Tag: Central Government

  • ಮೇ 3ರ ಬಳಿಕ ಲಾಕ್‍ಡೌನ್ ವಿಸ್ತರಿಸಿ – ದೆಹಲಿ ಬಳಿಕ ಐದು ರಾಜ್ಯಗಳಿಂದ ಕೇಂದ್ರಕ್ಕೆ ಮನವಿ

    ಮೇ 3ರ ಬಳಿಕ ಲಾಕ್‍ಡೌನ್ ವಿಸ್ತರಿಸಿ – ದೆಹಲಿ ಬಳಿಕ ಐದು ರಾಜ್ಯಗಳಿಂದ ಕೇಂದ್ರಕ್ಕೆ ಮನವಿ

    ನವದೆಹಲಿ: ಮೇ 3ರ ಬಳಿಕ ಲಾಕ್‍ಡೌನ್ ವಿಸ್ತರಣೆ ಮಾಡುವಂತೆ ದೆಹಲಿ ಬಳಿಕ ಐದು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ನಾಳೆ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಸಭೆ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

    ಮೇ 3ರ ಬಳಿಕ ಲಾಕ್‍ಡೌನ್ ವಿಸ್ತರಣೆ ಬಗ್ಗೆ ಗೊಂದಲದಲ್ಲಿರುವ ಕೇಂದ್ರ ಸರ್ಕಾರ ಈ ಬಗ್ಗೆ ಎಲ್ಲ ರಾಜ್ಯಗಳ ಸಿಎಂಗಳ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ. ನಾಳೆ ಬೆಳಗ್ಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಈ ಸಭೆ ನಡೆಯಲಿದೆ.

    ನಾಳಿನ ಸಭೆಗೂ ಮುನ್ನ ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್, ಒಡಿಶಾ, ಪಶ್ಚಿಮ ಬಂಗಾಳ ಲಾಕ್‍ಡೌನ್ ವಿಸ್ತರಣೆ ಮಾಡುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿವೆ. ನಾಳಿನ ಸಭೆಯಲ್ಲೂ ಇದೇ ಅಂಶವನ್ನು ಒತ್ತಿ ಹೇಳುವ ಪ್ರಯತ್ನವಾಗಲಿದೆ. ಲಾಕ್‍ಡೌನ್ ಮುಂದುವರಿಸುವುದು ಸೂಕ್ತ ಹಂತ ಹಂತವಾಗಿ ವಿನಾಯಿತಿ ನೀಡಬೇಕು. ರಾಜ್ಯದ ಹಲವು ಪ್ರದೇಶದಲ್ಲಿ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದ್ದು ಲಾಕ್‍ಡೌನ್ ತೆರವು ಒಳಿತಲ್ಲ ಎಂದು ಆಯಾ ರಾಜ್ಯದ ಸಿಎಂಗಳು ಅಭಿಪ್ರಾಯಪಟ್ಟಿದ್ದಾರೆ.

    ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ಇತರ ಆರು ರಾಜ್ಯಗಳು ಕೇಂದ್ರ ಸರ್ಕಾರದ ನಿರ್ದೇಶನವನ್ನು ಅನುಸರಿಸುವುದಾಗಿ ಹೇಳಿದ್ದು, ಅಸ್ಸಾಂ, ಕೇರಳ ಮತ್ತು ಬಿಹಾರ ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ವಿಡಿಯೋ ಸಮಾವೇಶದ ನಂತರ ಮುಂದಿನ ನಿರ್ಧಾರವನ್ನು ಪ್ರಕಟಿಸುವುದಾಗಿ ಹೇಳಿದ. ಈ ನಡುವೆ ತೆಲಂಗಾಣ ಮೇ 7ರವರೆಗೂ ಲಾಕ್‍ಡೌನ್ ವಿಸ್ತರಿಸಿದೆ.

    ಮಹಾರಾಷ್ಟ್ರ ಕೇಂದ್ರ ಸರ್ಕಾರ ನೀಡಿರುವ ವಿನಾಯಿತಿಗಳನ್ನು ರಾಜ್ಯದಲ್ಲಿ ನೀಡುವುದಿಲ್ಲ ಎಂದಿದ್ದು, ಉತ್ತರ ಪ್ರದೇಶ ಮತ್ತಷ್ಟು ದಿನ ಕಾದು ನೋಡುವ ಪ್ರಯತ್ನ ಮಾಡಿದೆ. ತುರ್ತು ಅವಶ್ಯಕ ಅಂಗಡಿಗಳು ಮತ್ತು 11 ಬಗೆಯ ಕೈಗಾರಿಗಳಿಗೆ ಮಾತ್ರ ಅವಕಾಶ ನೀಡಿದೆ. ಪಿಎಂ ಸಭೆಗೂ ಮುನ್ನ ಬಿಜೆಪಿ ಹೊರತಾದ ಪಶ್ಚಿಮ ಬಂಗಾಳ, ಪಂಜಾಬ್, ಮಹಾರಾಷ್ಟ್ರ ಮತ್ತು ಒಡಿಶಾ ಲಾಕ್‍ಡೌನ್ ವಿಸ್ತರಣೆಗೆ ಒಲವು ತೋರಿಸುವುದು ಮಹತ್ವ ಪಡೆದುಕೊಂಡಿದೆ.

  • ವಿಜಯಪುರದಲ್ಲಿ ಸಿಲುಕಿದ್ದ 33 ಮಂದಿ ಕಾರ್ಮಿಕರು ತಮ್ಮೂರಿಗೆ ವಾಪಸ್

    ವಿಜಯಪುರದಲ್ಲಿ ಸಿಲುಕಿದ್ದ 33 ಮಂದಿ ಕಾರ್ಮಿಕರು ತಮ್ಮೂರಿಗೆ ವಾಪಸ್

    ವಿಜಯಪುರ: ಕೇಂದ್ರ ಸರ್ಕಾರ ಅಂತರ್ ಜಿಲ್ಲೆಗಳಲ್ಲಿ ಕಾರ್ಮಿಕರ ಸಂಚಾರಕ್ಕೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಿಲುಕಿದ್ದ 33 ಮಂದಿ ಕಾರ್ಮಿಕರು ತಮ್ಮತಮ್ಮ ಜಿಲ್ಲೆಗಳಿಗೆ ಮರಳಿದ್ದಾರೆ.

