Tag: Central Government

  • ರಾಜ್ಯಗಳಿಗೆ ನೀಡುವ ತೆರಿಗೆ ಪಾಲು ಇನ್ನಷ್ಟು ಕಡಿತಕ್ಕೆ ಕೇಂದ್ರದ ಸಿದ್ಧತೆ, ಒಕ್ಕೂಟ ವಿರೋಧಿ ನಡೆ: ಸಿಎಂ

    ರಾಜ್ಯಗಳಿಗೆ ನೀಡುವ ತೆರಿಗೆ ಪಾಲು ಇನ್ನಷ್ಟು ಕಡಿತಕ್ಕೆ ಕೇಂದ್ರದ ಸಿದ್ಧತೆ, ಒಕ್ಕೂಟ ವಿರೋಧಿ ನಡೆ: ಸಿಎಂ

    ಬೆಂಗಳೂರು: ರಾಜ್ಯಕ್ಕೆ ನ್ಯಾಯಬದ್ಧವಾಗಿ ನೀಡಬೇಕಾಗಿರುವ ತೆರಿಗೆ ಪಾಲನ್ನು ಇನ್ನಷ್ಟು ಕಡಿತಗೊಳಿಸಲು ಕೇಂದ್ರ ಸರ್ಕಾರ ಮಾಡುತ್ತಿರುವ ಪ್ರಯತ್ನ ಕರ್ನಾಟಕ ವಿರೋಧಿ ಮಾತ್ರವಲ್ಲ, ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಾರುವ ಸಂವಿಧಾನಕ್ಕೆ ಕೂಡಾ ವಿರುದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಕಿಡಿಕಾರಿದ್ದಾರೆ.

    ಮಾಧ್ಯಮ ಪ್ರಕಟಣೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಿಎಂ, ರಾಜ್ಯದ ತೆರಿಗೆ ಪಾಲನ್ನು ಶೇ.41ರಿಂದ 40ಕ್ಕೆ ಇಳಿಸಲು ಶಿಫಾರಸು ಮಾಡುವಂತೆ ಹಣಕಾಸು ಆಯೋಗಕ್ಕೆ ಕೇಂದ್ರದ ಎನ್‌ಡಿಎ ಸರ್ಕಾರ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ದಿನದಿಂದ ಕೇಂದ್ರ ಸರ್ಕಾರದ ನೀತಿ-ನಿರ್ಧಾರಗಳನ್ನು ಗಮನಿಸುತ್ತಾ ಬಂದರೆ ನಿರಂತರವಾಗಿ ರಾಜ್ಯಗಳ ಸಂವಿಧಾನಬದ್ಧ ಅಧಿಕಾರಗಳನ್ನು ಮೊಟಕುಗೊಳಿಸುತ್ತಾ, ಅವುಗಳನ್ನು ದುರ್ಬಲಗೊಳಿಸುತ್ತಾ ಬಂದಿರುವುದನ್ನು ಕಾಣಬಹುದು ಎಂದು ಟೀಕಿಸಿದರು.ಇದನ್ನೂ ಓದಿ: ಭಾರತ ಸೇರಿ ವಿಶ್ವಾದ್ಯಂತ ಫೇಸ್‌ಬುಕ್‌, ವಾಟ್ಸಪ್‌ ಡೌನ್‌

    ರಾಜ್ಯಗಳು ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ನೀಡುವ ತೆರಿಗೆಯಲ್ಲಿ ನ್ಯಾಯಬದ್ಧ ಪಾಲು ರಾಜ್ಯಗಳಿಗೆ ಹಂಚಿಕೆಯಾಗುವಂತೆ ನೋಡಿಕೊಳ್ಳಬೇಕಾಗಿರುವ ಜವಾಬ್ದಾರಿಯನ್ನು ಕೇಂದ್ರ ಹಣಕಾಸು ಆಯೋಗ ಹೊಂದಿದೆ. ಆದರೆ ಇದು ರಾಜ್ಯಗಳ ಹಕ್ಕುಗಳನ್ನು ದಮನಿಸಲು ಹೊರಟ ಕೇಂದ್ರ ಸರ್ಕಾರದ ಕೈಗಳ ಆಯುಧವಾಗಿರುವುದು ದುರಂತವೇ ಸರಿ. ರಾಜ್ಯಗಳು ಕೇಂದ್ರ ಸರ್ಕಾರದ ಮರ್ಜಿ ಕಾಯುವಂತಹ ಪರವಾಲಂಬಿ ಸ್ಥಿತಿಗೆ ನೂಕುವುದು ಈ ಹುನ್ನಾರದ ದುರುದ್ದೇಶವಾಗಿರುವಂತೆ ಕಾಣುತ್ತಿದೆ. ಇದನ್ನ ಸಹಿಸಲು ಸಾಧ್ಯ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

    ಅಧಿಕಾರದ ವಿಕೇಂದ್ರೀಕರಣ ಪ್ರಜಾಪ್ರಭುತ್ವ, ಅಧಿಕಾರದ ಕೇಂದ್ರೀಕರಣ ಸರ್ವಾಧಿಕಾರ. ದೇಶದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಯಾಗಿ ಎಂಟು ದಶಕಗಳು ಪೂರ್ಣಗೊಳ್ಳುತ್ತಿರುವ ಇಂದಿನ ಸ್ಥಿತಿಯಲ್ಲಿ ಪ್ರಜಾಪ್ರಭುತ್ವವನ್ನು ಇನ್ನಷ್ಟು ವಿಕಾಸಗೊಳಿಸಿ ಅಧಿಕಾರದ ವಿಕೇಂದ್ರೀಕರಣ ಮಾಡಬೇಕಾದ ಕಾಲದಲ್ಲಿ ಕೇಂದ್ರ ಸರ್ಕಾರ ರಾಜ್ಯಗಳನ್ನು ತಮ್ಮ ಅಧೀನದ ಮಾಂಡಲಿಕರ ರೀತಿ ನಡೆಸಿಕೊಳ್ಳುತ್ತಿರುವುದು ವಿಷಾದನೀಯ. ಪ್ರತಿ ವರ್ಷ ಕನ್ನಡಿಗರಿಂದ ಸಂಗ್ರಹಿಸಲಾದ ಅಂದಾಜು ನಾಲ್ಕು ಲಕ್ಷ ಕೋಟಿ ರೂಪಾಯಿಗಳನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತದೆ. ಅದರಲ್ಲಿ ರಾಜ್ಯಕ್ಕೆ ವಾಪಸು ಬರುವುದು ರೂಪಾಯಿಗೆ 15 ಪೈಸೆ ಮಾತ್ರ. ಹದಿನೈದನೇ ಹಣಕಾಸು ಆಯೋಗ ತೆರಿಗೆ ಹಂಚಿಕೆಯ ಪ್ರಮಾಣವನ್ನು ಶೇಕಡಾ 4.713ರಿಂದ ಶೇಕಡಾ 3.64ಕ್ಕೆ ಇಳಿಸಿದ್ದ ಕಾರಣದಿಂದಾಗಿ ಕರ್ನಾಟಕ ಕಳೆದ ಐದು ವರ್ಷಗಳಲ್ಲಿ 68,775 ಕೋಟಿ ರೂಪಾಯಿಯನ್ನು ಕಳೆದುಕೊಂಡಿದೆ. 15ನೇ ಹಣಕಾಸು ಆಯೋಗದ ಅವಧಿ ಮುಂದಿನ ವರ್ಷ ಪೂರ್ಣಗೊಳ್ಳಲಿದ್ದರೂ ಇಲ್ಲಿಯವರೆಗೆ ಆಯೋಗವೇ ಶಿಫಾರಸು ಮಾಡಿರುವ ವಿಶೇಷ ಅನುದಾನ 5495 ಕೋಟಿ ರೂ. ಮತ್ತು ರಾಜ್ಯ ಕೇಂದ್ರಿತ 6000 ರೂ. ಕೋಟಿ ಮೊತ್ತದ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಲ್ಲ ಎಂದರು.

    ಕೇಂದ್ರ ಹಣಕಾಸು ಆಯೋಗ ತಾನು ಶಿಫಾರಸು ಮಾಡಿದ್ದಕ್ಕಿಂತ ಕಡಿಮೆ ಮೊತ್ತದ ಹಣವನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತಾ ಬಂದಿದೆ. 2021-22, 2022-23 ಮತ್ತು 2023-24ರ ಹಣಕಾಸು ವರ್ಷದಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ 1,311 ಕೋಟಿ ರೂ. ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಿಗೆ 775 ಕೋಟಿ ರೂ. ಕಡಿಮೆ ಅನುದಾನ ನೀಡಲಾಗಿದೆ. 2022-23 ಮತ್ತು 2023-24ರ ಹಣಕಾಸು ವರ್ಷದಲ್ಲಿ, ಆರೋಗ್ಯ ಅನುದಾನದಲ್ಲಿ 826 ಕೋಟಿ ರೂ., ಎಸ್‌ಡಿಆರ್‌ಎಫ್ ಅಡಿಯಲ್ಲಿ 340 ಕೋಟಿ ರೂ. ಹಣವನ್ನು ಕಡಿತ ಮಾಡಲಾಗಿದೆ. ಈ ಒಟ್ಟು ಬಾಕಿ 3,300 ಕೋಟಿ ರೂ. ಮತ್ತು 2024-25 ಮತ್ತು 2025-26ರ ಅವಧಿಯಲ್ಲಿ ಆಯೋಗ ಶಿಫಾರಸು ಮಾಡಿರುವ ವಿಶೇಷ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: ಮುಂದುವರಿದ ರಾಜ್ಯಪಾಲರು Vs ರಾಜ್ಯ ಸರ್ಕಾರದ ಜಟಾಪಟಿ – ಎರಡು ವಿಧೇಯಕ ವಾಪಸ್‌

     

  • ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಅನುಮತಿ, ಅನುದಾನ ನೀಡಿ: ಕೇಂದ್ರಕ್ಕೆ ಡಿಕೆಶಿ ಮನವಿ

    ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಅನುಮತಿ, ಅನುದಾನ ನೀಡಿ: ಕೇಂದ್ರಕ್ಕೆ ಡಿಕೆಶಿ ಮನವಿ

    ನವದೆಹಲಿ: ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ತುಂಗಭದ್ರಾ ಎಡದಂಡೆ ಕಾಲುವೆ, ಘಟಪ್ರಭಾ ಬಲದಂಡೆ ಪ್ರಮುಖ ಕಾಲುವೆ, ಕೃಷ್ಣಾ ಮೇಲ್ದಂಡೆ ಯೋಜನೆಯ ಇಂಡಿ ಕಾಲುವೆ, ಮಲಪ್ರಭಾ ಕಾಲುವೆಗಳ ವಿಸ್ತರಣೆ, ನವೀಕರಣ, ಆಧುನೀಕರಣಗೊಳಿಸಲು ಹಾಗೂ ಸೋಂತಿ ಏತ ನೀರಾವರಿ ಯೋಜನೆಗಳಿಗೆ ಅಗತ್ಯವಿರುವ ಅನುಮತಿ ಹಾಗೂ ಅನುದಾನ ನೀಡುವಂತೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರಿಗೆ ರಾಜ್ಯ ಜಲಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರ್ (DCM DK Shivakumar) ಮನವಿ ಮಾಡಿದರು.

