Tag: celebration

  • ಹೊಸ ವರ್ಷಕ್ಕೆ ಬೆಂಗ್ಳೂರು ಪೊಲೀಸರಿಂದ ಹೊಸ ಪ್ಲಾನ್

    ಹೊಸ ವರ್ಷಕ್ಕೆ ಬೆಂಗ್ಳೂರು ಪೊಲೀಸರಿಂದ ಹೊಸ ಪ್ಲಾನ್

    ಬೆಂಗಳೂರು: ಹೊಸ ವರ್ಷಕ್ಕೆ ದಿನಗಣನೆ ಆರಂಭ ಆಗುತ್ತಿದ್ದಂತೆ ಪೊಲೀಸರ ಕೆಲಸ ಹೆಚ್ಚಾಗುತ್ತಿದೆ. ಕಳೆದ ವರ್ಷ ನಡೆದ ಘಟನೆ ಇಡೀ ಪೊಲೀಸರೇ ತಲೆ ತಗ್ಗಿಸುವಂತೆ ಮಾಡಿತ್ತು. ಈ ಬಾರಿ ಅಂತಹ ಘಟನೆ ಆಗಬಾರದು ಅಂತ ಪೊಲೀಸರು ಒಂದು ಹೊಸ ಪ್ಲಾನ್‍ಗೆ ಚಿಂತನೆ ನಡೆಸಿದ್ದಾರೆ.

    ಕಳೆದ ಬಾರಿ ಹೊಸ ವರ್ಷದ ಆಚರಣೆ ವೇಳೆ ನಡೆದ ಅವಾಂತರಗಳಿಂದ ರಾಜ್ಯ ರಾಜಧಾನಿಯಲ್ಲಿ ಮಹಿಳೆಯರು ಸೇಫಾ ಎಂಬ ಪ್ರಶ್ನೆ ಹುಟ್ಟಿಕೊಂಡಿತ್ತು. ಹೀಗಾಗಿ ಈ ಬಾರಿ ಪೊಲೀಸರು ಅಲರ್ಟ್ ಆಗಿದ್ದಾರೆ. ಎಲ್ಲಾ ವಿಭಾಗದ ಡಿಸಿಪಿ ಕಚೇರಿಗಳಿಗೆ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಭೇಟಿ ನೀಡಿ, ಸಿದ್ಧತೆ ಕುರಿತು ಮಾಹಿತಿ ಪಡೆದಿದ್ದಾರೆ. ಇನ್ನೊಂದು ವಿಷಯ ಏನಂದ್ರೆ ಈ ಬಾರಿ ಬ್ರಿಗೇಡ್ ಹಾಗೂ ಎಂ.ಜಿ ರಸ್ತೆಯಲ್ಲಿ ನ್ಯೂ ಇಯರ್ ಸೆಲೆಬ್ರೇಷನ್‍ಗೆ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ವ್ಯವಸ್ಥೆಗೆ ಚಿಂತನೆ ನಡೆದಿದೆ. ಶೇಕಡಾ 30ರಷ್ಟು ಜಾಗದಲ್ಲಿ ಮಹಿಳೆಯರಿಗೆ ಹಾಗೂ ಶೇಕಡಾ 70ರಷ್ಟು ಜಾಗದಲ್ಲಿ ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಚಿಂತಿಸಲಾಗುತ್ತಿದೆ.

