Tag: celebration

  • 5 ಕೆಜಿ ಕೇಕ್ ಕಟ್ ಮಾಡಿ ಲಕ್ಕಿ ಟಗರಿನ ಹುಟ್ಟುಹಬ್ಬ ಆಚರಿಸಿದ ಯುವಕರು

    5 ಕೆಜಿ ಕೇಕ್ ಕಟ್ ಮಾಡಿ ಲಕ್ಕಿ ಟಗರಿನ ಹುಟ್ಟುಹಬ್ಬ ಆಚರಿಸಿದ ಯುವಕರು

    ದಾವಣಗರೆ: ಮನುಷ್ಯರು ಮಾತ್ರವಲ್ಲದೆ ಇತ್ತೀಚೆಗೆ ಪ್ರಾಣಿಗಳ  ಹುಟ್ಟುಹಬ್ಬ ಆಚರಿಸುವುದು ಕಾಮನ್. ಮನುಷ್ಯರು ಪಾರ್ಟಿ, ಡಿನ್ನರ್, ಕೇಕ್ ಕಟಿಂಗ್ ಎಂಥೆಲ್ಲ ಫುಲ್ ಜೋರಾಗಿ ಆಚರಣೆ ಮಾಡುತ್ತಾರೆ.  ಆದರೆ ಟಗರು ಪ್ರೇಮಿಯೊಬ್ಬರು ತನ್ನ ಟಗರಿಗೆ ಎರಡನೇ ವರ್ಷದ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ.

    ದಾವಣಗೆರೆಯ ಹೊನ್ನಾಳಿ ತಾಲೂಕಿನ ದುರ್ಗಾಂಬಿಕಾ ದೇವಾಲಯ ಬಡಾವಣೆಯಲ್ಲಿ ‘ಲಕ್ಕಿ’ ಹೆಸರಿನ ಟಗರಿಗೆ ಆ ಬಡಾವಣೆಯ ಯುವಕರೆಲ್ಲ ಸೇರಿ ಐದು ಕೆಜಿ ತೂಕದ ಕೇಕ್ ತಂದು ಕತ್ತರಿಸಿ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಪುನೀತ್ ಅವರಿಗೆ ಸೇರಿದ ಟಗರು ಇದಾಗಿದ್ದು, ಟಗರು ಕಾಳಗದಲ್ಲೇ ತನ್ನದೇ ಆದ ಹೆಸರನ್ನು ಪಡೆದಿದೆ.

    ಹೊನ್ನಾಳಿ, ದಾವಣಗೆರೆ, ಶಿಕಾರಿಪುರ, ರೆಟ್ಟೆಹಳ್ಳಿ, ರಾಣೀಬೆನ್ನೂರು ಸೇರಿದಂತೆ ಎಲ್ಲಿ ಟಗರು ಕಾಳಗ ನಡೆಯುತ್ತೋ ಅಲ್ಲಿ ಈ ಲಕ್ಕಿ ಹಾಜರಿರುತ್ತದೆ. ರಣರಂಗದಲ್ಲಿ ಕಾದಾಡಿ ಸಾಕಷ್ಟು ಪದಕ, ಪ್ರಶಸ್ತಿಯನ್ನು ಮತ್ತು ಬಿರುದುಗಳನ್ನು ತನ್ನದಾಗಿಸಿಕೊಂಡಿದೆ. ಬಡಾವಣೆಯ ಯುವಕರಿಗೆ ಅಚ್ಚುಮೆಚ್ಚಿನ ಲಕ್ಕಿಯ ಹುಟ್ಟುಹಬ್ಬವನ್ನು ದುರ್ಗಾಂಬಿಕಾ ದೇವಾಲಯದ ಮುಂಭಾಗದಲ್ಲಿ ಸಡಗರ ಸಂಭ್ರಮದಿಂದ ಆಚರಿಸಿದ್ದಾರೆ.

  • ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ: ಸಿಎಂ ಇಬ್ರಾಹಿಂ

    ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ: ಸಿಎಂ ಇಬ್ರಾಹಿಂ

    – ಮಂತ್ರಾಲಯಕ್ಕೆ ಜಾಗ ಕೊಟ್ಟಿದ್ದು ನವಾಬರು
    – ಶಾರದಾ ಪೀಠವನ್ನು ಮರಸ್ಥಾಪನೆ ಮಾಡಿದ್ದು ಟಿಪ್ಪು

    ವಿಜಯಪುರ: ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

    ಇಂದು ನಗರದಲ್ಲಿ ಮಾತನಾಡಿದ ಅವರು, ಮುಸ್ಲಿಮರಲ್ಲಿ ಜಯಂತಿ ಸಂಪ್ರದಾಯವಿಲ್ಲ. ನಮ್ಮ ಸಂಪ್ರದಾಯದಲ್ಲಿ ಮೂರ್ತಿ ಪೂಜೆಯೂ ಇಲ್ಲ. ಈ ಹಿಂದೆ ಸರ್ಕಾರ ಟಿಪ್ಪು ಜಯಂತಿ ಮಾಡಿದ ರೀತಿಯೇ ತಪ್ಪು. ಮುಸ್ಲಿಮರಲ್ಲಿ ಈ ಸಂಪ್ರದಾಯವೇ ಇಲ್ಲ ಎಂದು ಹೇಳಿದರು.

    ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ಅಗತ್ಯವಿಲ್ಲ. ಟಿಪ್ಪು ಜನ್ಮದಿನ ಆಚರಣೆಯನ್ನು ಮುಸ್ಲಿಮರಿಗೆ ಬಿಟ್ಟು ಬಿಡಿ. ನಾವು ಟಿಪ್ಪು ಜಯಂತಿಯನ್ನು ಆಚರಣೆ ಮಾಡಿಕೊಳ್ಳುತ್ತೇವೆ. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಟಿಪ್ಪು ಜಯಂತಿಯ ಆಚರಣೆಯನ್ನು ಮಾಡಲಾಯಿತು. ಆದರೆ ಈಗ ಬಿಜೆಪಿ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಣೆ ಮಾಡುವುದು ಬೇಡ ಎಂದು ಹೇಳಿದೆ ಎಂದರು.

