Tag: Central Government

  • ಕೋವಿಡ್-19 ವಿರುದ್ಧ ಹೋರಾಟಕ್ಕೆ ಕಿಂಗ್‍ಖಾನ್ ಸಾಥ್ – ಸಾಲು ಸಾಲು ನೆರವು ಘೋಷಿಸಿ ಟೀಕೆಗಳಿಗೆ ಬ್ರೇಕ್

    ಕೋವಿಡ್-19 ವಿರುದ್ಧ ಹೋರಾಟಕ್ಕೆ ಕಿಂಗ್‍ಖಾನ್ ಸಾಥ್ – ಸಾಲು ಸಾಲು ನೆರವು ಘೋಷಿಸಿ ಟೀಕೆಗಳಿಗೆ ಬ್ರೇಕ್

    ಮುಂಬೈ: ಭಾರತದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ದೇಶಾದ್ಯಂತ ಲಾಕ್‍ಡೌನ್ ಘೋಷಿಸಿದೆ. ಅಷ್ಟೇ ಅಲ್ಲದೇ ಮಹಾಮಾರಿ ವಿರುದ್ಧ ಹೋರಾಟ ನಡೆಸುತ್ತಿದೆ. ಲಾಕ್‍ಡೌನ್ ಹಿನ್ನೆಲೆ ದೇಶದ ಆರ್ಥಿಕತೆ ಕುಸಿದಿದ್ದು, ಎಲ್ಲರೂ ಕೊರೊನಾ ಹೋರಾಟಕ್ಕೆ ಸರ್ಕಾರದ ಜೊತೆ ಕೈ ಜೋಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಳಿಕೊಂಡಿದ್ದರು. ಹೀಗಾಗಿ ಅನೇಕ ಕ್ರೀಡಾಪಟುಗಳು, ಸಿನಿಮಾ ತಾರೆಯರು ಸರ್ಕಾರಕ್ಕೆ ದೇಣಿಗೆ ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದರು. ಆದರೆ ಬಾಲಿವುಡ್ ಬಾದ್‍ಷಾ ಶಾರೂಖ್ ಖಾನ್ ಸಂಕಷ್ಟದ ಪರಿಸ್ಥಿತಿಯಲ್ಲಿ ದೇಶದ ನೆರವಿಗೆ ಮುಂದೆ ಬಂದಿಲ್ಲ ಎಂಬ ಟೀಕೆಗಳು ಕೇಳಿಬಂದಿತ್ತು.

    ಈಗ ಈ ಟೀಕೆಗಳಿಗೆ ಶಾರೂಖ್ ಬ್ರೇಕ್ ಹಾಕಿದ್ದು, ಸಾಲು ಸಾಲು ನೆರವುಗಳನ್ನು ಘೋಷಿಸುವ ಮೂಲಕ ಟೀಕೆಗಾರರ ಬಾಯಿ ಮುಚ್ಚಿಸಿದ್ದಾರೆ. ತಮ್ಮ ವಿವಿಧ ಫೌಂಡೇಷನ್‍ಗಳು, ಫ್ರಾಂಚೈಸಿಗಳ ಮೂಲಕ ದೇಶಕ್ಕೆ ಸಹಾಯ ಮಾಡುವುದಾಗಿ ಕಿಂಗ್‍ಖಾನ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರಧಾನಿ ಹಾಗೂ ಮಹಾರಾಷ್ಟ್ರ ಸಿಎಂ ಪರಿಹಾರ ನಿಧಿಗಳಿಗೂ ದೇಣಿಗೆ ನೀಡುವುದಾಗಿ ಹೇಳಿಕೊಂಡಿದ್ದಾರೆ.

    ಮಹಾರಾಷ್ಟ್ರದ ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡುವುದರ ಜೊತೆಗೆ ಮುಂಬೈ ನಗರದಲ್ಲಿನ ಬಡವರಿಗೆ ಸಹಾಯ ಮಾಡುವುದಾಗಿ ಕಿಂಗ್‍ಖಾನ್ ತಿಳಿಸಿದ್ದಾರೆ. ಶಾರೂಖ್ ಅವರ ಈ ನೆರವಿಗಾಗಿ ಮಹಾರಾಷ್ಟ್ರ ಸಿಎಂ, ಶಾರೂಖ್ ಖಾನ್ ಮತ್ತು ಗೌರಿ ಖಾನ್ ಅವರಿಗೆ ಧನ್ಯವಾದ ತಿಳಿಸಿದ್ದರು.

    ಪ್ರಧಾನ ಮಂತ್ರಿ, ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಶಾರೂಖ್ ದೇಣಿಗೆ ನೀಡುವುದಾಗಿ ಘೋಷಿಸಿಕೊಂಡಿದ್ದಾರೆ. ಕೆಕೆಆರ್ ಮತ್ತು ಮೀರ್ ಫೌಂಡೇಷನ್ ವತಿಯಿಂದ 50,000 ಆರೋಗ್ಯ ಕಿಟ್, ರೋಟಿ ಫೌಂಡೇಷನ್, ಮೀರ್ ಫೌಂಡೇಷನ್ ಕಡೆಯಿಂದ 3 ಲಕ್ಷ ಊಟದ ಕಿಟ್ ನೀಡಲಾಗುತ್ತಿದೆ. ಅಷ್ಟೇ ಅಲ್ಲದೇ ಅರ್ಥ್ ಫೌಂಡೇಷನ್, ಮೀರ್ ಫೌಂಡೇಷನ್ ಮೂಲಕ ಮುಂಬೈ ಒಂದರಲ್ಲಿಯೇ 5,500 ಮಂದಿಗೆ ಒಂದು ತಿಂಗಳ ಆಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ. ಪ್ರತಿದಿನ 2000 ಜನರಿಗೆ ಆಹಾರ ಸರಬರಾಜು ಮಾಡಲಾಗುತ್ತಿದೆ ಎಂದು ಕಿಂಗ್‍ಖಾನ್ ಮಾಹಿತಿ ನೀಡಿದ್ದಾರೆ.

    ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಕೈಜೋಡಿಸುವಂತೆ ಪ್ರಧಾನಿ ನೀಡಿದ ಕರೆಗೆ ನಟ ಅಕ್ಷಯ್ ಕುಮಾರ್, ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ಸಚಿನ್, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ಕುಸ್ತಿಪಟು ಭಜರಂಗ್ ಪೂನಿಯಾ ಸೇರಿದಂತೆ ಅನೇಕರು ಭಾರೀ ಮೊತ್ತ ದೇಣಿಗೆ ನೀಡುವ ಮೂಲಕ ಕೈಜೋಡಿಸಿದ್ದಾರೆ. ಇತ್ತ ಸಲ್ಮಾನ್ ಖಾನ್ ಲಾಕ್‍ಡೌನ್‍ನಿಂದ ಸಂಕಷ್ಟಕ್ಕೀಡಾದ 25 ಸಾವಿರ ಸಿನಿಮಾ ಕಾರ್ಮಿಕರ ನೆರವಿಗೆ ನಿಂತಿದ್ದಾರೆ.

  • ಹುಬ್ಬಳ್ಳಿಯಲ್ಲಿ ಐಸೋಲೇಶನ್ ವಾರ್ಡ್‍ಗಳಾಗುತ್ತಿವೆ ರೈಲ್ವೇ ಬೋಗಿಗಳು

    ಹುಬ್ಬಳ್ಳಿಯಲ್ಲಿ ಐಸೋಲೇಶನ್ ವಾರ್ಡ್‍ಗಳಾಗುತ್ತಿವೆ ರೈಲ್ವೇ ಬೋಗಿಗಳು

    ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಭಾಯಿಸಲು ಕೇಂದ್ರದ ಸೂಚನೆಗಳಂತೆ ರೈಲ್ವೆ ಬೋಗಿಗಳನ್ನೇ ಐಸೋಲೇಶನ್ ವಾರ್ಡ್‍ಗಳನ್ನಾಗಿ ಮಾಡಲಾಗುತ್ತಿದೆ. ಇದನ್ನು ನೈಋತ್ಯ ರೈಲ್ವೇ ವಲಯ ಸಹ ಜಾರಿಗೆ ತರುತ್ತಿದ್ದು, ಹುಬ್ಬಳ್ಳಿ ಜಂಕ್ಷನ್‍ನಲ್ಲಿ ಈಗಾಗಲೇ ಈ ಕಾರ್ಯ ಆರಂಭವಾಗಿದೆ.

    ಕೊರೊನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ನೈಋತ್ಯ ರೈಲ್ವೇ ವಲಯದಲ್ಲಿನ ರೈಲು ಬೋಗಿಗಳನ್ನು ಪ್ರತ್ಯೇಕ ವಾರ್ಡ್‍ಗಳಾಗಿ ಪರಿವರ್ತಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಪ್ರತ್ಯೇಕ ಸೌಲಭ್ಯಗಳಿಗಾಗಿ ದೇಶದ ಸಾಮಥ್ರ್ಯವನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ರೈಲ್ವೆ ಸ್ಲೀಪರ್ ಕ್ಲಾಸ್ ಬೋಗಿಗಳನ್ನು ಕೋವಿಡ್-19 ಐಸೋಲೇಷನ್ ವಾರ್ಡ್‍ಗಳಾಗಿ ಪರಿವರ್ತಿಸಲಾತ್ತಿದೆ.

    ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ರೈಲ್ವೇ ಕಾರ್ಮಿಕರು ಐಸೋಲೆಟೆಡ್ ವಾರ್ಡ್ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. ಬೋಗಿಗಳು ಸ್ವಚ್ಛವಾಗಿದ್ದು, ರೋಗಿಗಳು ಚೇತರಿಸಿಕೊಳ್ಳಲು ಆರೋಗ್ಯಕರ ಪರಿಸರವನ್ನು ಹೊಂದಿವೆ. ಅಗತ್ಯಕ್ಕನುಗುಣವಾಗಿ ಕೆಲವು ಕೋವಿಡ್-19 ರೋಗಿಗಳನ್ನು ಈ ಐಸೋಲೇಶನ್ ಭೋಗಿಗಳಲ್ಲಿರಿಸಿ ಚಿಕಿತ್ಸೆ ನೀಡಲಾಗುವುದು. ಆರಂಭದಲ್ಲಿ 5,000 ಪ್ರಯಾಣಿಕರ ಬೋಗಿಗಳನ್ನು ಐಸೋಲೇಶನ್ ವಾರ್ಡ್‍ಗಳನ್ನಾಗಿ ಮಾರ್ಪಡಿಸಲು ಯೋಜಿಸಲಾಗಿದೆ.

    ಮಾರ್ಚ್ 25 ರಂದು ಪ್ರಾರಂಭವಾದ ರಾಷ್ಟ್ರವ್ಯಾಪಿ ಲಾಕ್‍ಡೌನ್ ನಂತರ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಎಲ್ಲ ಪ್ರಯಾಣಿಕ ರೈಲು ಸೇವೆಗಳನ್ನು ಸರ್ಕಾರ ಸ್ಥಗಿತಗೊಳಿಸಿದೆ. ಇವುಗಳಲ್ಲಿ ಕೆಲು ರೈಲುಗಳನ್ನು ಐಸೋಲೇಶನ್ ವಾರ್ಡ್‍ಗಳನ್ನಾಗಿ ಪರಿವರ್ತಿಸಲಾಗುತ್ತಿದೆ.

    ರೈಲ್ವೆ ಬೋಗಿಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆ ಸಿಗಲಿದೆ. ವೈದ್ಯ ಸಿಬ್ಬಂದಿ, ಸೋಂಕಿತರು, ಶಂಕಿತರು ಸೇರಿದಂತೆ ಆಹಾರ ಪೂರೈಕೆಗೂ ಅವಕಾಶ ಕಲ್ಪಿಸಲಾಗಿದೆ. ದೇಶದಲ್ಲಿ ಕೊರೊನಾ ವೈರಸ್ ಉಲ್ಬಣಗೊಂಡ ನಂತರ ತಮ್ಮನ್ನು ತಾವೇ ಪ್ರತ್ಯೇಕಿಸಿಕೊಳ್ಳುವ, ಮತ್ತೊಬ್ಬರಿಂದ ಅಂತರ ಕಾಯ್ದುಕೊಳ್ಳುವ ಸೌಲಭ್ಯಗಳ ಅವಶ್ಯಕತೆಯಿದೆ. ಈ ಬೇಡಿಕೆ ಈಡೇರಿಸಲು ಭಾರತೀಯ ರೈಲ್ವೆ ಒಂದು ಚತುರ ಪರಿಹಾರವನ್ನು ಕಂಡುಹಿಡಿದಿದೆ.

    ವಿದ್ಯುತ್:
    ಪ್ರತ್ಯೇಕ ಸೌಲಭ್ಯಗಳಿಗಾಗಿ ದೇಶದ ಸಾಮಥ್ರ್ಯವನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ರೈಲ್ವೆ ತನ್ನ ರೈಲು ಬೋಗಿಗಳನ್ನು ಕ್ವಾರಂಟೈನ್ ಹಬ್‍ಗಳಾಗಿ ಪರಿವರ್ತಿಸುವ ಯೋಜನೆಯನ್ನು ರೂಪಿಸುತ್ತಿದೆ. ಆದರೆ ವಿದ್ಯುತ್ ಸಂಪರ್ಕವಿರುವ ಸಮೀಪದಲ್ಲಿ ಬೋಗಿಗಳನ್ನು ನಿಲ್ಲಿಸಿದರೆ ಅನುಕೂಲವಾಗಲಿದೆ.

    ವಿನ್ಯಾಸ:
    ಕ್ವಾರಂಟೈನ್‍ಗಾಗಿ ರೈಲ್ವೆ ಇಲಾಖೆ ನಾನ್ ಎಸಿ ಕೋಚ್ ಆಯ್ಕೆ ಮಾಡಿಕೊಂಡಿದೆ. ಇದರಲ್ಲಿ 10 ಕ್ಯಾಬಿನ್‍ಗಳಿರುತ್ತವೆ. ಕೇವಲ ಒಂದು ಬರ್ತ್ ಬಿಟ್ಟು ಉಳಿದ ಮೂರು ಬರ್ತ್ ತೆಗೆದು ರೂಮ್ ರೀತಿ ಸಿದ್ಧಗೊಳಿಸಲಾಗಿದೆ. ಇದೇ ರೀತಿ ಸೋಂಕಿತ ವ್ಯಕ್ತಿಯ ಚಿಕಿತ್ಸೆಗೆ ಇರುವ ರೂಮ್ ವ್ವವಸ್ಥೆ ಮಾಡಲಾಗಿದ್ದು, ಪ್ಲಾಸ್ಟಿಕ್ ಕರ್ಟನ್‍ನಿಂದ ಕ್ಯಾಬಿನ್ ಕವರ್ ಮಾಡಲಾಗಿದೆ.

    ಶೌಚಾಲಯ:
    ಒಂದು ಕ್ಯಾಬಿನ್‍ನಲ್ಲಿ 3 ಭಾರತೀಯ ಶೈಲಿ 1 ವೆಸ್ಟರ್ನ್ ಟಾಯ್ಲೆಟ್‍ಗಳಿರುತ್ತವೆ. ಈ ಪೈಕಿ ಎರಡು ಟಾಯ್ಲೆಟ್‍ಗಳನ್ನು ಸ್ನಾನದ ಕೋಣೆಯಾಗಿ ಪರಿವರ್ತಿಸಲಾಗಿದೆ. ಬಾಥ್ ರೂಮ್‍ನಲ್ಲಿ ಟ್ಯಾಪ್‍ನ ಎತ್ತರವನ್ನು ಹೆಚ್ಚಿಸಲಾಗಿದೆ. ಜೊತೆಗೆ ಹ್ಯಾಂಡ್ ಶವರ್ ಗಳನ್ನ ಹಾಕಲಾಗಿದೆ.

    ವೈದ್ಯಕೀಯ ಸಿಬ್ಬಂದಿ:
    ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಡಾಕ್ಟರ್, ನರ್ಸ್ ಸೇರಿ ವೈದ್ಯಕೀಯ ಸಿಬ್ಬಂದಿಗೂ ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆ ಮಾಡಲಾಗಿದೆ. ರೋಗಿ ಮತ್ತು ವೈದ್ಯರ ಕ್ಯಾಬಿನ್ ಮಧ್ಯೆ ಅಡ್ಡವಾಗಿ ಪ್ಲಾಸ್ಟಿಕ್ ಕರ್ಟನ್ ಹಾಕಲಾಗಿದೆ.

    ಆಹಾರ:
    ಬೇಸ್ ಅಡಿಗೆಮನೆಗಳಿಲ್ಲದ ನಿಲ್ದಾಣಗಳಿಗೆ ಆಹಾರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಪ್ಯಾಂಟ್ರಿ ಕಾರುಗಳನ್ನು ಮೊಬೈಲ್ ಅಡುಗೆಮನೆಯನ್ನಾಗಿ ಪರಿವರ್ತಿಸಲು ರೈಲ್ವೆ ಯೋಜಿಸಿದೆ.

  • ಮಂಗ್ಳೂರು-ಕಾಸರಗೋಡು ಗಡಿ ದಿಗ್ಬಂಧನ ತೆರವುಗೊಳಿಸಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ

    ಮಂಗ್ಳೂರು-ಕಾಸರಗೋಡು ಗಡಿ ದಿಗ್ಬಂಧನ ತೆರವುಗೊಳಿಸಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ

    ತಿರುವನಂತಪುರಂ: ಕೇರಳದ ರೋಗಿಗಳಿಗೆ ಕರ್ನಾಟಕದ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಕೊಡಿಸುವ ನಿಟ್ಟಿನಲ್ಲಿ ಕರ್ನಾಟಕ ವಿಧಿಸಿರುವ ಗಡಿ ದಿಗ್ಬಂಧನವನ್ನು ತೆಗೆದುಹಾಕುವಂತೆ ಕೇರಳ ಹೈಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಮಧ್ಯಂತರ ಆದೇಶ ಪ್ರಕಟಿಸಿದೆ.

    ಕೇರಳ ಹೈಕೋರ್ಟ್ ಅಸೋಸಿಯೇಷನ್ ನವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಿತು.