    ಭಾರತ ಲಾಕಡೌನ್ ಆದ ಹಿನ್ನೆಲೆಯಲ್ಲಿ 33 ಜನ ವಲಸೆ ಕಾರ್ಮಿಕರು ವಿಜಯಪುರದಲ್ಲಿ ಸಿಲುಕಿದ್ದರು. ವಿಜಯಪುರ ನಗರದ ಕಾಕಾ ಕಾರ್ಖಾನೀಸ್ ಸಮುದಾಯ ಭವನದಲ್ಲಿ ಕಾರ್ಮಿಕರು ಉಳಿದಿಕೊಂಡಿದ್ದರು. ಇವರಿಗೆ ವಿಜಯಪುರ ಜಿಲ್ಲಾಡಳಿತದಿಂದ ಊಟ, ವಸತಿ ವ್ಯವಸ್ಥೆಯನ್ನು ಕಲ್ಪಿಸಿತ್ತು.

    ಕೇಂದ್ರ ಸರ್ಕಾರ ಅಂತರ್ ಜಿಲ್ಲೆಗಳಲ್ಲಿ ಕಾರ್ಮಿಕರ ಸಂಚಾರಕ್ಕೆ ಅನುಮತಿ ನೀಡಿದೆ. ಹೀಗಾಗಿ ವಿಜಯಪುರ ಜಿಲ್ಲಾಡಳಿತ ಏಳು ನಾನಾ ವಾಹನಗಳಲ್ಲಿ ಕಾರ್ಮಿಕರನ್ನು ಅವರ ಜಿಲ್ಲೆಗಳಿಗೆ ಕಳುಹಿಸಿ ಕೊಟ್ಟಿದೆ. ಅಷ್ಟೇ ಅಲ್ಲದೇ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ಉಸ್ತುವಾರಿಯಲ್ಲಿ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗಿದೆ.

    ವಿಜಯಪುರ ಜಿಲ್ಲಾಡಳಿತ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಪ್ರಮಾಣ ಪತ್ರ, ಸಂಚಾರಕ್ಕೆ ಪಾಸ್, ವಾಹನ ವ್ಯವಸ್ಥೆ ಮಾಡಿದೆ. ಶಿವಮೊಗ್ಗ, ಉಡುಪಿ, ರಾಮನಗರ ಮೂಲದ 33 ಜನ ವಲಸೆ ಕಾರ್ಮಿಕರು ತಮ್ಮೂರಿಗೆ ಮರಳಿದ್ದಾರೆ.

  • ಲಾಕ್‍ಡೌನ್‍ನಿಂದ ಇನ್ನಷ್ಟು ರಿಲೀಫ್ – ಎಲ್ಲ ರೀತಿಯ ಅಂಗಡಿ ತೆರೆಯಲು ಅನುಮತಿ

    ಲಾಕ್‍ಡೌನ್‍ನಿಂದ ಇನ್ನಷ್ಟು ರಿಲೀಫ್ – ಎಲ್ಲ ರೀತಿಯ ಅಂಗಡಿ ತೆರೆಯಲು ಅನುಮತಿ

    – ಕೆಲವು ಷರತ್ತುಗಳು ಅನ್ವಯ

    ನವದೆಹಲಿ: ಲಾಕ್‍ಡೌನ್‍ನಿಂದ ಜನರು ಕೆಲಸವಿಲ್ಲದೆ ತತ್ತರಿಸಿ ಹೋಗಿದ್ದರು. ಇದೀಗ ಕೇಂದ್ರ ಸರ್ಕಾರ ಕೊರೊನಾ ಲಾಕ್‍ಡೌನ್‍ನಿಂದ ಬಿಗ್ ರಿಲೀಫ್ ಘೋಷಿಸಿದೆ.

    ಕೇಂದ್ರ ಸರ್ಕಾರ ಎಲ್ಲ ರೀತಿಯ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದೆ. ಇಲ್ಲಿವರೆಗೆ ಕೇವಲ ಅಗತ್ಯ ವಸ್ತು ಮಾರುವ ಅಂಗಡಿಗಳಷ್ಟೇ ಅನುಮತಿ ನೀಡಲಾಗಿತ್ತು. ಈಗ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ಅಂಗಡಿಗಳನ್ನೂ ತೆರೆಯಲು ಅನುಮತಿ ನೀಡಿದೆ.

    ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳ ಕಾಯ್ದೆಯಡಿ ಬರುವ ಅಂಗಡಿಗಳು ತೆರೆಯಬಹುದು. ಈ ಕಾಯ್ದೆಯಡಿ ಪರವಾನಿಗೆ ಪಡೆದಿರುವ ಎಲ್ಲ ಅಂಗಡಿಗಳನ್ನು ಇವತ್ತಿನಿಂದ ತೆರೆಯಬಹುದು ಎಂದು ಕೇಂದ್ರ ಗೃಹ ಸಚಿವಾಲಯದಿಂದ ಮಹತ್ವದ ಆದೇಶವನ್ನು ಹೊರಡಿಸಿದೆ. ಆದರೆ ಅಂಗಡಿಗಳನ್ನು ತೆರೆಯಲು ಕೇಂದ್ರ ಸರ್ಕಾರ ಕೆಲವು ಷರತ್ತುಗಳನ್ನು ಹಾಕಿದೆ.

    1. ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಮಳಿಗೆ ಕಾಯ್ದೆಯಡಿ ಪರವಾನಿಗೆ ಪಡೆದಿರುವ ಅಂಗಡಿಗಳು, ಅಗತ್ಯ ವಸ್ತು ಮಾರುವ ಅಂಗಡಿಗಳನ್ನು ಜೊತೆಗೆ ಉಳಿದ ಅಂಗಡಿಗಳಿಗೂ ಅನುಮತಿ.
    2. ಪಾಲಿಕೆ, ನಗರಸಭೆ ವ್ಯಾಪ್ತಿಯಲ್ಲಿ ಜನವಸತಿ ಮಳಿಗೆಯಲ್ಲಿರುವ ಅಂಗಡಿಗಳಿಗಷ್ಟೇ ಅನುಮತಿ ನೀಡಲಾಗಿದೆ. ಈ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳಲ್ಲಿ ಇರುವ ಅಂಗಡಿಗಳನ್ನು ತೆರೆಯುವಂತಿಲ್ಲ.
    3. ವಸತಿ ಕಾಂಪ್ಲೆಕ್ಸ್, ವಾಣಿಜ್ಯ ಮಳಿಗೆಗಳಲ್ಲಿರುವ ಅಂಗಡಿ, ಪಾಲಿಕೆ, ನಗರಸಭೆ ಹೊರಗೆ ಎರಡೂ ಮಳಿಗೆಗಳಲ್ಲಿ ಬರುವ ಅಂಗಡಿಗಳಿಗೆ ಅನುಮತಿ.

