Tag: Central Government

  • ಬಡ ಕುಟುಂಬಗಳಿಗೆ 10 ಸಾವಿರ ನೆರವು ನೀಡಿ – ಕಾಂಗ್ರೆಸ್‍ನಿಂದ ಆನ್‍ಲೈನ್ ಅಭಿಯಾನ

    ಬಡ ಕುಟುಂಬಗಳಿಗೆ 10 ಸಾವಿರ ನೆರವು ನೀಡಿ – ಕಾಂಗ್ರೆಸ್‍ನಿಂದ ಆನ್‍ಲೈನ್ ಅಭಿಯಾನ

    ನವದೆಹಲಿ: ಲಾಕ್‍ಡೌನ್ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಡ ಜನರ ನೆರವಿಗೆ ನಿಲ್ಲುವ ಪ್ರಯತ್ನ ಆರಂಭಿಸಿರುವ ಕಾಂಗ್ರೆಸ್, ಈ ಸಂಬಂಧ ಅಭಿಯಾನವೊಂದನ್ನು ಶುರು ಮಾಡಲು ನಿರ್ಧರಿಸಿದೆ.

    ದೇಶದಲ್ಲಿರುವ ಶೇ.50 ಕುಟುಂಬಗಳ ಖಾತೆಗೆ ತಲಾ 10 ಸಾವಿರ ರೂಪಾಯಿ ಹಣ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಅಭಿಯಾನವನ್ನು ಕಾಂಗ್ರೆಸ್ ಹಮ್ಮಿಕೊಂಡಿದ್ದು, ಮೇ 28ರಂದು ಈ ಆನ್‍ಲೈನ್ ಮೂಲಕ ಅಭಿಯಾನಕ್ಕೆ ಚಾಲನೆ ಸಿಗಲಿದೆ. ಸರಣಿ ಸುದ್ದಿಗೋಷ್ಠಿ ನಡೆಸುತ್ತಿರುವ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಹಲವು ಬಾರಿ ಬಡ ಜನರ ಖಾತೆಗಳಿಗೆ ನೇರ ಹಣ ಜಮಾವಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಕೇಂದ್ರ ಸರ್ಕಾರದಿಂದ ಯಾವುದೇ ಮನ್ನಣೆ ಸಿಗದ ಹಿನ್ನೆಲೆಯಲ್ಲಿ ಈ ಅಭಿಯಾನಕ್ಕೆ ಕಾಂಗ್ರೆಸ್ ಮುಂದಾಗಿದೆ.

    ಇದಕ್ಕೂ ಮುನ್ನ ರಾಹುಲ್ ಗಾಂಧಿ, ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ಡಾ.ರಘುರಾಮ್ ರಾಜನ್ ಹಾಗೂ ಖ್ಯಾತ ಆರ್ಥಿಕ ತಜ್ಞ, ನೊಬೆಲ್ ಪ್ರಶಸ್ತಿ ಪುರಸ್ಕೃತ ಅಭಿಜಿತ್ ಬ್ಯಾನರ್ಜಿ ಅವರೊಂದಿಗೆ ವಿಡಿಯೋ ಸಂವಾದ ನಡೆಸಿ ಜನ ಸಾಮಾನ್ಯರಿಗೆ ನಗದು ಹಣದ ಅವಶ್ಯಕತೆ ಬಗ್ಗೆ ಚರ್ಚೆ ನಡೆಸಿದ್ದರು.

    ಈ ನಡುವೆ ಬಡ ಜನರು ಮತ್ತು ವಲಸೆ ಕಾರ್ಮಿಕರ ವಿಚಾರದಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ರಾಜಕೀಯ ಶುರುವಾಗಿದ್ದು, ವಲಸೆ ಕಾರ್ಮಿಕರಿಗೆ ರೈಲು ನೀಡಿ ಕಾಂಗ್ರೆಸ್ ಬೆಚ್ಚ ಭರಿಸುವುದಾಗಿ ಕಾಂಗ್ರೆಸ್ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿತ್ತು. ಇದು ವಿವಾದವಾಗುತ್ತಿದ್ದಂತೆ 85% ಕೇಂದ್ರ ಹಾಗೂ 15% ರಾಜ್ಯ ಸರ್ಕಾರದ ವೆಚ್ಚದಲ್ಲಿ ಶ್ರಮಿಕ್ ಹೆಸರಿನ ವಿಶೇಷ ಟ್ರೈನ್ ಓಡಿಸಲು ಸರ್ಕಾರ ಒಪ್ಪಿಗೆ ನೀಡಿತ್ತು. ಈ ನಡುವೆ ಪ್ರಿಯಾಂಕಾ ಗಾಂಧಿ ಸಾವಿರ ಬಸ್‍ಗಳಲ್ಲಿ ವಲಸೆ ಕಾರ್ಮಿಕರ ಸಂಚಾರಕಕ್ಕೆ ಅನುಮತಿ ಕೇಳಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಮನವಿ ಮಾಡಿದ್ದರು. ಅವಕಾಶ ಸಿಗದ ಬೆನ್ನಲ್ಲೇ ಇದು ಕೂಡಾ ವಿವಾದವಾಗಿತ್ತು.

    ವಲಸೆ ಕಾರ್ಮಿಕರ ಬಳಿಕ ಬಡವರ ಪರ ಧ್ವನಿ ಎತ್ತಿರುವ ಕಾಂಗ್ರೆಸ್ ಈಗ ಆನ್‍ಲೈನ್ ಅಭಿಯಾನದ ಮೂಲಕ ಹತ್ತು ಸಾವಿರ ಹಣದ ನೆರವು ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿದ್ದು ಕೊರೊನಾ ಸಂಕಷ್ಟ ವೇಳೆ ರಾಜಕೀಯ ನುಸುಳಲು ಆರಂಭಿಸಿದೆ.

  • ರಾಜ್ಯಕ್ಕೆ ಶ್ರಮಿಕ್ ರೈಲುಗಳನ್ನು ಕಳುಹಿಸಬೇಡಿ: ಮಮತಾ ಬ್ಯಾನರ್ಜಿ ಮನವಿ

    ರಾಜ್ಯಕ್ಕೆ ಶ್ರಮಿಕ್ ರೈಲುಗಳನ್ನು ಕಳುಹಿಸಬೇಡಿ: ಮಮತಾ ಬ್ಯಾನರ್ಜಿ ಮನವಿ

    ಕೋಲ್ಕತಾ: ಅಂಫಾನ್ ಚಂಡಮಾರುತದ ಪರಿಹಾರ ಕಾರ್ಯಗಳ ಹಿನ್ನೆಲೆ ಮೇ 26ವರೆಗೂ ರಾಜ್ಯಕ್ಕೆ ಶ್ರಮಿಕ್ ರೈಲುಗಳನ್ನು ಕಳುಹಿಸದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರೈಲ್ವೆ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಮುಖ್ಯ ಕಾರ್ಯದರ್ಶಿ ರಾಜೀವ್ ಸಿನ್ಹಾ ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆದಿದ್ದು, ಅಂಫಾನ್ ಚಂಡಮಾರುತದಿಂದ ದೊಡ್ಡ ಪ್ರಮಾಣದ ಹಾನಿಯಾಗಿದೆ. ಜಿಲ್ಲಾಡಳಿತ ಪರಿಹಾರ ಮತ್ತು ಪುನರ್ವಸತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಶ್ರಮಿಕ್ ರೈಲು ಕಾರ್ಯಾಚರಣೆಗಳ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆ ಮೇ 26ರವರೆಗೆ ಪಶ್ಚಿಮ ಬಂಗಾಳಕ್ಕೆ ಯಾವುದೇ ರೈಲುಗಳನ್ನು ಕಳುಹಿಸದಂತೆ ಮನವಿ ಮಾಡಿದ್ದಾರೆ.

