Tag: Central Government

  • ದೆಹಲಿಯಲ್ಲಿ ಕೊರೊನಾ ಸ್ಫೋಟ- ಕೇಜ್ರಿ ಸರ್ಕಾರಕ್ಕೆ ಕೇಂದ್ರದ ನೆರವು

    ದೆಹಲಿಯಲ್ಲಿ ಕೊರೊನಾ ಸ್ಫೋಟ- ಕೇಜ್ರಿ ಸರ್ಕಾರಕ್ಕೆ ಕೇಂದ್ರದ ನೆರವು

    – ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಿತಿ ಮೀರುತ್ತಿರುವ ಕೊರೊನಾ ಸೋಂಕು ಹರಡುವಿಕೆ ತಡೆಯಲು ಮೂರು ಪಟ್ಟು ಪರೀಕ್ಷೆಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

    ದೆಹಲಿಯಲ್ಲಿ ರಾಕೆಟ್ ವೇಗದಲ್ಲಿ ಸೋಂಕು ಹಬ್ಬುತ್ತಿರುವ ಹಿನ್ನೆಲೆ ಇಂದು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ಏರ್ಪಡಿಸಾಗಿತ್ತು. ಸಭೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅನೀಲ್ ಬೈಜಾಲ್, ಸಿಎಂ ಅರವಿಂದ್ ಕೇಜ್ರಿವಾಲ್, ಆರೋಗ್ಯ ಸಚಿವ ಸತ್ಯಂದ್ರ ಜೈನ್, ಡಿಸಿಎಂ ಮನೀಷ್ ಸಿಸೊಡಿಯಾ ಹಾಗೂ ದೆಹಲಿ ತುರ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಏಮ್ಸ್ ಹಿರಿಯ ವೈದ್ಯಾಧಿಕಾರಿಗಳು ಭಾಗಿಯಾಗಿದ್ದರು.

    ಸುಧೀರ್ಘ ಸಭೆ ಬಳಿಕ ದೆಹಲಿಯಲ್ಲಿ ಕೊರೊನಾ ತಡೆಗೆ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಕೊರೊನಾ ಪತ್ತೆಗಾಗಿ ಪರೀಕ್ಷೆಗಳನ್ನು ಹೆಚ್ಚಿಸುವ ಮತ್ತು ಆಸ್ಪತ್ರೆಗಳಲ್ಲಿ ಬೆಡ್ ಗಳನ್ನು ಒದಗಿಸಿಕೊಡುವ ಭರವಸೆಯನ್ನು ಕೇಂದ್ರ ಸರ್ಕಾರ ದೆಹಲಿ ಸರ್ಕಾರಕ್ಕೆ ನೀಡಿದೆ.

    ಮುಂದಿನ ಎರಡು ದಿನಗಳಲ್ಲಿ ದೆಹಲಿಯಲ್ಲಿ ದುಪ್ಪಟ್ಟು ಪ್ರಮಾಣದಲ್ಲಿ ಪರೀಕ್ಷೆಗಳನ್ನು ಹೆಚ್ಚಿಸುವುದು ಮತ್ತು ಮುಂದಿನ ಆರು ದಿನಗಳಲ್ಲಿ ಮೂರು ಪಟ್ಟು ಟೆಸ್ಟಿಂಗ್ ನಡೆಯಲು ನಿರ್ಧರಿಸಲಾಗಿದೆ. ಕಂಟೈನ್ಮೆಂಟ್ ಝೋನ್ ಗಳಲ್ಲಿ ಆರೋಗ್ಯ ಸೇತು ಆ್ಯಪ್ ಬಳಕೆ ಕಡ್ಡಾಯ ಮಾಡಿದ್ದು, ಪ್ರತಿ ಮನೆಗೆ ತೆರಳಿ ಪರೀಕ್ಷೆ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

    ದೆಹಲಿಯಲ್ಲಿ ಆಸ್ಪತ್ರೆ ಮತ್ತು ಬೆಡ್ ಗಳ ಕೊರತೆ ನೀಗಿಸಲು 500 ಕೊರೊನಾ ಬೆಡ್ ಗಳಾಗಿ ಮಾರ್ಪಾಡಿಸಿದ ರೈಲ್ವೆ ಬೋಗಿಗಳನ್ನು ನೀಡಲು ಕೇಂದ್ರ ಸರ್ಕಾರ ರೈಲ್ವೆ ಇಲಾಖೆಗೆ ಸೂಚಿಸಿದೆ. ಅಲ್ಲದೆ ಎಲ್ಲ ಖಾಸಗಿ ಆಸ್ಪತ್ರೆಯಲ್ಲಿ ಶೇ.60ರಷ್ಟು ಬೆಡ್ ಗಳನ್ನು ಕೊರೊನಾಗೆ ಮೀಸಲಿಡಲಿದ್ದು, ದರ ಪಟ್ಟಿಗೆ ಸಮಿತಿ ರಚನೆ ಮಾಡಿದೆ.

    ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡಲು ಕೇಂದ್ರ ಇನ್ನೂ ಐದು ಹಿರಿಯ ಅಧಿಕಾರಿಗಳನ್ನು ದೆಹಲಿ ಸರ್ಕಾರಕ್ಕೆ ನಿಯೋಜಿಸಿದೆ. ಅಗತ್ಯ ಸಂಪನ್ಮೂಲಗಳಾದ ಆಮ್ಲಜನಕ ಸಿಲಿಂಡರ್‍ಗಳು, ವೆಂಟಿಲೇಟರ್‍ಗಳು, ಪಲ್ಸ್ ಆಕ್ಸಿಮೀಟರ್‍ಗಳು ಸೇರಿದಂತೆ ಎಲ್ಲ ಅಗತ್ಯಗಳನ್ನು ಪೂರೈಸುವುದಾಗಿ ಕೇಂದ್ರ ದೆಹಲಿ ಸರ್ಕಾರಕ್ಕೆ ಭರವಸೆ ನೀಡಿದ್ದು, ಅಂತ್ಯಕ್ರಿಯೆಗಳಿಗಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲು ಸಹ ನಿರ್ಧರಿಸಿದೆ.

    ಸಭೆ ಬಳಿಕ ಮಾತನಾಡಿದ ಸಿಎಂ ಅರವಿಂದ ಕೇಜ್ರಿವಾಲ್, ಇದೊಂದು ಉತ್ತಮ ಸಭೆ ಸಾಕಷ್ಟು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ದೆಹಲಿ ಲಾಕ್‍ಡೌನ್ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದರು.

