ್ಮ ಗಾಂಧೀಜಿ ಸರ್ಕಲ್‍ನಲ್ಲಿ ಕೇಂದ್ರ ಸರ್ಕಾರ ಹಾಗೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

    ಲೋಕಸಭೆ ಚುನಾವಣೆ ವೇಳೆ ಪ್ರಧಾನ ಮಂತ್ರಿಗಳು ಈ ಯೋಜನೆ ಜಾರಿಗೊಳಿಸುವ ಭರವಸೆಗಳನ್ನು ನೀಡಿದ್ದರು. ಈಗ ಕಳಸಾ ಬಂಡೂರಿ ನಾಲಾ ಯೋಜನೆಯಲ್ಲಿ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿ ಹಿಂಪಡೆದುಕೊಂಡು ತಡೆಯಾಜ್ಞೆ ನೀಡಿದೆ. ಇದು ಕರ್ನಾಟಕ ರಾಜ್ಯಕ್ಕಾದ ಅನ್ಯಾಯ. ಗೋವಾ ಸರ್ಕಾರದ ತಾಳಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ಕುಣಿಯುತ್ತಿದೆ. ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೂಡಲೇ ಕಳಸಾ ಬಂಡೂರಿ ಯೋಜನೆ ತಡೆಯಾಜ್ಞೆ ಹಿಂಪಡೆಯಬೇಕು, ಕುಡಿಯುವ ನೀರಿನ ನಾಲಾಗೆ ಕೂಡಲೇ ಮತ್ತೆ ಚಾಲನೆ ನೀಡಬೇಕೆಂದು ಆಗ್ರಹಿಸಿದರು.

    ಕರ್ನಾಟಕದ ಬೆಳಗಾವಿ ಹಾಗೂ ಕಾರವಾರ ಜಿಲ್ಲೆಗಳಿಗೆ ಮಹಾರಾಷ್ಟ್ರದ ಅಂಗ ಎಂದು ಮಹಾ ಸಿಂಎಂ ಉದ್ಧವ್ ಠಾಕ್ರೆ ಹೇಳಿಕೆಯನ್ನು ಖಂಡಿಸಲಾಯಿತು. ಮಹಾರಾಷ್ಟ್ರ ಸರ್ಕಾರ ಕರ್ನಾಟಕಕ್ಕೆ ಕೈಹಾಕುವ ಈ ದುರಾಲೋಚನೆ ಕೈಬಿಡಬೇಕು. ಯಾವ ಕಾರಣಕ್ಕೂ ಬೆಳಗಾವಿ, ಕಾರವಾರ ಅಷ್ಟೇ ಅಲ್ಲ, ನಮ್ಮ ರಾಜ್ಯದ ಯಾವ ಹಳ್ಳಿಗಳನ್ನೂ ಬಿಟ್ಟುಕೊಡುವ ಮಾತೇ ಇಲ್ಲ. ಮಹಾರಾಷ್ಟ್ರ ಮತ್ತೆ ಉದ್ಧಟತನ ತೋರಿದರೆ ಉಗ್ರವಾದ ಹೋರಾಟ ಮಾಡುವುದಾಗಿ ಸಂಘಟಕರು ಉದ್ಧವ ಠಾಕ್ರೆಗೆ ಟಕ್ಕರ್ ನೀಡಿದ್ದಾರೆ.

    ಈ ವೇಳೆ ಕೇಂದ್ರ ಸರ್ಕಾರದ ಹಾಗೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ನರೇಂದ್ರ ಮೋದಿ, ಕೇಂದ್ರ ಸಚಿವರ ಪ್ರತಿಕೃತಿ ದಹನ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು.