    4. ಸಿಂಗಲ್‍ಬ್ರ್ಯಾಂಡ್, ಮಲ್ಟಿಬ್ರ್ಯಾಂಡ್ ಮಳಿಗೆಗಳು, ಮಾಲ್‍ಗಳಿಗೆ ಅನುಮತಿ ಇಲ್ಲ. ಇವುಗಳಿಗೆ ಲಾಕ್‍ಡೌನ್‍ನಿಂದಲೂ ವಿನಾಯಿತಿ ಇಲ್ಲ.
    5. ತೆರೆಯುವ ಅಂಗಡಿಗಳಲ್ಲಿ ಶೇ. 50ರಷ್ಟೇ ನೌಕರರು ಕೆಲಸ ಮಾಡಬೇಕು.
    6. ಅಲ್ಲದೇ ಕೆಲಸ ಮಾಡುವಾಗ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವು ಕಡ್ಡಾಯ.
    7. ಕಂಟೈನ್‍ಮೆಂಟ್ ಝೋನ್‍ಗಳಿಗೆ ಅಂಗಡಿ ತೆರೆಯುವ ವಿನಾಯಿತಿ ಅನ್ವಯಿಸಲ್ಲ.

    ಈಗಾಗಲೇ ರಾಜ್ಯ ಸರ್ಕಾರವೂ ಕೂಡ ಕೆಲವು ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿತ್ತು. ಈಗ ಕೇಂದ್ರ ಸರ್ಕಾರವೂ ಅಧಿಕೃತವಾಗಿ ಎಲ್ಲ ರೀತಿಯ ಅಂಗಡಿಗಳನ್ನು ತೆರೆಯುವಂತೆ ಆದೇಶ ಹೊರಡಿಸಿದೆ.

  • ಕೊರೊನಾ ವಿರುದ್ಧ ಹೋರಾಡಲು ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಕೊಡಿ – ಕೇಂದ್ರಕ್ಕೆ ಕಾಂಗ್ರೆಸ್ ಒತ್ತಾಯ

    ಕೊರೊನಾ ವಿರುದ್ಧ ಹೋರಾಡಲು ರಾಜ್ಯಗಳಿಗೆ ಹೆಚ್ಚಿನ ಅಧಿಕಾರ ಕೊಡಿ – ಕೇಂದ್ರಕ್ಕೆ ಕಾಂಗ್ರೆಸ್ ಒತ್ತಾಯ

    ನವದೆಹೆಲಿ: ಕೊರೊನಾ ವಿರುದ್ಧ ಹೋರಾಡಲು ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಅಧಿಕಾರ ಕೊಡಿ ಎಂದು ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಒತ್ತಾಯ ಮಾಡಿದೆ.

    ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಸಿ, ಕೇಂದ್ರ ಸರ್ಕಾರ ಕೊರೊನಾ ವೈರಸ್ ವಿರುದ್ಧ ಹೋರಾಡಲು ರಾಜ್ಯಗಳಿಗೆ ಹೆಚ್ಚಿ ಅರ್ಥಿಕ ನೆರವು ನೀಡಬೇಕು ಮತ್ತು ರಾಜ್ಯಗಳಿಂದ ಬಂದ ಜಿಎಸ್‍ಟಿ ತೆರಿಗೆಯನ್ನು ಸಂಪೂರ್ಣವಾಗಿ ಅವುಗಳಿಗೇ ವಾಪಸ್ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.

    ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ರಾಜ್ಯಗಳನ್ನು ಸಬಲೀಕರಣಗೊಳಿಸಲು ಕೇಂದ್ರ ಸರ್ಕಾರವು ಸಾಕಷ್ಟು ಆರ್ಥಿಕ ನೆರವು ನೀಡಬೇಕು. ಇದನ್ನು ಜಿಎಸ್‍ಟಿಯ ಸಂಪೂರ್ಣ ಮೊತ್ತವನ್ನು ರಾಜ್ಯಗಳಿಗೆ ಹಿಂದಿರುಗಿಸುವ ಮೂಲಕ ಮತ್ತು ಸಾಲ ತೆಗೆದುಕೊಳ್ಳಲು ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯವನ್ನು ರಾಜ್ಯಗಳಿಗೆ ನೀಡುವ ಮೂಲಕ ಪ್ರಾರಂಭಿಸಬಹುದು ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ರಂದೀಪ್ ಸುರ್ಜೆವಾಲಾ ಅವರು ತಿಳಿಸಿದ್ದಾರೆ.

    ಇದೇ ವೇಳೆ ದೇಶವೇ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದರೆ ಬಿಜೆಪಿ ಪಕ್ಷ ಮಾತ್ರ ಕೋಮುವಾದಲ್ಲಿ ಮುಳುಗಿ ಹೋಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಈ ವಿಚಾರವಾಗಿ ಮಾತನಾಡಿರುವ ಕಾಂಗ್ರೆಸ್ ಪಕ್ಷದ ನಾಯಕ ಕೆಸಿ ವೇಣುಗೋಪಾಲ್, ಇಡೀ ದೇಶ ಕೊರೊನಾ ವಿರುದ್ಧ ಹೋರಾಡುತ್ತಿದ್ದರೆ ಬಿಜೆಪಿ ಕೋಮು ವಿಭಜನೆಯನ್ನು ಮಾಡಲು ಪ್ರಯತ್ನ ಮಾಡುತ್ತಿದೆ. ಆದರೆ ಈ ವೈರಸ್ ಜಾತಿ ಧರ್ಮ ಮತ್ತು ಲಿಂಗದ ಅಧಾರದ ಮೇಲೆ ತಾರತಮ್ಮ ಮಾಡುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

    ಕೊರೊನಾ ದೇಶದಲ್ಲಿ ಹೆಚ್ಚಾಗುತ್ತಿರುವ ಸಮಯದಲ್ಲಿ ನಾವು ಇನ್ನು ದೃಢವಾದ ಮತ್ತು ನಿಖರವಾದ ಟೆಸ್ಟಿಂಗ್ ಮಾಡುವಲ್ಲಿ ವಿಫಲವಾಗಿರುವುದು ದುರಂತ. ಈ ಸೋಂಕನ್ನು ತಡೆಯಲು ಟೆಸ್ಟ್ ಮಾಡುವುದು, ಸೋಂಕಿತರನ್ನು ಪತ್ತೆಹಚ್ಚುವುದು ಅವರನ್ನು ಕ್ವಾರಂಟೈನ್ ಮಾಡುವುದು ಇದರ ಜೊತಗೆ ಸೋಂಕಿತರಿಗೆ ಸೂಕ್ತವಾದ ಚಿಕಿತ್ಸೆ ನೀಡುವುದು ನಿರ್ಣಾಯಕವಾಗಿದೆ ಎಂದು ವೇಣುಗೋಪಾಲ್ ಹೇಳಿದರು.

    ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಏಪ್ರಿಲ್ 16ರಂದು ಇಬ್ಬರು ಸಾಧುಗಳು ಮತ್ತು ಅವರ ಚಾಲಕನ ಮೇಲೆ 200 ಜನರು ದೊಣ್ಣೆ ಮತ್ತು ಕಲ್ಲುಗಳಿಂದ ಹಲ್ಲೆ ಮಾಡಿ ಸಾಯಿಸಿ ಹಾಕಿದ್ದರು. ಇದರ ಬಗ್ಗೆ ಬೇಗ ತನಿಖೆ ನಡೆಸುವಂತೆ ಬಿಜೆಪಿ ಮಹಾ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಇದನ್ನು ಮಾಡುವಲ್ಲಿ ವಿಳಂಬ ಮಾಡಿದ್ದರಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆರೋಪ, ಪ್ರತ್ಯಾರೋಪ ನಡೆಯುತ್ತಿದೆ.

    ಈ ವಿಚಾರವಾಗಿ ನೆನ್ನೆ ಮಾತನಾಡಿದ್ದ ಮಹಾರಾಷ್ಟ್ರದ ಗೃಹ ಮಂತ್ರಿ ಅನಿಲ್ ದೇಶ್ಮುಖ್, ಸಾಧು ಮೇಲೆ ದಾಳಿಯಲ್ಲಿ ಭಾಗಿಯಾದ 101 ಜನರನ್ನು ನಮ್ಮ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದರೆ ಅದರಲ್ಲಿ ಒಬ್ಬರೂ ಮುಸ್ಲಿಂ ಸಮಾಜಕ್ಕೆ ಸೇರಿದ ವ್ಯಕ್ತಿಗಳು ಇಲ್ಲ. ಆದರೆ ಈ ಘಟನೆಗೆ ಕೋಮು ಬಣ್ಣ ಬಳಿಯಲು ಪ್ರಯತ್ನಿಸಿದ ಬಿಜೆಪಿ ಇದು ಮುಸ್ಲಿಮರೇ ಮಾಡಿರುವ ಕೃತ್ಯ ಎಂದು ಬಿಂಬಿಸಲು ಹೊರಟಿತ್ತು. ರಾಜಕೀಯವಾಗಿ ಹೊಡೆದಾಡಿಕೊಳ್ಳುವ ಸಮಯವಿದಲ್ಲ. ನಾವೆಲ್ಲ ಸೇರಿ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದಿದ್ದರು.

  • ಕೊರೊನಾ ವಾರಿಯರ್ಸ್ ಮೇಲೆ ದಾಳಿ ನಡೆಸಿದ್ರೆ ಹುಷಾರ್- ರಾಜ್ಯದಲ್ಲಿ 3 ವರ್ಷ ಜೈಲು, ಆಸ್ತಿ ಜಪ್ತಿ

    ಕೊರೊನಾ ವಾರಿಯರ್ಸ್ ಮೇಲೆ ದಾಳಿ ನಡೆಸಿದ್ರೆ ಹುಷಾರ್- ರಾಜ್ಯದಲ್ಲಿ 3 ವರ್ಷ ಜೈಲು, ಆಸ್ತಿ ಜಪ್ತಿ

    – ಕೇಂದ್ರದಿಂದಲೂ 7 ವರ್ಷ ಶಿಕ್ಷೆಗೆ ಸುಗ್ರೀವಾಜ್ಞೆ

    ಬೆಂಗಳೂರು: ನಗರದ ಪಾದರಾಯನಪುರ ಗಲಭೆ ಬೆನ್ನಲ್ಲೇ ಕೊರೊನಾ ವಾರಿಯರ್ಸ್ ಮೇಲಿನ ದಾಳಿ ತಡೆ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.

    ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ರಾಜ್ಯಪಾಲರು ಅಂಕಿತ ಹಾಕಿದ್ದು, ತಕ್ಷಣದಿಂದಲೇ ಜಾರಿಗೆ ಬಂದಿದೆ. ಇನ್ಮೇಲೆ, ಸರ್ಕಾರಿ ಅಧಿಕಾರಿಗಳು, ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದರೆ ಅಂಥವರಿಗೆ ಮುಟ್ಟಿ ನೋಡಿಕೊಳ್ಳುವ ರೀತಿಯಲ್ಲಿ ಶಿಕ್ಷೆ ನೀಡಲಾಗುತ್ತದೆ. ಕೇಂದ್ರ ಸರ್ಕಾರ ಕೂಡ 1897ರ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನಕ್ಕೆ ಬಂದಿದ್ದು, ಕೊರೋನಾ ವಾರಿಯರ್ಸ್ ಮೇಲೆ ನಡೆಯುತ್ತಿರುವ ಕೃತ್ಯಗಳು `ಸಹಿಸುವಂತ ಪ್ರಕರಣ’ಗಳೇ ಅಲ್ಲ ಅಂತ ಸ್ಪಷ್ಟಪಡಿಸಿದೆ. ಏಪ್ರಿಲ್ 27ರಂದು ಪ್ರಧಾನಿ ಮೋದಿ ಅವರು, ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ. ಈ ನಡುವೆಯೂ ಇಂದು ಪಾದರಾಯನಪುರದ ಗಲಭೆಯಂತಹ ಘಟನೆ ಪಶ್ಚಿಮ ಬಂಗಾಳದ ಬದುರಿಯಾದಲ್ಲಿ ನಡೆದಿದೆ. ಲಾಕ್‍ಡೌನ್ ಕಾವಲಿಗೆ ಇದ್ದ ಪೊಲೀಸರ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ.

