Tag: Central Government

  • ಮೇ 15ರಿಂದ ಒಂದೇ ಭಾರತ್ ಮಿಷನ್ 2.0

    ಮೇ 15ರಿಂದ ಒಂದೇ ಭಾರತ್ ಮಿಷನ್ 2.0

    – 7 ದೇಶದಿಂದ ಅನಿವಾಸಿ ಭಾರತೀಯರು ತಾಯ್ನಾಡಿಗೆ

    ನವದೆಹಲಿ: ಕೊರೊನಾ ಸಂಕಷ್ಟದಲ್ಲಿ ವಿದೇಶದಲ್ಲಿರುವ ಅನಿವಾಸಿ ಭಾರತೀಯರ ನೆರವಿಗೆ ಕೇಂದ್ರ ಸರ್ಕಾರ ನಿಂತಿದೆ. ಮೊದಲ ಹಂತದಲ್ಲಿ 15 ಸಾವಿರ ಜನರನ್ನು ಕರೆತರಲು ಮುಂದಾಗಿರುವ ಸರ್ಕಾರ ಈಗ ಎರಡನೇ ಹಂತದಲ್ಲಿದೆ ಮತ್ತಷ್ಟು ದೇಶಗಳಿಂದ ಭಾರತೀಯರನ್ನು ಕರೆತರುವ ಸಾಧ್ಯತೆ ಇದೆ.

    ಮುಂದುವರಿದ ದೇಶಗಳಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಅಲ್ಲಿರುವ ಭಾರತೀಯರು ತಾಯ್ನಾಡಿಗೆ ಮರಳಲು ಹಂಬಲಿಸುತ್ತಿದ್ದಾರೆ. ಇಂತಹ ಅನಿವಾಸಿ ಭಾರತೀಯರ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಿತ್ತು. ಒಂದೇ ಭಾರತ್ ಮಿಷನ್ ಮತ್ತು ಸಮುದ್ರ ಸೇತು ಹೆಸರಿನಲ್ಲಿ 12 ದೇಶಗಳಲ್ಲಿರುವ ಅನಿವಾಸಿ ಭಾರತೀಯರನ್ನು 64 ವಿಶೇಷ ವಿಮಾನಗಳು ಹಾಗೂ 11 ಹಡಗುಗಳ ಮೂಲಕ ಸುಮಾರು 15 ಸಾವಿರ ಜನರನ್ನು ವಾಪಸ್ ಕರೆತರುವ ಕೆಲಸವನ್ನು ಈಗಾಗಲೇ ಆರಂಭಿಸಿದೆ. ಮೊದಲ ಹಂತದ ಈ ಮೇಗಾ ಏರ್ ಲಿಫ್ಟ್ ಕಾರ್ಯಾಚರಣೆ ಮೇ 13 ರಂದು ಅಂತ್ಯವಾಗಲಿದೆ.

    ತಾಯ್ನಾಡಿಗೆ ಭಾರತೀಯರನ್ನು ಕರೆಸಿಕೊಳ್ಳುತ್ತಿದ್ದಂತೆ ಭಾರತಕ್ಕೆ ಬರಲು ಮತ್ತಷ್ಟು ಅನಿವಾಸಿ ಭಾರತೀಯರು ಮುಂದಾಗಿದ್ದಾರೆ. ರಷ್ಯಾ, ಜರ್ಮನಿ, ಥೈಲ್ಯಾಂಡ್, ಫ್ರಾನ್ಸ್, ಸ್ಪೇನ್, ವಾಸವಾಗಿರುವ ಸಾವಿರಾರು ಜನರು ಸರ್ಕಾರಕ್ಕೆ ವಾಪಸ್ ಕರೆಸಿಕೊಳ್ಳಲು ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಎರಡನೇ ಹಂತದಲ್ಲಿ ಒಂದೇ ಭಾರತ್ ಮಿಷನ್ ವಿಸ್ತರಿಸಲು ಮುಂದಾಗಿದ್ದು, ಮೇ.15 ಬಳಿಕ ಮತ್ತೊಂದು ದೊಡ್ಡ ಕಾರ್ಯಚರಣೆಯನ್ನು ಕೇಂದ್ರ ಆರಂಭಿಸುವ ಸಾಧ್ಯತೆ ಇದೆ.

    ಏಳು ಹೊರ ದೇಶಗಳಲ್ಲಿರುವ ಸುಮಾರು 60 ಸಾವಿರ ಭಾರತೀಯರು ದೇಶದ ಹತ್ತು ವಿವಿಧ ರಾಜ್ಯಗಳಿಗೆ ತಲುಪಿಸುವಂತೆ ಮನವಿ ಮಾಡಿದ್ದಾರೆ.
    ಕರ್ನಾಟಕ – 2,786
    ಕೇರಳ – 25,246
    ತಮಿಳುನಾಡು – 6,617
    ಮಹಾರಾಷ್ಟ್ರ – 4,341
    ಉತ್ತರ ಪ್ರದೇಶ – 3,715


    ರಾಜಸ್ಥಾನ – 3,320
    ತೆಲಂಗಾಣ – 2,796
    ಆಂಧ್ರಪ್ರದೇಶ – 2,445
    ಗುಜರಾತ್ – 2,330
    ದೆಹಲಿ – 2,232

    ಹೀಗೆ ಹತ್ತು ರಾಜ್ಯಗಳಿಂದ 60 ಸಾವಿರ ಭಾರತೀಯರು ಮನವಿ ಮಾಡಿಕೊಂಡಿದ್ದು, ವೃದ್ಧರು ವಿದ್ಯಾರ್ಥಿಗಳು, ಉದ್ಯೋಗಿಗಳು, ವಲಸೆ ಕಾರ್ಮಿಕರು ಒಳಗೊಂಡಿದ್ದಾರೆ. ಈ ಪೈಕಿ ಆದ್ಯತೆ ಮೇರೆಗೆ ಅವರನ್ನು ಕರೆತರಲು ಸರ್ಕಾರ ಮುಂದಾಗುವ ಸಾಧ್ಯತೆ ಇದೆ.

  • ಪೆಟ್ರೋಲ್ 10 ರೂ., ಡೀಸೆಲ್ 13 ರೂ.ಅಬಕಾರಿ ಸುಂಕ ಏರಿಕೆ

    ಪೆಟ್ರೋಲ್ 10 ರೂ., ಡೀಸೆಲ್ 13 ರೂ.ಅಬಕಾರಿ ಸುಂಕ ಏರಿಕೆ

    ನವದೆಹಲಿ: ಲಾಕ್‍ಡೌನ್ ಬಿಗ್ ರಿಲೀಫ್ ಸಿಕ್ಕಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕ ಹೆಚ್ಚಳ ಮಾಡಿ ಆರ್ಥಿಕತೆಗೆ ಆದಾಯ ತುಂಬಿಸುವ ಕೆಲಸ ಮಾಡಿದೆ.

    ಒಂದು ಲೀಟರ್ ಪೆಟ್ರೋಲ್ ಮೇಲೆ 8 ರೂ. ರಸ್ತೆ ಮತ್ತು ಮೂಲಸೌಕರ್ಯ ಸೆಸ್, 2 ರೂ. ವಿಶೇಷ ಅಬಕಾರಿ ಸುಂಕ ಹೇರಿದೆ.