    ಮಂಗಳೂರು ಮತ್ತು ಕೇರಳದ ಕಾಸರಗೋಡು ನಡುವೆ ಸಂಪರ್ಕಿಸುವ ರಸ್ತೆಯು ರಾಷ್ಟ್ರೀಯ ಹೆದ್ದಾರಿಗಳ ಭಾಗವಾಗಿದೆ. ಆದ್ದರಿಂದ ಈ ರಸ್ತೆಗಳನ್ನು ದಿಗ್ಬಂಧನದಿಂದ ಮುಕ್ತವಾಗಿರಿಸುವಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

    ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಕರ್ನಾಟಕವು ನಿರ್ಮಿಸಿರುವ ಗಡಿ ಪ್ರವೇಶ ದಿಗ್ಬಂಧನವನ್ನು ತಕ್ಷಣವೇ ತೆಗೆದುಹಾಕಬೇಕೆಂದು ನಾವು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುತ್ತೇವೆ. ಜೊತೆಗೆ ಯಾವುದೇ ವಿಳಂಬವಿಲ್ಲದೆ ಎರಡು ರಾಜ್ಯಗಳ ನಡುವಿನ ಗಡಿಯುದ್ದಕ್ಕೂ, ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ರೋಗಿಗಳನ್ನು ಕರೆದೊಯ್ಯುವ ವಾಹನಗಳಿಗೆ ಮುಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ನ್ಯಾಯಮೂರ್ತಿ ಎ.ಕೆ.ಜಯಶಂಕರ್ ನಂಬಿಯಾರ್ ಹಾಗೂ ಶಾಜಿ ಪಿ ಚಲಿ ಅವರಿದ್ದ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

    ಭಾರತದ ಪ್ರಜೆ ದೇಶದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮುಕ್ತವಾಗಿ ಸಂಚರಿಸಬಹುದು ಎಂದು ಸಂವಿಧಾನದ 19 (1) (ಡಿ) ವಿಧಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ಇಂತಹ ಸಂದರ್ಭಗಳಲ್ಲಿ ಗಡಿ ದಿಗ್ಬಂಧನ ಸರಿಯಲ್ಲ. ಗಡಿ ದಿಗ್ಬಂಧ ತೆರವು ಸ್ಥಗಿತವಾದಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ನಿವಾಸಿಗಳಿಗೆ ತೊಂದರೆಯಾಗಬಹುದು ಎಂದು ಹೈಕೋರ್ಟ್ ತಿಳಿಸಿದೆ.

    ಈ ಕುರಿತು ಟ್ವೀಟ್ ಮಾಡಿರುವ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಕಾಸರಗೋಡಿನಿಂದ ಮಂಗಳೂರಿಗೆ ಚಿಕಿತ್ಸೆಗಾಗಿ ಬರುವವರನ್ನು ಮಾನವೀಯ ದೃಷ್ಟಿಯಿಂದ ನೋಡಬೇಕಾಗಿದೆ. ಸಾಮಾನ್ಯ ಸಂಚಾರವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಿ ಚಿಕಿತ್ಸೆಗೆ ಬರುವವರಿಗೆ ಮಾತ್ರ ಎರಡು ರಾಜ್ಯಗಳ ನಡುವಿನ ಹೆದ್ದಾರಿಯನ್ನು ಮುಕ್ತಗೊಳಿಸಬೇಕು. ಕೊರೊನಾ ವಿರುದ್ಧದ ಹೋರಾಟ ಜಾತಿ, ಧರ್ಮ ಮತ್ತು ಗಡಿಯನ್ನು ಮೀರಿದ್ದು ಎಂದು ತಿಳಿಸಿದ್ದಾರೆ.

  • ಕೊರೊನಾ ವಿರುದ್ಧ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಂಡ ಕೇಂದ್ರ ಸರ್ಕಾರ

    ಕೊರೊನಾ ವಿರುದ್ಧ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಂಡ ಕೇಂದ್ರ ಸರ್ಕಾರ

    ನವದೆಹಲಿ: ಕೊರೊನಾ ವೈರಸ್ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಂಡಿದೆ. ಲಾಕ್‍ಡೌನ್ ಕ್ರಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸುವಂತೆ ರಾಜ್ಯ ಸರ್ಕಾರಗಳಿಗೆ ಆದೇಶಿಸಿದೆ.

    ಆಯುಷ್ ಮೂಲಕ ದೇಶಾದ್ಯಂತ ಕೊರೊನಾ ಜಾಗೃತಿ ಮೂಡಿಸಲಾಗುತ್ತೆ. 21 ದಿನದ ಲಾಕ್‍ಡೌನ್‍ನಿಂದಾಗಿ ಕೆಲವು ಮಾನಸಿಕ ಸಮಸ್ಯೆಗಳ ವರದಿಯಾಗುತ್ತಿದ್ದು, ಇದಕ್ಕಾಗಿ ನಿಮ್ಹಾನ್ಸ್ ಗೆ ಹೆಲ್ಪ್ ಲೈನ್ ತೆರೆಯಲಾಗಿದೆ. ಈ ಮಧ್ಯೆ ಲಾಕ್‍ಡೌನ್ ಅವಧಿಯಲ್ಲಿ ದಿನಪತ್ರಿಕೆ ವಿತರಣೆಗೆ ನಿರ್ಬಂಧ ಇಲ್ಲ ಎಂದು ಗೃಹ ಸಚಿವಾಲಯ ಹೇಳಿದೆ.

    ಬಿಗಿ ಕ್ರಮಗಳು ಯಾವುದು?
    1. ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಗಡಿ ಸೀಲ್ ಮಾಡಿ
    2. ಎಲ್ಲಾ ನಗರ, ಹೆದ್ದಾರಿಗಳಲ್ಲಿ ಜನ ಓಡಾಟ ಕಟ್ಟುನಿಟ್ಟಾಗಿ ನಿರ್ಬಂಧಿಸಿ( ಅಗತ್ಯ ವಸ್ತುಗಳ ಸಾಗಾಟಕ್ಕೆ ಅನುಮತಿ ಇದೆ)
    3. ಹೈವೇಗೆ ಇಳಿದವರನ್ನು ಅರೆಸ್ಟ್ ಮಾಡಿ, 14 ದಿನ ಕ್ವಾರಂಟೈನ್‍ನಲ್ಲಿಡಿ
    4. ವಲಸೆ ಕಾರ್ಮಿಕರನ್ನು ಹತ್ತಿರದ ಕ್ವಾರಂಟೈನ್ ಸೆಂಟರ್‍ಗಳಿಗೆ ಶಿಫ್ಟ್ ಮಾಡಿ, ಊಟ, ವಸತಿ ಕಲ್ಪಿಸಿ
    5. ವಲಸೆ ಕಾರ್ಮಿಕರಿಂದ 1 ತಿಂಗಳು ಬಾಡಿಗೆಗೆ ಒತ್ತಾಯಿಸುವಂತ್ತಿಲ್ಲ(ಮನೆ ಖಾಲಿ ಮಾಡಿಸಿದರೆ ಮಾಲೀಕರ ವಿರುದ್ಧ ಕ್ರಮ)
    6. ಲಾಕ್‍ಡೌನ್ ಉಲ್ಲಂಘನೆಯಾದರೆ ಡಿಸಿ, ಎಸ್‍ಪಿಗಳೇ ಹೊಣೆ. ಹೀಗೆ ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಬಿಗಿ ಕ್ರಮಗಳನ್ನು ತೆಗೆದುಕೊಂಡಿದೆ.

    ಭಾನುವಾರ ಕೊರೊನಾ ವಿಚಾರದ ಬಗ್ಗೆ ಮನ್ ಕಿ ಬಾತ್‍ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದರು. ಈ ವೇಳೆ ಬಡ ಜನರಿಗೆ ತೊಂದರೆ ಉಂಟುಮಾಡಿದ ಲಾಕ್‍ಡೌನ್ ಕಠಿಣ ಕ್ರಮಗಳನ್ನು ಕೈಗೊಂಡಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ. ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿದ್ದಕ್ಕೆ ಕೆಲವರು ನನ್ನ ಮೇಲೆ ಕೋಪಗೊಂಡಿದ್ದಾರೆ ಅಂತ ನನಗೆ ತಿಳಿದಿದೆ. ಬಡವರಿಗೆ ಇದರಿಂದ ಸಮಸ್ಯೆಯಾಗಿದೆ ಎನ್ನುವುದು ನನಗೆ ತಿಳಿದಿದೆ. ಆದರೆ ಈ ಯುದ್ಧವನ್ನು ಗೆಲ್ಲಲು ಇಂತಹ ಕಠಿಣ ಕ್ರಮಗಳು ಅಗತ್ಯವಾಗಿದ್ದು, ದೇಶದ ರಕ್ಷಣೆಗಾಗಿ ಈ ಕಠಿಣ ನಿರ್ಧಾರ ಕೈಗೊಳ್ಳಲಾಯಿತು ಎಂದು ತಿಳಿಸಿದ್ದರು.

    ಕೋವಿಡ್-19 ವಿರುದ್ಧದ ಯುದ್ಧವು ಕಠಿಣವಾದದ್ದು ಮತ್ತು ಅದಕ್ಕೆ ಇಂತಹ ಕಠಿಣ ನಿರ್ಧಾರಗಳು ಬೇಕಾಗುತ್ತವೆ. ಭಾರತದ ಜನರನ್ನು ಸುರಕ್ಷಿತವಾಗಿಡುವುದು ಸರ್ಕಾರದ ಮುಖ್ಯ ಉದ್ದೇಶ. ಯಾರೂ ಉದ್ದೇಶಪೂರ್ವಕವಾಗಿ ಲಾಕ್‍ಡೌನ್ ಘೋಷಣೆಯನ್ನು ಮುರಿಯಲು ಬಯಸುವುದಿಲ್ಲ ಎಂದು ನಂಬಿಕೆ ಹೊಂದಿದ್ದೇನೆ. ಆದರೆ ಕೆಲವರು ಲಾಕ್‍ಡೌನ್ ನಡುವೆಯೂ ಮನೆಯಿಂದ ಹೊರಗೆ ಬರುತ್ತಿದ್ದಾರೆ. ಅಂತವರಿಂದ ಕೊರೊವಾ ವೈರಸ್ ಮತ್ತಷ್ಟು ಹೆಚ್ಚಾಗುತ್ತಿದ್ದು, ನಮ್ಮನ್ನು ರಕ್ಷಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂದು ಹೇಳಿದ್ದರು.