    ರಾಜ್ಯದ ಸುಗ್ರೀವಾಜ್ಞೆಯಲ್ಲಿ ಏನಿದೆ?
    ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ್ರೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆಸ್ತಿ ನಷ್ಟ ಉಂಟುಮಾಡಿದರೆ ಆಸ್ತಿ ಮಟ್ಟುಗೋಲು ಹಾಕಲಾಗುತ್ತದೆ. ಆಸ್ತಿ ಇಲ್ಲದಿದ್ದರೆ ಆರೋಪಿಗಳು ಬಂಧನ, ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ. ಜಿಲ್ಲಾ ದಂಡಾಧಿಕಾರಿಗಳಿಗೆ ಅಧಿಕಾರ ಚಲಾಯಿಸಲು ಅವಕಾಶ ನೀಡಲಾಗಿದೆ. ಈ ಮೂಲಕ ಅವರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಬಂಧನ ಮಾಡಬಹುದು. ಹಲ್ಲೆಗೊಳಗಾದ ಕೊರೊನಾ ವಾರಿಯರ್ಸ್ ದೂರು ದಾಖಲಿಸಬೇಕಿಲ್ಲ.

    ಕೇಂದ್ರದ ಸುಗ್ರೀವಾಜ್ಞೆಯಲ್ಲಿ ಏನಿರುತ್ತೆ?
    ಹೆಲ್ತ್ ವಾರಿಯರ್ಸ್ ಮೇಲಿನ ಹಲ್ಲೆಗೆ 6 ತಿಂಗಳಿಂದ 7 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ. 50 ಸಾವಿರ ರೂ.ದಿಂದ 5 ಲಕ್ಷ ರೂಪಾಯಿವರೆಗೂ ದಂಡ ವಿಧಿಸಲಾಗುವುದು. ವಾಹನಗಳು, ಆಸ್ಪತ್ರೆಗಳ ಮೇಲೆ ದಾಳಿ ನಡೆದು ಆಸ್ತಿ ನಷ್ಟ ಸಂಭವಿಸಿದರೆ ಅವುಗಳ ಮಾರುಕಟ್ಟೆ ಮೌಲ್ಯದ ದುಪ್ಪಟ್ಟು ದಂಡವನ್ನು ವಸೂಲಿ ಮಾಡಲಾಗುತ್ತದೆ. ಇಂತಹ ಪ್ರಕರಣವನ್ನು ಒಂದು ವರ್ಷದೊಳಗೆ ವಿಚಾರಣೆ ಮುಗಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗುತ್ತದೆ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಸಂಪೂರ್ಣ ಭದ್ರತೆ ನೀಡಲಾಗುತ್ತದೆ.

  • ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ರೆ 7 ವರ್ಷ ಜೈಲು

    ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ರೆ 7 ವರ್ಷ ಜೈಲು

    ನವದೆಹಲಿ: ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿದ ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆ ಆಗಲಿದೆ.

    ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಇಲ್ಲಿಯವರೆಗಿದ್ದ 6 ತಿಂಗಳ ಶಿಕ್ಷೆಯ ಪ್ರಮಾಣವನ್ನು 7 ವರ್ಷಕ್ಕೆ ಏರಿಸಿದೆ. ದೇಶದ ಹಲವೆಡೆ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

    ಈ ವಾರದಲ್ಲಿ ಬೆಂಗಳೂರಿನ ಪಾದರಾಯನಪುರ, ಮೈಸೂರಿನಲ್ಲಿ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿತ್ತು. ಕಳೆದ ವಾರ ಉತ್ತರ ಪ್ರದೇಶದಲ್ಲೂ ಹಲ್ಲೆ ನಡೆದಿತ್ತು. ಈಗ ಈ ಕೃತ್ಯಗಳಿಗೆ ಕಡಿವಾಣ ಹಾಕಲು ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಿದೆ.

  • ಇ-ಕಾಮರ್ಸ್ ನಲ್ಲಿ ತುರ್ತು ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ – ಯೂಟರ್ನ್ ಹೊಡೆದ ಕೇಂದ್ರ ಸರ್ಕಾರ

    ಇ-ಕಾಮರ್ಸ್ ನಲ್ಲಿ ತುರ್ತು ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ – ಯೂಟರ್ನ್ ಹೊಡೆದ ಕೇಂದ್ರ ಸರ್ಕಾರ

    ನವದೆಹಲಿ: ಅನಿವಾರ್ಯ ಮತ್ತು ತುರ್ತು ಅವಶ್ಯಕತೆ ಅಲ್ಲದ ವಸ್ತುಗಳ ಮಾರಾಟ ಮಾಡದಂತೆ ಫ್ಲಿಪ್ ಕಾರ್ಟ್, ಅಮೇಜಾನ್, ಪೇಟಿಎಂ ಮಾಲ್ ಸೇರಿದಂತೆ ಎಲ್ಲ ಇ-ಕಾರ್ಮಸ್ ಸಂಸ್ಥೆಗಳಿಗೆ ಕೇಂದ್ರ ಗೃಹ ಇಲಾಖೆ ಆದೇಶ ನೀಡಿದೆ.

    ಈ ಸಂಬಂಧ ಇಂದು ಆದೇಶ ಹೊರಡಿಸಿರುವ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲಾ, ತುರ್ತು ವಸ್ತುಗಳನ್ನು ಹೊರತು ಇನ್ಯಾವುದೇ ವಸ್ತುಗಳ ಮಾರಾಟ ನಿಷೇಧಿಸಿದೆ ಎಂದು ಆದೇಶಿಸಿದ್ದಾರೆ. ತುರ್ತು ಅವಶ್ಯಕ ವಸ್ತುಗಳ ಮಾರಾಟ ವೇಳೆ ಲಾಕ್‍ಡೌನ್ ನಿಯಮಗಳನ್ನು ಪಾಲಿಸಬೇಕು. ವಸ್ತುಗಳ ಸಾಗಾಟಕ್ಕೆ ಬಳಸುವ ವಾಹನಗಳಿಗೆ ಪರವಾನಿಗೆ ಪಡೆಯಬೇಕು ಎಂದು ಷರತ್ತುಗಳನ್ನು ವಿಧಿಸಿದೆ.