    ಟಿಪ್ಪು ಸುಲ್ತಾನ್ ಒಬ್ಬ ಹುತಾತ್ಮ ರಾಜ, ಮಹಾರಾಷ್ಟ್ರದ ಪೇಶ್ವೆಗಳು ಬಂದು ಶೃಂಗೇರಿಯ ಶಾರದಾ ಮಠವನ್ನು ನಾಶ ಮಾಡಿದಾಗ ಅದರ ವಿರುದ್ಧ ಹೋರಾಡಿ ಕಾರ್ಕಳದಲ್ಲಿ ಇದ್ದ ಸ್ವಾಮೀಜಿಯನ್ನು ವಾಪಾಸ್ ಕರೆದುಕೊಂಡು ಬಂದು ಮತ್ತೆ ಶಾರದಾ ಪೀಠವನ್ನು ಮರು ಸ್ಥಾಪನೆ ಮಾಡಿದರು. ಪತ್ರಿ ದಿನ ಆ ಜಾಗದಲ್ಲಿ ಟಿಪ್ಪು ಸಾವಿರಕ್ಕೂ ಹೆಚ್ಚು ಬ್ರಾಹ್ಮಣ ಸಮುದಾಯದವರಿಗೆ ಅನ್ನ ದಾಸೋಹ ಮಾಡುತ್ತಿದ್ದರು. ಈ ಚರಿತ್ರೆ ಶೃಂಗೇರಿ ಮಠದಲ್ಲಿ ಇನ್ನೂ ಇದೆ ಎಂದು ಹೇಳಿದರು. ಇದನ್ನು ಓದಿ: ಟಿಪ್ಪು ಜಯಂತಿಯನ್ನು ನಾವೇ ಮುಂದೆ ನಿಂತು ಮಾಡ್ತೀವಿ: ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ

    ಇದರ ಜೊತೆಗೆ ಗುರುರಾಘವೇಂದ್ರ ಸ್ವಾಮಿ ಅವರಿಗೆ ಮಂತ್ರಾಲಯ ಮಠ ಸ್ಥಾಪಿಸಲು ಜಾಗ ಕೊಟ್ಟಿದ್ದು, ಅದೋನಿ ನವಾಬರು. ಆ ಜಾಗವನ್ನು ಆ ಊರಿನ ಖಾಜಿ ಸಾಹೇಬರಿಗೆ ಕೊಟ್ಟಿದ್ದರು. ಆದರೆ ಅಂದು ನವಾಬರು ಗುರುರಾಘವೇಂದ್ರ ಸ್ವಾಮಿ ಅವರು ದೈವ ಮಾನವರು ಅವರು ನಮ್ಮ ರಾಜ್ಯಕ್ಕೆ ಬಂದಿದ್ದಾರೆ ಎಂದು ಹೇಳಿ ಖಾಜಿ ಸಾಹೇಬರಿಗೆ ಕೊಟ್ಟಿದ್ದ ಭೂಮಿಯನ್ನು ವಾಪಾಸ್ ಪಡೆದುಕೊಂಡರು. ನಂತರ ಆ ಭೂಮಿಯನ್ನು ಗುರುರಾಘವೇಂದ್ರ ಸ್ವಾಮಿ ಅವರಿಗೆ ನೀಡಿದರು. ಇದರ ಚರಿತ್ರೆಯೂ ಕೂಡ ಮಂತ್ರಾಲಯದಲ್ಲಿದೆ. ಈ ಸಂಬಂಧ ಸಾವಿರಾರು ವರ್ಷದಿಂದ ನಡೆದುಕೊಂಡು ಬಂದಿದೆ. ಕೆಲವರು ಈಗ ಬಂದ ಹಾಳು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.

  • ಉತ್ತರ ಭಾರತದಲ್ಲಿ 5 ದಿನ ದೀಪಾವಳಿ – ಯಾವ ದಿನ ಯಾವ ಹಬ್ಬ?

    ಉತ್ತರ ಭಾರತದಲ್ಲಿ 5 ದಿನ ದೀಪಾವಳಿ – ಯಾವ ದಿನ ಯಾವ ಹಬ್ಬ?

    ತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಮುಂಗಾರು ಬೆಳೆ ಕೊಯ್ಲಿಗೆ ಬರುವ ಸಮಯದಲ್ಲಿ ಈ ಹಬ್ಬ ಬರುವುದು ವಿಶೇಷ. ಕೆಲ ಕಡೆ ಆಶ್ವಯುಜ ಮಾಸದ ಕೊನೆಯ ಎರಡು ದಿನಗಳು ಹಾಗೂ ಕಾರ್ತಿಕ ಮಾಸದ ಮೊದಲನೆಯ ದಿನ ಈ ಹಬ್ಬವನ್ನು ಆಚರಿಸಿದರೆ ಇನ್ನು ಕೆಲ ಕಡೆ ಮುಂದಿನ ಎರಡು ದಿನಗಳನ್ನು ಸೇರಿಸಿ 5 ದಿನ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ.

    ಹಿಂದೂ ಕ್ಯಾಲೆಂಡರ್ ಪ್ರಕಾರ ಈ ಹಬ್ಬ ಕಾರ್ತಿಕ ಮಾಸದಲ್ಲಿ ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಕೆಲವರು ಮನೆಗೆ ಹೊಸ ವಸ್ತುಗಳನ್ನು ತರುತ್ತಾರೆ. ಇದನ್ನೂ ಓದಿ: ದೀಪಾವಳಿಯ ದೀಪಾರಾಧನೆ-ಮನೆಯ ಮುಂಭಾಗ ಇರಿಸುವ ದೀಪಗಳೆಷ್ಟಿರಬೇಕು?

    ದೀಪಾವಳಿ ಹಬ್ಬದ ಮಹತ್ವ:
    ದೀಪಾವಳಿ `ದೀಪಾ’ ಎಂದರೆ ಮಣ್ಣಿನ ದೀಪ ಹಾಗೂ `ವಳಿ’ ಎಂದು ಯಾವುದಾದರು ವಸ್ತು ಸರಣಿಯಾಗಿಯಿಡುವುದು. ದೀಪಾವಳಿಯ ಅಮವಾಸ್ಯೆಯನ್ನು ದೀವಾಳಿ ಅಮಾವಾಸ್ಯೆಯೆಂದು ಕರೆಯುತ್ತಾರೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಆ ದಿನ ಕತ್ತಲೆಯಿಂದ ಕೂಡಿರುತ್ತದೆ. ದೀಪಾವಳಿ ಹಬ್ಬವನ್ನು ಹಿಂದುಗಳ ಹಬ್ಬ ಮಾತ್ರ ಆಗಿರದೇ ಈ ಹಬ್ಬವನ್ನು ಜೈನ್, ಸಿಖ್‍ಗಳು ಹಾಗೂ ಬೌದ್ಧರು ಕೂಡ ಈ ಹಬ್ಬವನ್ನು ಆಚರಿಸುತ್ತಾರೆ.

    ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ದೀಪಾವಳಿಗೆ ಅದರದ್ದೇ ಆದ ಮಹತ್ವವಿದೆ ಹಾಗೂ ಅವರದ್ದೆ ಆದ ಕೆಲವು ಸಂಪ್ರದಾಯಗಳು ಇರುತ್ತದೆ. ಕೆಲವರು ತಮ್ಮ ಸಂಪ್ರದಾಯಕ್ಕೆ ತಕ್ಕಂತೆ ತಮ್ಮ ಹಬ್ಬವನ್ನು ಆಚರಿಸುತ್ತಾರೆ. ಆದರೆ ಎಲ್ಲರ ಪ್ರಕಾರ ದೀಪಾವಳಿ ಹಬ್ಬ ರಾಮಾಯಣದ ಕಥೆಗೆ ಹೊಂದಿಕೊಂಡಿದೆ. ಇದನ್ನೂ ಓದಿ: ದೀಪಾವಳಿ ಸಂಭ್ರಮಕ್ಕೆ ಜೊತೆಯಾಗಲಿದೆ ಪರಿಸರ ಸ್ನೇಹಿ ಹಸಿರು ಪಟಾಕಿ

    ರಾವಣನನ್ನು ಸಂಹಾರ ಮಾಡಿ ರಾಮ, ಸೀತಾ, ಲಕ್ಷ್ಮಣ ಹಾಗೂ ಹನುಮಂತ ಲಂಕೆಯಿಂದ ಆಯೋಧ್ಯೆಗೆ ಹಿಂದಿರುಗಿದ ದಿನ. ಅಲ್ಲದೆ ರಾಮ ಪಟ್ಟಾಭಿಷೇಕಗೊಂಡ ದಿನ. ಹಾಗಾಗಿ ಜನರು ಆ ದಿನ ಆನಂದದಿಂದ ದೀಪಗಳನ್ನು ಬೆಳಗಿಸಿ ರಾಮನನ್ನು ಸ್ವಾಗತಿಸಿದ್ದರು. ಅಲ್ಲದೆ ಪಾಂಡವರು ಕೂಡ ಅದೇ ದಿನ ತಮ್ಮ ಅಜ್ಞಾತವಾಸವನ್ನು ಮುಗಿಸಿದ ದಿನ ಎನ್ನುವ ಕತೆಯೂ ಇದೆ.  ಇದನ್ನೂ ಓದಿ: ದೀಪಾವಳಿಗೆ ರುಚಿ ರುಚಿಯಾದ ಕುಂಬಳಕಾಯಿ ಇಡ್ಲಿ ಮಾಡೋದು ಹೇಗೆ?

    ದೀಪಾವಳಿಯ ಐದು ಹಬ್ಬಗಳು ಹಾಗೂ ಅದರ ಮಹತ್ವಗಳು;

    1. ದನ್ತೇರಸ್: ದನ್ತೇರಸ್ ಹಬ್ಬವನ್ನು ಅಕ್ಟೋಬರ್ 27ರಂದು ಆಚರಿಸುತ್ತಾರೆ. ಈ ದಿನ ಜನರು ತಮ್ಮ ಮನೆಗೆ ಅಡುಗೆ ಪಾತ್ರೆಗಳು, ಚಿನ್ನದ ನಾಣ್ಯ ಹಾಗೂ ಆಭರಣಗಳನ್ನು ಖರೀದಿಸಲು ಹೋಗುತ್ತಾರೆ. ಅಲ್ಲದೇ ತಮ್ಮ ಮನೆ ಹಾಗೂ ಕಚೇರಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಮಣ್ಣಿನ ದೀಪವನ್ನು ಹಚ್ಚಿ ಅಲಂಕರಿಸುತ್ತಾರೆ.

    2. ನರಕ ಚತುರ್ದಶಿ: ನರಕ ಚತುರ್ದಶಿಯನ್ನು ಚೋಟಾ ದೀಪಾವಳಿ ಎಂದು ಕರೆಯುತ್ತಾರೆ. ನವೆಂಬರ್ 28ರಂದು ಈ ಹಬ್ಬವನ್ನು ಆಚರಿಸುತ್ತಾರೆ. ಶ್ರೀಕೃಷ್ಣನು ನರಕಾಸುರನನ್ನು ಕೊಂದ ನೆನಪನ್ನು ಈ ಹಬ್ಬ ತರುತ್ತದೆ. ನರಕಾಸುರನನ್ನು ಆಶ್ವಯುಜ ಕೃಷ್ಣ ಚತುರ್ದಶಿಯ ಕತ್ತಲೆಯಲ್ಲಿ ಕೃಷ್ಣ ಸಂಹಾರ ಮಾಡುತ್ತಾನೆ. ಈ ಹಬ್ಬದಂದು ಸಿಹಿ ತಿನುಸುಗಳನ್ನು ಖರೀದಿಸಿ ಕುಟುಂಬದವರಿಗೆ, ಸ್ನೇಹಿತರಿಗೆ ಹಾಗೂ ಸಂಬಂಧಿಕರಿಗೆ ಹಂಚುತ್ತಾರೆ. ಸಿಹಿ ತಯಾರಿಸುವವರು ನರಕ ಚತುರ್ದಶಿದಂದು ಹೆಚ್ಚು ಸಮಯ ಕೆಲಸ ಮಾಡುತ್ತಾರೆ.

    3. ದೀಪಾವಳಿ: ದೀಪಾವಳಿಯಂದು ಲಕ್ಷ್ಮಿ ಪೂಜೆ ಮಾಡುತ್ತಾರೆ. ಲಕ್ಷ್ಮಿ ಎಂದರೆ ಕೇವಲ ಧನಾಧಿದೇವತೆ ಎಂಬ ಪ್ರತೀತಿಯಿದೆ. ಲಕ್ಷ್ಮೀ ಕೇವಲ ಧನಲಕ್ಷ್ಮೀ ಮಾತ್ರವಲ್ಲ. ಸಕಲ ಶ್ರೇಯಸ್ಸುಗಳಿಗೆ ಲಕ್ಷ್ಮೀ ಕಾರಣ ಎಂದು ಹೇಳುತ್ತಾರೆ. ಈ ಹಬ್ಬದಂದು ಎಲ್ಲರೂ ತಮ್ಮ ಕುಟುಂಬದವರೊಂದಿಗೆ ಸೇರಿ ಒಬ್ಬರಿಗೊಬ್ಬರು ಸಿಹಿ ಹಂಚಿ ಉಡುಗೊರೆ ನೀಡುತ್ತಾರೆ.

