Tag: Central Government

  • ಕೊಳ್ಳಿ ಹಿಡಿದು ಬೀದಿಗಿಳಿದ ಪ್ರತಿಭಟನಾಕಾರರು – ಉಡುಪಿಯಲ್ಲಿ ಕೇಂದ್ರದ ವಿರುದ್ಧ ಪೌರತ್ವದ ಕಿಚ್ಚು

    ಕೊಳ್ಳಿ ಹಿಡಿದು ಬೀದಿಗಿಳಿದ ಪ್ರತಿಭಟನಾಕಾರರು – ಉಡುಪಿಯಲ್ಲಿ ಕೇಂದ್ರದ ವಿರುದ್ಧ ಪೌರತ್ವದ ಕಿಚ್ಚು

    ಉಡುಪಿ: ಕೇಂದ್ರ ಸರ್ಕಾರದ ಎನ್.ಆರ್.ಸಿ, ಸಿಎಎ, ಎನ್.ಪಿ.ಆರ್ ಕಾಯ್ದೆಯ ವಿರುದ್ಧ ಉಡುಪಿಯಲ್ಲಿ ಜನಾಕ್ರೋಶದ ಪ್ರತಿಭಟನೆ ನಡೆಯಿತು. ದೇಶಾದ್ಯಂತ ಪೌರತ್ವದ ಕಿಚ್ಚು ಶುರುವಾಗಿದ್ದು, ಇಲ್ಲಿ ಪಂಜು ಹಿಡಿದೇ ಜನ ಬೀದಿಗಿಳಿದರು.

    ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆಂಕಿ ಪ್ರತಿಭಟನೆಯ ಕರೆ ನೀಡಿತ್ತು. ಉಡುಪಿಯ ಸಮಾನ ಮನಸ್ಕ ಸಂಘಟನೆಗಳು ಕೈಜೋಡಿಸಿ ಪ್ರತಿಭಟನೆ ಮಾಡಿದವು. ಕೋಮು ಸೌಹಾರ್ದ ವೇದಿಕೆ, ಮುಸಲ್ಮಾನ ಸಂಘಟನೆ, ಪ್ರಗತಿಪರ ಸಂಘದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

    ನೂರಾರು ಜನ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ನಗರದ ಅಜ್ಜರಕಾಡು ಹುತಾತ್ಮ ಸೈನಿಕರ ಯುದ್ಧ ಸ್ಮಾರಕ ಬಳಿ ಜಮಾಯಿಸಿದ ಜನ ಕೊಳ್ಳಿ ಹಿಡಿದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಪಂಜಿನ ಮೆರವಣಿಗೆಗೆ ಚಾಲನೆ ನೀಡಿ, ನಗರದ ಪುರಭವನ ರಸ್ತೆಯವರೆಗೆ ಪಂಜು ಹಿಡಿದು ಮೆರವಣಿಗೆ ಮಾಡಿದರು. ರಸ್ತೆಗಿಳಿಯಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು.

    ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲೇ ಕಾಯ್ದೆ ವಿರೋಧಿ ಹೋರಾಟ ಆರಂಭವಾಗಿದ್ದು, ಪ್ರತಿಭಟನೆ ಅಲ್ಲಲ್ಲಿ ನಿರಂತರವಾಗಿ ನಡೆಯಲಿದೆ ಎಂದು ಸಂಘಟನೆಗಳು ಎಚ್ಚರಿಕೆ ನೀಡಿದವು.

    ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸುವ ಸಿದ್ಧತೆ ನಡೆದಿತ್ತು, ಪೊಲೀಸ್ ಇಲಾಖೆ ಅವಕಾಶ ಕೊಡದ ಕಾರಣ ಇಷ್ಟಕ್ಕೆ ಸೀಮಿತ ಮಾಡಬೇಕಾಯ್ತು ಅಂತ ಪ್ರತಿಭಟನಾಕಾರ ರಮೇಶ್ ಕಾಂಚನ್ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರದ ವ್ಯವಸ್ಥೆ ಪ್ರತಿಭಟಿಸುವ ಹಕ್ಕನ್ನೂ ಕಿತ್ತುಕೊಂಡಿದೆ. ಜನಾಕ್ರೋಶ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತದೆ ಎಂದು ಹೇಳಿದರು.

  • ಸಿಎಎ ಬೆಂಬಲಿಸಿ ಜನವರಿ 25 ರಂದು ಕಲಬುರಗಿಯಲ್ಲಿ ವೈದ್ಯರ ರ‍್ಯಾಲಿ

    ಸಿಎಎ ಬೆಂಬಲಿಸಿ ಜನವರಿ 25 ರಂದು ಕಲಬುರಗಿಯಲ್ಲಿ ವೈದ್ಯರ ರ‍್ಯಾಲಿ

    ಕಲಬುರಗಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆಯನ್ನು ಸ್ವಾಗತಿಸಿ ಅದರ ಬಗ್ಗೆ ಜನಜಾಗೃತಿ ಮೂಡಿಸಲು ಕಲಬುರಗಿ ನ್ಯಾಷನಲ್ ಮೆಡಿಕೊಸ್ ಸಂಘಟನೆ ಜನವರಿ 25ರಂದು ಕಲಬುರಗಿ ನಗರದಲ್ಲಿ ರ‍್ಯಾಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘಟನೆಯ ಸದಸ್ಯೆ ಡಾ.ಪ್ರತಿಮಾ ಕಾಮರೆಡ್ಡಿ ಹಾಗೂ ಸಂಘಟಕರು ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ.

    ಈಗಾಗಲೇ ಈ ಕಾಯ್ದೆ ಸಂಸತ್ತಿನ ಎರಡು ಮನೆಯಲ್ಲಿ ಪಾಸಾಗಿ ಈಗಾಗಲೆ ದೇಶದಾದ್ಯಂತ ಜಾರಿಯಾಗಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಆದರೆ ಕೆಲವರು ಈ ಕಾಯ್ದೆ ಕುರಿತು ಅನಾವಶ್ಯಕ ರಾಜಕಾರಣ ಮಾಡುತ್ತ ಅಲ್ಪಸಂಖ್ಯಾತರು ಇದನ್ನು ವಿರೋಧಿಸುವಂತೆ ಕಾಯ್ದೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಈ ಕಾಯ್ದೆಯ ನಿಜಾಂಶ ಜನರಿಗೆ ತಿಳಿಯುವ ಅವಶ್ಯಕತೆಯಿದ್ದು, ಇದಕ್ಕೆ ನಮ್ಮ ಹಲವು ವೈದ್ಯರು ಸಾಥ್ ನೀಡಿದ್ದಾರೆ. ಇದರ ಬಗ್ಗೆ ಜಾಗೃತಿಗಾಗಿ ವೈದ್ಯರೆಲ್ಲ ರಸ್ತೆಗಿಳಿದು ಸಿಎಎ ಜಾಗೃತಿ ಮೂಡಿಸಲು ನಿರ್ಧರಿಸಿದ್ದಾರೆ. ಅದರ ಮೊದಲ ಭಾಗವಾಗಿ ಜನವರಿ 25 ರಂದು ರ‍್ಯಾಲಿ ನಡೆಸಲಾಗುತ್ತಿದ್ದು, ನಗರದ ನಗರದ ವಲ್ಲಭಭಾಯಿ ಪಟೇಲ್ ಸರ್ಕಲ್ ನಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ರ್ಯಾಲಿ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

