Tag: Central Government

  • ವಿಶ್ವಾದ್ಯಂತ 1.26 ಲಕ್ಷ ಜನರಲ್ಲಿ ಕೊರೊನಾ- ಹಾಲಿವುಡ್ ನಟ, ಪತ್ನಿಗೂ ಸೋಂಕು

    ವಿಶ್ವಾದ್ಯಂತ 1.26 ಲಕ್ಷ ಜನರಲ್ಲಿ ಕೊರೊನಾ- ಹಾಲಿವುಡ್ ನಟ, ಪತ್ನಿಗೂ ಸೋಂಕು

    – ವಿಶ್ವ ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ಡಬ್ಲ್ಯುಎಚ್‍ಓ

    ನವದೆಹಲಿ: ಮಹಾಮಾರಿ ಕೊರೊನಾಗೆ ವಿಶ್ವವೇ ತಲ್ಲಣಿಸಿದ್ದು, ದಿಗ್ಬಂಧನ ಹಾಕಿದಂತಾಗಿದೆ. ಇದೀಗ ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ಹಾಗೂ ಅವರ ಪತ್ನಿಗೂ ಕೊರೊನಾ ಸೋಂಕು ತಗಲಿರುವುದು ಖಚಿತವಾಗಿದ್ದು, ಪ್ರಪಂಚದಾದ್ಯಂತ ಒಟ್ಟು 1,26,293 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

    ಹಾಲಿವುಡ್ ನಟ ಟಾಮ್ ಹ್ಯಾಂಕ್ಸ್ ಅವರಿಗೆ ಸೋಂಕು ತಗುಲಿರುವುದನ್ನು ಖಚಿತವಾಗುತ್ತಿದ್ದಂತೆ ಇವರ ಪತ್ನಿ, ನಟಿ ರಿಟಾ ವಿಲ್ಸನ್ ಅವರಿಗೂ ಕೊರೊನಾ ತಗುಲಿರುವುದು ದೃಢಪಟ್ಟಿದೆ. ನಿನ್ನೆಯಷ್ಟೇ ಬ್ರಿಟನ್‍ನ ಆರೋಗ್ಯ ಸಚಿವೆಗೆ ಕೊರೊನಾ ತಗುಲಿರುವುದು ವರದಿಯಾಗಿತ್ತು. ಇದೀಗ ಹಾಲಿವುಡ್ ನಟ ಹಾಗೂ ಪತ್ನಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ವಿಶ್ವಾದ್ಯಂತ ಸೋಂಕು ಆವರಿಸುತ್ತಿರುವ ಕಾರಣ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‍ಓ) ಇದನ್ನು ವಿಶ್ವ ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಿದೆ.

    ವಿಶ್ವದಾದ್ಯಂತ ಒಟ್ಟು 1,26,293 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 4,633 ಜನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ನಿನ್ನೆ 61 ಜನರಿಗೆ ಸೋಂಕಿರುವುದು ಪತ್ತೆಯಾಗಿತ್ತು. ಇಂದು 67ಕ್ಕೆ ಹೆಚ್ಚಳವಾಗಿದೆ ಎಂಬ ವರದಿ ಬಂದಿದೆ. ಇನ್ನು ರಾಜ್ಯದಲ್ಲಿ ನಾಲ್ವರಿಗೆ ಕೊರೊನಾ ತಗುಲಿದ್ದು, ಎಲ್ಲರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

    ಕೊರೊನಾ ವೈರಸ್ ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸಭೆ ನಡೆಸಿ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಮಾರ್ಚ್ 15ರ ವರೆಗೆ ವೀಸಾಗಳನ್ನು ಕ್ಯಾನ್ಸಲ್ ಮಾಡಿ ಆದೇಶ ಹೊರಡಿಸಿದ್ದಾರೆ. ಡಿಪ್ಲೊಮ್ಯಾಟಿಕ್, ಅಫೀಶಿಯಲ್, ಯುಎನ್ ಅಥವಾ ಅಂತಾರಾಷ್ಟ್ರೀಯ ಸಂಸ್ಥೆಗಳು, ಉದ್ಯೋಗ ಹಾಗೂ ಪ್ರಾಜೆಕ್ಟ್ ವಿಸಾಗಳನ್ನು ಹೊರತುಪಡಿಸಿ ಉಳಿದೆಲ್ಲ ವೀಸಾಗಳನ್ನು ರದ್ದುಪಡಿಸುವ ನಿರ್ಧಾರ ಕೈಗೊಂಡಿದ್ದಾರೆ. ಇದು ಮಾರ್ಚ್ 13ರ ಮಧ್ಯರಾತ್ರಿಯಿಂದ ಜಾರಿಯಾಗಲಿದೆ.

    ಮಹಾರಾಷ್ಟ್ರ ಹಾಗೂ ಜೈಪುರದಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಮಹಾರಾಷ್ಟ್ರದಲ್ಲಿ ಪ್ರಕರಣಗಳ ಸಂಖ್ಯೆ 10ಕ್ಕೆ ಹೆಚ್ಚಳವಾಗಿದೆ. ಮುಂಬೈನಲ್ಲಿ ಎರಡು ದಾಖಲಾದರೆ, ಪುಣೆಯೊಂದರಲ್ಲೇ 8 ಪ್ರಕರಣಗಳು ಪತ್ತೆಯಾಗಿವೆ. ಜೈಪುರದಲ್ಲಿ ಒಟ್ಟು ಮೂರು ಪ್ರಕರಣಗಳು ಪತ್ತೆಯಾಗಿದ್ದು, ಇಟಲಿಯ ಇಬ್ಬರಿಗೆ ಹಾಗೂ ದುಬೈನಿಂದ ವಾಪಾಸಾಗಿರುವ ಭಾರತೀಯರೊಬ್ಬರಲ್ಲಿ ಕಾಣಿಸಿಕೊಂಡಿದೆ.