  • ಕೊರೊನಾ ಎಫೆಕ್ಟ್ – ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಲು ಸೂಚಿಸುವಂತೆ ಸುಪ್ರೀಂಗೆ ಅರ್ಜಿ

    ಕೊರೊನಾ ಎಫೆಕ್ಟ್ – ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಲು ಸೂಚಿಸುವಂತೆ ಸುಪ್ರೀಂಗೆ ಅರ್ಜಿ

    ನವದೆಹಲಿ: ಕೊರೊನಾ ವೈರಸ್ ಹರಡುವಿಕೆ ಹಿನ್ನಲೆ ಭಾರತ ಸಂಕಷ್ಟಕ್ಕೆ ಸಿಲುಕಿದ್ದು, ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಲು ಕೇಂದ್ರ ಗೃಹ ಇಲಾಖೆಗೆ ಸೂಚಿಸುವಂತೆ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದೆ.

    ದಿ ಸೆಂಟ್ರಲ್ ಫಾರ್ ಅಕೌಂಟೆಬಿಲಿಟಿ ಮತ್ತು ಸಿಸ್ಟಮ್ ಚೇಂಜ್ ಹೆಸರಿನ ಸಂಸ್ಥೆ ಈ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ತುರ್ತು ವಿಚಾರಣೆ ನಡೆಸುವಂತೆ ಸಂಸ್ಥೆ ಮನವಿ ಮಾಡಿಕೊಂಡಿದೆ. ಅಲ್ಲದೇ ಶೀಘ್ರವೇ ಈ ಬಗ್ಗೆ ಒಂದು ನಿರ್ಧಾರ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟಿಗೆ ಸಂಸ್ಥೆ ಒತ್ತಾಯಿಸಿದೆ.

    ಸಂವಿಧಾನದ 360ನೇ ವಿಧಿ ಅನ್ವಯ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ ಮಾಡಬಹುದಾಗಿದ್ದು, ಕೇಂದ್ರಕ್ಕೆ ಆರ್ಥಿಕ ತುರ್ತು ಪರಿಸ್ಥಿತಿ ಎಂದು ಘೋಷಿಸುವಂತೆ ಸೂಚನೆ ನೀಡಲು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

    ಕೊರೊನಾ ಪರಿಸ್ಥಿತಿಯನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಲಾಕ್‍ಡೌನ್ ಹೆಸರಿನಲ್ಲಿ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ. ಇದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆ ಆಗಲಿದೆ. ಸ್ವತಂತ್ರ ಬಂದ ಬಳಿಕ ಇದೇ ಮೊದಲ ಬಾರಿಗೆ ದಿನ ಪತ್ರಿಕೆಗಳು ಸಿಗುತ್ತಿಲ್ಲ. ಈಗ ದೇಶದಲ್ಲಿ ನಿಜ ಅರ್ಥದ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ, ಹೀಗಾಗಿ ಕೂಡಲೇ ಕೇಂದ್ರ ಸರ್ಕಾರ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸುವಂತೆ ಸೂಚಿಸಿ ಎಂದು ಅರ್ಜಿಯಲ್ಲಿ ಸಂಸ್ಥೆ ಉಲ್ಲೇಖಿಸಿದೆ.

    ಲಾಕ್‍ಡೌನ್ ಸಂದರ್ಭದಲ್ಲಿ ಜನಕ್ಕೆ ವಿನಾಯಿತಿ ನೀಡಬೇಕು. ವಿದ್ಯುತ್, ನೀರು, ಗ್ಯಾಸ್, ತೆರಿಗೆಗಳನ್ನು ಮುಕ್ತಗೊಳಿಸಲು ಸೂಚಿಸಬೇಕು ಎಂದು ಸಿಎಎಸ್‍ಸಿ ಪರವಾಗಿ ವಕೀಲ ವಿರಾಗ್ ಗುಪ್ತಾ ಸುಪ್ರೀಂ ಕೋರ್ಟಿಗೆ ಮನವಿ ಮಾಡಿದ್ದಾರೆ.

  • ನಿಮ್ಮ ನಾಯಕತ್ವವು ಕೂಡ ತುಂಬಾ ಸ್ಫೋಟಕವಾಗಿದೆ ಮೋದಿಜೀ- ಪೀಟರ್ಸನ್

    ನಿಮ್ಮ ನಾಯಕತ್ವವು ಕೂಡ ತುಂಬಾ ಸ್ಫೋಟಕವಾಗಿದೆ ಮೋದಿಜೀ- ಪೀಟರ್ಸನ್

    ನವದೆಹಲಿ: ವಿಶ್ವದ ಎಲ್ಲೆಡೆ ಹರಡುತ್ತಿರುವ ಕೊರೊನಾ ವೈರಸ್ ವಿರುದ್ಧ ಹೋರಾಡಲು ಇಂಗ್ಲೆಂಡ್ ಮಾಜಿ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಕೇವಿನ್ ಪೀಟರ್ಸನ್ ಹಿಂದಿಯಲ್ಲಿ ಟ್ವೀಟ್ ಮಾಡಿ ಕರೆಕೊಟ್ಟಿದ್ದು, ಇದಕ್ಕೆ ಪ್ರಧಾನಿ ಮೋದಿ ಅವರು ಫಿದಾ ಆಗಿದ್ದಾರೆ.

    ಕೊರೊನಾ ವೈರಸ್ ಮಹಾಮಾರಿ ವಿಶ್ವದಾದ್ಯಂತ ತನ್ನ ಅರ್ಭಟವನ್ನು ಶುರು ಮಾಡಿದೆ. ಕೊರೊನಾ ಪರಿಣಾಮದಿಂದ ಜಗತ್ತಿನ ಬಹುತೇಕ ಚುಟುವಟಿಕೆಗಳು ಸ್ತಬ್ಧವಾಗಿವೆ. ಕ್ರಿಕೆಟ್ ಕೂಡ 60 ವರ್ಷದ ನಂತರ ತನ್ನ ಎಲ್ಲ ಚುಟುವಟಿಕೆಯನ್ನು ನಿಲ್ಲಿಸಿದೆ. ಇದರ ಮಧ್ಯೆ ಕ್ರಿಕೆಟಿಗರು ಮನೆಯಲ್ಲೇ ತಮ್ಮನ್ನು ತಾವೇ ಪ್ರತ್ಯೇಕವಾಗಿದ್ದು ಕೊರೊನಾ ವಿರುದ್ಧ ಹೋರಾಡಲು ಸಿದ್ಧವಾಗಿ ಎಂದು ಸಂದೇಶ ರವಾನಿಸುತ್ತಿದ್ದಾರೆ.

    https://twitter.com/KP24/status/1240903502345486336

    ಈ ವಿಚಾರವಾಗಿ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೇವಿನ್ ಪೀಟರ್ಸನ್ ಹಿಂದಿಯಲ್ಲಿ ಒಂದು ಟ್ವೀಟ್ ಮಾಡಿದ್ದು, ಭಾರೀ ವೈರಲ್ ಆಗಿದೆ. ನಮಸ್ಕಾರ ಭಾರತ, ನಾವು ಕೊರೊನಾ ವೈರಸ್ ಅನ್ನು ಹೋಗಾಲಾಡಿಸಲು ಒಂದಾಗಬೇಕಿದೆ. ನಾವು ನಮ್ಮ ನಮ್ಮ ಸರ್ಕಾರ ನೀಡುವ ಆದೇಶದಂತೆ ಸ್ವಲ್ಪ ದಿನಗಳ ಕಾಲ ಮನೆಯಲ್ಲೇ ಇರಬೇಕು. ನಾವೂ ಜಾಗರೂಕತೆಯಿಂದ ಇರಬೇಕಾದ ಸಮಯವಿದು ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.

    ಕೇವಿನ್ ಪೀಟರ್ಸನ್ ಅವರು ಬೇರೆ ದೇಶದವರು ಅದರೂ ನಮ್ಮ ದೇಶದ ಮೇಲಿನ ಕಾಳಜಿಯಿಂದ ಹಿಂದಿಯಲ್ಲಿ ಟ್ವೀಟ್ ಮಾಡಿದ್ದನ್ನು ನೋಡಿ ಖುಷಿಯಾದ ಮೋದಿ ಅವರು, ಪೀಟರ್ಸನ್ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದಾರೆ. ಹಲವು ಬಿಕ್ಕಟ್ಟುಗಳ ಸಮಯದಲ್ಲಿ ತಮ್ಮ ತಂಡವನ್ನು ನೋಡಿದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ನಮಗಾಗಿ ಏನನ್ನೋ ಹೇಳುತ್ತಿದ್ದಾರೆ ಕೇಳಿ ಎಂದು ಬರೆದು, ನಾವೂ ಕೂಡ ಕೊರೊನಾ ವೈರಸ್ ವಿರುದ್ಧ ಹೋರಾಡಲು ಒಗ್ಗೂಡುತ್ತೇವೆ ಎಂದು ಹೇಳಿದ್ದಾರೆ.

    https://twitter.com/KP24/status/1240989666733707266

    ಮೋದಿ ಅವರು ಟ್ವೀಟ್‍ಗೆ ಮತ್ತೆ ರೀಟ್ವೀಟ್ ಮಾಡಿರುವ ಕೇವಿನ್ ಪೀಟರ್ಸನ್ ಅವರು, ಧನ್ಯವಾದಗಳು ಮೋದಿ ಜೀ, ನಿಮ್ಮ ನಾಯಕತ್ವ ಕೂಡ ಬಹಳ ಸ್ಫೋಟಕವಾಗಿದೆ ಎಂದು ಬರೆದುಕೊಂಡಿದ್ದಾರೆ. ಕೊರೊನಾ ವಿರುದ್ಧ ಹೋರಾಡುವಂತೆ ಮತ್ತು ಸರ್ಕಾರದ ಸೂಚನೆಯಂತೆ ನಡೆಯುವಂತೆ ಎಲ್ಲಾ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ಕರೆಕೊಡುತ್ತಿದ್ದಾರೆ.