  • ಮುಸ್ಲಿಮರ ಪ್ರತಿಭಟನೆ ಮೂಡ್ ಬದಲಾಗಿದೆ: ಚಕ್ರವರ್ತಿ ಸೂಲಿಬೆಲೆ

    ಮುಸ್ಲಿಮರ ಪ್ರತಿಭಟನೆ ಮೂಡ್ ಬದಲಾಗಿದೆ: ಚಕ್ರವರ್ತಿ ಸೂಲಿಬೆಲೆ

    ಧಾರವಾಡ: ಪ್ರಜ್ಞಾವಂತರಾದವರಿಗೆ ಲೋಕಸಭೆ ಮತ್ತು ರಾಜ್ಯಸಭೆ ಚರ್ಚೆ ನೋಡಿದರೆ ಸಿಎಎ ಬಗ್ಗೆ ಅರಿವಾಗುತ್ತಿತ್ತು. ಲೋಕಸಭೆ, ರಾಜ್ಯಸಭೆ ಟಿವಿ ವಿಶ್ಲೇಷಣೆ ಯಾರಿಗೆ ಅರ್ಥವಾಗಿಲ್ಲವೋ ಅವರಿಗೆ ತಿಳಿಸುವ ಪ್ರಯತ್ನ ಆಡಳಿತ ಪಕ್ಷ ಮಾಡಬೇಕಿತ್ತು ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಅವರು, ಈಗ ಆಡಳಿತ ಪಕ್ಷ ಅರ್ಥ ಮಾಡಿಸುವ ಕೆಲಸ ಮಾಡುತ್ತಿದೆ. ದುರದೃಷ್ಟಕರ ಸಂಗತಿ ಅಂದರೆ ವಿರೋಧ ಪಕ್ಷಗಳ ಕೂಡ ರಾಷ್ಟ್ರೀಯ ಹಿತದ ದೃಷ್ಟಿಯ ನಿರ್ಣಯ ಬೆಂಬಲಿಸಬೇಕು. ನನ್ನ ವೋಟ್ ಬ್ಯಾಂಕ್, ನಾನು ಗೆಲ್ಲಬೇಕು ಎನ್ನುವ ದೃಷ್ಟಿಯಿಂದ ಪ್ರಚೋದನೆ ಕೊಡುವುದು ಸರಿಯಲ್ಲ. ಆದರೆ ಅದು ಆಗಿ ಹೋಗಿದೆ. ಮುಸ್ಲಿಮರಿಗೆ ಈಗ ತಾವು ತಪ್ಪು ಮಾಡುತ್ತಿದ್ದೇವೆ ಎಂದು ಅರ್ಥ ಆಗಿದೆ ಎಂದು ಹೇಳಿದರು.

    ಈಗ ಮುಸ್ಲಿಮರ ಪ್ರತಿಭಟನೆಯ ಮೂಡ್ ಬದಲಾಗಿದೆ. ಈಗ ಶಾಂತಿಯುತವಾಗಿ ಪೋಲೀಸರಿಗೆ ಹೂವು ಕೊಡುವ ಕೆಲಸ ಮಾಡಿದ್ದಾರೆ. ಪ್ರತಿಭಟನೆ ಎಲ್ಲರ ಹಕ್ಕು ಆದರೆ ಪ್ರಜಾಪ್ರಭುತ್ವ ಧಿಕ್ಕರಿಸಿ ಪ್ರತಿಭಟನೆ ಮಾಡಬಾರದು. ಮಂಗಳೂರು ಗಲಭೆ ಮೊದಲು ನ್ಯಾಯಾಂಗ ತನಿಖೆ ಆಗಬೇಕಿತ್ತು. ಮೊದಲು ಗಲಭೆಯ ತನಿಖೆಯಾಗಲಿ. ಕೇರಳದಿಂದ ಎಷ್ಟು ಜನ ಬಂದಿದ್ದರು ಎನ್ನುವುದೆಲ್ಲ ತನಿಖೆಯಾಗಬೇಕು. ಗಲಭೆ ಹಿಂದೆ ಯಾರ ಯಾರ ಕೈವಾಡ ಇದೆ ಅನ್ನೋದು ಸ್ಪಷ್ಟವಾಗಬೇಕು ಎಂದು ತಿಳಿಸಿದರು.