    ರಾಜ್ಯದಲ್ಲಿಯೂ ಕೊರೊನಾ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆ ಕರ್ನಾಟಕ ಸರ್ಕಾರ ವಿಶೇಷ ಕಠಿಣ ಕಾನೂನು ಜಾರಿ ಮಾಡಿದೆ. ಸಾಂಕ್ರಾಮಿಕ ರೋಗಗಳ ಕಾಯ್ದೆ 1897ರ ಸೆಕ್ಷನ್ 2,3 ಮತ್ತು 4ರಡಿ ರಾಜ್ಯ ಸರ್ಕಾರ `ಕರ್ನಾಟಕ ಸಾಂಕ್ರಾಮಿಕ ರೋಗ ಕೋವಿಡ್ -19 ನಿಯಂತ್ರಣ 2020′ (Karnataka Epidemic Diseases, COVID-19 Regulations, 2020) ಹೆಸರಿನಲ್ಲಿ ನಿಯಂತ್ರಣ ಕ್ರಮವನ್ನು ಪ್ರಕಟಿಸಿದೆ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಕಠಿಣ ನಿಯಮವನ್ನು ಜಾರಿ ಮಾಡಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋದರೆ ಈ ನಿಯಮ ಜಾರಿಯಾಗಲಿದೆ. ಇದನ್ನೂ ಓದಿ: ಕೊರೊನಾ ನಿಯಂತ್ರಣಕ್ಕೆ 13 ರೂಲ್ಸ್

  • ನಾನು ನೇರ 5ನೇ ಕ್ಲಾಸ್‍ಗೆ ಹೋದವ: ಸಿದ್ದರಾಮಯ್ಯ

    ನಾನು ನೇರ 5ನೇ ಕ್ಲಾಸ್‍ಗೆ ಹೋದವ: ಸಿದ್ದರಾಮಯ್ಯ

    ಚಿಕ್ಕಮಗಳೂರು: ನಾನು ನೇರವಾಗಿ ಐದನೇ ತರಗತಿಗೆ ಸೇರಿಕೊಂಡವನು. ನನಗೆ ನನ್ನ ಡೇಟ್ ಆಫ್ ಬರ್ತ್ ಗೊತ್ತಿಲ್ಲ. ಆ ಮೇಷ್ಟ್ರು ಬರೆದುಕೊಟ್ಟಿದ್ದರು ಅದನ್ನೇ ನಾನು ಹುಟ್ಟಿದ ದಿನ ಎಂದು ಹೇಳಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

    ನಗರದ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ನಡೆದ ಸಿಎಎ ಹಾಗೂ ಎನ್.ಆರ್.ಸಿ ಜಾರಿಗೆ ತಂದ ಕೇಂದ್ರ ಸರ್ಕಾರದ ವಿರುದ್ಧದ ಜನಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮಪ್ಪ ಐದನೇ ತರಗತಿಗೆ ಸೇರಿಸಿದರು. ಆ ರಾಜಪ್ಪ ಮೇಷ್ಟರು ಪಾಪ, ಅವರು ನನ್ನನ್ನ ಅಡ್ಮಿಟ್ ಮಾಡಿಕೊಳ್ಳದಿದ್ದರೆ ನಾನು ಲಾಯರ್ ಆಗುತ್ತಿರಲಿಲ್ಲ. ಇಲ್ಲಿ ಭಾಷಣನೂ ಮಾಡುತ್ತಿರಲಿಲ್ಲ. ಮುಖ್ಯಮಂತ್ರಿ ಆಗಕ್ಕೆ ಸಾಧ್ಯವೇ ಆಗುತ್ತಿರಲಿಲ್ಲ ಎಂದರು.

    ಇದೇ ವೇಳೆ, ನಾನು ಮನೆಯಲ್ಲೇ ಹುಟ್ಟಿದ್ದು. ಆಸ್ಪತ್ರೆಯಲ್ಲಿ ಹುಟ್ಟಿಲ್ಲ. ನಮ್ಮಪ್ಪ ಅವ್ವನಿಗೆ ನನ್ನ ಡೇಟ್ ಆಫ್ ಬರ್ತ್ ಹೇಗೆ ಗೊತ್ತು. ನನ್ನ ಕೇಳಿದರೆ ಅಪ್ಪ-ಅವ್ವನದ್ದು ಏನ್ ಹೇಳಲಿ. ನಂದೇ ಬರಲ್ಲ. ಅವರ ಡೇಟ್ ಆಫ್ ಬರ್ಥ್ ಎಲ್ಲಿಂದ ಹೇಳಲಿ. ಹಾಗಾದರೆ ನನ್ನನ್ನ ಡೌಟ್‍ಫುಲ್ ಎಂದು ಹೇಳುತ್ತೀರಾ ಎಂದು ಕೇಂದ್ರ ಸರ್ಕಾರದ ವಿರುದ್ಧ ವ್ಯಂಗ್ಯದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.

    ಸಂವಿಧಾನ ರಚನೆ ಬಗ್ಗೆ ಹುಟ್ಟಿಕೊಂಡಿರುವ ವಿವಾದದ ಬಗ್ಗೆ ಮಾತನಾಡಿ, ಬಿಜೆಪಿ ಹಾಗೂ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ಭಾರತೀಯ ಜನತಾ ಪಾರ್ಟಿಯವರೇ, ಸಂವಿಧಾನ ತಿರುಚಲು ಹೊರಟ್ಟಿದ್ದೀರಲ್ಲ ನಿಮಗೆ ನಾಚಿಕೆ ಆಗಲ್ವಾ? ಮಾತೆತ್ತಿದರೆ ಭಾರತ ಮಾತೆ ಅಂತೀರಾ. ಭಾರತ ಮಾತೆ ಇದೇನಾ ಹೇಳಿಕೊಟ್ಟಿರೋದು. ಇನ್ಮುಂದೆ ಅವರಿಗಿಂತ ಜೋರಾಗಿ ಭಾರತ ಮಾತೆ ಎಂದು ನಾವು-ನೀವು ಹೇಳೋಣ ಎಂದು ನೆರೆದಿದ್ದವರಿಗೆ ಸಲಹೆ ನೀಡಿದರು. ಭಾರತ ಮಾತೆ ಅನ್ನೋದು ಬಿಜೆಪಿಯವರಿಗೆ ಗುತ್ತಿಗೆ ಕೊಟ್ಟಿದ್ದೇವಾ ಎಂದು ವ್ಯಂಗ್ಯವಾಡಿದರು.