    ಶನಿವಾರ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಕೂಡ ವಿಡಿಯೋ ಮಾಡಿ ಸಂದೇಶ ನೀಡಿದ್ದರು. ಈಗ ನಾವೆಲ್ಲ ಬಹಳ ಕಠಿಣ ಪರಿಸ್ಥಿತಿಯಲ್ಲಿ ಇದ್ದೇವೆ. ನಾವೆಲ್ಲ ಸೇರಿ ಕೊರೊನಾ ವೈರಸ್ ಅನ್ನು ತಡೆಹಿಡಿಯಬೇಕಿದೆ. ನಾವು ನಮ್ಮ ಸುರಕ್ಷತೆಗಾಗಿ ಮನೆಯಲ್ಲೇ ಇದ್ದೇವೆ. ಹಾಗೇ ನೀವು ಕೂಡ ನಿಮ್ಮ ಸುರಕ್ಷತೆಗೆ ಮನೆಯಲ್ಲೇ ಇರಿ. ನಾವೆಲ್ಲರೂ ಸೇರಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟಬೇಕು. ನಾವಾಗಿಯೇ ಐಸೋಲೇಷನ್‍ನಲ್ಲಿ ಇರೋಣ ಎಂದು ವಿರುಷ್ಕಾ ಜೋಡಿ ಮನವಿ ಮಾಡಿಕೊಂಡಿದ್ದರು.

    ಕೊರೊನಾ ವೈರಸ್ ವಿರುದ್ಧ ಹೋರಾಡಲು ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಹಲವಾರು ನಿಯಮಗಳನ್ನು ಮಾಡುತ್ತಿದೆ. ಈ ವಿಚಾರವಾಗಿ ಶುಕ್ರವಾರ ಮಾತನಾಡಿದ್ದ ಮೋದಿ ಅವರು ಮಾರ್ಚ್ 22 ರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಯಾರೂ ಹೊರಗಡೆ ಬರಬೇಡಿ. ಜನರೇ ಜನರಿಗಾಗಿ ಮಾಡುವ ಕರ್ಫ್ಯೂ ಇದಾಗಿದ್ದು, ನಾವು ಆರೋಗ್ಯವಾಗಿದ್ದರೆ ದೇಶ ಆರೋಗ್ಯದಲ್ಲಿರುತ್ತದೆ ಎಂದು ಮನವಿ ಮಾಡಿದ್ದಾರೆ.

  • 200 ಎಂಎಲ್ ಹ್ಯಾಂಡ್ ಸ್ಯಾನಿಟೈಸರನ್ನು 100 ರೂ.ಗಿಂತ ಹೆಚ್ಚು ಬೆಲೆಗೆ ಮಾರುವಂತಿಲ್ಲ

    200 ಎಂಎಲ್ ಹ್ಯಾಂಡ್ ಸ್ಯಾನಿಟೈಸರನ್ನು 100 ರೂ.ಗಿಂತ ಹೆಚ್ಚು ಬೆಲೆಗೆ ಮಾರುವಂತಿಲ್ಲ

    ನವದೆಹಲಿ: ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು 200 ಎಂಎಲ್ ಬಾಟಲ್ ಹ್ಯಾಂಡ್ ಸ್ಯಾನಿಟೈಜರ್ ಅನ್ನು 100 ರೂ.ಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡುವಂತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

    ಅಲ್ಲದೇ 2 ಲೇಯರ್ ಮಾಸ್ಕ್‌ಗಳನ್ನು 8 ರೂ. ಹಾಗೂ 3 ಲೇಯರ್ ಮಾಸ್ಕ್‌ಗಳನ್ನು ಪ್ರತಿ ಪೀಸ್‍ಗೆ 10 ರೂ.ಗಿಂತ ಹೆಚ್ಚು ಬೆಲೆ ಮಾರಾಟ ಮಾಡುವಂತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ವೈರಸ್ ಬಗ್ಗೆ ಜನರಿಗೆ ಇರುವ ಭೀತಿಯನ್ನೇ ಬಂಡವಾಳವಾಗಿ ಇಟ್ಟುಕೊಂಡು ದುಬಾರಿ ಬೆಲೆಗೆ ಸ್ಯಾನಿಟೈಸರ್ ಹಾಗೂ ಮಾಸ್ಕ್‌ಗಳನ್ನು ಮೆಡಿಕಲ್‍ಗಳಲ್ಲಿ ವ್ಯಾಪಾರಿಗಳು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಎಚ್ಚೆತ್ತ ಸರ್ಕಾರ ಈಗ ಈ ರೀತಿ ಅಕ್ರಮವೆಸೆಗುವ ವ್ಯಾಪಾರಕ್ಕೆ ಕಡಿವಾಣ ಹಾಕಲು ಮುಂದಾಗಿದ್ದು, ಸ್ಯಾನಿಟೈಸರ್ ಹಾಗೂ ಮಾಸ್ಕ್‌ಗಳ ಬೆಲೆಯನ್ನು ನಿಗದಿಗೊಳಿಸಿ, ವ್ಯಾಪಾರಸ್ಥರಿಗೆ ಈ ನಿಗದಿತ ಬೆಲೆಗೆ ಸ್ಯಾನಿಟೈಸರ್, ಮಾಸ್ಕ್ ಮಾರಾಟ ಮಾಡುವಂತೆ ಸೂಚಿಸಿದೆ.

    200 ಎಂಎಲ್ ಬಾಟಲ್ ಹ್ಯಾಂಡ್ ಸ್ಯಾನಿಟೈಜರ್ ನ ಚಿಲ್ಲರೆ ಬೆಲೆ 100 ರೂ. ಮೀರುವಂತಿಲ್ಲ. ಈ ಬೆಲೆಗಳು 2020ರ ಜೂನ್ 30ರವರೆಗೆ ದೇಶಾದ್ಯಂತ ಅನ್ವಯವಾಗುತ್ತವೆ ಎಂದು ಟ್ವೀಟ್ ಮೂಲಕ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ. ಫ್ಲಿಪ್‍ಕಾರ್ಟ್ ನಂತಹ ಆನ್‍ಲೈನ್ ಮಾರಾಟಗಾರರು ಹ್ಯಾಂಡ್ ಸ್ಯಾನಿಟೈಜರ್ ಗಳಿಗೆ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗಳನ್ನು ಉಲ್ಲೇಖಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆನ್‍ಲೈನ್‍ನಲ್ಲಿ ಕೆಲವು ಮಾರಾಟಗಾರರು 30 ಎಂಎಲ್ ಹ್ಯಾಂಡ್ ಸ್ಯಾನಿಟೈಜರ್ ಗೆ ಗರಿಷ್ಠ ಚಿಲ್ಲರೆ ಬೆಲೆ (ಎಂಆರ್‌ಪಿ)ಯನ್ನು 16 ಪಟ್ಟು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

    ಇದಕ್ಕೆ ಪ್ರತಿಕ್ರಿಯಿಸಿದ ಹಿಮಾಲಯ ಡ್ರಗ್ ಕಂಪನಿ ಹೀಗೆ ಅಕ್ರಮ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದೆ. ನಮ್ಮ ಪ್ಯೂರ್ ಹ್ಯಾಂಡ್ಸ್ ಸ್ಯಾನಿಟೈಜರ್ ಗಳ ದರವನ್ನು ನಾವು ಹೆಚ್ಚಿಸಿಲ್ಲ. ಅನಧಿಕೃತ ತೃತೀಯ ಮಾರಾಟಗಾರರು ನಮ್ಮ ಕಂಪನಿ ಸ್ಯಾನಿಟೈಜರ್ ಗಳ ದರವನ್ನು ಹೆಚ್ಚಿಸಿದೆ. ಹೀಗೆ ದರ ಏರಿಸುತ್ತಿರುವ ಮಾರಾಟಗಾರರಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಹಿಮಾಲಯ ಟ್ವೀಟ್ ಮಾಡಿದೆ.

    ಸ್ಯಾನಿಟೈಸರ್ ಮತ್ತು ಮಾಸ್ಕ್ ಕೊರೊನಾ ವೈರಸ್ ಅಥವಾ ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡುತ್ತಿರುವ ಸಮಯದಲ್ಲಿ ಹೆಚ್ಚು ಅಗತ್ಯವಿರುವ ವಸ್ತುವಾಗಿದೆ. ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಆದರೆ ಮಾರಾಟಗಾರರು ಮಾತ್ರ ದೇಶ ಇಂತಹ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವಾಗ ಮಾರಾಟಗಾರರು ಜನರ ಭಯವನ್ನೇ ಲಾಭ ಮಾಡಿಕೊಂಡು, ಅಧಿಕ ಬೆಲೆ ವಸ್ತುಗಳನ್ನು ಮಾರಾಟ ಮಡುತ್ತಿದೆ.