    ಪತಿ ಲೀಟರ್ ಡೀಸೆಲ್ ಮೆಲೆ 8 ರೂ. ರಸ್ತೆ ಮತ್ತು ಮೂಲಸೌಕರ್ಯ ಸೆಸ್ ಹೇರಿದರೆ, 5 ರೂ. ವಿಶೇಷ ಅಬಕಾರಿ ಸುಂಕ ಹೇರಲಾಗಿದೆ. ಪರಿಷ್ಕೃತ ಪೆಟ್ರೋಲ್, ಡೀಸೆಲ್ ದರ ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಅಬಕಾರಿ ಸುಂಕ ಏರಿಕೆಯಾದರೂ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

    ದೆಹಲಿ ಸರ್ಕಾರದಿಂದ ಏರಿಕೆ:
    ದೆಹಲಿ ಸರ್ಕಾರ ಪೆಟ್ರೋಲ್ ಮೇಲೆ ಶೇ.27 ಮತ್ತು ಡೀಸೆಲ್ ಮೇಲೆ ಶೇ.16.75 ವ್ಯಾಟ್ ನಿಗದಿ ಮಾಡಿತ್ತು. ಆದರೆ ಈಗ ಪಟ್ರೋಲ್ ಮೇಲೆ ಶೇ.30, ಡೀಸೆಲ್ ಮೇಲೆ ಶೇ.30ರಷ್ಟು ವ್ಯಾಟ್ ಏರಿಕೆ ಮಾಡಲಾಗಿದೆ.

    ವ್ಯಾಟ್ ಏರಿಕೆಯಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 1.67 ರೂ., ಡೀಸೆಲ್ ಬೆಲೆ 7.10 ರೂ. ಏರಿಕೆಯಾಗಿದೆ. ಪರಿಣಾಮ ದೆಹಲಿಯಲ್ಲಿ ಈಗ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 71.26 ರೂ.(ಹಿಂದಿನ ದರ 69.59) ಏರಿಕೆಯಾಗಿದ್ದರೆ ಪ್ರತಿ ಲೀಟರ್ ಡೀಸೆಲ್ ದರ 69.59 ರೂ.(62.29 ರೂ.) ಏರಿಕೆಯಾಗಿದೆ.

    ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಜಾರಿಯಾಗಿದ್ದರೂ ರಾಜ್ಯಗಳಿಗೆ ಹೆಚ್ಚಿನ ಆದಾಯ ತಂದುಕೊಡುವ ಪೆಟ್ರೋಲ್, ಡೀಸೆಲ್, ಮದ್ಯವನ್ನು ಪಟ್ಟಿಯಲ್ಲಿ ಕೈ ಬಿಡಲಾಗಿತ್ತು. ಪರಿಣಾಮ ಈ ವಸ್ತುಗಳ ಮೇಲೆ ರಾಜ್ಯಗಳಿಗೆ ತೆರಿಗೆ ವಿಧಿಸುವ ಅಧಿಕಾರವಿದೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಭಾರೀ ಇಳಿಕೆಯಾಗಿದೆ. ಹೀಗಾಗಿ ಭಾರತದಲ್ಲೂ ತೈಲ ಬೆಲೆ ಇಳಿಕೆಯಾಗಬೇಕಿತ್ತು. ಆದರೆ ರಾಜ್ಯ ಸರ್ಕಾರಗಳು ಲಾಕ್‍ಡೌನ್ ನಿಂದ ಆಗಿರುವ ನಷ್ಟವನ್ನು ಸರಿಪಡಿಸಲು ಪೆಟ್ರೋಲ್, ಡೀಸೆಲ್, ಮದ್ಯದ ಮೇಲೆ ತೆರಿಗೆ ವಿಧಿಸುತ್ತಿವೆ.

    ಹರ್ಯಾಣ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅನುಕ್ರಮವಾಗಿ 1 ರೂ., 1.1 ರೂ. ಏರಿಕೆ ಮಾಡಿತ್ತು. ತಮಿಳುನಾಡು ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮೇಲೆ 3.25 ರೂ., ಡೀಸೆಲ್ ಮೇಲೆ 2.50 ರೂ. ಏರಿಕೆ ಮಾಡಿದೆ.

  • ವಲಸಿಗರ ರೈಲ್ವೇ ಪ್ರಯಾಣ ಉಚಿತ, ಕಾಂಗ್ರೆಸ್ಸಿನಿಂದ ಸುಳ್ಳು ಆರೋಪ : ಬಿಜೆಪಿ ತಿರುಗೇಟು

    ವಲಸಿಗರ ರೈಲ್ವೇ ಪ್ರಯಾಣ ಉಚಿತ, ಕಾಂಗ್ರೆಸ್ಸಿನಿಂದ ಸುಳ್ಳು ಆರೋಪ : ಬಿಜೆಪಿ ತಿರುಗೇಟು

    ನವದೆಹಲಿ: ಕೊರೊನಾ ಸಮಯದಲ್ಲಿ ಮಹಾ ನಗರಗಳಲ್ಲಿ ಊರುಗಳಿಗೆ ತೆರಳುತ್ತಿರುವ ಕಾರ್ಮಿಕರಿಗೆ ರೈಲ್ವೇ ಟಿಕೆಟ್ ವಿಧಿಸುತ್ತಿರುವ ವಿಚಾರ ಕಾಂಗ್ರೆಸ್, ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

    ಕೇಂದ್ರ ಸರ್ಕಾರಕ್ಕೆ ದುಡ್ಡು ಇಲ್ಲದೇ ಇದ್ದರೆ ನಾವು ಪಾವತಿಸುತ್ತೇವೆ ಎಂದು ಕಾಂಗ್ರೆಸ್ ಹೇಳಿದರೆ ಬಿಜೆಪಿ, ಕೇಂದ್ರದ ವಿರುದ್ಧ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ. ರೈಲ್ವೇ ಪ್ರಯಾಣಿಕರಿಂದ ಯಾವುದೇ ಹಣವನ್ನು ಪಡೆಯುವುದಿಲ್ಲ ಎಂದು ಹೇಳಿದೆ.

    ಈ ಸಂಬಂಧ ಬಿಜೆಪಿ ಐಟಿ ಸೆಲ್ ಅಧ್ಯಕ್ಷ ಅಮಿತ್ ಮಾಳವೀಯ ಪ್ರತಿಕ್ರಿಯಿಸಿ, ಮೇ 2 ರಂದೇ ಗೃಹ ಸಚಿವಾಲಯ ಹೊರಡಿಸಿದ ಆದೇಶದಲ್ಲಿ ಯಾವುದೇ ಟಿಕೆಟ್ ಇರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಟಿಕೆಟ್ ವೆಚ್ಚದಲ್ಲಿ ಶೇ.85ರಷ್ಟು ಪಾಲನ್ನು ಭಾರತೀಯ ರೈಲ್ವೇ ಪಾವತಿಸಿದರೆ ಶೇ.15 ರಷ್ಟು ಹಣವನ್ನು ರಾಜ್ಯ ಸರ್ಕಾರಗಳು ಪಾವತಿಸುತ್ತದೆ. ವಲಸಿಗರು ಹಣ ಪಾವತಿಸಬೇಕಿಲ್ಲ. ಯಾಕೆ ಸೋನಿಯಾ ಗಾಂಧಿ ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳು ಪಾವತಿಸಬೇಕು ಎಂದು ಕೇಳುವುದಿಲ್ಲ ಎಂಬುದಾಗಿ ಪ್ರಶ್ನಿಸಿದ್ದಾರೆ. ಇದನ್ನು ಓದಿ: ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದ ವೆಚ್ಚವನ್ನು ಕಾಂಗ್ರೆಸ್ ನೀಡುತ್ತೆ: ಸೋನಿಯಾ ಗಾಂಧಿ