    ಇವತ್ತು ಮುಸ್ಲಿಮರು ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ ಮಾಡಿರುವುದು ಸಂತಸ ತಂದಿದೆ. ಯಾವುದೇ ಸರ್ಕಾರ ಯಾವುದೇ ನಿರ್ಣಯ ತಂದಾಗ ಪ್ರಶ್ನೆ ಮಾಡುವ ಹಕ್ಕು ಇದೆ. ಆದರೆ ಅದು ಪ್ರಜಾಪ್ರಭುತ್ವದ ಮೂಲಕ ಆಗಬೇಕು. ದೇಶದ ಪರ ಇರೋರು ಮತ್ತು ದೇಶ ತುಂಡರಿಸಬೇಕು ಎನ್ನುವವರ ಮಧ್ಯೆ ಈಗ ಹೋರಾಟ ನಡೆಯುತ್ತದೆ. ಇದು ಎಡಪಂತಿ ಮತ್ತು ಬಲಪಂತಿ ಮಧ್ಯದ ಹೋರಾಟ ಅಲ್ಲ ಎಂದು ಹೇಳಿದರು.

  • ಕಟ್ಟುನಿಟ್ಟಾಗಿ ಸಿಎಎ ಕಾಯ್ದೆ ಜಾರಿಗಾಗಿ ಶ್ರೀರಾಮ್ ಸೇನೆ ಒತ್ತಾಯ

    ಕಟ್ಟುನಿಟ್ಟಾಗಿ ಸಿಎಎ ಕಾಯ್ದೆ ಜಾರಿಗಾಗಿ ಶ್ರೀರಾಮ್ ಸೇನೆ ಒತ್ತಾಯ

    ಕಲಬುರಗಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಈಗಾಗಲೇ ದೇಶದಾದ್ಯಂತ ತೀವ್ರ ಸ್ವರೂಪದ ಹೋರಾಟಗಳು ನಡೆಯುತ್ತಿವೆ. ಇತ್ತ ಕಲಬುರಗಿಯಲ್ಲಿಯೂ ಸಿಎಎ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ.

    ಆದರೆ ಕಲಬುರಗಿಯ ಶ್ರೀರಾಮ್ ಸೇನೆ ಜಿಲ್ಲಾ ಘಟಕ ಪೌರತ್ವ ತಿದ್ದುಪಡಿ ಕಾಯ್ದೆ ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿದೆ. ಪೌರತ್ವ ತಿದ್ದುಪಡಿ ಮಸೂದೆ ಅಂಗೀಕರಿಸಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಅಲ್ಲದೆ ಪೌರತ್ವ ವಿರುದ್ಧದ ಹೋರಾಟಕ್ಕೆ ಮಣಿದು ಯಾವುದೇ ಕಾರಣಕ್ಕೂ ಮಸೂದೆ ಹಿಂಪಡೆಯಬಾರದು. ಸಿಎಎ ಮಸೂದೆಯನ್ನು ಯಥಾವತ್ತಾಗಿ ಕಟ್ಟು ನಿಟ್ಟಾಗಿ ಜಾರಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

    ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಲು ಶ್ರೀರಾಮ್ ಸೇನೆ ಮುಖಂಡರು, ಕಾರ್ಯಕರ್ತರು ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ಪೊಲೀಸರು ಮೆರವಣಿಗೆಗೆ ಅವಕಾಶ ನೀಡದ ಕಾರಣ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಮುಖಾಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿದ್ದಾರೆ.