  • ಕೊರೊನಾ ಭೀತಿ- ಸಿಬಿಎಸ್‍ಇ ಬೋರ್ಡ್ ಪರೀಕ್ಷೆಗಳು ಮುಂದೂಡಿಕೆ

    ಕೊರೊನಾ ಭೀತಿ- ಸಿಬಿಎಸ್‍ಇ ಬೋರ್ಡ್ ಪರೀಕ್ಷೆಗಳು ಮುಂದೂಡಿಕೆ

    ನವದೆಹಲಿ: ಕೊರೊನಾ ಭೀತಿ ಹಿನ್ನೆಲೆ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‍ಇ)ಯ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಿದೆ.

    ಕೇಂದ್ರ ಉನ್ನತ ಹಾಗೂ ಪ್ರಾಥಮಿಕ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳ ಸೂಚನೆ ಮೇರೆಗೆ ಪರೀಕ್ಷಾ ದಿನಾಂಕವನ್ನು ಬದಲಿಸಿದೆ. ಸಿಬಿಎಸ್‍ಇಯಿಂದ ನಡೆಯುತ್ತಿರುವ 10 ಹಾಗೂ 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮಾರ್ಚ್ 19 ರಿಂದ 31ರ ವರೆಗೆ ನಡೆಯಬೇಕಿದ್ದ ಪರೀಕ್ಷೆಗಳನ್ನು ಮಾರ್ಚ್ 31ರ ನಂತರ ನಡೆಸಲು ನಿರ್ಧರಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.

    ಪರಿಷ್ಕೃತ ವೇಳಾ ಪಟ್ಟಿಯನ್ನು ಮಾರ್ಚ್ 31ರ ನಂತರ ಘೋಷಿಸಲಾಗುವುದು, ಪರೀಕ್ಷೆಗಳು ಮಾತ್ರವಲ್ಲದೆ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಮೌಲ್ಯಮಾಪನಾ ಪ್ರಕ್ರಿಯೆಯನ್ನೂ ಮಾರ್ಚ್ 31ರ ವರೆಗೆ ಸ್ಥಗಿತಗೊಳಿಸಲಾಗಿದೆ. ಮಂಡಳಿಯಿಂದ ಯಾವುದೇ ಆದೇಶ ಪ್ರಕಟವಾಗದಿದ್ದಲ್ಲಿ ಎಲ್ಲ ಮೌಲ್ಯಮಾಪನ ಕೇಂದ್ರಗಳ ಮೇಲ್ವಿಚಾರಕರು ಏಪ್ರಿಲ್ 1ರಿಂದ ಮೌಲ್ಯಮಾಪನ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ತಿಳಿಸಲಾಗಿದೆ.

    ಕೇಂದ್ರ ಮಾನವಸಂಪನ್ಮೂಲ ಸಚಿವಾಲಯದ ನಿರ್ದೇಶನದ ಮೇರೆ ಸಿಬಿಎಸ್‍ಇ ಈ ಸುತ್ತೋಲೆ ಹೊರಡಿಸಿದ್ದು, ಪರೀಕ್ಷೆಗಳು ಮುಖ್ಯ. ಅದೇ ರೀತಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಭದ್ರತೆ ಸಹ ಅಷ್ಟೇ ಮುಖ್ಯ ಎಂದು ಸಿಬಿಎಸ್‍ಇ ತಿಳಿಸಿದೆ.

    ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎಟಿಎ) ಸಹ ಐಐಟಿಯ ಜೆಇಇ, ಎಂಜಿನಿಯರಿಂಗ್ ಕಾಲೇಜ್ ಪ್ರವೇಶ ಪ್ರಕ್ರಿಯೆಯನ್ನು ಮುಂದೂಡಿದೆ. ವೇಳಾಪಟ್ಟಿಗೆ ಅನುಗುಣವಾಗಿ ಜೆಇಇ ಹೊಸ ದಿನಾಂಕವನ್ನು ನಿರ್ಧರಿಸಲಿದೆ. ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ಸಹ ಮಾಹಿತಿ ನೀಡಲಿದೆ ಎಂದು ಎನ್‍ಟಿಎ ತಿಳಿಸಿದೆ.

    ದೇಶದಲ್ಲಿ ಕೊರೊನಾ ವೈರಸ್‍ನಿಂದಾಗಿ 3ಜನ ಸಾವನ್ನಪ್ಪಿದ್ದು, 151 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾತ್ರಿ 8ಕ್ಕೆ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

  • ಐಪಿಎಲ್ ತರಬೇತಿ ಶಿಬಿರ ರದ್ದುಗೊಳಿಸಿದ ಫ್ರಾಂಚೈಸಿಗಳು- ಮನೆಗಳಿಗೆ ಹಿಂದಿರುಗಿದ ಆಟಗಾರರು

    ಐಪಿಎಲ್ ತರಬೇತಿ ಶಿಬಿರ ರದ್ದುಗೊಳಿಸಿದ ಫ್ರಾಂಚೈಸಿಗಳು- ಮನೆಗಳಿಗೆ ಹಿಂದಿರುಗಿದ ಆಟಗಾರರು

    ಮುಂಬೈ: ಕೊರೊನಾ ವೈರಸ್ ಕಾರಣದಿಂದ 2020ರ ಐಪಿಎಲ್ ಆವೃತ್ತಿಯನ್ನು ತಾತ್ಕಾಲಿಕವಾಗಿ ಮುಂದೂಡಿರುವ ಬಿಸಿಸಿಐ, ಟೂರ್ನಿಯನ್ನು ರೀ ಶೆಡ್ಯೂಲ್ ಮಾಡುವ ಕಾರ್ಯದಲ್ಲಿದೆ. ಇದರ ನಡುವೆಯೇ ದೇಶ ವ್ಯಾಪ್ತಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಎಚ್ಚೆತ್ತಿರುವ ಐಪಿಎಲ್ ಫ್ರಾಂಚೈಸಿಗಳು ಆಟಗಾರರ ತರಬೇತಿ ಶಿಬಿರಗಳನ್ನು ರದ್ದುಗೊಳಿಸಿವೆ.

    ಮಾರ್ಚ್ 29ರಿಂದ ಆರಂಭವಾಗಬೇಕಿದ್ದ ಟೂರ್ನಿಯನ್ನು ತಾತ್ಕಾಲಿಕವಾಗಿ ಏ.15ಕ್ಕೆ ವಿಸ್ತರಣೆ ಮಾಡಿದ ಮೂರು ದಿನಗಳ ಬಳಿಕ ಫ್ರಾಂಚೈಸಿಗಳು ತರಬೇತಿ ಶಿಬಿರಗಳನ್ನು ರದ್ದುಪಡಿಸಿವೆ. ಸೋಮವಾರ ಆರ್‌ಸಿಬಿ ತಂಡ ತರಬೇತಿ ಶಿಬಿರವನ್ನು ರದ್ದು ಪಡಿಸಿದ್ದು, ಚೆನ್ನೈ, ಕೋಲ್ಕತ್ತಾ ಹಾಗೂ ಮುಂಬೈ ತಂಡಗಳ ಶಿಬಿರಗಳು ಈಗಾಗಲೇ ರದ್ದುಗೊಳಿಸಲಾಗಿದೆ.

    ಆಟಗಾರರು ಹಾಗೂ ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ಮಾರ್ಚ್ 21ರಿಂದ ಆರಂಭವಾಗಬೇಕಿದ್ದ ತರಬೇತಿ ಶಿಬಿರವನ್ನು ಮುಂದಿನ ಆದೇಶವರೆಗೂ ರದ್ದು ಮಾಡಲಾಗಿದೆ. ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯ ನೀಡಿರುವ ಸೂಚನೆಗಳ ಹಿನ್ನೆಲೆಯಲ್ಲಿ ಎಲ್ಲರೂ ಎಚ್ಚರಿಕೆ ವಹಿಸಕೊಳ್ಳಬೇಕಾಗಿ ಮನವಿ ಮಾಡುತ್ತಿರುವುದಾಗಿ ಆರ್‌ಸಿಬಿ ತನ್ನ ಟ್ವೀಟ್ ಖಾತೆಯಲ್ಲಿ ಮಾಹಿತಿ ನೀಡಿದೆ.

    ಐಪಿಎಲ್‍ನಲ್ಲಿ ಮೂರು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಶನಿವಾರ ತರಬೇತಿ ಶಿಬಿರವನ್ನು ರದ್ದು ಮಾಡಿದ್ದು, ತರಬೇತಿ ನಿಮಿತ್ತ ಚೆನ್ನೈ ಆಗಮಿಸಿದ್ದ ಸಿಎಸ್‍ಕೆ ತಂಡದ ನಾಯಕ ಧೋನಿ ಕೂಡ ತವರಿಗೆ ಮರಳಿದ್ದಾರೆ. ಐಪಿಎಲ್ ಪಂದ್ಯ ಆಯೋಜಿಸಲು ಮೂರು ರಾಜ್ಯಗಳು ಅನುಮತಿ ನಿರಾಕರಣೆ ಹಾಗೂ ಕೇಂದ್ರ ಸರ್ಕಾರ ವಿದೇಶಿ ವೀಸಾ ರದ್ದು ಮಾಡಿದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಬಿಸಿಸಿಐ ಐಪಿಎಲ್ ಟೂರ್ನಿಯನ್ನು ತಾತ್ಕಾಲಿಕವಾಗಿ ರದ್ದು ಮಾಡಿತ್ತು.

