Tag: centra govt

  • ಲಾಕ್‍ಡೌನ್ 5.Oಗೆ ತಯಾರಿ- ಇಂದು ರಾಜ್ಯ ಸರ್ಕಾರದ ಅಧಿಕಾರಿಗಳ ಜೊತೆ ಮಹತ್ವದ ಸಭೆ

    ಲಾಕ್‍ಡೌನ್ 5.Oಗೆ ತಯಾರಿ- ಇಂದು ರಾಜ್ಯ ಸರ್ಕಾರದ ಅಧಿಕಾರಿಗಳ ಜೊತೆ ಮಹತ್ವದ ಸಭೆ

    ನವದೆಹಲಿ: ನಾಲ್ಕನೇ ಹಂತದ ಲಾಕ್‍ಡೌನ್ ಮುಕ್ತಾಯಕ್ಕೆ ಇನ್ನು 4 ದಿನಗಳು ಮಾತ್ರ ಬಾಕಿ ಉಳಿದುಕೊಂಡಿದೆ. ಈ ನಡುವೆ ಮೇ 31 ಬಳಿಕ ಮುಂದೇನು ಅನ್ನೊ ಲೆಕ್ಕಾಚಾರದಲ್ಲಿರುವ ಕೇಂದ್ರ ಸರ್ಕಾರ ಮತ್ತೆರಡು ವಾರಗಳ ಕಾಲ ಲಾಕ್‍ಡೌನ್ ವಿಸ್ತರಣೆ ಮಾಡುವ ಲೆಕ್ಕಾಚಾರದಲ್ಲಿದೆಯಂತೆ. ಜೂನ್ 1ರಿಂದ 14ರ ವರೆಗೂ ಎರಡು ವಾರಗಳ ಕಾಲ ಲಾಕ್‍ಡೌನ್ ವಿಸ್ತರಣೆ ಆಗಲಿದ್ದು ಮೇ 31ರ ‘ಮನ್ ಕೀ ಬಾತ್’ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ಗೃಹ ಇಲಾಖೆ ಮೂಲಗಳು ಹೇಳುತ್ತಿವೆ.

    ಲಾಕ್‍ಡೌನ್ ವಿಸ್ತರಣೆ ಬಗ್ಗೆ ತಿರ್ಮಾನಿಸಿರುವ ಗೃಹ ಇಲಾಖೆ, ಈ ಬಾರಿ ನೀಡಬೇಕಿರುವ ವಿನಾಯ್ತಿಗಳ ಬಗ್ಗೆ ಚರ್ಚೆ ಮಾಡುತ್ತಿದೆ. ಈ ಬಾರಿ ಯಾವುದಕ್ಕೆ ವಿನಾಯ್ತಿ ನೀಡಬೇಕು? ಯಾವುದಕ್ಕೆ ನಿರ್ಬಂಧ ಮುಂದುವರಿಸಬೇಕು ಎನ್ನುವ ಬಗ್ಗೆ ಚಿಂತನೆ ನಡೆಸುತ್ತಿದೆ. ಈ ಸಂಬಂಧ ಚರ್ಚೆ ನಡೆಸಲು ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಭೆ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಲಿದ್ದಾರೆ.