  • ಭಾರತದಲ್ಲಿ 3 ಲಕ್ಷ ದಾಟಿದ ಕೊರೊನಾ- 9 ಸಾವಿರದ ಗಡಿಯಲ್ಲಿ ಸಾವಿನ ಸಂಖ್ಯೆ

    ಭಾರತದಲ್ಲಿ 3 ಲಕ್ಷ ದಾಟಿದ ಕೊರೊನಾ- 9 ಸಾವಿರದ ಗಡಿಯಲ್ಲಿ ಸಾವಿನ ಸಂಖ್ಯೆ

    – ಕಳೆದ 10 ದಿನದಲ್ಲಿ 1 ಲಕ್ಷ ಪ್ರಕರಣಗಳು ಪತ್ತೆ

    ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ ಮೂರು ಲಕ್ಷ ದಾಟಿದ್ದು, ಸೋಂಕಿತರ ಸಾವಿನ ಸಂಖ್ಯೆ 9 ಸಾವಿರದ ಹತ್ತಿರಕ್ಕೆ ಬಂದಿದೆ.

    ಭಾರತದಲ್ಲಿ ಕೊರೊನಾ ಹಿಡಿತ ತಪ್ಪಿದೆಯ ಎಂಬ ಅನುಮಾನಗಳು ಮೂಡಿವೆ. ಯಾಕೆಂದರೆ ಲಾಕ್‍ಡೌನ್ ಸಡಿಲಗೊಳಿಸಿದ ಬಳಿಕ ಭಾರತದಲ್ಲಿ ಕೊರೊನಾ ಸ್ಫೋಟಗೊಂಡಿದೆ. ಸಾವಿನ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತದೆ. ಹೀಗಾಗಿ ಮತ್ತೆ ಕೇಂದ್ರ ಸರ್ಕಾರ ಲಾಕ್‍ಡೌನ್ ಜಾರಿ ಮಾಡುತ್ತಾ ಎಂಬ ಪ್ರಶ್ನೆ ಉದ್ಭವಿಸಿದೆ.

    ಭಾರತದಲ್ಲಿ ಕಳೆದ 10 ದಿನದಲ್ಲಿ 1 ಲಕ್ಷ ಪ್ರಕರಣಗಳು ದಾಖಲಾಗಿವೆ. ಇದರ ಜೊತೆಗೆ ಕಳೆದ 24 ಗಂಟೆಯಲ್ಲಿ ಸುಮಾರು 386 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 9 ಸಾವಿರದ ಗಡಿಗೆ ಬಂದು ನಿಂತಿದೆ. ಭಾರತದಲ್ಲೇ ಮಹಾರಾಷ್ಟ್ರ ಒಂದು ರಾಜ್ಯದಲ್ಲೇ 1,01,141 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಭಾರತದಲ್ಲಿ ಮಹಾರಾಷ್ಟ್ರ ಕೊರೊನಾ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿ ಇದ್ದರೆ, 40,698 ಸೋಂಕಿತರೊಂದಿಗೆ ತಮಿಳುನಾಡು ಎರಡನೇ ಸ್ಥಾನದಲ್ಲಿದೆ.

    ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿರುವ ಇತ್ತೀಚಿನ ಬುಲೆಟಿನ್ ಪ್ರಕಾರ, ಪ್ರಸ್ತುತ ಭಾರತದಲ್ಲಿ ಒಟ್ಟು 3,08,993 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದರೆ, ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 8,884ಕ್ಕೆ ಏರಿದೆ. ಒಟ್ಟು ಪ್ರಕರಣಗಳಲ್ಲಿ 1,54,330 ಕೊರೊನಾ ಸೋಂಕಿತರನ್ನು ಇಲ್ಲಿಯವರೆಗೆ ಯಶಸ್ವಿಯಾಗಿ ಗುಣಪಡಿಸಲಾಗಿದ್ದು, ಪ್ರಸ್ತುತ ದೇಶದಲ್ಲಿ 1,45,779 ಪ್ರಕರಣಗಳು ಸಕ್ರಿಯವಾಗಿವೆ.

    ತಮಿಳುನಾಡು ಭಾರತದಲ್ಲೇ ಎರಡನೇ ಅತೀ ಹೆಚ್ಚು ಕೊರೊನಾ ಸೋಂಕಿತರನ್ನು ಹೊಂದಿದ್ದರೂ ಅಲ್ಲಿ ಸಾವಿನ ಸಂಖ್ಯೆ ಕಡಿಮೆ ಇದ್ದು ಇಲ್ಲಿಯವರೆಗೂ ಕೊರೊನಾದಿಂದ ಕೇವಲ 367 ಜನರು ಸಾವನಪ್ಪಿದ್ದಾರೆ. ಇದನ್ನು ಬಿಟ್ಟರೆ ಸಾವಿನ ಸಂಖ್ಯೆಯಲ್ಲೂ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿ ಇದ್ದು, ಸುಮಾರು 3,717 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಎರಡನೇ ಸ್ಥಾನದಲ್ಲಿ ಗುಜರಾತ್ ಇದ್ದು, 1,415 ಜನರು ಸಾವನ್ನಪ್ಪಿದ್ದಾರೆ.

  • ಆಗಸ್ಟ್ ಬಳಿಕವಷ್ಟೇ ಶಾಲೆ ಕಾಲೇಜು ಪುನಾರಂಭ – ಸಚಿವ ರಮೇಶ್ ಪೋಖ್ರಿಯಾಲ್

    ಆಗಸ್ಟ್ ಬಳಿಕವಷ್ಟೇ ಶಾಲೆ ಕಾಲೇಜು ಪುನಾರಂಭ – ಸಚಿವ ರಮೇಶ್ ಪೋಖ್ರಿಯಾಲ್

    ನವದೆಹಲಿ: ಮಾರ್ಚ್ 16ರಿಂದ ದೇಶದ್ಯಾಂತ ಬಂದ್ ಆಗಿರುವ ಶಾಲೆ ಕಾಲೇಜುಗಳು ಆಗಸ್ಟ್ ಬಳಿಕವಷ್ಟೇ ಪುನಾರಂಭಗೊಳ್ಳಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ ನಿಶಾಂಕ್ ಪೋಖ್ರಿಯಾಲ್ ಸ್ಪಷ್ಟಪಡಿಸಿದ್ದಾರೆ.