    ನವದೆಹಲಿಯಲ್ಲಿ (Newdelhi) ಕೇಂದ್ರ ಸಚಿವರನ್ನು ಭೇಟಿ ಮಾಡಿದ ಡಿಕೆಶಿ ಅವರು, ನೆನೆಗುದಿಗೆ ಬಿದ್ದಿರುವ ರಾಜ್ಯದ ಯೋಜನೆಗಳಿಗೆ ಅನುದಾನ ಹಾಗೂ ಅನುಮತಿ ನೀಡಲು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ, ರಾಜ್ಯ ಸಣ್ಣ ನೀರಾವರಿ ಸಚಿವ ಬೋಸರಾಜು, ದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತಾ, ಮತ್ತಿತರರು ಉಪಸ್ಥಿತರಿದ್ದರು.ಇದನ್ನೂ ಓದಿ: ಕೋರ್ಟ್ ಹಾಲ್‌ನಲ್ಲಿ ಪವಿತ್ರಾ, ದರ್ಶನ್ ದೂರ ದೂರಾ – ಕಣ್ಣೀರಿಡುತ್ತ ತೆರಳಿದ ಗೆಳತಿ!

    ಭದ್ರಾ ಎಡದಂಡೆ ಕಾಲುವೆಯ ವಿಸ್ತರಣೆ, ನವೀಕರಣ, ಆಧುನೀಕರಣಗೊಳಿಸುವ ಯೋಜನೆಗೆ ಕರ್ನಾಟಕ ಸರ್ಕಾರವು ಈಗಾಗಲೇ ಕೇಂದ್ರ ಜಲ ಆಯೋಗಕ್ಕೆ ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಿದೆ. ತುಂಗಭದ್ರಾ ಎಡದಂಡೆ ಕಾಲುವೆಯು 226 ಕಿ.ಮೀ ಉದ್ದ ಹರಿಯಲಿದ್ದು, ಉತ್ತರ ಕರ್ನಾಟಕದ 2,44,103 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಒದಗಿಸಲಿದೆ. ಈ ಯೋಜನೆಯಿಂದಾಗಿ ಕಾಲುವೆಯ ಕೊನೆ ಭಾಗದ ರೈತರಿಗೂ ನೀರು ಸಮನಾಂತರವಾಗಿ ಹಂಚಿಕೆಯಾಗಲಿದೆ. ಜೊತೆಗೆ 96,400 ಹೆಕ್ಟೇರ್ ಪ್ರದೇಶದ ರೈತರಿಗೆ ನೆರವಾಗಲಿದೆ. ಈ ಯೋಜನೆಗೆ 1,444.42 ಕೋಟಿ ರೂ.ಗಳ ಅನುದಾನ ಅಗತ್ಯವಿದೆ. ಪ್ರಧಾನಮಂತ್ರಿ ಕೃಷಿ ಸಿಂಚಯೀ ಯೋಜನೆ- ವೇಗವರ್ಧಿತ ನೀರಾವರಿ ಪ್ರಯೋಜನಗಳ ಕಾರ್ಯಕ್ರಮ ಅಡಿಯಲ್ಲಿ ಈ ಯೋಜನೆಗಳಿಗೆ ಅನುದಾನ ನೀಡಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗಿದೆ.

    ಘಟಪ್ರಭಾ ಬಲದಂಡೆ ಪ್ರಮುಖ ಕಾಲುವೆಯ 199.09 ಕಿ.ಮೀವರೆಗೆ ಹಾಗೂ ಚಿಕ್ಕೋಡಿ ಭಾಗದ ಕಾಲುವೆ 30 ಕಿ.ಮೀ.ನಿಂದ 88.25 ಕಿ.ಮೀ.ವರೆಗೆ ಕಾಲುವೆಗಳ ವಿಸ್ತರಣೆ, ನವೀಕರಣ, ಆಧುನೀಕರಣಗೊಳಿಸಲು ಕರ್ನಾಟಕ ಸರ್ಕಾರ ಫೆ.10,2025 ರಂದುವಿಸ್ತೃತ ಯೋಜನಾ ವರದಿಯನ್ನು ಸಲ್ಲಿಕೆ ಮಾಡಿದೆ. ಇದರಿಂದ ಈ ಭಾಗದ ರೈತರಿಗೆ ನೀರನ್ನು ಸಮರ್ಪಕವಾಗಿ ಪೂರೈಸಲು ನೆರವಾಗಲಿದ್ದು, ಈ ಯೋಜನೆಗೆ ಪಿಎಂಕೆಎಸ್ ವೈ-ಎಐಬಿಪಿ ಯೋಜನೆ ಅಡಿಯಲ್ಲಿ 1,596.98 ಕೋಟಿ ರೂ.ಗಳ ಅನುದಾನ ಒದಗಿಸಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

    ಭಾರತ ಸರ್ಕಾರದ ಪ್ರವಾಹ ನಿರ್ವಹಣೆ ಮತ್ತು ಗಡಿ ಪ್ರದೇಶ ಕಾರ್ಯಕ್ರಮ ಯೋಜನೆ ಅಡಿಯಲ್ಲಿ ಬೆಣ್ಣಿಹಳ್ಳದಿಂದ ಮಲಪ್ರಭಾದ ಸಂಗಮದವರೆಗೂ ಪ್ರವಾಹ ನಿಯಂತ್ರಣ ಹಾಗೂ ಪ್ರವಾಹ ನಿರ್ವಹಣೆಯ ಕಾಮಗಾರಿಯನ್ನು ನಡೆಸಲು ಅಗತ್ಯವಿರುವ 1,610.00 ಕೋಟಿ ರೂ. ಅನುದಾನವನ್ನು ನೀಡಬೇಕು. ಈ ವಿಚಾರವಾಗಿ ರಾಜ್ಯ ಸರ್ಕಾರವು ದಿನಾಂಕ ಫೆ.10,2025ರಂದು ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಕೆ ಮಾಡಿದೆ. ಈ ಭಾಗದಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಅಕಾಲಿಕ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಲಿದ್ದು, ನೀರಿನ ಮಟ್ಟ ಹೆಚ್ಚಾಗಿ ನದಿಯ ಹರಿವು ಬೇರೆಡೆಗೆ ತಿರುಗುತ್ತದೆ. ಇದರಿಂದ ಪ್ರವಾಹ ಉಂಟಾಗಿ ಜನಜೀವನ ಅಸ್ಥವ್ಯಸ್ಥವಾಗುತ್ತಿದೆ. ಹೀಗಾಗಿ ಜಲಶಕ್ತಿ ಸಚಿವಾಲಯದ ಕೇಂದ್ರ ಜಲ ಆಯೋಗದ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಬೇಕು ಹಾಗೂ ಕೇಂದ್ರ ಸರ್ಕಾರದ ಕಾರ್ಯಕ್ರಮದಡಿಯಲ್ಲಿ ಅನುದಾನ ನೀಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.ಇದನ್ನೂ ಓದಿ: ಪಂಜಾಬ್‌ನ ಆಪ್‌ ಸರ್ಕಾರದಿಂದ ಬುಲ್ಡೋಜರ್ ಅಸ್ತ್ರ – ಡ್ರಗ್ ಮಾಫಿಯಾ ಕಿಂಗ್‌ಗಳ ಮನೆ ನೆಲಸಮ

    ಸೋಂತಿ ಏತ ನೀರಾವರಿ ಯೋಜನೆಯು ಸೋಂತಿ ಬ್ಯಾರೇಜ್‌ನಿಂದ ನೀರನ್ನು ಎತ್ತಿ ಕಾಲುವೆಗಳ ಮೂಲಕ ಬರಪೀಡಿತ ಚಿತ್ತಾಪುರ, ಯಾದಗಿರಿ ತಾಲೂಕಿನಲ್ಲಿ 16,000 ಹೆಕ್ಟೇರ್ ಕೃಷಿ ಭೂಮಿಗೆ 4 ಟಿಎಂಸಿ ನೀರನ್ನು ಒದಗಿಸುವ ಯೋಜನೆಯಾಗಿದೆ. ರಾಜ್ಯ ಸರ್ಕಾರವು ಈಗಾಗಲೇ ಈ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಕೆ ಮಾಡಿದ್ದು, ಮೇ.25,2015ರಂದು ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ತಾಂತ್ರಿಕ ಸಲಹಾ ಸಮಿತಿಯ 125ನೇ ಸಭೆಯಲ್ಲಿ 673.90 ಕೋಟಿ ರೂ. ಮೊತ್ತದ ಡಿಪಿಆರ್‌ಗೆ ಅನುಮೋದನೆ ನೀಡಲಾಗಿತ್ತು. ನಂತರ 2017ರಲ್ಲಿ ಈ ಯೋಜನೆಗೆ ಅರಣ್ಯ ಇಲಾಖೆ ಅನುಮತಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಈ ಯೋಜನೆಯ ಮೊತ್ತ 804.66 ರೂ.ಗೆ ಏರಿಕೆಯಾಗಿದ್ದು, ಪಿಎಂಕೆಎಸ್ ವೈ-ಎಐಬಿಪಿ ಯೋಜನೆ ಅಡಿಯಲ್ಲಿ ಈ ಅನುದಾನ ನೀಡಬೇಕು. ಜೊತೆಗೆ ಅಗತ್ಯವಿರುವ ಅನುಮತಿಯನ್ನು ನೀಡಲು ಕೇಂದ್ರ ಜಲ ಆಯೋಗದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಗಿದೆ.

    ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಪ್ರಮುಖ ಭಾಗವಾಗಿರುವ 172 ಕಿ.ಮೀ ಉದ್ದದ ಇಂಡಿ ಕಾಲುವೆ ಯೋಜನೆಯು ಕಲಬುರಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಯ 1.31 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶಕ್ಕೆ ನೀರಾವರಿ ಒದಗಿಸಲಿದೆ. ಹೀಗಾಗಿ ಕರ್ನಾಟಕ ಸರ್ಕಾರ ಇಂಡಿ ಕಾಲುವೆಯ 64.00 ಕಿ.ಮೀ.ನಿಂದ 172.00ವರೆಗೂ ವಿಸ್ತರಣೆ, ನವೀಕರಣ, ಆಧುನೀಕರಣಗೊಳಿಸಲು ತೀರ್ಮಾನಿಸಿದ್ದು, ಈ ಯೋಜನೆಗಾಗಿ 2666.70 ಕೋಟಿ ರೂ. ಮೊತ್ತದ ಪೂರ್ವ ಕಾರ್ಯಸಾಧ್ಯತಾ ವರದಿಯನ್ನು ದಿನಾಂಕ ಫೆ,20,2025ರಂದು ಸಲ್ಲಿಸಲಾಗಿದೆ. ಈ ಪೂರ್ವ ಕಾರ್ಯಸಾಧ್ಯತಾ ವರದಿಯನ್ನು ಪರಿಗಣಿಸಿ, ಪಿಎಂಕೆಎಸ್ ವೈ-ಎಐಬಿಪಿ ಯೋಜನೆ ಅಡಿಯಲ್ಲಿ ಈ ಯೋಜನೆಗೆ ಅನುದಾನ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ.

    ಇನ್ನೂ ಮಲಪ್ರಭಾ ಕಾಲುವೆ ಯೋಜನೆಯ ಮೂರನೇ ಹಂತದಲ್ಲಿ ಕಾಲುವೆಗಳ ವಿಸ್ತರಣೆ, ನವೀಕರಣ, ಆಧುನೀಕರಣಗೊಳಿಸಲು ತೀರ್ಮಾನಿಸಿದ್ದು, ಇದಕ್ಕಾಗಿ 3,000.00 ಕೋಟಿ ರೂ.ಗಳು ಅಗತ್ಯವಿದೆ. ಇದರ ವಿಸ್ತೃತ ಯೋಜನಾ ವರದಿಯನ್ನು ಸಲ್ಲಿಸಲಾಗಿದೆ. ಈ ಯೋಜನೆಯಿಂದ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಹೀಗಾಗಿ ಸಚಿವಾಲಯವು ಡಿಪಿಆರ್‌ಗೆ ಅನುಮತಿ ನೀಡಿ ಈ ಯೋಜನೆಗೆ ಅಗತ್ಯವಿರುವ ಅನುಮತಿಯನ್ನು ಕೊಡಿಸುವಂತೆ ಕೇಂದ್ರ ಜಲ ಆಯೋಗದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಜತೆಗೆ ಈ ಯೋಜನೆಗೆ ಅಗತ್ಯವಾಗಿರುವ ಅನುದಾನವನ್ನು ಪಿಎಂಕೆಎಸ್ ವೈ-ಎಐಬಿಪಿ ಯೋಜನೆ ಅಡಿಯಲ್ಲಿ ಒದಗಿಸಬೇಕು ಎಂದು ಮನವಿ ಮಾಡಲಾಗಿದೆ.ಇದನ್ನೂ ಓದಿ: ಮಹಾ ಶಿವರಾತ್ರಿಯಂದು ಭೇಟಿ ನೀಡಬಹುದಾದ ದಕ್ಷಿಣ ಕರ್ನಾಟಕದ ಪುರಾಣ ಪ್ರಸಿದ್ಧ ದೇವಾಲಯಗಳು

  • ಭಾರತದತ್ತ ಯುರೋಪಿಯನ್ ರಾಷ್ಟ್ರಗಳ ಹೆಜ್ಜೆ – ತಿಂಗಳಾಂತ್ಯಕ್ಕೆ 27 ರಾಷ್ಟ್ರಗಳ ಆಯುಕ್ತರ ತಂಡ ಭೇಟಿ

    ಭಾರತದತ್ತ ಯುರೋಪಿಯನ್ ರಾಷ್ಟ್ರಗಳ ಹೆಜ್ಜೆ – ತಿಂಗಳಾಂತ್ಯಕ್ಕೆ 27 ರಾಷ್ಟ್ರಗಳ ಆಯುಕ್ತರ ತಂಡ ಭೇಟಿ

    – 27 ರಾಷ್ಟ್ರಗಳ ಯುರೋಪಿಯನ್ ಆಯುಕ್ತರು ಇದೇ ಮೊದಲ ಬಾರಿ ಭಾರತಕ್ಕೆ

    ನವದೆಹಲಿ: ಆರ್ಥಿಕತೆಯಲ್ಲಿ ಜಗತ್ತಿಗೆ ಸ್ಪೂರ್ತಿಯಂತೆ ತೋರುವ ಭಾರತದತ್ತ ಈಗ ಯುರೋಪಿಯನ್ ರಾಷ್ಟ್ರಗಳೂ ಹೆಜ್ಜೆ ಹಾಕುತ್ತಿವೆ. ಇದೇ ತಿಂಗಳ ಅಂತ್ಯದ ವೇಳೆಗೆ 27 ಯುರೋಪಿಯನ್ ಯೂನಿಯನ್ (European Union) ಆಯುಕ್ತರ ತಂಡ ಭಾರತಕ್ಕೆ (India) ಭೇಟಿ ನೀಡಲಿದೆ.

    ಕೇಂದ್ರ ಸರ್ಕಾರದ ಅಧಿಕೃತ ಮೂಲಗಳಿಂದ ಈ ಮಾಹಿತಿ ಲಭ್ಯವಾಗಿದ್ದು, ಭಾರತದ ಆರ್ಥಿಕ ಬೆಳವಣಿಗೆಗೆ ಮಾರು ಹೋಗಿರುವ ಯುರೋಪಿಯನ್ ರಾಷ್ಟ್ರಗಳು ಒಟ್ಟಾಗಿ ಇದೇ ಮೊದಲ ಬಾರಿಗೆ ಭಾರತ ಭೇಟಿ ಕಾರ್ಯಕ್ರಮ ಹಾಕಿಕೊಂಡಿವೆ.

    ವಿಶ್ವದ ಅನೇಕ ರಾಷ್ಟ್ರಗಳು ಇಂದು ತೀರಾ ಆರ್ಥಿಕ ಹಿಂಜರಿತ ಕಾಣುತ್ತಿವೆ. ನಿಶ್ಚಲವಾದ ಯೂರೋ ಪ್ರದೇಶಕ್ಕೆ ಹೋಲಿಸಿದರೆ ಭಾರತದ ಆರ್ಥಿಕತೆ ಪ್ರತಿ ವರ್ಷ ಶೇ.5.4ರಷ್ಟು ವೃದ್ಧಿಸುತ್ತಿದೆ. ಇದನ್ನು ಮನಗಂಡಿರುವ 27 ಯುರೋಪಿಯನ್ ಯೂನಿಯನ್ ಆಯುಕ್ತರ ತಂಡವು ಭಾರತಕ್ಕೆ ಅನಿರೀಕ್ಷಿತ ಭೇಟಿ ಹಮ್ಮಿಕೊಂಡಿದೆ.

    ಆರ್ಥಿಕತೆಯಲ್ಲಿ ಭಾರತ ವರ್ಷದಿಂದ ವರ್ಷಕ್ಕೆ ಬೆಳವಣಿಗೆ ಹೊಂದುತ್ತಿದ್ದು, ಯುರೋಪಿಯನ್ ರಾಷ್ಟ್ರಗಳಿಗೆ ಪ್ರೇರಣೆ ಮತ್ತು ಸ್ಫೂರ್ತಿಯಾಗಿ ಗೋಚರಿಸಿದೆ. ಹೀಗಾಗಿ 27 ಯುರೋಪಿಯನ್ ಯೂನಿಯನ್‌ ಆಯುಕ್ತರು ಒಟ್ಟಾಗಿ ಇದೇ ಪ್ರಥಮ ಬಾರಿಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ.

    ನಿಶ್ಚಲವಾದ ಯುರೋಪ್ ಪ್ರದೇಶಕ್ಕೆ ಹೋಲಿಸಿದರೆ ಭಾರತ ಆರ್ಥಿಕತೆಯಲ್ಲಿ ಹೆಜ್ಜೆ ಹೆಜ್ಜೆಗೂ ಪ್ರಗತಿ ಕಾಣುತ್ತಿದೆ. ಭಾರತದ ಈ ಕ್ರಿಯಾತ್ಮಕ ಬೆಳವಣಿಗೆ ಅಧ್ಯಯನದಿಂದ ಯುರೋಪ್ ರಾಷ್ಟ್ರಗಳ ಆರ್ಥಿಕ ಚೇತರಿಕೆಗೆ ಮದ್ದು ಗೋಚರಿಸಬಹುದು ಎಂಬ ಇಂಗಿತ ಈ 27 EU ಗಳದ್ದಾಗಿದೆ.

    2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯನ್ನು ಹೊಂದಿದೆ. ಕಳೆದ ದಶಕದಲ್ಲಿ ಭಾರತ ವಾರ್ಷಿಕ ಸರಾಸರಿ ಶೇ.7ರ ದರದಲ್ಲಿ ಬೆಳೆದಿದೆ. ಇದು ಭಾರತೀಯರ ಜೀವನ ಮಟ್ಟ ಮತ್ತು ಆತ್ಮವಿಶ್ವಾಸವನ್ನು ಸೂಚಿಸುತ್ತಿದ್ದು, ಯುರೋಪಿಯನ್ ರಾಷ್ಟ್ರಗಳ ಗಮನ ಸೆಳೆಯುತ್ತಿದೆ.