    ಬಾಬಾ ಸಾಹೇಬ್ ಅಂಬೇಡ್ಕರ್ ಅವತ್ತೇ ಎಚ್ಚರಿಕೆ ಕೊಟ್ಟು ಹೋಗಿದ್ದಾರೆ. ಈ ಸಂವಿಧಾನ ಫೇಲಾದರೆ ಅದು ನೇಚರ್ ಯಿಂದ ಆಗುವುದಿಲ್ಲ. ಸಂವಿಧಾನ ಫೇಲಾದರೆ ಈ ದೇಶದ ಮತಾಂದರಿಂದ ಫೇಲಾಗುತ್ತೆ ಎಂದು ಹೇಳಿದ್ದಾರೆ. ಸಿಎಎ ಹಾಗೂ ಎನ್.ಆರ್.ಸಿಯ ಯಾವ ಕಾನೂನುಗಳನ್ನು ಈ ದೇಶದಲ್ಲಿ ಆಚರಣೆ ಮಾಡಲು ಸಾಧ್ಯವಿಲ್ಲ ಎಂದು ಸಿದ್ದು ಗುಡುಗಿದರು.

  • ಮಹದಾಯಿ ಗೆಜೆಟ್ ನೋಟಿಫಿಕೇಶನ್ ರಾಜ್ಯಕ್ಕೆ ಸಿಕ್ಕಿರುವ ದೊಡ್ಡ ಜಯ: ಶೆಟ್ಟರ್

    ಮಹದಾಯಿ ಗೆಜೆಟ್ ನೋಟಿಫಿಕೇಶನ್ ರಾಜ್ಯಕ್ಕೆ ಸಿಕ್ಕಿರುವ ದೊಡ್ಡ ಜಯ: ಶೆಟ್ಟರ್

    ಹುಬ್ಬಳ್ಳಿ: ಮಹದಾಯಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಿರುವುದು ಸ್ವಾಗತಾರ್ಹವಾಗಿದೆ. ಅಲ್ಲದೇ ಉತ್ತರ ಕರ್ನಾಟಕದ ಜನತೆಗೆ ಮಾತ್ರವಲ್ಲದೆ ರಾಜ್ಯದ ಜನತೆಗೆ ಇದು ಖುಷಿಯ ಕ್ಷಣವಾಗಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

    ಮಹದಾಯಿ ಯೋಜನೆಯ ಕುರಿತು ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ ಕುರಿತು ಮಾಧ್ಯಮದ ಮೂಲಕ ಮಾತನಾಡಿದ ಅವರು, ಸುಮಾರು ದಿನಗಳ ಹೋರಾಟಕ್ಕೆ ಬಂದಿರುವ ಜಯವಾಗಿದೆ. ಎರಡು ದಿನದ ಹಿಂದೆ ರಾಜ್ಯ ಹಾಗೂ ಕೇಂದ್ರ ಸಚಿವರು ಕೂಡಿಕೊಂಡು ಕೇಂದ್ರ ನೀರಾವರಿ ಸಚಿವ ಶೇಕಾವತ್ ಅವರನ್ನು ಭೇಟಿಯಾಗಿ ಮಾತನಾಡಿದ್ದೆವು. ಅವರು ಕೂಡ ಭರವಸೆಯನ್ನು ನೀಡಿದ್ದರು. ಆ ಭರವಸೆಯಂತೆ ಅವರು ಒಂದೇ ದಿನದಲ್ಲಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಿರುವುದು ಸ್ವಾಗತಾರ್ಹವಾಗಿದೆ ಎಂದರು. ಇದೇ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹಾಗೂ ನೀರಾವರಿ ಸಚಿವ ಶೇಕಾವತ ಅವರಿಗೆ ಸಚಿವ ಶೆಟ್ಟರ್ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ಬಿಎಸ್‍ವೈ ಬರ್ತ್ ಡೇ ಗಿಫ್ಟ್ – ಮಹದಾಯಿ ನೋಟಿಫಿಕೇಷನ್ ಹೊರಡಿಸಿದ ಕೇಂದ್ರ

    ಹೋರಾಟಗಾರರ ವಿಜಯೋತ್ಸವ:
    ನಾಲ್ಕು ದಶಕದ ಮಹದಾಯಿ ಹೋರಾಟಕ್ಕೆ ಜಯ ಸಿಕ್ಕಿದ್ದು, ಮಹದಾಯಿ ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ ಹಿನ್ನೆಲೆಯಲ್ಲಿ ಮಹದಾಯಿ ಹೋರಾಟಗಾರರು ಹಾಗೂ ರೈತ ಮುಖಂಡರು ನಗರದ ಚೆನ್ನಮ್ಮ ವೃತ್ತದ ಬಳಿ ವಿಜಯೋತ್ಸವ ಆಚರಣೆ ಮಾಡಿದರು. ಕರ್ನಾಟಕ ರಾಜ್ಯಕ್ಕೆ ಮಹದಾಯಿ 13.5 ಟಿಎಂಸಿ ನೀರು ಬಂದಿರುವುದು ಸ್ವಾಗತಾರ್ಹವಾಗಿದೆ. ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದು ರೈತ ಮುಖಂಡರು ಘೋಷಣೆ ಕೂಗಿದರು.