    ದೆಹಲಿಯಲ್ಲಿ ನಡೆದ ಖಾಸಗಿ ಸಂದರ್ಶನದಲ್ಲಿ ಮಾತನಾಡಿರುವ ಅವರು ಶಾಲೆ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಮಾತನಾಡಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹೀಗಾಗಿ ಆಗಸ್ಟ್ ಬಳಿಕ ಶಾಲೆ ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಚಿಂತಿಸಿದೆ. ಇದಕ್ಕಾಗಿ ವಿದ್ಯಾರ್ಥಿಗಳು ಶಿಕ್ಷಕರು ಇತರೆ ಸಿಬ್ಬಂದಿಗಳಿಂದ ಪ್ರತ್ಯೇಕ ಮೂರು ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದರು.

    ಲಾಕ್‍ಡೌನ್ ವಿನಾಯತಿ ಬಳಿಕ ದೇಶದಲ್ಲಿ ಶಾಲೆ ಕಾಲೇಜು ಪುನಾರಂಭಗೊಳ್ಳುವ ಮಾತುಗಳು ಕೇಳಿ ಬರುತ್ತಿದೆ. ಶಾಲೆ ಕಾಲೇಜುಗಳು ಪುನಾರಂಭಕ್ಕೆ ಸಿದ್ಧತೆ ಮಾಡಿಕೊಳುತ್ತಿದ್ದು, ಜುಲೈನಿಂದ ಶಾಲೆ ಕಾಲೇಜುಗಳು ಶೇಕಡಾ 30% ಹಾಜರಾತಿಯೊಂದಿಗೆ ಬೆಳಗ್ಗೆ ಮತ್ತು ಸಂಜೆಯ ಕ್ಲಾಸ್‍ಗಳು ಆರಂಭವಾಗಲಿದೆ. ಅಲ್ಲದೇ ಹಸಿರು ಕಿತ್ತಳೆ ವಲಯದಲ್ಲಿ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಶುರುವಾಗಲಿದೆ. ರಾಜ್ಯ ಸರ್ಕಾರ ಇದಕ್ಕೆ ಅನುಮತಿ ನೀಡಲಿದೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಶಾಲೆ ಕಾಲೇಜುಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಸದ್ಯ ಅನುಮತಿ ನೀಡುವುದಿಲ್ಲ ಎಂದು ಸಚಿವರು ಸ್ಪಷ್ಟ ಪಡಿಸಿದ್ದಾರೆ.

    ಆದರೆ ಸಿಬಿಎಸ್‍ಸಿ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಎಸ್‍ಎಸ್‍ಎಲ್‍ಸಿ ಪಿಯುಸಿ ಹಾಗೂ ಡಿಪ್ಲೋಮಾ, ಪದವಿ ಪರೀಕ್ಷೆಗಳು ಬಾಕಿ ಉಳಿದುಕೊಂಡಿದ್ದು ಆಗಸ್ಟ್ ಅಂತ್ಯದ ವೇಳೆಗೆ ಪರೀಕ್ಷೆ ನಡೆಸಿ ಫಲಿತಾಂಶ ನೀಡುವ ಪ್ರಯತ್ನ ಮಾಡಲಿದ್ದೇವೆ. ಆಗಸ್ಟ್ ಬಳಿಕ ಪರಿಸ್ಥಿತಿ ಅನುಸರಿಸಿ ಶಾಲೆ ಕಾಲೇಜುಗಳನ್ನು ಆರಂಭಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

  • ಧಾರ್ಮಿಕ ಕ್ಷೇತ್ರಗಳಿಗೆ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರ

    ಧಾರ್ಮಿಕ ಕ್ಷೇತ್ರಗಳಿಗೆ ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಸರ್ಕಾರ

    -ಧಾರ್ಮಿಕ ಕ್ಷೇತಗಳಲ್ಲಿ ಪ್ರಸಾದ, ತೀರ್ಥ ನೀಡುವಂತಿಲ್ಲ

    ನವದೆಹಲಿ: ಕೇಂದ್ರ ಸರ್ಕಾರ ಎಲ್ಲಾ ಧಾರ್ಮಿಕ ಕ್ಷೇತ್ರಗಳಿಗೆ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಕಂಟೈನ್ಮೆಂಟ್ ಝೋನ್‍ಗಳಲ್ಲಿ ಹೊರತುಪಡಿಸಿ ಉಳಿದೆಲ್ಲಾ ಧಾರ್ಮಿಕ ಸ್ಥಳಗಳನ್ನು ತೆರೆಯಲು ಅನುಮತಿ ನೀಡಿದೆ. ಜೂನ್ 8ರಿಂದ ಮಂದಿರ, ಮಸೀದಿ, ಚರ್ಚ್ ತೆರೆಯಲಿದೆ.

    ಕೇಂದ್ರದ ಮಾರ್ಗಸೂಚಿಯಂತೆ ಧಾರ್ಮಿಕ ಕ್ಷೇತಗಳಲ್ಲಿ ಪ್ರಸಾದ, ತೀರ್ಥ ನೀಡುವಂತಿಲ್ಲ ಎಂದು ತಿಳಿಸಿದ್ದು, 65 ವರ್ಷ ಮೇಲ್ಪಟ್ಟ ಹಾಗೂ 10 ವರ್ಷದೊಳಗಿನ ಮಕ್ಕಳನ್ನು ಧಾರ್ಮಿಕ ಕೇಂದ್ರಗಳಿಗೆ ಪ್ರವೇಶ ನಿಷೇಧ ಮಾಡಲಾಗಿದೆ. ಕಡ್ಡಾಯವಾಗಿ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು. ಫೇಸ್ ಕವರ್ ಮತ್ತು ಮಾಸ್ಕ್ ಧರಿಸುವುದು ಕಡ್ಡಾಯ ಮಾಡಲಾಗಿದೆ. ಸಾಮೂಹಿಕ ಪ್ರಾರ್ಥನೆ ಬದಲಾಗಿ, ವೈಯಕ್ತಿಕ ಪೂಜೆಗಳಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದೆ.