    ಈ ರ‍್ಯಾಲಿಗೇ ಆರೋಗ್ಯ ಭಾರತ, ಮೆಡಿವಿಷನ್, ಆಯುಷ್ ಡಾಕ್ಟರ್ಸ್ ಫೆಡರೇಶನ್, ಫಾರ್ಮಸಿ ವಿಭಾಗ, ನರ್ಸಿಂಗ್ ವಿಭಾಗದ ಸುಮಾರು 5 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ವೈದ್ಯರು ಭಾಗವಹಿಸಿ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಸಿಎಎಗೆ ಬೆಂಬಲಿಸುವ ಮನವಿ ಪತ್ರ ನೀಡಲಾಗುವುದು. ಜೊತೆಗೆ ಈಗಾಗಲೇ ಕೆಲವೊಂದು ವೈದ್ಯರ ತಂಡ ಸಿಎಎ ವಿರುದ್ಧವಾಗಿ ಪ್ರತಿಭಟನೆ ಮಾಡಿದೆ ಅದರಲ್ಲಿ ಮೆಡಿಕಲ್ ಫೆಟರ್ನಿಟಿ ಎಲ್ಲರ ವಿರೋಧವಿದೆ ಎಂದು ಹೇಳಿಕೆ ನೀಡಲಾಗಿದೆ. ಆದರೆ ಜಿಲ್ಲೆಯ ಸಾವಿರಾರು ವೈದ್ಯರು ಸಿಎಎಗೆ ಬೆಂಬಲ ನೀಡಿದ್ದಾರೆ. ಕೇಂದ್ರ ಸರ್ಕಾರ ದೇಶದ ಭದ್ರತೆ ಹಾಗೂ ಐಕ್ಯತೆ ಸಾರಲು ಈ ಸಿಎಎ ಜಾರಿಮಾಡಲಾಗಿದೆ ಎಂದು ಕರ್ನಾಟಕ ನ್ಯಾಷನಲ್ ಮೆಡಿಕೊಸ್ ಸಂಘಟನೆಯ ಉತ್ತರ ಕರ್ನಾಟಕ ವಿಭಾಗದ ಕಾರ್ಯದರ್ಶಿಗಳಾದ ಡಾ.ಕುಮಾರ್ ಅಂಗಡಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

  • ಗಮನಿಸಿ: ಎರಡು ದಿನ ಬ್ಯಾಂಕ್ ಸೇವೆ ಸಿಗಲ್ಲ!

    ಗಮನಿಸಿ: ಎರಡು ದಿನ ಬ್ಯಾಂಕ್ ಸೇವೆ ಸಿಗಲ್ಲ!

    ಬೆಂಗಳೂರು: ಜನವರಿ 31 ರಿಂದ ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರಕ್ಕೆ ಬ್ಯಾಂಕ್ ಒಕ್ಕೂಟಗಳು ಕರೆ ನೀಡಿವೆ. ಹೀಗಾಗಿ ಜನವರಿ 31 ಹಾಗೂ ಫೆಬ್ರವರಿ 1 ರಂದು ಬ್ಯಾಂಕ್ ಸೇವೆ ಜನರಿಗೆ ಲಭ್ಯವಿರಲ್ಲ.

    ಒಂಬತ್ತು ಕಾರ್ಮಿಕ ಸಂಘಟನೆಗಳನ್ನು ಪ್ರತಿನಿಧಿಸುವ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಈ ಮುಷ್ಕರಕ್ಕೆ ಕರೆ ನೀಡಿದೆ. ವೇತನ ಪರಿಷ್ಕರಣೆ, ಐದು ದಿನ ಬ್ಯಾಂಕಿಂಗ್ ಸೇವೆ ಮತ್ತು ಹೊಸ ಪಿಂಚಣಿ ವ್ಯವಸ್ಥೆ ರದ್ದು ಸೇರಿದಂತೆ ಸುಮಾರು 12 ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

    ಒಂದು ವೇಳೆ ಕೇಂದ್ರ ಸರ್ಕಾರ ಸಕಾರತ್ಮಾಕವಾಗಿ ಸ್ಪಂದಿಸದೇ ಇದ್ದರೆ, ಏಪ್ರಿಲ್ 1 ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವ ಎಚ್ಚರಿಕೆಯನ್ನು ಭಾರತೀಯ ಬ್ಯಾಂಕ್ ಅಸೋಸಿಯೇಷನ್ ಮುಖ್ಯಸ್ಥರು, ಹಣಕಾಸು ಸೇವಾ ಇಲಾಖೆಯ ಕಾರ್ಯದರ್ಶಿ ಹಾಗೂ ಕಾರ್ಮಿಕ ಆಯೋಗದ ಮುಖ್ಯ ಆಯುಕ್ತರಿಗೆ ಪತ್ರದ ಮೂಲಕ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

  • ಪಂಚರ್ ಆಗಿರೋ ಆರ್ಥಿಕತೆಯನ್ನು ಸರಿ ಮಾಡಲು ನಾವೆಲ್ಲ ಪಂಚರ್ ವಾಲಾಸ್ ಆಗಿದ್ದೇವೆ: ಭವ್ಯ ನರಸಿಂಹಮೂರ್ತಿ

    ಪಂಚರ್ ಆಗಿರೋ ಆರ್ಥಿಕತೆಯನ್ನು ಸರಿ ಮಾಡಲು ನಾವೆಲ್ಲ ಪಂಚರ್ ವಾಲಾಸ್ ಆಗಿದ್ದೇವೆ: ಭವ್ಯ ನರಸಿಂಹಮೂರ್ತಿ

    ಧಾರವಾಡ: ನಾವು ಪಂಚರ್ ತೆಗೆಯುವವರು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಇದೊಂದು ಕೋಮು ಶಬ್ದ. ನಾವೆಲ್ಲ ಪಂಚರ್ ವಾಲಾಸ್. ಅವರು ನಮ್ಮ ಆರ್ಥಿಕತೆಯನ್ನು ಪಂಚರ್ ಮಾಡುತ್ತಿದ್ದಾರೆ. ಅದನ್ನು ರಿಪೇರಿ ಮಾಡಲು ನಾವು ಪಂಚರ್ ವಾಲಾಸ್ ಆಗಿದ್ದೇವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಾಮಾಜಿಕ ಕಾರ್ಯಕರ್ತೆ ಭವ್ಯಾ ನರಸಿಂಹಮೂರ್ತಿ ವಾಗ್ದಾಳಿ ನಡೆಸಿದ್ದಾರೆ.

