Tag: celebration

  • ಚರ್ಚ್ ಸ್ಟ್ರೀಟ್‌ನಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆ – ಹೊಸ ವರ್ಷ ಆಚರಿಸಲು ಬಂದವರಿಗೆ ಆತಂಕ

    ಚರ್ಚ್ ಸ್ಟ್ರೀಟ್‌ನಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆ – ಹೊಸ ವರ್ಷ ಆಚರಿಸಲು ಬಂದವರಿಗೆ ಆತಂಕ

    ಬೆಂಗಳೂರು: ನಗರದ ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

    ಹೊಸ ವರ್ಷ ಆಚರಣೆಗೆ ಕುಟುಂಬ, ಜೋಡಿ ಸೇರಿದಂತೆ ಬಹುತೇಕ ಜನರು ಚರ್ಚ್ ಸ್ಟ್ರೀಟ್‍ಗೆ ಬಂದಿದ್ದರು. ಆದರೆ ಅನುಮಾನಸ್ಪದ ಬ್ಯಾಗ್ ಪತ್ತೆಯಾದ ಹಿನ್ನೆಲೆ ಆ ರಸ್ತೆಯನ್ನು ಪೊಲೀಸರು ಬಂದ್ ಮಾಡಿದ್ದರು. ಅಲ್ಲದೆ ಯಾರು ಕೂಡ ಈ ರಸ್ತೆಗೆ ಬರಬೇಡಿ ಎಂದು ಸೂಚನೆ ಕೊಟ್ಟರು. ಇದನ್ನೂ ಓದಿ: ಕುಡಿದ ಜೋಶ್‍ನಲ್ಲಿ ಟೆರಸ್ ಹತ್ತಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಯುವಕ 

    ಇದೇ ವೇಳೆ ಈ ರಸ್ತೆಗೆ ಬರುವವರನ್ನು ಪೊಲೀಸರು ವಾಪಸ್ಸು ಕಳುಹಿಸುತ್ತಿದ್ದಂತೆ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿತ್ತು. ಜನ ಗಾಬರಿಯಿಂದ ಓಡಾಡಲು ಶುರು ಮಾಡಿದರು. ಅನುಮಾನಾಸ್ಪದ ಬ್ಯಾಗ್ ಅನ್ನು ಪೊಲೀಸರ ಭಯದಿಂದಲೇ ಪರಿಶೀಲಿಸಿದರು.

    ಪರಿಶೀಲಿಸಿದಾಗ ಪೊಲೀಸರಿಗೆ ಖಾಲಿ ಟಿಫನ್ ಬಾಕ್ಸ್ ಪತ್ತೆಯಾಗಿದೆ. ಯಾರೋ ಬಿಟ್ಟು ಹೋಗಿರುವ ಖಾಲಿ ಬಾಕ್ಸ್ ಬ್ಯಾಗ್‍ನಿಂದ ಕೆಲಕಾಲ ನಿರ್ಮಾಣವಾಗಿದ್ದ ಆತಂಕಕ್ಕೆ ತೆರೆ ಬಿತ್ತು. ಆಗ ಪೊಲೀಸರು ಹಾಗೂ ಜನ ನಿಟ್ಟುಸಿರು ಬಿಟ್ಟರು.

  • ಹೊಸ ವರ್ಷಾಚರಣೆ 2020: ಖಾಕಿ ಸಮ್ಮುಖದಲ್ಲೇ ನಡೀತು ಲೈಂಗಿಕ ಕಿರುಕುಳ

    ಹೊಸ ವರ್ಷಾಚರಣೆ 2020: ಖಾಕಿ ಸಮ್ಮುಖದಲ್ಲೇ ನಡೀತು ಲೈಂಗಿಕ ಕಿರುಕುಳ

    ಬೆಂಗಳೂರು: ನಗರದ ಎಂಜಿ ರೋಡ್, ಬ್ರಿಗೇಡ್ ರೋಡಲ್ಲಿ ಹೊಸ ವರ್ಷ ಬೇಕಾ ಅನ್ನೋವಷ್ಟರ ಮಟ್ಟಿಗೆ ಪೋಲಿಗಳ ಹಾವಳಿಯಿತ್ತು. ಈ ವರ್ಷ ಹೊಸವರ್ಷಾಚರಣೆಗೆ ಪೊಲೀಸರು ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರು ಕೂಡ ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯ ಮಾತ್ರ ನಿಂತಿಲ್ಲ.

    ಕಾಮುಕರ ಅಟ್ಟಹಾಸಕ್ಕೆ ನಲುಗಿದ ಯುವತಿಯರು ತಕ್ಷಣವೇ ಪ್ರತಿರೋಧ ತೋರಿದ್ದಾರೆ. ಬ್ರಿಗೇಡ್ ರಸ್ತೆಯಲ್ಲಿ ಎಗ್ಗಿಲ್ಲದೇ ಲೈಂಗಿಕ ದೌರ್ಜನ್ಯ ನಡೆಯಿತು.

    ಎಲ್ಲೆಲ್ಲಿ ಏನೇನಾಯಿತು..?
    ನಗರದ ಒಪೆರಾ ಜಂಕ್ಷನ್ ಹೌಸ್ ನಲ್ಲಿ ಎದುರಿನಿಂದ ಬಂದ ಯುವಕ, ಯುವತಿಯ ಮೈಗೆ ಕೈ ಹಾಕಿದ್ದಾರೆ. ಆತ ಯಾರು ಎಂಬುದನ್ನು ಅರಿತುಕೊಂಡ ಯುವತಿ ಆ ಬೀದಿ ಕಾಮುಕನಿಗೆ ಸ್ಥಳದಲ್ಲೇ ಚಪ್ಪಲಿ ಸೇವೆ ಮಾಡಿದ್ದಾಳೆ. ಇತ್ತ ಸ್ನೇಹಿತನ ಜೊತೆ ತನ್ನ ಪಾಡಿಗೆ ತಾನು ಹೋಗುತ್ತಿದ್ದ ಯುವತಿಗೆ, ಎದುರಿನಿಂದ ಬಂದಾತ ಆಕೆಯ ಮೈ ಮುಟ್ಟಿದ್ದಾನೆ. ಆ ಯುವತಿ ತಿರುಗಿ ಆತನಿಗೆ ಹೊಡೆಯೋ ಪ್ರಯತ್ನ ಕೂಡ ಮಾಡಿದ್ದಾಳೆ. ಆದರೆ ಜೊತೆಯಲ್ಲಿದ್ದ ಸ್ನೇಹಿತ ಆಕೆಯನ್ನ ತಡೆದು ಕರೆದೊಯ್ದ ಪ್ರಸಂಗ ನಡೆದಿದೆ.