    ಅಂಫಾನ್ ಚಂಡಮಾರುತದಿಂದಾಗಿ ಕನಿಷ್ಠ 86 ಜನರು ಸಾವನ್ನಪ್ಪಿದ್ದಾರೆ. ಭೀಕರ ಹವಾಮಾನ ದುರಂತದಿಂದ ಸಾಮಾನ್ಯ ಜೀವನ ಪುನಃಸ್ಥಾಪಿಸಲು ಪರದಾಡುತ್ತಿದ್ದಾರೆ.

    ಕೊರೊನಾ ವೈರಸ್ ಲಾಕ್‍ಡೌನ್ ಮಧ್ಯೆ ವಲಸೆ ಕಾರ್ಮಿಕರನ್ನು ತವರು ರಾಜ್ಯಗಳಿಗೆ ಸ್ಥಳಾಂತರದ ವೇಳೆ ಶ್ರಮಿಕ್ ರೈಲುಗಳ ಆಗಮನಕ್ಕೆ ಸಿಎಂ ಮಮತಾ ಬ್ಯಾನರ್ಜಿ ವಿರೋಧಿಸಿದ್ದರು. ಇದು ಗೃಹ ಸಚಿವ ಅಮಿತ್ ಶಾ ಹಾಗೂ ಮಮತಾ ಬ್ಯಾನರ್ಜಿ ನಡುವೆ ರಾಜಕೀಯ ಗುದ್ದಾಟಕ್ಕೂ ಕಾರಣವಾಗಿತ್ತು. ಬಳಿಕ ರೈಲುಗಳು ರಾಜ್ಯ ತಲುಪಲು ರಾಜ್ಯ ಸರ್ಕಾರದ ಒಪ್ಪಿಗೆ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸರ್ಕಾರ ಆದೇಶಿಸಿತ್ತು.

  • ಮೇ.25 ರಿಂದ ದೇಶೀಯ ವಿಮಾನಗಳ ಹಾರಾಟ- ಹರ್ದೀಪ್ ಸಿಂಗ್ ಪುರಿ

    ಮೇ.25 ರಿಂದ ದೇಶೀಯ ವಿಮಾನಗಳ ಹಾರಾಟ- ಹರ್ದೀಪ್ ಸಿಂಗ್ ಪುರಿ

    ನವದೆಹಲಿ: ಜೂನ್ 1 ರಿಂದ 200 ನಾನ್ ಎಸಿ ರೈಲುಗಳ ಸಂಚಾರಕ್ಕೆ ಅವಕಾಶ ನೀಡಿದ ಬೆನ್ನಲ್ಲೇ ದೇಶೀಯ ವಿಮಾನ ಹಾರಾಟಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.

    ಮೇ 25 ಎಲ್ಲಾ ದೇಶೀಯ ವಿಮಾನಗಳ ಹಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ.

    ಶೇ.35 ವಿಮಾನಗಳ ಹಾರಾಟ ಆರಂಭವಾಗಲಿದ್ದು ಹಂತ ಹಂತವಾಗಿ ವಿಸ್ತರಿಸುವ ಸುಳಿವು ಕೇಂದ್ರ ಸರ್ಕಾರ ನೀಡಿದೆ. ದೇಶೀಯ ವಿಮಾನಗಳ ಹಾರಾಟ ಹಿನ್ನೆಲೆ ಎಲ್ಲಾ ದೇಶೀಯ ವಿಮಾನ ನಿಲ್ದಾಣಗಳು ಮತ್ತು ವಿಮಾನ ವಾಹಕ ನೌಕೆಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಸೂಚನೆ ನೀಡಲಾಗಿದೆ.

    ಪ್ರಯಾಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು ಎಂದು ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಪ್ರಯಾಣದ ವೇಳೆ ಪ್ರಯಾಣಿಕರು ಯಾವ ಮುನ್ನೆಚ್ಚರಿಕ ಕ್ರಮಗಳನ್ನು ಪಾಲಿಸಬೇಕು ಎಂದು ಶೀಘ್ರ ನಿಮಯಗಳನ್ನು ವಿಮಾನಯಾನ ಸಚಿವಾಲಯ ಹೊರಡಿಸಲಿದೆ.

    ಮಾಸ್ಕ್, ಫೇಸ್ ಮಾಸ್ಕ್ ಕಡ್ಡಾಯ, ವಿಮಾನದೊಳಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸೀಟುಗಳ ಹಂಚಿಕೆ, ಪ್ರಯಾಣಕ್ಕೂ ಮುನ್ನ ಸ್ಯಾನಿಟೈಜಿಂಗ್, ಸ್ಕ್ರೀನಿಂಗ್, ಥರ್ಮಲ್ ಟೆಸ್ಟ್ ಮಾಡಿಸುವುದು ಕಡ್ಡಾಯವಾಗಿದೆ. ಆದರೆ ವಿಮಾನದೊಳಗೆ ಪ್ರಯಾಣಿಕರಿಗೆ ಆಹಾರ ನೀರು ಸೇರಿದಂತೆ ಇನ್ಯಾವುದೇ ಹೆಚ್ಚುವರಿ ಸೇವೆ ನೀಡುವಂತ್ತಿಲ್ಲ. ಸಿಬ್ಬಂದಿ ಪಿಪಿಇ ಕಿಟ್ ಬಳಕೆ ಸೇರಿದಂತೆ ಹಲವು ನಿಮಯಗಳನ್ನು ಈ ಹಿಂದೆ ಕೇಂದ್ರ ವಿಮಾನಯಾನ ಸಚಿವಾಲಯ ಹಿರಿಯ ಅಧಿಕಾರಿಗಳು, ಎಲ್ಲಾ ಖಾಸಗಿ ವಿಮಾನಯಾನ ಕಂಪೆನಿಗಳ ಸಿಇಒಗಳ ಸಮ್ಮುಖದ ತಂಡ ಸಿದ್ಧಪಡಿಸಿತ್ತು. ಇದರೊಂದಿಗೆ 3 ಗಂಟೆ ಮೊದಲೇ ವಿಮಾನ ನಿಲ್ದಾಣಕ್ಕೆ ಬರಬೇಕು. ಪ್ರಯಾಣದ ವೇಳೆ ಮಾಸ್ಕ್ ಧರಿಸುವುದು ಕಡ್ಡಾಯ. ಭದ್ರತಾ ಸಿಬ್ಬಂದಿ ಮೂಲಕ ತಪಾಸಣೆ ಇರುವುದಿಲ್ಲ. ಹೊರಗಿನಿಂದ ಬೋರ್ಡಿಂಗ್ ಪಾಸ್ ಪ್ರಿಂಟೌಟ್ ತರಬೇಕು. ಸೇರಿದಂತೆ ಮತ್ತಷ್ಟು ಹೊಸ ಶಿಷ್ಟಾಚಾರಗಳನ್ನು ಇಲಾಖೆ ಜಾರಿಗೆ ತರುವ ಸಾಧ್ಯತೆ ಇದೆ.