    ಎನ್‌ಆರ್‌ಸಿ, ಸಿಎಎ ಮತ್ತು ಎನ್‍ಪಿಆರ್ ಖಂಡಿಸಿ ಧಾರವಾಡದಲ್ಲಿ ‘ವಿ ದಿ ಪೀಪಲ್ ಆಫ್ ಇಂಡಿಯಾ’ ಸಂಘಟನೆಯಿಂದ ಮಹಿಳಾ ಸಮಾವೇಶವನ್ನು ಏರ್ಪಡಿಸಲಾಗಿತ್ತು. ನಗರದ ಅಂಜುಮನ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 3 ಸಾವಿರಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು. ಸಮಾವೇಶದ ವೇದಿಕೆ ಮೇಲೆ ಕವಿತಾ ರೆಡ್ಡಿ, ಬಿ. ಆರ್ ಅಪರ್ಣಾ, ಭವ್ಯಾ ನರಸಿಂಹಮೂರ್ತಿ ಸೇರಿ ಹಲವರು ಕೇಂದ್ರ ಸರ್ಕಾರದ ಎನ್‌ಆರ್‌ಸಿ, ಸಿಎಎ ಹಾಗೂ ಎನ್‍ಪಿಆರ್ ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಭವ್ಯಾ ನರಸಿಂಹಮೂರ್ತಿ ಮಾತನಾಡಿ, ಈ ಕಾಯ್ದೆಗೆ ಬೆಂಬಲ ನೀಡಲು ಅಮಿತ್ ಶಾ ಅವರು ಒಂದು ನಂಬರ್ ಕೊಟ್ಟು ಮಿಸ್ ಕಾಲ್ ಕೊಡಲು ಹೇಳಿದ್ದರು. ಬಳಿಕ ಅದಕ್ಕೆ 52 ಲಕ್ಷ ಮಿಸ್ ಕಾಲ್ ಬಂದಿದೆ ಎಂದರು. ಸರ್ಕಾರದ ಬಳಿ ಬಹುಮತವಿದೆ. ಅದಕ್ಕೆ ನಾವು ಈ ಕಾಯ್ದೆಯನ್ನು ತರುತ್ತೇವೆ ಎಂದು ಅವರು ಅಂತಿದ್ದಾರೆ. ಈ ಸರ್ಕಾರ ಬರಲು ನಾವೇ ಕಾರಣ ಎಂಬುದನ್ನು ಅವರು ಮರೆತಿದ್ದಾರೆಂದು ಹರಿಹಾಯ್ದರು.

    ಸಿಎಎ, ಎನ್‌ಆರ್‌ಸಿ ಕಾಯ್ದೆಗೆ ದೊಡ್ಡ ತಜ್ಞರು ಹಾಗೂ ಮೈಕ್ರೋಸಾಫ್ಟ್ ಸಿಇಒ ಕೂಡಾ ವಿರೋಧ ಮಾಡಿದ್ದಾರೆ. ಈ ಕಾಯ್ದೆ ಬಂದರೆ ಈ ದೇಶಕ್ಕೆ ಎಂಥ ಅಪಘಾತ ಕಾದಿದೆ ಎಂದು ಅವರಿಗೆ ಗೊತ್ತು ಎಂದು ಮಾತಿನ ಚಾಟಿ ಬೀಸಿದರು.

  • ಕೇಂದ್ರ ಸರ್ಕಾರ ಮುಸ್ಲಿಂ ವಿರೋಧಿ ಅಲ್ಲ, ಹಿಂದೂ ವಿರೋಧಿ: ಪ್ರಕಾಶ್ ಅಂಬೇಡ್ಕರ್

    ಕೇಂದ್ರ ಸರ್ಕಾರ ಮುಸ್ಲಿಂ ವಿರೋಧಿ ಅಲ್ಲ, ಹಿಂದೂ ವಿರೋಧಿ: ಪ್ರಕಾಶ್ ಅಂಬೇಡ್ಕರ್

    ಧಾರವಾಡ: ಸಂವಿಧಾನ ಅಷ್ಟೇ ಅಲ್ಲ, ಈ ದೇಶದ ಜನರೇ ತೊಂದರೆಯಲ್ಲಿದ್ದಾರೆ. ಈಗ ಸರ್ಕಾರ ಮುಸ್ಲಿಮರ ಮುಖ ತೋರಿಸುತ್ತಿದೆ, ಆದರೆ ನಿಜವಾಗಿ ಇದು ಹಿಂದೂ ವಿರೋಧಿ ಸರ್ಕಾರ ಎಂಬ ಆರೋಪ ಇದೆ ಎಂದು ಬಿ.ಆರ್ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.

    ಧಾರವಾಡದಲ್ಲಿ ಮಾತನಾಡಿದ ಪ್ರಕಾಶ್ ಅಂಬೇಡ್ಕರ್, 70 ವರ್ಷದಲ್ಲಿ ಜನರು ಜಾಗೃತರಾಗಿದ್ದಾರೆ. ರಾಜಕಾರಣಿಗಳು ನಿಜ ಹೇಳುತ್ತಾರೋ? ಸುಳ್ಳು ಹೇಳ್ಳುತ್ತಾರೋ ಎಂಬುದನ್ನು ಜನರು ತಿಳಿಯುತ್ತಿದ್ದಾರೆ. ಮೋದಿ ಅವರು ಜನರ ದಾರಿ ತಪ್ಪಿಸುವ ಮಾತು ಹೇಳಬಾರದು ಎಂದು ಕಿಡಿಕಾರಿದರು.

    ಅಸ್ಸಾಂನಲ್ಲಿ 5 ಲಕ್ಷ ಮುಸ್ಲಿಂ ಹಾಗೂ 14 ಲಕ್ಷ ಹಿಂದೂ ಜನರಿದ್ದಾರೆ. 6 ಕೋಟಿ ಜನಸಂಖ್ಯೆ ಇರುವ ರಾಜ್ಯದ ಸ್ಥಿತಿ ಏನಾಗಬಹುದು ವಿಚಾರ ಮಾಡಿ. ಜೆಎನ್‍ಯು ಗಲಾಟೆ ಒಳಗಿನ ವಿಷಯದಲ್ಲಿ ಹಿಂದೂ ಸಂಘಟನೆ ಹೆಸರಿನಲ್ಲಿ ಅಲ್ಲಿ ಗುಂಡಾಗಿರಿ ನಡೆದಿದ್ದಕ್ಕೆ ನಾನು ವಿರೋಧ ವ್ಯಕ್ತಪಡಿಸುತ್ತೇನೆ ಎಂದರು.