    ಇಷ್ಟು ಮಾತ್ರವಲ್ಲದೆ ಪಾನಮತ್ತಳಾಗಿದ್ದ ಯುವತಿ ಹಿಂಬದಿ ಮುಟ್ಟಿದ್ದ ಯುವಕನಿಗೂ ಸರಿಯಾಗಿ ಇಕ್ಕಿದ್ದಾರೆ. ತನ್ನ ಪಾಡಿಗೆ ತಾನು ಕುಣಿಯುತ್ತಾ ಹೋಗುತ್ತಿದ್ದಾಕೆಯನ್ನ ಮತ್ತಿಬ್ಬರು ಮುಟ್ಟಿದರು. ಅವರಿಗೂ ಯುವತಿ ಸಖತ್ ಗೂಸಾ ನೀಡಿದ್ದಾಳೆ. ಕೊನೆಗೆ ಆಕೆಯನ್ನ ಕೆಳಗೆ ತಳ್ಳಿ ಕಾಮುಕರು ಬೀಳಿಸಿದ್ದಾರೆ. ಇದನ್ನೂ ಓದಿ: ಜನ್ರ ಸಮ್ಮುಖದಲ್ಲೇ ಜೋಡಿ ಲಿಪ್‍ಲಾಕ್ – ಪೊಲೀಸ್ರು ನಿಯೋಜನೆ ಮಾಡಿದ್ದ ರಸ್ತೆಯಲ್ಲೇ ಪ್ರೇಮಿಗಳು ಅರೆಬೆತ್ತಲೆ

    ನಗರದ ಬ್ರಿಗೇಡ್ ರಸ್ತೆಯಲ್ಲಿ ಮನೆಗೆ ಹೋಗಲು ಹೊರಟು ನಿಂತಿದ್ದ ಯುವತಿಯನ್ನ ಮೂವರು ಕಾಮುಕರು ಚುಡಾಯಿಸ್ತಾ ನಿಂತಿದ್ದರು. ಹೂವು ಕೊಟ್ಟು ಆಕೆಯನ್ನ ಪ್ರಪೋಸ್ ಮಾಡುತ್ತಾ, ಮಾನಸಿಕ ಕಿರಿಕಿರಿ ನೀಡುತ್ತಿದ್ದರು. ಕ್ಯಾಮೆರಾ ಶೂಟ್ ಮಾಡುತ್ತಿದೆ ಎಂದು ಗೊತ್ತಾದ ಕೂಡಲೇ ಮತ್ತೊಬ್ಬಾತ ಕರೆದುಕೊಂಡು ಹೋದ ಪ್ರಸಂಗವೂ ನಡೆದಿದೆ.

    ಪೆಟ್ರೋಲ್ ಬಂಕ್ ಎದುರು ಮೂವರು ಯುವತಿಯರು ಹೋಗುವಾಗ ಬೀದಿ ಕಾಮಾಂಧರು ಕೈಯಿಂದ ಅವರ ದೇಹ ಸವರುವ ಕೆಲಸ ಮಾಡಿದ್ದಾರೆ. ಈ ವೇಳೆ ಯುವತಿಯರು ಅವರಿಂದ ಹೇಗೋ ತಪ್ಪಿಸಿಕೊಂಡು ಪೊಲೀಸರ ಬಳಿ ಹೋಗಿ ರಕ್ಷಿಸಿಕೊಂಡಿದ್ದಾರೆ.

  • ಹೊಸ ವರ್ಷಾಚರಣೆಯಲ್ಲಿ ಸಿನಿಮಾ ಹಾಡು ಹಾಡಿ ರಂಜಿಸಿದ ರಾಯಚೂರು ಎಸ್‍ಪಿ

    ಹೊಸ ವರ್ಷಾಚರಣೆಯಲ್ಲಿ ಸಿನಿಮಾ ಹಾಡು ಹಾಡಿ ರಂಜಿಸಿದ ರಾಯಚೂರು ಎಸ್‍ಪಿ

    ರಾಯಚೂರು: ಜಿಲ್ಲೆಯಲ್ಲಿ ನೂತನ ವರ್ಷದ ಸಂಭ್ರಮಾಚರಣೆಗಳು ಜೋರಾಗಿ ನಡೆಯಿತು. ನಗರದ ನೀಲನಕ್ಷತ್ರ ಲೇಔಟ್ ನಲ್ಲಿ ಫ್ಯಾಮಿಲಿ ಪಾರ್ಟಿ ಆಯೋಜಿಸಲಾಗಿತ್ತು. ಮಕ್ಕಳು, ಯುವಕರು ವಯಸ್ಸಿನ ಭೇದವಿಲ್ಲದೆ ಕುಣಿದು ಸಂಭ್ರಮಿಸಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ.ವೇದಮೂರ್ತಿ ಸಿನಿಮಾ ಹಾಡುಗಳಿಗೆ ಧ್ವನಿಗೂಡಿಸಿ ನೆರೆದಿದ್ದವರನ್ನು ರಂಜಿಸಿದರು. ಮಕ್ಕಳು ಚಳಿಯನ್ನೂ ಲೆಕ್ಕಿಸದೇ ನೀರಿನಲ್ಲಿ ಕುಣಿದು ಖುಷಿಪಟ್ಟರು. ಭರ್ಜರಿ ಶೃಂಗಾರಗೊಂಡಿದ್ದ ಕಾರ್ಯಕ್ರಮದಲ್ಲಿ ನೂರಾರು ಜನ ಭಾಗವಹಿಸಿ ಸಂಭ್ರಮಿಸಿದ್ದರು.