    ಈ ಬಾರಿ ಯಾವುದೇ ಲೈಂಗಿಕ ದೌರ್ಜನ್ಯ ಪ್ರಕರಣಗಳು ಆಗದ ಹಾಗೆ ಸೂಕ್ತ ಬಂದೋಬಸ್ತ್ ಮಾಡುವಂತೆ ಗೃಹಸಚಿವ ರಾಮಲಿಂಗರೆಡ್ಡಿ ನಗರ ಪೊಲೀಸರಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ನಗರದ ಹಿರಿಯ ಪೊಲೀಸರು ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿನ ಎಲ್ಲಾ ಅಂಗಡಿ ಮಾಲೀಕರ ಜೊತೆ ಸಭೆ ನಡೆಸಿ, ಅಂಗಡಿಯ ಮುಂಭಾಗವೂ ಸಿಸಿ ಕ್ಯಾಮೆರಾವನ್ನು ಅಳವಡಿಸುವಂತೆ ಸೂಚಿಸಿದ್ದಾರೆ. ಜೊತೆಗೆ ಡ್ರೋನ್ ಕ್ಯಾಮೆರಾ ಹಾಗೂ ವಾಚಿಂಗ್ ಟವರ್‍ಗಳು ಕೂಡ ಕಾರ್ಯ ನಿರ್ವಹಿಸಲಿವೆ.

    ಈ ಬಾರಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳುವುದು ಪೊಲೀಸರಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಆದ್ರೆ ಈ ಹೊಸ ಪ್ಲಾನ್ ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದನ್ನು ಕಾದು ನೋಡ್ಬೇಕಿದೆ.

  • ಮಧ್ಯಪ್ರದೇಶದಲ್ಲಿ ಕನ್ನಡದ ಕಂಪು- ಕರ್ನಾಟಕದ ವಿಶಿಷ್ಟತೆ ಬಗ್ಗೆ ತಿಳಿಸಿ ಬಂದ ದಾವಣಗೆರೆ ವಿದ್ಯಾರ್ಥಿಗಳು

    ಮಧ್ಯಪ್ರದೇಶದಲ್ಲಿ ಕನ್ನಡದ ಕಂಪು- ಕರ್ನಾಟಕದ ವಿಶಿಷ್ಟತೆ ಬಗ್ಗೆ ತಿಳಿಸಿ ಬಂದ ದಾವಣಗೆರೆ ವಿದ್ಯಾರ್ಥಿಗಳು

    ಬೆಂಗಳೂರು: ನಮ್ಮ ರಾಜ್ಯದಲ್ಲೇ ಮಕ್ಕಳಿಗೆ ಕನ್ನಡ ಕಲಿಸೋಕೆ ಹಿಂದೇಟು ಹಾಕೋವಾಗ ಕನ್ನಡ ಪ್ರಿಯರಿಗೆ ಇಲ್ಲೊಂದು ಖುಷಿ ಸುದ್ದಿ ಇದೆ.

    ಕೇಂದ್ರ ಸರ್ಕಾರ ಹಾಕಿಕೊಂಡಿರೋ ‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಯೋಜನೆಯಡಿ ಮಧ್ಯಪ್ರದೇಶದಲ್ಲಿ ಗಡಿಯಾಚೆಗೆ ನುಡಿ ಸಂಭ್ರಮ ಕಾರ್ಯಕ್ರಮ ನಡೀತು. ಈ ಕಾರ್ಯಕ್ರಮದಲ್ಲಿ ಕರ್ನಾಟಕದ 21 ವಿದ್ಯಾರ್ಥಿಗಳು ಕನ್ನಡದ ಕಂಪು ಪಸರಿಸಿದ್ದಾರೆ.

    ಮಧ್ಯಪ್ರದೇಶದ ಅಲಿರಾಜಪುರ್ ಜಿಲ್ಲೆ ದೇಶದಲೇ ಅತೀ ಕಡಿಮೆ ಸಾಕ್ಷರತೆ ಹೊಂದಿದ ಜಿಲ್ಲೆಯಾಗಿದೆ. ಇಂತಹ ಜಿಲ್ಲೆಯಲ್ಲಿರುವ ಜವಾಹರ್ ನವೋದಯ ವಿದ್ಯಾಲಯದಲ್ಲಿ ದಾವಣಗೆರೆಯ 21 ವಿದ್ಯಾರ್ಥಿಗಳು ಹೋಗಿ ಕರ್ನಾಟಕದ ವೈಶಿಷ್ಠತೆ ಬಗ್ಗೆ ತಿಳಿಸಿ ಬಂದಿದ್ದಾರೆ. ಅಷ್ಟೇ ಅಲ್ಲ ಮಧ್ಯಪ್ರದೇಶದ ಆದಿವಾಸಿ ಜನರ ಸಂಸ್ಕೃತಿಯನ್ನ ನಮ್ಮ ವಿದ್ಯಾರ್ಥಿಗಳು ಕಲಿತು ಬಂದಿದ್ದಾರೆ.

    ಇದಕ್ಕಿಂತಲೂ ಖುಷಿ ವಿಷಯ ಏನೆಂದರೆ ಈ ಶಾಲೆಯಲ್ಲಿ ಒಟ್ಟು 535 ವಿದ್ಯಾರ್ಥಿಗಳಿದ್ದು, ಅದರಲ್ಲಿ 310 ಮಕ್ಕಳು ಕನ್ನಡ ಭಾಷೆಯನ್ನ ಕಲಿಯುತ್ತಿದ್ದಾರೆ. ಈ ಮಕ್ಕಳಿಗೆ ಕನ್ನಡ ಕಲಿಸಲು ಧರ್ಮಣ್ಣ ಚಿತ್ತಾ ಸೇರಿದಂತೆ ಇಬ್ಬರು ಶಿಕ್ಷಕರು ಇಲ್ಲಿದ್ದಾರೆ.

    ಮಧ್ಯಪ್ರದೇಶದ ಈ ಜಿಲ್ಲೆಯ ಮತ್ತೊಂದು ವಿಶೇಷತೆ ಏನೆಂದರೆ ಎಲ್ಲಾ ಕಡೆ ವರದಕ್ಷಿಣೆ ಕೊಟ್ಟು ಮದುವೆಯಾದರೆ, ಇಲ್ಲಿ ವಧುದಕ್ಷಿಣೆ ಕೊಟ್ಟು ಮದುವೆಯಾಗುವ ಸಂಪ್ರದಾಯವಿದೆ. ಇಲ್ಲಿ ಬಂಗಾರದ ಬದಲು ಜನರು ಮದುವೆಯಲ್ಲಿ ಬೆಳ್ಳಿ ಆಭರಣಗಳನ್ನೇ ಬಳಸುತ್ತಾರೆ.

  • ಇಂದು ಗುಜರಾತ್ ನಾಳೆ ಕರ್ನಾಟಕ – ಮಲ್ಲೇಶ್ವರಂನ ಕಚೇರಿಯಲ್ಲಿ ಬಿಜೆಪಿ ಸಂಭ್ರಮ

    ಇಂದು ಗುಜರಾತ್ ನಾಳೆ ಕರ್ನಾಟಕ – ಮಲ್ಲೇಶ್ವರಂನ ಕಚೇರಿಯಲ್ಲಿ ಬಿಜೆಪಿ ಸಂಭ್ರಮ

    ಬೆಂಗಳೂರು: ಭಾರೀ ನಿರೀಕ್ಷೆ ಮೂಡಿಸಿದ್ದ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು, ಕ್ಷಣಕ್ಷಣದಲ್ಲಿಯೂ ಭಾರೀ ಏರಿಳಿತ ಕಂಡುಬರುತ್ತಿದೆ. ಈಗ ಹೊರಬರುತ್ತಿರುವ ಫಲಿತಾಂಶದ ಪ್ರಕಾರ ಬಹುತೇಕ ಬಿಜೆಪಿ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ.

    ಈ ಹಿನ್ನೆಲಯಲ್ಲಿ ನಗರದ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. ಪ್ರಧಾನ ಕಾರ್ಯದರ್ಶಿ ರವಿಕುಮಾರ್ ನೇತೃತ್ವದಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ಕಾರ್ಯಕರ್ತರು ಕುಣಿದು ಕುಪ್ಪಳಿಸಿ, ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.

    ಇಂದು ಗುಜರಾತ್ ನಾಳೆ ಕರ್ನಾಟಕ ಅಂತ ಘೋಷಣೆಯನ್ನು ಕೂಡ ಕೂಗುತ್ತಿದ್ದಾರೆ. ಈ ಸಂಭ್ರಮಾಚರಣೆಯಲ್ಲಿ ಮಹಿಳಾ ಕಾರ್ಯಕರ್ತರು ಕೂಡ ಭಾಗವಹಿಸಿದ್ದಾರೆ.

     

  • ಸಮಾಜ ಕಲ್ಯಾಣ ಸಚಿವರ ತವರಲ್ಲೇ ಮೌಢ್ಯ- ಋತುಮತಿಯಾದ್ರೆ 1 ವಾರ ಮನೆಗಿಲ್ಲ ಪ್ರವೇಶ

    ಸಮಾಜ ಕಲ್ಯಾಣ ಸಚಿವರ ತವರಲ್ಲೇ ಮೌಢ್ಯ- ಋತುಮತಿಯಾದ್ರೆ 1 ವಾರ ಮನೆಗಿಲ್ಲ ಪ್ರವೇಶ

    ಚಿತ್ರದುರ್ಗ: ರಾಜ್ಯ ಸಮಾಜ ಕಲ್ಯಾಣ ಸಚಿವರ ತವರೂರಲ್ಲೇ ಇಂದಿಗೂ ಮೌಢ್ಯ, ಕಂದಾಚಾರಗಳು ಜೀವಂತವಾಗಿರುವುದನ್ನು ಕಾಣಬಹುದಾಗಿದೆ.

    ಜಿಲ್ಲೆಯ ಜಂಪಣ್ಣ ನಾಯ್ಕನ ಕೋಟೆಯ ಗೊಲ್ಲನ ಕಟ್ಟೆ ಗ್ರಾಮದಲ್ಲಿ 20 ಗೊಲ್ಲ ಕುಟುಂಬಗಳು ಇತರ ಸಮುದಾಯದ ಜೊತೆ ಸೇರದೆ ಪ್ರತ್ಯೇಕವಾಗಿದ್ದಾರೆ. ಇಲ್ಲಿ ಇಂದಿಗೂ ಬಾಲಕಿಯರು ಋತುಮತಿಯಾದರೆ ಒಂದು ವಾರಗಳ ಕಾಲ ಕಡ್ಡಾಯವಾಗಿ ಮನೆಯಿಂದ ಹೊರಗಿರಬೇಕು.

    ಈ ಸಂದರ್ಭದಲ್ಲಿ ಇಲ್ಲಿನ ಯುವತಿಯರು, ಮಹಿಳೆಯರಿಗೆ ಹಾಲು ಹಾಕಿ ಮಾಡಿದ ಕಾಫಿ-ಟೀ ಕೊಡುವುದಿಲ್ವಂತೆ. ಹೀಗಾಗಿ ಚಳಿಯನ್ನು ತಡೆಯಲಾಗದೇ ಮುಗ್ಧ ಮಹಿಳೆಯರು ಊರ ಹೊರಗಿನ ಪಾಳು ಮನೆಯನ್ನು ಆಶ್ರಯಿಸಿದ್ದಾರೆ. ಇನ್ನು ಕುಡಿಯಲು ನೀರು ಸಿಗದೇ ಪ್ರಾಣಿಗಳಿಗಿಂತ ಹೀನಾಯವಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ.

    ಇಲ್ಲಿ ಪೂರ್ವಜರ ಕಾಲದಿಂದಲೂ ಈ ಆಚರಣೆಗಳು ನಡೆದುಕೊಂಡು ಬರುತ್ತಿದೆ. ಒಂದು ವೇಳೆ ಈ ನಿಯಮ ಮೀರಿದರೆ ಮನೆಯ ಯಜಮಾನ ಸಾವನ್ನಪ್ಪುತ್ತಾನೆ ಅಥವಾ ಮನೆಯೊಳಗೆ ಹಾವು, ಚೇಳು ಬಂದು ಪ್ರಾಣ ಹಾನಿ ಮಾಡುತ್ತವೆ ಎಂಬ ಮೌಢ್ಯತೆ ಇಂದಿಗೂ ಈ ಸಮುದಾಯದ ಜನರಲ್ಲಿ ತಳವೂರಿದೆ. ಇದರಿಂದ ಇಲ್ಲಿನ ಮಹಿಳೆಯರು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

  • ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ದೂರು ನೀಡಿದ್ದಕ್ಕೆ ಕಾರ್ ಪುಡಿಗೈದ್ರು!

    ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ದೂರು ನೀಡಿದ್ದಕ್ಕೆ ಕಾರ್ ಪುಡಿಗೈದ್ರು!

    ಬೆಂಗಳೂರು: ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ತಡರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಗಾಜನ್ನು ದುಷ್ಕರ್ಮಿಗಳು ಕಲ್ಲಿನಿಂದ ಹೊಡೆದು ಪುಡಿ ಮಾಡಿರುವ ಘಟನೆ ನಡೆದಿದೆ.

    ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದ ಮಾರುತಿ ಬಡಾವಣೆಯಲ್ಲಿ ನಡೆದಿದೆ. ಇನ್ನೂ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ರಾಮ್ ಎಂಬವರು ಕಳೆದ ಎರಡು ದಿನಗಳ ಹಿಂದೆ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಪಟ್ಟಣ ಠಾಣೆಗೆ ದೂರು ನೀಡಿದ್ದರು.

    ಈ ಹಿನ್ನೆಲೆಯಲ್ಲಿ ಕೆಲ ದುಷ್ಕರ್ಮಿಗಳು ತಡ ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಸಫಾರಿ ಕಾರಿನ ಗಾಜು ಪುಡಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಎಂದಿನಂತೆ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಸದ್ಯ ಘಟನೆ ಕುರಿತು ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

  • ದೇಶ ವಿದೇಶಗಳಿಂದ ಬಂದ ಲಕ್ಷಾಂತರ ವಿದ್ಯಾರ್ಥಿಗಳಿಂದ ಕಾಲೇಜ್ ಕ್ಯಾಂಪಸ್‍ ನಲ್ಲೇ ದೀಪಾವಳಿ ಆಚರಣೆ

    ದೇಶ ವಿದೇಶಗಳಿಂದ ಬಂದ ಲಕ್ಷಾಂತರ ವಿದ್ಯಾರ್ಥಿಗಳಿಂದ ಕಾಲೇಜ್ ಕ್ಯಾಂಪಸ್‍ ನಲ್ಲೇ ದೀಪಾವಳಿ ಆಚರಣೆ

    ಮಂಗಳೂರು: ಜಿಲ್ಲೆಗೆ ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಇವರೆಲ್ಲರಿಗೂ ದೀಪಾವಳಿಯ ಸಂಭ್ರಮ ಮನೆಯವರ ಜೊತೆ ಇರಲ್ಲ. ಅದಕ್ಕೆ ಶಿಕ್ಷಣ ಸಂಸ್ಥೆಗಳು ಕಾಲೇಜು ಕ್ಯಾಂಪಸ್‍ ನಲ್ಲೇ ದೀಪಾವಳಿ ಆಚರಣೆ ಮಾಡುತ್ತಾರೆ.

    ನೋಡಿ, ನಿಜವಾದ ದೀಪಾವಳಿ ಅಂದರೆ ಇದಲ್ವಾ. ಈ ದೃಶ್ಯ ಕಂಡುಬಂದಿದ್ದು ಮಂಗಳೂರಿನ ಕೊಟ್ಟಾರದ ಕರಾವಳಿ ಗ್ರೂಪ್ ಆಫ್ ಕಾಲೇಜ್‍ ನಲ್ಲಿ. ದೀಪಾವಳಿ ರಜೆಯಲ್ಲಿ ಊರಿಗೆ ಹೋಗಲಾಗದ ವಿದ್ಯಾರ್ಥಿಗಳು ವ್ಯಥೆ ಪಡಬಾರದೆಂದು ಕಾಲೇಜಿನ ಆವರಣದಲ್ಲೇ ಅದ್ಧೂರಿಯಾಗಿ ದೀಪಾವಳಿ ಆಚರಣೆ ಮಾಡಿದ್ರು. ದೀಪ ಹಚ್ಚೋದ್ರ ಜೊತೆ ಭರ್ಜರಿಯಾಗಿ ಡ್ಯಾನ್ಸ್ ಕೂಡ ಮಾಡಿದ್ರು.

    ಕೆಲವರು ಜಾನಪದ ಹಾಡಿಗೆ ಹೆಜ್ಜೆ ಹಾಕಿದ್ರೆ, ಇನ್ನೂ ಕೆಲವರು ಸಿನಿಮಾ ಹಾಡಿಗೆ ಮೈ-ಕೈ ಕುಣಿಸಿದ್ರು, ಡ್ರಾಮಾ ಮಾಡಿದ್ರು. ಜಾತಿ-ಮತದ ಬೇಧ ಮರೆತು ದೀಪ ಉರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ರು. ಪರಿಸರ ಮಾಲಿನ್ಯ ಆಗಬಾರದು ಅಂತ ಸಣ್ಣ ಪ್ರಮಾಣದಲ್ಲಿ ಪಟಾಕಿ ಸಿಡಿಸಿ ಖುಷಿಪಟ್ರು.

  • ಮೂರು ವರ್ಷಗಳ ನಂತರ ಸಮಾಧಿಯಿಂದ ಹೊರಬಂದು ನಡೆದಾಡಿದ ಮಹಿಳೆ!

    ಮೂರು ವರ್ಷಗಳ ನಂತರ ಸಮಾಧಿಯಿಂದ ಹೊರಬಂದು ನಡೆದಾಡಿದ ಮಹಿಳೆ!

    ಜಕಾರ್ತ: ಸತ್ತ ವ್ಯಕ್ತಿಗಳ ಶವವನ್ನು ಸಮಾಧಿಯಿಂದ ಹೊರ ತೆಗೆದು ಅದನ್ನು ಅಲಂಕರಿಸಿ ಮೆರವಣಿಗೆ ಮಾಡುವ ವಿಚಿತ್ರ ಆಚರಣೆಯನ್ನು ಇಂಡೋನೇಷ್ಯಾದಲ್ಲಿದೆ.

    ಇಂಡೋನೇಷ್ಯಾದ ದಕ್ಷಿಣ ಸುಲವೇಸಿಯಾ ಎಂಬಲ್ಲಿಯ ಗುಡ್ಡಗಾಡು ಜನಾಂಗದವರು `ತೋರ್ಜಾ’ ಎಂಬ ವಿಚಿತ್ರವಾದ ಆಚರಣೆ ಮಾಡ್ತಾರೆ. ಈ ಆಚರಣೆಯಲ್ಲಿ ತಮ್ಮ ಪೂರ್ವಜರ ದೇಹಗಳನ್ನು ಹೊರ ತೆಗೆಯುತ್ತಾರೆ. ಹೊರ ತೆಗೆದ ಶವಗಳನ್ನು ಮನೆಗೆ ತಂದು ಅಲಂಲಕರಿಸಲಾಗುತ್ತದೆ. ಅಲಂಕೃತಗೊಂಡ ಶವಗಳನ್ನು ಊರ ತುಂಬೆಲ್ಲಾ ನಡೆಸುತ್ತಾರೆ. ಕೊನೆಗೆ ಸ್ಮಶಾನಕ್ಕೆ ತೆರಳಿ ಅವುಗಳಿದ್ದ ಜಾಗದಲ್ಲಿ ಮತ್ತೆ ಹೂಳುತ್ತಾರೆ.

    ಗ್ರಾಮದ ಪ್ರತಿಯೊಬ್ಬರು ಸತ್ತ ದೇಹಗಳನ್ನು ಅಲಂಕರಿಸಿ, ಶವಪೆಟ್ಟಿಗೆಯಲ್ಲಿ ಇಡ್ತಾರೆ. ಇನ್ನೂ ಕೆಲವರು ತಮ್ಮ ಮನೆಯ ಕೋಣೆಯೊಂದರಲ್ಲಿ ತಮ್ಮ ಪೂರ್ವಜರ ಶವಗಳನ್ನು ಇಟ್ಟುಕೊಳ್ಳುತ್ತಿದ್ದಾರೆ.

     

     

  • ಈ ಬಾರಿ ಮುಖ್ಯಮಂತ್ರಿಯವರು ಯುಗಾದಿ ಆಚರಣೆ ಮಾಡ್ತಿಲ್ಲ!

    ಈ ಬಾರಿ ಮುಖ್ಯಮಂತ್ರಿಯವರು ಯುಗಾದಿ ಆಚರಣೆ ಮಾಡ್ತಿಲ್ಲ!

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಾರಿ ಯುಗಾದಿ ಆಚರಣೆ ಮಾಡದೇ ಇರಲು ನಿರ್ಧರಿಸಿದ್ದಾರೆ.

    ಸಿಎಂ ಪುತ್ರ ರಾಕೇಶ್ ಸಿದ್ಧರಾಮಯ್ಯ ಅಕಾಲಿಕ ನಿಧನರಾಗಿ ಇನ್ನೂ ಒಂದು ವರ್ಷ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಇಂದು ಯುಗಾದಿ ಹಬ್ಬ ಆಚರಣೆಯಿಂದ ಸಿಎಂ ಕುಟುಂಬ ದೂರ ಉಳಿದಿದೆ. ಮಾತ್ರವಲ್ಲದೇ ಈ ವರ್ಷ ಪೂರ್ತಿ ಯಾವುದೇ ಹಬ್ಬಗಳನ್ನು ಆಚರಿಸದಿರಲು ನಿರ್ಧರಿಸಿದ್ದಾರೆ.

    ಹೀಗಾಗಿ ನಾಡಿನೆಲ್ಲೆಡೆ ಬರದ ನಡುವೆಯೂ ಜನ ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದರೆ ಸಿಎಂ ಮನೇಲಿ ಯಾವುದೇ ಸಂಭ್ರಮ ಸಡಗರ ಇಲ್ಲ. ಮನೆಗೆ ಬರುವ ಅಧಿಕಾರಿಗಳಿಗೆ, ಸಚಿವರಿಗೆ, ಶಾಸಕರಿಗೆ ಕೇವಲ ಹೋಳಿಗೆ ಕೊಟ್ಟು ಸಿಎಂ ಶುಭಾಶಯ ತಿಳಿಸುತ್ತಿದ್ದಾರೆ.

    ಪ್ರತಿ ಹಬ್ಬದಲ್ಲಿ ಯಾರೇ ಸಿಎಂ ನಿವಾಸಕ್ಕೆ ಬಂದ್ರು ಹೋಳಿಗೆ ಕೊಡುವುದು ಪದ್ಧತಿ. ಹೀಗಾಗಿ ಈ ಯುಗಾದಿ ಹಬ್ಬವನ್ನು ಯಾವುದೇ ಸಂಭ್ರವಿಲ್ಲದೇ ಸಿಎಂ ಅದೇ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.

  • ಕೊಪ್ಪಳ: ವಿದೇಶಿಗರಿಂದ ರಂಗುರಂಗಿನ ಮೋಜಿನ ಹೋಳಿ ಆಚರಣೆ

    ಕೊಪ್ಪಳ: ವಿದೇಶಿಗರಿಂದ ರಂಗುರಂಗಿನ ಮೋಜಿನ ಹೋಳಿ ಆಚರಣೆ

    ಕೊಪ್ಪಳ: ಇಂದು ದೇಶವೆ ಬಣ್ಣ ಬಣ್ಣದ ಹೋಳಿ ಹಬ್ಬದಲ್ಲಿ ಭಾಗಿಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ವಿದೇಶಿ ಪ್ರವಾಸಿಗರು ಅತ್ಯಂತ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಿದರು.