    ಆರ್‌ಎಸ್‌ಎಸ್‌ ಮುಖ ಇದು, ನಮ್ಮ ಮಾತು ಕೇಳದೆ ಇದ್ರೆ ಹೊಡೆಯುತ್ತೇವೆ ಎನ್ನುವುದೇ ಇದರ ಅರ್ಥ ಎಂದು ಆರೋಪಿಸಿದರು. ಸಂವಿಧಾನ ಸುಡುವ ಮಾತನ್ನ ಪ್ರಸಾದ ಎನ್ನುವವರು ಮಾತನಾಡಿದ್ದಾರೆ. ಆರ್‌ಎಸ್‌ಎಸ್‌ ಮುಖವೇ ಹಿಟ್ಲರಿಸಂ, ನಮ್ಮ ಜೊತೆ ಬರದೆ ಇದ್ದರೆ ಹೊಡೆಯುತ್ತೇವೆ ಅಂತ ಮುಸೊಲಿನಿ ಹಾಗೂ ಹಿಟ್ಲರ್ ಕೂಡಾ ಹೇಳುತ್ತಿದ್ದರು. ಅದನ್ನೇ ಆರ್‌ಎಸ್‌ಎಸ್‌ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

    2024ಕ್ಕೆ ಚುನಾವಣೆ ಇದೆ, ಅಲ್ಲಿವರೆಗೆ ಇವರು ಸರ್ಕಾರ ತೆಗೆದುಕೊಂಡು ಹೋಗಬೇಕಿದೆ. ಅದಕ್ಕೆ ಎನ್‌ಆರ್‌ಸಿ ತಂದಿದ್ದಾರೆ. ಇದರಿಂದಲೇ ಅವರು ತುರ್ತು ಪರಿಸ್ಥಿತಿಯನ್ನ ತಂದು ಜನರನ್ನ ಒತ್ತೆಯಿಡುವ ಕೆಲಸ ಮಾಡುತಿದ್ದಾರೆ. ಈ ಹಿಂದೆ ಅನಂತ್‍ಕುಮಾರ ಹೆಗಡೆ ಸಂವಿಧಾನ ಬದಲಾವಣೆ ಮಾಡುವ ಮಾತನ್ನ ಹೇಳಿದ್ದರು. ಆರ್‌ಎಸ್‌ಎಸ್‌ ಮನಸ್ಸಿನ ಮಾತನ್ನ ಅವರು ಹೇಳಿದ್ದರು ಎಂದು ಪ್ರಕಾಶ್ ಹರಿಹಾಯ್ದರು.

    ಪ್ರತಿ 10 ವರ್ಷಕ್ಕೊಮ್ಮೆ ಸೆನ್ಸಸ್ ಆಗುತ್ತೆ. ಅದರಲ್ಲಿ ಜನಸಂಖ್ಯೆ ಗೊತ್ತಾಗುತ್ತೆ. ದೇಶದಲ್ಲಿ ಹಲವು ಸಮಸ್ಯೆಗಳಿವೆ, ಫೆಬ್ರವರಿಗೆ ಹೊಸ ಬಜೆಟ್ ಬರಲಿದೆ. ಸರ್ಕಾರದ ಬಳಿ 11 ಲಕ್ಷ ಕೋಟಿ ಹಣ ಮಾತ್ರ ಇದೆ. ಆದರೆ ಸರ್ಕಾರ ನಡೆಸಲು 13 ಲಕ್ಷ ಕೋಟಿ ಬೇಕು. ಅವರ ಬಳಿ ಅಷ್ಟು ಹಣ ಇಲ್ಲದ ಕಾರಣ ಸರ್ಕಾರ ಇಂಥದ್ದೆಲ್ಲ ಕೆಲಸ ಮಾಡುತ್ತಿದೆ ಎಂದು ಹೇಳಿದರು.

    ನಿಜ ಮುಚ್ಚಿ ಹಾಕಲು ಪ್ರಯತ್ನ ನಡೆದಿದ್ದು ದನ್ನ ನಾವು ಜನರ ಬಳಿ ತೆಗೆದುಕೊಂಡು ಹೋಗುತಿದ್ದೆವೆ. ಜನ ಕೂಡಾ ಅರ್ಥಿಕತೆ ಬಗ್ಗೆ ಮಾತನಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ಧ್ವನಿ ಎತ್ತುವ ಅವಶ್ಯಕತೆ ಇದೆ ಎಂದು ಕಿಡಿಕಾರಿದರು.

  • ಬಾಕಿ ಹಣ ಪಾವತಿಸದಿದ್ರೆ ನಗದು ರಹಿತ ವೈದ್ಯಕೀಯ ಸೇವೆ ಸ್ಥಗಿತ- ಕೇಂದ್ರಕ್ಕೆ ಎಚ್ಚರಿಕೆ

    ಬಾಕಿ ಹಣ ಪಾವತಿಸದಿದ್ರೆ ನಗದು ರಹಿತ ವೈದ್ಯಕೀಯ ಸೇವೆ ಸ್ಥಗಿತ- ಕೇಂದ್ರಕ್ಕೆ ಎಚ್ಚರಿಕೆ

    ಬೆಂಗಳೂರು: ಕೇಂದ್ರ ಸರ್ಕಾರವು ಆರೋಗ್ಯ ಯೋಜನೆಗಳಡಿ ಬಾಕಿ ಹಣವನ್ನು ಪಾವತಿಸದಿದ್ದರೆ ನಗದು ರಹಿತ ವೈದ್ಯಕೀಯ ಸೇವೆಯನ್ನು ರದ್ದುಗೊಳಿಸುವುದಾಗಿ ಖಾಸಗಿ ಆಸ್ಪತ್ರೆಗಳು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ. ಅಷ್ಟೇ ಅಲ್ಲದೆ 6 ವಾರಗಳಲ್ಲಿ ಬಾಕಿ ಹಣ ಪಾವತಿಸಲೇಬೇಕು ಅಂತ ಗಡುವು ನೀಡಿವೆ.

    ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‍ಎಸ್), ಮಾಜಿ ಸೈನಿಕರ ನೆರವಿನ ಆರೋಗ್ಯ ಯೋಜನೆಯಡಿ (ಇಸಿಎಚ್‍ಎಸ್) ಕೇಂದ್ರ ಸರ್ಕಾರವು ರಾಜ್ಯದ ಆಸ್ಪತ್ರೆಗಳಿಗೆ ಸುಮಾರು 200 ಕೋಟಿ ರೂ. ಗಳನ್ನ ಪಾವತಿಸಬೇಕಿದೆ. ಈ ಯೋಜನೆಗಳಡಿ ಚಿಕಿತ್ಸಾ ವೆಚ್ಚವನ್ನೂ ಪರಿಷ್ಕರಿಸುವಂತೆ ಖಾಸಗಿ ಆಸ್ಪತ್ರೆಗಳು ಬೇಡಿಕೆ ಇಟ್ಟಿದ್ದವು. ಆದರೆ ಕೇಂದ್ರ ಸರ್ಕಾರ, ಈ ಬೇಡಿಕೆಯನ್ನು ತಿರಸ್ಕರಿಸಿದೆ. ಅದೇ ರೀತಿ, ಜನರಲ್ ಇನ್ಶುರೆನ್ಸ್ ಪಬ್ಲಿಕ್ ಸೆಕ್ಟರ್ ಅಸೋಸಿಯೇಷನ್ (ಜಿಪ್ಸಾ) ಅಡಿ ಕಾರ್ಯ ನಿರ್ವಹಿಸುತ್ತಿರುವ ವಿಮಾ ಕಂಪನಿಗಳೂ ಚಿಕಿತ್ಸೆಗಳಿಗೆ ಪರಿಷ್ಕೃತ ಪ್ಯಾಕೇಜ್ ದರವನ್ನು ಪಾವತಿಸಿಲ್ಲ ಎಂದು ಆರೋಪಿಸಿ, ನಗದು ರಹಿತ ವಿಮಾ ಸೌಲಭ್ಯ ಕೈಬಿಡಲು ಆಸ್ಪತ್ರೆಗಳು ನಿರ್ಧರಿಸಿವೆ.