    ಇಂದು ಬೆಳಗ್ಗೆ 11.30ಕ್ಕೆ ಸಭೆ ಆರಂಭವಾಗಲಿದ್ದು, 5ನೇ ಹಂತದ ಲಾಕ್‍ಡೌನ್‍ಗೆ ಅಭಿಪ್ರಾಯಗಳನ್ನು ಪಡೆದು ಬ್ಲೂ ಪ್ರಿಂಟ್ ಸಿದ್ಧಪಡಿಸಲಿದ್ದಾರೆ. ಐದನೇ ಹಂತದ ಲಾಕ್‍ಡೌನ್ ಸಿದ್ಧತೆಯಲ್ಲಿರುವ ಕೇಂದ್ರ ಸರ್ಕಾರ ಆರೋಗ್ಯ ಇಲಾಖೆ ಮೂಲಕ 11 ನಗರಗಳನ್ನು ಗುರುತಿಸಿದೆ. ದೆಹಲಿ, ಮುಂಬೈ, ಬೆಂಗಳೂರು, ಚೆನೈ, ಅಹಮಾದಾಬಾದ್, ಕೊಲ್ಕತ್ತಾ, ಪುಣೆ, ಥಾಣೆ, ಜೈಪುರ್, ಸೂರತ್ ಮತ್ತು ಇಂದೋರ್ ನಲ್ಲಿ ದೇಶದಲ್ಲಿರುವ ಒಟ್ಟು ಕೊರೊನಾ ಸೋಂಕಿತರ ಪೈಕಿ ಶೇ.70 ರಷ್ಟು ಸೋಂಕಿತರಿದ್ದು ಇಲ್ಲಿ ವಿಶೇಷ ಮುತುವರ್ಜಿ ವಹಿಸುವ ಸಾಧ್ಯತೆ ಇದೆ. ಹೀಗಾಗಿ 11 ನಗರಗಳ ಕಮಿಷನರ್ ಗಳ ಜೊತೆಗೂ ರಾಜೀವ್ ಗೌಬಾ ಚರ್ಚೆ ನಡೆಸಲಿದ್ದಾರೆ.

    5ನೇ ಹಂತದ ಲಾಕ್‍ಡೌನ್ ನಲ್ಲಿ ಮಾಲ್, ಸಿನಿಮಾ ಥಿಯೇಟರ್, ಶಾಪಿಂಗ್ ಮಾಲ್, ಆನ್ಲೈನ್ ದೂರ ಶಿಕ್ಷಣ ಹೊರತಾದ ಶಾಲಾ- ಕಾಲೇಜು ಮತ್ತು ಇತರೆ ಶೈಕ್ಷಣಿಕ ಚಟುವಟಿಕೆಗಳು, ಬೃಹತ್ ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂತೆ, ಜಾತ್ರೆ, ಉತ್ಸವದಂತಹ ಹೆಚ್ಚು ಜನರು ಸೇರುವ ಪ್ರದೇಶ ಮತ್ತು ಕಾರ್ಯಕ್ರಮಗಳಿಗೆ ನಿರ್ಬಂಧ ಮುಂದುವರಿಸಬಹುದು. ಮದುವೆ, ಸಾವುಗಳಿಗೆ ಈಗಿರುಗ ನಿಯಮ ಮುಂದುವರಿಸಿ ಸೋಂಕು ಕಡಿಮೆ ಇರುವ ರಾಜ್ಯಗಳಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಜವಬ್ದಾರಿ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ನೀಡಬಹುದು ಎನ್ನಲಾಗಿದೆ.

    ಜಿಮ್, ಬಾರ್, ರೆಸ್ಟೋರೆಂಟ್, ಪಾರ್ಟಿ ಹಾಲ್ ಆರಂಭಿಸುವುದು. ದೇವಸ್ಥಾನ, ಚರ್ಚೆ, ಮಸೀದಿ ತೆರೆಯುವುದು, ಮೆಟ್ರೊ ಸಂಚಾರ ಆರಂಭ, ನಿಷೇಧಾಜ್ಞೆ ಸಮಯ ವಿಸ್ತರಣೆ, ಅಂತರಾಜ್ಯ ಮುಕ್ತ ಸಂಚಾರ, ಸೀಮಿತ ಅಂತರಾಷ್ಟ್ರೀಯ ವಿಮಾನಗಳ ಹಾರಾಟ, ಮತ್ತಷ್ಟು ಹೆಚ್ಚುವರಿ ರೈಲುಗಳ ಸಂಚಾರಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ನೀಡಬಹುದು ಎನ್ನಲಾಗಿದೆ.