    4. ಗೋಪೂಜೆ: ದೀಪಾವಳಿಯ ನಾಲ್ಕನೇ ದಿನ ಗೋ ಪೂಜೆ ಮಾಡುತ್ತಾರೆ. ಈ ದಿನದಂದು ಗೋವುಗಳನ್ನು ಅಲಂಕರಿಸಿ, ಹಾಲು ಹಿಡಿಯುವ ಪಾತ್ರೆ, ಕುಡಗೋಲುಗಳನ್ನು ಪೂಜಿಸಿ, ಗೋಶಾಲೆಯನ್ನು ದೀಪದಿಂದ ಬೆಳಗಿ, ಹಸುಗಳಿಗೆ ಅಕ್ಕಿ, ಬೆಲ್ಲ, ತಿಂಡಿ ತಿನಿಸುಗಳನ್ನು ನೀಡುತ್ತಾರೆ. ಉತ್ತರ ಭಾರತದಲ್ಲಿ ಅಥವಾ ಕೆಲವರ ಸಂಪ್ರದಾಯದಲ್ಲಿ ಈ ದಿನದಂದು ಪತಿ ತಮ್ಮ ಪತ್ನಿಯರಿಗೆ ಉಡುಗೊರೆ ನೀಡುತ್ತಾರೆ. ಅಲ್ಲದೆ ಹೊಸದಾಗಿ ಮದುವೆಯಾದ ಜೋಡಿಯನ್ನು ಮನೆಗೆ ಔತಣಕ್ಕೆ ಕರೆದು ಉಡುಗೊರೆ ನೀಡಲಾಗುತ್ತದೆ.

    5. ಬಾಯ್ ದೂಜ್: ಬಾಯ್ ದೂಜ್ ಅನ್ನು ಬಯ್ಯಾ ದೂಜ್ ಎಂದು ಕರೆಯುತ್ತಾರೆ. ದೀಪಾವಳಿಯ ಐದನೇ ದಿನದಂದು ಈ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬ ಅಣ್ಣ-ತಂಗಿಯರ ಹಬ್ಬವಾಗಿದ್ದು, ಅಣ್ಣಂದಿರು ತಮ್ಮ ತಂಗಿಯ ಮನೆಗೆ ಊಟಕ್ಕೆ ಹೋಗುತ್ತಾರೆ. ಅಲ್ಲದೇ ತಿಲಕ ಶಾಸ್ತ್ರ ಮಾಡುತ್ತಾರೆ. ಸಹೋದರಿಯರು ತಮ್ಮ ಸಹೋದರನಿಗೆ ತಿಲಕ ಶಾಸ್ತ್ರ ಮಾಡುತ್ತಾರೆ. ಇದನ್ನು ಮತ್ತೊಂದು ರಕ್ಷಾ ಬಂಧನ ಎಂದೂ ಕರೆಯಲಾಗುತ್ತದೆ.

    https://www.youtube.com/watch?v=bdq-b9Difjs

  • ಆಚರಿಸಲು ಏನಿದೆ? ಇದು ಸಾಮಾನ್ಯ ದಿನದಂತೆ- ಹುಟ್ಟುಹಬ್ಬ ಆಚರಿಸಲ್ಲ ಎಂದ ಬಿಗ್‍ಬಿ

    ಆಚರಿಸಲು ಏನಿದೆ? ಇದು ಸಾಮಾನ್ಯ ದಿನದಂತೆ- ಹುಟ್ಟುಹಬ್ಬ ಆಚರಿಸಲ್ಲ ಎಂದ ಬಿಗ್‍ಬಿ

    ಮುಂಬೈ: ಬಾಲಿವುಡ್ ಬಿಗ್-ಬಿ ಅಮಿತಾಬ್ ಬಚ್ಚನ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಲ್ಲ ಎಂದು ನಿರ್ಧರಿಸಿದ್ದಾರೆ.

    ಅಕ್ಟೋಬರ್ 11ರಂದು ಅಮಿತಾಬ್ ಅವರ ಹುಟ್ಟುಹಬ್ಬವಿದ್ದು, ಅವರು 77ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ಬಾರಿ ಅಮಿತಾಬ್ ತಮ್ಮ ಹುಟ್ಟುಹಬ್ಬ ಆಚರಿಸಲು ಇಷ್ಟಪಡುತ್ತಿಲ್ಲ. ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ, “ಆಚರಿಸಲು ಏನು ಇದೆ? ಇದು ಸಾಮಾನ್ಯ ದಿನದಂತೆ. ನಾನು ಇನ್ನೂ ಕೆಲಸ ಮಾಡುತ್ತಿರುವುದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ನನ್ನ ದೇಹವು ನನ್ನ ಆತ್ಮದೊಂದಿಗೆ ವೇಗವನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ನನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ನಾನು ಅಭಿಮಾನಿಗಳಲ್ಲಿ ಕೇಳುತ್ತೇನೆ” ಎಂದರು.

    ಇದೇ ವೇಳೆ ಅಮಿತಾಬ್ ತಮ್ಮ ಬಾಲ್ಯದ ಹುಟ್ಟುಹಬ್ಬದ ದಿನಗಳನ್ನು ನೆನಪಿಸಿಕೊಂಡು, ನನ್ನ ತಂದೆ ಹರಿವನಶ್‍ರೈ ಬಚ್ಚನ್ ಯಾವಾಗಲೂ ಒಂದು ಕವಿತೆಯನ್ನು ರಚಿಸಿ, ನನ್ನ ಹುಟ್ಟುಹಬ್ಬದಂದು ಹೇಳುತ್ತಿದ್ದರು. ಇದು ಒಂದು ಕುಟುಂಬದ ಸಂಪ್ರದಾಯ. ಆದರೆ 1984ರಲ್ಲಿ ನಡೆದ ನನ್ನ ಅಪಘಾತದ ನಂತರ ನನ್ನ ತಂದೆ ಹುಟ್ಟುಹಬ್ಬದ ಕವಿತೆಯನ್ನು ಹೇಳಿದಾಗ ಈ ಸಂಪ್ರದಾಯ ಸಂಪೂರ್ಣವಾಗಿ ಹೊಸ ಅರ್ಥ ಪಡೆದುಕೊಂಡಿತ್ತು. ಇದು ನನಗೆ ಹೊಸ ಜೀವನದಂತೆ ಇತ್ತು. ಕವಿತೆಯನ್ನು ಓದುವಾಗ ನನ್ನ ತಂದೆ ಅಳಲು ಶುರು ಮಾಡಿದ್ದರು. ನಾನು ಅವರನ್ನು ಮೊದಲ ಬಾರಿ ಆ ರೀತಿ ನೋಡಿದೆ ಎಂದು ಹೇಳಿದ್ದಾರೆ.

