Tag: center

  • ಸಾಮಾಜಿಕ ಮಾಧ್ಯಮವನ್ನು ಜವಾಬ್ದಾರಿಯುತವಾಗಿಸಲು ಕಾನೂನು ಬದಲಾವಣೆಗೆ ಕೇಂದ್ರ ಯೋಜನೆ

    ಸಾಮಾಜಿಕ ಮಾಧ್ಯಮವನ್ನು ಜವಾಬ್ದಾರಿಯುತವಾಗಿಸಲು ಕಾನೂನು ಬದಲಾವಣೆಗೆ ಕೇಂದ್ರ ಯೋಜನೆ

    ನವದೆಹಲಿ: ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಜವಾಬ್ದಾರಿಯುತವಾಗಿಸಲು ಕಾನೂನು ಬದಲಾವಣೆಗಳನ್ನು ತರಲು ಯೋಜಿಸಲಾಗಿದೆ ಎಂದು ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

    ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್‌ಗಳನ್ನು ಹೆಚ್ಚು ಜವಾಬ್ದಾರಿಯುತವಾಗಿಸಬೇಕು ಎಂದು ದೇಶದಲ್ಲಿ ಒಮ್ಮತವಿದೆ. ಮೊಬೈಲ್ ಫೋನ್ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಇಂಟರ್‌ನೆಟ್ ಪರಿವರ್ತಕ ಬದಲಾವಣೆಗಳನ್ನು ಮಾಡಿದೆ. ಆದರೆ ಅವರೂ ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.

    ಸಾಮಾಜಿಕ ಜಾಲತಾಣಗಳಿಗೆ ಕಾನೂನು ಬದಲಾವಣೆಗಳ ಅಗತ್ಯವಿದೆ, ಅದನ್ನು ನಾವು ಜಾರಿಗೊಳಿಸುತ್ತೇವೆ. ಮಾಧ್ಯಮ ಗುಂಪುಗಳಲ್ಲಿ ಸ್ವಯಂ ನಿಯಂತ್ರಣದ ಅಗತ್ಯವಿದೆ, ಸ್ವಯಂ ನಿಯಂತ್ರಣವನ್ನೂ ಮಾಡಿಸುತ್ತೇವೆ. ಅಗತ್ಯವಿರುವಲ್ಲೆಲ್ಲಾ ನಾವು ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಜವಾಬ್ದಾರಿಯುತವಾಗಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ವರ್ಕ್ ಔಟ್ ಆಯ್ತು ಮೋದಿಯ ಮನ್ ಕೀ ಬಾತ್ ಐಡಿಯಾ – ಎಂ.ಟೆಕ್ ಪದವೀಧರೆಯ ಬಾಳು ಬೆಳಗುತ್ತಿದೆ ಬಾಳೆ ದಿಂಡು

    ಬದಲಾವಣೆ ಏನು?
    ಕೇಂದ್ರ ಸರ್ಕಾರ ಈ ಹಿಂದಿನ ಸಾಮಾಜಿಕ ಮಾಧ್ಯಮದ ನಿಯಮಗಳನ್ನು ಅಂತಿಮಗೊಳಿಸುವಲ್ಲಿ ಕೆಲಸ ಮಾಡುತ್ತಿದೆ. ಹೊಸದಾಗಿ ಜಾರಿಗೆ ತರಲಿರುವ ನಿಯಮಗಳು ಅನಿಯಂತ್ರಿತ ಕಂಟೆಂಟ್ ಮಾಡರೇಶನ್, ನಿಷ್ಟ್ರಿಯತೆ ಅಥವಾ ಯಾವುದೇ ವಿವರಣೆಯಿಲ್ಲದ ಟ್ವಿಟ್ಟರ್ ಹಾಗೂ ಫೇಸ್‌ಬುಕ್‌ನಂತಹ ದೊಡ್ಡ ಟೆಕ್ ಕಂಪನಿಗಳು ಮಾಡಿದ ಪೋಸ್ಟ್‌ಗಳನ್ನು ತೆಗೆದು ಹಾಕುವ ನಿರ್ಧಾರದ ವಿರುದ್ಧವಾಗಿದೆ ಹಾಗೂ ಬಳಕೆದಾರರು ಕುಂದುಕೊರತೆಗಳನ್ನು ಎತ್ತಿ ತೋರಿಸುವ ಅವಕಾಶವನ್ನು ಪಡೆಯುತ್ತಾರೆ ಎನ್ನಲಾಗಿದೆ.