  • ಸರ್ಕಾರದ ಹಣ ಪೋಲು – ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

    ಸರ್ಕಾರದ ಹಣ ಪೋಲು – ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

    ಬೆಳಗಾವಿ: ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಬೆಳಗಾವಿ ನಗರದಲ್ಲಿ ಕಮಾಂಡೆಂಟ್ ಕಂಟ್ರೋಲ್ ಸೆಂಟರ್ ಇಲ್ಲದೆ ಬಸ್ ಶೆಲ್ಟರ್ ಗಳನ್ನು ನಿರ್ಮಾಣ ಮಾಡಿರುವ ಅಧಿಕಾರಿಗಳ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಕೇಂದ್ರ ಸರ್ಕಾರದ ಮೊದಲ 20 ನಗರಗಳಲ್ಲಿ ಬೆಳಗಾವಿ ಮಹಾನನಗರ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿ ನಾಲ್ಕು ವರ್ಷ ಕಳೆದರೂ ಕೇವಲ ನಾಲ್ಕೇ ಕಾಮಗಾರಿ ಮಾಡಲಾಗಿದೆ. ಬೆಳಗಾವಿ ನಗರದ ಸ್ಮಾರ್ಟ್ ಸಿಟಿ ಅಧಿಕಾರಿಗಳು ಈ ಯೋಜನೆಯಲ್ಲಿ ಬಸ್ ಶೆಲ್ಟರ್ ಗಳ ನಿರ್ಮಾಣ ಮಾಡಿದ್ದಾರೆ. ಆದರೆ ಸ್ಮಾರ್ಟ್ ಸಿಟಿಯ ಈ ಶೆಲ್ಟರ್ ನಿರ್ಮಾಣ ಮಾಡುವ ಮುನ್ನ ಪ್ರಯಾಣಿಕರಿಗೆ ಬಸ್ ಬರುವ ವೇಳೆ ಹಾಗೂ ನಿಲ್ದಾಣದ ಬಗ್ಗೆ ತಿಳಿಸಬೇಕಿತ್ತು. ಆದರೆ ಆ ವ್ಯವಸ್ಥೆ ಸ್ಮಾರ್ಟ್ ಸಿಟಿ ಬಸ್ ಶೆಲ್ಟರ್ ನಲ್ಲಿ ಇರದಿರುವುದಕ್ಕೆ ಪ್ರಯಾಣಿಕರು ಅಸಮಾಧಾನ ಹೊರಹಾಕಿದ್ದಾರೆ.

    ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅಧಿಕಾರಿಗಳು ನಿರ್ಮಾಣ ಮಾಡುತ್ತಿರುವ ಬಸ್ ಶೆಲ್ಟರ್ ಗೆ 44.50 ಕೋಟಿ ರೂಪಾಯಿಗಳು ವೆಚ್ಚ ಮಾಡಲಾಗಿದೆ. ವೆಚ್ಚದ ಬಗ್ಗೆ ಮಾತನಾಡುವ ಸ್ಮಾರ್ಟ್ ಸಿಟಿ ಅಧಿಕಾರಿಗಳು ಇಲ್ಲಿ ಪ್ರಯಾಣಿಕರಿಗೆ ಯಾವುದೇ ವ್ಯವಸ್ಥೆ ಮಾಡದೇ ಶೆಲ್ಟರ್ ನಿರ್ಮಾಣ ಮಾಡಿ, ಬೆಳಗಾವಿ ನಗರದ ಅಂದವನ್ನು ಕೆಡಿಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

    ಕಮಾಂಡೆಂಟ್ ಕಂಟ್ರೋಲ್ ಸೆಂಟರ್ ನಿರ್ಮಾಣಕ್ಕೆ ಬೆಳಗಾವಿ ಸ್ಮಾರ್ಟ್ ಸಿಟಿ ಅಧಿಕಾರಿಗಳು 80.15 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಅದೇ ಕಮಾಂಡೆಂಟ್ ಸೆಂಟರ್ ನಿರ್ಮಾಣ ಮಾಡಲು ಬೇರೆ ಸ್ಮಾರ್ಟ್ ಸಿಟಿಯಲ್ಲಿ 45 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದ್ದಾರೆ. ಬೆಳಗಾವಿ ಸ್ಮಾರ್ಟ್ ಸಿಟಿ ಅಧಿಕಾರಿಗಳು ವಿನಾಕಾರಣ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಣವನ್ನು ಪೋಲು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿವೆ.