    ಸಮಯ ಬದಲಾದಂತೆ ಕೆಲವೊಂದು ಆಚರಣೆಗಳು ಬದಲಾಗುತ್ತದೆ. ನಾನು ನನ್ನ ತಂದೆಯ ಕವಿತೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಆ ದಿನ ನನ್ನ ತಾಯಿಯ ಉತ್ಸಾಹ ಕೂಡ ಇರುತ್ತಿತ್ತು. ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಲು ನನಗೆ ಆಸಕ್ತಿ ಇಲ್ಲ. ಬಳಿಕ ನಿಮ್ಮ ಯಾವುದಾದರೂ ಈಡೇರದ ಕನಸ್ಸು ಇದೆಯಾ ಎಂದು ಪ್ರಶ್ನಿಸಿದಾಗ, ನನಗೆ ತುಂಬಾ ಈಡೇರದ ಕನಸುಗಳಿವೆ. ನನಗೆ ಪಿಯಾನೋ ನುಡಿಸಬೇಕು. ಹಲವು ಭಾಷೆಗಳನ್ನು ಕಲಿಯಬೇಕು ಹಾಗೂ ಗುರು ದತ್ ಅವರ ಜೊತೆ ಕೆಲಸ ಮಾಡಬೇಕು ಎಂದು ಉತ್ತರಿಸಿದ್ದಾರೆ.

  • ಉಡುಪಿಯ ಗಣೇಶೋತ್ಸವಕ್ಕೆ ಆಗಮಿಸಿದ `ಮೋದಿ’

    ಉಡುಪಿಯ ಗಣೇಶೋತ್ಸವಕ್ಕೆ ಆಗಮಿಸಿದ `ಮೋದಿ’

    ಉಡುಪಿ: ದೇಶಾದ್ಯಂತ ಗಣೇಶೋತ್ಸವ ಸಂಭ್ರಮ ಮುಂದುವರಿದಿದೆ. ದೇವಾಲಯಗಳ ನಗರಿ ಉಡುಪಿಯಲ್ಲಿ ವಿಘ್ನ ವಿನಾಯಕನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ನಗರದ ದೆಂದೂರ್ ಕಟ್ಟೆಯಲ್ಲೂ ಸಾರ್ವಜನಿಕ ಗಣೇಶೋತ್ಸವ ನಡೆಯುತ್ತಿದೆ.

    ಈ ವೇಳೆ ವಿಶೇಷ ಅತಿಥಿ ಬಂದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದರು. ಆ ವಿಐಪಿ ಬರುವ ಮೊದಲು ಪೊಲೀಸ್ ಎಸ್ಕಾರ್ಟ್ ವಾಹನ ಬಂತು, ಜಾಮರ್, ಮೆಟಲ್ ಡಿಟೆಕ್ಟರ್ ಜೊತೆ ಸೈರನ್ ಸೌಂಡ್ ಮಾಡಿಕೊಂಡು ಬಂದಿದೆ. ಒಂದರ ಹಿಂದೆ ಇನ್ನೊಂದು ಸಾಲು ಸಾಲು ಕಾರುಗಳು. ನೋಡ ನೋಡುತ್ತಿದ್ದಂತೆ ಕಾರಿಂದ ಇಳಿದು ಪ್ರಧಾನಿ ನರೇಂದ್ರ ಮೋದಿ ಅವರಂತೆ ಹೋಲುವ ವ್ಯಕ್ತಿಯೊಬ್ಬರು ವೇದಿಕೆಗೆ ಹೋಗಿದ್ದಾರೆ.

    ಝೆಡ್ ಪ್ಲಸ್ ಭದ್ರತೆ ನಿಯೋಜನೆಯಲ್ಲಿ, ಫಾರ್ಚೂನರ್ ಕಾರಿನಲ್ಲಿ ಬಂದ ವ್ಯಕ್ತಿಯ ಹೆಸರು ಸದಾನಂದ ನಾಯಕ್ ಆಗಿದ್ದು, ಇವರು ಉಡುಪಿಯ ಮೋದಿ. ಗಂಭೀರವಾಗಿ ಕಾರಿಂದ ಇಳಿದ ಸದಾನಂದ ನಾಯಕ್ ಥೇಟ್ ಮೋದಿಯಂತೆ ಪೋಸ್ ಕೊಟ್ಟು, ದೇವರಿಗೆ ಪೂಜೆ ಸಲ್ಲಿಸಿದರು. ಬಳಿಕ ಜನರತ್ತ ಕೈ ಬೀಸುತ್ತಾ ವಾಪಾಸ್ ಆಗಿದ್ದಾರೆ.

    ಗಣೇಶೋತ್ಸವದ ಮೆರುಗು ಹೆಚ್ಚಿಸಲು ಸ್ಥಳೀಯ ಯುವಕರು ಡ್ಯೂಪ್ ಮೋದಿಯನ್ನು ಕರೆತಂದರು. ನಮ್ಮೂರಿಗೆ ಬಂದಿದ್ದು ಮೋದಿಯೇ ಎಂದು ಹೇಳಿಕೊಂಡು ಕೆಲವರು ಓಡಾಡುತ್ತಿದ್ದಾರೆ. ಕಳೆದ ಬಾರಿ ಟ್ಯಾಬ್ಲೋದಲ್ಲಿ ಮಿಂಚಿದ್ದ ಸದಾನಂದ ನಾಯಕ್ ರಸ್ತೆಯಲ್ಲಿ ಮೋದಿಯಂತೆ ಓಡಾಡಿದ್ದಾರೆ.

  • ಹುಟ್ಟು ಹಬ್ಬದಂದು 3 ಕೋತಿಗಳ ಕಥೆ ಹೇಳಿ ಸಂದೇಶ ಕೊಟ್ಟ ಕಿಚ್ಚ

    ಹುಟ್ಟು ಹಬ್ಬದಂದು 3 ಕೋತಿಗಳ ಕಥೆ ಹೇಳಿ ಸಂದೇಶ ಕೊಟ್ಟ ಕಿಚ್ಚ

    – ವಯಸ್ಸು ಮುಖ್ಯ ಅಲ್ಲ, ಎನರ್ಜಿ ಮುಖ್ಯ

    ಬೆಂಗಳೂರು: ಸ್ಯಾಂಡಲ್‍ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು 46 ನೇ ವರ್ಷಕ್ಕೆ ಕಾಲಿಟ್ಟಿದ್ದು, ತಮ್ಮ ನೆಚ್ಚಿನ ನಟನ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ಜೆಪಿ ನಗರದ ಅವರ ನಿವಾಸದ ಮುಂದೆ ಭರ್ಜರಿಯಾಗಿ ಆಚರಣೆ ಮಾಡಿದ್ದಾರೆ.

    ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಿಚ್ಚ, ನಾನು 29 ದಾಟೋದೆ ಇಲ್ಲ. ನನಗೆ ಯಾವಗಲೂ 29 ವರ್ಷ. ವಯಸ್ಸು ಮುಖ್ಯ ಅಲ್ಲ. ಎನರ್ಜಿ ಮೇಲೆ ಕೌಂಟ್ ಆಗತ್ತೆ. ಸ್ಟಾರ್ ಡಮ್ ಮೇಲೆ ನಾನು ಸಿನಿಮಾ ಮಾಡೋಕೆ ಆಗಲ್ಲ. ಎಲ್ಲದಕ್ಕೂ ಶ್ರಮ ಇರಬೇಕು ಎಂದು ಹೇಳಿದರು.

    ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮೂರು ಕೋತಿಗಳ ಕಥೆ ಹೇಳಿದರು. ಹಿರಿಯರು ಕೆಟ್ಟದನ್ನು ಕೇಳಬಾರದು, ಮಾತನಾಡಬಾರದು, ನೋಡಬಾರದು ಎಂದು ಹೇಳಿದ್ದಾರೆ. ನಾವು ಹಾಗೆಯೇ ಇರೋಣ. ಒಳ್ಳೆಯ ಬೆಳವಣಿಗೆಗಳ ಬಗ್ಗೆ ಮಾತನಾಡೋಣ. ನಮ್ಮ ಕೆಲಸದ ಮೂಲಕ ಉತ್ತರ ಕೊಡೋಣ. ಯಾರೂ ಏನಾದರು ಹೇಳಿದರೆ ಅದು ನಮಗೆ ಹೇಳಿದರು ಎಂದು ಯಾಕೆ ಅಂದ್ಕೋಬೇಕು. ಇಲ್ಲಸಲ್ಲದ ಕಲ್ಪನೆಗಳು ಬೇಡ. ನಾಲ್ಕು ಜನರಿಗೆ ಮಾದರಿಯಾಗೋ ಕೆಲಸ ಮಾಡೋಣ ಎಂದು ಹೇಳಿದರು.

    ಈ ಹಿಂದೆ ಟ್ವಿಟ್ಟರ್‍ ನಲ್ಲಿ ಚಂದ್ರನ ಕಥೆ ಹೇಳಿದ್ದ ಕಿಚ್ಚ ಸುದೀಪ್ ಹುಟ್ಟು ಹಬ್ಬದ ದಿನದದ್ದು, ಮೂರು ಕೋತಿಗಳ ಕಥೆ ಹೇಳಿ ಅಭಿಮಾನಿಗಳಿಗೆ ಒಂದು ಸಂದೇಶವನ್ನು ನೀಡಿದರು. ಇದೇ ವೇಳೆ ಪೈಲ್ವಾನ್ ಚಿತ್ರತಂಡ ಒಂದು ಹಾಡನ್ನು ರಿಲೀಸ್ ಮಾಡಿ ಸುದೀಪ್‍ಗೆ ಹುಟ್ಟುಹಬ್ಬದ ಗಿಫ್ಟ್ ನೀಡಿದೆ. ಪೈಲ್ವಾನ್ ಚಿತ್ರ ಸೆಪ್ಟೆಂಬರ್ 12ಕ್ಕೆ ದೇಶಾದ್ಯಂತ ರಿಲೀಸ್ ಆಗಲಿದ್ದು, ದೇಶದೆಲ್ಲೆಡೆ ಪೈಲ್ವಾನ್ 3000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ.

  • 46ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ್

    46ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ್

    ಬೆಂಗಳೂರು: ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು 46 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆದರೆ ರಾಜ್ಯದಲ್ಲಿ ನೆರೆ ಹಾವಳಿ ಹಿನ್ನೆಲೆಯಲ್ಲಿ ಕೇಕ್ ಕಟ್ ಮಾಡಿ, ವಿಜೃಂಭಣೆಯಿಂದ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಸುದೀಪ್ ನಿರ್ಧರಿಸಿದ್ದಾರೆ.

    ನೆಚ್ಚಿನ ನಟನ ಹುಟ್ಟುಹಬ್ಬದ ಕ್ಷಣ ನೋಡಲು ಜೆ.ಪಿ.ನಗರದ ಮನೆ ಬಳಿ ಸಾವಿರಾರು ಜನ ಸಾಕ್ಷಿಯಾಗಿದ್ದರು. ಮಧ್ಯರಾತ್ರಿ 12.15 ಕ್ಕೆ ಖುದ್ದು ಸುದೀಪ್ ಆಗಮಿಸಿ ಅಭಿಮಾನಿಗಳತ್ತ ಕೈ ಬೀಸಿದರು. ಈ ಕ್ಷಣಕ್ಕೆ ಕಾಯುತ್ತಿದ್ದ ಸಾವಿರಾರು ಅಭಿಮಾನಿಗಳ ಸಂತಸ ಮುಗಿಲುಮುಟ್ಟಿತ್ತು. “ಕಿಚ್ಚ ಸುದೀಪ್‍ಗೆ ಜೈ, ಕರ್ನಾಟಕದ ಪೈಲ್ವಾನ್‍ಗೆ ಜೈ, ಪರಭಾಷೆಗಳ ವಿಲನ್‍ಗೆ ಜೈ” ಎಂದು ಅಭಿನಯ ಚಕ್ರವರ್ತಿಗೆ ಜೈಕಾರದ ಹಾಕುತ್ತಾ ಅಭಿಮಾನಿಗಳ ನೃತ್ಯ ಸಂಭ್ರಮ ಸಖತ್ತಾಗಿತ್ತು.

    ಇದೇ ವೇಳೆ ಪೈಲ್ವಾನ್ ಚಿತ್ರತಂಡ ಒಂದು ಹಾಡನ್ನು ರಿಲೀಸ್ ಮಾಡಿ ಸುದೀಪ್‍ಗೆ ಹುಟ್ಟುಹಬ್ಬದ ಗಿಫ್ಟ್ ನೀಡಿದೆ. ಪೈಲ್ವಾನ್ ಚಿತ್ರ ಸೆಪ್ಟೆಂಬರ್ 12ಕ್ಕೆ ದೇಶಾದ್ಯಂತ ರಿಲೀಸ್ ಆಗಲಿದ್ದು, ದೇಶದೆಲ್ಲೆಡೆ ಪೈಲ್ವಾನ್ 3000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ. ಸುದೀಪ್ ಪಾಲಿಗೆ ಪೈಲ್ವಾನ್ ಚಿತ್ರ ರಿಲೀಸ್ ಆಗಿ ಗೆದ್ದು, ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡುತ್ತಾ ಅನ್ನೋದು ಸದ್ಯದ ಕುತೂಹಲವಾಗಿದೆ.