    ಆದೇಶದಲ್ಲಿ ಏನಿದೆ?
    ರೈಲ್ವೇ ಕೇವಲ ಪ್ರಯಾಣಿಕರನ್ನು ಸಾಗಿಸುತ್ತದೆ ಹೊರತು ಪೂರ್ಣ ಪ್ರಮಾಣದ ಸಂಚಾರ ಇರುವುದಿಲ್ಲ. ಕೆಲವು ವಿಶೇಷ ರೈಲುಗಳು ರಾಜ್ಯ ಸರ್ಕಾರಗಳ ವಿನಂತಿಯ ಮೇಲೆ ಓಡಿಸಲಾಗುತ್ತದೆ. ಎಲ್ಲ ಪ್ರಯಾಣಿಕ ಮತ್ತು ಸಬ್ ಅರ್ಬನ್ ರೈಲುಗಳ ಸಂಚಾರ ಇರುವುದಿಲ್ಲ ಎಂಬ ಅಂಶ ಮೇ 2 ರಂದು ಪ್ರಕಟಿಸಲಾದ ಆದೇಶದಲ್ಲಿದೆ. ಇದನ್ನು ಓದಿ: ನಮಸ್ತೆ ಟ್ರಂಪ್‍ಗೆ 100 ಕೋಟಿ ಖರ್ಚು ಮಾಡ್ತಾರೆ, ಆದ್ರೆ ಕಾರ್ಮಿಕರಿಗೆ ಟಿಕೆಟ್ ಹಣ ಕೇಳ್ತಾರೆ: ಪ್ರಿಯಾಂಕಾ ಗಾಂಧಿ

    ಈ ಸಂಬಂಧ ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯಿಸಿ, ನಾನು ಪಿಯೂಶ್ ಗೋಯಲ್ ಅವರ ಕಚೇರಿಯನ್ನು ಸಂಪರ್ಕಿಸಿದೆ. ಕೇಂದ್ರ ಸರ್ಕಾರ ಶೇ.85 ರಷ್ಟು ಹಣವನ್ನು ರಾಜ್ಯ ಸರ್ಕಾರ ಶೇ.15 ರಷ್ಟು ಹಣವನ್ನು ಪಾವತಿಸುತ್ತದೆ. ವಲಸಿಗರು ಉಚಿತವಾಗಿ ತೆರಳುತ್ತಾರೆ. ಈ ಸಂಬಂಧ ರೈಲ್ವೇ ಸಚಿವಾಲಯ ಅಧಿಕೃತವಾಗಿ ತಿಳಿಸಲಿದೆ ಎಂದು ಟ್ವೀಟ್ ಮಾಡಿದ್ದಾರೆ.

  • ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದ ವೆಚ್ಚವನ್ನು ಕಾಂಗ್ರೆಸ್ ನೀಡುತ್ತೆ: ಸೋನಿಯಾ ಗಾಂಧಿ

    ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದ ವೆಚ್ಚವನ್ನು ಕಾಂಗ್ರೆಸ್ ನೀಡುತ್ತೆ: ಸೋನಿಯಾ ಗಾಂಧಿ

    ನವದೆಹಲಿ: ಲಾಕ್‍ಡೌನ್‍ನಿಂದ ನಗರಗಳಿಗೆ ಕೆಲಸ ಅರಸಿ ವಲಸೆ ಬಂದಿದ್ದ ಕಾರ್ಮಿಕರು ತಮ್ಮೂರಿಗೆ ವಾಪಸ್ ಹೋಗಲು ಕಷ್ಟಪಡುತ್ತಿದ್ದಾರೆ. ಹೀಗಾಗಿ ದೇಶದ ವಿವಿಧ ರಾಜ್ಯಗಳಿಂದ ತಮ್ಮ ಊರುಗಳಿಗೆ ಹೋಗುತ್ತಿರುವ ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದ ವೆಚ್ಚವನ್ನು ಕಾಂಗ್ರೆಸ್ ಭರಿಸುವುದು ಎಂದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

    ಈ ಬಗ್ಗೆ ಸೋನಿಯಾ ಗಾಂಧಿ ಅವರು ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಗೆ ಆದೇಶ ಹೊರಡಿಸಿದ್ದಾರೆ. ವಲಸೆ ಕಾರ್ಮಿಕರಿಗೆ ಅವರ ಊರುಗಳಿಗೆ ವಾಪಸ್ ಹೋಗಲು ರೈಲ್ವೆ ಪ್ರಯಾಣದ ವೆಚ್ಚವನ್ನು ಭರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ಉಚಿತ ಬಸ್ ಸಂಚಾರಕ್ಕಾಗಿ 1 ಕೋಟಿ ದೇಣಿಗೆ ಕೊಟ್ಟ ಕೆಪಿಸಿಸಿ

    ದೇಶದ ಬಡವರು ಕಷ್ಟದಲ್ಲಿರುವಾಗ ಅವರಿಗೆ ಕಾಂಗ್ರೆಸ್ ಪಕ್ಷ ಮಾಡುತ್ತಿರುವ ಕೊಡುಗೆಯಿದು. ಈ ಸಮಯದಲ್ಲಿ ಕಾರ್ಮಿಕರ ನೆರವಿಗೆ ನಿಲ್ಲಬೇಕಾಗಿದೆ. ವಿದೇಶಗಳಲ್ಲಿ ಸಿಲುಕಿ ಹಾಕಿಕೊಂಡಿರುವ ಪ್ರಜೆಗಳನ್ನು ಭಾರತಕ್ಕೆ ಕರೆತರಲು ಸರ್ಕಾರ ಆಸಕ್ತಿ ತೋರುತ್ತದೆ. ಆದರೆ ನಮ್ಮ ದೇಶದಲ್ಲಿರುವ ಬಡ, ನಿರ್ಗತಿಕ ವಲಸೆ ಕಾರ್ಮಿಕರ ಬಗ್ಗೆ ಯಾಕೆ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ ಎಂದು ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ.

    ಅಷ್ಟೇ ಅಲ್ಲದೆ ವಲಸೆ ಕಾರ್ಮಿಕರಿಗೆ ರೈಲಿನಲ್ಲಿ ಉಚಿತವಾಗಿ ಅವರ ಊರುಗಳಿಗೆ ಕಳುಹಿಸಿ ಎಂದು ಕಾಂಗ್ರೆಸ್ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮತ್ತು ರೈಲ್ವೆ ಸಚಿವಾಲಯಗಳಿಗೆ ಮನವಿ ಮಾಡಿದೆ. ಆದರೂ ಈ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದಾರೆ.

  • ಪ್ರಧಾನಿ ಮೋದಿ ಸರಣಿ ಸಭೆ – ಲಾಕ್‍ಡೌನ್ ವಿಸ್ತರಣೆ ಬೆನ್ನಲ್ಲೇ ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ

    ಪ್ರಧಾನಿ ಮೋದಿ ಸರಣಿ ಸಭೆ – ಲಾಕ್‍ಡೌನ್ ವಿಸ್ತರಣೆ ಬೆನ್ನಲ್ಲೇ ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ

    ನವದೆಹಲಿ: ಮೇ 17ರವರೆಗೂ ಲಾಕ್‍ಡೌನ್ ವಿಸ್ತರಣೆ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಸಚಿವರು ಹಾಗೂ ಪ್ರಮುಖ ಅಧಿಕಾರಿಗಳ ಜೊತೆಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ಹೀಗಾಗಿ ಆರ್ಥಿಕ ಉತ್ತೇಜನಕ್ಕೆ ಮತ್ತೊಂದು ಆರ್ಥಿಕ ಪ್ಯಾಕೇಜ್ ಬಿಡುಗಡೆ ಮಾಡಬಹುದು ಎಂದು ಮೂಲಗಳು ಹೇಳುತ್ತಿವೆ.

    ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲ ಸೀತರಾಮನ್, ಅತಿ ಸಣ್ಣ, ಸಣ್ಣ ಹಾಗೂ ಮದ್ಯಮ ಉದ್ದಿಮೆಗಳ ಸಚಿವರು, ಕೃಷಿ ಇಲಾಖೆಯ ಅಧಿಕಾರಿಗಳ ಜೊತೆಗೆ ನರೇಂದ್ರ ಮೋದಿ ವಿಸ್ತ್ರತ ಚರ್ಚೆ ನಡೆಸಿದ್ದಾರೆ. ಸಭೆ ಹಿನ್ನೆಲೆ ಶುಕ್ರವಾರದಂದು ಮಾಸಿಕ ಜಿಎಸ್‍ಟಿ ಸಂಗ್ರಹ ಸಂಖ್ಯೆಯ ಮಾಹಿತಿ ನೀಡುವುದನ್ನು ಕೇಂದ್ರ ಹಣಕಾಸು ಸಚಿವಾಲಯವು ಮುಂದೂಡಿತ್ತು. ಈಗ ದೇಶದ ಆರ್ಥಿಕತೆಯನ್ನು ಉತ್ತೇಜಿಸಲು ಯೋಜಿಸಿರುವ ಹಲವಾರು ಉಪಕ್ರಮಗಳ ಬಗ್ಗೆ ನಿರ್ಮಲ ಸೀತರಾಮನ್ ಪ್ರಧಾನಿ ಅವರಿಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.

    ಈಗಾಗಲೇ ನಾಗರಿಕ ವಿಮಾನಯಾನ, ಕಾರ್ಮಿಕ ಹಾಗೂ ವಿದ್ಯುತ್ ಸೇರಿದಂತೆ ವಿವಿಧ ಸಚಿವಾಲಯದೊಂದಿಗೆ ಚರ್ಚೆ ನಡೆಸಲಾಗಿದೆ. ದೇಶಿ, ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವುದು ಮತ್ತು ದೇಶದಲ್ಲಿ ಸಣ್ಣ ಉದ್ಯಮಗಳಿಗೆ ಪುನರುಜ್ಜೀವನ ನೀಡುವ ಬಗ್ಗೆ ವಾಣಿಜ್ಯ ಹಾಗೂ ಎಂಎಸ್‍ಎಂಇ ಸಚಿವಾಲಯದೊಂದಿಗೆ ವಿಸೃತವಾದ ಚರ್ಚೆ ನಡೆಸಲಾಗಿದೆ.

    ಮಾರ್ಚ್ ತಿಂಗಳ ಅಂತ್ಯದಲ್ಲಿ ಕೇಂದ್ರ ಸರ್ಕಾರವು 1.7 ಲಕ್ಷ ಕೋಟಿ ರೂಪಾಯಿಗಳ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿತ್ತು. ಈ ಪ್ಯಾಕೇಜ್‍ನಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತೆ ಅನೇಕ ಯೋಜನೆಗಳನ್ನು ಪ್ರಕಟಿಸಲಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರದ ಎರಡನೇ ಪ್ಯಾಕೇಜ್‍ನಲ್ಲಿ ಆರ್ಥಿಕತೆ ಚೇತರಿಕೆಗೆ ಟಾನಿಕ್ ನೀಡಬಹುದು ಎಂದು ಅಂದಾಜಿಸಲಾಗಿದೆ.

  • ಸಾರ್ವಜನಿಕ, ಕೆಲಸದ ಸ್ಥಳಗಳಲ್ಲೂ ಕಠಿಣ ರೂಲ್ಸ್

    ಸಾರ್ವಜನಿಕ, ಕೆಲಸದ ಸ್ಥಳಗಳಲ್ಲೂ ಕಠಿಣ ರೂಲ್ಸ್

    ಬೆಂಗಳೂರು: ಲಾಕ್‍ಡೌನ್ ಮುಗಿಯಲು ಇನ್ನೆರಡೇ ದಿನ ಬಾಕಿ ಇರುವಾಗಲೇ ಕೇಂದ್ರ ಸರ್ಕಾರ ಮೂರನೇ ಬಾರಿಗೆ ಲಾಕ್‍ಡೌನ್ ವಿಸ್ತರಿಸಿದೆ. ಆದರೆ ಲಾಕ್‍ಡೌನ್ ಮೂರರಲ್ಲಿ ಹೆಚ್ಚುವರಿ ನಿರ್ಬಂಧಗಳಿದ್ದು, ಈ ಬಾರಿ ಸಾರ್ವಜನಿಕ ಪ್ರದೇಶಗಳಲ್ಲೂ ರೂಲ್ಸ್ ಜಾರಿ ಮಾಡಲಾಗಿದೆ.

    ಕೊರೊನಾದ ಮೂರನೇ ಲಾಕ್‍ಡೌನ್‍ನಲ್ಲಿ ಸಾರ್ವಜನಿಕ ಸ್ಥಳಗಳಲ್ಲೂ ಕಠಿಣ ನಿರ್ಬಂಧ ಹೇರಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಬೇಕಾಬಿಟ್ಟಿ ಓಡಾಡುವಂತಿಲ್ಲ. ಓಡಾಡಿದರೆ ಮಾಸ್ಕ್ ಧರಿಸಿರಲೇಬೇಕು, ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡಿರಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

    ಸಾರ್ವಜನಿಕ ಸ್ಥಳಗಳಲ್ಲಿ ರೂಲ್ಸ್:
    * ಮಾಸ್ಕ್ ಧರಿಸೋದು ಕಡ್ಡಾಯ
    * ಸಾಮಾಜಿಕ ಅಂತರ ಪಾಲನೆ (ಸಾರ್ವಜನಿಕ ಸ್ಥಳ, ಸಮೂಹ ಸಾರಿಗೆಗೆ ಅನ್ವಯ)
    * 5 ಅಥವಾ 5ಕ್ಕಿಂತ ಹೆಚ್ಚಿನ ಜನ ಗುಂಪು ಸೇರುವಂತಿಲ್ಲ.
    * ಮದುವೆ ಕಾರ್ಯಕ್ರಮಕ್ಕೆ 50 ಜನರಿಗೆ ಅವಕಾಶ (ಸಾಮಾಜಿಕ ಅಂತರ ಕಡ್ಡಾಯ)
    * ಅಂತ್ಯಸಂಸ್ಕಾರ, ತಿಥಿಗಳಲ್ಲಿ 20 ಜನರಿಗೆ ಅವಕಾಶ (ಸಾಮಾಜಿಕ ಅಂತರ ಕಡ್ಡಾಯ)
    * ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ, ಪಾನ್-ಗುಟ್ಕಾ, ತಂಬಾಕು ನಿಷೇಧ
    * ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದರೆ ದಂಡ

    ಇನ್ನೂ ಕೆಲಸದ ಸ್ಥಳಗಳಿಗೂ ಕೇಂದ್ರ ಸರ್ಕಾರ ಕೆಲವು ನಿಯಮಗಳನ್ನು  ಪ್ರಕಟಿಸಿದೆ.