    ಕಳೆದ ನಾಲ್ಕು ದಶಕದ ಹೋರಾಟಕ್ಕೆ ಬಂದಿರುವ ಈ ನಿರ್ಧಾರ ರಾಜ್ಯಕ್ಕೆ ಸಿಕ್ಕಿರುವ ಜಯವಾಗಿದೆ. ಇದನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ ಎಂದು ಜಯ ಘೋಷಣೆ ಕೂಗಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ, ರಾಜಣ್ಣ ಕೊರವಿ,ಸಿದ್ದು ತೇಜಿ ಸೇರಿದಂತೆ ನೂರಾರು ಕಾರ್ಯಕರ್ತರು ಹಾಗೂ ರೈತ ಮುಖಂಡರು ಪಾಲ್ಗೊಂಡಿದ್ದರು.

  • ಬಿಎಸ್‍ವೈ ಬರ್ತ್ ಡೇ ಗಿಫ್ಟ್ – ಮಹದಾಯಿ ನೋಟಿಫಿಕೇಷನ್ ಹೊರಡಿಸಿದ ಕೇಂದ್ರ

    ಬಿಎಸ್‍ವೈ ಬರ್ತ್ ಡೇ ಗಿಫ್ಟ್ – ಮಹದಾಯಿ ನೋಟಿಫಿಕೇಷನ್ ಹೊರಡಿಸಿದ ಕೇಂದ್ರ

    ನವದೆಹಲಿ: ಉತ್ತರ ಕರ್ನಾಟಕ ಜನರ ಬಹುದಿನಗಳ ಕನಸು ಈಡೇರಿದೆ. ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಧಿಕರಣ ನೀಡಿದ್ದ ಐ ತೀರ್ಪಿಗೆ ಕೇಂದ್ರ ಸರ್ಕಾರ ನೋಟಿಫಿಕೇಷನ್ ಹೊರಡಿಸಿದೆ. ಸುಪ್ರೀಂ ಕೋರ್ಟ್ ಸೂಚನೆ ಬೆನ್ನಲ್ಲೇ ನೋಟಿಫಿಕೇಷನ್ ಹೊರಡಿಸಲಾಗಿದೆ.

    ಸುಪ್ರೀಂ ಕೋರ್ಟಿಗೆ ಹೆಚ್ಚುವರಿ ನೀರಿಗೆ ಆಗ್ರಹಿಸಿ ಕರ್ನಾಟಕ ಗೋವಾ ಮತ್ತು ಮಹಾರಾಷ್ಟ್ರ ಅರ್ಜಿ ಸಲ್ಲಿಸಿರುವ ಹಿನ್ನಲೆ ಕೋರ್ಟಿನ ಅಂತಿಮ ತೀರ್ಪಿಗೆ ಒಳಪಟ್ಟು ಅಧಿಸೂಚನೆ ಹೊರಡಿಸಲಾಗಿದೆ. ಇದರಿಂದಾಗಿ ರಾಜ್ಯಕ್ಕೆ ಹಂಚಿಕೆಯಾಗಿದ್ದ 13.5 ಟಿಎಂಸಿ ನೀರನ್ನು ನಿರಾತಂಕವಾಗಿ ಬಳಸಿಕೊಳ್ಳಬಹುದಾಗಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ ಪಡೆದು ನದಿ ಕಣಿವೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿ ಮತ್ತು ಜಲ ವಿದ್ಯುತ್ ಯೋಜನೆಗಳ ಕಾಮಗಾರಿ ಆರಂಭಿಸಬಹುದಾಗಿದೆ.

    ಸುದೀರ್ಘ ವಿಚಾರಣೆ ನಡೆಸಿದ್ದ ಮಹದಾಯಿ ನ್ಯಾಯದಿಕರಣ 2018ರ ಅಗಸ್ಟ್ 14 ರಂದು ತನ್ನ ಐ ತೀರ್ಪು ಪ್ರಕಟಿಸಿತ್ತು. ಕರ್ನಾಟಕದ ಪಾಲಿಗೆ ಮಹದಾಯಿ ನದಿಯಿಂದ 13.5 ಟಿಎಂಸಿ ನೀರು ಹಂಚಿಕೆ ಮಾಡಿತ್ತು. ಇದರಲ್ಲಿ ಮಹದಾಯಿಯಿಂದ ಮಲಪ್ರಭೆಗೆ ಕುಡಿಯುವ ನೀರಿಗಾಗಿ 4 ಟಿಎಂಸಿ ನೀರು ಹರಿಸಲು ಒಪ್ಪಿಗೆ ಸೂಚಿಸಿತ್ತು. ಮಹದಾಯಿ ನದಿಯಿಂದ ಕರ್ನಾಟಕಕ್ಕೆ 12 ಟಿಎಂಸಿ ನೀಡಿದ್ದ ನ್ಯಾಯದಿಕರಣ ಬಂಡೂರ ಯೋಜನೆಗೆ ಒಟ್ಟು 2.18 ಟಿಎಂಸಿ, ಕಳಸಾ ಯೋಜನೆಗೆ 1.72 ಟಿಎಂಸಿ, ಜಲ ವಿದ್ಯುತ್ ಯೋಜನೆಗೆ 8.02 ಟಿಎಂಸಿ, ಕಳಸಾ ಯೋಜನೆಗೆ 1.72 ಟಿಎಂಸಿ ಮತ್ತು ಜಲ ವಿದ್ಯುತ್ ಯೋಜನೆಗೆ ಒಟ್ಟು 8.02 ಟಿಎಂಸಿ ನೀರು ಮಹದಾಯಿ ನದಿ ಕಣಿವೆಯಲ್ಲಿ ಬಳಸಲು 1.5 ಟಿಎಂಸಿ ನೀರು ಹಂಚಿಕೆ ಮಾಡಿತ್ತು.

    ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಬೆನ್ನಲೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಶೇಖಾವತ್ ಗೆ ಟ್ವೀಟ್ ಮಾಡಿ ಧನ್ಯವಾದ ಹೇಳಿದ್ದಾರೆ.

    ಬುಧವಾರ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿತೆ ಕೇಂದ್ರ ಸಚಿವರ ನಿಯೋಗ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಭೇಟಿ ಮಾಡಿ ಅಧಿಸೂಚನೆ ಹೊರಡಿಸಲು ಮನವಿ ಮಾಡಿದ್ದರು.

    https://twitter.com/JoshiPralhad/status/1233074707269746688

    ಗೋವಾ ಖ್ಯಾತೆ: ಅಧಿಸೂಚನೆ ಒಪ್ಪಿಗೆ ಸೂಚಿಸಿದ್ದ ಗೋವಾ ಈಗ ಹೊಸ ಆಟ ಶುರು ಮಾಡಿದೆ. ಮಹದಾಯಿ ಕಣಿವೆ ವ್ಯಾಪ್ತಿಯಲ್ಲಿ ಯೋಜನೆಗಳಿಗೆ ಅನುಮತಿ ನೀಡದಂತೆ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ಸೋಮವಾರ ವಿಚಾರಣೆಗೆ ಬರಲಿದೆ.

  • ರಾಜ್ಯ ಸರ್ಕಾರದಲ್ಲಿ ಹುಚ್ಚರ ಸಂತೆ ನಡೆಯುತ್ತಿದೆ: ರಿಜ್ವಾನ್ ಅರ್ಷದ್

    ರಾಜ್ಯ ಸರ್ಕಾರದಲ್ಲಿ ಹುಚ್ಚರ ಸಂತೆ ನಡೆಯುತ್ತಿದೆ: ರಿಜ್ವಾನ್ ಅರ್ಷದ್

    ರಾಯಚೂರು: ರಾಜ್ಯ ಸರ್ಕಾರದಲ್ಲಿ ಹುಚ್ಚರ ಸಂತೆ ನಡೆಯುತ್ತಾ ಇದೆ. ಕಪ್ಪು ಹಣ ವಾಪಸ್ ತರುತ್ತೇನೆ ಎಂದವರು ಕಪ್ಪು ಹಣದಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಹೇಳಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ರಿಜ್ವಾನ್ ಅರ್ಷದ್, ಅರಣ್ಯ ಒತ್ತುವರಿಗಾಗಿ ಆನಂದ್ ಸಿಂಗ್‍ರ ವಿರುದ್ಧ 15 ಕೇಸ್ ಗಳು ದಾಖಲಾಗಿವೆ. ಅವರಿಗೇ ಅರಣ್ಯ ಖಾತೆ ನೀಡುತ್ತಿದ್ದಾರೆ. ಈ ಡ್ರಾಮಾ, ಈ ಹಣದ ವ್ಯವಹಾರ ಎಲ್ಲವೂ ಹೊರಗೆ ಬರುತ್ತದೆ. ಜನರು ಎಲ್ಲವನ್ನು ನೋಡುತ್ತಿದ್ದಾರೆ ಇದಕ್ಕೆ ಉತ್ತರ ನೀಡಲಿದ್ದಾರೆ ಎಂದರು.

    ಎನ್.ಆರ್.ಸಿ ಹಾಗೂ ಎನ್.ಪಿ.ಆರ್ ವಿರುದ್ಧ ಹಾಗೂ ಕೇಂದ್ರ ಸರ್ಕಾರದ ತಾರತಮ್ಯದ ವಿರುದ್ಧ ಸದನದಲ್ಲಿ ಧ್ವನಿ ಎತ್ತುತ್ತೇವೆ. ಕಾಯ್ದೆ ಮೀರಿ ಸಾಲ ಪಡೆದು ಬಜೆಟ್ ಮಂಡನೆ ಮಾಡಲಾಗುತ್ತಿದೆ. ಈ ರೀತಿಯಾಗಿ ಸಾಲ ಪಡೆದು ಬಜೆಟ್ ಮಂಡನೆ ಮಾಡಬಾರದೆನ್ನುವುದು ನಮ್ಮ ನಿಲುವು. ಕೇಂದ್ರ ಸರ್ಕಾರದಿಂದ 30 ಸಾವಿರ ಕೋಟಿ ಕಡಿಮೆ ಬರುತ್ತಿದೆ ಅನ್ನೋದು ನಮ್ಮ ಗಮನಕ್ಕೆ ಬಂದಿದೆ. ರಾಜ್ಯಕ್ಕೆ 30 ಸಾವಿರ ಕೋಟಿ ವಂಚನೆ ಮಾಡಿದ್ದರ ಬಗ್ಗೆ ನಾವು ತೀವ್ರವಾಗಿ ಪ್ರತಿಭಟನೆ ಮಾಡುತ್ತೇವೆ. ಅಲ್ಲಿಂದ ಕಡಿಮೆ ದುಡ್ಡು ಸಿಕ್ಕಿದೆ ಎಂದು ಇಲ್ಲಿನ ಜನರ ಮೇಲೆ ಹೊರೆ ಹಾಕೋದು ಸರಿಯಲ್ಲ ಎಂದು ರಿಜ್ವಾನ್ ವಾಗ್ದಾಳಿ ಮಾಡಿದರು.