    ಇತ್ತ ಫ್ರಾಂಚೈಸಿಗಳು ಏಪ್ರಿಲ್ 15ರ ವೇಳೆಗೆ ಲೀಗ್ ಆರಂಭವಾಗುವ ವಿಶ್ವಾಸದಲ್ಲಿದ್ದಾರೆ. ಬಿಸಿಸಿಐ ಕೂಡ ಟೂರ್ನಿಯನ್ನು ಆರಂಭಿಸಲು 5 ದಿನಾಂಕಗಳ ಪ್ರಸ್ತಾಪವನ್ನು ಸಿದ್ಧಪಡಿಸಿದೆ ಎನ್ನಲಾಗಿದೆ. ಏ.14 ರಂದು ಫ್ರಾಂಚೈಸಿಗಳೊಂದಿಗೆ ಸಭೆ ನಡೆಲು ಬಿಸಿಸಿಐ ನಿರ್ಧರಿಸಿದೆ. ಸದ್ಯ ಬಿಸಿಸಿಐ ಏ.15, ಏ.21, ಏ.25, ಮೇ 1 ಮತ್ತು ಮೇ 5 ರಂದು ಐಪಿಎಲ್ ಆರಂಭಿಸುವ ಕುರಿತು ಪ್ರಸ್ತಾಪಗಳನ್ನು ಮುಂದಿಟ್ಟಿದೆ ಎನ್ನಲಾಗಿದೆ. ಐಪಿಎಲ್ ಮುಂದೂಡಿದ ಹಿನ್ನೆಲೆಯಲ್ಲಿ ಈಗಾಗಲೇ ಕನಿಷ್ಟ 15 ದಿನಗಳನ್ನು ಬಿಸಿಸಿಐ ಕಳೆದುಕೊಂಡಿದೆ. ಆದ್ದರಿಂದ ಟೂರ್ನಿಯ ಪಂದ್ಯಗಳ ಸಂಖ್ಯೆಯಲ್ಲೂ ಕಡಿತ ಮಾಡುವ ಯೋಚನೆ ಬಿಸಿಸಿಐ ಮುಂದಿದೆ.

  • ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ

    ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಳ

    – ಪ್ರತಿ ಲೀಟರ್ ಗೆ ಸುಮಾರು 3 ರೂ.ಹೆಚ್ಚಳ
    – ಸುಂಕ ಹೆಚ್ಚಾದರೂ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿಕೆ

    ನವದೆಹಲಿ: ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದರ ಮಧ್ಯೆ ಕೇಂದ್ರ ಸರ್ಕಾರ ಅಬಕಾರಿ ಸುಂಕ ಮತ್ತು ರೋಡ್ ಸೆಸ್ ಹೆಚ್ಚಳ ಮಾಡಿದೆ.

    ಪ್ರತಿ ಲೀಟರ್ ಪೆಟ್ರೋಲ್, ಡೀಸೆಲ್ ಮೇಲಿನ ವಿಶೇಷ ಅಬಕಾರಿ ಸುಂಕವನ್ನು 2 ರೂ. ಏರಿಕೆ ಮಾಡಿದ್ದರೆ, ರಸ್ತೆ ಸೆಸ್ ಅನ್ನು 1 ರೂ. ಏರಿಸಲಾಗಿದೆ. ವಿಶೇಷ ಅಬಕಾರಿ ಸುಂಕ(ಎಸ್‍ಇಡಿ) ಅಡಿ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದೆ.

    ಇಲ್ಲಿಯವರೆಗೆ ಒಂದು ಲೀಟರ್ ಪೆಟ್ರೋಲ್ ಮೇಲೆ ಕೇಂದ್ರ ಸರ್ಕಾರ ಅಬಕಾರಿ ಸುಂಕ, ರಸ್ತೆ ಸೆಸ್ ಸೇರಿ 19.98 ರೂ. ವಿಧಿಸುತಿದ್ದರೆ ಈಗ ಇದು 22.98 ರೂ.ಗೆ ಏರಿಕೆಯಾಗಿದೆ. ಒಂದು ಲೀಟರ್ ಡೀಸೆಲಿಗೆ 15.83 ರೂ. ಅಬಕಾರಿ ಸುಂಕ ಇದ್ದರೆ ಈಗ ಇದು 18.83 ರೂ.ಗೆ ಏರಿಕೆಯಾಗಿದೆ.

    ಕಚ್ಚಾ ತೈಲ ಉತ್ಪದನೆ ರಾಷ್ಟ್ರಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡುತ್ತಿದ್ದು ಬೆಲೆ ಸಮರ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿದೆ.

    ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿರುವ ಬೆನ್ನಲ್ಲೇ ಭಾರತದಲ್ಲೂ ದರ ಇಳಿಕೆ ಆಗುತ್ತಾ? ಅಥವಾ ಕೇಂದ್ರ ಸರ್ಕಾರ ಅಬಕಾರಿ ಸುಂಕ ಏರಿಸಿ ಬೆಲೆಯನ್ನು ಸಮತೋಲನದಲ್ಲಿ ಇಡಲಿದ್ಯಾ ಎನ್ನುವ ಪ್ರಶ್ನೆ ಎದ್ದಿತ್ತು. ಆದರೆ ಈಗ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 3 ರೂ. ಏರಿಕೆ ಮಾಡಿದೆ. ಅಬಕಾರಿ ಸುಂಕ ಮತ್ತು ರಸ್ತೆ ಸೆಸ್ ಏರಿಕೆ ಮಾಡಿದ್ದರೂ ಬೆಲೆ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲದ ಬೆಲೆ 34.46 ಡಾಲರ್(2,548 ರೂ.) ತಲುಪಿದೆ.

    ಬೆಲೆ ಇಳಿಕೆ ಆಗುತ್ತಿರೋದು ಯಾಕೆ?
    ಕೊರೊನಾ ವೈರಸ್ ದಾಳಿಯಿಂದ ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ್ದು ಬೇಡಿಕೆ ಇಳಿಕೆಯಾದ ಹಿನ್ನೆಲೆಯಲ್ಲಿ ತೈಲ ದರ ಇಳಿಕೆಯಾಗುತ್ತಲೇ ಇತ್ತು. ಈ ದರವನ್ನು ಸ್ಥಿರಗೊಳಿಸುವ ಸಂಬಂಧ ಮತ್ತೆ ಶೇ.4ರಷ್ಟು ಉತ್ಪಾದನೆ ತಗ್ಗಿಸುವ ಕುರಿತಾಗಿ 14 ಸದಸ್ಯರನ್ನು ಒಳಗೊಂಡಿರುವ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆ(ಒಪೆಕ್) ಮುಂದಾಗಿತ್ತು. ಮಾರ್ಚ್ ತಿಂಗಳಿಗೆ ಒಪ್ಪಂದ ಕೊನೆಯಾಗಲಿರುವ ಹಿನ್ನೆಲೆಯಲ್ಲಿ ಮತ್ತೆ ಮುಂದುವರಿಸುವಂತೆ ಸೌದಿ ಅರೆಬೀಯಾ ಮಾತುಕತೆಗೆ ಮುಂದಾಗಿತ್ತು. ಆದರೆ ಮತ್ತೆ ಒಪ್ಪಂದ ನಡೆಸಲು ನಾವು ಸಿದ್ಧರಿಲ್ಲ ಎಂದು ರಷ್ಯಾ ಹೇಳಿದ ಬೆನ್ನಲ್ಲೇ ಈಗ ತೈಲ ಉತ್ಪಾದನೆ ನಡೆಸುವ ರಾಷ್ಟ್ರಗಳ ಮಧ್ಯೆ ದರ ಸಮರ ಆರಂಭಗೊಂಡಿದೆ.

    ಒಪೆಕ್ ರಾಷ್ಟ್ರಗಳು ಈಗ ಪ್ರತಿದಿನ ಉತ್ಪಾದನೆಯಾಗುತ್ತಿರುವ ತೈಲ ಪ್ರಮಾಣವನ್ನು ಇಳಿಸಲು ಮಾತುಕತೆ ನಡೆಸಿತ್ತು. ಏಪ್ರಿಲ್ ನಿಂದ ಪ್ರತಿದಿನ ಶೇ.1.5 ದಶಲಕ್ಷ ಬ್ಯಾರೆಲ್ (ಶೇ.4ರಷ್ಟು) ಇಳಿಸಿ ಮುಂದಿನ ಡಿಸೆಂಬರ್ ವರೆಗೆ ಈ ಪ್ರಮಾಣದಲ್ಲೇ ತೈಲ ಉತ್ಪಾದನೆ ನಡೆಸಲು ಪ್ರಸ್ತಾಪವನ್ನು ಮುಂದಿಟ್ಟಿತ್ತು. ಆದರೆ ಈ ಪ್ರಸ್ತಾಪವನ್ನು ರಷ್ಯಾ ತಿರಸ್ಕರಿಸಿದ್ದರಿಂದ ಗಲ್ಫ್ ರಾಷ್ಟ್ರಗಳು ಉತ್ಪಾದನೆಯನ್ನು ಹೆಚ್ಚಿಸಿ ದರವನ್ನು ಇಳಿಕೆ ಮಾಡಿದೆ.