    ಭಾರತ 2017ರಲ್ಲಿ ಪರಿಚಯಿಸಿದ ಸರಕು ಮತ್ತು ಸೇವಾ ತೆರಿಗೆಯು ಆಂತರಿಕವಾಗಿ ಇದ್ದಂಥ ಆರ್ಥಿಕ ಮಿತಿ, ಗಡಿಗಳನ್ನು ತೆಗೆದುಹಾಕುವ ಮೂಲಕ ಒಂದೇ ಮಾರುಕಟ್ಟೆಯನ್ನು ಸೃಷ್ಟಿಸಿತು. ಭಾರತದ ಈ ಮಾದರಿಯನ್ನು ಅಳವಡಿಸಿಕೊಳ್ಳಲು ಯುರೋಪಿಯನ್ ಒಕ್ಕೂಟ ರಾಷ್ಟ್ರಗಳು ಶ್ರಮಿಸುತ್ತಿವೆ.

    ಭಾರತದಲ್ಲಿ ನಾಗರಿಕರ ಗುರುತನ್ನು ಅವರವರ ಫೋನ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಗಳೊಂದಿಗೆ ಸಂಪರ್ಕಿಸುವ “ಇಂಡಿಯಾ ಸ್ಟ್ಯಾಕ್” ನಂತಹ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಯುರೋಪಿಯನ್ ಆಯುಕ್ತರು ಪ್ರಮುಖವಾಗಿ ಗಮನಿಸುತ್ತಾರೆ.

    ಭಾರತದ 28 ರಾಜ್ಯಗಳ ಸುಸಂಘಟಿತ ಆಡಳಿತವು ಈ ಯುರೋಪಿಯನ್ ಯೂನಿಯನ್ ಆಯುಕ್ತರನ್ನು ಪ್ರಮುಖವಾಗಿ ಸೆಳೆದಿದೆ. ಯುರೋಪಿಯನ್ ರಾಷ್ಟ್ರಗಳಿಗಿಂತ ಹೆಚ್ಚೇ ರಾಜ್ಯಗಳನ್ನು ಒಳಗೊಂಡಿದ್ದರೂ ಭಾರತದ “ವಿವಿಧತೆಯಲ್ಲಿ ಏಕತೆ” ಧ್ಯೇಯ ಮತ್ತು ಪರಿಣಾಮಕಾರಿ ಆಡಳಿತ ವ್ಯವಸ್ಥೆ ಯುರೋಪಿಯನ್ ಯೂನಿಯನ್ ಆಯುಕ್ತರ ಗಮನ ಸೆಳೆದಿದೆ.

    ಯುರೋಪಿಯನ್ 27 ರಾಷ್ಟ್ರಗಳ ಒಕ್ಕೂಟದ್ದು ವಿಚಿತ್ರ ರಾಜಕೀಯ ಮತ್ತು ಆಡಳಿತ ವ್ಯವಸ್ಥೆ. ಹಾಗಾಗಿ ಯುರೋಪಿಯನ್ ನಾಗರಿಕರು ಸಾಮಾನ್ಯವಾಗಿ ಯುರೋಪಿಯನ್ ಯೂನಿಯನ್ ಹೆಚ್ಚು ಬಾಂಧವ್ಯ ಹೊಂದಿರುವುದಿಲ್ಲ. ಅವರು ತಮ್ಮ ಪ್ರತ್ಯೇಕ ದೇಶಗಳಿಗೆ ಆದ್ಯತೆ ನೀಡುತ್ತಾರೆ. ಹೀಗಾಗಿ ಈ ಅನಿರೀಕ್ಷಿತ ಭಾರತ ಭೇಟಿಯಿಂದ EU ಆಯುಕ್ತರು ಭಾರತದ ಏಕತೆ ಮತ್ತು ಬೆಳವಣಿಗೆ ವಿಧಾನದಲ್ಲಿ ಅಡಕವಾಗಿರುವ ಅಮೂಲ್ಯವಾದ ಅಂಶಗಳನ್ನು ಕಂಡುಕೊಳ್ಳಲಿದ್ದಾರೆ.

  • ಕರ್ನಾಟಕದ ಅರಣ್ಯ ಪಡೆಗಳ ಮೊದಲ ಮಹಿಳಾ ಮುಖ್ಯಸ್ಥರಾಗಿ ಮೀನಾಕ್ಷಿ ನೇಗಿ ನೇಮಕ

    ಕರ್ನಾಟಕದ ಅರಣ್ಯ ಪಡೆಗಳ ಮೊದಲ ಮಹಿಳಾ ಮುಖ್ಯಸ್ಥರಾಗಿ ಮೀನಾಕ್ಷಿ ನೇಗಿ ನೇಮಕ

    ಬೆಂಗಳೂರು: ಕರ್ನಾಟಕ ಅರಣ್ಯ ಪಡೆಗಳ(Forest Force) ಮುಖ್ಯಸ್ಥರಾಗಿ ಮೀನಾಕ್ಷಿ ನೇಗಿ(Meenakshi Negi) ನೇಮಕಗೊಂಡಿದ್ದಾರೆ. ಮೊದಲ ಬಾರಿಗೆ ಮಹಿಳಾ ಅಧಿಕಾರಿ ಚುಕ್ಕಾಣಿ ಹಿಡಿದಿದ್ದಾರೆ.

    ಹಿರಿಯ ಐಎಫ್‌ಎಸ್(IFS) ಅಧಿಕಾರಿಯಾಗಿದ್ದ ಮೀನಾಕ್ಷಿ ನೇಗಿ ಉತ್ತರಾಖಂಡ ರಾಜ್ಯದವರು. ಐಎಫ್‌ಎಸ್ ಅಧಿಕಾರಿಯಾಗಿ ಕರ್ನಾಟಕಕ್ಕೆ ನಿಯೋಜನೆಯಾಗಿದ್ದ ಅವರು 1989ರ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಅಧಿಕಾರಿಯಾಗಿ ಮೂರೂವರೆ ದಶಕದಿಂದ ಸೇವೆ ಸಲ್ಲಿಸಿದ್ದರು. ಇದನ್ನೂ ಓದಿ: ಮಹಿಳಾ ಐಪಿಎಲ್; ಬೆಂಗಳೂರಿನಲ್ಲಿ ನಡೆಯುವ ಪಂದ್ಯಗಳ ವೀಕ್ಷಣೆಗೆ ಮೆಟ್ರೋ ಸೇವೆ ವಿಸ್ತರಣೆ

    ಬಳ್ಳಾರಿ, ಮಂಡ್ಯ, ಚಿಕ್ಕಮಗಳೂರಿನಲ್ಲಿಯೂ ಡಿಸಿಎಫ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಮೀನಾಕ್ಷಿ ನೇಗಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಕಾರ್ಯದರ್ಶಿ ಆಗಿದ್ದರು. ಇದನ್ನೂ ಓದಿ: ಕುಂಭಮೇಳಕ್ಕೆ ತೆರಳುತ್ತಿದ್ದಾಗ ಅಪಘಾತ: ಹಾಸನದ ಬಿಜೆಪಿ ಯುವ ಕಾರ್ಯಕರ್ತ ಸಾವು

    ಕರ್ನಾಟಕ ಅರಣ್ಯ ಪಡೆಗಳ ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಕುರಿತು ಉನ್ನತ ಮಟ್ಟದ ಸಮಿತಿ ಸಭೆ ಸೇರಿ ತೀರ್ಮಾನಿಸಲಾಗಿತ್ತು. ಬಳಿಕ ಕೇಂದ್ರ ಸರ್ಕಾರಕ್ಕೂ ವರದಿ ಸಲ್ಲಿಸಲಾಗಿದೆ. ಆದಾದ ಬಳಿಕ ಮೀನಾಕ್ಷಿ ವೇಗಿ ಅವರನ್ನು ಕೇಂದ್ರ ಸರ್ಕಾರದ ಸೇವೆಯಿಂದ ಬಿಡುಗಡೆ ಮಾಡಲಾಗಿತ್ತು. ಇದನ್ನೂ ಓದಿ: ʻಮಹಾʼ ಡಿಸಿಎಂ ಏಕನಾಥ್ ಶಿಂಧೆಗೆ ಬಾಂಬ್ ಬೆದರಿಕೆ – ಮುಂಬೈ ಪೊಲೀಸರಿಂದ ತನಿಖೆ ಶುರು

  • ಶಿರಾಡಿಘಾಟ್‌ನಲ್ಲಿ ಸುರಂಗ, ಗ್ರೀನ್‌ಫೀಲ್ಡ್ ನಿರ್ಮಾಣಕ್ಕೆ ಡಿಪಿಆರ್ ತಯಾರಿಸಲು ಕೇಂದ್ರ ಒಪ್ಪಿಗೆ

    ಶಿರಾಡಿಘಾಟ್‌ನಲ್ಲಿ ಸುರಂಗ, ಗ್ರೀನ್‌ಫೀಲ್ಡ್ ನಿರ್ಮಾಣಕ್ಕೆ ಡಿಪಿಆರ್ ತಯಾರಿಸಲು ಕೇಂದ್ರ ಒಪ್ಪಿಗೆ

    – ಹೆದ್ದಾರಿ ಕಾಮಗಾರಿಗೆ ಪರಿಸರವಾದಿಗಳ ತೀವ್ರ ಆಕ್ರೋಶ

    ಹಾಸನ: ಮಂಗಳೂರು-ಬೆಂಗಳೂರು (Mangaluru-Bengaluru) ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿಘಾಟ್‌ನಲ್ಲಿ ಸುರಂಗ, ಗ್ರೀನ್ ಫೀಲ್ಡ್ ಮಾರ್ಗ ನಿರ್ಮಾಣ ಕಾಮಗಾರಿ ಕುರಿತು ಸಮಗ್ರ ಯೋಜನಾ ವರದಿ (DPR) ತಯಾರಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ.