    ಧಾರ್ಮಿಕ ಕ್ಷೇತ್ರವನ್ನು ನಿಯಮಿತವಾಗಿ ಸ್ವಚ್ಛ ಮಾಡುವುದು, ನಿಯಮಿತವಾಗಿ ಕೈ ಸ್ಯಾನಿಟೈಸ್ ಅಥವಾ ಸಾಬೂನಿಂದ ಕೈ ತೊಳೆದುಕೊಳ್ಳಲು ತಿಳಿಸಿದೆ. ಕೆಮ್ಮುವಾಗ ಸೀನುವಾಗ ಟಿಶು, ಕರವಸ್ತ್ರ ಬಳಸಿದ ಬಳಿಕ ಸೂಕ್ತವಾಗಿ ವಿಲೇವಾರಿ ಮಾಡಬೇಕು. ಧಾರ್ಮಿಕ ಕೇಂದ್ರ ಪ್ರವೇಶಕ್ಕೂ ಮುನ್ನ ಥರ್ಮಲ್ ಸ್ಕ್ರೀನಿಂಗ್ ಮತ್ತು ಕೈ ಸ್ವಚ್ಛ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ರೋಗದ ಗುಣಲಕ್ಷಣಗಳ ಇಲ್ಲದವರಿಗೆ ಮಾತ್ರ ಪ್ರವೇಶ ನೀಡಲು ಸೂಚನೆ ನೀಡಿದೆ. ಧಾರ್ಮಿಕ ಕ್ಷೇತ್ರಗಳಲ್ಲಿ ಕೊರೊನಾ ಮುನ್ನೆಚ್ಚರಿಕೆಗಳ ಬಗ್ಗೆ ಭಿತ್ತಿ ಪತ್ರ ಪೋಸ್ಟರ್ ಪ್ರದರ್ಶನ ಮಾಡುವುದು. ವಿಡಿಯೋ, ಆಡಿಯೋಗಳನ್ನು ಪ್ಲೇ ಮಾಡುವುದು ಕಡ್ಡಾಯ ಮಾಡಲಾಗಿದೆ.

    ಧಾರ್ಮಿಕ ಕೇಂದ್ರಗಳಲ್ಲಿ ಪ್ರವೇಶವನ್ನು ನಿಯಂತ್ರಿಸಣ, ಸಮಯದ ಆಧಾರದಲ್ಲಿ ಶಿಫ್ಟ್ ಗಳನ್ನು ಮಾಡಲು ತಿಳಿಸಿದೆ. ಅಲ್ಲದೇ ಶೂ ಚಪ್ಪಲಿಗಳನ್ನು ಭಕ್ತರು ವಾಹನದಲ್ಲಿ ಇಟ್ಟುಕೊಳ್ಳಬೇಕು, ಧಾರ್ಮಿಕ ಕ್ಷೇತ್ರದ ಒಳ ತರುವಂತಿಲ್ಲ, ಅನಿವಾರ್ಯವಾದರೆ ಚಪ್ಪಲಿಗಳನ್ನು ಪ್ರತ್ಯೇಕಿಸಿ ಇಡಬೇಕು ಎಂದು ಸೂಚಿಸಿದೆ.

    ಧಾರ್ಮಿಕ ಕ್ಷೇತ್ರದೊಳಗೆ ಸಾಮಾಜಿಕ ಅಂತರಕ್ಕೆ ಸೂಕ್ತ ಮಾರ್ಕ್ ಮಾಡುವುದು. ಧಾರ್ಮಿಕ ಕೇಂದ್ರದ ಆವರಣದೊಳಗಿನ ಅಂಗಡಿಗಳು, ಹೋಟೆಲ್, ಪಾರ್ಕಿಂಗ್ ಪ್ರದೇಶದಲ್ಲಿ ಅಂತರ ಕಾಯ್ದುಕೊಳ್ಳಬೇಕು. ಧಾರ್ಮಿಕ ಸ್ಥಳಗಳ ಪ್ರವೇಶ ಮತ್ತು ನಿರ್ಗಮನ ಪ್ರತ್ಯೇಕವಾಗಿಡುವ ಸಲಹೆಯನ್ನು ನೀಡಿದೆ. ಯಾವುದೇ ಸ್ಥಳದಲ್ಲಿ ಎಸಿಗಳ ಬಳಕೆ ಬಿಟ್ಟು ನೈಸರ್ಗಿಕ ಗಾಳಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದೆ.

  • ತಬ್ಲಿಘಿ ಜಮಾತ್: 2,200 ವಿದೇಶಿಗರಿಗೆ 10 ವರ್ಷ ನಿಷೇಧ ವಿಧಿಸಿದ ಕೇಂದ್ರ

    ತಬ್ಲಿಘಿ ಜಮಾತ್: 2,200 ವಿದೇಶಿಗರಿಗೆ 10 ವರ್ಷ ನಿಷೇಧ ವಿಧಿಸಿದ ಕೇಂದ್ರ

    ನವದೆಹಲಿ: ದೆಹಲಿಯ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ 2200 ಮಂದಿ ವಿದೇಶಿಯರಿಗೆ ಕೇಂದ್ರ ಸರ್ಕಾರ 10 ವರ್ಷಗಳ ನಿಷೇಧ ವಿಧಿಸಿದೆ.

    ಭಾರತದಲ್ಲಿ ಕೊರೊನಾ ಪ್ರಕರಣ ಆರಂಭಿಕವಾಗಿ ವರದಿಯಾಗುತ್ತಿದ್ದ ಸಂದರ್ಭದಲ್ಲಿ ತಬ್ಲಿಘಿ ಜಮಾತ್ ಧಾರ್ಮಿಕ ಸಭೆ ಇಡೀ ದೇಶಕ್ಕೆ ಶಾಕ್ ನೀಡಿತ್ತು. ದೇಶದ ಹಲವರು ರಾಜ್ಯಗಳಿಂದ ಆಗಮಿಸಿದ್ದ ಜಮಾತ್ ಸದಸ್ಯರಿಂದ ಸೋಂಕು ಹೆಚ್ಚಾಗಿ ಹರಡಿತ್ತು. ಭಾರತ ಮಾತ್ರವಲ್ಲದೇ ವಿದೇಶದಿಂದ ಆಗಮಿಸಿದ್ದ ಹಲವು ಪ್ರವಾಸಿಗರು ಕೂಡ ಸಭೆಯಲ್ಲಿ ಭಾಗಿಯಾಗಿದ್ದ ಮಾಹಿತಿ ಆ ಬಳಿಕ ಬಹಿರಂಗವಾಗಿತ್ತು. ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಆಗಮಿಸಿದ್ದ ಹಲವರು ನಿಯಮಗಳನ್ನು ಮೀರಿ ಸಭೆಯಲ್ಲಿ ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಈ ಸರ್ಕಾರ ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.