  • ಲಾಕ್‍ಡೌನ್ 4.0 ಕೇಂದ್ರದ ಮಾರ್ಗಸೂಚಿ ಪ್ರಕಟ- ರಾಜ್ಯ ಸರ್ಕಾರದ ಆದೇಶ ವಾಪಸ್

    ಲಾಕ್‍ಡೌನ್ 4.0 ಕೇಂದ್ರದ ಮಾರ್ಗಸೂಚಿ ಪ್ರಕಟ- ರಾಜ್ಯ ಸರ್ಕಾರದ ಆದೇಶ ವಾಪಸ್

    ಬೆಂಗಳೂರು: ಕೇಂದ್ರ ಸರ್ಕಾರ ಲಾಕ್‍ಡೌನ್ 4.0 ಮಾರ್ಗಸೂಚಿ ಪ್ರಕಟಿಸಿದ ಹಿನ್ನೆಲೆ ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ದಿನಗಳ ಲಾಕ್‍ಡೌನ್ ವಿಸ್ತರಣೆ ಆದೇಶವನ್ನು ಹಿಂಪಡೆದಿದೆ.

    ಭಾನುವಾರ ಮಧ್ಯಾಹ್ನವಷ್ಟೇ ರಾಜ್ಯ ಸರ್ಕಾರ ಮೇ 19ರ ವರೆಗೆ ಲಾಕ್‍ಡೌನ್ ಮುಂದುವರಿಕೆ ಮಾಡಿ, ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ಹೊರಡಿಸಿತ್ತು. ಇದೀಗ ಕೇಂದ್ರ ಸರ್ಕಾರ ದೇಶಾದ್ಯಂತ ಎಲ್ಲ ರಾಜ್ಯಗಳಿಗೂ ಅನ್ವಯವಾಗುವಂತೆ ಲಾಕ್‍ಡೌನ್ 4.0 ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಈ ಹಿನ್ನಲೆ ರಾಜ್ಯ ಸರ್ಕಾರ ತನ್ನ ಹಿಂದಿನ ಆದೇಶವನ್ನು ಹಿಂಪಡೆದಿದೆ. ಈ ಮೂಲಕ ಕೇಂದ್ರ ಸರ್ಕಾರದ ಲಾಕ್‍ಡೌನ್ ನಿಯಮಗಳು ಜಾರಿಯಾಗಲಿದ್ದು, ಇನ್ನೂ ಎರಡು ವಾರಗಳ ಕಾಲ ಅಂದರೆ ಮೇ 31ರ ವರೆಗೆ ಲಾಕ್‍ಡೌನ್ ಮುಂದುವರಿಯಲಿದೆ. ಅಗತ್ಯ ಚಟುವಟಿಕೆ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಲಿದೆ.

    ಬೆಳಗ್ಗೆಯಿಂದಲೂ ಕೇಂದ್ರದ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಎದುರು ನೋಡುತ್ತಿತ್ತು. ಮಾರ್ಗಸೂಚಿಗಳ ಪ್ರಕಟ ವಿಳಂಬ ಹಿನ್ನೆಲೆಯಲ್ಲಿ ತನ್ನ ವಿವೇಚನೆ ಅಧಿಕಾರ ಬಳಸಿ ಯಥಾಸ್ಥಿತಿ ಮುಂದುವರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿಂದಿನ ಮಾರ್ಗಸೂಚಿಗಳಂತೆ ಮೇ 19ರವರೆಗೆ ಬಸ್, ಆಟೋ, ಟ್ಯಾಕ್ಸಿ ಸಂಚಾರವಿರಲ್ಲ ಮತ್ತು ಮಾಲ್, ಥಿಯೇಟರ್, ಶಾಲಾ, ಕಾಲೇಜ್, ದೇವಸ್ಥಾನ, ಮಸೀದಿ, ಚರ್ಚ್ ಈ ಹಿಂದಿನಂತೆ ಬಂದ್ ಮಾಡಿ ಆದೇಶಿಸಿತ್ತು.

    ರಾಜ್ಯದಲ್ಲಿ ಯಥಾಸ್ಥಿತಿ ಮುಂದುವರಿಸುವಂತೆ ಇಲಾಖೆಗಳಿಗೆ, ಡಿಸಿಗಳಿಗೆ, ಜಿಲ್ಲಾ ಎಸ್ಪಿಗಳಿಗೆ ಸೂಚನೆ ನೀಡಲಾಗಿತ್ತು. ಇದೀಗ ಕೇಂದ್ರದಿಂದ ಲಾಕ್‍ಡೌನ್ 4.0 ಮಾರ್ಗಸೂಚಿ ಪ್ರಕಟವಾಗಿದ್ದು, ಹೀಗಾಗಿ ರಾಜ್ಯ ಸರ್ಕಾರ ತನ್ನ ಆದೇಶವನ್ನು ಹಿಂಪಡೆದಿದೆ.

  • ಸೋಮವಾರದಿಂದ ಲಾಕ್‍ಡೌನ್ 4.0 ಫಿಕ್ಸ್- ನಯಾ ಲಾಕ್‍ಡೌನ್‍ನಲ್ಲಿ ಏನಿರುತ್ತೆ? ಏನಿರಲ್ಲ?

    ಸೋಮವಾರದಿಂದ ಲಾಕ್‍ಡೌನ್ 4.0 ಫಿಕ್ಸ್- ನಯಾ ಲಾಕ್‍ಡೌನ್‍ನಲ್ಲಿ ಏನಿರುತ್ತೆ? ಏನಿರಲ್ಲ?

    – ಸಂಜೆಯೊಳಗೆ ಕೇಂದ್ರದಿಂದ ಮಾರ್ಗಸೂಚಿ ರಿಲೀಸ್

    ನವದೆಹಲಿ: ಮೂರನೇ ಹಂತದ ಲಾಕ್‍ಡೌನ್ ಅಂತ್ಯಕ್ಕೆ ಇನ್ನೂ ಎರಡು ದಿನ ಮಾತ್ರ ಬಾಕಿ ಇದೆ. ಈ ನಡುವೆ ನಾಲ್ಕನೇ ಹಂತದ ಲಾಕ್‍ಡೌನ್ ಹೇಗಿರಲಿದೆ ಅನ್ನೋ ಚರ್ಚೆ ನಡೆದಿದೆ.