  • ಸೈನಿಕರಿಂದ ಕೃಷ್ಣಜನ್ಮಾಷ್ಟಮಿ ಆಚರಣೆ

    ಸೈನಿಕರಿಂದ ಕೃಷ್ಣಜನ್ಮಾಷ್ಟಮಿ ಆಚರಣೆ

    ಬೆಳಗಾವಿ: ಸಾವಿರಾರು ಜನರನ್ನು ಪ್ರವಾಹದಲ್ಲಿ ರಕ್ಷಿಸಿದ ಸೈನಿಕರು ಇಂದು ಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲಿ ತೊಡಗಿಕೊಂಡಿದ್ದರು.

    ಬೆಳಗಾವಿ ನಗರದಲ್ಲಿರುವ ಮರಾಠಾ ರೆಜಿಮೆಂಟ್‍ನ ಮೈದಾನದಲ್ಲಿ ಕೃಷ್ಣ ಜನ್ಮಾಷ್ಟಮಿಯ ಆಚರಣೆ ನಡೆದಿದೆ. ಕೇವಲ ದೇಶ ಕಾಯುವುದರಲ್ಲಿ ಬ್ಯುಸಿಯಾಗಿರುತ್ತಿದ್ದ ಸೈನಿಕರು ಇಂದು ಫುಲ್ ರಿಲ್ಯಾಕ್ಸ್ ಮೂಡಿನಲ್ಲಿದ್ದರು. ಬೆಳಗಾವಿ ನಗರದ ಕ್ಯಾಂಪ್ ಪ್ರದೇಶದಲ್ಲಿರುವ ಮರಾಠಾ ರೆಜಿಮೆಂಟ್‍ನಲ್ಲಿ ಹೊಸದಾಗಿ ಸೈನ್ಯಕ್ಕೆ ಸೇರುವ ಯುವಕರ ತರಬೇತಿಯಿಂದ ಹಿಡಿದು ದೇಶದಲ್ಲಿ ನಡೆಯುವ ಯುದ್ಧಗಳ ತರಬೇತಿ ಕೂಡ ಇಲ್ಲೇ ಆಗುತ್ತದೆ.

    ಈ ಪ್ರದೇಶದಲ್ಲಿ ಇಂದು ಗುಂಡು ಮದ್ದಿನ ಸದ್ದು ಇರಲಿಲ್ಲ ಬದಲಿಗೆ ಡಿಜೆ ಸೌಂಡ್ ಕೇಳಿ ಬರುತ್ತಿತ್ತು. ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಸೈನಿಕರಿಗೆ ಗಡಿಗೆ ಒಡೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಒಂದು ಆಫೀಸರ್ ತಂಡ, ಆಡಳಿತ ವಿಭಾಗ ತಂಡ, ಹೊಸದಾಗಿ ಸೈನ್ಯಕ್ಕೆ ಸೇರಿಕೊಂಡ ಯುವಕರ ತಂಡ ಹೀಗೆ ಮೂರು ತಂಡಗಳನ್ನು ಮಾಡಿ ಗಡಿಗೆ ಒಡೆಯಲು ಕಾಲಾವಕಾಶ ನಿಗದಿ ಮಾಡಲಾಗಿತ್ತು.

    ಆರಂಭದಲ್ಲಿ ಮೂರು ತಂಡಗಳು ಗಡಿಗೆ ಒಡೆಯುವ ಮಾದರಿಯಲ್ಲೇ ಒಬ್ಬರ ಮೇಲೊಬ್ಬರು ಹತ್ತಿ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಿದರು. ಇದಾದ ಬಳಿಕ ಡಿಜೆ ಸಾಂಗ್ ಹಾಕಿ ಕೇಸರಿನಲ್ಲಿ ನಿಂತು ಒಬ್ಬರ ಮೇಲೊಬ್ಬರು ಹತ್ತುತ್ತಾ ಗಡಿಗೆ ಒಡೆಯುವ ಪ್ರಯತ್ನ ಮಾಡಿದರು. ಇದೇ ಸಂದರ್ಭದಲ್ಲಿ ಉಳಿದ ವಿರೋಧಿ ತಂಡದವರು ಅವರಿಗೆ ಜೋರಾಗಿ ನೀರು ಎರಚಿ ಕೆಡವುವ ಪ್ರಯತ್ನ ಮಾಡಿ ಯಶಸ್ವಿಯಾದರು. ಇದಾದ ಬಳಿಕ ಮತ್ತೊಂದು ರೌಂಡ್ ನಲ್ಲಿ ಆಫೀಸರ್ಸ್ ತಂಡ ಗಡಿಗೆ ಒಡೆಯವುದರಲ್ಲಿ ಯಶಸ್ವಿಯಾದರು.

    ಮೊಸರಿನ ಗಡಿಗೆ ಒಡೆದ ತಂಡಕ್ಕೆ ಬಹುಮಾನ ನೀಡಿ ಗೌರವಿಸಿದರು. ಇದಾದ ಬಳಿಕ ಎಲ್ಲ ಸೈನಿಕರು ಸೇರಿಕೊಂಡು ಅದೇ ಕೆಸರಿನಲ್ಲಿ ಸಖತ್ ಸ್ಟೆಪ್ಸ್ ಹಾಕಿ ಎಂಜಾಯ್ ಕೂಡ ಮಾಡಿದರು. ಕಾರ್ಯಕ್ರಮಕ್ಕೆ ಸೈನಿಕರ ಕುಟುಂಬ ಆಗಮಿಸಿ ಅವರು ಕೂಡ ಸಂಭ್ರಮದಲ್ಲಿ ಭಾಗಿಯಾದರು. ಕಳೆದ 15 ದಿನಗಳ ಹಿಂದಷ್ಟೇ ಬೆಳಗಾವಿ, ಬಾಗಲಕೋಟೆ ಜಿಲ್ಲೆಯಲ್ಲಿನ ಪ್ರವಾಹಕ್ಕೆ ಸಿಕ್ಕ ಸಾವಿರಾರು ಜನರನ್ನು ಇಲ್ಲಿನ ಸೈನಿಕರೇ ಕಾರ್ಯಾಚರಣೆ ಮಾಡಿ ರಕ್ಷಿಸಿ ಬಂದಿದ್ದರು. ಇಂತಹ ಹೆಮ್ಮೆಯ ಸೈನಿಕರು ಇಂದು ದೇವರ ನಾಮಸ್ಮರಣೆ ಜೊತೆಗೆ ಕೊಂಚ ರಿಲ್ಯಾಕ್ಸ್ ಆಗಿ ಕಾಲ ಕಳೆದರು.