    2200ಕ್ಕೂ ಹೆಚ್ಚು ವಿದೇಶಿ ಪ್ರಜೆಗಳನ್ನು ಕೇಂದ್ರ ಗೃಹ ಇಲಾಖೆ ಬ್ಲಾಕ್ ಲಿಸ್ಟ್ ಗೆ ಸೇರಿಸಿದ್ದು, ಇವರ ಮೇಲೆ 10 ವರ್ಷ ಭಾರತಕ್ಕೆ ಆಗಮಿಸದಂತೆ ನಿಷೇಧ ವಿಧಿಸಿದೆ. ಜಮಾತ್ ಸಭೆಯಲ್ಲಿ ಭಾಗಿಯಾಗಿದ್ದ ಇವರು ನಿಯಮಗಳನ್ನು ಉಲ್ಲಂಘಿಸಿ ದೆಹಲಿಯ ಮರ್ಕಜ್ ಭವನದಲ್ಲಿ ಜರುಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ಸರ್ಕಾರ ಗುರುತಿಸಿದೆ. ನಿಷೇಧ ಪಟ್ಟಿಯಲ್ಲಿ ಹೆಚ್ಚಿನ ಮಂದಿ ಇಂಡೋನೇಷ್ಯಾಗೆ ಸೇರಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ದೆಹಲಿ ಕಾರ್ಯಕ್ರಮದ ಬಳಿಕ ಹಲವರು ದೇಶದ ವಿವಿಧ ಭಾಗಗಳಲ್ಲಿ ಜರುಗಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪರಿಣಾಮ ದೇಶದಲ್ಲಿ ಕೊರೊನಾ ಪ್ರಕರಣ ಸಂಖ್ಯೆ ದಿಢೀರ್ ಎಂದು ಹೆಚ್ಚಾಗಿತ್ತು. ಮೇ 13 ರಿಂದ 17ರ ವರೆಗೂ ದೆಲಿಯ ನಿಜಾಮುದ್ದೀನ್‍ನಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದಿತ್ತು.

  • ಪ್ರವಾಸಿ ಕಾರ್ಮಿಕರಿಗೆ ತಲಾ 10 ಸಾವಿರ ನೀಡುವಂತೆ ಕೇಂದ್ರಕ್ಕೆ ಮಮತಾ ಬ್ಯಾನರ್ಜಿ ಒತ್ತಾಯ

    ಪ್ರವಾಸಿ ಕಾರ್ಮಿಕರಿಗೆ ತಲಾ 10 ಸಾವಿರ ನೀಡುವಂತೆ ಕೇಂದ್ರಕ್ಕೆ ಮಮತಾ ಬ್ಯಾನರ್ಜಿ ಒತ್ತಾಯ

    ಕೋಲ್ಕತ್ತಾ: ಕೊರೊನಾ ನಿಯಂತ್ರಣ ಹಾಗೂ ಪರಿಹಾರ ಕ್ರಮಗಳ ಕುರಿತಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ಕೇಂದ್ರ ಸರ್ಕಾರ ನಡುವೆ ನಡೆಯುತ್ತಿರುವ ಬ್ಲೇಮ್ ಗೇಮ್ ಮುಂದುವರಿದಿದೆ. ಕೇಂದ್ರ ಸರ್ಕಾರ ಪ್ರತಿ ಪ್ರವಾಸಿ ಕಾರ್ಮಿಕರ ಬ್ಯಾಂಕ್ ಖಾತೆಗೆ 10 ಸಾವಿರ ರೂ.ಗಳನ್ನು ನೀಡುವಂತೆ ಬುಧವಾರ ಸಿಎಂ ಮಮತಾ ಬ್ಯಾನರ್ಜಿ ಒತ್ತಾಯ ಮಾಡಿದ್ದಾರೆ.

    ಪ್ರಧಾನಿ ಮಂತ್ರಿಗಳ ಪರಿಹಾರ ನಿಧಿಯನ್ನು ಬಳಕೆ ಮಾಡಿಕೊಳ್ಳುವ ಉತ್ತಮ ಸಮಯ ಇದಾಗಿದೆ. ಕೊರೊನಾ ಸಂದಿಗ್ಧ ಸಂದರ್ಭದಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟದಿಂದ ಹೊರಬರಲು ಅಸಂಘಟಿತ ವಲಯ ಹಾಗೂ ಪ್ರವಾಸಿ ಕಾರ್ಮಿಕರಿಗೆ ತಲಾ 10 ಸಾವಿರ ರೂ. ನೀಡಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

    ಅಂಫಾನ್ ಚಂಡಮಾರುತ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡಿದ್ದ ಕುಟುಂಬಗಳ ನೆರವಿಗೆ ಬಂದಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರ, ನಿನ್ನೆಯಷ್ಟೇ ತಲಾ 20 ಸಾವಿರ ರೂ. ಗಳನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿತ್ತು. ಇದರ ಬೆನ್ನಲ್ಲೇ ಸದ್ಯ ಮಮತಾ ಅವರು ಕಾರ್ಮಿಕರ ನೆರವಿಗೆ ಕೇಂದ್ರ ಆಗಮಿಸಬೇಕು. ನಮ್ಮ ಸರ್ಕಾರ ಚಂಡಮಾರುತ ಹೊಡೆತಕ್ಕೆ ಸಿಲುಕಿ ಸಮಸ್ಯೆ ಎದುರಿಸಿದ್ದ 5 ಲಕ್ಷ ಜನರಿಗೆ ನೆರವು ನೀಡಿದ್ದೇವೆ. ಅಲ್ಲದೇ 23.3 ಲಕ್ಷ ಬೆಳೆ ನಷ್ಟ ಪರಿಹಾರವನ್ನು ಬಿಡುಗಡೆ ಮಾಡಿದ್ದೇವೆ ಎಂದು ವಿವರಿಸಿದ್ದಾರೆ.