  • ಡಿ.24ರಂದು ಮಹದಾಯಿ ಹೋರಾಟ- ಶಂಕರ್ ಅಂಬಲಿ

    ಡಿ.24ರಂದು ಮಹದಾಯಿ ಹೋರಾಟ- ಶಂಕರ್ ಅಂಬಲಿ

    ಧಾರವಾಡ: ಮಹಾದಾಯಿ ವಿಚಾರವಾಗಿ ಕೇಂದ್ರ ಸರ್ಕಾರದ ನಿಲುವು ಖಂಡಿಸಿ ಡಿಸೆಂಬರ್ 24ರಂದು ಧಾರವಾಡದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮಹದಾಯಿಗಾಗಿ ಮಹಾವೇದಿಕೆ ರಾಜ್ಯ ಸಂಚಾಲಕ ಶಂಕರ ಅಂಬಲಿ ತಿಳಿಸಿದರು.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಪರಿಸರ ಇಲಾಖೆಯಿಂದ ಕಳಸಾ ಬಂಡೂರಿ ಅನುಮತಿಯನ್ನು ಹಿಂಪಡೆಯಲಾಗಿದೆ. ಈ ಕ್ರಮವನ್ನು ಖಂಡಿಸಿ ಡಿಸೆಂಬರ್ 24ರಂದು ಧಾರವಾಡದಲ್ಲಿ ಪ್ರತಿಭಟನೆ ನಡೆಸಲಾಗುವುದು. ರೈತರು, ವ್ಯಾಪಾರಿಗಳು, ಸಂಘ ಸಂಸ್ಥೆಗಳವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

    ಧಾರವಾಡ ಕಲಾಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸುವ ಮೂಲಕ ಪ್ರತಿಭಟನೆ ಮಾಡುತ್ತೇವೆ. ಕಳಸಾ ಬಂಡೂರಿಗೆ ಅನುಮತಿ ನೀಡಿ ನಂತರ ವಾಪಸ್ ಪಡೆಯಲು ನೀಡಿರುವ ಕಾರಣ ಸೂಕ್ತವಾಗಿಲ್ಲ. ಏಕೆಂದರೆ ಅನುಮತಿ ಕೊಡುವಾಗ ವ್ಯಾಜ್ಯ ಸುಪ್ರೀಂ ಕೋರ್ಟಿನಲ್ಲಿರುವ ಕುರಿತು ಜ್ಞಾನ ಇರಲಿಲ್ಲವೇ ಎಂದು ಪ್ರಶ್ನಿಸಿದರು.

    ಈಗ ಅನುಮತಿ ಹಿಂಪಡೆಯಲು ನೀಡಿದ ಕಾರಣ ನೋಡಿದರೆ ನಮಗೆ ಮೋಸವಾಗುತ್ತಿದೆ ಎಂದು ಅನ್ನಿಸುತ್ತಿದೆ. 2002ರಲ್ಲಿ ವಾಜಪೇಯಿ ಕಾಲದಲ್ಲಿಯೂ ಹೀಗೆ ಮಾಡಿದ್ದರು. ಅನುಮತಿ ಕೊಟ್ಟ ನಾಲ್ಕು ತಿಂಗಳ ಬಳಿಕ ಗೋವಾ ಸರ್ಕಾರದ ಕಾರಣ ನೀಡಿ ವಾಪಸ್ ಪಡೆದಿದ್ದರು. ಇದರಿಂದಾಗಿ 17 ವರ್ಷ ತಡವಾಗಿದೆ, ಈಗ ಮತ್ತೆ ಅನುಮತಿ ಕೊಟ್ಟು ವಾಪಸ್ ಪಡೆದಿದ್ದೀರಿ. ಹಾಗಾದರೆ ಇದಕ್ಕೆ ಇನ್ನು ಎಷ್ಟು ವರ್ಷ ಬೇಕಾಗುತ್ತದೆ ಎಂದು ಪ್ರಶ್ನಿಸಿದರು.