    ನಗರದ ಸಾಯಿಸೀನಾ ಅಪಾರ್ಟ್ ಮೆಂಟ್ ಸೇರಿದಂತೆ ನಗರದ ಹಲವೆಡೆ ಹೊಸ ವರ್ಷಾಚರಣೆಯ ಸಂಭ್ರಮ ಮನೆ ಮಾಡಿತ್ತು. ಯುವಕ ಯುವತಿಯರು ಡಿಜೆ ಹಾಡಿಗೆ ಸಖತ್ ಡ್ಯಾನ್ಸ್ ಮಾಡಿದರು. ಈ ಮೂಲಕ ಜಿಲ್ಲೆಯ ಜನತೆ ಹೊಸ ವರ್ಷವನ್ನು ಖುಷಿಯಿಂದ ಬರಮಾಡಿಕೊಂಡರು.

  • ಇಯರ್ ಎಂಡ್ ಅಬ್ಬಿ ಜಲಪಾತದಲ್ಲಿ ಪ್ರವಾಸಿಗರ ದಂಡು

    ಇಯರ್ ಎಂಡ್ ಅಬ್ಬಿ ಜಲಪಾತದಲ್ಲಿ ಪ್ರವಾಸಿಗರ ದಂಡು

    ಮಡಿಕೇರಿ: ಇಂದು 2019ರ ಕೂನೆಯ ದಿನ ಆಗಿದ್ದು, ಎಲ್ಲೆಲ್ಲೂ ಹೂಸ ವರ್ಷದ ನಿರೀಕ್ಷೆಯಲ್ಲಿ ಜನರು ಕಾತರದಿಂದ ಕಾಯುತ್ತಿದ್ದಾರೆ. ಹಬ್ಬದ ಸಂಭ್ರಮ ಎಲ್ಲೆಲ್ಲೂ ಕಂಡು ಬರುತ್ತಿದೆ. ಪ್ರಕೃತಿಯ ತವರು, ಹಸಿರಸಿರಿಯ ನಡುವೆ ಸುಂದರ ಪ್ರವಾಸಿತಾಣಗಳನ್ನು ಹೂಂದಿರುವ ಕೊಡಗಿನಲ್ಲಂತೂ ಜನರು ಹರ್ಷದ ಹೂಳೆಯಲ್ಲಿ ತೇಲುತ್ತಿದ್ದಾರೆ.

    ಮಂಜಿನ ನಗರಿ ಮಡಿಕೇರಿಯಲ್ಲಿ ಪ್ರವಾಸಿಗರ ದಂಡು ಆಗಮಿಸುತ್ತಿದೆ. ಅಬ್ಬಿ ಜಲಪಾತದಲ್ಲಿ 2019ಕ್ಕೆ ವಿದಾಯ ಹೇಳುವುದಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿಯಿದೆ. ಎಲ್ಲರೂ ಹೂಸ ವರ್ಷದ ನಿರೀಕ್ಷೆಯಲ್ಲಿದ್ದಾರೆ.

    ಹಲವು ಸಿಹಿಕಹಿಗಳನ್ನೆಲ್ಲಾ ಹುದುಗಿಸಿಕೂಂಡು ತೆರೆಮರೆಗೆ ಸರಿಯುತ್ತಿರುವ 2019ಕ್ಕೆ ಗುಡ್‍ಬೈ ಹೇಳಲು ದೇಶದ ನಾನಾ ಭಾಗಗಳಿಂದ ಜನರು ಪ್ರಕೃತಿ ತವರು ಮಡಿಕೇರಿಗೆ ಲಗ್ಗೆಯಿಟ್ಟಿದ್ದಾರೆ. ನಿಸರ್ಗದ ಮಡಿಲಲ್ಲಿ ಹೂಸ ವರ್ಷಕ್ಕೆ ಸ್ವಾಗತ ಕೋರಲು ಪ್ರವಾಸಿಗರು ಸಜ್ಜಾಗಿದ್ದಾರೆ.

    ಸುತ್ತಲೂ ಹಚ್ಚ ಹಸಿರಿನಿಂದ ಕಂಗೂಳಿಸುವ ಕಾನನ ನಡುವೆ ಹಾಲ್ನೊರೆಯಂತೆ ಭೋರ್ಗರೆಯುತ್ತಾ ಧುಮ್ಮಿಕ್ಕೋ ಜಲಧಾರೆ ಇನ್ನೇನು ಬೇಕು ಹೇಳಿ. ಇಷ್ಟು ಸಾಕಲ್ಲವೆ? ಒಂದು ಇಯರ್ ಎಂಡ್ ಅನ್ನು ರಸಭರಿತವಾಗಿ ನಂತರ ಪಾರ್ಟಿಗಳಲ್ಲಿ ಎಂಜಾಯ್ ಮಾಡಲು ಸಜ್ಜಾಗಿದ್ದಾರೆ.