    ಈ ತಿಂಗಳ ಆರಂಭದಲ್ಲಿ ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಾಮಾಜಿಕ ಮಾಧ್ಯಮ ಬಳಕೆದಾರರು ಕಂಪನಿಗಳಿಗೆ ಮಾಡಿದ ದೂರುಗಳ ವಿರುದ್ಧ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಪಡೆಯುವಂತಹ ಹೊಸ ಕರಡು ನಿಯಮವನ್ನು ಬಿಡುಗಡೆ ಮಾಡಿತು. ಇದರ ಪ್ರಕಾರ ಸಾಮಾಜಿಕ ಮಾಧ್ಯಮಗಳ ನಿರ್ಧಾರಗಳ ವಿರುದ್ಧ ಮೇಲ್ಮನವಿಗೆ ಸಲ್ಲಿಸಲು ಬಳಕೆದಾರರಿಗೆ ಅವಕಾಶ ಒದಗಿಸುತ್ತದೆ. ಪ್ರಸ್ತುತ ಯಾವುದೇ ದೊಡ್ಡ ಸಾಮಾಜಿಕ ಮಾಧ್ಯಮ ಕಂಪನಿಗಳು ಮೇಲ್ಮನವಿ ಕಾರ್ಯವಿಧಾನವನ್ನು ಹೊಂದಿಲ್ಲ. ಇದನ್ನೂ ಓದಿ: ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಲ್ಲ: ಫಾರೂಕ್ ಅಬ್ದುಲ್ಲಾ

    ವರದಿಗಳ ಪ್ರಕಾರ ಈ ಹೊಸ ನಿಯಮ ಜುಲೈ ಕೊನೆಯಲ್ಲಿ ಅಂತಿಮಗೊಳಿಸಲು ಸರ್ಕಾರ ಯೋಜಿಸಿದೆ.

    Live Tv

  • ಇಪ್ಪತ್ತು ದಿನದಲ್ಲಿ ಸಿಇಟಿ ಫಲಿತಾಂಶ: ಅಶ್ವಥ್ ನಾರಾಯಣ್

    ಇಪ್ಪತ್ತು ದಿನದಲ್ಲಿ ಸಿಇಟಿ ಫಲಿತಾಂಶ: ಅಶ್ವಥ್ ನಾರಾಯಣ್

    ಬೆಂಗಳೂರು: ರಾಜ್ಯಾದ್ಯಂತ ಸಿಇಟಿ ಪರೀಕ್ಷೆ ಸುಸೂತ್ರವಾಗಿ ನಡೆಯುತ್ತಿದ್ದು, 20 ದಿನದಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.

    ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿ, ಈ ತಿಂಗಳ 30ಕ್ಕೆ ಪರೀಕ್ಷೆ ಮುಗಿಯುತ್ತದೆ. ಹೀಗಾಗಿ ಕ್ಷಿಪ್ರಗತಿಯಲ್ಲಿ ಫಲಿತಾಂಶ ನೀಡಲು ಕ್ರಮ ವಹಿಸಲಾಗಿದೆ. 20 ದಿನಗಳಲ್ಲಿ ರಿಸಲ್ಟ್ ಪ್ರಕಟಿಸಲಾಗುವುದು. ಅಕ್ಟೋಬರ್‌ನಲ್ಲಿ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದರು.