    ಲಾಕ್‍ಡೌನ್ ಸಂಬಂಧ ಏಪ್ರಿಲ್ 20 ಬಳಿಕ ಇ-ಕಾರ್ಮಸ್ ಸೇವೆಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಪರಿಷ್ಕೃತ ಮಾರ್ಗಸೂಚಿಗಳಲ್ಲಿ ಇ-ಕಾರ್ಮಸ್‍ ಗೆ ವಿನಾಯಿತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಇಲೆಕ್ಟ್ರಾನಿಕ್ ಉತ್ಪನ್ನಗಳು ಸೇರಿದಂತೆ ಎಲ್ಲ ಬಗೆಯ ವಸ್ತುಗಳ ಮಾರಾಟಕ್ಕೆ ಇ-ಕಾರ್ಮಸ್ ಸಂಸ್ಥೆಗಳು ಸಿದ್ಧತೆ ಆರಂಭಿಸಿದ್ದವು.

    ದೆಹಲಿಯ ಪಿಜ್ಜಾ ಡೆಲಿವರಿ ಬಾಯ್‍ನಲ್ಲಿ ಸೋಂಕು ಕಂಡ ಬಂದ ಬೆನ್ನಲೆ ಇ-ಕಾಮರ್ಸ್ ಗೆ ವಿನಾಯಿತಿ ನೀಡಿದ್ದಕ್ಕೆ ಹಲವು ವಿರೋಧಗಳು ಕೇಳಿ ಬಂದಿತ್ತು. ಇದರಿಂದ ಎಚ್ಚೇತ್ತುಕೊಂಡ ಕೇಂದ್ರ ಸರ್ಕಾರ ನಿಯಮ ಬದಲಿಸುವ ಮೂಲಕ ಯೂಟರ್ನ್ ಹೊಡೆದಿದೆ.

  • ಟಿಕೆಟ್ ಬುಕ್ಕಿಂಗ್ ಬೇಡ – ಮೇ 3ರ ಬಳಿಕವೂ ರೈಲು, ವಿಮಾನ ಸಂಚಾರ ಅನುಮಾನ

    ಟಿಕೆಟ್ ಬುಕ್ಕಿಂಗ್ ಬೇಡ – ಮೇ 3ರ ಬಳಿಕವೂ ರೈಲು, ವಿಮಾನ ಸಂಚಾರ ಅನುಮಾನ

    – ಕೇಂದ್ರದಿಂದ ವಿಮಾನಯಾನ ಸಂಸ್ಥೆಗಳಿಗೆ ಸೂಚನೆ

    ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಮೇ 3ರ ಲಾಕ್‍ಡೌನ್ ಅಂತ್ಯದ ಬಳಿಕವೂ ಬಸ್, ರೈಲು, ವಿಮಾನ ಸಂಚಾರ ಅನುಮಾನ ಎನ್ನಲಾಗುತ್ತಿದೆ. ಮೇ 3ರ ಬಳಿಕ ಟಿಕೆಟ್ ಬುಕ್ಕಿಂಗ್ ಆರಂಭಿಸದಂತೆ ವಿಮಾನಯಾನ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

    ಮೇ 4ರಿಂದ ಆಯ್ದ ಕೆಲವು ನಗರಗಳಿಗೆ ದೇಶಿಯ ವಿಮಾನಗಳ ಹಾರಾಟ ಮತ್ತು ಜೂನ್ 1ರಿಂದ ಅಂತರರಾಷ್ಟ್ರೀಯ ವಿಮಾನಗಳಗಳ ಹಾರಾಟ ಪುನಾರಂಭವಾಗಲಿದ್ದು, ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬಹುದು ಎಂದು ವಿಮಾನಯಾನ ಸಂಸ್ಥೆಗಳು ಜಾಹೀರಾತು ನೀಡಿದ್ದವು.

    ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಶನಿವಾರ ಕೇಂದ್ರ ಸಚಿವರ ಸಭೆಯಲ್ಲಿ ವಿಮಾನ ಮತ್ತು ರೈಲುಗಳ ಸಂಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಂಚಾರ ಆರಂಭಿಸದಿರಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಿಫಾರಸು ಮಾಡಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆಯ ಅಂತಿಮ ಸ್ಪಷ್ಟನೆ ಬಳಿಕವೇ ಅಂತಿಮ ನಿರ್ಧಾರಗಳನ್ನು ಪ್ರಕಟಿಸಲಿ ಎಂದು ಸಚಿವರ ತಂಡ ಅಭಿಪ್ರಾಯ ವ್ಯಕ್ತಪಡಿಸಿದೆ.

    ಸಭೆ ಬಳಿಕ ಈ ಬಗ್ಗೆ ಟ್ವಿಟ್ ಮಾಡಿರುವ ಸಚಿವ ಹರ್ದೀಪ್ ಸಿಂಗ್ ಪುರಿ, ದೇಶಿಯ ಮತ್ತು ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ಬಗ್ಗೆ ಯಾವುದೇ ನಿಲುವು ಕೇಂದ್ರ ವಿಮಾನಯಾನ ಸಚಿವಾಲಯ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಿಯಮಗಳು ಬಹುತೇಕ ರೈಲು ಪ್ರಯಾಣಕ್ಕೂ ಅನ್ವಯ ಆಗಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

    ಈ ಹಿಂದೆ ಖಾಸಗಿ ವಿಮಾನಯಾನ ಸಂಸ್ಥೆಗಳ ಜೊತೆ ಸಭೆ ನಡೆಸಿದ್ದ ಕೇಂದ್ರ ಸರ್ಕಾರ ಮಾರ್ಚ್ 24ರಿಂದ ಮೇ 3ರವರೆಗೂ ಮಾಡಿರುವ ಎಲ್ಲ ಮುಂಗಡ ಟಿಕೆಟ್‍ಗಳ ಹಣ ಮರುಪಾವತಿ ಮಾಡಲು ಸೂಚನೆ ನೀಡಿತ್ತು.