  • ಹೊಸ ವರ್ಷಾಚರಣೆಗೆ ಎಸ್‍ಪಿ ರವಿ ಚನ್ನಣ್ಣನವರ್ ಖಡಕ್ ವಾರ್ನಿಂಗ್

    ಹೊಸ ವರ್ಷಾಚರಣೆಗೆ ಎಸ್‍ಪಿ ರವಿ ಚನ್ನಣ್ಣನವರ್ ಖಡಕ್ ವಾರ್ನಿಂಗ್

    ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆ ಸಂಬಂಧ ನಂದಿಬೆಟ್ಟದ ತಪ್ಪಲಿನ ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್ ಸೇರಿದಂತೆ ಅಂಗಡಿ ಮಾಲೀಕರ ಜೊತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‍ಪಿ ರವಿ ಚನ್ನಣ್ಣನವರ್ ಸಭೆ ನಡೆಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಕಾರಹಳ್ಳಿ ಕ್ರಾಸ್‍ನ ಹೋಟೆಲಿನಲ್ಲಿ ಮಾಲೀಕರ ಜೊತೆ ಸಭೆ ನಡೆಸಿದ ಎಸ್‍ಪಿ ರವಿ ಚನ್ನಣ್ಣನವರ್, ನಂದಿಬೆಟ್ಟದ ತಪ್ಪಲಿನಲ್ಲಿ ಅಕ್ರಮ ಚಟುವಟಿಕೆಗಳು, ಅಕ್ರಮ ಮದ್ಯ ಮಾರಾಟ ನಡೆಯುತ್ತದೆ. ಇಲ್ಲಿ ಹುಕ್ಕಾ ಬಾರ್ ಗಳಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದೆ ಎನ್ನುವ ಜನಾಭಿಪ್ರಾಯ ಇದೆ. ಈ ಭಾಗದಲ್ಲಿ ವರದಿಯಾದ ಅಪರಾಧ ಪ್ರಕರಣಗಳಿಂದ ನನಗೂ ಕೂಡ ಹಾಗೆ ಅನಿಸಿದೆ. ಹೀಗಾಗಿ ಹೊಸ ವರ್ಷದ ಅಂಗವಾಗಿ ನಂದಿಬೆಟ್ಟದ ತಪ್ಪಲಿನಲ್ಲಿನ ರೆಸಾರ್ಟ್, ರೆಸ್ಟೋರೆಂಟ್, ಹೋಟೆಲ್, ಅಂಗಡಿ ಮಾಲೀಕರು ಕಾನೂನು ರೀತಿ ಹೊಸ ವರ್ಷಾಚರಣೆ ಮಾಡಬೇಕೇ ಹೊರತು ಕಾನೂನು ನಿಯಮಗಳನ್ನ ಮೀರಿ ಹೊಸ ವರ್ಷಾಚರಣೆ ಮಾಡುವಂತಿಲ್ಲ ಅಂತ ಖಡಕ್ ಎಚ್ಚರಿಕೆ ನೀಡಿದರು.

    ಯಾವುದೇ ಕಾರಣಕ್ಕೂ ಅನುಮತಿ ಪಡೆಯದೇ ಮದ್ಯ ಮಾರಾಟ ಮಾಡಿ, ಪಾರ್ಟಿಗಳನ್ನ ಆಯೋಜನೆ ಮಾಡಿ, ಡಿಜೆಗಳನ್ನ ಹಾಕಿ, ಟೆಂಟ್‍ಗಳನ್ನ ಹಾಕಿ ಕುಣಿದು ಕುಪ್ಪಳಿಸಿ ಮೋಜು ಮಸ್ತಿ ಮಾಡಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕಾಗುತ್ತದೆ. ಅಂದಹಾಗೆ ಮದ್ಯ ಮಾರಾಟಕ್ಕೆ ಅನುಮತಿ ಪಡೆದವರಿಗೆ ಅಷ್ಟೇ ಅವಕಾಶವಿದೆ. ಅದು ರಾತ್ರಿ ಪೂರ್ತಿ ಇರೋದಿಲ್ಲ. ಡಿಜೆಗೆ ಅನುಮತಿಯನ್ನ ನೀಡುವುದಿಲ್ಲ. ಡಿಜೆ ಮಾಡುವುದು ಕಾನೂನುಬಾಹಿರ. ಆದರೆ ಕೌಟುಂಬಿಕ ಸಭ್ಯ ಜನರು ಬಂದು ಊಟ ಮಾಡಿ ಮನರಂಜನೆ ಪಡೆಯಲು ನಮ್ಮದೂ ಯಾವುದೇ ಅಭ್ಯಂತರವಿಲ್ಲ ಎಂದು ಹೇಳಿದರು.

    ಈಗಾಗಲೇ ಸ್ಥಳೀಯ ಹೆಗ್ಗಡಹಳ್ಳಿ ಹಾಗೂ ಕಾರಹಳ್ಳಿ ಗ್ರಾಮಪಂಚಾಯ್ತಿ ಅಧ್ಯಕ್ಷರುಗಳಿಂದ ನಂದಿಬೆಟ್ಟದ ತಪ್ಪಲಿನಲ್ಲಿ ಹಾಗೂ ವಿಶೇಷವಾಗಿ ಹ್ಯಾಂಗ್ ಔಟ್ ಕೆಫೆ, ಗ್ರೌಂಡ್ ಜಿರೋ, ಮಿಸ್ಟ್ ಫ್ಯಾಕ್ಟರಿ, ಹಿಲ್ ಡ್ರೈವ್ ಕೆಫೆಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎನ್ನುವ ದೂರುಗಳ ಕೇಳಿಬಂದಿವೆ. ಹೀಗಾಗಿ ಹೊಸ ವರ್ಷಾಚರಣೆ ನೆಪದಲ್ಲಿ ಕಾನೂನು ಬಾಹಿರ ಕೃತ್ಯಗಳನ್ನ ನಡೆಸಿದರೆ ಕೇಸ್ ದಾಖಲಿಸಲಾಗುವುದು ಎಂದು ರವಿ ಚನ್ನಣ್ಣನವರ್ ಎಚ್ಚರಿಕೆ ನೀಡಿದರು.

    ಸಿಎಲ್ 5 ಅನುಮತಿ ಪಡೆದರೆ ನಿಗದಿತ ಸಮಯದವರೆಗೂ ಮದ್ಯ ಮಾರಾಟಕ್ಕೆ ಅವಕಾಶ ಇರುತ್ತೆ ಆದರೆ ಅದರ ಹೆಸರಲ್ಲಿ ದೊಡ್ಡ ಮಟ್ಟದ ಇವೆಂಟ್‍ಗಳನ್ನ ನಡೆಸುವಂತಿಲ್ಲ, ಜಿಲ್ಲಾಡಳಿತದಿಂದ ಅನುವತಿ ಪಡೆದು ನಡೆಸಿದರೂ ಸಹ ಪಾರ್ಟಿಗೆ ಬಂದು ಹೋದವರ ಸಂಪೂರ್ಣ ಮಾಹಿತಿ, ವಿಳಾಸ ಸಮೇತ ಮೊಬೈಲ್ ನಂಬರನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕೊಡಬೇಕಾಗುತ್ತದೆ. ಅಲ್ಲದೆ ಕಡ್ಡಾಯವಾಗಿ ಸಿಸಿಟಿವಿ ಆಳವಡಿಕೆ ಮಾಡಬೇಕು. ಹೀಗೆ 21 ನಿಯಮಗಳನ್ನ ಒಪ್ಪಿದರೆ ಮಾತ್ರ ನಿಮಗೆ ಪಾರ್ಟಿ ಇವೆಂಟ್ ಆಯೋಜನೆ ಮಾಡಲು ಅನುಮತಿ ಸಿಗುತ್ತದೆ. ಈಗಾಗಲೇ ಕೆಲವರು ಅನುಮತಿ ಕೇಳಿದ್ದು, ಸದ್ಯ ಯಾರಿಗೂ ಅನುಮತಿ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