    ರಾಜ್ಯದ 530 ಕೇಂದ್ರ ಸೇರಿ ಬೆಂಗಳೂರಿನ 86 ಕೇಂದ್ರಗಳಲ್ಲೂ ಪರೀಕ್ಷೆ ಉತ್ತಮವಾಗಿ ನಡೆಯುತ್ತಿದೆ. ಯಾವುದೇ ಸಮಸ್ಯೆ ಇಲ್ಲ. ಕೋವಿಡ್ ನಿಯಮಗಳಿಗೊಳಪಟ್ಟೇ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಗೆ 2,01,816 ವಿದ್ಯಾರ್ಥಿಗಳ ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ ಕೋವಿಡ್ ಪಾಸಿಟಿವ್ ಇರುವ 12 ವಿದ್ಯಾರ್ಥಿಗಳ ಪೈಕಿ 4ವಿದ್ಯಾರ್ಥಿಗಳಿಗೆ ನೆಗೆಟಿವ್ ವರದಿ ಬಂದಿದೆ. ಪಾಸಿಟಿವ್ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿ ಪರೀಕ್ಷೆ ಬರೆಸಲಾಗಿದೆ ಎಂದು ಅಶ್ವಥ್ ನಾರಾಯಣ್ ಮಾಹಿತಿ ನೀಡಿದರು. ಇದನ್ನೂ ಓದಿ:  ಕಾಲೇಜಿಗೆಂದು ಹೋದ ವಿದ್ಯಾರ್ಥಿನಿ ಶವವಾಗಿ ಪತ್ತೆ

    ಜಿಲ್ಲಾ ಕೇಂದ್ರಗಳಿಂದ ಮಾಹಿತಿ ಬಂದಿದ್ದು, ಯಾವುದೇ ಸಮಸ್ಯೆ ಆಗಿಲ್ಲ. ಕೇರಳದ ಗಡಿ ಜಿಲ್ಲೆಗಳಲ್ಲಿ ಲಾಕ್‍ಡೌನ್ ಮತ್ತು ವೀಕೆಂಡ್ ಕರ್ಫ್ಯೂ ಇದ್ದರೂ ಆ ಜಿಲ್ಲೆಗಳಲ್ಲೂ ತೊಂದರೆ ಉಂಟಾಗಿಲ್ಲ. ಮುಖ್ಯವಾಗಿ ಮಂಗಳೂರು, ಉಡುಪಿ, ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಪರೀಕ್ಷೆ ಸುಸೂತ್ರವಾಗಿ ಸಾಗಿದೆ ಎಂದು ಅವರು ಮಾಹಿತಿ ನೀಡಿದರು.

  • ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು – ಮೋದಿ, ಅಮಿತ್ ಶಾ ಸಭೆ

    ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು – ಮೋದಿ, ಅಮಿತ್ ಶಾ ಸಭೆ

    ಬೆಂಗಳೂರು: ರಾಜ್ಯ ರಾಜಕೀಯದ ಬಿಕ್ಕಟ್ಟು ಅಂತ್ಯವಾಗೋ ಲಕ್ಷಣ ಕಾಣುತ್ತಿಲ್ಲ. ಕಳೆದ ವಾರ ಸ್ವತಃ ವಿಶ್ವಾಸಮತ ಯಾಚಿಸಲು ಅವಕಾಶ ಕೋರಿದ್ದ ಮುಖ್ಯಮಂತ್ರಿಗಳು ಈಗ ವಿಶ್ವಾಸಮತಯಾಚಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ.

    ವಿಶ್ವಾಸಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿಗೆ ನಿನ್ನೆ ರಾಜ್ಯಪಾಲರು ಎರಡು ಬಾರಿ ಗಡುವು ಕೊಟ್ಟರೂ ಅದನ್ನು ದೋಸ್ತಿ ಸರ್ಕಾರ ಮತ್ತು ಸ್ಪೀಕರ್ ಗಣನೆಗೆ ತೆಗೆದುಕೊಳ್ಳಲಿಲ್ಲ. ಚರ್ಚೆ ಆಗಬೇಕು, ಮಾತನಾಡುವವರು ಸಾಕಷ್ಟು ಮಂದಿ ಇದ್ದಾರೆ ಎಂದು ಹೇಳಿ ದೋಸ್ತಿಗಳು ಪಟ್ಟು ಹಿಡಿದರು.