    ಭಾರತೀಯ ವೈದ್ಯಕೀಯ ಸಂಘ (ಐಎಂಎ), ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‍ಗಳ ಅಸೋಸಿಯೇಷನ್ (ಫಾನಾ), ಆರೋಗ್ಯ ಪೂರೈಕೆದಾರರ ಸಂಘ (ಎಎಚ್‍ಪಿಐ) ಸೇರಿದಂತೆ ವಿವಿಧ ಸಂಘಟನೆಗಳು ನಗದು ರಹಿತ ಸೇವೆ ಸ್ಥಗಿತ ಮಾಡುವ ನಿರ್ಧಾರಕ್ಕೆ ಬೆಂಬಲ ಸೂಚಿಸಿವೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಸೇವೆ ಒದಗಿಸುವ ವಿಚಾರವಾಗಿ `ಫಾನಾ’ ಮತ್ತು `ಜಿಪ್ಸಾ’ ಜತೆಗೆ 2014ರಲ್ಲಿ ಒಪ್ಪಂದವಾಗಿತ್ತು. ಜಿಪ್ಸಾದಡಿ ನ್ಯಾಷನಲ್ ಇನ್ಶುರೆನ್ಸ್, ನ್ಯೂ ಇಂಡಿಯಾ ಅಶ್ಯುರೆನ್ಸ್, ಓರಿಯೆಂಟಲ್ ಇನ್ಶುರೆನ್ಸ್, ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ವಿಮಾ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.

    ಚಿಕಿತ್ಸಾ ವೆಚ್ಚದಲ್ಲಿ ಶೇ. 40ರಷ್ಟು ವ್ಯತ್ಯಯವಾಗುತ್ತಿದೆ ಎಂಬ ಕಾರಣ ನೀಡಿ, ನಗದು ರಹಿತ ಸೇವೆಯನ್ನು ನಿಲ್ಲಿಸುವುದಾಗಿ ಕಳೆದ ವರ್ಷ ಖಾಸಗಿ ಆಸ್ಪತ್ರೆಗಳು ಘೋಷಿಸಿದ್ದವು. ಬಳಿಕ ಚಿಕಿತ್ಸಾ ವೆಚ್ಚ ಪರಿಷ್ಕರಣೆಗೆ ಜಿಪ್ಸಾ ಒಪ್ಪಿದ ಹಿನ್ನೆಲೆಯಲ್ಲಿ ನಗದು ರಹಿತ ಸೇವೆ ಮುಂದುವರಿದಿತ್ತು. ಈಗ ನಿಗದಿತ ಮೊತ್ತವನ್ನು ಪಾವತಿಸದ ಕಾರಣ ಒಪ್ಪಂದ ಕಡಿದುಕೊಳ್ಳಲು ಮುಂದಾಗಿದೆ. ರೋಗಿಗಳಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದ್ದೇವೆ. ಅಷ್ಟರೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ನಗದು ರಹಿತ ಸೇವೆಯನ್ನು ಸ್ಥಗಿತಗೊಳಿಸುವುದು ಅನಿವಾರ್ಯ. ಜಿಪ್ಸಾ ಕೂಡ ಒಪ್ಪಂದದ ಅನುಸಾರ ಹಣ ಪಾವತಿಸಿಲ್ಲ. ಇದರಿಂದ ಆಸ್ಪತ್ರೆಗಳಿಗೆ ಆರ್ಥಿಕ ಹೊರೆ ಹೆಚ್ಚುತ್ತಿದೆ ಎಂದು ಫಾನಾ ಅಧ್ಯಕ್ಷ ಡಾ.ಆರ್.ರವೀಂದ್ರ ಅಭಿಪ್ರಾಯಪಟ್ಟಿದ್ದಾರೆ.

  • ಮೋದಿ ಇಳಿಸಿ ಅನ್ನೋದು ಡರ್ಟಿ ಪಾಲಿಟಿಕ್ಸ್, ವಿದ್ಯಾರ್ಥಿಗಳಿಗೇಕೆ ಆ ಉಸಾಬರಿ: ಭೈರಪ್ಪ ಪ್ರಶ್ನೆ

    ಮೋದಿ ಇಳಿಸಿ ಅನ್ನೋದು ಡರ್ಟಿ ಪಾಲಿಟಿಕ್ಸ್, ವಿದ್ಯಾರ್ಥಿಗಳಿಗೇಕೆ ಆ ಉಸಾಬರಿ: ಭೈರಪ್ಪ ಪ್ರಶ್ನೆ

    – ಪ್ರಧಾನಿ ಮೋದಿ ಸನ್ಯಾಸಿ ಇದ್ದಂತೆ, ಸ್ವಂತದ್ದು ಏನೂ ಇಲ್ಲ

    ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಕೇಂದ್ರ ಸರ್ಕಾರದ ಪರ ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಇವತ್ತು ಮೈಸೂರಿನ ಕುವೆಂಪು ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಬೆಂಬಲ ವ್ಯಕ್ತಪಡಿಸಿದರು.

    ಮೋದಿ ಇಳಿಸಿ ಅನ್ನೋದು ಡರ್ಟಿ ಪಾಲಿಟಿಕ್ಸ್. ಆ ಪಾಲಿಟಿಕ್ಸ್ ಅನ್ನು ರಾಜಕಾರಣಿಗಳಿಗೆ ಮಾಡುತ್ತಿದ್ದಾರೆ ಮಾಡಲಿ. ಅದಕ್ಕೆ ವಿದ್ಯಾರ್ಥಿಗಳು ಯಾಕೆ ಹೋಗಬೇಕು? ಅವರಿಗೆ ಯಾಕೆ ಆ ಉಸಾಬರಿ? ಅವರಿಗೆ ಬೇಕಾಗಿರೋದು ಓದು, ಈ ರೀತಿಯ ಪ್ರತಿಭಟನೆ ಅಲ್ಲ ಎಂದು ತಿಳಿ ಹೇಳಿದರು.

    ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಹಿಂದೂ ಮುಸ್ಲಿಮರ ನಡುವೆ ಒಡೆದು ಆಳುವ ನೀತಿ ಅನುಸರಿಸಿದರು. ಸ್ವಾತಂತ್ರ್ಯದ ನಂತರ ಅಧಿಕಾರಕ್ಕೆ ಬಂದ ಜವಹರಲಾಲ್ ನೆಹರೂ ಕೂಡ ಅದೇ ತಂತ್ರ ಅನುಸರಿಸಿದರು. ಕಾಂಗ್ರೆಸ್ ಈಗಲೂ ಅದನ್ನೇ ಮಾಡುತ್ತಿದೆ. ಮುಸ್ಲಿಮರನ್ನು ವೋಟ್ ಬ್ಯಾಂಕ್ ಆಗಿ ಸೃಷ್ಟಿಸಿಕೊಂಡಿದೆ ಎಂದು ಟೀಕಿಸಿದರು. ಓಲೈಕೆ ರಾಜಕಾರಣ ಹೆಚ್ಚಾಗುತ್ತಿದೆ. ಬಿಜೆಪಿಗೂ ಕಾಂಗ್ರೆಸ್‍ನ ರೋಗ ಬಂದಂತಿದೆ ಎಂದರು.

    ಪ್ರಧಾನಿ ಮೋದಿ ಸನ್ಯಾಸಿ ಇದ್ದಂತೆ. ಅವರಿಗೆ ಸ್ವಂತದ್ದು ಎಂದು ಏನೂ ಇಲ್ಲ. ಅವರನ್ನು ಕೆಳಗಿಳಿಸುವ ಏಕೈಕ ಉದ್ದೇಶದಿಂದ ಪ್ರತಿಪಕ್ಷಗಳು ಅಪಪ್ರಚಾರ ನಡೆಸುತ್ತಿವೆ. ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ಪ್ರತಿಪಕ್ಷಗಳು ಸುಳ್ಳು ಹೇಳುತ್ತಿವೆ. ಸರ್ಕಾರ ಏನೇ ಮಾಡಿದರೂ ಟೀಕಿಸುವುದೇ ಪ್ರತಿಪಕ್ಷಗಳ ಕೆಲಸವಾಗಿದೆ. ಜವಾಬ್ದಾರಿಯುತ ಪ್ರತಿಪಕ್ಷಗಳು ಸರ್ಕಾರದ ಒಳ್ಳೆಯ ಕೆಲಸಗಳನ್ನು ಮೆಚ್ಚಬೇಕು. ಜವಾಬ್ದಾರಿಯುತ ಪ್ರತಿಪಕ್ಷ ಇಲ್ಲದಿರುವುದರಿಂದ ಈ ರೀತಿ ಆಗುತ್ತಿದೆ ಎಂದು ಕೇಂದ್ರದ ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು.

    ಮೈಸೂರು ವಿವಿಯಲ್ಲಿ ಫ್ರೀ ಕಾಶ್ಮಿರ ಪೋಸ್ಟರ್ ಪ್ರದರ್ಶಿಸಿದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಎಸ್.ಎಲ್. ಭೈರಪ್ಪ, ಬೇರೆ ವಿವಿಯ ಗಾಳಿ ಇಲ್ಲಿಗೂ ಬೀಸಿದೆ. ವಿದ್ಯಾರ್ಥಿಗಳನ್ನು ದಿಕ್ಕು ತಪ್ಪಿಸಲಾಗುತ್ತಿದೆ. ಜನರ ತೆರಿಗೆ ಹಣದಿಂದ ವಿವಿ ಗಳು ನಡೆಯುತ್ತಿವೆ. ಇದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಓದಿನತ್ತ ಗಮನ ಹರಿಸಬೇಕು. ಕೇವಲ ಪ್ರತಿಭಟನೆ ಮಾಡುತ್ತಾ ಧಿಕ್ಕಾರ ಕೂಗಿದರೇ ಏನು ಪ್ರಯೋಜನ? ವಿದ್ಯಾರ್ಥಿಗಳು ತಮಗೆ ಸರಿಯಾದ ವಿದ್ಯಾಭ್ಯಾಸ ಸಿಗುತ್ತಿದೆಯಾ? ಎಂಬುದರ ಬಗ್ಗೆ ಚಿಂತೆ ಮಾಡಬೇಕು. ಆ ಜೆಎನ್‍ಯು ವಿದ್ಯಾರ್ಥಿಗಳಿಗೆ ಪ್ರತಿಭಟನೆ ಬಿಟ್ಟು ಬೇರೆ ಏನು ಗೊತ್ತಿಲ್ಲ ಎಂದು ಕಿಡಿಕಾರಿದರು.

  • ಸಾವರ್ಕರ್ ಬಗ್ಗೆ ವಿವಾದಾತ್ಮಕ ಪುಸ್ತಕ ಪ್ರಕಟಿಸಿರೋ ಕಾಂಗ್ರೆಸ್ ವಿರುದ್ಧ ಕ್ರಮಕ್ಕೆ ಮನವಿ

    ಸಾವರ್ಕರ್ ಬಗ್ಗೆ ವಿವಾದಾತ್ಮಕ ಪುಸ್ತಕ ಪ್ರಕಟಿಸಿರೋ ಕಾಂಗ್ರೆಸ್ ವಿರುದ್ಧ ಕ್ರಮಕ್ಕೆ ಮನವಿ

    – ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ ಪತ್ರ

    ಬೆಂಗಳೂರು: ಸಾವರ್ಕರ್ ಬಗ್ಗೆ ಅಶ್ಲೀಲವಾಗಿ ಪುಸ್ತಕವನ್ನು ಬರೆಯುವ ಲೇಖಕ ಹಾಗೂ ಅದನ್ನು ಪ್ರಕಟಿಸುವವರ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಸಿಎಂ ಮತ್ತು ಪ್ರಧಾನಿಗೆ ಮನವಿ ಪತ್ರ ಸಲ್ಲಿಸಲಾಗಿದ್ದು, ಪುಸ್ತಕವನ್ನು ದೇಶಾದ್ಯಂತ ತಕ್ಷಣ ನಿಷೇಧಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಆಗ್ರಹಿಸಿದೆ.

    ಹಿಂದೂ ಜನಜಾಗೃತಿ ಸಮಿತಿ, ಹಿಂದೂ ಮಹಾಸಭಾದ ವತಿಯಿಂದ ವೀರ ಸಾವರ್ಕರ್ ಬಗ್ಗೆ ಕೆಟ್ಟದಾಗಿ ಪುಸ್ತಕದಲ್ಲಿ ಬರೆದಿರುವ ಬಗ್ಗೆ ಬೆಂಗಳೂರು ಜಿಲ್ಲಾಧಿಕಾರಿ ಮೂಲಕ ಕರ್ನಾಟಕ ಸಿಎಂ ಯಡಿಯೂರಪ್ಪ ಮತ್ತು ಕೇಂದ್ರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಜಯಂತ್ ಮತ್ತು ಹಿಂದೂ ಮಹಾಸಭೆಯ ಲೋಹಿತ್ ಮುಂತಾದವರು ಉಪಸ್ಥಿತರಿದ್ದರು.