    ಸೋಮವಾರ ಕಚ್ಚಾ ತೈಲದ ಬೆಲೆಯನ್ನು ಸೌದಿ ಅರೇಬಿಯಾ ಇಳಿಕೆ ಮಾಡಿತ್ತು. ವಿಶ್ವದ ಅತಿ ದೊಡ್ಡ ತೈಲ ಉತ್ಪಾದಕಾ ರಾಷ್ಟ್ರವಾಗಿರುವ ಸೌದಿ ಅರೇಬಿಯಾ ಏಪ್ರಿಲ್ ನಿಂದ ಈಗ ಇರುವ ಉತ್ಪಾದನೆಗಿಂತ ಹೆಚ್ಚುವರಿಯಾಗಿ ಪ್ರತಿದಿನ 10 ದಶಲಕ್ಷ ಬ್ಯಾರೆಲ್ ಕಚ್ಚಾ ತೈಲ ಉತ್ಪಾದಿಸುವುದಾಗಿ ಹೇಳಿಕೊಂಡಿದೆ. ಈ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ತೈಲ ಬೆಲೆ ಶೇ.31 ರಷ್ಟು ಇಳಿಕೆಯಾಗಿತ್ತು. ಪರಿಣಾಮ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 35.75 ಡಾಲರ್(2,647 ರೂ.) ಬೆಲೆಯಲ್ಲಿ ಮಾರಾಟವಾಗುತ್ತಿದ್ದ 1 ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲ 31.02 ಡಾಲರಿಗೆ(2,295 ರೂ.) ತಲುಪಿತ್ತು. ಜುಲೈ 2008ರಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 148 ಡಾಲರ್(10,960 ರೂ.) ದರಕ್ಕೆ ಏರಿಕೆ ಆಗಿತ್ತು.

    ಚೀನಾದಲ್ಲಿ ಈಗಾಗಲೇ ಕೆಲ ದಿನಗಳಿಂದ ಉತ್ಪಾದನೆ ಸ್ಥಗಿತಗೊಂಡಿದೆ. ಇದರ ಜೊತೆ ದಕ್ಷಿಣ ಕೊರಿಯಾ, ಇಟಲಿಯಲ್ಲಿ ಕೊರೊನಾ ಭಾರೀ ಪ್ರಮಾಣದಲ್ಲಿ ಹಬ್ಬುತ್ತಿದೆ. ಯುರೋಪ್, ಏಷ್ಯಾ ರಾಷ್ಟ್ರಗಳಿಗೆ ಭೀತಿ ಎದುರಾದ ಹಿನ್ನೆಲೆಯಲ್ಲಿ ಈ ಬಾರಿ ತೈಲದ ಬೇಡಿಕೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಯಿದೆ.

    2016ರಲ್ಲಿ ಅಮೆರಿಕದ ಶೇಲ್ ತೈಲ ಉತ್ಪಾದನೆ ತಗ್ಗಿಸಲು ಸೌದಿ ಅರೇಬಿಯಾ, ರಷ್ಯಾ ಮತ್ತು ಮಧ್ಯಪ್ರಾಚ್ಯದ ಇತರ ಉತ್ಪಾದಕ ದೇಶಗಳು ಏಷ್ಯಾದ ಮಾರುಕಟ್ಟೆಗೆ ಕಡಿಮೆ ಬೆಲೆಯಲ್ಲಿ ತೈಲವನ್ನು ಪೂರೈಕೆ ಮಾಡಿದ್ದವು. ಈಗ ಈ ಒಪ್ಪಂದದಿಂದ ಹಿಂದೆ ಸರಿದ ರಷ್ಯಾಕ್ಕೆ ಪಾಠ ಕಲಿಸಲು ಸೌದಿ ಭಾರೀ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಮುಂದಾಗಿದೆ. ಬೆಲೆ ಕಡಿಮೆ ಮಾಡಿದರೆ ಖರೀದಿಸಲು ಬೇಡಿಕೆ ಹೆಚ್ಚಾಗುವುದರಿಂದ ಯುರೋಪ್ ಮತ್ತು ಏಷ್ಯಾದಲ್ಲಿ ರಷ್ಯಾ ಜೊತೆಗೆ ಪೈಪೋಟಿ ನಡೆಸಿ ಮಾರುಕಟ್ಟೆಯನ್ನು ತನ್ನತ್ತ ಸೆಳೆಯಲು ಸೌದಿ ಮುಂದಾಗಿದೆ.

    ಕೊರೊನಾ ವೈರಸ್ ದಾಳಿಯಿಂದ ಇಡೀ ವಿಶ್ವದಲ್ಲಿ ಈಗ ಉತ್ಪಾದನೆ ಕಡಿಮೆಯುತ್ತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ನಿರಂತರವಾಗಿ ಇಳಿಕೆಯಾಗುತ್ತಿದೆ. ವ್ಯಾಪಾರ, ವಾಣಿಜ್ಯ ಚಟುವಟಿಕೆಗಳು ಮಂದಗತಿಯಲ್ಲಿರುವುದರಿಂದ ತೈಲದ ಬೇಡಿಕೆ ಇಳಿದಿದ್ದು, ಬೆನ್ನಿಗೇ ದರವೂ ಇಳಿಕೆಯಾಗುತ್ತಿದೆ. ಎಷ್ಟು ಇಳಿಕೆಯಾಗಿದೆ ಎಂದರೆ 2018ರ ಆಗಸ್ಟ್ ನಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 72 ಡಾಲರ್ ಇತ್ತು. ಚೀನಾ ಅಮೆರಿಕ ವಾಣಿಜ್ಯ ಸಮರ ಮತ್ತಷ್ಟು ಹೆಚ್ಚಾಗಿದ್ದರಿಂದ ಕಳೆದ ವರ್ಷ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 58 ಡಾಲರ್ ತಲುಪಿತ್ತು.

    ಭಾರತಕ್ಕೆ ಲಾಭ ಹೇಗೆ?
    ಚೀನಾ, ಅಮೆರಿಕದ ನಂತರ ವಿಶ್ವದಲ್ಲೇ ಅತಿ ಹೆಚ್ಚು ತೈಲವನ್ನು ಆಮದು ಮಾಡುತ್ತಿರುವ ದೇಶ ಭಾರತವಾಗಿದ್ದು, ದೇಶದ ಆರ್ಥಿಕತೆ ಮೇಲೆ ತೈಲ ದರ ಭಾರೀ ಪ್ರಭಾವ ಬೀರುತ್ತದೆ. ಭಾರತವು ತನ್ನ ಬೇಡಿಕೆಯ ಶೇ.80ರಷ್ಟು ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ತೈಲ ದರದಲ್ಲಿ ಇಳಿಕೆಯಾದರೆ ಆಮದು ಹೊರೆಯೂ ಕಡಿಮೆಯಾಗಲಿದೆ. ರಫ್ತು ವಹಿವಾಟಿನ ನಡುವಣ ಅಂತರವಾದ ಚಾಲ್ತಿ ಖಾತೆ ಕೊರತೆಯೂ ಇಳಿಕೆಯಾಗಲಿದೆ.

    2014ರಲ್ಲಿ ಮೊದಲ ಬಾರಿಗೆ ಪ್ರಧಾನಿ ಮೋದಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 108 ಡಾಲರ್(ಅಂದಾಜು 7,750 ರೂ.) ಇತ್ತು. ಮೋದಿ ಸರ್ಕಾರ ಮೂರನೇ ವರ್ಷದ ಅವಧಿಯಲ್ಲಿ 48 ಡಾಲರ್(3,400 ರೂ.) ಬೆಲೆಗೆ ಇಳಿಕೆಯಾಗಿತ್ತು. ಈಗ ಎರಡನೇ ಅವಧಿಯ ಮೊದಲ ವರ್ಷದಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ಬೆಲೆ 31 ಡಾಲರ್ ತಲುಪಿದೆ. ಈ ದರ ಹಲವು ತಿಂಗಳ ಕಾಲ ಸ್ಥಿರವಾಗಬಹುದು ಅಥವಾ ಮತ್ತಷ್ಟು ದರ ಕಡಿಮೆಯಾಗಬಹುದು ಎನ್ನುವ ವಿಶ್ಲೇಷಣೆ ಕೇಳಿ ಬಂದಿದೆ.

    ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅಬಕಾರಿ ಸುಂಕದಿಂದ 2018-19ರ ಹಣಕಾಸು ವರ್ಷದಲ್ಲಿ ಸರ್ಕಾರ 2.579 ಕೋಟಿ ರೂ. ಆದಾಯ ಸಂಗ್ರಹಿಸಿತ್ತು. 2013-14ರ ಅವಧಿಯಲ್ಲಿ 88,600 ಕೋಟಿ ರೂ. ಸಂಗ್ರಹಿಸಿದ್ದರೆ 2017-18ರ ಅವಧಿಯಲ್ಲಿ 2,016 ಕೋಟಿ ಆದಾಯ ಸಂಗ್ರಹಿಸಿತ್ತು. ಅಬಕಾರಿ ಸುಂಕವನ್ನು ಹೆಚ್ಚಿಸುವ ಮೂಲಕ ಸಂಗ್ರಹವನ್ನು ಹಣವನ್ನು ಸಾಮಾಜಿಕ ಅಭಿವೃದ್ಧಿ ಯೋಜನೆಗಳಿಗೆ ಬಳಸಲಾಗುವುದು ಎಂದು ಕೇಂದ್ರ ಸರ್ಕಾರ ಸಮರ್ಥನೆ ನೀಡಿದೆ.