    2022ರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಸುರಂಗ ಮಾರ್ಗ ಕಾರ್ಯಸಾಧುವಲ್ಲ, ಇದಕ್ಕೆ ಭಾರೀ ಮೊತ್ತ ಬೇಕಾಗುತ್ತದೆ ಎಂದು ತಿರಸ್ಕರಿಸಿದ್ದರು. ಆದರೆ, ಸುರಂಗ ನಿರ್ಮಾಣಕ್ಕೆ ಒಪ್ಪಿಗೆ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು, ಹಾಸನ ಜಿಲ್ಲೆಯ ಮಲೆನಾಡು ಭಾಗದ ಶಾಸಕರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕೇಂದ್ರದ ಮೇಲೆ ಒತ್ತಡ ತಂದ ಹಿನ್ನೆಲೆಯಲ್ಲಿ ಡಿಪಿಆರ್ ತಯಾರಿಸಲು ಇದೀಗ ಒಪ್ಪಿಗೆ ಸಿಕ್ಕಿದೆ. ಆದರೆ ಇದಕ್ಕೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ:

    ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಒಟ್ಟು 26 ಕಿ.ಮೀ ಉದ್ದದ ಯೋಜನೆ ಇದಾಗಿದ್ದು, 3.8 ಕಿ.ಮೀ ಸುರಂಗ ಇದ್ದರೆ, 10 ಕಿ.ಮೀ ರಸ್ತೆ ಇರಲಿದೆ. ಮಾರನಹಳ್ಳಿಯಿಂದ ಪ್ರಾರಂಭವಾಗಿ ಅಡ್ಡಹೊಳೆಯವರೆಗೆ ಸುರಂಗ ಮಾರ್ಗ ನಿರ್ಮಾಣವಾಗಲಿದೆ. ಇಲ್ಲಿ ಬಹಳಷ್ಟು ಅರಣ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿರುವ ಹಿನ್ನೆಲೆಯಲ್ಲಿ ವಿವರವಾದ ಅಂದಾಜು ಮಾಡಬೇಕಿದೆ. ಕೆಲವು ಕಡೆಗಳಲ್ಲಿ ಫ್ಲೈ ಓವರ್‌ಗಳ ನಿರ್ಮಾಣ ಕೂಡ ಆಗಬೇಕಿದೆ. ಇದಕ್ಕೆ ದುಬಾರಿ ವೆಚ್ಚವಾಗುವುದರಿಂದ ಇದನ್ನು ಕೇಂದ್ರ ಸರ್ಕಾರವೇ ಭರಿಸಬೇಕಾಗಿದೆ. ಸುರಂಗ ನಿರ್ಮಾಣ ಮಾಡುವುದರಿಂದ ಭೂಸ್ವಾಧೀನ ಜವಾಬ್ದಾರಿ ಕೂಡ ರಾಜ್ಯ ಸರ್ಕಾರ ಹೆಗಲಿಗೆ ಬೀಳಲಿದೆ. ರಾಜ್ಯ ಸರ್ಕಾರವು ಅಲ್ಪ ಪ್ರಮಾಣದ ಅರಣ್ಯ ಭೂಮಿ ನೀಡಲು ಸಿದ್ಧವಿದ್ದರೆ, ಶಿರಾಡಿಘಾಟ್ ರಸ್ತೆಯನ್ನು ಅಭಿವೃದ್ಧಿಪಡಿಸಲು ಹಣ ಹೂಡಿಕೆ ಮಾಡಲು ತಮ್ಮ ಇಲಾಖೆ ಪರಿಗಣಿಸಲಿದೆ ಎಂದು ಕೇಂದ್ರ ಭೂಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಈಗಾಗಲೇ ಭರವಸೆ ನೀಡಿದ್ದಾರೆ.

    ಸಕಲೇಶಪುರದಿಂದ ಗುಂಡ್ಯದವರೆಗೂ ಚತುಷ್ಪಥ ರಸ್ತೆ ಮಾಡಲು ಹಲವು ರೀತಿಯ ಸಮಸ್ಯೆಗಳು ಎದುರಾಗಿವೆ. ರಸ್ತೆ ವಿಸ್ತರಣೆ ಮಾಡುತ್ತಿರುವುದರಿಂದ ಲಕ್ಷಾಂತರ ಗಿಡ ಮರಗಳನ್ನು ಕಡಿಯಬೇಕಾಗುತ್ತದೆ. ಇದರಿಂದ ಮುಂದೆ ಭಾರೀ ಅನಾಹುತ ಆಗಲಿದೆ ಎನ್ನುವ ಕಾರಣಕ್ಕೆ ಸುರಂಗ ಯೋಜನೆಯೇ ಉತ್ತಮ ಎಂದು ರಾಜ್ಯ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ. ಇದಕ್ಕೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿ, ಈಗಾಗಲೇ ರಸ್ತೆ ಕಾಮಗಾರಿಗೆ ಗುಡ್ಡಗಳನ್ನು ಕತ್ತರಿಸಿ ರಸ್ತೆ ವಿಸ್ತರಣೆ ಮಾಡಿರುವುದರಿಂದ ಮಳೆಗಾಲದಲ್ಲಿ ಭೂಕುಸಿತ ಉಂಟಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಸುರಂಗ ಮಾರ್ಗ ನಿರ್ಮಾಣ ಮಾಡಿದರೆ ಪಶ್ಚಿಮಘಟ್ಟದ ಮೇಲೆ ಇನ್ನಷ್ಟು ದುಷ್ಪರಿಣಾಮ ಬೀರಲಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನು ಲೆಕ್ಕಿಸದೆ ರಾಜ್ಯ ಸರ್ಕಾರವು ಕೇಂದ್ರದ ಮೇಲೆ ಒತ್ತಡ ತಂದು ಸುರಂಗ ಮಾರ್ಗ ಮಾಡಲು ಮುಂದಾಗಿದೆ.

    ಪಶ್ಚಿಮಘಟ್ಟದಲ್ಲಿ ಸುರಂಗ ನಿರ್ಮಾಣ ಮಾಡುವುದರಿಂದ ಜೀವ ವೈವಿಧ್ಯತೆ ಮೇಲೆ ಮಾರಕ ಪರಿಣಾಮ ಬೀರಬಹುದು ಎನ್ನುವುದು ಪರಿಸರವಾದಿಗಳು ಹಾಗೂ ಮಲೆನಾಡು ಭಾಗದ ಜನರ ಆತಂಕವಾಗಿದೆ. ರಸ್ತೆ ಅಗಲೀಕರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿಯಾದರೆ, ಸುರಂಗ ಮಾರ್ಗ ಸ್ವಲ್ಪಮಟ್ಟಿಗೆ ಕಡಿಮೆ ಹಾನಿ ಮಾಡಬಹುದು ಎಂದು ಸರ್ಕಾರ ಬಿಂಬಿಸುತ್ತಿದ್ದರೂ ಪರಿಸರವಾದಿಗಳು ಅದನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ ಸುರಂಗ ಯೋಜನೆಯ ಪರ ಮತ್ತು ವಿರುದ್ಧವಾಗಿಯೂ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಅಪರೂಪದ ಜೀವ ವೈವಿದ್ಯತೆಗಳಿರುವ ಪಶ್ಚಿಮಘಟ್ಟ ಅತೀ ಸೂಕ್ಷ್ಮ ಪರಿಸರ ವಲಯವಾಗಿರುವುದರಿಂದ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯನಡೆಸುವುದು ಸೂಕ್ತವಲ್ಲವೆಂದು ಈಗಾಗಲೇ ಮಾಧವ್ ಗಾಡ್ಗೀಳ್, ಕಸ್ತೂರಿ ರಂಗನ್ ವರದಿ ತಿಳಿಸಿರುವುದರಿಂದ ಇದನ್ನೇ ಮುಂದಿಟ್ಟುಕೊAಡು ಪರಿಸರವಾದಿಗಳು ಹಾಗೂ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

    ಒಟ್ಟಿನಲ್ಲಿ ಕಳೆದ ಏಳು ವರ್ಷಗಳಿಂದ ಶಿರಾಡಿಘಾಟ್ ರಸ್ತೆ ಕಾಮಗಾರಿ ಕುಂಟುತ್ತಾ ಸಾಗಿದ್ದು, ಇದಕ್ಕಾಗಿ ಗುಡ್ಡಗಳನ್ನು ಬಗೆದು ಪರಿಸರಕ್ಕೆ ಹಾನಿ ಮಾಡಲಾಗಿದೆ. ಇದರ ಜೊತೆಗೆ ಎತ್ತಿನಹೊಳೆ ಕಾಮಗಾರಿಗಾಗಿ ಸಾಕಷ್ಟು ಪಶ್ಚಿಮಘಟ್ಟ ನಾಶವಾಗಿದ್ದು, ಇದೀಗ ಟನಲ್ ನಿರ್ಮಾಣಕ್ಕೆ ಮುಂದಾಗಿರುವುದು ಪರಿಸರವಾದಿಗಳು, ಮಲೆನಾಡು ಭಾಗದ ಜನರು ಹಾಗೂ ಸರ್ಕಾರಗಳ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಡುವ ಸಾಧ್ಯತೆ ಹೆಚ್ಚಾಗಿದೆ.ಇದನ್ನೂ ಓದಿ:

     

  • ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ – ಮೃತರ ಕುಟುಂಬಗಳಿಗೆ ಕೇಂದ್ರದಿಂದ ತಲಾ 10 ಲಕ್ಷ ಪರಿಹಾರ ಘೋಷಣೆ

    ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ – ಮೃತರ ಕುಟುಂಬಗಳಿಗೆ ಕೇಂದ್ರದಿಂದ ತಲಾ 10 ಲಕ್ಷ ಪರಿಹಾರ ಘೋಷಣೆ

    – ಗಂಭೀರವಾಗಿ ಗಾಯಗೊಂಡವರಿಗೆ 2.5 ಲಕ್ಷ ರೂ. ಪರಿಹಾರ

    ನವದೆಹಲಿ: ಇಲ್ಲಿನ ರೈಲು ನಿಲ್ದಾಣದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂ. ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ ತಲಾ 2.5 ಲಕ್ಷ ರೂ. ಪರಿಹಾರವನ್ನು ಕೇಂದ್ರ ಸರ್ಕಾರ (Central Government) ಘೋಷಿಸಿದೆ.

