Tag: Central Government

  • ಕೊರೊನಾ ವಾರ್- 640 ಜಿಲ್ಲೆಗಳನ್ನು ಹಾಟ್‍ಸ್ಪಾಟ್, ನಾನ್ ಹಾಟ್‍ಸ್ಪಾಟ್, ಹಸಿರು ವಲಯವಾಗಿ ವಿಭಜನೆ

    ಕೊರೊನಾ ವಾರ್- 640 ಜಿಲ್ಲೆಗಳನ್ನು ಹಾಟ್‍ಸ್ಪಾಟ್, ನಾನ್ ಹಾಟ್‍ಸ್ಪಾಟ್, ಹಸಿರು ವಲಯವಾಗಿ ವಿಭಜನೆ

    ನವದೆಹಲಿ: ಕೊರೊನಾ ವೈರಸ್ ಹೆಡೆಮುರಿ ಕಟ್ಟಲು ಮತ್ತಷ್ಟು ಕಠಿಣ ನಿಯಮಗಳ ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರ, ದೇಶದ 640 ಜಿಲ್ಲೆಗಳನ್ನು ಹಾಟ್‍ಸ್ಪಾಟ್, ನಾನ್ ಹಾಟ್‍ಸ್ಪಾಟ್ ಮತ್ತು ಹಸಿರು ವಲಯಗಳನ್ನಾಗಿ ವಿಭಜಿಸಿದೆ.

    ಕೊರೊನಾ ತೀವ್ರತೆ ಹೆಚ್ಚಿರುವ ಹಾಟ್ ಸ್ಪಾಟ್ 170 ಜಿಲ್ಲೆಗಳ ಪೈಕಿ 113 ಜಿಲ್ಲೆಗಳನ್ನು ಕಂಪ್ಲೀಟ್ ಸೀಲ್‍ಡೌನ್ ಮಾಡಲು ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ. ಈ ಪಟ್ಟಿ ಪ್ರತಿ ಸೋಮವಾರ, ಕೊರೊನಾ ಸೋಂಕಿನ ಆಧಾರದ ಮೇಲೆ ಅಪ್‍ಡೇಟ್ ಆಗುತ್ತದೆ. ಕರ್ನಾಟಕದ 8 ಜಿಲ್ಲೆಗಳು ಹಾಟ್ ಸ್ಪಾಟ್‍ನಲ್ಲಿದ್ದು, 11 ಜಿಲ್ಲೆಗಳು ನಾನ್ ಹಾಟ್‍ಸ್ಪಾಟ್ ಎಂದು ಗುರುತಿಸಲಾಗಿದೆ. ಈ ಪಟ್ಟಿ ಪ್ರತಿ ಸೋಮವಾರ, ಕೊರೋನಾ ಸೋಂಕಿನ ಸಂಖ್ಯೆಗಳ ಆಧಾರದ ಮೇಲೆ ಅಪ್‍ಡೇಟ್ ಆಗುತ್ತದೆ.

    ದೇಶದಲ್ಲಿ ಕೊರೊನಾ ಸೋಂಕು ಕ್ಷಣ ಕ್ಷಣಕ್ಕೂ ತೀವ್ರ ವೇಗದಲ್ಲಿ ವ್ಯಾಪಿಸುತ್ತಿದೆ. ಅದರಲ್ಲೂ ಮಹಾರಾಷ್ಟ್ರ, ನವದೆಹಲಿ, ತಮಿಳುನಾಡು, ಮಧ್ಯಪ್ರದೇಶ, ಗುಜರಾತ್‍ನಲ್ಲಿ ಸೋಂಕು ವ್ಯಾಪಿಸುತ್ತಿರುವ ಪರಿ ಕೇಂದ್ರ ಸರ್ಕಾರವನ್ನು ಕಂಗೆಡಿಸಿದೆ. 2 ಸಾವಿರ ಸೋಂಕಿತರು ಇರುವ ಮುಂಬೈ ನಗರ ಮತ್ತೊಂದು ವುಹಾನ್ ಆಗಿಬಿಡುತ್ತಾ ಎಂಬ ಆತಂಕ ಮನೆ ಮಾಡಿದೆ.

    ಸಮುದಾಯಕ್ಕೆ ಎಲ್ಲಿ ಹರಡುತ್ತೋ ಎಂಬ ಭಯ ಕಾಡುತ್ತಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,200ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದ್ದು, 38 ಮಂದಿ ಬಲಿ ಆಗಿದ್ದಾರೆ. ಸೋಂಕಿತರ ಸಂಖ್ಯೆ 12 ಸಾವಿರ ಸಮೀಪಿಸಿದೆ. ಮೃತರ ಸಂಖ್ಯೆ 405 ಆಗಿದೆ. ಕೊರೊನಾ ಭಯದಲ್ಲಿ ಗುಜರಾತ್ ಸಿಎಂ ವಿಜಯ್ ರೂಪಾನಿ ಹೋಂ ಕ್ವಾರಂಟೇನ್‍ನಲ್ಲಿದ್ದಾರೆ.

    ಹೇಗಿರುತ್ತೆ ಕೊರೊನಾ ಹಾಟ್‍ಸ್ಪಾಟ್ ರೆಡ್ ಝೋನ್ ಜಿಲ್ಲೆ?
    – ಭಾರತದಲ್ಲಿ 170 ಕೊರೋನಾ ಹಾಟ್‍ಸ್ಪಾಟ್ ಜಿಲ್ಲೆಗಳು
    – ನಾಲ್ಕು ದಿನಕ್ಕೊಮ್ಮೆ ಸೋಂಕಿತರ ಸಂಖ್ಯೆ ಡಬಲ್ ಆಗ್ತಿರುವ ಜಿಲ್ಲೆಗಳು ಹಾಟ್‍ಸ್ಪಾಟ್ ವ್ಯಾಪ್ತಿಗೆ
    – ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ಜನ ಹೊರಗೆ ಓಡಾಡುವಂತೆಯೇ ಇಲ್ಲ
    – ಜನ ಸಂಪೂರ್ಣವಾಗಿ ತಮ್ಮ ಮನೆಗಳಿಗೆ ಸೀಮಿತ ಆಗಬೇಕು
    – ಜನತೆಗೆ ಬೇಕಿರುವ ಅಗತ್ಯ ವಸ್ತು, ಸೇವೆಗಳು ಸ್ಥಳೀಯ ಆಡಳಿತದಿಂದ ಪೂರೈಕೆ
    – ಮನೆ ಮನೆಗೆ ತೆರಳಿ ಎಲ್ಲರಿಗೂ ಕೊರೋನಾ ಟೆಸ್ಟ್
    – ಸೋಂಕಿತರ ಸಂಪರ್ಕದಲ್ಲಿರುವರನ್ನು ಪತ್ತೆ ಹಚ್ಚುವ ಕೆಲಸ, ಕ್ವಾರಂಟೇನ್
    – ಹಾಟ್‍ಸ್ಪಾಟ್ ಪ್ರದೇಶಗಳಲ್ಲಿ ಪ್ರತಿನಿತ್ಯ ಕ್ರಿಮಿನಾಶಕ ಸಿಂಪಡಣೆ

    ಹೇಗಿರುತ್ತೆ ಕೊರೊನಾ ನಾನ್ ಹಾಟ್‍ಸ್ಪಾಟ್ ಆರೆಂಜ್ ಝೋನ್ ಜಿಲ್ಲೆ
    – 207 ಜಿಲ್ಲೆಗಳನ್ನು ನಾನ್ ಹಾಟ್‍ಸ್ಪಾಟ್ ಎಂದು ಗುರುತಿಸಿರುವ ಕೇಂದ್ರ
    – ಈ ಪ್ರದೇಶಗಳು ಶೀಘ್ರವಾಗಿ ಹಾಟ್‍ಸ್ಪಾಟ್ ಪ್ರದೇಶಗಳಾಗಿ ಬದಲಾಗುವ ಆತಂಕ
    – ಸೋಂಕಿತರು ಇರುವ ಕಂಟೈನ್‍ಮೆಂಟ್ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ (3 ಕಿ.ಮೀ. ವ್ಯಾಪ್ತಿ)
    – ಸೋಂಕಿತರು ಇರುವ ಪ್ರದೇಶಕ್ಕೆ ಯಾರು ಕಾಲಿಡುವಂತಿಲ್ಲ
    – ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರಿಗೆ ಚಿಕಿತ್ಸೆ, ಟೆಸ್ಟ್
    – ಸೋಂಕಿತರ ಸಂಪರ್ಕದಲ್ಲಿರುವವರ ಪತ್ತೆಗೆ ಕ್ರಮ, ಮನೆ ಮನೆ ಪರೀಕ್ಷೆ
    – ಸೋಂಕು ಕಡಿಮೆ ಆದರೆ, ಏ.20 ಬಳಿಕ ಲಾಕ್‍ಡೌನ್ ಸಡಿಲಿಕೆ (ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ)