  • ಕಲಬುರಗಿ ಜವಳಿ ಪಾರ್ಕ್ ರದ್ದು- ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

    ಕಲಬುರಗಿ ಜವಳಿ ಪಾರ್ಕ್ ರದ್ದು- ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ

    ಕಲಬುರಗಿ: 2001ರಲ್ಲಿ ಯುಪಿಎ ಸರ್ಕಾರ ಅವಧಿಯಲ್ಲಿ ಕಲಬುರಗಿ ಜಿಲ್ಲೆಗೆ ಮಂಜೂರಾಗಿದ್ದ ‘ಗುಲಬರ್ಗಾ ಜವಳಿ ಪಾರ್ಕ್’ನ್ನು ಕೇಂದ್ರ ಸರ್ಕಾರ ಕಿತ್ತುಕೊಂಡು ಈ ಭಾಗಕ್ಕೆ ಅನ್ಯಾಯ ಮಾಡಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಮೋದಿ ಸರ್ಕಾರ ಈ ಭಾಗಕ್ಕೆ ತೀವ್ರ ಅನ್ಯಾಯ ಮಾಡಿದೆ. ಉದ್ದೇಶಿತ ಜವಳಿ ಪಾರ್ಕ್ ನಿರ್ಮಾಣದಿಂದ ಸುಮಾರು 5 ಸಾವಿರ ವಿದ್ಯಾವಂತರಿಗೆ ಉದ್ಯೋಗ ಕಲ್ಪಿಸಬಹುದಾಗಿತ್ತು. ಆದರೆ ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ಉದ್ಯೋಗಾವಕಾಶ ವಂಚಿಸುವುದಲ್ಲದೇ ಅನ್ಯಾಯವೆಸಗಿದಂತಾಗಿದೆ ಎಂದು ದೂರಿದ್ದಾರೆ.

    ಅಂದಹಾಗೇ ನಿರೀಕ್ಷಿತ ಅವಧಿಯಲ್ಲಿ ಜವಳಿ ಪಾರ್ಕ್ ಪೂರ್ಣಗೊಳಿಸದ ಕಾರಣ ‘ಗುಲಬರ್ಗಾ ಟೆಕ್ಸ್ ಟೈಲ್ ಪಾರ್ಕ್’ ಯೋಜನೆ ರದ್ದುಗೊಳಿಸಿದೆ. ನಗರದ ನಂದೂರು-ಕೆಸರಟಗಿ ಕೈಗಾರಿಕಾ ವಸಾಹತು ಪ್ರದೇಶದ ಬಳಿ ‘ಗುಲಬರ್ಗಾ ಟೆಕ್ಸ್ ಟೈಲ್ ಪಾರ್ಕ್’ ಅಭಿವೃದ್ಧಿಗೆ ಉದ್ದೇಶಿಸಲಾಗಿತ್ತು. 50 ಎಕರೆ ಭೂ ಪ್ರದೇಶದಲ್ಲಿ ಒಟ್ಟು 52 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿತ್ತು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಉದ್ಯಮಿಗಳ ಪಾಲುದಾರಿಕೆ ಹಾಗೂ ಸಾಲದಲ್ಲಿ ಪಾರ್ಕ್ ತಲೆ ಎತ್ತಬೇಕಿತ್ತು. 100 ಘಟಕಗಳು ಸ್ಥಾಪನೆಯಾಗಿ ನಾಲ್ಕು ಸಾವಿರಕ್ಕೂ ಅಧಿಕ ಜನರಿಗೆ ಉದ್ಯೋಗ ಕಲ್ಪಿಸುವ ಉದ್ದೇಶ ಹೊಂದಿತ್ತು.

  • ಕೇಂದ್ರದಿಂದ ರಾಜ್ಯಕ್ಕೆ ಮಹಾಮೋಸ- ಸಬ್ ಅರ್ಬನ್ ರೈಲು ಯೋಜನೆಗೆ ಕೊಟ್ಟಿದ್ದು 1 ಕೋಟಿ ಮಾತ್ರ

    ಕೇಂದ್ರದಿಂದ ರಾಜ್ಯಕ್ಕೆ ಮಹಾಮೋಸ- ಸಬ್ ಅರ್ಬನ್ ರೈಲು ಯೋಜನೆಗೆ ಕೊಟ್ಟಿದ್ದು 1 ಕೋಟಿ ಮಾತ್ರ

    ನವದೆಹಲಿ: ರಾಜ್ಯಕ್ಕೆ ನೀಡುವ ಅನುದಾನದಲ್ಲಿ ಪ್ರತಿ ಬಾರಿ ತಾರತಮ್ಯ ಮಾಡುವ ಕೇಂದ್ರ ಸರ್ಕಾರವು ಈ ಬಾರಿ ಬಜೆಟ್‍ನಲ್ಲೂ ಮಲಧೋರಣೆ ತಾಳಿದೆ. 18,618 ಕೋಟಿ ರೂ. ವೆಚ್ಚದಲ್ಲಿ ಸಬ್ ಅರ್ಬನ್ ರೈಲು ಯೋಜನೆ ಅನುಷ್ಠಾನಗೊಳಿಸುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ಪಿಂಕ್‍ಬುಕ್‍ನಲ್ಲಿ ಈ ಯೋಜನೆಗೆ ಕೇವಲ 1 ಕೋಟಿ ಮೊತ್ತವನ್ನು ಮೀಸಲಿಟ್ಟಿದೆ.