  • ಈ ವೇಳೆ ವಿಪಕ್ಷ ಹೇಗಿರಬೇಕೆಂದು ರಾಹುಲ್ ಗಾಂಧಿ ತೋರಿಸಿದ್ದಾರೆ: ಶಿವಸೇನೆ

    ಈ ವೇಳೆ ವಿಪಕ್ಷ ಹೇಗಿರಬೇಕೆಂದು ರಾಹುಲ್ ಗಾಂಧಿ ತೋರಿಸಿದ್ದಾರೆ: ಶಿವಸೇನೆ

    – ರಾಹುಲ್ ಗಾಂಧಿಯನ್ನು ಹಾಡಿಹೊಗಳಿದ ಸೇನೆ

    ಮುಂಬೈ: ದೇಶ ಸಂಕಷ್ಟಕ್ಕೆ ಸಿಲುಕಿರುವ ಈ ಸಮಯದಲ್ಲಿ ವಿರೋಧ ಪಕ್ಷ ಹೇಗೆ ವರ್ತಿಸಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೋರಿಸಿಕೊಟ್ಟಿದ್ದಾರೆ ಎಂದು ರಾಹುಲ್ ನಡೆಯನ್ನು ಶಿವಸೇನೆ ಮೆಚ್ಚಿಕೊಂಡಿದೆ.

    ಈ ವಿಚಾರವಾಗಿ ಪಕ್ಷದ ಮುಖವಾಣಿ ಸಾಮ್ನಾದಲ್ಲಿ ದೇಶದ ಹಿತಾಸಕ್ತಿಗಾಗಿ ರಾಹುಲ್ ಗಾಂಧಿ ಅವರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು, ಕೊರೊನಾ ಸಾಂಕ್ರಾಮಿಕ ರೋಗದ ಬಗ್ಗೆ ಕುಳಿತು ಚರ್ಚಿಸಬೇಕು. ರಾಹುಲ್ ಗಾಂಧಿ ಮತ್ತು ಮೋದಿ ಅವರ ರಾಜಕೀಯ ಹಿತಾಸಕ್ತಿಗಳು ಬೇರೆ ಇರಬಹುದು. ಆದರೆ ಇದು ಜಗಳವಾಡುವ ಸಮಯವಲ್ಲ ದೇಶವು ಒಗ್ಗಟ್ಟಿನಿಂದ ಈ ರೋಗದ ವಿರುದ್ಧ ಹೋರಾಡಬೇಕು ಎಂದು ಬರೆದುಕೊಂಡಿದೆ.

    ಜನರಲ್ಲಿ ರಾಹುಲ್ ಗಾಂಧಿ ಬಗ್ಗೆ ಬೇರೆ ಅಭಿಪ್ರಾಯಗಳಿವೆ. ಹಾಗೆಯೇ ಪಿಎಂ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಬಗ್ಗೆಯೂ ಬೇರೆ ಬೇರೆ ಅಭಿಪ್ರಾಯಗಳಿವೆ. ಬಿಜೆಪಿ ಪಾರ್ಟಿ ಅರ್ಧದಷ್ಟು ಯಶಸ್ಸನ್ನು ರಾಹುಲ್ ಗಾಂಧಿಯವರನ್ನು ತೆಗಳುವುದಿರಿಂದ ಪಡೆದುಕೊಂಡಿದೆ. ಇದು ಇಂದಿಗೂ ಮುಂದುವರಿದಿದೆ. ಆದರೆ ಈಗ ದೇಶದಲ್ಲಿರುವ ಬಿಕ್ಕಟ್ಟಿನ ನಡುವೆ ರಾಹುಲ್ ಗಾಂಧಿಯವರು ತೆಗೆದುಕೊಂಡ ನಿಲುವುಗಳನ್ನು ನಾವು ಪ್ರಶಂಸಿಸಬೇಕಾಗಿದೆ ಎಂದು ಶಿವಸೇನೆ ಹೇಳಿದೆ.

    ದೇಶವು ಕೊರೊನಾ ವೈರಸ್ ನಿಂದ ಬಿಕ್ಕಟ್ಟಿನಲ್ಲಿ ಸಿಲುಕಿದ ಸಮಯದಲ್ಲಿ ರಾಹುಲ್ ಗಾಂಧಿ ಅವರು ವಿರೋಧ ಪಕ್ಷ ಹೇಗೆ ವರ್ತಿಸಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ರಾಹುಲ್ ಗಾಂಧಿಯವರು ಈ ನಿಲುವುಗಳಿಂದ ಒಂದು ಮಾದರಿಯಾಗಿ ನಿಂತಿದ್ದಾರೆ. ಜೊತೆಗೆ ಮೊದಲಿನಿಂದಲೂ ಕೊರೊನಾ ವೈರಸ್ ಬಗ್ಗೆ ಕೇಂದ್ರಕ್ಕೆ ಎಚ್ಚರಿಕೆ ಕೊಡುತ್ತಾ ಬಂದಿದ್ದಾರೆ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ತಿಳಿಸಿದೆ.

    ಬಿಜೆಪಿಯವರು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬೀಳಿಸುವ ತವಕದಲ್ಲಿ ಇದ್ದರೆ, ಆಗಲೇ ರಾಹುಲ್ ಗಾಂಧಿ ಕೊರೊನಾ ವೈರಸ್ ಅನ್ನು ನಿಭಾಯಿಸುವ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದರು. ಜೊತೆಗೆ ಕೊರೊನಾ ವೈರಸ್ ರೋಗಿಗಳ ಚಿಕಿತ್ಸೆಗೆ ಅಗತ್ಯವಾದ ವೈದ್ಯಕೀಯ ಉಪಕರಣಗಳ ರಫ್ತು ಮಾಡುವುದನ್ನು ನಿಲ್ಲಿಸುವಂತೆ ರಾಹುಲ್ ಗಾಂಧಿ ಪದೇ ಪದೇ ಸರ್ಕಾರವನ್ನು ಒತ್ತಾಯಿಸುತ್ತಿದ್ದರು ಎಂದು ಸೇನಾ ತನ್ನ ಮುಖವಾಣಿಯಲ್ಲಿ ಬರೆದುಕೊಂಡಿದೆ.