    ಹೇಗಿರುತ್ತೆ ಹಸಿರು ವಲಯದ ಜಿಲ್ಲೆ (ಗ್ರೀನ್ ಝೋನ್)
    – ದೇಶದಲ್ಲಿ 263 ಜಿಲ್ಲೆಗಳು ಹಸಿರು ವಲಯದ ವ್ಯಾಪ್ತಿಗೆ
    – ಕಳೆದ 28 ದಿನಗಳಿಂದ ಸೋಂಕು ಪತ್ತೆಯಾಗದ ಜಿಲ್ಲೆಗಳು
    – ಇಲ್ಲಿ ಇದುವರೆಗೂ ಕೊರೊನಾ ಸೋಂಕಿತರು ಕಂಡುಬಂದಿಲ್ಲ
    – ಹಸಿರುವಲಯದ ಜಿಲ್ಲೆಗಳಿಗೆ ಹಾಟ್‍ಸ್ಪಾಟ್, ನಾನ್ ಹಾಟ್‍ಸ್ಪಾಟ್ ಜಿಲ್ಲೆಗಳಿಂದ ಸಂಪರ್ಕ ಕಟ್
    – ಕೊರೊನಾ ಸೋಂಕು ಹರಡದಂತೆ ತೀವ್ರ ಕಟ್ಟೆಚ್ಚರ

  • ಹಳೆಯ ಮಾರ್ಗಸೂಚಿಗಳನ್ನ ಮುಂದುವರಿಸಿದ ಕೇಂದ್ರ ಸರ್ಕಾರ

    ಹಳೆಯ ಮಾರ್ಗಸೂಚಿಗಳನ್ನ ಮುಂದುವರಿಸಿದ ಕೇಂದ್ರ ಸರ್ಕಾರ

    – ಏ. 20ರ ಬಳಿಕವಷ್ಟೇ ಹೊಸ ರೂಲ್ಸ್

    ನವದೆಹಲಿ: ಲಾಕ್‍ಡೌನ್ ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ ಹಳೆ ಮಾರ್ಗಸೂಚಿಗಳನ್ನು ಮುಂದುವರಿಸಲು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಈ ನಡುವೆ ಏಪ್ರಿಲ್ 20ರ ಬಳಿಕ ಹೊಸ ಮಾರ್ಗಸೂಚಿ ಬರುವ ಸಾಧ್ಯತೆ ಇದೆ.

    ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮೇ 3ರ ವರೆಗೂ ಲಾಕ್‍ಡೌನ್ ವಿಸ್ತರಿಸಿ ಘೋಷಣೆ ಮಾಡಿದ್ದಾರೆ. ಇದಾದ ಬಳಿಕ ಕೇಂದ್ರ ಗೃಹ ಇಲಾಖೆ ಇದರ ಅಧಿಕೃತ ಆದೇಶ ಪ್ರಕಟಿಸಿದ್ದು, ಮೇ 2ವರೆಗೂ ರಾಷ್ಟ್ರೀಯ ತುರ್ತು ನಿರ್ವಹಣೆ ಪರಿಸ್ಥಿತಿ ಕಾಯ್ದೆ ಅಡಿಯಲ್ಲಿ ಲಾಕ್‍ಡೌನ್ ಮುಂದುವರಿಯಲಿದೆ ಎಂದು ಉಲ್ಲೇಖಿಸಿದೆ. ಈ ಮಧ್ಯೆ ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಬಹುತೇಕ ಹಳೆ ನಿಯಮಗಳನ್ನು ಪಾಲಿಸಲು ಸೂಚನೆ ನೀಡಿದೆ.

    ರಾಜ್ಯ ಸರ್ಕಾರಕ್ಕೆ ಕೇಂದ್ರ ಗೃಹ ಸಚಿವಾಲಯ, ಗೈಡ್‍ಲೈನ್ಸ್ ಕಳುಸಿದೆ. ಮೇ 3ರ ವರೆಗೂ ಹಳೆಯ ಮಾರ್ಗಸೂಚಿಗಳೇ ಅನ್ವಯ ಆಗಲಿವೆ. ಈ ಹಳೆ ನಿಯಮಗಳ ಪಾಲನೆಯಿಂದಾಗಿ ಮದ್ಯ ಮಾರಾಟ ಅನುಮಾನ ಎನ್ನಲಾಗುತ್ತಿದೆ.

    ಲಾಕ್‍ಡೌನ್-2 ಮಾರ್ಗಸೂಚಿ
    1. ರಕ್ಷಣೆ, ಕೇಂದ್ರ, ರಾಜ್ಯ ಪೊಲೀಸ್ ಪಡೆಗಳಿಗೆ ವಿನಾಯಿತಿ.
    2. ಎಲ್‍ಪಿಜಿ, ವಿದ್ಯುತ್, ನೀರು, ಪೋಸ್ಟ್ ಆಫೀಸ್, ಬ್ಯಾಂಕ್, ಎಟಿಎಂಗಳಿಗೆ ಅವಕಾಶ.
    3. ಮದ್ಯ ಮಾರಾಟಕ್ಕೆ ಅವಕಾಶ ಕ್ಷೀಣ.
    4. ಬಸ್, ರೈಲು, ವಿಮಾನ ಸಂಚಾರದ ಮೇಲೆ ನಿರ್ಬಂಧ ಮುಂದುವರಿಕೆ.
    5. ಸ್ಥಳೀಯ ಸಂಸ್ಥೆಗಳ ಅಗತ್ಯ ಸೇವೆಗಳಿಗೆ ವಿನಾಯಿತಿ.
    6. ಸರ್ಕಾರದ ಪರವಾನಗಿ ಹೊಂದಿರುವ ಕೃಷಿ ಉತ್ಪನ್ನಗಳ ಮಂಡಿಗಳಿಗೆ ಅವಕಾಶ.
    7. ಕೃಷಿ ಚಟುವಟಿಕೆ, ಕೃಷಿ ಉತ್ಪನ್ನಗಳ ಸಾಗಣೆಗೆ ಅವಕಾಶ.
    8. ರಸಗೊಬ್ಬರ, ಕ್ರಿಮಿನಾಶಕ ಅಂಗಡಿಗೆ ಅವಕಾಶ.
    9. ದಿನಸಿ ಅಂಗಡಿ, ಹಣ್ಣು, ತರಕಾರಿ, ಹಾಲು, ಮೀನು, ಮಾಂಸ ಮಾರಾಟಕ್ಕೆ ಅವಕಾಶ.


    10. ಪತ್ರಿಕೆ, ವಿದ್ಯುನ್ಮಾನ ಮಾಧ್ಯಮ, ಇಂಟರ್ ನೆಟ್ ಸರಾಗ.
    11. ವೈದ್ಯಕೀಯ, ಆಹಾರ ಪೂರೈಸುವ ಇ- ಕಾಮರ್ಸ್ ಗಳಿಗೆ ಅವಕಾಶ.
    12. ಪೆಟ್ರೋಲ್ ಬಂಕ್, ಷೇರುಪೇಟೆ, ಶೀತಲೀಕರಣ ಘಟಕಗಳಿಗೆ ರಿಲೀಫ್.
    13. ಹೆದ್ದಾರಿ, ರೈಲುಗಳಲ್ಲಿ ಅಗತ್ಯ ವಸ್ತುಗಳ ಸಾಗಣೆಗೆ ಅವಕಾಶ.
    14. ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ.
    15. ತುರ್ತು ಸೇವೆಯಲ್ಲಿರುವವರ ಬಳಕೆಗೆ ಹೋಟೆಲ್, ಲಾಡ್ಜ್.
    16. ಅಂತ್ಯಕ್ರಿಯೆಗಳಿಗೆ 20ಕ್ಕೂ ಹೆಚ್ಚು ಮಂದಿ ಸೇರುವಂತಿಲ್ಲ.
    17. ಮಾಸ್ಕ್ ಇಲ್ಲದೆ ಓಡಾಡಿದರೆ ದಂಡ, ಶಿಕ್ಷೆ ಸಾಧ್ಯತೆ.
    18. ರೈತರು, ಕೂಲಿ ಕಾರ್ಮಿಕರಿಗೆ ಸ್ವಲ್ಪ ರಿಯಾಯಿತಿ.

    ಪ್ರಧಾನಿ ಮೋದಿ ಭಾಷಣದ ವೇಳೆ ಏಪ್ರಿಲ್ 20ರವರೆಗೂ ಕಠಿಣವಾಗಿ ಲಾಕ್‍ಡೌನ್ ನಿಯಮಗಳು ಪಾಲನೆಯಾಗಬೇಕು ಅಂತ ಎಚ್ಚರಿಸಿದ್ದರು. ಅದರಲ್ಲೂ ರೆಡ್‍ಝೋನ್‍ನಲ್ಲಿರುವ ಪ್ರದೇಶಗಳಲ್ಲಿ ತುಸು ಹೆಚ್ಚಾಗಿ ಎಚ್ಚರಿಕೆ ವಹಿಸಲಾಗುತ್ತೆ ಎಂದು ತಿಳಿಸಿದ್ದಾರೆ. ಇದಕ್ಕಾಗಿ ಹೊಸ ನಿಯಮಗಳನ್ನು ಜಾರಿ ಮಾಡುವುದಾಗಿ ಕೂಡ ಹೇಳಿದ್ದರು. ಈಗಾಗಲೇ ಹಳೆ ನಿಯಮಗಳ ಪಾಲನೆಗೆ ಸೂಚಿಸಿರುವ ಸರ್ಕಾರ ರೆಡ್ ಝೋನ್ ಪ್ರದೇಶಗಳಿಗೆ ಮಾತ್ರ ಇಂದು ಹೊಸ ಮಾರ್ಗಸೂಚಿ ಪ್ರಕಟಿಸಬಹುದು ಎನ್ನಲಾಗುತ್ತಿದೆ.