  • ಇಂದು ಮಧ್ಯರಾತ್ರಿ 12ರವರೆಗೂ ಬಿಎಂಟಿಸಿ ಸಂಚಾರ

    ಇಂದು ಮಧ್ಯರಾತ್ರಿ 12ರವರೆಗೂ ಬಿಎಂಟಿಸಿ ಸಂಚಾರ

    ಬೆಂಗಳೂರು: ಇಡೀ ಬೆಂಗಳೂರು ಹೊಸ ವರ್ಷವನ್ನು ಬರಮಾಡಿಕೊಳ್ಳಲು ತುದಿಗಾಲ ಮೇಲೆ ನಿಂತಿದೆ. ಸಿಲಿಕಾನ್ ಸಿಟಿಯ ಬಹುತೇಕ ಮಂದಿ ಹೊಸ ವರ್ಷ ಆಚರಣೆ ಮಾಡಲು ಪ್ಲಾನ್ ಮಾಡ್ತಿದ್ದಾರೆ. ಆದರೆ ಮಧ್ಯರಾತ್ರಿ ಸೆಲೆಬ್ರೇಷನ್ ಮುಗಿಸಿ ಮನೆ ತಲುಪುವುದು ಹೇಗೆ ಎಂಬ ಚಿಂತೆ ಬಹುತೇಕರಲ್ಲಿ ಕಾಡುತ್ತೆ. ಹೀಗಾಗಿ ಇಂದು ಮಧ್ಯರಾತ್ರಿ 12 ಗಂಟೆವರೆಗೂ ಬಿಎಂಟಿಸಿ ತನ್ನ ಸೇವೆ ವಿಸ್ತರಿಸಿದೆ. ಈಗಾಗಲೇ ಬಿ.ಎಂ.ಆರ್.ಸಿ.ಎಲ್ ತನ್ನ ಸೇವೆಯನ್ನು 12 ಗಂಟೆವರೆಗೂ ವಿಸ್ತರಿಸಿದ್ದು, ಪ್ರಮುಖ ಮೆಟ್ರೋ ನಿಲ್ದಾಣಗಳಿಂದ ವಿವಿಧ ಭಾಗಗಳಿಗೆ ಬಿಎಂಟಿಸಿ ಸಾರಿಗೆ ಸೌಲಭ್ಯ ನೀಡುತ್ತಿದೆ.

    ಹೆಚ್ಚಿನ ಪ್ರಮಾಣದಲ್ಲಿ ಜನ ಸೇರುವ ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಕೆಂಪೇಗೌಡ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸೇವೆ ಒದಗಿಸಲಾಗುವುದೆಂದು ಬಿಎಂಟಿಸಿ ತಿಳಿಸಿದೆ. ಬಿಎಂಟಿಸಿ ಪ್ರಸ್ತುತ ನಗರದ ವಿವಿಧ 143 ಸ್ಥಳಗಳಿಗೆ ರಾತ್ರಿ ವೇಳೆ ಕಾರ್ಯಾಚರಣೆ ನಡೆಸುತ್ತಿದೆ. ಇದನ್ನು ಓದಿ: ಡಿ.31ರಂದು ಮಧ್ಯರಾತ್ರಿ 2ರವರೆಗೂ ಮೆಟ್ರೋ ಸೇವೆ ವಿಸ್ತರಣೆ

    ವಿಜಯನಗರ ಮೆಟ್ರೋ ನಿಲ್ದಾಣದಿಂದ ಬನಶಂಕರಿ ಮೆಟ್ರೋ ನಿಲ್ದಾಣ, ಉಲ್ಲಾಳ ಉಪನಗರ, ಮೈಸೂರು ರಸ್ತೆ ನಿಲ್ದಾಣದಿಂದ ಕೆಂಗೇರಿ, ಬಿ.ಎಂ.ಆರ್.ಸಿ.ಎಲ್ 5 ನೇ ಹಂತ, ಬನಶಂಕರಿ ಮೆಟ್ರೋ ನಿಲ್ದಾಣದಿಂದ ಕಗ್ಗಲೀಪುರ, ಜಯನಗರ ಮೆಟ್ರೋ ನಿಲ್ದಾಣದಿಂದ ವಡ್ಡರಹಳ್ಳಿ ಹಾಗೂ ಜಂಬೂ ಸವಾರಿ ದಿಣ್ಣೆ, ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣದಿಂದ ವಿದ್ಯಾರಣ್ಯಪುರ, ಜಾಲಹಳ್ಳಿ ಮೆಟ್ರೋ ನಿಲ್ದಾಣದಿಂದ ವಿದ್ಯಾರಣ್ಯಪುರ, ನಾಗಸಂದ್ರ ಮೆಟ್ರೋ ನಿಲ್ದಾಣದಿಂದ ಚಿಕ್ಕಬಾಣಾಪುರ, ಎಸ್.ವಿ ಮೆಟ್ರೋ ನಿಲ್ದಾಣದಿಂದ ಕೆ.ಆರ್.ಪುರಂ ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ ಬಿಎಂಟಿಸಿ ಬಸ್ ಗಳು ಸಂಚಾರ ಮಾಡಲಿವೆ.

  • ವನ್ಯಜೀವಿ ಪ್ರಿಯರ ನಾಡಲ್ಲೂ ವರ್ಷಾಚರಣೆಗೆ ಬ್ರೇಕ್

    ವನ್ಯಜೀವಿ ಪ್ರಿಯರ ನಾಡಲ್ಲೂ ವರ್ಷಾಚರಣೆಗೆ ಬ್ರೇಕ್

    ಚಾಮರಾಜನಗರ: ವನ್ಯಜೀವಿ ಪ್ರಿಯರ ಸ್ವರ್ಗ ಚಾಮರಾಜನಗರದಲ್ಲಿ ಹೊಸ ವರ್ಷ ಆಚರಣೆಗೆ ಬ್ರೇಕ್ ಹಾಕಲಾಗಿದೆ.