    ವರ್ಕ್ ಪ್ಲೇಸ್‍ಗಳಲ್ಲಿ ರೂಲ್ಸ್
    * ಗುಣಮಟ್ಟದ ಪರಿಶುದ್ಧತೆಗೆ ಪ್ರಾಶಸ್ತ್ಯ
    * ಮಾಸ್ಕ್ ಧರಿಸೋದು ಕಡ್ಡಾಯ
    * ಕೆಲಸದ ಸ್ಥಳ, ಸಾರಿಗೆಯಲ್ಲಿ ಸಾಮಾಜಿಕ ಅಂತರ ಕಡ್ಡಾಯ
    * ಶಿಫ್ಟ್, ಊಟದ ವಿರಾಮದಲ್ಲಿ ಸಾಮಾಜಿಕ ಅಂತರ
    * ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ವಾಶ್, ಸ್ಯಾನಿಟೈಸರ್ ವ್ಯವಸ್ಥೆ (ಎಂಟ್ರಿ-ಎಕ್ಸಿಟ್, ಕಾಮನ್ ಪ್ಲೇಸ್‍ಗಳಲ್ಲಿ ಇರುವಂತೆ ನೋಡಿಕೊಳ್ಳಬೇಕು)
    * ಕೆಲಸದ ಸ್ಥಳ, ಸಾಮಾನ್ಯ ಪ್ರದೇಶಗಳಲ್ಲಿ ಪದೇ ಪದೇ ಸ್ವಚ್ಛತೆ
    * ಎಲ್ಲಾ ಸಿಬ್ಬಂದಿಗೆ ಆರೋಗ್ಯ ಸೇತು ಆ್ಯಪ್ ಕಡ್ಡಾಯ
    * ಅತಿಹೆಚ್ಚು ಜನ ಸೇರುವಂತೆ ಮೀಟಿಂಗ್ ಬೇಡ
    * ಕೊರೊನಾ ಗುಣಲಕ್ಷಣ ಕಂಡುಬಂದಲ್ಲಿ ತಡಮಾಡದೆ ಹತ್ತಿರದ ಆಸ್ಪತ್ರೆ, ಕ್ವಾರಂಟೈನ್ ಸೆಂಟರ್‌ಗೆ ಶಿಫ್ಟ್ ಮಾಡಬೇಕು.

  • ಕರ್ನಾಟಕದ ರೆಡ್ ಝೋನ್ ಜಿಲ್ಲೆಗಳ ಸಂಖ್ಯೆ ಇಳಿಮುಖ

    ಕರ್ನಾಟಕದ ರೆಡ್ ಝೋನ್ ಜಿಲ್ಲೆಗಳ ಸಂಖ್ಯೆ ಇಳಿಮುಖ

    – ಲಾಕ್‍ಡೌನ್ ಬಳಿಕವೂ ಕೆಂಪು ವಲಯದಲ್ಲೇ ಬೆಂಗ್ಳೂರು

    ನವದೆಹಲಿ: ಕೋವಿಡ್-19 ಕೆಂಪು, ಕಿತ್ತಳೆ, ಹಸಿರು ವಲಯಗಳ ಪರಷ್ಕೃತ ಪಟ್ಟಿಯನ್ನು ಕೇಂದ್ರ ಸರ್ಕಾರ ಇಂದು ಬಿಡುಗಡೆ ಮಾಡಿದ್ದು, ಕರ್ನಾಟಕದ ರೆಡ್ ಝೋನ್ ಜಿಲ್ಲೆಗಳ ಸಂಖ್ಯೆ 6ರಿಂದ 3ಕ್ಕೆ ಇಳಿಕೆ ಕಂಡಿದೆ.

    ಕಳೆದ ವಾರದ ಕೊರೊನಾ ಸಂಖ್ಯೆ ಆಧರಿಸಿ ಈ ಪರಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಹಿಂದೆ ಕೆಂಪು ಪಟ್ಟಿಯಲ್ಲಿದ್ದ ಕಲಬುರಗಿ, ಬೆಳಗಾವಿ, ಚಿಕ್ಕಬಳ್ಳಾಪುರವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಹೀಗಾಗಿ ಕೆಂಪು ಪಟ್ಟಿಯಲ್ಲಿರುವ ಜಿಲ್ಲೆಗಳಲ್ಲಿ ಅಷ್ಟೇ ಲಾಕ್‍ಡೌನ್ ಮುಂದುವರಿಯುತ್ತಾ ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.

    ದೇಶದ ಮಹಾನಗರಗಳು ಮತ್ತು ಅದರ ಉಪನಗರಗಳನ್ನು ರೆಡ್ ಝೋನ್‍ನಲ್ಲಿ ಮುಂದುವರಿಸಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರವು ಸೂಚನೆ ನೀಡಿದೆ. ಪರಷ್ಕೃತ ಪಟ್ಟಿಯ ಪ್ರಕಾರ ದೇಶಾದ್ಯಂತ 130 ಜಿಲ್ಲೆಗಳು ರೆಡ್ ಝೋನ್, 284 ಜಿಲ್ಲೆಗಳು ಆರೆಂಜ್ ಹಾಗೂ 319 ಜಿಲ್ಲೆಗಳು ಗ್ರೀನ್ ಝೋನ್‍ಗಳನ್ನು ಗುರುತಿಸಲಾಗಿದೆ. ರಾಜ್ಯದಲ್ಲಿ 3 ಜಿಲ್ಲೆಗಳು ಕೆಂಪು ವಲಯ, 13 ಕಿತ್ತಳೆ ವಲಯ ಹಾಗೂ 14 ಜಿಲ್ಲೆಗಳು ಹಸಿರು ವಲಯದಲ್ಲಿವೆ.

    ಕೆಂಪು ವಲಯ:
    ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು ಮಾತ್ರ ರೆಡ್ ಝೋನ್‍ನಲ್ಲಿವೆ. ಈ ಹಿಂದೆ ಕೆಂಪು ಪಟ್ಟಿಯಲ್ಲಿದ್ದ ಕಲಬುರಗಿ, ಬೆಳಗಾವಿ, ಚಿಕ್ಕಬಳ್ಳಾಪುರವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ. ಅತಿ ಹೆಚ್ಚು ಕೊರೊನಾ ಪ್ರಕರಣಗಳು ಬೆಳಕಿಗೆ ಬರದ ಹಿನ್ನೆಲೆ ಈ ಪಟ್ಟಿಯಿಂದ ಮೂರು ಜಿಲ್ಲೆಗಳನ್ನು ಕೈಬಿಡಲಾಗಿದೆ.

    ಕಿತ್ತಳೆ ವಲಯ:
    ಬೆಳಗಾವಿ, ವಿಜಯಪುರ, ಕಲಬುರಗಿ, ಬಾಗಲಕೋಟೆ, ಮಂಡ್ಯ, ಬಳ್ಳಾರಿ, ಧಾರವಾಡ, ದಕ್ಷಿಣ ಕನ್ನಡ, ಬೀದರ್, ಚಿಕ್ಕಬಳ್ಳಾಪುರ, ಗದಗ, ಉತ್ತರ ಕನ್ನಡ, ತುಮಕೂರು.

    ಹಸಿರು ವಲಯ:
    ದಾವಣಗೆರೆ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಕೊಡಗು, ಚಿತ್ರದುರ್ಗ, ಹಾಸನ, ಹಾವೇರಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ಯಾದಗಿರಿ.

    ನಗರ ಪ್ರದೇಶದಲ್ಲಿ ವಸತಿ ಪ್ರದೇಶ, ಪೊಲೀಸ್ ಠಾಣೆ ವ್ಯಾಪ್ತಿ, ಮೊಹಲ್ಲಾಗಳ, ಪಟ್ಟಣಗಳ ಆಧಾರದ ಮೇಲೆ ಝೋನ್‍ಗಳನ್ನು ಗುರುತಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯತಿ, ಪುರಸಭೆ, ನಗರಸಭೆ ಆಧಾರದ ಮೇಲೆ ಗುರುತಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.