    ಏಪ್ರಿಲ್ 20ರ ಬಳಿಕ ಒಂದಿಷ್ಟು ವಿನಾಯಿತಿ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿರುವ ಹಿನ್ನೆಲೆಯಲ್ಲಿ 20ರ ಬಳಿಕವಷ್ಟೇ ಹೊಸ ಮಾರ್ಗ ಸೂಚಿಗಳನ್ನು ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

  • ಟೆಸ್ಟಿಂಗ್ ಕಿಟ್ ಖರೀದಿಸುವಲ್ಲಿ ಭಾರತ ತಡ ಮಾಡಿದೆ: ರಾಹುಲ್ ಗಾಂಧಿ

    ಟೆಸ್ಟಿಂಗ್ ಕಿಟ್ ಖರೀದಿಸುವಲ್ಲಿ ಭಾರತ ತಡ ಮಾಡಿದೆ: ರಾಹುಲ್ ಗಾಂಧಿ

    – ಇದೀಗ ಕೊರತೆ ಉಂಟಾಗಿದೆ

    ನವದೆಹಲಿ: ಕೊರೊನಾ ಟೆಸ್ಟಿಂಗ್ ಕಿಟ್‍ಗಳನ್ನು ಖರೀದಿಸುವಲ್ಲಿ ಕೇಂದ್ರ ಸರ್ಕಾರ ತಡ ಮಾಡಿದೆ, ಹೀಗಾಗಿ ಟೆಸ್ಟಿಂಗ್ ಕಿಟ್‍ಗಳ ಕೊರತೆ ಉಂಟಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರತಿ ಮಿಲಿಯನ್ ಭಾರತೀಯರಿಗೆ ಕೇವಲ 149 ಜನರನ್ನು ಟೆಸ್ಟ್ ಮಾಡುತ್ತಿದ್ದೇವೆ. ಲಾವೋಸ್ (157), ನೈಜರ್(182) ಹಾಗೂ ಹೊಂಡುರಾನ್(162)ಗಳಂತಹ ಸಣ್ಣ ದೇಶಗಳ ರೀತಿ ಭಾರತದಲ್ಲಿ ಟೆಸ್ಟಿಂಗ್ ಆಗುತ್ತಿದೆ. ಸಾಮೂಹಿಕ ಪರೀಕ್ಷೆ ಕೊರೊನಾ ವಿರುದ್ಧ ಹೋರಾಟದ ಕೀಲಿ ಕೈ ಆಗಿದೆ. ಪ್ರಸ್ತುತ ಆಟದಲ್ಲಿ ನಾವು ಎಲ್ಲಿಯೂ ಇಲ್ಲ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಈ ಮೂಲಕ ಟೆಸ್ಟಿಂಗ್ ಕಿಟ್‍ಗಳ ಕೊರತೆ ಇದೆ ಎಂದು ತಿಳಿಸಿದ್ದಾರೆ.

    ಭಾರತದಲ್ಲಿ ಪ್ರಸ್ತುತ 10,363 ಪ್ರಕರಣಗಳು ಪತ್ತೆಯಾಗಿದ್ದು, 339 ಜನ ಸಾವನ್ನಪ್ಪಿದ್ದಾರೆ. ಇತರ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಈ ಸಂಖ್ಯೆಗಳು ತುಂಬಾ ಕಡಿಮೆ. ಭಾರತ ಹೆಚ್ಚು ಪರೀಕ್ಷೆ ನಡೆಸದ ಕಾರಣ ಕಡಿಮೆ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಹೆಚ್ಚು ಪರೀಕ್ಷೆ ನಡೆಸಿದರೆ ನೈಜ ಪ್ರಮಾಣ ತಿಳಿಯಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಇಟಲಿ ಪ್ರತಿ ಮಿಲಿಯನ್ ಜನರ ಪೈಕಿ 15,935 ಜನರನ್ನು ಪರೀಕ್ಷೆಗೆ ಒಳಪಡಿಸಿದೆ. ಅದೇ ರೀತಿ ಅಮೆರಿಕಾ 8,138 ಜನರನ್ನು ಪರೀಕ್ಷೆಗೆ ಒಳಪಡಿಸಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

    ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದು, ಆಹಾರ, ಔಷಧಿ ಸೇರಿದಂತೆ ಇತರೆ ಅಗತ್ಯ ವಸ್ತುಗಳು ದೇಶದಲ್ಲಿ ಸಾಕಷ್ಟಿದ್ದು, ಯಾರು ಹೆದರುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮೇ 3ರ ವರೆಗೆ ದೇಶಾದ್ಯಂತ ಲಾಕ್‍ಡೌನ್ ವಿಸ್ತರಣೆ ಮಾಡಿದ ಬೆನ್ನಲ್ಲೇ ಸರಣಿ ಟ್ವೀಟ್ ಮಾಡಿ ಜನ ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

    ಗೃಹ ಸಚಿವನಾಗಿ ಔಷಧಿ, ಆಹಾರ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳು ದೇಶದಲ್ಲಿ ಬೇಕಾದಷ್ಟಿದೆ ಎಂದು ದೇಶದ ಪ್ರಜೆಗಳಿಗೆ ಭರವಸೆ ನೀಡುತ್ತಿದ್ದೇನೆ. ಯಾರೂ ಈ ಬಗ್ಗೆ ಚಿಂತಿಸಬೇಕಿಲ್ಲ. ಶ್ರೀಮಂತರು ಬಡವರಿಗೆ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತೇನೆ. ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರದ ಜೊತೆ ರಾಜ್ಯಗಳು ಕೈ ಜೋಡಿಸಿದ್ದು, ಸಹಕಾರ ನೀಡುತ್ತಿವೆ. ಘೋಷಣೆಯಾಗಿರುವ ಲಾಕ್‍ಡೌನ್ ಪಾಲಿಸಬೇಕು ಎಂದು ಅವರು ಕೇಳಿಕೊಂಡಿದ್ದಾರೆ.

    ವೈದ್ಯರು, ವೈದ್ಯಕೀಯ ಸಿಬ್ಬಂದಿ, ಸ್ಯಾನಿಟೈಸೇಷನ್ ಸಿಬ್ಬಂದಿ, ಪೊಲೀಸರು ಹಾಗೂ ಎಲ್ಲ ಭದ್ರತಾ ಸಿಬ್ಬಂದಿ ಕೊಡುಗೆ ಮಹತ್ತರವಾದದ್ದು. ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಅವರ ಕೆಲಸ ನಮಗೆಲ್ಲ ಪ್ರೇರಣೆಯಾಗಬೇಕು. ಎಲ್ಲರೂ ನಿಯಮವನ್ನು ಪಾಲಿಸಿ ಇವರ ಕೆಲಸಕ್ಕೆ ಸಹಕರಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

  • ಹಸಿವಿನಿಂದ ಸಾಯೋದಕ್ಕಿಂತ ಕೊರೊನಾ ಬರೋದೇ ಲೇಸು – ಕೂಲಿ ಕಾರ್ಮಿಕರ ಅಳಲು

    ಹಸಿವಿನಿಂದ ಸಾಯೋದಕ್ಕಿಂತ ಕೊರೊನಾ ಬರೋದೇ ಲೇಸು – ಕೂಲಿ ಕಾರ್ಮಿಕರ ಅಳಲು

    ಮಡಿಕೇರಿ: ಎಲ್ಲೆಡೆ ಹರಡುತ್ತಿರುವ ಕೊರೊನಾ ವೈರಸ್ ಭೀತಿಯಿಂದ ದೇಶದಲ್ಲೆಡೆ ಲಾಕ್‍ಡೌನ್ ಜಾರಿಯಲ್ಲಿದೆ. ಈ ಹಿನ್ನೆಲೆ ಕಾರ್ಮಿಕರಿಗೆ ಇದೀಗಾ ಕೆಲಸವಿಲ್ಲದೆ ಸಂಕಷ್ಟ ಎದುರಾಗಿದ್ದು, ಹೀಗೆ ಹಸಿವಿನಿಂದ ಸಾಯುವ ಬದಲು ಕೊರೊನಾ ಬರೋದೇ ಲೇಸು ಎಂದು ಅಳಲನ್ನು ತೋಡಿಕೊಂಡಿದ್ದಾರೆ.

    ಇಂದು ಪ್ರಧಾನಿ ಮೋದಿ ಅವರು ಒಂದು ರೀತಿಯಲ್ಲಿ ಕಾರ್ಮಿಕ ವರ್ಗಕ್ಕೆ ವಿನಾಯಿತಿ ನೀಡುತ್ತಾರೆ ಎಂದು ಕಾರ್ಮಿಕರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಮೋದಿ ಅವರು ಇನ್ನಷ್ಟು ದಿನ ಲಾಕ್‍ಡೌನ್ ಮುಂದುವರೆಯುತ್ತದೆ ಎಂದು ಘೋಷಿಸಿದ್ದು ಕಾರ್ಮಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.

    ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೋಪ್ಪದ ಬಹುತೇಕ ಗ್ರಾಮಗಳು ಬಡಾವಣೆಗಳಲ್ಲಿ ಹೆಚ್ಚಾಗಿ ತೋಟದ ಕಾರ್ಮಿಕರು, ಕಟ್ಟಡದ ಕಾರ್ಮಿಕರು ವಾಸವಾಗಿದ್ದು, ಲಾಕ್‍ಡೌನ್ ಮುಂದುವರೆದಿರುವುದರಿಂದ ಜೀವನ ನಡೆಸುವುದು ಹೇಗೆ ಎಂದು ಚಿಂತೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಜಿಲ್ಲೆಯಲ್ಲಿ ಪಡಿತರ ವಿತರಣೆ ಕಾರ್ಯಗಳು ನಡೆಯುತ್ತಿದೆ. ಅದರಲ್ಲಿ ಅಕ್ಕಿ ಮತ್ತು ಗೋಧಿ ಮಾತ್ರ ಸಿಕ್ಕುತ್ತಿದೆ. ಎಷ್ಟು ದಿನಗಳು ಬರಿ ಗಂಜಿ ಕುಡಿದು ಬದುಕೋದು ಎಂದು ಕಣ್ಣೀರು ಹಾಕುತ್ತಿದ್ದಾರೆ.

    ಮನೆಯಿಂದ ಹೊರಬಂದರೆ ಪೊಲೀಸ್ ಹೊಡಿತಾರೆ. ಒಳಗೆ ಇದ್ದರೆ ಬಡತನ ಕಿತ್ತು ತಿನ್ನುತ್ತೆ. ಮನೆ ಬಾಡಿಗೆ ಕಟ್ಟೋದು ಹೇಗೆ? ಮಕ್ಕಳಿದ್ದಾರೆ ಅವರನ್ನು ಸಾಕುವುದು ಹೇಗೆ? ಕನಿಷ್ಠ ಸೌಲಭ್ಯವನ್ನಾದರೂ ಕೊಡಿ, ಗಂಡಸರಿಗಾದರೂ ದುಡಿಯುವುದಕ್ಕೆ ಅವಕಾಶ ನೀಡಿ ಎಂದು ಕಾರ್ಮಿಕ ವರ್ಗದ ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ.

  • ಕೊರೊನಾ ಕಟ್ಟುನಿಟ್ಟಿನ ಕ್ರಮ- ಉಡುಪಿ ಜಿಲ್ಲಾಡಳಿತಕ್ಕೆ ಕೇಂದ್ರ ಪ್ರಶಂಸೆ

    ಕೊರೊನಾ ಕಟ್ಟುನಿಟ್ಟಿನ ಕ್ರಮ- ಉಡುಪಿ ಜಿಲ್ಲಾಡಳಿತಕ್ಕೆ ಕೇಂದ್ರ ಪ್ರಶಂಸೆ

    – ಮೋದಿ ಭಾಷಣದ ಬೆನ್ನಲ್ಲೇ ಖಡಕ್ ರೂಲ್ಸ್!
    – ಬೈಕರ್ ಸವಾರರಿಗೆ ಪೊಲೀಸರ ಲಗಾಮು

    ಉಡುಪಿ: ಮಹಾಮಾರಿ ಕೊರೊನಾ ವೈರಸ್‍ಗೆ ಕಡಿವಾಣ ಹಾಕಿರುವ ಉಡುಪಿ ಜಿಲ್ಲೆಗೆ ಕೇಂದ್ರ ಸಚಿವರಿಂದ ಪ್ರಶಂಸೆ ವ್ಯಕ್ತವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

    ಕೊರೊನಾ ವೈರಸ್ ನಿಯಂತ್ರಣ ಕುರಿತಂತೆ, ಉಡುಪಿ ಜಿಲ್ಲೆಯ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳಿಂದ ಕಳೆದ 2 ವಾರಗಳಿಂದ ಯಾವುದೇ ಸೋಂಕಿತರು ಕಂಡುಬಂದಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಪ್ರಶಂಸೆ ವ್ಯಕ್ತಪಡಿಸಿದೆ. ಉಡುಪಿ ಜಿಲ್ಲೆಯಲ್ಲಿ ಮಾರ್ಚ್ 29ರಂದು ಕೊನೆಯದಾಗಿ ಕೊರೊನಾ ಸೋಂಕಿತರೊಬ್ಬರು ಪತ್ತೆಯಾಗಿದ್ದರು. ಅದಾದ ಬಳಿಕ ಜಿಲ್ಲಾಡಳಿತ ಕೈಗೊಂಡ ಸಮರ್ಥ ನಿರ್ಧಾರಗಳಿಂದ ಜಿಲ್ಲೆಯಲ್ಲಿ ಯಾರಿಗೂ ಸೋಂಕು ಕಂಡು ಬಂದಿಲ್ಲ.

    ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಕಂಡು ಬಂದ ಕೂಡಲೇ ಅವರೊಂದಿಗೆ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಕ್ವಾರಂಟೈನ್‍ಗೆ ಒಳಪಡಿಸಲಾಗಿತ್ತು. ಜೊತೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ಕಾರಣ ಸೋಂಕು ಹರಡುವುದನ್ನು ತಡೆಯುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ ಎಂದು ಕೇಂದ್ರ ಪ್ರಶಂಸಿದೆ. ಜಿಲ್ಲೆಯ ಗಡಿಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಂಡಿದ್ದು, ಸರಕು ಸಾಗಾಣಿಕೆ ಮತ್ತು ತುರ್ತು ವೈದ್ಯಕೀಯ ಕಾರಣ ಹೊರತು ಪಡಿಸಿ ಇತರೆ ಯಾವುದೇ ಉದ್ದೇಶಕ್ಕೆ ಜಿಲ್ಲೆಯೊಳಗೆ ಪ್ರವೇಶ ನೀಡಿಲ್ಲ ಎಂದು ಡಿಸಿ ತಿಳಿಸಿದರು.

    ಹೊರ ಜಿಲ್ಲೆಗಳಿಂದ ಸಹ ಸೋಂಕು ಹರಡುವುದನ್ನು ತಪ್ಪಿಸಲಾಗಿದೆ. ಜಿಲ್ಲೆಯೊಳಗೆ ದಿನನಿತ್ಯದ ವಸ್ತುಗಳ ಖರೀದಿಗೆ ಸಾರ್ವಜನಿಕರಿಗೆ ಸಮಯ ನಿಗಧಿಪಡಿಸಲಾಗಿದ್ದು, ಖರೀದಿ ಸಮಯದಲ್ಲಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಅನಗತ್ಯ ವಾಹನ ಸಂಚಾರ ನಿಭಂಧಿಸಲಾಗಿದೆ. ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿನ ಕಾರ್ಮಿಕರಿಗೆ, ನಿರಾಶ್ರಿತರಿಗೆ ಮತ್ತು ನಿರ್ಗತಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದು, ಅವರಿಗೆ ಯಾವುದೇ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

    ಲಾಕ್‍ಡೌನ್ ಅವಧಿ ಮುಗಿಯುವವರೆಗೂ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸುವ ಮೂಲಕ ಉಡುಪಿ ಜಿಲ್ಲೆ ಕೊರೊನಾ ಮುಕ್ತವಾಗಲು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ ಮನವಿ ಮಾಡಿದ್ದಾರೆ.

    ಖಡಕ್ ರೂಲ್ಸ್:
    ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‍ಡೌನ್ ವಿಸ್ತರಿಸಿದ್ದೇ ತಡ ಉಡುಪಿಯಲ್ಲಿ ಚೆಕ್ ಪೋಸ್ಟನ್ನು ಪೊಲೀಸರು ಫುಲ್ ಟೈಟ್ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆಗಳಲ್ಲಿ ಹೆಚ್ಚುವರಿ ಚೆಕ್ ಪೋಸ್ಟ್ ಹಾಕಲಾಗಿದೆ. ಬೆಳಗ್ಗೆ 11ರ ನಂತರ ಓಡಾಡುವ ಎಲ್ಲಾ ವಾಹನವನ್ನು ಬಿಡದೆ ಪೊಲೀಸರು ತಡೆದು ನಿಲ್ಲಿಸುತ್ತಿದ್ದಾರೆ. ಕಾರಣ ಕೇಳಿ, ವಿನಾಯಿತಿ ನಿಯಮಕ್ಕೆ ಅನ್ವಯವಾಗದಿದ್ದರೆ ವಾಹನಗಳನ್ನು ಸೀಜ್ ಮಾಡುತ್ತಿದ್ದಾರೆ. ಅನಗತ್ಯವಾಗಿ ಓಡಾಡುವ ಬೈಕ್, ಕಾರುಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಮಣಿಪಾಲ ಉಡುಪಿಯಲ್ಲಿ 10ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆ, 247 ಮೆಡಿಕಲ್‍ಗಳು, ಫಾರ್ಮಸಿ ಇರೋದ್ರಿಂದ ಈ ನಗರಗಳ ನಡುವೆ ಸ್ವಲ್ಪ ಸಾರ್ವಜನಿಕರ ಓಡಾಟ ಇದೆ.