    ಲಾಕ್‍ಡೌನ್ 4.0 ವಿಭಿನ್ನವಾಗಿ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕುತೂಹಲ ಹೆಚ್ಚಿಸಿದ್ದರು. ಹೀಗಾಗಿ ಲಾಕ್‍ಡೌನ್‍ನಿಂದ ಹೆಚ್ಚಿನ ನಿರೀಕ್ಷೆಯಲ್ಲಿ ದೇಶದ ಜನರಿದ್ದಾರೆ. ನಾಲ್ಕನೇ ಹಂತದ ಲಾಕ್‍ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಪರಿಷ್ಕೃತ ಮಾರ್ಗಸೂಚಿಗಳು ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಏನಿರಬಹುದು..?
    * ಎಲ್ಲಾ ಆರ್ಥಿಕ ಚಟುವಟಿಕೆಗಳಿಗೆ ಆದ್ಯತೆ (ಕಂಟೈನ್ಮೆಂಟ್ ಝೋನ್ ಬಿಟ್ಟು)
    * ಎಲ್ಲಾ ಕಡೆ ಬಸ್ ಸಂಚಾರಕ್ಕೆ ಅನುಮತಿ ನಿರೀಕ್ಷೆ
    * ರೆಡ್ ಝೋನ್‍ನಲ್ಲಿ ಆಟೋ, ಕ್ಯಾಬ್‍ಗೆ ಅವಕಾಶ
    * ಹಂತ ಹಂತವಾಗಿ ರೈಲು, ದೇಶಿಯ ವಿಮಾನ
    * ಮೆಟ್ರೋ, ಲೋಕಲ್ ರೈಲಿಗೆ ಷರತ್ತುಬದ್ಧ ಅನುಮತಿ
    * ರೆಡ್ ಝೋನ್‍ನಲ್ಲಿ ಸಲೂನ್, ಸ್ಪಾಗೆ ಅನುಮತಿ
    * ರೆಡ್ ಝೋನ್‍ನಲ್ಲಿ ಕನ್ನಡಕದ ಅಂಗಡಿ ತೆರೆಯಲು ಅವಕಾಶ
    * ಐಟಿ, ಎಂಎನ್‍ಸಿ ಕಂಪನಿಗಳಲ್ಲಿ ಪೂರ್ಣ ಸಿಬ್ಬಂದಿಯೊಂದಿಗೆ ಕೆಲಸ
    * ರಾತ್ರಿ ಸಂಚಾರದ ಮೇಲಿನ ಕರ್ಫ್ಯೂ ತೆರವು ಮಾಡಬಹುದು
    * ದೊಡ್ಡ ಕಾರ್ಯಕ್ರಮಗಳಿಗೆ ಅನುಮತಿ ಅಧಿಕಾರ ರಾಜ್ಯಗಳ ಕೈಗೆ
    * ಅಂತರ್ ರಾಜ್ಯ ಸಂಚಾರಕ್ಕೆ ಮಾತ್ರ ಕಡ್ಡಾಯ ಪಾಸ್

    ಏನಿರಲ್ಲ..?
    * ಶಾಪಿಂಗ್ ಮಾಲ್, ಕಾಂಪ್ಲೆಕ್ಸ್, ಸ್ಪೋರ್ಟ್ಸ್, ಕಾಂಪ್ಲೆಕ್ಸ್, ಥಿಯೇಟರ್
    * ದೇಗುಲ, ಜಾತ್ರೆ, ಸಂತೆ, ಉತ್ಸವ ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ಕಾರ್ಯಕ್ರಮ
    * ಹೋಟೆಲ್‍ಗಳಲ್ಲಿ ಪಾರ್ಸೆಲ್‍ಗಷ್ಟೇ ಅವಕಾಶ
    * ಮೇ ಬಳಿಕವಷ್ಟೇ ಶಾಲಾ-ಕಾಲೇಜು ಆರಂಭ ಆಗಬಹುದು

    ಇನ್ನು ಎರಡು ದಿನದಲ್ಲಿ ಲಾಕ್‍ಡೌನ್ ಅಂತ್ಯವಾಗ್ತಿರುವ ಹಿನ್ನೆಲೆಯಲ್ಲಿ ಹೊಸ ಲಾಕ್‍ಡೌನ್ ನಿಯಮಗಳಿಗೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಎರಡು ದಿನ ಮುಂಚೆ ಲಾಕ್‍ಡೌನ್ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುತ್ತೆ ಎನ್ನಲಾಗಿದ್ದು, ಇಂದು ಸಂಜೆ ವೇಳೆ ಹೊಸ ನಿಯಮಗಳು ಬಿಡುಗಡೆಯಾಗುವ ನಿರೀಕ್ಷೆಗಳಿವೆ.

  • ಕೇಂದ್ರಕ್ಕೆ ರಾಜ್ಯ ಸರ್ಕಾರಗಳ ವರದಿ- ಶೀಘ್ರವೇ ಲಾಕ್‍ಡೌನ್ ಪರಿಷ್ಕೃತ ಮಾರ್ಗಸೂಚಿ ಪ್ರಕಟ

    ಕೇಂದ್ರಕ್ಕೆ ರಾಜ್ಯ ಸರ್ಕಾರಗಳ ವರದಿ- ಶೀಘ್ರವೇ ಲಾಕ್‍ಡೌನ್ ಪರಿಷ್ಕೃತ ಮಾರ್ಗಸೂಚಿ ಪ್ರಕಟ

    ನವದೆಹಲಿ: ನಾಲ್ಕನೇ ಹಂತದ ಲಾಕ್ ಡೌನ್ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿವೆ. ಪ್ರಧಾನಿ ನರೇಂದ್ರ ಮೋದಿ ಸಿಎಂಗಳ ಸಭೆಯಲ್ಲಿ ಲಿಖಿತ ರೂಪದ ವರದಿ ಕೇಳಿದ ಹಿನ್ನೆಲೆಯಲ್ಲಿ ಇಂದು ಕೇಂದ್ರ ಗೃಹ ಇಲಾಖೆಗೆ ಈ ವರದಿಗಳು ಸೇರಲಿದೆ.