    ಚಾಮರಾಜನಗರ ಜಿಲ್ಲೆಯಲ್ಲಿ ಮೂರು ಹುಲಿ ಸಂರಕ್ಷಿತಾರಣ್ಯ ಪ್ರದೇಶವಿದೆ. ಬಂಡೀಪುರ ಹುಲಿ ಸಂರಕ್ಷಿತಾರಣ್ಯ, ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತಾರಣ್ಯ, ಮಲೆ ಮಹದೇಶ್ವರ ಸಂರಕ್ಷಿತಾರಣ್ಯವನ್ನು ಒಳಗೊಂಡಿದೆ. ಈ ಮೂರು ಕೂಡ ಹುಲಿ ಸಂರಕ್ಷಿತಾರಣ್ಯವಾಗಿದ್ದು, ವನ್ಯಜೀವಿಗಳನ್ನು ನೋಡಿ ಎಂಜಾಯ್ ಮಾಡಲೂ ಸಾಕಷ್ಟು ಜನ ಕಾಡಿಗೆ ಬರುತ್ತಿದ್ದಾರೆ.

    ಹೊಸ ವರ್ಷದ ಸಂಭ್ರಮದಲ್ಲಿ ಪ್ರವಾಸಿಗರು ಮೈ ಮರೆಯದಂತೆ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಬ್ರೇಕ್ ಹಾಕಿದ್ದು, ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದೆ. ಗುಂಪು ಗುಂಪಾಗಿ ಸೇರುವುದು, ಪಾರ್ಟಿಯಲ್ಲಿ ಡಿಜೆ ಬಳಸಲು ನಿಷೇಧ ಹೇರಲಾಗಿದೆ.

    ಪಟಾಕಿ ಸಿಡಿಸಿ ಫೈರ್ ಕ್ಯಾಂಪ್ ಮಾಡಿ ವನ್ಯ ಜೀವಿಗಳಿಗೆ ತೊಂದರೆ ಕೊಟ್ಟರೆ ಹುಷಾರ್ ಅವರ ವಿರುದ್ಧ ಕ್ರಮ ಗ್ಯಾರಂಟಿ. ಹೊಸ ವರ್ಷಾಚರಣೆ ಮಾಡುವ ಹೋಟೆಲ್, ರೆಸಾರ್ಟ್ ಗಳು ಕಡ್ಡಾಯವಾಗಿ ಪೊಲೀಸರ ಅನುಮತಿ ಪಡೆಯಬೇಕು. ಇದರ ಜೊತೆಗೆ ಕಾರ್ಯಕ್ರಮದ ವೇಳೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕೆಂದು ತಾಕೀತು ಮಾಡಲಾಗಿದೆ.

  • ಕಾವೇರಿ ತೀರದಲ್ಲಿ ಮೋಜು ಮಸ್ತಿ ಬಂದ್ – 2 ದಿನ 144 ಸೆಕ್ಷನ್ ಜಾರಿ

    ಕಾವೇರಿ ತೀರದಲ್ಲಿ ಮೋಜು ಮಸ್ತಿ ಬಂದ್ – 2 ದಿನ 144 ಸೆಕ್ಷನ್ ಜಾರಿ

    -ಯುವಕ, ಯುವತಿಯರ ಅಸಭ್ಯ ವರ್ತನೆ ತಡೆಯಲು

    ಮಂಡ್ಯ: ಹೊಸ ವರ್ಷದ ಸಂಭ್ರಮಾಚರಣೆಯನ್ನು ಕಾವೇರಿ ನದಿ ತೀರದಲ್ಲಿ ಫುಲ್ ಮೋಜು ಮಸ್ತಿ ಮೂಲಕ ಎಂಜಾಯ್ ಮಾಡಬೇಕು ಅಂದುಕೊಂಡಿದ್ದ ಜನರಿಗೆ ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಶಾಕ್ ನೀಡಿದ್ದಾರೆ. ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಕಾವೇರಿ ನದಿ ತೀರದ ಪ್ರವಾಸಿ ಸ್ಥಳ ಸೇರಿದಂತೆ ಮಂಡ್ಯ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಮಂಡ್ಯ ಎಸ್‍ಪಿ ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

    ಡಿಸಂಬರ್ 31 ಮತ್ತು ಜನವರಿ 01ಕ್ಕೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾವೇರಿ ನದಿ ತೀರದಲ್ಲಿ ಬರುವ ಪ್ರವಾಸಿ ಸ್ಥಳಗಳು, ಮಳವಳ್ಳಿ ತಾಲೂಕಿನ ಪ್ರವಾಸಿ ಸ್ಥಳಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶ್ರೀರಂಗಪಟ್ಟಣದ ಬಲಮುರಿ, ಎಡಮುರಿ, ಸಂಗಮ, ಕರಿಘಟ್ಟ ಸೇರಿದಂತೆ ಇನ್ನಿತರ ಕಾವೇರಿ ಜಲಾನಯನ ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿ ಮಾಡುವ ಮೂಲಕ ಹೊಸ ವರ್ಷದ ಮೋಜು ಮಸ್ತಿಗೆ ಬ್ರೇಕ್ ಹಾಕಲಾಗಿದೆ. ಇದಲ್ಲದೇ ಮಳವಳ್ಳಿ ತಾಲೂಕಿನ ಮುತ್ತತ್ತಿಗೂ ಸಹ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