    ಮಂಗಳವಾರ ಒಂದೇ ದಿನ 20 ಪ್ರಕರಣಗಳು ಉಡುಪಿ ನಗರ ಠಾಣೆಯಲ್ಲಿ ಪೊಲೀಸರು ದಾಖಲು ಮಾಡಕೊಂಡಿದ್ದಾರೆ. ಈ ನಡುವೆ ಹೊರ ಜಿಲ್ಲೆಗಳಿಗೆ ಹೋಗಲು ಜನ ಪೊಲೀಸ್ ಪಾಸ್‍ಗೆ ಒತ್ತಾಯ ಮಾಡುತ್ತಿದ್ದಾರೆ. ಆರೋಗ್ಯದ ವಿಚಾರ ಬಿಟ್ಟು ಬೇರೆ ಯಾವ ವಿಚಾರಕ್ಕೂ ಪಾಸ್ ಕೊಡಲ್ಲ ಅಂತ ಎಸ್ ಪಿ. ವಿಷ್ಣುವರ್ಧನ್ ಹೇಳಿದ್ದಾರೆ.

  • ಕೇಂದ್ರದ ಮಾರ್ಗಸೂಚಿ ಬಂದ ಬಳಿಕ ಮದ್ಯ ಮಾರಾಟದ ಬಗ್ಗೆ ನಿರ್ಧಾರ: ಸಿಎಂ ಬಿಎಸ್‍ವೈ

    ಕೇಂದ್ರದ ಮಾರ್ಗಸೂಚಿ ಬಂದ ಬಳಿಕ ಮದ್ಯ ಮಾರಾಟದ ಬಗ್ಗೆ ನಿರ್ಧಾರ: ಸಿಎಂ ಬಿಎಸ್‍ವೈ

    – ಪ್ರಧಾನಿ ಸೂಚನೆ ಬಳಿಕವಷ್ಟೇ ಲಾಕ್‍ಡೌನ್ ಸಡಿಲ
    – ಆನೆಕಲ್ಲು ಮಳೆಯಿಂದ ಆದ ಹಾನಿಗೆ ಪರಿಹಾರ
    – ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಬಿಡಿಎ ಕಾರ್ನರ್ ಸೈಟ್ ಮಾರಾಟ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಬಳಿಕವಷ್ಟೇ ಲಾಕ್‍ಡೌನ್ ಸಡಿಲಗೊಳಿಸಲಾಗುತ್ತದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಬಂದ ಬಳಿಕ ಮದ್ಯ ಮಾರಾಟದ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಿಎಂ ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.

    ಪ್ರಧಾನಿಗಳು ಸಲಹೆಗಳನ್ನು ನೀಡುತ್ತೇವೆ ಎಂದಿದ್ದಾರೆ. ಕೆಲ ರಾಜ್ಯಗಳಿಗೆ ಲಾಕ್‍ಡೌನ್ ಬಗ್ಗೆ ಅಲ್ಲಿನ ಸರ್ಕಾರಗಳೇ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಸೂಚಿಸಿದ್ದಾರೆ ಎಂದು ಸಿಎಂ ತಿಳಿಸಿದರು. ಎಂಎಸ್‍ಐಎಲ್ ಮೂಲಕ ಮದ್ಯ ಮಾರಾಟದ ಬಗ್ಗೆ ಚರ್ಚೆ ನಡೆಯುತ್ತಿದೆ. ಕೇಂದ್ರ ಸರ್ಕಾದಿಂದ ಮಾರ್ಗಸೂಚಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುತ್ತೆ. ಕೇಂದ್ರ ಸರ್ಕಾರದಿಂದ ಇನ್ನು ಮಾರ್ಗಸೂಚಿ ಬಂದಿಲ್ಲ ಎಂದು ಹೇಳಿದರು.

    ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ ಬಿಡಿಎ ವ್ಯಾಪ್ತಿಯ ಕಾರ್ನರ್ ಸೈಟ್‍ಗಳ ಹರಾಜು ಹಾಕಲು ತೀರ್ಮಾನಿಸಿದ್ದೇವೆ. ಬಿಡಿಎ ಕಾರ್ನರ್ ಸೈಟ್ ಮಾರಾಟದಿಂದ 15 ಸಾವಿರ ಕೋಟಿ ಆದಾಯ ಬರುವ ನಿರೀಕ್ಷೆ ಇದೆ. ಒಳ್ಳೆಯ ಬೆಲೆ ಬಂದ್ರೆ ಮಾತ್ರ ಮಾರಾಟ ಮಾಡುತ್ತೇವೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

    ಅಲ್ಲದೇ ಮುಂದಿನ ವಾರದ ತನಕವೂ ಹಾಲು ವಿತರಣೆ ಮುಂದುವರಿಕೆ ಮಾಡಲಾಗುತ್ತದೆ. ಅನಧಿಕೃತ ಕಟ್ಟಡಗಳ ಬಗ್ಗೆ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಸೂಚಿಸಲಾಗಿದೆ ಎಂದರು.

    ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಕಬ್ಬಿನ ಬಾಕಿ ಹಣ ಕೊಡಬೇಕು ಎಂದು ಸೂಚನೆ ಕೊಟ್ಟಿದ್ದೇವೆ. ಅಕಾಲಿಕ ಆನೆಕಲ್ಲು ಮಳೆಯಿಂದ ರಾಜ್ಯದ ಯಾವ ಯಾವ ಭಾಗದಲ್ಲಿ ಭತ್ತದ ಬೆಳೆಗೆ ಹಾನಿಯುಂಟಾಗಿದೆಯೋ ಅದಕ್ಕೆ ಆದಷ್ಟು ಬೇಗ ಪರಿಹಾರ ನೀಡುತ್ತೇವೆ. ಹಾಗೆಯೇ ಆನೆಕಲ್ಲು ಮಳೆಯಿಂದ ಹಾನಿಯಾದ ಬೇರೆ ಬೆಳೆಗಳಿಗೂ ಪರಿಹಾರ ನೀಡುವುದಾಗಿ ಸಿಎಂ ಭರವಸೆ ನೀಡಿದರು.

  • ಪ್ರತಿ ಏರಿಯಾಕ್ಕೂ ಬರಲಿದೆ ಸುರಕ್ಷಾ ಸ್ಟೋರ್- ಸೋಂಕು ಮುಕ್ತ ವ್ಯಾಪಾರಕ್ಕೆ ಕೇಂದ್ರ ಚಿಂತನೆ

    ಪ್ರತಿ ಏರಿಯಾಕ್ಕೂ ಬರಲಿದೆ ಸುರಕ್ಷಾ ಸ್ಟೋರ್- ಸೋಂಕು ಮುಕ್ತ ವ್ಯಾಪಾರಕ್ಕೆ ಕೇಂದ್ರ ಚಿಂತನೆ

    ನವದೆಹಲಿ: ಲಾಕ್ ಡೌನ್ ವಿಸ್ತರಣೆ ಆಗೋದು ಪಕ್ಕಾ ಆಗಿದೆ. ಆದರೆ ಜನರು ಹಾಲು ತರಕಾರಿ, ದಿನಸಿ ಎಂದು ಹೊರಗಡೆ ಬರುತ್ತಾನೆ ಇರುತ್ತಾರೆ. ಹೀಗೆ ಹೊರ ಬರುವ ಮಂದಿಗೆ ಸೋಂಕಿನಿಂದ ಸಂರಕ್ಷಿಸಲು ಕೇಂದ್ರ ಸರ್ಕಾರ ಹೊಸದೊಂದು ಪ್ಲಾನ್ ಮಾಡಿದೆ.

    ಹೌದು. ಲಾಕ್ ಡೌನ್ ಆಗಿ ಮೂರು ವಾರ ಕಳೆದ್ರೂ ಜನರು ಎಚ್ಚೆತ್ತುಕೊಳ್ತಿಲ್ಲ. ದಿನ ಬೆಳಗಾದ್ರೆ ಹಾಲು, ತರಕಾರಿ, ದಿನಸಿ ಎಂದು ಹೊರಗಡೆ ಓಡಾಡುತ್ತಿದ್ದಾರೆ. ಅಷ್ಟೇ ಅಲ್ಲ ಪೊಲೀಸರ ಜೊತೆಗೆ ವಾಗ್ವಾದಕ್ಕೂ ಇಳಿಯುತ್ತಾರೆ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಮಾರಕಾಸ್ತ್ರಗಳಿಂದ ದಾಳಿ ಮಾಡಲು ಶುರು ಮಾಡ್ಕೊಂಡಿದ್ದಾರೆ.

    ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಹೀಗೆ ಹೊರಗೆ ಸುತ್ತಾಡ್ತಾ ಇರೋದ್ರಿಂದ ಕೊರೊನಾ ಸೋಂಕು 3ನೇ ಹಂತಕ್ಕೆ ಹೋಗಿಬಿಡಬಹುದು ಎನ್ನುವ ಭೀತಿ ಈಗ ಕೇಂದ್ರ ಸರ್ಕಾರಕ್ಕೆ ಶುರುವಾಗಿದೆ. ಹೀಗಾಗಿ ಸೋಂಕು ಹರಡುವಿಕೆ ತಡೆಯಲು ಸುರಕ್ಷಾ ಸ್ಟೋರ್ ಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

    ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ದೇಶದ್ಯಾಂತ 20 ಲಕ್ಷ ಸುರಕ್ಷಾ ಸ್ಟೋರ್ ಗಳನ್ನು ಪ್ರಾರಂಭಿಸಲಿದ್ದು, ಎಲ್ಲಾ ಸುರಕ್ಷಾ ಮಾನದಂಡಗಳನ್ನು ಪಾಲಿಸಲು ತೀರ್ಮಾನಿಸಿದೆ. ಈ ಸಂಬಂಧ ಗ್ರಾಹಕ ವ್ಯವಹಾರಗಳ ಸಚಿವಾಲಯ ಕೆಲ ಎಫ್‍ಎಂಸಿಜಿ ಕಂಪನಿಗಳ ಜೊತೆ ಮಾತುಕತೆ ಕೂಡ ನಡೆಸಿದೆ. ಸ್ಥಳೀಯ ಚಿಲ್ಲರೆ ಅಂಗಡಿ ವ್ಯಾಪಾರಸ್ಥರನ್ನು ಒಳಗೂಡಿಸಿಕೊಳ್ಳಲು ಚಿಂತನೆ ನಡೆದಿದೆ.

    ಹೇಗಿರಲಿದೆ ಸುರಕ್ಷಾ ಸ್ಟೋರ್?
    * ಉತ್ಪಾದನಾ ಘಟಕಗಳಿಂದ ಚಿಲ್ಲರೆ ಮಾರಾಟ ಅಂಗಡಿಗಳವರೆಗೂ ಪ್ರೊಟೊಕಾಲ್ ಪ್ರಕಾರ ಸಾಗಣೆ
    * ಸುರಕ್ಷಾ ಸ್ಟೋರ್‍ಗೆ ನೋಂದಣಿಯಾಗಲು ಬಯಸುವ ಸ್ಟೋರ್‍ಗಳಿಗೆ ನಿಯಮ ಪಾಲನೆ ಕಡ್ಡಾಯ
    * ಅಂಗಡಿಗಳಿಗೆ ಗ್ರಾಹಕರು ಬರ್ತಿದ್ದಂತೆ ಸ್ಯಾನಿಟೈಜರ್ ಮೂಲಕ ಹ್ಯಾಂಡ್ ವಾಶ್ ಮಾಡ್ಕೋಬೇಕು
    * ಕೊರೋನಾದಿಂದ ಪಾರಾಗಲು ಅಂಗಡಿಯಲ್ಲಿರುವ ಸಿಬ್ಬಂದಿ ಮಾಸ್ಕ್, ಗ್ಲೌಸ್ ಧರಿಸುವುದು ಕಡ್ಡಾಯ
    * ಬಿಲ್ಲಿಂಗ್ ಕೌಂಟರ್‍ನಲ್ಲಿ ಗ್ರಾಹಕರಿಂದ ಕನಿಷ್ಠ 1.5 ಮೀಟರ್ ಅಂತರ ಕಾಯ್ದುಕೊಳ್ಳಬೇಕು
    * ದಿನಕ್ಕೆ ಎರಡು ಬಾರಿ ಸ್ಟೋರ್ ಸ್ಯಾನಿಟೈಜ್ ಮಾಡಬೇಕು
    * ಅಂಗಡಿಯ ವಸ್ತುಗಳನ್ನು ಸಹ ಸಾಧ್ಯವಾದಷ್ಟು ಸ್ಯಾನಿಟೈಜ್ ಮಾಡಬೇಕು
    * ಆರೋಗ್ಯ ಇಲಾಖೆಯ ಕಿಟ್‍ಗಳನ್ನು ಎಫ್‍ಎಂಸಿಜಿ ಕಂಪನಿಗಳ ಸಿಬ್ಬಂದಿ ಬಳಸಲೇಬೇಕು

    ಒಟ್ಟಿನಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಸರ್ಕಾರದ ಹಂತದಲ್ಲಿ ಮಾತುಕತೆ ಅಂತ್ಯವಾಗಲಿದ್ದು, ಇನ್ನೊಂದೆರಡು ವಾರದಲ್ಲಿ ದೇಶಾದ್ಯಂತ ಸುರಕ್ಷಾ ಸ್ಟೋರ್ ಆರಂಭವಾಗಲಿದೆ. ಕೊರೊನಾ ಸೋಂಕಿನ ವಿರುದ್ಧ ಕೇಂದ್ರ ಸರ್ಕಾರದ ಹೊಸ ಪ್ಲ್ಯಾನ್ ಸಕ್ಸಸ್ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

  • ಮುಂದಾಗುವ ಅನಾಹುತ ತಿಳಿದೇ ಸರ್ಕಾದಿಂದ ಲಾಕ್‍ಡೌನ್ – ಪ್ರಹ್ಲಾದ್ ಜೋಶಿ

    ಮುಂದಾಗುವ ಅನಾಹುತ ತಿಳಿದೇ ಸರ್ಕಾದಿಂದ ಲಾಕ್‍ಡೌನ್ – ಪ್ರಹ್ಲಾದ್ ಜೋಶಿ

    – ಸರ್ಕಾರದ ಜೊತೆಗೆ ಜನರು ಕೈ ಜೋಡಿಸಬೇಕು

    ನವದೆಹಲಿ: ಜನರ ಸಹಕಾರ ಇಲ್ಲದೇ ಸರ್ಕಾರ ಏನೇ ಕ್ರಮ ತೆಗೆದುಕೊಂಡರು ಅದು ವಿಫಲವಾಗಲಿದೆ. ಶೇಕಡಾ 80% ಜನರು ಭಾರತ ಲಾಕ್‍ಡೌನ್‍ಗೆ ಬೆಂಬಲ ನೀಡಿದ್ದು ಬಾಕಿ 20% ಜನರು ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಬೇಕಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

    ದೆಹಲಿಯಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಇನ್ನು ಪರಿಸ್ಥಿತಿ ಕೈ ಮೀರಿಲ್ಲ ಸರ್ಕಾರ ಇದನ್ನು ನಿಭಾಯಿಸುವ ಪ್ರಯತ್ನ ಮಾಡುತ್ತಿದೆ. ಭಾರತ ಲಾಕ್‍ಡೌನ್ ಮಾಡುವ ಮೂಲಕ ಮುಂದಗಾಬಹುದಿದ್ದ ದೊಡ್ಡ ಅನಾಹುತವನ್ನು ತಡೆಯುವ ಪ್ರಯತ್ನ ಸರ್ಕಾರ ಮಾಡಿದೆ. ಸರ್ಕಾರಕ್ಕೆ ಕೊರೊನಾ ಸೃಷ್ಟಿಸಬಹುದಾ ನಷ್ಟದ ಬಗ್ಗೆ ಮುಂಚೆಯೇ ತಿಳಿದಿತ್ತು ಎಂದರು.

    ಕೊರೊನಾ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ. ನಿಜಮುದ್ದೀನ್ ಯಾತ್ರಿಗಳು ಸೇರಿ ಯಾರೇ ಆಗಿರಲಿ ಕೊರೊನಾ ಲಕ್ಷಣಗಳು ಕಂಡು ಬಂದರೆ ಸ್ವಯಂ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಿರಿ. ಬಹುತೇಕ ಪ್ರಮಾಣದ ಜನರು ಬೆಂಬಲ ನೀಡಿದ್ದಾರೆ. ಆದರೆ ಅಲ್ಲಲ್ಲಿ ಜನರು ಮನೆಯಿಂದ ಹೊರಬರುವ ಪ್ರಯತ್ನ ಮಾಡುತ್ತಿದ್ದಾರೆ. ಈ ಜನರು ಕೂಡಾ ಎಚ್ಚೆತುಕೊಂಡು ಮನೆಯಲ್ಲಿರಬೇಕು ತಮ್ಮಗಲ್ಲದಿದ್ದರು ಸಮಾಜದ ಮತ್ತು ದೇಶದ ಸ್ವಾಸ್ಥ್ಯಕ್ಕಾಗಿ ಲಾಕ್‍ಡೌನ್ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

    ಭಾರತ ಲಾಕ್‍ಡೌನ್ ಆಗಿ ಹದಿನಾರು ದಿನ ಕಳೆದಿದೆ. ಆದರೆ ಪ್ರಮಾಣ ಇಳಕೆಯಾಗಿಲ್ಲ ಇದಕ್ಕೆ ಕೆಲ ಜನರ ನಿರ್ಲಕ್ಷ್ಯವೂ ಕಾರಣವಾಗಿದೆ. ಲಾಕ್‍ಡೌನ್ ಮುಂದುವರೆಸುವ ಬಗ್ಗೆ ನಾನೇನು ಹೇಳಲು ಸಾಧ್ಯವಿಲ್ಲ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ಬಗ್ಗೆ ಚಿಂತನೆ ನಡೆಸಿದ್ದು ವಿಪಕ್ಷ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಎಲ್ಲ ಸಿಎಂಗಳ ಜೊತೆಗೆ ಚರ್ಚೆ ಮಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.