    ಈಗಾಗಲೇ ಕರ್ನಾಟಕ, ಕೇರಳ, ತಮಿಳುನಾಡು, ಉತ್ತರ ಪ್ರದೇಶ ಸೇರಿದಂತೆ ಈಶಾನ್ಯ ಭಾರತದ ಹಲವು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದು, ಇನ್ನೂ ಹಲವು ರಾಜ್ಯಗಳು ವರದಿ ಇಂದು ಸಲ್ಲಿಕೆ ಮಾಡಲಿದೆ. ಈ ವರದಿ ಆಧರಿಸಿ ಕೇಂದ್ರ ಗೃಹ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಬಹುದು.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸಚಿವರು ಹಾಗೂ ಟಾಸ್ಕ್ ಫೋರ್ಸ್ ನ ಸದಸ್ಯರ ಸಭೆ ಬಳಿಕ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಪ್ರಮುಖ ಕೇಂದ್ರ ಸಚಿವರ ಸಭೆ ನಡೆಯಲಿದೆ. ದೆಹಲಿ ನಿರ್ಮಾಣ ಭವನದಲ್ಲಿ ನಡೆಯಲಿರುವ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯ ಸಚಿವ ಡಾ.ಹರ್ಷವರ್ಧನ್, ನಾಗರಿಕ ವಿಮಾನಯಾನ ಸಚಿವ ಹರಿದೀಪ್ ಸಿಂಗ್ ಪೂರಿ ಸೇರಿದಂತೆ ಹಲವು ಪ್ರಮುಖ ಸಚಿವರು ಭಾಗಿಯಾಗಲಿದ್ದು ಲಾಕ್ ಡೌನ್ ವಿನಾಯತಿ ಮತ್ತು ಮುಂದಿನ ಪರಿಸ್ಥಿತಿಗಳ ನಿರ್ವಹಣೆ ಬಗ್ಗೆ ಚರ್ಚೆ ಮಾಡಲಿದ್ದಾರೆ.

    ಈಗಾಗಲೇ ನಾಲ್ಕನೇ ಹಂತದ ಲಾಕ್ಡೌನ್ ಗೆ ಬಹುತೇಕ ನಿಯಮಗಳು ಸಿದ್ಧವಾಗಿದ್ದು ಇಂದು ರಾಜ್ಯ ಸರ್ಕಾರಗಳ ವರದಿ ಆಧರಿಸಿ ಕೆಲ ಬದಲಾವಣೆಗಳು ಹಾಗೂ ಕೇಂದ್ರ ಸಚಿವರ ಶಿಫಾರಸುಗಳನ್ನು ಪರಿಗಣಿಸುವ ಸಾಧ್ಯತೆ ಇದೆ. ಬಹುತೇಕ ಇಂದು ಮಾರ್ಗಸೂಚಿಗಳ ಪಟ್ಟಿ ಅಂತಿಮ ಸ್ವರೂಪ ಪಡೆಯಲಿದ್ದು ಇಂದು ಸಂಜೆಯೇ ಅಥವಾ ನಾಳೆ ಬಿಡುಗಡೆಯಾಗಬಹುದು ಮೂಲಗಳಿಂದ ಮಾಹಿತಿ ಸಿಕ್ಕಿದೆ.

  • ಕೇಂದ್ರ 20 ಲಕ್ಷ ಕೋಟಿಯನ್ನು ಕೇವಲ ಉದ್ಯಮಿಗಳಿಗೆ ನೀಡಿದೆ- ಎಚ್‍ಡಿಕೆ ಸರಣಿ ಟ್ವೀಟ್

    ಕೇಂದ್ರ 20 ಲಕ್ಷ ಕೋಟಿಯನ್ನು ಕೇವಲ ಉದ್ಯಮಿಗಳಿಗೆ ನೀಡಿದೆ- ಎಚ್‍ಡಿಕೆ ಸರಣಿ ಟ್ವೀಟ್

    – ಇದರಿಂದ ಜನರಿಗೆ ಕನಿಷ್ಟ ಲಾಭವೂ ಆಗಲ್ಲ

    ಬೆಂಗಳೂರು: ಕೇಂದ್ರ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಕುರಿತು ರಾಜಕೀಯ ವಲಯದಲ್ಲಿ ಪರ ವಿರೋಧದ ಚರ್ಚೆ ನಡೆಯುತ್ತಿದ್ದು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

    ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, 20 ಲಕ್ಷ ಕೋಟಿ ರೂ. ಪ್ಯಾಕೇಜ್ ಎಂಬುದು ಲಿಕ್ವಿಡಿಟಿ(ನಗದು) ಆಧಾರಿತವಲ್ಲ. ಇದರಿಂದ ಜನರಿಗೆ ಕನಿಷ್ಠ ಸಹಾಯವೂ ಆಗದು. ಇವು ಕಾಲ್ಪನಿಕ ಘೋಷಣೆಗಳು ಮಾತ್ರ. ಇದರಲ್ಲಿರುವುದು ಉದ್ಯಮ, ಉದ್ಯಮಿಗಳಷ್ಟೇ ಆತ್ಮನಿರ್ಭರ ಭಾರತ್ ನಿಮಗೆ ನೀವೇ ಆಗಬೇಕು. ನಮ್ಮಿಂದ ನಿಮಗೆ ಚಿಕ್ಕಾಸೂ ದೊರಕದು ಎಂದು ಕೇಂದ್ರ ಸರ್ಕಾರ ಜನರಿಗೆ ಸ್ಪಷ್ಟನೆ ನೀಡಿದೆ ಎಂದು ಟೀಕಿಸಿದ್ದಾರೆ.

    ಕೊರೊನಾ ವೈರಸ್ ನಿಂದ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ಎದುರಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಗತ್ಯ ನೆರವು ನೀಡಬೇಕಿತ್ತು. ಆದರೆ ತನಿಗಿಷ್ಟ ಬಂದ ಘೋಷಣೆಗಳನ್ನು ಕೂಗಿ 20 ಲಕ್ಷ ಕೋಟಿ ರೂ. ಕೊಟ್ಟೆವೆಂದು ತನ್ನ ಬೆನ್ನು ತಟ್ಟಿಕೊಳ್ಳುತ್ತಿದೆ. ರಾಜ್ಯಗಳನ್ನು ಅಕ್ಷರಶಃ ಭಿಕ್ಷಾಪಾತ್ರೆ ಹಿಡಿದು ನಿಲ್ಲುವಂತೆ ಮಾಡಿದೆ. ಕೇವಲ ಘೋಷಣೆಗಳ ಮೂಲಕ, ಕಾಲ್ಪನಿಕ ಲೆಕ್ಕಾಚಾರಗಳ ಮೂಲಕ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಎಂಬ ಅರಗಿನ ಅರಮನೆ ಕಟ್ಟಿರುವ ಕೇಂದ್ರ ಸರ್ಕಾರ, ಜನರ ದುಸ್ಥಿತಿಯನ್ನು ಗೇಲಿ ಮಾಡಿದೆ. ಈ ಘೋಷಣೆಯ ಮೂಲಕ ಅಪಾರ ಪ್ರಮಾಣದ ಪ್ರಚಾರ ಪಡೆದಿರುವ ಬಿಜೆಪಿ, ದೇಶದ ಬಿಕ್ಕಟ್ಟನ್ನು ರಾಜಕೀಯದ ಅವಕಾಶವಾಗಿ ಪರಿವರ್ತಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ.