    ದೊಡ್ಡ ಜಿಲ್ಲಾ ಪ್ರದೇಶಗಳಲ್ಲಿ ಹಲವು ವಿಭಾಗಳಾಗಿ ವಿಂಗಡಿಸಿಕೊಳ್ಳಬಹುದು. ಝೋನ್‍ಗಳಿಗೆ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ಸೂಚಿಸಬೇಕು. ಅಲ್ಲದೇ ಅವಶ್ಯಕತೆ ವಸ್ತುಗಳ ಪೂರೈಕೆ ಹೊರತುಪಡಿಸಿ ರೆಡ್ ಝೋನ್‍ನಲ್ಲಿ ಪ್ರತಿ ಮನೆಯ ಮೇಲೂ ಸ್ಥಳೀಯ ಆಡಳಿತ ಕಣ್ಣಿಟ್ಟರಬೇಕು. ಈ ಹಿಂದೆ ನಿಗದಿಪಡಿಸಿದ್ದ 28 ದಿನಗಳ ಬದಲು 21 ದಿನಗಳ ಕಾಲ ಸೋಂಕು ಕಾಣಿಸಿಕೊಳ್ಳದಿದ್ದರೇ ಗ್ರೀನ್ ಝೋನ್ ಅಂತ ಘೋಷಿಸಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆಯು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

  • ಬಡವರ ಸಹಾಯಕ್ಕೆ 65 ಸಾವಿರ ಕೋಟಿ ರೂ. ಮೀಸಲಿಡಬೇಕು – ರಘುರಾಮ್ ರಾಜನ್

    ಬಡವರ ಸಹಾಯಕ್ಕೆ 65 ಸಾವಿರ ಕೋಟಿ ರೂ. ಮೀಸಲಿಡಬೇಕು – ರಘುರಾಮ್ ರಾಜನ್

    ನವದೆಹಲಿ: ಕೊರೊನಾ ಸಂಕಷ್ಟ ಸಂದರ್ಭದಲ್ಲಿ ಬಡವರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರ 65,000 ಕೋಟಿ ರೂ. ಮೀಸಲಿಡಬೇಕು ಎಂದು ಖ್ಯಾತ ಅರ್ಥಶಾಸ್ತ್ರಜ್ಞ ರಘುರಾಮ್ ರಾಜನ್ ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು ಆರ್ಥಿಕ ಪರಿಸ್ಥಿತಿ ಸುಧಾರಣೆ ಬಗ್ಗೆ ಮಾತುಕತೆ ನಡೆಸಿದ್ದಾರೆ.

    ಕೊರೊನಾದಿಂದ ಭಾರತದ ಆರ್ಥಿಕತೆ ಪೆಟ್ಟು ತಿಂದಿದೆ. ಆರ್ಥಿಕತೆಯ ಪುನರಾರಂಭಿಸಬೇಕಾದ ಅನಿವಾರ್ಯತೆ ಇದೆ. ಕೆಲವೊಮ್ಮೆ ಇಂಥ ಘಟನೆಗಳಿಂದ ಆರ್ಥಿಕತೆ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಕೂಡ ಇದ್ದು, ಪರಿಸ್ಥಿತಿಯ ಲಾಭ ಪಡೆಯುವ ಹಲವು ಮಾರ್ಗಗಳಿದ್ದು ಅವುಗಳನ್ನು ಸರ್ಕಾರ ಬಳಸಿಕೊಳ್ಳಬೇಕಿದೆ ಎಂದು ರಾಜನ್ ಹೇಳಿದ್ದಾರೆ.

    ಜಾಗತಿಕ ಆರ್ಥಿಕತೆ ಬಗ್ಗೆ ಪುನರ್ವಿಮರ್ಶೆ ಮಾಡಬೇಕು ಭಾರತದಲ್ಲಿ ಸಾಕಷ್ಟು ಸಂಪನ್ಮೂಲಗಳಿದೆ ನಮ್ಮ ಸೀಮಿತ ಸಾಮರ್ಥ್ಯಗಳಿಗೆ ಹೆಚ್ಚು ಆದ್ಯತೆ ನೀಡಬೇಕು. ಆರ್ಥಿಕತೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದೇಗೆ ಎಂದು ನಿರ್ಧರಿಸಬೇಕು. ಲಾಕ್‍ಡೌನ್ ಮುಗಿದ ಬಳಿಕ ಸಮಸ್ಯೆ ಹೆಚ್ಚಾಗುತ್ತದೆ. ಆ ಸಮಯದಲ್ಲಿ ದೇಶದ ಪರಿಸ್ಥಿತಿ ಇನ್ನಷ್ಟು ದುರ್ಬಲಗೊಳ್ಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಕೊರೊನಾ ಪರಿಸ್ಥಿತಿಯನ್ನು ಬೇರೆ ರೀತಿಯಲ್ಲಿ ನಿರ್ವಹಿಸಬೇಕು ಸಾಮೂಹಿಕ ಪರೀಕ್ಷೆಗಳನ್ನು ಹೆಚ್ಚು ಮಾಡಬೇಕು. ಜೊತೆಗೆ ಜನರಿಗೆ ಜೀವನೋಪಾಯ ತೆರೆಯುವ ಬಗ್ಗೆ ಸರ್ಕಾರ ಚಿಂತಿಸಬೇಕು ಜನರನ್ನು ಸಾಯಲು ಬಿಡಬಾರದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

    ಸಂದರ್ಶನದಲ್ಲಿ ಮಾತನಾಡಿದ ರಾಹುಲ್ ಗಾಂಧಿ ದಕ್ಷಿಣ ಭಾರತದ ರಾಜ್ಯಗಳ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಕೊರೊನಾ ಪರಿಸ್ಥಿತಿ ನಿಯಂತ್ರಣ ವಿಚಾರದಲ್ಲಿ ದಕ್ಷಿಣ ಭಾರತದ ರಾಜ್ಯಗಳು ಉತ್ತಮ ಕೆಲಸ ಮಾಡುತ್ತಿವೆ. ದಕ್ಷಿಣ ರಾಜ್ಯಗಳಲ್ಲಿ ವಿಕೇಂದ್ರೀಕರಣ ಪದ್ಧತಿ ಇದೆ ಜನರಿಗೆ ಏನು ಮಾಡಬೇಕೆಂದು ಯೋಚಿಸುವ ಶಕ್ತಿ ಇದೆ ಎಂದು ದಕ್ಷಿಣ ಭಾರತದ ರಾಜ್ಯಗಳ ಬಗ್ಗೆ ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದರು.

  • ಐಟಿ ವೃತ್ತಿಪರರ ವರ್ಕ್ ಫ್ರಮ್ ಹೋಮ್ ಜುಲೈ 31ರ ವರೆಗೆ ವಿಸ್ತರಣೆ

    ಐಟಿ ವೃತ್ತಿಪರರ ವರ್ಕ್ ಫ್ರಮ್ ಹೋಮ್ ಜುಲೈ 31ರ ವರೆಗೆ ವಿಸ್ತರಣೆ

    ಬೆಂಗಳೂರು: ಕೋವಿಡ್-19 ಹಿನ್ನೆಲೆಯಲ್ಲಿ ಐಟಿ ವೃತ್ತಿಪರರು ಮುಂದಿನ ಜುಲೈ 31ರ ವರೆಗೆ ಮನೆಯಿಂದಲೇ ಕೆಲಸ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

    ಕೊರೊನಾ ಲಾಕ್‍ಡೌನ್ ನಿರ್ಬಂಧದಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗಿರುವ ಸಮಸ್ಯೆಗಳ ಕುರಿತಂತೆ ಎಲ್ಲಾ ರಾಜ್ಯಗಳ ಮಾಹಿತಿ ತಂತ್ರಜ್ಞಾನ ಸಚಿವರ ಜತೆ ನಡೆಸಿದ ವೀಡಿಯೋ ಕಾನ್ಫರೆನ್ಸ್ ನಲ್ಲಿ ಕೇಂದ್ರ ಐಟಿ ಮತ್ತು ದೂರಸಂಪರ್ಕ ಖಾತೆ ಸಚಿವ ರವಿ ಶಂಕರ್ ಪ್ರಸಾದ್ ಅವರು ಈ ವಿಷಯ ಪ್ರಕಟಿಸಿದ್ದಾರೆ.