    ವೈದ್ಯಕೀಯ ಸಾಮಾಗ್ರಿಗಳ ಪೂರೈಕೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ. ಪಿಪಿಇ ಕಿಟ್, ಮಾಸ್ಕ್, ವೆಂಟಿಲೇಟರ್ ಸೇರಿ ಅಗತ್ಯ ವೈದ್ಯಕೀಯ ಸಾಮಾಗ್ರಿಗಳನ್ನು ಪೂರೈಕೆ ಮಾಡುತ್ತಿದೆ. ಆದರೆ ವಿರೋಧ ಪಕ್ಷಗಳು ಸುಮ್ಮನೆ ಆರೋಪ ಮಾಡಿದೆ. ಕೇಂದ್ರ ಸರ್ಕಾರ ಸಾಮಾಗ್ರಿಗಳ ಪೂರೈಕೆ ಮಾಡಿರುವ ಅಂಕಿ ಅಂಶಗಳನ್ನು ನೀಡಲು ನಾವು ಸಿದ್ಧ ಎಂದು ಸವಾಲು ಹಾಕಿದರು.

  • ಖಾಸಗಿ ಲ್ಯಾಬ್‍ಗಳಲ್ಲಿ ಕೊರೊನಾ ಟೆಸ್ಟ್- ಜನರ ಶುಲ್ಕ ಮರುಪಾವತಿಸಬಹುದೇ?

    ಖಾಸಗಿ ಲ್ಯಾಬ್‍ಗಳಲ್ಲಿ ಕೊರೊನಾ ಟೆಸ್ಟ್- ಜನರ ಶುಲ್ಕ ಮರುಪಾವತಿಸಬಹುದೇ?

    – ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಪ್ರಶ್ನೆ

    ನವದೆಹಲಿ: ಖಾಸಗಿ ಲ್ಯಾಬ್ ಗಳಲ್ಲಿ ಕೊರೊನಾ ಸೋಂಕು ಪರೀಕ್ಷೆ ನಡೆಸುವ ಶುಲ್ಕವನ್ನು ಸರ್ಕಾರ ಭರಿಸಲು ಅಥವಾ ಮರುಪಾವತಿಸಲು ಸಾಧ್ಯವೇ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಪ್ರಶ್ನಿಸಿದೆ.

    ಕೊರೊನಾ ವೈರಸ್ ಸೋಂಕು ಪರೀಕ್ಷೆ ನಡೆಸಲು ಖಾಸಗಿ ಲ್ಯಾಬ್‍ಗಳು ಹೆಚ್ಚಿನ ಹಣ ಪಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಮತ್ತು ಎಲ್ಲರಿಗೂ ಉಚಿತವಾಗಿ ಟೆಸ್ಟ್ ಮಾಡಲು ನಿರ್ದೇಶನ ನೀಡುವಂತೆ ಕೋರಿ ವಕೀಲ ಶಶಾಂಕ್ ದಿಯೋ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಶೋಕ್ ಭೂಷಣ್ ನೇತೃತ್ವದ ದ್ವಿ ಸದಸ್ಯ ಪೀಠ ಕೇಂದ್ರ ಸರ್ಕಾರಕ್ಕೆ ಹೀಗೆ ಪ್ರಶ್ನಿಸಿದೆ.

    ದೇಶದಲ್ಲಿ 5000 ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ. ಮತ್ತಷ್ಟು ಹೆಚ್ಚಿನ ಪರೀಕ್ಷೆಗಳು ನಡೆಯುತ್ತಿದೆ. ಪರೀಕ್ಷೆ ನಡೆಸುವ ಕೆಲ ಖಾಸಗಿ ಲ್ಯಾಬ್ ಗಳು ಹೆಚ್ಚಿನ ಹಣ ಪಡೆಯುವ ಸಾಧ್ಯತೆ ಇದಕ್ಕೆ ಕಡಿವಾಣ ಹಾಕುವಂತೆ ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಿದರು.

    ಇದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರದ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಖಾಸಗಿ ಲ್ಯಾಬ್ ಗಳಲ್ಲಿ ಉಚಿತ ಪರೀಕ್ಷೆ ನಡೆಸುವ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸುವುದಾಗಿ ಹೇಳಿದರು. ದೇಶದ 118 ಸರ್ಕಾರಿ ಲ್ಯಾಬ್ ಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ ಇದು ಸಾಕಾಗುತ್ತಿಲ್ಲ. ಈ ಹಿನ್ನೆಲೆ ಖಾಸಗಿ 47 ಲ್ಯಾಬ್ ಗಳಿಗೆ ಪರವಾನಿಗೆ ನೀಡಿದೆ. ದೇಶದಲ್ಲಿ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿರುವ ಹಿನ್ನೆಲೆ ಖಾಸಗಿ ಲ್ಯಾಬ್ ಗಳಿಗೆ ಅವಕಾಶ ನೀಡಿದೆ ಎಂದು ವಿವರಿಸಿದರು.

    ಖಾಸಗಿ ಲ್ಯಾಬ್ ಗಳು ಹೆಚ್ಚಿನ ಶುಲ್ಕ ವಿಧಿಸದಂತೆ ಎಚ್ಚರಿಕೆ ವಹಿಸಬೇಕು ಮತ್ತು ಈ ಶುಲ್ಕವನ್ನು ಸರ್ಕಾರ ಮರುಪಾವತಿ ಮಾಡುವ ಬಗ್ಗೆ ಪರಿಶೀಲಿಸಿ ಎಂದು ನ್ಯಾ. ಅಶೋಕ್ ಭೂಷಣ್ ಸಲಹೆ ನೀಡಿದರು. ಅಲ್ಲದೇ ಖಾಸಗಿ ಲ್ಯಾಬ್‍ಗಳು ಅಗತ್ಯ ಕಡೆಗಳಿಂದ ಸೂಕ್ತ ಪರವಾನಿಗೆ ಪಡೆದಿವೆಯೋ ಇಲ್ಲವೇ ಅನ್ನೊದು ಖಾತ್ರಿಪಡಿಸಿಕೊಳ್ಳಬೇಕು ಎಂದರು.

    ಈ ವೇಳೆ ಅರ್ಜಿದಾರ ವಕೀಲ ಶಶಾಂಕ್ ದಿಯೋ ಖಾಸಗಿ ಲ್ಯಾಬ್ ಗಳಲ್ಲಿ ಪರೀಕ್ಷೆ ಗೆ 4, 500 ಶುಲ್ಕ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಿಗದಿ ಮಾಡಿದೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥಿತ ಪರೀಕ್ಷೆಗಳು ನಡೆಯದ ಮತ್ತು ಅಲ್ಲಿ ಜನರ ಸಂಖ್ಯೆ ಹೆಚ್ವಿರುವ ಕಾರಣ ಹೆಚ್ಚಿನವರು ಖಾಸಗಿ ಲ್ಯಾಬ್ ಗಳತ್ತ ಮುಖ ಮಾಡಲಿದ್ದಾರೆ ಎಂದು ವಾದಿಸಿದರು.

  • ಲಾಕ್‍ಡೌನ್ ನಂತ್ರ ಅರ್ಥ ವ್ಯವಸ್ಥೆಯನ್ನ ರಿಸ್ಟಾರ್ಟ್ ಮಾಡೋದು ಹೇಗೆ?- ರಘುರಾಮ್ ರಾಜನ್ ಸಲಹೆ

    ಲಾಕ್‍ಡೌನ್ ನಂತ್ರ ಅರ್ಥ ವ್ಯವಸ್ಥೆಯನ್ನ ರಿಸ್ಟಾರ್ಟ್ ಮಾಡೋದು ಹೇಗೆ?- ರಘುರಾಮ್ ರಾಜನ್ ಸಲಹೆ

    ನವದೆಹಲಿ: ಏಪ್ರಿಲ್ 14ರ ಬಳಿಕ ಕುಸಿದಿರುವ ಅರ್ಥವ್ಯವಸ್ಥೆಯನ್ನು ಹೇಗೆ ಪುನರ್ ಆರಂಭಿಸಬೇಕು ಎಂಬುದರ ಬಗ್ಗೆ ರಿಸರ್ವ್ ಬ್ಯಾಂಕಿನ ಮಾಜಿ ಗರ್ವನರ್ ರಘುರಾಮ್ ರಾಜನ್ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

    ಕೊರೊನಾ ವೈರಸ್ ತಡೆಗಾಗಿ ಕೇಂದ್ರ ಸರ್ಕಾರ, ದೇಶವನ್ನು 21 ದಿನ ಲಾಕ್‍ಡೌನ್ ಮಾಡಿದೆ. ಲಾಕ್‍ಡೌನ್ ನಿಂದಾಗಿ ಇಡೀ ದೇಶದ ಅರ್ಥವ್ಯವಸ್ಥೆಯೇ ಸ್ತಬ್ಧಗೊಂಡಿದೆ. ಎಲ್ಲ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ನಿಂತಿವೆ. ಲಾಕ್‍ಡೌನ್ ಬಳಿಕ ಅರ್ಥವ್ಯವಸ್ಥೆ ನಿಧಾನವಾಗಿ ಚೇತರಿಸಿಕೊಳ್ಳಬೇಕಿದೆ. ಹಾಗಾಗಿ ಅರ್ಥವ್ಯವಸ್ಥೆಯನ್ನು ರೀಸ್ಟಾರ್ಟ್ ಮಾಡಲು ಸರ್ಕಾರ ಸಹ ಕೆಲವೊಂದು ಯೋಜನೆಗಳನ್ನು ರೂಪಿಸಬೇಕಿದೆ ಎಂಬುವುದು ರಘುರಾಮ್ ರಾಜನ್ ಅಭಿಪ್ರಾಯ.

    ಸೂಕ್ಷ್ಮವಾಗಿದೆ ದೇಶದ ಅರ್ಥವ್ಯವಸ್ಥೆ: 2008-09ನೇ ಸಾಲಿನ ಆರ್ಥಿಕ ಹಿಂಜರಿತಗಿಂತಲೂ ಇಂದಿನ ಸ್ಥಿತಿ ಅಪಾಯಕಾರಿಯಾಗಿದೆ. 2008-09ರಲ್ಲಿ ಅರ್ಥಿಕ ಹಿಂಜರಿತದ ನಡುವೆ ವಾಣಿಜ್ಯ ಚಟುವಟಿಕೆಗಳು ನಡೆದಿದ್ದವು. ಆದರೆ ಇಂದು ಎಲ್ಲ ವ್ಯವಹಾರಗಳು ಸಂಪೂರ್ಣವಾಗಿ ನೆಲ ಕಚ್ಚಿವೆ. 2008-09ರಲ್ಲಿ ಕಂಪನಿಗಳು ತಮ್ಮ ವ್ಯವಹಾರ ನಡೆಸುತ್ತಿರೋದರಿಂದ ದೇಶವೂ ನಡೆಯುತ್ತಿತ್ತು. ಹಾಗಾಗಿ ಹಣಕಾಸಿನ ವ್ಯವಸ್ಥೆ ಆರೋಗ್ಯಕರವಾಗಿತ್ತು. ಆದ್ರೆ ಇಂದಿನ ಹಣಕಾಸಿನ ವ್ಯವಸ್ಥೆ ತುಂಬಾ ಸೂಕ್ಷ್ಮವಾಗಿದ್ದು, ಜಾಗೂರಕತೆಯಿಂದ ಪ್ರತಿಯೊಂದು ಹೆಜ್ಜೆಯನ್ನು ಇರಿಸಬೇಕಿದೆ.

    ಬಂದ್ ಮಾಡಲು ಸಾಧ್ಯವಿಲ್ಲ: ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ಭಾರತಕ್ಕೆ ಸಮಯವಕಾಶ ಸಿಕ್ಕಿದೆ. 21 ದಿನಗಳ ಲಾಕ್‍ಡೌನ್ ವೇಳೆಯಲ್ಲಿ ಕೊರೊನಾ ತಡೆಗೆ ಸರ್ಕಾರ ಸಮರ್ಪಕವಾಗಿ ಕೆಲಸ ಮಾಡಬೇಕಿದೆ. ಈ ಲಾಕ್‍ಡೌನ್ ಅವಧಿಯಲ್ಲಿಯೇ ಕೊರೊನಾ ಪರೀಕ್ಷೆ, ಚಿಕಿತ್ಸೆ, ಕ್ವಾರಂಟೈನ್ ಮತ್ತು ಸಾಮಾಜಿಕ ಅಂತರಕ್ಕೆ ಅಂತ್ಯ ಹಾಡಬೇಕಿದೆ. 21 ದಿನಗಳ ಬಳಿಕವೂ ಕೊರೊನಾ ನಿಯಂತ್ರಣಕ್ಕೆ ಸಿಗದಿದ್ದರೆ, ಎಲ್ಲವನ್ನು ಬಂದ್ ಮಾಡಲು ಸಾಧ್ಯವಿಲ್ಲ.

    21 ದಿನಗಳ ನಂತರ ಲಾಕ್‍ಡೌನ್ ನಿಯಮವನ್ನು ಸರ್ಕಾರ ಸಡಿಲಿಸಬೇಕು. ಇದರಿಂದ ಕೆಲ ವಾಣಿಜ್ಯ ಚಟುವಟಿಕೆಗಳು ಪ್ರಾರಂಭವಾಗುತ್ತವೆ. ಇದರಿಂದ ಅರ್ಥವ್ಯವಸ್ಥೆಯಲ್ಲಿ ಚೇತರಿಕೆ ಕಾಣುತ್ತದೆ. 21 ದಿನಗಳ ನಂತರ ಆರಂಭಿಸುವ ಕಂಪನಿಗಳು ಕಡ್ಡಾಯವಾಗಿ ಕೊರೊನಾ ಮುಂಜಾಗ್ರತ ಕ್ರಮಗಳನ್ನು ಪಾಲಿಸಬೇಕು ಎಂದು ಸರ್ಕಾರ ಆದೇಶಿಸಬೇಕು. ಹಾಗೆ ಖಾಸಗಿ ಕಂಪನಿಗಳು ಸಹ ತಮ್ಮ ಸಿಬ್ಬಂದಿ ಹಿತದೃಷ್ಟಿಯಿಂದ ಸ್ಕ್ರೀನಿಂಗ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸುವ ಕುರಿತು ಜಾಗೃತಿ ಮೂಡಿಸಬೇಕು ಎಂದು ರಾಜನ್ ಹೇಳುತ್ತಾರೆ.

    ಆರ್ಥಿಕ ಸಹಾಯ: ದೀರ್ಘ ಕಾಲಾವಧಿಯವರೆಗೆ ವ್ಯವಹಾರಗಳನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ. ಖಾಸಗಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಲು ಸರ್ಕಾರ ಸೂಚಿಸಬೇಕು. ಸರ್ಕಾರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಸಹಾಯ ನೀಡಬೇಕು. ಲಾಕ್‍ಡೌನ್ ನಿಂದಾಗಿ ದುಡಿಮೆ ಇಲ್ಲದೇ ಕೆಳ ವರ್ಗದ ಜೀವನಸ್ಥಿತಿ ಮತ್ತಷ್ಟು ಕುಸಿಯುವ ಸಾಧ್ಯತೆಗಳು ಹೆಚ್ಚಿವೆ ಎಂದು ರಾಜನ್ ಆತಂಕ ವ್ಯಕ್ತಪಡಿಸಿದ್ದಾರೆ.

    ಎಲ್ಲರ ಸಹಾಯ ಪಡೆದುಕೊಳ್ಳಲಿ: ಸರ್ಕಾರ ಕೇವಲ ತಾನೇ ಕೆಲಸ ಮಾಡದೇ ಎಲ್ಲರ ಸಹಾಯ ಪಡೆದು ಒಗ್ಗಟ್ಟಿನಿಂದ ಕೊರೊನಾ ತಡೆಗೆ ಹೋರಾಟ ನಡೆಸಬೇಕಿದೆ. ವಿಪಕ್ಷದಲ್ಲಿರುವ ಅನುಭವಿ ನಾಯಕರನ್ನು ಕೊರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು. ಕೇವಲ ಪ್ರಧಾನ ಮಂತ್ರಿ ಕಾರ್ಯಾಲಯವೊಂದೇ ಎಲ್ಲ ಕೆಲಸಗಳನ್ನು ಮಾಡಲಾರದು. ಎಲ್ಲ ರಾಜ್ಯಗಳ ಜೊತೆ ಸೇರಿ ಹಿರಿಯ ನಾಯಕರಿಂದ ಉತ್ತಮ ಸಲಹೆ ಪಡೆದು ಕೆಲಸ ಮಾಡಲು ಕೇಂದ್ರ ಸರ್ಕಾರ ಮುಂದಾಗಬೇಕು.

    ದೊಡ್ಡ ಕಂಪನಿಗಳಿಂದ ಸಹಾಯ: ಕೇವಲ ಸರ್ಕಾರವೊಂದೇ ಶ್ರಮಪಟ್ಟರೇ ಅರ್ಥವ್ಯವಸ್ಥೆ ಚೇತರಿಕೆ ಕಾಣಲಾರದು. ಹಾಗಾಗಿ ಸುಸ್ಥಿತಿಯಲ್ಲಿರು ದೊಡ್ಡ ಮತ್ತು ಮಧ್ಯಮ ಗಾತ್ರದ ಕಂಪನಿಗಳು ಸಣ್ಣ ವ್ಯವಹಾರಸ್ಥರ ಸಹಾಯಕ್ಕೆ ಮುಂದೆ ಬರಬೇಕಿದೆ. ಸಣ್ಣ ಪ್ರಮಾಣದ ವಿತರಕರಿಗೆ ದೊಡ್ಡ ಕಂಪನಿಗಳು ನರೆವು ನೀಡಬೇಕು. ಒಂದು ವೇಳೆ ಅವಶ್ಯವಿದ್ದಲ್ಲಿ ಬಾಂಡ್ ಮಾರ್ಕೆಟ್ ನಿಂದ ದೊಡ್ಡ ಗಾತ್ರದ ಕಂಪನಿಗಳು ಹಣ ಪಡೆಯಲು ಅವಕಾಶಗಳಿವೆ ಎಂದು ರಘುರಾಮ್ ರಾಜನ್ ಸಲಹೆ ನೀಡಿದ್ದಾರೆ.