    ಸಬ್ ಅರ್ಬನ್ ರೈಲು ಯೋಜನೆ ಆರಂಭಕ್ಕಾಗಿ ಕೇಂದ್ರ ರಾಜ್ಯ ಸರ್ಕಾರ 20+20 ಹಾಗೂ ಖಾಸಗಿ ಬ್ಯಾಂಕುಗಳ ಸಹಭಾಗಿತ್ವದಲ್ಲಿ ಶೇ. 60 ಹೂಡಿಕೆ ಮಾಡಬೇಕಿದೆ. ಈ ಪೈಕಿ ಕೇಂದ್ರ ಸರ್ಕಾರದಿಂದ ಶೇ. 20 ಅಂದರೆ ಅಂದಾಜು ಮೂರೂವರೆ ಸಾವಿರ ಕೋಟಿ ರೂ. ಕಾಮಗಾರಿಗೆ ನೀಡಬೇಕಿತ್ತು. ಆದರೆ ಅನುದಾನ ಘೋಷಿಸಿದ್ದ ಕೇಂದ್ರ ಪಿಂಕ್ ಬುಕ್‍ನಲ್ಲಿ ಒಂದು ಕೋಟಿ ನೀಡಿದ್ದು, ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಕೇಂದ್ರ ಸರ್ಕಾರದ ಈ ನಿಲುವಿನಿಂದ ಬೆಂಗಳೂರಿನ ಬಹುದಿನಗಳ ಕನಸು ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: 7 ವರ್ಷದಿಂದ ಕನ್ನಡಿಗರ ಮೂಗಿಗೆ ತುಪ್ಪ- ಅನುಷ್ಠಾನಕ್ಕೆ ಬರಲೇ ಇಲ್ಲ ಕೋಲಾರ ರೈಲ್ವೇ ಕೋಚ್ ಫ್ಯಾಕ್ಟರಿ

    ಪ್ರಸ್ತುತ ವರ್ಷದಲ್ಲಿ ಬಜೆಟ್‍ನಲ್ಲಿ ಕನಿಷ್ಠ 500 ಕೋಟಿ ರೂಪಾಯಿಯಾದ್ರು ನೀಡಬೇಕಿದ್ದ ಸರ್ಕಾರ ಕೇವಲ ಯೋಜನೆ ಘೋಷಿಸಿ ಹಣ ನೀಡದೆ ವಂಚನೆ ಮಾಡಿದೆ ಎನ್ನುವ ಆರೋಪಗಳು ಕೇಳಿ ಬಂದಿದೆ. ಸದ್ಯ ಒಂದು ಕೋಟಿ ರೂ. ನೀಡಿದ್ದು ಡಿಪಿಆರ್ ಬಳಿಕ ಅನುದಾನ ನೀಡುವ ಭರವಸೆಯನ್ನು ಕೇಂದ್ರದ ಅಧಿಕಾರಿಗಳು ನೀಡುತ್ತಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರ ಯೋಜನೆ ಆರಂಭಿದರೆ ಕೇಂದ್ರ ಸರ್ಕಾರ ಬಳಿಕ ಅನುದಾನ ನೀಡಲಿದೆ ಎಂದು ಕೆಲ ಸಂಸದರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ಈರುಳ್ಳಿ ಬೆಲೆ ಭಾರೀ ಇಳಿಕೆ – 1 ಕೆಜಿಗೆ 20 ರೂಪಾಯಿ

    ಈರುಳ್ಳಿ ಬೆಲೆ ಭಾರೀ ಇಳಿಕೆ – 1 ಕೆಜಿಗೆ 20 ರೂಪಾಯಿ

    ಬೆಂಗಳೂರು: ಡಿಸೆಂಬರ್ ತಿಂಗಳಲ್ಲಿ ಗಗನಕ್ಕೇರಿದ್ದ ಈರುಳ್ಳಿ ಬೆಲೆ ಈಗ ಭಾರೀ ಇಳಿಕೆಯಾಗಿದ್ದು, ಮಾರುಕಟ್ಟೆಯಲ್ಲಿ ಸದ್ಯ 1 ಕೆ.ಜಿ ಈರುಳ್ಳಿ 20 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

    ರೈತರ ಎರಡನೇ ಬೆಳೆ ಮಾರುಕಟ್ಟೆಗೆ ಬಂದಿರುವುದರಿಂದ ಈರುಳ್ಳಿ ಬೆಲೆ ಕಡಿಮೆಯಾಗಿದೆ. ಆದರೆ ಈ ನಡುವೆ ಕೇಂದ್ರ ಸರ್ಕಾರ ನಮ್ಮ ದೇಶದ ಈರುಳ್ಳಿ ರಫ್ತನ್ನು ಬ್ಯಾನ್ ಮಾಡಿರುವುದರಿಂದ ರೈತರಿಗೆ ಅನಾನುಕೂಲವಾಗಿದೆ. ಸದ್ಯಕ್ಕೆ ಈಗ ಮಹಾರಾಷ್ಟ್ರ ರಾಜ್ಯದ ಸೋಲಾಪುರ, ನಾಸಿಕ್, ಅಹ್ಮದ್‍ನಗರ್ ಹಾಗೂ ರಾಜ್ಯದ ಬಿಜಾಪುರದಿಂದ ಈರುಳ್ಳಿಯ ಎರಡನೇ ಬೆಳೆ ಬರುತ್ತಿದೆ. ಇದರಿಂದ ಈರುಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ.

    ಕೇಂದ್ರ ಸರ್ಕಾರ ರೈತರಿಗಾಗುವ ನಷ್ಟ ತಡೆಯಲು ರಫ್ತು ಆರಂಭಿಸಿದರೆ ಒಳಿತಾಗುತ್ತೆ. ಹೀಗಾಗಿ ರಫ್ತನ್ನು ಕೂಡಲೇ ಆರಂಭಿಸಬೇಕಿದೆ ಎಂದು ರೈತರು ಒತ್ತಾಯಿಸುತ್ತಿದ್ದಾರೆ.

    ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಕೆ.ಜಿಗೆ 20 ರಿಂದ 30 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ರೈತರಿಗೂ ನಷ್ಟವಾಗುತ್ತಿದೆ. ಸಾರಿಗೆ ವೆಚ್ಚ, ಕೂಲಿ ವೆಚ್ಚಗಳು ಹೆಚ್ಚಾಗಿರುವುದರಿಂದ ರೈತರಿಗೆ ಈರುಳ್ಳಿ ಬೆಲೆ ಇಳಿದಿರೋದು ನಷ್ಟ ಉಂಟುಮಾಡುತ್ತಿದೆ. ರಫ್ತು ಆರಂಭಿಸುವುದರಿಂದ 1 ಕೆ.ಜಿ ಈರುಳ್ಳಿಗೆ 40-50 ರೂಪಾಯಿಗೆ ಬಂದರೆ ರೈತರಿಗೆ ಅನುಕೂಲವಾಗಲಿದೆ ಎಂಬ ಲೆಕ್ಕಚಾರಗಳು ಇದ್ದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ.

  • ಆಶಾದಾಯಕವಲ್ಲದ ಬಜೆಟ್- ಅನ್ನಭಾಗ್ಯದ ಅಕ್ಕಿ ಉಳಿಸಿ ಆಪರೇಷನ್ ಕಮಲ ಮಾಡ್ತಾರಾ?: ಸಿದ್ದು ಪ್ರಶ್ನೆ

    ಆಶಾದಾಯಕವಲ್ಲದ ಬಜೆಟ್- ಅನ್ನಭಾಗ್ಯದ ಅಕ್ಕಿ ಉಳಿಸಿ ಆಪರೇಷನ್ ಕಮಲ ಮಾಡ್ತಾರಾ?: ಸಿದ್ದು ಪ್ರಶ್ನೆ

    ಮೈಸೂರು: ಇಂದು ಮಂಡನೆಯಾದ ಕೇಂದ್ರ ಸರ್ಕಾರದ ಬಜೆಟ್ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದು, ಇದು ಆಶಾದಾಯಕ ಬಜೆಟ್ ಅಲ್ಲ. 30 ಲಕ್ಷ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಕಳೆದ ಬಜೆಟ್‍ಗೂ ಈ ಬಾರಿಯ ಬಿಜೆಟ್‍ಗೂ 3 ಲಕ್ಷ ಕೋಟಿ ರೂ. ವ್ಯತ್ಯಾಸ ಇದೆ ಎಂದು ಹೇಳಿದ್ದಾರೆ.

    ಕಳೆದ ಬಜೆಟ್ ಅಂದಾಜು ವೆಚ್ಚದಲ್ಲಿ 2 ಲಕ್ಷ ಕೋಟಿ ರೂ. ಕಡಿಮೆ ಖರ್ಚಾಗಿದೆ. ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿಯ ಆದಾಯ ಬಂದಿಲ್ಲ. ಇದರಿಂದ ರಾಜ್ಯಗಳಿಗೆ ಬರಬೇಕಾದ ಪಾಲು ಖೋತಾ ಆಗಿದೆ. ದೇಶದ ಆದಾಯವನ್ನು 5 ಟ್ರಿಲಿಯನ್ ಡಾಲರ್ ಮಾಡುತ್ತೇವೆ ಎಂದಿದ್ದರು. ಆದರೆ ಇದು ಅದು ಸಾಧ್ಯವಿಲ್ಲ ಎಂದು ಎಲ್ಲರಿಗೂ ಗೊತ್ತಾಗುತ್ತಿದೆ. ಜಿಡಿಪಿ ಕುಸಿತಗೊಂಡಿದೆ. ದೇಶದ ಆದಾಯ ಪಾತಾಳಕ್ಕೆ ಹೊರಟು ಹೋಗಿದೆ. ಇದರಿಂದ ಹೆಚ್ಚು ಸಾಲ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದೆ ಜಿಡಿಪಿ 6% ತರ್ತಿವಿ ಅಂತಿದ್ದಾರೆ. ಆದ್ರೆ ಅದು ಗಗನ ಕುಸುಮ ಆಗಲಿದೆ. ಜಿಡಿಪಿ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದರು.

    ಇದೇ ವೇಳೆ ಅನ್ನಭಾಗ್ಯ ಯೋಜನೆಯ ಅಕ್ಕಿ ಕೊಡುವುದು ಬಡವರ ಯೋಜನೆ. ಬಡವರ ಪರವಾದ ಯೋಜನೆ ಮುಂದುವರಿಸಲು ಸರ್ಕಾರಕ್ಕೆ ಇಷ್ಟ ಇಲ್ಲ. ಹಾಗಾಗಿ ಅನ್ನಭಾಗ್ಯದ ಅಕ್ಕಿ ಕಡಿತಕ್ಕೆ ಮುಂದಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅನ್ನಭಾಗ್ಯ ಅಕ್ಕಿ ಕಡಿತದ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದರು.

    ಅಕ್ಕಿ ಕಡಿತ ಮಾಡುತ್ತೇವೆ ಎಂದು ಸಚಿವೆ ಶಶಿಕಲ್ಲಾ ಜೊಲ್ಲೆ ಹೇಳಿಲ್ಲ. ಇದನ್ನ ಯಡಿಯೂರಪ್ಪ ಹೇಳಿಸಿರೋದು. ಅಕ್ಕಿ ದುಡ್ಡು ಉಳಿಸಿ ಏನ್ ಮಾಡ್ತಾರಂತೆ? ಆಪರೇಷನ್ ಕಮಲ ಮಾಡೋಕಾ ಎಂದು ಪ್ರಶ್ನಿಸಿದರು. ಒಬ್ಬೊಬ್ಬ ಶಾಸಕರನ್ನು ಕರೆದುಕೊಂಡು ಹೋಗಲು 25 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಎಲೆಕ್ಷನ್‍ಗೆ 35 ಕೋಟಿ ನೀಡಿದ್ದರು. ಅಷ್ಟೊಂದು ದುಡ್ಡು ಎಲ್ಲಿಂದ ಬಂತು. ಇದನೇಲ್ಲಾ ನೋಡಿದ ಮೇಲೂ ನಿರ್ಮಲಾ ಸೀತರಾಮನ್ ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುತ್ತೇವೆ ಎಂದು ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.