  • ಮಹದಾಯಿ ಯೋಜನೆಗೆ ತಡೆ – ಶೀಘ್ರ ಸಿಹಿ ಸುದ್ದಿ ಎಂದ ಜಾವಡೇಕರ್

    ಮಹದಾಯಿ ಯೋಜನೆಗೆ ತಡೆ – ಶೀಘ್ರ ಸಿಹಿ ಸುದ್ದಿ ಎಂದ ಜಾವಡೇಕರ್

    ನವದೆಹಲಿ: ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಲಿದೆ ಮತ್ತು ರಾಜ್ಯಕ್ಕೆ ಸಿಹಿ ಸುದ್ದಿ ನೀಡುತ್ತೇವೆ ಎಂದು ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

    ನವದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್ ನಲ್ಲಿ ಮಾತನಾಡಿದ ಅವರು, ಪ್ರಕರಣ ಸುಪ್ರೀಂ ಕೋರ್ಟಿನಲ್ಲಿರುವ ಕಾರಣ ಕೇಂದ್ರ ಸರ್ಕಾರ ಕಳಸಾ ಬಂಡೂರಿ ಯೋಜನೆಗೆ ತಾತ್ಕಾಲಿಕ ತಡೆ ನೀಡಿದೆ. ಈ ಸಂಬಂಧ ಗುರುವಾರ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಮಿತಿ ಭೇಟಿ ಮಾಡಿ ಚರ್ಚೆ ಮಾಡಿದೆ. ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

    ಈ ಸಮಸ್ಯೆಯ ಪರಿಹಾರಕ್ಕಿರುವುದು ಎರಡೇ ದಾರಿಗಳು ಒಂದು ಗೋವಾ ಮತ್ತು ಕರ್ನಾಟಕದ ಮುಖ್ಯಮಂತ್ರಿಗಳು ಸಹಮತದಿಂದ ತೀರ್ಮಾನಕ್ಕೆ ಬರಬೇಕು ಅಥಾವ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸುವ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ಅಭಿಪ್ರಾಯಪಟ್ಟರು.

  • ಮೋದಿ ಸರ್ಕಾರದಿಂದ ಮನಬಂದಂತೆ ಕಾನೂನು – ಹೊರಟ್ಟಿ

    ಮೋದಿ ಸರ್ಕಾರದಿಂದ ಮನಬಂದಂತೆ ಕಾನೂನು – ಹೊರಟ್ಟಿ

    ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಬಹಳ ಸರಳ ಎಂದು ಮೋದಿ ಸರ್ಕಾರ ತಿಳಿದುಕೊಂಡಿತ್ತು, ಹೀಗಾಗಿ ಜನರ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಕೆಲಸಕ್ಕೆ ನರೇಂದ್ರ ಮೋದಿ ಸರ್ಕಾರ ಹೋಗಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದರೆ.

    ಈ ಕುರಿತು ಧಾರವಾಡದಲ್ಲಿ ಮಾತನಾಡಿದ ಅವರು, ಕಾನೂನು ತರುವ ಮೊದಲು ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡಬೇಕಿತ್ತು. ಆದರೆ ಕೇಂದ್ರ ಸರ್ಕಾರ ನಮ್ಮನ್ನು ಯಾರೂ ಕೇಳುವವರಿಲ್ಲ ಎನ್ನುವ ಭಾವನೆಯಲ್ಲಿದೆ. ಹೀಗಾಗಿ ಮನಬಂದಂತೆ ಕಾನೂನು ರೂಪಿಸಿದೆ ಎಂದು ಹೇಳಿದರು.

    ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇದೆ. ಇಲ್ಲಿ ಒಂದು ಸಮುದಾಯದ ವಿರುದ್ಧ ದ್ವೇಷದ ರಾಜಕಾರಣ ಕಾಣುತ್ತಿದೆ. ಪ್ರತಿಭಟನೆ ಮಾಡುವುದು ಜನ್ಮಸಿದ್ಧ ಹಕ್ಕು, ಪ್ರತಿಭಟಿಸುವ ಹಕ್ಕು ಹತ್ತಿಕ್ಕುವುದು ಡಿಕ್ಟೆರ್‍ಶಿಪ್ ಆಗುತ್ತದೆ. ಆದರೆ ಯಾರಾದರೂ ಕಾನೂನು ಮೀರಿ ನಡೆದರೆ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಹೋರಾಟ ಮಾಡುವುದೇ ಬೇಡ ಎಂದರೆ ಹೇಗೆ ಎಂದು ಪ್ರಶ್ನೆ ಮಾಡಿದರು.