    ಲಾಕ್ ಡೌನ್ ಬಳಿಕ ರಾಜ್ಯ ಐಟಿ ವಲಯ ಎದುರಿಸುತ್ತಿರುವ ಸವಾಲುಗಳು, ಕಂಡುಕೊಂಡಿರುವ ಪರಿಹಾರಗಳು ಹಾಗೂ ರಾಜ್ಯ ಸರ್ಕಾರ ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತು ಕೇಂದ್ರ ಸಚಿವರಿಗೆ ವಿವರಿಸಿದ ಐಟಿ-ಬಿಟಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವತ್ಥನಾರಾಯಣ, ರಾಜ್ಯದ ಐಟಿ ವೃತ್ತಿ ಪರರಿಗೆ ಮುಂದಿನ ವರ್ಷ ಮಾರ್ಚ್ ವರೆಗೂ ಮನೆಯಿಂದಲೇ ಕೆಲಸ ಮಾಡಲು ಅವಕಾಶ ಕಲ್ಪಿಸಬೇಕೆಂದು ಕೋರಿದರು. ಈ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವರು, ಸದ್ಯ ಜುಲೈ 31ರ ವರೆಗೆ ವರ್ಕ್ ಫ್ರಮ್ ಹೋಂ ಸೌಲಭ್ಯ ವಿಸ್ತರಣೆ ಮಾಡಲಾಗುವುದು. ಪರಿಸ್ಥಿತಿ ನೋಡಿಕೊಂಡು ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಐಟಿ ವಲಯ ಸದ್ಯ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದು, ರಾಜ್ಯದ ಐಟಿ ವೃತ್ತಿಪರರ ಜತೆ ಪ್ರತ್ಯೇಕ ವೀಡಿಯೋ ಕಾನ್ಫರೆನ್ಸ್ ನಡೆಸಬೇಕೆಂಬ ಡಾ. ಅಶ್ವತ್ಥನಾರಾಯಣ ಅವರ ಮನವಿಗೂ ಸಕಾರಾತ್ಮಕವಾಗಿ ಸ್ಪಂದಿಸಿದ ರವಿ ಶಂಕರ್ ಪ್ರಸಾದ್, ಶೀಘ್ರದಲ್ಲೇ ವೀಡಿಯೋ ಕಾನ್ಫರೆನ್ಸ್ ನಡೆಸುವ ಭರವಸೆ ನೀಡಿದರು.

    ಕಾರ್ಯ ತಂತ್ರ ಸಮಿತಿ:
    ‘ಕೋವಿಡ್‍ನಂಥ ಪರಿಸ್ಥಿತಿ ಎದುರಾದಾಗ ಐಟಿ ಹಾಗೂ ಸಂಬಂಧಿತ ವಲಯಗಳು ಯಾವ ರೀತಿ ಕಾರ್ಯ ನಿರ್ವಹಿಸಬೇಕು. ವಿಪತ್ತಿನ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿ, ಪರಿಹಾರ ಕ್ರಮಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಲು ರಾಷ್ಟ್ರ ಮಟ್ಟದ ಕಾರ್ಯತಂತ್ರ ಸಮಿತಿ ರಚಿಸಲಾಗುವುದು,’ ಎಂದು ಕೆಂದ್ರ ಸಚಿವರು ತಿಳಿಸಿದರು.

    ‘ಐಟಿ ವಲಯ ಮಾತ್ರವಲ್ಲದೆ, ಎಲ್ಲಾ ರಾಜ್ಯಗಳು ಅನ್ವೇಷಣೆ, ಸ್ಟಾರ್ಟ್ ಅಪ್‍ಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇ-ಆಡಳಿತ, ಇ-ಪಾಸ್‍ಗಳ ಪರಿಣಾಮಕಾರಿ ಜಾರಿಗೆ ಗಮನ ಹರಿಸಲಾಗುವುದು. ಜತೆಗೆ, ಕೋವಿಡ್ ಸಮಸ್ಯೆ ಎದುರಾದಾಗಿನಿಂದ ಬಹುತೇಕ ಎಲ್ಲ ವಲಯಗಳ ಕೆಲಸದ ರೀತಿ ನೀತಿ ಬದಲಾಗಿದ್ದು, ಶೇ. 80ರಷ್ಟು ಐಟಿ ವೃತ್ತಿಪರರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಬಹುತೇಕ ಎಲ್ಲ ಕೆಲಸ ಕಾರ್ಯಗಳು ಆನ್‍ಲೈನ್ ಮೂಲಕವೇ ನಡೆಯುತ್ತಿದೆ. ಇದಕ್ಕೆ ಅನುಕೂಲವಾಗುವಂತೆ ಭಾರತ್ ನೆಟ್ ಯೋಜನೆ ಮೂಲಕ ದೇಶದ ಮೂಲೆಮೂಲೆಗೂ ಇಂಟರ್ ನೆಟ್ ಸಂಪರ್ಕ ಜಾಲ ಬಲಪಡಿಸಲಾಗುತ್ತದೆ,’ ಎಂದು ರವಿ ಶಂಕರ್ ಪ್ರಸಾದ್ ಹೇಳಿದರು.

    ಮೇಕ್ ಇನ್ ಇಂಡಿಯಾ:
    ‘ಮೇಕ್ ಇನ್ ಇಂಡಿಯಾ ಯೋಜನೆಗಳ ಕಾರ್ಯರೂಪಕ್ಕೆ ಇದು ಸಕಾಲ. ಕೋವಿಡ್ ನಂತರದಲ್ಲಿ ದೇಶದ ಆರ್ಥಿಕತೆಯ ಪುನಶ್ಚೇತನಕ್ಕೆ ಮೇಕ್ ಇನ್ ಇಂಡಿಯಾ ಯೋಜನೆಗೆ ಹೆಚ್ಚು ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ನಾವು ತಕ್ಕ ಮಟ್ಟಿನ ಯಶಸ್ಸು ಪಡೆದಿದ್ದರೂ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬರುವುದಕ್ಕೂ ಮೊದಲು ದೇಶದಲ್ಲಿ ಇದ್ದ ಮೊಬೈಲ್ ಉತ್ಪಾದಕ ಸಂಸ್ಥೆಗಳ ಸಂಖ್ಯೆ 2 ರಿಂದ 268ಕ್ಕೆ ಏರಿದೆ. ಮೇಕ್ ಇನ್ ಇಂಡಿಯಾ ಯೋಜನೆ ಯಶಸ್ಸಿಗೆ ಇದು ಅತ್ಯುತ್ತಮ ಉದಾಹರಣೆ,’ ಎಂದು ವಿವರಿಸಿದರು.