    ಪ್ರಮುಖವಾಗಿ ಕಾವೇರಿ ತೀರದಲ್ಲಿ ನಿಷೇಧಾಜ್ಞೆ:
    ಮಂಡ್ಯ ಜಿಲ್ಲೆ ಎಂದರೆ ಕಾವೇರಿ ನದಿ ತೀರದ ಜಿಲ್ಲೆ ಎಂದು ರಾಜ್ಯದಲ್ಲಿ ಹೆಸರುವಾಸಿ ಪಡೆದಿದೆ. ಕಾವೇರಿ ತೀರದಲ್ಲಿ ಹಲವು ರಮಣೀಯವಾದ ಪ್ರವಾಸಿ ಸ್ಥಳಗಳು ಇವೆ. ಈ ನಿಟ್ಟಿನಲ್ಲಿ ಪ್ರತಿನಿತ್ಯ ಈ ಭಾಗಕ್ಕೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಪ್ರವಾಸಿಗರು ಬರುತ್ತಾರೆ. ಅದರಲ್ಲೂ ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಅಪಾರ ಜನರು ಬಂದು ಮೋಜು ಮಸ್ತಿ ಮಾಡುತ್ತಾರೆ. ಇಲ್ಲೆ ಮಂಸಾಹಾರವನ್ನು ತಯಾರು ಮಾಡಿಕೊಂಡು ಮದ್ಯಪಾನ ಸೇವನೆ ಮಾಡಿಕೊಂಡು ಫುಲ್ ಎಂಜಾಯ್ ಮಾಡ್ತಾರೆ. ಈ ವೇಳೆ ಈ ಭಾಗದಲ್ಲಿ ಸಾಕಷ್ಟು ಅವಘಡಗಳು ಸಹ ಜರುಗಿವೆ. ಅಲ್ಲದೆ ಸಾರ್ವಜನಿಕರಿಗೂ ಕಿರಿಕಿರಿ ಉಂಟಾಗುತ್ತದೆ. 2013 ರಿಂದ 2019ನೇ ಸಾಲಿನ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಸುಮಾರು 55 ಮಂದಿ ಇಲ್ಲಿ ಸಾವನ್ನಪ್ಪಿದ್ದಾರೆ. ಈ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಎಸ್‍ಪಿ ಪರಶುರಾಮ್ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

    ಅಸಭ್ಯ ವರ್ತನೆ ತಡೆಯುವ ಉದ್ದೇಶ:
    ಇತ್ತೀಚಿಗೆ ದೇಶದ ಹಲವು ಭಾಗದಲ್ಲಿ ಸಾರ್ವಜನಿಕ ಸ್ಥಳಗಳಲ್ಲೇ ಯುವಕ ಯುವತಿಯರು ಅಸಭ್ಯವಾಗಿ ವರ್ತನೆ ಮಾಡುವಂತಹ ಘಟನೆಗಳು ಬೆಳಕಿಗೆ ಬರುತ್ತಿವೆ. ಅದೇ ರೀತಿ ಕಾವೇರಿ ನದಿ ತೀರದ ಪ್ರದೇಶಗಳಲ್ಲೂ ಸಹ ಯುವಕ ಯುವತಿಯರು ಅಸಭ್ಯವಾಗಿ ವರ್ತನೆ ಮಾಡುತ್ತಿರುವುದು ಬೆಳಕಿಗೆ ಬರುತ್ತಿದೆ. ಈ ಒಂದು ಘಟನೆಗಳನ್ನು ತಡೆಯುವುದು ಪೊಲೀಸ್ ಇಲಾಖೆಯ ಉದ್ದೇಶವಾಗಿದೆ.

    ಪೇಜಾವರ ಶ್ರೀಗಳ ಶೋಕಾಚರಣೆ:
    ರಾಜ್ಯದಲ್ಲಿ ಮೂರು ದಿನಗಳ ಕಾಲ ಪೇಜಾವರ ಶ್ರೀಗಳ ನಿಧನ ಹಿನ್ನೆಲೆ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯಾದ್ಯಾಂತ ಹೊಸ ವರ್ಷ ಸಂಭ್ರಮಾಚರಣೆಯನ್ನು ವಿಜೃಂಭಣೆಯಿಂದ ಆಚರಣೆ ಮಾಡುವಂತಿಲ್ಲ. ಅತೀ ಹೆಚ್ಚು ಸೌಂಡ್‍ ಕೊಟ್ಟುಕೊಂಡು ಧ್ವನಿ ವರ್ಧಕಗಳನ್ನು ಸಹ ಬಳಸಿಕೊಳ್ಳುವ ಹಾಗೆ ಇಲ್ಲ. ಸರಳವಾಗಿ ಸಂಭ್ರಮಾಚರಣೆ ಆಚರಣೆ ಮಾಡಬೇಕೆಂದು ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಹೇಳಿದ್ದಾರೆ.

  • ನಂದಿಬೆಟ್ಟಕ್ಕೆ ಹೊಸ ವರ್ಷಾಚರಣೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧ

    ನಂದಿಬೆಟ್ಟಕ್ಕೆ ಹೊಸ ವರ್ಷಾಚರಣೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧ

    ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆ ಅಂಗವಾಗಿ ವಿಶ್ವವಿಖ್ಯಾತ ಪ್ರಸಿದ್ಧ ಪ್ರವಾಸಿ ತಾಣ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧವನ್ನು ಹಾಕಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

    ಚಿಕ್ಕಬಳ್ಳಾಪುರ ತಾಲೂಕು ನಂದಿ ಗ್ರಾಮದ ಬಳಿಯ ನಂದಿಗಿರಿಧಾಮಕ್ಕೆ ಡಿಸೆಂಬರ್ 31ರ ಸಂಜೆ 4 ಗಂಟೆಯಿಂದ, ಹೊಸ ವರ್ಷ 2020ರ ಜನವರಿ 1ರ ಬೆಳಿಗ್ಗೆ 8 ಗಂಟೆಯವರೆಗೂ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಆರ್.ಲತಾ ಆದೇಶ ಹೊರಡಿಸಿದ್ದಾರೆ. ಹೊಸ ವರ್ಷಾಚರಣೆ ಅಂಗವಾಗಿ ನಂದಿಗಿರಿಧಾಮಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ ನಂದಿಗಿರಿಧಾಮದ ಪರಿಸರ ಹಾಗೂ ಪಾವಿತ್ರ್ಯತೆಯನ್ನ ಕಾಪಾಡುವುದರ ಉದ್ದೇಶದ ಜೊತೆಗೆ ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಪ್ರವಾಸಿಗರು ಈ ಸಮಯದಲ್ಲಿ ನಂದಿಗಿರಿಧಾಮ ಪ್ರವೇಶ ಮಾಡುವುದನ್ನ ನಿಷೇಧಿಸಲಾಗಿದೆ.