    ದೆಹಲಿ ರೈಲು ನಿಲ್ದಾಣದಲ್ಲಿ ಶನಿವಾರ ರಾತ್ರಿ ಭೀಕರ ಕಾಲ್ತುಳಿತದಿಂದ ಕುಂಭಮೇಳಕ್ಕೆ ಹೊರಟಿದ್ದ 18 ಜನ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಮೃತರಲ್ಲಿ 11 ಮಹಿಳೆಯರು ಹಾಗೂ ನಾಲ್ಕು ಮಕ್ಕಳು ಸೇರಿದ್ದಾರೆ ಎಂದು ವರದಿಯಾಗಿದೆ.ಇದನ್ನೂ ಓದಿ: ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ – ಕುಂಭಮೇಳಕ್ಕೆ ಹೊರಟಿದ್ದ 18 ಭಕ್ತರು ಸಾವು

    ಕಾಲ್ತುಳಿತ ಸಂಭವಿಸಿದ್ದು ಹೇಗೆ?
    ಕುಂಭಮೇಳಕ್ಕೆ ಹೊರಟಿದ್ದ ಭಕ್ತರಿಂದ ನವದೆಹಲಿ ರೈಲು ನಿಲ್ದಾಣ ತುಂಬಿ ತುಳುಕುತ್ತಿತ್ತು. ಅದಕ್ಕಾಗಿ 2 ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ರೈಲುಗಳಿಗೂ ಮೊದಲು ಭುವನೇಶ್ವರಕ್ಕೆ ತೆರಳಬೇಕಿದ್ದ ರಾಜಧಾನಿ ಮತ್ತು ಸ್ವತಂತ್ರ ಸೇನಾನಿ ಎಕ್ಸ್ಪ್ರೆಸ್ ರೈಲುಗಳು ತಡವಾಗಿ ನಿಲ್ದಾಣವನ್ನು ತಲುಪಿದವು. ಹೀಗಾಗಿ ರೈಲು ನಿಲ್ದಾಣದಲ್ಲಿ ಒಮ್ಮೆಗೆ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಯಿತು.

    ಇದೇ ಸಮಯಕ್ಕೆ ಪ್ಲಾಟ್‌ಫಾರ್ಮ್ 14 ಮತ್ತು 15ಕ್ಕೆ ಪ್ರಯಾಗ್ ರಾಜ್‌ಗೆ ಹೊರಟ ವಿಶೇಷ ರೈಲು ನಿಲ್ದಾಣಕ್ಕೆ ಆಗಮಿಸಿದೆ. ಈ ವೇಳೆ ಸಾವಿರಾರು ಜನರು ಏಕಾಏಕಿ ರೈಲಿಗೆ ನುಗ್ಗಿದ್ದಾರೆ. ಹೀಗಾಗಿ ರೈಲಿನ ಒಳಗೆ ಮತ್ತು ಹೊರಗೆ ಕಾಲ್ತುಳಿತ ಸಂಭವಿಸಿದೆ. ಈ ಅವಘಡದಲ್ಲಿ 18 ಮಂದಿ ಸಾವಿಗೀಡಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನಾ ಸ್ಥಳಕ್ಕೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಭೇಟಿ ನೀಡಿ ತನಿಖೆಗೆ ಆದೇಶಿಸಿದ್ದಾರೆ. ಘಟನೆ ಸಂಬಂಧ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

    ಕಳೆದ ಜ.29ರಂದು ಮೌನಿ ಅಮವಾಸ್ಯೆ ದಿನ ಪ್ರಯಾಗ್‌ರಾಜ್‌ನ ಕುಂಭಮೇಳದ ಸ್ಥಳದಲ್ಲಿ ಕಾಲ್ತುಳಿತ ಉಂಟಾಗಿ 30 ಜನ ಸಾವನ್ನಪ್ಪಿದ್ದರು.ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆ್ಯಕ್ಟರ್ & ಡಾಕ್ಟರ್ – ಮೈಸೂರಲ್ಲಿ ಅದ್ದೂರಿಯಾಗಿ ನಡೆದ ಡಾಲಿ, ಧನ್ಯತಾ ಮದುವೆ

  • ತೊಗರಿ ಬೆಳೆಗಾರರಿಗೆ ಸಿಹಿ ಸುದ್ದಿ – ಕೇಂದ್ರದ ಬೆಂಬಲ ಬೆಲೆ ಜೊತೆಗೆ ರಾಜ್ಯದಿಂದ ಪ್ರೋತ್ಸಾಹ ಧನ

    ತೊಗರಿ ಬೆಳೆಗಾರರಿಗೆ ಸಿಹಿ ಸುದ್ದಿ – ಕೇಂದ್ರದ ಬೆಂಬಲ ಬೆಲೆ ಜೊತೆಗೆ ರಾಜ್ಯದಿಂದ ಪ್ರೋತ್ಸಾಹ ಧನ

    ಬೆಂಗಳೂರು: ಕೇಂದ್ರ ಸರ್ಕಾರದ ಬೆಂಬಲ ಬೆಲೆಯ ಜೊತೆಗೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ಧನ ನೀಡಲಾಗುವುದು ಎಂಬ ಭರವಸೆಗೆ ಇದೀಗ ಸಿಎಂ ಸಿದ್ದರಾಮಯ್ಯ (CM Siddaramaiah) ಅನುಮೋದನೆ ನೀಡಿದ್ದು, ಈ ಮೂಲಕ ಸರ್ಕಾರ ತೊಗರಿ ಬೆಳೆಗಾರರಿಗೆ ಸಂತಸದ ಸುದ್ದಿ ನೀಡಿದೆ.

    2024-25ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆಯ ಜೊತೆಗೆ ರಾಜ್ಯದ ಸರ್ಕಾರದಿಂದ ಪ್ರೋತಾಹ ಧನ ನೀಡಲಾಗುವುದು ಎಂದು ಜವಳಿ, ಕಬ್ಬು ಅಭಿವೃಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು ಕಳೆದ ಜನವರಿ ತಿಂಗಳಲ್ಲಿ ಭರವಸೆ ನೀಡಿದ್ದರು.ಇದನ್ನೂ ಓದಿ: ‘ಬಿಗ್ ಬಾಸ್‌’ನಲ್ಲಿ ಗೆದ್ದ 50 ಲಕ್ಷ ಏನಾಯ್ತು?- ಅಚ್ಚರಿಯ ಉತ್ತರ ಕೊಟ್ಟ ಹನುಮಂತ

    ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ತೊಗರಿ ಖರೀದಿಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರದ ಬೆಂಬಲ ಬೆಲೆ ಪ್ರತಿ ಕ್ವಿಂಟಲ್‌ಗೆ 7,550 ರೂ. ಜೊತೆಗೆ ರಾಜ್ಯ ಸರ್ಕಾರದ ಪ್ರೋತಾಹ ಧನ 450 ರೂ. ಅಂದರೆ ಪ್ರತಿ ಕ್ವಿಂಟಾಲ್‌ಗೆ ಒಟ್ಟು 8,000 ರೂ. ನೀಡುವುದಾಗಿ ಭರವಸೆ ನೀಡಿದ್ದರು.

    ಸದ್ಯ ಈ ಸಂಬಂಧ ಮುಖ್ಯಮಂತ್ರಿಗಳು ಅನುಮೋದನೆ ನೀಡಿದ್ದು, ಆರ್ಥಿಕ ಇಲಾಖೆಯೂ ಸಹ ಸಹಮತಿ ನೀಡಿದೆ. ಈ ಕುರಿತು ಸಂಬಂಧಿಸಿದ ಇಲಾಖೆಗೆ ತಕ್ಷಣ ಅನುಷ್ಠಾನಗೊಳಿಸಲು ಸೂಕ್ತ ನಿರ್ದೇಶನ ನೀಡಲಾಗಿದೆ.

    ರಾಜ್ಯದ ಪ್ರಮುಖ ತೊಗರಿ ಬೆಳೆಯುವ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ವಿಜಯಪುರ, ಕೊಪ್ಪಳ, ಬಳ್ಳಾರಿ, ವಿಜಯನಗರ, ಬಾಗಲಕೋಟೆ, ಬೆಳಗಾವಿ, ಚಿತ್ರದುರ್ಗ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಅಂದಾಜು 330 ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ರೈತರು ತಮ್ಮ ಹತ್ತಿರದ PACS / FPO / TAPCMS ಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಂಡು ಬೆಂಬಲ ಬೆಲೆ ಯೋಜನೆ ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹ ಧನದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.ಇದನ್ನೂ ಓದಿ:ನಮ್ಮ ಮೆಟ್ರೋದಿಂದ ಗುಡ್ ನ್ಯೂಸ್ – ಬೆಂಗಳೂರು ತಲುಪಿದ 2ನೇ ಡ್ರೈವರ್‌ಲೆಸ್‌ ಮೆಟ್ರೋ

  • ರಾಷ್ಟ್ರೀಯ ಹೆದ್ದಾರಿಗಳಲ್ಲಿ 3 ಸಾವಿರಕ್ಕೆ ವಾರ್ಷಿಕ, 30 ಸಾವಿರಕ್ಕೆ ಜೀವಿತಾವಧಿ ಟೋಲ್‌ ಪಾಸ್‌

    ರಾಷ್ಟ್ರೀಯ ಹೆದ್ದಾರಿಗಳಲ್ಲಿ 3 ಸಾವಿರಕ್ಕೆ ವಾರ್ಷಿಕ, 30 ಸಾವಿರಕ್ಕೆ ಜೀವಿತಾವಧಿ ಟೋಲ್‌ ಪಾಸ್‌

    ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳನ್ನು ಆಗಾಗ್ಗೆ ಬಳಸುವ ಮಧ್ಯಮ ವರ್ಗ ಹಾಗೂ ಖಾಸಗಿ ಕಾರು ಮಾಲೀಕರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್‌ ಕೊಡೋದಕ್ಕೆ ಮುಂದಾಗಿದೆ. ಟೋಲ್‌ ಸಂಗ್ರಹದಲ್ಲಿ ಉಂಟಾಗುತ್ತಿದ್ದ ಕಿರಿಕಿರಿ ತಪ್ಪಿಸಲು ಹಾಗೂ ಕಾರು ಮಾಲೀಕರಿಗೆ ಅನುಕೂಲ ಮಾಡಿಕೊಡಲು ʻವಾರ್ಷಿಕ ಟೋಲ್‌ ಪಾಸ್‌ʼ ವ್ಯವಸ್ಥೆಯ ಅನುಷ್ಠಾನಕ್ಕೆ ಚಿಂತನೆ ನಡೆಸಿದೆ.