    ಲಾಕ್‍ಡೌನ್‍ನಿಂದ ತತ್ತರಿಸಿರುವ ಜನರನ್ನು, ರೈತರನ್ನು, ಬಡವರನ್ನು ಪಕ್ಕಕ್ಕಿಟ್ಟು, ಉದ್ಯಮಿಗಳು, ಉದ್ಯಮಗಳ ವ್ಯವಹಾರಕ್ಕೆ ಈ 20 ಲಕ್ಷ ಕೋಟಿ ರೂ. ಪ್ಯಾಕೇಜ್ ರೂಪಿಸಿರುವುದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿವರಣೆಯಲ್ಲಿ ಸ್ಪಷ್ಟವಾಗಿದೆ. ಪ್ಯಾಕೇಜ್‍ನಲ್ಲಿ ತಮಗೂ ಒಂದಿಷ್ಟು ಸಿಗಬಹುದು ಎಂದು ನಿರೀಕ್ಷಿಸಿದ್ದ ಜನರ ನಿರೀಕ್ಷೆಗಳಿಗೆ ತಣ್ಣೀರೆರಚಲಾಗಿದೆ. ಈ ಬಿಕ್ಕಟ್ಟನ್ನು ಭಾರತ ಅವಕಾಶವಾಗಿ ಪರಿವರ್ತಿಸಿಕೊಂಡಿದೆ ಎಂದೂ, ದೇಶ ಆತ್ಮನಿರ್ಭರ ಭಾರತ ಆಗಬೇಕು ಎಂದು ಮೋದಿ ನಿನ್ನೆಯ ಭಾಷಣದಲ್ಲಿ ಹೇಳಿದ್ದರು. ಅದರಂತೆಯೇ ಬಿಕ್ಕಟ್ಟನ್ನು ಬಿಜೆಪಿ ರಾಜಕೀಯದ ಅವಕಾಶವಾಗಿಸಿಕೊಂಡಿದೆ. ಆತ್ಮನಿರ್ಭರ ಭಾರತ ಎಂಬ ಆಕರ್ಷಕ ಪದ ಗುಚ್ಛದ ಮೂಲಕ ದೇಶದ ಜನ ಸ್ವಾವಲಂಬಿಗಳಾಗಬೇಕು ಎಂದು ಹೇಳಿ ಅನಾಥರನ್ನಾಗಿಸಲಾಗಿದೆ ಎಂದು ಹರಿಹಾಯ್ದಿದ್ದಾರೆ.

  • ಲಾಕ್‍ಡೌನ್‍ನಿಂದ ಪೀಣ್ಯ ಕೈಗಾರಿಕೆ ತತ್ತರಿಸಿದೆ- ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಕಳವಳ

    ಲಾಕ್‍ಡೌನ್‍ನಿಂದ ಪೀಣ್ಯ ಕೈಗಾರಿಕೆ ತತ್ತರಿಸಿದೆ- ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಕಳವಳ

    ಪೀಣ್ಯ: ಮಾರಾಣಾಂತಿಕ ಕೋವಿಡ್-19 ಲಾಕ್‍ಡೌನ್‍ನಿಂದ ಪೀಣ್ಯ ಕೈಗಾರಿಕೆ ವಲಯ ಅಕ್ಷರಶಃ ನಲುಗಿದೆ. ಬೆಂಗಳೂರು ಹೊರವಲಯದ ಸಣ್ಣ ಕೈಗಾರಿಕೆಗಳು ಸಂಕಷ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಶ್ರೀನಿವಾಸ ಅಸ್ರಣ್ಣ ಕಳವಳ ವ್ಯಕ್ತಪಡಿಸಿದ್ದಾರೆ.

    ಕೈಗಾರಿಕ ವಲಯದ ಶೇ.70 ರಷ್ಟು ಭಾಗದ ಕೈಗಾರಿಕೆಗಳು ಕಾರ್ಯನಿರ್ವಹಣೆ ಮಾಡುತ್ತಿದ್ದು, ಉಳಿದ ಶೇ.30 ರಷ್ಟು ಕೈಗಾರಿಕೆಗಳು ಕಾರ್ಯ ನಿರ್ವಹಿಸದಿರುವುದು ವಿಷಾದನೀಯ ಸಂಗತಿ. ಸಣ್ಣ ಕೈಗಾರಿಕೆಗಳ ಪರಿಸ್ಥಿತಿ ಗಂಭೀರವಾಗಿದ್ದು, ಮುಚ್ಚುವ ಸ್ಥಿತಿಗೆ ತಲುಪಿವೆ. ಪರಿಣಾಮ ಕಾರ್ಮಿಕರ ನೆರವಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅದಷ್ಟೂ ಬೇಗ ಧಾವಿಸಬೇಕು ಎಂದು ಅಸ್ರಣ್ಣ ಮನವಿ ಮಾಡಿದರು.

     

    ಇದೇ ವೇಳೆ ಕಾರ್ಮಿಕರಿಗೆ ಶೇ.50 ವೇತನ ನೀಡಬೇಕು ಎಂದು ಮನವಿ ಮಾಡಿದ ಅಸ್ರಣ್ಣ, ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಅನುದಾನ ನೀಡುವಂತೆ ಆಗ್ರಹಿಸಿದರು. ಕೈಗಾರಿಗೆಗಳ ಆರು ತಿಂಗಳ ಸಾಲದ ಬಡ್ಡಿಯನ್ನು ಮನ್ನ ಮಾಡಬೇಕು ಎಂದರು. ಇತ್ತ ಕೈಗಾರಿಕೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ನೆರವಿಗೆ ದಾವಿಸುವಂತೆ ಸಣ್ಣ ಕೈಗಾರಿಕಾ ವಲಯದ ಪದಾಧಿಕಾರಿಗಳು ಒತ್ತಾಯಿಸಿದರು.

    ಏಷ್ಯಾದಲ್ಲೇ ಅತೀದೊಡ್ಡ ಕೈಗಾರಿಕಾ ಪ್ರದೇಶವಾದ ಪೀಣ್ಯ ಕೈಗಾರಿಕಾ ವಲಯ ಹಲವಾರು ಹೆಸರಾಂತ ಕಂಪನಿಗಳು ಇಲ್ಲಿವೆ. ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಶ್ರೀನಿವಾಸ್ ಅಸ್ರಣ್ಣ, ಉಪಾಧ್ಯಕ್ಷರಾದ ಪ್ರಕಾಶ್, ಪ್ರಾಣೇಶ್, ಕಾರ್ಯದಶೀ ವಿಜಯ್ ಕುಮಾರ್, ಜಂಟಿ ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಮಂಜುನಾಥ್, ಜಂಟಿ ಖಜಾಂಚಿ ಮುರುಳಿ ಕೃಷ್ಣ, ನಿಕಟಪೂರ್ವ ಅಧ್ಯಕ್ಷ ಗಿರಿ ಇತರರು ಹಾಜರಿದ್ದರು.