    ಇತ್ತ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹಾ, ಸಿಎಂ ಮಮತಾ ಬ್ಯಾನರ್ಜಿ ಸರ್ಕಾರ ಪ್ರವಾಸಿ ಕಾರ್ಮಿಕರನ್ನು ವಾಪಸ್ ಕರೆಯಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ತಮ್ಮ ಅವ್ಯವಸ್ಥೆಯನ್ನು ಮುಚ್ಚಿ ಹಾಕಿಕೊಳ್ಳಲು ಇಂತಹ ಹೇಳಿಕೆ ನೀಡಿ ಗಮನ ಬೇರೆಡೆ ಸೆಳೆಯುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಪ್ರವಾಸಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದೆ. ಆದರೆ ಮಮತಾ ಅವರ ಸರ್ಕಾರ ಅವರಿಗೆ ಹೊಸ ಜೀವನವನ್ನು ಕಲ್ಪಿಸಿಕೊಡುವ ಕಾರ್ಯ ಮಾಡುವ ಬದಲು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ. ರಾಜ್ಯದ ಪ್ರವಾಸಿ ಕಾರ್ಮಿಕರು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇತ್ತ ಪಶ್ಚಿಮ ಬಂಗಾಳದ ಸರ್ಕಾರ ಮಾಹಿತಿ ಅನ್ವಯ ಸುಮಾರು 5 ಲಕ್ಷ ಪ್ರವಾಸಿ ಕಾರ್ಮಿಕರು ವಾಪಸ್ ಆಗಿದ್ದಾರೆ.

     

  • ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದೆ – ಕೇಂದ್ರಕ್ಕೆ ಬರೆದ ಪತ್ರದಲ್ಲಿ ವೈದ್ಯಕೀಯ ಕ್ಷೇತ್ರದ ಕಳವಳ

    ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದೆ – ಕೇಂದ್ರಕ್ಕೆ ಬರೆದ ಪತ್ರದಲ್ಲಿ ವೈದ್ಯಕೀಯ ಕ್ಷೇತ್ರದ ಕಳವಳ

    ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಎರಡು ಲಕ್ಷದ ಗಡಿಯಲ್ಲಿದ್ದು ಸಮುದಾಯಕ್ಕೆ ಹರಡಿಯಾಗಿದೆ. ಆದರೆ ಕೇಂದ್ರ ಸರ್ಕಾರ ಸೋಂಕು ಸಮುದಾಯಕ್ಕೆ ಹರಡಿಲ್ಲ ಎಂದು ಸುಳ್ಳು ಹೇಳುತ್ತಿದೆ ಎಂದು ವೈದ್ಯಕೀಯ ಕ್ಷೇತ್ರದ ಹಲವು ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ.

    ಕೊರೊನಾ ಸೋಂಕು ಸಮುದಾಯಕ್ಕೆ ಹರಡಿರುವ ಬಗ್ಗೆ ಉಲ್ಲೇಖಿಸಿ ಇಂಡಿಯನ್ ಪಬ್ಲಿಕ್ ಹೆಲ್ತ್ ಅಸೋಸಿಯೇಷನ್ (ಐಪಿಹೆಚ್‍ಎ), ಇಂಡಿಯನ್ ಅಸೋಸಿಯೇಷನ್ ಅಂಡ್ ಸೋಷಿಯಲ್ ಮೆಡಿಸಿನ್ (ಐಎಪಿಎಸ್‍ಎಂ) ಮತ್ತು ಇಂಡಿಯನ್ ಅಸೋಸಿಯೇಷನ್ ಆಫ್ ಎಪಿಡೆಮಿಯಾಲಜಿಸ್ಟ್ (ಐಎಇ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿವೆ.

    ಪತ್ರದಲ್ಲಿ ಕೊರೊನಾ ನಿಯಂತ್ರಿಸಲು ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರಗಳು ಸಮರ್ಪಕವಾಗಿಲ್ಲ ಎಂದು ಈ ಮೂರು ಸಂಸ್ಥೆಗಳು ಆರೋಪಿಸಿವೆ. ಮೊದಲ ಹಂತದ ಲಾಕ್‍ಡೌನ್ ಜಾರಿಗೊಳಿಸಿದಾಗಲೇ ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕಿತ್ತು. ಸೋಂಕು ಹರಡುವಿಕೆ ಹೆಚ್ಚಾದ ಮೇಲೆ ಕಾರ್ಮಿಕರನ್ನು ಕಳುಹಿಸಿದ್ದು ತಪ್ಪು ನಿರ್ಧಾರವಾಗಿದೆ. ಅವರನ್ನು ಕೊರೊನಾ ಸೋಂಕು ಸಮುದಾಯಕ್ಕೆ ಹರಡಿದ ಮೇಲೆ ಕಳುಹಿಸಲಾಗಿದೆ. ಇದರಿಂದ ಕೊರೊನಾ ಇನ್ನಷ್ಟು ಹರಡುವ ಸಾಧ್ಯತೆ ಇದೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಹರಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂಬ ಆತಂಕವನ್ನು ವ್ಯಕ್ತಪಡಿಸಲಾಗಿದೆ.

    ನಗರ ಪ್ರದೇಶಗಳಿಗೆ ಹೋಲಿಸಿಕೊಂಡರೆ ನಮ್ಮ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೌಕರ್ಯಗಳು ಬಹಳ ಕಡಿಮೆ. ಸೌಕರ್ಯಗಳಿಲ್ಲದ ಕಡೆ ಪರಿಸ್ಥಿತಿ ನಿರ್ವಹಣೆ ಮಾಡುವುದು ಕಷ್ಟವಾಗಲಿದೆ. ಇದರಿಂದ ಕೊರೊನಾ ಕಷ್ಟ ಇನ್ನೂ ಹೆಚ್ಚಾಗಲಿದೆ. ಆದ್ದರಿಂದ ಜಿಲ್ಲಾ ಮಟ್ಟದಲ್ಲಿ ಹೆಚ್ಚಿನ ಕ್ರಮಕೈಗೊಳ್ಳಬೇಕಾಗಿದೆ. ಜಿಲ್ಲಾಡಳಿಗಳಿಗೆ ಹೆಚ್ಚಿನ ಅಧಿಕಾರ ಮತ್ತು ನೆರವು ನೀಡಿ. ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕೂಡಲೇ ಕ್ಲಷ್ಟರ್ ಮಟ್ಟದಲ್ಲಿ ಲಾಕ್‍ಡೌನ್ ಜಾರಿ ಮಾಡಬೇಕು. ಜೊತೆಗೆ ಸೋಂಕಿತರನ್ನು ಬಹಳ ಬೇಗ ಪತ್ತೆಹಚ್ಚಬೇಕು. ಸೂಕ್ತ ಐಸೊಲೇಷನ್ ವ್ಯವಸ್ಥೆ ಮಾಡಬೇಕು ಎಂದು ಪತ್ರದಲ್ಲಿ ಸಲಹೆ ನೀಡಲಾಗಿದೆ.

  • ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅನಧಿಕೃತ ಕಟ್ಟಡಗಳ ತೆರವಿಗೆ ಡಿಸಿ ನೋಟಿಸ್

    ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅನಧಿಕೃತ ಕಟ್ಟಡಗಳ ತೆರವಿಗೆ ಡಿಸಿ ನೋಟಿಸ್

    ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿರುವವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು, ಈಗಾಗಲೇ ಕಟ್ಟಡ ನಿರ್ಮಾಣ ಮಾಡಿರುವವರಿಗೆ ಕಟ್ಟಡ ತೆರವುಗೊಳಿಸಲು ಸೂಚಿಸಿ ನೋಟಿಸ್ ಜಾರಿ ಮಾಡಿದ್ದಾರೆ.

    ಈಗಾಗಲೇ ಅನಧಿಕೃತ ಕಟ್ಟದ ನಿರ್ಮಾಣ ಮಾಡಿರುವ 8 ಮಂದಿಗೆ ನೋಟಿಸ್ ಜಾರಿ ಮಾಡಿದ್ದು, ಇನ್ನು ಉಳಿದ 7 ಅಕ್ರಮ ಕಟ್ಟಡ ಸಂಬಂಧ ಕ್ರಮಕ್ಕೆ ಜಿಲ್ಲಾಧಿಕಾರಿಗಳು ಮುಂದಾಗಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಕೇಂದ್ರ ಸರ್ಕಾರ 2012ರ ಅಕ್ಟೋಬರ್ 4ರಂದು ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ಪ್ರಕಾರ ಪ್ರಸ್ತುತ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕರಡು ಅಧಿಸೂಚನೆ 2010ರ ಅಗಸ್ಟ್ 31ರ ಬಳಿಕ ಕಟ್ಟಡ ನಿರ್ಮಾಣ ಮಾಡಿರುವ 3 ಪ್ರಕರಣಗಳಲ್ಲಿ ಅನ್ಯಕ್ರಾಂತವಾಗಿರುವ ಆದೇಶವನ್ನು ರದ್ದುಪಡಿಸುವ ಕ್ರಮಕ್ಕೆ ಜಿಲ್ಲಾಧಿಕಾರಿಯವರು ಮುಂದಾಗಿದ್ದಾರೆ.

    ಪ್ರವಾಸೋದ್ಯಮ ಇಲಾಖೆಯವರು ಅನುಮತಿಸಿರುವ ಯಾವುದೇ ಅನ್ಯಕ್ರಾಂತವಾಗದೇ ನಿರ್ಮಿಸಿರುವ 3 ಹೋಂ ಸ್ಟೇ ಕಟ್ಟಡಗಳಿಗೆ ನೀಡಿರುವ ಅನುಮತಿಯನ್ನು ಹಿಂಪಡೆಯುವ ಆದೇಶಕ್ಕೆ ಜಿಲ್ಲಾಧಿಕಾರಿಯವರು ಕ್ರಮ ತೆಗೆದುಕೊಂಡಿದ್ದಾರೆ. ಅನುಮತಿ ಪಡೆಯದ ಇನ್ನೊಂದು ಹೋಂ ಸ್ಟೇ ನಡೆಸದಂತೆ ಬೀಗಮುದ್ರೆ ಹಾಕಲಾಗಿತ್ತು. ಆದರೂ ಸಹ ಬೀಗಮುದ್ರೆ ಆದೇಶ ಉಲ್ಲಂಘಿಸಿ ಹೋಂ ಸ್ಟೇ ತೆರೆದು ಕಟ್ಟಡ ದುರಸ್ತಿ ಕಾರ್ಯ ಕೈಗೊಂಡಿದ್ದ ಸದರಿ ಮಾಲೀಕರ ವಿರುದ್ಧ ಕ್ರಮಿನಲ್ ಮೊಕದ್ದಮೆ ಹೂಡಲು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.

    ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನು ಸೂಕ್ಷ್ಮ ಪರಿಸರ ವಲಯವೆಂದು ಅಧಿಸೂಚನೆ ಹೊರಡಿಸಿದ್ದು, ಇದರ ಅನುಸಾರ ಬಂಡೀಪುರ ಕಾಡಂಚಿನ ಒಟ್ಟು 123 ಗ್ರಾಮಗಳು ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಗೆ ಸೇರಿದೆ. ಈ ಗ್ರಾಮಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಚಟುವಟಿಕೆ ಕೈಗೊಳ್ಳಲು ಅವಕಾಶವಿರುವುದಿಲ್ಲ. ಆದಾಗಿಯೂ ಅಧಿಸೂಚನೆ ಉಲ್ಲಂಘಿಸಿ ಬೃಹತ್ ಕಟ್ಟಡ ನಿರ್ಮಾಣ ಮಾಡಲಾಗಿದೆ. ಪೂರ್ವಾನುಮತಿ ಪಡೆಯದೇ ನಿರ್ಮಿಸಲಾಗಿರುವ ಅಕ್ರಮ ಕಟ್ಟಡಗಳ ತೆರವಿಗೆ ಕ್ರಮ ವಹಿಸುವಂತೆ ಬಂಡೀಪುರ ಹುಲಿ ಯೋಜನೆಯ ಅರಣ್ಯ ಸಂರಕ್ಷಣಾಧಿಕಾರಿ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯವರು ವರದಿ ನೀಡುವಂತೆ ತಹಶೀಲ್ದಾರರಿಗೆ ಪತ್ರ ಬರೆದಿದ್ದರು. ತಹಶೀಲ್ದಾರರು ನೀಡಿದ ವರದಿ ಅನ್ವಯ ಜಿಲ್ಲಾಧಿಕಾರಿಯವರು ಕ್ರಮಕ್ಕೆ ಮುಂದಾಗಿದ್ದಾರೆ.