    ರಾತ್ರಿ 12 ಗಂಟೆ ಆದರೂ ಪರ್ವಾಗಿಲ್ಲ ಚರ್ಚೆ ನಡೆದು, ವಿಶ್ವಾಸಮತ ನಿರ್ಣಯವನ್ನು ಮತಕ್ಕೆ ಹಾಕಿ ಎಂದು ಬಿಜೆಪಿ ಕೇಳಿಕೊಂಡರೂ ಯಾರು ಸ್ಪಂದಿಸಲಿಲ್ಲ. ಕೊನೆಗೆ ಸ್ಪೀಕರ್ ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು. ಎಂದಿನಂತೆ ಶಾಸಕರು ರೆಸಾರ್ಟ್ ಸೇರಿಕೊಂಡರು. ಈ ಬೆನ್ನಲ್ಲೇ ರಾಜ್ಯದ ಬೆಳವಣಿಗೆಗಳ ಬಗ್ಗೆ ರಾಜ್ಯಪಾಲರು ಕೇಂದ್ರ ಗೃಹ ಸಚಿವಾಲಯಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದಾರೆ.

    ಈ ಸಂಬಂಧ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆಯಲಿದೆ. ಬಳಿಕ ಪ್ರಧಾನಿ ಮೋದಿ ನೇತೃತ್ವದಲ್ಲಿ ಸಂಪುಟ ಸಮಿತಿ ಸಭೆ ಕೂಡ ನಡೆಯಲಿದೆ. ರಾಜ್ಯಪಾಲರ ವರದಿ ಮೇಲೆ ಗೃಹ ಸಚಿವರ ಸಲಹೆ ಪಡೆಯಲಿರುವ ಮೋದಿ ನೇತೃತ್ವದ ಸಮಿತಿ, ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ.

    ಆದರೆ ಸೋಮವಾರ ವಿಶ್ವಾಸಮತ ಯಾಚಿಸುವುದಾಗಿ ಸಿಎಂ ಹೇಳಿರುವ ಕಾರಣ ಸದ್ಯದ ಮಟ್ಟಿಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವ ಸಂಭವ ಕಡಿಮೆ ಎಂದು ಹೇಳಲಾಗುತ್ತಿದೆ. ಅತ್ತ ಅತೃಪ್ತರು ಮುಂಬೈನಲ್ಲೇ ಉಳಿದಿದ್ದು, ಎಲ್ಲಾ ಬೆಳವಣಿಗೆಗಳನ್ನು ಅಲ್ಲಿಂದಲೇ ಗಮನಿಸುತ್ತಿದ್ದಾರೆ.

  • ಅಕ್ರಮ ತಡೆಗೆ ಬರಲಿದೆ ಒಂದೇ ದೇಶ ಒಂದೇ ರೇಷನ್ ಕಾರ್ಡ್

    ನವದೆಹಲಿ: ಬಡವರಿಗೆ ಕಡಿಮೆ ದರದಲ್ಲಿ ಆಹಾರಧಾನ್ಯವನ್ನು ದೇಶದ ಎಲ್ಲಾ ಕಡೆ ಪೂರೈಸುವ ನಿಟ್ಟಿನಲ್ಲಿ “ಒಂದು ದೇಶ, ಒಂದು ರೇಷನ್ ಕಾರ್ಡ್” ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

    ಕೇಂದ್ರ ಆಹಾರ ಸಚಿವ ರಾಮ್‍ವಿಲಾಸ್ ಪಾಸ್ವಾನ್ ಅಧ್ಯಕ್ಷತೆಯಲ್ಲಿ ರಾಜ್ಯ ಆಹಾರ ಕಾರ್ಯದರ್ಶಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ದೇಶದ ಬಡ ಜನರು ಉದ್ಯೋಗ ಅಥವಾ ಇತರ ಕಾರಣಕ್ಕೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋದಾಗ ಆಹಾರಕ್ಕೆ ಸಮಸ್ಯೆ ಆಗದೇ ಇರಲು ಈ ಬದಲಾವಣೆ ಮಾಡಲಾಗಿದೆ.

    ಈ ಯೋಜನೆಯಿಂದ ಒಬ್ಬ ವ್ಯಕ್ತಿ ಅಥವಾ ಕುಟುಂಬ ವಿವಿಧ ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ರೇಶನ್ ಕಾರ್ಡ್‍ಗಳನ್ನು ಹೊಂದಿದ್ದರೆ ತಡೆಯಬಹುದು. ಈ ನಿಯಮದಿಂದ ಸರ್ಕಾರದ ಬೊಕ್ಕಸಕ್ಕೂ ಉಳಿತಾಯವಾಗುತ್ತದೆ. ಅಷ್ಟೇ ಅಲ್ಲದೇ ಪಿಡಿಎಸ್ ಹೆಸರಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟಲು ನೆರವಾಗಲಿದೆ.

    ಸಚಿವ ರಾಮ್‍ವಿಲಾಸ್ ಪಾಸ್ವಾನ್ ಮಾತನಾಡಿ, ಇದರಿಂದ ವಲಸೆ ಕಾರ್ಮಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಅವರಿಗೆ ಪೂರ್ಣ ಆಹಾರ ಭದ್ರತೆ ದೊರೆಯಲಿದೆ. ಈ ರೀತಿಯ ಕಾರ್ಮಿಕರು ಯಾವುದೇ ನಿರ್ಧಿಷ್ಟ ಪಡಿತರ ಅಂಗಡಿಯಿಂದ ಆಹಾರ ಧಾನ್ಯಗಳನ್ನು ಖರೀದಿಸಬೇಕಾಗಿಲ್ಲ. ಬದಲಾಗಿ ತಮಗೆ ಸಮೀಪದ ಯಾವುದೇ ಪಡಿತರ ಅಂಗಡಿಯಿಂದಲೂ ಖರೀದಿಸಬಹುದಾಗಿದೆ. ಇದರ ಜೊತೆಗೆ ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಲಿದೆ ಎಂದು ತಿಳಿಸಿದರು.

    ಈ ಯೋಜನೆಯನ್ನು ಜಾರಿ ಮಾಡಲು ಕೇಂದ್ರ ಆಹಾರ ಸಚಿವಾಲಯ ದೇಶದ ಎಲ್ಲ ರೇಷನ್ ಕಾರ್ಡ್‍ಗಳನ್ನು ಒಂದೇ ವ್ಯವಸ್ಥೆಯಡಿಗೆ ತರಲಿದೆ. ಕೇಂದ್ರ ಸರ್ಕಾರ ಇದಕ್ಕಾಗಿ ಇಂಟಿಗ್ರೇಡೆಸ್ ಮ್ಯಾನೇಜ್‍ಮೆಂಟ್ ಆಫ್ ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಂ (ಐಎಂಪಿಡಿಎಸ್) ಮೂಲಕ ಆನ್‍ಲೈನ್ ಡೇಟಾಬೇಸ್ ಮಾಡಲು ಸಿದ್ಧತೆ ನಡೆಸಿದೆ.

    ಕರ್ನಾಟಕ, ಕೇರಳ, ಆಂಧ್ರ ಪ್ರದೇಶ, ಗುಜರಾತ್, ಹರ್ಯಾಣ, ಜಾರ್ಖಂಡ್, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ ಮತ್ತು ತ್ರಿಪುರಾದಲ್ಲಿ ಈಗಾಗಲೇ ಐಎಂಪಿಡಿಎಸ್ ಜಾರಿಯಲ್ಲಿದೆ. ಈ ರಾಜ್ಯಗಳ ಫಲಾನುಭವಿಗಳು ತಮ್ಮ ಜಿಲ್ಲೆಯ ಯಾವುದೇ ಪಡಿತರ ಅಂಗಡಿಗಳಿಂದ ಆಹಾರ ಧಾನ್ಯ ಖರೀದಿಸಬಹುದಾಗಿದೆ.

  • ನಿರಾಶ್ರಿತ ಕೇಂದ್ರದಲ್ಲಿ ತಹಶೀಲ್ದಾರ್ ವಿರುದ್ಧ ಸಂತ್ರಸ್ತರು ಕಿಡಿ

    ನಿರಾಶ್ರಿತ ಕೇಂದ್ರದಲ್ಲಿ ತಹಶೀಲ್ದಾರ್ ವಿರುದ್ಧ ಸಂತ್ರಸ್ತರು ಕಿಡಿ

    ಕೊಡಗು: ಪ್ರವಾಹಕ್ಕೆ ತತ್ತರಿಸಿ ನಿರಾಶಿತ್ರ ಕೇಂದ್ರ ಸೇರಿದ್ದ ಸಂತ್ರಸ್ತರನ್ನು ತಹಶೀಲ್ದಾರ್ ಕೀಳಾಗಿ ಕಾಣುತ್ತಿದ್ದಾರೆ ಎನ್ನುವ ಕಾರಣಕ್ಕೆ ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರದ ವಾಲ್ಮೀಕಿ ಭವನದ ಮುಂದೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕುಶಾಲನಗರದ ವಾಲ್ಮೀಕಿ ಭವನದಲ್ಲಿ ನಿರಾಶ್ರಿತ ಕೇಂದ್ರ ಶುರುವಾದ ದಿನದಿಂದಲೂ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ. ಮಂಗಳವಾರ ತಡರಾತ್ರಿಯು ಸಹ ಸಂತ್ರಸ್ತರು ತಹಶೀಲ್ದಾರ್ ಮಹೇಶ್ ವಿರುದ್ಧ ರೊಚ್ಚಿಗೆದ್ದು, ಪತ್ರಿಭಟನೆ ನಡೆಸುತ್ತಿದ್ದರು. ಅಲ್ಲದೇ ನಿರಾಶ್ರಿತ ಕೇಂದ್ರದಲ್ಲಿ ಶೌಚಾಲಯ ವ್ಯವಸ್ಥೆಯಿಲ್ಲ. ಸರಿಯಾಗಿ ಊಟ ನೀಡುತ್ತಿಲ್ಲ ಹಾಗೂ ಎಲ್ಲಾ ಅಧಿಕಾರಿಗಳು ನಮ್ಮನ್ನು ಭಿಕ್ಷುಕರಂತೆ ನೋಡುತ್ತಾರೆ ಎಂದು ಆರೋಪಿಸಿದ್ದರು.

    ಈ ವೇಳೆ ತಹಶೀಲ್ದಾರ್ ಮಹೇಶ್‍ರವರು ಮಹಿಳೆಯೊಬ್ಬರ ಮೈಯನ್ನ ಮುಟ್ಟಿದರು ಎಂದು ಆರೋಪಿಸಿ ಅವರ ಮೇಲೆ ಮುತ್ತಿಗೆ ಹಾಕುವ ಯತ್ನ ಮಾಡಿದರು. ಕೂಡಲೇ ಪ್ರತಿಭಟನಾಕಾರರಿಂದ ತಪ್ಪಿಸಿಕೊಂಡು ತಹಶೀಲ್ದಾರ್ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು, ನಾನು ಏನು ತಪ್ಪು ಮಾಡಿಲ್ಲ ಅಂತ ಕ್ಷಮೆಯಾಚಿಸಿದರು.

    ಸುಮಾರು 400 ಜನರು ಇರುವ ನಿರಾಶ್ರಿತ ಕೇಂದ್ರದಲ್ಲಿ ಕೇವಲ ಮೂರೇ ಮೂರು ಶೌಚಾಲಯ. ಶೌಚಾಲಯದ ವ್ಯವಸ್ಥೆ ಸರಿಪಡಿಸಿ ಹಾಗೂ ಊಟವನ್ನು ಸರಿಯಾಗಿ ನೀಡಿ ಎಂದು ಪ್ರಾರಂಭವಾದಗಿನಿಂದಲೂ ಹೇಳುತ್ತಲೆ ಬಂದಿದ್ದರು. ಸಮಸ್ಯೆಗಳನ್ನು ಪರಿಹರಿಸದೇ ಕೀಳಾಗಿ ನೋಡಿದ್ದರಿಂದ ರೊಚ್ಚಿಗೆದ್ದು ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಂತ್ರಸ್ತ ಕೇಂದ್ರದಲ್ಲಿ ಪ್ರತಿಭಟನೆ ಜೋರಾದಾಗ ಪೊಲೀಸರು ಮಧ್ಯ ಪ್ರವೇಶಿಸಿದರು. ಈ ವೇಳೆ ಪ್ರತಿಭಟನೆ ವಿಕೋಪಕ್ಕೆ ತಿರುಗುವ ಲಕ್ಷಣ ಗೋಚರಿದ ತಕ್ಷಣ ಜಿಲ್ಲಾಧಿಕಾರಿ ಶ್ರೀವಿದ್ಯಾರವರು ತಡರಾತ್ರಿ 12.15ಕ್ಕೆ ಆಗಮಿಸಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. ಅಲ್ಲದೇ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ, ಸರಿಯಾಗಿ ವ್ಯವಸ್ಥೆ ಕೈಗೊಳ್ಳುತ್ತೇನೆ. ಒಂದು ವೇಳೆ ತಹಶೀಲ್ದಾರ್ ವಿರುದ್ಧ ತಪ್ಪು ಕಂಡುಬಂದರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೀನಿ ಎನ್ನುವ ಭರವಸೆ ನೀಡಿದ ಮೇಲೆ ಪ್ರತಿಭಟನಾಕಾರರು ತಮ್ಮ ಹೋರಾಟವನ್ನು ಕೈ ಬಿಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇನ್ನು ಮುಂದೆ ಕಸಾಯಿಖಾನೆಗಳಿಗೆ ಗೋವುಗಳನ್ನು ಮಾರಾಟ ಮಾಡುವಂತಿಲ್ಲ

    ಇನ್ನು ಮುಂದೆ ಕಸಾಯಿಖಾನೆಗಳಿಗೆ ಗೋವುಗಳನ್ನು ಮಾರಾಟ ಮಾಡುವಂತಿಲ್ಲ

    ನವದೆಹಲಿ: ಮೋದಿ ಸರ್ಕಾರ ಕಸಾಯಿಖಾನೆಗಳಿಗೆ ಜಾನುವಾರುಗಳ ಮಾರಾಟವನ್ನು ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಮೂರನೇ ವರ್ಷದ ಸಂಭ್ರಮದ ಹೊತ್ತಲ್ಲೇ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.

    ಜಾನುವಾರುಗಳನ್ನು ಮಾರುವುದಾದರೆ ರೈತರಿಗೆ ಅಥವಾ ಕೃಷಿ ಭೂಮಿ ಇರುವವರಿಗೆ ಮಾತ್ರ ಮಾರಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ. ದನ, ಗೂಳಿ, ಎತ್ತು, ಕೋಣ, ಹೋರಿ ಮತ್ತು ಒಂಟೆ ಮಾರಾಟಕ್ಕೆ ಈ ನಿಯಮ ಅನ್ವಯವಾಗಲಿದೆ.

    ಪರಿಸರ ಖಾತೆ ಸಚಿವಾಲಯ, ಅರಣ್ಯ ಮತ್ತು ಹವಾಮಾನ ಬದಲಾವಣೆ, ಭಾರತ ಸರ್ಕಾರ ಒಮ್ಮತದಿಂದ ಈ ಹೊಸ ನಿಯಮವನ್ನು  ಜಾರಿಗೊಳಿಸಲು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಜಾನುವಾರುಗಳನ್ನು ಕೃಷಿ ಉಪಯೋಗಕ್ಕೆ ಮಾತ್ರ ಮಾರಾಟ ಮಾಡಬೇಕು, ಕಸಾಯಿಖಾನೆಗೆ ಮಾರುವಂತಿಲ್ಲ ಎಂದು ಪ್ರಾಣಿ ಹಿಂಸೆ ತಡೆ (ಪಿಸಿಎ) ಕಾಯ್ದೆಯ 1960ರ ಸೆಕ್ಷನ್ ಅಡಿಯಲ್ಲಿ ಈ ನಿರ್ಬಂಧ ಹೇರಲಾಗಿದೆ.

    ಹೊಸ ನಿಯಮದಲ್ಲಿರುವ ಪ್ರಮುಖ ಅಂಶಗಳು
    ಇನ್ನು ಮುಂದೆ ಜಾನುವಾರುಗಳನ್ನು ವ್ಯಾಪಾರ ಮಾಡುವ ಮಾರಾಟಗಾರರು ಮತ್ತು ಖರೀದಿ ಮಾಡುವವರು ಗುರುತಿನ ಚೀಟಿ ಮತ್ತು ಮಾಲೀಕತ್ವದ ದಾಖಲೆಗಳನ್ನು ತೋರಿಸಬೇಕಾಗುತ್ತದೆ.

    ಖರೀದಿಸಿದ ಜಾನುವಾರನ್ನು 6 ತಿಂಗಳೊಳಗೆ ಮತ್ತೊಮ್ಮೆ ಮಾರಾಟ ಮಾಡುವಂತಿಲ್ಲ. ರೈತರಿಗೆ ಮಾತ್ರ ಜಾನುವರನ್ನು ಮಾರಾಟ ಮಾಡಬೇಕು. ಖರೀದಿಸುವಾಗ ಕಡ್ಡಾಯವಾಗಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಎಳೆ ಕರುಗಳನ್ನು ಅಥವಾ ಅನಾರೋಗ್ಯ ಪೀಡಿತ ಹಸುಗಳನ್ನು ಮಾರಾಟ ಮಾಡುವಂತಿಲ್ಲ.

    ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆಗೆದುಕೊಂಡು ಹೋಗುವಾಗ ಆ ರಾಜ್ಯ ಸರ್ಕಾರದ ವಿಶೇಷ ಅನುಮತಿಯನ್ನು ಪಡೆಯಬೇಕು. ಧಾರ್ಮಿಕ ಕಾರ್ಯಕ್ರಮದಲ್ಲೂ ಈ ಮೇಲೆ ತಿಳಿಸಿದ ಜಾನುವಾರುಗಳ ಹತ್ಯೆಯನ್ನು ನಿಷೇಧಿಸಲಾಗಿದೆ.

    ಮ್ಯಾಜಿಸ್ಟ್ರೇಟ್ ಅಧ್ಯಕ್ಷತೆ ವಹಿಸಿರುವ ಜಿಲ್ಲಾ ಜಾನುವಾರು ಮಾರಾಟ ಸಮಿತಿಯ ಅನುಮತಿಯಿಂದಲೇ ಜಾನುವಾರು ವ್ಯಾಪಾರ ಕೇಂದ್ರಗಳನ್ನು ನಡೆಸಬೇಕು. ಸರ್ಕಾರ ಅಂಗೀಕೃತ ಪ್ರಾಣಿ ರಕ್ಷಣಾ ಸಂಘಟನೆಯ ಇಬ್ಬರು ಸದಸ್ಯರು ಈ ಸಮಿತಿಯಲ್ಲಿರಬೇಕು.

    5 ಪ್ರತಿಗಳನ್ನು ಇಟ್ಟುಕೊಳ್ಳಬೇಕು:
    ಒಂದು ಹಸುವನ್ನು ಕೊಂಡುಕೊಂಡರೆ, ಜಾನುವಾರು ವ್ಯಾಪಾರಿಯು ಮಾರಾಟ ಮಾಡಿದ ದಾಖಲೆಗಳ 5 ಪ್ರತಿಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ. ಒಂದು ಪ್ರತಿಯನ್ನು ಸ್ಥಳೀಯ ಕಂದಾಯ ಅಧಿಕಾರಿಗೆ, ಎರಡನೇ ಪ್ರತಿಯನ್ನು ಹಸು ಖರೀದಿ ಮಾಡಿದ ವ್ಯಕ್ತಿಯ ಜಿಲ್ಲೆಯ ಸ್ಥಳೀಯ ಪಶು ವೈದ್ಯರಿಗೆ, ಮೂರನೇ ಪ್ರತಿಯನ್ನು ಜಾನುವಾರು ಮಾರುಕಟ್ಟೆ ಸಮಿತಿಗೆ ನೀಡಬೇಕಾಗುತ್ತದೆ. ಮಾರಾಟಗಾರ ಮತ್ತು ಖರೀದಿಸಿದ ವ್ಯಕ್ತಿಯೂ ಒಂದೊಂದು ಪ್ರತಿಗಳನ್ನು ಇಟ್ಟುಕೊಳ್ಳಬೇಕಾಗುತ್ತದೆ.