  • ಏರ್ ಲಿಫ್ಟ್ 2.0- 31 ದೇಶಗಳಿಂದ 149 ವಿಮಾನಗಳ ಮೂಲಕ ತಾಯ್ನಾಡಿಗೆ ಭಾರತೀಯರು

    ಏರ್ ಲಿಫ್ಟ್ 2.0- 31 ದೇಶಗಳಿಂದ 149 ವಿಮಾನಗಳ ಮೂಲಕ ತಾಯ್ನಾಡಿಗೆ ಭಾರತೀಯರು

    – ಮತ್ತೊಂದು ಬೃಹತ್ ಕಾರ್ಯಚರಣೆಗೆ ಮುಂದಾದ ಕೇಂದ್ರ

    ನವದೆಹಲಿ: ಮೊದಲ ಹಂತದ ವಂದೇ ಭಾರತ್ ಮಿಷನ್ ಅಂತ್ಯವಾಗುತ್ತಿರುವ ಬೆನ್ನಲೆ ಎರಡನೇ ಹಂತದಲ್ಲಿ ಮತ್ತೊಂದು ಬೃಹತ್ ಕಾರ್ಯಚರಣೆಗೆ ಕೇಂದ್ರ ಸರ್ಕಾರ ಸಿದ್ದತೆ ಮಾಡಿಕೊಂಡಿದೆ. ಮೇ 16ರಿಂದ ಎರಡನೇ ಹಂತದ ಕಾರ್ಯಚರಣೆಗೆ ಮೋದಿ ಸರ್ಕಾರ ಹಸಿರು ನಿಶಾನೆ ತೋರಲಿದೆ.

    ಮೇ 16ರಿಂದ 22ರವರೆಗೆ ಎರಡನೇ ಹಂತದಲ್ಲಿ ವಂದೇ ಭಾರತ್ ಮಿಷನ್ ಆರಂಭವಾಗಲಿದ್ದು, ಏಳು ದಿನಗಳಲ್ಲಿ 31 ದೇಶಗಳಿಂದ ಭಾರತದ ಹದಿನೈದು ನಗರಗಳಿಗೆ 149 ವಿಶೇಷ ವಿಮಾನಗಳಲ್ಲಿ ಮತ್ತಷ್ಟು ಅನಿವಾಸಿ ಭಾರತೀಯರು ತಾಯ್ನಾಡಿಗೆ ವಾಪಸ್ ಆಗಲಿದ್ದಾರೆ.

    ಈ ಪೈಕಿ 14 ದೇಶಗಳಿಂದ ಕರ್ನಾಟಕಕ್ಕೆ 17 ವಿಮಾನಗಳು ಆಗಮಿಸಲಿವೆ. ಅಮೆರಿಕದಿಂದ 3, ಕೆನಡಾದಿಂದ 2 ಹಾಗೂ ಯುಎಇ, ಸೌದಿ ಅರೆಬಿಯಾ, ಮಲೇಷಿಯಾ, ಒಮನ್, ಫಿಲಿಪೈನ್ಸ್, ಫ್ರಾನ್ಸ್, ಜರ್ಮನಿ, ಕತಾರ್, ಇಂಡೋನೇಷ್ಯಾ, ಐರ್ಲೆಂಡ್, ಆಸ್ಟ್ರೇಲಿಯಾ, ಜಪಾನ್ ಗಳಿಂದ ತಲಾ ಒಂದೊಂದು ವಿಮಾನ ರಾಜ್ಯಕ್ಕೆ ಬರಲಿದೆ.

    ಕೊರೊನಾ ಸಂಕಷ್ಟದಲ್ಲಿ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ನಿರ್ಧಿರಿತ್ತು. ಮೊದಲ ಹಂತದಲ್ಲಿ 12 ದೇಶಗಳಿಂದ 64 ವಿಶೇಷ ವಿಮಾನ, 11 ಹಡಗುಗಳ ಮೂಲಕ ಸುಮಾರು ಹದಿನೈದು ಸಾವಿರ ವಿದ್ಯಾರ್ಥಿಗಳು, ಅನಿವಾಸಿ ಭಾರತೀಯರು, ವಲಸೆ ಕಾರ್ಮಿಕರನ್ನು ಕರೆಲಾಗಿತ್ತು. ನಾಳೆಗೆ ಮೊದಲ ಹಂತದ ಕಾರ್ಯಚರಣೆ ಅಂತ್ಯವಾಗಲಿದೆ.

    ಮೊದಲ ಹಂತದ ಕಾರ್ಯಚರಣೆ ಆರಂಭವಾಗುತ್ತಿದ್ದಂತೆ ಪ್ರಪಂಚದ ಇತರೆ ದೇಶಗಳಿಂದ ಭಾರತಕ್ಕೆ ವಾಪಸ್ ಕರೆಸಿಕೊಳ್ಳುವಂತೆ ಸುಮಾರು 60 ಸಾವಿರ ಮನವಿಗಳು ಕೇಂದ್ರ ಸರ್ಕಾರಕ್ಕೆ ಬಂದಿತ್ತು. ಈ ಪೈಕಿ ಕೇರಳಕ್ಕೆ ತಲುಪಿಸುವಂತೆ 25,246, ತಮಿಳುನಾಡಿಗೆ 6,617, ಮಹಾರಾಷ್ಟ್ರಕ್ಕಾಗಿ 4,341, ಉತ್ತರ ಪ್ರದೇಶ 3,715, ರಾಜಸ್ಥಾನ 3,320, ತೆಲಂಗಾಣ 2,796, ಕರ್ನಾಟಕ 2,786 , ಆಂಧ್ರಪ್ರದೇಶ 2,445, ಗುಜರಾತ್ 2,330, ದೆಹಲಿ ತಲುಪಿಸಲು 2,232 ಮಂದಿ ನೋಂದಣಿ ಮಾಡಿಕೊಂಡಿದ್ದರು. ಈ ಮನವಿಗಳ ಹಿನ್ನಲೆ ಎರಡನೇ ಹಂತದ ಕಾರ್ಯಚರಣೆಗೆ ಕೇಂದ್ರ ಮುಂದಾಗಿದೆ.

