Tag: cement bags

  • ಸಿಮೆಂಟ್ ಬ್ಯಾಗ್‍ನಲ್ಲಿ ಸಿಕ್ತು 1.90 ಕೋಟಿ ರೂ.

    ಸಿಮೆಂಟ್ ಬ್ಯಾಗ್‍ನಲ್ಲಿ ಸಿಕ್ತು 1.90 ಕೋಟಿ ರೂ.

    – ಅಕ್ರಮ ಹಣ ಸಾಗಣೆ, ಚಾಲಕ ಅರೆಸ್ಟ್

    ಹೈದರಾಬಾದ್: ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯ ಕಾವು ರಂಗೇರುತ್ತಿದ್ದಂತೆ ಆಂಧ್ರಪ್ರದೇಶದಲ್ಲಿ ಕುರುಡು ಕಾಂಚಾಣ ಜೋರಾಗಿಯೇ ಕುಣಿಯುತ್ತಿದೆ ಎನ್ನುವ ಅನುಮಾನಗಳು ಹುಟ್ಟು ಹಾಕಿದೆ. ಇದಕ್ಕೆ ಪೂರಕವೆಂಬಂತೆ ದಾಖಲೆ ಇಲ್ಲದೆ ಲಾರಿಯೊಂದರಲ್ಲಿ ಸಾಗಿಸುತ್ತಿದ್ದ 1.90 ಕೋಟಿ ರೂ. ಪತ್ತೆಯಾಗಿದೆ.

    ಕೃಷ್ಣಾ ಜಿಲ್ಲೆಯ ಚೆಕ್‍ಪೋಸ್ಟ್ ನಲ್ಲಿ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಪರಿಶೀಲನೆ ನಡೆಸಿದ್ದರು. ಈ ವೇಳೆ ಸಿಮೆಂಟ್ ಬ್ಯಾಗ್ ಸಾಗಿಸುತ್ತಿದ್ದ ಲಾರಿಯೊಂದರಲ್ಲಿ ಹಣ ಇರುವ ಶಂಕೆ ವ್ಯಕ್ತವಾಗಿತ್ತು. ತಕ್ಷಣವೇ ಪರಿಶೀಲನೆ ನಡೆಸಿದಾಗ ಸಿಮೆಂಟ್ ಬ್ಯಾಗ್‍ನಲ್ಲಿ 500 ಹಾಗೂ 2,000 ರೂ. ಮುಖ ಬೆಲೆಯ ನೋಟುಗಳು ಪತ್ತೆಯಾಗಿದ್ದು, ಅದರ ಒಟ್ಟು ಮೊತ್ತ 1.90 ಕೋಟಿ ರೂ. ಎಂದು ವರದಿಯಾಗಿದೆ.

    ಲಾರಿಯಲ್ಲಿ ಸಾಗಿಸುತ್ತಿದ್ದ ಹಣಕ್ಕೆ ಸೂಕ್ತ ದಾಖಲೆ ಸಿಕ್ಕಿಲ್ಲ. ಹೀಗಾಗಿ ಲಾರಿ ಚಾಲಕನನ್ನು ಬಂಧಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ತಿಳಿಸಿದ್ದಾರೆ.

    ಆಂಧ್ರಪ್ರದೇಶದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಒಂದೇ ಅವಧಿಯಲ್ಲಿ ನಡೆಯುತ್ತಿದೆ. ಅಕ್ರಮವಾಗಿ ಹಣ, ಮದ್ಯ, ಉಡುಗೊರೆ ಸಾಗಿಸದಂತೆ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಕ್ರಮಕೈಗೊಳ್ಳುತ್ತಿದ್ದಾರೆ. ಪ್ರಮುಖ ಚೆಕ್ ಪೋಸ್ಟ್ ಗಳಲ್ಲಿ ವಾಹನ ಪರಿಶೀಲನೆ ಮಾಡಲಾಗುತ್ತಿದೆ.