    ಈ ಪ್ರಸ್ತಾವನೆ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪರಿಶೀಲಿಸುತ್ತಿದೆ. ಅದರಂತೆ ಒಮ್ಮೆಲೆ 3,000 ರೂ. ಪಾವತಿಸಿ ಒಂದು ವರ್ಷದಲ್ಲಿ ಎಷ್ಟು ಬಾರಿ ಬೇಕಾದರೂ ಟೋಲ್‌ಗಳಲ್ಲಿ ಸಂಚಾರ ಮಾಡಬಹುದು. 30,000 ರೂ. ಪಾವತಿಸಿದ್ರೆ ʻಜೀವಮಾನದ ಪಾಸ್‌ʼ ಒದಗಿಸುವ ಸಾಧ್ಯತೆಯೂ ಇದೆ. 30,000 ರೂ.ಗಳ ಪಾಸ್‌ ಪಡೆದರೆ 15 ವರ್ಷಗಳವರೆಗೆ ಟೋಲ್‌ಗಳಲ್ಲಿ ಸಂಚಾರಕ್ಕೆ ಅವಕಾಶ ಇರಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ವರ್ಗಾವಣೆಯಾಗಿ ಅಥವಾ VRS ತೆಗೆದುಕೊಳ್ಳಿ- ಹಿಂದೂಯೇತರ 18 ಸಿಬ್ಬಂದಿ ವಿರುದ್ಧ ಕಠಿಣ ಕ್ರಮ: ತಿರುಪತಿ ಬೋರ್ಡ್‌

    ಸದ್ಯದ ಮಾಹಿತಿ ಪ್ರಕಾರ, ಈ ವ್ಯವಸ್ಥೆ ಅನುಷ್ಠಾನಗೋಳಿಸುವ ಪ್ರಸ್ತಾವನೆಯು ಪ್ರಗತಿಯಲ್ಲಿದೆ. ಜೊತೆಗೆ ಕಾರುಗಳಿಗೆ ಪ್ರತಿ ಕಿಮೀಗೆ ವಿಧಿಸಲಾಗುವ ಟೂಲ್‌ನ ಮೂಲ ಬೆಲೆಯನ್ನೂ ಮೊಟಕುಗೊಳಿಸುವ ಬಗ್ಗೆಯೂ ಸಚಿವಾಲಯ ಚಿಂತನೆ ನಡೆಸಿದೆ. ಫಾಸ್ಟ್‌ ಟ್ಯಾಗ್‌ ಹೊಂದಿರುವವರಿಗೆ ಇದು ಅಗತ್ಯವಿಲ್ಲ ಎಂದು ಸಹ ಹೇಳಲಾಗಿದೆ.

    ಪ್ರತಿ 60 ಕಿಲೋಮೀಟರ್‌ಗಳಿಗೆ ಒಂದು ಟೋಲ್ ಗೇಟ್ ಇದೆ. ಈ ಟೋಲ್ ಗೇಟ್‌ಗಳಲ್ಲಿ ನಿಗದಿತ ಮೊತ್ತವನ್ನು ಪಾವತಿಸಿದ ನಂತರವೇ ಮುಂದುವರಿಯಬೇಕಿದೆ. ಆದರೆ ಈಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ತೆಗೆದುಕೊಂಡ ನಿರ್ಧಾರದಿಂದ ಎಲ್ಲಾ ವಾಹನ ಚಾಲಕರಿಗೆ ಕೊಂಚ ಆರಾಮ ಸಿಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಇದನ್ನೂ ಓದಿ:  ತಮಿಳುನಾಡಿನಲ್ಲಿ ಅಮಾನವೀಯ ಕೃತ್ಯ – ವಿದ್ಯಾರ್ಥಿನಿ ಮೇಲೆ ಮೂವರು ಶಿಕ್ಷಕರಿಂದ್ಲೇ ಗ್ಯಾಂಗ್ ರೇಪ್

    ಸದ್ಯ ಆಗಾಗ್ಗೆ ರಾಷ್ಟ್ರೀಯ ಹೆದ್ದಾರಿ ಬಳಸುವ ವಾಹನ ಸವಾರರಿಗೆ ಮಾಸಿಕ ಪಾಸ್‌ ನೀಡುವ ವ್ಯವಸ್ಥೆ ಚಾಲ್ತಿಯಲಿದೆ. ಇದು ಮಾಸಿಕ ಪಾಸ್‌ಗೆ 340 ರೂ. ಇದು, ವಾರ್ಷಿಕ 4,080 ರೂ.ಆಗಲಿದೆ. ವಾರ್ಷಿಕ ಪಾಸ್‌ ವ್ಯವಸ್ಥೆ ಜಾರಿಗೆ ಬಂದರೆ 1,080 ರೂ. ಉಳಿತಾಯವಾಗಲಿದೆ. ಇದು ಮಧ್ಯಮ ವರ್ಗದವರಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಇದನ್ನೂ ಓದಿ: ಗೌತಮ್‌ ಅದಾನಿ ಪುತ್ರನ ವಿವಾಹ ಪ್ರತಿಜ್ಞೆ – ಪ್ರತಿ ವರ್ಷ 500 ಅಂಗವಿಕಲ ಹೆಣ್ಣುಮಕ್ಕಳ ವಿವಾಹಕ್ಕೆ 10 ಲಕ್ಷ ನೆರವು ಘೋಷಣೆ

    ಇತ್ತೀಚೆಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ʻಏಕ ಟೋಲ್‌ʼ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸುವುದಾಗಿ ಹೇಳಿದ್ದರು. 2023-24ರ ವರ್ಷದಲ್ಲಿ ಸಂಗ್ರಹವಾದ 55,000 ಕೋಟಿ ರೂ.ಗಳ ಪೈಕಿ, ಖಾಸಗಿ ಕಾರುಗಳಿಂದ ಸಂಗ್ರಹಿತವಾದ ಟೋಲ್‌ ಶುಲ್ಕ 8,000 ಕೋಟಿ ರೂ. ಮಾತ್ರವೇ ಇದೆ. ಖಾಸಗಿ ಕಾರುಗಳ ವಹಿವಾಟು 53% ಇದ್ದರೂ, ಟೋಲ್‌ ಸಂಗ್ರಹದಲ್ಲಿ ಶೇ.21 ರಷ್ಟಿದೆ ಎಂದು ಡೇಟಾ ತೋರಿಸಿದೆ. ಹೀಗಾಗಿ ಹೊಸ ಕ್ರಮಕ್ಕೆ ಸಚಿವಾಲಯ ಮುಂದಾಗಿದೆ.

  • ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ ಅಗತ್ಯ – ಹೆಚ್‌ಡಿಡಿ ಮನವಿಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ

    ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ ಅಗತ್ಯ – ಹೆಚ್‌ಡಿಡಿ ಮನವಿಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ

    – ಹೊಸೂರಿನಲ್ಲಿ ವಿಮಾನ ನಿಲ್ದಾಣಕ್ಕೆ ತಮಿಳುನಾಡು ಆಗ್ರಹ

    ನವದೆಹಲಿ: ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನಕ್ಕೆ ಬೆಂಗಳೂರು ನಗರ ಜಾಗತಿಕ ಹಬ್ ಆಗಿದ್ದು, ಸುಲಭ ಸಂಪರ್ಕಕ್ಕೆ ಮತ್ತೊಂದು ವಿಮಾನ ನಿಲ್ದಾಣ (Airport) ನಗರಕ್ಕೆ ಅಗತ್ಯವಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು (HD Devegowda) ಪ್ರತಿಪಾದಿಸಿದರು.

    ರಾಜ್ಯಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿಗಳು, ಕರ್ನಾಟಕ ಸರ್ಕಾರ ಈಗಾಗಲೇ ಮತ್ತೊಂದು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರ ಈಗಾಗಲೇ ನಾಗರಿಕ ವಿಮಾನಯಾನ ಸಚಿವರನ್ನು ಸಂಪರ್ಕಿಸಿ ಈ ಬಗ್ಗೆ ಚರ್ಚೆ ನಡೆಸಿದೆ. ಬೆಂಗಳೂರು ನಗರಕ್ಕೆ, ಅದರಲ್ಲಿಯೂ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಮತ್ತೊಂದು ವಿಮಾನ ನಿಲ್ದಾಣದ ಅಗತ್ಯವಿದೆ ಎಂದು ಒತ್ತಿ ಹೇಳಿದರು.

    ಈ ನಿಟ್ಟಿನಲ್ಲಿ ಕೇಂದ್ರವು ಕರ್ನಾಟಕದಲ್ಲಿ ಮತ್ತೊಂದು ವಿಮಾನ ನಿಲ್ದಾಣವನ್ನು ನಿರ್ಮಿಸುವ ಬಗ್ಗೆ ಗಮನ ಹರಿಸಬೇಕು. ಕರ್ನಾಟಕಕ್ಕೆ ಸಂಬಂಧಿಸಿ ನಾನು ಮಂಜೂರು ಮಾಡಿದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈಗ ಪ್ರಯಾಣಿಕರ ದಟ್ಟಣೆಯಿಂದ ವಿಪರೀತ ಒತ್ತಡ ಎದುರಿಸುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಇನ್ನೂ ಒಂದು ವಿಮಾನ ನಿಲ್ದಾಣದ ಅಗತ್ಯವಿದೆ ಎಂದು ಅವರು ಹೇಳಿದರು.

    ಬೆಂಗಳೂರಿಗೆ ಮತ್ತೊಂದು ವಿಮಾನ ನಿಲ್ದಾಣ ಅಗತ್ಯವಿದೆ ಎಂಬ ಮಾಜಿ ಪ್ರಧಾನಿಗಳ ಮಾತಿಗೆ ವಿಮಾನಯಾನ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಸಮ್ಮತಿ ಸೂಚಿಸಿದರು.

    ಮಾಜಿ ಪ್ರಧಾನಿಗಳ ಮಾತಿಗೆ ಸಂಪೂರ್ಣ ಸಹಮತ ವ್ಯಕ್ತಪಡಿಸಿದ ಕೇಂದ್ರದ ನಾಗರಿಕ ವಿಮಾನಯಾನ ಖಾತೆ ಸಚಿವ ರಾಮಮೋಹನ್ ನಾಯ್ಡು ಅವರು, ಬೆಂಗಳೂರು ವಿಮಾನ ನಿಲ್ದಾಣವು ದಿನದಿಂದ ದಿನಕ್ಕೆ ಬಹಳಷ್ಟು ಪ್ರಯಾಣಿಕರ ದಟ್ಟಣೆಯನ್ನು ಎದುರಿಸುತ್ತಿದೆ. ಇದನ್ನು ನಾವೆಲ್ಲರೂ ಒಪ್ಪುತ್ತೇವೆ. ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಲು ಬಯಸಿದೆ. ಅದಕ್ಕೆ ಸೂಕ್ತ ಸ್ಥಳ ಗುರುತಿಸಿ, ಕೇಂದ್ರ ಸರ್ಕಾರದ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಿದರೆ ಆ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತವೆ ಎಂದು ಭರವಸೆ ನೀಡಿದರು.