  • ದೇಶದಲ್ಲಿ ಮತ್ತೆ ಕಠಿಣ ಲಾಕ್‍ಡೌನ್ ಬರುತ್ತಾ?- ರಾಜ್ಯಗಳ ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ ಕೇಂದ್ರ

    ದೇಶದಲ್ಲಿ ಮತ್ತೆ ಕಠಿಣ ಲಾಕ್‍ಡೌನ್ ಬರುತ್ತಾ?- ರಾಜ್ಯಗಳ ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ ಕೇಂದ್ರ

    ನವದೆಹಲಿ: ದೇಶದಲ್ಲಿ ಲಾಕ್‍ಡೌನ್ 3.0 ವಿಸ್ತರಣೆಯಾಗಿ ಏಳು ದಿನಗಳು ಕಳೆದು ಹೋಗಿದೆ. ಇನ್ನೇನು ಏಳು ದಿನಗಳು ಬಾಕಿ ಉಳಿದಿವೆ. ಈ ನಡುವೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಆರೋಗ್ಯ ಇಲಾಖೆ ವೈರಸ್ ಜೊತೆಗೆ ಬದುಕು ನಡೆಸಬೇಕು ಅಂತಿದೆ. ಹೀಗಾಗಿ ಲಾಕ್‍ಡೌನ್ ಬಳಿಕ ಮುಂದೇನು ಮಾಡಬೇಕು ಅನ್ನೋದರ ಬಗ್ಗೆ ಚರ್ಚೆ ನಡೆಯುತ್ತಿದೆ.

    ಎರಡನೇ ಹಂತದ ಲಾಕ್‍ಡೌನ್ ವೇಳೆ ಕಂಟ್ರೋಲ್‍ನಲ್ಲಿದ್ದ ಸೋಂಕಿತರ ಪ್ರಮಾಣ ಲಾಕ್‍ಡೌನ್ 3.0 ಆರಂಭವಾಗುತ್ತಿದ್ದಂತೆ ದುಪ್ಪಟ್ಟಾಗಲು ಆರಂಭಿಸಿದೆ. ಕಳೆದೊಂದು ವಾರದಿಂದ ಸೋಂಕಿತರ ಪ್ರಮಾಣದಲ್ಲಿ ಭಾರೀ ಏರಿಕೆಯಾಗುತ್ತಿದೆ. ಇದು ಕೇಂದ್ರ ಸರ್ಕಾರದ ನಿದ್ದೆ ಕೆಡಿಸಿದೆ. ಇನ್ನೊಂದು ವಾರದಲ್ಲಿ ಅಂತ್ಯವಾಗಲಿರುವ ಲಾಕ್‍ಡೌನ್ ಬಳಿಕ ಮುಂದೇನು ಮಾಡಬೇಕು ಅನ್ನೋದರ ಬಗ್ಗೆ ಚರ್ಚೆ ಆರಂಭವಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ರಾಜ್ಯಗಳಿಂದ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವ ಪ್ರಮುಖ ರಾಜ್ಯಗಳ ಅಭಿಪ್ರಾಯವನ್ನು ಕೇಂದ್ರ ಸರ್ಕಾರ ಕೇಳಿದೆ.

    ಮಹಾರಾಷ್ಟ್ರ, ದೆಹಲಿ, ಗುಜರಾತ್, ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಅತಿಹೆಚ್ಚು ಸೋಂಕು ಪ್ರಕರಣಗಳು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಈ ರಾಜ್ಯಗಳಲ್ಲಿ ಲಾಕ್‍ಡೌನ್ ನಿಭಾಯಿಸುವ ಬಗ್ಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳಿಗೆ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡುವ ಸಾಧ್ಯತೆ ಇದೆ. ಸೋಂಕಿನ ಆಧಾರದ ಮೇಲೆ ಆಯಾ ರಾಜ್ಯ ಸರ್ಕಾರಗಳು ಪ್ರದೇಶವಾರು ಲಾಕ್‍ಡೌನ್ ನಿಯಮಗಳನ್ನು ಅನ್ವಯಿಸಲು ಅವಕಾಶ ಕೊಡುವ ಸಂಭವ ಇದೆ ಎನ್ನಲಾಗುತ್ತಿದೆ.

    ಕಡಿಮೆ ಸೋಂಕಿರುವ ಪ್ರದೇಶದಲ್ಲಿ ಆರ್ಥಿಕ ಪರಿಸ್ಥಿತಿಗಳ ಸುಧಾರಣೆ ಭಾಗವಾಗಿ ಲಾಕ್‍ಡೌನ್ ಮತ್ತಷ್ಟು ಸಡಿಲ ಮಾಡುವ ಸಾಧ್ಯತೆ ಇದೆ. ಅಲ್ಪ ಪ್ರಮಾಣದ ಸೋಂಕು ಮತ್ತು ಗ್ರೀನ್‍ಝೋನ್ ಪ್ರದೇಶಗಳಲ್ಲಿ ಸಾರಿಗೆ ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳ ಜೊತೆಗೆ ಎಲ್ಲ ಆರ್ಥಿಕ ಚಟುವಟಿಕೆಗಳಿಗೆ ಆರಂಭಿಸಲು ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ರಾಜ್ಯಗಳಲ್ಲಿನ ಕೊರೊನಾ ಪರಿಸ್ಥಿತಿ ಅವಲೋಕನ ನಡೆಸಲು ಕೇಂದ್ರ ತನ್ನ ಟಾಸ್ಕ್ ಫೋರ್ಸ್ ಸದಸ್ಯರನ್ನು ಕಳುಹಿಸುತ್ತಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ದೆಹಲಿ ಏಮ್ಸ್ ಆಸ್ಪತ್ರೆ ನಿರ್ದೇಶಕ ಟಾಸ್ಕ್ ಫೋರ್ಸ್ ಸದಸ್ಯ ಡಾ. ರಣದೀಪ್ ಗುಲೇರಿಯಾ ಗುಜರಾತ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರೆ. ಅಲ್ಲದೇ ಲಾಕ್‍ಡೌನ್ ಮುಂದುವರಿಸುವ ಬಗ್ಗೆಯೂ ಅಲ್ಲಿಯ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ್ದಾರೆ. ಗುಲೇರಿಯಾ ಮಾತ್ರವಲ್ಲದೇ ಇತರೆ ಸದಸ್ಯರು ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ದೆಹಲಿಗೆ ಭೇಟಿ ನೀಡಿ ಅಭಿಪ್ರಾಯ ಪಡೆದುಕೊಳ್ಳಲಿದ್ದಾರೆ.

    ಈ ಎಲ್ಲಾ ಅಭಿಪ್ರಾಯಗಳ ಜೊತೆಗೆ ತಜ್ಞರ ಅಭಿಪ್ರಾಯ ಸೇರಿ ಪ್ರಧಾನಿ ನರೇಂದ್ರ ಮೋದಿ ಕೈ ತಲುಪಲಿದೆ. ಇನ್ನೊಂದೆರಡು ದಿನದಲ್ಲಿ ಕೇಂದ್ರ ಸಚಿವರ ಸಮಿತಿ ಸಭೆ ಕೂಡ ನಡೆಯಲಿದ್ದು, ಲಾಕ್‍ಡೌನ್ ಭವಿಷ್ಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಬಗ್ಗೆ ಮೋದಿಗೆ ಸಲಹೆ ನೀಡಲಿದ್ದಾರೆ. ಸದ್ಯ ಅಭಿಪ್ರಾಯ ಸಂಗ್ರಹಿಸುತ್ತಿರುವ ಕೇಂದ್ರ 3-4 ದಿನಗಳಲ್ಲಿ ಅಂತಿಮ ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ.