Tag: celebration

  • ಬೆತ್ತಲಾಗಿ ದೇಗುಲಕ್ಕೆ ಬಂದ 10 ಸಾವಿರ ಭಕ್ತಾದಿಗಳು

    ಬೆತ್ತಲಾಗಿ ದೇಗುಲಕ್ಕೆ ಬಂದ 10 ಸಾವಿರ ಭಕ್ತಾದಿಗಳು

    – ಹಡಕಾ ಮತ್ಸುರಿ ಹಬ್ಬದಲ್ಲಿ ವಿಚಿತ್ರ ಆಚರಣೆ

    ಟೋಕಿಯೋ: ಜಗತ್ತಿನಾದ್ಯಂತ ಚಿತ್ರ ವಿಚಿತ್ರ ಸಂಪ್ರದಾಯ, ಆಚರಣೆಗಳನ್ನು ಪಾಲಿಸುವ ಸಮುದಾಯ, ಜನರು ಇರುತ್ತಾರೆ. ಅದರಲ್ಲೂ ಕೆಲ ವಿಚಿತ್ರ ಪದ್ಧತಿ, ಆಚರಣೆಗಳು ಹೆಚ್ಚು ಸದ್ದು ಮಾಡುತ್ತವೆ. ಅದರಲ್ಲಿ ಬೆತ್ತಲಾಗಿ ದೇಗುಲಕ್ಕೆ ತೆರಳಿ ಪೂಜೆ ಮಾಡುವ ಆಚರಣೆ ಕೂಡ ಒಂದಾಗಿದೆ.

    ಜಪಾನ್‍ನಲ್ಲಿ ಇಂತಹ ವಿಚಿತ್ರ ಆಚರಣೆಯೊಂದನ್ನು ಜನ ಪಾಲಿಸಿಕೊಂಡು ಬಂದಿದ್ದಾರೆ. ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದಿರುವ ಜಪಾನ್ ಅಂತಹ ರಾಷ್ಟ್ರದಲ್ಲೂ ಇಂತಹ ವಿಚಿತ್ರ ಆಚರಣೆ ನಡೆಯುತ್ತದೆ ಎಂದರೆ ನಂಬಲು ಆಗಲ್ಲ. ಆದರೂ ಇದು ಸತ್ಯ.

    ಇದಕ್ಕೆ ‘ಹಡಕಾ ಮತ್ಸುರಿ’ ಹಬ್ಬ ಎಂದು ಕರೆಯಲಾಗುತ್ತೆ. ಪ್ರತಿ ವರ್ಷ ಫೆಬ್ರವರಿ ತಿಂಗಳ ಎರಡನೇ ಶನಿವಾರ ಈ ಹಬ್ಬವನ್ನು ಆಚರಿಸಲಾಗುತ್ತದೆ. ಬೆತ್ತಲಾಗಿ ದೇವಸ್ಥಾನಕ್ಕೆ ಹೋಗಿ, ಪೂಜೆ ಸಲ್ಲಿಸುವುದು ಈ ಹಬ್ಬದ ವಿಶೇಷತೆಯಾಗಿದ್ದು, ‘ಹಡಕಾ ಮತ್ಸುರಿ’ ಹಬ್ಬಕ್ಕೆ ಬೆತ್ತಲೆ ಹಬ್ಬ ಎಂದು ಕೂಡ ಕರೆಯಲಾಗುತ್ತದೆ.

    ಜಪಾನ್‍ನ ಓಕಾಯಾಮಾ ನಗರದಲ್ಲಿ ನಿರ್ಮಿಸಲಾಗಿರುವ ಸೈದಾಯೀಜಿ ಕಾನೌನೀನ್ ದೇಗುಲದಲ್ಲಿ ಪುರುಷ ಭಕ್ತರು ಬೆತ್ತಲಾಗಿ ಪೂಜೆ ಮಾಡಲು ಹೋಗುತ್ತಾರೆ. ಪ್ರತಿ ವರ್ಷದಂತೆ ಈ ಬಾರಿಯೂ ‘ಹಡಕಾ ಮತ್ಸುರಿ’ ಹಬ್ಬ ಆಚರಿಸಲಾಯಿತು. ಈ ಆಚರಣೆಯಲ್ಲಿ ಸುಮಾರು 10 ಸಾವಿರ ಮಂದಿ ಭಾಗಿಯಾಗಿದ್ದರು. ಈ ಹಬ್ಬದಲ್ಲಿ ಪಾಲ್ಗೊಳ್ಳುವವರು ಅತ್ಯಂತ ಕಡಿಮೆ ಬಟ್ಟೆಯನ್ನು ಮೈಮೇಲೆ ಧರಿಸುವುದು ಸಂಪ್ರದಾಯವಾಗಿದೆ. ಆದ್ದರಿಂದ ‘ಪುಂದೇಶೀ ಹಾಗೂ ತಬೀ’ ಎನ್ನುವ ಒಂದು ಪುಟ್ಟ ಬಟ್ಟೆ ತುಂಡು ಸುತ್ತಿಕೊಂಡು ಭಕ್ತರು ದೇಗುಲಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ.

    ಈ ಹಬ್ಬದಲ್ಲಿ ಪಾಲ್ಗೊಳ್ಳುವ ಭಕ್ತರು ಮೊದಲು ಸೈದಾಯೀಜಿ ಕಾನೌನೀನ್ ದೇಗುಲವನ್ನು ಸ್ವಚ್ಛಗೊಳಿಸುತ್ತಾರೆ. ಬಳಿಕ ಸಂಜೆ ತಣ್ಣೀರಲ್ಲಿ ಸ್ನಾನ ಮಾಡಿ, ಪುಂದೇಶೀ ಹಾಗೂ ತಬೀ ಸುತ್ತುಕೊಂಡು ಬೆತ್ತಲಾಗಿ ಮುಖ್ಯ ದೇಗುಲದ ಆವರಣಕ್ಕೆ ತೆರಳುತ್ತಾರೆ. ನಂತರ ರಾತ್ರಿ ದೇಗುಲದ ಅರ್ಚಕರು ದೇಗುಲದ ಮಹಡಿಯ ಕಿಟಕಿ ತೆರೆದು ಭಕ್ತರಿದ್ದಲ್ಲಿ ಧ್ವಜಗಳನ್ನು ಎಸೆಯುತ್ತಾರೆ.

    ಅರ್ಚಕರು ಎಸೆದ ಧ್ವಜಗಳು ಯಾರಿಗೆ ಸಿಗುತ್ತದೆ ಅವರಿಗೆ ವರ್ಷವಿಡೀ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದ್ದು, ಇದನ್ನು ಪಡೆಯಲು ಭಕ್ತರು ಹರಹಾಸ ಪಡುತ್ತಾರೆ. ಈ ಇಡೀ ಪ್ರಕ್ರಿಯೆ ಕೇವಲ 30 ನಿಮಿಷದಲ್ಲಿ ನಡೆದು ಮುಗಿಯುತ್ತದೆ. ಹೀಗೆ ಧ್ವಜಗಳನ್ನು ಹಿಡಿಯುವ ಬರದಲ್ಲಿ ಸಾಕಷ್ಟು ಮಂದಿ ಗಾಯಗೊಂಡಿರುವ ಉದಾಹರಣೆ ಕೂಡ ಇದೆ.

  • ಗಾಂಧೀಜಿ ಹುತಾತ್ಮ ದಿನ – ಚಿತಾಭಸ್ಮಕ್ಕೆ ಪುಷ್ಪಮಾಲೆಗಳಿಂದ ಶೃಂಗರಿಸಿ ಗೌರವ ಅರ್ಪಣೆ

    ಗಾಂಧೀಜಿ ಹುತಾತ್ಮ ದಿನ – ಚಿತಾಭಸ್ಮಕ್ಕೆ ಪುಷ್ಪಮಾಲೆಗಳಿಂದ ಶೃಂಗರಿಸಿ ಗೌರವ ಅರ್ಪಣೆ

    ಮಡಿಕೇರಿ: ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ವತಿಯಿಂದ ಗಾಂಧೀಜಿ ಹುತಾತ್ಮ ದಿನವನ್ನು ಮಡಿಕೇರಿ ನಗರದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.

    ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾ ಖಜಾನೆಯಲ್ಲಿರಿಸಲಾದ ಮಹಾತ್ಮ ಗಾಂಧೀಜಿಯವರ ಚಿತಾಭಸ್ಮವನ್ನು ಹೊರತೆಗೆದು ಪುಷ್ಪಮಾಲೆಗಳಿಂದ ಶೃಂಗರಿಸಿ ಗೌರವವನ್ನು ಅರ್ಪಿಸಲಾಗಿದೆ. ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ಸದಸ್ಯರ ನೇತೃತ್ವದಲ್ಲಿ ಪೊಲೀಸ್ ಬ್ಯಾಂಡ್, ಗೈಡ್ಸ್, ಎನ್‍ಸಿಸಿ ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಯಲ್ಲಿ ಗಾಂಧೀಜಿ ಹುತಾತ್ಮ ದಿನವನ್ನು ಆಚರಿಸಲಾಯಿತು.

    ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ವೃತ್ತದ ಮುಖ್ಯರಸ್ತೆ ಮೂಲಕ ಗಾಂಧೀಜಿ ಚಿತಾಭಸ್ಮವನ್ನು ತೆಗೆದುಕೊಂಡು ಹೋಗಿದ್ದು, ಗಾಂಧಿ ಮಂಟಪದಲ್ಲಿರಿಸಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಮರ್ಪಿಸಲಾಯಿತು. ಇದೇ ವೇಳೆ ಪೊಲೀಸ್ ಇಲಾಖೆಯಿಂದ ಮೂರು ಸುತ್ತು ಕುಶಾಲತೋಪು ಹಾರಿಸುವ ಮೂಲಕ ರಾಷ್ಟ್ರಪಿತನಿಗೆ ಪೊಲೀಸ್ ಗೌರವ ಸಲ್ಲಿಸಲಾಯಿತು.

    ಗಾಂಧಿಮಂಟಪದಲ್ಲಿ ಸರ್ವಧರ್ಮ ಪ್ರಾರ್ಥನೆ, ಗಾಂಧೀಜಿಯವರ ಮೆಚ್ಚಿನ ಭಜನಾ ಗಾಯನ ಕಾರ್ಯಕ್ರಮವನ್ನು ಸ್ಕೌಟ್ಸ್ ಆ್ಯಂಡ್ ಗೈಡ್ಸ್ ತಂಡದ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಸರ್ವಧರ್ಮ ಗುರುಗಳಿಂದ ಭಗವದ್ಗೀತೆ, ಬೈಬಲ್, ಕುರಾನ್ ಸಂದೇಶಗಳ ಪಠಣ ಮಾಡಲಾಯಿತು. ಜಿಲ್ಲಾಧಿಕಾರಿ ಅನಿಸ್ ಜಾಯ್, ಮಾಜಿ ಸಚಿವ ಎಂ.ಸಿ.ನಾಣಯ್ಯ ಮತ್ತು ಜಿಲ್ಲೆಯ ವಿವಿಧ ಇಲಾಖೆ ಅದಿಕಾರಿಗಳು ಸೇರಿದಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

  • ಹೊಸ ವರ್ಷದಂದು ಮನೆಯಿಂದ ಹೊರ ಹೋಗಿದ್ದ ಯುವಕ ಸಂಕ್ರಾಂತಿಯಂದು ಶವವಾಗಿ ಪತ್ತೆ

    ಹೊಸ ವರ್ಷದಂದು ಮನೆಯಿಂದ ಹೊರ ಹೋಗಿದ್ದ ಯುವಕ ಸಂಕ್ರಾಂತಿಯಂದು ಶವವಾಗಿ ಪತ್ತೆ

    – ಪಾರ್ಟಿ ಮಾಡಿ ಸ್ನೇಹಿತರಿಂದಲೇ ಸುಹಾಸ್ ಕೊಲೆ?
    – ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

    ಕೋಲಾರ: ಹೊಸ ವರ್ಷ ಆಚರಣೆಗಾಗಿ ಜೀವಂತವಾಗಿ ಮನೆಯಿಂದ ಹೊರ ಹೋಗಿದ್ದ ಯುವಕನೊಬ್ಬ ಸಂಕ್ರಾಂತಿ ಹಬ್ಬದಂದು ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಕೋಲಾರ ತಾಲೂಕಿನ ಶಾಪೂರು ಕ್ರಾಸ್‍ನ ಅಬ್ಬಣಿ ಗ್ರಾಮದ ಬಳಿ ನಡೆದಿದೆ.

    ಸುಹಾಸ್(19) ಅನುಮಾನಸ್ಪದವಾಗಿ ಮೃತಪಟ್ಟ ಯುವಕ. ಬೇವಿನ ಮರಕ್ಕೆ ನೇಣು ಬಿಗಿದಿದ್ದು, ಕೊಳೆತ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಈ ವೇಳೆ ಮೃತದೇಹ ಯಾರದ್ದು ಎಂದು ಹುಡುಕಾಟದಲ್ಲಿದ್ದವರಿಗೆ 15 ದಿನಗಳಿಂದ ಕಾಣೆಯಾಗಿದ್ದ ಸುಹಾಸ್ ನೆನಪಾಗಿದ್ದಾನೆ. ಮೃತದೇಹ ಪತ್ತೆಯಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಸುಹಾಸ್ ಪೋಷಕರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಮೊಬೈಲ್ ಹಾಗೂ ಬಟ್ಟೆಯನ್ನು ಗುರುತಿಸಿ ಇವನೇ ಸುಹಾಸ್ ಎಂದು ಗುರುತು ಪತ್ತೆಹಚ್ಚಿದ್ದಾರೆ.

    ಸುಹಾಸ್ ತಂದೆ ರವೀಂದ್ರ

    ಕಳೆದ 2019 ಡಿಸೆಂಬರ್ 31ರಂದು ಹೊಸ ವರ್ಷ ಹಾಗೂ ಹುಟ್ಟುಹಬ್ಬ ಸಂಭ್ರಮಾಚರಣೆಗೆ ಸ್ನೇಹಿತರು ಕೇಕ್ ಕತ್ತರಿಸಲು ಫೋನ್ ಮಾಡುತ್ತಿದ್ದಾರೆ ಎಂದು ಮನೆಯಲ್ಲಿ ಹೇಳಿ ಹೋದ ಸುಹಾಸ್ ಇದೀಗ ಶವವಾಗಿ ಪತ್ತೆಯಾಗಿದ್ದಾನೆ. 15 ದಿನಗಳ ನಂತರ ಅಂದರೆ ಬುಧವಾರ ಮದ್ಯಾಹ್ನ 1 ಗಂಟೆ ಸುಮಾರಿಗೆ ಶವವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮಗನದ್ದು ಆತ್ಮಹತ್ಯೆಯಲ್ಲ ಕೊಲೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

    ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಪೋಷಕರು, ಆತನ ಮೂವರು ಸ್ನೇಹಿತರೇ ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜನವರಿ 1ರಂದು ಹೊಸ ವರ್ಷದ ಜೊತೆಗೆ ಸುಹಾಸ್ ಹುಟ್ಟುಹಬ್ಬವಿತ್ತು. ಡಿ.31ರಂದು ರಾತ್ರಿ ಸುಹಾಸ್ ತನ್ನ ತಾಯಿ ಬಳಿ ಹೋಗಿ ಸ್ನೇಹಿತರು ಹೊಸ ವರ್ಷ ಹಾಗೂ ಹುಟ್ಟುಹಬ್ಬದ ಸಂಭ್ರಮಾಚರಣೆ ಮಾಡಲಿದ್ದಾರೆ. ಅವರು ನನಗಾಗಿ ಹೊಸ ಬಟ್ಟೆ ತಂದಿದ್ದು, ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಲಿದ್ದಾರೆ ಎಂದು ಹೇಳಿ ಅಂದು ರಾತ್ರಿ 10 ಗಂಟೆ ಸುಮಾರಿಗೆ ಮನೆಯಿಂದ ಹೊರ ಹೋಗಿದ್ದನು. ಹೊಸ ವರ್ಷ ಬಂದರೂ ಮಗ ಮನೆಗೆ ಬಂದಿಲ್ಲ ಎಂದು ಸಂಬಂಧಿಕರು ಸುಹಾಸ್ ಸ್ನೇಹಿತರನ್ನು ವಿಚಾರಣೆ ಮಾಡಿದ್ದರು. ಆದರೆ ಸುಹಾಸ್ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಹಾಗಾಗಿ ಸುಹಾಸ್ ತಂದೆ ರವೀಂದ್ರ ಅವರು ಈ ಹಿಂದೆಯೇ ಮಗ ಕಾಣೆಯಾಗಿದ್ದಾನೆ ಎಂದು ಕೋಲಾರ ಗ್ರಾಮಾಂತರ ಪೋಲೀಸರಿಗೆ ದೂರು ನೀಡಿದ್ದರು. ಆದರೆ ಈಗ ಮಗ ಶವವಾಗಿ ಪತ್ತೆಯಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

    ಸುಹಾಸ್‍ನ ಹೊಸ ವರ್ಷ ಹಾಗೂ ಹುಟ್ಟುಹಬ್ಬದ ಪಾರ್ಟಿ ಹೇಗಾಯಿತು? ನಿಜಕ್ಕೂ ಅಲ್ಲಿ ಏನಾಗಿತ್ತು ಎಂಬುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೋಲಾರ ಗ್ರಾಮಾಂತರ ಪೊಲೀಸರು ಯುವಕನದ್ದು, ಸಹಜ ಸಾವೋ, ಕೊಲೆಯೋ ಎಂಬುದು ತನಿಖೆ ಕೈಗೊಂಡಿದ್ದಾರೆ.

  • ಸ್ಮಶಾನದಲ್ಲಿ ಮಗಳ ಹುಟ್ಟುಹಬ್ಬ – ಮೌಢ್ಯಕ್ಕೆ ಸೆಡ್ಡು ಹೊಡೆದ ಕಾರ್ಯಕರ್ತ

    ಸ್ಮಶಾನದಲ್ಲಿ ಮಗಳ ಹುಟ್ಟುಹಬ್ಬ – ಮೌಢ್ಯಕ್ಕೆ ಸೆಡ್ಡು ಹೊಡೆದ ಕಾರ್ಯಕರ್ತ

    ಚಿಕ್ಕೋಡಿ: ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಹೋಟೆಲ್‍ನಲ್ಲಿ ಅಥವಾ ಮನೆಯಲ್ಲಿ ಆಚರಿಸುವುದು ಸಾಮಾನ್ಯ ಸಂಗತಿ. ಆದರೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಮಹೇಶ ಶಿಂಗೆ ಅವರು ತಮ್ಮ ಮಗಳ ಹುಟ್ಟುಹಬ್ಬವನ್ನು ಸ್ಮಶಾನದಲ್ಲಿ ಆಚರಿಸುವ ಮೂಲಕ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದಾರೆ.

    ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಸ್ಥಾಪಿಸಿರುವ ಮಾನವ ಬಂಧುತ್ವ ವೇದಿಕೆಯ ಕಾರ್ಯಕರ್ತನಾಗಿರುವ ಮಹೇಶ ಶಿಂಗೆ, ತಮ್ಮ ಮಗಳ ಹುಟ್ಟುಹಬ್ಬವನ್ನು ಸ್ಮಶಾನಲ್ಲಿ ಆಚರಿಸಿ ಮಾಢ್ಯಕ್ಕೆ ಸೆಡ್ಡು ಹೊಡಿದಿದ್ದಾರೆ. ಮಹೇಶ ಶಿಂಗೆ ತಮ್ಮ ಮಗಳಾದ ಜೀಜಾಬಾಯಿ ಹುಟ್ಟುಹಬ್ಬವನ್ನು ಸ್ಮಶಾನದಲ್ಲಿ ಆಚರಿಸಿದ್ದು, ಸ್ಮಶಾನದಲ್ಲಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

    ಸ್ಮಶಾನದಲ್ಲಿ ಹಾಡು, ಮಾತು, ಚರ್ಚೆಯೊಂದಿಗೆ ಉಪಾಹಾರ ಸೇವಿಸಿ ಸಂಭ್ರಮಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾನವ ಬಂದುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ, ತಾ.ಪಂ ಸದಸ್ಯ ಹೂವಣ್ಣಾ ಚೌಗಲೆ, ಮುನ್ನಾ ಬಾಗವಾನ್, ಜೀವನ ಮಾಂಜರೇಕರ್, ಗಾಯತ್ರಿ ಮಾಳಗಿ ಆನಂದ ಗೋಕಾಕ್, ಪುಂಡಲೀಕ ದನವಾಡೆ ಸೇರಿದಂತೆ ನೂರಾರು ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಮತ್ತು ದಲಿತ ಮುಖಂಡರು ಇದ್ದರು.

  • ಆ್ಯಸಿಡ್ ಸಂತ್ರಸ್ತರ ಜೊತೆ ದೀಪಿಕಾ ಹುಟ್ಟುಹಬ್ಬ ಆಚರಣೆ

    ಆ್ಯಸಿಡ್ ಸಂತ್ರಸ್ತರ ಜೊತೆ ದೀಪಿಕಾ ಹುಟ್ಟುಹಬ್ಬ ಆಚರಣೆ

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಜನವರಿ 5ರಂದು ತಮ್ಮ ಹುಟ್ಟುಹಬ್ಬವನ್ನು ಆ್ಯಸಿಡ್ ಸಂತ್ರಸ್ತರ ಜೊತೆ ಆಚರಿಸಲು ನಿರ್ಧರಿಸಿದ್ದಾರೆ.

    ದೀಪಿಕಾ ತಮ್ಮ ಹುಟ್ಟುಹಬ್ಬದಂದು ಲಕ್ನೋನ ಶಿರೋಜ್ ಕೆಫೆಯಲ್ಲಿ ಕಾಲ ಕಳೆಯಲಿದ್ದಾರೆ. ಶಿರೋಜ್ ಕೆಫೆಯನ್ನು ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತರು ನಡೆಸುತ್ತಿದ್ದಾರೆ. ಕೆಫೆಯಲ್ಲಿ ಸಮಯ ಕಳೆದ ಬಳಿಕ ದೀಪಿಕಾ ಇನ್ನು ಕೆಲವು ಮಂದಿಯನ್ನು ಭೇಟಿ ಆಗಲಿದ್ದಾರೆ.

    ತಮ್ಮ ಮುಂಬರುವ ‘ಚಾಪಕ್’ ಚಿತ್ರದಲ್ಲಿ ದೀಪಿಕಾ ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ನೈಜ ಕತೆಯಾಗಿದ್ದು, ಆ್ಯಸಿಡ್ ದಾಳಿಗೆ ಒಳಗಾದ ಲಕ್ಷ್ಮಿ ಅಗರ್‌ವಾಲ್ ಪಾತ್ರದಲ್ಲಿ ದೀಪಿಕಾ ನಟಿಸಿದ್ದಾರೆ. ಲಕ್ಷ್ಮಿ ಅಗರ್‌ವಾಲ್ ಈಗ ಟಿವಿ ನಿರೂಪಕಿ ಹಾಗೂ ಆ್ಯಸಿಡ್ ದಾಳಿ ತಡೆಯ ಪ್ರಚಾರಕಿ ಆಗಿದ್ದಾರೆ.

    ಮದುವೆ ಬಳಿಕ ದೀಪಿಕಾ ನಟಿಸಿರುವ ಮೊದಲ ಚಿತ್ರ ಇದಾಗಿದ್ದು, ಈ ಬಾರಿ ಆ್ಯಸಿಡ್ ದಾಳಿಗೆ ಒಳಗಾದ ಮಾಲತಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಒಂದಲ್ಲ ಒಂದು ವಿಷಯಗಳಿಗೆ ಚಿತ್ರ ಸದ್ದು ಮಾಡಿಕೊಂಡು ಬರುತ್ತಿದೆ.

    ಈ ಚಿತ್ರವನ್ನು ನಿರ್ದೇಶಕಿ ಮೇಘನಾ ಗುಲ್ಜಾರ್ ನಿರ್ದೇಶನ ಮಾಡಿದ್ದು, ಫಾಕ್ಸ್ ಸ್ಟಾರ್ ಸ್ಟುಡಿಯೋ ನಿರ್ಮಿಸಿದೆ. ಈ ಚಿತ್ರ ಜನವರಿ 10ರಂದು ಬಿಡುಗಡೆ ಆಗುತ್ತಿದ್ದು, ಸದ್ಯ ದೀಪಿಕಾ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದಾರೆ.

  • ಹೊಸ ವರ್ಷದ ಆಚರಣೆಯ ಪಾರ್ಟಿ – ರಾಮನಗರದಲ್ಲಿ ಒಂದೇ ದಿನಕ್ಕೆ 3 ಕೋಟಿ ಎಣ್ಣೆ ಬಿಕರಿ

    ಹೊಸ ವರ್ಷದ ಆಚರಣೆಯ ಪಾರ್ಟಿ – ರಾಮನಗರದಲ್ಲಿ ಒಂದೇ ದಿನಕ್ಕೆ 3 ಕೋಟಿ ಎಣ್ಣೆ ಬಿಕರಿ

    ರಾಮನಗರ: ಹೊಸ ವರ್ಷದ ಸಂಭ್ರಮಾಚರಣೆ ಎಂದರೆ ಏನೇ ಪಾರ್ಟಿ ಆಯೋಜಿಸಿದ್ರೂ ಎಣ್ಣೆ ಬೇಕೇ ಬೇಕು. ಅಬ್ಬರದ ಪಾರ್ಟಿಗೆ ಹೋಗುವುದಕ್ಕೆ ಆಗಲ್ಲ ಎಂದರೂ ಸ್ನೇಹಿತರ ಜೊತೆ ಮದ್ಯ ಪಾರ್ಟಿ ಮಾಡಲೇಬೇಕು. ಹಾಗಾಗಿಯೇ ನ್ಯೂ ಇಯರ್ ನೆಪದಲ್ಲಿ ಕುಡಿದು-ಕುಣಿದು ಕುಪ್ಪಳಿಸುವ ಯುವ ಸಮೂಹವನ್ನೇ ಗುರಿಯಾಗಿಸಿಕೊಂಡಿರುವ ಅಬಕಾರಿ ಇಲಾಖೆ, ವರ್ಷಾಚರಣೆಗೆ ಭರ್ಜರಿ ಎಣ್ಣೆ ವ್ಯಾಪಾರ ನಡೆಸಿದೆ.

    ಪ್ರತಿನಿತ್ಯ ಮಾರಾಟ ಮಾಡುತ್ತಿದ್ದ ಮದ್ಯ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿಯೇ ಡಿ.31ರ ರಾತ್ರಿ ವ್ಯಾಪಾರ ನಡೆಸಿದೆ. ಒಂದೇ ರಾತ್ರಿ 3,25,60,134 ರೂ. ಮೌಲ್ಯದ ಮದ್ಯ ವ್ಯಾಪಾರ ನಡೆಸಿದೆ. ಆದರೆ 2018ರ ಡಿ. 31ರ ರಾತ್ರಿ ಸೇಲ್ ಆಗಿದ್ದ ಎಣ್ಣೆಗಿಂತ ಈ ಬಾರಿ 11 ಲಕ್ಷ ರೂ. ಮೌಲ್ಯದಷ್ಟು ಕಡಿಮೆ ಎಣ್ಣೆ ಸೇಲ್ ಆಗಿದೆ.

    2020 ಹೊಸ ವರ್ಷಾಚರಣೆ ಕುಡುಕರ ಪಾಲಿಗೆ ಕಿಕ್ ಕೊಂಚ ಪ್ರಮಾಣ ಕಡಿಮೆಯಾಗಿತ್ತು ಎನ್ನಬಹುದು. ಅದರಲ್ಲೂ ಸ್ವಲ್ಪ ಚಳಿಗಾಲದ ಎಫೆಕ್ಟ್ ಬಿಯರ್ ಸ್ವಲ್ಪ ಕಡಿಮೆ ಸೇಲ್ ಆಗುವಂತೆ ಮಾಡಿದೆ. ಹೊಸ ವರ್ಷವನ್ನು ಬರಮಾಡಿಕೊಂಡ ರಾಮನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಮದ್ಯದಂಗಡಿಗಳಲ್ಲಿ ಮುಗಿಬಿದ್ದು ಕೇಸ್ ಗಟ್ಟಲ್ಲೇ ಮದ್ಯ ಮತ್ತು ಬಿಯರ್ ಬಾಟಲ್‍ಗಳನ್ನು ಖರೀದಿ ಮಾಡಿದ ಮದ್ಯ ಪ್ರಿಯರು, ಹೊಸ ವರ್ಷವನ್ನು ಅದ್ಧೂರಿಯಾಗಿ ಪಾರ್ಟಿ ಮಾಡುವ ಮೂಲಕ ಆಚರಿಸಿದ್ದಾರೆ.

    ಕಳೆದ ಎರಡು ದಿನಗಳಲ್ಲಿ ಪಾನೀಯ ನಿಗಮದಿಂದ ಎಲ್ಲಾ ಬಾರ್ & ರೆಸ್ಟೊರೆಂಟ್ ಮತ್ತು ಮದ್ಯದಂಗಡಿಗಳು ಬರೋಬ್ಬರಿ 3.25 ಕೋಟಿ ರೂ. ಮೌಲ್ಯದ ಮದ್ಯ ಖರೀದಿ ಮಾಡಿ ಮಾರಾಟ ಮಾಡಿವೆ. ಇದನ್ನು ಇತರೆ ದಿನಕ್ಕೆ ಹೋಲಿಸಿದರೆ, ಮದ್ಯದ ಪ್ರಮಾಣ ಶೇ.55ರಷ್ಟು ಏರಿಕೆಯಾಗಿದೆ ಎನ್ನಬಹುದು.

  • ಊಟಿಯನ್ನೇ ನಾಚಿಸುವಂತ ಬ್ಯೂಟಿ – ನಂದಿ ಬೆಟ್ಟದಲ್ಲಿ ಮಿಂದೆದ್ದ ಪ್ರವಾಸಿಗರು

    ಊಟಿಯನ್ನೇ ನಾಚಿಸುವಂತ ಬ್ಯೂಟಿ – ನಂದಿ ಬೆಟ್ಟದಲ್ಲಿ ಮಿಂದೆದ್ದ ಪ್ರವಾಸಿಗರು

    ಚಿಕ್ಕಬಳ್ಳಾಪುರ: ಪ್ರಕೃತಿಯ ಅನನ್ಯ ಸೌಂದರ್ಯದಿಂದ ಪ್ರವಾಸಿಗರನ್ನು ಕೈಬೀಸಿ ಕರೆಯುವ ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಇಂದು ಪ್ರವಾಸಿಗರು ಹೊಸ ವರ್ಷವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಂಡರು.

    ಮುಂಜಾನೆಯ ಮಂಜು, ಬೆಟ್ಟಗಳಿಗೆ ಮುತ್ತಿಕ್ಕುವ ಬೆಳ್ಳಿ ಮೋಡಗಳ ದೃಶ್ಯ ವೈಭವಗಳ ಮಧ್ಯೆ ಮಳೆಯಲಿ ಜೊತೆಯಲಿ, ಚುಮು ಚುಮು ಚಳಿಯಲಿ ಎಂಬಂತೆ ನಂದಿಬೆಟ್ಟದಲ್ಲಿ ಓಡಾಡಿದ ಪರಿಸರ ಪ್ರೇಮಿಗಳು ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ತೇಲಿ ಹೋದರು. ಸೋನೆಯಂತೆ ಸುರಿದ ಮುಂಜಾನೆಯ ಮಂಜು, ಆಳತ್ತರಕ್ಕೆ ಬೆಳೆದು ನಿಂತಿರುವ ಮರಗಳಿಂದ ತೊಟ್ಟಿಕ್ಕುತ್ತಿರುವ ಇಬ್ಬನಿಯ ಹನಿಗಳ ನಡುವೆ ಕಣ್ಣಾಯಿಸಿದೆಡೆಯೆಲ್ಲಾ ಹಸಿರಿನ ಕಾನನ ಬೆಟ್ಟಕ್ಕೆ ಮುತ್ತಿಕ್ಕಿ ಮುಂದೆ ಸಾಗುವ ಬೆಳ್ಳಿ ಮೋಡಗಳು. ಚುಮು ಚುಮು ಚಳಿಯ ನಡುವೆ ಆಹ್ಲಾದಕರ ತಂಗಾಳಿಯಲ್ಲಿ ಮಿಂದೆದ್ದ ಪ್ರವಾಸಿಗರು ಹೊಸ ವರ್ಷದ ಹರುಷದಲ್ಲಿ ತೇಲಾಡಿದರು.

    ಮೈಸೂರು ಹುಲಿ ಟಿಪ್ಪು ಸುಲ್ತಾನ್ ಕಾಲದಲ್ಲೇ ವಿಶ್ವವಿಖ್ಯಾತಿಯನ್ನು ಪಡೆದ ಚಿಕ್ಕಬಳ್ಳಾಪುರದ ನಂದಿಗಿರಿಧಾಮ ತನ್ನ ಹಲವು ವೈಶಿಷ್ಟ್ಯಗಳಿಂದ ಪ್ರತಿನಿತ್ಯ ಸಾವಿರಾರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕೇವಲ ಸಿನಿಮಾಗಳಲ್ಲಿ ವೈಭವದ ದೃಶ್ಯಕಾವ್ಯಗಳನ್ನ ನೋಡಿ ಆನಂದಿಸುತ್ತಿದ್ದ ಜನರು ಹೊಸ ವರ್ಷದ ನೆಪದಲ್ಲಿ ನಂದಿಬೆಟ್ಟಕ್ಕೆ ಬಂದು ನಂದಿಬೆಟ್ಟದ ಸೊಬಗನ್ನ ಕಣ್ತುಂಬಿಕೊಂಡರು. ಕಣ್ಣಿಗೆ ಸೊಬಗಿನ ಹಬ್ಬವಾದ್ರೆ, ಮನಸ್ಸು ಮುದದಿಂದ ತುಂಬಿ ಉಲ್ಲಾಸದಲ್ಲಿ ತೇಲಾಡಿದ್ರೇ, ಪ್ರೇಮಿಗಳಂತೂ ಕಲ್ಪನಾ ಲೋಕದಲ್ಲಿ ತೇಲಿ ಹೋದರು.

    ಕರ್ನಾಟಕದ ಬಡವರ ಪಾಲಿನ ಊಟಿ ಎಂತಲೇ ಹೆಸರುವಾಸಿಯಾಗಿರುವ ನಂದಿ ಗಿರಿಧಾಮ ಅಬಾಲವೃದ್ಧರಾಗಿ ಎಲ್ಲರನ್ನು ತನ್ನತ್ತ ಸೆಳೆಯುವ ಶಕ್ತಿಯನ್ನು ಹೊಂದಿದೆ. ಮಳೆಗಾಲ ಬಂದರೆ ಸಾಕು ಊಟಿಯನ್ನು ನಾಚಿಸುವಂತೆ ಬ್ಯೂಟಿಯಿಂದ ಕಂಗೊಳಿಸುತ್ತದೆ. ನೈಸರ್ಗಿಕ ಸೊಬಗಿನಿಂದಾಗಿ ಪ್ರಕೃತಿ ಪ್ರಿಯರನ್ನು ತನ್ನತ್ತ ಸೆಳೆಯುವ ನಂದಿ ಗಿರಿಧಾಮದ ವೈಭವ ಕಣ್ತುಂಬಿಕೊಂಡರು.

    ಹೊಸ ವರ್ಷದ ಹಿನ್ನೆಲೆ ಪ್ರವಾಸಿಗರು ಸಾಗರೋಪಾದಿಯಲ್ಲಿ ಸಾವಿರಾರು ಮಂದಿ ಬಂದಿದ್ದರಿಂದ ಗಿರಿಧಾಮದಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಪ್ರವಾಸಿಗರ ಹಿತದೃಷ್ಟಿಯಿಂದ ನಂದಿಗಿರಿಧಾಮದ ತೋಟಗಾರಿಕೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಕೆಲ ಪುಂಡಪೋಕರಿಗಳ ಕಾಟ ತಪ್ಪಿಸೋಕೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.

  • ಹೊಸ ವರ್ಷ ಆಚರಣೆ ವೇಳೆ ಅನ್ಯ ರಾಜ್ಯದ ಯುವಕರ ಮೇಲೆ ಮನಬಂದಂತೆ ಹಲ್ಲೆ

    ಹೊಸ ವರ್ಷ ಆಚರಣೆ ವೇಳೆ ಅನ್ಯ ರಾಜ್ಯದ ಯುವಕರ ಮೇಲೆ ಮನಬಂದಂತೆ ಹಲ್ಲೆ

    ಹುಬ್ಬಳ್ಳಿ: ಹೊಸ ವರ್ಷ ಸಂಭ್ರಮಾಚರಣೆ ಮಾಡುತ್ತಿದ್ದ ಅನ್ಯ ರಾಜ್ಯದ ಯುವಕರ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಕಳೆದ ರಾತ್ರಿ ಹುಬ್ಬಳ್ಳಿಯ ಅಫೇಕ್ಸ್ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಹೊಸ ವರ್ಷ ಆಚರಣೆ ಮಾಡುವ ವೇಳೆ ಈ ಘಟನೆ ಸಂಭವಿಸಿದೆ. ಮೂತ್ರ ವಿಸರ್ಜನೆ ಮಾಡುತ್ತಿದ್ದ ಯುವಕರಿಗೆ ಕಿಡಿಗೇಡಿಗಳು ಮೂತ್ರ ವಿಸರ್ಜನೆ ಮಾಡದಂತೆ ಅವಾಜ್ ಹಾಕಿದ್ದಾರೆ. ಈ ವೇಳೆ ಅನ್ಯರಾಜ್ಯದ ಯುವಕರು ಹಾಗೂ ಕಿಡಿಗೇಡಿಗಳ ಮಧ್ಯೆ ಮಾತಿನ ಚಕಮಕಿ ನಡೆದು ಗಲಾಟೆ ಸಂಭವಿಸಿದೆ.

    ಬೈಕ್ ಮೇಲೆ ಬಂದಿದ್ದ 10-12 ಕಿಡಿಗೇಡಿಗಳು ಅನ್ಯರಾಜ್ಯದ ಕಾರ್ಮಿಕ ಯುವಕರ ರೂಂಗೆ ನುಗ್ಗಿ ಕಲ್ಲು ಬೊಂಬಿನಿಂದ ಹಲ್ಲೆ ಮಾಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಯುವಕರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಿಲ್, ಆಷಾರಾಮ, ವಿಜಯಲಾಲ, ಬೊಲೋ, ಕರಣ, ಹರಿದಯಾಳ ಮೇಲೆ ಹಲ್ಲೆ ನಡೆಸಲಾಗಿದ್ದು, ನಾಲ್ವರು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಘಟನೆಯ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಹಲ್ಲೆಗೊಳಗಾದ ಯುವಕರ ಬಳಿ ಮಾಹಿತಿ ಕಲೆ ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.

  • ಲಿಫ್ಟ್ ಕುಸಿದು 6 ಮಂದಿ ಸಾವು – ಹಲವರಿಗೆ ಗಾಯ

    ಲಿಫ್ಟ್ ಕುಸಿದು 6 ಮಂದಿ ಸಾವು – ಹಲವರಿಗೆ ಗಾಯ

    ಭೋಪಾಲ್: ಲಿಫ್ಟ್ ಕುಸಿದು 6 ಮಂದಿ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಮಧ್ಯಪ್ರದೇಶದ ಪಾಟಲ್‍ಪಾನಿಯಲ್ಲಿ ನಡೆದಿದೆ.

    ಉದ್ಯಮಿ ಪುನೀತ್ ಅಗರ್‌ವಾಲ್‌ ಅವರು ಹೊಸ ವರ್ಷ ಆಚರಿಸಲು ತಮ್ಮ ಕುಟುಂಬಸ್ಥರ ಜೊತೆಗೆ ತೋಟದ ಮನೆಗೆ ಹೋಗಿದ್ದರು. ಅವರ ತೋಟದ ಮನೆಯಲ್ಲಿ ಲಿಫ್ಟ್ ಅಳವಡಿಸಲಾಗಿದೆ. ಪುನೀತ್ ಮಂಗಳವಾರ ಸಂಜೆ 6 ಗಂಟೆಗೆ ಲಿಫ್ಟ್ ನಿಂದ ಕೆಳಗೆ ಬರುತ್ತಿರುವಾಗ ಮಿಷನ್‍ನ ಬೆಲ್ಟ್ ತುಂಡಾಗಿ ಕೆಳಗೆ ಬಿತ್ತು.

    ಲಿಫ್ಟ್ ನ ಬೆಲ್ಟ್ ತುಂಡಾಗಿ ಕೆಳಗೆ ಬಿದ್ದ ಪರಿಣಾಮ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೆ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪೊಲೀಸ್ ಕಮಿಷನರ್ ಧರ್ಮರಾಜ್ ಮೀನಾ ಅವರು, ಈ ಘಟನೆಯಲ್ಲಿ 6 ಮಂದಿ ಮೃತಪಟ್ಟಿದ್ದು, ಪುನೀತ್ ಹಾಗೂ ಅವರ ಸಂಬಂಧಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ಪುನೀತ್ ಅಗರ್‌ವಾಲ್‌ ದೇಶದ ಅತಿದೊಡ್ಡ ಗುತ್ತಿಗೆದಾರರಲ್ಲಿ ಒಬ್ಬರು. ಅವರ ಕಂಪನಿ ಪಾರ್ಥ ಇಂಡಿಯಾ ಮುಖ್ಯವಾಗಿ ಸೇತುವೆ ನಿರ್ಮಾಣ, ಹೆದ್ದಾರಿ ನಿರ್ಮಾಣ ಹಾಗೂ ಟೋಲ್ ರಸ್ತೆಯ ನಿರ್ಮಾಣ ಮತ್ತು ನಿರ್ವಹಣೆಗೆ ಸಂಬಂಧಿಸಿದೆ.

  • ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ

    ಚಾಮುಂಡಿ ಬೆಟ್ಟದಲ್ಲಿ ಭಕ್ತ ಸಾಗರ

    ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಿಹಿಯಾಗಿ ಹೊಸ ವರ್ಷ ಸ್ವಾಗತಿಸಲಾಯಿತು. ಮೈಸೂರಿನ ವಿಜಯನಗರದ ಎರಡನೇ ಹಂತದಲ್ಲಿನ ಯೋಗನರಸಿಂಹಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ಲಾಡು ವಿತರಿಸಿ ಹೊಸವರ್ಷ ಸ್ವಾಗತಿಸಲಾಯಿತು.

    ಭಕ್ತರಿಗೆ ಒಟ್ಟಾರೆ 2 ಲಕ್ಷ ಲಾಡು ವಿತರಿಸಲಾಯಿತು. ಬದೇವಾಲಯದಲ್ಲಿ ಬೆಳಗಿನ ಜಾವ 4.30ರಿಂದ ಪೂಜಾ ಕೈಂಕರ್ಯಗಳು ನಡೆದಿದ್ದು, ಪೂಜೆ ನಂತರ ನೈವೇದ್ಯ ಪ್ರಸಾದವಾಗಿ ಭಕ್ತರಿಗೆ ಲಾಡು ವಿತರಿಸಲಾಯಿತು. ಮುಂಜಾನೆಯಿಂದ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ದೇವಸ್ಥಾನಕ್ಕೆ ಆಗಮಿಸಿದ ಎಲ್ಲ ಭಕ್ತರಿಗು ಲಾಡು ವಿತರಿಸಲಾಯಿತು.

    ಹೊಸ ವರ್ಷದ ಮೊದಲ ದಿನದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟಕ್ಕೆ ಭಕ್ತಸಾಗರ ಹರಿದು ಬಂದಿದೆ. ಭಕ್ತರು ನಾಡದೇವಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಹೊಸ ವರ್ಷ ಸ್ವಾಗತಿಸಿದರು. ಮುಂಜಾನೆಯಿಂದಲೇ ದೇವಿ ದರ್ಶನಕ್ಕೆ ಭಕ್ತರು ಸರತಿ ಸಾಲಿನಲ್ಲಿ ನಿಂತು ವರ್ಷದ ಮೊದಲ ದಿನ ದೇವಿಯ ದರ್ಶನ ಪಡೆದು ಪುನೀತರಾದರು.