    ಹೊಸೂರಿನಲ್ಲಿ ವಿಮಾನ ನಿಲ್ದಾಣ:
    ಬೆಂಗಳೂರು ವಿಮಾನ ನಿಲ್ದಾಣಕ್ಕೆ ಜನದಟ್ಟಣೆಯ ಹೆಚ್ಚಾಗಿದೆ, ಹೀಗಾಗಿ ತಮಿಳುನಾಡಿನ ಹೊಸೂರಿನಲ್ಲಿ ವಿಮಾನ ನಿಲ್ದಾಣ ಒತ್ತಡ ಬರುತ್ತಿದೆ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಅಗತ್ಯವಿದೆ ಎಂದು ಎಐಡಿಎಂಕೆ ಸಂಸದ ತಂಬಿದೊರೈ ಆಗ್ರಹಿಸಿದರು.

    ವಿಮಾನ ನಿಲ್ದಾಣದ ಚರ್ಚೆಯಲ್ಲಿ ಮಾತನಾಡಿದ ಅವರು, ದೆಹಲಿ ನೊಯ್ಡಾ ರೀತಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬಹುದು, 25 ವರ್ಷಗಳೊಗೆ ಮತ್ತೊಂದು ವಿಮಾನ ನಿಲ್ದಾಣ ಮಾಡಬಾರದು ಎನ್ನುವ ನಿಯಮ ಸಡಿಲಗೊಳಿಸಬೇಕು, ಹೊಸೂರಿನಲ್ಲಿ ವಿಮಾನ ನಿಲ್ದಾಣಕ್ಕೆ ತಮಿಳುನಾಡು ಸರ್ಕಾರ ಕೂಡಾ ಶಿಫಾರಸು ಮಾಡಿದೆ ಎಂದರು.

    ತಂಬಿದೊರೈ ಪ್ರಶ್ನೆಗೆ ಉತ್ತರಿಸಿದ ವಿಮಾನಯಾನ ಸಚಿವ ರಾಮಮೋಹನಗ ನಾಯ್ಡು, ವಿಮಾನ ನಿಲ್ದಾಣ ಎಲ್ಲಿ ನಿರ್ಮಾಣ ಆಗಬೇಕು ಎನ್ನುವ ಬಗ್ಗೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರ ಕೂತು ಈ ಸಮಸ್ಯೆ ಬಗೆಹರಿಸಬೇಕು, ಹೊಸ ವಿಮಾನ ನಿಲ್ದಾಣ ಮಾಡುವುದು ನಮ್ಮ ಉದ್ದೇಶವಿದೆ ಆದರೆ 150km ವ್ಯಾಪ್ತಿಯಲ್ಲಿ ಮತ್ತೊಂದು ನಿಲ್ದಾಣ ಮಾಡಬಾರದು ಎನ್ನುವ ನಿಯಮ ಇದೆ ಹೀಗಾಗಿ ಕೂತು ಮಾತುಕತೆ ಮೂಲಕ ಈ ಸಮಸ್ಯೆ ಬಗೆಹರಿಸಬೇಕಿದೆ ಎಂದರು.

  • ಕೇಂದ್ರ ಸರ್ಕಾರ ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ ಅನುದಾನ ಕೊಡಲಿ ಸಾಕು – ಕೃಷ್ಣಬೈರೇಗೌಡ

    ಕೇಂದ್ರ ಸರ್ಕಾರ ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ ಅನುದಾನ ಕೊಡಲಿ ಸಾಕು – ಕೃಷ್ಣಬೈರೇಗೌಡ

    ಬೆಂಗಳೂರು: ಕೇಂದ್ರ ಸರ್ಕಾರದ ಹಿಂದಿನ ಬಜೆಟ್‌ನಲ್ಲಿ ರಾಜ್ಯಕ್ಕೆ ಘೋಷಿಸಿರುವ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯ ಮಾಡಿದ್ದೇವೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ (Krishna Byregowda) ತಿಳಿಸಿದ್ದಾರೆ.

    ಶನಿವಾರ ಮಂಡನೆ ಆಗಲಿರುವ ಕೇಂದ್ರ ಬಜೆಟ್ ಹಿನ್ನೆಲೆಯಲ್ಲಿ ರಾಜ್ಯದ ಬೇಡಿಕೆ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ನಮ್ಮ ಬೇಡಿಕೆಗಳನ್ನು ಲಿಖಿತವಾಗಿ ಮತ್ತು ಮನವಿ ರೂಪದಲ್ಲಿ ಸಲ್ಲಿಸಿದ್ದೇವೆ. ಈ ಹಿಂದಿನ ವರ್ಷಗಳಲ್ಲಿ ಕೇಂದ್ರ, ರಾಜ್ಯಕ್ಕೆ ಮಲತಾಯಿ ಧೋರಣೆ ಮಾಡಿದೆ. ಆದರೂ ಜನರ ಪರವಾಗಿ ನಮ್ಮ ಹಕ್ಕು ಪ್ರತಿಪಾದನೆ ಮಾಡುವ ಕೆಲಸ ಮಾಡಿದ್ದೇವೆ. ನಮಗೆ ಹೊಸಸ ನುದಾನ ಕೊಡದೇ ಹೋದರೂ ಹಿಂದಿನ ವರ್ಷಗಳಲ್ಲಿ ಘೋಷಣೆ ಮಾಡಿರುವ ಅನುದಾನ ಕೊಟ್ಟರೆ ಸಾಕಾಗಿದೆ ಎಂದರು.ಇದನ್ನೂ ಓದಿ: ಫಿಲ್ಮಿ ಸ್ಟೈಲ್‌ ರೌಡಿಗಳಂತೆ ಯುವತಿಯರಿದ್ದ ಕಾರನ್ನ ಬೆನ್ನಟ್ಟಿದ್ದ ಯುವಕರು – ವಿಡಿಯೋ ವೈರಲ್‌

    ರಾಜ್ಯಕ್ಕೆ ಹಿಂದಿನ ಹಣಕಾಸು ಆಯೋಗ 11,495 ಸಾವಿರ ಕೋಟಿ ರೂ. ವಿಶೇಷ ಅನುದಾನ ಕೊಡಲು ಶಿಫಾರಸು ಮಾಡಿತ್ತು. ಅದನ್ನ ಕೊಡಲಿಲ್ಲ. ಈ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯ ಮಾಡಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಣೆ ಮಾಡಿದ್ದ 5 ಸಾವಿರ ಕೋಟಿ ರೂ. ಹಣ ಕೊಡಬೇಕು. ಮೇಕೆದಾಟು ಯೋಜನೆ, ಕಳಸಾ-ಬಂಡೂರಿ ಯೋಜನೆಗೆ ಅನುಮತಿ ಕೊಡಬೇಕು. ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗ, ಮಲೆನಾಡು ಕರ್ನಾಟಕ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಕೊಡಬೇಕು. ಪಿಂಚಣಿ ಯೋಜನೆಗೆ ಕೇಂದ್ರ ಕೊಡುವ ಮೊತ್ತವನ್ನು ಹೆಚ್ಚಳ ಮಾಡಲು ಮನವಿ ಮಾಡ್ತಿದ್ದೇವೆ. ಪ್ರಧಾನಿಮಂತ್ರಿ ಆವಾಸ್ ಯೋಜನಡಿ ಮನೆ ಕಟ್ಟಿಕೊಡಲು ಕೇಂದ್ರ ಕೊಡುವ ಹಣವನ್ನು ಹೆಚ್ಚಳ ಮಾಡಬೇಕು. ಆಶಾ ಕಾರ್ಯಕರ್ತೆಯರು, ಅಂಗನವಾಡಿ, ಬಿಸಿಯೂಟ ಮಾರುವವರಿಗೆ ಕೇಂದ್ರದ ಗೌರವ ಧನ ಹೆಚ್ಚಳ ಮಾಡಬೇಕು ಎಂದು ಒತ್ತಾಯ ಮಾಡಿದ್ದೇವೆ ಎದು ಹೇಳಿದರು.

    ಇನ್ನೂ ಇದೇ ಕೇಂದ್ರ ಸಚಿವ ಕುಮಾರಸ್ವಾಮಿ ಮತ್ತು ಕುಟುಂಬದವರಿಂದ ಕೇತಗಾನಹಳ್ಳಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಪ್ರಕರಣದ ತನಿಖೆಗೆ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ತಂಡ ರಚನೆ ಮಾಡಲಾಗಿದೆ. ಹೈಕೋರ್ಟ್ ಸರ್ಕಾರಿ ಜಮೀನು ಒತ್ತುವರಿ ಆಗಿರುವ ಬಗ್ಗೆ ತೀಕ್ಷ್ಣವಾಗಿ ಸೂಚನೆಯನ್ನು ಕೊಟ್ಟಿದೆ. ಫೆಬ್ರವರಿ 21ರ ಒಳಗೆ ತನಿಖಾ ವರದಿಯನ್ನು ಕೋರ್ಟ್‌ಗೆ ಸಲ್ಲಿಸುತ್ತೇನೆ. ತನಿಖೆಗೆ 3 ತಿಂಗಳು ಸಮಯ ಕೇಳಿದ್ದೆವು. ಆದರೆ ಕೋರ್ಟ್ ಸಮಯ ಕೊಡಲಿಲ್ಲ. ಹೀಗಾಗಿ ಕೋರ್ಟ್ ಕೊಟ್ಟಿರುವ ಅವಧಿಯಲ್ಲಿ ತನಿಖೆ ಮಾಡಿ ವರದಿ ಕೋರ್ಟ್‌ಗೆ ಸಲ್ಲಿಕೆ ಮಾಡ್ತೀವಿ ಎಂದು ತಿಳಿಸಿದರು.ಇದನ್ನೂ ಓದಿ: ಅತ್ಯಾಚಾರ ಪ್ರಕರಣ; ಕಾಂಗ್ರೆಸ್‌ ಸಂಸದ ರಾಕೇಶ್‌ ರಾಥೋಡ್‌ ಬಂಧನ