  • ಶಾಸಕ ನಾರಾಯಣಗೌಡರ ಅನುಪಸ್ಥಿತಿಯಲ್ಲಿ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

    ಶಾಸಕ ನಾರಾಯಣಗೌಡರ ಅನುಪಸ್ಥಿತಿಯಲ್ಲಿ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

    ಮಂಡ್ಯ: ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನ ಹೋಟೆಲಿನಲ್ಲಿರುವ ಕೆ.ಆರ್.ಪೇಟೆ ಕ್ಷೇತ್ರದ ಅತೃಪ್ತ ಶಾಸಕ ಡಾ.ನಾರಾಯಣಗೌಡರ ವಿರುದ್ಧ ಕೆಲವರು ಆಕ್ರೋಶ ಹೊರಹಾಕುತ್ತಿದ್ದಾರೆ. ಆದರೆ ಅವರ ಅಭಿಮಾನಿಗಳು ಮಾತ್ರ ಇಂದು ಅವರ ಅನುಪಸ್ಥಿತಿಯಲ್ಲಿ ಅವರ 57ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದಾರೆ.

    ಕೆ.ಆರ್.ಪೇಟೆಯ ಬಸವೇಶ್ವರ ನಗರದಲ್ಲಿರುವ ಶಾಸಕ ನಾರಾಯಣಗೌಡ ನಿವಾಸದಲ್ಲಿ ಕೇಕ್ ಕತ್ತರಿಸಿ ಬಳಿಕ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಹುಟ್ಟು ಹಬ್ಬ ಆಚರಣೆ ಮಾಡಲಾಯಿತು. ವಿರೋಧಿಗಳು ಕ್ಷೇತ್ರದಲ್ಲಿ ನಾರಾಯಣಗೌಡ ನಡೆಗೆ ಆಕ್ರೋಶ ವ್ಯಕ್ತಪಡಿಸಿದರೆ, ಇತ್ತ ನಾರಾಯಣ ಗೌಡ ಅಭಿಮಾನಿಗಳು ಶಾಸಕರಿಗೆ ಜೈಕಾರ ಹಾಕಿದರು.

    ನಾರಾಯಣಗೌಡ ನಡೆಗೆ ಸಂತಸ ವ್ಯಕ್ತಪಡಿಸಿದ ಅಭಿಮಾನಿಗಳು, ನಾರಾಯಣಗೌಡ ತೆಗೆದುಕೊಂಡಿರೋ ತೀರ್ಮಾನಕ್ಕೆ ಇಡೀ ಕ್ಷೇತ್ರದ ಜನರ ಬೆಂಬಲವಿದೆ. ಶಾಸಕ ನಾರಾಯಣಗೌಡ ಹಣಕೋಸ್ಕರ ರಾಜೀನಾಮೆ ನೀಡಿಲ್ಲ. ಇಡೀ ಕ್ಷೇತ್ರದ ಅಭಿವೃದ್ಧಿಗೋಸ್ಕರ ನೀಡಿದ್ದಾರೆ. ಅವರು ಜೆಡಿಎಸ್ ಪಕ್ಷಕ್ಕೆ ಗುಡ್ ಬೈ ಹೇಳಿಲ್ಲ ಎಂದು ಹೇಳಿದರು.

    ಅವರಿಗೇನು ಇಲ್ಲಿ ದುಡ್ಡು ಮಾಡಿ ಅವರ ಮಕ್ಕಳನ್ನು ಸಾಕುವ ಅವಶ್ಯಕತೆ ಇಲ್ಲ. ಕ್ಷೇತ್ರಕ್ಕೆ ಬಂದು ನಾರಾಯಣಗೌಡರೇ ಸುದ್ದಿಗೋಷ್ಠಿ ಮಾಡುತ್ತಾರೆ. ಆ ಮೂಲಕ ನಾರಾಯಣಗೌಡ ವಿರೋಧಿಗಳಿಗೆ ಉತ್ತರ ಕೊಡುವ ಆಶಾಭಾವನೆ ವ್ಯಕ್ತಪಡಿಸಿದರು.

  • ಎಫ್‍ಐಎಚ್ ಫೈನಲ್ ಗೆದ್ದ ಮಹಿಳೆಯರು – ಬಸ್ಸಿನಲ್ಲಿ ಸಂಭ್ರಮಿಸಿದ ವಿಡಿಯೋ ವೈರಲ್

    ಎಫ್‍ಐಎಚ್ ಫೈನಲ್ ಗೆದ್ದ ಮಹಿಳೆಯರು – ಬಸ್ಸಿನಲ್ಲಿ ಸಂಭ್ರಮಿಸಿದ ವಿಡಿಯೋ ವೈರಲ್

    ಹಿರೋಶೀಮಾ: ಭಾರತೀಯ ಮಹಿಳಾ ಹಾಕಿ ತಂಡ ಎಫ್‍ಐಹೆಚ್ ಸೀರಿಸ್ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದು, ಈ ಗೆಲುವನ್ನು ಆಟಗಾರ್ತಿಯರು ಸಂಭ್ರಮಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಏಷ್ಯಾನ್ ಚಾಂಪಿಯನ್ ಜಪಾನ್ ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ಖುಷಿಯನ್ನು ಭಾರತ ತಂಡದ ಆಟಗಾರ್ತಿಯರು ಸಖತ್ ಜೋಶ್‍ನಲ್ಲಿ ಸಂಭ್ರಮಿಸಿದ್ದಾರೆ.

    ಪಂದ್ಯದ ಬಳಿಕ ಬಸ್ಸಿನಲ್ಲಿ ಬರುತ್ತಿದ್ದಾಗ `ಸುನೋ ಗೌರ್ ಸೆ ದುನಿಯಾ ವಾಲೋ’ ಹಿಂದಿ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಈ ವೀಡಿಯೋವನ್ನು ಮೊದಲು ಹಾಕಿ ಇಂಡಿಯಾದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

    ಭಾರತೀಯ ಹಾಕಿ ಮಹಿಳಾ ತಂಡದ ಆಟಗಾರ್ತಿಯರು ಸಂಭ್ರಮಿಸಿರುವ ವಿಡಿಯೋ ಸದ್ಯ ಎಲ್ಲೆಡೆ ಸಖತ್ ವೈರಲ್ ಆಗಿದೆ.

    ಭಾರತದ ಕೀರ್ತಿಯನ್ನು ಹೆಚ್ಚಿಸಿದ ತಂಡದ ಆಡಗಾರ್ತಿಯರ ಆಟಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಂಡವನ್ನು ಅಭಿನಂದಿಸಿದ್ದಾರೆ.

    ಫೈನಲ್ ಪ್ರವೇಶಿಸುವ ಮೂಲಕ ಭಾರತ ಮತ್ತು ಜಪಾನ್ 2020 ಒಲಿಂಪಿಕ್ಸ್ ಅರ್ಹತಾ ಪಂದ್ಯಗಳ ಅಂತಿಮ ಸುತ್ತಿಗೆ ಅರ್ಹತೆ ಗಳಿಸಿಕೊಂಡಿವೆ.