    ಭೋಪಾಲ್‍ನಲ್ಲಿ ಕಾಂಗ್ರೆಸ್ಸಿನ ಸೇವಾದಳದ ತರಬೇತಿ ಶಿಬಿರದಲ್ಲಿ ವೀರ್ ಸಾವರ್ಕರ್ ಕಿತನೆ ವೀರ್? (ವೀರ ಸಾವರ್ಕರ್ ಎಷ್ಟು ವೀರರು?) ಹೆಸರಿನಲ್ಲಿ ವಿತರಿಸಿದ್ದ ಪುಸ್ತಕದಲ್ಲಿ ಅತ್ಯಂತ ತ್ಯುಚ್ಛವಾಗಿ ದ್ವೇಷ ಪೂರಕವಾಗಿ ಕಟ್ಟುಕಥೆಗಳನ್ನು ಬರೆಯಲಾಗಿದೆ. ಇದರಿಂದ ಕಾಂಗ್ರೆಸ್ಸಿನವರು ಸ್ವಾತಂತ್ರ್ಯವೀರರನ್ನು ಅವಮಾನಿಸಲು ಎಷ್ಟು ಕೀಳು ಮಟ್ಟಕ್ಕೆ ಹೋಗಬಹುದು ಎಂಬುದು ಇದರಿಂದ ಗಮನಕ್ಕೆ ಬರುತ್ತದೆ. ಸಾವರ್ಕರ್ ಮಾತ್ರವಲ್ಲದೇ ಯಾವುದೇ ರಾಷ್ಟ್ರಪುರುಷರು ಹಾಗೂ ಕ್ರಾಂತಿಕಾರರ ಅವಮಾನವು ಯಾರಿಂದಲೂ ಆಗದಿರಲಿ. ಅದಕ್ಕಾಗಿ ಕೇಂದ್ರ ಸರ್ಕಾರವು ಇದರ ಬಗ್ಗೆ ಕೂಡಲೇ ಕಾನೂನನ್ನು ರೂಪಿಸುವ ಅವಶ್ಯಕತೆ ಇದೆ ಎಂದು ಹಿಂದೂ ಜನಜಾಗೃತಿ ಸಮಿತಿ ಮನವಿ ಮಾಡಿದೆ.

    ಕಾಂಗ್ರೆಸ್ಸಿನ ಶಿಬಿರದಲ್ಲಿ ದೇಶದ ಕ್ರಾಂತಿಕಾರರು ಸಲಿಂಗ ಸಂಬಂಧವನ್ನು ಇಟ್ಟುಕೊಳ್ಳುವ, ಮಸೀದಿಯ ಮೇಲೆ ಕಲ್ಲೆಸೆಯುವ, ಅದೇ ರೀತಿ ಅಲ್ಪಸಂಖ್ಯಾತ ಮಹಿಳೆಯರ ಬಲಾತ್ಕಾರ ಮಾಡುವವರಿದ್ದರು ಎಂದು ಹೇಳುವ ಅತ್ಯಂತ ಕೀಳುಮಟ್ಟದ ಪುಸ್ತಕವನ್ನು ವಿತರಿಸಿದ್ದಾರೆ. ಇದನ್ನ ಕೂಡಲೇ ನಿಷೇಧಿಸಿ ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

  • ಬೆಲೆ ಏರಿಕೆ – ರಸ್ತೆಯಲ್ಲಿ ರಂಗೋಲಿ ಹಾಕಿ ಪ್ರತಿಭಟನೆ

    ಬೆಲೆ ಏರಿಕೆ – ರಸ್ತೆಯಲ್ಲಿ ರಂಗೋಲಿ ಹಾಕಿ ಪ್ರತಿಭಟನೆ

    ಬೆಂಗಳೂರು: ದಿನಬಳಕೆ ವಸ್ತುಗಳಾದ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ಆಹಾರ ಮತ್ತು ಈರುಳ್ಳಿ ದರ ಏರಿಕೆ ಖಂಡಿಸಿ, ವಿನೂತನವಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಿ, ಮಲ್ಲೇಶ್ವರಂ ಕುವೆಂಪು ಪ್ರತಿಮೆ ಬಳಿ ಮಹಿಳೆಯರು ಪ್ರತಿಭಟನೆ ಮಾಡಿದರು.

    ಬೆಂಗಳೂರು ಉತ್ತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಶ್ರೀಮತಿ ವಿಮಲ ವೆಂಕಟ್ ರವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸರ್ವಧಿಕಾರಿ ಧೋರಣೆ ಇಂದ ದೇಶ ಸಂಕಷ್ಟದ ಪರಿಸ್ಥಿತಿ ಬಂದಿದೆ. ನೋಟು ಅಮ್ಯಾನೀಕರಣ, ಅವೈಜ್ಞಾನಿಕ ಜಿ.ಎಸ್.ಟಿ ಮತ್ತು ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಸಿಗುತ್ತಿಲ್ಲ. ರೈತರ ಸಂಕಷ್ಟಗಳನ್ನು ಕೇಳುವವರು ಇಲ್ಲದಂತಾಗಿದೆ. ಸಿ.ಎ.ಎ ಮತ್ತು ಎನ್.ಆರ್.ಸಿ ಕಾನೂನು ಗೊಂದಲದಲ್ಲಿ ಇದ್ದು ದೇಶದ ಜನರು ಭಯದ ವಾತವರಣದಲ್ಲಿ ಇದ್ದಾರೆ ಎಂದರು.

    ಕರ್ನಾಟಕ ರಾಜ್ಯದಲ್ಲಿ 18 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಪ್ರವಾಹದಿಂದ ಲಕ್ಷಾಂತರ ಜನ ಬೀದಿ ಪಾಲಾಗಿದ್ದಾರೆ. ಕೋಟ್ಯಂತರ ರೂಪಾಯಿ ರೈತನ ಬೆಳೆ ಹಾನಿಯಾದರು ಬಿಜೆಪಿ ಕೇಂದ್ರ ಸರ್ಕಾರ ಹೆಚ್ಚು ಪರಿಹಾರ ಕೊಡುವಲ್ಲಿ ವಿಫಲವಾಗಿದೆ. ಭಾರತದ ಆರ್ಥಿಕ ಪರಿಸ್ಥಿತಿ ಕುಸಿತ ಕಂಡಿದೆ. ಉದ್ಯೋಗ ಸೃಷ್ಟಿ ಗಗನಕುಸಮವಾಗಿದೆ. ಯುವಕರು ಕಂಗಾಲಾಗಿದ್ದಾರೆ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

    ಮುಂದಿನ ದಿನಗಳಲ್ಲಿ ಇದೇ ರೀತಿ ಆದರೆ ಬಡ ಜನರು ಬದುಕೋದೆ ಕಷ್ಟವಾಗುತ್ತದೆ. ಕೂಡಲೇ ಅರ್ಥಿಕ ಸುಸ್ಥಿರತೆ ಕಾಪಾಡುವ ಕೆಲಸ ಆಗಬೇಕು. ಏರುತ್ತಿರುವ ದಿನಬಳಕೆ ವಸ್ತುಗಳ ದರಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