    ನಂದಿಗಿರಿಧಾಮ ರಸ್ತೆ ಸಹ ಸಾಕಷ್ಟು ಅಂಕು ಡೊಂಕಿನಿಂದ ಕೂಡಿದೆ. ಹೊಸ ವರ್ಷಾಚರಣೆಯ ಮೋಜು ಮಸ್ತಿ ನಡುವೆ, ಮದ್ಯ ಸೇವೆನೆ ಮಾಡಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳು ಸಹ ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರ ಹಿತದೃಷ್ಟಿಯಿಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಂದಿಗಿರಿಧಾಮದ ಪ್ರವೇಶವನ್ನ ನಿರ್ಬಂಧಿಸಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿದೆ. ಜನವರಿ 1ರ ಬೆಳಿಗ್ಗೆ 8 ಗಂಟೆಯ ನಂತರ ಎಂದಿನಂತೆ ನಂದಿಗಿರಿಧಾಮ ಪ್ರವೇಶಕ್ಕೆ ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ.

  • ಮಧ್ಯರಾತ್ರಿ 2 ಗಂಟೆಯವರೆಗೆ ಪಾರ್ಟಿ – ಹೊಸ ವರ್ಷದಂದು ನೈಟ್ ಲೈಫ್ ವಿಸ್ತರಣೆ

    ಮಧ್ಯರಾತ್ರಿ 2 ಗಂಟೆಯವರೆಗೆ ಪಾರ್ಟಿ – ಹೊಸ ವರ್ಷದಂದು ನೈಟ್ ಲೈಫ್ ವಿಸ್ತರಣೆ

    ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ತುದಿಗಾಲಲ್ಲಿ ನಿಂತಿರುವ ಸಿಲಿಕಾನ್ ಸಿಟಿ ಮಂದಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಗುಡ್ ನ್ಯೂಸ್ ನೀಡಿದ್ದಾರೆ.

    ಪಾರ್ಟಿ ಪ್ರಿಯರಿಗೆ ಪೊಲೀಸ್ ಆಯುಕ್ತರು ಗುಡ್ ನ್ಯೂಸ್ ನೀಡಿದ್ದು, ಹೊಸ ವರ್ಷದ ದಿನ ಮಧ್ಯರಾತ್ರಿ ಎರಡು ಗಂಟೆಯವರೆಗೆ ನೈಟ್ ಲೈಫ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಹೊಸ ವರ್ಷದ ದಿನದಂದು ಬಾರ್, ಪಬ್ ರೆಸ್ಟೊರೆಂಟ್, ಹೋಟೆಲುಗಳ ವ್ಯಾಪಾರದ ಸಮಯವನ್ನು ಮಧ್ಯರಾತ್ರಿ ಎರಡು ಗಂಟೆಯವರೆಗೆ ವಿಸ್ತರಿಸಿದ್ದಾರೆ.

    ಪ್ರತಿ ದಿನ ರಾತ್ರಿ ಒಂದು ಗಂಟೆಗೆ ಮುಚ್ಚುತ್ತಿದ್ದ ನೈಟ್ ಲೈಫ್ ಅವಧಿ, 31ರ ರಾತ್ರಿ ಒಂದು ಗಂಟೆ ವಿಸ್ತರಣೆಯಾಗಿದ್ದು, ರಾತ್ರಿ 2 ಗಂಟೆಯವರೆಗೆ ಎಂಜಾಯ್ ಮಾಡಬಹುದಾಗಿದೆ. ಪಾರ್ಟಿ ಪ್ರಿಯರು ಯಾವುದೇ ಭಯ ಆತಂಕವಿಲ್ಲದೆ, ಎರಡು ಗಂಟೆಯವರೆಗೆ ಪಾರ್ಟಿ ನಡೆಸಬಹುದಾಗಿದೆ.

    ಮೆಟ್ರೋ ಅವಧಿ ವಿಸ್ತರಣೆ
    ಹೊಸ ವರ್ಷ ಆಚರಣೆ ಹಿನ್ನೆಲೆ ಡಿ.31ರಂದು ಮಧ್ಯರಾತ್ರಿ 2ಗಂಟೆಯವರೆಗೂ ಮೆಟ್ರೋ ಸೇವೆ ವಿಸ್ತರಿಸಲು ಬಿಎಂಆರ್ ಸಿಎಲ್ ನಿರ್ಧರಿಸಿದ್ದು, ಪಾರ್ಟಿ ಮುಗಿಸಿ ಮೆಟ್ರೋದಲ್ಲಿ ಮನೆಗೆ ತೆರಳಬಹುದಾಗಿದೆ.

    ಡಿಸೆಂಬರ್ 31ರಂದು ಮಧ್ಯರಾತ್ರಿ 2ಗಂಟೆ ವರೆಗೂ ಮೆಟ್ರೋ ಸಂಚರಿಸಲಿದೆ. ಇದರ ಜೊತೆಗೆ ಬಂಪರ್ ಕೊಡುಗೆಯನ್ನು ಸಹ ನೀಡಿದ್ದು, 50 ರೂ. ಮೇಲ್ಪಟ್ಟು ಟಿಕೆಟ್ ಖರೀದಿಸಿದರೆ ಯಾವುದೇ ನಿಲ್ದಾಣದಲ್ಲಿ ಹತ್ತಿ ಯಾವುದೇ ನಿಲ್ದಾಣದಲ್ಲಿ ಇಳಿಯಬಹುದಾಗಿದೆ. ಇದರ ಜೊತೆಗೆ ಷರತ್ತನ್ನು ಸಹ ವಿಧಿಸಿದ್ದು, ಕುಡಿದು ಪ್ರಯಾಣಿಸುವವರಿಗೆ ಎಚ್ಚರಿಕೆ ನೀಡಿದೆ. ಕುಡಿದು ಅಸಭ್ಯವಾಗಿ ವರ್ತಿಸಿದರೆ ಮೆಟ್ರೋದಿಂದ ಕಿಕ್ ಔಟ್ ಮಾಡುವುದಾಗಿ ಬಿಎಂಆರ್‍ಸಿಎಲ್ ತಿಳಿಸಿದೆ.