    ಆನ್‍ಲೈನ್ ಆರೋಗ್ಯ ಸೇವೆ:
    ‘ಕೋವಿಡ್ ನಂತರ ಆರೋಗ್ಯ ಸೇವೆಯಲ್ಲೂ ತಂತ್ರಜ್ಞಾನದ ಬಳಕೆ ಹೆಚ್ಚಿದ್ದು ಆನ್‍ಲೈನ್ ಆರೋಗ್ಯ ವ್ಯವಸ್ಥೆಗೆ ಹೆಚ್ಚು ಒತ್ತು ನೀಡಲಾಗಿದೆ. ಕರ್ನಾಟಕ ಸೇರಿಂದಂತೆ ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಆನ್‍ಲೈನ್ ಆರೋಗ್ಯ ಸೇವೆ ಉತ್ತಮವಾಗಿದ್ದು, ಇತರ ರಾಜ್ಯಗಳಲ್ಲೂ ಇದು ವಿಸ್ತರಣೆ ಆಗಬೇಕು,’ ಎಂದರು.

    ಆಪ್ತ ಮಿತ್ರ ಹೆಲ್ಪ್ ಲೈನ್:
    ಶಿಕ್ಷಣ, ಅಗತ್ಯ ವಸ್ತುಗಳ ಪೂರೈಕೆ ಮುಂತಾದ ಹಲವು ಕಾರ್ಯಗಳಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡು ಪರಿಹಾರ ಒದಗಿಸುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿದೆ ಎಂಬುದನ್ನು ಡಾ. ಅಶ್ವತ್ಥನಾರಾಯಣ ವೀಡಿಯೋ ಕಾನ್ಫರೆನ್ಸ್ ನಲ್ಲಿ ವಿವರಿಸಿದರು.

    ‘500ಕ್ಕೂ ಹೆಚ್ಚು ವೃತ್ತಿಪರರು ‘ಆಪ್ತ ಮಿತ್ರ ಹೆಲ್ಪ್ ಲೈನ್’ನ ಕಾಲ್ ಸೆಂಟರ್ ನಲ್ಲಿ ಹಗಲಿರುಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ನಿತ್ಯ ಸುಮಾರು 50 ಸಾವಿರ ಕರೆಗಳನ್ನು ಸ್ವೀಕರಿಸಿ, ಜನರ ಅಗತ್ಯಗಳಿಗೆ ಸ್ಪಂದಿಸುತ್ತಿದ್ದಾರೆ. ಇ-ಕಾಮರ್ಸ್ ಗೆ ಪರ್ಯಾಯವಾದ ವ್ಯವಸ್ಥೆ ಕಂಡುಕೊಂಡಿದ್ದು, ರೆಡ್ ಝೋನ್‍ನಲ್ಲಿರುವ ಜನ ಮನೆಯಿಂದ ಹೊರ ಬರುವ ಅಗತ್ಯ ಬಾರದಂತೆ ಎಲ್ಲಾ ವಸ್ತುಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಆಗುತ್ತಿದೆ. ದಿನಸಿ, ಹಾಲು, ಔಷಧ, ತರಕಾರಿ ಮುಂತಾದ ವಸ್ತುಗಳನ್ನು ಮನೆಗೆ ತಲುಪಿಸಲು ವಿಧಿಸುತ್ತಿರುವ ದರ ಕೇವಲ 10 ರೂಪಾಯಿ. ಒಂದೇ ರೀತಿಯ ಸೇವೆ (ಪರಿಹಾರ ಸಾಮಗ್ರಿಗಳು) ಬೇರೆ ಬೇರೆ ಇಲಾಖೆಗಳಿಂದ ಪುನರಾವರ್ತನೆ ಆಗದಂತೆ ತಡೆಯಲು ತಂತ್ರಜ್ಞಾನದ ಮೊರೆ ಹೋಗಲಾಗಿದೆ,’ ಎಂದು ಉಪಮುಖ್ಯಮಂತ್ರಿ ತಿಳಿಸಿದರು.

  • ಕೊರೊನಾ ಸೋಂಕು ಪತ್ತೆಗಾಗಿ ‘ಪೂಲ್ ಟೆಸ್ಟ್’ ಮಾಡಿ- ಕೇಂದ್ರ ಗೃಹ ಇಲಾಖೆ ಸೂಚನೆ

    ಕೊರೊನಾ ಸೋಂಕು ಪತ್ತೆಗಾಗಿ ‘ಪೂಲ್ ಟೆಸ್ಟ್’ ಮಾಡಿ- ಕೇಂದ್ರ ಗೃಹ ಇಲಾಖೆ ಸೂಚನೆ

    ನವದೆಹಲಿ: ಕಾರ್ಖಾನೆ, ಕೈಗಾರಿಗೆ ಮತ್ತು ಸಂಸ್ಥೆಗಳನ್ನು ಆರಂಭಿಸುವ ಮುನ್ನ ಕೊರೊನಾ ಸೋಂಕು ಪತ್ತೆಗಾಗಿ ಪೂಲ್ ಟೆಸ್ಟ್ ಮಾಡುವಂತೆ ಎಲ್ಲಾ ಮುಖ್ಯಸ್ಥರುಗಳಿಗೆ ಕೇಂದ್ರ ಗೃಹ ಇಲಾಖೆ ಸೂಚಿಸಿದೆ.

    ಹಸಿರು ಮತ್ತು ಕಿತ್ತಳೆ ವಲಯದಲ್ಲಿ ಲಾಕ್‍ಡೌನ್ ನಿಯಮಗಳಿಗೆ ವಿನಾಯತಿ ನೀಡಲಾಗಿದೆ. ಪರಿಣಾಮ ಕೆಲವು ಸಂಸ್ಥೆಗಳು, ಕೈಗಾರಿಕೆ, ಕಾರ್ಖಾನೆ ಸೇರಿದಂತೆ ಸಣ್ಣ ಉದ್ದಿಮೆಗಳು ಆರಂಭವಾಗಲಿದೆ. ಕಾರ್ಖಾನೆ ಆರಂಭಕ್ಕೂ ಮುನ್ನ ಕಾರ್ಮಿಕರನ್ನು ತಪಾಸಣೆ ಒಳಪಡಿಸಬೇಕು ಎಂದು ಸೂಚನೆ ನೀಡಲಾಗಿದೆ.

    ‘ಪೂಲ್ ಮಾದರಿ’ ಎಂದರೆ ಉದ್ಯೋಗಿಗಳನ್ನು ಗುಂಪುಗಳಾಗಿ ವಿಂಗಡಿಸಿ ಪರೀಕ್ಷೆ ನಡೆಸುವುದು. ಸಂಸ್ಥೆಯೊಂದರಲ್ಲಿ 150 ಮಂದಿ ಉದ್ಯೋಗಿಗಳಿದ್ದರೇ ಐದು ಮಂದಿಯ ತಂಡಗಳಾಗಿ ಮೂವತ್ತು ಗುಂಪುಗಳಾಗಿ ವಿಂಗಡಿಸುವುದು. ಪ್ರತಿ ಐದು ಜನರಿಗೆ ಒಂದು ಪೂಲ್ ಮಾಡಿ ಅದರಲ್ಲಿ ಒಬ್ಬರನ್ನು ತಪಾಸಣೆ ನಡೆಸುವುದು.

    ರೋಗದ ಲಕ್ಷಣಗಳು ಆಧರಿಸಿ ತಪಾಸಣೆ ನಡೆಸಬೇಕು ಇದರಲ್ಲಿ ಒಬ್ಬರಿಗೆ ಸೋಂಕು ಕಂಡು ಬಂದರೂ ಬಳಿಕ ಎಲ್ಲ ಉದ್ಯೋಗಿಗಳನ್ನು ತಪಾಸಣೆ ನಡೆಸಬೇಕು ಎಂದು ಸೂಚಿಸಿದೆ. ಇದಲ್ಲದೆ ಆಗಾಗೆ ಈ ಪರೀಕ್ಷೆಗಳು ನಡೆಯಲಿ ಎಂದು ಗೃಹ ಇಲಾಖೆ ತಿಳಿಸಿದೆ.