    ವಿದೇಶಿ ಪ್ರವಾಸಿಗರ ಮೋಜಿನ ತಾಣವೆಂದೇ ಕರೆಯಲ್ಪಡುವ ಈ ಪ್ರದೇಶದಲ್ಲಿ ಹೋಳಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ವಿದೇಶಿ ಪ್ರವಾಸಿಗರು ಹೋಳಿ ಹಬ್ಬದ ದಿನದಂದು ರಂಗುರಂಗಿನ ಬಣ್ಣಗಳೊಂದಿಗೆ ಅತಿ ಉತ್ಸಾಹ ಹಾಗೂ ಸಡಗರ ಸಂಭ್ರಮದೊಂದಿಗೆ ಹೋಳಿ ಆಚರಿಸಿದರು. ಪರಸ್ಪರ ಬಣ್ಣ ಎರಚುತ್ತಾ ಕೇಕೆ ಹಾಕುತ್ತಾ ಸ್ಥಳೀಯರೊಂದಿಗೆ ಬಣ್ಣಗಳಲ್ಲಿ ಮಿಂದೆದ್ದರು.

    ತಮ್ಮ ವಿದೇಶಿ ಗೆಳೆಯರಿಗೆ ಬೇಡವೆಂದರೂ ಬಣ್ಣ ಹಾಕುತ್ತಾ ಹಾಡಿ ನಲಿದಾಡಿದರು. ನಂತರ ನಡೆದ ಮೆರವಣಿಗೆಯಲ್ಲಿ ತಾಳಕ್ಕೆ ತಕ್ಕಂತೆ ಹಾಡಿ ಕುಣಿದಾಡಿದ ವಿದೇಶಿ ಪ್ರವಾಸಿಗರು, ತಾವೇನೂ ಕಮ್ಮಿಯಿಲ್ಲವೆಂದು ಸಾಬೀತುಪಡಿಸಿದರು. ಸುಮಾರು ನಾಲ್ಕು ಗಂಟೆಗಳ ಕಾಲ ಬಣ್ಣಗಳೊಂದಿಗೆ ಆಟವಾಡಿದ ವಿದೇಶಿಗರು ತಮ್ಮತನವನ್ನು ಮರೆತಿದ್ದು ವಿಶೇಷವಾಗಿತ್ತು. ಇದೇ ಸಂದರ್ಭದಲ್ಲಿ ಮಾತನಾಡಿದ ಕೆಲ ವಿದೇಶಿ ಪ್ರವಾಸಿಗರು, ಇದೊಂದು ಅಪರೂಪದ ಹಬ್ಬವಾಗಿದ್ದು, ನಮಗೆ ಸಾಕಷ್ಟು ಸಂತೋಷ ತಂದಿದೆ ಎಂದರು. ಸ್ಥಳೀಯರು ಮಾತನಾಡಿ ಭಾರತೀಯ ಸಂಸ್ಕೃತಿಯನ್ನು ವಿದೇಶಿಗರಿಗೆ ತಿಳಿ ಹೇಳಲು ಈ ಹಬ್ಬ ಬಹಳ ಅನುಕೂಲವಾಗಿದೆ ಎಂದು ತಿಳಿಸಿದರು.

    ಈ ಮಧ್ಯೆ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಭಾವೈಕ್ಯೆತೆಯ ಜೊತೆಗೆ ವಿವಿಧ ಬಣ್ಣದ ಚಿತ್ತಾರ ಬಿಡಿಸುವ ಹೋಳಿ ಹಬ್ಬ, ವಿದೇಶಿ ಪ್ರವಾಸಿಗರಿಗೆ ಹೊಸದೊಂದು ಭಾವನೆ ಬೆಳೆಸುತ್ತಿದೆ ಎಂಬುದಕ್ಕೆ ವಿರುಪಾಪುರ ಗಡ್ಡೆಯ ಈ ವಿದೇಶಿಗರು ಸಾಕ್ಷಿಯಾದರು.