    ಹೋರಾಟ ಮಾಡುವುದೇ ಬೇಡ ಎನ್ನುವವವರು ನಾಳೆ ಬದುಕುವುದು ಬೇಡ, ಊಟ ಮಾಡುವುದು ಬೇಡ, ನೀರು ಕುಡಿಯುವುದು ಬೇಡ ಎಂದೂ ಹೇಳಬಹುದು ಎಂದು ಹೊರಟ್ಟಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು.

  • ಕೈಗಾದಿಂದ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೆ ಅನುಮತಿ – ಕೇಂದ್ರ ಸರ್ಕಾರಕ್ಕೆ ನೋಟಿಸ್

    ಕೈಗಾದಿಂದ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೆ ಅನುಮತಿ – ಕೇಂದ್ರ ಸರ್ಕಾರಕ್ಕೆ ನೋಟಿಸ್

    ನವದೆಹಲಿ: ಕೈಗಾ ಅಣು ವಿದ್ಯುತ್ ಸ್ಥಾವರದಿಂದ ಹೆಚ್ಚುವರಿ ಉತ್ಪಾದನೆಗೆ ಅನುಮತಿ ನೀಡಿದ ಕ್ರಮಕ್ಕೆ ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ದಕ್ಷಿಣ ವಲಯ ಹಸಿರು ನ್ಯಾಯಾಧಿಕರಣ ನೋಟಿಸ್ ನೀಡಿದೆ.

    ಇಂದು ವಿಚಾರಣೆ ನಡೆಸಿದ ದಕ್ಷಿಣ ವಲಯ ಹಸಿರು ನ್ಯಾಯಾಧಿಕರಣ, ಕೇಂದ್ರ ಅರಣ್ಯ, ಪರಿಸರ ಮತ್ತು ಹವಮಾನ ಬದಲಾವಣೆ ಇಲಾಖೆಗೆ ನೋಟಿಸ್ ನೀಡಿದೆ.

    ಕೈಗಾದಲ್ಲಿ 14 ಸಾವಿರ ಮೆಗಾ ವ್ಯಾಟ್ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೆ ಅನುಮತಿ ನೀಡಿದ್ದ ಕೇಂದ್ರ ಸರ್ಕಾರದ ನಡೆಯನ್ನು ಪ್ರಶ್ನಿಸಿ ಸ್ಥಳೀಯ ಗ್ರಾಮಸ್ಥರು ಅರ್ಜಿ ಸಲ್ಲಿಸಿದ್ದರು. ಪಶ್ಚಿಮ ಘಟ್ಟಗಳು ಪರಿಸ್ಥಿತಿ ಸೂಕ್ಷ್ಮ ವಲಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಲೆಕ್ಕಿಸದೆ ಅನುಮತಿ ನೀಡಿದೆ, ಇದು ಸರಿಯಾದ ನಿರ್ಣಯ ಅಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.

    ಅರ್ಜಿದಾರರ ಪರ ವಾದ ಮಂಡಸಿದ ವಕೀಲ ದೇವದತ್ ಕಾಮತ್, ಜಾವೇದೂರ್ ರೆಹಮಾನ್, ಬಿ.ಎಸ್ ಪೈ ಅನುಮತಿಯನ್ನು ರದ್ದು ಮಾಡುವಂತೆ ಮನವಿ ಮಾಡಿದರು. ವಾದ ಆಲಿಸಿದ ದಕ್ಷಿಣ ಪೀಠ ನೋಟಿಸ್ ನೀಡಿ ಜನವರಿ 28ಕ್ಕೆ ವಿಚಾರಣೆ ಮುಂದೂಡಿದೆ.