  • ಇನ್ನೂ 1 ತಿಂಗಳು ಶಾಲಾ, ಕಾಲೇಜು ತೆರೆಯುವಂತಿಲ್ಲ

    ಇನ್ನೂ 1 ತಿಂಗಳು ಶಾಲಾ, ಕಾಲೇಜು ತೆರೆಯುವಂತಿಲ್ಲ

    – ರಾಜ್ಯ ಸರ್ಕಾರಗಳಿಗೆ  ವರದಿ ಸಲ್ಲಿಸಲು ಸೂಚನೆ
    – ಪೋಷಕರು, ಶಿಕ್ಷಣ ಸಂಸ್ಥೆಗಳೊಂದಿಗೆ ಸಮಾಲೋಚಿಸಿ ವರದಿ ತಯಾರಿ

    ನವದೆಹಲಿ: ಕೇಂದ್ರ ಸರ್ಕಾರ ಲಾಕ್‍ಡೌನ್ 5.0 ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಜುಲೈ ನಂತರ ಶಾಲಾ ಕಾಲೇಜುಗಳನ್ನು ತೆರೆಯುವ ಬಗ್ಗೆ ಪ್ರಸ್ತಾಪಿಸಿದೆ.

    ಕೊರೊನಾ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಶಾಲಾ ಕಾಲೇಜುಗಳನ್ನು ತೆರೆಯುವುದು ಸವಾಲಿನ ಸಂಗತಿಯಾಗಿದ್ದು, ಈ ಕುರಿತು ಜುಲೈ ಬಳಿಕ ನಿರ್ಧಾರ ಕೈಗೊಳ್ಳಳಾಗುವುದು ಎಂದು ತಿಳಿಸಿದೆ. ಶಾಲೆ, ಕಾಲೇಜು, ಶಿಕ್ಷಣ, ತರಬೇತಿ, ಕೋಚಿಂಗ್ ಸೆಂಟರ್‍ ಗಳನ್ನು ತೆರೆಯುವ ಕುರಿತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಜೊತೆಗೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.

    ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸಹ ಶಿಕ್ಷಣ ಸಂಸ್ಥೆಗಳು ಹಾಗೂ ಪೋಷಕರೊಂದಿಗೆ ಚರ್ಚೆ ನಡೆಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಶಿಕ್ಷಣ ಸಂಸ್ಥೆಗಳು ಹಾಗೂ ಪೋಷಕರು ನೀಡುವ ಪ್ರತಿಕ್ರಿಯೆ, ಸಲಹೆಯನ್ನು ಪಡೆಯಬೇಕು. ಇದರ ಆಧಾರದ ಮೇಲೆ ಶಾಲೆಗಳನ್ನು ತೆರೆಯುವುದರ ಬಗ್ಗೆ ಜುಲೈನಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

    ರಾಜ್ಯಗಳು ಸಲ್ಲಿಸುವ ವರದಿ ಆಧಾರದ ಮೇಲೆ ಕೇಂದ್ರ ಸಚಿವರು, ಸಂಬಂಧಪಟ್ಟ ಇಲಾಖೆಗಳು ಹಾಗೂ ಸ್ಟೇಕ್‍ಹೋಲ್ಡರ್ಸ್ ಗಳೊಂದಿಗೆ ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಕೊರೊನಾ ವೈರಸ್ ಹರಡುವ ಕುರಿತು ಚರ್ಚಿಸಲಾಗುವುದು. ನಂತರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸಿಜರ್(ಎಸ್‍ಒಪಿ) ಸಿದ್ಧಪಡಿಸಲಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

  • ಚೀನಾ ವಿಚಾರದಲ್ಲಿ ಮೌನ, ಬಿಕ್ಕಟ್ಟಿನ ವೇಳೆ ಊಹಾಪೋಹಗಳಿಗೆ ಕಾರಣವಾಗಲಿದೆ: ರಾಗಾ

    ಚೀನಾ ವಿಚಾರದಲ್ಲಿ ಮೌನ, ಬಿಕ್ಕಟ್ಟಿನ ವೇಳೆ ಊಹಾಪೋಹಗಳಿಗೆ ಕಾರಣವಾಗಲಿದೆ: ರಾಗಾ

    ನವದೆಹಲಿ: ಚೀನಾದೊಂದಿಗಿನ ಗಡಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮೌನವಾಗಿರುವುವುದು ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರೀ ಊಹಾಪೋಹಗಳು ಹಾಗೂ ಅನಿಶ್ಚಿತತೆಗೆ ಕಾರಣವಾಗಲಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

    ಭಾರತ ಚೀನಾ ಗಡಿಯಲ್ಲ ಉದ್ವಿಗ್ನತೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಟ್ವೀಟ್ ಮಾಡಿರುವ ಅವರು, ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗಳ ಬಗ್ಗೆ ಮೌನ ಮುರಿದು ವಾಸ್ತವದಲ್ಲಿ ಏನು ನಡೆಯುತ್ತಿದೆ ಎಂದು ಹೇಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸಿದ್ದಾರೆ.

    ಕಳೆದ ಮೂರು ವಾರಗಳಿಂದ ಗಡಿಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಸೈನಿಕರು ಮುಖಾಮುಖಿಯಾಗಿದ್ದಾರೆ. ಚೀನಾ ಯುದ್ಧ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ಈ ಹಿನ್ನಲೆ ದೇಶದ ಜನರಿಗೆ ಈ ಬಗ್ಗೆ ಸ್ಪಷ್ಟವಾಗಿ ತಿಳಿಸಬೇಕು ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.

    ಇದಕ್ಕೂ ಮೊದಲು ಅವರು ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿ, ಗಡಿ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಈ ಬಗ್ಗೆ ನಾನು ಮಾತನಾಡುವುದಿಲ್ಲ ಸರ್ಕಾರ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗಳನ್ನು ಹೇಳಬೇಕು. ವಿಚಾರವನ್ನು ದೇಶದ ಮುಂದೆ ಪಾರದರ್ಶಕವಾಗಿಡಬೇಕು ಎಂದು ಅಭಿಪ್ರಾಯ ಪಟ್ಟಿದ್ದರು.