    ಗುರುವಾರ ಮಾತನಾಡಿದ್ದ ರಾಹುಲ್ ಗಾಂಧಿ, ಕೊರೊನಾ ವೈರಸ್ ದೇಶದ ಆರೋಗ್ಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಎರಡು ದೊಡ್ಡ ಸಮಸ್ಯೆಗಳನ್ನು ಸೃಷ್ಟಿಸಿದೆ. ಆರೋಗ್ಯದ ಜೊತೆಗೆ ಆರ್ಥಿಕತೆ ಮೇಲೆ ಸರ್ಕಾರ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದರು. ಜೊತೆಗೆ ನಾನು ಈ ಸಮಯದಲ್ಲಿ ಕೇಂದ್ರ ಸರ್ಕಾರದ ತಪ್ಪುಗಳನ್ನು ಹುಡುಕಲು ಹೋಗುವುದಿಲ್ಲ. ಬದಲಿಗೆ ಕೊರೊನಾ ವಿರುದ್ಧ ಹೋರಾಡಲು ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಹೇಳಿದ್ದರು.

    ಕೊರೊನಾ ವಿಚಾರದಲ್ಲಿ ಲಾಕ್‍ಡೌನ್ ಒಂದೇ ಮುಖ್ಯವಲ್ಲ. ಇದರೊಂದಿಗೆ ಕೊರೊನಾ ಪರೀಕ್ಷೆಗಳನ್ನು ಹೆಚ್ಚು ಮಾಡಬೇಕು. ಹಾಟ್‍ಸ್ಪಾಟ್, ನಾನ್ ಹಾಟ್‍ಸ್ಪಾಟ್ ವಲಯಗಳಲ್ಲಿ ಕ್ಷಿಪ್ರವಾಗಿ ಟೆಸ್ಟಿಂಗ್‍ಗಳು ನಡೆಯಬೇಕು. ವೈರಸ್ ಹರಡುವ ವೇಗದಲ್ಲೇ ನಮ್ಮ ಪರೀಕ್ಷೆಗಳು ನಡೆದಾಗ ಮಾತ್ರ ಕೊರೊನಾ ನಿಯಂತ್ರಿಸಲು ಸಾಧ್ಯವಾಗುತ್ತದೆ. ದೇಶದ ಪ್ರತಿ ಜಿಲ್ಲೆಯಲ್ಲಿ ಅಂದಾಜು 350 ಟೆಸ್ಟ್ ಗಳು ನಡೆದಿದೆ. ಆದರೆ ಕೊರೊನಾ ವೈರಸ್ ಪ್ರಭಾವ ಮುಂದೆ ಇದು ಅತಿ ಕಡಿಮೆ ಟೆಸ್ಟ್ ಗಳಾಗಿದ್ದು, ಸರ್ಕಾರ ಟೆಸ್ಟಿಂಗ್ ವಿಚಾರದಲ್ಲಿ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದರು.

  • ಆನ್‍ಲೈನ್‍ನಲ್ಲಿ ಮೊಬೈಲ್, ಟಿವಿ, ಫ್ರಿಡ್ಜ್, ಗೃಹ ಬಳಕೆ ವಸ್ತುಗಳ ಮಾರಾಟಕ್ಕೆ ಅವಕಾಶ

    ಆನ್‍ಲೈನ್‍ನಲ್ಲಿ ಮೊಬೈಲ್, ಟಿವಿ, ಫ್ರಿಡ್ಜ್, ಗೃಹ ಬಳಕೆ ವಸ್ತುಗಳ ಮಾರಾಟಕ್ಕೆ ಅವಕಾಶ

    ನವದೆಹಲಿ: ಇ-ಕಾಮರ್ಸ್ ವೇದಿಕೆಯಲ್ಲಿ ಮೊಬೈಲ್, ಟಿವಿ, ಫ್ರಿಡ್ಜ್, ಲ್ಯಾಪ್‍ಟಾಪ್ ಹಾಗೂ ಸ್ಟೇಶನರಿ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಏಪ್ರಿಲ್ 20ರಿಂದ ಅಮೇಜಾನ್, ಫ್ಲಿಪ್‍ಕಾರ್ಟ್ ಹಾಗೂ ಸ್ನ್ಯಾಪ್‍ಡೀಲ್ ಕಂಪನಿಗಳು ಮಾರಾಟ ಪ್ರಕ್ರಿಯೆಯನ್ನು ಆರಂಭಿಸಲಿವೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಎಲೆಕ್ಟ್ರಾನಿಕ್ ವಸ್ತುಗಳಾದ ಮೊಬೈಲ್, ಟಿವಿ, ಲ್ಯಾಪ್‍ಟಾಪ್‍ಗಳು ಆನ್‍ಲೈನ್ ವೇದಿಕೆಯಲ್ಲಿ ದೊರೆಯಲಿವೆ. ಆದರೆ ಕಂಪನಿಗಳ ಡೆಲಿವರಿ ವಾಹನಗಳು ಆಯಾ ರಾಜ್ಯ ಸರ್ಕಾರಗಳಿಂದ ಅನುಮತಿ ಪಡೆಯಬೇಕಾಗುತ್ತದೆ. ಬುಧವಾರ ಕೇಂದ್ರ ಸರ್ಕಾರ ಹೊರಡಿಸಿದ ಮಾರ್ಗಸೂಚಿ ಪ್ರಕಾರ ಕಮರ್ಶಿಯಲ್ ಹಾಗೂ ಖಾಸಗಿ ಸಂಸ್ಥೆಗಳು ಕಾರ್ಯನಿರ್ವಹಿಸಬಹುದಾಗಿದೆ. ಇ-ಕಾಮರ್ಸ್ ಸಂಸ್ಥೆಗಳು ಆಯಾ ರಾಜ್ಯಗಳ ಸರ್ಕಾರದಿಂದ ಅನುಮತಿ ಪಡೆದು ಡೆಲಿವರಿ ವಾಹನಗಳನ್ನು ರೋಡಿಗಿಳಿಸಬಹುದಾಗಿದೆ.

    ಆರಂಭದಲ್ಲಿ ಆಹಾರ, ಔಷಧಿಯಂತಹ ಅಗತ್ಯ ವಸ್ತುಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಆದರೆ ಬುಧವಾರ ಹೊರಡಿಸಲಾದ ಮಾರ್ಗಸೂಚಿಯಲ್ಲಿ ಅಗತ್ಯ, ಅನಗತ್ಯ ವಸ್ತುಗಳು ಎಂದು ವಿಭಾಗಿಸಲಾಗಿಲ್ಲ. ಹೀಗಾಗಿ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ಈ ಕುರಿತು ಸ್ಪಷ್ಟನೆ ನೀಡಿದ್ದು, ಎಲೆಕ್ಟ್ರಾನಿಕ್ ವಸ್ತುಗಳನ್ನೂ ಮಾರಾಟ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.