    ಬೆಂಗಳೂರು ಉತ್ತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶ್ರೀಮತಿ ವಿಮಲ ವೆಂಕಟ್, ಮಹಿಳಾ ಕಾಂಗ್ರೆಸ್ ಮುಖಂಡರಾದ ಶ್ರೀಮತಿ ಉಮಾಬಾಯಿ, ಆಶಾ ರಾಜು, ಮಹಿಳಾ ಬ್ಲಾಕ್ ಅಧ್ಯಕ್ಷರುಗಳಾದ ಪಾರ್ವತಿ, ಸುಶೀಲ, ಅನಿತಾ, ಭವ್ಯ, ಚಂದ್ರಮ್ಮ ನೂರಾರು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

  • ನೆರೆ ನಷ್ಟ 1 ಲಕ್ಷ ಕೋಟಿ, ಬಂದಿದ್ದು 3,069 ಕೋಟಿ ಉಳಿದದ್ದು ಯಾವಾಗ- ಸಿದ್ದರಾಮಯ್ಯ ಪ್ರಶ್ನೆ

    ನೆರೆ ನಷ್ಟ 1 ಲಕ್ಷ ಕೋಟಿ, ಬಂದಿದ್ದು 3,069 ಕೋಟಿ ಉಳಿದದ್ದು ಯಾವಾಗ- ಸಿದ್ದರಾಮಯ್ಯ ಪ್ರಶ್ನೆ

    -ಸಿಎಂ ಕೇಳಿದ್ದು 38 ಸಾವಿರ ಕೋಟಿ

    ಬೆಂಗಳೂರು: ರಾಜ್ಯದಲ್ಲಿ ನೆರೆ ನಷ್ಟ ಅಂದಾಜು 1 ಲಕ್ಷ ಕೋಟಿ ರೂ. ಮೋದಿ ಸರ್ಕಾರ ಎರಡು ಕಂತಗಳಲ್ಲಿ 3,069 ಕೋಟಿ ರೂ. ನೀಡಿದೆ. ಉಳಿದ ಪರಿಹಾರವನ್ನು ಯಾವಾಗ ನೀಡಲಾಗುತ್ತದೆ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಟ್ವಿಟ್ಟರ್ ನಲ್ಲಿ ಎರಡನೇ ಕಂತಿನಲ್ಲಿ 1869.85 ಕೋಟಿ ರೂ. ನೆರೆ ಪರಿಹಾರ ಬಿಡುಗಡೆ ಮಾಡಿರುವ ನರೇಂದ್ರ ಮೋದಿ ಸರ್ಕಾರಕ್ಕೆ ಧನ್ಯವಾದ ತಿಳಿಸಿ, ಪ್ರಶ್ನೆ ಮಾಡಿದ್ದಾರೆ.

    ಸಿದ್ದರಾಮಯ್ಯ ಟ್ವೀಟ್: ನೆರೆ ಪರಿಹಾರಕ್ಕಾಗಿ ರೂ.1869 ಕೋಟಿ ಪರಿಹಾರ ನೀಡಿರುವ ನರೇಂದ್ರ ಮೋದಿ ಸರ್ಕಾರಕ್ಕೆ ಧನ್ಯವಾದಗಳು. ಅಂದಾಜು ನೆರೆ ನಷ್ಟ ರೂ.1 ಲಕ್ಷ ಕೋಟಿ. ಸಿಎಂ ಯಡಿಯೂರಪ್ಪ ಸರ್ಕಾರ ಕೇಳಿದ್ದು ರೂ.38 ಸಾವಿರ ಕೋಟಿ ಎರಡು ಕಂತುಗಳಲ್ಲಿ ಕೇಂದ್ರ ನೀಡಿರುವುದು ರೂ.3,069 ಕೋಟಿ. ಉಳಿದದ್ದು ಯಾವಾಗ?

    https://twitter.com/siddaramaiah/status/1214448430170329088

    ಆಗಸ್ಟ್ ತಿಂಗಳ ನೆರೆಹಾವಳಿಯ ಸಮೀಕ್ಷಾ ವರದಿ ಆಧಾರದಲ್ಲಿ ಸಿಎಂ ಯಡಿಯೂರಪ್ಪನವರು ರೂ.38 ಸಾವಿರ ಕೋಟಿ ಪರಿಹಾರ ಕೇಳಿದ್ದರು. ಅಕ್ಟೋಬರ್ ತಿಂಗಳ ಅತಿವೃಷ್ಟಿಯ ಸಮೀಕ್ಷೆ ಇನ್ನೂ ನಡೆದಿಲ್ಲ. ಅದನ್ನು ತಕ್ಷಣ ಪೂರ್ಣಗೊಳಿಸಿ. ಆ ಸಮೀಕ್ಷಾ ವರದಿಯ ಜೊತೆ ಪರಿಹಾರಕ್ಕಾಗಿ ಪೂರಕ ಬೇಡಿಕೆ ಸಲ್ಲಿಸಬೇಕೆಂದು ಆಗ್ರಹಿಸುತ್ತೇನೆ.

    ಸೋಮವಾರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಒಟ್ಟು ಏಳು ರಾಜ್ಯಗಳಿಗೆ ನೆರೆ ಪರಿಹಾರ 5908.56 ಕೋಟಿ ಬಿಡುಗಡೆ ಮಾಡಲಾಗಿದೆ. ಎನ್‍ಡಿಆರ್‍ಎಫ್ ಅಡಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಎರಡನೇ ಹಂತದಲ್ಲಿ 1869.85 ಕೋಟಿ ನೆರೆ ಪರಿಹಾರ ಬಿಡುಗಡೆ ಮಾಡಿದೆ. ಮೊದಲ ಕಂತಿನಲ್ಲಿ 1200 ಕೋಟಿ ಮಾಡಲಾಗಿತ್ತು. ಒಟ್ಟು ಈವರೆಗೂ 3069.85 ಕೋಟಿ ನೆರೆ ಪರಿಹಾರ ಬಿಡುಗಡೆ ಮಾಡಿದಂತಾಗಿದೆ.

    https://twitter.com/siddaramaiah/status/1214449566793134081

    ಈ ಪೈಕಿ ಅಸ್ಸಾಂಗೆ 616.63 ಕೋಟಿ, ಹಿಮಾಚಲ ಪ್ರದೇಶಕ್ಕೆ 284.93 ಕೋಟಿ, ಕರ್ನಾಟಕಕ್ಕೆ 1869.85 ಕೋಟಿ, ಮಧ್ಯಪ್ರದೇಶಕ್ಕೆ 1749.73 ಕೋಟಿ, ಮಹಾರಾಷ್ಟ್ರಕ್ಕೆ 956.93 ಕೋಟಿ ಮತ್ತು ತ್ರಿಪುರಕ್ಕೆ 63.32 ಕೋಟಿ ಉತ್ತರ ಪ್ರದೇಶಕ್ಕೆ 367.17 ಕೋಟಿ ಬಿಡುಗಡೆ ಮಾಡಿದೆ.